ಭಾಗ

ಸಾರ್ವಜನಿಕ ಸಂಸ್ಥೆಗಳು ಮತ್ತು ಲಿಂಗಾಯತರು

ಭಾರತ ಸ್ವಾತಂತ್ರ‍್ಯ ಪಡೆದುಕೊಂಡು ಮೊದಲ ದಶಕದಲ್ಲಿ ಭಾರತ ಸರ್ಕಾರವು ವೈವಿಧ್ಯತೆ ಹಾಗು ಏಕತೆಯನ್ನು ಕಾಪಾಡಿಕೊಂಡು ಹೋಗಲು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿತು. ಕೇಂದ್ರ ಸಾಹಿತ್ಯ ಅಕಾಡೆಮಿ ಈ ರಾಷ್ಟ್ರೀಯ ಯೊಜನೆಯ ಕೂಸು.[1] ಭಾರತೀಯ ಸಾಹಿತ್ಯ ಪರಂಪರೆಗಳನ್ನು ಪ್ರಜಾತಾಂತ್ರಿಕವಾಗಿ ಪ್ರತಿಬಿಂಬಿಸುವ ಮತ್ತು ಪ್ರನಿಧಿಸುವ ಕಾರ್ಯವನ್ನು ಅದು ಬಹಳ ಉತ್ಸಾಹ ಹಾಗೂ ಆಕಾಂಕ್ಷೆಯಿಂದ ಶುರುಮಾಡಿತು. ಆದಾಗ್ಯು ಚೆನ್ನಬಸವನಾಯಕ ವಿವಾದದ ಸಂದರ್ಭದಲ್ಲಿ ಇಂತಹ ಸಂಸ್ಥೆಯನ್ನು ಲಿಂಗಾಯತರು ಅನುಮಾನದಿಂದ ನೋಡಿ, ಜರಿದರು. ಇಂತಹ ಸಂಸ್ಥೆಗಳು ಸಾರ್ವಜನಿಕರ ಮೇಲೆ ತೀವ್ರ ಪ್ರಭಾವ ಬೀರುವದರಿಂದ ಲಿಂಗಾಯತರಿಗೆ ಇದರ ಬಗ್ಗೆ ಹೆಚ್ಚಿನ ಎಚ್ಚರಿಕೆ ಬಂದಿತು. ಈ ಸಂಸ್ಥೆಯ ಬಗ್ಗೆ ಅವರು ಆತಂಕಿತರಾಗಿದ್ದರೂ ಕೂಡ. ಚೆನ್ನಬಸವ ನಾಯಕರಂತಹ ಕಾದಂಬರಿಯನ್ನು ಭಾಷಾಂತರಿಸುವ ಯೋಜನೆಗೆ ಅಸ್ತು ನೀಡಿದರೆ. ಅದರಿಂದ ತಮ್ಮ ಪ್ರತಿಷ್ಠೆ, ಚರಿತ್ರೆಗೆ ಧಕ್ಕೆ ಉಂಟಾಗಬಹುದೆಂದು ಲಿಂಗಾಯತರು ಕಳವಳಗೊಂಡರು, ಆದ್ದರಿಂದ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಜಾಪ್ರಭುತ್ವವಾಗಿ, ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬೇಕೆಂದು ಅವರು ಒತ್ತಾಯ ಹೇರಿದರು. ಇಷ್ಟಾದಾಗ್ಯು ಲಿಂಗಾಯತರು ಸಂಪೂರ್ಣವಾಗಿ ಕಾದಂಬರಿಯ ಭಾಷಾಂತರದ ವಿರುದ್ಧವಿದ್ದರು ಎಂದು ಹೇಳಲಿಕ್ಕಾಗುವುದಿಲ್ಲ. ಆದರೆ ಸಾರ್ವಜನಿಕರಿಂದ ಅಂಗೀಕೃತಗೊಂಡ ಸರ್ಕಾರಿ ಸಂಸ್ಥೆಯಿಂದ ಆಗುವ ಭಾಷಾಂತರಕ್ಕೆ ಅವರ ವಿರೋಧವಿತ್ತು. ಈ ಕಾಂದಬರಿಯು ಈಗಾಗಲೇ ಇಂಗ್ಲಿಷ್ ಭಾಷೆಗೆ ಭಾಷಾಂತರವಾಗಿತ್ತು. ಮಾಸ್ತಿಯವರ ಆಪ್ತ ಗೆಳೆಯರಾದ ನವರತ್ನ ರಾಮರಾಯರು ಇದನ್ನು ಇಂಗ್ಲಿಷಿಗೆ ಭಾಷಾಂತರಿಸಿದ್ದರು. ಇದನ್ನು ೧೯೫೯ರಲ್ಲಿ ಪ್ರಕಟಿಸಲಾಯಿತು. ಈ ಭಾಷಾಂತರಕ್ಕೆ ಲಿಂಗಾಯತರು ಯಾವುದೇ ತರದ ವಿರೋಧ ವ್ಯಕ್ತ ಪಡಿಸಲಿಲ್ಲ. ಏಕೆಂದರೆ ಅದು ವೈಯಕ್ತಿಕ ಭಾಷಾಂತರ ಮತ್ತು ಪ್ರಕಟಣೆಯಾಗಿತ್ತು. ಈ ವಿವಾದದ ಬೆಂಕಿಗೆ ತುಪ್ಪ ಸುರಿದ ಮತ್ತೊಂದು ವಿಷಯವಿದೆ. ಅದು ಮಾಸ್ತಿಯವರು ರಾಜ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಸಂಗತಿ. ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯು ಕಾದಂಬರಿಯನ್ನು ಭಾಷಾಂತರಕ್ಕೆ ಆಯ್ಕೆ ಮಾಡಿಕೊಂಡಿದ್ದು, ಅಕಾಡೆಮಿಯ ಸ್ವಾರ್ಥಕ್ಕೆ ದುರ್ಬಳಕೆಯಾಯಿತು ಎಂಬಂತೆ ನೋಡಲಾಯಿತು. ಮಾಸ್ತಿಯವರು ತಮ್ಮ ಸ್ವಾರ್ಥ ಸಾಧನೆಗಾಗಿ ಅಕಾಡೆಮಿಯನ್ನು ಬಳಸಿಕೊಂಡರೆಂಬ ಆಪಾದನೆ ಮಾಡಲಾಯಿತು. ಆಯ್ಕೆ ಸಮಿತಿಯ ನಿರ್ಣಯವು ಬಹು ಸಂಖ್ಯಾತರನ್ನು ನಿರ್ಲಕ್ಷಿಸಿದೆ ಎಂದು ಮೂದಲಿಸಲಾಯಿತು. ಕೆಲವೇ ಕೆಲವರ ಸಾಂಸ್ಕೃತಿಕ ಹುನ್ನಾರವನ್ನು ಅಧಿಕೃತಗೊಳಿಸಲು ರಾಜ್ಯ ಅಕಾಡೆಮಿಯನ್ನು ಉಪಯೋಗಿಸಿಕೊಂಡಿರುವುದು ಅನೇಕ ಲಿಂಗಾಯತರಿಗೆ ಸರಿಬೀಳಲಿಲ್ಲ. ಕುಪ್ಪಸ್ತರು ಇದನ್ನು ಹೀಗೆ ಟೀಕಿಸಿದ್ದಾರೆ,

ಶ್ರೀ ಮಾಸ್ತಿ ಚೆನ್ನಬಸವ ನಾಯಕ ಕಾದಂಬರಿ ಬರೆದರು. ಅದು ಅವರ ವೈಯಕ್ತಿಕ ವಿಷಯವಾಯಿತು. ಆದರೆ, ಸಾರ್ವಜನಿಕ ನಿಧಿಯನ್ನು ವೆಚ್ಚ ಮಾಡಿ ಸಾಹಿತ್ಯ ಅಕಾಡೆಮಿ ಅದರ ಭಾಷಾಂತರವನ್ನು ಭಾರತದ ಇನ್ನುಳಿದ ೧೩ ಭಾಷೆಗಳಲ್ಲಿ ಮಾಡಲು ಮುಂದಾಗಬೇಕೇಕೆ? ಒಂದು ಸಮಾಜದವರು ಈ ಕಾದಂಬರಿಯಿಂದ ತಮ್ಮ ಮನನೊಂದಿದೆಯೆಂದು ಘಂಟಾಘೋಷವಾಗಿ ಹೇಳುತ್ತಿರುವಾಗ, ಅದನ್ನು ಕಡೆಗಣಿಸಿ, ಸರಕಾರದಿಂದ ಸಹಾಯ ಧನ ಪಡೆಯುವ ಸಂಸ್ಥೆ ಆ ಕಾದಂಬರಿಯ ಭಾಷಾಂತರ ಕಾರ್ಯವನ್ನು ಮುಂದುವರೆಸುವುದು ನ್ಯಾಯವೆ?… ಸಾರ್ವಜನಿಕ ಸಂಸ್ಥೆಯೆನಿಸುವ ಸಾಹಿತ್ಯ ಅಕಾಡೆಮಿ ತೋರಿಸಿದ ಈ ಅನ್ಯಾಯದ ವಿರುದ್ಧ ನಮ್ಮ ಸಾಹಿತಿಗಳು ತಮ್ಮ ಸಾತ್ವಿಕ ಸಂತಾಪವನ್ನು ವ್ಯಕ್ತಮಾಡಿದ್ದರೆ, ಹೆಚ್ಚು ವಿಹಿತವೆನ್ನಿಸುತ್ತಿತ್ತು (೧೯೫೯: ೧೮೦-೧೮೧).

ಕುಪ್ಪಸ್ತರು ರಾಜ್ಯ ಅಕಾಡೆಮಿಯ ವಿರುದ್ಧವಿಲ್ಲ. ಆದರೆ ಈ ಸಾರ್ವಜನಿಕ ಸಂಸ್ಥೆಯನ್ನು ಕೆಲವೇ ಕೆಲವರು ತಮ್ಮ ಹಿತಾಸಕ್ತಿಗಳಿಗೆ ಉಪಯೋಗಿಸಿಕೊಂಡಿರುವುದು ಖಂಡನೀಯವೆಂದು ಅವರು ವಾದಿಸುತ್ತಾರೆ. ಅದನ್ನು ಅಪ್ರಜಾಪ್ರಭುತ್ವವೆಂದು, ಸಂಸ್ಥೆಯ ಮೂಲ ಉದ್ದೇಶಗಳಿಗೆ ವಿರುದ್ಧವೆಂದು ಟೀಕಿಸುತ್ತಾರೆ.

ಅಕಾಡೆಮಿ ಬಗ್ಗೆ ಅಸಮಾಧಾನ, ಸಾಹಿತ್ಯದ ಒಕ್ಕೂಟ ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಬ್ರಾಹ್ಮಣರ ಪಾರುಪತ್ಯ ಲಿಂಗಾಯತರಿಗೆ ಅತಿ ತುರ್ತಿನ ಪರಿಸ್ಥಿತಿಗಳನ್ನು ಸೃಷ್ಟಿಸಿದವು. ಹಾಗಾಗಿ ಅವರು ಅನೇಕ ಲಿಂಗಾಯತ ಸಂಸ್ಥೆಗಳು, ವಿದ್ವಾಂಸರು ಹಾಗು ಒಕ್ಕೂಟಗಳನ್ನು ಸಂಘಟಿಸಲು ದೊಡ್ಡ ಪ್ರಮಾಣದಲ್ಲಿ ಕಾರ್ಯೋನ್ಮುಖರಾದರು. ಈಗಾಗಲೇ ಸಾರ್ವಜನಿಕ ಲಿಂಗಾಯತರನ್ನು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮನವೊಲಿಸಲು ಬೌದ್ಧಿಕ ಕಸರತ್ತಿನ ಜೊತೆಗೆ ಲೇಖನಗಳು, ಸಾರ್ವಜನಿಕ ಭಾಷಣಗಳು ಹಾಗು ಧಾರ್ಮಿಕ ಉಪನ್ಯಾಸಗಳು ನಿರಂತರವಾಗಿ ಸಾಗಿದ್ದವು. ಹೀಗಾಗಿ ಎಲ್ಲಾ ಲಿಂಗಾಯತರ ಬೆಂಬಲವನ್ನು ಪಡೆದುಕೊಳ್ಳಲು ಈ ಪಠ್ಯೇತರ/ಬೌದ್ಧಿಕೇತರ ಅಂಶಗಳು ಅವಶ್ಯಕವಾಗಿದ್ದವು. ಲಿಂಗಾಯತರನ್ನು ಉದ್ರೇಕಿಸಲು ಇವು ಸಹಾಯಕವಾಗಿದ್ದವು. ಈ ಹಿನ್ನೆಲೆಯಲ್ಲಿ ನೋಡುವುದಾದರೆ ವಿವಾದವು ಸಂಪೂರ್ಣವಾಗಿ ಬೌದ್ಧಿಕ ಕಸರತ್ತಾಗಿರಲಿಲ್ಲ. ಅದು ಎಲ್ಲಾ ಲಿಂಗಾಯತರನ್ನು ಅಲ್ಪ ಸಮಯದಲ್ಲಿ ಮನವೊಲಿಸಿ ಪ್ರತಿಭಟನೆಗೆ ಪಾಲ್ಗೊಳ್ಳುವಂತೆ ಮಾಡಲು ಸಾಧ್ಯವಿರಲಿಲ್ಲವಾದ್ದರಿಂದ ಮತ್ತು ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಲಿಂಗಾಯತರಿಗೂ ಕಾದಂಬರಿಯ ಬಗ್ಗೆ ಗೊತ್ತಿಲ್ಲದೇ ಇದ್ದಿದ್ದರಿಂದ, ಬೃಹತ್ ಪ್ರಮಾಣದಲ್ಲಿ ಸಂಘಟನೆಯ ಅವಶ್ಯಕತೆಯಿತ್ತು. ಹಾಗಾಗಿ ಇದನ್ನು ಸಾಧಿಸಲು ಬೌದ್ಧಿಕೇತರ ತಂತ್ರಗಳನ್ನು ಬಳಸಿಕೊಳ್ಳಲಾಯಿತು.

ಲಿಂಗಾಯತರು ಸಾಮಾಜಿಕವಾಗಿ ಹಾಗು ಭೌಗೋಳಿಕವಾಗಿ ಆಂತರಿಕ ಭಿನ್ನತೆಗಳಿಂದ ಬೇರೆಯಾಗಿದ್ದರೂ[2] ಪ್ರತಿಭಟನೆಯನ್ನು ನಡೆಸುತ್ತಿದ್ದ ಮುಖಂಡರೆಲ್ಲರೂ ಏಕೀಕೃತ/ಏಕೈಕ ಲಿಂಗಾಯತ ಸಮುದಾಯದ ಕಲ್ಪನೆ ಕಟ್ಟಿಕೊಂಡು ಕಾದಂಬರಿಯ ವಿರುದ್ಧ ಹೋರಾಡಲು ನಿರತರಾದರು. ವಿವಾದದಲ್ಲಿ ನಾವ್ಯಾರು, ಬ್ರಾಹ್ಮಣರಾರು ಎಂದು ಸ್ಪಷ್ಟವಾಗಿ ಗುರುತಿಸಿಕೊಂಡಿದ್ದರಿಂದ ಲಿಂಗಾಯತರಿಗೂ, ಲೇಖಕರಿಗೂ ಹಾಗು ಕಾದಂಬರಿಗೂ ನಡುವೆ ಇರುವ ಸಂಬಂಧವನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಯಿತು. ಈ ಅಂಶವನ್ನು ಲಿಂಗಾಯತ ನೇತಾರರು ಅನೇಕ ಸಭೆಗಳಲ್ಲಿ ಪ್ರತಿಧ್ವನಿಸಿದರು. ಉದ್ರೇಕಭರಿತ ಭಾಷಣ ವಿಚಾರಗಳಿಂದ ಕಾದಂಬರಿಯನ್ನು ಸಾರ್ವಜನಿಕವಾಗಿ ಸುಡುವಷ್ಟರ ಮಟ್ಟಿಗೆ ಈ ವಿವಾದವು ಕಾವೇರಿತು. ಎಸ್.ಎಮ್. ವೃಶಭೇಂದ್ರಸ್ವಾಮಿಯವರು ಈ ಉದ್ರೇಕಭರಿತ ಸನ್ನಿವೇಶವನ್ನು ಜ್ಞಾಪಿಸಿಕೊಳ್ಳುತ್ತಾ ಲಿಂಗಾಯತರು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಲು ಶಿವಮೊಗ್ಗ, ಗದಗ, ಬಳ್ಳಾರಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಕಾದಂಬರಿಯ ಪ್ರತಿಗಳನ್ನು ದಹಿಸಿದರು ಎಂದು ಬರೆದಿದ್ದಾರೆ (೧೯೯೯: ೩೫).

ಒಂದಂಶವನ್ನು ನಾವಿಲ್ಲಿ ಗಮನಿಸಬೇಕು. ಇಂತಹ ವಿವಾದದ ಸಂದರ್ಭಗಳಲ್ಲಿ ಲಿಂಗಾಯತರು ನೈತಿಕ ಬೆಂಬಲಕ್ಕಾಗಿ ಲಿಂಗಾಯತ ಮಠಾಧೀಶರನ್ನು ಅವಲಂಬಿಸುತ್ತಾರೆ. ಮಠಾಧೀಶರುಗಳು ಸಹ ಈ ಸಂದರ್ಭಗಳಲ್ಲಿ ವಿವಾದದ ಗತಿಯನ್ನೆ ಬದಲಾಯಿಸುವಷ್ಟು ಮಹತ್ವದ ಪಾತ್ರ ವಹಿಸಿದ್ದಾರೆ. ಚೆನ್ನಬಸವ ನಾಯಕ ವಿವಾದವು ಸಹ ಇದಕ್ಕೆ ಹೊರತೇನಾಗಿರಲಿಲ್ಲ.[3] ೧೧ನೇ ಸೆಪ್ಟೆಂಬರ್ ೧೯೫೮ರಲ್ಲಿ ಮಾನ್ವಿ ಎಂಬ ಊರಿನಲ್ಲಿ ನಡೆದ ಧರ್ಮದ ಅಧಿವೇಶನದಲ್ಲಿ ಜಡೆಯ ಮಠದ ಮಠಾಧೀಶರಾದ ಗಂಗಾಧರ ಶಿವಾಚಾರ್ಯರು ಒಂದು ಗೊತ್ತುವಳಿಯನ್ನು ಮಂಡಿಸಿ ಚೆನ್ನಬಸವ ನಾಯಕ ಕಾದಂಬರಿಯ ಲಿಂಗಾಯತರ ಹಾಗು ಸಮಸ್ತ ಕನ್ನಡಿಗರ ಮನಸ್ಸನ್ನು ನೋಯಿಸಿದ್ದರಿಂದ ಕಾದಂಬರಿಯ ಭಾಷಾಂತರ ಯೋಜನೆಯನ್ನು ಕೈಬಿಡಬೇಕೆಂದು ಒತ್ತಾಯಿಸಿದರು. ಈ ಸಭೆಯಲ್ಲಿ ಅನೇಕ ಮಂದಿ ಲಿಂಗಾಯತ ಮುಖಂಡರು ಮತ್ತು ಎಮ್.ಎಲ್.ಎ.ಗಳು ಪಾಲ್ಗೊಂಡಿದ್ದರು. ಬ್ರಾಹ್ಮಣರಿಂದ ತುಂಬಿಹೋಗಿದ್ದ ರಾಜ್ಯ ಸಾಹಿತ್ಯ ಅಕಾಡೆಮಿಯ ಬಗ್ಗೆ ಸಭೆಯು ಬಹಳ ಖಾರವಾಗಿ ನಡೆದುಕೊಂಡಿತು. ನಂತರದ ಆಗು-ಹೋಗುಗಳಲ್ಲಿ ಬಂತನಾಳ ಶಿವಯೋಗಿಗಳ ಪಾತ್ರವು ಸಹ ಮುಖ್ಯ. ಅವರೂ ಸಹ ಲಿಂಗಾಯತರನ್ನು ಒಗ್ಗೂಡಿಸುವಲ್ಲಿ, ಪ್ರತಿಭಟನೆಯನ್ನು ತೀವ್ರವಾಗಿಸುವಲ್ಲಿ ನೇತೃತ್ವವನ್ನು ವಹಿಸಿದರು. ಇವರಿಬ್ಬರ ಅನಿಸಿಕೆಗಳು ಕುಪ್ಪಸ್ತರ ಭಾವನೆಗಳ ಹಾಗೆ ಇದ್ದವು. ಲಿಂಗಾಯತರ ಎರಡು ಸಂಘಟನೆಗಳಾದ ಕಿಂಕರ ಬಳಗ ಮತ್ತು ಸತ್ಯ ಪ್ರತಿಪಾದಕ ಗಣಗಳು ಕಾದಂಬರಿಯ ವಿರುದ್ಧ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವು. ಕಿಂಕರ ಬಳಗದ ಒಕ್ಕೂಟದಿಂದ ಗದಗಿನಲ್ಲಿ ೧೯ನೇ ಫೆಬ್ರವರಿ ೧೯೫೮ರಂದು ಹಮ್ಮಿಕೊಳ್ಳಲ್ಪಟ್ಟಿದ್ದ ನವೀನ ಸಾಹಿತಿಗಳ ಮತ್ತು ಕಲಾಕಾರರ ಸಮ್ಮೇಳನದಲ್ಲಿ ಸಿರಿಗೆರೆಯ ತರಳಬಾಳು ಮಠದ ಮಠಾಧೀಶರಾದ ಶಿವಕುಮಾರ ಶಿವಾಚಾರ್ಯರ ನೇತೃತ್ವದಲ್ಲಿ ಕಾದಂಬರಿ ಮತ್ತು ಅಕಾಡೆಮಿಯ ವಿರುದ್ಧ ಅನೇಕ ಗೊತ್ತುವಳಿಗಳನ್ನು ಮಂಡಿಸಲಾಯಿತು. ವಚನಗಳ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿಯ ಮಾಸ್ತಿಯವರನ್ನು ನೇಮಕ ಮಾಡಿದ್ದನ್ನು ಈ ಸಮ್ಮೇಳನವು ಖಂಡಿಸಿ, ಅವರ ಜಾಗಕ್ಕೆ ಹಳಕಟ್ಟಿಯವರನ್ನು ನೇಮಿಸಬೇಕೆಂದು ಒತ್ತಾಯಿಸಿತು (ಬಣಕಾರ, ೧೯೫೮: ೯). ಈ ಸಮ್ಮೇಳನವು ಕಾದಂಬರಿಯ ವಿರುದ್ಧ ಕುಪ್ಪಸ್ತರ ಅವಿರತ ಪ್ರತಿಭಟನೆಯನ್ನು ಪ್ರಶಂಶಿಸಿ ಲಿಂಗಾಯತರೆಲ್ಲರೂ ಅವರಿಗೆ ಬೆಂಬಲ ಸೂಚಿಸಬೇಕೆಂದು ಕರೆಕೊಟ್ಟಿತು. ತರಳಬಾಳು ಮಠದಿಂದ ಹೊರಬರುತ್ತಿದ್ದ “ಜಾಗೃತಿ”[4] ಪತ್ರಿಕೆಯ ಸಂಪಾದಕ ಮಹದೇವ ಬಣಕಾರರು ತಮ್ಮ ಒಂದು ಸಂಪಾದಕೀಯದಲ್ಲಿ ಮಾಸ್ತಿಯವರ ಕಾದಂಬರಿ ಹಾಗು ಕುಪ್ಪಸ್ತರ ವಿಚಾರಗಳನ್ನು ಹೋಲಿಕೆ ಮಾಡಿ ಸತ್ಯಾಂಶವನ್ನು ಕಂಡುಕೊಳ್ಳಬೇಕೆಂದು ಕರೆಕೊಟ್ಟಿತು.[5] ಅನೇಕ ದಾಖಲೆ, ಸಾಕ್ಷ್ಯಾಧಾರಗಳಿಂದ ಕೂಡಿದ್ದ ಕುಪ್ಪಸ್ತರ ವಿಚಾರಗಳು ಮಾಸ್ತಿಯವರ ದ್ವೇಷಪೂರಿತ ಮತ್ತು ಅಪ್ರಮಾಣಿಕ ಕಾದಂಬರಿಗೆ ತಕ್ಕನಾದ ಉತ್ತರವೆಂದು ಧೃಢವಿಶ್ವಾಸದಿಂದ ಅವರು ತಮ್ಮ ವಾದವನ್ನು ಬರೆದಿದ್ದಾರೆ. ಸತ್ಯ ಪ್ರತಿಪಾದಕ ಗಣವು ತನ್ನ ಒಂದು ಮನವಿಯಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯನ್ನು ಜನರು ಬಹಿಷ್ಕರಿಸಬೇಕೆಂದು ಮತ್ತು ಸಮಿತಿಯ ಸದಸ್ಯರು (ಬಹುತೇಕ ಬ್ರಾಹ್ಮಣರು) ನೈತಿಕ ಜವಾಬ್ದಾರಿಯನ್ನು ಹೊತ್ತು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿತು (೧೯೫೮: ೪೫-೪೬).[6]

ಈ ವಿವಾದದಲ್ಲಿ ಸಾಂಘಿಕ ವ್ಯಾಖ್ಯಾನ, ರಾಷ್ಟ್ರೀಯ ಏಕತೆಯ ಮಂತ್ರ-ತಂತ್ರ, ಉನ್ನತ ಸಾಹಿತ್ಯ ಆದರ್ಶದ ಆಶಯ ಹಾಗು ಬಲಶಾಲಿಯಾದ ಸಾರ್ವಜನಿಕ ಪ್ರತಿಭಟನೆ ಅಂತಿಮವಾಗಿ ಯಶಸ್ವಿಯಾಗಿ ಭಾಷಾಂತರಕ್ಕೆ ಸಂಬಂಧಿಸಿದ ಅಂಶಗಳನ್ನು ಮುಗಿಸಿ ಬಿಟ್ಟವು. ಮಾಸ್ತಿಯವರ ನೈಜತೆ/ವಸ್ತು ನಿಷ್ಠತೆಯ ವಿಚಾರಗಳಿಗೆ ವಿರುದ್ಧ ದಿಕ್ಕಿನಲ್ಲಿ ಕೆಲಸ ಮಾಡಿದ ಪ್ರತಿಭಟನೆಗಳು ಮಾಸ್ತಿಯವರ ‘ಗೋಸುಂಬೆತನ’,[7] ತಾರತಮ್ಯ ಹಾಗು ಸುಳ್ಳಿನ ಪ್ರಾತಿನಿಧ್ಯವನ್ನು (ಅಂದರೆ ತಮಗೆ ಬೇಕಾದ ಚಾರಿತ್ರಿಕ ಅಂಶಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು, ಉಳಿದಿದ್ದನ್ನು ಮರೆಯುವ ಜಾಯಮಾನ) ಅದಕ್ಕೆ ಮನ್ನಣೆ ನೀಡಿದ ಸಾಹಿತ್ಯ ಅಕಾಡೆಮಿಯನ್ನು ಕಟುವಾಗಿ ಖಂಡಿಸಿತು.

ಭಾಗ

ಜಾತಿ/ಸಮುದಾಯಗಳು ಮತ್ತು ರಾಷ್ಟ್ರ: ಕೆಲವೊಂದು ಅನಿಸಿಕೆಗಳು

ಕಾದಂಬರಿಯ ಹುಟ್ಟು, ಬೆಳವಣಿಗೆಯನ್ನು ಭಾರತದ ಸಂದರ್ಭದಲ್ಲಿ ಅರ್ಥ ಮಾಡಿಕೊಳ್ಳಬೇಕೆಂದರೆ ಅದನ್ನು ನಾವು ವಸಾಹತುಶಾಹಿ ಸಂದರ್ಭಕ್ಕೆ ಪ್ರತ್ಯಕ್ಷ-ಅಪರೋಕ್ಷವಾದ ಪ್ರತಿಕ್ರಿಯೆಯೆಂದು ತಿಳಿಯಲು ಸಾಧ್ಯವಿಲ್ಲ. ರಾಷ್ಟ್ರೀಯತೆಯ ಚೌಕಟ್ಟಿನಲ್ಲಿ ಕಾದಂಬರಿಯನ್ನು ಅರ್ಥ ಮಾಡಿಕೊಳ್ಳಲು ತನ್ನದೇ ಇತಿ-ಮಿತಿಗಳಿವೆ. ಕಾದಂಬರಿಯ ಅಧ್ಯಯನವು ಕಾದಂಬರಿ, ಸಮುದಾಯ ಹಾಗೂ ರಾಷ್ಟ್ರಗಳ ನಡುವೆ ಯಾವ ಸಂಬಂಧಗಳಿವೆಯೆಂಬ ಅಂಶವನ್ನು ಸಹ ಒಳಗೊಂಡಿರಬೇಕು. ಇದು ಇವತ್ತಿನ ಜರೂರಿತ್ತು ಏಕೆಂದರೆ ಕಾದಂಬರಿಯ ಉಗಮದ ಜೊತೆಗೆ ವಸಾಹತುಶಾಹಿ ಘಟ್ಟದಲ್ಲಿ ಅನೇಕ ಸಮುದಾಯಗಳೂ ಸಹ ತನ್ನದೇ ಆದ ಓದುಗ ಸಮುದಾಯವನ್ನು ಉಂಟುಮಾಡಿದವು. ಪರಿಣಾಮವಾಗಿ ಈ ಸಮುದಾಯಗಳ ಹೊಸ ಓದುಗರು, ಸಾಹಿತ್ಯ ಕೃತಿಗಳನ್ನು ಸ್ವೀಕರಿಸುವ ಪರಂಪರೆ, ವ್ಯಾಖ್ಯಾನದ ಪ್ರಕ್ರಿಯೆಗಳು ಸಹ ಗುರುತರವಾದ ಬದಲಾವಣೆಗೊಳಗಾದವು. ಈ ಬದಲಾವಣೆಗಳು ರಾಷ್ಟ್ರೀಯ ಒಮ್ಮತವಾದ ಸ್ವಾತಂತ್ರ‍್ಯ, ಉದಾರ ವಾದಿತನ, ಜಾತ್ಯಾತೀತತೆ, ಇತ್ಯಾದಿಗಳಾಚೆ ವೈರುಧ್ಯಾತ್ಮಕ ಮುಖಿಯಾಗಿ ಬೆಳೆದವು. ಇದಕ್ಕೆಲ್ಲಾ ಮಿಗಿಲಾಗಿ ರಾಷ್ಟ್ರೀಯ ಒಮ್ಮತವು ಜಾತಿ/ಸಮುದಾಯಗಳು, ಭಾಷೆ ಹಾಗು ಪ್ರದೇಶಗಳ ನಡುವೆ ಉಳಿದುಕೊಂಡು ಬಂದ ಅಸಮಾನತೆ, ವೈರುಧ್ಯ ಹಾಗು ದ್ವೇಷಮಯ ವಾತಾವರಣವನ್ನು ಅಳಿಸಲಾಗಲಿಲ್ಲ. ವಸಾಹತುಕಾಲದಲ್ಲಿ ತನ್ನ ವಿರಾಟ ಸ್ವರೂಪವನ್ನು ತೋರಿಸಿದ ಈ ಅಂಶಗಳು ವಸಾಹತೋತ್ತರ ಕಾಲಘಟ್ಟದಲ್ಲೂ ಮುಂದುವರೆದವು. ೧೯೫೦ ಹಾಗು ೬೦ರ ದಶಕಗಳಲ್ಲಿ ಇವು ರಾಷ್ಟ್ರೀಯ ಒಮ್ಮತದಲ್ಲಿನ ಬಿರುಕುಗಳನ್ನು ಎತ್ತಿ ತೋರಿಸಿದವು. ಇದರಿಂದ ಉಂಟಾದ ಕ್ಷೋಭೆಯನ್ನು ಅಳಿಸಿ ಹಾಕುವ ಪ್ರಯತ್ನವಾಗಿ ‘ವೈವಿಧ್ಯತೆಯಲ್ಲಿ ಏಕತೆ’ ಎಂಬ ಘೋಷಣೆಯಡಿಯಲ್ಲಿ ಪರಿಹರಿಸಲು ಪ್ರಯತ್ನಿಸಲಾಯಿತು. ಇಂತಹ ಐತಿಹಾಸಿಕ ಸಂದರ್ಭದಲ್ಲಿ ಹುಟ್ಟಿಕೊಂಡ ನೈಜತೆ/ವಸ್ತು ನಿಷ್ಠತೆ (ಸಾಹಿತ್ಯ ಹಾಗು ಇತಿಹಾಸದ ವಿಷಯಗಳಲ್ಲಿ) ಪ್ರಗತಿಪರ, ಮಾನವ ಅಭಿವೃದ್ಧಿ ಹಾಗು ವೈಚಾರಿಕತೆಯು ಉಪಮೆಗಳಾಗಿ ಹಾಗು ಆಧುನಿಕ ಭಾರತದ ಹೆಗ್ಗುರುತುಗಳಾಗಿ ಕಾಣಿಸಿಕೊಳ್ಳಲು ಪ್ರಯತ್ನಿಸಿದವು. ಕಾಕತಾಳೀಯವೆಂಬಂತೆ ಈ ಉಪಮೆಗಳ ರೂವಾರಿಗಳು ಬ್ರಾಹ್ಮಣರೇ ಆಗಿದ್ದರು. ಅವರು ಈಗಾಗಲೇ ತಮ್ಮನ್ನು ಜಾತ್ಯಾತೀತರೆಂದು ಗುರುತಿಸಿಕೊಳ್ಳಲು ಪ್ರಯತ್ನಿಸಿದ್ದರು. ಈ ಜಾತ್ಯಾತೀತ ಧೋರಣೆಗೆ ಮತ್ತೊಂದು ನಂಬಿಕೆಯು ಸೇರಿತ್ತು. ಅದೇನೆಂದರೆ ಅಭಿವ್ಯಕ್ತಿ ಸ್ವಾತಂತ್ರ‍್ಯದಿಂದ ನೈಜತೆ/ ವಾಸ್ತವಾಂಶವನ್ನು ಯಾವುದೇ ರೀತಿಯಲ್ಲಿ ಅಭಿವ್ಯಕ್ತಿಗೊಳಿಸಬಹುದೆಂಬ ದೃಢ ವಿಶ್ವಾಸ. ಈ ನಂಬಿಕೆಯೆ ಲಿಂಗಾಯತರ ಜಾತೀಯತೆ, ಮತೀಯವಾದಿತನ ಹಾಗು ವಿಭಜನಾ ಧೋರಣೆಯ[8] ವಿರುದ್ಧ ದನಿಗೂಡಿಸಿದ್ದು. ಈ ವಿವಾದದಲ್ಲಿ ಈ ಮೂರೂ ‘ಜಾಡ್ಯಗಳು’ ಕಲಾಕಾರನ ಸ್ವಾತಂತ್ರ‍್ಯ ಮತ್ತು ಸೃಜನಶೀಲತೆಗೆ ವಿರುದ್ಧವಾಗಿದ್ದು ಪ್ರಗತಿಪರರಿಗೆ ಸರಿ ಕಾಣಲಿಲ್ಲ. ಇದಕ್ಕೆಲ್ಲಾ ಪ್ರತಿಕ್ರಿಯೆಯಾಗಿ ಪ್ರಗತಿಪರ/ಜಾತ್ಯಾತೀತರು ಮಾಸ್ತಿಯವರ ಮೇಲಿನ ಆಪಾದನೆಗಳನ್ನು ವಿರೋಧಿಸಿ ತಾವೇ ರಾಷ್ಟ್ರದ ಏಕತೆ ಹಾಗೂ ಅಖಂಡತೆಗೆ ರೂವಾರಿಗಳು ಎನ್ನುವ ರೀತಿಯಲ್ಲಿ ತೋರಿಸಿಕೊಂಡರು. ಇದಕ್ಕೆ ಪ್ರತಿಯಾಗಿ ಲಿಂಗಾಯತರು ಸಹ ತಾನೇ ಏಕತೆಯ ಪ್ರತಿನಿಧಿಗಳು ಎಂದು ಪ್ರತಿಕ್ರಿಯೆ ನೀಡಲು ಮುಂದಾದರು. ರಾಷ್ಟ್ರೀಯತೆಯ ಏಕತೆ ಹಾಗು ಅಖಂಡತೆಯ ಧೋರಣೆಯು ರಾಜಕೀಯ ದನಿ ಪಡೆದಿದ್ದರೂ, ಅದು ಕನ್ನಡ ಸಾಹಿತ್ಯದ ಹೊಸ ಪ್ರಯೋಗವಾದ ಐತಿಹಾಸಿಕ ವಸ್ತು ನಿಷ್ಠತೆಗೆ ಸಂವಾದಿಯಾಗಿ ರೂಪುಗೊಂಡು, ಮಾಸ್ತಿಯವರ ‘ವಿಭಜನೆಯ’ ತಂತ್ರವನ್ನು ಸರಿಗಟ್ಟುವ ಪ್ರಯತ್ನ ಮಾಡಿತು. ಇದು ಕಾದಂಬರಿಯ ಪ್ರಜಾಪ್ರಭುತ್ವದ ಅಂಶಗಳನ್ನು ಅನುಮಾನದಿಂದ ನೋಡುತ್ತಾ ಮಾಸ್ತಿಯ ಪ್ರಾಮಾಣಿಕತೆ, ಖಚಿತತೆ ಹಾಗು ನೈಜತೆಯನ್ನು ಬಲವಾಗಿ ಅನುಮಾನಿಸಿತು. ಇದು ಸಾರ್ವಜನಿಕ ಸಂಸ್ಥೆಗಳು ಸಾಹಿತ್ಯದ ನವೀನ ಪ್ರಯೋಗಗಳಿಗೆ ಮನ್ನಣೆ ನೀಡುವುದರ ವಿರುದ್ಧವೂ ಇತ್ತು. ಐದು ಎಮ್.ಸಿ.ಗಳು ಕೇಂದ್ರ ಸರ್ಕಾರಕ್ಕೆ ಬರೆದ ಪತ್ರದಲ್ಲಿ ತಮ್ಮನ್ನು ತಾವು ರಾಷ್ಟ್ರೀಯ ಭಾವೈಕ್ಯದ ರೂವಾರಿಗಳೆಂದು ಘೋಷಿಸಿಕೊಂಡು, ಸಾರ್ವಜನಿಕ ಸಂಘ/ ಸಂಸ್ಥೆಗಳನ್ನು ಜಾತ್ಯಾತೀತ ವಲಯವನ್ನಾಗಿ ಮಾಡಬೇಕೆಂದು ಒತ್ತಾಯಿಸಿದರು. ಈ ಒತ್ತಾಯವು ಆಂತರಿಕವಾಗಿ ವೈರುಧ್ಯವನ್ನು ಹೊಂದಿತ್ತು. ಏಕೆಂದರೆ ಅದು ರಾಷ್ಟ್ರೀಯ ಧೋರಣೆಯನ್ನು ಪ್ರದರ್ಶಿಸುತ್ತಾ, ಸಾಮುದಾಯಿಕ ಕಳಕಳಿಯನ್ನು ಸಹ ಹೊಂದಿತ್ತು. ಹೊಸದಾಗಿ ರಚಿಸಲ್ಪಟ್ಟ ಕರ್ನಾಟಕ ರಾಜ್ಯದಲ್ಲಿ ತಾವೇ ಬಹು ಸಂಖ್ಯಾತರು ಎಂಬ ಗರ್ವ ಪಟ್ಟುಕೊಂಡರೂ, ಲಿಂಗಾಯತರು ಅದನ್ನು ರಾಷ್ಟ್ರಕ್ಕೆ ಹಾಗು ರಾಜ್ಯಕ್ಕೆ ಸೇವೆ ಮಾಡಲು ಸದಾ ಸಿದ್ಧ ಎನ್ನುವ ರೀತಿಯಲ್ಲಿ ತೋರಿಸಿಕೊಂಡರು. ಹೀಗಾಗಿ ರಾಷ್ಟ್ರೀಯ ಭಾವನೆ, ಜಾತ್ಯಾತೀತತೆ ಅಥವಾ ಭಾವೈಕ್ಯ ಪ್ರಗತಿಪರ ಹಾಗು ಮತಾಂಧರ ನಡುವಿನ ಸ್ಪರ್ಧೆಯಾಗಿ ಮಾರ್ಪಾಡಿತು. ಒಟ್ಟಾರೆಯಾಗಿ ಈ ವಿವಾದವು ಸಮುದಾಯ ಹಾಗು ರಾಷ್ಟ್ರದ ನಡುವೆ ಸಾಹಿತ್ಯವನ್ನು ಹೇಗೆ ಅರ್ಥ ಮಾಡಿಕೊಳ್ಳಲಾಗಿದೆ ಎಂದು ಪ್ರದರ್ಶಿಸಿತು.

ಉಲ್ಲೇಖಿತ ಕೃತಿಗಳು ಮತ್ತು ಲೇಖನಗಳು

೧.        ಮೂರ್ತಿರಾವ್, ಎ.ಎನ್. ೧೮೮೮. “ಚೆನ್ನಬಸವ ನಾಯಕ ಪ್ರಸಂಗ”, ಸಂಜೆಗಣ್ಣಿನ ಹಿನ್ನೋಟ, ಮೈಸೂರು: ಡಿ.ವಿ.ಕೆ. ಮೂರ್ತಿ.

೨.        ರಾಮಚಂದ್ರನ್, ಸಿ.ಎನ್. ೨೦೦೦. “ಕಾದಂಬರಿ-೧೮೦೦-೧೮೨೫”, ಶತಮಾನದ ಕನ್ನಡ ಸಾಹಿತ್ಯ, ಸಂ. ಈ.ಎಚ್. ನಾಯಕ, ಅಂಕೋಲ: ರಾಘವೇಂದ್ರ ಪ್ರಕಾಶನ.

೩.        ನಾಗರಾಜನ್, ಡಿ.ಆರ್. ೧೮೮೬. “ಮಾಸ್ತಿಯವರ ಕಾದಂಬರಿಗಳಲ್ಲಿ ಕೇಡಿನ ಕಲ್ಪನೆ”, ಸಾಹಿತ್ಯ ಕಥನ, ಹೆಗ್ಗೋಡು: ಅಕ್ಷರ.

೪.        ಆಲ್ವಾರೆಸ್, ಅರ್ನೆಸ್ಟ ಎಂ. ೧೮೩೦. ‘The Nayakas of Ikkeri’, Unpublished Ph.D. thesis submitted to The Indian Historical Research Institute, St. Xavier College, ಬಾಂಬೆ.

೫.        ಹಳಕಟ್ಟಿ, ಫ.ಗು. ೧೮೩೧. “ಕೆಳದಿ ಮತ್ತು ಸ್ವಾದಿ ರಾಜ್ಯಗಳ ಬಗ್ಗೆ ಯೂರೋಪಿನ ಪ್ರವಾಸಿಗರ ಅಭಿಪ್ರಾಯಗಳು”, ಶಿವಾನುಭವ, ಸಂ. ೬ ಸಂಖ್ಯೆ ೧.

೬.        – ೧೮೨೬. “ಪತ್ರಿಕೆಯ ಉದ್ದೇಶ”, ಶಿವಾನುಭವ, ಸಂ. ೧, ಸಂಖ್ಯೆ ೧.

೭.        ಬುಕನಾನ್, ಫ್ರಾನ್ಸಿಸ್, ೧೮೦೦ (೧೮೮೮) A Journey From Madras Through The Countries of Mysore, Canara and Malabar, ದೆಲ್ಲಿ: ಏಷ್ಯನ್ ಎಜುಕೇಷನ್ ಸರ್ವಿಸಸ್.

೮.        ಖರೆ, ಜಿ. ಎಚ್. ೧೮೮೧. “Rajarama’s Escape to Gingi”, Studies in Keladi History, ೧ ಸಂ. ಈ.ಎಸ್. ದೀಕ್ಷಿತ್, ಬೆಂಗಳೂರು: ಮಿಥಿಕ್ ಸೊಸೈಟಿ.

೯.        ರಾಜರತ್ನಂ, ಜಿ.ಪಿ. ೧೮೫೮. “ಅರಿಕೆ”, ಬಿದನೂರಿನ ರಾಣಿ ವೀರಮ್ಮಾಜಿ, ಬೆಂಗಳೂರು: ಕರ್ನಾಟಕ ಸಂಘ.

೧೦.      ಶಿವಾಚಾರ್ಯ, ಗಂಗಾಧರ. ೧೮೫೮. ಶರಣ ಸಾಹಿತ್ಯ. ಸಂ. ೨೧. ಸಂಖ್ಯೆ ೬.

೧೧.      ಸ್ವಾಮಿನಾಥನ್, ಕೆ.ಡಿ. ೧೮೫೭. ‘Virammaji and the End (1757-1763)’, ಮದ್ರಾಸ್.

೧೨.      ಕೃಷ್ಣಮೂರ್ತಿ, ಕೆ.ಎಸ್. ೧೮೫೨. “ಮೈಸೂರು ಚರಿತ್ರೆಯ ಮೇಲಣ ಐತಿಹಾಸಿಕ ಕಾದಂಬರಿಗಳು”, ಜೀವನ, ಸಂ. ಮಾಸ್ತಿ ವೆಂಕಟೇಶ ಐಯ್ಯಂಗಾರ್, ಸಂ. ೧೩. ಸಂಖ್ಯೆ ೪.

೧೩.      ಅಪ್ಪಿಯ್ಯ, ಕ್ವಾಮೆ ಅಂತೋಣ., ೨೦೦೦. “Thick Translation”, The Translation Studies Reader, ಲಂಡನ್: ರೂಟ್ಲೆಡ್ಜ್.

೧೪.      ಕಾಡದೇವರ ಮಠ, ಎಲ್. ಎಸ್. ೨೦೦೫-೦೬. ಸಣ್ಣ ಕಥೆಗಳ ಜನಕ, ಗದಗ: ವಿದ್ಯಾನಿಧಿ.

೧೫.      ಶೇಷಗಿರಿ ರಾವ್, ಎಲ್.ಎಸ್. ೧೮೭೬. “The Novelist”, Masti Venkatesh Ayyangar, ಮೈಸೂರು: ಕನ್ನಡ ಅಧ್ಯಯನ ಕೇಂದ್ರ.

೧೬.      ವೆನ್ಯೂಟಿ, ಲಾರೆನ್ಸ್. ೨೦೦೦. “Translation, Community, Utopia”, The Translation Studies Reader, ಲಂಡನ್: ರೂಟ್ಲೆಡ್ಜ್.

೧೭.      ಪ್ರಸಾದ, ಲೀಲಾದೇವಿ ಆರ್. ೨೦೦೭. “ಮುನ್ನುಡಿ”, ನಿಷ್ಕಳಂಕಿ ಕೆಳದಿ ರಾಣಿ ವೀರಮ್ಮಾಜಿ, ಸಂ. ಕೆಳದಿ ಗುಂಡಾ ಜೋಯಿಸ, ಕೆಳದಿ: ಕೆಳದಿ ಮ್ಯೂಸಿಯಂ.

೧೮.      ಪಡಿಕ್ಕಲ್, ಶಿವರಾಮ. ೨೦೦೧. “ರಾಷ್ಟ್ರ, ಆಧುನಿಕತೆ ಮತ್ತು ಮೊದಲ ಕಾದಂಬರಿಗಳು”, ನಾಡು-ನುಡಿಯ ರೂಪಕ: ರಾಷ್ಟ್ರ, ಆಧುನಿಕತೆ ಮತ್ತು ಮೊದಲ ಕಾದಂಬರಿಗಳು, ಪ್ರಸಾರಾಂಗ: ಮಂಗಳೂರು ವಿಶ್ವವಿದ್ಯಾನಿಲಯ.

೧೯.      ಬೋರಿಂಗ್, ಲೆವಿನ್ ಬಿ. ೧೮೮೩. “Conquest of Bednur”, Rulers of India (Hyder Ali and Tipu Sultan), ಆಕ್ಸ್ ಫರ್ಡ್.

೨೦.      ಬಿಳಿಮಲೆ, ಪುರುಷೋತ್ತಮ, ೨೦೦೦. “ಕಾದಂಬರಿ ೧೮೨೬-೧೮೫೦”, ಶತಮಾನದ ಕನ್ನಡ ಸಾಹಿತ್ಯ, ಸಂ. ಜಿ.ಎಚ್. ನಾಯಕ, ಅಂಕೋಲ: ರಾಘವೇಂದ್ರ ಪ್ರಕಾಶನ.

೨೧.      ಪುಟ್ಟಣ್ಣ, ಎಮ್. ಎಸ್. ೧೮೩೧. “೧೮ನೇ ದೊರೆ ಮುಮ್ಮಡಿ ಸೋಮಶೇಖರ ನಾಯಕ”, ಇಕ್ಕೇರಿಯ ಇತಿಹಾಸ, ಬೆಂಗಳೂರು: ಸೋಮಶೇಖರ ರಾವ್.

೨೨.      ಐಯ್ಯಂಗಾರ್, ಮಾಸ್ತಿ ವೆಂಕಟೇಶ, ೧೮೮೦. “ಚೆನ್ನಬಸವ ನಾಯಕ”, ಭಾವ, ಬೆಂಗಳೂರು: ಜೀವನ.

೨೩.      – ೧೮೬೭. ಸಾಹಿತ್ಯ ಲಾಲನೆ, ಸಂ. ಮಾಸ್ತಿ ವೆಂಕಟೇಶ ಐಯ್ಯಂಗಾರ್, ಬೆಂಗಳೂರು: ಜೀವನ.

೨೪.      – ೧೮೪೮, ೧೮೫೬ (೧೮೮೭). “ಮುನ್ನುಡಿ”, ಚೆನ್ನಬಸವ ನಾಯಕ, ಬೆಂಗಳೂರು: ಜೀವನ.

೨೫.      ಈವಿಲ್ಕ್ಸ್, ಮಾರ್ಕ್ಸ್, ೧೮೩೦. ‘Chapter XII (from 1761 to 1766)’ Historical Sketches of the South of India, ಸಂ. ಮುರ‍್ರೆ ಹ್ಯಾಜಿಕ್, ಸಂ. ೧. ಮೈಸೂರು.

೨೬.      ಮುಖರ್ಜಿ, ಮೀನಾಕ್ಷಿ. ೧೮೮೫. Realism and Reality: The Novel and Society in India, ದೆಲ್ಲಿ: ಆಕ್ಸ್ ಫರ್ಡ ಯೂನಿವರ್ಸಿಟಿ ಪ್ರೆಸ್.

೨೭.      ಸಿನ್ಹಾ, ಎನ್.ಕೆ. ೧೮೪೧. “Conquests (೧೭೬೦-೧೭೬೩)”, Haidar Ali, ಸಂ. ೧. ಕಲ್ಕತ್ತಾ: ಓರಿಯೆಂಟಲ್ ಪ್ರೆಸ್.

೨೮.      ಶ್ರೀಕಂಠಯ್ಯ, ಎಸ್. ೧೮೫೨. “hannabasava Nayaka”, The Quarterly Journal of the Mythic Society, ಸಂ. XLII, ಸಂಖ್ಯೆ ೪.

೨೯.      ಮೈಸೂರ್ ಮಠ, ೧೮೫೮. “Chennavirammaji of Keladi: The Meritorious Mother”, Jaya Karnataka, ಸಂ. ಎಸ್. ಎಸ್. ಬಸವನಾಳ, ಸಂ. ೩೬, ಸಂಖ್ಯೆ ೧೧, ನವೆಂಬರ್.

೩೦.      ವೃಷಭೇಂದ್ರ ಸ್ವಾಮಿ, ೧೮೮೮. “ಅಭಿವ್ಯಕ್ತಿ ಸ್ವಾತಂತ್ರ‍್ಯ ಮತ್ತು ಸಮಕಾಲೀನ ಸಾಹಿತ್ಯ ಸಂಘರ್ಷಗಳು”, ಸಾಹಿತ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ‍್ಯ, ಸಂ. ಜಿ.ಎನ್. ಮಲ್ಲಿಕಾರ್ಜುನಪ್ಪ, ಚಿತ್ರದುರ್ಗ: ಮುರುಘರಾಜೇಂದ್ರ ಗ್ರಂಥಮಾಲೆ.

೩೧.      ಮಹಾಸ್ವಾಮಿ, ಶಿವಾಚಾರ್ಯ ಸದ್ಯೋಜಾತ, ೧೮೮೧. “Religious Policy of the Keladi rulers”, Studies in Keladi History, ಸಂ. ಜಿ.ಎಸ್. ದೀಕ್ಷಿತ್, ಬೆಂಗಳೂರು: ಮಿಥಿಕ್ ಸೊಸೈಟಿ.

೩೨.      ಕುಪ್ಪಸ್ತ, ಸಂಗಣ್ಣ, ೧೮೫೮. ವಿಮರ್ಶೆ ಚಿಕವೀರ ರಾಜೇಂದ್ರ, ಧಾರವಾಡ: ಜೆಂಗೋಡ.

೩೩.      ಬೆಟ್ಟದೂರು, ಶರಣ ಬಸವ. ೨೦೦೭. “Part-II – Report on the Movement for removing blame on Keladi Raani Virammaji”, ನಿಷ್ಕಳಂಕ ಕೆಳದಿ ರಾಣಿ ವೀರಮ್ಮಾಜಿ, ಸಂ. ಕೆಳದಿ ಗುಂಡಾ ಜೋಯಿಸ್, ಕೆಳದಿ: ಕೆಳದಿ ಮ್ಯೂಸಿಯಂ.

೩೪.      ಅಲಿ, ಶೆಕ್. ೧೮೮೧. “Factors Responsible for Haidar’s Conquest of Bidanur”, Studies in Keladi History, ಸಂ. ಜಿ.ಎಸ್. ದೀಕ್ಷಿತ್, ಬೆಂಗಳೂರು: ಮಿಥಿಕ್ ಸೊಸೈಟಿ.

೩೫.      ಶಾಸ್ತ್ರಿ, ಶಿವಮೂರ್ತಿ, ೧೮೨೮, ‘ವೀರಶೈವ ರಾಜರು’, ಶಿವಾನುಭವ, ಸಂ. ೩, ಸಂಖ್ಯೆ ೮.

೩೬.      ನರೇಗಲ್, ವೀಣಾ. ೧೮೮೮. “Colonial Bilingualism and Hirearchicies of Making of a Vernacular Sphere in Western India”, Economic and Political Weekly, ಸಂ. ೩೭.

೩೭.      ಬೋರಟ್ಟಿ, ವಿಜಯಕುಮಾರ. ಎಂ. ೨೦೦೩. “ಯಜಮಾನಿಕೆಗಾಗಿ ಭಾಷಾಂತರ”, ಸಂಕ್ರಮಣ, ಸಂ. ೩೮, ಸಂಖ್ಯೆ : ೪.

[1] ಕೇಂದ್ರ ಸಾಹಿತ್ಯ ಅಕಾಡೆಮಿಯನ್ನು ಭಾರತ ಸರ್ಕಾರವು ಮಾರ್ಚ್ ೧೨, ೧೮೫೪ರಲ್ಲಿ ಸ್ಥಾಪಿಸಿತು. ಇದು ಭಾರತೀಯ ಸಾಹಿತ್ಯಕ್ಕೆ ಮನ್ನಣೆ ನೀಡುವ ಉನ್ನತ ಸಾಹಿತ್ಯ ಸಂಸ್ಥೆ. ೨೦೦೪ರಲ್ಲಿ ಅದು ಸುವರ್ಣ ಮಹೋತ್ಸವವನ್ನು ಆಚರಿಸಿತು. ಈ ಉತ್ಸವದ ಬಗ್ಗೆ ಸಾರ್ವಜನಿಕ ಪ್ರಕಟನೆಯಲ್ಲಿ, ಅಕಾಡೆಮಿಯು ಹೆಮ್ಮೆಯಿಂದ ತನ್ನ ಗುರಿಗಳ ಬಗ್ಗೆ ಹೇಳಿಕೊಂಡಿದೆ:

ಅ. ಭಾರತೀಯ ಭಾಷೆ ಮತ್ತು ಸಂಸ್ಕೃತಿಗಳ ನಡುವೆ ಉನ್ನತ ಮಟ್ಟದ ಸಾಮರಸ್ಯವನ್ನು ಬೆಳೆಸುವುದು

ಆ. ಭಾರತ ಹಾಗು ಭಾರತದಾಚೆ ಭಾರತೀಯ ಭಾಷೆ, ಪರಂಪರೆ, ಸಾಹಿತ್ಯಗಳ ಪ್ರಸರಣ, ಪ್ರಚಾರ ಕೈಗೊಳ್ಳುವುದು

ಇ. ವೈವಿಧ್ಯತೆಯಲ್ಲಿ ಏಕತೆ ಮೂಡುವ ಹಾಗೆ ಭಾರತೀಯ ಸಾಹಿತ್ಯವನ್ನು ಬೆಳೆಸುವುದು

ಈ. ಹಳೆಯ ಹಾಗೂ ಹೊಸ ಕೃತಿಗಳನ್ನು (ಭಾರತೀಯ ಶ್ರೇಷ್ಠ ಕೃತಿಗಳನ್ನು) ಭಾರತೀಯ ಇತರ ಭಾಷೆಗಳಿಗೆ ಭಾಷಾಂತರಿಸಿ ಅವುಗಳ ಒಂದು ವರ್ಗವನ್ನೇ ಸೃಷ್ಟಿಸುವುದು (ಟೈಮ್ಸ್ ಆಫ್ ಇಂಡಿಯಾ, ೨೫ನೇ ಅಕ್ಟೋಬರ್, ೨೦೦೪).

[2] ಲಿಂಗಾಯತರಲ್ಲಿ ಅನೇಕ ಉಪ-ಜಾತಿಗಳಿವೆ. ಬಹುತೇಕ ಜಾತಿಗಳು ಇತ್ತೀಚಿಗೆ ತಮ್ಮದೇ ಆದ ಮಠ-ಮಾನ್ಯಗಳನ್ನು ಶುರು ಮಾಡುತ್ತಿದ್ದಾರೆ. ಈ ಮಠ-ಮಾನ್ಯಗಳು ಬಲ ಹಾಗೂ ಪ್ರಭಾವದ ಕೇಂದ್ರಗಳಾಗಿವೆ.

[3] ಉದಾಹರಣೆಗೆ ೧೮೫೨ರಲ್ಲಿ ಬಸವರಾಜ ಕಟ್ಟೀಮನಿಯವರ ಜರತಾರಿ ಜಗದ್ಗುರು (೧೮೫೨) ವಿವಾದಕ್ಕೊಳಗಾದಾಗ ಹುಬ್ಬಳ್ಳಿಯ ಮೂರು ಸಾವಿರ ಮಠವು ಕಟ್ಟೀಮನಿಯವರ ವಿರುದ್ಧ ತಿರುಗಿ ಬಿದ್ದಿತ್ತು. ಇದೇ ಮಠವು ಮತ್ತೊಮ್ಮೆ ಎಮ್.ಎಮ್. ಕಲಬುರ್ಗಿಯವರ ಸಂಶೋಧನೆಗೆ (ಬಸವಣ್ಣನ ಪತ್ನಿ ನೀಲಾಂಬಿಕೆಯ ಬಗ್ಗೆ ‘ವ್ಯತಿರಿಕ್ತ’ವಾಗಿ ಬರೆದಿದ್ದರಿಂದ) ೧೮೮೮ರಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಲಿಂಗಾಯತರ ಪ್ರಥಮ ಮಹಿಳಾ ಜಗದ್ಗುರು ಮಾತೆ ಮಹಾದೇವಿ ಮಹಾಚೈತ್ಯ ನಾಟಕದ ವಿರುದ್ಧ ೧೮೮೪ರಲ್ಲಿ ರಾಜ್ಯಾದ್ಯಂತ ಚಳುವಳಿ ಹಮ್ಮಿಕೊಂಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೆ.

[4] ಈ ಕನ್ನಡ ಪತ್ರಿಕೆಯು ಚೆನ್ನಬಸವ ನಾಯಕ ಕಾದಂಬರಿ ಹಾಗೂ ಮಾಸ್ತಿಯವರ ವಿರುದ್ಧ ಅನೇಕ ಲೇಖನಗಳನ್ನು ಪ್ರಕಟಿಸಿತು.

[5] ಈ ಕನ್ನಡ ಪತ್ರಿಕೆಯ ಜೊತೆಗೆ ಉತ್ತರ ಕರ್ನಾಟಕದಲ್ಲಿ ಅನೇಕ ಪತ್ರಿಕೆಗಳಾದ ನವ ಸಂದೇಶ, ಅಂಕುಶ, ಕನ್ನಡಿಗ, ಜಯ ಕರ್ನಾಟಕ, ಸಾವಧಾನ, ಕಾದಂಬರಿ ಹಾಗೂ ಮಾಸ್ತಿಯವರ ವಿರುದ್ಧ ಲೇಖನಗಳನ್ನು ಪ್ರಕಟಿಸಿದವು. ಈ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳನ್ನು ಶರಣ ಬಸವ ಬೆಟ್ಟದೂರು ಎಂಬುವವರು ಜಾಗೃತಿಯಲ್ಲಿ ಸಂಗ್ರಹಿಸಿದ್ದಾರೆ (೨೦೦೭: ೧೧೬-೧೩೮).

[6] ಈ ಮನವಿಯನ್ನು ಜಾಗೃತಿಯಲ್ಲಿ ಪ್ರಕಟಿಸಲಾಗಿದೆ (೧೮೫೮: ೪೫-೪೬).

[7] ಮಾಸ್ತಿಯವರು ತಮ್ಮ ಕಾದಂಬರಿಯ ಬಗ್ಗೆ ರಕ್ಷಣಾತ್ಮಕವಾಗಿ ಮಾತಾಡಿದ್ದು, ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ಪ್ರತಿಪಾದಿಸಿದ್ದನ್ನು ಲಿಂಗಾಯತರು ಕಡು ಮಾತುಗಳಲ್ಲಿ ಖಂಡಿಸಿದ್ದಾರೆ. ನೋಡಿ ಕುಪ್ಪಸ್ತ, ೧೮೫೮. ಹಿಂದೆ ಕುವೆಂಪುರವರು ಶೂದ್ರ ತಪಸ್ವಿ (೧೮೩೦) ಯಲ್ಲಿ ರಾಮನನ್ನು ‘ಅಪವ್ಯಾಖ್ಯಾನ’ಗೊಳಿಸಿದಕ್ಕಾಗಿ ಮಾಸ್ತಿಯವರು ಅವರನ್ನು ತೀವ್ರ ಟೀಕೆಗೊಳಗಾಗಿಸಿದ್ದರು. ಕುವೆಂಪುರವರನ್ನು ಟೀಕಿಸುವಾಗ ಜ್ಞಾಪಕಕ್ಕೆ ಬರದ ಅಭಿವ್ಯಕ್ತಿ ಸ್ವಾತಂತ್ರ‍್ಯ ಈಗ ಯಾಕೆ ಎಂದು ಕುಪ್ಪಸ್ತರವರು ಪ್ರಶ್ನಿಸಿದರು (೧೮೫೮: ೧೭೮).

[8].೪೨ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎ.ಎನ್. ಮೂರ್ತಿರಾವ್ ರವರು ಈ ರೀತಿಯ ಹೇಳಿಕೆಗಳನ್ನು ಕೊಟ್ಟಿದ್ದಾರೆ. ನೇರವಾಗಿ ಲಿಂಗಾಯತರ ಬಗ್ಗೆ ಅಲ್ಲದಿದ್ದರೂ, ಚೆನ್ನಬಸವ ನಾಯಕ ವಿವಾದವನ್ನು ಗಮನದಲ್ಲಿಟ್ಟುಕೊಂಡು ಈ ಮಾತುಗಳನ್ನಾಡಿರಬಹುದು. ಈ ಹೇಳಿಕೆಗೆ ವಿರುದ್ಧವಾಗಿ ವೀರಶೈವ ತರುಣ ಸಂಘ (ಗದಗ) ರವರು ಒಂದು ಖಂಡನಾ ಹೇಳಿಕೆಯನ್ನು ಅಮರ ವಾಣಿ ಪತ್ರಿಕೆಯಲ್ಲಿ ಪ್ರಕಟಿಸಿತು (ಸಂ. ೧೩, ಸಂ. ೨, ೧೮೬೧: ೩೫).