ಈ ಕೃತಿಯಲ್ಲಿರುವ ಲೇಖನಗಳು ನನ್ನ ಹನ್ನೆರಡು ವರ್ಷದ ಸಂಶೋಧನೆಯ ಪರಿಶ್ರಮದ ಫಲ. ನನ್ನ ವಿಚಾರಗಳನ್ನು ನಿಮ್ಮ ಮುಂದಿಡಲು ಅತ್ಯಂತ ಹರ್ಷವಾಗುತ್ತದೆ. ಇಲ್ಲಿರುವ ಬಹುತೇಕ ಲೇಖನಗಳು ಇಂಗ್ಲಿಷ್ ಮೂಲದ್ದು ಹಾಗೂ ಅನೇಕ ಕಡೆ ಪ್ರಕಟಿತವಾಗಿರುವಂಥದ್ದು. ಪ್ರತಿಯೊಂದು ಲೇಖನದ ಕೊನೆಗೆ ಬರೆದಿರುವ ಟಿಪ್ಪಣಿಗಳಲ್ಲಿ ನಿಮಗೆ ಇದರ ಬಗ್ಗೆ ಮತ್ತಷ್ಟು ಮಾಹಿತಿ ಸಿಗುತ್ತವೆ. ಇವುಗಳನ್ನು ಕನ್ನಡಕ್ಕೆ ಭಾಷಾಂತರಿಸಿ, ಕನ್ನಡ-ಓದುಗರಿಗೆ ನನ್ನ ವಿಚಾರಗಳನ್ನು ಪರಿಚಯಿಸುವ ಬಯಕೆಯಿಂದ ಈ ಕೃತಿಯನ್ನು ನಿಮ್ಮ ಮುಂದೆ ತರುತ್ತಿದ್ದೇನೆ.

ಈ ಸಂದರ್ಭದಲ್ಲಿ ಕೆಲವರಿಗೆ ನನ್ನ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ,

ಎಲ್ಲಾ ರೀತಿಯಿಂದ ನನ್ನನ್ನು ಚಿಕ್ಕಂದಿನಿಂದಲೂ ಪ್ರೋತ್ಸಾಹಿಸುತ್ತಿರುವ ನನ್ನ ತಾಯಿ, ತಂದೆ ಅವರಿಗೆ, ‘ನೀನು ತೆಗೆದುಕೊಂಡಿರುವ ಪಿಎಚ್.ಡಿ. ಮಹಾಪ್ರಬಂಧದ ವಿಷಯ ಸೂಕ್ಷ್ಮವಾದುದು, ಅದನ್ನು ಕೈಬಿಡುವುದೇ ಒಳ್ಳೆಯದು’ ಎಂದು ನಿರುತ್ಸಾಹ ಮೂಡಿಸುವ ಸಂದರ್ಭದಲ್ಲಿ ನನ್ನನ್ನು ಸಂಶೋಧನಾ ವಿದ್ಯಾರ್ಥಿಯಾಗಿ ಸ್ವೀಕರಿಸಿ, ಪ್ರೋತ್ಸಾಹಿಸಿದ ಪ್ರೊ. ಶಿವರಾಮ ಪಡಿಕ್ಕಲ್ ಅವರಿಗೆ ನನ್ನ ವಂದನೆಗಳು.

ಈ ಕೃತಿಯ ಪ್ರತಿಯೊಂದು ವಿಷಯವನ್ನು ಪರಿಶೀಲಿಸಿ, ಬಹು ಉತ್ಸಾಹದಿಂದ ನನ್ನನ್ನು ಹುರಿದುಂಬಿಸಿ, ಇದರ ಪ್ರಕಟಣೆಗೆ ಕಾರಣರಾದ ಪ್ರೊ. ಟಿ.ಆರ್. ಚಂದ್ರಶೇಖರ ಅವರಿಗೆ, ‘ಕನ್ನಡ ವಿಶ್ವವಿದ್ಯಾಲಯದಿಂದಲೇ ನಿಮ್ಮ ಮೊದಲ ಕನ್ನಡ ಪದಗಳು ಹೊರಡಲಿ’ ಎಂದು ಪ್ರೇರೇಪಿಸಿ ಈ ಕೃತಿಯ ಪ್ರಕಟಣೆಗೆ ಪ್ರೋತ್ಸಾಹ ನೀಡಿದ ಮತ್ತೋರ್ವ ವಿದ್ವಾಂಸ ಪ್ರೊ. ರಹಮತ್ ತರೀಕೆರೆ ಅವರಿಗೆ, ನನ್ನ ಬೌದ್ಧಿಕ ಉತ್ಸಾಹವನ್ನು ಇಮ್ಮಡಿಸಿದ ಪ್ರೊ. ಸತೀಶ್ ಹೆಗಡೆ ಮತ್ತು ಪ್ರೊ. ತಿರುಮಾಳ್ ಅವರಿಗೆ ಕೃತಜ್ಞತೆಗಳು.

ತಾರಕೇಶ್ವರ್, ರಮೇಶ್ ಬೈರಿ, ನಿಖಿಲ, ಶರ್ಮಿಳಾ, ಬಿಂದು ಕೆ.ಸಿ., ಮೈತ್ರೇಯಿ, ಸುಧಾ ಸೀತಾರಾಮನ್, ಶಶಿಕಲಾ ಶ್ರೀನಿವಾಸನ್, ಶಶಿಕಾಂತ್, ದತ್ತಾತ್ರೇಯ, ಚಂದ್ರು, ತಾತ್ಯಾರಾವ್ ನನಗೆ ಸ್ನೇಹಿತ – ಗುರುಗಳು. ಈ ಸಂದರ್ಭದಲ್ಲಿ ಇವರೆಲ್ಲರನ್ನು ನೆನೆಯುತ್ತೇನೆ.

ತೊಲಾನಿ ಮ್ಯಾರಿಟೈಮ್ ಇನ್ಸ್ಟಿಟ್ಯೂಟ್ ನಲ್ಲಿ (ಪುಣೆ) ನನ್ನ ಸಹದ್ಯೋಗಿಗಳಾಗಿ, ನನ್ನ ವಿಚಾರಗಳನ್ನು ತಾಳ್ಮೆಯಿಂದ ಕೇಳಿ, ಪ್ರೋತ್ಸಾಹ ನೀಡಿದ ಜಗದೀಶ್ವರನ್, ಥಾಮಸ್, ಪ್ರವೀಣ್ ವೈದ್ಯ, ನರಸಿಂಹ ಜೋಷಿ ಮತ್ತು ವಿಶ್ವನಾಥ್ ಪೊದ್ದಾರ್ ಅವರಿಗೆ, ನನ್ನ ಕನ್ನಡದ ತಪ್ಪುಗಳನ್ನು ತಿದ್ದಿ, ‘ಇಂತಹ ತಪ್ಪುಗಳು ಸಹಜ’ ಎಂದು ಸಮಾಧಾನ ಪಡಿಸಿದ ಪವಮಾನ್ ಅವರಿಗೆ, ಸಂಜೆ ಕಾಲೇಜಿನ ಸಹದ್ಯೋಗಿಗಳಾಗಿ, ನನ್ನನ್ನು ಪ್ರಭಾವಿಸಿದ ಸುರೇಶ ನಾಯಕ್, ಗ್ಯಾವಿನ್ ಮತ್ತು ಚೈತ್ರ ಅವರಿಗೆ, ಎಂ.ಎ. ದಿನಗಳಿಂದಲೂ ಸ್ನೇಹಿತನಾಗಿರುವ ಶೇಖರ್ ನಾಯಕ್ ಮತ್ತು ಆತನ ಪತ್ನಿ ದಿವ್ಯಾ ಅವರಿಗೆ ಕೃತಜ್ಞತೆಗಳು.

ನನ್ನಂತಹ ಸಂಶೋಧಕರನ್ನು ಪ್ರೋತ್ಸಾಹಿಸುತ್ತಿರುವ ಕನ್ನಡ ವಿಶ್ವವಿದ್ಯಾಲಯ, ನನ್ನ ಬೌದ್ಧಿಕತೆಗೆ ನೀರುಣಿಸಿ, ಪೋಷಿಸಿ ಬೆಳೆಸಿದ ನನ್ನ ಪ್ರೀತಿಯ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯ, ಪುಸ್ತಕಕ್ಕೆ ಮುಖಪುಟದ ಹೊಳವುಗಳನ್ನು ನೀಡಿದ ನನ್ನ ಅಣ್ಣ ಸಂಜಯ್ ಮತ್ತು ಮುಖಪುಟವನ್ನು ವಿನ್ಯಾಸಗೊಳಿಸಿದ ಕಲಾವಿದ ಶ್ರೀ ಕೆ.ಕೆ. ಮಕಾಳಿ ಅವರಿಗೆ ವಂದನೆಗಳು. ಲೇಖನಗಳಲ್ಲಿ ಅಕ್ಷರ ದೋಷಗಳು ಕಂಡು ಬಂದರೆ ಅದರ ಹೊಣೆ ನನ್ನದು. ತಪ್ಪುಗಳನ್ನು ಮನ್ನಿಸಿ. ಓದಿ, ಅರಗಿಸಿಕೊಳ್ಳಿ ಮತ್ತು ಸಮಂಜಸವೆನಿಸಿದರೆ ‘ಹೌದೌದು’ ಎನ್ನಿ.

ವಿಜಯಕುಮಾರ್ ಎಂ. ಬೋರಟ್ಟಿ

ಮೈಸೂರು
೨೫-೦೧-೨೦೧೧