(ಆರ್.ಎನ್. ನಂದಿ ಅವರು ಪಾಟ್ನಾ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದವರು. ಕರ್ನಾಟಕದ ಮೇಲೆ, ಅದರಲ್ಲೂ ವಚನಕಾರರ ಮೇಲೆ ಅನೇಕ ಅಮೂಲ್ಯವಾದ ಬರವಣಿಗೆಗಳನ್ನು ಮಾಡಿದವರು. ನಂದಿಯವರು ಶಿ.ಚ. ನಂದೀಮಠ ಅವರ ‘ಎ ಹ್ಯಾಂಡ್ ಬುಕ್ ಆಫ್ ವೀರಶೈವಿಸಂ’ಗೆ ಅವರು ಬರೆದ ಪ್ರಸ್ತಾವನೆ ಕೂಡ ಮುಖ್ಯವಾದುದು. ನಂದಿಯವರು ‘ಇಂಡಿಯನ್ ಹಿಸ್ಟಾರಿಕಲ್ ರಿವ್ಯೂ’ (ಸಂ ೨ : ಸಂಚಿಕೆ ೨, ಪು. ೩೨-೪೬) ನಲ್ಲಿ ಪ್ರಕಟಿಸಿದ ‘ಒರಿಜಿನ್ ಆಫ್ ವೀರಶೈವ ಮೂವ್‌ಮೆಂಟ್’ ಎಂಬ ಲೇಖನದ ಅನುವಾದವನ್ನು ಇಲ್ಲಿ ಕೊಡಲಾಗಿದೆ. ಈ ಲೇಖನವನ್ನು ಒದಗಿಸಿಕೊಟ್ಟ ಡಾ. ಆರ್.ಎಸ್. ಗುಂಜಾಳ ಅವರನ್ನು ‘ಕನ್ನಡ ಅಧ್ಯಯನ’ ಕೃತಜ್ಞತೆಯಿಂದ ನೆನೆಯುತ್ತದೆ- ಸಂ).

ವೀರಶೈವ ಎಂಬುದು ಕರ್ನಾಟಕದ ವಾಯುವ್ಯ ಪ್ರದೇಶದಲ್ಲಿ ಹನ್ನೆರಡನೆಯ ಶತಮಾನದ ಅಂತ್ಯದಲ್ಲಿ ಹುಟ್ಟಿದ ಒಂದು ಶಕ್ತಿಯುತವಾದ ಶೈವ ಚಳವಳಿ. ನಂತರದ ಶತಮಾನಗಳಲ್ಲಿ ವೀರಶೈವ ಚಳುವಳಿಯು ವಿಶಾಲ ಕರ್ನಾಟಕದ ಹಾಗೂ ಆಂಧ್ರಪ್ರದೇಶದ ಇತರ ಭಾಗಗಳಿಗೂ ಹರಡಿತು. ವೀರಶೈವಕ್ಕೆ ಲಿಂಗಾಯತ ಎಂಬ ಹೆಸರೂ ಸಹ ಪ್ರಚಲಿತದಲ್ಲಿದೆ. ಸಂಪ್ರದಾಯಸ್ಥ ಬ್ರಾಹ್ಮಣವಾದಿ ಸಿದ್ಧಾಂತಕ್ಕೆ ವಿರುದ್ಧವಾಗಿ[1] ಬೆಳೆದ ಈ ಚಳುವಳಿ ಮೂರ್ತಿಪೂಜೆಯನ್ನು ಹಾಗೂ ಜಾತಿ ಆಧಾರಿತ ಸಮಾಜವನ್ನು ಖಂಡಿಸಿತು. ವೀರಶೈವ ಚಳುವಳಿಯು ಹುಟ್ಟಿನಿಂದ ಜಾತಿಯ ವ್ಯತ್ಯಾಸಗಳನ್ನು ತಿರಸ್ಕರಿಸುತ್ತಾ ಭ್ರಾತೃತ್ವವನ್ನು ಎತ್ತಿಹಿಡಿಯಿತು. ಆದರೆ, ವೀರಶೈವ ಧರ್ಮವು ಯಾವ ಬ್ರಾಹ್ಮಣ ಜಾತಿ ವ್ಯವಸ್ಥೆಯನ್ನು ತಿರಸ್ಕರಿಸುತ್ತೋ, ಅದೇ ತರಹ ಹುಟ್ಟು ಹಾಗೂ ಶುದ್ಧಿಯ ಆಧಾರದ ಮೇಲೆ ಸಾಮಾಜಿಕ ಪ್ರತ್ಯೇಕತೆಯನ್ನು ಬೆಳಸಿಕೊಂಡಿತು.

ವೀರಶೈವ ಚಳುವಳಿಯ ಪ್ರಮುಖ ಬೆಂಬಲಿಗರು ಪುರೋಹಿತ, ವರ್ತಕ, ರೈತ ಹಾಗೂ ಕಸುಬುದಾರರ ಸಮುದಾಯಗಳಿಂದ ಬಂದವರು. ಒಟ್ಟಾಗಿ ‘ಜಂಗಮ’ರೆಂದು ಕರೆಯಲ್ಪಡುವ ಪುರೋಹಿತರು ಕಸುಬಿನಿಂದ ಶಿಕ್ಷಕರು ಹಾಗೂ ಆತ್ಮೋದ್ಧಾರಕದ ಪ್ರತಿಪಾದಕರು. ಇವರಿಗೆ ಇತರರು ಧರ್ಮ ಕಾಣಿಕೆಗಳನ್ನು ನೀಡುವ ಸಂಪ್ರದಾಯವೂ ಇದೆ. ಆದರೆ ಜಂಗಮರಲ್ಲಿ ಉತ್ಪಾದನೆಯ ಮೂಲಕ್ಕಾಗಿ ವ್ಯಾಪಾರವನ್ನು ಹಾಗೂ ಅಂಗಡಿ ಮುಂಗಟ್ಟುಗಳನ್ನು ನಡೆಸುವವರೂ ಇದ್ದಾರೆ.[2] ಈ ಮತಕ್ಕೆ ಸೇರಿದ ಪುರೋಹಿತರು ಮೂಲತಃ ಹಳೆಯ ಬ್ರಾಹ್ಮಣ ಪುರೋಹಿತಶಾಹಿಗೆ ಸೇರಿದವರಾಗಿದ್ದು, ದೇವಸ್ಥಾನಗಳಲ್ಲಿನ ಪರಂಪರಾಗತ ಪುರೋಹಿತಶಾಹಿ ಅಧಿಕಾರದ[3] ವೃದ್ಧಿಯ ವಿರುದ್ಧ ತಮ್ಮನ್ನು ತಾವು ರಕ್ಷಿಸಿಕೊಳ್ಳುವವರ ಜೊತೆಗೆ, ತಮ್ಮ ಶ್ರೇಯಸ್ಸನ್ನು ಬಲವಾಗಿಸುವುದಕೋಸ್ಕರ ಬೇರೆಯಾದವರು. ಜಂಗಮರ ಹಾಗೆ ವೀರಶೈವದಲ್ಲಿ ‘ಪಂಚಮಸಾಲಿ’ಗಳೆಂದು ಕರೆಯಲ್ಪಡುವ ವರ್ತಕ ಸಮುದಾಯದವರು ಇರುವರು. ವೀರಶೈವರಲ್ಲಿ ಈ ‘ಪಂಚಮಸಾಲಿ’ಗಳು ಪ್ರಭಾವಶಾಲಿ ಸಮುದಾಯದವರು. ಜಂಗಮರ ಜೊತೆಗೆ ಮದುವೆಯ ಸಂಬಂಧವಾಗಲಿ ಅಥವಾ ಊಟ ಮಾಡುವುದಾಗಲಿ ನಿಷೇಧಕ್ಕೊಳಪಟ್ಟವರು.[4] ಜಾತಿಯ ಶ್ರೇಣಿಯಲ್ಲಿ ಪಂಚಮಸಾಲಿಗಳ ನಂತರ ನೇಕಾರರು, ರೈತರು, ಕಸುಬುದಾರರು, ಸಿಂಪಿಗರು ಹಾಗೂ ಗಾಣಿಗರು ಇರುವರು. ಪ್ರಮುಖ ಲಿಂಗಾಯಿತ ಸಮುದಾಯದಲ್ಲಿ ಬಹುಸಂಖ್ಯಾತರಾಗಿರುವ ಇವರು ‘ಪಂಚಮ ಸಾಲಿಯೇತರರು’ ಎಂದು ಕರೆಯಲ್ಪಡುವವರು. ಈ ಜಾತಿಯ ಲಿಂಗಾಯತರು ‘ಅಷ್ಟಾವರ್ಣ’ಗಳನ್ನು ಆಚರಿಸಿದರೂ, ಪಂಚಮರ ಜೊತೆಗೆ ಮದುವೆ ಅಥವಾ ಇತರ ಸಂಬಂಧಗಳನ್ನು ಬೆಳಸುವ ಹಾಗಿಲ್ಲ. ಲಿಂಗಾಯತರಲ್ಲಿ ನಂತರದ ಕೆಳಮಟ್ಟದಲ್ಲಿರುವವರು ಚಮ್ಮಾರರು, ಅಗಸರು, ಮೀನುಗಾರರು ಹಾಗೂ ಕೆಲವು ಅಸ್ಪೃಶ್ಯರು. ಇವರು ಪವಿತ್ರ ಲಿಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದಿರಲಿ, ಅಷ್ಟಾವರಣಗಳನ್ನು ಆಚರಿಸುವುದೂ ಸಾಧ್ಯವಿಲ್ಲ.[5]

ವಾಣಿಜ್ಯೋದ್ಯಮದಲ್ಲಿ ಸಾಕಷ್ಟು ಅಭಿವೃದ್ಧಿ ಗಳಿಸಿರುವ ಜಿಲ್ಲೆಗಳಾದ ಧಾರವಾಡ, ಬಿಜಾಪುರ ಹಾಗೂ ಬೆಳಗಾಂನಲ್ಲಿ ಲಿಂಗಾಯತರು ಹೆಚ್ಚಾಗಿದ್ದಾರೆ. ಇವರು ಧಾರವಾಡದ ಒಟ್ಟು ಜನಸಂಖ್ಯೆಯ ಶೇ. ೫೦ ಭಾಗದಷ್ಟಿದ್ದರೆ, ಇತರ ಜಿಲ್ಲೆಗಳಲ್ಲಿ ಶೇ. ೪೦ರಷ್ಟಿರುವರು ಧಾರವಾಡದಲ್ಲಿ ಲಿಂಗಾಯತ ವರ್ತಕರು ಶೇ. ೧೨ರಷ್ಟಿದ್ದರೆ, ವ್ಯವಸಾಯಗಾರರು ಹಾಗೂ ಕಸುಬುದಾರರು, ಶೇ. ೫೫ರಷ್ಟಿದ್ದಾರೆ. ಬೆಳಗಾಂ ತಾಲ್ಲೂಕಿನಲ್ಲಿ ಲಿಂಗಾಯತ ವ್ಯಾಪಾರಗಾರರು ಶೇ. ೧೨ರಷ್ಟಿದ್ದಾರೆ, ವ್ಯವಸಾಯದಲ್ಲಿ ತೊಡಗಿರುವವರು ಹಾಗೂ ಇತರ ಉತ್ಪಾದಕರು ಶೇ. ೫೯ರಷ್ಟಿರುವರು. ಬಿಜಾಪುರದಲ್ಲಿ ಈ ಸಂಖ್ಯೆ ಕ್ರಮೇಣ, ಶೇ. ೧೨ ಹಾಗೂ ಶೇ. ೪೩ರಷ್ಟಿದೆ. ಸ್ಪಷ್ಟವಾಗಿ ಹೇಳುವುದಾದರೆ ವೀರಶೈವವು ಅನೇಕ ಉತ್ಪಾದನ ಹಾಗೂ ಹಂಚಿಕೆಯ ಪ್ರಕ್ರಿಯೆಗಳನ್ನೊಳಗೊಂಡ ವಿವಿಧ ಸಾಮಾಜಿಕ ವಿಭಾಗಗಳ ಒಗ್ಗೂಡುವಿಕೆಯಿಂದ ಹುಟ್ಟಿದ ಮತ ಚಳುವಳಿ. ಈ ಒಕ್ಕೂಟವು ಊಳಿಗಮಾನ್ಯ ಮಧ್ಯವರ್ತಿಗಳ ಶೋಷಣೆಗಳಿಂದ ತಮ್ಮ ತಮ್ಮ ಆಸಕ್ತಿಗಳನ್ನು ರಕ್ಷಿಸಿಕೊಳ್ಳುವುದಕ್ಕಾಗಿ ವರ್ತಕ ಹಾಗೂ ಇತರ ಉತ್ಪಾದಕ ವರ್ಗಗಳನ್ನು ಒಟ್ಟಾಗಿಸಿದಂತೆ ಕಾಣುತ್ತದೆ. ಚರಿತ್ರೆಯಲ್ಲಿ ಕಾಣಿಸುವಂತೆ ಈ ಊಳಿಗಮಾನ್ಯ ಮಧ್ಯವರ್ತಿಗಳು ಪ್ರಾಥಮಿಕ ಉತ್ಪಾದಕರನ್ನು ಯಾವುದೇ ಉದ್ಯಮ ಅಥವಾ ವ್ಯಾಪಾರದಲ್ಲಿ ತೊಡಗಿಸಿಕೊಳ್ಳದಂತೆ ಶೋಷಣೆಗೊಳಪಡಿಸಿದ್ದರು. ಯಾವ ವ್ಯವಸಾಯ ಹಾಗೂ ಕೈಗಾರಿಕಾ ಕಾರ್ಮಿಕರನ್ನು ಹಳೆಯ ಬ್ರಾಹ್ಮಣ ವ್ಯವಸ್ಥೆಯು ತುಚ್ಛ ಶೂದ್ರರನ್ನಾಗಿ[6] ‘ಕಂಡಿತ್ತೊ, ಅಂತಹವರಿಗೆ ವೀರಶೈವ ಚಳುವಳಿಯ ಉಗಮವು ತಮ್ಮ ಕೆಳಮಟ್ಟದ ಸ್ಥಾನಮಾನದ ಬಿಡುಗಡೆಯ, ಉದ್ಧಾರದ ದಾರಿಯಾಗಿ ಕಂಡಿತು’.

ವೀರಶೈವ ಇತಿಹಾಸಕಾರರು[7] ಚಳುವಳಿಯ ಉಗಮದ ಬಗ್ಗೆ ಹೇಳಬೇಕಾದಾಗ ಅದರ ತಾತ್ವಿಕ ಜ್ಞಾನಕ್ಕೆ ಮಹತ್ವ ಕೊಡುತ್ತಾರೆ ಹಾಗೂ ಆಗಿನ ಮತಗಳ ನಡುವೆ ಇದ್ದ ಘರ್ಷಣೆಯ ಸ್ವರೂಪದ ಕಡೆಗೆ ಗಮನ ಹರಿಸುತ್ತಾರೆ. ಆದರೆ ಚಳುವಳಿಯ ಹುಟ್ಟಿಗೆ ಕಾರಣವಾದ ಭೌತಿಕ ಕಾರಣಗಳನ್ನು ನಿರ್ಲಕ್ಷಿಸುತ್ತಾರೆ. ಉದಾಹರಣೆಗೆ, ಈ ಮತದ ಹುಟ್ಟಿಗೆ ಕಾಶ್ಮೀರದಿಂದ ಹಾಗೂ ಬಂಗಾಲದಿಂದ ದಕ್ಷಿಣದ ಕಡೆಗೆ ಹೊರಟು ಬಂದ ಶೈವ ಸಂಪ್ರದಾಯವು ಕಾರಣವೆನ್ನುತ್ತಾರೆ. ವೀರಶೈವ ಮತದ ತಾತ್ವಿಕ ಜ್ಞಾನಧಾರೆಯಲ್ಲಿ ಉತ್ತರದ ಶೈವ ಸಂಪ್ರದಾಯದ ಛಾಯೆಯಿದ್ದರೂ ವ್ಯಾಪಾರ ಮತ್ತು ಉತ್ಪಾದಕ ವರ್ಗಗಳ ಹಿತಾಸಕ್ತಿಗಳ ಫಲವಾಗಿ ವೀರಶೈವ ಚಳುವಳಿಯು ಹೇಗೆ ಹುಟ್ಟಿಕೊಂಡಿತು ಎಂಬುದರ ಬಗ್ಗೆ ಗಮನಹರಿಸುವುದಿಲ್ಲ. ಇದೇ ತರಹ, ವೀರಶೈವ ಚಳುವಳಿಯು ಜೈನ ಮತದ ವಿರುದ್ಧ ಹುಟ್ಟಿದ್ದು ಎಂದು ಹೇಳುವುದರಿಂದ, ಮತ-ಮತಗಳ ನಡುವೆ ಘರ್ಷಣೆಗೆ ಕಾರಣವಾದ ಸಾಮಾಜಿಕ ಪರಿಸ್ಥಿತಿಗಳನ್ನು ಮರೆಮಾಚಿದಂತಾಗುತ್ತದೆ. ಶ್ರೀಮಂತ ವರ್ತಕರಿಂದ ಹಾಗೂ ಉತ್ಪಾದಕರಿಂದ ಬೆಂಬಲಿತವಾದ ಜೈನ ಹಾಗೂ ವೀರಶೈವ ಧರ್ಮಗಳು ಧಾರ್ಮಿಕ ಹಗೆತನದಿಂದ ಘರ್ಷಣೆಗೊಳಪಟ್ಟಿದ್ದವು ಎಂದು ಹೇಳುವುದು ಬಹಳ ಸರಳವೆನಿಸುತ್ತದೆ. ವಾಯುವ್ಯ ಕರ್ನಾಟಕದಲ್ಲಿ ಬ್ರಾಹ್ಮಣ ವರ್ತಕರಿಗೆ ಸ್ಪರ್ಧೆಯನ್ನು ಒಡ್ಡಿದವರಲ್ಲಿ ಇತರ ಬ್ರಾಹ್ಮಣರಲ್ಲದೆ, ಅರಬ್ಬರು ಹಾಗೂ ಜೈನರೂ ಸೇರಿದ್ದರು. ವೀರಶೈವರಲ್ಲಿ ಬಹಳಷ್ಟು ಪ್ರಭಾವಶಾಲಿಯಾದ ‘ವೀರಬನಂಜು’[8] ಈಗಿನ ಬಣಜಿಗ ಹಾಗೂ ಲಿಂಗ ಬಣಜಿಗ ವರ್ತಕರಲ್ಲಿ ಬಹಳಷ್ಟು ಜನ ಜೈನರಿದ್ದರು. ಬೆಳಗಾಂ ಜಿಲ್ಲೆಯ ಶಾಸನಗಳಲ್ಲಿ ಹೊಗಳಲ್ಪಟ್ಟಿರುವ ‘ಮುಮ್ಮುರಿದಂಡಾಸ್’,[9] ರಲ್ಲಿಯೂ ಸಹ ನಾವು ಜೈನ ವರ್ತಕರನ್ನು ನೋಡಬಹುದು. ಮಧ್ಯಕಾಲೀನ ಕರ್ನಾಟಕದ ಅತಿ ಪ್ರಭಾವಶಾಲಿ ವ್ಯಾಪಾರ ವರ್ಗದಲ್ಲಿದ್ದ ಐಹೊಳೆಯ ಐನೂರು ಜನ ‘ಸ್ವಾಮಿ’ಗಳಲ್ಲಿ ಜೈನ ವರ್ತಕರೂ ಕಾಣಸಿಗುತ್ತಾರೆ. ಕ್ರಿ.ಶ. ೧೦೫೦ರ ಶಿಕಾರಿಪುರ ಶಾಸನವು[10] ಇದನ್ನು ದೃಢಪಡಿಸುತ್ತದೆ. ದೂರದ ವ್ಯಾಪಾರದಲ್ಲಿ ತೊಡಗಿದ್ದ ‘ನಾನಾದೇಶಿ’ ಹಾಗೂ ‘ಉಭಯದೇಶಿ’ ವರ್ಗಗಳಲ್ಲಿಯೂ ಸಹ ಜೈನ ಮತ್ತು ಬೌದ್ಧ ಧರ್ಮದವರು ಕಾಣಸಿಗುತ್ತಾರೆ[11]. ಈ ಸ್ಥಳದಲ್ಲಿ ವ್ಯಾಪಾರದ ಪುನುರುಜ್ಜೀವನವು ವಾಣಿಜ್ಯ ಸ್ಪರ್ಧೆಯನ್ನು ಹೆಚ್ಚಿಸಿ, ಬ್ರಾಹ್ಮಣ ಹಾಗೂ ಜೈನ ವ್ಯಾಪಾರಿಗಳ ನಡುವೆ ವೈಷಮ್ಯವನ್ನು ಹುಟ್ಟಿ ಹಾಕಿರುವ ಸಾಧ್ಯತೆಗಳಿವೆ. ಇವರಿಬ್ಬರ ನಡುವಿನ ಘರ್ಷಣೆಯು ವೀರಶೈವ ಧರ್ಮದ ಹುಟ್ಟಿಗೆ ಕಾರಣವಾಗಿರಬಹುದು.

೧೦-೧೩ನೇ ಶತಮಾನಗಳಲ್ಲಿ ವಾಯುವ್ಯ ಕರ್ನಾಟಕದಲ್ಲಿ ನಡೆದ ನಿರಂತರ ವಾಣಿಜ್ಯೀಕರಣವು ಅನೇಕ ವ್ಯಾಪಾರಸ್ಥ ಮತ್ತು ಉತ್ಪಾದಕ ವರ್ಗಗಳು ಪ್ರಾಮುಖ್ಯತೆಯನ್ನು ಪಡೆಯಲು ಅನುಕೂಲವಾದ ‘ಸಾಮಾಜಿಕ ಸ್ಥಿತಿ’ಯನ್ನು ನಿರ್ಮಿಸುದುದಲ್ಲದೆ, ಈ ವರ್ಗಗಳು ಭೂಮಾಲೀಕರ ಶೋಷಣೆಯಿಂದ ನಿರ್ಮಿತವಾದ ಹಳೆಯ ವ್ಯವಸ್ಥೆಗೆ ಮುಖಾಮುಖಿಯಾಗಿ ನಿಲ್ಲುವಂತೆ ಮಾಡಿದವು. ಕ್ರಿಸ್ತಶಕದ ಮೊದಲ ಮತ್ತು ನಂತರದ ಶತಮಾನಗಳಲ್ಲಿ ಭಾರತ ಹಾಗೂ ಪಶ್ಚಿಮದ ನಡುವಿನ ಕಡಲ-ವ್ಯಾಪಾರವನ್ನು ಅರಬ್ಬರು ಹಿಡಿತದಲ್ಲಿಟ್ಟುಕೊಂಡಿದ್ದರು. ಕೆಲವೇ ಉತ್ಪಾದಕರ ಮತ್ತು ಹಂಚಿಕೆದಾರರ ಒಡೆತನದಲ್ಲಿದ್ದ ವ್ಯಾಪಾರ, ಭೋಗ ವಸ್ತುಗಳಾದ ರೇಷ್ಮೆ ಮತ್ತು ಸಂಬಾರ ಪದಾರ್ಥಗಳನ್ನು ಉತ್ಪಾದಿಸುವುದಕ್ಕೆ ಮಾತ್ರ ಸೀಮಿತವಾಗಿತ್ತು. ಈ ಕಾಲದಲ್ಲಿ ಉತ್ಪಾದಿಸಲ್ಪಟ್ಟ ವಸ್ತುಗಳು ಮುಖ್ಯವೆನಿಸಿದ್ದವು ಮತ್ತು ಸ್ಥಳೀಯ ಬಳಕೆಗೆ ಸೀಮಿತವಾಗಿದ್ದವು. ಆದರೆ ೧೦ನೇ ಶತಮಾನದ ನಂತರ ಹೆಚ್ಚಿನ ಪ್ರಮಾಣದಲ್ಲುಂಟಾದ ವಸ್ತುಗಳ ಉತ್ಪಾದನೆ, ರಫ್ತನ್ನು ಹೆಚ್ಚಿಸಿದುದಲ್ಲದೆ ಆಂತರಿಕ ಮಾರುಕಟ್ಟೆಯ ಬೆಳವಣಿಗೆಯನ್ನು ಪ್ರೋತ್ಸಾಹಿಸಿತು. ವಿವಿಧ ಹಂತಗಳಲ್ಲಿ ಎಲ್ಲಾ ತರಹದ ಉತ್ಪಾದಕರ ಮತ್ತು ಮಾಲೀಕರ ಭಾಗವಹಿಸುವಿಕೆಯಿಂದ ಉತ್ಪಾದನೆಯಲ್ಲಿ ಈ ಬದಲಾವಣೆ ಉಂಟಾಯಿತು.

ಈ ತರಹದ ಭೋಗವಸ್ತುಗಳಿಗೆ, ವಿಶೇಷವಾಗಿ ಮಸಾಲ ವಸ್ತುಗಳಿಗೆ, ಬೇಡಿಕೆಯು ಮತ್ತು ಮಾರುಕಟ್ಟೆಯು ರೋಮನ್ ಸಾಮ್ರಾಜ್ಯದ ದಿನಗಳಿಂದಲೂ ಬೆಳೆಯುತ್ತಲೇ ಇತ್ತು. ಯೂರೋಪ್, ಪಶ್ಚಿಮ ಏಷ್ಯಾ ಹಾಗೂ ಚೈನಾಗಳಲ್ಲಿನ ಮಸಾಲ ವಸ್ತುಗಳ ಬೇಡಿಕೆ ಸಮಾಜದ ಮೇಲ್ತರಗತಿಗಳಿಗೆ ಸೀಮಿತವಾಗಿರದೆ, ಎಲ್ಲಾ ಸ್ತರದ ಜನರ ಸಾಮಾನ್ಯ ಜನರ ಬೇಡಿಕೆಯಾಗಿತ್ತು. ಭಾರತದಲ್ಲಿನ ಪಶ್ಚಿಮ ಕರಾವಳಿಯ ಏಕಸ್ವಾಮ್ಯದಲ್ಲಿದ್ದ ಕರಿಮೆಣಸಿನ ಮಾರುಕಟ್ಟೆಯು, ಬಹಳ ಬೇಗ ಬೆಳೆಯುತ್ತಿತ್ತು. ಇದರ ಬೇಡಿಕೆಯಲ್ಲಿ ಚೀನಾದ ಪಾತ್ರ ಹಿರಿದು. ಕಿಂಸೆ ಎಂಬ ಪಟ್ಟಣದಲ್ಲಿಯೇ ದಿನಕ್ಕೆ ೧೦,೦೦೦ ಫೌಂ ಡ್‌ನಷ್ಟು ಮೆಣಸನ್ನು ಅಲ್ಲಿನ ವಾಸಿಗಳು ಉಪಯೋಗಿಸುತ್ತಿದ್ದರು. ಈ ಪಟ್ಟಣಕ್ಕೆ ಮೆಣಸು ಭಾರತದಿಂದ ರಫ್ತಾಗುತ್ತಿತ್ತು.[12] ಪರ್ಷಿಯನ್ ಗಲ್ಫ್ ಹಾಗೂ ಅಲೆಗ್ಸಾಂಡ್ರಿಯಾಗಳಿಗೆ ಹಡಗುಗಟ್ಟಲೆ ಕಳುಹಿಸಲ್ಪಡುತ್ತಿದ್ದ ಮೆಣಸು, ಚೀನಾಕ್ಕೆ ಕಳುಹಿಸಲ್ಪಡುತ್ತಿದ್ದ ಮೆಣಸಿನ ಹತ್ತನೇ ಒಂದಂಶದಷ್ಟೂ ಇರುತ್ತಿರಲಿಲ್ಲ.[13] ಭಾರತದಲ್ಲಿ ಬೆಳೆದ ಶುಂಠಿಗೆ ಮೊದಮೊದಲು ಹೊರಗಡೆ ಮಾರುಕಟ್ಟೆ ಇರದಿದ್ದರೂ, ಮಧ್ಯಯುಗೀನ ಯೂರೋಪಿನಲ್ಲಿ ಅದಕ್ಕೆ ಹೆಚ್ಚು ಬೆಲೆ ಬಂದಿತು.[14] ಶುಂಠಿಯ ರಫ್ತಿನ ಬಗೆಗೆ ಮಾಹಿತಿಗಳನ್ನು ಮಾರ್ಕ್‌ಪೋಲೋ, ನಿಕಾಲೋ ಕಾಂಟಿ ಮತ್ತು ವಾಸ್ಕೋಡಿಗಾಮರ ಬರಹಗಳಿಂದ ತಿಳಿಯಬಹುದು.[15]

ಮುಂಚಿನ ರಫ್ತಿನ ಪಟ್ಟಿಯಲ್ಲಿಯೇ ಇರದಿದ್ದ ಬೇಳೆ ಪದಾರ್ಥಗಳು, ಈಗ ಹೆಚ್ಚು ಹೆಚ್ಚು ರಫ್ತಾಗತೊಡಗಿದವು. ೧೨ನೇ ಶತಮಾನದ ಉತ್ತರಾರ್ಧದಲ್ಲಿ ಜೀವಿಸಿದ್ದ ಸ್ಪೇನ್ ದೇಶದ ಜೆಸ್ಯೂಟ್ ಪಾದ್ರಿಯಾದ ಟ್ಯುಡೋಲ್ನ ಬೆಂಜಮೀನನು ಗೋಧಿ, ಬಾರ್ಲಿ, ಸಾಸಿವೆ, ಬೇಳೆ, ಅಗಸೆ ಬೀಜ ಮತ್ತು ಸಾಮಾನ್ಯ ಬಟ್ಟೆಗಳನ್ನು ಪರ್ಶಿಯನ್ ವ್ಯಾಪಾರಗಾರರು ತಮ್ಮ ದೇಶಕ್ಕೆ ಹಿಂತಿರುಗುವಾಗ ಕಿಶ್ ದ್ವೀಪಕ್ಕೆ ತರುತ್ತಿದ್ದುದನ್ನು ಗಮನಿಸಿದ್ದಾನೆ. [16] ಬೆಂಜಮಿನ್ನನ ಸಮಕಾಲೀನನಾದ ಆಲ್ ಆದ್ರಿಸ್ ಎಂಬುವವನು ಮಲಬಾರ್ ಸಮುದ್ರ ತೀರದಿಂದ ಶ್ರೀಲಂಕಾಗೆ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ರಫ್ತಾಗುತ್ತಿದ್ದುದನ್ನು ವಿವರಿಸಿದ್ದಾನೆ. [17] ಹದಿನಾರನೇ ಶತಮಾನದ ಮೊದಲರ್ಧದಲ್ಲಿ ಭಾರತದಲ್ಲಿ ವಢಿಮಾ ಹಾಗೂ ಬಾರ್ಬೋಸರ ಪ್ರಕಾರ, ಮಲಬಾರ್ ಪ್ರದೇಶವು ಅಕ್ಕಿಯನ್ನು ಮಂಗಳೂರಿನಿಂದ ತರಿಸಿಕೊಳ್ಳುತ್ತಿತ್ತು. [18]

ಬಾರ್ದೋಸ್ ಹೇಳುವ ಪ್ರಕಾರ ಭಟ್ಕಳ, ದಾಬುಲ್ ಬಾಲ್ ಹಾಗೂ ಮಂಗಳೂರಿನಿಂದ ಆಡೆಸ್ ಹಾಗೂ ಓರ್ ಮೂಜ್ ಬಂದರುಗಳಿಗೆ ರಫ್ತಾಗುತ್ತಿದ್ದ ಅಕ್ಕಿಯ ಪ್ರಮಾಣ ಕಾಲಕ್ರಮೇಣ ಹೆಚ್ಚಾಯಿತು.[19] ಈ ಕಾಲದಲ್ಲಿ ಹೆಚ್ಚಿನ ಉತ್ಪಾದನೆಗೊಳಗಾಗಿ ಬಳಕೆಯಾಗಲ್ಪಡುತ್ತಿದ್ದ ಇತರ ಪದಾರ್ಥಗಳಲ್ಲಿ ಪ್ರಮುಖವಾದವು ಕಬ್ಬು, ಬೆಲ್ಲ ಮತ್ತು ತೆಂಗಿನ ಉಪ-ಉತ್ಪನ್ನಗಳಾದ ತೆಂಗಿನ ನಾರು, ಬಣ್ಣ ಹಾಕುವ ಪದಾರ್ಥಗಳು ಸೇರಿದ್ದವು. ಕಲ್ಲು ಸಕ್ಕರೆ ಹಾಗೂ ತೆಂಗಿನ ನಾರಿನ ರಫ್ತನ್ನು ೧೩೩೦ರಲ್ಲಿ ಫ್ರಿಯರ್ ಬೋರ್ಡಾನಸನ್ನು ಗಮನಿಸಿದ್ದಾನೆ.[20] ಹದಿಮೂರನೇ ಶತಮಾನದಲ್ಲಿ ದಕ್ಷಿಣ ಭಾರತದ ಕೆಲವು ಪ್ರದೇಶಗಳಿಗೆ ಪ್ರವಾಸ ಕೈಗೊಂಡಿದ್ದ ಮಾರ್ಕ್‌ಪೋಲೊನು ಕುಲಾಂ ಅಥವಾ ಕ್ವಿಲಾನ್ ಪ್ರದೇಶದಿಂದ ಹೊರ ದೇಶಗಳಿಗೆ ರಫ್ತಾಗುತ್ತಿದ್ದ ನೀಲಿ ಪದಾರ್ಥದ ಬಗ್ಗೆ ತಿಳಿಸಿದ್ದಾನೆ.[21] ಹತ್ತಿಯ ಪದಾರ್ಥ, ರತ್ನಗಂಬಳಿ, ದಿಂಬಿನ ಮೆತ್ತೆ ಹಾಗೂ ಚರ್ಮದ ಪದಾರ್ಥಗಳಿಗೆ ಹೊರ ದೇಶಗಳಲ್ಲಿ ನಿರಂತರ ಬೇಡಿಕೆ ಇದ್ದುದು ಸ್ಥಳೀಯ ಉತ್ಪಾದನೆಗೆ ಉತ್ತೇಜನ ನೀಡಿತು. ಈ ಪದಾರ್ಥಗಳ ಮುಖ್ಯ ಬಳಕೆದಾರರು ಮೆಕ್ಕಾ, ಓರ್ ಮೂಜ್ ಹಾಗೂ ಪರ್ಶಿಯಾದ ಇತರೆ ಸ್ಥಳಗಳಲ್ಲಿ ಎಣ್ಣೆಯ ಹಾಗೂ ಎಣ್ಣೆ ಬೀಜದ ರಫ್ತೀನ ಬಗ್ಗೆ ಪುರಾವೆಗಳಿಲ್ಲದಿದ್ದರೂ, ಶಾಸನಗಳಲ್ಲಿ ಎಣ್ಣೆ ಕಾರ್ಖಾನೆಗಳಿಂದ ಸಿಗುತ್ತಿದ್ದ ವರಮಾನದ ಬಗ್ಗೆ ಉಲ್ಲೇಖವಿರುವುದರಿಂದ, ಈ ಎರಡು ಪದಾರ್ಥಗಳನ್ನು ವಾಣಿಜ್ಯೋದೇಶಕ್ಕಾಗಿ ಉತ್ಪಾದಿಸುತ್ತಿದುದು ಕಂಡುಬರುತ್ತದೆ.

ಈ ಮೇಲೆ ತಿಳಿಸಿದ ಪದಾರ್ಥಗಳ ಹೆಚ್ಚಿನ ಉತ್ಪಾದನೆಗೆ ಕಾರಣವದ ಅಂಶಗಳನ್ನು ಸ್ಪಷ್ಟವಾಗಿ ತಿಳಿಯುವುದು ಸ್ವಲ್ಪ ಕಷ್ಟ. ಆದರೂ ಮುಸ್ಲಿಂದೇಶ, ಯೂರೋಪ್ ಹಾಗೂ ಚೈನಾದ ಮಾರುಕಟ್ಟೆಗಳಲ್ಲಿ ಭಾರತದ ತಯಾರಾದ ಪದಾರ್ಥಗಳಿಗೆ ಹೆಚ್ಚುತ್ತಿದ್ದ ಬೇಡಿಕೆಗಳನ್ನು ಗಮನಿಸಬಹುದು. ೮ನೇ ಶತಮಾನದ ನಂತರದ ಕಾಲದಲ್ಲಿ ಹೆಚ್ಚು ಪ್ರಮಾಣದಲ್ಲಿ ನಿರ್ಮಾಣವಾದ ಭೂಹಿಡುವಳಿಗಳು, ಭಾರತದಲ್ಲಿ ಬಳಕೆದಾರರ ಹೊಸ ವರ್ಗಗಳ ಉಗಮಕ್ಕೆ ಕಾರಣವಾಯಿತು.[22] ಸಣ್ಣ ಪುಟ್ಟ ಗೃಹಕೃತ್ಯದ ಸಂಪ್ರದಾಯದ ಆಚರಣೆಗಳಿಂದ ದೊರೆಯುತ್ತಿದ್ದ ಅಲ್ಪ ಸ್ವಲ್ಪ ಆದಾಯದ ಮೇಲೆ ಅವಲಂಬಿತವಾಗಿದ್ದ ಪುರೋಹಿತರಿಗೆ ಈಗ ಸಾಕಷ್ಟು ಪ್ರಮಾಣದಲ್ಲಿ ಭೂಮಿ, ದಾನ-ದತ್ತಿ ಮತ್ತು ಅಧಿಕಾರದ ಸವಲತ್ತುಗಳು ದೊರಕಿದವು. ಹೀಗೆ ಉಗಮಗೊಂಡ, ಹೊಸ ಭೂಮಾಲೀಕ ಕುಟುಂಬಗಳ ಉನ್ನತ ಮಟ್ಟದ ಜೀವನ ಶೈಲಿ ಅವಶ್ಯಕ ಮತ್ತು ಭೋಗ ವಸ್ತುಗಳ ಬೇಡಿಕೆಯನ್ನು ಹೆಚ್ಚಿಸಿತು. ಅಧಿಕಾರ ಸವಲತ್ತುಗಳ ವಿಘಟನೆಯು ಹೊಸ ಸಾಮಾಜಿಕ ಸಮುದಾಯಗಳನ್ನು ಈಗಾಗಲೇ ಭದ್ರಗೊಂಡಿದ್ದ ಹಿಂದಿನ ಭೂಮಾಲೀಕರ ಗುಂಪಿಗೆ ಸೇರಿಸಿತು.[23] ಇದೇ ರೀತಿ ಸಣ್ಣ ಪುಟ್ಟ ಅಧಿಕಾರಿಗಳು, ಮಧ್ಯಯುಗೀನ ಕಾಲದಲ್ಲಿ ಪರಂಪರಾನುಗತ ಆಸ್ತಿದಾರರಾಗಿ ತಮ್ಮ ಅಧಿಕಾರದಿಂದ ದೊರೆಯುತ್ತಿದ್ದ ಸವಲತ್ತುಗಳಿಂದ ಮತ್ತು ಸೌಲಭ್ಯಗಳಿಂದ ಹಳ್ಳಿಗಳಲ್ಲಿ ಪ್ರಮುಖರೆನಿಸಿ,

ತಮ್ಮ ಕೊಳ್ಳುಸಾಮರ್ಥ್ಯವನ್ನು ಹೆಚ್ಚಿಸಿಕೊಂಡರು.[24] ಕೊನೆಯದಾಗಿ ದೇವಸ್ಥಾನಗಳು ಇವುಗಳ ಹಿಡಿತದಲ್ಲಿ ಸಾಕಷ್ಟು ಪ್ರಮಾಣದ ಭೂಮಿ ಮತ್ತು ಸ್ಥಳೀಯ ತೆರಿಗೆಗಳಿಂದ ಬರುತ್ತಿದ್ದ ವರಮಾನಗಳಿದ್ದವು. ಈ ದೇವಸ್ಥಾನಗಳಿಗೆ ವಸ್ತುಗಳ ಉಚಿತ ಪೂರೈಕೆ ಇದ್ದರೂ ಸಹ, ಅವು ಎಲ್ಲಾ ಭೋಗ ವಸ್ತುಗಳ ಪ್ರಮುಖ ಬಳಕೆದಾರರಾಗಿದ್ದವು.[25] ಇತ್ತೀಚಿನ ಅಧ್ಯಯನವು ಮಧ್ಯಯುಗೀನ ದೇವಸ್ಥಾನಗಳು ಹೊಂದಿದ್ದ ಸಂಪತ್ತು ನೀಡುತ್ತಿದ್ದ ಸೇವೆ ಹಾಗೂ ಬದಲಾಗಿ ಸ್ವೀಕರಿಸುತ್ತಿದ್ದ ವಸ್ತುಗಳ ಮಾಹಿತಿ ನೀಡುತ್ತದೆ.[26]

ಸಂಪ್ರದಾಯಗಳಲ್ಲಾದ ಬದಲಾವಣೆಗಳಿಂದ ಹಾಗೂ ಬದಲಾದ ಅಭಿರುಚಿಗಳಿಂದ ತೆಂಗಿನಕಾಯಿ, ಎಲೆ-ಅಡಿಕೆ ಮತ್ತು ಇನ್ನಿತರ ವಸ್ತುಗಳ ಬಳಕೆಯಲ್ಲಿ ಹೆಚ್ಚಳವುಂಟಾಯಿತು. ತೆಂಗಿನಕಾಯಿ ಮತ್ತು ಎಲೆ ಅಡಿಕೆ ಹೊರದೇಶದ ಬೆಳೆಗಳಾಗಿದ್ದು, ಮೊದಲಿನ ಶಾಸನಗಳಲ್ಲಿ ಇವುಗಳ ಉಲ್ಲೇಖವಿಲ್ಲ. ಆದರೆ ೧೦ನೇ ಶತಮಾನದ ತರುವಾಯ ಇವು ಎಲ್ಲಾ ಪವಿತ್ರ ಆಚರಣೆಗಳಲ್ಲಿ ಅತ್ಯವಶ್ಯಕವಾಗಿ ಬೇಕಾಗುವ ಬಳಕೆಯ ವಸ್ತುಗಳಾದವು.

ವಾಯುವ್ಯ ಕರ್ನಾಟಕದಲ್ಲಿ ಹೆಚ್ಚಿನ ವಾಣಿಜ್ಯೀಕರಣವು ಹಣಕಾಸಿನ ಆರ್ಥಿಕತೆಯ ಬೆಳವಣಿಗೆಯನ್ನು ಮತ್ತು ಹೊಸ ನಗರಪಟ್ಟಣಗಳ ಬೆಳವಣಿಗೆಯನ್ನು ಸೂಚಿಸುತ್ತದೆ.[27] ಈ ಹೊಸ ನಗರಗಳ ಹುಟ್ಟು ಹಳ್ಳಿಯಲ್ಲಿ ನಡೆಯುವ ಸಂತೆಯ ಮೂಲದಲ್ಲಿ ಕಾಣಬಹುದು ಬಹುತೇಕ ಸ್ಥಳಗಳಲ್ಲಿ ಈ ಸಂತೆಗಳನ್ನು ನಡೆಸುತ್ತಿದ್ದವರು ಉತ್ಪಾದಕ ಮತ್ತು ಹಂಚಿಕೆದಾರರ ವರ್ಗಗಳೇ. ವ್ಯಾಪಾರದ ಸ್ಥಳಗಳಿಗೆ ಹತ್ತಿರದಲ್ಲಿ ಬೆಳೆದ ಅಥವಾ ಹುಟ್ಟಿಕೊಂಡ ನಗರ ಪಟ್ಟಣಗಳು, ಕರ್ನಾಟಕದ ಈ ಭಾಗದಲ್ಲಿ ೧೦-೧೩ನೇ ಶತಮಾನಗಳಲ್ಲಿ ಆಗುತ್ತಿದ್ದ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳನ್ನು ಚಿತ್ರಿಸುತ್ತವೆ. ಹೀಗೆ ರಾಜ್ಯದಲ್ಲಿ ಹುಟ್ಟಿಕೊಂಡ ಮೂವತ್ತಾರು ಪಟ್ಟಣಗಳಲ್ಲಿ ಮೂವತ್ತೆರಡು ಪಟ್ಟಣಗಳು ಧಾರವಾಡ, ಶಿವಮೊಗ್ಗ, ಬೆಳಗಾಂ ಮತ್ತು ಬಿಜಾಪುರ ಜಿಲ್ಲೆಗಳಿಗೆ ಸೇರಿದ್ದವು. ಇವುಗಳಲ್ಲಿ ಹದಿನಾರು ಪಟ್ಟಣಗಳು ಧಾರವಾಡ ಜಿಲ್ಲೆಯಲ್ಲಿಯೇ ಕಾಣಸಿಗುತ್ತವೆ.[28]

ಹೊಸ ಪಟ್ಟಣಗಳ ಉಗಮ ಮತ್ತು ಆರ್ಥಿಕತೆಯ ಪುನರುಜ್ಜೀವನಗಳು ವೀರಶೈವ ಮತದ ಮೂಲ ಬೆಂಬಲಿಗರಾದ ಶ್ರೀಮಂತರ ವರ್ಗಗಳನ್ನು ಸೃಷ್ಟಿಸಿದವು. ಈಗಿನ ವೀರಶೈವ ಧರ್ಮದಲ್ಲಿರುವಂತೆ ಆಗಲೂ ಸಹ ಪುರೋಹಿತ, ವ್ಯಾಪಾರ ಹಾಗೂ ಇತರ ಉನ್ನತ ವರ್ಗಗಳು ಆ ಧರ್ಮದ ಪ್ರಮುಖ ಬೆಂಬಲಿಗರಾಗಿದ್ದರು. ಧರ್ಮದ ನೇತೃತ್ವವನ್ನು ವಹಿಸಿಕೊಂಡವರು ಉಚ್ಚ ವರ್ಗದ ಬ್ರಾಹ್ಮಣರಾಗಿದ್ದರು ಇಲ್ಲವೆ ವ್ಯಾಪಾರಸ್ಥ ಕುಟುಂಬದಿಂದ ಅಥವಾ ಪರಂಪರಾನುಗತವಾಗಿದ್ದ ಅಧಿಕಾರ ವರ್ಗಗಳ ಮೂಲದಿಂದ ಬಂದವರಾಗಿದ್ದರು. ಕೆಲವು ನಾಯಕರು ನಗರದಲ್ಲಿದ್ದುಕೊಂಡು ಧರ್ಮಕಾರ್ಯ ಕೈಗೊಂಡರೆ, ಇನ್ನು ಕೆಲವರು ಸರ್ಕಾರದ ಪ್ರಮುಖ ಸ್ಥಾನಮಾನಗಳನ್ನು ಅಲಂಕರಿಸಿದ್ದರು. ಈ ಧರ್ಮವನ್ನು ಸಂಘಟಿಸಿದ ಬಸವನೇ ಬ್ರಾಹ್ಮಣ ಜಾತಿಗೆ ಸೇರಿದವನಾಗಿದ್ದು ಪ್ರಾಂತಾಧಿಕಾರಿ ಕುಟುಂಬದ ಮೂಲದವನು. ಬಸವನು ಮುಖ್ಯಮಂತ್ರಿಯಾಗಿ ಬಿಜ್ಜಳನ ಆಸ್ಥಾನದಲ್ಲಿದ್ದ ಕಾಲವೂ ಈ ಧರ್ಮದ ಇತಿಹಾಸದಲ್ಲಿ ಪ್ರಮುಖವಾದುದು. ಪ್ರಮುಖ ವಚನಕಾರರಲ್ಲಿ ಒಬ್ಬಳಾದ ಅಕ್ಕಮಹಾದೇವಿ ಕೋಟ್ಯಾಧೀಶನ ಮಗಳು. ‘ಬಸವ ಪುರಾಣ’ದಲ್ಲಿರುವಂತೆ ಈ ಧರ್ಮದ ಮೊದಲನೇ ಪ್ರವಚನಕಾರರಲ್ಲಿ ಒಬ್ಬನಾದ ಏಕಾಂತ ರಾಮಯ್ಯನು ಆಳಂದೆ ಎಂಬ ಸ್ಥಳದ ಬ್ರಾಹ್ಮಣ ಕುಟುಂಬಕ್ಕೆ ಸೇರಿದವನು. ‘ಸಿದ್ಧರಾಮಪುರಾಣ’ದಲ್ಲಿ ವರ್ಣಿಸಲ್ಪಟ್ಟ ಸಿದ್ಧರಾಮನು ಸೋಲಾಪುರ್ ಪಟ್ಟಣಕ್ಕೆ ಸರಿದವನು. ಹಂಪಿಯ ನಿವಾಸಿಗಳಾದ ಹರಿಶ್ಚಂದ್ರ ಮತ್ತು ಆತನ ಸೋದರಳಿಯ ರಾಘವಾಂಕ ಲೆಕ್ಕಿಗರ ವಂಶದಿಂದ ಬಂದವರು. ‘ದೀಕ್ಷಾಬೋಧೆ’ಯನ್ನು ಬರೆದ ಕೆರೆಯ ಪದ್ಮರಸ ಒಂದನೇ ಹೊಯ್ಸಳ ನರಸಿಂಹ (೧೧೭೩-?೬)ನ ಆಸ್ಥಾನದಲ್ಲಿದ್ದವರು. ಸುಪ್ರಸಿದ್ಧ ‘ಬಸವ ಪುರಾಣ’ (೧೩೬೫) ವನ್ನು ಬರೆದ ಭೀಮಕವಿ, ೧೬ನೇ ಶತಮಾನದ ಸ್ಮಾರ್ತ ಪಂಡಿತನೂ ಹೌದು. ‘ಪ್ರಭುಲಿಂಗ ಲೀಲೆ’ಯನ್ನು ಬರೆದ ಚಾಮರಸನು ಆರಾಧ್ಯ ಬ್ರಾಹ್ಮಣನಾಗಿದ್ದನು. ಚಾಮರಸನು ಇಮ್ಮಡಿ ಪ್ರೌಢರಾಯನ (೧೪೨೨-?೬) ಆಸ್ಥಾನದಲ್ಲಿ ಇದ್ದಂತವನು. ವೈಷ್ಣವ ಧರ್ಮದ ವಿರೋಧದ ನಡುವೆಯು ವೀರಶೈವ ಧರ್ಮವನ್ನು ಜೀವಂತವಾಗಿರಿಸಿದ ಲಕ್ಕಣ್ಣ ಹಾಗೂ ಜಕಣಾಚಾರ್ಯರೂ ಸಹ ಉನ್ನತ ಅಧಿಕಾರದ ಮಂತ್ರಿಗಳಾಗಿ ಪ್ರೌಢದೇವರಾಯನ ಆಸ್ಥಾನದಲ್ಲಿದ್ದವರು. ಈ ಚಳುವಳಿಯು ನಗರಕೇಂದ್ರಿತ ಎನ್ನುವುದಕ್ಕೆ ಚೆನ್ನಬಸವ ಪುರಾಣದಲ್ಲಿ ಪುರಾವೆಗಳಿವೆ. ‘ಚೆನ್ನಬಸವ ಪುರಾಣ’ದ ನಾಯಕನಾದ ಚೆನ್ನಬಸವನು ಕಲ್ಯಾಣ ನಗರದಲ್ಲಿ ೯೬ ಸಾವಿರ ಜಂಗಮರಿಗೆ ಮನೆಗಳನ್ನು ಕಟ್ಟಿಸಿಕೊಡಲು ಬಸವನಿಗೆ ಸೂಚಿಸುತ್ತಾನೆ. ಚೆನ್ನಬಸವನು ಅತಿ ಸುಂದರವಾದ ಅರಮನೆಯಲ್ಲಿ ವಾಸವಾಗಿದ್ದನೆಂದು ತಿಳಿಯುತ್ತದೆ. ಕಲ್ಯಾಣ ನಗರದಲ್ಲಿದ್ದ ಈ ಅರಮನೆಯಲ್ಲಿ ನೃತ್ಯಾಂಗಣ, ಉದ್ಯಾನವನ ಹಾಗೂ ಸಂಗೀತ ಕೇಳುವುದಕ್ಕೆ ಬೇರೆ, ಬೇರೆ ಕೋಣೆಗಳಿದ್ದವು ಎಂಬುದೂ ತಿಳಿದುಬರುತ್ತದೆ.

ವೀರಶೈವ ಧರ್ಮವನ್ನು ರೂಪಿಸುವಲ್ಲಿ ವ್ಯಾಪಾರ ವರ್ಗದ ಪಾತ್ರ ಹಿರಿದು. ವೀರಶೈವ ಜಾತಿಯ ಶ್ರೇಣೀಕೃತ ಸಮಾಜದಲ್ಲಿ ವ್ಯಾಪಾರ ವರ್ಗದವರು ಜಂಗಮರ ನಂತರದ ಸ್ಥಾನವನ್ನು ಹೊಂದಿರುವವರು. ವೀರಶೈವ ಚಳುವಳಿ ಪ್ರಾರಂಭವಾದುದೇ ವ್ಯಾಪಾರೀ ಸ್ಥಳಗಳಿಂದ. ಈಗಲೂ ಸಹ ಧಾರವಾಡ, ಬೆಳಗಾಂ ಮತ್ತು ಬಿಜಾಪುರ ತಾಲ್ಲೂಕುಗಳಲ್ಲಿ ಕಾಣಸಿಗುವ ವ್ಯಾಪಾರಿ ವರ್ಗಗಳು ಇಲ್ಲಿರುವ ವೀರಶೈವರ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ ೧೨ರಿಂದ ೨೧ರಷ್ಟು ಇದ್ದಾರೆ. ಕುತೂಹಲದ ವಿಷಯವೇನೆಂದರೆ, ಎಲ್ಲಾ ಪ್ರಮುಖ ವ್ಯಾಪಾರಿ ಕೇಂದ್ರಗಳ ಜೊತೆಗೆ ವೀರಶೈವ ಮುಖಂಡರಿಗಿರುವ ಸಂಪರ್ಕ; ವೀರಶೈವ ಧರ್ಮವನ್ನು ಸಂಘಟಿಸಿದ ಬಸವನು ಮತ್ತು ಧರ್ಮದ ಪ್ರಚಾರಗೈದ ಸಿದ್ಧರಾಮನು ಅನುಕ್ರಮವಾಗಿ ಪ್ರಮುಖ ಮಾರುಕಟ್ಟೆ ಕೇಂದ್ರಗಳಾಗಿ ರೂಪುಗೊಳ್ಳುತ್ತಿದ್ದ ಕಲ್ಯಾಣ ಹಾಗೂ ಸೊಲ್ಲಾಪುರದ ಪಟ್ಟಣಗಳ ಮೂಲದವರು. ಕಲ್ಯಾಣ ನಗರವು ಅನೇಕ ಬಜಾರು ಮತ್ತು ರಸ್ತೆಗಳಿದ್ದ ವ್ಯಾಪಾರಿ ಕೇಂದ್ರವಾಗಿತ್ತು.[29] ರಾಘವಾಂಕನ ‘ಸೋಮನಾಥ ಚರಿತ್ರೆ’ಯಲ್ಲಿ ವರ್ಣಿಸಲ್ಪಟ್ಟಿರುವ ಸೋಮನಾಥನು ಹೊನ್ನಾವರ ಬಂದರಿಗೆ ಸಂಪರ್ಕವಿದ್ದ ಪುಲಿಗೆರೆ ಎಂಬ ಸ್ಥಳಕ್ಕೆ ಸೇರಿದವನು. ಪುಲಿಗೆರೆಯ ವ್ಯಾಪಾರ ಕೇಂದ್ರಕ್ಕೆ ಸಿಕ್ಕಂತಹ ವಿನಾಯಿತಿ ಹಾಗೂ ರಕ್ಷಣೆಯೂ ಈ ಸ್ಥಳವು ವ್ಯಾಪಾರ ವಹಿವಾಟಿಗೆ ಎಷ್ಟೊಂದು ಪ್ರಾಮುಖ್ಯತೆಯನ್ನು ಪಡೆದಿತ್ತೆಂದು ತಿಳಿಯುತ್ತದೆ.[30] ಏಕಾಂತ ರಾಮನ ಆಳಂದೆಯು ೧೨-೧೩ನೇ ಶತಮಾನದಲ್ಲಿ ಪ್ರಮುಖ ವ್ಯಾಪಾರಿ ಕೇಂದ್ರಗಳಲ್ಲಿ ಒಂದಾಗಿತ್ತು. ಈ ಪಟ್ಟಣದಲ್ಲಿ ಅನೇಕ ವರ್ತಕರ ವ್ಯಾಪಾರ ವ್ಯವಹಾರಗಳು ಚುರುಕಾಗಿದ್ದವು.[31] ಆಳಂದದ ಸುತ್ತ ಮುತ್ತ ಇದ್ದ ಸ್ಥಳಗಳು ಶ್ರೇಷ್ಠ ಮಟ್ಟದ ಅಕ್ಕಿಯನ್ನು ಬೆಳೆಯುವಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದವು. ವಿಶೇಷವೇನೆಂದರೆ, ಲಿಂಗಾಯತ ಸಾಧು-ಸಂತರ ಧರ್ಮ ಪ್ರಚಾರ ಕಾರ್ಯಗಳು ಈ ವ್ಯಾಪಾರಿ ಸ್ಥಳಗಳಲ್ಲಿ ಹೆಚ್ಚಾಗಿ ಕಂಡುಬರುವಂತಹವು. ಬಸವನ ಮೂಲ ಸ್ಥಳವಾದ ಬಾಗೇವಾಡಿ ಮತ್ತು ಅದರ ಪಕ್ಕಕ್ಕಿದ್ದ ಮನಗೋಳಿ ಅಗ್ರಹಾರಗಳು ಬಿಜಾಪುರ ತಾಲ್ಲೂಕಿನ ೧೧೧೧ಪ್ರಮುಖ ವ್ಯಾಪಾರಿ ಕೇಂದ್ರಗಳಾಗಿ ಬೆಳೆಯುತ್ತಿದ್ದವು. ಜೊತೆಗೆ ಕೊಂಕಣ ಕರಾವಳಿ ವ್ಯಾಪಾರ ಕೇಂದ್ರಗಳೊಂದಿಗೆ ಇವುಗಳು ಸಂಪರ್ಕವನ್ನಿಟ್ಟು ಕೊಂಡಿದ್ದವು.

‘ಬಸವ ಪುರಾಣ’ವು ಸಹ ಈ ಧರ್ಮದ ಅನುಯಾಯಿಗಳಾಗಿದ್ದ ದೊಡ್ಡ ದೊಡ್ಡ ವ್ಯಾಪಾರಿಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ಈ ಕೃತಿಯ ಲೇಖಕನು ಈ ಧರ್ಮಕ್ಕಿದ್ದ ಜನಪ್ರಿಯತೆಯನ್ನು ಮನಮುಟ್ಟಿಸುವುದಕ್ಕೆ ಕಲ್ಯಾಣದ ಕೋಟ್ಯಾಧೀಶ ಮತ್ತು ಸಂಚಾರಿ ವ್ಯಾಪಾರಿಯ ಪಾತ್ರಗಳನ್ನು ಸೃಷ್ಟಿಸಿದ್ದಾನೆ. ‘ಚೆನ್ನಬಸವ ಪುರಾಣ’ವೂ ಸಹ ಈ ಧರ್ಮಕ್ಕೆ ದೊಡ್ಡ ದೊಡ್ಡ ವ್ಯಾಪಾರಿಗಳ ಮತ್ತು ವ್ಯಾಪಾರ ಸಂಸ್ಥೆಗಳ ಬೆಂಬಲವಿತ್ತು ಎಂಬುದನ್ನು ವಿವರವಾಗಿ ತಿಳಿಸುತ್ತದೆ.[32] ಅಕ್ಕಮಹಾದೇವಿಯೂ ವೀರಶೈವ ಧರ್ಮದ ಅನುಯಾಯಿಯಲ್ಲದ ಗಂಡನನ್ನು ಮದುವೆಯಾಗಲು ನಿರಾಕರಿಸಿದ್ದಳು. ವೀರಶೈವ ಧರ್ಮದ ಬಗೆಗಿನ ಮೊದಲ ಶಾಸನಗಳೂ ಸಹ ಈ ಧರ್ಮಕ್ಕೂ ಮತ್ತು ವ್ಯಾಪಾರ-ವಾಣಿಜ್ಯಕ್ಕೂ ಇರುವ ಅವಿನಾ ಸಂಬಂಧವನ್ನು ತಿಳಿಸುತ್ತವೆ. ಕವಿಲಾಸಪುರ ಹಳ್ಳಿಯು ಜಂಗಮರಿಗಾಗಿ ಅನ್ನದಾಸೋಹದ ಸ್ಥಳವಾಗಿ ಪರಿವರ್ತಿಸಲ್ಪಟ್ಟಿದುದರ ವಿವರಣೆಯನ್ನು ಅರ್ಜುನವಾಡ ಶಾಸನವು ನೀಡುತ್ತದೆ. ಅನ್ನದಾಸೋಹದ ಸೌಕರ್ಯವನ್ನು ಒದಗಿಸುತ್ತಿದ್ದುದು ಸಹ ಒಬ್ಬ ವ್ಯಾಪಾರಿಯೇ.

ನಗರ ಪಟ್ಟಣಗಳಲ್ಲಿದ್ದ ಶ್ರೀಮಂತರೂ ವೀರಶೈವ ಧರ್ಮದ ಬೆಳವಣಿಗೆಗೆ ಪ್ರಮುಖ ಕಾರಣಕರ್ತರು. ದೇವಸ್ಥಾನದ ಪುರೋಹಿತರ ತರಹ ಯಾವುದೇ ‘ಚಿರ’ ಆಸ್ತಿಯನ್ನು ಹೊಂದದ ಸಂಚಾರಿ ಜಂಗಮ ನಗರದ ಶ್ರೀಮಂತರ, ದೊಡ್ಡ-ಚಿಕ್ಕ ವ್ಯಾಪಾರಿಗಳ ಹಾಗೂ ಮಾಲೀಕರ ಮೇಲೆ ಅವಲಂಬಿತವಾಗಿದ್ದರು. ಬ್ರಾಹ್ಮಣ ಪುರೋಹಿತರಿಗೆ ಸಿಗುತ್ತಿದ್ದ ಬಳುವಳಿಗಳು ಇವರಿಗೆ ಸಿಗದೇ ಇರುತ್ತಿದುದರಿಂದ ಇವರ ಆಶ್ರಯವನ್ನು ಅವಲಂಬಿಸಿದ್ದರು.[33]

ಈ ಚಳುವಳಿಯಲ್ಲಿ ಸ್ಮಾರ್ತ ಬ್ರಾಹ್ಮಣರು ಅಧಿಕ ಸಂಖ್ಯೆಯಲ್ಲಿ ಇದ್ದುದು ಮತ್ತು ಮಠಾಧಿಪತಿಗಳಾಗಿ ಅವರ ಪ್ರಭಾವ, ವೀರಶೈವ ಧರ್ಮದ ಹುಟ್ಟಿನ ಕಾಲದಲ್ಲಿದ್ದ ಸಾಮಾಜಿಕ ಪರಿಸರವನ್ನು ತಕ್ಕಮಟ್ಟಿಗೆ ವಿವರಿಸುತ್ತವೆ.[34] ವೇದ, ಉಪನಿಷತ್ತುಗಳ ಮೇಲೆ ಹಿಡಿತವಿದ್ದ ಸ್ಮಾರ್ತ ಬ್ರಾಹ್ಮಣರಿಗೆ, ಇತರ ಸಣ್ಣ ಪುಟ್ಟ ಪುರೋಹಿತರಿಗಿಂತ ತಾವೇ ಶ್ರೇಷ್ಠರು ಎಂಬ ಭಾವನೆಯಿತ್ತು. ಈ ಸಣ್ಣ ಪುಟ್ಟ ಪುರೋಹಿತರು ದೇವಸ್ಥಾನದ ಸಂಪ್ರದಾಯಬದ್ಧ ಪೂಜಾ ವಿಧಾನಗಳ ಜೊತೆಗೆ, ಇತರ ದೇವ ದೇವತೆಗಳ ಪೂಜಾ ಕಾರ್ಯಗಳನ್ನು ನಡೆಸುತ್ತಿದ್ದುದು ಸ್ಮರ್ಥ ಬ್ರಾಹ್ಮಣರ ಖಂಡನೆಗೆ ಗುರಿಯಾಗುತ್ತಿತ್ತು. ಪಲ್ಲವರ ಕಾಲದಲ್ಲಿ ತಮಿಳು ನಾಡಿನ ವೈಷ್ಣವ ಅನುಯಾಯಿಗಳಾದ ಆಳ್ವಾರರು ಮತ್ತು ಶೈವ ಅನುಯಾಯಿಗಳಾದ ನಾಯನಾರರು ಭಿನ್ನಮತ ಪ್ರಚಾರವನ್ನು ಆರಂಭಿಸಿದಾಗ, ಭೂಮಾಲೀಕರ ಆಶ್ರಯದಲ್ಲಿದ್ದ ಸ್ಮಾರ್ತ ಬ್ರಾಹ್ಮಣರು ಹೊಸ ಧರ್ಮಗಳ ಜನಪ್ರಿಯತೆಯನ್ನು ತಡೆಯಲು ಪ್ರಯತ್ನಿಸಿದರು.[35] ಇದೇ ಸಮಯದಲ್ಲಿ ಅರ್ಧ ಸ್ಮಾರ್ತ ಮತ್ತು ಅರ್ಧ ಹೊಸ ಭಿನ್ನಮತಗಳ ಸಂಪ್ರದಾಯಗಳನ್ನು ಅಳವಡಿಸಿಕೊಂಡಿದುದರ ಫಲವಾಗಿ ‘ಪಂಚಯಾತನ’ ಮತವು ಹುಟ್ಟಿಕೊಂಡಿತು.[36]

ಸ್ಮಾರ್ತ ಬ್ರಾಹ್ಮಣರಿಗೆ ದೊರೆಯುತ್ತಿದ್ದ ಭೂಕಾಣಿಕೆ ಮತ್ತು ಇತರ ದಾನ ದತ್ತಿಗಳನ್ನು ಖಂಡಿಸುವುದು ಈ ಕಾಲದಲ್ಲಿ ರಚನೆಗೊಂಡ ನಾಯನಾರರ ಹಾಡುಗಳಲ್ಲಿ ಪ್ರಮುಖ ಅಂಶವಾಗಿತ್ತು. ಇವರು ಶೈವ ಅನುಯಾಯಿಗಳಿಗೆ ದೊರೆಯುತ್ತಿದ್ದ ರಾಜಾಶ್ರಯವು ಸ್ಮಾರ್ತ ಬ್ರಾಹ್ಮಣರಿಗಿಂತ ಶ್ರೇಷ್ಠವಾದುದೆಂದು ಭಾವಿಸಿದ್ದರು ಮತ್ತು ಆ ಶ್ರೇಷ್ಠತೆಯನ್ನೇ ಪ್ರಚಾರ ಮಾಡುತ್ತಿದ್ದರು. ಇದಕ್ಕೆ ವಿರುದ್ಧವಾಗಿ ಸ್ಮಾರ್ತ ಅನುಯಾಯಿಗಳು ಶೈವಮತವನ್ನು ಮತ್ತು ಅದರ ಅನುಯಾಯಿಗಳನ್ನು ಜರೆಯುವಲ್ಲಿ ಹಿಂದೆ ಬಿದ್ದಿರಲಿಲ್ಲ.[37] ಸಂಪ್ರದಾಯಸ್ಥ ಬ್ರಾಹ್ಮಣದ ಪ್ರತಿನಿಧಿಗಳಾಗಿದ್ದ ಮನು ಮತ್ತು ವಿಷ್ಣು ಇವರು ಸಂಪ್ರದಾಯ ಪುರೋಹಿತರನ್ನು ಖಂಡಿಸುತ್ತಿದ್ದುದು ತಿಳಿದುಬರುತ್ತದೆ.[38] ಬೇರೆ ಮತ ಪ್ರಚಾರಕರು ವೇದ ಉಪನಿಷತ್ತುಗಳನ್ನು ಅಧ್ಯಯನ ಮಾಡುವುದನ್ನು ಸಂಪ್ರದಾಯಸ್ಥ, ಬ್ರಾಹ್ಮಣ ಪುರೋಹಿತರು ಖಂಡಿಸುತ್ತಿದ್ದರು. ಭಿನ್ನಮತೀಯರು ಅಪವಿತ್ರರೆಂದು ಜರಿಯಲ್ಪಟ್ಟಿದ್ದರು. ಸಂಪ್ರದಾಯಸ್ಥ ಬೌದ್ಧಿಕ ಪುರೋಹಿತರ ಮತ್ತು ಭಿನ್ನಮತೀಯ ಪುರೋಹಿತರ ನಡುವೆ ಬೆಳೆಯುತ್ತಿದ್ದ ಘರ್ಷಣೆಯನ್ನು ಉಸಾನ, ವೃದ್ಧಹರಿತ ಮತ್ತು ಅಪಾರಕರು ತಿಳಿಸಿದ್ದಾರೆ.[39]

ತಮಿಳುನಾಡಿನಂತೆ ಕರ್ನಾಟಕದಲ್ಲೂ ಸಹ ಸ್ಮಾರ್ತರೂ ಭಿನ್ನಮತೀಯ ಚಳುವಳಿಗಳಿಂದ ದೂರವಿದ್ದರು. ವೀರಶೈವ ಧರ್ಮದ ಮೊದಲನೆ ಮುಖಂಡರು ಉನ್ನತ ಬ್ರಾಹ್ಮಣರಾಗಿದ್ದರೂ, ಏಕಾಂತ ರಾಮಯ್ಯನು ಅಬಲೂರಿನ ಶೈವರೊಂದಿಗೆ ಸಂಪರ್ಕವಿಟ್ಟುಕೊಂಡಿದ್ದನ್ನು ಬಿಟ್ಟರೆ, ಉಳಿದ ಇನ್ನಾರೂ ಭಿನ್ನಮತೀಯರ ಜೊತೆ ಸಂಬಂಧವನ್ನಿಟ್ಟುಕೊಂಡಿರಲಿಲ್ಲ. [40] ಕೆಲವು ಸ್ಮಾರ್ತರು ಸಂಪ್ರದಾಯವನ್ನು ಮುರಿದರೂ, ಪುರೋಹಿತ ಉದ್ಯೋಗವನ್ನು ಒಪ್ಪಿಕೊಂಡಿದ್ದರು. ಆದರೆ ಬಹಳಷ್ಟು ಸ್ಮಾರ್ತರು ಸ್ಥಾವರ ಮೂರ್ತಿಪೂಜಕ ಸಂಪ್ರದಾಯವನ್ನು ವಿರೋಧಿಸಿದ ಮತ್ತು ಸಂಕೇತಗಳ ಆರಾಧನೆಯನ್ನು ಪ್ರತಿಪಾದಿಸಿದ ಹೊಸ ಧರ್ಮದ ಸ್ಥಾಪನೆಯನ್ನು ಇಷ್ಟಪಟ್ಟರು.[41] ಬಸವನಿಗೆ ಷಟ್‌ಸ್ಥಲಗಳನ್ನು ಬೋಧಿಸಿದ ಅಲ್ಲಮಪ್ರಭುವು ಬಹಿರಂಗ ಆಚಾರಗಳನ್ನು ನಿಂದಿಸಿ, ಮುಕ್ತಿಗಾಗಿ ಧ್ಯಾನದ ಮಹತ್ವವನ್ನು ಎತ್ತಿಹಿಡಿದನು.[42] ೧೪ನೇ ಶತಮಾನದ ‘ಸಿದ್ಧಾಂತ ಶಿಖಾಮಣಿ’ಯೂ ಸಹ ‘ಅಂತರ ಭಕ್ತಿಯ’ ಮಹತ್ವವನ್ನು ತಿಳಿಸುತ್ತದೆ.[43] ಯಾವನೇ ವೀರಶೈವನು ಸ್ಥಾವರ ದೇವರನ್ನು ಪೂಜಿಸುವುದನ್ನು ನಿಷೇಧಿಸಿದುದು ‘ಸಿದ್ಧಾಂತ ಶಿಖಾಮಣಿ’ಯ ವಿಶೇಷ.[44] ಸಂಪ್ರದಾಯಸ್ಥ ಬ್ರಾಹ್ಮಣ ಧರ್ಮಕ್ಕೆ ವೀರಶೈವ ಧರ್ಮದಿಂದ ವ್ಯಕ್ತವಾಗುತ್ತಿದ್ದ ವಿರೋಧಗಳನ್ನು ಲಿಂಗಾಯತ ಸಾಧು-ಸಂತರ ಪುರಾಣಗಳಿಂದ ತಿಳಿಯಬಹುದು. ಈ ಪುರಾಣಗಳು ವೇದ ಬ್ರಾಹ್ಮಣರನ್ನು ಖಂಡಿಸುವಲ್ಲಿ ನಿರತವಾಗಿದೆ.[45]

ವೀರಶೈವ ಚಳುವಳಿಯನ್ನು ಸೇರಿದ ಸ್ಮಾರ್ತ ಬ್ರಾಹ್ಮಣರು ತಮ್ಮ ಶ್ರೇಷ್ಠತೆಯನ್ನು ಪ್ರತಿಪಾದಿಸುವುದಲ್ಲದೆ, ಧರ್ಮದ ಇತರ ಬ್ರಾಹ್ಮಣೇತರ ಸದಸ್ಯರ ಜೊತೆಗೆ ತಮ್ಮ ಉನ್ನತ ಸ್ಥಾನಮಾನಗಳನ್ನು ಹಂಚಿಕೊಳ್ಳಲು ಹಿಂಜರಿದರು. ವಚನಕಾರರು ಭ್ರಾತೃತ್ವ-ಸಮಾನತೆಯನ್ನು ಪ್ರತಿಪಾದಿಸಿದರೂ, ಬಹುತೇಕ ವೀರಶೈವ ಕೃತಿಗಳು ಬ್ರಾಹ್ಮಣ ಪ್ರತಿಪಾದಿತ ಜಾತಿ-ಶ್ರೇಣಿಗೆ ವಿಧೇಯತೆಯನ್ನು ಉಪದೇಶಿಸುತ್ತವೆ.[46] ಕರ್ನಾಟಕದಲ್ಲಿ ಈ ರೀತಿಯಾಗಿ ವರ್ಣಾಶ್ರಮ ಪ್ರಕಾರ ಪುನಾರಚನೆಗೊಂಡ ಶೈವ ಸಮುದಾಯವು ದೈವೀ ಪ್ರೇರಿತವಾದುದೆಂದು ಭೀಮಕವಿ ಒತ್ತಿ ಹೇಳುತ್ತಾನೆ.[47] ಬಾದರಾಯಣ ಶ್ರೀಪತಿ ಪಂಡಿತನು ‘ಬ್ರಹ್ಮ ಸೂತ್ರದ’ ಮೇಲೆ ಬರೆದ ‘ಶ್ರೀಕರ ಭಾಷ್ಯ’ದಲ್ಲಿ ಅಂತಿಮ ಮುಕ್ತಿಗಾಗಿ ಬೇಕಾದ ಅವಶ್ಯಕತೆಗಳ ಬಗ್ಗೆ ಬರೆಯುತ್ತಾನೆ. ಅವನ ಪ್ರಕಾರ ಜಾತಿ ಧರ್ಮವನ್ನು ಮತ್ತು ವೇದ ಕರ್ಮಗಳನ್ನು ಸರಿಯಾಗಿ ಪಾಲಿಸುವುದೇ ಅಂತಿಮ ಮುಕ್ತಿಗೆ ಸಾಧನಗಳು.[48] ಇವುಗಳನ್ನು ಪಾಲಿಸಲು ಯಾರಾದರು ವಿಫಲರಾದರೆ, ಅವರು ಖಂಡನಾರ್ಹರು ಎಂದು ಹೇಳುತ್ತಾನೆ. ಜೊತೆಗೆ ವೇದ ಕರ್ಮಗಳನ್ನು ಜೀವನದ ಎಲ್ಲಾ ಹಂತಗಳಲ್ಲೂ ಪಾಲಿಸಬೇಕೆಂದಿದ್ದಾನೆ.[49] ವೀರಶೈವದಲ್ಲಿನ ‘ಸಾಮಾನ್ಯ’ ‘ವಿಶೇಷ’ ಮತ್ತು ‘ನಿರಾಭರಣ’ ಎಂಬ ವರ್ಗೀಕರಣವು ಸಾಮಾಜಿಕ ಆದ್ಯತೆಯ ಆಧಾರದ ಮೇಲೆ ರೂಪುಗೊಂಡವು. ಇದು ವೀರಶೈವ ಧರ್ಮದಲ್ಲಿನ ಆಂತರಿಕ ವರ್ಗಗಳ ಬಗ್ಗೆ ತಿಳಿಸುತ್ತದೆ. ಲಿಂಗಾಯತರ ಜನಸಂಖ್ಯೆ ಅಧ್ಯಯನದ ಪ್ರಕಾರ ಈ ಧರ್ಮದ ಸ್ಮಾರ್ತ ಮುಖಂಡರು ಇನ್ನಿತರ ಲಿಂಗಾಯತರಿಂದ ಆಗಲೇ ಬೇರೆಯಾಗಿದ್ದರು. ಇವರು ಇತರ ಲಿಂಗಾಯತರ ಜೊತೆಗೆ ಅಂತರ ಜಾತೀಯ ವಿವಾಹವಾಗಲೀ ಅಥವಾ ಭೋಜನವಾಗಲೀ ಮಾಡುತ್ತಿರಲಿಲ್ಲ. ತೆಲುಗು ಮತ್ತು ಕೆನರಾ ಜಿಲ್ಲೆಗಳ ಲಿಂಗಾಯತರು ತಾವು ಉನ್ನತ ವಂಶದವರೆಂದು ಭಾವಿಸಿದ್ದರು. ಹೊಸ ಧರ್ಮಕ್ಕೆ ಹೊಂದಿಕೊಂಡುದುದರ ಸಂಕೇತವಾಗಿ ಜನಿವಾರವನ್ನು ಧರಿಸುವುದರ ಜೊತೆಗೆ ಲಿಂಗವನ್ನೂ ಕಟ್ಟಿಕೊಳ್ಳುತ್ತಿದ್ದರು.[50]

ಆರಾಧ್ಯ ಬ್ರಾಹ್ಮಣರ ನಂತರ ಈ ಮತದ ಶ್ರೇಣೀಕೃತ ಸ್ಥಾನದಲ್ಲಿ ಕೆಳಹಂತದ ಪುರೋಹಿತರು ಬಹಳಷ್ಟು ಸಂಖ್ಯೆಯಲ್ಲಿದ್ದರು. ಆಗ ಇವರಿಗೆ ಸಿಗುತ್ತಿದ್ದ ಗೌರವ ಕಡಿಮೆ, ಕರ್ನಾಟಕದ ಬೇರೆ ಬೇರೆ ದೇವಸ್ಥಾನಗಳಲ್ಲಿ ಪೌರೋಹಿತ್ಯವನ್ನು ನಡೆಸುತ್ತಿದ್ದ ಇವರನ್ನು ವೀರಶೈವ ಮುಖಂಡರು ತಮ್ಮೆಡೆಗೆ ಸೆಳೆದು, ವೀರಶೈವ ಮತಕ್ಕೆ ಮತಾಂತರಿಸಿದರು. ‘ಬಸವ ಪುರಾಣ’ದಲ್ಲಿ ೧೨ ಸಾವಿರ ಸ್ವೇಚ್ಛಾಚಾರಿ ಪುರೋಹಿತರ ಬಗ್ಗೆ ಪದೇ ಪದೇ ಉಲ್ಲೇಖವಿರುವುದು ಹೊಸ ಮತಾಂತರಗಳ ಬಗ್ಗೆ ತಿಳಿಸುತ್ತವೆ.

‘ಸ್ವೇಚ್ಛಾಚಾರಿ ಪುರೋಹಿತ’ ಎಂಬ ಪದವು ಅರ್ಥಪೂರ್ಣ. ಏಕೆಂದರೆ, ಇದು ಸಮಕಾಲೀನ ಶೈವ ದೇವಸ್ಥಾನಗಳಲ್ಲಿ ನಡೆಯುವ ಭ್ರಷ್ಟತೆಯನ್ನು ಸೂಚಿಸುತ್ತದೆ. ಈ ಕಾಲದ ಶಾಸನಗಳು ಪುರೋಹಿತರ ಮತ್ತು ಸಾಧು-ಸನ್ಯಾಸಿಗಳ ನೀತಿಗೆಟ್ಟ ನಡವಳಿಕೆಯನ್ನು ಉಲ್ಲೇಖಿಸುತ್ತವೆ. ಇವರಲ್ಲಿ ಕೆಲವರು ದೇವಸ್ಥಾನದ ನೃತ್ಯಗಾರ್ತಿಯರ ಜೊತೆಗೆ ಸಂಬಂಧವಿರಿಸಿಕೊಂಡುದು ತಿಳಿದುಬರುತ್ತದೆ. ಈ ಶಾಸನಗಳು ಸಾಧು-ಸಂತರ ಅನೈತಿಕ ನಡವಳಿಕೆಯ ವಿರುದ್ಧ ಎಚ್ಚರಿಕೆಯನ್ನು ಕೊಡುವುದಲ್ಲದೆ, ಇಂತಹ ವ್ಯಕ್ತಿಗಳನ್ನು ಮಠಗಳಿಂದ ಉಚ್ಛಾಟಿಸಲು ನಿಯಮಗಳನ್ನು ನಿರ್ದೇಶಿಸುತ್ತವೆ.[51] ವೀರಶೈವರು ದೇವಸ್ಥಾನ ವ್ಯವಸ್ಥೆಯನ್ನು ನಿರಾಕರಿಸಿದುದರಿಂದ, ಅನೇಕ ಪುರೋಹಿತರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದುದರ ಸಾಧ್ಯತೆಗಳಿವೆ.[52] ಸ್ಥಾನಮಾನಗಳನ್ನು ಕಳೆದುಕೊಂಡ ಈ ಪುರೋಹಿತರು ವೀರಶೈವ ಚಳುವಳಿಯ ತೀವ್ರತೆಗೆ ಭಂಗವನ್ನುಂಟು ಮಾಡುವರಾದ್ದರಿಂದ, ಅವರ ಅಸಮಾಧಾನವನ್ನು ತಡೆಯುವುದಕ್ಕೋಸ್ಕರ ಅವರಿಗೆ ಮೊದಲಿನ ಸ್ಥಾನಮಾನಗಳನ್ನು ದಕ್ಕಿಸಿಕೊಳ್ಳಲು ವ್ಯವಸ್ಥೆಗಳನ್ನು ಮಾಡಬೇಕಾದ ಅವಶ್ಯಕತೆಯಿತ್ತು. ಮೊದಲಿನ ಸಾಧು ಸಂತರ ಇತಿಹಾಸವು ಈ ವ್ಯವಸ್ಥೆಯ ಬಗ್ಗೆ ತಿಳಿಸುತ್ತದೆ. ೧೨ ಸಾವಿರ ಪುರೋಹಿತರು ಚಳುವಳಿಯ ಗುರಿ, ಉದ್ದೇಶಗಳ ಬಗ್ಗೆ ನಿರ್ಲಕ್ಷ್ಯ ತೋರಿಸಿದರೂ, ಅವರನ್ನು ವೀರಶೈವ ಧರ್ಮದಲ್ಲಿ ಉಳಿಸಿಕೊಳ್ಳುವ ಸಾಹಸವನ್ನು ಬಸವ ಮತ್ತು ಆತನ ಜೊತೆಗಾರರು ವಹಿಸಿಕೊಂಡಿದುದರ ಬಗ್ಗೆ ‘ಬಸವ ಪುರಾಣ’ ಮತ್ತು ‘ಚೆನ್ನಬಸವ ಪುರಾಣ’ಗಳು ಒತ್ತಿ ಹೇಳುತ್ತವೆ.[53] ಅನೇಕ ಸಂದರ್ಭಗಳಲ್ಲಿ ಈ ‘ಪುರೋಹಿತರು ಸರಿಯಾದ ಸೌಲಭ್ಯಗಳನ್ನು ಒದಗಿಸದೆ ಇರುವುದರ ಬಗ್ಗೆ ಆಕ್ಷೇಪ ಎತ್ತಿದ, ಉದಾಹರಣೆಗಳನ್ನು ಈ ಪುರಾಣಗಳು ತಿಳಿಸುತ್ತವೆ. ಇಂತಹ ಸಂದರ್ಭಗಳಲ್ಲಿ ಬಸವನು ಇವರ ಬೇಡಿಕೆಗಳನ್ನು ಪೂರೈಸುವುದಕ್ಕೋಸ್ಕರ ತನ್ನನ್ನು ತಾನೇ ತೊಡಗಿಸಿಕೊಳ್ಳಬೇಕಾಗಿತ್ತು. ಲಿಂಗಾಯತೇತರರು ಇವರ ‘ಕ್ಷುಲ್ಲಕತೆ’ಯನ್ನು ಅಪಹಾಸ್ಯ ಮಾಡುತ್ತಿದ್ದುದರ ಬಗೆಗಿನ ಮಾಹಿತಿಗಳೂ ಸಹ ತಿಳಿದುಬರುತ್ತವೆ.[54]

ಕೆಲವು ಉತ್ಪಾದಕರಿಗೆ ಹಾಗೂ ಕಸುಬುದಾರರಿಗೆ ಇರುವ ಪ್ರಾಧಾನ್ಯತೆ ವೀರಶೈವವು ಆರ್ಥಿಕ ವಿಷಯಗಳಿಗೆ ತೋರಿಸಿದ ಆಸಕ್ತಿಯನ್ನು ಸೂಚಿಸುತ್ತವೆ. ಮೊದಲಿನ ಲಿಂಗಾಯತ ಸಾಧು-ಸಂತರ ಇತಿಹಾಸದಲ್ಲಿನ[55] ಪ್ರಚಾರ ಕಥೆಗಳಲ್ಲಿ ಕಸುಬಿನ ಮೂಲದಿಂದ ಬಂದ ರೈತರು, ನೇಯ್ಗೆಯವರು ಮತ್ತು ಚರ್ಮ ಹದ ಮಾಡುವವರು ಪಾತ್ರಧಾರಿಗಳು ವಚನಕಾರರಲ್ಲಿ ಪ್ರಮುಖವಾದ ವರ್ಗಗಳಾದ ರೈತ, ಅಕ್ಕಸಾಲಿಗ, ನೇಯ್ಗೆ, ಸಿಂಪಿಗೆ, ಚರ್ಮ ಹದಗಾರ, ಬುಟ್ಟಿ ಮಾಡುವವರು, ಬಡಿಗ, ಈಡಿಗ ಮತ್ತು ಹಗ್ಗ ಮಾಡುವವರು ಕಾಣುತ್ತಾರೆ. ಬಸವನಿಗಿಂತ ನೂರು ವರ್ಷ ಮೊದಲು ಜೀವಿಸಿದ್ದ ಮತ್ತು ಚಾಲುಕ್ಯ ದೊರೆಗೆ ಬೋಧಕನಾಗಿ ಸೇವೆ ಸಲ್ಲಿಸಿದ್ದ ಜೇಡರ ದಾಸಿಮಯ್ಯನು ಕಸುಬಿನಿಂದ ನೇಯ್ಗೆಯವನು. ‘ಶಂಕರ ದಾಸಿಮಯ್ಯ ಚರಿತ್ರೆ’ಯಲ್ಲಿ ವರ್ಣಿಸಲ್ಪಟ್ಟ ಶಂಕರ ದಾಸಿಮಯ್ಯನು ಸಿಂಪಿಗೆ ಕಸುಬಿವನು. ಸಿದ್ಧರಾಮನು ರೈತ ಕುಟುಂಬದಿಂದ ಬಂದವನು.[56]

ಪ್ರಾಥಮಿಕ ಉತ್ಪಾದಕ ಹಾಗು ಕಾರ್ಖಾನೆಯ ಕೆಲಸಗಾರರಲ್ಲಿ ಹುಟ್ಟಿಕೊಂಡ ಸಣ್ಣ-ಪುಟ್ಟ ಶ್ರೀಮಂತರು, ಶಿಲ್ಪಕಾರರಿಂದ[57] ಮತ್ತು ರೈತರಿಂದ[58] ಕಂದಾಯ ವಸೂಲಿ ಮಾಡುತ್ತಿದುದು ಶಾಸನಗಳಿಂದ ತಿಳಿದು ಬರುತ್ತದೆ. ಖಾಯಂ ಆಗಿ ಗ್ರಾಮಗಳಲ್ಲಿ ಮಾರುಕಟ್ಟೆಗಳನ್ನು ಸ್ಥಾಪಿಸುವಲ್ಲಿ ಈ ಸಣ್ಣ ಪುಟ್ಟ ಶ್ರೀಮಂತರ ಪಾತ್ರ ಮುಖ್ಯವಾದುದಾಗಿದೆ. ಇದರಿಂದ ಇವರು ಧಾರ್ಮಿಕ ಮತ್ತು ಹಿಂದಿನ- ಭೂಮಾಲೀಕರ ಅಧೀನದಿಂದ ತಪ್ಪಿಸಿಕೊಳ್ಳಲು ಅವಕಾಶ ದೊರೆಕಿತು.[59]

ಆದಾಗ್ಯೂ ಬ್ರಾಹ್ಮಣರಿಗೆ ಮತ್ತು ದೇವಸ್ಥಾನಗಳಿಗೆ ದೊಡ್ಡ ಪ್ರಮಾಣದಲ್ಲಿ ಉಳುವ ಭೂಮಿಯ ವರ್ಗಾವಣೆ ಆದುದು, ಭೂಮಿಯ ಮೇಲಿನ ಸಾಮೂಹಿಕ ಹಕ್ಕುಗಳನ್ನು ಮುರಿದಂತಾಯಿತು. ಇದರ ಜೊತೆಗೆ ಭೂಮಿ ಉಳುವ ವ್ಯಕ್ತಿಗೆ ಯಾವುದೇ ಸಮಯದಲ್ಲಿ ತನ್ನನ್ನು ಹೊರಹಾಕಲ್ಪಡುವ ಭಯವಿದ್ದೇ ಇತ್ತು. [60] ಕೆಲವು ಶಾಸನಗಳ ಪ್ರಕಾರ ಭೂಮಿಯನ್ನು ಬಳುವಳಿಯಾಗಿ ಪಡೆದವನು ಮೂಲ ಉಳುಮೆಗಾರನನ್ನು ಉಳುಮೆಯಿಂದ ಹೊರಹಾಕುವ ಹಕ್ಕನ್ನು ಪಡೆದವನಾಗಿದ್ದನು[61]. ಅಥವಾ ಭೂಮಿಯ ವರ್ಗಾವಣೆ ಆಗುವ ಮೊದಲೇ ಮೂಲ ಉಳುಮೆಗಾರರನ್ನು ಹೊರಹಾಕುವ ಪದ್ಧತಿಯು ಜಾರಿಯಲ್ಲಿತ್ತು. ಕೆಲವೊಮ್ಮೆ ನಿಗದಿತ ಕಂದಾಯವನ್ನು ಸಂದಾಯ ಮಾಡುವುದಕ್ಕೆ ವಿಫಲವಾದುದರ ಫಲವಾಗಿ ಉಳುಮೆಗಾರರನ್ನು ಬದಲಾಯಿಸಿದ ಮಾಹಿತಿಗಳಿವೆ.[62] ಭೂಮಿಯನ್ನು ಬಳುವಳಿಯಾಗಿ ಪಡೆದ ಭೂಮಾಲೀಕನು ಆಳುಗಳಿಗೆ ಸರಿಯಾಗಿ ಕೂಲಿ ಕೊಡದೆ, ಶೋಷಣೆಗೊಳಪಡಿಸಿದ್ದರು.[63]

ಭೂಮಾಲೀಕರ ಈ ಶೋಷಣೆಗೆ ಗ್ರಾಮ ಸಮುದಾಯಗಳು ವಿರೋಧ ವ್ಯಕ್ತಪಡಿಸುವುದರ ಬಗ್ಗೆ ಅಷ್ಟೇನೂ ದಾಖಲೆಗಳಿಲ್ಲ. ಆದರೂ ಅವು ಅರ್ಥಗರ್ಭಿತವಾಗಿವೆ. ೧೨೩೦ರಲ್ಲಿ ರೈತರು (ಗೌಡರು) ತಮ್ಮ ಗ್ರಾಮಗಳನ್ನು ‘ಮಾನ್ಯ ಇನಾಂಗ್ರಾಮ’ಗಳನ್ನಾಗಿ ಪರಿವರ್ತಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದುದು ತಿಳಿದುಬರುತ್ತದೆ.[64] ಈ ವಿರೋಧವು ರಾಜನ ಆಜ್ಞೆಗೆ ವಿರೋಧವಾಗಿತ್ತು. ಇದರಿಂದ ಕೋಪಗೊಂಡ ರಾಜನು ವಿರೋಧವನ್ನು ಹತ್ತಿಕ್ಕಲು ಸೈನ್ಯವನ್ನು ಕಳುಹಿಸಿದರ ಬಗ್ಗೆ ವಿವರಗಳಿವೆ. ಸೈನ್ಯವು ಗ್ರಾಮವನ್ನು ಲೂಟಿ ಮಾಡಿದುದಲ್ಲದೆ, ಗ್ರಾಮದ ಹೆಂಗಸರ ಮತ್ತು ದನಕರುಗಳ ಮೇಲೆ ಆಕ್ರಮಣ ಮಾಡಿತು. ಸಮುದಾಯದ ಒಡೆತನದಲ್ಲಿದ್ದ ತಾಳೆವೃಕ್ಷ, ನೀರಿನ ನಾಲೆ ಮತ್ತು ಇತರ ಆಸ್ತಿಗಳನ್ನು, ಬಳುವಳಿಯಾಗಿ ವರ್ಗಾಯಿಸುವುದಕ್ಕೆ ಮೂಲ ನಿವಾಸಿಗಳಿಂದ ವ್ಯಕ್ತವಾದ ವಿರೋಧದ ಬಗೆಗೂ ದಾಖಲೆಗಳು ದೊರೆಯುತ್ತವೆ.[65] ಈ ತರಹದ ವಿರೋಧವು ಕೆಲವೊಮ್ಮೆ ಘರ್ಷಣೆಗೆ ತಿರುಗಿ, ಅಪಾರ ಹಾನಿ ಮತ್ತು ರಕ್ತಪಾತಕ್ಕೆ ಒಳಗಾದ ನಿದರ್ಶನಗಳಿವೆ.

ರೈತರು ಮತ್ತು ಇತರ ಕಸುಬುದಾರರ ಶೋಷಣೆಯು ಮುಖ್ಯವಾಗಿ ಮೇಲೆ ತಿಳಿಸಿದ ಮೂರು ಜಿಲ್ಲೆಗಳಾದ, ಧಾರವಾಡ, ಬಿಜಾಪುರ ಮತ್ತು ಬೆಳಗಾಂನಲ್ಲಿ ಕಂಡುಬರುತ್ತದೆ. ಈ ಜಿಲ್ಲೆಗಳಲ್ಲಿನ ಒಟ್ಟು ಜನಸಂಖ್ಯೆಯ ಶೇಕಡ ೭೦ರಷ್ಟು ಜನ ರೈತ ಮತ್ತು ಇತರ ಕಸುಬುದಾರ ಮೂಲಗಳಿಂದ ಬಂದವರು. ಭೂಮಿಯ ಒಡೆತನವನ್ನು ಬಳುವಳಿಯಾಗಿ ಸ್ವೀಕರಿಸಲ್ಪಟ್ಟವರಲ್ಲಿ ಬ್ರಾಹ್ಮಣರು ಪ್ರಮುಖರು. ಈ ರೀತಿಯಾಗಿ ಬಳುವಳಿಯನ್ನು ಪಡೆದ ನೂರಾ ಮುವತ್ತೈದು ಬ್ರಾಹ್ಮಣರಲ್ಲಿ ಎಪ್ಪತ್ತೆಂಟು ಬ್ರಾಹ್ಮಣರು ಧಾರವಾಡ, ಬಿಜಾಪುರ, ಬೆಳಗಾಂ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕಾಣಸಿಗುತ್ತಾರೆ.[66] ಈ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಧಾರ್ಮಿಕ ಸಂಸ್ಥೆಗಳನ್ನು ಕಾಣಬಹುದು.[67] ಈ ಧಾರ್ಮಿಕ ಸಂಸ್ಥೆಗಳು ವ್ಯವಸಾಯಕ್ಕೆ ಮತ್ತು ಗ್ರಾಮ ಕೈಗಾರಿಕೆಗಳಿಗೆ ಬೇಕಾದ ಮಾನವ ಸಂಪನ್ಮೂಲಗಳನ್ನು ಹತೋಟಿಯಲ್ಲಿಟ್ಟುಕೊಂಡಿದ್ದವು. ಶಾಸನಗಳ ಪ್ರಕಾರ ೧೧ನೇ ಶತಮಾನದ ಪ್ರಾರಂಭದಲ್ಲಿ ನಲವತ್ತೆಂಟು ದೊಡ್ಡ ದೇವಸ್ಥಾನಗಳು ಅಭಿವೃದ್ಧಿ ಪಥದಲ್ಲಿದ್ದವು. ಇದರಲ್ಲಿ ೩೧ ದೇವಸ್ಥಾನಗಳು ಧಾರವಾಡ, ಬಿಜಾಪುರ ಮತ್ತು ಬೆಳಗಾಂ ಜಿಲ್ಲೆಗಳಲ್ಲೇ ಕಾಣಸಿಗುತ್ತವೆ. ಈಗಲೂ ಈ ಸ್ಥಳದ ಲಿಂಗಾಯತರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವವರು ನೇಕಾರರು ಮತ್ತು ಗಾಣಿಗರು.

ಕರ್ನಾಟಕದ ನೇಕಾರ ಜಾತಿಯವರಿಗೆ, ವಿಶೇಷವಾಗಿ ಹತ್ತಿ ಬೆಳೆಯುವ ಜಿಲ್ಲೆಗಳಾದ ಬೆಳಗಾಂ ಮತ್ತು ಬಿಜಾಪುರಗಳಲ್ಲಿ ವೀರಶೈವ ಧರ್ಮವು ಎಷ್ಟೊಂದು ಪ್ರಸ್ತುತವಾಗಿತ್ತು ಎಂಬ ವಿವರಗಳನ್ನು ಈ ಧರ್ಮದ ಮೊದಲಿನ ಸಾಹಿತ್ಯದಲ್ಲಿ ಕಾಣಬಹುದು.[68] ಬಿಜಾಪುರ ಜಿಲ್ಲೆಯಲ್ಲಿ ಕಾಣಬರುವ ನೇಕಾರರೆಲ್ಲ ಲಿಂಗಾಯಿತ ಜಾತಿಗೆ ಸೇರಿದವರು. ಬೆಳಗಾಂನಲ್ಲಿ ಲಿಂಗಾಯತ ನೇಕಾರರು ಶೇ.೧೮ ರಷ್ಟಿದ್ದಾರೆ. ಕರ್ನಾಟಕದ ಇತರ ಸ್ಥಳಗಳಲ್ಲಿಯೂ ಲಿಂಗಾಯತರು ಇಷ್ಟೇ ಸಂಖ್ಯೆಯಲ್ಲಿರುವುದು ಕಂಡುಬರುತ್ತದೆ.

ನೇಕಾರ ವೃತ್ತಿಯು ಕರ್ನಾಟಕದಲ್ಲಿ ಮುಖ್ಯ ಕಸುಬಾಗಿತ್ತು ಎಂಬ ಹೊರ ದೇಶದ ಮತ್ತು ಸ್ಥಳೀಯ ದಾಖಲೆಗಳಿಂದ ತಿಳಿದುಬರುತ್ತದೆ. ೧೦-೧೩ನೇ ಶತಮಾನದ ಉತ್ತರ ಕರ್ನಾಟಕದಲ್ಲಿ ಬಟ್ಟೆ ಉದ್ಯಮವು ಬೃಹತ್ ಆರ್ಥಿಕ ಚಟುವಟಿಕೆಯಾಗಿತ್ತು. ಹತ್ತಿ ಪ್ರಮುಖ ಬೆಳೆಯಾಗಿತ್ತು.[69] ಧಾರವಾಡ, ಮತ್ತು ಬೆಳಗಾಂ ಜಿಲ್ಲೆಗಳಲ್ಲಿ ಕಂಡುಬರುವ ಶಾಸನಗಳಲ್ಲಿ ನೇಕಾರರ ಸಂಘಗಳ ಅಸ್ತಿತ್ವದ ಬಗ್ಗೆ ವಿವರಗಳು ಸಿಗುತ್ತವೆ.[70]

ಈಗ ಲಿಂಗಾಯತರಲ್ಲಿ ಪಂಚಮಸಾಲಿಯೇತರರೆಂದು ಕರೆಯಲ್ಪಡುವ ನೇಕಾರರು, ಸಿಂಪಿಗರು ಮತ್ತು ಗಾಣಿಗರು ಪುರೋಹಿತ ಮದ್ಯವರ್ತಿಗಳ ಮತ್ತು ರಾಜ್ಯದ ರಾಜರುಗಳ ಶೋಷಣೆಯಿಂದ, ಅತಿಯಾದ ಕಂದಾಯ ವಸೂಲಿಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ವೀರಶೈವ ಚಳುವಳಿಯನ್ನು ಸೇರಿದರು. ಕಂದಾಯ ವಸೂಲಿಯು ವಸ್ತು ಮತ್ತು ಹಣದ ರೂಪದಲ್ಲಿ ಜಾರಿಯಲ್ಲಿತ್ತು. ಮಗ್ಗದ ಯಂತ್ರಗಳ ಮೇಲೆ, ಸಿಂಪಿಗರ ಉತ್ಪಾದನೆಯ ಮೇಲೆ ಕಂದಾಯ ಹೇರುತ್ತಿದುದರ ಬಗ್ಗೆಯೂ ಸಹ ದಾಖಲೆಗಳು ದೊರೆಯುತ್ತವೆ.[71] ಈ ರೀತಿಯ ಕಂದಾಯ ವಸೂಲಿಯಿಂದ ಅತೃಪ್ತರಾದ ನೇಯ್ಗೆಯ ಸಂಘಗಳು, ಕಂದಾಯ ವಸೂಲಿಯ ರಿಯಾಯಿತಿಗಾಗಿ ಅಥವಾ ಮರುಪರಿಶೀಲನೆಗೆ ಅಹವಾಲುಗಳನ್ನು ಮತ್ತು ಪ್ರತಿನಿಧಿಗಳನ್ನು ‘ಕಳುಹಿಸಿದುದರ ಬಗ್ಗೆ ವಿವರಗಳು ಸಿಗುತ್ತವೆ.[72] ತೆರಿಗೆ ವಸೂಲಿಯ ಜೊತೆಗೆ ಮಗ್ಗದ ಕಾರ್ಖಾನೆಗಳನ್ನು ಮತ್ತು ಬಟ್ಟೆ ಹೊಲೆಯುವ ಸ್ಥಳಗಳನ್ನು ಧಾರ್ಮಿಕ ಸಂಸ್ಥೆಗಳಿಗೆ ವರ್ಗಾಯಿಸುವ ಪರಿಪಾಟವೂ ಇತ್ತು.[73] ಇದರಿಂದ ಈ ಕಸುಬಿನಲ್ಲಿದ್ದ ಕೆಲಸಗಾರರಿಗೆ ಯಾವುದೇ ತರಹದ ಸ್ವಾತಂತ್ರ‍್ಯ ಸಿಗದೆ ತಮ್ಮ ವ್ಯಾಪಾರವನ್ನು ವೃದ್ಧಿಸುವ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದರು. ಹತ್ತಿ ಬೆಳೆಯುವ ಜಮೀನನ್ನು ಈ ರೀತಿಯಾಗಿ ವರ್ಗಾಯಿಸುತ್ತಿದ್ದರಿಂದ ಹತ್ತಿ ಬೆಳೆಯ ಉತ್ಪಾದನೆಗೆ ಪ್ರೋತ್ಸಾಹ ಸಿಗುತ್ತಿರಲಿಲ್ಲ. ಇದಕ್ಕೆ ಕಾರಣ ಧಾರ್ಮಿಕ ಸಂಸ್ಥೆಗಳಿಗೆ ಹತ್ತಿಯಿಂದ ಅಷ್ಟೇನು ಪ್ರಯೋಜನವಾಗುತ್ತಿರಲಿಲ್ಲ. ಈ ಪರಿಸ್ಥಿತಿಯು ಹತ್ತಿ ಬೆಳೆಗಾರರನ್ನು ಪುರೋಹಿತ ಭೂಮಾಲೀಕರ ಅಧೀನಕ್ಕೊಳಗಾಗುವಂತೆ ಮಾಡಿತು.

ಬ್ರಾಹ್ಮಣ ಭೂಮಾಲೀಕತ್ವದ ಬೆಳವಣಿಗೆಯು ಎಣ್ಣೆ ಉತ್ಪಾದನೆಯ ಕಸುಬಿನ ಮೇಲೂ ಪರಿಣಾಮವನ್ನುಂಟು ಮಾಡಿತು. ಎಣ್ಣೆ ಉತ್ಪಾದನೆಯು ಕರ್ನಾಟಕದಲ್ಲಿ ಸಾಮಾನ್ಯವಾದ ವೃತ್ತಿಯಾಗಿದ್ದರೂ, ೧೦-೧೩ರ ಶತಮಾನದಲ್ಲಿ ಇದರ ಪ್ರಾಮುಖ್ಯತೆ ಹೆಚ್ಚಿತು. ಈ ಕಾಲದ ದಾಖಲೆಗಳು ಎಣ್ಣೆಯನ್ನು ಔಡಲು ಬೀಜಗಳಿಂದ, ತೆಂಗಿನಕಾಯಿ ಮತ್ತು ಎಳ್ಳಿನಿಂದ ತಯಾರಿಸುತ್ತಿದ್ದುದನ್ನು ತಿಳಿಸುತ್ತವೆ.[74] ಇದು ವಸ್ತುವಿನ ವಿವಿಧ ಉತ್ಪನ್ನಗಳಿಗೋಸ್ಕರ ಕಸುಬು-ಆಧಾರಿತ ಉಪಜಾತಿಗಳನ್ನು ಸೃಷ್ಟಿಸಿತು.[75] ಎಣ್ಣೆ ಮತ್ತು ಅದರ ಉಪಉತ್ಪನ್ನಗಳು ವ್ಯಕ್ತಿಯನ್ನು ಶ್ರೀಮಂತಗೊಳಿಸಿದವು. ಈ ವೃತ್ತಿಯೂ ಬಹಳಷ್ಟು ಲಾಭವನ್ನು ನೀಡುತ್ತಿದ್ದುದು ಕಂಡುಬರುತ್ತದೆ.[76]

ಆದರೆ ೧೧ನೇ ಶತಮಾನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ ಕಾರ್ಖಾನೆಗಳನ್ನು ಬೇಕಾಬಿಟ್ಟಿಯಾಗಿ ಧಾರ್ಮಿಕ ಸಂಸ್ಥೆಗಳಿಗೆ ವರ್ಗಾಯಿಸಿದ್ದು, ಜಮೀನಿನ ಹಾಗೂ ಮುಖ್ಯ ವಸ್ತುಗಳ ಮೇಲೆ ಮಧ್ಯವರ್ತಿಗಳು ಹಿಡಿತ ಸಾಧಿಸಿದ್ದು ಈ ಉದ್ದಿಮೆಯು ಕುಂಠಿತಗೊಳ್ಳಲು ಕಾರಣವಾಯಿತು.[77] ಮೊದಲಿನ ದಾಖಲೆಗಳು ಇಂತಿಷ್ಟು ಪ್ರಮಾಣದಲ್ಲಿ ದೇವಸ್ಥಾನಗಳಿಗೆ ಎಣ್ಣೆಯನ್ನು ದಾನವಾಗಿ ಕೊಡುವುದರ ಬಗ್ಗೆ ತಿಳಿಸುತ್ತವೆ. ಆದರೆ ಈ ದಾಖಲೆಗಳು ಇಡೀ ಎಣ್ಣೆ ಕಾರ್ಖಾನೆಗಳನ್ನು ಧಾರ್ಮಿಕ ಸಂಸ್ಥೆಗಳಿಗೆ ವರ್ಗಾಯಿಸಿದುದರ ಬಗ್ಗೆ ಮಾಹಿತಿಗಳನ್ನು ಒದಗಿಸುವುದಿಲ್ಲ. ಆದಾಗ್ಯೂ ಇವು ದೇವಸ್ಥಾನಗಳಿಗೆ ಮತ್ತು ರಾಜ್ಯಕ್ಕೆ ಹೆಚ್ಚಿನ ತೆರಿಗೆಯನ್ನು ಕೊಡಬೇಕಾಗಿತ್ತು. ಧಾರವಾಡ, ಬಿಜಾಪುರ ಮತ್ತು ಬೆಳಗಾಂ ಜಿಲ್ಲೆಗಳಲ್ಲಿ ಶೇ. ೧೨-೨೨ರಷ್ಟು ಜನಸಂಖ್ಯೆಯಿರುವ ಎಣ್ಣೆ ಉತ್ಪಾದಕರು, ತಮ್ಮ ವೃತ್ತಿಗೆ ರಕ್ಷಣೆಯನ್ನು ಒದಗಿಸಿಕೊಳ್ಳುವ ಉದ್ದೇಶದಿಂದ ವೀರಶೈವ ಚಳುವಳಿಯನ್ನು ಸೇರಿದ್ದರೆಂದು ತೋರುತ್ತದೆ. ದೇವಸ್ಥಾನದ ಸಂಪ್ರದಾಯಬದ್ಧ ವಿಧಿಗಳನ್ನು ವೀರಶೈವದವರು ನಿರಾಕರಿಸುವುದರಿಂದ, ಈ ಕಸುಬುದಾರರು ಧಾರ್ಮಿಕ ಮಧ್ಯವರ್ತಿಗಳ ಹಿಡಿತದಿಂದ ತಪ್ಪಿಸಿಕೊಳ್ಳುವಂತಾಯಿತು. ಇದಲ್ಲದೆ, ತೆರಿಗೆಯ ಭಾರವನ್ನು ಸಹ ಕಡಿಮೆ ಮಾಡಿತು. ಇದರ ಫಲವಾಗಿ ಈಗ ರಾಜ್ಯಕ್ಕೆ ಮಾತ್ರ ತೆರಿಗೆ ಕೊಡಬೇಕಾಗಿತ್ತು.

೧೦-೧೩ರ ಶತಮಾನಗಳಲ್ಲಿ ವಾಣಿಜ್ಯ ಮತ್ತು ಹಣಕಾಸಿನ ಆರ್ಥಿಕ ಪರಿಸ್ಥಿತಿಯ ಏಳಿಗೆಯಿಂದ ಅನೇಕ ಉತ್ಪಾದಕರಿಗೆ, ಕಸಬುದಾರರಿಗೆ ಮತ್ತು ವರ್ತಕರಿಗೆ ಬಹಳ ಲಾಭವಾಗಿತ್ತು. ಆದರೆ ಪರಂಪರಾನುಗತ ಮಧ್ಯವರ್ತಿಗಳನ್ನು ಬೆಳಸಿದ್ದು ಇವರ ಬೆಳವಣಿಗೆಗೆ ಮಾರಕವೆನಿಸಿತು ಇದಕ್ಕೆ ಮುಖ್ಯ ಮೇಲೆ ವಿವರಿಸಿದ ಆರ್ಥಿಕ ಹಾಗೂ ಸಾಮಾಜಿಕ ಬದಲಾವಣೆಗಳು ಭೂಮಾಲೀಕರು ರೈತರನ್ನು ಮತ್ತು ಕಾರ್ಮಿಕರನ್ನು ಶೋಷಿಸುತ್ತಿದ್ದಲ್ಲದೆ, ವ್ಯವಸಾಯದ ಬೆಳೆಗಳನ್ನು ಮತ್ತು ಉತ್ಪನ್ನಗಳನ್ನು ತಮ್ಮ ಇಚ್ಛಾನುಸಾರಿಯಾಗಿ ಅಧೀನಕ್ಕೊಳಪಡಿಸಿಕೊಳ್ಳುತ್ತಿದ್ದರು; ಇಲ್ಲವೆ ಬೇರೆ ಉದ್ದೇಶಗಳಿಗಾಗಿ ಬಳಸುತ್ತಿದ್ದರು. ಇದರಿಂದ ವರ್ತಕರಿಗೆ ಬಂಡವಾಳ ಹೂಡಲು ತೊಂದರೆಯಾಗುತ್ತಿತ್ತು. ವರ್ತಕರ ಬೆಂಬಲದಿಂದ ಅಸ್ತಿತ್ವದಲ್ಲಿದ್ದ ಬೌದ್ಧ ಮಠಗಳು ವಾಣಿಜ್ಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಲ್ಲದೆ, ಬಡ್ಡಿಯ ಮೇಲೆ ಸಾಲವನ್ನೂ ನೀಡುತ್ತಿದ್ದವು.[78] ಮಧ್ಯಕಾಲೀನ ಕರ್ನಾಟಕದ ದೇವಾಲಯಗಳಲ್ಲಿ ಈ ರೀತಿಯ ಸಂಘಟಿತ ವಾಣಿಜ್ಯ ಅಥವಾ ಲೇವಾದೇವಿಯ ಚಟುವಟಿಕೆಗಳ ಬಗ್ಗೆ ಮಾಹಿತಿಗಳು ಸಿಗುವುದಿಲ್ಲವಾದರೂ ಮಧ್ಯವರ್ತಿಗಳ ವೃದ್ಧಿಯು ವ್ಯಾಪಾರಿ ಹಾಗೂ ಉತ್ಪಾದಕ ವರ್ಗಗಳ ಹಿತಾಸಕ್ತಿಯನ್ನು ಬಲಿ ತೆಗೆದುಕೊಂಡಿತು. ವ್ಯವಸಾಯಗಾರರನ್ನು ಮತ್ತು ಕಾರ್ಮಿಕರನ್ನು ಅಧೀನಕ್ಕೊಳಪಡಿಸಿದ ದೇವಸ್ಥಾನಗಳು ಮತ್ತು ಇದನ್ನು ಪ್ರೋತ್ಸಾಹಿಸಿದ ಸಂಪ್ರದಾಯ ಬ್ರಾಹ್ಮಣತ್ವವು ಬಹಳಷ್ಟು ಜನ ವರ್ತಕರ, ಉತ್ಪಾದಕರ, ಕಸುಬುದಾರರ ಅತೃಪ್ತಿಗೆ ಅಸಮಾಧಾನಕ್ಕೆ ಕಾರಣವಾದವು.[79] ಇದು ಕೊನೆಗೆ ಇವರೆಲ್ಲರೂ ಮೂಲ ಸಮಾಜದಿಂದ ಬೇರ್ಪಟ್ಟು ಹೊಸ ಸಾಮಾಜಿಕ ವ್ಯವಸ್ಥೆಯನ್ನು ಸ್ಥಾಪಿಸಲು ಕಾರಣವಾಯಿತು.

ಮೂಲ : ಆರ್.ಎನ್. ನಂದಿ
ಅನುವಾದ : ವಿಜಯಕುಮಾರ್ ಎಂ. ಬೋರಟ್ಟಿ

[1] ಈ ಚಳುವಳಿಯು ಅನೇಕ ಹೆಸರುಗಳಿಂದ ಪ್ರಸಿದ್ಧಿ. ಕೆಲವರು ಇದನ್ನು ವಚನ ಚಳುವಳಿ ಎಂದು ಬಣ್ಣಿಸಿದರೆ, ಮತ್ತಿತರರು ಇದನ್ನು ವೀರಶೈವ/ಲಿಂಗಾಯತ ಚಳುವಳಿ ಎಂದು ನಂಬಿದ್ದಾರೆ. ಮತ್ತಿತರರು ಒಂದು ಹೆಜ್ಜೆ ಮುಂದೆ ಹೋಗಿ ಇದನ್ನು ‘ವಿಚಾರ ಕ್ರಾಂತಿ’ ಎಂದು ವರ್ಣಿಸಿದ್ದಾರೆ.

[2] ಎಚ್.ಎಲ್. ಪುಷ್ಪರವರು ಮೋಳಿಗೆ ಮಹಾದೇವಿ, ಅಮುಗೆ ರಾಯಮ್ಮ, ಸೂಳೆ ಸಂಕವ್ವ, ಉರಿಲಿಂಗ ಪೆದ್ದಿ ಮತ್ತು ಮುಕ್ತಾಯಕ್ಕರು ವಚನ ಸಾಹಿತ್ಯ ಮತ್ತು ಚಳುವಳಿಗೆ ನೀಡಿರುವ ಕಾಣಿಕೆಯನ್ನು ಸ್ಮರಿಸಿದ್ದಾರೆ (ಪುಷ್ಪ, ೧೯೯೩: ೧೦೧-೧೧೬). ಮತ್ತೊಬ್ಬ ವಿದ್ವಾಂಸರಾದ ಲಕ್ಷಣ ತೆಲಗಾವಿಯವರು ಮಾದರ ಚೆನ್ನಯ್ಯ, ಡೋಹರ ಕಕ್ಕಯ್ಯ ಮತ್ತು ಮಾದರ ದೂಳಯ್ಯವರರು ಕರ್ನಾಟಕದ ಸಾಹಿತ್ಯ ಇತಿಹಾಸದಲ್ಲಿ ಆಗಿಹೋದ ಮೊದಲ ದಲಿತ ಲೇಖಕರು ಎಂದು ವಾದಿಸಿದ್ದಾರೆ (ತೆಲಗಾವಿ, ೧೯೯೯ : ೯೭). ಕೆ.ಜಿ. ನಾಗರಾಜಪ್ಪನವರು ತಮ್ಮ ಕೃತಿ ಮರುಚಿಂತನೆ (೧೯೮೫) ಯಲ್ಲಿ ಮೇಲ್ಜಾತಿ ಮತ್ತು ಕೆಳಜಾತಿ ವಚನಕಾರರ ನಡುವೆ ಇರುವ ತಾತ್ವಿಕ ಭಿನ್ನಾಭಿಪ್ರಾಯಗಳನ್ನು ವಿಶ್ಲೇಷಿಸಿದ್ದಾರೆ.

[3] ಚಂದ್ರಶೇಖರ ನಾರಾಯಣಪುರ ಅವರು ಇತ್ತೀಚೆಗೆ ನಿರ್ಲಕ್ಷಿತ ವಚನಕಾರರ ಹೆಸರಿನಲ್ಲಿ ಉದ್ಭವವಾಗುತ್ತಿರುವ ಮಠಗಳನ್ನು ಗುರುತಿಸಿದ್ದಾರೆ (೨೦೦೨). ೧೯೮೮ರಲ್ಲಿ ಬಸವಲಿಂಗ ಸ್ವಾಮಿ ಎಂಬ ಮಠಾಧೀಶರು ಬಾಗಲಕೋಟೆ ಜಿಲ್ಲೆಯ ನಾಗರಾಳು ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಮಠವನ್ನು ಸ್ಥಾಪಿಸಿದ ವಿಷಯವನ್ನು ಅವರು ಪ್ರಸ್ತಾಪಿಸಿದ್ದಾರೆ.

[4] Encyclopedia of Religion and Ethics, ಸಂ. ಜೇಮ್ಸ್ ಹ್ಜೆಸ್ಟಿಂಗ್ಸ್, VIII (೧೯೧೫) ೬೮-೭೫.

[5] ಥರ್ಸ್‌ಟನ್ ಮತ್ತು ರಂಗಾಚಾರಿ p-೨೫೨.

[6] ಈ ಕಾಲದ ವಿಧಿನಿಯಮಗಳನ್ನು ರೂಪಿಸುವವರು ಕೆಲವು ಕಸುಬುಗಾರ ಸಮುದಾಯಗಳ ಮೇಲೆ ಹೊಸ ಕಾಯಿದೆಗಳನ್ನು ಹೇರಿದರು. ಅತ್ರಿ ಮತ್ತು ಯಮರಿಂದ ಸೂಚಿಸಲ್ಪಟ್ಟ ಸಾಂಪ್ರದಾಯಿಕ ಏಳು ಅಂತ್ಯಜರ ಪಟ್ಟಿಗೆ ಹೇಮಾದ್ರಿಯು ಬಡಿಗರನ್ನು, ಅಕ್ಕಸಾಲಿಗರನ್ನು, ಗಾಣಿಗರನ್ನು, ಹೆಂಡ ಮಾರುವವರನ್ನು ಸೇರಿಸಿದನು; ಚತುರ್ವರ್ಗ ಚಿಂತಾಮಣಿ, ಪ್ರಾಯಶ್ಚಿತ್ತ ಕಾಂತ, ಹೇಮಾದ್ರಿ, ಪು-೯೯೮, ಉಲ್ಲೇಖ: Society and Culture in Northern India in the 12th Century. (ಅಲಹಾಬಾದ್ ೧೯೭೩) ಬಿ.ಎಸ್.ಎಸ್. ಯಾದವ, ಪು-೪೬. ನೇಯ್ಗೆಯವರನ್ನು ಅಸ್ಪೃಶ್ಯ ಗುಂಪಿಗೆ ಸರಿಸಿದುದರ ಬಗ್ಗೆ ಅಲ್ಬರೂನಿ ತಿಳಿಸಿದ್ದಾನೆ. ಸಚಾವು Alberunis India, ೧೦೧-೨.

[7] ಮತ್ತಷ್ಟು ವಿವರಗಳಿಗೆ, ನೋಡಿ ಜಿ.ಎಫ್. ಪ್ಲೀಟ್, “Ablur Inscriptions”. ಎಫಿಗ್ರಾಫಿಯಾ ಇಂಡಿಯಾ (೧೮೯೯) ಗಿ: ಆರ್.ಜಿ. ಭಂಡಾರ್ ಕರ್ Vaisnavism. Savisim and Minor Religion Systems/Strassbura, ೧೯೧೩): ನಿಕೋಲ್ ಮಾಕ್ ನಿಕೋಲ್, Indian Theism (London, ೧೯೧೫); ಕೆ.ಐ.ಎಸ್. ಶಾಸ್ತ್ರಿ, History of South India (O.U.P.) ೧೯೫೮), ಎರಡನೇ ಸಂಪುಟ pp ೪೩೫-೬: ಎಸ್.ಸಿ. ನಂದಿಮಠ, Handbook of virasaivism (Dharwad, ೧೯೪೨); Max Weber. The Religion of India. (ಇಲ್ಲಿನಾಯ್ಸ್, ೧೯೫೮).

[8] ಇಂಡಿಯನ್ ಆಂಟಿಕ್ವೆರಿ, x. ೮೫.

[9] ಎಫಿಗ್ರಾಫಿಯಾ ಇಂಡಿಯಾ XIII. ೧೫.

[10] ಎಫಿಗ್ರಾಫಿಯಾ ಇಂಡಿಯಾ VII SK. ೧೧೮ ೧೧೦೦ ರಿಂದ ೧೩೦೦ ರವರೆಗಿನ ಶಾಸನಗಳಲ್ಲಿ ಈ ಸಂಘದ ಬಗ್ಗೆ ಮಾಹಿತಿಗಳು ದೊರಕುತ್ತವೆ.

[11] ಇಂಡಿಯನ್ ಆಂಟಿಕ್ವೆರಿ, ನಂ. ೧೦.

[12] The Book of Ser Marco Polo (London ೧೮೭೫), ೧೮೭.

[13] ಅದೇ, P, ೩೭೯.

[14] ಅದೇ, p. ೨೬೩ ಮತ್ತು note P. ೩೭೦.

[15] ಅದೇ, P. ೩೬೩; ನಿಕಾಲೋ ಕಾಂಟಿ, pp-೩೯, ಮತ್ತು ವಾಸ್ಕೋಡಿಗಾಮ, The Three Voyages, p-೧೮೪, ಉಲ್ಲೇಖ: Economic Conditions of Southern India, C. ಅಪ್ಪಾದುರೈ ೧೧ (Madras ೧೯೩೬) ೫೨೭-೮.

[16] ಎಂ.ಎಸ್. ಅಡ್ಲರ್ The Itinerary or Benjamin of Tudela, ಕ-೬೩-೫ ಉಲ್ಲೇಖ: ಕೆ.ಎ.ಎಸ್. ಶಾಸ್ತ್ರಿಯ, Foreign Notices of South India (Madras University, ೧೯೩೯) p- ೧೩೪-೫.

[17] ಎಚ್.ಎಂ. ಎಲ್ಲಿಯಟ್, History of India as Told by Its Own Historians I (೧೯೬೭), ೯೦.

[18] ವರ್ಥಿಮ, travel ೧೯೨, ಬಾರ್ಬೋಸ, An Account i, ೧೨೮, ಉಲ್ಲೇಖ: ಅಪ್ಪಾದುರೈ, Op-Cit. ೫೩೧.

[19] ಬಾರ್ಬೋಸ, An Account, ೧೨೮, ಉಲ್ಲೇಖ; ಅಪ್ಪಾದುರೈ, Op-Cit. ೫೩೧.

[20] ಫ್ರಿಯರ್ ಜೋರ್ಡನಸ್, Worders of East, tr, ಸಿ.ಎಚ್. ಯೂಲೆ, p-೧೫-೬.

[21] ಸಿ.ಎಚ್. ಯೂಲೆ, ಸಂ The Book of Ser Marco Polo ii ೩೬೩.

[22] ಅದೇ -೩೮೫; ಬಾರ್ಬೋಸ, An Account, i, ೫೩-೬, ಉಲ್ಲೇಖ: ಅಪ್ಪಾದುರೈ, Op-Cit. ೫೩೭.

[23]೧೦-೧೩ರ ಶತಮಾನದ ಕಾಲದಲ್ಲಿ ಪರಂಪರಾನುಗತವಾಗಿ ಬಂದ ಸಾಮಂತ, ದಂಡನಾಯಕ, ಮಹಾಪ್ರಧಾನ ಮತ್ತು ಮಹಾಮಂಡಕೇಶ್ವರ ಕುಟುಂಬಗಳ ಬಗ್ಗೆ, ಶಾಸನಗಳು ಹೆಚ್ಚು ಹೆಚ್ಚಾಗಿ ಬರೆಯಲ್ಪಟ್ಟವು.

[24] ಗ್ರಾಮ ಕಚೇರಿಗಳಲ್ಲಿ ಪರಂಪರಾನುಗತವಾಗಿ ಬದಲಾವಣೆ ಹೊಂದಿದುರಲ್ಲಿ ಗಾವುಡ, ಪೆರ್ಗಡೆ, ಮತ್ತು ಕರಣಗಳು ಸೇರಿವೆ. ನೋಡಿರಿ ಆರ್.ಎನ್. ನಂದಿ “Social & Religion Developments in the Deccan (ಅ.ಂ.ಆ. ೬೦೦-೧೦೦೦) (ಪಿಎಚ್.ಡಿ. ಮಹಾಪ್ರಬಂಧ, ಪಾಟ್ನಾ ಯೂನಿವರ್ಸಿಟಿ, ೧೯೬೯), ಈ ಕೃತಿಯ ಗೌಡ ಅಥವಾ ಗ್ರಾಮದ ಮುಖಂಡನ ಪ್ರಭಾವವು ಆಗಿನ ಕಾಲದ ರಾಜರಿಂದ ಕೊಡಲ್ಪಟ್ಟ ಆಡಳಿತಾತ್ಮಕ ರಿಯಾಯಿತಿಗಳಿಂದ ಹೇಗೆ ವೃದ್ಧಿಯಾಯಿತು ಎಂದು ತಿಳಿಸುತ್ತದೆ. ಸಮಕಾಲೀನ ಕರ್ನಾಟಕದಲ್ಲಿ ಮುಖ್ಯ ಜಾತಿಗಳಾದ ‘ಗೌಡ’ ಮತ್ತು ‘ಹೆಗಡೆ’ಗಳು ಗೌರವ ಮತ್ತು ಹೆಗ್ಗಡೆ ಎಂಬ ಹಳೆಯ ರೂಪಗಳ ಆಧುನಿಕ ಹೆಸರುಗಳು.

[25] ಎಪಿಗ್ರಾಫಿಯಾ ಇಂಡಿಯಾ xix ನಂ. ೪೦-ಃ (೧೨ನೇ ಶತಮಾನದ್ದು) ಇದು ಶೈವ ದೇವಸ್ಥಾನಗಳಿಗೆ ಬೇಕಾಗಿದ್ದ ವಸ್ತುಗಳ ಪಟ್ಟಿ ಕೊಡುತ್ತದೆ.

[26] ನೋಡಿರಿ, ಆರ್.ಎನ್. ನಂದಿ Religious Institution and Cults in the Deccan (ಇ.ಂ.ಆ. ೬೦೦-೧೦೦೦).

[27] ಶಾಸನಗಳು ನಗದು ರೂಪದಲ್ಲಿ ನಡೆಯುತ್ತಿದ್ದ ವಹಿವಾಟಿನ ಬಗ್ಗೆ ಮತ್ತು ಟಂಕಸಾಲಿಗಳ ಅಸ್ತಿತ್ವದ ಬಗ್ಗೆ ತಿಳಿಸುವುದರಿಂದ, ಆಗ ಹಣದ ಬಳಕೆ ಹೆಚ್ಚು ಇತ್ತು ಎಂದು ತಿಳಿದು ಬರುತ್ತದೆ. ಇತ್ತೀಚಿನ ಅಧ್ಯಯನದ ಪ್ರಕಾರ ಕರ್ನಾಟಕದ ಇತರ ಭಾಗಗಳಲ್ಲಿ ಸುಮಾರು ಒಂಭತ್ತು ಟಂಕಸಾಲೆಗಳಿದ್ದವೆಂದು ತಿಳಿದು ಬರುತ್ತದೆ. ಇವುಗಳಲ್ಲಿ ಆರು ಧಾರವಾಡ ಜಿಲ್ಲೆಯಲ್ಲೇ ಇದ್ದವು. ವೀರಶೈವದ ಏಳಿಗೆ ಮತ್ತು ಟಂಕಸಾಲೆಗಳ ಸ್ಥಾಪನೆ ಕಾಕತಾಳೀಯವಾದುದು. ನೋಡಿರಿ ಸಿಸ್ಟರ್ ಎಂ. ಲಿಸೋರೊಯಾ, “Social and Economic History of Karnataka 9 Ph.d. thesis, Patna University, ೧೯೭೨).

[28] ನೋಡಿರಿ, ಭೂಪಟ, ಸಿಸ್ಟರ್ ಲಸೇರಿಯಾ, op cit.

[29] ಸೋಮೇಶ್ವರ, ವಿಕ್ರಮಾಂಕಾಭ್ಯುದಯ pp-೧೧-೨.

[30] ಎಪಿಗ್ರಾಫಿಯಾ ಇಂಡಿಕಾ, XIV, ೧೯೦.

[31] ಎಪಿಗ್ರಾಫಿಯಾ ಇಂಡಿಕಾ, ೨೫೩-೪ Journal of Bombay Branch of Royal Asistic Society (೧೮೬೮) p-೧೯೭.

[32] ವುರ್ಥ್, tr. ಬಸವ ಪುರಾಣ; JBBRAS (೧೮೬೮), p ೧೯೦ ಈ ಕಾಲದ ಶಾಸನಗಳು ನಾನಾ ದೇಶಿ, ಉಭಯದೇಶಿ, ಮುಮ್ಮುರಿದಾಸ, ಶೆಟ್ಟಿ, ಶೆಟ್ಟೆಗುಟ್ಟ, ಗಾತ್ರಿಗಾ, ವೀರಭನಂಜುಕಾಸೆಕಾರ ಎಂಬ ಮುಂತಾದ ವ್ಯಾಪಾರಿ ವರ್ಗಗಳ ಬಗ್ಗೆ ವಿವರಗಳನ್ನು ಕೊಡುತ್ತವೆ.

[33] ಎಫಿಗ್ರಾಫಿಯಾ ಇಂಡಿಯಾ, XXI, ೧೯-೧೭.

[34] ಈ ಧರ್ಮದ ಮೂಲ ಬೋಧಕರು, ಆರಾಧ್ಯರು, ಈ ಧರ್ಮದ ರಾಜಕೀಯ ಆಶ್ರಯದಾತನಾದ ಬಸವನೂ ಆರಾಧ್ಯರ ಕುಲಕ್ಕೆ ಸೇರಿದವ. ಈ ಧರ್ಮದ ಸಾಧು, ಸಂತರ ಇತಿಹಾಸವನ್ನು ಮತ್ತು ವಿಧಿನಿಯಮಗಳನ್ನು ರೂಪಿಸಿದ ಕೃತಿಕಾರರೆಲ್ಲರೂ ಆರಾಧ್ಯ ಕುಲ್ಕೆಕ ಸೇರಿದವರು. ತೆಲುಗು ಮ್ತು ಕೆನರಾ ಜಿಲ್ಲೆಗಳಲ್ಲಿ ಕಾಣಬರುವ ಅರಾಧ್ಯ ಬ್ರಾಹ್ಮಣರು ಅರ್ಧಂಬರ್ಧ ಪರಿವರ್ತನೆಗೊಂಡ ಸ್ಮಾರ್ತರು, ನೋಡಿರಿ ಜೆ.ಎನ್. ಪರಶುಹಾರ್, An outline of Religious literautre of India (first Indian Reprint, ೧೯೬೭), ೨೬೩.

[35] ಸ್ಮಾರ್ತರು ಸಂಪ್ರದಾಯಬದ್ಧ ಬ್ರಾಹ್ಮಣರ ಗುಂಪಿಗೆ ಸೇರಿದವರು. ಕ್ರಿಶ್ಚಿಯನ್ ಯುಗದ ಆರನೇ ಶತಮಾನದಲ್ಲಿ ದುಬಾರಿಯಾದ ಹಾಗೂ ಶ್ರಮದಿಂದ ಕೂಡಿದ ‘ಶ್ರಾತ’ಯಾಗಗಳನ್ನು ನಡಸುವುದನ್ನು ನಿಲ್ಲಿಸಿದರು. ಯಾಕೆಂದರೆ ಇವು ಶ್ರೀಮಂತರಲ್ಲಿ ಅಷ್ಟೇನು ಜನಪ್ರಿಯವಾಗಿರಲಿಲ್ಲ. ಈ ಕಾಲದಲ್ಲಿ ಗೃಹಕೃತ್ಯದ ಸಂಪ್ರದಾಯಗಳು ‘ಗೃಹಸೂತ್ರ’ದಲ್ಲಿರುವಂತೆ, ಜಾರಿಗೆ ಬಂದವು. ಈಗಿನ ಗೃಹ ಸಂಸ್ಕಾರಗಳಲ್ಲಿ ಕಾಣಬರುವ ದೇವ-ದೇವತೆಗಳು ಈ ಸಂಪ್ರದಾಯಗಳಲ್ಲಿ ಕಂಡು ಬರುತ್ತಾರೆ.

[36] ಕೆಲವರ ಪ್ರಕಾರ ‘ಕುಮಾರಿರಾನು’-‘ಪಂಚಯಾತನ’ದ ಉಗಮಕ್ಕೆ ಕಾರಣನೆಂದು ಹೇಳಿದ್ದಾರೆ. ನೋಡಿರಿ ಫರ್ಕುಹರ್ op. cit-೧೭೯.

[37] ‘Tirumandiram of tirumendur’ ಎಂಬ ಕೃತಿಯಲ್ಲಿ ಬರುವ ೧೮೬೧ರ ಭಾಗಗಳನ್ನು ನೋಡಿರಿ, ಸಿ. ವಿ. ಎನ್. ಅಯ್ಯರ್  Origin and Early History or Savisim in South India (Madras ೧೯೩೬) ಪು. ೨೮೦-೧.

[38] ನೋಡಿರಿ ಆರ್.ಎನ್. ನಂದಿ, “Origin and Nature of Saivite Monastism: The Case of Kalamukhas”. Indian Society, Historical Probrings (Delhi, ೧೯೪೭) p-೧೯೦-೨೦೧.

[39] ಉಸಾನ ಪ್ರಕಾರ ಕೆಳ ಜಾತಿಯವರ ಯಜ್ಞ-ಯಾಗಾದಿಗಳನ್ನು ನಡೆಸುವವರು, ವೇದಗಳನ್ನು ಕಲಿಸುವವರು, ಸ್ಮೃತಿಗಳನ್ನು ಮಾರುವವರು, ಹಾಗೂ ಅಪರಿಚಿತರಿಗೆ ವಿದ್ಯೆಯನ್ನು ಹೇಳಿಕೊಡುವವರು, ಶ್ರಾದ್ಧ ಸಮಯದಲ್ಲಿ ನಡೆಸುವ ಯಾಗಗಳಲ್ಲಿ ಭಾಗವಹಿಸಲು ಅನರ್ಹರು, ಉಸಾನ ಸಂಹಿತ ಅಧ್ಯಾಯ IV, VV ೨೩-೬, ಉಲ್ಲೇಖ: ಅಯ್ಯರ್ op.cit ಪು. ೨೧೪-೫; ನೋಡಿರಿ ಮನುಸ್ಮೃತಿ, ೧೧೩-೧೫೨ ವೃದ್ಧಹರಿತೆ, VIII. ೭-೮೦; ಅಪರಿಚಿತ, ಸ್ಮೃತಿಯ ಮೇಲೆ ಅಪರಾರ್ಕನ ಹೇಳಿಕೆಗಳು, ೪೫೦ ಮತ್ತು ೯೨೩, ಉಲ್ಲೇಖ: ಕಲಿವರ್ಜ್ಯ, ಪಿ.ವಿ. ಕಾಣೆ, History of Dharmashastra. Iii. (Poona ೧೯೪೬) ೯೫೦-೧.

[40] ಭಿನ್ನಮತೀಯ ದೇವರುಗಳನ್ನು ಪೂಜಿಸುವುದನ್ನು ವೀರಶೈವವು ಮಾನ್ಯ ಮಾಡುವುದಿಲ್ಲ. ಚೆನ್ನಬಸವ ಪುರಾಣ ಅಧ್ಯಾಯ-೫೯, (JBBRAS, ೧೮೬೮) ಸಿದ್ಧರಾಮನು ಶೈವ ಅನುಯಾಯಿಯಾಗಿದ್ದ, ಆದರೆ ಆತನು ಯಾವುದಾದರೂ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದನೋ, ಇಲ್ಲವೋ ತಿಳಿದಿಲ್ಲ.

[41] ಅಲ್ಲಮಪ್ರಭು ಮತ್ತು ಸಿದ್ಧರಾಮರು, ದೀಕ್ಷೆಯ ಸಮಯದಲ್ಲಿ ಲಿಂಗವನ್ನು ಧರಿಸಲು ಹಿಂಜರಿದುದನ್ನು ಗಮನಿಸತಕ್ಕದ್ದು; ಚೆನ್ನಬಸವ ಪುರಾಣ JBBRAS (೧೮೬೮), ಪು-೧೩೪, ಬಸವನಿಗೆ ಷಟ್‌ಸ್ಥಲದಲ್ಲಿ ದೀಕ್ಷೆಯನ್ನು ಕೊಡುವಾಗ ಇಷ್ಟಲಿಂಗದ ಪೂಜೆಯನ್ನು ವ್ಯಕ್ತಿಗತವಾಗಿ ಮಾಡುವ ಬಗೆಗೆ ಚೆನ್ನಬಸವನು ಆಡುವ ಹೊಗಳಿಕೆಯ ಮಾತುಗಳನ್ನು ಗಮನಿಸಿ, ಜೊತೆಗೆ ಬಸವನು ತಾನು ಇದುವರೆಗೆ ವ್ಯರ್ಥವಾಗಿ ಬಹಿರಂಗ ಪೂಜೆ ಮಾಡುತ್ತಿದ್ದುದರ ಬಗೆಗೆ ಪಶ್ಚಾತ್ತಾಪ ಪಡುವುದನ್ನು ಗಮನಿಸಬಹುದು, ಅದೇ ಪು-೧೨೫.

[42] ಎಸ್.ಎನ್. ದಾಸಗುಪ್ತ, History of Indian Philosophy, V (Cambridge, ೧೯೫೫), ೫೫.

[43] ಅದೇ. ಪು-೪೫.

[44] ಸಿದ್ಧರಾಮನಿಗೆ ದೀಕ್ಷೆ ಕೊಡುವಾಗ ಬೇರೆ ದೇವರುಗಳ ಪೂಜೆಯ ವಿರುದ್ಧ ಅಥವಾ ಬೇರೆ ದೇವರುಗಳ ಪೂಜೆ ಮಾಡುವವರ ಸಹವಾಸದ ವಿರುದ್ಧ ಚೆನ್ನಬಸವನು ಎಚ್ಚರಿಕೆಯ ಮಾತುಗಳನ್ನಾಡುತ್ತಾನೆ. ‘ಚೆನ್ನಬಸವ ಪುರಾಣ’ ಅಧ್ಯಾಯ-೫೯, JBBRAS (೧೮೬೮), ಲಿಂಗಾಯತ ಚರ್ಮಕಾರನಿಂದ ಹತನಾದ ವೀರಶೈವ ಪೂಜಾರಿಯ ಘಟನೆಯನ್ನು ಗಮನಿಸಿ ಬಸವಪುರಾಣ JBBRAS (೧೯೬೮), ಪು. ೧೯೪.

[45] ಮೀಮಾಂಸೆಯನ್ನು ಕಲಿಸುತ್ತಿದ್ದ ವೇದಾಂತಿಯನ್ನು ಬಿಜ್ಜಳನ ಆಸ್ಥಾನದಲ್ಲಿ ಬಸವನು ಅವಮಾನಪಡಿಸಿದುದರ ಬಗ್ಗೆ ಬಸವ ಪುರಾಣದಲ್ಲಿ ಉಲ್ಲೇಖವಿದೆ. JBBRAS (೧೮೬೮); ಪು-೮೭; ವೇದಗಳನ್ನು ನಾಯಿಗಳಿಂದ ಓದಿಸಿದ್ದು ಮತ್ತು ಮತ್ತೊಬ್ಬ ವೇದಾಂತಿಯನ್ನು ಅಪಹಾಸ್ಯ ಮಾಡಿದುದರ ಬಗ್ಗೆ ಮಾಹಿತಿ ಗಮನಿಸಿ, ಚೆನ್ನಬಸವಪುರಾಣ, ಅಧ್ಯಾಯ-೫೭, JBBRAS (೧೮೬೮), ಪು. ೧೯೩.

[46] ಎಸ್.ಎನ್. ಗುಪ್ತಾ op.cit ಪು.೪, ಬ್ರಾಹ್ಮಣದಂತೆ ಲಿಂಗಾಯತ ಜಾತಿಯು ಸಹ ಕೆಳಜಾತಿಯವರನ್ನು ಮುಟ್ಟಿಸಿಕೊಂಡರೆ ಮೈಲಿಗೆಯಾಗುತ್ತದೆಂದು ತಿಳಿದಿತ್ತು. ನೋಡಿರಿ ‘ಬಸವ ಪುರಾಣ’ JBBRAS (೧೮೬೮), ಪು. ೯೩.

[47] ಬಸವಪುರಾಣ, ಅಧ್ಯಾಯನ II.V. ೩೨, ಉಲ್ಲೇಖ: ದಾಸಗುಪ್ತ op.cit. ಪು. ೧೩.

[48] ದಾಸಗುಪ್ತ op.cit.-೧೮೮.

[49] ಅದೇ, ಪು. ೧೮೮-೯.

[50] ಫರ್ಕ್ಯುಹರ್, op.cit. ಪು. ೨೬೩.

[51] ಆರ್.ಎನ್. ನಂದಿ Religious Insitution and Cults in the Deccan (ಅ.ಂ.ಆ. ೬೦೯-೧೦೦೦).

[52] ದೇವಸ್ಥಾನಗಳಿಗೆ ಕೊಡಲ್ಪಟ್ಟ ಕಾಣಿಕೆಗಳ ಒಡತನಕ್ಕಾಗಿ ದೇವಸ್ಥಾನದ ಪುರೋಹಿತರ ಹಾಗೂ ಲಿಂಗಾಯತರ ನಡುವೆ ಇದ್ದ ಘರ್ಷಣೆಗಳ ಬಗ್ಗೆ ವಿವರಗಳಿಗಾಗಿ ನೋಡಿರಿ ‘ಬಸವಪುರಾಣ’ JBBRAS (೧೮೬೮)-೯೫.

[53] ಬಸವಪುರಾಣ, JBBRAS (೧೮೬೮), ಪುಪು ೭೭, ೮೩, ೮೯; ಚೆನ್ನಬಸವ ಪುರಾಣ, ಅಧ್ಯಾಯನಗಳು ೭ ಮತ್ತು ೮, JBBRAS (೧೮೬೮), ಪು. ೧೨೮-೩೦.

[54] ಚೆನ್ನಬಸವ ಪುರಾಣ, ಅಧ್ಯಾಯನಗಳು ೭-೮ ಮತ್ತು ೫೭, JBBRAS (೧೮೬೮), ಪು. ೧೯೪.

[55] ಬಸವಪುರಾಣದಲ್ಲಿರುವ ರೈತರ ಮತ್ತು ವ್ಯವಸಾಯ ಆಧಾರಿತ ಕ್ರಿಯಾ-ವಿಧಿಗಳನ್ನು ಗಮನಿಸಿ. JBBRAS (೧೮೬೮), ಪು. ೯೦-೨.

[56] ಚೆನ್ನಬಸವಪುರಾಣ, ಅಧ್ಯಾಯ ೫೯, JBBRAS (೧೮೬೮), -೨೧೦.

[57] South Indian Inscriptions. ೯ (೧) ನಂ. ೧೪೨; ಎಫಿಗ್ರಾಫಿಯ ಕರ್ನಾಟಕ ೭, ಶಿಕಾರಿಪುರ ೧೧೨.

[58] ಎಫಿಗ್ರಾಫಿಯ ಕರ್ನಾಟಕ ೬, ಕಡೂರು ೪೯, ಇದು ಭತ್ತಕ್ಕೆ ಮತ್ತು ಎಳ್ಳಿಗೆ ನಗದು ಹಣವನ್ನು ಪಾವತಿ ಮಾಡಿಸುತ್ತಿದುದು ತಿಳಿಸುತ್ತದೆ; Karnataka Inscriptions ೨, ನಂ.೧೬ ಇದು ಎಲೆ-ಅಡಿಕೆಗಳಿಗೆ ನಗದು ಹಣವನ್ನು ಕೊಡುತ್ತಿದುದರ ಬಗ್ಗೆ ತಿಳಿಸುತ್ತದೆ.

[59] ಎಫಿಗ್ರಾಫಿಯ ಕರ್ನಾಟಕ, ೯. cp. ೭೩ ಎಕ.೯ ಕನಕಪುರ ೬; ಎ.ಕ. ೧೦ ಶಿಡ್ಲಘಟ್ಟ ೧೧೨; ಎ.ಕ. ೧೧, ದಾವಣಗೆರೆ ೧೦೫.

[60] ಹೊರಗಟ್ಟುವಿಕೆಯ ಬಗೆಗೆ ಮಧ್ಯಯುಗೀನ ಕಾನೂನು ರೂಪಿಸುವವರ ಮನೋಭಾವ, ನೋಡಿರಿ, ಆರ್.ಎಸ್. ಶರ್ಮ, Indian Feudalism (Calcutta, ೧೯೬೫), ಪು. ೧೪೧-೩.

[61] ಎಫಿಗ್ರಾಫಿಯ ಕರ್ನಾಟಕ, ೫, ಚೆನ್ನರಾಯಪಟ್ಟಣ, ಇದು ದಂಡನಾಯಕನು ೧೨೨೩ರಲ್ಲಿ ಹಳೆಯ ಉಳುಮೆಗಾರರನ್ನು ಹೊರಗಟ್ಟತ್ತಿದುದರ ಬಗ್ಗೆ ತಿಳಿಸುತ್ತದೆ; ಎ.ಕ. ೧೧, ಜಗಳೂರು ೩೦, ಇದು ರಾಜ್ಯಧಿಕಾರವು ೧೨೭೯ರಲ್ಲಿ ಭೂಮಿಯನ್ನು ದೇವಸ್ಥಾನಕ್ಕೆ ಕಾಣಿಕೆಯನ್ನಾಗಿ ಕೊಡುವ ಮೊದಲು ಅಲ್ಲಿನ ಉಳುಮೆಗಾರರನ್ನು ಹೊರಗಟ್ಟಿದುದರ ಬಗ್ಗೆ ತಿಳಿಸುತ್ತದೆ; ಮೈಸೂರು ಆರ್ಕಿಯಾಲಾಜಿಕಲ್ ರಿಪೋರ್ಟ್ (೧೯೪೦); ನಂ. ೨೧, ಇದು ದೇವಸ್ಥಾನಕ್ಕೆ ಕೊಟ್ಟ ಕೆಲವು ಜಮೀನಿನ ಉಳುಮೆಗಾರರನ್ನು ಬ್ರಾಹ್ಮಣರು ಖಾಲೀ ಮಾಡಿಸುತ್ತಿದುದರ ಬಗ್ಗೆ ಮಾಹಿತಿ ಕೊಡುತ್ತದೆ.

[62] ಎ.ಕ. ೫, ಅರಸಿಕೆರೆ, ೧೧೩, ಂ.ಆ. ೧೩೧೮.

[63] ೧೧೯೨ರಲ್ಲಿ ಹೊಯ್ಸಳ ದೊರೆ ವೀರ ನರಸಿಂಹನು ಸರಿ ಸುಮಾರು ಹನ್ನೆರಡು ಹಳ್ಳಿಗಳನ್ನು ತೆರಿಗೆಯ ಬಾಕಿಗಳೊಂದಿಗೆ ದೇವಸ್ಥಾನವೊಂದಕ್ಕೆ ವರ್ಗಾಯಿಸಿದನು, ಇದರ ಜೊತೆಗೆ ಉಳುಮೆಗಾರರನ್ನು ಒತ್ತಾಯಪೂರ್ವಕವಾಗಿ ಬಳಸಿಕೊಳ್ಳುವ ಹಕ್ಕನ್ನು ದೇವಸ್ಥಾನಕ್ಕೆ ವರ್ಗಾಯಿಸಲಾಯಿತು, ಎ.ಕ. ೭, ೪೧; ಎ.ಕ. ೧೦, ಕರ್ನಾಟಕ ಇನ್ ಸ್ಕ್ರಿಪ್ ಶನ್ಸ್, ಇದು ಬ್ರಾಹ್ಮಣ ಭೂಮಾಲೀಕನು ಅದೇ ಹಳ್ಳಿಯ ಶೈವ ಬ್ರಾಹ್ಮಣನಿಗೆ ಒತ್ತಾಯಪೂರ್ವಕವಾಗಿ ಕೂಲಿಯಿಲ್ಲದೆ ಉಳುಮೆಗಾರರನ್ನು ದುಡಿಸಿಕೊಳ್ಳುವ ಹಕ್ಕನ್ನು ನೀಡಿದುದರ ಬಗ್ಗೆ ತಿಳಿಸುತ್ತದೆ. ಎ.ಕ.ವ. ಅರಕಲಗೂಡು,೨೧ ಇದು ಸಂಚಾರಿ ಅಧಿಕಾರಿಗಳಿಗೆ ಮತ್ತು ಸೈನಿಕರಿಗೆ ಒತ್ತಾಯಪೂರ್ವಕವಾಗಿ ಕೆಲಸ ಮಾಡಿಸಿಕೊಳ್ಳುವ ಅನುಮತಿ ನೀಡಿದ ಸೈನಿಕರಿಗೆ ಒತ್ತಾಯಪೂರ್ವಕವಾಗಿ ಕೆಲಸ ಮಾಡಿಸಿಕೊಳ್ಳುವ ಅನುಮತಿ ನೀಡಿದ ಬಗ್ಗೆ ಮಾಹಿತಿ ಒದಗಿಸುತ್ತದೆ.

[64] Mysore Archeological Report (೧೯೩೬). No. ೧೯, ಪು. ೮೪.

[65] ಎ. ಕ. ೫, ಹಾಸನ ೩೪, ೪೨, ೧೨೨.

[66] ಸಿಸ್ಟರ್ ಲಿಸೇರಿಯಾ, op. cit.

[67] ಆರ್. ಎನ್. ನಂದಿ, ಭೂಪಟ Religious Institutions and Cults in The Deccan (ಅ.ಂ.ಆ. ೬೦೦-೧೦೦೦).

[68] ಲಿಂಗಾಯತ ಶರಣರ ಪುರಾಣೇತಿಹಾಸದಲ್ಲಿ ಬರುವ ನೇಯ್ಗೆಯವರನ್ನು ಮತ್ತು ವಚನಕಾರರ ಪಟ್ಟಿಗಳನ್ನು ಹೋಲಿಸಿ ನೋಡಿ.

[69] ೧೯೦೮ರಲ್ಲಿ Imperial gazetteer of India, ೭. ೮. ಮತ್ತು ೧೧ರ ಪ್ರಕಾರ ಬಿಜಾಪುರ ಜಿಲ್ಲೆಯಲ್ಲಿ ೮೬೦ ಚದರ ಮೈಲಿ ಜಮೀನಿನಲ್ಲಿ ಮೊದಲಿಗೆ ಬೆಳೆದ ಬೆಳೆ ಹತ್ತಿ; ಧಾರವಾಡ ಮತ್ತು ಬೆಳಗಾಂ ಜಿಲ್ಲೆಗಳು ಎರಡನೆ ಸ್ಥಾನದಲ್ಲಿ ನಿಲ್ಲುತ್ತವೆ.

[70] ಎಫಿಗ್ರಾಫಿಯ ಇಂಡಿಯಾ, ೧೮, ನಂ. ೨೨ಇ, ೧೯೬, Bombay-Karnataka Inscriptions, I (೪, No. ೯೭); ಎ.ಇ. ೧೩, ನಂ. ೧೪.

[71] ಕೈಮಗ್ಗ ಕಾರ್ಮಿಕರ ಮೇಲೆ ತೆರಿಗೆ ಹೇರಿದುದರ ಬಗ್ಗೆ ನೋಡಿರಿ, ಎ.ಕ. ೫, ಹಾಸನ, ೧೧೯, ಂ.ಆ. ೧೧೭೩; ಬಣ್ಣ ಮಾಡುವುದರಿಂದ ವಸೂಲಿ ಮಾಡಿದ ತೆರಿಗೆಯ ವಿವರಗಳ ಬಗ್ಗೆ ನೋಡಿರಿ, ಎ.ಕ. ೯, ಚೆನ್ನರಾಯಪಟ್ಟಣ, ೬೬; ಎ.ಕ. ೫, ಹಾಸನ, ೧೧೯, ಇತರ ಉಲ್ಲೇಖಗಳಿಗೆ ನೋಡಿರಿ, ಎ. ಇ. ೧೯, ನಂ. ೪; Annual Report on South Indian Epigraphy ನಂ. ೭೦, ೧೯೪೬; ಎ. ಕ. ೭, ಶಿಕಾರಿಪುರ ೧೪೫.

[72] ಎ. ಕ. ೧೦, ಬೌರಿಂಗ್ ಪೇಟೆ, ೭೨, ಕ್ರಿ.ಶ. ೧೪೩೦ ಇದು ಹೊಲೆಯರಿಗೆ, ಬಡಿಗರಿಗೆ, ಕಮ್ಮಾರರಿಗೆ, ಮತ್ತು ಅಕ್ಕಸಾಲಿಗರಿಗೆ ಸಿಕ್ಕ ಸುಂಕ ರಿಯಾಯಿತಿಗಳ ಬಗ್ಗೆ ತಿಳಿಸುತ್ತದೆ; ಮತ್ತಷ್ಟು ವಿವರಗಳಿಗೆ ನೋಡಿರಿ Annual Report on South Indian Epigraphy.

[73] ಎ. ಕ. ೧೧, ಚಳ್ಳೆಕರೆ, ೨೧, ಕ್ರಿ.ಶ. ೧೦೮೭, ಪು. ೯೯, ಇದು ನೇಯ್ಗೆಗಾಗಿ ಎರಡು ಎಣ್ಣೆ ಕಾರ್ಖಾನೆಗಳ ಜೊತೆಗೆ ಮನೆಯನ್ನು ವರ್ಗಾವಣೆ ಮಾಡಿದುದರ ಬಗ್ಗೆ ತಿಳಿಸುತ್ತದೆ.

[74] ಎ. ಕ. ೩, ಮೈಸೂರು ೯; Mysore Archeological Report (೧೯೩೧), ನಂ. ೨೦, ಎಳ್ಳಿನ ಬಗ್ಗೆ) ಎ. ಕ. ೧೧, ದಾವಣಗೆರೆ ೮೫ (ಔಡಲ ಬೀಜ); ಎ. ಕ. ೫, ಬೇಲೂರು, ೧೫೫ (ತೆಂಗಿನ ಕಾಯಿಗಳು), The Imperial Gazetteer of India, ೭, ೧೯೦೮, ಇದು ಎಳ್ಳು, ಮೂಲಂಗಿ ಬೀಜ, ಸಾಸಿವೆ ಮತ್ತು ಔಡಲ ಬೀಜಗಳನ್ನು ಬಿಜಾಪುರದಿಂದ ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡುತ್ತಿದುದರ ಬಗ್ಗೆ ತಿಳಿಸುತ್ತದೆ ಇಲ್ಲಿ ಶೇ. ೧೮ರಷ್ಟು ಲಿಂಗಾಯತರು ಎಣ್ಣೆ ಉತ್ಪಾದಕರು.

[75] ಎ. ಕ. ಹಾಸನ, ಇದು ಕೈಗಾಣದ ಬಗ್ಗೆ ವಿವರ ಕೊಡುತ್ತದೆ; ಎ. ಕ. ೫, ಬೇಲೂರು ೧೪೪, ಇದು ಕಾಲ್ಗಾಣದ ಬಗ್ಗೆ ತಿಳಿಸುತ್ತದೆ, ಎ. ಕ. ೩, ಮೈಸೂರು, ಎತ್ತುಗಣದ ಬಗ್ಗೆ ತಿಳಿಸುತ್ತದೆ.

[76] ಎ. ಕ. ೫, ಅರಸೀಕೆರೆ, ೧೧೦, ಕ್ರಿ.ಶ. ೧೧೪೨.

[77] ಎ. ಕ. ೭, ಶಿಕಾರಿಪುರ, ೨೦; ಎ. ಕ. ೧೧, ದಾವಣಗೆರೆ, ೨೦;ಪ Karnataka Inscriptions ೨, ನಂ.ಗಳು ೧೦, ೧೧, ೧೪, ೧೩, ೧೬; Karnataka Inscriptions ೪, ನಂ.ಗಳು ೧೩, ೩೪, ೬೬ ಕೆಲವು ಶಾಸನಗಳು ಒಟ್ಟಿಗೆ ಆರು ಎಣ್ಣೆ ಕಾರ್ಖಾನೆಗಳ ವರ್ಗಾವಣೆಯ ಬಗೆಗೆ ತಿಳಿಸುತ್ತವೆ. ಇಲ್ಲಿರುವ ದಾಖಲೆಗಳು ಕ್ರಿ.ಶ. ೧೦೦೦ ರಿಂದ ೧೨೦೦ರಲ್ಲಿ ಹೊರಡಿಸಿದ್ದು.

[78] ವ್ಯಾಪಾರಿಗಳ, ಕಮ್ಮಾರರ, ಬಡಿಗರ, ವರ್ತಕ ಸಂಘಗಳ, ಕಂಚುಗಾರ ವೃತ್ತಿಯವರ, ಕುಂಬಾರರ ಮತ್ತು ರೈತ ಕುಟುಂಬದ ಸದಸ್ಯರ ದಾನ-ದತ್ತಿಗಳ ಬಗ್ಗೆ ಪಶ್ಚಿಮ ದಖ್ಖನಿಯಲ್ಲಿ ಕಾಣಬರುವ ಬೌದ್ಧ ಗುಹೆ-ಶಾಸನಗಳಲ್ಲಿ ದಾಖಲೆಗಳು ಸಿಗುತ್ತವೆ, Archelogoical Survey of Western India. ೪; ಕನ್ಹೇರಿಯಲ್ಲಿ ನಡೆದ ಭೂಶೋಧನೆಗಳ ಪ್ರಕಾರ ಕ್ರಿಶ್ಚಿಯನ್ ಶಕೆಯ ಪ್ರಾರಂಭದಲ್ಲಿ ಬೌದ್ಧ ಮಠಗಳಲ್ಲಿದ್ದ ಬೌದ್ಧ ಭಿಕ್ಷುಗಳು ಲೋಹ ಕರಗಿಸುವ, ಶುದ್ಧೀಕರಿಸುವ ಮತ್ತು ಶೃಂಗರಿಸುವ ಕಾರ್ಯಗಳಲ್ಲಿ ತೊಡಗಿದ್ದರೆಂದು ತಿಳಿದುಬರುತ್ತದೆ. ಎಸ್.ಆರ್. ರಾವ್, “Excavations at Kanheri (೧೯೬೯)”, ಎಸ್. ರಿತ್ತಿ ಮತ್ತು ಬಿ. ಆರ್. ಗೋಪಾಲ, ಸಂ. Studies in Indian History and Culture Dharwada (೧೯೭೧), ಪಶ್ಚಿಮ ದಖ್ಖನಿಯ ಬೌದ್ಧ ಮಠಗಳಲ್ಲಿ ಸಾಕಷ್ಟು ಪ್ರಮಾಣದ ಸಂಪತ್ತು ಇದ್ದುದರ ಬಗ್ಗೆ ನೋಡಿರಿ, ಡಿ.ಡಿ. ಕೊಸಾಂಬಿ, Culture and Civilisation of Ancient India in Historical Outline (Delhi, ೧೯೭೨ reprint).