ಇಂದಣ ಹೆಜ್ಜೆ; ಹಿಂದಣ ಚರಿತ್ರೆ

ಮೇಲುನೋಟಕ್ಕೆ ಈ ಕೃತಿಯ ಶೀರ್ಷಿಕೆ ನೋಡಿದಾಗ ಹಾಗನ್ನಿಸಿದರೂ ಇದು ಪೂರ್ವಸೂರಿಗಳ ಟೀಕೆಯಲ್ಲ. ಆಧುನಿಕ ಕರ್ನಾಟಕದ ಸಂಸ್ಕೃತಿಯನ್ನು ನಿರೂಪಿಸಿದ ಹಿರಿಯರ ಬರವಣಿಗೆಗಳ ಹಿಂದಿನ ಚಾರಿತ್ರಿಕ ಒತ್ತಡಗಳನ್ನು ಅರಿಯುವುದು ಇಲ್ಲಿನ ಗುರಿ. ವಿಜಯಕುಮಾರ್ ಬೋರಟ್ಟಿಯವರ ‘ಹಿರಿಯರ ಹಿರಿತನ ಹಿಂದೇನಾಯಿತು?: ಕನ್ನಡ ಸಾಹಿತ್ಯ, ವಸಾಹತುಶಾಹಿ ಮತ್ತು ಸಮುದಾಯಗಳು’ ಸಂತೋಷದಿಂದ ಓದಬಹುದಾದ ಮತ್ತು ವಿದ್ವತ್ ಪೂರ್ಣವಾದ ತುಂಬು ವಿನಯದ ಪುಸ್ತಕ. ಹತ್ತೊಂಬತ್ತು-ಇಪ್ಪತ್ತನೆಯ ಶತಮಾನದಲ್ಲಿ ಕನ್ನಡ ಸಾಹಿತ್ಯ, ಕರ್ನಾಟಕದ ಸಮುದಾಯಗಳು ಮತ್ತು ಸಂಸ್ಕೃತಿ ರೂಪುಗೊಂಡ ಬಗೆಯನ್ನು ಅದರೆಲ್ಲಾ ಸೂಕ್ಷ್ಮ ಆಯಾಮಗಳೊಡನೆ ಈ ಕೃತಿ ಅನಾವರಣಗೊಳಿಸುತ್ತದೆ. ವಚನ ಸಾಹಿತ್ಯದ ಚರ್ಚೆಯ ನೆಪದಲ್ಲಿ ಕರ್ನಾಟಕದ ಆಧುನಿಕತೆಯ ಸ್ವರೂಪವನ್ನು ಅದನ್ನು ಅಧ್ಯಯನ ಮಾಡಲು ಬೇಕಾದ ಅಗತ್ಯ ಪರಿಕರಗಳನ್ನು ವಿಜಯ್ ಒದಗಿಸಿರುತ್ತಾರೆ. ಅಪೂರ್ವ ಮಾಹಿತಿಗಳ ವಿಮರ್ಶಾತ್ಮಕ ಮಂಡನೆಯ ಮೂಲಕ ಇಂದಿನ ಕನ್ನಡ ಸಾಹಿತ್ಯ, ಸಮುದಾಯಗಳು ಮತ್ತು ಸಂಸ್ಕೃತಿಯನ್ನು ತಿಳಿಯಲು ಅಗತ್ಯವಾದ ಪೂರ್ವಚರಿತ್ರೆಯನ್ನು ಇಲ್ಲಿ ಕೊಟ್ಟಿಸಲಾಗಿದೆ.

ಸ್ವ-ನಿರ್ಮಾಣ/ಸ್ವ-ನಿರೂಪಣೆ ಎನ್ನುವುದು ಸಾಂಸ್ಕೃತಿಕ ಕಾವ್ಯ ಮೀಮಾಂಸೆ ಮತ್ತು ನವ ಚಾರಿತ್ರಿಕವಾದಗಳ ಜನಕನೆಂದೇ ಪ್ರಸಿದ್ಧನಾದ ಸ್ಟೀಫನ್ ಗ್ರೀನ್ ಬ್ಲಾಟ್ ಹುಟ್ಟು ಹಾಕಿದ ಪದ. ಸಾಮಾಜಿಕವಾಗಿ ಅಂಗೀಕೃತವಾದ ಪ್ರಮಾಣಗಳಿಗನುಸಾರವಾಗಿ ತನ್ನ ತಮ್ಮ ಸಮುದಾಯದ ಅಸ್ಮಿತೆಯನ್ನು ಸಾರ್ವಜನಿಕ ವ್ಯಕ್ತಿತ್ವವನ್ನೂ ಕಟ್ಟಿಕೊಳ್ಳುವ ಪ್ರಕ್ರಿಯೆಯನ್ನು ಈ ಪರಿಕಲ್ಪನೆ ಸೂಚಿಸುತ್ತದೆ. ಆದುದರಿಂದ ಸಾಹಿತ್ಯ ಮತ್ತು ಸಮುದಾಯಗಳ ಸಾಂಸ್ಕೃತಿಕ ಚರಿತ್ರೆಯನ್ನು ಬಿಡಿಸುವಾಗ ಪ್ರಚಲಿತ ಚಾರಿತ್ರಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವಿದ್ಯಮಾನಗಳನ್ನು ಗಮನಿಸುವುದು ಅನಿವಾರ್ಯ. ಯಾಕೆಂದರೆ, ಸ್ವ-ನಿರೂಪಣೆಗೂ, ಸಾಹಿತ್ಯ ಇತ್ಯಾದಿ ಸೌಂದರ್ಯ ಶಾಸ್ತ್ರೀಯ ಮಾಧ್ಯಮಗಳಿಗೂ ಹತ್ತಿರದ ಒಳನಂಟು ಇದೆ.

ವಸಾಹತುಶಾಹಿ ಮತ್ತು ಇಂಗ್ಲಿಷ್ ವಿದ್ಯಾಕ್ರಮದ ಅತಿ ದೊಡ್ಡ ಪರಿಣಾಮವೆಂದರೆ ಬದುಕನ್ನು ನೋಡುವ ಕ್ರಮದಲ್ಲಿಯೇ ಅದು ತಂದ ಪರಿವರ್ತನೆ. ವಸಾಹತು ಸಂದರ್ಭದಲ್ಲಿ ಜ್ಞಾನದ ವ್ಯಾಖ್ಯೆಯೇ ಬದಲಾಯಿತು. ನೋಟ ಕ್ರಮಗಳು ಬದಲಾದವು. ಅಭಿವ್ಯಕ್ತಿಯ ಭಾಷೆ ಹೊಸರೂಪವನ್ನು ಪಡೆಯಿತು. ಓರಿಯೆಂಟಲಿಸ್ಟ್ ಡಿಸ್ಕೋರ್ಸ್‌ನ್ನು ನಿರ್ದೇಶಿಸಿದ ಪಾಶ್ಚಾತ್ಯ ವೈಚಾರಿಕತೆಯ ಸಾರಸತ್ವವಾದೀ “ವಸ್ತುನಿಷ್ಠ’’ ಮತ್ತು “ವೈಜ್ಞಾನಿಕ” ಮನೋಭಾವ ನಮ್ಮ ರಾಷ್ಟ್ರೀಯ ಚಿಂತನೆಯನ್ನು ಪ್ರಭಾವಿಸಿತು. ಸಾಮ್ರಾಜ್ಯ ಶಾಹಿ ಚಿಂತನೆಯೊಡನೆ ಪ್ರೀತಿ-ದ್ವೇಷದ ಸಂಬಂಧವಿಟ್ಟುಕೊಂಡೇ ರಾಷ್ಟ್ರೀಯತೆಯ ಬೇರು ಬೆಳೆಯಿತು. ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಸಮುದಾಯಗಳನ್ನು ರೂಪಿಸಿದ ಹಾಗೂ ನಿರೂಪಿಸಿದ ಸಾಂಸ್ಕೃತಿಕ ಗಣ್ಯರು ಅಂತಹ ಚಾರಿತ್ರಿಕ ಒತ್ತಡದ ಸನ್ನಿವೇಶದಲ್ಲಿ ಕೆಲಸ ಮಾಡಿದರು. ವಿಜಯ್ ಅವರ ಪುಸ್ತಕ ಈ ಸ್ವ-ನಿರೂಪಣೆಯ ಪ್ರಕ್ರಿಯೆಯನ್ನು ತನ್ಮಯತೆಯಿಂದ ದಾಖಲಿಸುತ್ತದೆ.

ಕನ್ನಡದಲ್ಲಿ ‘ಸಾಂಸ್ಕೃತಿಕ ವಿಮರ್ಶೆ’ಯ ಹೆಸರಿನಲ್ಲಿ ಅನೇಕ ಬಗೆಯ ಬರವಣಿಗೆಗಳು ಬಂದಿವೆ. ಸಂಸ್ಕೃತಿಯ ಸಮಾಜಶಾಸ್ತ್ರೀಯ ವಿವರಣೆಯನ್ನು ಆಧರಿಸಿ ವಿಮರ್ಶೆ, ಚಾರಿತ್ರಿಕ ಸಂಕ್ರಮಣವನ್ನು ಚಿತ್ರಿಸುವ ಬರವಣಿಗೆ, ಶುದ್ಧಾಂಗ ಸಾಹಿತ್ಯಕವಾದ ಅರ್ನಾಲ್ಡಿಯನ್ ಎನ್ನಬಹುದಾದ ವಿಶ್ಲೇಷಣೆ, ಸಾಹಿತ್ಯ ಕೃತಿಯ ಮೌಲ್ಯಮಾಪನ, ಪಠ್ಯವಿಮರ್ಶೆಯ ಮೂಲತತ್ವಗಳನ್ನು ಬಿಟ್ಟುಕೊಡದೆಯೇ ಕಲ್ಚರಲ್ ಸ್ಟಡೀಸ್, ವಸಾಹತೋತ್ತರವಾದ, ಸ್ತ್ರೀವಾದ, ದಲಿತ ಪರ ನಿಲುವುಗಳ ಒಳನೋಟಗಳನ್ನು ಒಳಗೊಳ್ಳುವ ಪ್ರಯತ್ನ – ಹೀಗೆ. ಇವುಗಳಲ್ಲಿ ಹೆಚ್ಚಿನವು ಲೇಖಕ – ಪಠ್ಯ ಕೇಂದ್ರಿತ ವಿಮರ್ಶೆಗಳಾಗಿವೆ. ಪಠ್ಯದೊಳಗೆ ನಿಹಿತವಾದ ಅರ್ಥವನ್ನು ಮೊದಲು ಬಯಲಾಗಿಸಿ ಅನಂತರ ಸಂಸ್ಕೃತಿಯ ಪ್ರಶ್ನೆಗಳನ್ನು ಇಲ್ಲಿ ಎತ್ತಲಾಗುತ್ತದೆ. ಹಲವು ಬಾರಿ ರಾಜಕೀಯವಾಗಿ ಸರಿ ಎನ್ನಬಹುದಾದ ನಿಲುವುಗಳ ಪ್ರತಿಪಾದನೆಯೇ ಪಠ್ಯಗಳ ಒಳಸೂಕ್ಷ್ಮಗಳ ವಿವರಗಳಿಗಿಂತ ಮೇಲುಗೈ ಸಾಧಿಸುವುದನ್ನೂ ಕಾಣಬಹುದು. ಸಾಂಸ್ಕೃತಿಕ ಪಠ್ಯಗಳನ್ನು ವಿಸ್ತಾರವೂ, ಸಂಕೀರ್ಣವೂ ಆದ ಅರ್ಥ ಜಾಲಗಳ ಸನ್ನಿವೇಶದಲ್ಲಿಟ್ಟು ನಡೆಸಲಾರ ಬರವಣಿಗೆಗಳು ಎಲ್ಲೋ ಕೆಲವು ಮಾತ್ರ. ಯಾವುದೇ ಸಾಂಸ್ಕೃತಿಕ ಪಠ್ಯವನ್ನೂ ನಾವು ಐದು ಸಾಂಸ್ಕೃತಿಕ ಕ್ರಿಯೆಗಳ ಹಿನ್ನೆಲೆಯಲ್ಲಿ ಅನ್ವೇಷಿಸಬೇಕಾಗುತ್ತದೆ ಎನ್ನುವುದು ಸಮಾಜ – ಸಂಸ್ಕೃತಿ ವಿಮರ್ಶಕರ ಮತ. ಇದನ್ನು ಅವರು ಸಾಂಸ್ಕೃತಿಕ ಸರ್ಕ್ಯೂಟ್ ಎಂದು ಗುರುತಿಸುತ್ತಾರೆ. ಮೊದಲನೆಯದಾಗಿ ಸಾಂಸ್ಕೃತಿಕ ಪಠ್ಯ ಒಂದು ಬಗೆಯ ನಿರೂಪಣೆ, ಪ್ರತಿನಿಧೀಕರಣ. ಎರಡನೆಯದಾಗಿ ಅದಕ್ಕೆ ಅದರದೇ ಆದ ಒಂದು ಗುರುತು ಅಥವಾ ಅಸ್ಮಿತೆ ಪ್ರಾಪ್ತವಾಗುತ್ತದೆ. ಮೂರನೆಯದಾಗಿ ಅದೊಂದು ಸಾಂಸ್ಕೃತಿಕ ಉತ್ಪಾದನೆ. ಅದನ್ನು ಉತ್ಪಾದಿಸಿದ ಸಾಮಾಜಿಕ ಗುಂಪಿನ ಸಾಮಾಜಿಕ ಆಶೋತ್ತರಗಳನ್ನೂ, ಜೀವನದೃಷ್ಟಿಯನ್ನು ಅದು ಮಂಡಿಸುತ್ತದೆ. ನಾಲ್ಕನೆಯದಾಗಿ ಅದನ್ನು ಓದುವ, ನೋಡುವ ಅಥವಾ ಉಪಭೋಗಿಸುವ ಓದುಗ, ಪ್ರೇಕ್ಷಕ ಅಥವಾ ಗ್ರಾಹಕರಿರುತ್ತಾರೆ. ಐದನೆಯದಾಗಿ, ಒಂದು ಕಡೆ ಸಾಂಸ್ಕೃತಿಕ ಪಠ್ಯವು ಸಾಮಾಜಿಕತೆಯಿಂದ ನಿಯಂತ್ರಿಸಲ್ಪಟ್ಟರೆ ಇನ್ನೊಂದೆಡೆ ಅದೇ ಹಲವು ಬಗೆಯ ನಿಯಂತ್ರಣಗಳನ್ನೂ ಹುಟ್ಟು ಹಾಕುತ್ತದೆ. ಆದುದರಿಂದ ಯಾವುದೇ ಸಾಂಸ್ಕೃತಿಕ ಉತ್ಪಾದನೆಯನ್ನೂ ನಾವು ಪ್ರತಿನಿಧೀಕರಣ, ಅಸ್ಮಿತೆ, ಉತ್ಪಾದನೆ, ಗ್ರಾಹಕತೆ ಮತ್ತು ರೆಗ್ಯುಲೇಷನ್ ದೃಷ್ಟಿಯಿಂದ ವಿಶ್ಲೇಷಿಸಬೇಕಾಗುತ್ತದೆ. ಸಾಹಿತ್ಯ ಪಠ್ಯಗಳಿಗೆ ಬಂದಾಗ ಅವುಗಳ ಉತ್ಪಾದನೆ, ಜೀವನದೃಷ್ಟಿ, ಓದುಗ, ವಸಾಹತುಶಾಹಿ ಒಂದು ವ್ಯವಸ್ಥಿತ ಕುತಂತ್ರ ಎಂಬ ಆಪಾದನೆಯಲ್ಲಿ, ರಾಷ್ಟ್ರೀಯತೆಯ ಅವಿಮರ್ಶ ಸ್ವೀಕಾರದಲ್ಲಿ ಕೊನೆಗೊಳ್ಳುವ ಅಪಾಯ ಇದ್ದೇ ಇದೆ. ಆದರೆ ವಸಾಹತುಶಾಹಿ ಕೇವಲ ಇಷ್ಟೆ ಅಲ್ಲ. ಅದು ಒಂದು ಸಂಕೀರ್ಣವಾದ ಚಾರಿತ್ರಿಕ ವಿದ್ಯಮಾನ. ವಸಾಹತುಶಾಹಿ ಆಧುನಿಕ ಸೂಕ್ಷ್ಮ ರೀತಿಯಲ್ಲಿ ನಮ್ಮ ಬದುಕನ್ನು ಬದಲಾಯಿಸಿದೆ. ಈ ಕೃತಿ ಅಂತಹ ಸೂಕ್ಷ್ಮ ವಿದ್ಯಮಾನದ ಮಂಡನೆ.

ವಿಜಯ್ ಅವರ ಕೃತಿಯನ್ನು ಓದಿದರೆ ಹತ್ತೊಂಬತ್ತು – ಇಪ್ಪತ್ತನೆಯ ಶತಮಾನದ ‘ಆರ್ಕೈವಲ್’ ಸಂಶೋಧನೆ ಎಷ್ಟು ಮಹತ್ವದ್ದು ಎಂಬ ಅರಿವಾಗುತ್ತದೆ. ಈ ನಿಟ್ಟಿನಲ್ಲಿ ಆಗಬೇಕಾದ ಕೆಲಸ ಅಗಾಧವಾದದ್ದು. ಈ ಕೃತಿ ಅಂತಹ ಸಂಶೋಧನೆಯನ್ನು ಪ್ರಚೋದಿಸಲಿ ಎಂದು ಹಾರೈಸುತ್ತೇನೆ.

ವಿಜಯ್ ಅವರ ಎಲ್ಲಾ ತೀರ್ಮಾನಗಳು ಪ್ರಶ್ನಾತೀತವಲ್ಲ. ಅವುಗಳನ್ನು ಮರುಚರ್ಚಿಸಬಹುದು. ಆದರೆ ಅಂತಹ ತೀರ್ಮಾನಗಳನ್ನು ತಳೆಯಲು ಅವರು ವಹಿಸಿದ ವಿದ್ವತ್ ಪರಿಶ್ರಮವನ್ನು ನಾವು ಅಲ್ಲಗಳೆಯುವಂತಿಲ್ಲ. ಹಾಗೆ ನೋಡಿದರೆ ಎಲ್ಲ ಒಳ್ಳೆಯ ಬರಹಗಳು ಹೊಸ ಪ್ರಶ್ನೆಗಳನ್ನು ಮತ್ತು ವಾಗ್ವಾದಗಳನ್ನು ಹುಟ್ಟುಹಾಕುತ್ತವೆ; ಹಾಕಬೇಕು. ಈ ನಿಟ್ಟಿನಲ್ಲಿ ‘ಹಿರಿಯರ….’ ಕರ್ನಾಟಕ/ಕನ್ನಡ ಸಂಸ್ಕೃತಿಯಲ್ಲಿ ಆಸಕ್ತರಾದ ಎಲ್ಲರಿಗೂ ಉಪಯುಕ್ತವಾದ ಕೃತಿ. ಕೇವಲ ಮಾಹಿತಿಯಲ್ಲಿ ಲೋಲುಪ್ತವಾಗದ ಮತ್ತು ಒಣ ಪಾಂಡಿತ್ಯದಲ್ಲಿ ಗೊಡ್ಡಾಗದ ಈ ಪುಸ್ತಕವನ್ನು ಓದುಗರು ಖುಷಿಯಿಂದ ಬರಮಾಡಿಕೊಳ್ಳಲೆಂದು ಹಾರೈಸುತ್ತೇನೆ.

ಹೈದರಾಬಾದ್    ಡಾ. ಶಿವರಾಮ ಪಡಿಕ್ಕಲ್