ಹಿಂದೆ ಎಷ್ಟು ಪ್ರಳಯ ಹೋಯಿತ್ತೆಂದರಿಯೆ ಮುಂದೆ ಎಷ್ಟು ಪ್ರಳಯವಾಗುದೆಂದರಿಯೆ ತನ್ನ ಸ್ಥಿತಿಯ ತಾನರಿಯದಡೆ ಅದೆ ಪ್ರಳಯವಲ್ಲಾ!  ತನ್ನ ವಚನ ತನಗೆ ಹಗೆಯಾದೊಡೆ ಅದೇ ಪ್ರಳಯವಲ್ಲಾ! ಇಂತಹ ಪ್ರಳಯ ನಿನ್ನಲುಂಟೆ ಗುಹೇಶ್ವರಾ ಅಲ್ಲಮನ ಈ ವಚನವು ಡಿ.ಆರ್. ನಾಗರಾಜ (ಇನ್ನು ಮುಂದೆ ಡಿ ಆರ್ ಎನ್) ಅವರ ಅಲ್ಲಮಪ್ರಭು ಮತ್ತು ಶೈವಪ್ರತಿಭೆ (೧೯೯೯) ಯಲ್ಲಿದೆ. ಈ ವಚನವನ್ನು ವ್ಯಾಖ್ಯಾನಿಸುತ್ತಾ ಡಿ ಆರ್ ಎನ್ ಅಲ್ಲಮಪ್ರಭುವು ಎಲ್ಲ ರೀತಿಯ ಸೃತಿಗಳ ಅದರಲ್ಲೂ ಚಾರಿತ್ರಿಕ ಸ್ಮೃತಗಳ ಕಡು ವಿರೋಧಿ ಎಂದು ಬರೆಯುತ್ತಾರೆ. ಇದು ಡಿ.ಆರ್.ಎನ್ ಅವರ ವ್ಯಾಖ್ಯಾನ. ಪ್ರಸ್ತುತ ಲೇಖನದಲ್ಲಿ ಈ ವಚನದ ಪ್ರಾಮುಖ್ಯತೆವಿರುವುದು ಗತ ಕಾಲದಲ್ಲಿ ಆಗಿ ಹೋದ ಪ್ರಳಯದ ಬಗ್ಗೆ. ಪ್ರಳಯ ಅಂದರೆ ಬರೀ ಶೂನ್ಯ ಅಥವಾ ಇಲ್ಲವಾಗುವುದು ಎಂಬರ್ಥ ಮಾತ್ರ ಅಲ್ಲ. ಅದು ಸ್ಮೃತಿಗಳ ಶೂನ್ಯತೆ ಕೂಡ ಎಂದು ಅರ್ಥೈಸಿಕೊಳ್ಳಬಹುದು. ನಮ್ಮ ಪ್ರಸ್ತುತ ಸಾಹಿತ್ಯದ ಪರಿಸ್ಥಿತಿಯನ್ನು ಮತ್ತು ಅದರ ಇತಿಹಾಸವನ್ನು ನಾವು ಅರಿವು ಮಾಡಿಕೊಳ್ಳದೇ ಹೋದಾಗ ಆಗುವ ಶ್ಯೂನತೆಯನ್ನು ಪ್ರಳಯ ಎಂದು ಸಂಕೇತಿಸಬಹುದು. ಕರ್ನಾಟಕದ ಆಧುನಿಕ ಇತಿಹಾಸದಲ್ಲಿ ಆಗಿ ಹೋದ ಸ್ಮೃತಿ ಶ್ಯೂನತೆಯ ಒಂದು ಝಲಕನ್ನು ಪ್ರಚೋದಿಸುತ್ತದೆ. ಈ ಸ್ಮೃತಿ ಶ್ಯೂನತೆಯ ಒಂದು ಝಲಕನ್ನು ಈ ವಚನವು ಪ್ರಚೋದಿಸುತ್ತದೆ. ಈ ಸ್ಮೃತಿ ಶ್ಯೂನತೆಯನ್ನು ತೊಡೆದು ಹಾಕಿ ಅಲ್ಲಮನನ್ನು ಅರ್ಥ ಮಾಡಿಕೊಳ್ಳವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ. ಅಂದರೆ ಆಧುನಿಕ ಪರಿಭಾಷೆಗೆ ಅಲ್ಲಮನ ಪ್ರವೇಶದ ಗಳಿಗೆಯನ್ನು ಅರ್ಥ ಮಾಡಿಕೊಳ್ಳವುದು ಮತ್ತು ಕಾಲಾಂತರದಲ್ಲಿ ಅವನ ಸ್ವೀಕೃತಿ ಹೇಗಾಯಿತು ಎಂದು ತಿಳಿದುಕೊಳ್ಳುವುದು ಈ ಲೇಖನದ ಉದ್ದೇಶ. ಡಿ ಆರ್ ಎನ್ ರಿಗೆ ಅಲ್ಲಮನ ವಚನವು ಇತಿಹಾಸದ ಬಗ್ಗೆ (ವಿಶೇಷವಾಗಿ ಆಧುನಿಕ ಇತಿಹಾಸ) ತೀಕ್ಷ್ಣವಾದ ಸಮಸ್ಯೆಗಳನ್ನು ವ್ಯಕ್ತಪಡಿಸುತ್ತದೆ ಎಂದು ಇಷ್ಟವಾಗುತ್ತದೆ. ಯಾವ ಆಧುನಿಕ/ವಸಾಹತಿಶಾಹಿ ಇತಿಹಾಸದ ಮಾದರಿಯ ಬಗ್ಗೆ ಡಿ ಆರ್ ಎನ್ ಶಂಕೆ ಮತ್ತು ಅಸಮಧಾನವನ್ನು ವ್ಯಕ್ತಪಡಿಸಿದ್ದರೋ, ಅದೇ ಇತಿಹಾಸದಲ್ಲಿ ಆಗಿ ಹೋದ, ಆದರೆ ಅದರ ಬಗ್ಗೆ ಹೆಚ್ಚಿನ ಅರಿವಿಲ್ಲದ ಅಲ್ಲಮನ ಚಿತ್ರಣವನ್ನು ಈ ಲೇಖನದಲ್ಲಿ ಮರುಕಳಿಸಲಾಗಿದೆ. ಇದಕ್ಕಾಗಿ ೧೮೪೦ರ ಸುಮಾರಿಗೆ ಸಿ.ಪಿ. ಬ್ರೌನ್ ಎಂಬ ಪಾಶ್ಚಾತ್ಯ ವಿದ್ವಾಂಸನು ತೆಲುಗಿನ ಪ್ರಭುಲಿಂಗಲೀಲೆಯನ್ನು ಇಂಗ್ಲೀಷ್ ಅನುವಾದದ ಮೂಲಕ ಅಲ್ಲಮನ ಬಗ್ಗೆ ಯಾವ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾನೆ ಎಂಬುದನ್ನು ತಿಳಿದುಕೊಳ್ಳುತ್ತಾ, ೭೦ ವರ್ಷಗಳ ನಂತರ ಲಿಂಗಾಯತರು ಮತ್ತು ಇತರ ಸ್ಥಳೀಯ ವಿದ್ವಾಂಸರು ಯಾವ ರೀತಿಯಲ್ಲಿ ವ್ಯಾಖ್ಯಾನ ಮಾಡಲು ಪ್ರಯತ್ನಿಸಿದರು ಎಂಬುದನ್ನು ವಿಶ್ಲೇಷಿಸುತ್ತದೆ. ಈ ವಿಶ್ಲೇಷಣೆ ವಸಾಹತುಶಾಹಿ ಸ್ಥಳೀಯರ ಮೇಲೆ “ಸಂಪೂರ್ಣ ದಿಗ್ವಿಜಯ” (ಡಿ ಆರ್ ಎನ್) ಸಾಧಿಸಿತೆ? ಎಂಬುದನ್ನು ತಿಳಿಯಲು ಅನುಕೂಲವಾಗುತ್ತದೆ. ಈ ಪ್ರಬಂಧವನ್ನು ಮೂರು ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಮೊದಲನೆಯ ಭಾಗವು ಬ್ರೌನ್‌ನ ಅನುವಾದ ಚರ್ಚೆಯನ್ನು ಒಳಗೊಂಡಿದೆ. ಎರಡನೆ ಭಾಗವು ಶುಭೋದಯ ವಿವಾದ (೧೯೧೯) ಮತ್ತು ಬ್ರೌನ್‌ನಿಗೂ ಇರುವ ಸಂಬಂಧವನ್ನು ಅವಲೋಕಿಸುತ್ತದೆ. ಮೂರನೇ ಭಾಗವು ಡಿ ಆರ್ ಎನ್ ಅವರ ತಾತ್ವಿಕ ವಿಚಾರಗಳ ಸಂಕ್ಷಿಪ್ತ ವಿಶ್ಲೇಷಣೆಯನ್ನು ಮಾಡುತ್ತದೆ.

ಭಾಗ :

ಚಿದಾನಂದಮೂರ್ತಿಯವರು ಬಸವಣ್ಣ ಮತ್ತು ಅಲ್ಲಮನ ನಡುವೆ ಇರುವ ವ್ಯತ್ಯಾಸವನ್ನು ಗುರುತಿಸುವುದರ ಮೂಲಕ ಅಲ್ಲಮನನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ (೨೦೦೪: ೫೨-೬೪). ಅವರ ಪ್ರಕಾರ ಬಸವಣ್ಣ ಸಮಾಜ ಸುಧಾರಕ; ಸಂಸ್ಥೆಯನ್ನು ಕಟ್ಟಿದವ. ಅಲ್ಲಮ ಜಂಗಮ, ಆಧ್ಯಾತ್ಯಕ ಸಾಧಕ, ನಿಷ್ಠುರ, ಅನುಭಾವಿ ಚಿಂತಕ. ಕನ್ನಡ ವಿಮರ್ಶಾ ಲೋಕದಲ್ಲಿ ಈ ತರಹದ ತೌಲನಿಕ ಚಿತ್ರಣವನ್ನು ಕೊಟ್ಟವರ ಸಂಖ್ಯೆ ಅನೇಕ. ಈ ತರಹದ ಹೋಲಿಕೆ ಅಥವಾ ತೌಲನಿಕ ಚಿತ್ರಣ ಯಾವಾಗ ಶುರುವಾಯಿತು? ಅದು ಇತ್ತೀಚಿನ ಬೆಳವಣಿಗೆಯೇ? ಇದಕ್ಕೆ ಒಂದು ಪರಂಪರೆ ಅಥವಾ ಇತಿಹಾಸವಿದೆಯೇ? ನನ್ನ ಅರಿವಿನ ಮಟ್ಟಿಗೆ ಹೇಳುವುದಾದರೆ ಈ ಹೋಲಿಕೆ ಇತ್ತೀಚಿನದಲ್ಲ. ೧೮೪೦ರಲ್ಲಿಯೇ ಬ್ರೌನ್‌ನು ಇವರಿಬ್ಬರ ನಡುವಿನ ವ್ಯತ್ಯಾಸಗಳನ್ನು ಗುರುತಿಸಿದ್ದಾನೆ. ಬ್ರೌನ್‌ನು ಆಂಧ್ರ ಪ್ರದೇಶದ ಕಡಪ ಜಿಲ್ಲೆ ಹಾಗೂ ಸುತ್ತ ಮುತ್ತ ಇರುವ ಜಂಗಮರ ಬಗ್ಗೆ ಅಧ್ಯಯನ ಮಾಡುವಾಗ ತೆಲುಗಿನ ಪ್ರಭುಲಿಂಗಲೀಲೆಯನ್ನು ಗುರುತಿಸಿ, ಅದನ್ನು ಇಂಗ್ಲೀಷ ಭಾಷೆಗೆ ಪರಿಚಯಿಸಿದ್ದ ಮೊದಲ ವಿದ್ವಾಂಸ. ತೆಲುಗಿನ ಪಿಡುಪರ್ತಿ ಸೋಮನಾಥನಿಂದ ರಚಿಸಲ್ಪಟ್ಟ ಈ ಕಾವ್ಯವನ್ನು ಜಂಗಮರ ಕೃತಿಯೆಂದು ಬ್ರೌನ್ ವಿಶೇಷವಾಗಿ ಅಭ್ಯಾಸ ಮಾಡಿದ್ದಾನೆ.[2] ಶಿವಶರಣರ ಸಾಹಿತ್ಯವನ್ನು ಓದುವಾಗ ಕರ್ನಾಟಕ-ಕೇಂದ್ರಿತ ಅಧ್ಯಯನಗಳನ್ನು ನಾವು ಹೆಚ್ಚು ಗಮನಹರಿಸುತ್ತೇವೆ. ಹೀಗಾಗಿ ಕರ್ನಾಟಕದಾಚೆಗಿನ ಶಿವಶರಣರ ಸಾಹಿತ್ಯ ಮತ್ತು ಅದರ ಇತಿಹಾಸದ ಬಗ್ಗೆ ಹೆಚ್ಚಿನ ಆಸಕ್ತಿ ಇಲ್ಲವಾಗಿದೆ. ಬ್ರೌನನನ್ನು ಚರ್ಚಿಸುವ ಉದ್ದೇಶ. ಈ ಕಂದರವನ್ನು ಕಡಿಮೆ ಮಾಡುವದಕ್ಕೊಸ್ಕರ. ಕೆಲವೊಂದು ಪ್ರಶ್ನೆಗಳನ್ನು ಹಾಕಿಕೊಂಡು ಅವುಗಳಿಗೆ ಸಮಾಧಾನವನ್ನು ಹುಡುಕುವುದರ ಮೂಲಕ ನಮ್ಮ ಚರ್ಚೆಯನ್ನು ಪ್ರಾರಂಭಿಸಬಹುದು. ಈ ಕಾವ್ಯವನ್ನು ಬ್ರೌನನು ಇಂಗ್ಲೀಷರಿಗೆ ಪರಿಚಯಿಸಿದುದರ ಉದ್ದೇಶವೇನು? ಸಂಸ್ಕೃತ ಸಾಹಿತ್ಯದತ್ತ ಒಲವಿದ್ದ ಆಗಿನ ಪಾಶ್ಚಾತ್ಯ ವಿದ್ವಾಂಸರಿಗಿಂತ ಭಿನ್ನವಾಗಿ ಬ್ರೌನನು ಜಂಗಮರ ಸಾಹಿತ್ಯದ ಮೇಲೆ ಆಸಕ್ತಿ ವಹಿಸಿದುದು ಏಕೆ? ಅನುವಾದದಲ್ಲಿ ಯಾವ ಅಂಶಗಳನ್ನು ವಿಶೇಷಿಕರಿಸಲಾಗಿದೆ? ಬ್ರೌನನ ವ್ಯಾಖ್ಯಾನಗಳನ್ನು ಕ್ರಿಶ್ಚಿಯನ್-ಜಾತ್ಯಾತಿತ ವ್ಯಾಖ್ಯಾನಗಳೆಂದು ನಾವು ಭಾವಿಸಿದರೆ, ಅವು ಲಿಂಗಾಯತರ ಸಾಹಿತ್ಯವನ್ನು ಅವಲೋಕಿಸಲು ಪ್ರಭಾವ ಬೀರಿದವೆ? ಯಾರ ಜಪ್ತಿಗೂ ಸಿಗದ ಅಲ್ಲಮ ಬ್ರೌನ್‌ನ ದೃಷ್ಟಿಯಲ್ಲಿ ಹೇಗೆ ಗೋಚರಿಸುತ್ತಾನೆ?

ಬ್ರೌನ್ ಲೀಲೆ

ಮೊಟ್ಟಮೊದಲಿಗೆ, ಜಂಗಮರ ಪುರಾಣ/ಕಾವ್ಯಗಳನ್ನು ಪರಿಚಯಿಸುತ್ತಾ ಬ್ರೌನ್ ಹೀಗೆ ಬರೆಯುತ್ತಾನೆ.

ಮೂಲತಃ ಪುರಾಣ ಮತ್ತು ಲೀಲೆಯನ್ನು ಕ್ಯಾನರೀಸ್ ಭಾಷೆಯಲ್ಲಿ ಬರೆಯಲ್ಪಟ್ಟಂತವು. ಇವುಗಳನ್ನು ತೆಲುಗು ಹಾಗೂ ತಮಿಳಿಗೆ ಭಾಷಾಂತರಿಸಲಾಗಿದೆ. ಪುರಾಣವು ವಿನೋದಕ್ಕಾಗಿ ಬರೆಯಲ್ಪಟ್ಟಂತಿರುವವು. ಆದರೆ ಲೀಲೆಯನ್ನು ಎಷ್ಟೊಂದು ಸೂಕ್ಷ್ಮವಾಗಿ ಬರೆಯಾಗಿದೆಯೆಂದರೆ ಯಾವುದೇ ಹಿಂದು ಮಹಿಳೆಯು ಅದನ್ನು ತೃಪ್ತಿಯಿಂದ ಓದುಬಹುದಾಗಿದೆ. (ಬ್ರೌನ್, ೧೯೯೬ ; ೯೬).

ಹೀಗೆ ಮುಂದುವರೆಯುತ್ತಾ,

ಇವು ಸಾಮಾನ್ಯವಾಗಿ ಬ್ರಾಹ್ಮಣರಿಂದ ಗೌರವಿಸಲ್ಪಡುವ ಪುರಾಣಗಳನ್ನು ವಿಡಂಬನೆ ಮಾಡುವ ವಿವರಗಳಿಂದ ಕೂಡಿವೆ… ಇವುಗಳಲ್ಲಿ ಅತ್ಯಂತ ತೃಪ್ತಿ ನೀಡುವ ಕಾವ್ಯವೆಂದರೆ ಪ್ರಭುಲಿಂಗಲೀಲೆ. ಇದರಲ್ಲಿ ಮಹಿಳೆಯರನ್ನು ಬಹಳ ಗೌರವಯುತವಾಗಿ ಚಿತ್ರಿಸಲಾಗಿದೆ. ಈ ಕೃತಿಯಲ್ಲಿ ಅಲ್ಲಮ ಪ್ರಭುವನ್ನು ಒಬ್ಬ ದೈವಾಂಶ ಸಂಭೂತನೆಂದು, ಕೈಲಾಸ (ಅಥವಾ ನಮ್ಮ ಒಲಂಪಸ್)ದಲ್ಲಿನ ಶಿವನ ಇಚ್ಚೆಯಂತೆ ಅವನು ಭೂಮಿಯ ಮೇಲೆ ಅವತರಿಸುತ್ತಾನೆ. ಅವನ ಹುಟ್ಟು, ಸಾವು ಅಥವಾ ಅಂತಿಮ ಜೀವನದ ಬಗ್ಗೆ ಯಾವುದೇ ಕಥೆಗಳಿಲ್ಲ. ಒಮ್ಮೆ ಅವನು ಕಾಮವನ್ನು ಕೊಂದ (ನಮ್ಮ ಆಂಟೆರೋಸ್ ತರಹ) ವ್ಯಕ್ತಿಯಾಗಿ ಗೋಚರಿಸುತ್ತಾನೆ; ಮಾಯೆಯ ದೇವತೆಯು ಅವನ ಸೌಂದರ್ಯಕ್ಕೆ ಮರುಳಾಗುತ್ತಾಳೆ; ತಕ್ಷಣ ಅವನು ಕಣ್ಮರೆಯಾಗುತ್ತಾನೆ; ಭಕ್ತರನ್ನು ಭೇಟಿಯಾಗುತ್ತಾನೆ… ಅವನು ಆಡಂಬರ ರಹಿತ, ಹಿಂಬಾಲಕರಿಲ್ಲದ ಮತ್ತು ಯಾವುದೇ ಅಧಿಕಾರವಿಲ್ಲದ ಅವತಾರಿ (ಬ್ರೌನ್. ೧೮೭೧: ೧೪೪).

ಇಲ್ಲಿ ‘ವಿನೋದಕ್ಕಾಗಿ’ ಎಂಬ ಅಂಶ ಅತಿ ಎನಿಸಿದರು ಪ್ರಾಯಶಃ ಜಂಗಮರು ಲೀಲೆಯಲ್ಲಿ ಬರುವ ವರ್ಣನೆಗಳನ್ನು ಓದಿ ಇತರರನ್ನು ಟೀಕೆ ಮಾಡುವದನ್ನು ಗಮನಿಸಿರುವ ಬ್ರೌನ್ ಅದನ್ನು ವಿನೋದರ ಸಾಹಿತ್ಯ ಕೃತಿಯಾಗಿ ನೋಡುತ್ತಾನೆ. ಬ್ರೌನನಿಗೆ ಲೂಲೆಯ ಮುಖ್ಯವಾಗುವುದು ಅನೇಕ ಕಾರಣಗಳಿಗಾಗಿ. ಮೊದಲನೆಯದು ಜಂಗಮ ಪುರಾಣ/ಲೀಲೆಗಳು ಬ್ರಾಹ್ಮಣರನ್ನು ವಿಡಂಬಿಸುವ ಅಂಶಗಳನ್ನು ಹೊಂದಿರುವದು. ಎರಡನೆಯದು ಮಹಿಳಾಪರವಾದ ಅಂಶಗಳನ್ನು ಅವು ಹೊಂದಿರುವುದು. ತನ್ನ ದೇಶದ ಹಾಗೆ ಜಂಗಮರೂ ಸಹ ಮಹಿಳೆಯರಿಗೆ ಗೌರವ ಕೊಟ್ಟಿರುವದು ಬ್ರೌನನಿಗೆ ಸಂತೋಷವನ್ನುಂಟು ಮಾಡುತ್ತದೆ. ಒಮ್ಮೆ ಒಬ್ಬ ಜಂಗಮ ನಾವು ಮಹಿಳೆಯರನ್ನು ಗೌರವಿಸುವ ರೀತಿಗೂ ಮತ್ತು ಕ್ರಿಶ್ಚಿಯನ್ನರ ರೀತಿಗೂ ಅನೇಕ ಸಾಮ್ಯತೆಗಳಿವೆ ಎಂದು ಹೇಳಿದುದನ್ನು ಬ್ರೌನ್ ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾನೆ. ಇದರ ಬಗ್ಗೆ ಬರೆಯುತ್ತಾ ಅಬ್ಬೆ ಡುಬಾಯ್ಸ್‌ನು ಜಂಗಮರ ಅಶುದ್ಧ ಮತ್ತು ಮೂಢ ಆಚಾರಗಳ ಬಗೆಗೆ ಮತ್ತು ಅವರು ಮಹಿಳೆಯರನ್ನು ನೋಡಿಕೊಳ್ಳುವ ರೀತಿಯ ಬಗ್ಗೆ ಟೀಕೆ ಮಾಡಿರುವುದನ್ನು ಬ್ರೌನ್ ಪೂರ್ವಾಗ್ರಹ ಪೀಡಿತವೆಂದು ಕರೆಯುತ್ತಾನೆ. ಹಾಗೂ ಅಬ್ಬೆ ಡುಬಾಯ್ಸನ ತಪ್ಪು ಕಲ್ಪನೆಗೆ ಬ್ರಾಹ್ಮಣ ಪಂಡಿತರೆ ಕಾರಣ ಎಂದು ವಾದಿಸುತ್ತಾನೆ. ಮೂರನೆಯ ಅಂಶ ಲೀಲೆಯ ಸರಳತೆಗೆ ಸಂಬಂಧಿಸಿದ್ದು ಯಾವುದೇ ಒಬ್ಬ ಓದು/ಬರಹ ಬಲ್ಲ ವ್ಯಕ್ತಿಯು ಲೀಲೆಯನ್ನು ಓದಿ ಅರ್ಥ ಮಾಡಿಕೊಳ್ಳಬಹುದೆಂದು ಬ್ರೌನನು ನಂಬಿದ್ದನು. ಕ್ಷಿಷ್ಟಕರವಾದ ಬ್ರಾಹ್ಮಣ ಸಾಹಿತ್ಯಕ್ಕಿಂತ ದ್ವಿಪದಿಯಲ್ಲಿ ಬರೆಯಲ್ಪಟ್ಟ ಜಂಗಮರ ಸಾಹಿತ್ಯವು ಸರಳ ಮತ್ತು ಸುಂದರವಾಗಿರುವಂತದ್ದು ಎಂದು ಬ್ರೌನನು ನಿರೂಪಿಸುತ್ತಾನೆ. ಜಂಗಮ ಸಾಹಿತ್ಯ ಮತ್ತು ಯೂರೋಪಿನ / ಕ್ರಿಶ್ಚಿಯನ್ ಸಾಹಿತ್ಯಗಳ ನಡುವೆ ಇರುವ ಹೋಲಿಕೆಗಳು ಅವನ ಲೇಖಗಳಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತವೆ, ಆದರೆ ನಾವಿಲ್ಲಿ ಒಂದು ಅಂಶವನ್ನು ಗಮನಿಸಬೇಕು. ಅವನ ಹೋಲಿಕೆಗಳು ಪಾಶ್ಚಾತ್ಯ/ಕ್ರಿಶ್ಚಿಯನ್ನರ ಪುರಾತನ ಸಾಹಿತ್ಯಕ್ಕೆ ಮಾತ್ರ ಸಂಬಂಧಿಸಿದೆ. ಅವನ ಹೋಲಿಕೆಗಳು: ಪಾಶ್ಚಾತ್ಯ/ಕ್ರಿಶ್ಚಿಯನ್ನರ ಪುರಾತನ ಸಾಹಿತ್ಯಕ್ಕೆ ಮಾತ್ರ ಸಂಬಂಧಿಸಿವೆ. ಯೂರೋಪಿನ ಆಧುನಿಕ ಸಾಹಿತ್ಯಕ್ಕೆ ಜಂಗಮ ಸಾಹಿತ್ಯವನ್ನು ಹೋಲಿಸುವುದಿಲ್ಲ. ಏಕೆಂದರೆ ಆಧುನಿಕ ಯೂರೋಪ್ ಸಾಹಿತ್ಯವು ಪಕ್ವಗೊಂಡ, ತನ್ನ ಜಡತ್ವನ್ನು ಕಳಚಿಹಾಕಿ ಕೊಂಡಿರುವಂತದ್ದು. ಪ್ರಿಂಟ್ ತಾಂತ್ರಿಕತೆಯಿಂದ ತನ್ನ ಸಾಹಿತ್ಯವನ್ನು ಶ್ರೀಮಂತಗೊಳಿಸಿ ಸಂಸ್ಕರಣವನ್ನು ಸಾಧಿಸಿರುವಂತ ಪ್ರಗತಿಪರ ಸಂಸ್ಕೃತಿ ಅದು. ಯೂರೋಪಿಯನ್ನರ ಆಧುನಿಕ ಕಾಲ ನಿರ್ಣಯ ಮತ್ತು ನವೀನ ಇತಿಹಾಸದ ಪ್ರಜ್ಞೆಯೊಳಗೆ ಬ್ರೌನನು ಪೌರುತ್ವ ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಅರ್ಥ ಮಾಡಿಕೊಳ್ಳುವದರಿಂದ ಅವು ಪಕ್ವತೆ ಮತ್ತು ಆಧುನೀಕರಣಕ್ಕೆ ಇನ್ನೂ ಕಾಯುತ್ತಿರುವ ಸಾಹಿತ್ಯಗಳಾಗಿ ಗೋಚರಿಸುತ್ತವೆ. ಪೌರಾತ್ಯ ಸಾಹಿತ್ಯ-ಸಂಸ್ಕೃತಿಗಳು ಯೂರೋಪಿನ ಪುರಾತನ ಸಾಹಿತ್ಯವನ್ನು (ಅದರ ಎಲ್ಲಾ ಪ್ರಗತಿಪರತೆ, ಸೌಂದರ್ಯ ಮತ್ತು ಉತ್ಕೇಷ್ಟತೆಗಳನ್ನು ಒಳಗೊಂಡು) ಹೋಲುತ್ತದೆಯೆ ಹೊರತು, ಆಧುನಿಕ ಸಾಹಿತ್ಯದ ಸನಿಹಕ್ಕೆ ಇರಲು ಸಾಧ್ಯವಿಲ್ಲ. ಅದು ಈಗ ನಿಂತ ನೀರಾಗಿದ್ದು. ಸ್ಥಾವರಕ್ಕೊಳಗಾಗಿದೆ. ಅದರಲ್ಲಿ ಪರಾತನ ಸಾಹಿತ್ಯದ ಸೌಂದರ್ಯ ಮತ್ತು ಉದಾತ್ತ ವಿಚಾರಗಳಿದ್ದರೂ, ಅವು ಇನ್ನು ಸಂಸ್ಕರಣಕ್ಕೆ ಒಳಗಾದದ, ಕಚ್ಚಾ ರೂಪದಲ್ಲಿರುವ ಸಾಹಿತ್ಯ ಮತ್ತು ಭಾಷೆ. ಅದನ್ನು ಆಧುನಿಕಗೊಳಿಸಿ, ಪ್ರಸ್ತುತ ಓದುಗರಿಗೆ ಪರಿಚಯಿಸುವ ಅವಶ್ಯಕತೆಯಿದೆಂದು ಬ್ರೌನ್‌ನು ಪ್ರತಿಪಾದಿಸದನು. ಒಟ್ಟಾರೆಯಾಗಿ ಹೇಳುವದಾದರೆ ಭಾರತೀಯ ಭಾಷೆ ಮತ್ತು ಸಾಹಿತ್ಯಗಳನ್ನು ಆಧುನಿಕಗೊಳಿಸಿ, ಅದಕ್ಕೆ ಭವಿಷ್ಯವನ್ನು ರೂಪಿಸುವ ಯೋಜನೆ ಇದಾಗಿತ್ತು. ಬ್ರಿಟೀಷ ಸರ್ಕಾರದ ಅಡಿಯಲ್ಲಿ ಈಗಾಗಲೇ ಈ ಕಾರ್ಯ ಶುರುವಾಗಿರುವುವದನ್ನು ಬ್ರೌನನು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾನೆ.

ಬ್ರೌನನಿಗೆ ಪುರಾತನ ಕೃತಿಗಳು ಇತಿಹಾಸದಲ್ಲಿ ಯಾವುದೇ ಬದಲಾವಣೆಗಳಿಲ್ಲವೇ ಉಳಿದುಕೊಂಡಿರುವ ಸಾಹಿತ್ಯವಲ್ಲ. ಕಾಲಾಂತರದಲ್ಲಿ ಬದಲಾವಣೆಗೊಳಗಾದ ಮತ್ತು ಇನ್ನೂ ಚಾಲನೆಯಲ್ಲಿರುವ ಸಾಹಿತ್ಯ. ಚಾಸರ್ ಮತ್ತು ಡನ್ ಕವನಗಳನ್ನು ಡ್ರೈಡನ್ ಹಾಗೂ ಪೋಪರು ಹೇಗೆ ಪರಿಷ್ಕರಿಸಿದರೋ ಹಾಗೆ ತೆಲುಗಿನ ಆಧುನಿಕ ಕವಿಗಳು (ಅಂದರೆ ಪಿಡುವರ್ತಿ ಸೋಮಯ್ಯನಂತವರು) ಪುರಾತನ ಶೈಲಿಯಲ್ಲಿ ಬರೆಯಲ್ಪಟ್ಟ ಪುರಾಣ (ಅಂದರೆ ಬಸವ ಪುರಾಣಮು) ಹಾಗೂ ಚರಿತ್ರೆ (ಪಂಡಿತ ಆರಾಧ್ಯ ಚರಿತ್ರೆ)ಗಳನ್ನು ಪರಿಷ್ಕರಿಸಿ, ಅವುಗಳ ಅರಸಿಕತೆ ಮತ್ತು ಅವಿನಯತೆಯನ್ನು ತೊಡೆದು ಹಾಕಿ, ಅತಿ ಸುಂದರವಾದ ಆಧುನಿಕ ಶೈಲಿಯಲ್ಲಿ (ಯೂರೋಪಿನ ಆಧುನಿಕ ಶೈಲಿಯಲ್ಲಿ ಅಲ್ಲ) ಬರೆಯಲಾಗಿದೆಯೆಂದು ಬ್ರೌನನು ಭಾವಿಸಿದನು, ಸುಮಾರು ೧೬೦೦ ಶತಮಾನದಲ್ಲಿ ಪಿಡುಪರ್ತಿ ಸೋಮನಾಥನು ಪ್ರಭುಲಿಂಗಲೀಲೆಯನ್ನು ಬರೆದನು. ಅದು ಚಾಮರಸನ ಕನ್ನಡ ಪ್ರಭುಲಿಂಗಲೀಲೆಯ ಅವತರಣಿಕೆಯಾಗಿದ್ದು, ಆತನ ದೊಡ್ಡಪ್ಪನಾದ ಬಸವಯ್ಯನ ದೀಕ್ಷಾ ಭೋಧ, ಪಿಲ್ಲ ನಾಯನಾರ್ ಕಥ ಮತ್ತು ಬ್ರಹ್ಮೋತ್ತರ ಖಡಂ ಕೃತಿಗಳಿಗಿಂತ ಶ್ರೇಷ್ಠವಾದವುಗಳು ಎಂದು ಬ್ರೌನನು ಕಂಡುಕೊಂಡನು. ತೆಲುಗು ಭಾಷೆ ಮತ್ತು ಸಾಹಿತ್ಯದ ಅಭ್ಯಾಸವನ್ನು ಶುರು ಮಾಡುವವರಿಗೆ ಲೀಲೆಯು ಅತ್ಯುತ್ತಮವಾದ, ಮುಗ್ಧತೆಯಿಂದ ಕೂಡಿದ ಮತ್ತು ಸರಳವಾದ ಕೃತಿಯೆಂದು ಬ್ರೌನನು ಕೊಂಡಾಡುತ್ತಾನೆ.

ಹೋಲಿಕೆಗಳು ಅಥವಾ ವ್ಯತ್ಯಾಸಗಳು ಬರೀ ಜಂಗಮ ಮತ್ತು ಕ್ರಿಶ್ಚಿಯನ್ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಜಂಗಮ ಸಾಹಿತ್ಯದ ಆಂತರಿಕ ಅಂಶಗಳಿಗೂ ಸಂಬಂಧಿಸಿವೆ. ಉದಾಹರಣೆಗೆ ಪುರಾಣ-ಲೀಲೆ ಮತ್ತು ಬಸವಣ್ಣ-ಅಲ್ಲಮರ ನಡುವಿನ ವ್ಯತ್ಯಾಸಗಳನ್ನು ಬ್ರೌನನು ನೋಡುವ ರೀತಿ ಹೀಗಿದೆ,

ಪುರಾಣವು ಭಕ್ತಿ ಕಾಂಡ; ಪ್ರಪಂಚದ ಪ್ರತಿಯೊಂದನ್ನು ನಂಬಿಕೆಯ ಫಲವೆಂದು ಘೋಷಿಸುತ್ತದೆ. ಲೀಲೆಯ ಜ್ಞಾನ ಕಾಂಡ; ಭವಿಷ್ಯದ ಸಂತೋಷವನ್ನು ವಿವೇಕದಿಂದ ಪಡೆಯಬಹುದೆಂದು ತಿಳಿಸುತ್ತದೆ (ಬ್ರೌನ್, ೧೯೯೬:೯೮). ಬಸವ ಒಬ್ಬ ಆಡಳಿತಗಾರ; ರಾಜನ ಮಂತ್ರಿಲ ಕುಟುಂಬದ ಮುಖ್ಯಸ್ಥ; ಜಂಗಮರನ್ನು ಬೆಳೆಸಿ, ಜೈನರನ್ನು ಸೋಲಿಸುವುದಕ್ಕಾಗಿ ಪಣ ತೊಟ್ಟಂತವನು. ಆದರೆ ಅಲ್ಲಮ ಶಾಂತ ಚಿತ್ತ; ದಯಾಳು, ದೈನ್ಯ ಮತ್ತು ಸೌಮ್ಯ ಸ್ವಭಾವದವನು. ಅನೇಕ ಸುಂದರಿಯರು ಅವನನ್ನು ಚಿತ್ತಾಕರ್ಷಕ ಮಾಡಲು ಪ್ರಯತ್ನಿಸಿದರೂ, ಅವನು ಮದುವೆಯಾಗದೆ ಉಳಿದ. ಅವನ ದೇಹ ಅಭ್ಯೇದವಾದುದು (೧೮೭೧: ೧೪೫).

ಮುಂದುವರೆಯುತ್ತಾ, ಪ್ರಭುಲಿಂಗಲೀಲೆಯು ತೆಲುಗು ಕವಿ ರಂಗನಾಥನ ದ್ವಿಪದ ರಾಮಾಯಣಕ್ಕಿಂತ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ ಎಂದು ತೋರಿಸುತ್ತಾನೆ. ಲೇಡಿ ಆಫ್ ದಿ ಲೇಕ್ ಗೆ[3] ಹೋಲಿಸುತ್ತಾ ಲೀಲೆಯು ಕ್ಲಿಷ್ಟಕರವಾದ ಶೈಲಿಯಲ್ಲಿಲ್ಲ ಎಂದು ತೋರಿಸುತ್ತಾನೆ. ಥಿಯೊಕ್ರಿಟಿಕ್ಸ್ ನ[4] ಕೃತಿಗಳಲ್ಲಿ ಕಾಣುವ ಮಾಧುರ್ಯ ಹಾಗೂ ಪರಿಶುದ್ಧತೆಯನ್ನು ಈ ಕೃತಿಯಲ್ಲಿ ಕಾಣಬಹುದೆಂದು ಅವನ ಭಾವನೆ. ಲೀಲೆಯನ್ನು ಯಥಾವತ್ತಾಗಿ ಇಂಗ್ಲೀಷ್‌ಗೆ ಅನುವಾದ ಮಾಡಲು ಸಾಧ್ಯವಿಲ್ಲವೆಂದು ಗೊತ್ತಿದ್ದರೂ, ಅದರ ಮಾಧುರ್ಯ ಮತ್ತು ಪರಿಶುದ್ಧತೆಯನ್ನು ಇಂಗ್ಲೀಷನಲ್ಲಿ ತರಲು ಶ್ರಮಿಸಿದ್ದಾನೆ. ಅವನ ಅನುವಾದದ ಒಂದು ತುಣುಕನ್ನು ಹೀಗೆ ಗುರುತಿಸಬಹುದು,

To narrate its splendor is beyond the powers of Bramha!  Its groves are filled with blossoming mango trees and areca trees; with budding lemon trees and plantains; with the fruiting artocarpus (jaca) and citron. Also the charming asoca and (malura) oak trees with the (sarja) pine tree and the date; the golden champaca: the (vacula) mimusops and (bhunja) the flowering birth: these and thousands more filled the fragrant groves. These were tenanted by the linnet, the parrot, and the redbreast in endless flocks: they sported around, singing merrily. The fragrant Ketaki, the leander, the laurel, the (pagada) coral and giant jessamine with the spherical species of jessamine and mountain Roselle, and langer curuvinda and the (parijata) amaranath; the various jessamines called vansantica and viravadi jaji and the smaller jaji and the (chamanti) orange-marigold for at all seasons these flowers call upon the devout to worship their God (ಬ್ರೌನ್, ೧೯೯೧: ೩೯-೪೦).

ಲೀಲೆಯಲ್ಲಿ ಬರುವ ಚಾರಿತ್ರಿಕ ಮತ್ತು ಪೌರಾನಿಕ ಉಲ್ಲೇಖಗಳನ್ನು ಯಥಾವತ್ತಾಗಿ ಅನುವಾದ ಮಾಡಲು ಸಾದ್ಯವಿಲ್ಲವೆಂಬ ಅಭಿಪ್ರಾಯ ಮೇಲಿನ ಪಠ್ಯದಿಂದ ತಿಳಿಯುತ್ತದೆ. ಆದ್ದರಿಂದ ಅವನು ಸ್ಥಳೀಯ ಗಿಡ-ಮರ-ಹೂ-ಬಳ್ಳಿಗಳ ಹೆಸರನ್ನು ತನ್ನ ದೇಶದಲ್ಲಿ ಸಿಗುವ ಹೂ-ಬಳ್ಳಿಗಳಿಗೆ ಸಂವಾದಿಯಾಗಿ ಹೋಲಿಸಿ ಅನುವಾದ ಮಾಡಿದ್ದಾನೆ. ಸ್ಥಳೀಯರಿಗೂ ಸಹ ಅವನ ಅನುವಾದವು ಕ್ಲಿಷ್ಟಕರವಾಗಿ ಕಾಣುತ್ತದೆ. ಏಕೆಂದರೆ ಇಂಗ್ಲೀಷ್ ವಿವರಗಳೂ ಸಹ ಸ್ಥಳೀಯರಿಗೆ ಅಪರಿಚಿತವೆ!  ಹಾಗಂತ ಮೂಲ ಲೀಲೆಯ ಸ್ಥಳೀಯರಿಗೆ ಸುಲಭವಾಗಿ ಅರ್ಥವಾಗುತ್ತದೆಯೆಂದು ಅಲ್ಲ. ಇಂಗ್ಲೀಷರಿಗೆ ಲೀಲೆಯು ಎಷ್ಟು ಕಷ್ಟಕರವಾಗಿ ಕಾಣಿಸುತ್ತದೆಯೋ, ಸ್ಥಳೀಯರಿಗೂ ಸಹ ಅಷ್ಟೇ ಕ್ಲಿಷ್ಟಕರವಾಗಿದೆ ಎಂದು ಬ್ರೌನನು ವಾದಿಸುತ್ತಾನೆ.

ಸ್ಥಳೀಯ ವಿದ್ವಾಂಸರೂ ಕೂಡ ಪುರಾಣಗಳಲ್ಲಿ ಕಾಣಸಿಗುವ ಶಬ್ದಕೋಶಗಳು. ಚಾರಿತ್ರಿಕ ಮತ್ತು ಪೌರಾಣಿಕ ಉಲ್ಲೇಖಗಳನ್ನು ಅರ್ಥ ಮಾಡಿಕೊಳ್ಳುವದಕ್ಕೆ ಸಾಕಷ್ಟು ಪರಿಶ್ರಮ ಪಡಬೇಕಾಗುತ್ತದೆ (ಬ್ರೌನ್, ೧೯೯೧: ೪೪).

ಒಮ್ಮೆ ಸರಳ ಎಂದು ಹೇಳಿ, ನಂತರ ಲೀಲೆಯನ್ನು ಅರ್ಥಮಾಡಿಕೊಳ್ಳಲು ಸಾಕಷ್ಟು ಪರಿಶ್ರಮ ಪಡಬೇಕಾಗುತ್ತದೆನ್ನುವ ವಾಕ್ಯಗಳಲ್ಲಿ ಬ್ರೌನನ ವೈರುಧ್ಯವನ್ನು ಕಾಣಬಹುದು. ಈ ಅನುವಾದದಲ್ಲಿ ಬ್ರೌನನು ಪುರಾತನ ಕಾವ್ಯದ ಒಳಹನ್ನು ಬಲ್ಲ ಕವಿಯಾಗಿ ಗೋಚರಿಸುತ್ತಾನೆ. ಅನುವಾದವನ್ನು ಆದಷ್ಟು ಮಟ್ಟಿಗೆ ಪುರಾತನ ಇಂಗ್ಲೀಷಿನ ಶೈಲಿಯಲ್ಲಿ ಬರೆಯಲು ಪ್ರಯತ್ನಿಸುತ್ತಾನೆ. Thou, thy ಮತ್ತು “her you sent to earth”, “surely thou wentest thyself in the guise of that thou succeeded, and I have lost” (೧೯೯೧: ೪೩) ಎಂಬ ಪದ/ವಾಕ್ಯಗಳು ಈ ಅಂಶಗಳನ್ನು ಪುಷ್ಟೀಕರಿಸುತ್ತವೆ.

ಈ ಸಂದರ್ಭದಲ್ಲಿ ವಿನಯ್ ಧಾರವಾಡಕರ ಅವರು ಎ.ಕೆ. ರಾಮಾನುಜನ್ ಅವರ ಭಾಷಾಂತರ ಶೈಲಿಯ ಬಗ್ಗೆ ವಾದಿಸಿರುವ ಅಂಶಗಳು ನೆನಪಿಗೆ ಬರುತ್ತವೆ.[5] ತೇಜಸ್ವಿನಿ ನಿರಂಜನ ಅವರು ಪದ್ಧತಿಯನ್ನು ಟೀಕೆ ಮಾಡಿದಕ್ಕೆ ಪ್ರತಿಕ್ರಿಯೆಯಾಗಿ ಧಾರವಾಡಕರರು ರಾಮಾನುಜರನ್ನು ಸಮರ್ಥಿಸಿಕೊಳ್ಳುತ್ತಾರೆ. ರಾಮಾನುಜನ್ ವೀರಶೈವ ಸಾಹಿತ್ಯವನ್ನು ಕ್ರಿಶ್ಚಿಯನ್ ಪ್ರೊಟೆಸ್ಟೆಂಟ್ ಧರ್ಮದ ಪರಿಧಿಯೊಳಗೆ ಅರ್ಥೈಸುವದರಿಂದ ಅದರ ವಿಶಾಲತೆ ಮತ್ತು ಅರ್ಥ ಸೂಕ್ಷ್ಮತೆಗಳನ್ನು ಸಂಕುಚಿತಗೊಳಿಸಿದ್ದಾರೆ ಎಂದು ತೇಜಸ್ವಿನಿಯವರು ತಮ್ಮ ಕೃತಿಯನ್ನು ಆಪಾದಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಧಾರವಾಡಕರರು ರಾಮಾನುಜನ್ ಅವರ ಭಾಷಾಂತರವು ವೀರಶೈವ ಸಾಹಿತ್ಯವನ್ನು ಸಂಕುಚಿತಗೊಳಿಸುವ ಬದಲಾಗಿ, ಅದು ಕ್ರಿಶ್ಚಿಯನ್ ಪ್ರೊಟೆಸ್ಟೆಂಟ್ ಧರ್ಮದ ಜೊತೆಗೆ ಎಷ್ಟರಮಟ್ಟಿಗೆ ಹೋಲಿಕೆಗಳನ್ನು ಹೊಂದಿದೆ ಎಂದು ತೋರಿಸುತ್ತಾ, ಐರೋಪ್ಯ ಓದುಗರನ್ನು ೧೨ನೇ ಶತಮಾನದೆಡೆಗೆ ಕೊಂಡೊಯ್ಯುವ ಪ್ರಯತ್ನ ಮಾಡಿದ್ದಾರೆಂದು ಪ್ರತಿವಾದಿಸುತ್ತಾರೆ. ಅಂದರೆ ಐರೋಪ್ಯ ಓದುಗರಿಗೆ ವೀರಶೈವ ಸಾಹಿತ್ಯವನ್ನು ಪರಿಚಯಿಸುವ ಮತ್ತು ಅವರನ್ನು ಅದರೆಡೆಗೆ ಕರೆದುಕೊಂಡು ಹೋಗುವ ಪ್ರಯತ್ನವನ್ನು ರಾಮಾನುಜನ್ ಮಾಡಿದ್ದಾರೆಂದು ಅವರ ಅರ್ಥ. ಬ್ರೌನನ ವಿಷಯದಲ್ಲೂ ಸಹ ಧಾರವಾಡಕರರ ಸಮರ್ಥನೆಗೆ ಸಹಮತವನ್ನು ವ್ಯಕ್ತಪಡಿಸಬಹುದು. ತನ್ನ ಅನುವಾದದ ಮೂಲಕ ಬ್ರೌನನು ಲೀಲೆ ಮತ್ತು ಪುರಾತನ ಯೂರೋಪ್ ಸಾಹಿತ್ಯಗಳ ನಡುವಿನ ಅಸಂಖ್ಯಾತ ಹೋಲಿಕೆಗಳು ಮತ್ತು ಸಾಮ್ಯತೆಗಳನ್ನು ತೋರಿಸುತ್ತಾ ಲೀಲೆಯಲ್ಲಿ ಕಾಣಸಿಗುವ ಅನೇಕ ಶಬ್ದ, ಪದ ಮತ್ತು ಅರ್ಥಗಳನ್ನು ಇಂಗ್ಲೀಷಿಗೆ ಪರಿಚಯಿಸುತ್ತಾನೆ. ಇವುಗಳ ಜೊತೆಗೆ ಅರ್ಥ ವಿವರಗಳನ್ನು ಸಹ ಕೊಟ್ಟಿದ್ದಾನೆ. ಪ್ರಾಯಶಃ ಜಂಗಮರನ್ನು ಪ್ರೊಟೆಸ್ಟಂಡ್ ಕ್ರಿಶ್ಚಿಯಾನಿಟಿಗೆ ಹೋಲಿಸಿದ ಪ್ರಥಮ ವಿದ್ವಾಂಸ ಬ್ರೌನ್ ಆಗಿದ್ದಾನೆ ಎಂದು ನನ್ನ ನಂಬಿಕೆ. ಇಷ್ಟೊಂದು ಉದಾರವಾದಿ ನೆಲೆಯಿಂದ ಜಂಗಮ ಸಾಹಿತ್ಯವನ್ನು ಅರ್ಥ ಮಾಡಿಕೊಂಡರೂ, ಬ್ರೌನ್ ತನ್ನ ಕ್ರಿಶ್ಚಿಯನ್ ನಂಬಿಕೆಯನ್ನು ಬಿಟ್ಟುಕೊಡುವುದಿಲ್ಲ. ಪ್ರೊಟೆಸ್ಟಂಟ್ ಕ್ರಿಶ್ಚಿಯಾನಿಟಿಗಿಂತ ಮೂರು ಶತಮಾನಗಳ ಹಿಂದೆ ಆಗಿರಬಹುದಾದ ಶಿವ ಶರಣರ ಬ್ರಾಹ್ಮಣ ವಿರೋಧಿ ಚಳುವಳಿಯ ಬಗ್ಗೆ ಬರೆಯುತ್ತಾ ಪ್ರಾಯಶಃ ಬಸವಣ್ಣನ ಬಗ್ಗೆ ಇರುವ ಕಥನಗಳು ಪಶ್ಚಿಮದಲ್ಲಿದ್ದ ಸಿರಿಯನ್ ಕ್ರಿಶ್ಚಿಯನ್ ರ (ಪ್ರಾಯಶಃ ಕೇರಳ ಮತ್ತು ಕರಾವಳಿ ಕರ್ನಾಟಕದಲ್ಲಿರುವವರನ್ನು ಕುರಿತು ಇರಬಹುದು) ಮೂಲದಿಂದ ಪ್ರಭಾವಿತ ನಾಗಿರಬಹುದೆಂದು ಕ್ರಿಶ್ಚಿಯನ್ ಧರ್ಮ ಮತ್ತು ಚರ್ಚುಗಳ ಬಗ್ಗೆ ಹೆಮ್ಮೆಪಟ್ಟುಕೊಳ್ಳುತ್ತಾನೆ. ಸ್ವತಃ ಕ್ರಿಶ್ಚಿಯನ್ ಧರ್ಮದ ತೀವ್ರ ಹಿಂಬಾಲಕನಾಗಿದ್ದ ಬ್ರೌನನಿಗೆ ಈ ತರಹದ ವಿಚಾರಗಳು ಸಹಜ. ಆಗೊಮ್ಮೆ-ಈಗೊಮ್ಮೆ ಜಂಗಮರನ್ನು ಮುಸ್ಲಿಂ ಧರ್ಮಕ್ಕೂ ಹೋಲಿಸುತ್ತಾನೆ. ಆದರೆ ಅದು ನಗಣ್ಯ ಮತ್ತು ಮುಸ್ಲಿಂ ಧರ್ಮದಲ್ಲಿನ ಹುಳುಕುಗಳನ್ನು ತೋರಿಸುವುದಕ್ಕೆ ಮಾತ್ರ ಈ ಹೋಲಿಕೆಗಳು ಸೀಮಿತವಾಗಿವೆ.

ನೈತಿಕ ಮತ್ತು ತಾತ್ವಿಕ ವಿಷಯದಲ್ಲಿಯಂತೂ ಲೀಲೆಯ ಬ್ರಾಹ್ಮಣರ ಪಾವಿತ್ರ‍್ಯಕ್ಕಿಂತ ಶ್ರೇಷ್ಠ ಮತ್ತು ಉತ್ತಮಾಂಶಗಳಿಂದ ಕೂಡಿರುವಂತದ್ದೆಂದು ಬ್ರೌನನು ಹೆಮ್ಮೆಯಿಂದ ಹೆಮ್ಮೆಯಿಂದ ಬರೆಯುತ್ತಾನೆ. ಅಲ್ಲಮನ ಸಾತ್ವಿಕತೆ, (ಬ್ರೌನನ ಮಾತಿನಲ್ಲಿ ಹೇಳುವದಾದರೆ) ವಿನಮ್ರತೆ ಮತ್ತು ಧನ್ಯತೆಯ ಸಂಕೇತವೆಂದು  ತನ್ನ ಅನುವಾದದಲ್ಲಿ ಬಿಂಬಿಸಿದ್ದಾನೆ. ಶಿವನ ಸಾತ್ವಿಕತೆಯ ಪ್ರತಿರೂಪವೆ ಅಲ್ಲಮನೆಂದು ಒತ್ತಿ ಹೇಳಿದ್ದಾನೆ. ಬ್ರಾ‘ಹ್ಮಣ ಪಂಡಿತರು ಜಂಗಮರನ್ನು ತಂತ್ರ, ಮಾಟ-ಮಂತ್ರಗಳಿಂದ ಕೂಡಿದ ಜನರೆಂದು, ಅವರ ಜೀವನ ಶೈಲಿ ಬರ್ಬರತೆಗೆ ಹತ್ತಿರವೆಂದು ತೆಗೆಳಿದುದಕ್ಕೆ ಬ್ರೌನನು ಪ್ರತಿಕ್ರಿಯಿಸಿದ ಪರಿ ಈ ಅನುವಾದ. ಲೀಲೆಯನ್ನು ಬಸವ ಪುರಾಣಕ್ಕಿಂತ ಅತ್ಯುತ್ತಮವಾದುದೆಂದು ಬ್ರೌನ್ ನಂಬಿದ್ದಾನೆ. ಏಕೆಂದರೆ ಬಸವ ಪುರಾಣದಲ್ಲಿ ಬರುವ ಶಿವನಲೀಲೆ ಮತ್ತು ಭಕ್ತರ ಅಡಿಯಾಳಾಗಿ ಮಾರ್ಪಾಡುವ ಶಿವನ ಶಕ್ತಿಹೀನತೆ ಲೀಲೆಯಲ್ಲಿ ಇಲ್ಲದಿರುವುದು ಅದರ ಸೌಂದರ್ಯಕ್ಕೆ ಕಿರೀಟವಿಟ್ಟಂತೆಯೇ ಬ್ರೌನ್ ಬಣ್ಣಿಸುತ್ತಾನೆ. ತಾತ್ವಿಕ ವಿಷಯದಲ್ಲಿ ಲೀಲೆಯ ಶಂಕರಾಚಾರ್ಯನ ರೀತಿಯಲ್ಲಿ ಅದ್ವೈತವನ್ನು ಪ್ರತಿಪಾದಿಸಿದರೆ (ಲೀಲೆಯ ಕಡೆಯ ಭಾಗ), ಬಸವ ಪುರಾಣದಲ್ಲಿ ಈ ತತ್ವವನ್ನು ನಾವು ಕಾಣುವುದಿಲ್ಲವೆಂದು ಬ್ರೌನನು ತೋರಿಸುತ್ತಾನೆ.

ಈ ಅನುವಾದದ ಜೊತೆಗೆ ಅಲ್ಲಮ ಹೆಸರಿನ ಉತ್ಪತ್ತಿಯ ಬಗ್ಗೆ ಬ್ರೌನನಿಗೆ ವಿಶೇಷ ಕಾಳಜಿ. ಅಲ್ಲಮ ಹೆಸರಿನ ಮೂಲವನ್ನು ಅವನು ಇಸ್ಲಾಂ ಧರ್ಮದಲ್ಲಿ ಹುಡುಕುವ ಪ್ರಯತ್ನವನ್ನು ಮಾಡುತ್ತಾನೆ. ಪ್ರಾಯಶಃ ಮುಂದೆ ಅಲ್ಲಮನ ಬಗ್ಗೆ ಉಂಟಾದ ವಾದ-ವಿವಾದಗಳಿಗೆ ಬ್ರೌನನ ಕಾಣಿಕೆ ಗಮನೀಯವಾದುದು.

ನನಗೆ ಹೊಳೆಯುವ ಹಾಗೆ ಈ ಹೆಸರನ್ನು ಬಸವನು ಕುರಾನ್‌ನ ಎರಡನೇ ಸುರದಿಂದ ಶುರುವಾಗುವ ಅ-ಲ-ಮ ಎಂಬ ಮೂರು ರಹಸ್ಯಮಯ ಸ್ವರಗಳಿಂದ ಆರಿಸಿದ್ದಾನೆ (೧೮೭೧: ೧೪೫).

ಸಿರಿಯನ್ ಮತ್ತು ಅರೇಬಿಕ್ ಹೆಸರಿಗೆ ಹೊಂದಿಕೆಯಾಗುವ ಈ ಹೆಸರು ಜಂಗಮರ ದೈವ. ಆ ಹೆಸರನ್ನು ಸಮರ್ಥಿಸಿ ಕೊಳ್ಳುವದಕ್ಕೋಸ್ಕರ ಸಂಸ್ಕೃತ, ತೆಲುಗು ಮತ್ತು ಕ್ಯಾನರೀಸ್ ಕವಿಗಳು ಅನೇಕ ಮೂಲಗಳನ್ನು ತೋರಿಸುವ ಪ್ರಾಯಾಸದ ಕೆಲಸವನ್ನು ಮಾಡಿದ್ದಾರೆ. ನನಗೆ ಸಹಾಯಕರಾಗಿದ್ದ ಸ್ಥಳೀಯ ಪಂಡಿತರೂ ಸಹ ಶಬ್ದನಿಶ್ಪತ್ತಿಯ ಬಗ್ಗೆ ಕೊಟ್ಟಿರುವ ರುಜುವಾತುಗಳು ಪ್ರಾಯಸದಾಯಕವು ಮತ್ತು ಅಶಕ್ಯವೆಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಈ ಹೆಸರು ಅಲ್ಲಾನಿಂದ ಉತ್ಪತ್ತಿಯಾಗಿರ ಬಹುದೆಂಬ ನನ್ನ ನಂಬಿಕೆಯನ್ನು ಅವರು ಒಪ್ಪಿಕೊಳ್ಳಲು ತಯಾರಿಲ್ಲ. ಯಾವುದೇ ಜಂಗಮನು ಮೊಹಮ್ಮಡನ್ ಅಥವಾ ಕ್ರಿಶ್ಚಿಯನ್ ಮತವನ್ನು ಅನುಸರಿಸಿಲ್ಲ ಎಂಬುದು ಅವರ ವಾದ (೧೯೯೮: ೧೦೬).

ತಾನು ತಯಾರಿಸಿದ ತೆಲುಗು-ಇಂಗ್ಲೀಷ ನಿಘಂಟಿನಲ್ಲೂ ಕೂಡ ಅಲ್ಲಮ ಎಂಬ ಹೆಸರು ಮುಸ್ಲಿಂ ಮೂಲದ್ದು ಎಂದು ದೃಡೀಕರಿಸುತ್ತಾನೆ. ನಾಗವರ್ಮನ ಛಂದಸ್ಸಿನಲ್ಲಿ ಕಿಟೆಲ್ ಸಹ ಬ್ರೌನನ ಹೇಳಿಕೆಗೆ ಸಹಮತವನ್ನು ಸೂಚಿಸಿದ್ದಾರೆ. ಜಂಗಮ ಮತ್ತು ಮುಸಲ್ಮಾನರ ನಡುವಿನ ಸಂಬಂಧಗಳ ಬಗ್ಗೆ ಅರಿವಿದ್ದರು, ಬ್ರೌನ್ ತನ್ನ ಕ್ರಿಶ್ಚಿಯನ್ ನಂಬಿಕೆಯನ್ನು ಬಿಟ್ಟು ಕೊಡುವುದಿಲ್ಲ. ಹೀಗಾಗಿ ಮುಸ್ಲಿಂ ಧರ್ಮವು ಜಂಗಮ ಸಾಹಿತ್ಯದ ಮೇಲೆ ನಕಾರತ್ಮಕವಾದ ಪರಿಣಾಮ ಬೀರಿದೆಯೆಂದು ಮತ್ತು ಸ್ಥಳೀಯ ಜಂಗಮ ಸಾಹಿತಿಗಳು ಇದನ್ನು ಸರಿಪಡಿಸಲು ಯಾವುದೇ ಪ್ರಯತ್ನ ಮಾಡಿಲ್ಲವೆಂದು ನಂಬಿದ್ದ, ಇದ್ದರಿಂದ ತೆಲುಗು ಸಾಹಿತ್ಯವು ಕ್ಷೀಣಿಸುವುದನ್ನು ತಡೆಗಟ್ಟಬೇಕೆಂದು ಪದೆ ಪದೆ ಪ್ರತಿಪಾದಿಸುತ್ತಿದ್ದ.

ಅಲ್ಲಮನ ಜೀವನ ಚರಿತ್ರೆಯನ್ನು ಕಟ್ಟಿಕೊಡುವ ಬ್ರೌನನಿಗೆ ಲೀಲೆ ಮತ್ತು ಇತರ ಪುರಾಣಗಳೆ ಮೂಲಾಧಾರ, ವಚನಗಳ ಬಗ್ಗೆ ಒಂದು ಮಾತನ್ನೂ ಆಡಿಲ್ಲ. ಪ್ರಾಯಶಃ ಅವನಿಗೆ ಕನ್ನಡ ವಚನಗಳ ಬಗ್ಗೆ ತಿಳಿದಿರಲಿಲ್ಲ. ಯಾಕೆ ತಿಳಿದಿರಲಿಲ್ಲ ಎಂಬ ಪ್ರಶ್ನೆ ಉದ್ಭವಿಸದೇ ಇರದು, ಜಂಗಮರ ಜಾನಪದೀಯ/ಜನಪ್ರಿಯ ಅಂಶಗಳ ಬಗ್ಗೆ ಆಸಕ್ತಿ ವಹಿಸಿದ ಮತ್ತು ಕನ್ನಡ ಸಾಹಿತ್ಯದ ಬಗ್ಗೆ ತಿಳಿದುಕೊಂಡಿದ್ದ ಬ್ರೌನನಿಗೆ ವಚನಗಳು ಯಾಕೆ ಕಣ್ಣಿಗೆ ಬೀಳಲಿಲ್ಲ? ವಚನಗಳು ಆಗ ಪ್ರಸಿದ್ಧಿ ಪಡೆದಿದ್ದವೆ? ಪಡೆದಿದ್ದರೆ ಆಗಿನ ಯಾವ ಪಾಶ್ಚಾತ್ಯ ಪಂಡಿತರಿಗೂ ಗೋಚರಿಸದೆ ರಹಸ್ಯಮಯವಾಗಿದ್ದವೆ? ವಚನಗಳು ತೆಲುಗಿಗೆ ಅನುವಾದವಾಗಲಿಲ್ಲವೆ? ಅಥವಾ ಅವುಗಳ ಬಗ್ಗೆ ತೆಲುಗು ಪಂಡಿತರಿಗೂ ಸಹ ಮಾಹಿತಿ ಇರಲಿಲ್ಲವೆ? ಈ ತರಹದ ಅನೇಕ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳುವ ಅವಶ್ಯಕತೆ ಇದೆ.

ಆಂಧ್ರಪ್ರದೇಶದ ಸಂದರ್ಭದಲ್ಲಿ ಅಧ್ಯಯನ ಕೈಗೊಂಡ ಬ್ರೌನ್ ಮುಂದಿನ ಪೀಳಿಗೆಯವರಿಗೆ ಅನೇಕ ರೀತಿಯಲ್ಲಿ ಪ್ರಭಾವ ಬೀರಿದ. ಆದರೆ ಅವನಂತಹ ಪಾಶ್ಚಾತ್ಯ ವಿದ್ವಾಂಸರು ಸ್ಥಳೀಯ ಪಂಡಿತರು ಮತ್ತು ವಿದ್ವಾಂಸರ ಮೇಲೆ “ಸಂಪೂರ್ಣ ದಿಗ್ವಿಜಯ” ಸಾಧಿಸಿದರು ಎಂದು ಹೇಳುವುದು ಕಷ್ಟ. ಪಾಶ್ಚಾತ್ಯರು ಏಕ ತೆರನಾದ ವಿಚಾರ, ಕ್ರಮ, ಪದ್ಧತಿ, ಮಾಹಿತಿ, ಮೂಲ ಅಥವಾ ಒತ್ತುಗಳನ್ನು ಹೊಂದಿರಲಿಲ್ಲ. ಮತ್ತೊಂದೆಡೆಯಲ್ಲಿ ಲಿಂಗಾಯತರು ಪಾಶ್ಚಾತ್ಯರ ಎಲ್ಲಾ ವಿಚಾರಗಳನ್ನು ಯಥಾವತ್ತಾಗಿ ಅನುಸರಿಸಲಿಲ್ಲ. ತಮಗೆ ಸಮಂಜಸವಾದ ಮತ್ತು ಅನುಕೂಲಕರವಾದ ವಿಚಾರಗಳನ್ನು ಮಾತ್ರ ಸ್ವೀಕರಿಸಿ, ಬೇಡವಾದದನ್ನು ತ್ಯಜಿಸಿದರು. ಈ ಕಾರ್ಯವೈಖರಿಯನ್ನು ನೋಡಿದರೆ ವಸಾಹತುಶಾಹಿಯು ವೈವಿದ್ಯತೆಗಳನ್ನು ಅಳಸಿ ಹಾಕಿತೆ ಎಂಬ ಪ್ರಶ್ನೆ ನಮ್ಮ ಮುಂದೆ ಮೂಡುತ್ತದೆ. ಪಾಶ್ಚಾತ್ಯ ವಿಚಾರಗಳಿಂದ ಪ್ರಭಾವಿತರಾದರೂ, ಅವರು ಅವುಗಳ ಜೊತೆಗೆ ಅನುಸಂಧಾನವನ್ನು ಮಾಡಿದರು. ಇದು ಬರೀ ಪಾಶ್ಚಾತ್ಯ ವಿಚಾರಗಳಿಗೆ ಮಾತ್ರ ಸಂಬಂಧಿಸಿದುದಲ್ಲ, ತಮ್ಮ ಸಾಹಿತ್ಯ ಪರಂಪರೆಗಳ ಜೊತೆಗೂ ಅನುಸಂಧಾನವನ್ನು ಮಾಡಿದರು. ಈ ಅನುಸಂಧಾನವು “ವೈಭವಯುತ ಗತಕಾಲ”ದ ಮಾದರಿಯಲ್ಲಿದ್ದರೂ ಅದನ್ನು ರೂಪಿಸಿದ, ಪ್ರೇರೇಪಿಸಿದ ಸಂದರ್ಭಗಳು ಭಿನ್ನ, ಭಿನ್ನವಾಗಿದ್ದವು. ಈ ಭಿನ್ನತೆಗಳನ್ನು ಅರ್ಥ ಮಾಡಿಕೊಳ್ಳದೇ ಹೋದರೆ, ನಮ್ಮ ಅಧ್ಯಯನ ಅಪೂರ್ಣವೆಂದು ನನ್ನ ಭಾವನೆ.

ಭಾಗ :

ನಿರಾಳವೆಂಬ ಕೂಸಿಂಗೆ
ಬೆಣ್ಣೆಯನಿಕ್ಕಿ ಹೆಸರಿಟ್ಟು ಕರೆದವರಾರೊ?
ಅಕಟಕಟಾ!  ಶಬ್ದದ ಲಜ್ಜೆಯ ನೋಡಾ!
ಗುಹೇಶ್ವರನನರಿಯದ
ಅನುಭಾವಿಗಳೆಲ್ಲರ ತರಕಟಗಾಡಿತ್ತು!

ಅಲ್ಲಮನ ಈ ವಚನದಲ್ಲಿ ಒಬ್ಬ ಹೆಸರಿಟ್ಟು identityಯನ್ನು ಹೇರುವುದನ್ನು ವಿಡಂಬಿಸಲಾಗಿದೆ. ಡಿ ಆರ್ ಎನ್ ಈ ವಚನಕ್ಕೆ ವ್ಯಾಖ್ಯಾನ ಬರೆಯುತ್ತಾ ಶಬ್ಧ-ನಿಶಬ್ಧತೆಯನ್ನು ಶಿಶುತನಕ್ಕೆ ಹೋಲಿಸಿ ಹೀಗೆ ಹೇಳುತ್ತಾರೆ.

ಶಿಶುತನ ಎಂದರೆ ಕೇಡು-ಒಳಿತುಗಳಾಚೆಗೆ, ಸತ್ಯ-ಅಸತ್ಯಗಳಾಚೆಗೆ, ಅಹುದು –
ಇಲ್ಲಗಳಾಚೆಗೆ, ಸ್ನೇಹ-ಶತ್ರುತ್ವಗಳಾಚೆಗೆ ಇರುವಂಥದು. ಮಾತಿನ ಬಲೆಯ
ಗೊಡವೆಯೇ ಇರದಂಥದ್ದು. ಅದು ಶಬ್ದಮುಗ್ಧ ಸ್ಥಿತಿ (೧೯೯೯: ೧೯೬).

ಶಬ್ಧರ ಆಡಂಬರಕ್ಕೆ ವಿರೋಧ ವ್ಯಕ್ತ ಪಡಿಸಿದ ಅಲ್ಲಮ ಅದರೊಳಗೆ ಬಂಧಿಸಲ್ಪಟ್ಟದ್ದು ಇತಿಹಾಸದ ವಿಪರ್ಯಾಸವೆಂದು ಹೇಳಬಹುದೇನೋ!  ಈ ಬಂಧನ ಮಧ್ಯಯುಗದಲ್ಲೇ ಶುರುವಾಯಿತು ಎಂದು ಹಲವರ ನಂಬಿಕೆ. ಆದರೆ ಅದರ ಬಗ್ಗೆ ನನ್ನದೇ ಆದ ಸಂದೇಹಗಳಿರುವದರಿಂದ ಮತ್ತು ಅದರ ಬಗ್ಗೆ ಇನ್ನೂ ಸ್ಪಷ್ಟತೆಗಳಿಲ್ಲದಿರುವುದರಿಂದ ಅದನ್ನು ಇಲ್ಲಿ ಪ್ರಸ್ತಾಪಿಸುವುದಿಲ್ಲ. ಆದರೆ ಅಲ್ಲಮನ ಆಧುನಿಕ ಪ್ರವೇಶ ಆತನ ಐಡೆಂಟಿಟಿಯ ಜೊತೆಗೆ ತಳಕು ಹಾಕಿಕೊಂಡಿರುವುದು ಅವನಿಗೂ, ಅವನ ವಚನಕ್ಕೂ ಮತ್ತು ಆಗಿ ಹೋದ ಇತಿಹಾಸದ ನಡುವಿನ ವೈರುಧ್ಯ ಮತ್ತು ಬಗೆಹರಿಯಲಾದ ಸಮಸ್ಯೆಯೆಂದು ನಾನು ದೃಢವಾಗಿ ಹೇಳಲು ಇಷ್ಟ ಪಡುತ್ತೇನೆ. ೧೯೧೯ರಲ್ಲಿ ಉಂಟಾದ ‘ಶುಭೋದಯ’ ವಿವಾದವು ಇದಕ್ಕೆ ಜ್ವಲಂತ ಸಾಕ್ಷಿ.[6] ಈ ವಿವಾದವು ಲಿಂಗಾಯತರನ್ನು ತೀವ್ರವಾಗಿ ಕೆರಳಿಸಿದ ಮತ್ತು ಲಿಂಗಾಯತ ಸಾಹಿತ್ಯ ತಾತ್ವಿಕ ತಿರುವಿಗೆ ನಾಂದಿಯಾದ ಒಂದು ಪ್ರಮುಖ ಘಟನೆ, ಶುಭೋಧಯ ಕನ್ನಡ ಪತ್ರಿಕೆಯನ್ನು ಅಲ್ಲಮ ಮತ್ತು ಬಸವನ ವಿರುದ್ಧ ಲೇಖನ ಪ್ರಕಟಗೊಂಡಾಗ, ಅದರ ವಿರುದ್ಧ ಸಿಡಿದೆದ್ದ ಲಿಂಗಾಯತರು ಅದಕ್ಕೆ ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಅವರಲ್ಲಿ ಪ್ರಮುಖವಾಗಿ ನಾನು ವೀರಪಪ್ ಬಸವಪ್ಪ ಬಿಳಿಅಂಗಡಿಯವರ ವಿಚಾರವನ್ನು ಇಲ್ಲಿ ಸಂಕ್ಷಿಪ್ತವಾಗಿ ಚರ್ಚಿಸುತ್ತೇನೆ. ಶುಭೋದಯ ಪತ್ರಿಕೆಯ ಲೇಖನದಲ್ಲಿ ಅಲ್ಲಮನ ಜಾತಿ ಮತ್ತು ಹೆಸರಿನ ಬಗ್ಗೆ ಈ ರೀತಿಯಾದ ಸಂದೇಹಗಳನ್ನು ವ್ಯಕ್ತಪಡಿಸಿರುವುದು ಕಂಡು ಬರುತ್ತದೆ.

ಅಲ್ಲಮ ಇವನ ಚರಿತ್ರಾದಿ ವಿಷಯಗಳನ್ನು ವಿಚಾರಿಸುತ್ತಿರಲಿಕ್ಕಾಗಿ ಇವನು ಶೂದ್ರನಿದ್ದನೆಂದು ಕಂಡು ಬರುತ್ತದೆ. ಅಲ್ಲಮ ಎಂಬ ಹೆಸರು ಮುಸಲ್ಮಾನ ದೇವತಾ ಸಂಕೇತವಾಗಿರುತ್ತದೆ. ಇವನ ಸಂಬಂಧವಾದ ಚಿತ್ರಕಲ್ಲದುರ್ಗ ಮುರಗಿ ಮಠದವರು ಈ ಹೊತ್ತಿನವರೆಗೂ ಮುಸಲ್ಮಾನರ ಕಡೆಯಿಂದ ನಾವು ನಿಮಗೆ ಸಂಬಂಧಿಕರೆಂದು ಹೇಳಿ ಕಾಣಿಕೆಯನ್ನು ಎತ್ತುತ್ತಿರುವರು…. (೧೯೧೯: ೩)[7]

ಈ ಲೇಖನದ ವಿರುದ್ಧ ಸಮರ ಸಾರಿದ ಸಿದ್ಧರಾಮಪ್ಪ ಪಾವಟೆಯವರನ್ನು ಬೆಂಬಲಿಸುತ್ತಾ, ಬಿಳಿಅಂಗಡಿಯವರು ಅಲ್ಲಮನ ಬಗೆಗಿನ ಅವಹೇಳನಕಾರಿ ಅಂಶಗಳನ್ನು ಬಲವಾಗಿ ಖಂಡಿಸುತ್ತಾರೆ.[8] ಈ ವಿವಾದದ ಬಿಸಿ ಆರುವ ಮುನ್ನವೇ ಕನ್ನಡದ ಪ್ರಭುಲಿಂಗ ಲೀಲೆಯ ಕೃತಿಯನ್ನು ಸಂಕಲಿಸಿ ಪ್ರಕಟಿಸಿದ ಬಿಳಿಅಂಗಡಿಯವರು ಆ ಪುಸ್ತಕಕ್ಕೆ ರೆದ ವಿಜ್ಞಪ್ತಿಯಲ್ಲಿ ಶುಭೋಧಯ ಲೇಖನದ ಸಂಪಾದಕ ಶ್ರೀನಿವಾಸಚಾರ್ಯ ಮತ್ತು ತಮ್ಮ ಸಮುದಾಯದವರೇ ಆದ ಕಾಶಿನಾಥ ಶಾಸ್ತ್ರಿ ಹಾಗೂ ಹಮ್ಮಿಗೆ ಶಾಂತಪ್ಪ ಕುಬುಸದವರನ್ನು (ಶುಭೋದಯ ಲೇಕನವನ್ನು ಸಮರ್ಥಿಸಿಕೊಂಡಿದ್ದಕ್ಕಾಗಿ) ತರಾಟೆಗೆ ತೆಗೆದುಕೊಂಡದ್ದಾರೆ. ತಮ್ಮವಿಚಾರಗಳಿಗೆ ಆಧಾರವಾಗಿ ಬ್ರೌನನ ದಾಖಲೆಗಳನ್ನು ಉದಾರವಾಗಿ ಬಳಸಿಕೊಂಡಿದ್ದಾರೆ. ಅವರು ಬ್ರೌನನನ್ನು ಜ್ಞಾಪಿಸಿಕೊಳ್ಳುವ ರೀತಿ ಹೀಗೆ.

ಪ್ರಭುಲಿಂಗಲೀಲೆಯ ಕರ್ನಾಟಕ, ತೆಲುಗು, ತಮಿಳು ಮುಂತಾದ ಭಾಷೆಗಳಲ್ಲಿರುವುದು. ಎಲ್ಲವುಗಳಿಗಿಂತಲೂ ತೆಲುಗು ಪ್ರಭುಲಿಂಗಲೀಲೆಯೇ ಬಹಳ ಉತ್ಕೃಷ್ಟವಾಗಿರುವುದೆಂದು ಕೆಲವರ ಅಭಿಪ್ರಾಯವಿದೆ. ದೇಶಿಯ ಹಾಗೂ ಪಾಶ್ಚಾತ್ಯ ಪಂಡಿತರನೇಕರು ಇದನ್ನು ಬಹಳ ವಿಧವಾಗಿ ಶ್ಲಾಘಿಸಿರುವರು. ಇದರಲ್ಲಿ ಸಿ.ಪಿ. ಬ್ರೌನ್ ಎಂಬುವ ಆಂಗ್ಲೇಯ ಪಂಡಿತರು ಮದ್ರಾಸ್ ಜರ್ನಲ್ ಆಫ್ ಲಿಟರೇಚರ್ ಯಾಂಡ್ ಸೈನ್ಸ್ ಎಂಬುವ ೧೮೩೬ರ ಸಂಚಿಕೆಯಲ್ಲಿ ಈ ಉದ್ಗ್ರಂಥದ ವಿಷಯವಾಗಿ ಹೀಗೆ ಬರೆದಿರುವರು Prabulinga Leels is far more attractive to an English reader than Dwipada Ramayan. It is not more difficult in style than the Lady of the Lake; in sweetness and purity of diction it equals Theocritus. In point of morals, it is purer than the works which Brahmins consider sacred (೧೯೨೨: ೨).

ಇದರ ಜೊತೆಗೆ ಎಚ್.ಎಚ್. ವಿಲ್ಸನ್ನರು ಪ್ರಭುಲಿಂಗಲೀಲೆಯ ವಿಷಯವಾಗಿ ಬರೆದ ಅಂಶವನ್ನು ದೀರ್ಘವಾಗಿ ಪ್ರಸ್ತಾಪಿಸಿ ತಮ್ಮ ವಿಚಾರವನ್ನು ಸಮರ್ಥಿಸಿಕೊಂಡಿದ್ದಾರೆ. ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ ಬ್ರೌನನು ಅಲ್ಲಮನ ಹೆಸರಿನ ವಿಷಯವಾಗಿ ದಾಖಲಿಸಿದ್ದ ವಿಚಾರಗಳನ್ನು ಅನುಕೂಲಕ್ಕಾಗಿ ಮರೆತಿರುವುದು. ಜೊತೆಗೆ ಅಲ್ಲಮನ ಶೂದ್ರ ಮೂಲದ ಬಗ್ಗೆ ದಿವ್ಯ ನಿರ್ಲಕ್ಷವನ್ನು ತಾಳಿರುವುದು. ಈಗ ಅಲ್ಲಮನ ಶೂದ್ರ ಮೂಲವು ನಿಸ್ಸಂದೇಹವಾಗಿ ಪರಿಹರಿಸಲ್ಟಟ್ಟಿದ್ದರೂ, ಆಗ ಅವನು ಲಿಂಗಾಯತನಲ್ಲ ಎಂಬ ಆಪಾದನೆ ಇತ್ತು. ಬ್ರೌನ್ ಮತ್ತು ಶುಭೋದಯ ಪತ್ರಿಕೆಗಳಲ್ಲಿ ಅಲ್ಲಮನ ಮುಸ್ಲಿಂ ಮೂಲದ ಬಗ್ಗೆ ಸಾಮ್ಯತೆಗಳಿದ್ದರೂ, ಅದರ ಬಗ್ಗೆ ಮಾತನಾಡದೆ ಬಿಳಿಅಂಗಡಿಯವರು ಮೌನವಾಗಿರುವುದು ಸೋಜಿಗವೆನಿಸುತ್ತದೆ. ಅಲ್ಲಮ ಪ್ರಭುವನ್ನು ಇತರ ಶಿವಶರಣರಂತೆ ಗಂಭೀರವಾಗಿ ಪರಿಗಣಿಸಿಸಬೇಕೆಂದು ಇಲ್ಲಿ ಒತ್ತು ಕೊಡಲಾಗಿದೆ, ಬ್ರೌನನ ತರಹ ಬಿಳಿಅಂಗಡಿಯವರಿಗೂ ಬ್ರಾಹ್ಮಣರ ಬಗ್ಗೆ ಅಸಮಾಧಾನ. ಆದರೆ ಬೇರೆ, ಬೇರೆ ಕಾರಣಕ್ಕಾಗಿ. ಪೌರತ್ಯ ಸಾಹಿತ್ಯವನ್ನು ಸಂಸ್ಕೃತದ ಬಾಹುಗಳಿಂದ ರಕ್ಷಿಸಬೇಕಾದ ಚಾರಿತ್ರಿಕ ಒತ್ತಡ ಬ್ರೌನನಿಗಿದ್ದರೆ, ಬಿಳಿ ಅಂಗಡಿಯವರಿಗೆ ಅಲ್ಲಮನ ಹಿರಿಮೆ ಮತ್ತು ಶ್ರೇಷ್ಠತೆಯನ್ನು ರುಜುವಾತು ಪಡಿಸುವ ಒತ್ತಡವಿತ್ತು. ಇಬ್ಬರಲ್ಲಿರುವ ಸಾಮಾನ್ಯ ಒತ್ತಾಸೆಯೇನೆಂದರೆ ಜಂಗಮ/ಶಿವಶರಣರ ವೈವಿಧ್ಯತೆಯನ್ನು ಸ್ಥಾಪಿಸುವ ಹಂಬಲ. ಬಸವಣ್ಣ ನಡುವಿನ ವ್ಯತ್ಯಾಸಗಳು ಈ ಹಂಬಲವನ್ನು ಸೂಚಿಸುತ್ತವೆ.

ಭಾಗ :

ಬ್ರೌನ್, ಚಿದಾನಂದ ಮೂರ್ತಿ ಮತ್ತು ಡಿ ಆರ್ ಎನ್‌ನಡುವೆ ಒಂದು ಸಮಾನ ಅಂಶವಿದೆ. ಶಿವಶರಣರಲ್ಲಿ ಆಂತರಿಕ ಭಿನ್ನತೆಯನ್ನು ಅಲ್ಲಮ ಹೊಂದಿದ್ದ ಎಂಬ ಅಂಶ ಈ ಸಮಾನ ಅಂಶವನ್ನು ನಿರೂಪಿಸುತ್ತದೆ. ಬ್ರೌನ್ ಈ ಅಂಶವನ್ನು ಪುರಾಣ/ಲೀಲೆಗಳ ಮೂಲಕ ಸಾಬೀತು ಪಡಿಸಿದರೆ, ನಾಗರಾಜರವರು ಸಂಪೂರ್ಣವಾಗಿ ಅಲ್ಲಮನ ವಚನಗಳು ಹಾಗೂ ಜಾನಪದದ ಮೂಲಕ ತಮ್ಮ ವಿಚಾರಗಳನ್ನು ಮಂಡಿಸುತ್ತಾರೆ. ಡಿ.ಆರ್.ಎನ್.ಗೆ ಪುರಾಣಗಳಲ್ಲಿ ಅಸಡ್ಡೆ ಮತ್ತು ಅಪನಂಬಿಕೆ. ಮುಕ್ತವಾಗಿದ್ದ ಶರಣ ಚಳುವಳಿಗೆ ಪುರಾಣಗಳ ಮೂಲಕ ಸಾಂಸ್ಥಿಕ ರೂಪುರೇಷೆಗಳನ್ನು ರೂಪಿಸಲಾಯಿತು ಎಂದು ಅವರು ನಂಬಿದ್ದಾರೆ. ನನ್ನ ಪ್ರಕಾರ ಪುರಾಣಗಳ ಬಗ್ಗೆ ಇರುವ ಈ ಅಸಮಾಧಾನವು ಇಪ್ಪತ್ತನೇ ಶತಮಾನದ ಆರಂಭದಲ್ಲಿ ಆದ ‘ಆಧುನಿಕ ವಚನ ಕ್ರಾಂತಿ’ಯ ಫಲ.[9] ಈ ಸಮಯದಲ್ಲಿ ಹಳಕಟ್ಟಿಯವರ ನೇತೃತ್ವದಲ್ಲಿ ವಚನಗಳ ಅಧ್ಯಯನಗಳಿಂದ ಉಂಟಾದ ಸಾಹಿತ್ಯ ಮತ್ತು ಧಾರ್ಮಿಕ ಪಲ್ಲಟಗಳು ಪುರಾಣ/ಲೀಲೆಗಳ ಬಗ್ಗೆ ಇರುವ ಅಸಕ್ತಿಯನ್ನು ಕ್ಷೀಣಿಸಿತು. ಪುರಾಣಗಳನ್ನು ವಿಚಾರ ಕ್ರಾಂತಿಗೆ ಸಂವಾದಿಯಾಗಿ ಓದುವುದನ್ನು ಕಡಿಮೆ ಮಾಡಲಾಯಿತು. ಪುರಾಣಗಳು ಉತ್ಪ್ರೇಕ್ಷಿತ ಕಥಾನಕಗಳೆಂದು, ಆಧುನಿಕ ಕಾಲಕ್ಕೆ ಬೇಕಾದ ವೈಚಾರಿಕ ವಿಚಾರಗಳನ್ನು ಹೊಂದಿಲ್ಲವೆಂದು ನಂಬಲಾಯಿತು. ಡಿ ಆರ್ ಎನ್ ಗೆ ಪುರಾಣಗಳನ್ನು ತಿರಸ್ಕರಿಸಲು ವಸಾಹತುಶಾಹಿಯ ಒತ್ತಡಗಳಿಲ್ಲವಿದ್ದರೂ, ಬೇರೆ ಕಾರಣಗಳಿಗಾಗಿ ಅವು ಅಪ್ರಸ್ತುತ. ಅಲ್ಲಮ ಪ್ರಭು ಮತ್ತು ಶೈವ ಪ್ರತಿಭೆಯಲ್ಲಿ ಡಿ ಆರ್ ಎನ್ ರ ಸ್ಥಿತ್ಯಂತರವನ್ನು ನೋಡಬಹುದು. ಸಾಹಿತ್ಯ ಕಥನದ ವಸಾಹತುಶಾಹಿ- ಟೀಕೆಯು ಅಲ್ಲಮ ಪ್ರಭು ಮತ್ತು ಶೈವ ಪ್ರತಿಭೆಯಲ್ಲಿ ರಾಷ್ಟ್ರೀಯತೆಯ – ಟೀಕೆಯಾಗಿ ರೂಪುಗೊಳ್ಳುತ್ತದೆ. ಈ ಸ್ಥಿತ್ಯಂತರದ ಬಗ್ಗೆ ನನಗೆ ಯಾವುದೇ ಸಮಸ್ಯೆಗಳಿಲ್ಲ. ಆದರೆ ವಸಾಹತಿಶಾಹಿಯ ಬಳುವಳಿಯಾದ ಪುರಾಣ ವರ್ಸಸ್ ವಚನ ಎಂಬ ಪರಿಧಿಯಲ್ಲಿ ಅವರು ಅಲ್ಲಮನನ್ನು ಅರ್ಥ ಮಾಡಿಕೊಳ್ಳುವುದು ಅನೇಕ ಅಂಶಗಳನ್ನು ಮರೆ ಮಾಚಿದಂತೆ. ಮೊದಲನೆಯದು: ವಸಾಹತುಶಾಹಿ ಕಾಲಘಟ್ಟದಲ್ಲಿ ಉಂಟಾದ ವೀರಶೈವ ಸಾಹಿತ್ಯ ಮಂಥಬದ ಸಂಕೀರ್ಣ ಇತಿಹಾಸ; ಪುರಾಣ ಪಂಥಿಯರು ಮತ್ತು ವಚನ ಪಂಥಯರ ನಡುವಿನ ಸಾಮಸ್ಕೃತಿಕ ಘರ್ಷಣೆಗಳು; ಶಿವಶರಣರ ಬಗ್ಗೆ ಉದ್ಭವವಾದ ಹೊಸ, ಹೊಸ ವಿಚಾರಗಳ ಮೂಲ, ಆಶಯ, ವ್ಯಾಪ್ತಿಗಳನ್ನು ಮತ್ತು ಇತಿಹಾಸದ ಸಂದರ್ಭಗಳನ್ನು ಅರ್ಥ ಮಾಡಿಕೊಳ್ಳದೇ ಇರುವುದು. ಎರಡನೇಯದು: ಸಂಸ್ಕೃತ ಪುರಾಣಗಳನ್ನು ತಿರಸ್ಕರಿಸುತ್ತಾ, ವಚನಗಳನ್ನು ಓಲೈಸುವ ಡಿ ಆರ್ ಎನ್ ಕನ್ನಡ ಪುರಾಣಗಳ ಸಾಹಿತ್ಯಕ ಬಂಡಾಯವನ್ನು (ವಿಶೇಷವಾಗಿ ಚಂಪೂ ಕಾವ್ಯದ ವಿರುದ್ಧ ಮೂಡಿಬಂದ ಷಟ್ಪದಿ ಕಾವ್ಯ-ಪುರಾಣಗಳು) ಕಡೆಗಣಿಸುತ್ತಾರೆ. ಪುರಾಣಗಳು ಮತ್ತು ವಚನಗಳ ಅಂತರ್-ಸಂಬಂಧವನ್ನೂ ಸಹ ಮರೆಮಾಚುತ್ತಾರೆ. ಈ ಅಂಶದ ಬಗ್ಗೆ ವಿಶೇಷ ಗಮನಹರಿಸುವ ಅವಶ್ಯಕತೆ ಇದೆ. ಆದ್ದರಿಂದ ನಮ್ಮ ಅಧ್ಯಯನಕ್ಕೆ ಬೇಕಾಗಿರುವುದು ವಸಾಹತುಶಾಹಿಯ ಕಾಲ ಘಟ್ಟದಲ್ಲಿ ನಡೆದಂತ ಸಾಹಿತ್ಯ-ಧರ್ಮ ಮಂಥನ ಸಂಕೀರ್ಣತೆ ಮತ್ತು ಅದು ವೀರಶೈವತ್ವವನ್ನು ರೂಪಿಸಿದಂತ ಸಮಾಜೋ-ಐತಿಹಾಸಿಕ ಸನ್ನಿವೇಶಗಳು. ಹೀಗಾಗಿ ಸಾಧಿಸಬೇಕಾದ್ದು ಸಾಕಷ್ಟಿದೆ.

ಉಲ್ಲೇಖಿತ ಪಠ್ಯಗಳು ಮತ್ತು ಲೇಖನಗಳು

೧.        ನಾಗರಾಜ್, ಡಿ.ಆರ್. ೧೯೯೯. ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ, ಅಕ್ಷರ: ಹೆಗ್ಗೊಡು.

೨.        ಮೂರ್ತಿ, ಚಿದಾನಂದ. ೨೦೦೪. “ಅಲ್ಲಮಪ್ರಭು ಚಿಂತನ, ಸಂ. ಎಸ್.ಕೆ. ಕೊಪ್ಪಾ, ಕರ್ನಾಟಕ ಸಾಹಿತ್ಯ ಅಕಾಡೆಮಿ. ಬೆಂಗಳೂರು.

೩.        ಬ್ರೌನ್, ಸಿ.ಪಿ. ೧೮೭೧. Essay on the Creed and Customs of the Jangams, The Journal of Royal Asiatic Society of Great Britain and Ireland, ಸಂ. ೫.

೪.        — ೧೯೯೧ “Lila-OR Prabhu Linga Lila-Canto III”, “Essay on the Language and Literature of the Telugus originally Printed in Madras Journal of Literature and Science (೧೮೪೦), ೧೯೯೧ರಲ್ಲಿ ಮರುಪ್ರಕಟಿತ, ಏಷಿಯನ್ ಎಜುಕೇಷನಲ್ ಸರ್ವಿಸಸ್, ನ್ಯೂ ದೆಲ್ಲಿ.

೫.        — ೧೯೯೮. Essay on the Creed, Customs and Literature of the Jangams, Madras Journal of Literature and Science, (೧೮೪೦), ಮರುಪ್ರಕಟಿತ), ಸಂ. ಜಿ.ಎನ್. ರೆಡ್ಡಿ.

೬.        ಧಾರವಾಡಕರ್, ವಿನಯ್, ೧೯೯೯, “Ramanujan’s theory and practice of Translation”, Post – colonial Translation: Theory and Practice, ಸಂ. ಸೂಸನ್ ಬ್ಯಾಸ್ ನೆಟ್ ಮತ್ತು ಹರೀಶ್ ತ್ರಿವೇದಿ, ರೂಟ್ಲೆಜ್: ಲಂಡನ್.

೭.        ಬೋರಟ್ಟಿ ವಿಜಯಕುಮಾರ್ ಎಂ. ೨೦೦೮. “ಹಿಂದೆ ಎಷ್ಟು ಪ್ರಳಯ ಹೋಯಿತ್ತೆಂದರಿಯೆ’: ವಸಾಹತುಶಾಹಿ ಮತ್ತು ಲಿಂಗಾಯತ ಸಮುದಾಯ”. ಕನ್ನಡ ಅಧ್ಯಯನ, ಸಂ. ೧೪, ಸಂ. ೧, ಜ-ಜೂನ್, ೨೦೦೮. ಪು. ೬೬-೧೧೨.

೮.        ಬಿಳಿಅಂಗಡಿ, ವೀರಪ್ಪ ಬಸವಪ್ಪ, ೧೯೨೨. “ವಿಜ್ಞಪ್ತಿ”, ಪ್ರಭುಲಿಂಗಲೀಲೆ, ೨ನೇ ಆವೃತ್ತಿ.

[1] ಕನ್ನಡ ವಿಶ್ವವಿದ್ಯಾಲಯದ ಅಲ್ಲಮ ಪ್ರಭುವಿನ ವಚನಗಳು: ಸಾಂಸ್ಕೃತಿಕ ಮುಖಾಮುಖಿ ವಿಚಾರ ಸಂಕಿರಣಕ್ಕೆ (೩೦ನೇ ಸೆಷ್ಟೆಂಬರ್ ೨೦೦೯ ರಿಂದ ೧ನೇ ಅಕ್ಟೋಬರ್, ೨೦೦೯, ಬೆಳಗಾವಿ) ಸಿದ್ಧಪಡಿಸಿದ ಪ್ರಬಂಧ. ಈ ಪ್ರಬಂಧದ ಬಗ್ಗೆ ತಮ್ಮ ವಿಚಾರಗಳನ್ನು ಹಂಚಿಕೊಂಡ ಅಮರೇಶ ನುಗಡೋಣಿ ಮತ್ತು ರಹಮತ್ ತರೀಕೆರೆಯವರಿಗೆ ನನ್ನ ಧನ್ಯವಾದಗಳು.

[2] ಎ.ಎಸ್. ಸುಂಕಾಪುರರವರು ತೆಲುಗಿನಲ್ಲಿ ಎರಡು ಪ್ರಭುಲಿಂಗಲೀಲೆಗಳಿವೆ ಎಂದು ಗುರುತಿಸಿದ್ದಾರೆ. ಅವರ ಪ್ರಕಾರ ಪಿಡುಪರ್ಥಿ ಸೋಮನಾಥ ಮತ್ತು ಪಿಡುಪರ್ಥಿ ಬಸವ ಕ್ರಮವಾಗಿ ಇವರೆಡರ ಗ್ರಂಥಕಾರರು.

[3] ಇದು ಇಂಗ್ಲಿಷ್ ಸಾಹಿತ್ಯದಲ್ಲಿರುವ ಕಿಂಗ್ ಅರ್ಥರನ ದಂತ ಕಥೆಯಲ್ಲಿ ಬರುವ ಹೆಂಗಸಿನ ಪಾತ್ರ ಇತರ ಇಂಗ್ಲಿಷ್ ಕಥೆಗಳಲ್ಲೂ ಸಹ ಆಕೆ ವಿವಿಧ ಹೆಸರಿನಿಂದ ಕಾಣಿಸಿಕೊಳ್ಳುತ್ತಾರೆ.

[4] ಪುರಾತನ ಗ್ರೀಕ್ ಕವಿ. ಪ್ರಾಯಶ: ೩ನೇ ಕ್ರಿಸ್ತಪೂರ್ವದಲ್ಲಿದ್ದವ.

[5] ನೋಡಿ Post-Colonial Translation (ಧಾರವಾಡಕರ್, ೧೯೯೯: ೧೩೩-೧೩೪).

[6] ಈ ವಿವಾದದ ವಿವರಗಳಿಗಾಗಿ ನನ್ನ ಮುಂದಿನ ಲೇಖನವನ್ನು ನೋಡಿ.

[7] ಶುಭೋದಯ ಪತ್ರಿಕೆಯಲ್ಲಿ ಪ್ರಕಟ ಆದ ಈ ಲೇಖನದ ಮೂಲ ಪಾಠ ನನ್ನಲಿಲ್ಲ. ಆದ್ದರಿಂದ ಮೈಸೂರ್ ಸ್ಟಾರ್ ಪತ್ರಿಕೆಯಲ್ಲಿ ಪ್ರಕಟವಾದ ಕೆಲವು ತುಣುಕುಗಳನ್ನು ಮಾತ್ರ ಇಲ್ಲಿ ಕೊಡಲಾಗಿದೆ.

[8] ಪಾವಟೆಯವರ ಪ್ರತಿವಾದವು (ಬಸವ ಬಾನು, ೧೯೨೩) ಬಸವಣ್ಣನ ಹಿರಿಮೆಯನ್ನು ಸಾಬೀತು ಪಡಿಸುವುದಕ್ಕೆ ಮಾತ್ರ ಮೀಸಲಾಗಿದೆ. ಅಲ್ಲಮ ಮತ್ತು ಇತರರ ಬಗ್ಗೆ ಅವರು ಮಾತನಾಡುವುದು ಬಹಳ ವಿರಳ.

[9] ಈ ‘ಆಧುನಿಕ ವಚನ ಕ್ರಾಂತಿ’ಯ ಬಗ್ಗೆ ಹಳಕಟ್ಟಿಯವರ ಮೇಲೆ ನಾನು ಬರೆದಿರುವ ಪ್ರಬಂಧದಲ್ಲಿ ಸಾಕಷ್ಟು ವಿಚಾರಗಳನ್ನು ಮಂಡಿಸಿದ್ದೇನೆ. ಅದಕ್ಕಾಗಿ ಈ ಕೃತಿಯ ೫ನೇ ಅಧ್ಯಾಯನವನ್ನು ನೋಡಿ.