ನಮಗೆಲ್ಲಾ ತಿಳಿದಿರುವ ಹಾಗೆ ವಸಾಹತುಶಾಹಿ-ಪ್ರಾಬಲ್ಯ ಒಂದು ಏಕೀಕೃತ ಸಂರಚನೆಯಲ್ಲ. ಅದನ್ನು ಕ್ರೈಸ್ತ ಧರ್ಮ ಅಥವಾ ಯೂರೋಪಿಯನ್ನರ ಪ್ರಭಾವಕ್ಕೆ ಸಂವಾದಿಯಾಗಿ ನೋಡಲು ಸಾಧ್ಯವಿಲ್ಲ. ಆದಾಗ್ಯೂ ಇವತ್ತಿನ ದಿನದವರೆಗೂ ನಾವು ೧೯ನೇ ಶತಮಾನದ ಸಾಹಿತ್ಯವನ್ನು ಈ ರಾಜಕೀಯ ಇಬ್ಭಾಗದ

[ವಸಾಹತುಶಾಹಿ ಮತ್ತು ರಾಷ್ಟ್ರೀಯತೆ] ಉಪ-ಉತ್ಪನ್ನವೆಂದು ಅಥವಾ ವಸಾಹತುಶಾಹಿಗೆ ರಾಷ್ಟ್ರೀಯತೆಯು ಕೊಟ್ಟ ಪ್ರತಿ-ಏಟಿನ ಪರಿಣಾಮವೆಂದು ಭಾವಿಸುತ್ತೇವೆ (ಬ್ಲಾಕ್ ಬರ್ನ್ ಮತ್ತು ದಾಲ್ಮಿಯ, ೨೦೦೪:೭).

ಭಾಗ

ಇತ್ತೀಚಿನ ವಸಾಹತೋತ್ತರ (post-colonial) ವಿಮರ್ಶೆ ಹಾಗೂ ಸೈದ್ಧಾಂತಿಕ ಅಧ್ಯಯನಗಳು ವಸಾಹತುಶಾಹಿ ಕಾಲಘಟ್ಟದ ಸಾಹಿತ್ಯ ಚರಿತ್ರೆಯನ್ನು ಅವಲೋಕಿಸುವಾಗ ‘ವಸಾಹತುಶಾಹಿ-ರಾಷ್ಟ್ರೀಯತೆ’ ಎಂಬ ಎರಡು ವಿರೋಧಿ ಪರಿಕಲ್ಪನೆಗಳ (binary of colonialism-nationalism) ಚೌಕಟ್ಟಿನೊಳಗೆ ಬಂಧಿಸಿಕೊಂಡಿವೆ. ಇದು ಮುಂದುವರೆದು ವಸಾಹತುಶಾಹಿಯ ಬಳುವಳಿಯಾದ ಪೌರಾತ್ಯವಾದವನ್ನು ವಸಾಹತುಶಾಹಿ-ವಸಾಹತುಶಾಹಿ ಪೂರ್ವ, ಆಧುನಿಕ-ಸಂಪ್ರದಾಯ, ಇತ್ಯಾದಿ, ದ್ವಿ-ವಿರುದ್ಧ ಪರಿಕಲ್ಪನೆಯ ಚೌಕಟ್ಟಿನಲ್ಲಿ ವಿಶ್ಲೇಷಿಸುವ ಹರಸಾಹಸವನ್ನು ಮಾಡುತ್ತದೆ. ವಸಾಹತುಶಾಹಿ ಪೌರಾತ್ಯವಾದವು ಸಾಹಿತ್ಯ, ಭಾಷಾಂತರ, ಕಾನೂನು ಮತ್ತು ಧರ್ಮಗಳ ಮೇಲೆ ಬಹಳ ಪ್ರಭಾವ ಬೀರಿದೆಯೆಂದು, ಇದನ್ನು ಪಾಶ್ಚಾತ್ಯ ವಸಾಹತುಶಾಹಿ- ಪ್ರಭುಗಳು ಸಾಂಸ್ಕೃತಿಕ ಪ್ರಾಬಲ್ಯ (cultural imperialism) ಮತ್ತು ಪ್ರಾತಿನಿಧ್ಯದ (representation) ರಾಜಕೀಯವನ್ನು ಮೆರೆಯಲು ಬಳಸಿಕೊಂಡರೆಂದು ಕೆಲವರು ವಾದಿಸುತ್ತಾರೆ. ಈ ವಸಾಹತುಶಾಹಿ ಕಾಲಘಟ್ಟದ ಸಾಹಿತ್ಯ ರಂಗದಲ್ಲಿ ರೂಪುಗೊಂಡ ಪೌರಾತ್ಯವಾದವನ್ನು ಪ್ರಶ್ನಿಸಿ, ಭಾರತೀಯ ಸಾಹಿತ್ಯ ಚರಿತ್ರೆಯನ್ನು ಮತ್ತೆ ಕಟ್ಟುವ ಅವಶ್ಯಕತೆ ಇದೆಯೆಂದು ಇವರು ಬಲವಾಗಿ ಪ್ರತಿಪಾದಿಸುತ್ತಾರೆ.[1] ಈ ಪ್ರತಿಪಾದನೆಯು ಸ್ವಾಗತಾರ್ಹ. ಆದರೆ ಇದು ಸದ್ಯಕ್ಕೆ ಯಾವುದೇ ಪ್ರಗತಿಯನ್ನು ಸಾಧಿಸದೆ ನಿಂತ ನೀರಾಗಿದೆ. ಸಾಕಷ್ಟು ಸಾಧಿಸಿದ್ದೇವೆಂದು ಒಂದು ಬಗೆಯ ಸ್ವ-ಸಮಾಧಾನದ ಭಾವನೆಯನ್ನು ನಾವು ಇಲ್ಲಿ ಕಾಣಬಹುದು. ಇದರಿಂದಾಗಿ ಪೌರಾತ್ಯವಾದದ ಸಂಕೀರ್ಣತೆ ಮತ್ತು ಹಲವು ಮಜಲುಗಳಿಂದ ಕೂಡಿದ ವಸಾಹತುಶಾಹಿ ಸಾಂಸ್ಕೃತಿಕ / ಸಾಹಿತ್ಯಕ ಲೋಕವನ್ನು ನಾವು ನಿರ್ಲಕ್ಷಿಸಿದಂತಾಗುತ್ತದೆ. ಅನೇಕ ವೈರುಧ್ಯಾತ್ಮಕ ಪ್ರಕ್ರಿಯೆಗಳಿಗೆ ಒಳಗೊಂಡು ಮಂಥನಗೊಳಗಾದ ಪೌರಾತ್ಯವಾದವನ್ನು ಹೀಗೆ ನಾವು ಕಡೆಗಣಿಸುವದು ಸಾಧ್ಯವೆ?

ಪ್ರಸ್ತುತ ಲೇಖನದಲ್ಲಿ ವಸಾಹತುಶಾಹಿ ಪೌರಾತ್ಯವಾದವನ್ನು ಓರೆಗೆ ಹಚ್ಚಿ ವಿಶ್ಲೇಷಿಸಲು ಎರಡು ಭಿನ್ನ ಪಾಶ್ಚಾತ್ಯ ವಿದ್ವಾಂಸರುಗಳಾದ ಸಿ.ಪಿ. ಬ್ರೌನ್ (ಬ್ರಿಟಿಷ್ ಆಡಳಿತಗಾರ, ೧೭೯೮-೧೮೮೪) ಮತ್ತು ರೆ.ಜಿ.ಎ. ವುರ್ಥ್ (ಬಾಸೆಲ್ ಮಿಶಿನರಿಯ ಕ್ರೈಸ್ತ ಪಾದ್ರಿ, ೧೮೨೦-೧೮೬೯)ರ ಕೃತಿಗಳನ್ನು ವಿಶ್ಲೇಷಿಸಲಾಗಿದೆ. ಇವರಿಬ್ಬರು ಕ್ರಮವಾಗಿ ತೆಲುಗು ಮತ್ತು ಕನ್ನಡದಲ್ಲಿನ ಲಿಂಗಾಯತ ಪುರಾಣಗಳನ್ನು ಸಂಕಲಿಸಿ, ಅಧ್ಯಯನ ಮಾಡಿ, ಇಂಗ್ಲೀಷಿಗೆ ಭಾಷಾಂತರಿಸಿದ ಪ್ರಥಮ ವಿದ್ವಾಂಸರುಗಳು. ಬ್ರೌನನು ತೆಲುಗಿನ ಬಸವ ಪುರಾಣ (ಪಾಲ್ಕುರಿಕೆ ಸೋಮನಾಥನಿಂದ ೧೨ನೇ ಶತಮಾನದಲ್ಲಿ ರಚಿಸಲ್ಪಟ್ಟಿದ್ದು), ಪ್ರಭುಲಿಂಗಲೀಲೆ (ಪಿಡುಪರ್ಥಿ ಸೋಮನಾಥನಿಂದ ೧೫ನೇ ಶತಮಾನದಲ್ಲಿ ರಚಿಸಲ್ಪಟ್ಟಿದ್ದು)ಗಳನ್ನು ಇಂಗ್ಲೀಷಿಗೆ ಭಾಷಾಂತರಿಸಿದರೆ, ವುರ್ಥ್ ಭೀಮಕವಿಯ ಕನ್ನಡ ಬಸವ ಪುರಾಣವನ್ನು (೧೪ನೇ ಶತಮಾನದಲ್ಲಿ ರಚಿತವಾದದ್ದು) ಮತ್ತು ವಿರುಪಾಕ್ಷ ಪಂಡಿತನಿಂದ ೧೫ನೇ ಶತಮಾನದಲ್ಲಿ ರಚಿತವಾದ ಚೆನ್ನಬಸವ ಪುರಾಣವನ್ನು ಇಂಗ್ಲೀಷ್‌ಗೆ ಭಾಷಾಂತರಿಸಿದ. ತಮ್ಮದೇ ಆದ ಕಾರ್ಯಕ್ಷೇತ್ರ, ಹಿತಾಸಕ್ತಿ, ಉದ್ದೇಶ ಮತ್ತು ಸಾಹಿತ್ಯಾಭಿರುಚಿಗಳಿಂದ ರೂಪಿಸಲ್ಪಟ್ಟ ಇವರಿಬ್ಬರು ಲಿಂಗಾಯತರ ಬಗ್ಗೆ ಮತ್ತು ಅವರ ಸಾಹಿತ್ಯದ ಬಗ್ಗೆ ಭಿನ್ನವಾದ ಮತ್ತು ಒಂದಕ್ಕೊಂದು ವಿರುದ್ಧವಾದ ನಿಲುವುಗಳನ್ನು ವ್ಯಕ್ತಪಡಿಸಿದ್ದಾರೆ. ಬ್ರೌನನು ಲಿಂಗಾಯತ ಸಾಹಿತ್ಯವನ್ನು ಹೊರ ಜಗತ್ತಿಗೆ ಪರಿಚಯಿಸುವ ಉತ್ಸಾಹ ತೋರಿಸಿದರೆ, ಪುರ್ಥ್ ಲಿಂಗಾಯತರ ‘ಸಂಕುವಿತತೆ’, ‘ಅಜ್ಞಾನ’ವನ್ನು ಬಯಲು ಮಾಡುವ ಪ್ರಯತ್ನ ಮಾಡಿದ್ದಾನೆ. ಇವರಿಬ್ಬರ ಭಾಷಾಂತರಗಳು ಪೌರಾತ್ಯವಾದದ ಎರಡು ಭಿನ್ನ, ಭಿನ್ನ ವಿಚಾರಧಾರೆಗಳನ್ನು ಬಿಂಬಿಸುತ್ತವೆ. ಈ ಹಿನ್ನೆಲೆಯಲ್ಲಿ ವಸಾಹತುಶಾಹಿ ಕಾಲಘಟ್ಟದ ಭಾಷಾಂತರಗಳನ್ನು ಅಧ್ಯಯನ ಮಾಡುವಾಗ ಎರಡು ಅಂಶಗಳನ್ನು ನಾವು ಗಮನದಲ್ಲಿಟ್ಟು ಕೊಳ್ಳುವುದು ಮುಖ್ಯ:

ಅ. ಭಾರತೀಯ ಭಾಷೆಗಳಿಂದ ಯೂರೋಪಿಯನ್ ಭಾಷೆಗಳಿಗಾಗುತ್ತಿದ್ದ ಭಾಷಾಂತರ ಪ್ರಕ್ರಿಯೆಯನ್ನು ನಾವು ವಸಾಹತುಶಾಹಿಯ ಸಾಂಸ್ಕೃತಿಕ ಪ್ರಭುತ್ವವೆಂದು ಅಥವಾ ಪ್ರಾತಿನಿಧ್ಯವನ್ನು ನಿಯಂತ್ರಿಸುವ ತಂತ್ರವೆಂದು ತಿಳಿಯುವುದು ಮಿತಿಗಳಿಂದ ಕೂಡಿದೆ.

ಆ. ಈ ಭಾಷಾಂತರ ಪ್ರಕ್ರಿಯೆಯ ಮೂಲಕ ಅಭಿವ್ಯಕ್ತಿಗೊಳುತ್ತಿದ್ದ ಪೌರುತ್ಯವಾದವು ವಸಾಹತುಶಾಹಿಯ ಬಲವಂತ ಹೊರೆಯಾಗಿರದೆ, ಅದು ಸ್ಥಳೀಯ ಪಂಡಿತರ ಹಾಗೂ ಪಾಶ್ಚಾತ್ಯ ನಡುವಿನ ಸಹಯೋಗದಿಂದ ರೂಪಿಸಲ್ಪಟ್ಟ[2] ವಿಚಾರಧಾರೆ. ಈ ಸಹಯೋಗದ ಪ್ರಯತ್ನಗಳು ಸಾಮರಸ್ಯದಿಂದ ಕೂಡಿದ ಪ್ರೀತಿ ವಿಶ್ವಾಸದ ಪ್ರಯತ್ನವಲ್ಲ. ಅದು ಸ್ಪರ್ಧೆ ಹಾಗೂ ವಿರೋಧದಿಂದ ಕೂಡಿದ ವಾದ-ವಿವಾದಗಳಾಗಿದ್ದವು.

ಭಾಗ

ಜಂಗಮರ ಬಗ್ಗೆ ಬ್ರೌನ್ ವಿಚಾರಗಳು

೧೮ನೇ ಶತಮಾನದ ಪೂರ್ವಾರ್ಧದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಸಾಹಿತ್ಯದ ಬಗ್ಗೆ ಅನೇಕ ವಾದ-ವಿದಾದಗಳಿದ್ದವು. ಇವುಗಳನ್ನು ನಾವು ಪ್ರಮುಖವಾಗಿ ಯುಟಿಲಿಟೇರಿಯನ್ ಮತ್ತು ಇಂಡೋಲಾಜಿಸ್ಟರ ನಡುವೆ ಆದ ವಿವಾದಗಳಲ್ಲಿ ಗುರುತಿಸಬಹುದು. ಯುಟಿಲಿಟೇರಿಯನ್ ಗುಂಪಿನವರು ಭಾರತದ ಬಗ್ಗೆ ತಿರಸ್ಕಾರ ಭಾವನೆಯನ್ನು ಹೊಂದಿದ್ದರು. ಅವರು ಭಾವಿಸುವ ಹಾಗೆ ಭಾರತವು ಶಿಲಾಯುಗದ, ಅನಾಗರೀಕತೆಯ ಮತ್ತು ಬರ್ಬರತೆಯ ನಾಡು. ಈ ದೇಶದ ಸಾಹಿತ್ಯವು ಅಪಕ್ವ, ಸಂಸ್ಕೃತಿ ಮತ್ತು ಬಾಲಿಶತೆಯಿಂದ ಕೂಡಿದ ಸಂಸ್ಕೃತಿಯ ಪ್ರತಿರೂಪ. ಜೇಮ್ಸ್ ಮಿಲ್ ಈ ವಿದ್ವಾಂಸರ ಗುಂಪಿಗೆ ಐಡಿಯಾಲಜಿಯನ್ನು ರೂಪಿಸಿಕೊಟ್ಟಂತ ಪ್ರಮುಖ ವಿದ್ವಾಂಸ. ಇದಕ್ಕೆ ತದ್ವಿರುದ್ಧವಾಗಿ ಭಾರತೀಯ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪಾಶ್ಚಾತ್ಯ ಸಂಸ್ಕೃತಿಗೆ ಹೋಲಿಸಿ, ಅದಕ್ಕೆ ಸಮನಾಗಿ ಪರಿಗ್ರಹಿಸಿದ ಇಂಡಾಲಜಿಸ್ಟರಿಗೆ ಯುಟಿಲಿಟೆರಿಯನ್ನರ ವಾದ ಸರಿಬೀಳಲಿಲ್ಲ. ಇವರಲ್ಲಿ ಪ್ರಮುಖವಾಗಿ ವಿಲಿಯಮ್ ಜೋನ್ಸ್‌ನ ಹೆಸರು ಎದ್ದು ಕಾಣುತ್ತದೆ. ಜೋನ್ಸ್ ವರ್ಗಕ್ಕೆ ಸೇರಿದ, ಆದರೆ ಅವನಿಗಿಂತ ಭಿನ್ನವಾಗಿ ಸಾಹಿತ್ಯ ಕೃಷಿಯನ್ನು ಮಾಡಿದರಲ್ಲಿ ಬ್ರೌನನು ಪ್ರಮುಖನು. ಇದರ ಚರ್ಚೆಗೆ ಮೊದಲು ಬ್ರೌನನ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.

ಚಾರ್ಲ್ಸ್ ಫಿಲಿಪ್ ಬ್ರೌನ್ ೧೭೯೮ರ ನವೆಂಬರ್ ೧೦ರಂದು ಕಲ್ಕತದಲ್ಲಿ ಜನಿಸಿದ. ಈಸ್ಟ್ ಇಂಡಿಯಾ ಕಂಪನಿಯಲ್ಲಿ ಕ್ರೈಸ್ತ ಧರ್ಮ ಪ್ರಚಾರನಾಗಿದ್ದ ಡೇವಿಡ್ ಬ್ರೌನನ ಎರಡನೇ ಮಗನಾಗಿದ್ದ ಚಾರ್ಲ್ಸ್ ಪ್ರಾಥಮಿಕ ಭಾರತದಲ್ಲೇ ನಡೆಯಿತು. ಚಾರ್ಲ್ಸ್‌ನನ್ನು ಒಬ್ಬ ವಿಧೇಯ ಕ್ರೈಸ್ತನನ್ನಾಗಿ ಮಾಡುವುದಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಡೇವಿಡ್ ತನ್ನ ಮಗನಿಗೆ ನೀಡಿದ. ಚಾರ್ಲ್ಸ್‌ನಿಗೆ ಹಿಬ್ರೂ ಭಾಷೆಯ ಮೇಲೆ ಹಿಡಿತವಿತ್ತು. ಇದರ ಜೊತೆಗೆ ಉರ್ದು, ಕನ್ನಡ ತಮಿಳು ಮತ್ತು ಕನ್ನಡದಲ್ಲಿ ಪಾಂಡಿತ್ಯ ಪಡೆದಿದ್ದ. ಬಾಲಕನಾಗಿದ್ದಾಗಲೇ ಅವನಿಗೆ ಇಂಗ್ಲೀಷ್ ಸಾಹಿತ್ಯದ ಬಗ್ಗೆ ಬಹಳಷ್ಟು ಒಲವಿತ್ತು. ಮಿಲ್ಟ್‌ನ ಪ್ಯಾರಡೈಸ್ ಲಾಸ್ಟ್. ಡ್ರೈಡನ್‌ನ ಐನೀಡ್ ಮತ್ತು ಕೋಪರ್ ನ ಹೊಮರ್ ಅವನ ನೆಚ್ಚಿನ ಕೃತಿಗಳಾಗಿದ್ದವು. ಭಾರತೀಯ ಸಾಹಿತ್ಯವನ್ನು ಅಭ್ಯಸಿಸುವಾಗ ಅವನು ಈ ಕೃತಿಗಳ ಜೊತೆಗೆ ತೌಲನಿಕ ಅಧ್ಯಯನ ಮಾಡಿದ. ತನ್ನ ಕಾಲೇಜು ಶಿಕ್ಷಣಕ್ಕಾಗಿ ಬ್ರೌನ್ ಲಂಡನ್‌ನ ಹೈಲ್ ಬುರಿ ಕಾಲೇಜುನ್ನು ಆಯ್ಕೆ ಮಾಡಿಕೊಂಡ. ಕಾಲೇಜ್ ಶಿಕ್ಷಣದ ನಂತರ ಬ್ರೌನ್‌ನನ್ನು ೧೯೧೭ರಲ್ಲಿ ಮದ್ರಾಸ್ ಸಿವಿಲ್ ಸರ್ವಿಸಸ್‌ಗೆ ಆಯ್ಕೆ ಮಾಡಲಾಯಿತು. ಮದ್ರಾಸಿನಲ್ಲಿದ್ದಾಗ ಆತನಿಗೆ ತೆಲಗು ಭಾಷೆ ಮತ್ತು ಸಾಹಿತ್ಯದ ಪರಿಚಯವಾಯಿತು. ಸರ್ಕಾರಿ ಆಫೀಸರಾಗಿ ಆತ ಅನೇಕ ಪ್ರದೇಶಗಳಲ್ಲಿ (ಕಡಪ, ಮಚಲಿಪಟ್ಣಂ) ಕೆಲಸ ಮಾಡಿದ. ಅವನು ತೆಲುಗು ಭಾಷೆಯ ಜ್ಞಾನವೃದ್ಧಿಗೋಸ್ಕರ ವೇಮನನ (ಮಧ್ಯಕಾಲೀನ ತೆಲುಗು ಕವಿ) ಕಾವ್ಯವನ್ನು ಅಭ್ಯಾಸ ಮಾಡತೊಡಗಿದ. ನಿರಂತರ ಸಾಹಿತ್ಯ ಕೃಷಿಯ ಪರಿಣಾಮವಾಗಿ ಮೂಡಿದ್ದೆ ಪ್ರಸಿದ್ಧವಾದ ತೆಲುಗು-ಇಂಗ್ಲೀಷ ನಿಘಂಟು. ಅವನ ಸಾಹಿತ್ಯ-ಭಾಷೆಯ ಕೊಡುಗೆಯನ್ನು ಗಮನಿಸಿಯೇ ತೆಲುಗು ಭಾಷಿಕರು ಅವನನ್ನು ಪ್ರೀತಿ ಮತ್ತು ಗೌರವದಿಂದ ‘ಬ್ರೌನ್ ದೊರೆ’ ಎಂದು ಕರೆಯುತ್ತಾರೆ. ಬ್ರೌನ್‌ನ ಕನ್ನಡ ಸೇವೆಯು ಅತ್ಯಮೂಲ್ಯ. ಐ.ಮಾ. ಮುತ್ತಣ್ಣರ ಪ್ರಕಾರ ಇಂಗ್ಲೀಷ್ ಭಾಷೆಯ ಪ್ರಾರಂಭಿಕರಿಗೆ ಬ್ರೌನ್ ತಯಾರು ಮಾಡಿದ ಪುಸ್ತಕವು ಕನ್ನಡ ಶಾಲೆಗಳಲ್ಲಿ (೧೮೫೦ರ ದಶಕದಲ್ಲಿ) ಬಹಳ ಕಾಲದವರೆಗೆ ಪಠ್ಯವಾಗಿತ್ತು (ಮುತ್ತಣ್ಣ, ೧೯೯೨: ೧೮೯). ೧೯೩೫ ರಿಂದ ೧೯೩೭ರವರೆಗೆ ಬ್ರೌನ್ ಮತ್ತೆ ಇಂಗ್ಲೇಂಡನಲ್ಲಿದ್ದಾಗ ಅವನ ಬೌದ್ಧಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ಸಿಕ್ಕಿತು. ಈ ಸಮಯದಲ್ಲಿ ಬ್ರೌನನಿಗೆ ಎಚ್.ಎಚ್. ವಿಲ್ಸನ್‌ನ (ಪ್ರಸಿದ್ಧ ಸಂಸ್ಕೃತ ವಿದ್ವಾಂಸ) ಪರಿಚಯವಾಯಿತು. ಅವರಿಬ್ಬರು ಭಾರತೀಯ ಸಾಹಿತ್ಯ, ಪರಂಪರೆಗಳ ಬಗ್ಗೆ ಸಾಕಷ್ಟು ಚರ್ಚೆ ಮಾಡುತ್ತಿದ್ದರು. ವಿಶೇಷವಾಗಿ ಶೈವ ಸಂಪ್ರದಾಯದ ಬಗ್ಗೆ ಅವರಿಗೆ ಆಸಕ್ತಿ ಮತ್ತು ಕುತೂಹಲ. ವಿಲ್ಸನ್‌ನ ಒಡನಾಟದಿಂದಲೇ ಬ್ರೌನನಿಗೆ “ಬ್ರಾಹ್ಮಣ-ವಿರೋಧಿ ಮತ್ತು ಅಸಂಪ್ರದಾಯ ವೀರಶೈವ ಮತಗಳ ಮೇಲೆ ಅಧ್ಯಯನ ಮಾಡುವ ಹಾಗೆ ಪ್ರೇರಣೆಯುಂಟಾಯಿತು” (ಪೀಟರ್ ಶ್ಮಿತ್ನರರ್, ೨೦೦೧:೧೨೪). ವಿಲ್ಸನ್‌ನ ಜೊತೆಗೂಡಿ ದಕ್ಷಿಣ ಭಾರತೀಯ ಹಸ್ತ ಪ್ರತಿಗಳನ್ನು ಶೋಧಿಸಿ. ಬ್ರೌನ್ ಅವುಗಳ ಒಂದು ದೊಡ್ಡ ಪಟ್ಟಿಯನ್ನು ತಯಾರಿಸಿದ.

ಲಿಂಗಾಯತರ ಬಗ್ಗೆ ಬ್ರೌನ್ ಬರೆದ ಲೇಖನಗಳಲ್ಲಿ ಪ್ರಮುಖವಾಗಿರುವಂತವು ಎರಡು: ಅ) Essay on the Creed and Customs of the Jangams (ಜನವರಿ, ೧೮೪೦ ಮತ್ತು ೧೮೭೧), ಆ) Essay in the Creed, Customs and Literature of the Jangams (ಅಕ್ಟೋಬರ್, ೧೮೪೦) ಮತ್ತು ಬಸವ ಪುರಾಣದ ಅನುವಾದ. ಬ್ರೌನ್ ಲಿಂಗಾಯತರ ಅನೇಕ ಪುರಾಣ, ಚರಿತ್ರೆಗಳನ್ನು ಓದಿ ಅವರ ಇತಿಹಾಸವನ್ನು ಬರೆದ. ಇದರ ಜೊತೆಗೆ ಪ್ರಭುಲಿಂಗಲೀಲೆ, ಚೆನ್ನಬಸವಪುರಾಣ ಹಾಗು ಪಂಡಿತಾರಾಧ್ಯ ಚರಿತ್ರೆಗಳ ಮೇಲೆ ಟೀಕೆಗಳನ್ನು ಬರೆದ. ಈ ಪುರಾಣಗಳಲ್ಲಿ ಅವನಿಗೆ ಇಷ್ಟವಾದ ಪುರಾಣವೆಂದರೆ ಪಾಲ್ಕುರಿಕೆ ಸೋಮನಾಥನ ಬಸವಪುರಾಣ. ಅದು ಅವನನ್ನು ಎಷ್ಟೊಂದು ಆಕರ್ಷಿಸಿತೆಂದರೆ. ಬ್ರೌನ್ ಅದನ್ನು ಲಿಂಗಾಯತರ ಧರ್ಮಗ್ರಂಥವೆಂದು ಘೋಷಿಸಿ, ಇಂಗ್ಲಿಷ್‌ಗೆ ತರ್ಜುಮೆ ಮಾಡಿದ.

ಬ್ರೌನನ ಜಂಗಮ ಸಾಹಿತ್ಯ ಸಂಗ್ರಹಣೆಯಲ್ಲಿ[3] ಸ್ಥಳೀಯ ವಿದ್ವಾಂಸರ ಸಹಕಾರ ಮತ್ತು ಸಹಯೋಗ ಹಿರಿದು. ಮಧ್ಯ ಏಷ್ಯಾದ ಇತಿಹಾಸಕಾರವಾದ ಮೊಹಮ್ಮದ್ ತವಕೋಲಿ-ತರ್ಗಿಯವರು ಆಫ್ರಿಕಾದ ಪೌರಾತ್ಯವಾದದ ಬಗ್ಗೆ ಬರೆಯುತ್ತಾ ಈ ಸಹಯೋಗದ (collaboration) ಬಗ್ಗೆ ಗಮನೀಯ ವಾದವನ್ನು ಮಂಡಿಸಿದ್ದಾರೆ (೨೦೦೩: ೧೦೫). ತರ್ಗಿಯವರ ಪ್ರಕಾರ ಪೌರಾತ್ಯ ಅಧ್ಯಯನದ ಮೊದಲು ದಿನಗಳು ವಸಾಹತುಶಾಹಿ ಪ್ರಭುತ್ವವನ್ನು ಸಾಧಿಸುವ ಒಂದೇ ಉದ್ದೇಶದಿಂದ ಕೂಡಿರಲಿಲ್ಲ; ಅದು ಸಹಯೋಗದಿಂದ ಕೂಡಿದ ಅಧ್ಯಯನವಾಗಿತ್ತು. ಈ ವಾದವು ಬ್ರೌನನ ವಿಷಯದಲ್ಲೂ ಸಮಂಜವೆನಿಸುತ್ತದೆ. ತರ್ಗಿಯ ವಾದವನ್ನು ಪ್ರತಿಧ್ವನಿಸುವ ಹಾಗೆ ಸಮಕಾಲೀನ ಪಾಶ್ಚಾತ್ಯ ವಿದ್ವಾಂಸರಾದ ಪೀಟರ್ ಎಲ್. ಶ್ಮಿತರಮೆನ್ ಬ್ರೌನನ ಬಗ್ಗೆ ಬರೆಯುತ್ತಾ, ಬ್ರೌನನ ಅಧ್ಯಯನವು “ಸಹಯೋಗದ ಫಲ” (೨೦೦೧:೩೩) ಎಂದು ನಿರೂಪಿಸಿದ್ದಾರೆ. ರಾಜಮಂಡ್ರಿಯ ಸ್ಮಾರ್ತ ಬ್ರಾಹ್ಮಣರಾದ ವೀರೇಶ ಲಿಂಗ ಶಾಸ್ತ್ರಿ ಹಾಗು ಮಲ್ಲಿಕಾರ್ಜುನ ಪಂಡಿತಾರಾಧ್ಯರ ಸಹಕಾರವಿಲ್ಲದಿದ್ದರೆ ಬ್ರೌನನಿಗೆ ಜಂಗಮ ಸಾಹಿತ್ಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲವೆಂದು[4] ಶ್ಮಿತರಮನ್‌ರ ಅಭಿಪ್ರಾಯ. ಅನೇಕರಿಗೆ ಬರೆದ ಪತ್ರದಲ್ಲಿ ಬ್ರೌನ್‌ನು ಜಂಗಮ ಸಾಹಿತ್ಯದ ಮೂಲ ಪ್ರತಿಗಳ ಸಂಗ್ರಹಕ್ಕಾಗಿ ಸಹಕಾರ ಕೋರಿದುದು ತಿಳಿದು ಬರುತ್ತದೆ.[5]  ಡಿಸೆಂಬರ್ ೧೨, ೧೮೪೦ರಂದು ಬ್ರೌನ್ ಧರ್ಮಪುರಿ ಸುಬ್ಬಣ್ಣ ಮತ್ತು ಗುಂಡವರಪು ಕೃಷ್ಣ ಐಯ್ಯಂಗಾರ್ ಎಂಬುವರಿಗೆ ಪತ್ರ ಬರೆದು ಜಂಗಮ ಮತ್ತು ಶೈವ ಸಾಹಿತ್ಯದ ಮೂಲ ಪ್ರತಿಗಳನ್ನು ಶೋಧಿಸಿ ಕಳುಹಿಸಬೇಕೆಂದು ಕೇಳಿಕೊಂಡಿರುವುದು ತಿಳಿದು ಬರುತ್ತದೆ. ವೈಷ್ಣವ, ಸ್ಮಾರ್ತ ಹಾಗು ಜಂಗಮರ ಜೊತೆಗಿನ ಒಡನಾಟದಿಂದ ಬ್ರೌನನಿಗೆ ಅನೇಕ ಸಾಹಿತ್ಯ-ಪರಂಪರೆಗಳ ಬಗ್ಗೆ, ವಿಶೇಷವಾಗಿ ಜಂಗಮ ಸಾಹಿತ್ಯದ ಒಳ-ಹೊರಗು, ತಿಳಿಯಿತು. ಸಾಹಿತ್ಯ-ಪರಂಪರೆಯ ವಾರಸುದಾದರು ತಾವೆ ಎಂದು, ಅದನ್ನು ಪ್ರತಿನಿಧಿಸುವದಕ್ಕೆ ತಾವೇ ಅರ್ಹರೆಂದು ಗರ್ವ ಪಡುವದನ್ನು, ಮತ್ತು ಇದಕ್ಕಾಗಿ ಅವರ ನಡುವೆ ಇದ್ದ ಪೈಪೋಟಿಯನ್ನು ಬ್ರೌನ್ ಕಂಡುಕೊಂಡ. ಈ ವಾರಸುದಾರಿಕೆಗಾಗಿ ಇವರು ಅನ್ಯರನ್ನು ದೂಷಿಸುವುದು ಬ್ರೌನ್‌ನ ಗಮನಕ್ಕೆ ಬಂತು. ಇದು ಅನೇಕ ವೇಳೆ ಧಾರ್ಮಿಕ ಸಂಘರ್ಷದ ಸ್ವರೂಪವನ್ನು ಪಡೆದುಕೊಳ್ಳುತ್ತಿದುದು ಬ್ರೌನನಿಗೆ ಸೋಜಿಗವೆನಿಸುತ್ತಿತ್ತು. ಒಟ್ಟಾರೆಯಾಗಿ ಇವರೆಲ್ಲರೂ ಇತರರ ಬಗ್ಗೆ ಪೂರ್ವಾಗ್ರಹ ಪೀಡಿತರಾಗಿರುವವರೆಂದು ಅವನಿಗೆ ಮನದಟ್ಟಾಯಿತು. ಆದರೆ ಅವರಿಂದ ಅವನು ಸಂಪೂರ್ಣವಾಗಿ ಪ್ರಭಾವಿತನಾಗದೆ, ತನ್ನದೆ ಆದ ಮಾನದಂಡದಿಂದ ಜಂಗಮ ಸಾಹಿತ್ಯವನ್ನು ಅಭ್ಯಸಿಸಿದ. “ಉನ್ನತವಾದ ಆಸ್ಥಾನ ಶೈಲಿಯಲ್ಲಿ” (ವೆಲ್ ಚೆರಿ, ೨೦೦೪:೧೫೨) ಬರೆಯಲ್ಪಟ್ಟ ಅನೇಕ ತೆಲುಗು ಕೃತಿಗಳನ್ನು ಈ ಪಂಡಿತರ ಸಹಾಯದಿಂದ ಬ್ರೌನ್ ಅರ್ಥೈಸಿಕೊಂಡ.

ತೆಲುಗಿನ ಬಸವ ಪುರಾಣ

ತೆಲುಗಿನ ಬಸವ ಪುರಾಣವನ್ನು ಪಾಲ್ಕುರಿಕೆ ಸೋಮನಾಥನು ಪ್ರಾಯಶ: ೧೩ನೇ ಶತಮಾನದಲ್ಲಿ ರಚಿಸಿದ ಎಂದು ಅನೇಕ ವಿದ್ವಾಂಸರ ನಂಬಿಕೆ. ಇದು ಲಿಂಗಾಯತ ಶರಣರ ಮತ್ತು ಬಸವನ ಜೀವನ ಚರಿತ್ರೆಯನ್ನು ಕಟ್ಟಿ ಕೊಡುತ್ತದೆ. ಕನ್ನಡ ಮತ್ತು ತೆಲುಗಿನ ಬಸವ ಪುರಾಣಗಳು ಕಥಾ ವಸ್ತುವಿನಲ್ಲಿ ಒಂದೆ ಇದ್ದರೂ, ಅವುಗಳ ಶೈಲಿ ಭಿನ್ನ, ಭಿನ್ನವಾಗಿವೆ. ಕನ್ನಡದ ಬಸವ ಪುರಾಣ ಷಟ್ಪದಿ ಶೈಲಿಯಲ್ಲಿದ್ದರೆ, ಸೋಮನಾಥನ ಬಸವ ಪುರಾಣ ದ್ವಿಪದಲ್ಲಿದೆ. ಆಗಿನ ಸಮಯದಲ್ಲಿ ಪ್ರಸಿದ್ಧವಾದ, ಬ್ರಾಹ್ಮಣೀಕೃತ ಚಂಪೂ ಕಾವ್ಯಕ್ಕೆ ಸೆಡ್ಡು ಹೊಡೆದ ಶೈಲಿಯಿದು. ಇದನ್ನು ಬ್ರೌನ್ ಸರಳವಾದ, ದೇಸಿ ಶೈಲಿಯೆಂದು ಬಣ್ಣಿಸುತ್ತಾನೆ. ವೆಲ್ ಸೆರು ನಾರಾಯಣರಾವ್[6] ಅವರ ಪ್ರಕಾರ ದ್ವಿಪದ ಶೈಲಿಯು “ಮೌಖಿಕ -ಪರಂಪರೆಯ ಜನಪ್ರಿಯ ಸಾಹಿತ್ಯ ಪ್ರಕಾರವಾಗಿದ್ದು, ಅದು ಜಾನಪದ ಹಾಡುಗಳ ಜೊತೆಗೆ ಅತ್ಯಂತ ನಿಕಟ ಸಂಬಂಧ ಹೊಂದಿದೆ” (೧೯೯೦;೫). ಶ್ಮಿತರಮೆನ್ ಭಾವಿಸುವ ಹಾಗೆ ಬ್ರೌನನು ಬಸವ ಪುರಾಣದ ಸ್ಪಷ್ಟತೆ. ಸ್ವಚ್ಛತೆ ಮತ್ತು ಉದಾರತೆಗೆ ಮಾರು ಹೋಗಿದ್ದ. ದ್ವಿಪದ ಶೈಲಿಯ ಗ್ರಾಮ್ಯ ಲಕ್ಷಣಗಳು ಅವನನ್ನು ಪುರಾಣದ ಬಗ್ಗೆ ಮತ್ತಷ್ಟು ಒಲವು ತೋರಿಸಲು ಪ್ರೇರೇಪಿಸಿದವು. ೧೮೪೦ರಲ್ಲಿ ಬ್ರೌನ್ ಇದರ ಭಾಷಾಂತರವನ್ನು (ಸಂಕ್ಷಿಪ್ತ ರೂಪದಲ್ಲಿ) ಮದ್ರಾಸ್ ಜರ್ನಲ್ ಆಫ್ ಸೈನ್ಸ್ ಮತ್ತು ಲಿಟರೆಚರ್ ಎಂಬ ನಿಯತಕಾಲಿಕದಲ್ಲಿ “Account of the Basava Purana: the Principal Book used as a religious Code by the Jangams” ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಿದ. ಈ ಪುರಾಣದ ಮೂಲ ಶೈಲಿಯನ್ನು ಭಾಷಾಂತರ ಮಾಡಲು ಸಾಧ್ಯವಾಗದ ಕಾರಣ, ಬ್ರೌನ್ ಅದರ ಬಗ್ಗೆ ಹೆಚ್ಚು ತಲೆ ಕೆಡೆಸಿಕೊಳ್ಳುವದಿಲ್ಲ. ಪಾಶ್ಚಾತ್ಯ ಮಿಮಾಂಸೆ ಮತ್ತು ಸೌಂದರ್ಯ ಶಾಸ್ತ್ರದಲ್ಲಿ ಪರಿಣಿತಿಯನ್ನು ಹೊಂದಿದ್ದ ಬ್ರೌನ್ ಪುರಾಣದ ಸಂಪ್ರದಾಯಿಕ ಕಾವ್ಯ ಶೈಲಿಯನ್ನು ಆಧುನಿಕ ಗದ್ಯ ಶೈಲಿಗೆ ತಿರುಗಿಸಿದ್ದಾನೆ. ಅದನ್ನು “ಪರಿಚಯದ ಪ್ರಕ್ರಿಯೆ” (“a process of familiarisation” (ದಿಂಗ್ವೇನಿ ಮತ್ತು ಮೇಯರ್, ೧೯೯೬: ೫) ಈಗಾಗಲೇ ಪರಿಚಯವಿರುವ ಸಾಂಸ್ಕೃತಿಕ ಪರಿಕಲ್ಪನೆ, ಆಚಾರ ಅಥವಾ ರೂಪಕ್ಕೆ ಅನುವಾದಿಸುವ ಪ್ರಕ್ರಿಯೆ)ಯ ಮೂಲಕ ಪಾಶ್ಚಾತ್ಯರು ಮತ್ತು ಇಂಗ್ಲಿಷ ಓದುಗರಿಗೆ ಅರ್ಥವಾಗುವ ಹಾಗೆ ಭಾಷಾಂತರಿಸಿದ. ಹೀಗೆ ಗದ್ಯ ಶೈಲಿಯಲ್ಲಿ ಭಾಷಾಂತರ ಮಾಡಲು ಮುಂದಾದ ಬ್ರೌನ್ ತನಗೆ ಬೇಕಾದ್ದನ್ನು ಸೇರಿಸಿ, ಬೇಡವಾದದನ್ನು ತ್ಯಜಿಸಿ ಅಥವಾ ಮತ್ತೆ-ಬರೆಯುವ ಸ್ವಾತಂತ್ರ‍್ಯವನ್ನು ಉದಾರವಾಗಿ ಚಲಾಯಿಸಿದ. ಈ ತರಹದ ಪ್ರಕ್ರಿಯೆ ವಸಾಹತುಶಾಹಿಗೆ ಮಾತ್ರ ಸೀಮಿತವಾಗಿರಲಿಲ್ಲ. ಇದನ್ನು ವಸಾಹತ್ತೋರ ಸಮಯದಲ್ಲೂ ಕಾಣಬಹುದು. ಉದಾಹರಣೆಗೆ, ವೆಲ್ ಚೆರು ನಾರಾಯಣ ರಾವ್ ರವರು ಬಸವ ಪುರಾಣವನ್ನು ಇಂಗ್ಲಿಷಿಗೆ ಭಾಷಾಂತರಿಸುವಾಗ (೧೯೯೦) ಬ್ರೌನ್ ತರಹದ್ದೆ ಸಮಸ್ಯೆಯನ್ನು ಎದುರಿಸಿದರು. ಬ್ರೌನನ ಹಾಗೆ, ಆದರೆ ವಿಸ್ತೃತ ಗದ್ಯ ಶೈಲಿಯಲ್ಲಿ, ಪುರಾಣವನ್ನು ಭಾಷಾಂತರಿಸಿದ್ದಾರೆ. ಪುರಾಣದ ಬಂಡುಕೋರ ಅಂಶವು ಬ್ರೌನನನ್ನು ಸೆಳೆದ ಹಾಗೆ, ನಾರಾಯಣ ರಾವ್ ರನ್ನು ಸಹ ಆಕರ್ಷಿಸಿದೆ.

ತೌಲನಿಕ ವಿದ್ವಾಂಸನಾಗಿ ಬ್ರೌನ್ : ವಿಲಿಯಮ್ ಜೋನ್ಸ್ ಹಾದಿಯಲ್ಲಿ?

ತೌಲನಿಕ ಅಧ್ಯಯನಕ್ಕೆ ವಿಲಿಯಲ್ ಜೋನ್ಸ್ ನ ಕಾಣಿಕೆ ಮಹತ್ವರವಾದುದು. ಪೂರ್ವ-ಪಶ್ಚಿಮ ಸಾಹಿತ್ಯ-ಧರ್ಮದ ಅಧ್ಯಯನಕ್ಕೆ ಭದ್ರ ಬುನಾದಿಯನ್ನು ಹಾಕಿದಂತ ವಿದ್ವಾಂಸ ಆತ. ಅನೇಕ ಬ್ರಿಟೀಷ್ ವಿದ್ವಾಂಸರ ಹಾಗೆ ಅವನೂ ಸಹ ಮ್ಯಾಕ್ಸ್ ಮುಲ್ಲರ್ ಅನೇಕ ವರ್ಷಗಳ ನಂತರ ಹೇಳಿದ ಹಾಗೆ: “ಇಂಡಿಯ: ನಮಗೇನು ಕಲಿಸುತ್ತದೆ?” ಎಂಬುದನ್ನು ತಿಳಿದುಕೊಳ್ಳಲು ಅಧ್ಯಯನಗಳನ್ನು ಕೈಗೊಂಡನು. ಹಿಂದು ಸಾಹಿತ್ಯ-ಪರಂಪರೆಯನ್ನು ಅಭ್ಯಸಿಸುವದರಿಂದ ಕ್ರಿಶ್ಚಿಯನ್ ಧರ್ಮದ ಮೂಲದ ಬಗ್ಗೆ ಯೂರೋಪಿಯನ್ನರ ಐತಿಹಾಸಿಕ ಪ್ರಜ್ಞೆ ಹಾಗು ಅವರ ನಾಗರೀಕತೆಯ ಬಾಲ್ಯವನ್ನು ತಿಳಿದುಕೊಳ್ಳಬಹುದೆಂದು ಅನೇಕ ಪಾಶ್ಚಾತ್ಯ ವಿದ್ವಾಂಸರು ನಂಬಿದ್ದರು.[7] ಬಹುಶ: ಬ್ರೌನನು ಈ ಅಂಶದ ಜಾಡಿನಲ್ಲಿ ಸಂಶೋಧನೆ, ಸಂಗ್ರಹಣೆ ಮತ್ತು ಸಂಕಲನ ಕಾರ್ಯವನ್ನು ಕೈಗೊಂಡನು ಅಂತ ಹೇಳಬಹುದು. ಬ್ರೌನನ ತೌಲನಿಕ ಅಧ್ಯಯನ ಬಹುತೇಕ ಜೋನ್ಸ್ ನ ಮಾದರಿಯಲ್ಲಿ ಮುಂದುವರೆಯುತ್ತದೆ. ಆದರೂ ಅವರಿಬ್ಬರಲ್ಲಿ ಭಿನ್ನತೆಗಳನ್ನು ಕಾಣಬಹುದು. ಇಂಡಾಲಜಿಸ್ಟರಾದ ಎಚ್.ಎಚ್. ವಿಲ್ಸ್ ನರ ಜೊತೆಗೆ ಬ್ರೌನಿಗಿದ್ದ ಭಿನ್ನಾಭಿಪ್ರಾಯಗಳನ್ನು ಅರ್ಥ ಮಾಡಿಕೊಂಡರೆ ಬ್ರೌನನಿಗೂ ಮತ್ತು ಜೋನ್ಸ್ ನಿಗೂ ಇದ್ದ ವ್ಯತ್ಯಾಸಗಳನ್ನು ತಿಳಿದುಕೊಳ್ಳಬಹುದು: ಅ) ವಿಲ್ಸ್ ನನ್ನು ಶೈವ ಪರಂಪರೆಯ ಬಗ್ಗೆ ತಪ್ಪು ಗ್ರಹಿಕೆಗಳನ್ನು ಇರಿಸಿಕೊಂಡಿದ್ದರು ಎಂದು ಬ್ರೌನ್‌ನ ನಿಲುವಾಗಿತ್ತು.[8] ಅಂದರೆ ವಿಲ್ಸ್ ನನ್ನು ಶೈವ ಪರಂಪರೆಯು ಬರೀ ತಾಂತ್ರಿಕ ಆಚಾರಗಳನ್ನು ಹೊಂದಿದೆಯೆಂದು ಅದರ ಬಗ್ಗೆ ಮತ್ತಷ್ಟು ಸಂಶೋಧನೆಯಾಗಬೇಕೆಂದು ಬಯಸಿದ್ದನು. ಇದು ಸಂಕುಚಿತ ದೃಷ್ಟಿಕೋನದಿಂದ ಕೂಡಿದ ಮಾಹಿತಿ[9] ಎಂದು ಬ್ರೌನ್‌ನ ಅಭಿಪ್ರಾಯವಾಗಿತ್ತು. ಆ) ಸ್ಥಳೀಯ ಬ್ರಾಹ್ಮಣರ ಬಗ್ಗೆ ಬ್ರೌನ್‌ಗೆ ಅಸಮಾಧಾನವಿತ್ತು. ಈ ಅಸಮಾಧಾನವೇ ಬ್ರೌನ್‌ಗೆ ಬ್ರಾಹ್ಮಣೇತರ / ಸಂಸ್ಕೃತೇತರ ಸಾಹಿತ್ಯ ಪರಂಪರೆಯ ಬಗ್ಗೆ ಅಧ್ಯಯನ ಮಾಡುವಂತೆ ಪ್ರಚೋದಿಸಿತು. ಪೌರಾತ್ಯರ ಸಂಸ್ಕೃತಿ-ಸಾಹಿತ್ಯ ಪರಂಪರೆಯ ಬಗ್ಗೆ ಸಹಾನುಭೂತಿಯನ್ನು ಇರಿಸಿಕೊಂಡಿದ್ದ ಜೋನ್ಸ್ ಮತ್ತು ನಂತರದ ಪಾಶ್ಚಾತ್ಯ ವಿದ್ವಾಂಸರು ಸಂಸ್ಕೃತ-ಕೇಂದ್ರಿತ ಅಧ್ಯಯನಗಳನ್ನು ಮಾತ್ರ ಕೈಗೊಂಡರು. ಇದು ಬ್ರೌನ್‌ನಿಗೆ ಸರಿಬೀಳಲಿಲ್ಲ. ಹೀಗಾಗಿ ಸಂಸ್ಕೃತೇತರ ಮತ್ತು ಮುಖ್ಯ ವಾಹಿನಿಯಿಂದ ದೂರ ತಳಲ್ಪಟ್ಟಿದ್ದ ಸಾಹಿತ್ಯ-ಸಂಸ್ಕೃತಿಯನ್ನು ಬೆಳಕಿಗೆ ತರುವ ಉದ್ದೇಶದಿಂದ ಬ್ರೌನನು ಜಂಗಮರ ಬಗ್ಗೆ ಅಧ್ಯಯನ ಕೈಗೊಂಡನು. ಇಲ್ಲಿ ಒಂದು ವಿಶೇಷವನ್ನು ಗಮನಿಸಬೇಕು. ಬ್ರೌನನಿಗೆ ಜಂಗಮರ ಸಾಹಿತ್ಯ (ಪುರಾಣಗಳ ಶೈಲಿ) ಜಾನಪದೀಯ ಅಂಶಗಳಿಂದ ಕೂಡಿದ್ದೆಂಬ ವಿಚಾರ. ಆದ್ದರಿಂದ ಈ ಅಂಶಗಳ ಮೇಲೆ ಅವನು ಹೆಚ್ಚು ಗಮನ ಹರಿಸಿದನು. ಈ ಆಂಶಗಳಿಗೆ ಒತ್ತು ಕೊಡುವುದರ ಮೂಲಕ ಸಂಸ್ಕೃತಮಯ ಸೃಜನಶೀಲ ಮತ್ತು ಉದ್ದಾತ್ತವಾದ ವಿಚಾರಗಳುಳ್ಳ ಸಾಮಾನ್ಯ ಕಾವ್ಯವೆಂದು[10] ಬ್ರೌನನು ತೋರಿಸಿಕೊಟ್ಟನು.

ತಾನು ಕೆಲಸ ಮಾಡುತಿದ್ದ ಸ್ಥಳಗಳಲ್ಲಿ ಅನೇಕ ಪ್ರತಿಗಳನ್ನು ಸಂಗ್ರಹಿಸಿದ ಬ್ರೌನನು, ಅವುಗಳನ್ನು ಅರ್ಥ ಮಾಡಿಕೊಳ್ಳವದಕ್ಕಾಗಿ ಬ್ರಾಹ್ಮಣ ಪಂಡಿತರನ್ನು ಅವಲಂಬಿಸಿದ್ದ ಆದರೆ ಕಾಲ ಕ್ರಮೇಣ ಅವನಿಗೆ ಆ ಪಂಡಿತರು ಒದಗಿಸುತ್ತಿದ್ದ ಮಾಹಿತಿಗಳ ಬಗ್ಗೆ ಅಪನಂಬಿಕೆ ಶುರುವಾಯಿತು. ಏಕೆಂದರೆ ಬ್ರಾಹ್ಮಣೇತರ ಸಾಹಿತ್ಯವನ್ನು, ವಿಶೇಷವಾಗಿ ಜಂಗಮ ಸಾಹಿತ್ಯವನ್ನು, ಅವರು ನಿರ್ಲಕ್ಷಿಸಿದ್ದಾರೆಂದು ಮತ್ತು ಅದರ ಬಗ್ಗೆ ತಪ್ಪು ಮಾಹಿತಿ ಕೊಡುತ್ತಿದ್ದಾರೆಂದು ಬ್ರೌನನು ಕಂಡುಕೊಂಡನು. ಬ್ರಾಹ್ಮಣರು (ವಿಶೇಷವಾಗಿ ವೈಷ್ಣವರು) ಜಂಗಮರನ್ನು ದ್ವೇಷಿಸುತ್ತಿದುದು ಬ್ರೌನನಿಗೆ ಸರಿ ಬೀಳಲಿಲ್ಲ. ಆದರೆ ಈ ದ್ವೇಷವನ್ನು ಹೋಗಲಾಡಿಸಬೇಕೆಂಬ ಮಹತ್ವಾಕಾಂಕ್ಷೆಯು ಅವನಲ್ಲಿರಲಿಲ್ಲ. ಇವರಿಬ್ಬರ ನಡುವಿನ ಪಾರಂಪರಿಕ ಸಂಘರ್ಷದಿಂದ ಜಂಗಮ ಸಾಹಿತ್ಯವು ಬೆಳಕಿಗೆ ಬರದೆ ಮೂಲೆಗುಂಪಾಗಿರುವುದನ್ನು ಅರಿತುಕೊಂಡ ಬ್ರೌನ್ ಜಂಗಮ ಸಾಹಿತ್ಯದ ನಿಜವಾದ ಸತ್ವವನ್ನು ಅರ್ಥ ಮಾಡಿಕೊಂಡು ಅದನ್ನು ಪಾಶ್ಚಾತ್ಯಕ್ಕೆ ಪರಿಚಯಿಸಲು ಉತ್ಸುಕನಾದ. ಬ್ರೌನನ ಸಮಸ್ಯೆ ಇವರ ನಡುವಿನ ವೈಮನಸ್ಯಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಇದಕ್ಕೂ ಮೊದಲು ಇಟಾಲಿಯನ್ ಪ್ರವಾಸಿ (೧೬೨೦ ರ ಸುಮಾರು) ಡೆಲ್ಲಾ ವೆಲ್ಲ, ಬ್ರಿಟೀಷ್ ವಿದ್ವಾಂಸರಾದ ಫ್ರಾನ್ಸಿನ್ ಬುಕನಾನ್ ಮತ್ತು ಕರ್ನಲ್ ವಿಲ್ಕ್ಸ್ ಇವರುಗಳು ಲಿಂಗಾಯತರ ಬಗ್ಗೆ ಸಂಗ್ರಹಿಸಿದ್ದ ಮಾಹಿತಿಯನ್ನು ಗೌರವಯುತವಾಗಿ ಸ್ವೀಕರಿಸುತ್ತಾ, ಅವುಗಳಲ್ಲಿ ತನಗೆ ಬೇಕಾದ ಮಾಹಿತಿಯನ್ನು ಗೌರವಯುತವಾಗಿ ಸ್ವೀಕರಿಸುತ್ತಾ, ಅವುಗಳಲ್ಲಿ ತನಗೆ ಬೇಕಾದ ಮಾಹಿತಿಯನ್ನು ಮಾತ್ರ ಆರಿಸಿಕೊಂಡನು. ಆದರೆ ಅವರು ನೀಡಿದ ದಾಖಲೆಗಳನ್ನು ಸಾರಾ ಸಗಟ ಒಪ್ಪಿಕೊಳ್ಳಲು ಅವನು ತಯಾರಿರಲಿಲ್ಲ.

ಇವರ ಬಗ್ಗೆ ಅಲ್ಲಲ್ಲಿ ಸಣ್ಣ-ಪುಟ್ಟ ಮಾಹಿತಿಗಳು ಸಿಗುತ್ತವೆ. ಇಟಾಲಿಯ ಪ್ರವಾಶಿ ಡೆಲ್ಲಾ ವಲ್ಲೆ (ಅಧ್ಯಾಯ ೨೧, ಪತ್ರ ೫, ೧೬೨೩ ನವೆಂಬರ್), ೧೮೦೦ರಲ್ಲಿ ಬರೆಯಲ್ಪಟ್ಟು ಫ್ರಾನ್ಸಿಸ್ ಬುಕನಾನ್‌ನ ಮೈಸೂರು ವರ್ಣನೆ, ಕರ್ನಲ್ ವಿಲ್ಸನ್ನನ ಮೈಸೂರು ವಿವರಗಳು ಮತ್ತು ಅಬ್ಬೆ ಡುಬಾಯಿಸ್ ಮಾಹಿತಿಗಳು ಈ ಮತದ ಬಗ್ಗೆ ಇವೆ. ಅವು ಜಂಗಮರ ವಿರೋಧಿಗಳಾದ ವೈಷ್ಣವ ಬ್ರಾಹ್ಮಣರಿಂದ ಸಂಗ್ರಹಿಸಲ್ಪಟ್ಟ ಮಾಹಿತಿಗಳಾಗಿವೆ. ಆದರೆ ಈ ಮತದ ಬಗ್ಗೆ ಅವರ ಬಾಯಿಯಿಂದಲೇ ತಿಳಿದುಕೊಳ್ಳುವದಕ್ಕೋಸ್ಕರ ಮತ್ತು ವಿಷಯ ಸಂಗ್ರಹಿಸುವದಕ್ಕೋಸ್ಕರ ಅವರನ್ನು (ಜಂಗಮ) ನಾನೇ ಖದ್ದಾಗಿ ಸಂದರ್ಶಿಸಿದೆ (ಬ್ರೌನ್, ೧೯೭೧: ೧೪೧).

ಬ್ರೌನನು ಇಲ್ಲಿ ಒಬ್ಬ ಮಾನವ ಶಾಸ್ತ್ರದ ಕ್ಷೇತ್ರ ಅಧ್ಯಯನಕಾರಿಯಾಗಿ ಕಾಣಿಸುತ್ತಾನೆ. ಅದು ನಿಜವೂ ಹೌದು, ಏಕೆಂದರೆ ಆತನು ಅನೇಕ ಜಂಗಮರನ್ನು ಸಂದರ್ಶಿಸಿ, ಅವರ ಜಾನಪದೀಯ ಸಾಹಿತ್ಯವನ್ನು ಸಂಗ್ರಹಿಸಿದನು. ಜಂಗಮ ಸಾಹಿತ್ಯದ ಒದಗಿಸಿ ಕೊಡಬೇಕೆಂಬ ಹಂಬಲ ಮತ್ತು ಅದರ ವಿಶಿಷ್ಟತೆಯನ್ನು ಹೊರಗೆ ತರುವ ಹೆಬ್ಬಯಕೆ.

ಬಸವ ಪುರಾಣದ ಬಗ್ಗೆ ಬರೆಯುವಾಗ ಬ್ರೌನ್ ಒಬ್ಬ ಆಧುನಿಕ ವ್ಯಾಖ್ಯಾನಕಾರನಾಗಿ ಗೋಚರಿಸುತ್ತಾನೆ. ಭಾರತದಲ್ಲಿ ಸಾಹಿತ್ಯದ ಉಗಮವನ್ನು ವಿಕಾಸವಾದಯಲ್ಲಿಟ್ಟು (theory of evolution) ಅರ್ಥ ಮಾಡಿಕೊಳ್ಳಲು ಇಷ್ಟಪಡುತ್ತಾನೆ. ಈ ದೃಷ್ಟಿಕೋನವು ರಮಾ ಸುಂದರಿ ಮಾಂಟೇನ ಹೇಳುವ ಹಾಗೆ “ಭಾರತೀಯ ಹಾಗೂ ಐರೋಪ್ಯ ಭಾಷೆಗಳ ಸಾಹಿತ್ಯ ‘ಅಭಿವೃದ್ಧಿಯನ್ನು’ ತೌಲನಿಕವಾಗಿ ಅಧ್ಯಯನ ಮಾಡಲು” (ಮಾಂಟೇನ, ೨೦೦೫: ೫೩೦) ಅನುವು ಮಾಡಿಕೊಟ್ಟಿತು. ಹೀಗಾಗಿ ಬ್ರೌನನ ತೌಲನಿಕ ಅಂಶವು ಭಾರತ-ಯುರೋಪಿನ ನಡುವಿನ ಅಂತರವನ್ನು ಗುರುತಿಸುವುದರ ಮೂಲಕ ಪ್ರಾರಂಭವಾಗುತ್ತದೆ.

ಹಿಂದೆ ಪ್ರಕಟಗೊಂಡ ಜಂಗಮದ ಲೇಖನದಲ್ಲಿ ವೀರಶೈವರು ಯಾವ ವಿಧದಲ್ಲಿ ಬೇರೆ ಹಿಂದುಗಳಿಗಿಂತ ಭಿನ್ನ ಎಂದು ತೋರಿಸಲಾಗಿದೆ. ಇದನ್ನು ಪೂರ್ಣ ಪ್ರಮಾಣದಲ್ಲಿ ಅರ್ಥ ಮಾಡಿಕೊಳ್ಳಬೇಕಾದರೆ, ಅವರ ಜಾನಪದ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ, ಎಲ್ಲಾ ದೇಶಗಳಲ್ಲು ಪೌರಾಣಿಕ ತಿಳಿವಳಿಕೆ ಬಾಳಿಶದಿಂದ ಕೂಡಿದೆ. ಪ್ರಿಂಟ್ ತಂತ್ರ ಆರಂಭವಾಗುವ ಮೊದಲು ಯೂರೋಪಿನ ಪರಿಸ್ಥಿತಿ ಭಾರತಕ್ಕಿಂತ ಉತ್ತಮವೇನು ಇರಲಿಲ್ಲ. (ಪು. ೨೭೧).[11]

ಬ್ರೌನ್‌ಗೆ ಪ್ರಿಂಟ್ ತಾಂತ್ರಿಕತೆಯ ಬಗ್ಗೆ ದೃಢವಾದ ನಂಬಿಕೆ. ಪಕ್ವತೆ ಮತ್ತು ನಾಗರೀಕತೆಯನ್ನು ಸಾಧಿಸಲು ಆಧುನಿಕ ತಾಂತ್ರಿಕತೆಯಿಂದ ಸಾಧ್ಯ ಎಂತಲೇ ಅವನು ಶುರು ಮಾಡುತ್ತಾನೆ. ನಿಸ್ಸಂದೇಹವಾಗಿ ಪ್ರಿಂಟ್ ತಾಂತ್ರಿಕತೆ ಇಲ್ಲಿ ಪ್ರಗತಿ ಮತ್ತು ವಿಕಾಸದ ಸಂಕೇತವಾಗಿ ಕಾಣುತ್ತದೆ. ಇದು ಪಾಶ್ಚಾತ್ಯ ದೇಶಗಳಲ್ಲಿ ತನ್ನ ಛಾಪನ್ನು ಮೂಡಿಸಿದ್ದರೆ, ಅದಿನ್ನು ಭಾರತದಲ್ಲಿ ಶುರುವೇ ಆಗಿಲ್ಲವೆಂದು ಕೊರತೆಯನ್ನು ಆತ ಎತ್ತಿ ತೋರಿಸುತ್ತಾನೆ. ಪ್ರಿಂಟ್ ತಾಂತ್ರಿಕತೆ ಪಾಶ್ಚಾತ್ಯರ ಜ್ಞಾನೋದಯ (enlightenment), ಉದಾರತೆ, (liberalism) ಇತ್ಯಾದಿಗಳಿಗೆ ಸಂವಾದಿಯಾಗಿ ಮೂಡಿ ಬಂದ ಸವಲತ್ತು. ಇದನ್ನು ಪಾಶ್ಚಾತ್ಯರು ಪ್ರಪಂಚಕ್ಕೆ ನೀಡಿದ ಕೊಡುಗೆಗಳು ಎಂದು ಬ್ರೌನ್ ಗರ್ವ ಪಡುತ್ತಾನೆ. ಈ ಪ್ರಿಂಟ್ ತಾಂತ್ರಿಕತೆಯ ಸಹಾಯದಿಂದ ತೆಲುಗು ಸಾಹಿತ್ಯದ ಅವ್ಯವಸ್ಥೆಯನ್ನು ವ್ಯವಸ್ಥಿತವನ್ನಾಗಿ ಮಾರ್ಪಾಡಿಸುವ ತವಕ ಬ್ರೌನ್‌ಗೆ. ಆದರೆ ಈ ಗರ್ವ ವಸಾಹತುಶಾಹಿ ವ್ಯವಸ್ಥೆಯನ್ನು ಸಮರ್ಥಿಸಿ ಕೊಳ್ಳುವುದಕ್ಕಾಗಲಿ ಅಥವಾ ಮೂದಲಿಸುವುದಕ್ಕಾಗಲಿ ಇರಲಿಲ್ಲ. ಹಿಂದು ಸಂಸ್ಕೃತಿ, ವಿಶೇಷವಾಗಿ ಜಂಗಮ ಸಾಹಿತ್ಯ, ಏಕೀಕೃತ ಘಟಕವಾಗಿಲ್ಲವೆಂದು ಅವನಿಗೆ ತೋರಿಸಬೇಕಾಗಿತ್ತು. ಪೌರಾತ್ಯ ಸಾಹಿತ್ಯವು ಶಿಲಾಯುಗಕ್ಕೆ ಸೇರಿದ್ದಲ್ಲವೆಂದು ಮತ್ತು ಸಂಸ್ಕೃತೇರ ಸಾಹಿತ್ಯಗಳು ಅಧ್ಯಯನ ಯೋಗ್ಯವೆಂದು ಅವನು ನಿರೂಪಿಸಬೇಕಾಗಿತ್ತು. “ಮೊಹಮ್ಮದನ್ನರ ಆಕ್ರಮಣ” ಮತ್ತು “ತೆಲುಗು ಪಂಡಿತರಿಂದ ನಿರ್ಲಕ್ಷಗೊಳಗಾಗಿದ್ದ” (ಮಾಂಟೆನ, ೨೦೦೫: ೫೧೫-೫೧೬) ತೆಲುಗು ಸಾಹಿತ್ಯವನ್ನು ಪುನುರುಜ್ಜೀವನಗೊಳಿಸುವ ಜವಾವ್ದಾರಿಯು ಇದರಲ್ಲಿ ಅಡಕವಾಗಿತ್ತು.

ಭಾರತೀಯ ಹಾಗು ಐರೋಪ್ಯ ಸಾಹಿತ್ಯಗಳ ಸಮಾನ ಅಂಶಗಳನ್ನು ಅವಲೋಕಿಸುವಾಗ ಬ್ರೌನ್ ವಿಶೇಷವಾಗಿ ಬಸವ ಪುರಾಣ ಕ್ರಿಶ್ಚಯನ್ ಪುರಾಣ, ದಂತಕಥೆ, ಹಳೆಯ ಒಡಂಬಡಿಕೆಗಳ ನಡುವೆ ಇರುವ ಸಮಾನ ಅಂಶಗಳನ್ನು ಗುರುತಿಸುತ್ತಾನೆ. ಈ ಅವಲೋಕನದಿಂದ ತೆಲುಗು ಸಾಹಿತ್ಯಕ್ಕೆ ಬಲವಾದ ಮತ್ತು ದೃಢವಾದ ಅಡಿಪಾಯವಿದೆ ಎಂದು ಅವನು ನಂಬುತ್ತಾನೆ. ಪುರಾತನ ಪಾಶ್ಚತ್ಯ ಸಾಹಿತ್ಯವು ತೆಲುಗು ಸಾಹಿತ್ಯಕ್ಕಿಂತ ಶ್ರೇಷ್ಠವಾಗಿತ್ತು ಎಂದು ಅವನು ಎಲ್ಲಿಯೂ ಹೇಳುವದಿಲ್ಲ. ಇಲ್ಲಿ ನಾವು ಬ್ರೌನ್‌ನ ಉದಾರವಾದಿ ದೃಷ್ಟಿಕೋನವನ್ನು ಕಾಣಬಹುದು. ಈ ಉದಾರವಾದಿ ದೃಷ್ಟಿಕೋನವು ಬ್ರೌನ್ ಕೈಗೊಂಡ ತೌಲನಿಕ ಅಧ್ಯಯನಕ್ಕೆ ಬುನಾದಿಯಾಗಿತ್ತು. ಅವನು ಅನೇಕ ಉದಾಹರಣೆಗಳ ಮೂಲಕ ಪಾಶ್ಚಾತ್ಯ ಮತ್ತು ಪೌರುತ್ಯ ಸಾಹಿತ್ಯಗಳ ನಡುವೆ ಇರುವ ಸಾಮ್ಯತೆಗಳನ್ನು ತೋರಿಸುತ್ತಾನೆ. ಉದಾಹರಣೆಗೆ, ಜಂಗಮದಲ್ಲಿ ಸಾಮಾನ್ಯವಾಗಿ ಕಾಣುವ ಉಪವಾಸದ ಆಚರಣೆಯನ್ನು ಪಾಶ್ಚಾತ್ಯ ಲೋಕದ ಸಂತ ನಿಕೋಲಾಸ್‌ಗೆ ಹೋಲಿಸುತ್ತಾನೆ. ನಿಕೋಲಾಸ್ ಎಳೆಯ ಬಾಲಕನಾಗಿದ್ದಾಗ ಎದೆಯ ಹಾಲು ಕುಡಿಯದೆ ಬುಧವಾರ ಮತ್ತು ಶುಕ್ರವಾರದಂದು ಉಪವಾಸ ಮಾಡುತ್ತಿದ್ದ. ಬೇಡರ ಕಣ್ಣಪ್ಪನು ಶಿವನಿಗೆ ತನ್ನೆರಡು ಕಣ್ಣುಗಳನ್ನು ಭಕ್ತಿಯಿಂದ ತ್ಯಾಗ ಮಾಡಿದ ನಂಬಿಕೆಯನ್ನು ಬ್ರೌನ್‌ನು ನೇಪಲ್ಸ್‌ನ ಸಂತ ಲೂಸಿಯ್‌ಗೆ ಹೋಲಿಸುತ್ತಾನೆ. ಲೂಸಿಯಾ ಕೂಡ ತನ್ನೆರಡು ಕಣ್ಣುಗಳನ್ನು ಕಳೆದುಕೊಂಡು ದೇವರ ಅನುಗ್ರಹದಿಂದ ಅವುಗಳನ್ನು ಮರಳಿ ಪಡೆಯುತ್ತಾನೆ (ಬ್ರೌನ್, ೧೮೪೦: ೨೭೭).

ಪಾಶ್ಚಾತ್ಯ ನಾಗರೀಕತೆಗೆ ಪೌರಾತ್ವದ ಬಂಡುಕೋರತನ

ಬ್ರಾಹ್ಮಣ ಪಂಡಿತರು ನೀಡುತ್ತಿದ್ದ ಮಾಹಿತಿಗಳು ತಪ್ಪು ಮತ್ತು ಪೂರ್ವಾಗ್ರಹ ಪೀಡಿತದಿಂದ ಕೂಡಿದ್ದೆಂದು ಬ್ರೌನನಿಗೆ ಬಹು ಬೇಗ ಅರಿವಾಯಿತು. ಬ್ರಾಹ್ಮಣ ಸಾಹಿತ್ಯವನ್ನು ಮತ್ತಷ್ಟು ಅರಿಯುವ ಸಲುವಾಗಿ ಜಂಗಮ ಸಾಹಿತ್ಯವನ್ನು ಅದಕ್ಕೆ ಹೋಲಿಸಿ ನೋಡುತ್ತಾನೆ. ಇದರ ಉದ್ದೇಶ ಬ್ರಾಹ್ಮಣ ಮತ್ತು ಸಂತ ಸಾಹಿತ್ಯವು ಜಂಗಮ ಸಾಹಿತ್ಯಕ್ಕಿಂತ ಶ್ರೇಷ್ಟವೆ ಅಥವಾ ಅಲ್ಲವೇ ಎಂದು ತಿಳಿಯಲು. ಸಾಕಷ್ಟು ಅಧ್ಯಯನದ ನಂತರ ಬ್ರೌನ್‌ಗೆ ಜಂಗಮ ಸಾಹಿತ್ಯದ ಅನೇಕ ಅಂಶಗಳು ಹಿಡಿಸಿದವು. ಬ್ರಾಹ್ಮಣ ಸಾಹಿತ್ಯವು ಶ್ರೇಷ್ಟವಾದುದಲ್ಲ ಎಂದು ಮನವರಿಕೆಯಾಯಿತು. ನಂತರ ಕೈಗೊಂಡ ಬಸವ ಪುರಾಣದ ಭಾಷಾಂತರದಲ್ಲಿ ಅವನು ಬಸವನ ಪ್ರಗತಿಪರ ಮತ್ತು ಬಂಡುಕೋರ ಅಂಶವನ್ನು ವಿಶೇಷಿಕರಿಸುತ್ತಾನೆ. ಬ್ರಾಹ್ಮಣರ ವಿರುದ್ಧ ಸೆಡ್ಡು ಹೊಡೆದು, ಉಪನಯನದಂತಹ ಡಂಬಾಚಾರದ ವಿರುದ್ಧ ಬಾಲ್ಯದಲ್ಲೇ ಬಂಡಾಯವೆದ್ದ ಬಸವನ ಧೈರ್ಯ ಬ್ರೌನನಿಗೆ ಸೋಜಿಗವೆನಿಸುತ್ತದೆ. ಅದನ್ನು ಮೆಚ್ಚುತ್ತಾನೆ ಕೂಡ. ಇಂತಹ ಅನೇಕ ಸಂಗತಿಗಳನ್ನು ಅವನು ತನ್ನ ಭಾಷಾಂತರದಲ್ಲಿ ವಿವರಿಸುತ್ತಾನೆ. ಈ ವಿಷಯವನ್ನು ಪುಷ್ಟಿಕರಿಸುವದಕ್ಕಾಗಿ ಬ್ರೌನ ಜಂಗಮರನ್ನು “ಆಧುನಿಕ ಬ್ರಾಹ್ಮಣ-ವಿರೋಧಿ ಮತ” (೧೮೪೦: ೨೭೨) ವೆಂದು ಘೋಷಿಸುತ್ತಾನೆ. ಲಿಂಗಾಯತರ ಧಾರ್ಮಿಕ ಆಚಾರ-ವಿಚಾರಗಳು ಬ್ರೌನನಿಗೆ ಅತ್ಯಂತ ಸಮಂಜಸವಾಗಿ ಗೋಚರಿಸುತ್ತವೆ. ಇವರಿಗೆ ತದ್ವಿರುದ್ಧವಾದ ಬ್ರಾಹ್ಮಣರ ಸಾಹಿತ್ಯ ಗ್ರಂಥಗಳು ಮತ್ತು ಸಂಪ್ರದಾಯಗಳು ಅವನಿಗೆ ಅಷ್ಟೊಂದು ಹಿತವಾಗಿ ಕಾಣುವುದಿಲ್ಲ. ಬಹಳಷ್ಟು ಪರಿಶೀಲಿಸಿದ ನಂತರ ಅವನಿಗೆ ಬ್ರಾಹ್ಮಣರ ಕೃತಿಗಳು ಜಿಗುಪ್ಸೆ ತರುವಂತದ್ದೆಂದು ಮನವರಿಕೆಯಾಗುತ್ತದೆ. ಮತ್ತೊಂದು ಹೋಲಿಕೆಯ ಮೂಲಕ ಜಂಗಮರ ಬ್ರಾಹ್ಮಣ-ವಿರೋಧಿ ನಂಬಿಕೆಗಳು ಮುಸಲ್ಮಾನರ ವಹಾಬಿಗೆ ಹೇಗೆ ಹತ್ತಿರವಾಗಿದೆ ಎಂದು ತೋರಿಸುತ್ತಾನೆ. ವಹಾಬಿ ಮತದವರು ಪುರಾತನ ಮುಸ್ಲಿಂ ಮತಗಳ ವಿರುದ್ಧ ಸೆಡ್ಡು ಹೊಡೆದದ್ದನ್ನು ಬ್ರೌನ್ ಬಸವನ ವಿಷಯದಲ್ಲಿ ಜ್ಞಾಪಿಸಿಕೊಳ್ಳುತ್ತಾನೆ. ಜಂಗಮ ಸಾಹಿತ್ಯ ಮತ್ತು ಮುಸ್ಲಿಂ ಸಾಹಿತ್ಯಗಳ ನಡುವಿನ ಹೋಲಿಕೆಗಳನ್ನು ಮತ್ತಿತರ ಲೇಖನಗಳಲ್ಲೂ ವಿವರಿಸಿದ್ದಾನೆ. ಇಂತಹ ಅಂತರ್-ಮತೀಯ ಹೋಲಿಕೆ ಅಥವಾ ತೌಲನಿಕ ಅಂಶಗಳು ಬ್ರೌನ್‌ನ ವಿಸ್ತಾರವಾದ ತೌಲನಿಕ ದೃಷ್ಟಿಕೋನವನ್ನು[12] ಪ್ರದರ್ಶಿಸುತ್ತದೆ.

ಬಸವ ಪುರಾಣವನ್ನು ಭಾಷಾಂತರಿಸುವ ಮೊದಲು, ಬ್ರೌನ್ ಜಂಗಮರ ಬಗ್ಗೆ ಸಾಕಷ್ಟು ತಿಳಿದುಕೊಂಡ. ೧೮೪೦ ಮತ್ತು ೧೯೭೧ರಲ್ಲಿ (ಪೋಸ್ಟ ಮಾಸ್ಟರ್ ಜನರಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ) ಅವನು ಜಂಗಮರ ಬಗ್ಗೆ ಎರಡು ಲೇಖನಗಳನ್ನು ಪ್ರಕಟಿಸಿದ. ಬಸವ ಪುರಾಣದ ಭಾಷಾಂತರವನ್ನು ಈ ಎರಡು ಲೇಖನಗಳ ಜೊತೆಗೆ ಹೋಲಿಸಿ ನೋಡುವುದು ಅತ್ಯವಶ್ಯಕ ಏಕೆಂದರೆ ಅದು ಲೇಖನಗಳ ಅನೇಕ ವಿಷಯಗಳನ್ನು ಒಳಗೊಂಡಿದೆ. ಈ ಎರಡು ಲೇಖನಗಳು ಅವನ ಭಾಷಾಂತರಕ್ಕೆ ಸಾಕಷ್ಟು ಹಿನ್ನಲೆಯನ್ನು ಒದಗಿಸುತ್ತವೆ. ಇವುಗಳಲ್ಲಿ ಜಂಗಮರ ಜಾತಿ-ವಿರೋಧಿ ಮತ್ತು ಪ್ರಗತಿಪರ ವಿಚಾರಗಳನ್ನು ಬ್ರೌನ್ ವಿಶೇಷಿಕರಿಸಿದ್ದಾನೆ. ಜಂಗಮರ ಧಾರ್ಮಿಕ ನಂಬಿಕೆಯನ್ನು ಅವಲೋಕಿಸಿ, ಅವರ ಏಕದೇವೋಪಾಸನೆಯನ್ನು ಪ್ರಶಂಸಿಸುತ್ತಾನೆ. ಅವರನ್ನು ಪ್ರೊಟೆಸ್ಟಂಟ್ ಕ್ರಿಶ್ಚಿಯನ್ನರಿಗೆ ಹೋಲಿಸಿ ಎರಡೂ ಮತಗಳ ನಡುವೆ ಇರುವ ಸಾಮ್ಯತೆಗಳನ್ನು ಗುರುತಿಸುತ್ತಾನೆ. ಜಂಗಮರ ಬಗ್ಗೆ ಅವನು ಕೆಲವೊಂದು ನಿಲುವುಗಳನ್ನು ತಾಳುತ್ತಾನೆ. ಜಂಗಮರಿಗೆ ಅ) ಬಸವ ಪುರಾಣ ಒಂದು ಪವಿತ್ರ ಗ್ರಂಥ. ಆ) ಬಸವನೆ ವೀರಶೈವ ಧರ್ಮದ ಸ್ಥಾಪಕ. ಇ) ಹಿಂದು ಧರ್ಮದ ಆಂತರಿಕ ಸುಧಾರಣಾಕಾರವಾಗಿ ಜಂಗಮರು ಪ್ರಗತಿಪರ ವಿಚಾರಗಳನ್ನು ಹೊಂದಿರುವರು. ಆದರೆ ಈ ಅಂಶಗಳ್ಯಾವುವು ಪುರಾತನವಾದುದಲ್ಲ ಅಥವಾ ಪುರಾತನ ಕಾಲದಿಂದ ಅನುಸರಿಸಿಕೊಂಡು ಬಂದವಲ್ಲ. ಅವು ಆಧುನಿಕವಾಗಿದ್ದು ಕ್ರಮೇಣ ವಿಕಾಸವನ್ನು ಹೊಂದಿ ವೀರಶೈವ ಧರ್ಮವಾಗಿ ರೂಪುಗೊಂಡಿರುವಂತದ್ದು. ಪುರಾತನ-ಆಧುನಿಕ ವ್ಯತ್ಯಾಸಗಳನ್ನು ಬ್ರೌನ್ ಹಳೆಯ ಮತ್ತು ನವೀನ ಶೈವರನ್ನು ಗುರುತಿಸಲು ಮತ್ತು ಅವರ ನಡುವೆ ಇರುವ ಭೇದಗಳನ್ನು ಗುರುತಿಸಲು ಬಳಸುತ್ತಾನೆ. ಬಸವ ಪುರಾಣದ ಭಾಷಾಂತರದ ಮೊದಲು ಇದರ ಬಗ್ಗೆ ಅವನು ಹೀಗೆ ಬರೆಯುತ್ತಾನೆ.

ಪೂರ್ವ ಶೈವ ಧರ್ಮವು ಪುರಾತನ ಅಥವಾ ಬ್ರಾಹ್ಮಣ ಧರ್ಮವಾಗಿದ್ದು ಒಂದು ಧಾರ್ಮಿಕ ಸಂಸ್ಥೆಗೆ ಮನ್ನಣೆ ನೀಡುತ್ತದೆ. ಜಂಗಮ ಅಥವಾ ವೀರಶೈವ ಅನ್ನೋದು ಆಧುನಿಕ ಬ್ರಾಹ್ಮಣ-ವಿರೋಧಿ ಧರ್ಮ. ಇಲ್ಲಿ ಧರ್ಮವು ವ್ಯಕ್ತಗತವಾಗಿದ್ದು, ಪ್ರತಿಯೊಬ್ಬರು ಲಿಂಗವನ್ನು ಧರಿಸುತ್ತಾರೆ. ಪುರಾತನ ಧರ್ಮ ಯಾತ್ರೆ, ತಪಸ್ಸು ಮತ್ತು ಬಲಿಯನ್ನು ಪ್ರತಿಪಾದಿಸುತ್ತದೆ; ಆಧುನಿಕ ವೀರಶೈವವು ಇದಕ್ಕೆ ಪರ್ಯಾಯವಾಗಿ ಗುರು, ಲಿಂಗ, ಜಂಗಮಕ್ಕೆ ಗೌರವವನ್ನು ನೀಡುತ್ತದೆ. ಹಳೆಯ ಪದ್ಧತಿಯು ಜಾತಿಯನ್ನು ಒಪ್ಪಿಕೊಂಡು, ಬ್ರಾಹ್ಮಣರನ್ನು ಗೌರವದಿಂದ ಕಾಣುತ್ತದೆ. ಆಧುನಿಕ ವೀರಶೈವವು ಜಾತಿಯನ್ನು ನಿರಾಕರಿಸುತ್ತದೆ ಮತ್ತು ಬ್ರಾಹ್ಮಣರನ್ನು ಮನ್ನಿಸುವುದಿಲ್ಲ. ಈ ಆಧುನಿಕ ಧರ್ಮದಲ್ಲಿ ಬಸವನೆ ಶಿವನ ಅವತಾರಿಯೆಂದು ಅವನಿಗೆ ಸಂಪೂರ್ಣ ಗೌರವ. ಪಾರ್ವತಿ, ಗಣೇಶ, ನಂದಿ ಅಥವಾ ಶಿವನ ಇತರ ಗಣಗಳಾರಿಗೂ ಪೂಜ್ಯ ಸ್ಥಾನವಿಲ್ಲ. ಪುರಾತನ ಅಥವಾ ಬ್ರಾಹ್ಮಣರ ಮತದಲ್ಲಿ (ಕಾಳಹಸ್ತಿ ಮಹಾತ್ಮೆ ಮತ್ತು ಅದಕ್ಕೆ ಸಂಬಂಧಿಸಿದ ಇತರ ಕೃತಿಗಳಲ್ಲಿರುವಂತೆ) ಬಸವನ ಹೆಸರನ್ನು ಎಲ್ಲಿಯೂ ಹೇಳಿರುವುದಿಲ್ಲ (೧೮೪೦: ೨೭೨-೨೩).

ಇಲ್ಲಿ ಪುರಾತನ-ಆಧುನಿಕ ವ್ಯತ್ಯಾಸಗಳನ್ನು ಉದ್ದೇಶಪೂರ್ವಕವಾಗಿಯೆ ಮಾಡಲಾಗಿದೆ. ಇದರಿಂದ ಜಂಗಮರ ವಿಶೇಷತೆ ಮತ್ತು ಅವರು ಪುರಾತನ ಶೈವ  ಧರ್ಮಕ್ಕಿಂತ ಹೇಗೆ ಭಿನ್ನವಾಗಿದ್ದರು ಎಂಬುದನ್ನು ನಿರೂಪಿಸಲು ಬ್ರೌನನಿಗೆ ಸಾಧ್ಯವಾಯಿತು. ಬ್ರಾಹ್ಮಣ ಆಚಾರ-ವಿಚಾರಗಳಿಗೆ ಜಂಗಮರು ವಿರೋಧಿಗಳಾಗಿದ್ದ ಅಂಶವು ನಿಸಂಶಯವಾಗಿ ಬ್ರೌನ್‌ನ ಮೆಚ್ಚುಗೆ ಪಡೆದಿದ್ದವು. ಇವು ಪ್ರಗತಿಪರ ಮತ್ತು ವಿಶಾಲತೆಯ ಸೂಚಕಗಳೆಂದು ಅವನು ಬಣ್ಣಿಸುತ್ತಾನೆ. ಇವಕ್ಕೆ ಮೂಲ ಕಾರಣನಾದ ಬಸವನ ಸಾಹಸಗಳನ್ನು ಮತ್ತು ಆದರ್ಶಗಳನ್ನು ಕ್ರಿಶ್ಚಿಯನ್ ಧರ್ಮದ ಥಾಮಸ್ ಬೆಕೆಟ್ ಗೆ ಹೋಲಿಸಿ ಇಬ್ಬರ ಗುಣಗಾನ ಮಾಡುತ್ತಾನೆ (ಬ್ರೌನ್, ೧೮೭೧: ೧೪೨). ಆಡಳಿತ ಮತ್ತು ಸುಧಾರಣೆಯ ವಿಷಯದಲ್ಲಿ ಬಸವನು ಬಿಜ್ಜಳ ರಾಜನನ್ನೇ ಎದುರು ಹಾಕಿಕೊಂಡಿದ್ದು ಈ ಹೋಲಿಕೆಗೆ ಕಾರಣ. ಇದು ಬ್ರೌನನು ಬಸವನ ಬಗ್ಗೆ ಇರಿಸಿಕೊಂಡಿದ್ದ ಗೌರವವನ್ನು ಸೂಸಿಸುತ್ತದೆ. ಆದಾಗ್ಯೂ ಬಸವ ಪುರಾಣದಲ್ಲಿ ಕಾಣುವ ಪವಾಡ ದೃಶ್ಯಗಳು ಮತ್ತು ದಂತ ಕತೆಗಳು (ವಿಶೇಷವಾಗಿ ಭಲ್ಲಣನ ಕತೆ, ಕಣ್ಣಪ್ಪನ ಕತೆ, ಇತ್ಯಾದಿಗಳು) ಬ್ರಾಹ್ಮಣ ಪದ್ಧತಿಯ (imitation of the brahminical mode) ಅನುಕರಣೆ (೧೮೪೦: ೧೨೭) ಎಂದು ವಾದಿಸುತ್ತಾನೆ. ಇದು ಬ್ರಾಹ್ಮಣ ಮತ್ತು ಜಂಗಮ ಸಾಹಿತ್ಯದ ಕೊಡು-ಕೊಳ್ಳುವಿಕೆಯ ಅಂಶವನ್ನು ತಿಳಿಸುತ್ತದೆ.

ಮೇಲೆ ತಿಳಿಸಲ್ಪಟ್ಟ ಎರಡೂ ಲೇಖನಗಳು ಜಂಗಮರ ಆಂತರಿಕ ಪಂಥಗಳ ಬಗ್ಗೆ ಮಾಹಿತಿಯನ್ನು ನೀಡುತ್ತವೆ. ಜಂಗಮದಲ್ಲಿ ಎರಡು ಪಂಥಗಳು: ಒಂದು ಬಸವ ಪಂಥ: ಮತ್ತೊಂದು ರೇಣುಕಾಚಾರ್ಯ ಪಂಥ. ಇವೆರಡೂ ಪಂಥಗಳು ವೀರಶೈವ ಧರ್ಮದ ಉಗಮದ ಬಗ್ಗೆ ಭಿನ್ನ, ಭಿನ್ನವಾದ ಸಿದ್ದಾಂತಗಳನ್ನೊಂದಿರುವುದನ್ನು ಬ್ರೌನ್ ಗಮನಿಸುತ್ತಾನೆ. ಅವನು ಬಸವ ಪಂಥದ ಬಗ್ಗೆ ಹೆಚ್ಚು ಒಲವನ್ನು ಇರಿಸಿಕೊಂಡಿರುವ ಹಾಗೆ ಕಾಣುತ್ತದೆ ಏಕೆಂದರೆ ಬಸವ ಅನುಯಾಯಿಗಳನ್ನು ಅವನು ಗೌರವಿಸುತ್ತಾನೆ. ಆದರೆ ರೇಣುಕಾಚಾರ್ಯ ಪಂಥದ ಬಗ್ಗೆ ಅವನಿಗೆ ಸ್ವಲ್ಪ ಅಸಮಾಧಾನ. ಬ್ರಾಹ್ಮಣ ಆಚಾರಗಳಾದ ಸಂಧ್ಯಾವಂದನೆ. ಅಗ್ನಿ ಕಾರ್ಯ, ತಪಸ್ಸು, ಯಾತ್ರೆ, ಇತ್ಯಾದಿಗಳನ್ನು ಈ ಪಂಥದವರು ಆಚರಿಸುವುದರಿಂದ, ಬ್ರೌನನಿಗೆ ಇವರ ಬಗ್ಗೆ ಸ್ವಲ್ಪ ಮಟ್ಟಿಗೆ ಅಗೌರವ. ಈ ಪಂಥದ ಆರಾಧ್ಯರನ್ನು ಅವನು ಇಷ್ಟ ಪಡುವುದಿಲ್ಲ. ಬ್ರೌನ್‌ಗೆ ಸಾಮಾನ್ಯ ಜನರ ಜೊತೆಗೆ ಬೆರೆಯದೆ, ಪ್ರಾವಿತ್ರತೆಯ ದೃಷ್ಟಿಯಿಂದ ದೂರವಿದ್ದುದರಿಂದ, ಅವರನ್ನು ಬ್ರೌನ್ ಅನುಮಾನದಿಂದ ನೋಡುತ್ತಾನೆ. ಬ್ರಾಹ್ಮಣರಂತೆ ತಾವು ಉತ್ತಮರೆಂದು ಸಾಬೀತುಪಡಿಸಲು ವೇದಗಳನ್ನು ಆರಾಧ್ಯರು ಗೌರವಿಸುತ್ತಿದುದರಿಂದ (ಬ್ರೌನ್, ೧೯೯೮: ೯೪) ಬ್ರೌನ್ ಅವರ ಸಾಹಿತ್ಯ ಮತ್ತು ಆಚಾರಗಳ ಬಗ್ಗೆ ಹೆಚ್ಚು ಒಲವನ್ನು ಪ್ರದರ್ಶೀಸುವುದಿಲ್ಲ. ಅವರು ಸಂಸ್ಕೃತ ಕೃತಿಗಳಾದ ವೇದ, ಭಗವದ್ಗೀತೆ, ನೀಲಕಂಠ ಭಾಷ್ಯ ಮತ್ತು ಆಗಮಗಳನ್ನು ತಮ್ಮದೆಂದು ಹೆಮ್ಮೆ ಪಡುವುದು ಬ್ರೌನ್‌ಗೆ ಬ್ರಾಹ್ಮಣೀಕರಣದ ವಿಚಾರಗಳಾಗಿ ಗೋಚರಿಸುತ್ತವೆ. ಬಸವ ಪಂಥದ ಬಗ್ಗೆ ಬ್ರೌನ್‌ಗೆ ಇದ್ದ ಗೌರವಗಳು ಮತ್ತು ಮುಂದುವರೆದು ತೆಲುಗಿನ ಪ್ರಭುಲಿಂಗಲೀಲೆಯ[13] ಬಗ್ಗೆ ಟೀಕೆ ಬರೆಯುವಾಗ ಇಮ್ಮಡಿಯಾಗುತ್ತದೆ. ಲೀಲೆಯು ಮಹಿಳಾಪರವಾಗಿದ್ದು, ತನ್ನ ದೇಹ ಹಾಗೆ ಜಂಗಮರೂ ಸಹ ಮಹಿಳೆಯರಿಗೆ ತಮ್ಮ ಸಾಹಿತ್ಯದಲ್ಲಿ ಪೂಜ್ಯ ಸ್ಥಾನವನ್ನು ಕೊಟ್ಟಿರುವುದು ಬ್ರೌನ್‌ನಿಗೆ ಸಂತೋಷವನ್ನುಂಟು ಮಾಡುತ್ತದೆ. ಒಮ್ಮೆ ಒಬ್ಬ ಜಂಗಮ ನಾವು ಮಹಿಳೆಯರನ್ನು ಗೌರವಿಸುವ ರೀತಿಗೂ ಮತ್ತು ಕ್ರಿಶ್ಚಿಯನ್ನರ ರೀತಿಗೂ ಅನೇಕ ಸಾಮ್ಯತೆಗಳಿವೆ ಎಂದು ಹೇಳಿದುದನ್ನು ಬ್ರೌನ್ ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾನೆ. ಈ ವಿಷಯದ ಬಗ್ಗೆ ಬರೆಯುವಾಗ ಅಬ್ಬೆ ಡುಬಾಯ್ಸ್‌ನು ಜಂಗಮರ ಬಗ್ಗೆ ಹೇಳಿರುವ ಕೆಲವೊಂದು ವಿಚಾರಗಳನ್ನು ವಿಮರ್ಶಿಸುತ್ತಾನೆ. ಜಂಗಮರು ಅಶುದ್ಧರು, ಮೂಢ ಆಚಾರಗಳನ್ನೊಳಗೊಂಡಿರುವವರು ಮತ್ತು ಅವರು ಮಹಿಳೆಯರನ್ನು ನೋಡಿಕೊಳ್ಳುವ ರೀತಿ ಸರಿಯಾಗಿಲ್ಲವೆಂದು ಡುಬಾಯ್ಸ್ ನ ಟೀಕೆಯನ್ನು ಬ್ರೌನ್ ತಿರಸ್ಕರಿಸುತ್ತಾನೆ. ಡುಬಾಯ್ಸ್‌ನು ಪೂರ್ವಗ್ರಹ ಪೀಡಿತನೆಂದು ಮೂದಲಿಸುತ್ತಾನೆ. ಡುಬಾಯ್ಸ್‌ನ ಪೂರ್ವಾಗ್ರಹಕ್ಕೆ ಬ್ರಾಹ್ಮಣರು ನೀಡಿದ ತಪ್ಪು ಮಾಹಿತಿಗಳ ಕಾರಣ ಎಂದು ಬ್ರೌನ್‌ನ ನಂಬಿಕೆ.

ಬ್ರೌನ್‌ನ ಭಾಷಾಂತರವು ಬಹಳ ಜಾಗ್ರತೆಯಿಂದ ಸಾಗುತ್ತದೆ. ಜಂಗಮರಿಗೆ ಸರಿ ಹೊಂದುವ ಮತ್ತು ಅವಳ ಗೌರವವನ್ನು ಹೆಚ್ಚಿಸುವ ಅಂಶಗಳನ್ನು ಮಾತ್ರ ತನ್ನ ಭಾಷಾಂತರದಲ್ಲಿ ಸೇರಿಸುತ್ತಾನೆ. ಜಂಗಮರ ವೈಯಕ್ತಿಕ ಭಕ್ತಿ (personal devotion) ಸಿದ್ಧಾಂತ ಮತ್ತು ಪ್ರಗತಿ ಪರ ವಿಚಾರಗಳಿಗೆ ವ್ಯತಿರಿಕ್ತವಾದ ಯಾವುದೇ ಅಂಶಗಳನ್ನು ಅವನು ನಮೂದಿಸುವುದಿಲ್ಲ. ಶಿರಶರಣರ ಜೀವನ ಚರಿತ್ರೆ ಮತ್ತು ಅವರು ಮಾಡಿರಬಹುದಾದ ಪವಾಡಗಳ ಬಗ್ಗೆ ಹೆಚ್ಚಿನ ಗಮನವನ್ನು ಕೊಟ್ಟಿದ್ದಾನೆ. ಪುರಾಣದಲ್ಲಿ ಕಾಣಬರುವ ಪವಾಡಗಳು ಅಥವಾ ಉತ್ಪ್ರೇಕ್ಷಿತ ವರ್ಣನೆಗಳನ್ನು ಬ್ರೌನ್ ಒಂದು ಉದ್ದೇಶಿತ ನಿರ್ಣಯಗಳ ರೂಪಕಗಳೆಂದು ಅಥವಾ ಡಂಬಾಚಾರದ ಆಚರಣೆಗಳ ವಿರುದ್ಧ ಭಕ್ತಿಯ ಝೇಂಕಾರವೆಂದು ಅಥವಾ ಇತರ ಶಿವ ಶರಣರಿಗೆ ಕೊಡುವ ಭಕ್ತಿ ಪೂರ್ವಕ ನಯನಗಳೆಂದು ವ್ಯಾಖ್ಯಾನಿಸುತ್ತಾನೆ. ಬಸವ ಪುರಾಣಗಳನ್ನು ಅಧ್ಯಯನ ಮಾಡಿರುವ ವೆಲ್ ಚೆರು ನಾರಾಯಣ ರಾವ್ ರವರು ಬಸವ ಪುರಾಣದಲ್ಲಿನ ಅತಿರೇಕಗಳ ಬಗ್ಗೆ ಹೇಳುತ್ತಾರೆ. “ಬಸವ ಪುರಾಣದ ಜಂಗಮರ ಅನೇಕ ಕಥೆಗಳಲ್ಲಿ ಹಿಂಸೆಯೂ ಒಂದು ಪ್ರಮುಖ ಲಕ್ಷಣ. ಕೊಲ್ಲುವುದು, ನೋಯಿಸುವುದು ಮತ್ತು ನಾಶಮಾಡುವುದರ ಮೂಲಕ ಜಂಗಮರು ತಮ್ಮ ಧರ್ಮದ ಬಗ್ಗೆ ಇರುವ ಅಭಿಮಾನವನ್ನು ಪ್ರದರ್ಶಿಸುತ್ತಾರೆ” (ವೆಲ್‌ಚೆರು. ೧೯೯೦: ೧೨), ಇಷ್ಟಾದಾಗ್ಯೂ, ಬ್ರೌನ್‌ನಿಗೆ ಇವೆಲ್ಲವೂ ಗೌಣ. ಹಾಗಂತ ಈ ಹಿಂಸೆಯ ಅಂಶಗಳು ಅವನಿಗೆ ಗೊತ್ತಿದ್ದಲ್ಲವೆಂದಲ್ಲ. ಪುರಾಣದಲ್ಲಿರುವ ಅನೇಕ ಹಿಂಸಾತ್ಮಕ ಸಂಗತಿಗಳ ಬಗ್ಗೆ ಅವನಿಗೆ ಅರಿವಿತ್ತು. ಉದಾಹರಣೆಗೆ, ಬಿಜ್ಜಳದ ಕೊಲೆ ಮತ್ತು ಬಸವನು ಕಲ್ಯಾಣದಿಂದ ನಿರ್ಗಮಿಸಿದ್ದು ಅನೇಕ ಪುರಾಣಗಳಲ್ಲಿ ವಿವಿಧ ರೀತಿಯಲ್ಲಿ ಬಣ್ಣಿತವಾಗಿವೆ. ತನ್ನ ಅಡಿ ಟಿಪ್ಪಣಿಯಲ್ಲಿ ಜೈನ ಪುರಾಣವನ್ನು ಉಲ್ಲೇಖಿಸುತ್ತಾ ಬಿಜ್ಜಳದ ವಿರುದ್ಧ ನಡೆದ ಪಿತೂರಿ, ಹಿಂಸೆ ಮತ್ತು ಬಸವನ ಕೊನೆಯ ದಿನಗಳು ಹೇಗೆ ರಕ್ತಸಿಕ್ತವಾಗಿತ್ತು ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ಬರೆಯುತ್ತಾನೆ. ಆದರೆ ಭಾಷಾಂತರದಲ್ಲಿ ಈ ಅಂಶಗಳನ್ನು ಸೇರಿಸುವುದಿಲ್ಲ. ವಿಲ್ಸನ್ ಮಹಾಶಯನ ವಿರುದ್ಧ ಕಿಡಿ ಕಾರಿದ್ದ ಬ್ರೌನ್‌ನೂ ಸಹ ಹಾಗೆ ತನಗೆ ಬೇಕಾದ್ದನ್ನು ಮಾತ್ರ ವಿಶೇಷಿಕರಿಸುವ ಜಾಯಮಾನವನ್ನು ಇಲ್ಲಿ ಕಾಣಬಹದು. ಪುರಾಣದಲ್ಲಿ ಕಾಣುವ ಹಿಂಸೆಯ ಅಂಶಗಳಿಗೆ ಇರಬಹುದಾದ ಸಂದರ್ಭಗಳು, ಹಗೆತನ ಅಥವಾ ಪೈಪೋಟಿಗಳನ್ನು ಬ್ರೌನ್ ತನ್ನ ಭಾಷಾಂತರದಲ್ಲಿ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಇಂತಹ ನಿರ್ಣಯಕ್ಕೆ ಇದ್ದ ಮುಖ್ಯ ಉದ್ದೇಶ ಜಂಗಮ ಸಾಹಿತ್ಯವನ್ನು ಪ್ರಸಿದ್ಧಿಗೊಳಿಸುವದೇ ಆಗಿತ್ತು.

[1] ಡಿ.ಆರ್. ನಾಗರಾಜ್ (ಸಾಹಿತ್ಯ ಕಥನ, ೧೯೯೬) ಮತ್ತು ತೇಜಸ್ವಿನಿ ನಿರಂಜನ (Sitting Translation, ೧೯೯೪) ಇಲ್ಲಿ ಪ್ರಮುಖವಾಗಿ ಕಾಣುತ್ತಾರೆ.

[2] ಮೊಹಮ್ಮದ್ ತರ್ಗಿ ಎನ್ನುವವರು ಈ ಅಂಶಗಳನ್ನು ಪುಷ್ಟೀಕರಿಸಿದ್ದಾರೆ. ಅವರ ಪ್ರಕಾರ ಪೌರತ್ಯವಾದದ ಮೊದಲ ದಿನಗಳು ವಸಾಹತುಶಾಹಿಯ ಪ್ರಾಬಲ್ಯವನ್ನು ಸಾಧಿಸುವ ಹುನ್ನಾರವನ್ನು ಹೊಂದಿರದೆ, “ಯೂರೋಪಿಯನ್ ಮತ್ತು ಭಾರತೀಯ ವಿದ್ವಾಂಸರ ನಡುವಿನ ಸಹಯೋಗ”ದ ಫಲವಾಗಿ ರೂಪುಗೊಂಡ ವಿಚಾರಧಾರೆ (ತರ್ಗಿ, ೨೦೦೩: ೧೦೫).

[3] ಬ್ರೌನ್ ಅನೇಕ ಕಡೆ ‘ಜಂಗಮ ಸಾಹಿತ್ಯ’ ವೆಂದು ಬರೆದಿದ್ದಾನೆ. ಲಿಂಗಾಯತ ಸಾಹಿತ್ಯ ಎಂಬ ಪದವನ್ನು ಅವನು ಬಳಸುವುದಿಲ್ಲ.

[4] ಥಾಮಸ್ ಟ್ರಾಟ್ ಮನ್ ರಿಂದ ಸಂಕಲಿಸಲ್ಪಟ್ಟ ಇತ್ತೀಚಿನ ಕೃತಿ The Madras School of Orientalism (೨೦೦೯) ಈ ವಿಷಯದ ಬಗ್ಗೆ ಸಾಕಷ್ಟು ವಿವರಗಳನ್ನು ನೀಡುತ್ತದೆ.

[5] ನೋಡಿ ಶ್ಮಿತರಮೆನ್ (೨೦೦೧) ಮತ್ತು ರೆಡ್ಡಿ (೧೯೭೭: ೧೧೪-೫).

[6] ಕೊಲಂಬಿಯ ವಿಶ್ವವಿದ್ಯಾಲಯದ ವಿದ್ವಾಂಸರಾದ ವೆಲ್ ಚೆರು ನಾರಾಯಣ ರಾವ್ ರವರು ತೆಲುಗಿನ ಪ್ರಸಿದ್ಧ ಇತಿಹಾಸಕಾರರು ಮತ್ತು ಪಂಡಿತರು.

[7] ಜರ್ಮನ್ ವಿದ್ವಾಂಸರಾದ ಜೆ.ಜಿ. ಹರ್ಡರ್ ಮತ್ತು ಮ್ಯಾಕ್ಸ್ ಮುಲ್ಲರ್ ಪೌರುತ್ಯವು ಮಾನವ ಕುಲದ ತೊಟ್ಟಿಲು ಎಂದು ನಂಬಿದ್ದರು. ವಿಲಿಯಮ್ ಜೋನ್ಸ್ ಇವರ ಸಾಲಿಗೆ ಸೇರಿದಂತವನು.

[8] ಹಿಂದುಗಳ ಧಾರ್ಮಿಕ ಆಚಾರ-ವಿಚಾರಗಳ ಬಗ್ಗೆ ವಿಲ್ಸ್ ನ್ನನ ಎರಡು ಲೇಖನಗಳು (Religions of the Hindus: Essays and Lectures by H.H. Wilson, ೧೯೭೮) ಬ್ರಾಹ್ಮಣರ ವೇದ ಮತ್ತು ಪುರಾಣದ ಮೇಲೆ ಆಧಾರಿತವಾಗಿವೆ. ತಾಂತ್ರಿಕ ಸಂಪ್ರದಾಯಗಳನ್ನು ಅಧ್ಯಯನ ಮಾಡಬೇಕೆಂಬ ಅವರ ಬಯಕೆ ಈಡೇರಿದ ಕಾರಣ, ಅವರು ಬ್ರೌನನನ್ನು ಇದರ ಬಗ್ಗೆ ಮಾಹಿತಿ ಸಂಗ್ರಹಿಸಲು ಪ್ರೇರೇಪಿಸುತ್ತಾನೆ.

[9] ರಮಾ ಸುಂದರಿ ಮಾಂಟೆನರವರು ವಿಲ್ಸ್ ನ್ನನ ಸಂಕುಚಿತ ವಿಚಾರಗಳ ಬಗ್ಗೆ ನಮ್ಮ ಗಮನಹರಿಸಿದ್ದಾರೆ. ಅವನು ತೆಲುಗು ಸಾಹಿತ್ಯವು ಸಂಸ್ಕೃತದ ನಕಲು ಎಂದು ತಪ್ಪಾಗಿ ತಿಳಿದಿದ್ದನು. ಹೀಗಾಗಿ ತೆಲುಗು ಸಾಹಿತ್ಯದ ಪ್ರತ್ಯೇಕತೆ ಮತ್ತು ವಿಶಿಷ್ಟತೆಯನ್ನು ಅವನು ಮರೆಮಾಚಿದನು ಎಂದು ಮಾಂಟೆನರವರು ವಾದಿಸುತ್ತಾರೆ. (೨೦೦೪: ೫೧೭-೫೧೮).

[10] ಬ್ರೌನನು ತೆಲುಗು ಸಾಹಿತ್ಯವನ್ನು ಎರಡು ಭಾಗಗಳನ್ನಾಗಿ ವಿಂಗಡಿಸುತ್ತಾನೆ. ಒಂದನೆಯದು ಸಾಮಾನ್ಯ ಕಾವ್ಯ. ಮತ್ತೊಂದು ಮಹಾ ಕಾವ್ಯ. ಸಾಮಾನ್ಯ ಕಾವ್ಯಗಳು (ವೇಮನ, ಜಂಗಮರ ಸಾಹಿತ್ಯ) ದ್ವಿಪದದಿಂದ ರಚಿಸಲ್ಪಟ್ಟಿದ್ದರೆ, ಮಹಾ ಕಾವ್ಯಗಳು (ಸಂಸ್ಕೃತ ಮತ್ತು ಬ್ರಾಹ್ಮಣರ ಕೃತಿಗಳು) ಪದ್ಯಗಳ ರೂಪದಲ್ಲಿವೆ ಎಂದು ಬ್ರೌನನ ಅಭಿಪ್ರಾಯ (ಬ್ರೌನ್, ೧೯೯೧: ೩೯-೪೦).

[11]Account of the Basava Puran:- The principal Book used as a religious Code by the Jangams, ಮದ್ರಾಸ್ ಜರ್ನರ್ ಆಫ್ ಲಿಟರೇಚರ್ ಯಾಂಡ್ ಸೈನ್ಸ್, ೧೮೪೦, ಅಕ್ಟೋಬರ್.

[12] ಬ್ರೌನನ ಮತ್ತೊಂದು ಲೇಖನ (ಅಕ್ಟೋಬರ್, ೧೮೪೦) ಆತನ ತೌಲನಿಕ ಅಭಿತ್ಸೆಗಳನ್ನು ಮತ್ತಷ್ಟು ತಿಳಿಸುತ್ತವೆ. ಈ ಲೇಖನವನ್ನು ಜಿ.ಎನ್, ರೆಡ್ಡಿಯವರಿಂದ ಸಂಪಾದಿಸಲ್ಪಟ್ಟ ಕೃತಿಯಲ್ಲಿ (೧೯೯೮) ಪ್ರಕಟಿಸಲಾಗಿದೆ.

[13] ಈ ಲೀಲೆಯು ಮೂಲತಃ ಕನ್ನಡದ ಪ್ರಭುಲಿಂಗಲೀಲೆಯ (೧೫ನೇ ಶತಮಾನದಲ್ಲಿ ಚಾಮರಸದಿಂದ ರಚಿಸಲ್ಪಟ್ಟಿದ್ದು) ರೂಪಾಂತರ. ಈ ಭಾಷಾಂತರದ ಬಗ್ಗೆ ಮುಂದಿನ ಲೇಖನದಲ್ಲಿ ವಿಸ್ತೃತವಾಗಿ ವಿಶ್ಲೇಷಣೆ ಮಾಡಲಾಗಿದೆ.