ಕಳೆದ ಶತಮಾನದ ೯೦ರ ದಶಕದಲ್ಲಿ ಕನ್ನಡ ಸಾಹಿತ್ಯದಲ್ಲಿ ಉದ್ಭವಿಸಿದ ವಿವಾದಗಳು (ಪ್ರಮುಖವಾಗಿ ‘ಮಾರ್ಗ-೧’, ‘ಮಹಾಚೈತ್ರ’ ಹಾಗೂ ‘ಧರ್ಮಕಾರಣ’ಗಳಂತಹ ವಿವಾದಗಳು) ಆಧುನಿಕ ಕನ್ನಡ ಸಾಹಿತ್ಯ ಮತ್ತು ಅದರ ಇತಿಹಾಸವನ್ನು ಅಲುಗಾಡಿಸಿದಂತ ಪ್ರಮುಖ ಘಟನೆಗಳಾಗಿವೆ. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಇಂತಹ ವಿವಾದಗಳು ಅನೇಕವಿದ್ದರೂ, ಅವುಗಳನ್ನು ಅರ್ಥೈಸುವ ಮತ್ತು ಅವಲೋಕಿಸುವ ವಿಮರ್ಶಾ ವಿಧಾನಗಳು ಸಾಹಿತ್ಯದ ‘ಪಾವಿತ್ರ‍್ಯದ’ ಮೂಸೆಯಿಂದ ಉಗ್ಭವಿಸಿರುವಂತಹದ್ದು. ವಿವಾದಾತ್ಮಕ ಅಂಶಗಳನ್ನು ಮುಂದಿಟ್ಟುಕೊಂಡು ಸಾಹಿತಿಗಳ ಮೇಲೆ ಕೆಂಡಕಾರುವವರನ್ನು ಮೂಲಭೂತವಾದಿಗಳೆಂದು, ಅಭಿವ್ಯಕ್ತಿ ಸ್ವಾತಂತ್ರ‍್ಯದ ಪರವಾಗಿರುವವರನ್ನು ಪ್ರಗತಿಪರರೆಂದು ಬಣ್ಣಿಸುವದರ ಮೂಲಕ ಸಾಹಿತ್ಯದ ಪಾವಿತ್ರ‍್ಯತೆಯನ್ನು ಕಾಪಾಡುವದಕ್ಕೆ ಮಾತ್ರ ಕನ್ನಡ ಸಾಹಿತ್ಯ ವಿಮರ್ಶೆಯು ಸೀಮಿತವಾಗಿದೆ. ಹೀಗಾಗಿ ವಿವಾದಗಳಿಂದ ಉಂಟಾಗುವ ಅನೇಕ ಪ್ರಶ್ನೆಗಳು ಮತ್ತು ಅಸಂಖ್ಯಾತ ಸವಾಲುಗಳಿಗೆ ಸಮರ್ಪಕವಾದ ಅರ್ಥ ವಿವರಣೆಯಾಗಲಿ ಅಥವಾ ಅಧ್ಯಯನಗಳಾಗಲಿ ಕಂಡು ಬರುವುದಿಲ್ಲ. ಅಲ್ಲಲ್ಲಿ ಟೀಕೆಗಳು, ವೈಯಕ್ತಿಕ ಅನಿಸಿಕೆಗಳು, ವಿಚಾರಗಳು ಅಭಿವ್ಯಕ್ತಿ ಗೊಳಿಸಲ್ಪಟ್ಟರೂ, ಅವು ವಿವಾದಗಳ ಸಂದರ್ಭಕ್ಕೆ ಮಾತ್ರ ಸೀಮಿತಗೊಂಡಿರುವಂತದ್ದು. ಸಾಹಿತ್ಯ ವಿವಾದಗಳು ಆಗಾಗ ಉಂಟಾಗುವ ‘ಪಥ ಭ್ರಷ್ಟತೆ’ (aberration) ಎಂದು ಸಾಮಾನ್ಯವಾಗಿ ತಿಳಿದಿರುವುದರಿಂದ ಅವುಗಳನ್ನು ಅಧ್ಯಯನಾ ಯೋಗ್ಯವೆಂದು ತಿಳಿದಿರುವವರು ಬಹಳ ಕಡಿಮೆ. ಸಾಹಿತ್ಯದ ಈ ಮಡಿವಂತಿಕೆಯಾಚೆಗೆ ಒಂದು ಅಂಶವನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಅದೇನೆಂದರೆ ಈ ವಿವಾದಗಳಿಂದ ಉದ್ಭವಿಸುವ ಪ್ರಶ್ನೆಗಳು / ಸವಾಲುಗಳು ಸಾಹಿತ್ಯಕ್ಕೆ ಮಾತ್ರ ಸೀಮತವಾಗಿರದೆ. ಸಾಹಿತ್ಯೇತರ ಅಂಶಗಳಿಗೂ ಸಂಬಂಧಿಸಿದುದಾಗಿವೆ. ಹೀಗಾಗಿ ನಮ್ಮ ವಿಶ್ಲೇಷಣೆಯ ಸಾಹಿತ್ಯ ಮತ್ತು ಸಾಹಿತ್ಯೇತರ ಅಂಶಗಳೆರಡನ್ನೂ ಒಳಗೊಳ್ಳಬೇಕಾಗುತ್ತದೆ. ಜೊತೆಗೆ ಜಾತ್ಯಾತೀತ / ಪ್ರಗತಿಪರ ಮತ್ತು ಅದಕ್ಕೆ ವಿರೋಧಿಯಾಗಿ ಗ್ರಹಿಸಲ್ಪಡುವ ಮೂಲಭೂತವಾದಿ ಗ್ರಹಿಕೆಗಳನ್ನು ನಾವು ಮತ್ತೊಮ್ಮೆ ಪ್ರಶ್ನಿಸಿಕೊಳ್ಳಬೇಕಾಗುತ್ತದೆ. ಏಕೆಂದರೆ ಈ ಗ್ರಹಿಕೆಗಳು ಒಬ್ಬರನ್ನೊಬ್ಬರು ಮೂದಲಿಸಲು ಅಥವಾ ಖಂಡಿಸಲು ಮಾತ್ರ ಉಪಯೋಗವಾಗುವುದರಿಂದ, ವಿವಾದಗಳನ್ನು ವಿಶ್ಲೇಷಿಸಲು ಸಂಪೂರ್ಣವಾಗಿ ಸಹಾಯಕವಾಗುವುದಿಲ್ಲ.

ಸಾಹಿತ್ಯ ವಿವಾದಗಳು ಭಿನ್ನ, ಭಿನ್ನ ಕಾರಣಗಳಿಗಾಗಿ ಉದ್ಭವಿಸುವದರಿಂದ ಮತ್ತು ಪ್ರತಿಯೊಂದು ವಿವಾದದ ಸ್ವರೂಪ, ಲಕ್ಷಣಗಳು ಸಂದರ್ಭಕ್ಕನು ಗುಣವಾಗಿರುವದರಿಂದ ‘ಸಾಂದರ್ಭಿಕ ಅಧ್ಯಯನ’ದ (contextual study) ಅವಶ್ಯಕತೆಯನ್ನು ಕೆಲವರು ಪ್ರತಿಪಾದಿಸುತ್ತಾರೆ. ಈ ಮಾದರಿಯ ವಿಶೇಷವೇನೆಂದರೆ ಅದು ನನ್ನ ವಿಶ್ಲೇಷಣೆಗೆ ಸಾಹಿತ್ಯದ ಜೊತೆಗೆ ಸಾಹಿತ್ಯೇತರ ಅಂಶಗಳಾದ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಅಂಶಗಳನ್ನು ತನ್ನ ಅಧ್ಯಯನಕ್ಕೆ ಪರಿಗಣಿಸುತ್ತದೆ. ಆದರೆ ಸಂದರ್ಭವೂ ಸಹ ಇತಿಹಾಸದ ಅಂಶಗಳಿಂದ ರೂಪಿಸಲ್ಪಡುತ್ತದೆ ಎಂಬ ಅಂಶವನ್ನು ಇದು ಪರಿಗಣಿಸುವುದಿಲ್ಲ. ಸಾಹಿತ್ಯ ವಿವಾದವು ರಾಜಕೀಯ ಹಿತಾಸಕ್ತಿಗಳಿಗಾಗಿ ಉದ್ಭವಿಸಿತು[2], ಅಥವಾ ಒಂದು ಸಾಮಾಜಿಕ ಗುಂಪಿನ ಐಡೆಂಟಿಟಿಯನ್ನು ಭರ್ಜರಿಯಾಗಿ ಅಭಿವ್ಯಕ್ತಿಸಲು ಸಾಹಿತ್ಯ ವಿವಾದವನ್ನುಂಟು ಮಾಡಲಾಯಿತು ಎಂಬ ವಾದಗಳಲ್ಲಿ ಸತ್ಯಾಂಶಗಳಿದ್ದರೂ ವಿವಾದದ ಸಂದರ್ಭದಲ್ಲಿ ಧಾರ್ಮಿಕ / ಸಾಹಿತ್ಯಕ ಭಾವನೆಗಳನ್ನು ಬಳಸಿಕೊಳ್ಳುವ ಪ್ರಕ್ರಿಯೆಗಳು ‘ಸಂದರ್ಭ’ಕ್ಕೆ ಮಾತ್ರ ಬಂಧಿತವಾಗಿರುವುದಿಲ್ಲ ಏಕೆಂದರೆ ಸಾಹಿತ್ಯ / ಲೇಖನದ ವಿರುದ್ಧ ಕಿಡಿ ಕಾರಲು, ‘ಅಪಾರ್ಥ’ಗಳನ್ನು ಕಲ್ಪಿಸಿಕೊಳ್ಳಲು, ಜನರ ಸಂಘಟನೆಗಾಗಿ ಬೇಕಾಗುವ ತಂತ್ರಗಳನ್ನು ರೂಪಿಸಲು ಇತಿಹಾಸವನ್ನು ತಮ್ಮದೇ ಆದ ಐಡಿಯಾಲಜಿಗಳಿಗಾಗಿ ಉಪಯೋಗಿಸುವ ಜಾಯಮಾನವನ್ನು ಈ ವಿವಾದಗಳ ಸಂದರ್ಭದಲ್ಲಿ ಗುರುತರವಾಗಿ ಕಾಣಬಹುದು.

ಮೇಲೆ ಉಲ್ಲೇಖಿಸಲ್ಪಟ್ಟಿರುವ ವಿವಾದಗಳು ಲಿಂಗಾಯತರಿಗೂ[3] ಸಂಬಂಧಪಟ್ಟಿದುದರಿಂದ ಅವು ಬರೀಯ ಸಾಹಿತ್ಯ ವಿವಾದಗಳಾಗಿಲ್ಲ. ಈ ವಿವಾದಗಳಿಂದುಂಟಾದ ಗಲಭೆ, ಲಿಂಗಾಯತರ ಹರತಾಳಗಳು, ಸಭೆಗಳು, ಮಠಾಧೀಶರ ಪಾತ್ರ, ಆತಂಕ ಭರಿತ ವಿಚಾರಗಳು, ರಾಜಕೀಯ ವಿದ್ಯಮಾನಗಳು, ಅಭಿವ್ಯಕ್ತಿ ಸ್ವಾತಂತ್ರ‍್ಯದ ‘ಹರಣ’, ಇತ್ಯಾದಿಗಳು, ಸಾಹಿತ್ಯವನ್ನು ‘ರಾಜಕೀಯಗೊಳಿಸುವ’ (politicization)[4] ಪ್ರಕ್ರಿಯೆಯನ್ನು ಸೂಚಿಸುತ್ತದೆ. ಹೀಗಾಗಿ ಸಾಹಿತ್ಯ ವಿವಾದಗಳ ವಿಮರ್ಶೆ ಅಥವಾ ವಿಶ್ಲೇಷಣೆ ಈ ಎಲ್ಲಾ ವಿಷಯಗಳನ್ನು ಒಳಗೊಳ್ಳಬೇಕಾಗುತ್ತದೆ. ಇವುಗಳನ್ನು ‘ಮೂಲಭೂತವಾದಿ’ಯ ಸೂಚಕಗಳೆಂದು ತಿರಸ್ಕರಿಸುವ ಹಾಗಿಲ್ಲ. ಸಾಹಿತ್ಯವನ್ನು ರಾಜಕೀಯ ಗೊಳಿಸುವ ಈ ವಿವಾದಗಳು ಲಿಂಗಾಯತರ ಸಮುದಾಯ, ಧರ್ಮ, ಮತ್ತು ಇತಿಹಾಸದ ಬಗ್ಗೆ ಸಂಕೀರ್ಣವಾದ ಚಿತ್ರಣವನ್ನು ನಮ್ಮ ಮುಂದಿರಿಸಿವೆ ಮತ್ತು ಇವುಗಳ ಬಗ್ಗೆ ಗಂಭೀರವಾಗಿ ಮತ್ತೊಮ್ಮೆ ಮರು-ಚಿಂತನೆ ಮಾಡುವಂತೆ ಪ್ರಚೋದಿಸಿವೆ. ವಸಾಹತ್ತೋತ್ತರ ಸಂದರ್ಭದಲ್ಲಿ ಸಮುದಾಯ, ಸಮಾಜ ಮತ್ತು ಸಂಸ್ಕೃತಿಗಳು ಯಾವ ಅರ್ಥವನ್ನು ಪಡೆದು ಕೊಳ್ಳುತ್ತವೆ ಎಂದು ಚರ್ಚಿಸಲು ಇವು ನಮ್ಮನ್ನು ಕೆಣಕಿವೆ. ಇವು ವಚನ, ಶಿವಶರಣರ ಚರಿತ್ರೆ ಮತ್ತು ಪರಂಪರಾನುಗತವಾಗಿ ಅನುಸರಿಸಿಕೊಂಡು ಬಂದಿರುವ ಧಾರ್ಮಿಕ ನಂಬಿಕೆ, ಆಚಾರ-ವಿಚಾರಗಳ ಬಗ್ಗೆ ಇದ್ದರೂ, ಲಿಂಗಾಯತರ ಸಮುದಾಯದ ಪ್ರಶ್ನೆಯನ್ನು ಸಹ ಒಳಗೊಂಡಿರುವಂತದ್ದು. ಸಮುದಾಯದ ಹಿತರಕ್ಷಣೆಯ ಜವಾಬ್ದಾರಿಯನ್ನು ನಮ್ಮ ಮೇಲೆ ಸ್ವಯಂ ಹೇರಿಕೊಂಡು ಅದರ ಸ್ವರೂಪ, ಲಕ್ಷಣಗಳನ್ನು ಮತ್ತೊಮ್ಮೆ ಬರೆಯಲು ಯತ್ನಿಸುವ ಸಮುದಾಯವಾದಿಗಳ ಆತಂಕ ಭರಿತ ಸನ್ನಿವೇಶವನ್ನು ಈ ವಿವಾದಗಳು ಪ್ರದರ್ಶಿಸುತ್ತವೆ. ಅಂದರೆ ಸಾಹಿತ್ಯ ವಿವಾದಗಳನ್ನು ಬಳಸಿಕೊಂಡು, ಈ ಸಮುದಾಯವಾದಿಗಳು ತಮ್ಮ ಸಮುದಾಯದ ಐಡೆಂಟಿಟಿಯನ್ನು ಹೇಗೆ ಮತ್ತು ಯಾವ ರೀತಿಯಲ್ಲಿ ಕಲ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಎಂಬ ಅಂಶವು ನಮ್ಮ ಅಧ್ಯಯನಕ್ಕೆ ಬಹಳ ಮುಖ್ಯವಾದುದು.[5]

ಮತ್ತೊಂದು ಅಂಶವು ಮೇಲೆ ಉಲ್ಲೇಖಿಸಲ್ಪಟ್ಟ ವಿವಾದಗಳಿಗೂ ಮತ್ತು ಇತಿಹಾಸಕ್ಕೂ ಇರುವ ಸಂಬಂಧಕ್ಕೆ ಕುರಿತಾದುದು. ಸಾಹಿತ್ಯ ಕೃತಿ ಹಾಗೂ ಅದರ ಲೇಖಕನ ಅಭಿವ್ಯಕ್ತಿ ಸ್ವಾತಂತ್ರ‍್ಯದ ಮೇಲೆ ವಿಚಾರಗಳನ್ನು ಹೇರುವ ಸಮುದಾಯವಾದಿಗಳ ‘ಮೂಲಭೂತವಾದಿ’ ಸಂವೇದನೆಯು ೯೦ರ ದಶಕದ ಸಂದರ್ಭಗಳಿಂದ ರೂಪಿಸಲ್ಪಟ್ಟಿದ್ದರೂ, ಶಿವಶರಣರ ಚರಿತ್ರೆಯ ಬಗ್ಗೆ ಎದ್ದ ಪ್ರಶ್ನೆಗಳು, ಸಮರ್ಥನೆಗಳು ಮತ್ತು ಅವುಗಳನ್ನು ಅರ್ಥಮಾಡಿಕೊಳ್ಳಲು ಉಂಟಾದ ಸೈದ್ಧಾಂತಿಕ ಸಮಸ್ಯೆಗಳು ಇಂದಿನದಲ್ಲ. ಸಮಸ್ಯೆ ಮತ್ತು ವಿವಾದಗಳು ಹೊಸದಾದರೂ ಅವುಗಳನ್ನು ರೂಪಿಸಿದ ಸಾಹಿತ್ಯ ಮತ್ತು ಚರಿತ್ರೆಯ ಅಂಶಗಳು ವಸಾಹತುಶಾಹಿ ಇತಿಹಾಸವನ್ನು ನಮ್ಮ ಮುಂದಿಡುತ್ತದೆ ಈ ಇತಿಹಾಸವನ್ನು ಅರ್ಥಮಾಡಿ ಕೊಳ್ಳಬೇಕಾದರೆ ವಸಾಹತುಶಾಹಿ ಸಂದರ್ಭದಲ್ಲಿ ಲಿಂಗಾಯತರು ತಮ್ಮ ಸಮುದಾಯದ ಅಸ್ಥಿತ್ವವನ್ನು ಯಾವ ಯಾವ, ಸಂದರ್ಭಗಳಲ್ಲಿ, ಯಾವ ರೀತಿಯ ಸ್ಥಿತ್ಯಂತರಗಳಿಗೆ ಒಳಪಡಿಸಿದರು ಎಂಬುದನ್ನು ಅವಲೋಕಿಸ ಬೇಕಾಗುತ್ತದೆ. ಏಕೆಂದರೆ ಲಿಂಗಾಯತರ ಸಮುದಾಯದ ಕಲ್ಪನೆಯ ಸಾಹಿತ್ಯ ಮತ್ತು ಚರಿತ್ರೆಯ ಸುತ್ತ ಹೆಣೆದು ಕೊಂಡಿದೆ. ಸಾಹಿತ್ಯ ಮತ್ತು ಚರಿತ್ರೆಯನ್ನು ಮರುವ್ಯಾಖ್ಯಾನಿಸುವದರ ಮೂಲಕ ಲಿಂಗಾಯತರು ತಮ್ಮ ಅಸ್ತಿತ್ವವನ್ನು ಬಲವಾಗಿ ಮರುಕಳಿಸುವ ಪ್ರಯತ್ನವನ್ನು ಮಾಡುತ್ತಾರೆ. ಇದಕ್ಕೆ ಅನೇಕ ಸಂದರ್ಭಗಳಿದ್ದರೂ, ಸಾಹಿತ್ಯ ವಿವಾದಗಳು ಬಹಳ ಮುಖ್ಯವಾದ ಮತ್ತು ಬಲವಾದ ಕಾರಣಗಳನ್ನು ನೀಡುತ್ತವೆ. ತಮ್ಮ ಸಮರ್ಥನೆ, ಸಾಹಿತ್ಯ ಅಭಿರುಚಿ, ಆಸಕ್ತಿಗಳ ಜೊತೆಗೆ, ಆಕ್ರೋಶ, ಕಳವಳ, ಆತಂಕ, ಬಿಕ್ಕಟ್ಟುಗಳನ್ನು ಪ್ರದರ್ಶಿಸಲು ಸರಿಯಾದ ಸಂದರ್ಭ ಯಾವುದೆಂದರೆ ಈ ವಿವಾದಗಳು.

ವಿವಾದಗಳ ಸಂದರ್ಭದಲ್ಲಿ ಅತಿ ತೀವ್ರವಾಗಿ ಮತ್ತು ಪರಿಣಾಮಕಾರಿಯಾಗಿ ಬಳಸಲ್ಪಡುವ ಶಿವಶರಣರ ಬಗೆಗಿನ ಕಥನಗಳು (ಸಾಹಿತ್ಯಕ ಅಥವಾ ಧಾರ್ಮಿಕ) ಹನ್ನೆರಡೆಯ ಶತಮಾನದಿಂದ ನೇರವಾಗಿ, ಯಾವುದೇ ಬದಲಾವಣೆಗಳಿಲ್ಲದೆ ಪಡೆದಂತವುಗಳಾಗಿಲ್ಲ. ಅಂದರೆ ಅವುಗಳ ಲಭ್ಯತೆ ಅಥವಾ ಬೆಳವಣಿಗೆ ಸರಳರೇಖಾತ್ಮಕವಾದುದಲ್ಲ. ಶಿವಶರಣರ ಬಗ್ಗೆ ಇರುವ ಪುರಾಣಗಳು, ಅವರಿಂದ ರಚಿಸಲ್ಪಟ್ಟ ವಚನಗಳು, ನಂಬಿಕೆಗಳು, ನೆನಪುಗಳು, ವಸಾಹತುಶಾಹಿ ಆಧುನಿಕತೆಯ ಪ್ರಭಾವಕ್ಕೆ ಒಳಗಾಗಿ ಮಹತ್ತರವಾದ ಬದಲಾವಣೆಗೊಳಗಾದವು. ಈ ಕಥನಗಳು ಲಿಂಗಾಯತ ಸಮುದಾಯದ ಐಡೆಂಟಿಟಿಯನ್ನು ರೂಪಿಸುವಲ್ಲಿ ವಹಿಸಿದ ಪಾತ್ರ ಸಂಕೀರ್ಣವಾದ ಇತಿಹಾಸವನ್ನು ತೆರೆದಿಡುತ್ತವೆ. ಅಂದರೆ ಸಾಹಿತ್ಯ ಕಥನಗಳು ತಮ್ಮ ಪಾವಿತ್ರ‍್ಯತೆಯ ಜೊತೆಗೆ, ಸಮುದಾಯಗಳ ಅಸ್ತಿತ್ವವನ್ನು ನಿರ್ಧರಿಸುವ ಮತ್ತು ವ್ಯಾಖ್ಯಾನಿಸುವ ಮಹತ್ತರವಾದ ಪಾತ್ರವನ್ನು ನಿಭಾಯಿಸಿವೆ. ಇದು ವಸಾಹತುಶಾಹಿ ಕಾಲಘಟ್ಟದಲ್ಲಿ ಪ್ರಮುಖವಾಗಿ ಎದ್ದು ಕಾಣುವ ಸಾಹಿತ್ಯದ ವಿರಾಟ್ ಸ್ವರೂಪ ಮತ್ತು ಪ್ರಕ್ರಿಯೆ. ವಿಶೇಷವೇನೆಂದರೆ, ಈ ಪ್ರಕ್ರಿಯೆಯು ಬರಿ ಲಿಂಗಾಯತರಿಗೆ ಮಾತ್ರ ಸಂಬಂಧಿಸಿದುದಲ್ಲದೆ, ವೈಷ್ಣವರು, ಕ್ರಿಶ್ಚಿಯನ್ನರು, ಸಿಖ್ಖರು ಮತ್ತು ಇತರರಿಗೂ ಸಂಬಂಧಿಸಿದೆ. ಅವರೂ ಸಹ ತಮ್ಮ ಸಾಹಿತ್ಯವನ್ನು ಸಾಮುದಾಯಿಕವಾಗಿ ವ್ಯಾಖ್ಯಾನಿಸುವ ತೀವ್ರತೆ ಮತ್ತು ಜರೂರತ್ತನ್ನು ವಸಾಹತುಶಾಹಿ ಕಾಲಘಟ್ಟದಲ್ಲಿ ಪ್ರದರ್ಶಿಸಿದ್ದಾರೆ. ಆದ್ದರಿಂದ ಚರಿತ್ರೆಯ ನೆನಪುಗಳು, ಧಾರ್ಮಿಕ ಪ್ರತಿಮೆಗಳು, ಪೌರಾಣಿಕ ಸ್ಮೃತಿಗಳು ಮತ್ತು ನಮಗೆ ಕಾಣುವ ದೈನಂದಿನ ಆಚಾರ-ವಿಚಾರಗಳನ್ನು ಸಾಮುದಾಯಿಕ ಐಡೆಂಟಿಟಿಯನ್ನು ಕಲ್ಪಿಸಿಕೊಳ್ಳಲು ಹೇಗೆ ಬಳಸಲಾಗಿದೆ ಎಂಬುದನ್ನು ಸ್ಥೂಲವಾಗಿ ಅವಲೋಕಿಸಬೇಕಾಗಿದೆ.

ವಸಾಹತುಶಾಹಿಯ ಕಾಲಘಟ್ಟದಲ್ಲಿ (೧೯೨೦ರ ದಶಕಗಳಲ್ಲಿ) ಉಂಟಾದ ಲಿಂಗಾಯತರ ಸಾಮುದಾಯಿಕ ಸ್ಥಿತ್ಯಂತರಗಳು ಅನೇಕ ಮಜಲುಗಳನ್ನು ಹೊಂದಿವೆ. ಒಂದು, ಸಾಮುದಾಯಿಕ ಅಸ್ಥಿತ್ವದ ಕಲ್ಪನೆಯು ಲಿಂಗಾಯತರ ಆಂತರಿಕ ಅವಶ್ಯಕತೆಯ ಜೊತೆಗೆ, ಇತರರ ಅಸ್ಥಿತ್ವದ ಜೊತೆಗಿನ ಪೈಪೋಟಿ, ಸ್ಪರ್ಧೆ ಮತ್ತು ತಿಕ್ಕಾಟವೂ ಆಗಿತ್ತು. ಎರಡು, ಲಿಂಗಾಯತರ ‘ಸಾಮುದಾಯಿಕ ಕಥನಗಳು’ (community narratives) ಬಹುಮಟ್ಟಿಗೆ ಸಾಂಸ್ಕೃತಿಕ-ಸಾಮಾಜಿಕ ತುರ್ತು ಪರಿಸ್ಥಿತಿಯ ಮತ್ತು ಸಂದರ್ಭಗಳ ಫಲ ಸ್ವರೂಪವಾಗಿದ್ದವು. ಅಂದರೆ ವಸಾಹತುಶಾಹಿ ಪೂರ್ವದ ನೆನಪುಗಳು, ಸಾಂಸ್ಕೃತಿಕ ಸಂಕೇತಗಳು ಅಥವಾ ಪರಂಪರಾನುಗತ ಆಚಾರ-ವಿಚಾರಗಳು ವಸಾಹತುಶಾಹಿ ಕಾಲದಲ್ಲಿ ಅನೇಕ ಪಲ್ಲಟಗಳಿಗೆ ಒಳಪಟ್ಟು, ಲಿಂಗಯತರ ಸಾಮಾಜಿಕ ಸ್ಥಾನಮಾನ, ರಾಜಕೀಯ ಹಿತಾಸಕ್ತಿ ಮತ್ತು ಆರ್ಥಿಕ ಮೇಲ್ಚನೆಯ ಅಂಶಗಳೊಂದಿಗೆ ಸಂಕೀರ್ಣವಾದ ಸಂಬಂಧವನ್ನು ಹೊಂದಿದ್ದವು. ಮೂರು, ಪ್ರಸ್ತುತ ಕರ್ನಾಟಕದ ಸಾಂಸ್ಕೃತಿಕ ವಲಯದಲ್ಲಿ ತನ್ನನ್ನು ತಾನು ಏಕೀಕೃತಗೊಳಿಸಿ, ತಾನೇ ಪ್ರಧಾನ ಸಮುದಾಯವೆಂದು ಘೋಷಿಸುವ ಮತ್ತು ಅದನ್ನು ಅಧಿಕೃತಗೊಳಿಸುವ ಲಿಂಗಾಯತ ಸಮುದಾಯವು, ತನ್ನೊಳಗಿನ ವೈರುಧ್ಯಗಳನ್ನು ಮತ್ತು ಹತ್ತು ಹಲವು ಭಿನ್ನ, ಭಿನ್ನ ಪರಂಪರೆಗಳನ್ನು ಏಕೀಕೃತಗೊಳಿಸಿ, ಅನೇಕ ವೈವಿಧ್ಯತೆಗಳನ್ನು ನೀಟಾಗಿ ಇಸ್ತ್ರಿ ಮಾಡುವ ಚಾರಿತ್ರಿಕ ಸಂದರ್ಭವನ್ನು ಒಳಗೊಂಡಿದ್ದವು.

ವಸಾಹತುಶಾಹಿಯ ಈ ಕಾಲಘಟ್ಟದಲ್ಲಿ ಲಿಂಗಾಯತರಿಗೆ ಎದುರಾದ ಅನೇಕ ಸಾಂದರ್ಭಿಕ ಒತ್ತಡಗಳಲ್ಲಿ ಶುಭೋದಯ ವಿವಾದವು (೧೯೧೯) ಒಂದು, ಈ ವಿವಾದದ ಸುತ್ತಲು ನಡೆದ ವಾದ-ವಿವಾದ, ಚರ್ಚೆ ಮತ್ತು ಆತಂಕ ಮೇಲೆ ವಿವರಿಸಲ್ಪಟ್ಟ ಮೂರು ಅಂಶಗಳನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗಿವೆ. ಶುಭೋಧಯ ವಿವಾದವು ಲಿಂಗಾಯತರ ಅಸ್ಥಿತ್ವವನ್ನು ಮತ್ತು ಪಾರಂಪಾರಿಕ ಅರ್ಥವನ್ನು ಅಲುಗಾಡಿಸಿದ ಮತ್ತು ಅವರನ್ನು ಪ್ರಚೋದಿಸಿದ ಪ್ರಮುಖ ಘಟನೆಯಾಗಿದೆ. ಈ ವಿವಾದವು ಲಿಂಗಾಯತರ ಅಸ್ಮಿತದ ಮರು-ಹುಟ್ಟಿನ ಜೊತೆಗೆ ಹೇಗೆ ತಳಕು ಹಾಕಿಕೊಂಡಿದೆ ಎಂದು ಅರ್ಥ ಮಾಡಿಕೊಳ್ಳಲು ಲೇಖನದ ಮುಂದಿನ ಚರ್ಚೆಯನ್ನು ಆರು ಭಾಗಗಳನ್ನಾಗಿ ವಿಂಗಡಿಸಲಾಗಿದೆ.

ಮೊದಲನೆಯ ಭಾಗವು ೨೦ನೇ ಶತಮಾನದ ಎರಡನೇ ದಶಕದಲ್ಲಿ ಲಿಂಗಾಯತರಿಗೆ ಸಂಬಂಧಿಸಿದಂತೆ ಆದ ಎರಡು ವಿವಾದಗಳ ಚರ್ಚೆಯಿಂದ ಶುರುವಾಗುತ್ತದೆ. ಈ ವಿವಾದಗಳಿಂದ ಉಂಟಾದ ಸನ್ನಿವೇಶಗಳನ್ನು ಮತ್ತು ಸಾಹಿತ್ಯಕ/ಚಾರಿತ್ರಿಕ ಪ್ರಶ್ನೆಗಳನ್ನು ಒಂದೊಂದಾಗಿ ಮುಂದಿಡಲಾಗಿದೆ. ಈ ಪ್ರಶ್ನೆಗಳನ್ನು ಮುಂದಿನ ಚರ್ಚೆಗೆ ಹಿನ್ನಲೆಯಾಗಿ ವಿವರಿಸಲಾಗಿದೆ. ಎರಡನೇ ಭಾಗವು ಪಾಶ್ಚಾತ್ಯ ಓರಿಯಂಟಲಿಸ್ಟರು ಲಿಂಗಾಯತ ಕಥನಗಳ ಅಧ್ಯಯನಕ್ಕೆ ಇತ್ತ ಕಾಣಿಕೆಯನ್ನು ಚರ್ಚಿಸಲಾಗಿದೆ. ಈ ಚರ್ಚೆಯನ್ನು ೧೮೫೦ ರಿಂದ ೧೯೨೦ರ ನಡುವಿನ ಕಾಲಾವಧಿಗೆ ಸೀಮಿತಗೊಳಿಸಲಾಗಿದೆ. ಈ ಭಾಗವು ಪ್ರಸ್ತುತ ವಿವಾದಗಳಿಂದುಂಟಾದ ಬಿಕ್ಕಟ್ಟು ಹೇಗೆ ಚಾರಿತ್ರಿಕ ಅಂಶಗಳೊಂದಿಗೆ ತಳಕು ಹಾಕಿಕೊಂಡಿವೆ ಎಂಬುದನ್ನು ಅವಲೋಕಿಸಲು ಸಹಾಯಕವಾಗುತ್ತದೆ. ಇದು ಲಿಂಗಾಯತರು ಹಾಗೂ ಇತರರ ನಡುವೆ ‘ಲಿಂಗಾಯತರ ಸಂಸ್ಕೃತಿ’ಯ ಪ್ರಾತಿನಿಧ್ಯಕ್ಕಾಗಿ ನಡೆದ ಸಂಘರ್ಷವನ್ನು ತಿಳಿದುಕೊಳ್ಳಲು ಸಹಾಯಕವಾಗಿದೆ. ಮುಂದಿನ ಭಾಗದಲ್ಲಿ (ಮೂರನೇ ಭಾಗ) ಪಾಶ್ಚಾತ್ಯ ಓರಿಯಂಟಲಿಸ್ಟರ ಲಿಂಗಾಯತ ಜ್ಞಾನಧಾರೆಯನ್ನು ಲಿಂಗಾಯತರು ಯಾವ ರೀತಿಯಲ್ಲಿ ಸ್ವೀಕರಿಸಿ, ಅರ್ಥಮಾಡಿಕೊಂಡರು ಎಂಬುದರ ವಿಶ್ಲೇಷಣೆಯಿಂದ. ಈ ಚರ್ಚೆಯು ಓರಿಯೆಂಟಲಿಸ್ಟರು ಸ್ಥಳೀಯ ಸಂಸ್ಕೃತಿಗಳ ಮೇಲೆ “ಸಂಪೂರ್ಣ ದಿಗ್ವಿಜಯ” (ನಾಗರಾಜ್, ೧೯೯೬: ೩-೨೩) ಸಾಧಿಸಲು ಯಶಸ್ವಿ ಯಾದರೋ ಅಥವಾ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಅನುವು ಮಾಡಿಕೊಡುತ್ತದೆ. ಲಿಂಗಾಯತರ ಆಂತರಿಕ ವೈರುಧ್ಯಗಳು ಮತ್ತು ಅವರ ಸಾಮುದಾಯಿಕ ಐಡೆಂಟಿಟಿಯ ಮೇಲೆ ಲಿಂಗಾಯರ ಕಥನಗಳು ಯಾವ ರೀತಿಯ ಪ್ರಭಾವ ಬೀರಿದವು ಎಂಬುದನ್ನು ಈ ಭಾಗದಲ್ಲಿ ಚರ್ಚಿಸಲಾಗಿದೆ. ಈ ಚರ್ಚೆಯ ಮುಂದುವರಿಕೆಯಂತೆ ನಾಲ್ಕರ ಭಾಗದಲ್ಲಿ ಶುಭೋದಯ ವಿವಾದಕ್ಕೆ ಪರೋಕ್ಷವಾಗಿ ಕಾರಣೀಭೂತವಾದ ಲಿಂಗಾಯತರ ಎರಡು ಧಾರ್ಮಿಕ ಪರಂಪರೆಗಳ ನಡುವಿನ ಘರ್ಷಣೆಗಳ ಸ್ವರೂಪವನ್ನು ಅಧ್ಯಯನಕ್ಕೊಳಪಡಿಸಲಾಗಿದೆ. ಐದನೇ ಭಾಗದಲ್ಲಿ ‘ಸಂಪ್ರದಾಯ’ಕ್ಕೆ ವಿರುದ್ಧವಾಗಿ ಪ್ರಗತಿಪರ ಲಿಂಗಾಯತರು ತಮ್ಮ ಸಮುದಾಯದ ಐಡೆಂಟಿಟಿಯನ್ನು ‘ಜಾತ್ಯಾತೀತ’ ಅಡಿಪಾಯದ ಮೇಲೆ ಕಲ್ಪಿಸಿಕೊಳ್ಳುವ ಪ್ರಕ್ರಿಯೆಯನ್ನು ಚರ್ಚಿಸುತ್ತದೆ. ಇಲ್ಲಿ ಆಧುನಿಕ ವಿಚಾರಧಾರೆಗಳು ಸಂಪ್ರದಾಯದ ಜೊತೆಗೆ ನಡೆಸಿದ ಅನುಸಂಧಾನ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಳ್ಳವ ಪ್ರಯತ್ನವನ್ನು ಮಾಡಲಾಗಿದೆ. ಆರನೇ ಭಾಗದಲ್ಲಿ ಶುಭೋದಯ ವಿವಾದದಿಂದ ಲಿಂಗಾಯತರ ಮೇಲೆ ಉಂಟಾದ ಪರಿಣಾಮಗಳನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

ಭಾಗ

ಬ್ರಾಹ್ಮಣನೆ ಅಧಿಕವೆಂಬಿರಿಭೋ, ಮಾತದು ಮಿಥ್ಯಾ’ :
ಕಥನಗಳ
ಮೂಲಕ ಆಧುನಿಕತೆಯ ಪರಿಧಿಯೊಳಗೆ

ಶುಭೋಧಯ ಕನ್ನಡ ಪತ್ರಿಕೆಯಲ್ಲಿ (೧೮ನೇ ಏಪ್ರಿಲ್, ೧೯೧೯) “ಅಲ್ಲಮ, ಬಸವನ ವೃತ್ತಾಂತವೇನು?” ಎಂಬ ಶೀರ್ಷೀಕೆಯಲ್ಲಿ ಆರ್. ಶ್ರೀನಿವಾಸಚಾರ್ಯ ಎಂಬುವವರಿಂದ ಬರೆಯಲ್ಪಟ್ಟ ಲೇಖನವು ಲಿಂಗಾಯತರ ಸ್ವಾಭಿಮಾನವನ್ನು ಹಿಂದೆಂದೂ ಕೇಳರಿಯದಷ್ಟು ಕೆರಳಿಸಿತು. ಅಂದಿನ ಲಿಂಗಾಯತ ವಿದ್ವಾಂಸ ಮತ್ತು ಕಾನೂನು ತಜ್ಞರಾದ ಸಿದ್ಧರಾಮಪ್ಪ ಪಾವಟೆಯೆಂಬುವವರು ಲೇಖನದ ವಿರುದ್ಧ ಧಾರವಾಡದ ಮೊದಲನೇ ದರ್ಜೆಯ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಮೊಕದ್ದಮೆಯನ್ನು ಹೂಡಿದರು. ಲೇಖನದ ವಿರುದ್ಧ ಅಭಿಪ್ರಾಯವನ್ನು ಕ್ರೋಢೀಕರಿಸುವಕ್ಕಾಗಿ ಮತ್ತು ಲಿಂಗಾಯತರನ್ನು ಸಂಘಟಿಸುವದಕ್ಕಾಗಿ ಪಾವಟೆಯವರು ಸಕ್ರೀಯ ಹಾಗೂ ಸುಸಜ್ಜಿತವಾದ ಪಾತ್ರ ವಹಿಸಿದರು. ತಮ್ಮ ಖಟ್ಲೆಯಲ್ಲಿ “ಲೇಖನವು, ಅಭಿವ್ಯಕ್ತಿ ಸ್ವಾತಂತ್ರ‍್ಯದ ಹೆಸರಿನಲ್ಲಿ, ಲಿಂಗಾಯತರ ಧಾರ್ಮಿಕ ಭಾವನೆಗಳಿಗೆ ನೋವುನ್ನುಂಟು ಮಾಡಿದೆ” ಎಂದು ಬಲವಾಗಿ ವಾದಿಸಿದರು. ಇದಕ್ಕಾಗಿ ಪತ್ರಿಕೆಯ ಪರವಾನಿಗೆಯನ್ನು ರದ್ದು ಪಡಿಸಬೇಕೆಂದು ಆಗ್ರಹಿಸಿದರು. ಈ ವಿವಾದವು ಕಾಲಕ್ರಮೇಣ ಲಿಂಗಾಯತರ ಸ್ವ-ಪ್ರತಿಷ್ಠೆಯ ಪ್ರಶ್ನೆಯಾಗಿ ಬೆಳೆಯಿತು. ಸಾರ್ವಜನಿಕ ವಲಯದಲ್ಲಿ ಈಗಿನಂತೆ ಗಲಭೆಗಳಾಗದಿದ್ದರೂ, ಈ ವಿವಾದವನ್ನು ಲಿಂಗಾಯತರ ‘ಮನೆ ವಿಷಯ’ದಲ್ಲಿ ಹೊರಗಿನವರ ಅತಿಕ್ರಮ ಪ್ರವೇಶವೆಂಬಂತೆ ನೋಡಲಾಯಿತು. ಲಿಂಗಾಯತರ ಕೋಪಕ್ಕೆ ಗುರಿಯಾದ ಲೇಖನದ ಕೆಲವು ವಿವರಗಳು ಬಸವ-ಅಲ್ಲಮರ ವಿರುದ್ಧ ಇದ್ದುದರಿಂದ ಲೇಖಕನನ್ನು ಲಿಂಗಾಯತ-ವಿರೋಧಿ ಎಂದು ಜರಿಯಲಾಯಿತು. ಲೇಖನವು ಕೆಲವು ಝಲಕುಗಳು ಮೈಸೂರ್ ಸ್ಟಾರ್[6] ಪತ್ರಿಕೆಯಲ್ಲಿ ಪ್ರಕಟವಾದಂತೆ ಹೀಗಿವೆ:

ಅಲ್ಲಮ ಇವನ ಚರಿತ್ರಾದಿ ವಿಷಯಗಳನ್ನು ವಿಚಾರಿಸುತ್ತಿರಲಿಕ್ಕಾಗಿ ಇವನು ಶೂದ್ರನಿದ್ದನೆಂದು ಕಂಡು ಬರುತ್ತದೆ. ಅಲ್ಲಮ ಎಂಬ ಹೆಸರು ಮುಸಲ್ಮಾನ ದೇವತಾ ಸಂಕೇತವಾಗಿರುತ್ತದೆ. ಇವನ ಸಂಬಂಧವಾದ ಚಿತ್ರಕಲ್ಲದುರ್ಗ ಮುರಗಿ ಮಠದವರು ಈ ಹೊತ್ತಿನವರೆಗೂ ಮುಸಲ್ಮಾನರ ಕಡೆಯಿಂದ ನಾವು ನಿಮಗೆ ಸಂಬಂಧಿಕರೆಂದು ಹೇಳಿ ಕಾಣಿಕೆಯನ್ನು ಎತ್ತುತ್ತಿರುವರು… ಬಸವನೆಂಬುವವನು ಕಲ್ಯಾಣಪಟ್ಟಣವನ್ನು ಆಳುತ್ತಿದ್ದ ಬಿಜ್ಜಳನ ಮಂತ್ರಿಯಾಗಿ ಜಾತಿ ಸಂಕರವನ್ನು ಮಾಡುವ ಕಾಲಕ್ಕೆ ಇವನು ಅದರಲ್ಲಿ ಹೋಗಿ ಸೇರಬೇಕೆಂದು ಕಲ್ಯಾಣ ಪಟ್ಟಣಕ್ಕೆ ಬಂದು ಮತ ಪ್ರವಿಷ್ಟನಾದನು. ಇವನು ಬಸವನ ಮನೆಯ ಭೋಜನ ಪಂಕ್ತಿಯಲ್ಲಿ ತನ್ನ ಪೂರ್ವ ಜಾತಿಯ ಪದ್ಧತಿಯಂತೆ ಹೆಂಡದ ಗಡಿಗೆಯನ್ನೇ ತೆಗೆದುಕೊಂಡು ಹೊಕ್ಕನು… ಬಸವನನ್ನು ವೀರಶೈವ ಮತದ ಉದ್ಧಾರಕನೆಂದು ಹೇಳದೆ ಆ ಪವಿತ್ರ ಮತವನ್ನು ಕೆಡಸಿದನೆಂದು ನಿರ್ಭಿತಿಯಿಂದ ಹೇಳಬಹುದು! ಬಸವನು ತಾನು ರಾಜನಾಗಬೇಕೆಂದು ಅಭಿಲಾಷೆಯಿಂದ ಮಿಂಡ ಪುಂಡ ಜಂಗಮರನ್ನೆಲ್ಲಾ ಸೈನಿಕರಂತೆ ತಯಾರು ಮಾಡಿ ಅವರಿಗೆ ಅನ್ನ ಹಾಕುತ್ತಿದ್ದನೇ ಹೊರತು ಭಕ್ತಿಯಿಂದ ಲಕ್ಷದ ಮೇಲೆ ತೊಂಭತ್ತಾರು ಸಾವಿರ ಗಣಂಗಳಿಗೆ ಅನ್ನವನ್ನು ಕೊಡುತ್ತಿರಲಿಲ್ಲ. ಅವನಲ್ಲಿ ನಿಜ ಭಕ್ತಿಯಿರದೆ ಅತುಲವಾದ ಯುಕ್ತಿಯನ್ನು. ಚೆನ್ನಬಸವ ಮೊದಲಾದ ಇವರೆಲ್ಲರ ವಿಷಯವಾಗಿ ಪುರಾಣಿಕರು ಬೇರೊಂದು ರೀತಿಯಾಗಿ ವರ್ಣನೆ ಮಾಡಿರುವುದು ಅತ್ಯಂತ ತಪ್ಪೆಂದು ಕಂಡು ಬರುತ್ತದೆ (೧೯೧೯ :೩).[7]

ಶಿವಶರಣರನ್ನು ಮಿಂಡ-ಪುಂಡರೆಂದು ವರ್ಣಿಸಿದ್ದು ಲಿಂಗಾಯತರಿಗೆ ರುಚಿಸಲಿಲ್ಲ. ಬಸವನನ್ನು ಸಂಚುಗಾರನೆಂದು ಮತ್ತು ಅಲ್ಲಮನ ಜಾತಿಯ ಹೆಸರನ್ನು ಹಿಡಿದು ಅವಮಾನ ಮಾಡಿದ್ದು, ಲಿಂಗಾಯತರಿಗೆ ಸರಿಬೀಳಲಿಲ್ಲ. ಅವರು ಈ ಲೇಖನವನ್ನು ಲಿಂಗಾಯತ ಸಮುದಾಯಕ್ಕೆ ಸವಾಲು ಎಂಬಂತೆ ಭಾವಿಸಿ, ಪ್ರಬಲವಾಗಿ ಪ್ರತಿಭಟಿಸಿದರು. ಮೈಸೂರ್ ಸ್ಟಾರ್ ಪತ್ರಿಕೆಯು ಲೇಖನದ ವಿರುದ್ಧ ಅನೇಕ ಸಂಪಾದಕೀಯಗಳನ್ನು ಪ್ರಕಟಿಸಿತು. ಲೇಖನದ ವಿರುದ್ಧ ಲಿಂಗಾಯತರನ್ನು ಸಂಘಟಿಸುವಲ್ಲಿ ಈ ಪತ್ರಿಕೆಯು ಬಹಳ ಪ್ರಮುಖವಾದ ಪಾತ್ರ ವಹಿಸಿತು. ೧೯೧೯ರ ಏಪ್ರಿಲ್ ೨೦ರ ಸಂಪಾದಕೀಯದಲ್ಲಿ, ಸಂಪಾದಕರು ಈ ಲೇಖನವನ್ನು ಲಿಂಗಾಯತರ ಧಾರ್ಮಿಕ ಭಾವನೆಗಳಿಗೆ ವ್ಯತಿರಿಕ್ತವೆಂದು ಬರೆದರು. ಲಿಂಗಾಯತ ಸಮಾಜವನ್ನುದ್ದೇಶಿಸಿ ಅವರು ಹೀಗೆ ಎಚ್ಚರಿಸಿದರು,

ಈ ಪ್ರಕಾರವಾದ ನಿಂದಾ ಪ್ರಚಾರ ಲೇಖನವನ್ನು ಮತ ದ್ವೇಷಾಂದರು ಈ ಕಾಲದಲ್ಲಿ ಮತ್ತೊಬ್ಬರ ಮೇಲೆ ಬರೆದು ಅಗೌರವ ಪಡೆಸಿ ಮನನೋಯಿಸುವುದೂ, ಅಂಥ ಪುಂಡುತನವನ್ನು ನಡೆಯಿಸಿದವರು ಕೂಡ ನಿರಪರಾಧಿಗಳೆಂದು ಬಿಡಲ್ಪಡುವುದೂ ಸಹ ಸೋಜಿಗವಲ್ಲದೆ ಸಹಜವಲ್ಲ. ಈ ಪ್ರಕರಣವನ್ನು ಕೊನೆಮುಟ್ಟಿಸದೆ ಬಿಡುವುದು ವೀರಶೈವರೆಂಬ ಹೆಸರನ್ನು ತಾಳಿಕೊಂಡವರಿಗೆ ತರವಲ್ಲ.

ಎಲ್ಲಾ ಲಿಂಗಾಯತರು ಒಗಟ್ಟಿನಿಂದ ಲೇಖನದ ವಿರುದ್ಧ ಹೋರಾಡಬೇಕೆಂದು ಈ ಸಂಪಾದಕರು ಕರೆ ಕೊಟ್ಟರು. ಲೇಖಕನು ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದರಿಂದ, ವಿವಾದವು ಮತ್ತಷ್ಟು ಕಿಚ್ಚನ್ನು ಪಡೆಯಿತು. ಲೇಖಕನ ‘ಅತಿರೇಕ ಬುದ್ಧಿ’ಯನ್ನು ಈ ಲೇಖನವು ತೋರಿಸುತ್ತದೆ ಎಂದು ಜರಿಯಲಾಯಿತು.

ಲೇಖನ-ವಿರೋಧಿ ಸಮರದಲ್ಲಿ ಲಿಂಗಾಯತ ಮಠಾಧೀಶರ ಸಹಕಾರವನ್ನು ಕೋರಲಾಯಿತು. ಉದಾಹರಣೆಗೆ, ಲಿಂಗಾಯತರಲ್ಲಿ ಪ್ರಮುಖರಾದ ಅರಟಾಳ ರುದ್ರಗೌಡ ಎಂಬುವವರು ಗದುಗಿನ ತೊಂಟದಾರ್ಯ ಮಠಾಧೀಶರಿಗೆ ಪತ್ರ ಬರೆದು ಅವರ ಸಹಕಾರವನ್ನು ಕೋರಿದರು. ಪತ್ರದಲ್ಲಿ ವೀರಶೈವ ಚಿಂತಾಮಣಿ ಎಂಬ ಸಂಸ್ಕೃತ ಕೃತಿಯನ್ನು ಉದ್ಧರಿಸಿ, ಅದರಲ್ಲಿ ಲಿಂಗಾಯತ – ವಿರೋಧಿಗಳನ್ನು ಮಟ್ಟ ಹಾಕುವ ನಿಯಮದ ಬಗ್ಗೆ ಮಠಾಧೀಶರ ಗಮನಹರಿಸಿ, ಲೇಖನದ ವಿರುದ್ಧ ನಡೆಯುತ್ತಿರುವ ಕೇಸಿನ ಖರ್ಚಿಗಾಗಿ ಮೂರು ಸಾವಿರ ರೂಪಾಯಿಗಳನ್ನು ಕೊಡುವಂತೆ ತೋಂಟದಾರ್ಯರಲ್ಲಿ ಮನವಿ ಮಾಡಿಕೊಳ್ಳಲಾಯಿತು.

ಕೇಸಿನ ವಾದ-ಪ್ರತಿವಾದಗಳನ್ನು ಪರಿಶೀಲಿಸಿದ ಮೇಲೆ, ಮೈಸೂರ್ ಸ್ಟಾರನಲ್ಲಿ ವರದಿಯಾಗಿರುವಂತೆ (೨೦ನೇ ಜನವರಿ, ೧೯೧೯) ಲೇಖಕನು ಮತ್ತು ಶುಭೋದಯ ಪತ್ರಿಕೆಯ ಸಂಪಾದಕರು ಲಿಂಗಾಯತರಿಗೆ ಕ್ಷಮಾಪಣೆ ನೀಡಬೇಕೆಂದು ಧಾರವಾಡದ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶಿಸಿತು. ಜೊತೆಗೆ ಅವಶ್ಯಕತೆಯೆನಿಸಿದರೆ ಬಾಂಬೆ ಸರ್ಕಾರ (ಮ್ಯಾಜಿಸ್ಟ್ರೇಟ್ ಕಾರ್ಯ ವ್ಯಾಪ್ತಿಯು ಬಾಂಬೆ ಪ್ರೆಸಿಡೆನ್ಸಿಯೊಳಗೆ ಇದ್ದುದರಿಂದ)ವು ಹೈಕೋರ್ಟ್‌ನಲ್ಲಿ ಲಿಂಗಾಯತರ ಪರವಾಗಿ ವ್ಯಾಜ್ಯವನ್ನು ಹೂಡಬಹುದೆಂದು ಸಲಹೆಯಿತ್ತಿತು. ವಿವಾದಕ್ಕೆ ಸಂಬಂಧಿಸಿದಂತೆ ೧೯೧೯ರ ಅಖಿಲ ಭಾರತ ವೀರಶೈವ ಮಹಾಸಭೆಯ ವಾರ್ಷಿಕ ಸಮಾವೇಶವು ಒಕ್ಕೂರಲಿನಿಂದ ಕೆಲವು ನಿರ್ಣಯಗಳನ್ನು ಅಂಗೀಕರಿಸಿತು. ಅವುಗಳಲ್ಲಿ ಪ್ರಮುಖವಾದುದು: ಅ) ಬಾಂಬೆ ಹೈಕೋರ್ಟಿಗೆ ಶುಭೋಧಯದ ವಿರುದ್ಧ ವ್ಯಾಜ್ಯವನ್ನು ಮುಂದುವರೆಸುವುದು ಮತ್ತು ಆ) ಈ ವ್ಯಾಜ್ಯವನ್ನು ನಡೆಸಲು ಬಾಂಬೆ ಸರ್ಕಾರದ ಮೇಲೆ ಒತ್ತಾಯ ತರಲು ಲಿಂಗಾಯತ ವಿದ್ವಾಂಸರ ಡೆಪ್ಯುಟೇಶನನ್ನು ಕಳುಹಿಸುವುದು. ಈ ಡೆಪ್ಯುಟೇಶನ್‌ನಲ್ಲಿ “ಮ. ಗಳಾದ ವೈ. ವಿರುಪಾಕ್ಷಯ್ಯನವರು, ಸಿದ್ಧರಾಮಪ್ಪ ಪಾವಟೆ ಬಿ.ಎ., ಎಲ್.ಎಲ್.ಬಿ ಯವರು, ತಮ್ಮಣ್ಣಪ್ಪ ಸತ್ಯಪ್ಪ ಚಿಕ್ಕೋಡಿಯವರು, ಜಿ. ಪರಮಶಿವಯ್ಯ ಬಿ.ಎ., ಎಲ್.ಎಲ್. ಬಿ.ಯವರು, ಫಕೀರಪ್ಪ ಹಳಕಟ್ಟಿ, ಬಿ.ಎ., ಎಲ್.ಎಲ್.ಬಿ.ಯವರು” (೨೦ನೇ ಜನವರಿ, ೧೯೧೯) ಇರಬೇಕೆಂದು ನಿರ್ಣಯಿಸಲಾಯಿತು. ಸಮಾವೇಶವು ಪಾವಟೆಯವರ ಕೆಚ್ಚನ್ನು ಪ್ರಶಂಶಿಸಿತು. ಲಿಂಗಾಯತರ ಸ್ವಾಭಿಮಾನಕ್ಕೆ ಧಕ್ಕೆ ಆಗಿರುವುದರಿಂದ ಇತರರೂ ಸಹ ಪಾವಟೆಯರ ಸಮರದಲ್ಲಿ ಭಾಗವಹಿಸಬೇಕೆಂದು, ಧರ್ಮಕ್ಕಾಗಿ ಮತ್ತು ಲಿಂಗಾಯತ ಸಮಾಜಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧರಾಗಬೇಕೆಂದು ಕರೆಕೊಟ್ಟಿತು.[8]

ಈ ವಿವಾದಕ್ಕೆ ಸಂಬಂಧಿಸಿದಂತೆ ಅನೇಕ ವಾದ-ವಿವಾದಗಳಾದವು ಎಂದು ಈಗಾಗಲೇ ಹೇಳಿದೆ. ಈ ವಾದ-ವಿವಾದಗಳು ಶುಭೋದಯ ಲೇಖನಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಇದು ಲಿಂಗಾಯತರಲ್ಲಿ ಬ್ರಾಹ್ಮಣ-ವಿರೋಧಿ ಅಲೆಯನ್ನು ಎಬ್ಬಿಸಿತು. ಪರಿಣಾಮವಾಗಿ ವಿವಾದವು ಲೇಖನದ ಪರ ಮತ್ತು ವಿರುದ್ಧ ಎಂಬ ಎರಡು ಗುಂಪುಗಳನ್ನು ಹುಟ್ಟು ಹಾಕಿತು. ಬ್ರಾಹ್ಮಣ ವಿದ್ವಾಂಸರ ಸಂಪಾದಕತ್ವದಲ್ಲಿದ್ದ ಸಂಪದಭ್ಯುದಯ ಪತ್ರಿಕೆಯ (ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ್ದು) ವಿವಾದಕ್ಕೆ ಕಾರಣ ಪಾವಟೆಯಂತವರ ಮತೀಯವಾದಿ ಸಂಕುಚಿತತನ ಎಂದು ದೂರಿತು. ಇದಕ್ಕೆ ಪ್ರತಿವಾದಿಯಾಗಿ ಮೈಸೂರ್ ಸ್ಟಾರ್ ಪತ್ರಿಕೆಯಲ್ಲಿ (೨೫ನೇ ಜನವರಿ, ೧೯೨೦) ಒಬ್ಬ ಅನಾಮಧೇಯನು ಬಸವನ ಹಿರಿಮೆಯನ್ನು ನಿರೂಪಿಸಿ ಸಂಪದಭ್ಯುದಯವನ್ನು ತರಾಟೆಗೆ ತೆಗೆದುಕೊಂಡನು.

ಈ ವಿವಾದದ ಮತ್ತೊಂದು ಗಮನೀಯ ವಿಷಯವು ಲಿಂಗಾಯತರ ಆಂತರಿಕ ವೈಷಮ್ಯಕ್ಕೆ ಸಂಬಂಧಿಸಿದ್ದು. ಪಾವಟೆಯವರು ಈ ವಿವಾದದ ಸಂದರ್ಭದಲ್ಲಿ ಮತ್ತೊಬ್ಬ ಲಿಂಗಾಯತ ವಿದ್ವಾಂಸ ಮತ್ತು ಗುರುಸ್ಥಲ ಸಂಪ್ರದಾಯದ ಮುಂದಾಳು ಕಾಶೀನಾಥ ಶಾಸ್ತ್ರೀಯವರ ವಿರುದ್ಧ ಮಾಡಿದ ಆಪಾದನೆಗಳು ಲಿಂಗಾಯತರಲ್ಲಿನ ಒಳ ಜಗಳವನ್ನು ತೋರಿಸುತ್ತವೆ. ಅನೇಕ ಲಿಂಗಾಯತ ವಿದ್ವಾಂಸರು ಗುರುಸ್ಥಲ ಪರಂಪರೆಯವರ ಧಾರ್ಮಿಕ ಅಚಾರ-ವಿಚಾರಗಳು ಲಿಂಗಾಯತರ ವಿರುದ್ಧವಾಗಿವೆ ಎಂದು, ಇದರಿಂದಾಗಿ ಲಿಂಗಾಯತರಲ್ಲಿ ಒಗ್ಗಟ್ಟಿನ ಕೊರತೆಯುಂಟಾಗಿ, ಮೂರನೆಯವರು (ಬ್ರಾಹ್ಮಣರು) ಇದರ ಲಾಭ ಪಡೆಯುವಂತಾಗಿದೆ ಎಂದು ಖಂಡಿಸಿದರು. ಲಿಂಗಾಯತ ವಿದ್ವಾಂಸರಾದ ಯಗಟಿಯವರು ಮೈಸೂರ್ ಸ್ಟಾರ್‌ಗೆ ಬರೆದ ಪತ್ರದಲ್ಲಿ (೨೫ನೇ ಏಪ್ರಿಲ್, ೧೯೨೦) ಇಂತಹ ಶೋಚನೀಯ ಸ್ಥಿತಿಗೆ ಕೆಲವರ (ಬಹುಶಃ ಗುರು-ಸ್ಥಲ ಪರಂಪರೆಯ ಕಾಶೀನಾಥ ಶಾಸ್ತ್ರಿಯವರನ್ನು ಕುರಿತದ್ದಾಗಿರಬೇಕು) ವೈಯಕ್ತಿಕ ಹಿತಾಸಕ್ತಿಗಳೇ ಕಾರಣ ಎಂದು ಆರೋಪಿಸಿದರು. ಪಾವಟೆಯವರು ಮೂರು ವರ್ಷಗಳ ನಂತರ ತಮ್ಮ ಬಸವ ಬಾನು (೧೯೨೨) ಎಂಬ ಕೃತಿಯಲ್ಲಿ ಗುರುಸ್ಥಲ ಪರಂಪರೆಯ ಕಾಶೀನಾಥ ಶಾಸ್ತ್ರಿಯವರು ವಿವಾದಕ್ಕೆ ಮೂಲಕಾರಣ ಎಂದು ಆಪಾದಿಸಿದ್ದಾರೆ (ಪಾವಟೆ, ೧೯೨೨: ೬೯). ಬ್ರಾಹ್ಮಣರ ಜೊತೆಗೆ ಸೇರಿ ಕಾಶಿನಾಥ ಶಾಸ್ತ್ರಿಯು ವಿವಾದಕ್ಕೆ ಷಡ್ಯಂತ್ರ ರಚಿಸಿದರು ಎಂದು ಆರೋಪಿಸಿದ್ದಾರೆ. ವಿವಾದವಾದ ಆರು ದಶಕಗಳ ನಂತರ ಜವಳಿ ಎಂಬುವವರು ಸಿದ್ಧರಾಮಪ್ಪ ಪಾವಟೆಯ ಜೀವನ ಚರಿತ್ರೆಯಲ್ಲಿ ಪಂಚಾಚಾರ್ಯ (ಗುರು-ಸ್ಥಲದಲ್ಲಿ ನಂಬಿಕೆಯುಳ್ಳವರು) ರನ್ನು ದೋಷಿಯನ್ನಾಗಿಸಿದ್ದಾರೆ (ಜವಳಿ, ೧೯೮೮: ೨೪). ಈ ವಿವಾದವು ಅನೇಕರ ಗಮನ ಸೆಳೆದು, ಅನೇಕ ಸ್ಥಳಗಳಲ್ಲಿ ಶುಭೋದಯ-ವಿರೋಧಿ ಸಭೆಗಳಾದವು.[9] ಮೈದರಿಗಿ ಎಂಬ ಪಟ್ಟಣದಲ್ಲಿ ೧೯೨೦ರಲ್ಲಿ ನಡೆದ ಬಸವ ಜಯಂತಿಯ ಸಮಾರಂಭದಲ್ಲಿ ನೆರೆದಿದ್ದವರು ಪಾವಟೆಯವರ ಕೆಚ್ಚನ್ನು ಹೊಗಳಿ, ಗುರುಸ್ಥಲದವರನ್ನು ಮತ್ತು ಅವರ ಅನುಯಾಯಿಗಳನ್ನು ಖಂಡಿಸಿದರು.

ಶುಭೋದಯ ವಿವಾದವನ್ನು ಏಳು ವರ್ಷಗಳ ಹಿಂದೆ ನಡೆದ ಮತ್ತೊಂದು ವಿವಾದಕ್ಕೆ ಹೋಲಿಸಿ ನೋಡಿದರೆ ಕೆಲವೊಂದು ಅಂಶಗಳು ಸ್ಪಷ್ಟವಾಗುತ್ತವೆ. ೧೯೧೨ರಲ್ಲಿ ಬಸವೇಶ್ವರ ಜೀವನ ಚರಿತ್ರೆಯ ನಾಟಕವನ್ನು ಉತ್ತರ ಕರ್ನಾಟಕದಲ್ಲಿ[10] (ವಿಶೇಷವಾಗಿ ಬೆಳಗಾಂನಲ್ಲಿ) ಪ್ರದರ್ಶಿಸುತ್ತಿದ್ದಾಗ ಜೈನ ಸಮಾಜದವರು ನಾಟಕದ ವಿರುದ್ಧ ಆಕ್ಷೇಪವೆತ್ತಿದರು. ಈ ವಿವಾದದ ಬಗ್ಗೆ ಮೈಸೂರು ಸ್ಟಾರ್ ನಲ್ಲಿ ನಿಷ್ಪಕ್ಷಪಾತಿ ಎಂಬುವವನು ವಿವರಗಳನ್ನು ನೀಡುತ್ತಾ (೧೧ನೇ ಮಾರ್ಚ್, ೧೯೧೨) ಜೈನರಿಂದ ಹಾಗೂ ಬಾಂಬೆ ಸರ್ಕಾರದಿಂದ ಲಿಂಗಾಯತರಿಗಾದ ಅನ್ಯಾಯವನ್ನು ಖಂಡಿಸಿದ್ದಾರೆ. ಜೈನ ಸಮಾಜದವರ ಧಾರ್ಮಿಕ ಭಾವನೆಗಳಿಗೆ ಈ ನಾಟಕವು ಹಾನಿಯನ್ನುಂಟು ಮಾಡಿದೆ ಎಂದು, ಇದರಿಂದಾಗಿ ಸಮಾಜದಲ್ಲಿ ಅಶಾಂತಿ ಉಂಟಾಗಬಹುದೆಂದು ಬಾಂಬೆ ಸರ್ಕಾರವು ನಾಟಕ ಪ್ರದರ್ಶನವನ್ನು ರದ್ದು ಮಾಡಿತು.[11] ಇದು ಲಿಂಗಾಯತರಿಗೆ ಬಹಳ ಬೇಸರವನ್ನುಂಟು ಮಾಡಿತು. ಈ ವಿವಾದ ಸಂದರ್ಭದಲ್ಲಿ ಲಿಂಗಾಯತರಲ್ಲಿ ಆಂತರಿಕವಾಗಿ ಯಾವುದೇ ಜಗಳವಾಗಲಿ ಅಥವಾ ಭಿನ್ನಾಭಿಪ್ರಾಯಗಳಾಗಲಿ ಕಂಡು ಬರುವುದಿಲ್ಲ. ಅವರೀಗ ಆರೋಪಿ ಸ್ಥಾನದಲ್ಲಿದ್ದರು. ಇವೆರಡೂ ವಿವಾದಗಳು ಚರಿತ್ರೆಯಲ್ಲಿ ಆಗಿ ಹೋದ ಮಹನೀಯರುಗಳ ಬಗ್ಗೆ ಇದ್ದರೂ, ಈಗ ಅವು ಎರಡು ಸಮುದಾಯಗಳ ನಡುವೆ ತಿಕ್ಕಾಟಗಳಿಗೆ ಕಾರಣವಾದವು. ೧೨ನೇ ಶತಮಾನ, ಬಿಜ್ಜಳ ಮತ್ತು ಶಿವಶರಣರ ಬಗ್ಗೆ ಪ್ರಸ್ತುತವಿದ್ದ ಕಥನಗಳು / ಗ್ರಹಿಕೆಗಳು ಈ ವಿವಾದಗಳಿಗೆ ಕಾರಣವಾಗಿದ್ದವು. ಹಾಗಾದರೆ ಯಾವುದೀ ಕಥನಗಳು? ಅವು ವಿವಾದಗಳನ್ನುಂಟು ಮಾಡಲು ಕಾರಣಗಳೇನು? ಲಿಂಗಾಯತರ ಆಂತರಿಕ ಜಗಳಗಳಿಗೆ ಕಾರಣವೇನು? ಅದಕ್ಕೂ ಲಿಂಗಾಯತ ಕಥನಗಳಿಗೂ ಇರುವ ಸಂಬಂಧವೇನು? ಬ್ರಾಹ್ಮಣರಿಗೆ ಲಿಂಗಾಯತ ಕಥನಗಳಲ್ಲಿ ಇದ್ದ ಆಸಕ್ತಿಗೆ ಕಾರಣವೇನು?

ಶುಭೋದಯ ವಿವಾದದ ಸಂದರ್ಭದಲ್ಲಿ ಲಿಂಗಾಯತರಿಗೆ ಬಹಳ ಮುಖ್ಯವೆನಿಸಿದ್ದು ತಮ್ಮ ಸಮಾಜದ ಅಭೀಪ್ಸೆಗಳನ್ನು ನಿರ್ವಚಿಸುವ, ತಮ್ಮ ಅಸ್ಥಿತ್ವಕ್ಕೆ ಐತಿಹಾಸಿಕ ಆಧಾರವಿದೆಯೆಂದು ಪ್ರತಿಪಾದಿಸುವ, ಒಗ್ಗಟ್ಟನ್ನು ಕಲ್ಪಿಸಿಕೊಳ್ಳುವ ಮತ್ತು ಬ್ರಾಹ್ಮಣರ ಸಾಂಸ್ಕೃತಿಕ ‘ಪ್ರಾತಿನಿಧ್ಯ / ಮಧ್ಯಪ್ರವೇಶ’ ದ ಬಲವನ್ನು ಹತ್ತಿಕ್ಕುವ ಸವಾಲುಗಳು ಮತ್ತು ಉತ್ಕಟತೆಗಳು. ೧೯ನೇ ಶತಮಾನದ ಕೊನೆಯ ದಶಕಗಳಲ್ಲಿ ಆಧುನಿಕತೆಗೆ ತನ್ನನ್ನು ತಾನು ಒಗ್ಗಿಸಿಕೊಳ್ಳಲು ಶುರು ಮಾಡಿದ ಲಿಂಗಾಯತರು ಈಗಾಗಲೇ ಬ್ರಾಹ್ಮಣರಿಂದ ನಿರೂಪಿಸಿ, ನಿರ್ಧರಿಸಲ್ಪಟ್ಟ ಆಧುನಿಕ ಪರಿಭಾಷೆಯನ್ನು ಎದುರುಗೊಳ್ಳಬೇಕಾಗುವ ಸಂದರ್ಭಕ್ಕೆ ಒಳಗಾದರು. ಇದರರ್ಥ ಬ್ರಾಹ್ಮಣರೊಬ್ಬರೇ ಲಿಂಗಾಯತರ ಎದುರಾಳಿಗಳಾಗಿದ್ದರು ಎಂದಲ್ಲ. ಮೇಲೆ ತಿಳಿಸಿದಂತೆ ಶುಭೋದಯ ವಿವಾದವು ಬ್ರಾಹ್ಮಣ – ಲಿಂಗಾಯತರ ಸಂಘರ್ಷವಲ್ಲದೆ ಲಿಂಗಾಯತರ ಆಂತರಿಕ ಒಳ – ಜಗಳಗಳಿಗೆ ಕನ್ನಡಿಯಾಗಿತ್ತು. ಲಿಂಗಾಯತ ಗಣ್ಯ ವಿದ್ವಾಂಸರನ್ನು (ಬಹುತೇಕ ಮಧ್ಯಮ ವರ್ಗಕ್ಕೆ ಸೇರಿದವರು) ಈ ಆಂತರಿಕ ಒಳ – ಜಗಳಗಳು ಬಹಳ ಚಿಂತೆಗೀಡು ಮಾಡಿದ್ದವು ಮತ್ತು ಅವು ಬಗೆಹರಿಸುವ ಸಮಸ್ಯೆಯಾಗಿ ಕಾಡುತ್ತಿದ್ದವು. ಆಂತರಿಕ ಒಳ – ಜಗಳಗಳು ಮತ್ತು ಹೊರಗಿನ ಹೊಸ, ಹೊಸ ಸವಾಲುಗಳು ಲಿಂಗಾಯತರ ಸರ್ವಾಂಗೀಣ ಅಭಿವೃದ್ಧಿಗೆ ಮಾರಕವಾಗಿವೆ ಎಂಬ ಅರಿವು ಲಿಂಗಾಯತ ಗಣ್ಯರಿಗೆ ತಲೆ ಬಿಸಿಯಾಗಿದ್ದವು. ಆದ್ದರಿಂದ ಅವರು ಲಿಂಗಾಯತ ಸಮುದಾಯದ ಕಲ್ಪನೆಯ ಜೊತೆಗೆ ಲಿಂಗಾಯತರ ಒಗ್ಗಟ್ಟನ್ನು ಬಲವಾಗಿ ಪ್ರತಿಪಾದಿಸುತ್ತಿದ್ದರು. ಬಸವೇಶ್ವರ ನಾಟಕ ಹಾಗೂ ಶುಭೋದಯ ವಿವಾದಗಳ ನಡುವಿನ ಅವಧಿಯ, ಈ ಮೇಲಿನ ಆತಂಕಕಾರಿ ಸಂದರ್ಭದಲ್ಲಿ, ಲಿಂಗಾಯತರ ಅಸ್ತಿತ್ವದಲ್ಲಿ ಪರೀಕ್ಷೆಗೆ ಒಳಪಡಿಸಿದ ಮಹತ್ವದ ಘಟ್ಟವೆನ್ನಬಹುದು.

ಲಿಂಗಾಯತರಲ್ಲಿ ಸಾಮುದಾಯಿಕ ಅರಿವನ್ನು ಮೂಡಿಸುವುದಕ್ಕಾಗಿ, ಆಂತರಿಕ ಸಮಸ್ಯೆಯನ್ನು ಬಗೆಹರಿಸುವದಕ್ಕಾಗಿ ಮತ್ತು ಬ್ರಾಹ್ಮಣರ ಸವಾಲುಗಳನ್ನು ಎದುರಿಸುವುದಕ್ಕಾಗಿ ಲಿಂಗಾಯತ ಗಣ್ಯರು ತಮ್ಮಲ್ಲಿ ಲಭ್ಯವಿದ್ದ ಕಥನಗಳನ್ನು ಬಳಸಿಕೊಂಡರು. ಈ ಕಥನಗಳು ಅವರಿಂದಲೇ ರೂಪಿಸಲ್ಪಡಲಿಲ್ಲ. ಈಗಾಗಲೇ ತಮಗೆ ಲಭ್ಯವಿದ್ದ ಆಧುನಿಕ ಮತ್ತು ಪಾರಂಪಾರಿಕ ಗ್ರಹಿಕೆಗಳನ್ನು ಮರು – ಬಳಸಿಕೊಂಡರು. ಈ ಗ್ರಹಿಕೆಗಳು ಮತ್ತು ಜ್ಞಾನಧಾರೆಗಳು ೮೦-೯೦ ವರ್ಷಗಳ (ಸುಮಾರಾಗಿ ೧೮೦೦ ರಿಂದ ೧೯೧೭ರ ಅವಧಿ) ಇತಿಹಾಸವನ್ನು ಹೊಂದಿದ್ದವು. ಇವುಗಳ ಜೊತೆಗೆ ನಡೆದ ಲಿಂಗಾಯತರ ಅನುಸಂಧಾನವು ಅವರ ಆಧುನಿಕತೆಯ ಪ್ರವಾಸವನ್ನು ಸೂಚಿಸುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕಥನಗಳಿಗೂ ಮತ್ತು ಸಾಮಾಜಿಕ ವಾಸ್ತನಗಳಿಗೂ ನೇರ ಸಂಬಂಧಗಳು ಇಲ್ಲದಿದ್ದರೂ, ಅವು ಒಂದರನ್ನೊಂದು ಪ್ರಭಾವಿಸುವ ಪ್ರಕ್ರಿಯೆಯನ್ನು ಪ್ರದರ್ಶಿಸುತ್ತವೆ. ಹೀಗಾಗಿ ಲಿಂಗಾಯತ ಕಥನಗಳ ಬೆಳವಣಿಗೆಯ ಇತಿಹಾಸವು ಅದರ ಸಾಮಾಜಿಕ ಹಾಗೂ ರಾಜಕೀಯ ಸ್ಥಾನ – ಮಾನಗಳ ಸ್ಥಿತ್ಯಂತರಗಳ ಇತಿಹಾಸವೂ ಹೌದು. ಶುಭೋದಯ ವಿವಾದದ ಸಂದರ್ಭದಲ್ಲಿ ಲಿಂಗಾಯತರ ಬ್ರಾಹ್ಮಣ ವಿರೋಧಿ ಸಂಘರ್ಷವು ಪರಂಪರಾನುಗತವಾಗಿ ಬಂದದ್ದು ಮತ್ತು ಲಿಂಗಾಯತರ ಆಂತರಿಕ ಸಮಸ್ಯೆಗಳು ಇತ್ತೀಚಿನದು ಎಂಬ ವಾದವು ಈ ಚರಿತ್ರೆಯನ್ನು ವಿವರಿಸಲು ಮಿತಿಗಳನ್ನು ಹೊಂದಿವೆ. ಜೊತೆಗೆ ಅವರು ತಮ್ಮೊಳಗಿನ ಅಸಮಾನತೆಗಳನ್ನು ಮುಚ್ಚಿಟ್ಟು, ಏಕೀಕೃತ ಸಮಾಜವನ್ನು ಹೊರಗಿನವರಿಗೆ ತೋರಿಸುವ ಪ್ರಯತ್ನ ಮಾಡಿದರು ಎಂಬುದನ್ನು ಬರಿಯ ‘ಬ್ರಾಹ್ಮಣ – ವಿರೋಧಿ / ಆಂತರಿಕ ವೈಷಮ್ಯ’ ಚೌಕಟ್ಟಿನಲ್ಲಿ ವಿವರಿಸಲು ಸಮಸ್ಯಾತ್ಮಕವಾಗುತ್ತದೆ. ಸಾಂದರ್ಭಿಕ ಒತ್ತಡಗಳಿಗೊಳಗಾಗಿ ಲಿಂಗಾಯತರು ತಮ್ಮ ಇತಿಹಾಸ, ತತ್ವ, ಸಾಹಿತ್ಯ, ಇತ್ಯಾದಿಗಳನ್ನು ಬಳಸಿಕೊಂಡ ಬಗೆಯು ಅವರು ಸಾಮುದಾಯಿಕ ಐಡೆಂಟಿಟಿಗಾಗಿ ನಡೆಸಿದ ಆಧುನಿಕ ಹುಡುಕಾಟದ ಪ್ರಯತ್ನಗಳಾಗಿವೆ. ಹೀಗಾಗಿ ಲಿಂಗಾಯತರು ಅ) ತಮ್ಮ ಸಮುದಾಯದ ಐಡೆಂಟಿಟಿಯನ್ನು ಕಥನಗಳ ಸುತ್ತ ಕಲ್ಪಿಸಿಕೊಳ್ಳುವ, ಆ) ತಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಿಕೊಳ್ಳುವ ಅಥವಾ ಇ) ಅವುಗಳನ್ನು ತಾತ್ಕಾಲಿಕವಾಗಿ ಮರೆಯಾಗಿಸಿ ತಮ್ಮ ಯಜಮಾನಿಕೆಯನ್ನು ಪ್ರದರ್ಶಿಸುವ ಪ್ರಯತ್ನಗಳನ್ನು ಅರ್ಥಮಾಡಿ ಕೊಳ್ಳುವದು ನಮ್ಮ ಚರ್ಚೆಗೆ ಹೊಸ ಒಳನೋಟಗಳನ್ನು ನೀಡುತ್ತದೆ.

[1] ಲೇಖನವು ನನ್ನ ಪಿ.ಎಚ್.ಡಿ ಮಹಾ ಪ್ರಬಂಧದ ಅಧ್ಯಾಯಗಳಲ್ಲಿ ಒಂದಾಗಿರುವ “Colonialism and Formation of the Virashaiva Community” ಯ ಕನ್ನಡ ಅನುವಾದವಾಗಿದೆ.

[2] ಮಹಾಚೈತ್ರ ವಿವಾದದ ಬಗ್ಗೆ ಡೆಕ್ಕನ್ ಹೆರಾಲ್ಡ್ ನಲ್ಲಿ ಲೇಖನ ಬರೆದಿರುವ ಶ್ರೀಧರರವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ ಮಹಾಚೈತ್ರ ವಿವಾದವನ್ನು ಲಿಂಗಾಯತ ನಾಯಕರು ಜಿಲ್ಲಾ ಪಂಚಾಯತ್ ಚುನಾವಣೆಯ ಲಾಭಕ್ಕಾಗಿ ಬಳಸಿಕೊಂಡರು (೧ನೇ ಜುಲೈ, ೧೯೯೫) ಮತ್ತು ಅದಕ್ಕಾಗಿಯೇ ವಿವಾದವನ್ನು ಸೃಷ್ಟಿ ಮಾಡಿದರು.

[3] ಲಿಂಗಾಯತ-ವೀರಶೈವ ಪರಿಕಲ್ಪನೆಗಳ ಬಗ್ಗೆ ವಿದ್ವಾಂಸರಲ್ಲಿ ಅನೇಕ ಭಿನ್ನಾಭಿಪ್ರಾಯಗಳಿವೆ. ಭಾಷಿಕ ಅನುಕೂಲತೆಗಾಗಿ ಲಿಂಗಾಯತ ಪರಿಕಲ್ಪನೆಯನ್ನು ಈ ಲೇಖನದಲ್ಲಿ ಬಳಸಲಾಗಿದೆ. ಆದರೆ ಮೂಲ ಲೇಖನದಲ್ಲಿ ವೀರಶೈವ ಅಂತ ಇದ್ದರೆ. ಈ ಲೇಖನದಲ್ಲಿ ಅದನ್ನೆ ಬಳಸಲಾಗಿದೆ.

[4]ಸಾಹಿತ್ಯವನ್ನು ತನ್ನದೆಂದು ಸಾಧಿಸಿ, ಇತರರ ಮಧ್ಯಸ್ಥಿಕೆಯನ್ನು ಅಸಮಧಾನದಿಂದ ನೋಡುವ ಪ್ರಮೇಯವನ್ನು ಇಲ್ಲಿ ರಾಜಕೀಯಕರಣಗೊಳಿಸುವ ಪ್ರಕ್ರಿಯೆಯೆಂದು ಭಾವಿಸಲಾಗಿದೆ. ಇದು ಅಸಮ್ಮತಿ, ಭಾವೋದ್ವೇಗ, ಸಂಕುಚಿತ ಮತ್ತು ಆತಂಕಭರಿತ ಸನ್ನಿವೇಶವನ್ನು ಸೂಚಿಸುತ್ತದೆ. ಒಂದು ಐಡಿಯಾಲಜಿಗೆ ಬದ್ಧರಾಗಿರುವವರು ಈ ಸನ್ನಿವೇಶದಲ್ಲಿ ಭಾಗಿದಾರರಾಗಿರುತ್ತಾರೆ. ರಾಜಕೀಯದಂತೆ ಅವರು ಸಹ ಜನರನ್ನು ತಮ್ಮ ಐಡಿಯಾಲಜಿಗಳಿಗೆ ಸೆಳೆಯುವ ತಂತ್ರಗಳನ್ನು ಹೂಡುತ್ತಾರೆ ಹಾಗೂ ತಮ್ಮ ವಿಚಾರಗಳನ್ನು ವಿರೋಧಿಗಳ ಮೇಲೆ ಹೇರುವ ಸ್ವಭಾವವನ್ನು ಹೊಂದಿರುತ್ತಾರೆ.

[5] ಸಮುದಾಯದ ಪರಿಕಲ್ಪನೆಯನ್ನು ನಾನು ಲಿಂಗಾಯತರ ‘ಏಕೀಕೃತ’ ಭಾವನೆಯನ್ನು ಸೂಚಿಸಲು ಬಳಸಿದ್ದೇನೆ. ಇದರರ್ಥ ಲಿಂಗಾಯತರಲ್ಲಿ ಏಕರೂಪತೆ ಅಥವಾ ಸಮಗ್ರತೆ ಇದೆ ಎಂದಲ್ಲ. ಸಮುದಾಯ ಅಥವಾ ಸಮಾಜ ಎಂಬುದು ಲಿಂಗಾಯತರು ತಮ್ಮನ್ನ ತಾವು ‘ಏಕೀಕೃತ’ ವೆಂಬ ಸೂಚಿಸಲು ಬಳಸುವ ಕಲ್ಪಿತ (imagined) ಅಸ್ಮಿತೆ. ಈ ಅಸ್ಮಿತೆಯನ್ನು ವಿವಾದಗಳ ಸಂದರ್ಭದಲ್ಲಿ ಒಂದು ಐಡಿಯಾಲಜಿಯಾಗಿ ಲಿಂಗಾಯತರು ಬಳಸುತ್ತಾರೆ. ಹೀಗೆ ಬಳಸುವಾಗ, ಲಿಂಗಾಯತರು ತಮ್ಮ ಸಾಮುದಾಯಿಕ ಅಸ್ಮಿತೆಗಳು ಬಹು ಹಿಂದಿನಿಂದಲೂ ಅಸ್ತಿತ್ವದಲ್ಲಿವೆಯೆಂದು ತೋರಿಸಲು ಚರಿತ್ರೆ, ಸಾಹಿತ್ಯ, ಧರ್ಮ, ತತ್ವ, ಇತ್ಯಾದಿಗಳನ್ನು ಮುಂದಿಡುತ್ತಾರೆ. ಲಿಂಗಾಯತರ ಈ ಸಾಮುದಾಯಿಕ ಪ್ರಕ್ರಿಯೆಯನ್ನು ಅಭ್ಯಸಿಸಲು ಈ ಲೇಖನದಲ್ಲಿ  ಒತ್ತು ನೀಡಲಾಗಿದೆ. ಇಲ್ಲಿ ಮುಖ್ಯವಾಗಿ ನಾಲ್ಕು ಅಂಶಗಳನ್ನು ಗಮನದಲ್ಲಿಡಬೇಕಾಗುತ್ತದೆ. ಒಂದು, ಸಮುದಾಯವೆಂಬುದು ‘ಸಂಬಂಧಿಕ’ ವಾದದು. ಅಂದರೆ ತಾವು ಯಾರು, ತಮ್ಮವರು ಯಾರು, ಇತರರಿಗೂ ಮತ್ತು ತಮಗೂ ಇರುವ ಸಂಬಂಧವೇನು, ಇತರರಿಗಿಂತ ತಾವು ಹೇಗೆ ಭಿನ್ನ ಎಂಬ ಗ್ರಹಿಕೆಗಳು, ವ್ಯತ್ಯಾಸ/ಸಾಮ್ಯತೆಗಳ ಆಧಾರದ ಮೇಲೆ ಸಮುದಾಯವನ್ನು ರೂಪಿಸುವ ಪರಿಯಿದು. ಎರಡನೇಯದಾಗಿ ಸಮುದಾಯವೆಂಬುದು ‘ಸಂಘಟನಾ’ ರೂಪ. ಅಂದರೆ ವಿವಿಧ ಭಾಗಗಳಲ್ಲಿ ಚೆದುರಿ ಹೋಗಿರುವ ತಮ್ಮವರನ್ನು ಒಂದು ಏಕೀಕೃತ ಸಮುದಾಯದಡಿಯಲ್ಲಿ ಒಂದು ಗೂಡಿಸಲು ಸಂಘಟಿಸುವ ಚಟುವಟಿಕೆಗಳು. ಈ ಸಂಘಟನಾ ಕಾರ್ಯವು ಸಮುದಾಯದಲ್ಲಿ ಏಕತೆಯನ್ನು ಸಾಧಿಸುತ್ತದೆ ಎಂದು ಖಚಿತವಾಗಿ ಹೇಳಲು ಬರುವದಿಲ್ಲ. ಅನೇಕ ಜಾತಿ-ಉಪಜಾತಿಗಳಲ್ಲಿ ಚೆದುರಿ ಹೋಗಿರುವ ಇವರು ಸಂದರ್ಭದ ಒತ್ತಡಗಳಿಂದಾಗಿ ಮತ್ತು ಇತರರಿಂದ ತಮ್ಮ ಐಡೆಂಟಿಟಿಯನ್ನು ಸಂರಕ್ಷಿಸಿಕೊಳ್ಳಲು ತಾತ್ಕಾಲಿಕ ಏಕತೆಯನ್ನು ಪ್ರದರ್ಶಿಸುತ್ತಾರೆ. ಈ ಸಂಘಟನೆಯು ಆಧುನಿಕ ಸಾರ್ವಜನಿಕ ಪರಿಭಾಷೆಗಳಿಗೆನುಗುಣವಾಗಿರುತ್ತದೆ ಮತ್ತು ಅದನ್ನು ತಮ್ಮ ಅನುಕೂಲತೆಗನುಗುಣವಾಗಿ ಮರು-ರೂಪಿಸುವ ಅಧಿಕಾರವನ್ನೂ ಹೊಂದಿರುತ್ತಾರೆ. ಮೂರನೆಯದಾಗಿ ಸಮುದಾಯವು ‘ಧಾರ್ಮಿಕ-ಚಾರಿತ್ರಿಕ ಸ್ಮೃತಿ”ಗಳ ಸಾರ ರೂಪ. ಅಂದರೆ, ಸಮುದಾಯವನ್ನು ರೂಪಿಸುವದಕ್ಕಾಗಿ ಧಾರ್ಮಿಕ-ಚಾರಿತ್ರಿಕ ಕಥನಗಳನ್ನು ಮರುಕಳಿಸಿ, ಮರು ವ್ಯಾಖ್ಯಾನಿಸುವ ಪ್ರಯತ್ನಗಳು. ಇದು ಬೇಕಾದ್ದನ್ನು ಉಳಿಸಿಕೊಳ್ಳುವ, ಬೇಡವಾದದ್ದನ್ನು ಅಳಿಸಿ ಹಾಕುವ ಗರ್ವ ಮತ್ತು ಹಿರಿಮೆಯನ್ನು ಸೂಚಿಸುತ್ತದೆ. ನಾಲ್ಕನೇಯದಾಗಿ ಸಮುದಾಯವೆಂಬುದು ‘ಅನ್ಯ’ರ ಪರಿಕಲ್ಪನೆ. ಅಂದರೆ ತಮ್ಮನ್ನು ಇತರರು ಹೇಗೆ ಗ್ರಹಿಸಿದ್ದಾರೆ ಎಂಬುದು. ಇದು ಇತರರು ತಮ್ಮನ್ನು ಸರಿಯಾಗಿ ಗ್ರಹಿಸಿದ್ದಾರೋ ಅಥವಾ ಇಲ್ಲವೋ ಎಂಬ ಆತಂಕಮಯ ಸ್ಥಿತಿ. ಅನ್ಯರ ಗ್ರಹಿಕೆಗಳು ಸರಿ ಬೀಳದಿದ್ದರೆ ಅವನ್ನು ಸರಿಪಡಿಸುವ ಅಥವಾ ವಿರೋಧಿಸುವ ಪ್ರಯತ್ನಗಳನ್ನು ಇಲ್ಲಿ ಕಾಣಬಹುದು.

[6] ಮೈಸೂರ್ ಸ್ಟಾರ್ ದ್ವಿ ಭಾಷಾ ಪತ್ರಿಕೆ. ಇಂಗ್ಲೀಷ್ ಮತ್ತು ಕನ್ನಡ ಎರಡರಲ್ಲೂ ಹೊರಡುತ್ತಿದ್ದ ಈ ಪತ್ರಿಕೆಯ ಅಂದಿನ ದಿನಗಳಲ್ಲಿ ಲಿಂಗಾಯತರ ಮುಖವಾಣಿಯಾಗಿತ್ತು.

[7] ಶುಭೋದಯ ಪತ್ರಿಕೆಯಲ್ಲಿ ಪ್ರಕಟವಾದ ಈ ಲೇಖನದ ಮೂಲ ಪಾಠ ನನ್ನಲಿಲ್ಲ. ಆದ್ದರಿಂದ ಮೈಸೂರ್ ಸ್ಟಾರ್ ನಲ್ಲಿ ಪ್ರಕಟವಾದ ಕೆಲವು ತುಣುಕುಗಳನ್ನು ಮಾತ್ರ ಇಲ್ಲಿ ಕೊಡಲಾಗಿದೆ.

[8] ಆಲೂರ್ ವೆಂಕಟರಾವ್‌ರವರು ಹರ್ಡೇಕರ್ ಮಂಜಪ್ಪನವರ ಜೀವನ ಚರಿತ್ರೆಯಲ್ಲಿ ಶುಭೋದಯ ವಿವಾದದ ಬಗ್ಗೆ ಕೆಲವು ಮಾಹಿತಿಗಳನ್ನು ಕೊಟ್ಟಿದ್ದಾರೆ. ವರ್ಣಾಶ್ರಮದ ಬಗ್ಗೆ ಅವರ ಹೇಳಿಕೆಗಳು ಕೋರ್ಟಿನ ಕೇಸು ಲಿಂಗಾಯತರ ವಿರುದ್ಧವಾಗುವಂತೆ ಮಾಡಿದವು ಎಂದು ಆಲೂರರು ಬರೆದಿದ್ದಾರೆ (ಆಲೂರು, ೧೯೮೯: ೧೪೧). ಆಲೂರರ ಈ ಮಾಹಿತಿ ಶುಭೋದಯ ಪತ್ರಿಕೆಯ ಸಂಪಾದಕರು ಮತ್ತು ಲೇಖಕನು ಕ್ಷಮಾಪಣೆ ಕೇಳಿದರು ಎಂಬ ಲಿಂಗಾಯತರ ಹೇಳಿಕೆಗೆ ವ್ಯತಿರಿಕ್ತವಾಗಿದೆ.

[9] ಆದರೆ ಮೈಸೂರು, ಬಳ್ಳಾರಿ ಮತ್ತು ಪಶ್ಚಿಮ ಕರ್ನಾಟಕದ ಭಾಗಗಳಲ್ಲಿ ಶುಭೋದಯ ವಿವಾದಗಳನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಮೈಸೂರ್ ಸ್ಟಾರ್‌ನ ಸಂಪಾದಕೀಯವು ಖೇದ ವ್ಯಕ್ತ ಪಡಿಸಿತು (೨೦ನೇ ಮಾರ್ಚ್, ೧೯೨೦).

[10] ಎಸ್.ಆರ್. ಗುಂಜಾಳರ ಪ್ರಕಾರ (೧೯೯೯: ೨೭) ಈ ನಾಟಕವು ಬಸವನ ಬಗ್ಗೆ ರಚಿಸಲ್ಪಟ್ಟಿರುವ ಮೊದಲನೆಯ ಸಂಗೀತ ನಾಟಕ.

[11] ಬಹುಶಃ ನಾಟಕವು ಬಿಜ್ಜಳನ ವಿರುದ್ಧದುದರಿಂದ ಜೈನ ಮತೀಯರು ಪ್ರತಿಭಟಿಸಿರಬೇಕು. ಆದರೆ ನನ್ನಲ್ಲಿ ವಿವಾದದ ಮೂಲಪಠ್ಯವಿಲ್ಲ