ಭಾಗ

ವಸಾಹತುಶಾಹಿ ಪ್ರಾಬಲ್ಯ?: ವುರ್ಥ್ ಮತ್ತು ಲಿಂಗಾಯತರು

ನಾನು ನಿಮ್ಮ ಶಾಸ್ತ್ರಗಳನ್ನು ತಿಳಿದುಕೊಂಡಾಗಲೆ ನಿಮ್ಮ ಯೋಚನಾ ಲಹರಿಯನ್ನು ಅರ್ಥ ಮಾಡಿಕೊಳ್ಳಲು ಮತ್ತು ನಿಮ್ಮ ಜೊತೆಗೆ ಅರ್ಥಪೂರ್ಣವಾಗಿ ಮಾತನಾಡಲು ಸಾಧ್ಯ (ಹೆರ್ಮನ್ ಮೋಗ್ಮಿಂಗ್: ೧೮೩೮-೩೯: ೧.೧೨).

ಮೋಗ್ಲಿಂಗನ ಈ ಅಭಿಪ್ರಾಯವು ಒಬ್ಬ ಲಿಂಗಾಯತ ಸ್ವಾಮಿಯ ಜೊತೆಗೆ ಜೂನ್ ೨೭, ೧೮೩೯ರಂದು ನಡೆದ ಸಂಭಾಷಣೆಯ ಒಂದು ಝುಲಕು. ಈ ಅಭಿಪ್ರಾಯ ಇತರ ಕ್ರಿಶ್ಚಿಯನ್ ಪಾದ್ರಿಗಳ ಅಭಿಪ್ರಾಯವೂ ಸಹ ಆಗಿತ್ತು. ಈ ಅಭಿಪ್ರಾಯ ಹೊರ ನೋಟಕ್ಕೆ ಮೋಗ್ಮಿಂಗನ ಆಶಯವನ್ನು ವ್ಯಕ್ತ ಪಡಿಸಿದರೂ, ಅದು ಇನ್ನು ಹೆಚ್ಚಿನ ವಿಷಯಗಳನ್ನು ಒಳಗೊಂಡಿದೆ: ಅ) ಸ್ಥಳೀಯರ ಸಾಹಿತ್ಯ/ಸಂಸ್ಕೃತಿಯನ್ನು ಅರಿಯುವ ಆಸಕ್ತಿ; ಆ) ಸ್ಥಳೀಯರನ್ನು ತಿಳಿದುಕೊಳ್ಳುವ ‘ಮುಗ್ಧ’ ಕುತೂಹಲ ಮತ್ತು ಇ) ಲಿಂಗಾಯತರ ಜೊತೆಗೆ ಅವರದೇ ನುಡಿಗಟ್ಟುಗಳಲ್ಲಿ ವ್ಯವಹರಿಸುವ ವ್ಯಾವಹಾರಿಕ ಬಯಕೆ, ವುರ್ಥನ ಭಾಷಾಂತರಗಳು, ಮೋಗ್ಲಿಂಗನ ಆಶಯದಂತೆ ಲಿಂಗಾಯತ ಕೃತಿಗಳನ್ನು ಅರ್ಥ ಮಾಡಿಕೊಂಡು ಅವುಗಳನ್ನು ತೌಲನಿಕವಾಗಿ ಅಭ್ಯಸಿಸುವುದು, ಹೋಲಿಸುವುದು. ಭಾರತದಲ್ಲಿ ಕ್ರಿಶ್ಚಿಯನ್ ಪಾದ್ರಿಗಳ ಉಪಸ್ಥಿತಿಯನ್ನು ಸಮರ್ಥಿಸಿಕೊಳ್ಳುವುದು ಮತ್ತು ಕೃತಿಗಳಲ್ಲಿರುವ ಲೋಪ-ದೋಷಗಳನ್ನು ಬಯಲಿಗೆಳೆಯುವುದನ್ನು ನಿರೂಪಿಸುತ್ತವೆ. ಇದು ಕರ್ನಾಟಕದ ಸಂದರ್ಭದಲ್ಲಿ ಪೌರುತ್ಯವಾದದ ಬಗ್ಗೆ ಅನೇಕ ಪ್ರಶ್ನೋತ್ತರಗಳನ್ನು ಪ್ರಚೋದಿಸುತ್ತದೆ. ಧರ್ಮ ಪ್ರಚಾರ ಕಾರ್ಯಗಳು ಎಷ್ಟರ ಮಟ್ಟಿಗೆ ಅವರ ಬರವಣಿಗೆಗಳನ್ನು (ವಿಶೇಷವಾಗಿ ಭಾಷಾಂತರ ಮತ್ತು ದಿನಚರಿಗಳು) ಪ್ರಭಾವಿಸಿದವು? ವುರ್ಥ್‌ನಂತವರು ನೂರಾರು ಲಿಂಗಾಯತ ಪುರಾಣಗಳನ್ನು ನಿರ್ಲಕ್ಷಿಸಿ ಬಸವ ಪುರಾಣ ಮತ್ತು ಚೆನ್ನ ಬಸವ ಪುರಾಣಗಳನ್ನು ಮಾತ್ರ ಯಾಕೆ ಅಭ್ಯಸಿಸಿದರು? ಅವುಗಳಲ್ಲಿ ಯಾವ ಲೋಪ-ದೋಷಗಳನ್ನು ಹುಡುಕಿದರು? ಅದಕ್ಕೆ ಉಂಟಾದ ಪ್ರಚೋದಾತ್ಮಕ ಅಂಶಗಳಾವುವು? ಈ ಲೋಪ-ದೋಷಗಳು ಪುರಾಣಗಳಲ್ಲಿ ಅಡಗಿದ್ದವೋ ಅಥವಾ ಅವು ಪಾಶ್ಚಾತ್ಯ ಪಾದ್ರಿಗಳ ಕಲ್ಪನೆಯೂ? ಈ ಪ್ರಶ್ನೆಗಳಿಗೆ ಯಾವುದೇ ಉತ್ತರನ್ನು ಕಂಡುಕೊಳ್ಳಬೇಕಾದಲ್ಲಿ ಕೆಲವೊಂದು ಅಂಶಗಳನ್ನು ನಾವು ಗಮನದಲ್ಲಿಟ್ಟು ಕೊಳ್ಳಬೇಕಾಗುತ್ತದೆ. ಪಾದ್ರಿಗಳು ಮತ್ತು ಲಿಂಗಾಯತರ ನಡುವೆ ಆ ಧಾರ್ಮಿಕ ಸಂಘರ್ಷಗಳು ಪುರಾಣಗಳ ಭಾಷಾಂತರ ಪ್ರಕ್ರಿಯೆಯನ್ನು ಪರೋಕ್ಷವಾಗಿ ನಿಯಂತ್ರಿಸಿವೆ. ಆಧುನಿಕ ನುಡಿಗಟ್ಟಿನಲ್ಲಿ ಲಿಂಗಾಯತರ “ಐತಿಹಾಸಿಕ ರೂಪುರೇಶೆಗಳನ್ನು, ಸಾಮಾಜಿಕ ಅಸ್ಮತೆಯನ್ನು, ಪಾರಂಪರಿಕೆ ಆಚರಣೆಗಳನ್ನು ಮತ್ತು ಪುರಾಣಗಳಿಗೆ ಅರ್ಥವನ್ನು ಕಟ್ಟುವ ಅಥವಾ ಮುರಿಯುವ ಕಾರ್ಯದಲ್ಲಿ” (ದುಬೆ, ೨೦೦೪: ೧೬೨) ಪಾದ್ರಿಗಳ ಪಾತ್ರ ಹಿರಿದು. ನನ್ನ ಪ್ರಕಾರ ಲಿಂಗಾಯತರ ಪುರಾಣಗಳನ್ನು ಭಾಷಾಂತರಿಸಿದ ವುರ್ಥ್‌ನ ಬರವಣಿಗೆಗಳು ಅನೇಕ ಒತ್ತಡಗಳಡಿಯಲ್ಲಿ ರೂಪಿತವಾಗಿರುವಂತವು. ಮಿಶಿನರಿಗಳ “ನಾಗರೀಕತೆಯ ಒಳಿತಿನ” (ಅಲಗೋಡಿ, ೧೯೯೮: ೨೧-೪೭) ಧರ್ಮಕಾರ್ಯಕ್ಕೆ ಒದಗಿ ಬಂದ ಸಂಕಟಗಳು, ಸವಾಲುಗಳು, ಆಗಾಗ ಹಿಂದೇಟನ್ನು ಅನುಭವಿಸಿದ ಸಂಗತಿಗಳು, ಭಿನ್ನಾಭಿಪ್ರಾಯಗಳು, ತೀವ್ರ ಪ್ರತಿಕ್ರಿಯೆಗಳು ಮತ್ತು ಎದುರಾಳಿಯ ವಿರುದ್ಧ ಬಲ ಪ್ರದರ್ಶನ, ಇತ್ಯಾದಿಗಳು ವರ್ಥ್ ನಂತರದ ಬರವಣಿಗೆಗಳನ್ನು ರೂಪಿಸಿದವು, ಹಾಗಾಗಿ ವುರ್ಥನ ಭಾಷಾಂತರಗಳನ್ನು ನಾವು ಪಾಶ್ಚಾತ್ಯರ ಬಲ/ಪ್ರಾಬಲ್ಯ ಪ್ರದರ್ಶನವೆನ್ನುವುದರ ಜೊತೆಗೆ ಸ್ಥಳೀಯ ಲಿಂಗಾಯತರು ತಮ್ಮ ಮೇಲೆ ಧಾರ್ಮಿಕ ಪ್ರಾಬಲ್ಯವನ್ನು ಸಾಧಿಸಬಹುದೆಂಬ ಶಂಕೆಯಿಂದ ಉಂಟಾದ ಬರವಣಿಗೆಗಳು ಎಂದು ತಿಳಿದುಕೊಳ್ಳಬಹುದು.

ಪಾದ್ರಿಗಳ ಲೋಕದಲ್ಲಿ

ಕರ್ನಾಟಕದಲ್ಲಿ ಬೈಬಲ್ ಕ್ರಿಶ್ಚಿಯನ್ ಧರ್ಮವನ್ನು ಪ್ರಚಾರ ಮಾಡಲಿಕ್ಕೆ ಹೆಬಿಚ್ ಮತ್ತು ಹರ್ಮನ್ ಮೋಗ್ಲಿಂಗ್ ರ ಪಾರುಪತ್ಯದಲ್ಲಿ ಬಾಸೆಲ್ ಮಿಶಿನರಿಯ ಪಾದ್ರಿಗಳು ಪ್ರಥಮ ಬಾರಿಗೆ ತಮ್ಮ ಚಟುವಟಿಕೆಗಳನ್ನು ಶುರು ಮಾಡಿದ್ದು ಮಂಗಳೂರು ಉತ್ತರ ಕರ್ನಾಟಕದ ಧಾರವಾಡದಲ್ಲಿ. ಜೊಸೆಫ್ ಮುಲ್ಲೆನ್ ತಿಳಿಸುವ ಪ್ರಕಾರ ಮೊಟ್ಟ ಮೊದಲು ಮಿಶಿನ್ ಧಾರವಾಡದಲ್ಲಿ ಶುರುವಾದದ್ದು ೧೮೩೭ರಲ್ಲಿ. ಎರಡನೇ ಮಿಶಿನ್ “ಹೂಬ್ಲಿ” (ಈಗಿನ ಹುಬ್ಬಳ್ಳಿ) ಯಲ್ಲಿ ಸ್ಥಾಪಿಸಿಲಾಯಿತು. ಎರಡು ವರ್ಷಗಳ ನಂತರ ಮತ್ತೆರಡು ಮಿಶಿನರಿಗಳನ್ನು ಬೆಟಗೇರಿ ಮತ್ತು ಮಲಸಮುದ್ರದಲ್ಲಿ ತೆರೆಯಲಾಯಿತು. ಕೊನೆಯ ಮತ್ತು ಐದನೆಯ ಮಿಶಿನರಿಯನ್ನು ೧೮೫೧ರಲ್ಲಿ ಗುಳೆದಗುಡ್ಡ ಎಂಬ ಪ್ರದೇಶದಲ್ಲಿ ಸ್ಥಾಪಿಸಲಾಯಿತು (೧೮೫೪: ೪೧). ಮೊದಲ ತಲೆಮಾರಿನ ಈ ಪಾದ್ರಿಗಳಿಗೆ ಧಾರವಾಡದ ವಾತಾವರಣ ಮತ್ತು ಅಲ್ಲಿನ ಜನರು ಬಹಳ ಹಿಡಿಸಿದರು. ಬೈಬಲ್ ಮತ್ತು ಕ್ರಿಶ್ಚಿಯನ್ ಧರ್ಮದ ಪ್ರಚಾರಕ್ಕೆ ಇಲ್ಲಿನ ಜನ “ಮುಕ್ತರು ಮತ್ತು ಸ್ವಾಗತಾರ್ಹರು” (೧೮೨೮ – ೩೯: ೧.೧)[1] ಎಂದು ಅವರು ತಿಳಿದರು. “ನಾಗರೀಕತೆಯ ಕ್ಷೇಮಾಭಿವೃದ್ಧಿ”ಯ ಪ್ರತಿನಿಧಿಗಳಾದ (ಅಲಗೋಡಿ, ೧೯೯೮: ೨೧-೪೭)  ಪಾದ್ರಿಗಳು ಈ ಭಾಗಗಳಲ್ಲಿ ಕ್ರಮೇಣ ಕನ್ನಡ ಶಿಕ್ಷಣಕ್ಕೆ ಮಹತ್ತರ ಕಾಣಿಕೆ ನೀಡಿದರು. ಅವರು ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ಆಧುನಿಕ ಮಾದರಿಯ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಸ್ಥಾಪಿಸುವಲ್ಲಿ ಕಾರಣರಾದರು. ಹುಬ್ಬಳ್ಳಿ-ಧಾರವಾಡ ಭಾಗಗಳಲ್ಲಿ ಪಾದ್ರಿಗಳಿಗೆ ಬಹಳ ಮುಖ್ಯವಾಗಿ ಕಾಣಿಸಿಕೊಂಡದ್ದು ಲಿಂಗಾಯತರು. ಅನೇಕ ಪಾದ್ರಿಗಳು ಭಾವಿಸಿದ ಹಾಗೆ ಅವರ ಜೊತೆ ಮಾತುಕತೆ, ಚರ್ಚೆ ಅಥವಾ ಯಾವುದೇ ತರಹದ ಸಂಧಾನ ಮಾಡಲು ಮೋಗ್ಲಿಂಗ್ ಇದರ ಬಗ್ಗೆ ಸ್ಪಷ್ಟವಾದ ನುಡಿಗಳಲ್ಲಿ ಹೀಗೆ ಹೇಳುತ್ತಾನೆ, “ಸುಮಾರು ೧೨,೦೦೦ರಷ್ಟು ಜನಸಂಖ್ಯೆ ಇರುವ ಲಿಂಗಾಯತರು ಈ ಭಾಗಗಳಲ್ಲಿ ಸಾಕಷ್ಟು ಪ್ರಭಾವವನ್ನು ಹೊಂದಿರುವವರು. ಸ್ವಾಭಾವಿಕವಾಗಿ ನಮ್ಮ ಗಮನ ಇವರ ಕಡೆ ಹರಿಸುವುದು ಸೂಕ್ತ” (೧೮೩೮: ೧.೧೦)[2]. ಪಾದ್ರಿಗಳ ಸಮೀಕ್ಷೆಯ ಪ್ರಕಾರ ಇವರಲ್ಲಿ ಬಡಿಗ, ಅಕ್ಕಸಾಲಿಗ ಮತ್ತು ವ್ಯವಸಾಯವನ್ನು ಕಸುಬನ್ನಾಗಿಟ್ಟುಕೊಂಡಿದ್ದ ರೈತರು ಸಂಖ್ಯೆಯಲ್ಲಿದ್ದರು.

ವುರ್ಥನ ಮೊದಲ ಮಿಶಿನರಿ ದಿನಗಳು ಗದಗಿನ ಸುತ್ತ ಮುತ್ತ ಸಾಗಿದವು. ಅವನು ೧೮೪೦ರ ದಶಕದಲ್ಲಿ ಮೊದಲ ಬಾರಿಗೆ ಗದಗ, ಲಕ್ಕುಂಡಿ ಮತ್ತು ಬೆಟಗೇರಿಗಳಲ್ಲಿ ಧರ್ಮ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡನು. ಇದಕ್ಕೆ ಮೊದಲು ಅವನ ಹಿಂದಿನ ತಲೆಮಾರಿನ ಪಾದ್ರಿಗಳು ಮತ್ತು ಅವನ ಹಿರಿಯ ಸಮಕಾಲೀನರು ಆಧುನಿಕ ಭಾಷೆ ಮತ್ತು ಸಾಹಿತ್ಯದ ಬೀಜಗಳನ್ನು ಕರ್ನಾಟಕದ ನೆಲದಲ್ಲಿ ಅದಾಗಲೇ ನೆಟ್ಟಿದ್ದರು. ಇವರಲ್ಲಿ ಪ್ರಮುಖವಾಗಿ ಎದ್ದು ಕಾಣುವುದು ವಿಲಿಯಮ್ ಕೇರಿ, ಜಾನ್ ಹ್ಯಾಂಡ್ಸ್, ಸ್ಯಾಮುಯೆಲ್ ಹೆಬಿಚ್, ಹರ್ಮನ್ ಮೋಗ್ಲಿಂಗ್ ಮತ್ತು ಹೊಲ್ಡ್ ರೈಸ್ ರ ಹೆಸರುಗಳು. ತಮ್ಮ ಸಮೀಕ್ಷೆ, ಪ್ರವಾಸಿ ಕಥನ, ಭಾಷಾಂತರ, ನಿಘಂಟು, ದಿನಚರಿ, ಇತ್ಯಾದಿಗಳ ಮೂಲಕ ಕರ್ನಾಟಕದ ಸಂಸ್ಕೃತಿ, ಪ್ರದೇಶ, ಸಾಹಿತ್ಯ ಮತ್ತು ಜನರ ಬಗ್ಗೆ ಅವರು ಸಾಕಷ್ಟು ದಾಖಲೆ ಮತ್ತು ಅಂಕಿ-ಅಂಶಗಳನ್ನು ಸಂಗ್ರಹಿಸಿ, ಪ್ರಕಟಿಸಿದ್ದರು. ಇವುಗಳ ಜೊತೆಗೆ ಪಾದ್ರಿಗಳು ತಮ್ಮ ನಿತ್ಯದ ಸವಾಲು, ಹೊಸ ಅನುಭವ ಮತ್ತು ಧರ್ಮ ಪ್ರಚಾರದ ಹೊಸ ಪದ್ಧತಿಗಳಲ್ಲಿ ತಮ್ಮ ದಿನಚರಿ ಮತ್ತು ಬಾಸೆಲ್ ಮಿಶಿನರಿಗೆ ನೀಡುವ ವಾರ್ಷಿಕ ವರದಿಗಳಲ್ಲಿ ದಾಖಲಿಸಿದ್ದಾರೆ. ಇವೆಲ್ಲವೂ ಮುಂದಿನ ಪೀಳೀಗೆಯ ಪಾದ್ರಿಗಳಿಗೆ ದಾರಿ ದೀಪವಾಗಿದ್ದವು. ನಂತರ ಬಂದಂತ ಪಾದ್ರಿಗಳು ಕರ್ನಾಟಕದಲ್ಲಿ ತಮ್ಮ ಚಟುವಟಿಕೆಗಳನ್ನು ಮುಂದುವರೆಸಲು ಮತ್ತು ಹೊಸ, ಹೊಸ ಅನುಭವಗಳನ್ನು ಎದುರಿಸಲು ಸನ್ನದ್ಧರಾದರು. ಇದರ ಬಗ್ಗೆ ಸೌರವ್ ದುಬೆಯವರು ಹೀಗೆ ಭಾವಿಸುತ್ತಾರೆ. “ಅವರು ಸ್ವೀಕರಿಸಿದ ಜಗತ್ತಿನ ಜೊತೆಗೆ ಕುತೂಹಲಕಾರಿ ಮತ್ತು ವಿರೋಧಾತ್ಮಕವಾದ ಅನುಸಂಧಾನದಿಂದ ಮುಂದುವರೆದರು. ಮತ್ತು ಕ್ರಮೇಣ ತಾವು ಕಲಿತ್ತಿದ್ದ ಪಾಠಗಳಿಂದ (ಅನುಭವಗಳಿಂದ) ತಮ್ಮ ಚಟುವಟಿಕೆಗಳಲ್ಲಿ ಬೆಳವಣಿಗೆಯನ್ನು ಕಂಡುಕೊಂಡರು” (೨೦೦೪: ೧೬೩). ಅಂದರೆ ಪಾದ್ರಿಗಳು ಕಲಿತ ಪಾಠಗಳಿಂದ ತಮ್ಮ ಧರ್ಮ ಪ್ರಚಾರ ಕಾರ್ಯಗಳಿಗೆ ಅನುಕೂಲವಾಗುವಂತೆ ಹೊಸ, ಹೊಸ ಪ್ರಯೋಗಗಳನ್ನು, ಪದ್ಧತಿಗಳನ್ನು ಮತ್ತು ವಿಧಾನಗಳನ್ನು ಅಳವಡಿಸಿಕೊಂಡರು. ಇವು ಹಿಂದಿನ ಪೀಳಿಗೆಯ ಮುಂದುವರಿಕೆಯಾಗಿ, ಕೆಲವೊಮ್ಮೆ ವಿರೋಧಾತ್ಮಕವಾಗಿ, ಮತ್ತೊಮ್ಮೆ ಹೊಸದಾಗಿ ಅವಿಷ್ಕಾರಗೊಂಡ ವಿಧಾನಗಳಾಗಿ ರೂಪುಗೊಂಡವು. ಅಂದರೆ ಧರ್ಮ ಪ್ರಚಾರ ಕಾರ್ಯವು ಸದಾ ಕಾಲ ಒಂದೆ ತೆರನಾಗಿ ಇರಲಿಲ್ಲ. ಸ್ಥಳೀಯ ಜನರ, ಮನೋಸ್ಥಿತಿ, ಸಂದರ್ಭ ಮತ್ತು ಸನ್ನಿವೇಶಗಳಿಗೆ ತಕ್ಕನಾಗಿ ಮಾರ್ಪಾಡಾಗುತ್ತಿದ್ದವು. ಹೀಗೆ ಬದಲಾಗುತ್ತಿದ್ದ ಧರ್ಮ ಪ್ರಚಾರ ಕಾರ್ಯವಿಧಾನಗಳಿಗೂ ಮತ್ತು ಭಾಷಾಂತರಗಳೂ ಇರುವ ಸಂಬಂಧವನ್ನು ಅವಲೋಕಿಸುವುದು ಅತ್ಯವಶ್ಯಕ.

ರೆ. ಗಾಟ್ ಲಾಬ್ ಆಡಮ್ ವುರ್ಥನ[3] ಜನನ ೧೮೨೦ರ ಸೆಪ್ಟೆಂಬರ್ ೧೯ರಂದು ವುರ್ ಟೆಮ್ ಬರ್ಗನ ಫ್ಲೀಡೆಲ್ ಶೀಮ್ ನಲ್ಲಿ ಆಯಿತು. ವೈದ್ಯನಾಗಿ ವೃತ್ತಿಯನ್ನು ಆರಂಭಿಸಿದ ವುರ್ಥ್ ಗ್ರೀಕ್ ಹಾಗೂ ಲ್ಯಾಟಿನ್ ಭಾಷೆಗಳಲ್ಲಿ ಪ್ರವೀಣತೆಯನ್ನು ಪಡೆದಿದ್ದ. ಮೊದಲಿನಿಂದಲೂ ಧಾರ್ಮಿಕ ವಿಷಯಗಳಲ್ಲಿ ಅವನಿಗೆ ತೀವ್ರ ಆಸಕ್ತಿಯಿತ್ತು. ಹಾಗಾಗಿ ಮುಂದೆ ಅವನು ಅದರಲ್ಲಿ ಪಾಂಡಿತ್ಯ ಸಾಧಿಸಿದ. ೧೮೪೦ರಲ್ಲಿ ಆತನು ಬಾಸೆಲ್ ನಲ್ಲಿದ್ದ ಮಿಷನ್ ಕಾಲೇಜನ್ನು ಸೇರಿದನು. ಅಲ್ಲಿ ಆರು ವರ್ಷಗಳ ಕಾಲ ಇದ್ದು, ಧಾರ್ಮಿಕ ಹಾಗು ತಾತ್ವಿಕ ವಿಷಯಗಳಲ್ಲಿ ವಿಶೇಷ ಪರಿಣಿತಿಯನ್ನು ಪಡೆದುಕೊಂಡ. ತನ್ನ ಜೀವತದ ಕೊನೆ ಘಳಿಗೆಯವರೆಗೆ ಹಿಬ್ರೂ ಭಾಷೆಯ ಬೈಬಲ್ ಅವನಿಗೆ ಅತಿ ಪ್ರಿಯವಾದ ಕೃತಿಯಾಗಿತ್ತು. ೧೮೪೫ರಲ್ಲಿ ಆತನನ್ನು ಕೀಸ್ ಮತ್ತು ಮೊರಿಕೆ ಎಂಬಿಬ್ಬರ ಜೊತೆಗೆ ಭಾರತಕ್ಕೆ ಕಳುಹಿಸಲಾಯಿತು. ಪ್ರಥಮವಾಗಿ ಹುಬ್ಬಳ್ಳಿಯಲ್ಲಿ ನೆಲೆ ನಿಂತ ವುರ್ಥ್‌ನು ಕ್ರೈಸ್ತ ಧರ್ಮದ ಪ್ರಚಾರಕನಾಗಿ ಕಾರ್ಯ ಪ್ರವೃತ್ತನಾದ. ಸ್ವಲ್ಪ ಸಮಯದಲ್ಲೇ ಆತನು ಕನ್ನಡ ಮತ್ತು ಸಂಸ್ಕೃತ ಭಾಷೆಗಳ ಮೇಲೆ ಪ್ರಭುತ್ವ ಸಾಧಿಸಿದ. ೧೮೫೧ ರಿಂದ ೧೮೬೬ರ ನಡುವೆ ಆತನು ಬೆಟಗೇರಿಯಲ್ಲಿ ಧರ್ಮದ ಪ್ರಚಾರ ಕೆಲಸದಲ್ಲಿ ಸಂಪೂರ್ಣವಾಗಿ ನಿರತನಾದ. ಉತ್ತರ ಕರ್ನಾಟಕದ (ಆಗಿನ ಬಾಂಬೆ ಕರ್ನಾಟಕ) ಅನೇಕ ಭಾಗಗಳಲ್ಲಿ ಸಂಚರಿಸಿ ಕ್ರೈಸ್ತ ಧರ್ಮವನ್ನು ಪ್ರಚಾರ ಮಾಡಿದ. ಅವನು ಅನೇಕ ಮಂದಿ ಸ್ಥಳಿಯರನ್ನು ಕ್ರೈಸ್ತ ಧರ್ಮಕ್ಕೆ ಮಂತಾತರಗೊಳಿಸುವಲ್ಲಿ ಯಶಸ್ವಿಯಾದ. ಗದುಗಿನ ಶಾಗೋಟಿ ಚರ್ಚನ ಇತಿಹಾಸವನ್ನು ಬರೆದಿರುವ ಪಾಲ್ ಜೆ. ಕಟ್ಟೆಬೆನ್ನೂರರ ಪ್ರಕಾರ, ವುರ್ಥ್ ೧೮೪೫ ರಿಂದ ೧೮೫೭ರವರೆಗೆ ಈ ಶಾಗೋಟಿ ಚರ್ಚಿನಲ್ಲಿ ಕೆಲಸ ಮಾಡಿದ. ಇದೇ ಸಮಯದಲ್ಲಿ ಒಂದು ಶಾಲೆಯ ಆಡಳಿತ ಜವಾಬ್ದಾರಿಯನ್ನು ಹೊತ್ತಿಕೊಂಡ ವುರ್ಥ್‌, ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕವನ್ನು ಬರೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ[4] ೧೮೬೯ರಲ್ಲಿ ಜಿ. ವೀಗಲ್‌ನ  ಜೊತೆಗೂಡಿ ಹೊಸ ಮತ್ತು ಹಳೆಯ ಒಡಂಬಡಿಕೆಗಳನ್ನು ಕನ್ನಡಕ್ಕೆ ಭಾಷಾಂತರಿಸಿದ.[5] ೧೮೬೭ ರಲ್ಲಿ ಪುರಾತನ ಕನ್ನಡ ಕಾವ್ಯಗಳನ್ನು ಸಂಗ್ರಹಿಸಿ ಪ್ರಕ್ಕಾವ್ಯ ಮಾಲಿಕೆ ಎಂದು ಪ್ರಕಟಿಸಿದ. ಆಧುನಿಕ ಮಾದರಿಯ ಸಂಗ್ರಹ ಹಾಗೂ ಪ್ರಕಟಣೆಗೆ ಇದು ಮಹತ್ತರವಾದ ಕೊಡುಗೆ ನೀಡಿತು. ಈ ಸಂಕಲನದ ವಿಶೇಷವೇನೆಂದರೆ ಕ್ರಿಶ್ಚಯನ್ ಹಾಡುಗಳನ್ನು ಅದರದೇ ಗೇಯ ಮತ್ತು ಪ್ರಾಸಬದ್ಧತೆಯೊಂದಿಗೆ ಕನ್ನಡದಲ್ಲಿ ಭಾಷಾಂತರಿಸಿದ್ದು. ಇದರಲ್ಲಿ ವುರ್ಥನ ಪರಿಶ್ರಮವನ್ನು ಕಾಣಬಹುದು. ೧೮೫೦ರ ಸುಮಾರಿಗೆ ಅನೇಕ ಶಾಲೆಗಳಲ್ಲಿ ಪಠ್ಯವಾಗಿದ್ದ ಬಸವ ಪುರಾಣದ ಹಸ್ತಪ್ರತಿಗಳನ್ನು ಸಂಗ್ರಹಿಸಿ ಪ್ರಕಟಿಸಲು ಮೋಗ್ಲಿಂಗ್‌ಗೆ ಸಹಾಯ ಮಾಡಿದ. ೧೯೬೯ರಲ್ಲಿ ವುರ್ಥ್ ನಿಧನ ಹೊಂದಿದ. ಬಾಸೆಲ್ ಮಿಶಿನರಿಗಳ ವರದಿಯಲ್ಲಿ (೧೮೬೯) ಅವನಿಗೆ ಹೀಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.

ಕ್ಯಾಮರೀಸ್ ಭಾಷೆಯ ಬಗ್ಗೆ ಅವನಿಗಿದ್ದ ಅಪ್ರತಿಮ ಪಾಂಡಿತ್ಯ ಅವನನ್ನು ಒಬ್ಬ ಶ್ರೇಷ್ಠ ಸಾಹಿತ್ಯಕಾರವಾಗಿ ರೂಪಿಸಿತು. ಅವನ ಲೇಖನಿಯಿಂದ ಹೊರಬಂದ ಬರವಣಿಗೆಗಳು ಅತ್ಯಂತ ಮೌಲ್ಯವುಳ್ಳದ್ದಾಗಿವೆ (೧೮೬೯: ೮೩).[6]

ಅಕ್ರೈಸ್ತರ (Heathens) ಜೊತೆಗೆ ಸಂವಾದ/ಸಂಘರ್ಷ

ವುರ್ಥನ ಭಾಷಾಂತರಗಳನ್ನು ವಸಾಹತುಶಾಹಿಯ ಸಾಂಸ್ಕೃತಿಕ ಪ್ರಭುತ್ವದ ಮತ್ತು ಪೌರಾತ್ಯರನ್ನು ಏಕಮುಖವಾಗಿ ಪ್ರತಿನಿಧಿಸುವ ಸಾಂಸ್ಕೃತಿಕ ಸಾಧನಗಳು ಎಂದು ಹೇಳುವ ಮೊದಲು ನಾವು ಅನೇಕ ವಿಷಯಗಳನ್ನು ತಿಳಿದುಕೊಳ್ಳಬೇಕು. ಬ್ರೌನನ ಹಾಗೆ ವುರ್ಥ್ ಸಹ ತನ್ನದೇ ಆದ ಭಾಷಾಂತರ ಪ್ರಕ್ರಿಯೆಯನ್ನು ಹೊಂದಿದ್ದ. ಹೀಗಾಗಿ ತನ್ನ ಭಾಷಾಂತರಕ್ಕೆ ಬೇಕಾದ ಅಂಶಗಳನ್ನು ಆಯ್ಕೆ ಮಾಡುವ ಅಥವಾ ತ್ಯಜಿಸುವ ಅಥವಾ ತನಗೆ ಬೇಕಾದ ಭಾಗಗಳನ್ನು ವಿಶೇಷಿಕರಿಸುವ ಸಾರ್ವಭೌಮತ್ವವನ್ನು ವುರ್ಥ ಚಲಾಯಿಸಿದ. ಮೂಲ ಪುರಾಣಗಳ ಭಾವಾರ್ಥವನ್ನು ಮಾತ್ರ ಕೊಡುವ ವುರ್ಥ್ ಈ ಭಾಷಾಂತರದಲ್ಲಿ ವ್ಯಾಖ್ಯಾನಕಾರನಾಗಿಯೂ ಕಾಣಿಸುತ್ತಾನೆ. ಅವನ ವ್ಯಾಖ್ಯಾನಗಳು ಉದ್ದೇಶಪೂರಿತವಾಗಿವೆ. ಅವು ಲಿಂಗಾಯತ ಪುರಾಣಗಳಲ್ಲಿ ಕಾಣುವ ಅ) ನ್ಯೂನತೆಗಳನ್ನು ಬಯಲುಗೊಳಿಸುತ್ತವೆ; ಆ) ಲಿಂಗಾಯತರಲ್ಲಿ ಇರಬೇಕಾದ ದೃಢ ವಿಶ್ವಾಸದ ಕೊರತೆಯನ್ನು ಪ್ರದರ್ಶಿಸುತ್ತವೆ; ಇ) ಅವರಲ್ಲಿರುವ ಅವೈಚಾರಿಕತೆಯನ್ನು ಬೆರಳಿಟ್ಟು ತೋರಿಸುತ್ತವೆ; ಈ) ಪುರಾಣ ಮತ್ತು ಇತಿಹಾಸಗಳ ನಡುವೆ ಇರುವ ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವಾಗುವ ಸ್ಥಳೀಯರ ಶುಷ್ಕ ಪಾಂಡಿತ್ಯ, ಇತ್ಯಾದಿಗಳನ್ನು ಅವು ವಿಡಂಬಿಸುತ್ತವೆ. ಈ ವ್ಯಾಖ್ಯಾನಗಳ ಜೊತೆಗೆ ಸ್ಥಳೀಯರು ತಮ್ಮ ಅಫ್ರೌಢಿಮೆಯ ಮತವನ್ನು ತ್ಯಜಿಸಿ, ಕ್ರೈಸ್ತ ಮತವನ್ನು ಅನುಸರಿಸಬೇಕೆಂಬ ಸಂದೇಶವನ್ನು ಪರೋಕ್ಷವಾಗಿ ಅಥವಾ ನೇರವಾಗಿ ಹೇಳುವ ಸುಳಿಯನ್ನು ಕಾಣಬಹುದು. ಈ ವ್ಯಾಖ್ಯಾನಗಳಿಗೆ ಹಿನ್ನೆಲೆಯಾಗಿ ಅಥವಾ ಕಾರಣೀಭೂತವಾಗಿ ವುರ್ಥನ ಮತ ಪ್ರಚಾರಕ ಅನುಭವಗಳು ಮತ್ತು ಅವನು ಎದುರಿಸಿದ ಸವಾಲುಗಳನ್ನು ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇದೆ. ಇದನ್ನು ಅರ್ಥ ಮಾಡಿಕೊಳ್ಳದ ಹೊರತು ನಮ್ಮ ಅಧ್ಯಯನ ಅಪೂರ್ಣ ಎಂದು ನಾನು ತಿಳಿಯುತ್ತೇನೆ.

ಲಿಂಗಾಯತ ಪುರಾಣಗಳಲ್ಲಿ ಕಾಣುವ ಕೊರತೆಗಳನ್ನು ಬಯಲು ಮಾಡುವುದನ್ನು ನಾವು ರೆ. ವುರ್ಥ್ ಮತ್ತು ಆತನ ಸಮಕಾಲೀನ ಪಾದ್ರಿಗಳು ಎದುರಿಸಿದ ನೂರಾರು ಸವಾಲುಗಳಿಗೆ ಮತ್ತು ತಾತ್ವಿಕ ಮುಗ್ಗಟ್ಟುಗಳಿಗೆ (ಇದು ಹಿಂದೆ ಆಗಿ ಹೋದ ಇತರ ಪಾದ್ರಿಗಳಿಗೂ ಸಂಬಂಧಪಟ್ಟಿವೆ) ಎದುರೇಟಾಗಿ ರೂಪಿಸಿಕೊಂಡ ರಕ್ಷಣೆಯ ಅಸ್ತ್ರ ಎಂದು ತಿಳಿಯಬಹುದು. ಶಿವ ಮತ್ತು ಅವನ ಅವತಾರಗಳಲ್ಲಿ ನಂಬಿಕೆ ಇಟ್ಟು ಕೊಂಡಿದ್ದ ಲಿಂಗಾಯತರು ಪಾದ್ರಿಗಳಿಗೆ ಒಡ್ಡಿದ ಸವಾಲುಗಳು ಮತ್ತು ಆಗಾಗ ಆಗುತ್ತಿದ್ದ ಮತ-ಸಂಬಂಧ ಸಂಘರ್ಷಗಳು ಇವರಿಬ್ಬರಿಗೂ (ಲಿಂಗಾಯತರು ಮತ್ತು ಪಾದ್ರಿಗಳು) ತಮ್ಮನ್ನು ತಾವು ಸರಿಯಾಗಿ ಗುರುತಿಸಿಕೊಳ್ಳಲು, ಸಮರ್ಥಿಸಿಕೊಳ್ಳಲು ಹೆಣಗುತ್ತಿದ್ದ ಪರಿಸ್ಥಿತಿಗಳನ್ನು ತೋರಿಸುತ್ತವೆ. ಇದನ್ನು ಕೆಲವು ಉದಾಹರಣೆಗಳ ಮೂಲಕ ವಿಶದ ಪಡಿಸಿದರೆ ನಮ್ಮ ಚರ್ಚೆಗೆ ಅನುಕೂಲವಾಗುತ್ತದೆ.

೧೮೫೫ರಲ್ಲಿ ಬೆಟಗೇರಿಯು ತೀವ್ರ ಬರಗಾಲದಿಂದ ನರಳುತ್ತಿದ್ದ ಸಂದರ್ಭದಲ್ಲಿ ಕ್ರೈಸ್ತ ಮತ ಪ್ರಚಾರಕ್ಕೆ ಮತ್ತು ಬರ ಪೀಡಿತರಿಗೆ ಸಹಾಯ ಮಾಡಲು ವುರ್ಥ್ ಅಲ್ಲಿಗೆ ಹೋದಾಗ, ಅಲ್ಲಿನ ಜನರಿಂದ ಅನೇಕ ಪ್ರಶ್ನೆ, ಸವಾಲುಗಳು ಎದುರಿಸಬೇಕಾಯಿತು.

ಅನೇಕರು ಹೇಳಿದರು: ನಾವು ಇನ್ನೂ ಕಷ್ಟ ಪಡಬೇಕಾದರೆ, ನಾವ್ಯಾಕೆ ನಿಮ್ಮ ಮತವನ್ನು ಸೇರಬೇಕು? ಕ್ರಿಸ್ತ ಮತ್ತು ಚೆನ್ನಬಸವರಿಬ್ಬರು ಒಬ್ಬರೆ-ನೀವು ಬಲಿಷ್ಠರು-ನೀವ್ಯಾಕೆ ಮಳೆಯನ್ನು ತರಿಸಬಾರದು (ವುರ್ಥ್. ೧೮೫೫: ೧೨).[7]

ಮನಕವಾಡಿಯಲ್ಲಿ ಒಬ್ಬ ಲಿಂಗಾಯತ ಪುರೋಹಿತನು ಅನೇಕ ಬಾರಿ ತಾನೇ ಕ್ರಿಸ್ತನೆಂದು ನಮ್ಮ ಬಳಿ ಬಂದು ಹೇಳುತ್ತಿದ್ದ (ವುರ್ಥ್, ೧೮೫೬: ೨೨).[8]

ಇಲ್ಲಿ ಮೂರು ಅಂಶಗಳು ಮುಖ್ಯ: ಮೊದಲನೆಯದು ವುರ್ಥನ ಮತ ಪ್ರಚಾರಕ ಚಟುವಟಿಕೆಗೆ ಸವಾಲೆನ್ನುವಂತೆ ಕ್ರಿಸ್ತನು ಮಳೆ ತರಿಸಿ, ಬರಗಾಲ ಸಮಸ್ಯೆಯನ್ನು ಬಗೆಹರಿಸಲು ಅಸಮರ್ಥನಾಗಿರುವ ಬಗ್ಗೆ ನಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿರುವುದು. ಇದು ಪಾದ್ರಿಗಳ ಸಹಾಯ ಹಸ್ತವನ್ನು ಸ್ಥಳೀಯರು ಸುಮ್ಮನೆ ಸ್ವೀಕರಿಸಲಿಲ್ಲ ಎಂಬುದಕ್ಕೆ ಮತ್ತು ಅವರ ಬಗ್ಗೆ ಅನೇಕ ಅನುಮಾನಗಳನ್ನು ಹೊಂದಿದ್ದರೆನ್ನುವದಕ್ಕೆ ಒಂದು ಉದಾಹರಣೆ. ಬಿಜಾಪುರ ಜಿಲ್ಲೆಯ ವಸಾಹತುಶಾಹಿ ವ್ಯವಸಾಯವನ್ನು ಅಧ್ಯಯನ ಮಾಡಿರುವ ಎ.ಆರ್. ವಾಸವಿಯವರು ಗಮನಿಸುವ ಹಾಗೆ, “ವಸಾಹತುಶಾಹಿ ಕ್ರಿಶ್ಚಿಯನನ್ನು ಒದಗಿಸಲು ಇಚ್ಚಿಸಿದ ಪರಿಹಾರಗಳ ಹಿಂದಿನ ಉದ್ದೇಶದ ಬಗ್ಗೆ ಅನೇಕ ಅನುಮಾನಗಳನ್ನು” ಇವು ಸೂಚಿಸುತ್ತವೆ (ವಾಸವಿ, ೧೯೯೩:೧೩). ಎರಡನೆ ಅಂಶ ಚೆನ್ನಬಸವ ಮತ್ತು ಕ್ರಿಸ್ತನ ನಡುವೆ ಇರುವ ಸಾಮ್ಯತೆಗಳನ್ನು ಲಿಂಗಾಯತರು ದೃಢ ನಂಬಿಕೆಯಿಂದ ಗುರುತಿಸಿರುವುದು. ಈ ಸಾಮ್ಯತೆ ವುರ್ಥ್ ಮತ್ತು ಇತರ ಪಾದ್ರಿಗಳಿಗೆ ಆಶ್ಚರ್ಯವನ್ನುಂಟು ಮಾಡಿತು. ಏಕೆಂದರೆ ಕ್ರಿಸ್ತನೇ ಸರ್ವಶ್ರೇಷ್ಠನೆಂದು ಸಾರುವ ಅವರಿಗೆ ತಮ್ಮ ಪ್ರಭುವನ್ನು ಚೆನ್ನಬಸವನ ಜೊತೆಗೆ ಹೋಲಿಸುವುದು ಸರಿ ಕಾಣಲಿಲ್ಲ. ಮೂರನೇ ಅಂಶ “ತಾನೇ ಕ್ರಿಸ್ತನೆಂದು, ಕ್ರೈಸ್ತ ಮತಕ್ಕೆ ತಾನೇ ವಾರಸುದಾರನೆಂದು ನಟಿಸುವ” ಲಿಂಗಾಯತರ ಬಗ್ಗೆ ಮಿಶಿನರಿಗಳಿಗಿದ್ದ ಜಾಗರೂಕತೆ ಮತ್ತು ಆತಂಕ. ಈ ತರಹದ ಘೋಷಣೆಗಳನ್ನು ಕ್ರೈಸ್ತ ಪಾದ್ರಿಗಳು ತಮ್ಮ ಮತ ಪ್ರಚಾರ ಕಾರ್ಯದಲ್ಲಿ ಅನೇಕ ಬಾರಿ ಎದುರಿಸಬೇಕಾಗಿತ್ತು. ಈ ‘ನಟನೆ’ಗೆ ಕಾರಣ ತಾವು ಕ್ರಿಸ್ತನಂತೆ ದೈವ ಶಕ್ತಿಯನ್ನುಳ್ಳವರು ಎಂದು ಹೇಳಿಕೊಂಡು, ಕ್ರೈಸ್ತ ಮತದ ಪ್ರಚಾರ ಕಾರ್ಯಕ್ಕೆ ಅಡ್ಡಿಯನ್ನುಂಟು ಮಾಡುವುದು; ನಮ್ಮ ಹಿಂಬಾಲಕರನ್ನು ಹಿಡಿತದಲ್ಲಿಟ್ಟುಕೊಳ್ಳುವುದು, ಇತ್ಯಾದಿ. ಮತ ಪ್ರಚಾರಕ್ಕೆ ಬ್ರಿಟಿಷ್ ಸರ್ಕಾರದ ಬೆಂಬಲ[9] ಮತ್ತು ಅದರ ಪ್ರಭಾವದ ಮುಂದೆ ಸ್ಥಳೀಯರು ಎದುರು ನಿಲ್ಲುವುದಕ್ಕೆ ಆಗದೇ ಇದ್ದುದರಿಂದ ಈ ತರಹದ ಮಾರುವೇಷದ ತಂತ್ರಗಳನ್ನು ಹೂಡುತ್ತಿದ್ದರು. ವುರ್ಥನ ಸಮಕಾಲೀನ ಪಾದ್ರಿಯಾದ ಬ್ರ. ಮುಲ್ಲರ್ ಹೇಳುವ ಪ್ರಕಾರ ಅನೇಕ ಲಿಂಗಾಯತ ಪಂಡಿತರು ಮತ್ತು ವಿದ್ವಾಂಸರು ತಮ್ಮ ಮತಕ್ಕೂ ಮತ್ತು ಕ್ರೈಸ್ತ ಮತಕ್ಕೂ ಬಹಳಷ್ಟು ಸಾಮ್ಯತೆಗಳಿವೆ ಎಂದು ನಂಬಿದ್ದರು (ಮುಲ್ಲರ್, ೧೮೫೬:೨).[10] ಮುಲ್ಲರನಿಕ್ಕಿಂತ ಮೊದಲು ರೆ. ಹಿಲ್ಲರ್, ಬ್ರ. ಲಿಯೋನ್ ಬರ್ಗರ್ ಮತ್ತು ರೆ.ಜೆ. ಕೀಸ್ ತಮ್ಮ ವರದಿಯಲ್ಲಿ “…ಅವರನ್ನು ಸತ್ಯ ಮತ್ತು ಅಸತ್ಯದ ನಡುವೆ, ಕ್ರಿಸ್ತ ಮತ್ತು ಬಸವನ ನಡುವೆ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಿ ಎಂದು ಕೇಳಿಕೊಂಡಾಗ, ಕ್ರಿಸ್ತ ಮತ್ತು ಬಸವನು ಒಂದೇ ದೇವರ ಅವತಾರಗಳು ಎಂದು ಅವರು ಹುಸಿ ನಂಬಿಕೆಯನ್ನು ಹೊಂದಿದ್ದರು” ಎಂದು ತಿಳಿಸಿದ್ದಾರೆ (೧೮೫೧:೨೦)೨೪[11] ಲಿಂಗಾಯತರ ದೃಢ ವಿಶ್ವಾಸ ಮತ್ತು ತಮ್ಮ ಸಾಹಿತ್ಯ ಪರಂಪರೆಯ ಬಗ್ಗೆ ಇದ್ದ ಹೆಮ್ಮೆ ಎರಡು ವಿಷಯಗಳನ್ನು ತಿಳಿಸುತ್ತವೆ: ಅ) ಕ್ರಿಸ್ತನ ಬಗ್ಗೆ ಎಳ್ಳಷ್ಟು ನಂಬಿಕೆ ಇಲ್ಲದಿರುವುದು ಮತ್ತು ಅವನ ದೈವ ಶಕ್ತಿಯ ಬಗ್ಗೆ ಅನುಮಾನಗಳನ್ನು ವ್ಯಕ್ತ ಪಡಿಸಿರುವುದು; ಆ) ಇದ್ಯಾವುದು ಸಾಧ್ಯವಿಲ್ಲದಾಗ ಮತ್ತು ಕ್ರೈಸ್ತ ಪಾದ್ರಿಗಳ ಪ್ರಾಬಲ್ಯ ಹೆಚ್ಚಾದಾಗ ತಾವೇ ಕ್ರಿಸ್ತನ ಅವತಾರಿಗಳು ಎಂದು ನಟಿಸಿದ್ದು. ಕ್ರಿಸ್ತನ ಹಾಗೆ ನಟಿಸುವುದರ ಬಗ್ಗೆ ಪಾದ್ರಿಗಳು ಆತಂಕವನ್ನು ಹೊಂದಿದ್ದರು ಏಕೆಂದರೆ ಈ ಮಾರುವೇಷದ ಮೂಲಕ ಕ್ರಿಸ್ತ ಮತ್ತು ಸುವಾರ್ತೆಯ ಬಗ್ಗೆ ಸ್ಥಳೀಯರು ತಪ್ಪು ಮಾಹಿತಿಯನ್ನು ಪ್ರಚಾರ ಮಾಡಬಹುದೆಂದು ಅವರು ಕಳವಳಗೊಂಡಿದ್ದರು.[12]

ಮಾರುವೇಷ ಅಷ್ಟೇ ಅಲ್ಲ. ತಮ್ಮ ಸಾಹಿತ್ಯ ಪರಂಪರೆಗಳ ಮೂಲಕ ಬೌದ್ಧಿಕವಾಗಿ ಲಿಂಗಾಯತರು ಸುವಾರ್ತೆ ಮತ್ತು ಕ್ರಿಸ್ತನನ್ನು ಪ್ರಶ್ನಿಸಿದ ಉದಾಹರಣೆಗಳಿವೆ.೨೬[13] ವುರ್ಥ್ ಇದಕ್ಕೆ ಸಂಬಂಧಿಸಿದಂತೆ ಒಂದು ಸಂಗತಿಯನ್ನು ವರದಿ ಮಾಡಿದ್ದಾನೆ (೧೮೫೬: ೨೩). ಒಮ್ಮೆ ಒಬ್ಬ ಅನಾಮಧೇಯ ಲೇಖಕನು ತನ್ನ ಕೃತಿಯಲ್ಲಿ ಕ್ರೈಸ್ತ ಮತವನ್ನು ತೀಕ್ಷ್ಣವಾಗಿ ತೆಗಳಿ, ಅದರ ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದಾನೆ. ಬಹಳ ದಿನಗಳಿಂದ ನಡೆದು ಬಂದ ವ್ಯವಸ್ಥೆಯನ್ನು ಇವರು ಬದಲಾಯಿಸಲು ಹೊರಟಿರುವುದನ್ನು ನೋಡಿ ಅದು ಅವರಿಂದ ಸಾಧ್ಯವಿಲ್ಲವೆಂದು ವ್ಯಂಗ್ಯವಾಡುತ್ತಾನೆ. ಬಹುಶಃ ಲೇಖಕನು ಕ್ರೈಸ್ತ ಪಾದ್ರಿಗಳ ಜಾತಿ-ವಿರೋಧಿ ಪ್ರಚಾರಗಳನ್ನು ಟೀಕಿಸಿರಬಹುದು. ಏಕೆಂದರೆ ಬಹಳ ಕಾಲದಿಂದ ನಡೆದು ಬಂದಿರುವ ವ್ಯವಸ್ಥೆ ಎಂದರೆ ಜಾತಿಗೆ ಸಂಬಂಧಿಸಿದ್ದಿರಬಹುದಾದ ಆಚರಣೆಗಳು ಎಂದು ನನ್ನ ಅನಿಸಿಕೆ. ಇದನ್ನು ಕ್ರೈಸ್ತ ಪಾದ್ರಿಗಳು ತಮ್ಮ ಮತಾಂತರ ಚಟುವಟಿಕೆಗಳಿಂದ ಹೋಗಲಾಡಿಸಲು ಸಾಧ್ಯವಿಲ್ಲವೆಂದು ಅವನು ಬರೆದಿದ್ದಾನೆ. ಅವರ ಪ್ರಯತ್ನಗಳು ನಿರರ್ಥಕ ಮತ್ತು ಅದನ್ನು ಅವರು ಕೈಬಿಡುವುದೆ ಮೇಲು ಎಂದು ಅವನು ಸಲಹೆ ನೀಡಿದ್ದಾನೆ. ಕ್ರೈಸ್ತ ಮತಕ್ಕೆ ತನ್ನ ಮತವನ್ನು ಹೋಲಿಸಿ ಕೃತಿಯನ್ನು ಬರೆಯುವುದಕ್ಕೆ ಅವನಿಗೆ ಸಾಧ್ಯವಾದದ್ದು ಕನ್ನಡದಲ್ಲಿ ಲಭ್ಯವಿದ್ದ ಕ್ರೈಸ್ತ ಕೃತಿಗಳ (ವಿಶೇಷವಾಗಿ ಬೈಬಲ್) ಸಹಾಯದಿಂದ. ಸ್ಥಳೀಯ ಲಿಂಗಾಯತರು ಮತ್ತು ಕ್ರೈಸ್ತ ಪಾದ್ರಿಗಳು ಹೀಗೆ ಒಂದಾದ ಮೇಲ್ಲೊಂದರಂತೆ ಹೋಲಿಕೆಗಳನ್ನು ಮಾಡುತ್ತಿದುದು ಕೇವಲ ಮುಗ್ದ ಮನಸ್ಸಿನ ಪಾಂಡಿತ್ಯವನ್ನು ತೋರಿಸುವುದಿಲ್ಲ. ಅದು ಮಾರುಕಟ್ಟೆಯಲ್ಲಿ ಮತ್ತು ಮಠಗಳಲ್ಲಿ ಆಗುತ್ತಿದ್ದ ಘರ್ಷಣೆಗಳ ಪ್ರತಿರೂಪ.[14] ಈ ಎಲ್ಲಾ ಘಟನೆಗಳು ವುರ್ಥ್‌ನನ್ನು ಕೆಲವೊಮ್ಮೆ ಜರ್ಝರಿತನನ್ನಾಗಿ ಮಾಡುತ್ತಿದ್ದವು, “ಒಮ್ಮೊಮ್ಮೆ ನಾವು ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದೆ. ನನ್ನ ಸ್ಥಿತಿ ಹೇಗೆ ಇತ್ತು ಅಂದರೆ ಸಮುದ್ರದ ನಡುವೆ ಕಳೆದುಹೋದ ಶಿಷ್ಯರ ಹಾಗೆ ನಾನು ಬಹಳಷ್ಟು ಸಲ ನನ್ನನ್ನೇ ನಾನು ಕಳೆದುಕೊಳ್ಳುತ್ತಿದ್ದೆ. ಆದರೆ ಅವರ ತರಹ ನಾನು ಸಹ ಆ ಸಂಕಷ್ಟದಿಂದ ಮೇಲೆ ಬರುತ್ತಿದ್ದೆ” (೧೮೪೭: ೫.೨೨೦).[15]

ಮೇಲೆ ವಿವರಿಸಿದ ಸಂಘರ್ಷಗಳು ಕೇವಲ ಲಿಂಗಾಯತರು ಮತ್ತು ಪಾದ್ರಿಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಪಾದ್ರಿಗಳ ವರದಿಗಳು ಮತ್ತು ದಿನಚರಿಗಳು ಲಿಂಗಾಯತರು ಮತ್ತು ಇತರ ಸ್ಥಳೀಯ ಮತದಿಂದಲೂ ಇದ್ದ ವೈಮನಸ್ಯ ಸಂಘರ್ಷಗಳನ್ನು ವರದಿ ಮಾಡುತ್ತವೆ. ಈ ಸಂಘರ್ಷಗಳು ಬೌದ್ಧಿಕ ಮತ್ತು ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದ್ದವು. ತಲೆತಲಾಂತರದಿಂದ ಉಳಿದುಕೊಂಡು ೧೮ನೇ ಶತಮಾನದಲ್ಲೂ ಮುಂದುವರೆದಿದ್ದವು. ಈ ಅಧ್ಯಯನಕ್ಕೆ ಸಂಬಂಧಿಸಿದಂತೆ ನಮಗೆ ಪ್ರಸ್ತುತವಾಗಿ ಕಾಣುವುದು ಲಿಂಗಾಯತ ಮತ್ತು ಜೈನರ ನಡುವಿನ ವ್ಯತ್ಯಾಸಗಳು. ಲಿಂಗಾಯತ ಮತ್ತು ಜೈನ ಪುರಾಣಗಳು ಒಬ್ಬರಿಗೊಬ್ಬರು ತೆಗಳುವ ಮತ್ತು ಹಗೆಯನ್ನು ಸಾಧಿಸುವ ಅನೇಕ ವಿವರಗಳನ್ನು ಹೊಂದಿವೆ. ಕರ್ನಲ್ ಮೆಕೆಂಝಿಯು ಲಿಂಗಣ್ಣನೆಂವ ಜೈನ ಪಂಡಿತರಿಂದ ಬರೆಸಲ್ಪಟ್ಟ ರಾಜಾವಳಿ ಕಥಾಸಾರ (೧೮೨೪) ಎಂಬ ಅರೆ-ಚಾರಿತ್ರಿಕ ಕೃತಿಯಲ್ಲಿ ಬಸವನ “ಅವಹೇಳನಕಾರಿ”ಯಾದ ವಿಷಯಗಳಿವೆ. ವುರ್ಥ್ ಇವರಿಬ್ಬರ ಪಾಪಂರಿಕ ಹಗೆತನದ ಬಗ್ಗೆ ತಿಳಿದುಕೊಂಡಿದ್ದ. ಮತ್ತೊಂದು ಸಂಗತಿಯನ್ನು ನಾವು ಇಲ್ಲಿ ಮರುಕಳಿಸಬೇಕು. ಅದೇನೆಂದರೆ ಕ್ರೈಸ್ತ ಮತಾಂತರದ ಹುರುಪಿನಲ್ಲಿ ಅನೇಕ ಸ್ಥಳೀಯರು ಲಿಂಗಾಯತರನ್ನು ವಿರೋಧಿಸುವ ಧೈರ್ಯವನ್ನು ಪ್ರದರ್ಶಿಸಿದರು. ಅನೇಕ ಸ್ಥಳೀಯ ಮತಗಳು ತಮ್ಮ ಅನುಯಾಯಿಗಳನ್ನು ಸೆಳೆದುಕೊಳ್ಳಲು ತಮ್ಮ ತಾತ್ವಿಕ, ಧಾರ್ಮಿಕ ಮತ್ತು ಆಚಾರ-ವಿಚಾರಗಳ ಮೂಲಕ ಪೈಪೋಟಿ ನಡೆಸಿದ್ದವು. ಇದರ ವಿಷಯವಾಗಿ ರೆ. ಹಿಲ್ಲರ್, ಬ್ರ. ಲಿಯೊನ್ ಬರ್ಗ ಮತ್ತು ರೆ.ಜಿ. ಕೀಸ್ ಒಂದು ಘಟನೆಯನ್ನು ವರದಿ ಮಾಡಿದ್ದಾರೆ. ಅವರ ಪ್ರಕಾರ ಅನೇಕ ಜನರು ಮೊದಲು ಲಿಂಗಾಯತ ಪುರಾಣವನ್ನು ನಂಬಿದ್ದರು; ನಂತರ ಪಂಡರಾಪುರದಿಂದ ಬಂದಿದ್ದ ಒಬ್ಬ ಸ್ವಾಮಿಯ ಪ್ರಭಾವದಿಂದ ವೇದಾಂತಕ್ಕೆ ತಿರುಗಿದರು; ಕಟ್ಟ ಕಡೆಗೆ ಅವರು ಕ್ರೈಸ್ತ ಮತಕ್ಕೆ ಆಕರ್ಷಿತರಾದರು (೧೮೫೧: ೨೦)[16] ಈ ಸ್ಥಳೀಯರ ಸಂಘರ್ಷಗಳನ್ನು ಕ್ರೈಸ್ತ ಪಾದ್ರಿಗಳು ಅವೈಚಾರಿಕತೆ ಮತ್ತು ಅಪ್ರಭುದ್ಧರತೆಯ ಫಲವೆಂದು ತಿಳಿದಿದ್ದರು. ಈ ಮತಾಂತರ ಮತ್ತು ಧಾರ್ಮಿಕ ಸಂಘರ್ಷಗಳ ಹಿನ್ನೆಲೆಯಲ್ಲಿ ವುರ್ಥ್ ತನ್ನ ಮತ ಬೋಧನೆ ಮತ್ತು ಭಾಷಾಂತರ ಪ್ರಕ್ರಿಯೆಯನ್ನು ಕೈಗೊಂಡ.

ವುರ್ಥನ ದೃಷ್ಠಿಯಲ್ಲಿ ಅಕ್ರೈಸ್ತರು

ಕನ್ನಡದ ಲಿಂಗಾಯತ ಪುರಾಣಗಳನ್ನು ವ್ಯವಸ್ಥಿತವಾಗಿ/ಶಿಸ್ತಿನಿಂದ ಭಾಷಾಂತರಿಸಿದ ಪ್ರಥಮ ವಿದ್ವಾಂಸ ವುರ್ಥ್.[17] ಬಸವ ಪುರಾಣವು ಬಸವನ ಚರಿತ್ರೆಯನ್ನು ಸಾದರ ಪಡಿಸಿದರೆ, ಚೆನ್ನಬಸವ ಪುರಾಣವು ಹೆಸರೇ ಹೇಳುವಂತೆ ಚೆನ್ನಬಸವ ಜೀವನ ಚರಿತ್ರೆಯನ್ನು ಕಟ್ಟಿ ಕೊಡುತ್ತದೆ. ಈ ಎರಡೂ ಪುರಾಣಗಳು ಶಿವಶರಣರ ಜೀವನ ಕಥೆ. ಸುತ್ತಿ, ಲಿಂಗಾಯತ ತತ್ವಗಳು ಮತ್ತು ಶಿವ ಶರಣರ ಪವಾಡಗಳನ್ನು ವರ್ಣಿಸುತ್ತವೆ. ಶಿವಶರಣರು ಅನ್ಯ ಮತದವರನ್ನು ಧರ್ಮದ ವಿಷಯದಲ್ಲಿ ಜಯಗಳಿಸಿದ್ದು. ಅನುಭಾವದ ಲಕ್ಷಣಗಳು, ಆಧ್ಯಾತ್ಮಿಕತೆಯ ಸಾಧನೆ, ಇತ್ಯಾದಿಗಳನ್ನು ಇವು ಒಳಗೊಂಡಿವೆ. ಬಸವ ಪುರಾಣವು ಭೀಮಕವಿಯಿಂದ ೧೩ನೇ ಶತಮಾನದಲ್ಲಿ ರಚಿಸಲ್ಪಟ್ಟಿದ್ದು. ವಿದ್ವಾಂಸರ ಪ್ರಕಾರ ಇದು ಪಾಲ್ಕುರಿಕೆ ಸೋಮನಾಥನ ತೆಲುಗು ಬಸವ ಪುರಾಣದ ಅನುವಾದ. ಚೆನ್ನ ಬಸವ ಪುರಾಣವು ವಿರುಪಾಕ್ಷ ಪಂಡಿತರಿಂದ ೧೫ನೇ ಶತಮಾನದಲ್ಲಿ ರಚಿಸಲ್ಪಟ್ಟಿತು.[18] ಇವೆರಡು ಪುರಾಣಗಳನ್ನು ಲಿಂಗಾಯತರು ಪ್ರಜ್ಞಾಪೂರ್ವಕವಾಗಿ ತಮ್ಮ ಮತದ ಪ್ರಚಾರಕ್ಕೆ ಬಳಸಿಕೊಳ್ಳುವ ಮತ್ತು ಟೀಕೆಗಳನ್ನು ನರೆಯುವ ಪರಂಪರೆ ಈಗಲೂ ಇದೆ. ಅವರ ಪುರಾಣಗಳ ಪರಂಪರೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವು ಲಿಂಗಾಯತರಲ್ಲದವರಿಗೆ ನಿಷಿದ್ಧ. ರೆ. ಹಿಲ್ಲರ್ ಇದರ ಬಗ್ಗೆ ಹೀಗೆ ಬರೆಯುತ್ತಾನೆ. “ಒಮ್ಮೆ ಒಬ್ಬ ಲಿಂಗಾಯತ ಗುರುವು ತಮ್ಮ ರಹಸ್ಯ ಸಾಹಿತ್ಯ ಶಾಸ್ತ್ರಗಳು ಮತ್ತು ಪುರಾಣಗಳ ಬಗ್ಗೆ ನನ್ನ ಜೊತೆಗೆ ಚರ್ಚೆ ಮಾಡಿದ್ದಕ್ಕಾಗಿ ಲಿಂಗವಂತರು ಅವನ ಮೇಲೆ ಕೋಪಗೊಂಡಿದ್ದರು”[19] ಎಂದು ವರದಿ ಮಾಡಿದ್ದಾನೆ. ಲಿಂಗಾಯತ ಪಂಡಿತರು, ವಿದ್ವಾಂಸರು ಮತ್ತು ಮಠಾಧೀಶರು ಮಾತರ ಪುರಾಣಗಳನ್ನು ಪಠಣ ಮಾಡುವ ಅಥವಾ ಅದರ ಸಂದೇಶ ಸಾರುವ ಹಕ್ಕಿತ್ತು. ಆದಾಗ್ಯೂ ವುರ್ಥ್ ಮತ ಪ್ರಚಾರ ಕಾರ್ಯ ಕೈಗೊಳ್ಳುವ ಹೊತ್ತಿಗೆ ಲಿಂಗಾಯತ ಪುರಾಣಗಳ ರಹಸ್ಯಮಯ ಜಗತ್ತನ್ನು ಪರಕೀಯರು ಒಳಹೊಕ್ಕಿದ್ದರು.

ಲಿಂಗಾಯತ ಪುರಾಣಗಳನ್ನು ವ್ಯಾಖ್ಯಾನಿಸುವಾಗ ವುರ್ಥ್ ಬಹಳ ಜಾಗರೂಕತೆಯನ್ನು ವಹಿಸುತ್ತಾನೆ. ಲಿಂಗಾಯತರು ತಮ್ಮ ಪುರಾಣಗಳಿಗೆ ತೋರಿಸುವ ಭಕ್ತಿ ಅಥವಾ ಗೌರವ ವುರ್ಥನಲ್ಲಿ ಕಾಣುವುದಿಲ್ಲ. ಪೌರತ್ಯ ಸಂಸ್ಕೃತಿಗೆ ಪರಕೀಯನಾಗಿದ್ದರಿಂದ ಅವನಿಗೆ ಪುರಾಣದ ಪಾವಿತ್ರಯತೆಯ ಬಗ್ಗೆ ಕಾಳಜಿ ಇಲ್ಲ. ಅವನ ಭಾಷಾಂತರಗಳು ಏಕತೆರನಾಗಿಲ್ಲ. ಬಸವ ಪುರಾಣದ ಭಾಷಾಂತರದಲ್ಲಿ ಪುರಾಣದ ಬಗ್ಗೆ ಅಥವಾ ಶಿವ ಶರಣರ ಬಗ್ಗೆ ಹೆಚ್ಚಿನ ವಿವರಗಳಿಲ್ಲ. ಆದರೆ ಚೆನ್ನ ಬಸವ ಪುರಾಣದ ಭಾಷಾಂತರದಲ್ಲಿ ಅಸಂಖ್ಯಾತ ವಿವರಗಳನ್ನು ಮತ್ತು ಅಡಿ ಟಿಪ್ಪಣಿಗಳನ್ನು ನೀಡಿದ್ದಾನೆ. ಇವು ಪುರಾಣದ ಪವಾಡಗಳು, ಉಪಮೇಯಗಳು ಮತ್ತು ಸಂಸ್ಕೃತ ಕನ್ನಡ ಪದಗಳ ವಿವರಣೆಯಾಗಿವೆ. ವಾರ್ದಕ ಷಟ್ಪದಿಯಲ್ಲಿರುವ[20] ಚೆನ್ನಬಸವ ಪುರಾಣಕ್ಕೆ ಬಹು ದೀರ್ಘವಾದ ಪರಿಚಯವನ್ನು ಅವನು ನೀಡಿದ್ದಾನೆ, ಆದರೆ ಭಾಮಿನಿ ಷಟ್ಪದಿಯಲ್ಲಿರುವ ಬಸವ ಪುರಾಣಕ್ಕೆ ಯಾವುದೇ ಮುನ್ನುಡಿ ಅಥವಾ ಹಿನ್ನುಡಿಗಳನ್ನು ನೀಡಿಲ್ಲ. ಚೆನ್ನಬಸವ ಪುರಾಣಕ್ಕೆ ನೀಡಿರುವ ವಿವರಣೆಗಳು ವುರ್ಥನು ಕಾಲ ಕ್ರಮೇಣ ಲಿಂಗಾಯತ ಸಾಹಿತ್ಯ-ಪರಂಪರೆಗಳ ಮೇಲೆ ಸಾಧಿಸಿದ ಪಾಂಡಿತ್ಯ ಮತ್ತು ಆಸಕ್ತಿಯನ್ನು ನಿರೂಪಿಸುತ್ತದೆ.

ಬಸವನನ್ನು ಮೀರುತ್ತಾ…: ಬಸವ ಪುರಾಣದ ಭಾಷಾಂತರ

ವುರ್ಥನ ಎರಡೂ ಭಾಷಾಂತರಗಳಲ್ಲಿರುವ ಸಮಾನ ಅಂಶ ಯಾವುದೆಂದರೆ ಅವುಗಳ ಶುರುವಿನಲ್ಲಿ ಮತ್ತು ಕೊನೆಯಲ್ಲಿ ನೀಡಿರುವ ಟೀಕೆ-ಟಿಪ್ಪಣಿಗಳು. ಇವು ಅವನ ಭಾಷಾಂತರಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಗುತ್ತವೆ. ಪುರಾಣಗಳಲ್ಲಿರುವ “ಪರಕೀಯತೆಯನ್ನು” (ದಿಂಗ್ವೇನಿ ಮತ್ತು ಮೆಯರ್, ೧೯೯೬: ೫) ತೊಡೆದು ಹಾಕಿ ತನಗೆ ಸರಿ ಎನಿಸಿದ ಅರ್ಥಗಳನ್ನುಂಟು ಮಾಡುವ ಆತನ ಭಾಷಾಂತರ ಪ್ರಕ್ರಿಯೆಯನ್ನು ಈ ಟೀಕೆ-ಟಿಪ್ಪಣಿಗಳಿಂದ ಅರ್ಥೈಸಿಕೊಳ್ಳಬಹುದು. ಈ ಭಾಷಾಂತರಗಳು ಎರಡು ಉದ್ದೇಶಗಳನ್ನು ಈಡೇರಿಸುತ್ತವೆ: ಅ) ಪುರಾಣಗಳಲ್ಲಿನ ಕೊರತೆ, ಲೋಪ-ದೋಷಗಳನ್ನು ಎತ್ತಿ ತೋರಿಸುವುದು, ಮತ್ತು ಆ) ಕ್ರೈಸ್ತ ಮತದ ಶ್ರೇಷ್ಠತೆಯನ್ನು ಪ್ರದರ್ಶಿಸುವುದು. ಮೊದಲನೆಯದನ್ನು ಪುರಾಣಗಳಲ್ಲಿ ಕಾಣುವ ಅವೈಚಾರಿಕ, ಅಸಂಸ್ಕೃತಿಕ ಮತ್ತು ಅಪಕ್ವದ ಅಂಶಗಳನ್ನು ತೋರಿಸುವುದರ ಮೂಲಕ ಈಡೇರಿಸಿ ಕೊಂಡರೆ, ಎರಡನೆಯದನ್ನು ಕ್ರೈಸ್ತ ಮತವು ಸ್ಥಳೀಯರಿಗೆ ಅತ್ಯಂತ ಮುಖ್ಯವಾಗಿ ಮತ್ತು ತೀರ್ವವಾಗಿ ಬೇಕಾಗಿರುವ ಮತವೆಂದು, ಆಧ್ಯಾತ್ಮಕತೆಗೆ ಅದು ಅತ್ಯಂತ ಪ್ರಮುಖ ಸಾಧನವೆಂದು ಸಾಬೀತುಪಡಿಸುವ ಮೂಲಕ ಈಡೇರಿಸಿಕೊಳ್ಳಲಾಗಿದೆ.

ಬಸವ ಪುರಾಣದ ಭಾಷಾಂತರದ ಕೊನೆಯಲ್ಲಿ ಇರುವ ಟೀಕೆಯ ವುರ್ಥನ ಇತಿಹಾಸದ ಪ್ರಜ್ಞೆ. ಉದ್ದೇಶ ಮತ್ತು ಪೂರ್ವನಿರ್ಧಾರಿತ ಹೋಲಿಕೆಗಳನ್ನು ತೋರಿಸುತ್ತದೆ. ಬಸವನ ಹುಸಿ ಮಾತುಗಳು ಮತ್ತು ಅವನ ಇರುವ ವಿರೋಧಾತ್ಮಕ ಚಿತ್ರಣವನ್ನು ವುರ್ಥ್ ವಿಶೇಷವಾಗಿ ಎತ್ತಿ ತೋರಿಸುತ್ತಾನೆ. ಅವನ ದೈವ ಶಕ್ತಿಯನ್ನು ಪ್ರಶ್ನಿಸುವದಕ್ಕಾಗಿ ಮತ್ತು ಅವನ ವಿಚಾರಗಳ ಅಸತ್ಯವನ್ನು ಬಯಲು ಮಾಡುವುದಕ್ಕಾಗಿ ವುರ್ಥ್ ಹೀಗೆ ಬರೆಯುತ್ತಾನೆ,

ಬಸವನ ಜೀವನ ಚರಿತ್ರೆಯ ಮಾಹಿತಿಗಳು – ಅವನ ಬ್ರಾಹ್ಮಣ ಹಿನ್ನಲೆ, ಮಂತ್ರಿಯ ಮಗಳ ಜೊತೆಗೆ ಮದುವೆ, ಬಿಜ್ಜಳನ ಪ್ರಧಾನ ಮಂತ್ರಿಯಾಗಿ ಲಿಂಗಾಯತ ಮತವನ್ನು ವೃದ್ಧಿಸಬೇಕೆನ್ನುವ ಹಂಬಲ-ಅವನ ಇತಿಹಾಸವನ್ನು ತೆರಿದಿಡುತ್ತದೆ. ಲಿಂಗಾಯತರ ಬದ್ಧ ವೈರಿಗಳಾದ ಜೈನ ದಾಖಲೆಗಳು ಬಸವನು ಜೈನ ರಾಜನ ಕೈಕೆಳಗೆ ಬಹಳ ಪ್ರಭಾವಶಾಲಿಯಾಗಿದ್ದಂತವನು. ಅವನು ತನ್ನ ತಂಗಿಯನ್ನು ರಾಜನಿಗೆ ಮೀಸಲಾಗಿಡಿಸಿದ್ದನು. ರಾಜ ಬಸವನ ತಂಗಿಯ ಸೌಂದರ್ಯಕ್ಕೆ ಮಾರುಹೋಗಿ, ಅವಳನ್ನು ತನ್ನ ಅಂತಃಪುರದ ಸಖಿಯನ್ನಾಗಿ ಮಾಡಿಕೊಂಡು ರಾಜ್ಯಭಾರವನ್ನು ಸಂಪೂರ್ಣವಾಗಿ ಬಸವನ ಕೈಗೆ ಕೊಟ್ಟಿದ್ದನು. ಜೈನರ ಪ್ರಕಾರ ಬಸವನ ಕಲ್ಯಾಣ ನಿರ್ಗಮನವು ಅತ್ಯಂತ ಹೀನಾಯ ಪಲಾಯನವಾಗಿತ್ತು. ಅವರು ನಂಬುವ ಹಾಗೆ ಬಸವನು ದೇವರಲ್ಲಿ ಲೀನವಾಗದೆ ಹತಾಶೆಯಿಂದ ತನ್ನ ಜೀವವನ್ನು ತಾನೆ ಕೊನೆಗಾಣಿಕೊಂಡ (೧೮೬೩- ೬೬: ೯೭).[21]

ಹೀಗೆ ವುರ್ಥ್ ಶಾಸ್ತ್ರೀಯ ಭಾಷಾಂತರದ ಎಲ್ಲಾ ನಿಯಮಗಳನ್ನು (ಅಂದರೆ ಪದಶಃ ಭಾಷಾಂತರ) ಗಾಳಿಗೆ ತೂರುತ್ತಾನೆ. ಇಲ್ಲಿ ಅವನು ಬಸವನ ಜೀವನ ಚರಿತ್ರೆಗೆ ಆಧುನಿಕ ಅರ್ಥದಲ್ಲಿ ಇತಿಹಾಸದ ಸ್ಥಾನವನ್ನು ನೀಡುತ್ತಾನೆ. ಅಂದರೆ ಬಸವ ಮತ್ತು ಇತರ ಶರಣರು ಚರಿತ್ರೆಯಲ್ಲಿ ಆಗಿಹೋದ ವ್ಯಕ್ತಿಗಳು ಮತ್ತು ಅವರ ಬಗ್ಗೆ ಇರುವ ಪುರಾಣಗಳು ಈ ಚರಿತ್ರೆಯನ್ನು ನಿರೂಪಿಸುವ ಅಂಶಗಳು. ಆದರೆ ಶಿವ ಶರಣರ ಇತಿಹಾಸವನ್ನು ಅವನು ಜೈನ ದಾಖಲೆಗಳ ಸಹಾಯದಿಂದ ಪ್ರಶ್ನಿಸುತ್ತಾನೆ. ಇದನ್ನು ಇತರ ಐತಿಹಾಸಿಕ ದಾಖಲೆಗಳಿಂದ, ಅಂದರೆ ‘ವೈಜ್ಞಾನಿಕ’ ಸಾಕ್ಷ್ಯಾಧಾರಗಳಾದ ಶಾಸನಗಳು, ಹಸ್ತ ಪ್ರತಿಗಳು, ಇತ್ಯಾದಿಗಳ ಮೂಲಕ ಸತ್ಯಾಸತ್ಯತೆಗಳನ್ನು ತಿಳಿದುಕೊಳ್ಳುವ ಸಾಹಸವನ್ನು ವುರ್ಥ್ ಮಾಡುವುದಿಲ್ಲ.

ಜೈನ ಮತ್ತು ಲಿಂಗಾಯತ ಪುರಾಣಗಳನ್ನು ತೌಲನಿಕವಾಗಿ ಅಭ್ಯಸಿಸುವುದಕ್ಕೆ ಜೈನ ಪಂಡಿತರ ಜೊತೆಗಿನ ಅವನ ಒಡನಾಟವೆ ಕಾರಣ.೩೫[22] ಜೊತೆಗೆ ಈಗಾಗಲೇ ಮೆಕೆಂಝಿಯಂತವರು ಜೈನ ಪುರಾಣಗಳ ಬಗ್ಗೆ ಸಾಕಷ್ಟು ಕೆಲಸ ಮಾಡಿದ್ದರು. ಈ ತೌಲನಿಕ ದೃಷ್ಟಿಕೋನವು ಲಿಂಗಾಯತರು ಅಥವಾ ಜೈನರಿಗೆ ಹೊಸದೇನಾಗಿರಲಿಲ್ಲ. ಅವರು ಸಹ ಅನ್ಯರ ಪುರಾಣ/ಸಾಹಿತ್ಯಗಳನ್ನು ಸಂಕ್ಷಿಪ್ತಗೊಳಿಸುವ, ತೆಗಳುವ ಮತ್ತು ಹೋಲಿಸುವ ಪರಂಪರೆಯನ್ನು ಹೊಂದಿದ್ದರು. ಇವು ಜೈನ-ಲಿಂಗಾಯತ-ಬ್ರಾಹ್ಮಣರ ನಡುವೆ ತೀವ್ರ ಸ್ವರೂಪ ಪಡೆದಿತ್ತು. ಸಂಕ್ಷಿಪ್ತಗೊಳಿಸುವ ಪ್ರಕ್ರಿಯೆಯು ಅನ್ಯರ ಸಾಹಿತ್ಯ ಪರಂಪರೆ ಮತ್ತು ಧಾರ್ಮಿಕ ವಿಚಾರಗಳನ್ನು ಸಂಕುಚಿತತೆಯಿಂದ ನೋಡುವ ಮನೋಭಾವನೆಯನ್ನು ತೋರಿಸುತ್ತದೆ. ವುರ್ಥನ ಭಾಷಾಂತರವು ಸಹ ಇದೇ ರೀತಿಯ ಸಂಕ್ಷಿಪ್ತತೆ ಅಥವಾ ಸಂಕುಚಿತಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗುತ್ತದೆ. ಹೀಗಾಗಿ ಪುರಾಣ ಪರಂಪರೆಯ ಎಷ್ಟೋ ವಿಷಯಗಳು ಭಾಷಾಂತರದಲ್ಲಿ ಮರೆಯಾಗುತ್ತವೆ.

ಜೈನ ಮತ್ತು ಲಿಂಗಾಯತರ ನಡುವಿನ ಪಾರಂಪರಿಕ ವೈಷಮ್ಯವನ್ನು ಹೋಲಿಸಿ ನೋಡುವಾಗ ವುರ್ಥ್ ಅವರ ಪಠ್ಯ ಪರಂಪರೆಯನ್ನು ಮಾತ್ರ ಪರಿಗಣಿಸುತ್ತಾನೆ. ಅವರ ನಡುವಿನ ಅಪನಂಬಿಕೆಯನ್ನು ನಿರೂಪಿಸುವುದು ಮತ್ತು ಬಸವನ ಪ್ರಾಮುಖ್ಯತೆಯನ್ನು ತಗ್ಗಿಸುವುದು ಇದರ ಹಿಂದಿನ ಉದ್ದೇಶ. ಲಿಂಗಾಯತರು ತಮ್ಮ ವಿಚಾರಗಳಿಗೆ ತಕ್ಕಂತೆ ಆಚಾರಗಳನ್ನು ಪಾಲಿಸದೇ ಇರುವುದು ವುರ್ಥನ ಕಡುಟೀಕೆಗೆ ಗುರಿಯಾಗುತ್ತಾರೆ. ಅವರೊಳಗಿದ್ದ ಜಾತೀಯತೆ, ಸಾಮಾಜಿಕ ಶೋಷಣೆ, ಬಹುದೇವೋಪಾಸನೆ, ಪುರಾಣದ ವಿರೋಧಾತ್ಮಕ ಅಂಶಗಳನ್ನು ಗಮನಿಸಿದ ವುರ್ಥ ಇದಕ್ಕೆಲ್ಲಾ ಕಾರಣ ಲಿಂಗಾಯತರ ಅಪಕ್ವಗೊಂಡ ಸಂಸ್ಕೃತಿ ಮತ್ತು ಸಾಹಿತ್ಯ ಪರಂಪರೆ ಎಂದು ತೀರ್ಮಾನಿಸುತ್ತಾನೆ. ಲಿಂಗಾಯತರು ಲಿಂಗದ ಆಚರಣೆಗಳನ್ನು ಸರಿಯಾಗಿ ಪಾಲಿಸದಿರುವುದು ವುರ್ಥನ ಅಸಮಾನಧಾನಕ್ಕೆ ಕನ್ನಡಿ ಹಿಡಿದ ಹಾಗೆ. ವುರ್ಥನ ಟೀಕೆಯು ಕ್ರಿಶ್ಚಿಯನ್ ಮೂಲದ ಪುರ್ವಾಗ್ರಹ ಪೀಡಿತವಾಗಿತ್ತೆ? ಭಾಗಶಃ ಬಸವ ಪುರಾಣ ಅಂಶಗಳೂ ಸಹ ವುರ್ಥನ ವಾದವನ್ನು ಪುಷ್ಟಿಕರಿಸುತ್ತವೆ. ಜೈನ, ಬ್ರಾಹ್ಮಣ ಭವಿಗಳ ಬಗ್ಗೆ ದ್ವೇಷ, ಹಿಂದೆ ಮತ್ತು ಚೆನ್ನ ಬಸವ ಪುರಾಣದ ಕೊನೆಯಲ್ಲಿ ತುರುಕರ ಬಗ್ಗೆ ಇರುವ ಅಸಹನೆ ವುರ್ಥನ ವಿಚಾರಗಳಿಗೆ ಸ್ಪಂದಿಸುವಂತೆ ಕಾಣುತ್ತವೆ. ಅವನ ಟೀಕೆಗಳು ಲಿಂಗಾಯತನ ಮನಃಪರಿವರ್ತನೆಯ ಉದ್ದೇಶವನ್ನು ಹೊಂದಿತ್ತು. ಅವರು ದ್ವೇಷ, ಅಸಹನೆ ಮತ್ತು ಮತ್ಸರಗಳನ್ನು ಕೈ ಬಿಟ್ಟು ಕ್ರಿಸ್ತನ ಹಾದಿ ಹಿಡಿದರೆ ಒಳ್ಳೆಯದಾಗುದೆಂದು ವುರ್ಥ್ ಅನೇಕ ಸಲ ತನ್ನ ಅನುಯಾಯಿಗಳನ್ನು ತಿಳಿ ಹೇಳುತ್ತಿದ್ದ.

ಜೈನ-ಲಿಂಗಾಯತ ಪರಂಪರೆಯನ್ನು ಹೋಲಿಸುತ್ತಾ ಲಿಂಗಾಯತ ಮತದ ಲಕ್ಷಣಗಳನ್ನು ಮತ್ತು ಅದರ ಅನುಯಾಯಿಗಳನ್ನು ಅವನು ಸಂದೇಹದಿಂದ ನೋಡುತ್ತಾನೆ. ಬಸವ ಪುರಾಣ ಭಾಷಾಂತರದ ೬ನೇ ಅಧ್ಯಯನದಲ್ಲಿ ವುರ್ಥ್ ಬಸವನ ಬಗ್ಗೆ ಹೀಗೆ ಬರೆಯುತ್ತಾನೆ.

ದೈವ ಶಕ್ತಿಯ ಪ್ರತಿರೂಪವೆಂದು ಪೂಜಿಸಲ್ಪಡುವ ಬಸವನು ಕಲ್ಯಾಣದ ವೇಶ್ಯೆಯರ ಮನೆಯಲ್ಲಿ ವಾಸವಾಗಿದ್ದ ಹನ್ನೆರಡು ಸಾವಿರ ಮಿಂಡ-ಪುಂಡ ಲಿಂಗಾಯತ ಪುರೋಹಿತರನ್ನು (profligate priests) ಬೆಂಬಲಿಸುವ ಹವ್ಯಾಸವನ್ನಿಟ್ಟುಕೊಂಡಿದ್ದು ಗಮನಾರ್ಹ. ಬಸವನ ಜೀವನ ಚರಿತ್ರೆಯನ್ನು ಓದುವಾಗ ಇವರ ಬಗ್ಗೆ ಪದೇ, ಪದೇ ಉಲ್ಲೇಖಗಳಿರುವುದು ಕಾಣುತ್ತದೆ. ಲಿಂಗಾಯತ ಮತದ ಮೊದಲ ದಿನಗಳಲ್ಲಿ ಈ ತರಹದ ಮಿಂಡ-ಪುಂಡ ಹೆಂಗಸರು ಮತ್ತು ಗಂಡಸರಿದ್ದರೆಂಬ ಮಾಹಿತಿಯ ಬಗ್ಗೆ ಅನುಮಾನವೇ ಇಲ್ಲ (ವುರ್ಥ್, ೧೮೬೩-೬೬: ೭೧).[23]

ಲಿಂಗಾಯತರಿಗೆ ಬಸವ ಪುರಾಣ ಪೂಜನೀಯವಾದ್ದರಿಂದ, ವುರ್ಥ್ ಅದರ ಬಗ್ಗೆ ವ್ಯಂಗ್ಯವಾಡುತ್ತಾನೆ. ಅದರ ಅಪಾವಿತ್ಯ್ರತೆಯನ್ನು ನಿರೂಪಿಸಲು ಪ್ರಯತ್ನಿಸುತ್ತಾನೆ. ಶಿವ ಶರಣರ ಭಕ್ತಿಯ ಪರಾಕಾಷ್ಟೆ ಮತ್ತು ಲಿಂಗಾಯತ ಸಾಹಿತ್ಯದ ಔನತ್ಯದ ಬಗ್ಗೆ ಬಹಳ ಹೆಮ್ಮೆಯಿಂದ ಇದ್ದ ಲಿಂಗಾಯತರನ್ನು ಅನೇಕ ಉದಾಹರಣೆಗಳ ಮೂಲಕ ವಿಡಂಬಿಸುತ್ತಾನೆ. ಮಿಂಡ-ಪುಂಡ ಜಂಗಮರ ಬಗ್ಗೆ ಮಾತನಾಡುತ್ತಾ ‘ಜಂಗಮ’ ಪದದ ಉಗಮದ ಬಗ್ಗೆ ಲಿಂಗಾಯತರಲ್ಲೇ ಸ್ಪಷ್ಟತೆ ಇಲ್ಲದಿರುವುದನ್ನು ನೋಡಿ ತಮಾಷೆ ಮಾಡುತ್ತಾನೆ. ಇಂತಹ ಅನೇಕ ಅಸ್ಪಷ್ಟತೆಗಳ ಮೂಲಕ ಲಿಂಗಾಯತರ ಅಪೂರ್ಣತೆ, ಅಪಕ್ವತೆಯ ಬಗ್ಗೆ ಅವನು ದೋಷಾರೋಪಗಳನ್ನು ಮಾಡುತ್ತಾನೆ.

ಕಾಲಜ್ಞಾನಕ್ಕೆ ಸವಾಲು : ಚೆನ್ನಬಸವ ಪುರಾಣದ ಭಾಷಾಂತರ

ಅಯ್ಯೊ!  ಪುರಾತನ ರಾಜಧಾನಿಯಾದ, ಲಿಂಗಾಯತ ಮತದ ತೊಟ್ಟಿಲು ಎನಿಸಿಕೊಂಡಿರುವ ಕಲ್ಯಾಣವು ಈಗ ನಿಜಾಮ ದೇಶಗಳಲ್ಲಿ ಪಾಳು ಬಿದ್ದ ಪ್ರದೇಶವಾಗಿದೆ. ಸೋಲಾಪುರಕ್ಕೆ ಹತ್ತಿರವಿರುವ ಈ ಪ್ರದೇಶವನ್ನು ಮತ್ತೆ ಮರು-ಸೃಷ್ಟಿಸಲಾಗುವುದು ಎಂಬ ಭವಿಷ್ಯ ನಿಜವಾಗುವ ಲಕ್ಷಣಗಳು ಕಾಣುತ್ತಿಲ್ಲ. ಪಶ್ಚಿಮದಿಂದ ವಸಂತರಾಯನ ಪಾರುಪತ್ಯದಲ್ಲಿ ಬಸವ-ಚೆನ್ನಬಸವರು ಮತ್ತೆ ಹುಟ್ಟಿ ಈ ಭವಿಷ್ಯವನ್ನು ನಿಜವಾಗಿ ಸುತ್ತಾರೆನ್ನುವುದೂ ಸಹ ಇದುವರೆಗೂ ನಿಜವಾಗಿಲ್ಲ. ತಮ್ಮ ಪ್ರವಾದಿಯ ಪುಸ್ತಕಗಳನ್ನು ತಿರುವು ಹಾಕಿ ಅವರ ಬರುವಿಕೆಗಾಗಿ ಲಿಂಗಾಯತರು ಪಶ್ಚಿಮದ ಕಡೆ ಮುಖ ಹಾಕಿ ಬಹು ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಆದರೆ ಅವರ ಬದಲಾಗಿ ಕ್ರಿಶ್ಚಿಯನ್ ಮಿಶಿನರಿಗಳು ಆಗಮಿಸಿರುವರು. ಜಗತ್ತನ್ನು ತನ್ನಡಿಯಲ್ಲಿ ಇಟ್ಟುಕೊಂಡಿರುವ ಕ್ರಿಸ್ತನೆ ನಿಜವಾದ ಪ್ರಭುವು ಮತ್ತು ಅವನಲ್ಲಿ ಜಗತ್ತು ಲೀನವಾಗಿದೆ ಎಂಬ ಸತ್ಯವನ್ನು ಈ ಮಿಶಿನರಿಗಳು ಪ್ರತಿಪಾದಿಸಿದರು. ಇವರನ್ನು ಕೆಲವು ಲಿಂಗಾಯತರು ಬಸವನ ಅವತಾರಿಗಳೆಂದು ತಿಳಿದಿದ್ದಾರೆ. ಅವರ ಭವಿಷ್ಯ ನಿಜವಾಗಿಲ್ಲ. ಅವರು ಇದುವರೆಗೂ ಕಟ್ಟು ಕತೆಗಳಲ್ಲಿ ನಂಬಿಕೆ ಇಟ್ಟಿದ್ದರೆಂದು ಈಗಲಾದರು ತಿಳಿದುಕೊಳ್ಳಬಹುದು (ವುರ್ಥ್, ೧೮೬೫-೬೬: ೨೨೧).

ವುರ್ಥನ ಈ ವ್ಯಂಗ್ಯದ ನುಡಿಗಳನ್ನು ಒಬ್ಬ ಕ್ರೈಸ್ತ ಪಾದ್ರಿಯ ಏಕಮುಖ ಚಿಂತನೆಗಳೆಂದು ಅಥವಾ ಪೂರ್ವಾಗ್ರಹ ಪೀಡಿತವೆಂದು ನಾವು ನಿರ್ಲಕ್ಷ್ಯ ಮಾಡುವ ಹಾಗಿಲ್ಲ. ಏಕೆಂದರೆ ಇದಕ್ಕೆ ಅನೇಕ ಧಾರ್ಮಿಕ ಮತ್ತು ಸಾಮಾಜಿಕ ಅಂಶಗಳು ಪ್ರಚೋದನಕಾರಿಯಾಗಿದ್ದವು. ಇವುಗಳನ್ನು ಅರ್ಥ ಮಾಡಿಕೊಳ್ಳುವುದು ನಮ್ಮ ಚರ್ಚೆಗೆ ಸೂಕ್ತ. ಈ ವ್ಯಂಗ್ಯವು ಚೆನ್ನಬಸವ ಕೊನೆಯ ಭಾಗದಲ್ಲಿರುವ ಕಾಲಜ್ಞಾನ ಕಾಂಡ ಮತ್ತು ಕಾಲಜ್ಞಾನದ ಬಗ್ಗೆ ಲಿಂಗಾಯತರಲ್ಲಿ ಇದ್ದ ನಂಬಿಕೆಗಳೆರಡನ್ನೂ ಕುರಿತದ್ದಾಗಿದೆ. ಮೊದಲಿಗೆ ಈ ಕಾಲಾಜ್ಞಾನದ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ಈ ಕಾಲಜ್ಞಾನಿಗಳ ಜೊತೆಗೆ ಬಾಸೆಲ್ ಮಿಶಿನರಿಗಳು ನಡೆಸಿದ ವಾದ-ವಿವಾದಗಳು ಮತ್ತು ಅವರ ಅನುಭವಗಳು ಬಾಸೆಲ್ ಮಿಶಿನರಿಗಳು ಇತಿಹಾಸದಲ್ಲಿ ಬಹಳ ಮುಖ್ಯವಾದ ಒಂದು ಘಟನೆ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು.[24]

ಚೆನ್ನಬಸವ ಪುರಾಣದ ೬೨ನೇ ಭಾಗದಲ್ಲಿ (ಕಾಲಜ್ಞಾನ ಸಂಧಿ)[25] ಚೆನ್ನ ಬಸವನ ಕಾಲಜ್ಞಾನವು ಬಹು ಮುಖ್ಯವಾದ ಸಂಗತಿ. “ಮುಂದೇನಾಗುವುದು” (ವುರ್ಥ್, ೧೮೬೩-೬೬: ೨೧೯) ಎಂದು ಸಿದ್ಧರಾಮನು ಚೆನ್ನಬಸವನಿಗೆ ಕೇಳಿಕೊಂಡಾಗ ಮುಂದಿನ ದಿನಗಳ ಬಗ್ಗೆ ಚೆನ್ನಬಸವನು ಬಲು ದೀರ್ಘವಾದ ಭವಿಷ್ಯವನ್ನು ನುಡಿಯುತ್ತಾನೆ. ಯಾವಾಗ್ಯಾವಾಗ ಲಿಂಗಾಯತ ಮತವು ಹೊರಗಿನವರಿಂದ ತೊಂದರೆ ಗೊಳಲ್ಪಡುತ್ತದೆಯೊ ಅಥವಾ ಹಾನಿಗೊಳ ಗಾಗಲ್ಪಡುತ್ತದೆಯೊ ಆಗ ಲಿಂಗಾಯತ ಯತಿಗಳು ಹುಟ್ಟಿ ಅದನ್ನು ಮರು ಸ್ಥಾಪಿಸಿ, ಪ್ರಬಲವನ್ನಾಗಿಸುತ್ತಾರೆ. ವಿಜಯನಗರದ ಸಾಮ್ರಾಜ್ಯದ ಉಗಮದ ಭವಿಷ್ಯವನ್ನು ನುಡಿಯಿತ್ತಾ, ಅಲ್ಲಿ ೧೦೧ ಮತ್ತು ೭೦೧ ಲಿಂಗಾಯತ ಯತಿಗಳಿಂದ ಲಿಂಗಾಯತ ಮತವು ಮತ್ತೆ ತನ್ನ ಭವ್ಯತೆಯನ್ನು ಮಡೆಯುತ್ತದೆ ಎಂದು ಹೇಳುತ್ತಾನೆ.[26] ಅವರು ಶಿವನಲ್ಲಿ ಐಕ್ಯವಾದ ಮೇಲೆ, ವಸಂತರಾಯನೆಂಬ ರಾಜನು ಹುಟ್ಟಿ ತುರುಜರನ್ನು ಸದೆ ಬಡೆದು, ಕಲ್ಯಾಣವನ್ನು ಮತ್ತೆ ಸೃಷ್ಟಿಸುತ್ತಾನೆ. ಅದು ಮೊದಲಿಗಿಂತಲೂ ಅತಿ ಸುಂದರವಾಗಿರುತ್ತದೆ.

ನಾನು ಅವನ ಪ್ರಧಾನ ಮಂತ್ರಿಯಾಗುತ್ತೇನೆ, ಬಸವನು ಸೈನ್ಯದ ದಂಡನಾಯಕನಾಗುತ್ತಾನೆ. ಕಳೆದು ಹೋದ ಲಿಂಗಾಯತರದ ಭವ್ಯತೆಯನ್ನ ಮತ್ತೆ ಸ್ಥಾಪಿಸಲಾಗುವುದು (ವುರ್ಥ್, ೧೮೬೫: ೨೨೧).

ಈ ಭವಿಷ್ಯ ಮೂಲ ಉದ್ದೇಶಗಳು ಅನೇಕ. ಶಿವಶರಣರ ಮಹಿಮೆಯನ್ನು ಕೊಂಡಾಡುವುದು, ಅವರ ಕಾಲಾತೀತ ಪ್ರಸ್ತುತತೆಯನ್ನು ಸಾದರಪಡಿಸುವುದು, ಲಿಂಗಾಯತ ಅನುಯಾಯಿಗಳಲ್ಲಿ ನಂಬಿಕೆಯನ್ನು ಸ್ಥಿರಗೊಳಿಸುವುದು ಮತ್ತು ಲಿಂಗಾಯತ ಮತದ ನಿಯಮಗಳನ್ನು / ತತ್ವಗಳನ್ನು ಮುಂದುವರೆಸುವುದು. ಈ ತರಹದ ಭವಿಷ್ಯಗಳನ್ನೊಳಗೊಂಡ ಸಾಹಿತ್ಯವನ್ನು ಕನ್ನಡ ಸಾಹಿತ್ಯದಲ್ಲಿ ಕಾಲಾಜ್ಞಾನ ಸಾಹಿತ್ಯವೆಂದು ಪ್ರಸಿದ್ಧವಾಗಿವೆ. ಇದು ವಿಜಯನಗರದ ಕಾಲದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಸಾಹಿತ್ಯ. ಬ್ಲೇಕ್ ಮೈಖೆಲ್ ಇದರ ಬಗ್ಗೆ ಹೀಗೆ ಹೇಳಿದ್ದಾನೆ, “ವಿಜಯನಗರದ ಪತನದ ನಂತರ ಚೆನ್ನಬಸವ ಪುರಾಣವನ್ನು ಬರೆಯಲಾಯಿತು. ಕಲ್ಯಾಣದ ಪತನ ಮತ್ತು ಅದರ ಪುನುರುಜ್ಜೀವನಕ್ಕೂ, ವಿಜಯನಗರದ ಪತನಕ್ಕೂ ಬಹಳ ಸಾಮ್ಯತೆಗಳಿರುವುದು ಸ್ಪಷ್ಟ” (೧೯೯೨:೨೦). ಕನ್ನಡದ ವಿದ್ವಾಂಸ ಹಳ್ಳಿಕೇರಿಯವರು ಕಾಲಜ್ಞಾನ ಸಾಹಿತ್ಯವು ೧೫, ೧೬ ಮತ್ತು ೧೭ನೇ ಶತಮಾನಗಳಲ್ಲಿ ಪ್ರಚಲಿತದಲ್ಲಿತ್ತು ಎಂದು ಗಮನಿಸಿದ್ದಾರೆ (೨೦೦೦: ೧೩೫). ಕಾಲಜ್ಞಾನ ವಚನಗಳನ್ನು ಸೃಷ್ಟಿಸಿದ ಅನೇಕ ಕವಿಗಳನ್ನು ಅವರು ಪಟ್ಟಿ ಮಾಡುತ್ತಾರೆ. ವಿರುಪಾಕ್ಷ ಪಂಡಿತನಲ್ಲದೆ ಇನ್ನು ಅನೇಕರು ಕಾಲಜ್ಞಾನ ಸಾಹಿತ್ಯಕ್ಕೆ ಪ್ರಸಿದ್ಧಿಯಾಗಿದ್ದರೆಂದು ಅವರು ಬರೆಯುತ್ತಾರೆ. ತಿಂತಿಣಿ ಮೊನಪ್ಪಯ್ಯ, ಕೊಡೆಕಲ್ಲು ಬಸವ ಮತ್ತು ಎಮ್ಮೆ ಬಸವ ಇವರಲ್ಲಿ ಪ್ರಮುಖರು.[27] ಕಾಲಜ್ಞಾನ ಕೃತಿಗಳು ಮತ್ತು ಚೆನ್ನ ಬಸವಪುರಾಣದ ನಡುವೆ ಇರುವ ಸಾಮ್ಯತೆಗಳನ್ನು ವಿಜಯನಗರ ಸಾಮ್ರಾಜ್ಯದ ಪತನದ ವರ್ಣನೆಯಲ್ಲಿ ನೋಡಬಹುದು. ಅಸಂಖ್ಯಾತ ಕಾಲಜ್ಞಾನ ಕೃತಿಗಳು ಮತ್ತು ಆ ಪ್ರಕಾರದ ಕವಿಗಳು ಕಾಲಕ್ರಮೇಣದಲ್ಲಿ ಆಗಿ ಹೋಗಿದ್ದಾರೆ. ಇವರ ದೊಡ್ಡ ಸಂಖ್ಯೆಯ ಅನುಯಾಯಿಗಳು ಕಾಲಜ್ಞಾನಿ ಲಿಂಗಾಯತರೆಂದೇ ಪ್ರಸಿದ್ಧಿ. ಇವರು ಕಾಲಜ್ಞಾನ ಮಹಿಮೆಯನ್ನು ಅನಾದಿ ಕಾಲದಿಂದ ಪ್ರಚಾರ ಮಾಡುತ್ತಾ ಮತ್ತು ಬೋಧಿಸುತ್ತಾ ಬಂದಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕ್ರೈಸ್ತ ಪಾದ್ರಿಗಳಿಗೆ ಎದುರಾದ ಅನೇಕ ಮಂದಿ ಕಾಲಜ್ಞಾನಿಗಳು ಈ ಪರಂಪರೆಗೆ ಸೇರಿದವರು.

೧೮೪೦ ಮತ್ತು ೧೮೫೭ರ ನಡುವಿನ ಬಾಸೆಲ್ ಮಿಶಿನರಿಯ ವರದಿಗಳು ಕಾಲಜ್ಞಾನಿಗಳ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ನೀಡುತ್ತವೆ. ಕಾಲಜ್ಞಾನ ಪರಂಪರೆಗೆ ಸೇರಿದ ಲಿಂಗಾಯತರಲ್ಲಿ ಅನೇಕರು ಬಡಿಗರು, ಅಕ್ಕ ಸಾಲಿಗರು ಮತ್ತು ರೈತರಾಗಿದ್ದರು. ಇವರನ್ನು ಮೊಟ್ಟ ಮೊದಲು ಸಂದರ್ಶಿಸಿ, ಅವರ ನಡುವೆ ಕ್ರೈಸ್ತ ಮತವನ್ನು ಪ್ರಚಾರ ಮಾಡಿದ ಮೊದಲ ಮಿಶಿನರಿ ರೆ. ಲೇಯರ್ ಹುಬ್ಬಳ್ಳಿ-ಧಾರವಾಡದಲ್ಲಿ ೧೮೩೯ರ ಸುಮಾರಿಗೆ ಸುವಾರ್ತೆಯನ್ನು ಬೋಧಿಸುವ ಸಂದರ್ಭದಲ್ಲಿ ಕಪ್ಪಗೌಡ ಎಂಬ ಕಾಲಜ್ಞಾನಿ ಗುರು ಮತ್ತು ಪಂಡಿತರಿಂದ ಲೇಯರ್ ಕಾಲಜ್ಞಾನಿಗಳ ಸಾಹಿತ್ಯ, ಮತ-ತತ್ವಗಳು ಮತ್ತು ಪರಂಪರೆಗಳ ಬಗ್ಗೆ ಅರಿತುಕೊಂಡ, ಈ ಲಿಂಗ ಪುರೋಹಿತರು ಕಾಲಜ್ಞಾನದ ಸಂದೇಶವನ್ನು ಲಿಂಗಾಯತ ಪುರಾಣಗಳಲ್ಲಿರುವ ಹಾಗೆ ಪ್ರಚಾರ ಮಾಡುವ ಪರಂಪರೆಯನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದರು. ಬಸವ-ಚೆನ್ನಬಸವರು ಮತ್ತೆ ಹುಟ್ಟಿ ಬರುತ್ತಾರೆ ಮತ್ತು ಲಿಂಗಾಯತ ಮತವನ್ನು ಪುನುರುಜ್ಜೀವನಗೊಳಿಸುತ್ತಾರೆ ಎಂದು ಅವರು ದೃಢವಾಗಿ ನಂಬಿದ್ದರು, “ನಮ್ಮ ದೇವರು ಮತ್ತೆ ಮರಳಿ ಬರುವ ದಿನಗಳು ದೂರವಿಲ್ಲ. ಅವರು ಮೂರ್ತಿಪೂಜೆಯನ್ನು ನಾಶ ಮಾಡಿ, ಏಕದೇವನೋಪಾಸನೆಯನ್ನು ಮತ್ತೆ ಪ್ರಾರಂಭಿಸಿ, ಇದಕ್ಕೆ ವಿರುದ್ಧವಾದವರನ್ನು ಶಿಕ್ಷಿಸುತ್ತಾರೆ” (ಲೇಯರ್, ೧೮೪೦: ೨.೧) ಎಂದು ನಂಬಿದ್ದರು. ಲೇಯರನ ಪ್ರಕಾರ ಇದು ಲಿಂಗಾಯತ ಪುರಾಣಗಳಲ್ಲಿ ಸಾಮಾನ್ಯವಾಗಿ ಕಾಣುವ ಭವಿಷ್ಯ. ಲಿಂಗಾಯತರು ಈ ಕಾಲಜ್ಞಾನಿ ಸಾಹಿತ್ಯದ ಬಗ್ಗೆ ಬಹಳಷ್ಟು ಭಕ್ತಿ ಮತ್ತು ಗೌರವಗಳನ್ನು ಹೊಂದಿದ್ದರೆಂದು ಲೇಯರ್ ಮತ್ತು ಫ್ರೇಯವರ ವರದಿಗಳು ತಿಳಿಸುತ್ತವೆ (೧೮೪೦: ೨.೧೫).[28] ಅವರಿಬ್ಬರಿಗೆ ಈ ಕಾಲಜ್ಞಾನಿಗಳು ಮತ್ತು ಕಾಲಜ್ಞಾನಿ ಸಾಹಿತ್ಯವನ್ನು ಆಳವಾಗಿ ತಿಳಿದುಕೊಳ್ಳುವ ಅವಶ್ಯಕತೆ ಇತ್ತು. ಏಕೆಂದರೆ ಲಿಂಗಾಯತರಲ್ಲಿ ಕ್ರಿಸ್ತನ ಬಗ್ಗೆ ಒಲವನ್ನು ಮೂಡಿಸಬೇಕಾದರೆ ಈ ಸಾಹಿತ್ಯದ ಮಹತ್ವವನ್ನು ಅರಿತು, ಅದರ ಜೊತೆಗೆ ಸಂವಾದ ನಡೆಸುವ ಐತಿಹಾಸಿಕ ಒತ್ತಡ ಅವರ ಮೇಲಿತ್ತು. ಕಾಲಜ್ಞಾನಿಗಳು ತಮ್ಮ ಪುರಾಣಗಳನ್ನು (ವಿಶೇಷವಾಗಿ ಚೆನ್ನ ಬಸವ ಪುರಾಣವನ್ನು) ದೈವ ನುಡಿಗಳೆಂದು ನಂಬಿ, ಅದನ್ನೇ ಪ್ರಮಾಣಗಳೆಂದು ಪೂಜಿಸುತ್ತಿದ್ದರಿಂದ ಅವುಗಳನ್ನು ಅರಿಯದೆ ಬೇರೆ ಮಾರ್ಗವಿರಲಿಲ್ಲ.[29]

ಅಕ್ರೈಸ್ತರ ಮುಂದೆ ಸುವಾರ್ತೆಯನ್ನು ಬೋಧಿಸುವುದರಿಂದ ಪಾದ್ರಿಗಳಿಗೆ ಮಿಶ್ರ ಅನುಭವವುಟಾಂಯಿತು. ಕೆಲವು ಲಿಂಗಾಯತ ಕಾಲಜ್ಞಾನಿಗಳು ಸುವಾರ್ತೆಯನ್ನು ಪ್ರಶ್ನಿಸಿದರೆ, ಇನ್ನು ಕೆಲವರು ಅದಕ್ಕೆ ಆಕರ್ಷಿತರಾದರು. ರೆ. ಲೇಯರ್ ವಾರ್ಷಿಕ ವರದಿಯಲ್ಲಿ (೧೮೪೦) ಕಾಲಜ್ಞಾನಿ ಪರಂರೆಯ ಕಪ್ಪಗೌಡ, ಗುರುಪಸಪ್ಪ, ಪಿತಾಂಬರಪ್ಪ ಮತ್ತು ರುಮಕೋಟಿ ಎಂಬುವವರು ಸುವಾರ್ತೆಗೆ ಆಕರ್ಷಿತರಾದ ಮೊದಲ ಲಿಂಗ ಪುರೋಹಿತರು (Linga prients) ಎಂದು ನಮೂದಿಸಲಾಗಿದೆ. ಇವರೆಲ್ಲರೂ ಬೇರೆ, ಬೇರೆ ಕಸಬುಗಳಲ್ಲಿ ತೊಡಗಿಸಿಕೊಂಡಿದ್ದರು ಮತ್ತು ಅವರು ತಮ್ಮ ಅನುಯಾಯಿಗಳ ಮೇಲೆ ಬಹಳ ಪ್ರಭಾವವನ್ನುಳ್ಳವರಾಗಿದ್ದರು. ಇವರನ್ನು ಸ್ಥಳೀಯರು ಬಹಳ ಗೌರವಿಸುತ್ತಿದ್ದರಿಂದ ಲಿಂಗಾಯತ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳಲು ಪಾದ್ರಿಗಳಿಗೆ ಇವರ ಸಹಾಯ ಮತ್ತು ಬೆಂಬಲ ಅತ್ಯವಶ್ಯಕವಾಗಿತ್ತು. ಮುಂದೊಮದು ದಿನ ಇವರು ಸಂಪೂರ್ಣವಾಗಿ ಕ್ರೈಸ್ತ ಮತಕ್ಕೆ ಸೇರುತ್ತಾರೆಂಬ ಆಶಯದಿಂದ ಇವರಿಗೆ ಬಹಳ ಗೌರವವನ್ನು ಕೊಡಲಾಯಿತು. ಹೀಗೆ ಅನೇಕ ಸಂವಾದ, ಭೇಟಿ, ಚರ್ಚೆ ಮತ್ತು ಆಸಕ್ತಿಯಿಂದ ಪಾದ್ರಿಗಳಿಗೆ ಈ ಕಾಲಜ್ಞಾನದ ಬಗ್ಗೆ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಾಯಿತು.

ಬಸವನ ಬದಲಿಗೆ ಪಾದ್ರಿಗಳು ಪಶ್ಚಿಮದಿಂದ ಭಾರತಕ್ಕೆ ಬಂದು ನೆಲೆಸಿದುದು ಸಮರ್ಥನೀಯವೆಂದು ನಂಬಿದ್ದ ವುರ್ಥ್ ಲಿಂಗಾಯತರ ಸಾಹಿತ್ಯವು ಮಿಥ್ಯಗಳಿಂದ ಕೂಡಿದೆಯೆಂದು ಪದೆ, ಪದೆ ಹೇಳುತ್ತಾನೆ. ಲಿಂಗಾಯತ ಪುರಾಣಗಳನ್ನು ಕಟ್ಟುಕತೆಯೆಂದು ಹೇಳುವುದರ ಮೂಲಕ ಅದರ ಸುತ್ತ ಇರುವ ಪರಂಪರೆಯನ್ನು ನಿರ್ಲಕ್ಷಿಸುತ್ತಾನೆ. ಕಲ್ಯಾಣದ ಅಧೋಗತಿ ಮತ್ತು ಪತನದ ಬಗ್ಗೆ ಟೀಕೆಯನ್ನು ಮಾಡಿ, ಲಿಂಗಾಯತರ ಕಾಲಜ್ಞಾನವು ಹುಸಿ ಮತ್ತು ಅವಾಸ್ತನಿಕವೆಂದು ನಿರೂಪಿಸುತ್ತಾನೆ. ಲಿಂಗಾಯತ ಪುರಾಣಗಳಲ್ಲಿ ಕಾಣುವ ವಿಷಯಗಳು ಸಹ ವುರ್ಥನ ವಿಚಾರಗಳನ್ನು ಸಮರ್ಥಿಸುವ  ಹಾಗಿವೆ. ಶೈವ ಆಚರಣೆಮ ನಿಯಮ ಮತ್ತು ತತ್ವಗಳನ್ನು ವ್ಯವಸ್ಥಿತಗೊಳಿಸಿ ಅವಕ್ಕೆ ಮನ್ನಣೆ ನೀಡಿರುವುದು ಪುರಾಣಗಳಲ್ಲಿ ಕಾಣುತ್ತವೆ. ಜನ್ಮ, ದೀಕ್ಷೆ, ಮದುವೆ, ಸಾವು, ಸರ್ವ ಪರಿತ್ಯಾಗ, ಮೋಕ್ಷ, ಲಿಂಗಾಯತನಾಗಲು ಬೇಕಾಗುವ ಅರ್ಹತೆ, ಭವಿಗಳಿಗಿರುವ ಶಿಕ್ಷೆ. ಇತ್ಯಾದಿಗಳ ಬಗ್ಗೆ ಈ ಪುರಾಣಗಳು ನಿಯಮಗಳನ್ನು ರೂಪಿಸುತ್ತವೆ. ಲಿಂಗಾಯತ ಆಚಾರ-ವಿಚಾರಗಳಿಗೆ  ಇವು ಮನ್ನಣೆ ಅಥವಾ ಅಂಗೀಕೃತವನ್ನು ನೀಡುತ್ತದೆ. ಹಾಗಾಗಿ ಈ ಪುರಾಣಗಳು ಲಿಂಗಾಯತರಿಗೆ ಅತ್ಯಂತ ಪೂಜ್ಯ. ಈ ಎಲ್ಲಾ ಅಂಶಗಳು ವುರ್ಥನು ಮಾಡುವ ಟೀಕೆಗೆ ಆಹಾರವಾದವು. ಆಧುನಿಕ ಶಿಕ್ಷಣ ಪಡೆದ ವುರ್ಥನಿಗೆ ಇವು ಕಟ್ಟು ಕತೆಗಳಾಗಿ ಕಂಡಿದ್ದರಲ್ಲಿ ಆಶ್ಚರ್ಯವೇನಿಲ್ಲ. ಲಿಂಗಾಯತರ ಆಚಾರ (ಆತಿಯಾದ ರೀತಿ-ರಿವಾಜುಗಳು) ಮತ್ತು ವಿಚಾರಗಳ (ಏಕದೇವೋಪಾಸನೆ) ನಡುವೆ ಇರುವ ಕಂದರವನ್ನು ಅವನು ವ್ಯಂಗ್ಯಮಾಡುತ್ತಾನೆ. ೧೮೪೦ರಲ್ಲಿಯೇ ರೆ. ಫ್ರೇ ಹೇಳಿದ ಮಾತುಗಳು ವುರ್ಥ್‌ನಿಗೂ ಅನ್ವಯಿಸಬಹುದು “ಲಿಂಗಾಯತರು ಕಾಲವಿಲ್ಲದವರು. ಕಾಲಜ್ಞಾನವು ನಮ್ಮ ಪ್ರಭುವಿನ ದಾರಿಯಲ್ಲಿ ನಡೆಯಲು ನಿಮಗೆ ಶಕ್ತಿಯನ್ನು ಕೊಡುವುದಿಲ್ಲ” (ಫ್ರೇ, ೧೮೪೦: ೨.೧೬).

[1] ನೋಡಿ ಪಿ. ಮತ್ತು ಜೆ.ಎಮ್. ಜೆಂಕಿನ್ಸ್ ರ ಭಾಷಾಂತರಗಳು, ಅಕ್ಟೋಬರ್ ೨೦೦೭.

[2] ನೋಡಿ ಪಿ. ಮತ್ತು ಜೆ.ಎಮ್. ಜಿಂಕಿನ್ಸ್ ರ ಭಾಷಾಂತರಗಳು, ಅಕ್ಟೋಬರ್ ೨೦೦೭

[3] ಶ್ರೀನಿವಾಸ ಹಾವನೂರ್, ರಾ.ಯ. ಧಾರವಾಡಕರ್ ಮತ್ತು ಐ.ಮಾ. ಮುತ್ತಣ್ಣನವರು ತಮ್ಮ ಕೃತಿಗಳಲ್ಲಿ ಇವನ ಹೆಸರು ಜಾರ್ಜ್ ವುರ್ಥ್ ಎಂದು ತಪ್ಪಾಗಿ ನಮೂದಿಸಿದ್ದಾರೆ.

[4] ಸ್ಥಳೀಯರ ಮೇಲೆ ಪಾಶ್ಚಾತ್ಯ ಶಿಕ್ಷಣವನ್ನು ಹೇರಿದುದರ ಬಗ್ಗೆ ಇಲ್ಲಿ ಒಂದು ಅಪವಾದವಿದೆ. ಇಲ್ಲಿ ಸ್ಥಳೀಯರೆ ತಮಗೊಂದು ಶಾಲೆ ತೆರೆಯಬೇಕೆಂದು ಕೋರಿ ಕೊ೦ಡಾಗ ವುರ್ಥ್ ಮತ್ತಿತರು ಅವರ ಕೋರಿಕೆಯನ್ನು ಮನ್ನಿಸಿ, ಶಾಲೆಯೊಂದನ್ನು ಶುರು ಮಾಡುತ್ತಾರೆ. ಇದು ಸ್ಥಳೀಯರು “ಸರಿಯಾದ ನಿರ್ಣಯಗಳನ್ನು ತೆಗೆದು ಕೊಳ್ಳುವಂತೆ” (ವುರ್ಥ, ೧೮೪೬: ೨.೧೯), ಮಾಡುವದಕ್ಕೋಸ್ಕರ ಶಾಲೆಗಳನ್ನು ಶುರು ಮಾಡಲಾಯಿತು.

[5] ಇದರ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ನೋಡಿ ಐ. ಮಾ. ಮುತ್ತಣ್ಣ (೧೯೯೨: ೧೫೯).

[6] ಇದರ ಬಗ್ಗೆ ಮತ್ತಷ್ಟು ವಿವರಗಳಿಗಾಗಿ ಬಾಸೆಲ್ ಜರ್ಮನ್ ಇವಾಂಜೆಲಿಕಲ್ ಸೋಸೈಟಿಯ ೩೦ನೇ ವರದಿಯನ್ನು (೧೮೬೯) ನೋಡಿ.

[7] ವುರ್ಥನ ೧೬ನೇ ವರದಿ ನೋಡಿ.

[8] ಇದಕ್ಕಾಗಿ  ವುರ್ಥನ ೧೭ನೇ ವರದಿ ನೋಡಿ.

[9] ೧೮೪೦ರಲ್ಲಿ ರೆ. ಲೇಯರ್ ತನ್ನ ಒಂದು ವರದಿಯಲ್ಲಿ ಹೀಗೆ ಬರೆದಿದ್ದಾನೆ. “ಸರ್ಕಾರವು ತನ್ನ ಬಲವಾದ ಸಹಾಯದಿಂದ ತಮ್ಮ ಮೇಲೆ ಕ್ರೈಸ್ತ ಮತವನ್ನು ಹೇರುತ್ತದೆ ಎಂಬ ಭಯ ಅನೇಕ ಸ್ಥಳೀಯರಿಗೆ ಇತ್ತು ಮತ್ತು ಇದನ್ನು ವಿರೋಧಿಸಿದರೆ ತಮಗೆ ಶಿಕ್ಷೆಯಾಗುತ್ತದೆ ಎಂದು ಅವರು ಹೆದರಿದ್ದರು”. ನೋಡಿ ಪಿ. ಮತ್ತು ಜೆ. ಎಮ್. ಜೆಂಕಿನ್ಸ್ ರ ಭಾಷಾಂತರಗಳು, ಅಕ್ಟೋಬರ್, ೨೦೦೭.

[10] ಪ್ರಾಯಶಃ ತಮ್ಮ ಮೂರ್ತಿ ಭಂಜಕತೆ ಮತ್ತು ಏಕದೇವೊಪಾಸನೆ ಆಚರಣೆಯನ್ನು ಅವರು ಕ್ರೈಸ್ತಮತಕ್ಕೆ ಹೋಲಿಸಿ ಎರಡರಲ್ಲು ಸಾಮ್ಯತೆಗಳನ್ನು ಕಂಡಿರಬಹುದು.

[11] ಈ ಪಾದ್ರಿಗಳು ಮತ ಪ್ರಚಾರವನ್ನು ಬೆಟಗೇರಿ ಮತ್ತು ಮಲಸಮುದ್ರದಲ್ಲಿ ಕೈಗೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಮತ್ತಷ್ಟು ವಿವರಗಳಿಗಾಗಿ ಬಾಸೆಲ್ ಮಿಶಿನರಿಗಳ ೧೧ನೇ ವರದಿಯನ್ನು (೧೮೫೧) ನೋಡಿ.

[12] ಜೋಸೆಫ್ ಮುಲ್ಲೆನ್ಸ್ ಎಂಬುವವನು ತನ್ನ ವರದಿಯಲ್ಲಿ ಇದರ ಬಗ್ಗೆ ಮಾಹಿತಿಯನ್ನು ಒದಗಿಸಿದ್ದಾನೆ. ಯಾವಾಗ ತನ್ನ ಶಿಷ್ಯಂದಿರು ಕ್ರಿಶ್ಚಿಯನ್ನರ ಪ್ರಭಾವದಿಂದ ಮಾರುಹೋಗಿ ತನ್ನನ್ನು ತೊರೆಯುತ್ತಿದ್ದಾರೆಂದು ಆತಂಕಗೊಳ್ಳುವನೋ ಆಗ ಅವರನ್ನು ತಡೆ ಹಿಡಿಯಲು ಮತ್ತು ಅವರನ್ನು ತನ್ನ ಹಿಂಬಾಲಕರನ್ನಾಗಿ ಮುಂದುವರೆಸಲು ಲಿಂಗ ಗುರುವು ತಾನೇ ಕ್ರೈಸ್ತನೆಂದೂ ಹೇಳಿಕೊಳ್ಳುತ್ತಿದ್ದ ಎಂದು ಮುಲ್ಲೆನ್ಸ್ ವರದಿ ಮಾಡಿದ್ದಾನೆ (೧೮೫೪: ೪೩). ಈ ತರಹದ ನಟನೆಯ ಸಂಗತಿಗಳು ಭಾರತದ ಇತರೆಡೆಗಳಲ್ಲೂ ಆಗುತ್ತಿತೆಂದು ಅವನು ಒರಿಸ್ಸಾದ ಉದಾಹರಣೆಗಳನ್ನು ಚರ್ಚಿಸುತ್ತಾ ನಿರೂಪಿಸಿದ್ದಾನೆ.

[13] ವುರ್ಥ್‌ಬಾಸೆಲ್ ಮಿಶಿನರಿಗೆ ತಯಾರು ಮಾಡಿದ ೧೬ನೇ ವರದಿಯನ್ನು ನೋಡಿ.

[14]ಕ್ರೈಸ್ತ ವಿರೋಧಿ ಚಟುವಟಿಕೆಗಳು ಕೇವಲ ಬೌದ್ಧಿಕ ಕಸರತ್ತಿಗೆ ಮಾತ್ರ ಸೀಮಿತವಾಗಿರಲಿಲ್ಲ. ಅದು ದೈಹಿಕ ಹಾನಿಗಳೂ ವಿಸ್ತರಿಸಿತ್ತು. ಉದಾಹರಣೆಗೆ, ಮುಲ್ಲೆನ್ಸ್ ವರದಿ ಮಾಡುವ ಹಾಗೆ ಒಬ್ಬ ಮತಾಂಧ ಲಿಂಗಾಯತ ಪುರೋಹಿತನು ಬಜಾರಿನಲ್ಲಿ ಮತ ಪ್ರಚಾರ ಮಾಡುತ್ತಿದ್ದ ಕ್ರೈಸ್ತ ಮಿಶಿನರಿಯ ಮೇಲೆ ಮಸಾಲೆ ಪುಡಿಯನ್ನು ಎರಚಿದನು. ಇದನ್ನು ಸಹಸಲಾರದೆ ಆ ಕ್ರೈಸ್ತ ಪಾದ್ರಿ ಮತ್ತು ಅವನ ಜೊತೆಗಾರರು ಕೆಮ್ಮುತ್ತಾ. ಆ ಜಾಗದಿಂದ ಓಡಿ ಹೋಗುವುದನ್ನು ನೋಡಿ ಅವನು ಗಹ ಗಹಿಸಿ ನಕ್ಕನಂತೆ (೧೮೫೪: ೪೫).

[15] ಬಹುಶಃ ಇದು ಕ್ರೈಸ್ತ ಮಿಥಿಕಗಳಲ್ಲಿ ಇರುವ ಸಂಗತಿಯಿರಬಹುದು. ದೇವರ ಮಕ್ಕಳು ಕಷ್ಟದಲ್ಲಿದ್ದಾಗ ಆ ಪ್ರಭುವು ಕಾಪಾಡುತ್ತಾನೆ ಮತ್ತು ಇದಕ್ಕಾಗಿ ನಾವು ತಾಳ್ಮೆಯಿಂದಿರಬೇಕು ಎಂದು ಇದರ ಅರ್ಥ.

[16] ನೋಡಿ ಬಾಸೆಲ್ ಮಿಶಿನ್‌ನ ೧೧ನೇ ವರದಿ.

[17] ಶಾಲಾ ಮಕ್ಕಳ ಪಠ್ಯಕ್ಕಾಗಿ ಹರ್ಮನ್ ಮೊಗ್ಲಿಂಗ್ ಮತ್ತು ಜಾರ್ಜ ವೀಗಲ್ ಜೊತೆಗೂಡಿ ವುರ್ಥ್ ೧೮೬೧ರಲ್ಲಿ ಹಳೇ ಮತ್ತು ಹೊಸ ಒಡಂಬಡಿಗೆಗಳನ್ನು ಕನ್ನಡಕ್ಕೆ ಭಾಷಾಂತರಿಸಿದ. ಬೈಬಲನ್ನು ಹಿಂದು ಧರ್ಮಕ್ಕೆ ಹೋಲಿಸಿ, ಈಸೋಪನ ಕಥೆಗಳನ್ನು ಕನ್ನಡಕ್ಕೆ (೧೮೬೦ರಲ್ಲಿ) ಅನುವಾದಿಸಿದ ಪ್ರಥಮರಲ್ಲಿ ವುರ್ಥ್ ಒಬ್ಬನು. ಇದಕ್ಕೆ ಸಂಬಂಧಿಸಿದಂತೆ ಮತ್ತಷ್ಟು ವಿವರಗಳಿಗೆ ರಾ.ಯ. ಧಾರವಾಡಕರ ಆಧುನಿಕ ಕನ್ನಡ ಸಾಹಿತ್ಯದ ಉಗಮದ ಬಗ್ಗೆ ಇರುವ ಕೃತಿಯನ್ನು (೧೯೭೫) ನೋಡಿ.

[18]  ವುರ್ಥ್ ಇದರ ಬಗ್ಗೆ ಖಚಿತವಾದ ಮಾಹಿತಿಯನ್ನು ನಮೂದಿಸಿದ್ದಾನೆ. ಅವರ ಪ್ರಕಾರ ಈ ಪುರಾಣವನ್ನು ೧೫೮೫ರಲ್ಲಿ ರಚಿಸಲಾಯಿತು. ಆರ್. ಮೈಖೆಲ್ ಬ್ಲೇಕ್ ಸಹ ವುರ್ಥ್‌ನ ಮಾಹಿತಿಯನ್ನು ಸಮರ್ಥಿಸುವ ಹಾಗೆ ಕಾಣುತ್ತಾನೆ. ಈ ಪುರಾಣವನ್ನು ವಿಜಯನಗರ ಸಾಮ್ರಾಜ್ಯದ ಪತನದ ಸ್ವಲ್ಪ ಸಮಯದ ನಂತರ ಬರೆದಿರಬಹುದು ಎಂದು ಬ್ಲೇಕ್ ಊಹಿಸುತ್ತಾನೆ.

[19] ನೋಡಿ ಪಿ. ಮತ್ತು ಜೆ. ಎಮ್ ಜೆಂಕಿನ್ಸ್ ರ ಭಾಷಾಂತರಗಳು, ಅಕ್ಟೋಬರ್, ೨೦೦೭ ಪು. ೨೬.

[20] ವೀರಭದ್ರಪ್ಪ ಹಾಲಭಾವಿ ಮತ್ತು ಎಸ್.ಎಸ್. ಬಸವನಾಳದ ಪ್ರಕಾರ ಭೀಮಕವಿ ಮತ್ತು ವಿರುಪಾಕ್ಷ ಪಂಡಿತರಿಂದ ರಚಿಸಲ್ಪಟ್ಟ ವಾರ್ಧಕ ಷಟ್ಪದಿ ಕಾವ್ಯಗಳು ಆಗಿನ ಕಾಲದಲ್ಲಿ ತಮ್ಮ ಹಿಂದಿನ ಪೀಳಿಗೆಯವರಿಗಿಂತ ಒಂದು ಹೆಜ್ಜೆ ಮುಂದೆ ಸಾಗಿದ ಪ್ರಗತಿಯನ್ನು ಸೂಸಿಸುತ್ತದೆ. ಸಾಮಾನ್ಯ ಜನರಿಗೆ ಅರ್ಥವಾಗದ ಚಂಪೂ ಕಾವ್ಯದ ಪರಂಪರೆಯನ್ನು ಲಿಂಗಾಯತ ಕವಿಗಳು ಮುರಿದು ಷಟ್ಪದಿ ಸಂಪ್ರದಾಯವನ್ನು ಶುರು ಮಾಡಿದರೆಂದು ಅವರ ನಂಬಿಕೆ. ಸರಳ ಮತ್ತು ಸುಲಭವು ಆದ ಷಟ್ಪದಿ ಕಾವ್ಯವು ಓದುವುದಕ್ಕೆ, ಪಠಣ ಮಾಡುವುದಕ್ಕೆ ಅಥವಾ ಹಾಡುವುದಕ್ಕೆ ಅತಿ ಸುಲಭ. ಅದಕ್ಕಾಗಿಯೇ ಲಿಂಗಾಯತ ಕವಿಗಳು ತಮ್ಮ ಮತವನ್ನು ಪ್ರಸಾರ ಮಾಡಲಿಕ್ಕೆ ಈ ಕಾವ್ಯ ಮಾದರಿಯನ್ನು ಕವಿಗಳು ತಮ್ಮ ಮತವನ್ನು ಪ್ರಸಾರ ಮಾಡಲಿಕ್ಕೆ ಈ ಕಾವ್ಯ ಮಾದರಿಯನ್ನು ಬೆಳೆಸಿದರು ಎಂದು ಇವರು ತಮ್ಮ ಮುನ್ನುಡಿಯಲ್ಲಿ ಬರೆದಿದ್ದಾರೆ. ಇದರ ಬಗ್ಗೆ ಮತ್ತಷ್ಟು ವಿವರಗಳಿಗಾಗಿ ಅವರಿಂದ ಸಂಕಲಿಸಲ್ಪಟ್ಟ ಚೆನ್ನ ಬಸವ ಪುರಾಣ (೧೯೩೪)ವನ್ನು ನೋಡಿ.

[21] “Basava Purana “Basava Purana of the Lingaits” in The Journal of the Bombay Branch of the Royal Asiatic Society, translated by the Rev. G. Wurth and Communicated by W.E. Frerr, 13th July 1865 ಸಂ. ೨೪. ಸಂಖ್ಯೆ. ೮, ೧೮೬೩-೬೪, ೧೮೬೪-೬೬, ಪು. ೬೫-೯೭.

[22] ವುರ್ಥನ ಸಹದ್ಯೋಗಿಯಾದ ಬ್ರ.ಜೆ. ಲಿಯೊನ್ ಬರ್ಗ ಜೈನರ ಬಗ್ಗೆ ಬರೆಯುತ್ತಾ ಅವರು ಕ್ರಿಶ್ಚಿಯನ್ನರಾಗಲು ಹಾತೊರಿಯುತ್ತಿದ್ದರೆಂದು ವರದಿ ಮಾಡಿದ್ದಾನೆ. ಆದರೆ ಅವರನ್ನು ಲಿಂಗಾಯತ ಜ್ಯೋತಿಷ್ಯರು ಮತ್ತು ಪುರೋಹಿತರು ತಮ್ಮ ತರ್ಕದಿಂದ ಅನೇಕ ಸಲ ತಡೆ ಹಿಡಿಯುತ್ತಿದ್ದರು. ನೋಡಿ ಬಾಸೆಲ್ ಮಿಶಿನ್ ವರದಿ ಸಂಖ್ಯೆ ೧೩. ಪು. ೨೩.

[23] ಮಿಂಡ-ಪುಂಡ ಜಂಗಮರ ವಿಷಯವು ಬಗೆಹರಿಸಲಾಗದ ನೈತಿಕ ಮತ್ತು ತಾತ್ವಿಕ ಕಗ್ಗಂಟನ್ನು ಹುಟ್ಟು ಹಾಕಿತು. ೧೯೧೯ರಲ್ಲಿ ಶ್ರೀನಿವಾಸಚಾರ್ಯ ಎಂಬುವವನು ಶುಭೋದಯ ಪತ್ರಿಕೆಯಲ್ಲಿ ಮಿಂಡ-ಪುಂಡ ಜಂಗಮರ ಬಗ್ಗೆ ಬರೆಯುತ್ತಾ ಬಸವನು ಇವರಿಗೆ ಬೆಂಬಲವಾಗಿ ನಿಂತು ತಾನು ರಾಜನಾಗುವ ಸ್ವಾರ್ಥವನ್ನು ಪೂರೈಸಿಕೊಳ್ಳುವ ಕುತಂತ್ರವನ್ನು ಹೊಂದಿದ್ದನೆಂದು ಬರೆದನು. ಇದು ಲಿಂಗಾಯತರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಲೇಖನವು ಹುಟ್ಟು ಹಾಕಿದ ವಿವಾದವು ಶುಭೋಧಯ ಪ್ರಕರಣವೆಂದೇ ಪ್ರಸಿದ್ಧಿಯಾಗಿದೆ.

[24] ಇದರ ಬಗ್ಗೆ ಕನ್ನಡ ಸಾಹಿತ್ಯ ಅಥವಾ ಧಾರ್ಮಿಕ ಚರ್ಚೆಗಳಲ್ಲಿ ಬೌದ್ಧಿಕವಾಗಿ ಯಾವುದೇ ಅವಲೋಕನ ನಡೆದಿಲ್ಲ.

[25] ಇದಕ್ಕೆ ನಾನು ಮೇಲೆ ಉಲ್ಲೇಖಿಸಲ್ಪಟ್ಟ ಚೆನ್ನಬಸವ ಪುರಾಣದ ಕೃತಿಯನ್ನು (೧೯೩೪) ಆಧಾರವನ್ನಾಗಿಸಿ ಕೊಂಡಿದ್ದೇನೆ.

[26] ಈ ಲಿಂಗಾಯತ ಯತಿಗಳು ವಿರಕ್ತರೆಂದು ಪ್ರಸಿದ್ಧಿ, ಎಡೆಯೂರು ಸಿದ್ಧಲಿಂಗೇಶ್ವರರ ಮುಂದಾಳತ್ವದಲ್ಲಿ ಇವರು ೧೬ ಮತ್ತು ೧೭ನೇ ಶತಮಾನದಲ್ಲಿ ನಾಡಿನಾದ್ಯಂತ ಲಿಂಗಾಯತ ಮತವನ್ನು ಪ್ರಚಾರ ಮಾಡಿದರೆಂದು ಅನೇಕ ವಿದ್ವಾಂಸರು ನಂಬಿದ್ದಾರೆ.

[27] ಕೆ. ರವೀಂದ್ರನಾಥರ ಪ್ರಕಾರ ಎಮ್ಮೆ ಬಸವನು ಲಿಂಗಾಯತ ಮಠದ ಮಠಾಧೀಶನಾಗಿದ್ದುಕೊಂಡು, ಕಾಲಜ್ಞಾನ ಸಾಹಿತ್ಯದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದನು (೨೦೦೦: ೧೩೨).

[28] ನೋಡಿ. ಪಿ. ಮತ್ತು ಜೆ.ಎಮ್. ಜೆಂಕಿನ್ಸ್ ರ ಭಾಷಾಂತರಗಳು, ಅಕ್ಟೋಬರ್ ೨೦೦೭.

[29] ಕಾಲಜ್ಞಾನಿಗಳು ತಮ್ಮ ಪುರಾಣಗಳನ್ನು ಶ್ರೇಷ್ಠ ಮತ್ತು ಮೂಲವಾದದ್ದು ಎಂದು ಹೆಮ್ಮೆ ಪಟ್ಟುಕೊಳ್ಳುವುದನ್ನು ಈ ಪಾದ್ರಿಗಳು ಸುಳ್ಳಾಗಿಸಲು ಪ್ರಯತ್ನಿಸುತ್ತಾರೆ. ಅನೇಕ ಸಾರಿ ಅವರು ಕಾಲಜ್ಞಾನವು ಮೂಲವಾದದ್ದಲ್ಲ ಎಂದು ವಾದಿಸಿ ಅದು ವೇದ ಮತ್ತು ಇತರ ಪುರಾಣಗಳಿಂದ ಪ್ರಭಾವಿತವಾಗಿವೆಂದು ಪ್ರತಿಪಾದಿಸುತ್ತಿದ್ದರು. ನೋಡಿ. ಪಿ. ಮತ್ತು ಜೆ.ಎಮ್. ಜೆಂಕಿನ್ಸ್ ರ ಭಾಷಾಂತರಗಳು, ಅಕ್ಟೋಬರ್ ೨೦೦೭.