ಭಾಗ

ಬ್ರೌನ್ ಮತ್ತು ವುರ್ಥ್ : ಒಂದು ತೌಲನಿಕ ನೋಟ

ವಸಾಹತುಶಾಹಿ ಕಾಲ ಘಟ್ಟದ ಭಾಷಾಂತರ ಪ್ರಕ್ರಿಯೆಯು ಅವಮಾನಕರ ಇತಿಹಾಸವನ್ನು ಪ್ರದರ್ಶಿಸುತ್ತದೆ ಎಂದು ಭಾಷಾಂತರ ವಿಮರ್ಶಕವಾದ ಸೂಸನ್ ಬ್ಯಾಸ್ನೆಟ್ ಮತ್ತು ಹರೀಶ್ ತ್ರಿವೇದಿ ಅಭಿಪ್ರಾಯ ಪಟ್ಟಿದ್ದಾರೆ (೧೯೯೯: ೫). ಇದು ಭಾಷಾಂತರದ ಬಗ್ಗೆ ಇರುವ ಏಕದೃಷ್ಟಿಯನ್ನು ಮಾತ್ರ ಸೂಚಿಸುತ್ತದೆ. ವಸಾಹತುಶಾಹಿ ಭಾಷಾಂತರದ ಬಗ್ಗೆ ಈ ತರಹದ ಅಭಿಪ್ರಾಯಗಳು “ಜ್ಞಾನ ಉತ್ಪಾದನೆಯ ಅಸಮತೋಲನವನ್ನು” (ಟ್ರಾಟ್ ಮನ್, ೨೦೦೯: ೨೪೦) ಪರೀಕ್ಷಿಸುವುದಿಲ್ಲ. ಈ ಧೋರಣೆಯಿಂದ ಭಾಷಾಂತರ ಪ್ರಕ್ರಿಯೆಯು ಭಾರತದಲ್ಲಿ ಒಂದೇ ತೆರವಾದ ತಾತ್ವಿಕ ವಿಚಾರಗಳಿಂದ ನಡೆಯಿತು ಎಂದು ನಮ್ಮ ಅಧ್ಯಯನವನ್ನು ಸಂಕುಚಿಸಿಕೊಳ್ಳುವ ಅಪಾಯವಿರುತ್ತದೆ. ಮೇಲಿನ ಚರ್ಚೆಯು ಬ್ರೌನ್ ಮತ್ತು ವುರ್ಥರ ಭಾಷಾಂತರ ಪ್ರಕ್ರಿಯೆಗೆ ಭಿನ್ನ, ಭಿನ್ನ ಮಜಲುಗಳನ್ನು ಚರ್ಚಿಸಿತು. ಹೀಗೆ ಚರ್ಚಿಸುವಾಗ ಸಾಧ್ಯವಾದ ಮಟ್ಟಿಗೆ ಸ್ಥಳೀಯ ಪಂಡಿತರು ಪಾಶ್ಚಾತ್ಯರ ಜೊತೆಗೆ ಹೇಗೆ ಭಾಷಾಂತರ ಕ್ರಿಯೆಯಲ್ಲಿ (ಸಹಯೋಗಿಗಳಾಗಿಯೋ ಅಥವಾ ವ್ಯಾಖ್ಯಾನಕಾರರಾಗಿಯೋ) ತೊಡಗಿಸಿಕೊಂಡರು ಎಂಬುದನ್ನು ತಿಳಿದುಕೊಂಡೆವು. ಸಾಮಾನ್ಯವಾಗಿ ಭಾಷಾಂತರ ಇತಿಹಾಸವನ್ನು ಪರೀಕ್ಷಿಸುವಾಗ ಇವರನ್ನು ನಿರ್ಲಕ್ಷ್ಯ ಮಾಡಲಾಗುತ್ತದೆ. ಆದರೆ ಈ ಲೇಖನದಲ್ಲಿ ಅವರ ದನಿಯನ್ನು ಸಣ್ಣ ಪ್ರಮಾಣದಲ್ಲಿ ಮರುಗಳಿಸಲಾಗಿದೆ. ಅವರು ವಹಿಸಿದ ಪಾತ್ರದ ಬಗ್ಗೆ ಸಂಕ್ಷಿಪ್ತ  ವ್ಯಾಖ್ಯಾನಗಳನ್ನು ಮಾಡಲಾಗಿದೆ.

ಈ ಎರಡೂ ಭಾಷಾಂತರಗಳನ್ನು ನಾವು ಕ್ರೈಸ್ತ ಮೂಲದಿಂದ ಮೂಡಿದ ಅಥವಾ ರೂಪಿಸಲ್ಪಟ್ಟವೆಂದು ಸಂಪೂರ್ಣವಾಗಿ ತಿಳಿಯಲು ಆಗುವುದಿಲ್ಲ. ಇವರಿಬ್ಬರು ಪುರಾಣಗಳನ್ನು ತಮ್ಮ ಆಸಕ್ತಿ, ಶಿಕ್ಷಣ, ಕಾರ್ಯಕ್ಷೇತ್ರ, ಭಾಷಿಕ ಸಾಮರ್ಥ್ಯ ಮತ್ತು ಸಂದರ್ಭಗಳಿಗನುಗುಣವಾಗಿ ವ್ಯಾಖ್ಯಾನ ಮತ್ತು ಭಾಷಾಂತರ ಮಾಡಿದ್ದಾರೆ. ಬ್ರೌನ್ ತನ್ನ ಆಧುನಿಕ ಉದಾರವಾದಿ ದೃಷ್ಟಿಕೋನದಿಂದ ಲಿಂಗಾಯತ ಮತವನ್ನು ಆದರ್ಶಮಯ ಮತವೆಂದು ಬಿಂಬಿಸಿದರೆ, ವುರ್ಥ ಸಂಪೂರ್ಣವಾಗಿ ಕ್ರಿಶ್ಚಿಯನ್ ಧೋರಣೆಗೆ ಬದ್ಧನಾಗಿದ್ದಾನೆ. ಬ್ರೌನ್‌ಗೆ ತನ್ನ ಹುದ್ದೆ ಮತ್ತು ಹಣದಿಂದ ಸಂಗ್ರಹಣ ಕಾರ್ಯವನ್ನು ಸುಗಮವಾಗಿ ಸಾಗಿಸಿದ. ಜೊತೆಗೆ ಜಂಗಮರ ಬಗ್ಗೆ ಸಹಾನುಭೂತಿಯನ್ನು ಪ್ರದರ್ಶಿಸಿದ. ತನ್ನ ಪಾಶ್ಚಾತ್ಯ ಸಮಕಾಲೀನರು ಪೌರುತ್ವ ಸಾಹಿತ್ಯ-ಪರಂಪರೆಗಳ ಬಗ್ಗೆ ಇರಿಸಿಕೊಂಡಿದ್ದ ಪೂರ್ವಾಗ್ರಹಪೀಡಿತ ಧೋರಣೆಗಳಿಗೆ ಭಿನ್ನಾಭಿಪ್ರಾಯವನ್ನು ವ್ಯಕ್ತ ಪಡಿಸಿದ ಬ್ರಾಹ್ಮಣರ ಬಗ್ಗೆ ಇದ್ದ ಅನುಮಾನ ಮತ್ತು ಸಾಹಿತ್ಯ ಇತಿಹಾಸದಲ್ಲಿ ಮರೆಯಲ್ಪಟ್ಟಿದ್ದ ಜಂಗಮರನ್ನು ಮುಖ್ಯವಾಹಿನಿಗೆ ಕರೆ ತರುವ ಆಸೆ ಎಲ್ಲವೂ ಸೇರಿ ಅವನ ಭಾಷಾಂತರವನ್ನು ರೂಪಿಸಿದವು. ಪಾಶ್ಚಿಮಾತ್ಯ ನಾಗರೀಕತೆಯ ಮೂಲವನ್ನು ಪೌರುತ್ಯ ಸಾಹಿತ್ಯ ಪರಂಪರೆಯಲ್ಲಿ ಶೋಧಿಸುವದರ ಜೊತೆಗೆ ಐರೋಪ್ಯ-ಕೇಂದ್ರಿತ ಮಾದರಿಗಳಿಂದ ದೂವವಿರುವ ಪ್ರಯತ್ನ ಮಾಡಿದ. ಹಾಗಾಗಿ ತನ್ನ ಭಾಷಾಂತರದಲ್ಲಿ ಅವನು ಅನೇಕ ಹೋಲಿಕೆ ಮತ್ತು ತೌಲನಿಕ ಅಧ್ಯಯನಗಳನ್ನು ನಿರಂತರವಾಗಿ ಮಾಡುತ್ತಾನೆ. ಈ ರೀತಿ ಭಾಷಾಂತರ ಪ್ರಕ್ರಿಯೆಯಲ್ಲಿ ತೊಡಗಿಸಿ ಕೊಂಡಿರುವಾಗ, ತೆಲುಗು ಭಾಷೆಯ ಕಠಿಣ ಪದಗಳು ಮತ್ತು ಕ್ಲಿಷ್ಟವಾದ ಕಾವ್ಯದ ಸಾಲುಗಳನ್ನು ಅರ್ಥ ಮಾಡಿಕೊಳ್ಳಲು ತನಗೆ ಸಹಾಯ ಮಾಡಿದ ಸ್ಥಳೀಯ ಪಂಡಿತರನ್ನು ಮರೆಯದೆ ಜ್ಞಾಪಿಸಿಕೊಳ್ಳುತ್ತಾನೆ. ಅವರ ಒಂದು ದೊಡ್ಡ ಪಟ್ಟಿಯನ್ನೇ ತಯಾರು ಮಾಡಿ, ಗೌರವ ಸೂಚಿಸುತ್ತಾನೆ.[1]

“ಮೊಹಮ್ಮದನ್‌ರ ದಾಳಿಯಿಂದ ಮತ್ತು ತೆಲುಗು ಲೇಖಕರಿಂದ ನಿರ್ಲಕ್ಷಗೊಳಗಾದ” (ಮಾಂಟೇನ, ೨೦೦೫: ೫೧೫-೫೨೬) ತೆಲುಗು ಸಾಹಿತ್ಯದ ಅಧೋಗತಿಯನ್ನು ತಪ್ಪಿಸಿ ಅದರ ಪುನುರುಜ್ಜೀವನಕ್ಕೆ ಸ್ವ-ಪ್ರೇರಿತವಾದ ಬ್ರೌನ್ ಕಂಕಣಬದ್ಧನಾಗಿದ್ದು ಮತ್ತು ಬ್ರಾಹ್ಮಣರ ಬಗ್ಗೆ ಇದ್ದ ಅಸಮಾಧಾನ ತೆಲುಗು ಸಾಹಿತ್ಯವನ್ನು ಮತೀಯವನ್ನಾಗಿಸಿತು ಎಂಬ ಅಪಾದನೆ ಬರಬಹುದು. ಆದರೆ ಅದು ಬ್ರೌನ್‌ನ ಬ್ರೌನ್‌ನ ತಪ್ಪು ಎಂದು ತಿಳಿಯಲಾಗದು. ಕ್ರಿಶ್ಚಿಯನ್ ಮತದ ಬದ್ಧ ಹಿಂಬಾಲಕನಾಗಿದ್ದ ಬ್ರೌನನು ಜಂಗಮ ಸಾಹಿತ್ಯದ ಮೇಲಾದ ಮುಸ್ಲಿಂ ಪ್ರಭಾವದ ‘ಕರಾಳ’ ಛಾಯೆಯನ್ನು ಹೋಗಲಾಡಿಸುವುದು ಅತ್ಯವಶ್ಯಕವೆಂದು ಮನಗಂಡು, ಅದನ್ನು ಮೇಲೆತ್ತುವ ಪ್ರಯತ್ನಗಳನ್ನು ಬ್ರೌನನ ಸಮರ್ಥನೀಯ ಅಂಶಗಳಾಗಿದ್ದವು. ಮತೀಯ ಅಂಶಗಳ ಪರಿಧಿಯೊಳಗೆ ಲಿಂಗಾಯತ ಸಾಹಿತ್ಯವನ್ನು ಗುರುತಿಸಿದ್ದು ವಾಸ್ತವ ಪರಿಸ್ಥಿತಿಯಲ್ಲಿ ಇದ್ದ ಮತೀಯ ಸಾಹಿತ್ಯ / ಪರಂಪರೆಗಳ ಪ್ರತಿಧ್ವನಿಯಾಗಿತ್ತು. ಅಂದರೆ ಜಂಗಮರು, ಜೈನರು ಮತ್ತು ವೈಷ್ಣವರು ತಮ್ಮ ಸಾಹಿತ್ಯ-ಪರಂಪರೆಗಳನ್ನು ತಮ್ಮ ಮತದ ಮೂಗಿನ ನೇರಕ್ಕೆ ಗುರುತಿಸಿಕೊಳ್ಳುತ್ತಿದ್ದರು. ಆದಾಗ್ಯು ಮುಖ್ಯವಾಹಿನಿಯಿಂದ ದೂರಕ್ಕೆ ತಳಲ್ಪಟ್ಟ ಸಂಸ್ಕೃತೇತರ ಜಂಗಮ ಸಾಹಿತ್ಯವನ್ನು ವಿಶೇಷಿಕರಿಸುವುದು ಅವನ ಉದ್ದೇಶವಾಗಿತ್ತು. ಈ ಪ್ರಯತ್ನಗಳು ಬ್ರೌನನ ತೌಲನಿಕ ದೃಷ್ಟಿಕೋನವನ್ನು ಸಂಕುಚಿತಗೊಳಿಸಿದವು. ಹೀಗಾಗಿ ಲಿಂಗಾಯತ ಸಾಹಿತ್ಯ ಪರಂಪರೆಗಳು ಮತ್ತು ಮುಸ್ಲಿಂ ಸಾಹಿತ್ಯ ಪರಂಪರೆಗಳ ನಡುವೆ ಉಂಟಾದ ಸಂಕೀರ್ಣಮಯ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಲು ಬ್ರೌನ್ ವಿಫಲನಾದ.

ವುರ್ಥನ ವಿಷಯ ಭಿನ್ನವಾದದ್ದು. ಅವನ ಭಾಷಾಂತರಗಳಲ್ಲಿ ಲಿಂಗಾಯತ ಮತವನ್ನು ಪ್ರೊಟೆಸ್ಟಂಟ್ ಕ್ರಿಶ್ಚಿಯನ್ ಮತಕ್ಕೆ ಹೋಲಿಸಿ, ಸಮಾನಾಂತರವನ್ನು ಬಯಸುವುದಿಲ್ಲ. ಬ್ರೌನನಿಗೆ ಹೋಲಿಸಿದರೆ, ವುರ್ಥ್ ತನ್ನ ಭಾಷಾಂತರದಲ್ಲಿ ಅತ್ಯಂತ ಜಾಗರೂಕತೆಯನ್ನು ವಹಿಸಿ, ಮೂಲ ಪಠ್ಯದ ಮೇಲೆ ಅನೇಕ ಭಾಷಿಕ ನಿರ್ಬಂಧಗಳನ್ನು ಹೇರುತ್ತಾನೆ. ಬ್ರೌನ್ ಹಾಗೂ ಮತ್ತಿತರ ಪಾಶ್ಚಾತ್ಯ ವಿದ್ವಾಂಸರ ಹಾಗೆ ಲಿಂಗಾಯತರ ಬ್ರಾಹ್ಮಣ-ವಿರೋಧಿ ವಿಚಾರಗಳು, ಏಕದೇವೋಪಾಸನೆ ಅಥವಾ ಅವರ ಪ್ರಗತಿಪರ ವಿಚಾರಗಳ ಬಗ್ಗೆ ಅವನು ಎಲ್ಲಿಯೂ ಪ್ರಸ್ತಾಪಿಸುವುದಿಲ್ಲ. ಪುರಾಣಗಳಲ್ಲಿ ಕಾಣುವ ಬ್ರಾಹ್ಮಣ ವಿರೋಧಿ ಭಾವನೆಗಳನ್ನು ಅವನು ಲಿಂಗಾಯತರ ಜಾತೀಯತೆ ಎಂದು ವ್ಯಾಖ್ಯಾನಿಸುತ್ತಾನೆ. “ಅನೇಕ ಶತಮಾನಗಳಿಂದ ಉಳಿದುಕೊಂಡು ಬಂದಿರುವ” (ವುರ್ಥ್, ೨೦೦೭: ೫.೧೯).[2] ಲಿಂಗಾಯತರ “ಮೂರ್ತಿ ಪೂಜೆ” ನಂಬಿಕೆಯನ್ನು ವುರ್ಥ್ ತನ್ನ ಮತದ ಪುರಾತನ ಒಡಂಬಡಿಕೆಯಲ್ಲಿ ಕಾಣುವ ಕೆಲವೊಂದು ಮೂಢನಂಬಿಕೆಗಳಿಗೆ ಹೋಲಿಸುತ್ತಾನೆ. ಐರೋಪ್ಯರ ಪುರಾತನ ಸಮಾಜದಲ್ಲಿ ಅವನು ಲಿಂಗಾಯತರ ಊಗಿನ ಅಭಿವೃದ್ಧಿ ಹೊಂದದ, ಪ್ರತಿಗಾಮಿತನಕ್ಕೆ ಹೋಲಿಸಿ, ಆಧುನಿಕ ಐರೋಪ್ಯ ಮತ್ತು ಕ್ರಿಶ್ಚಿಯನ್ ಮತವನ್ನು ಔನ್ಯತ್ಯಗೊಳಿಸುತ್ತಾನೆ. ಲಿಂಗಾಯತರು ಕ್ರಿಶ್ಚಿಯನ್ನರ ಹಾಗೆ ಪ್ರಗತಿಪರ ಹಾಗೂ ಪ್ರೌಢಿಮೆಯನ್ನು ಹೊಂದಬೇಕು ಎಂದು ಪರೋಕ್ಷವಾಗಿ ಕಿವಿಮಾತನ್ನು ಹೇಳುತ್ತಾನೆ. ಸೈದ್ಧಾಂತಿಕವಾಗಿ ಮತಕ್ಕೆ ತನ್ನ ಮತದ ಪ್ರಚಾರಕನಾಗಿ ಲಿಂಗಾಯತ ಮತವನ್ನು ಕ್ರಿಶ್ಚಿಯನ್ ಮತಕ್ಕೆ ಸಮನಾಗಿ ಅರ್ಥ ಮಾಡಿಕೊಳ್ಳಲು ಅವನಿಗೆ ಸಾಧ್ಯವಿರಲಿಲ್ಲ ಮತ್ತು ಇಷ್ಟವೂ ಇರಲಿಲ್ಲ. ತಾನು ಹೋದಡೆಯಲೆಲ್ಲಾ ಲಿಂಗಾಯತರ ಬಹುದೇವೋಪಾಸನೆ, ಮೂಢನಂಬಿಕೆಗಳು, ಪರ ಮತ ದ್ವೇಷವನ್ನು ವರ್ಥ್ ಗಮನಿಸಿದುದರಿಂದ ಅವರನ್ನು ಪ್ರಶಂಶಿಸುವುದಕ್ಕೆ ಯಾವುದೇ ಉತ್ತಮಾಂಶಗಳನ್ನು ಕಾಣಲಿಲ್ಲ. ಲಿಂಗಾಯತರ ವಿಚಾರದಲ್ಲಿ ಏಕದೇವೋಪಾಸನೆ, ಆಚಾರದಲ್ಲಿ ಬಹುದೇವೋಪಾಸನೆಯು ವುರ್ಥನ ಟೀಕೆಯನ್ನು ಸಮರ್ಥಿಸುತ್ತಿದ್ದವು.

ಇದುವರೆಗು ನಡೆದ ಚರ್ಚೆಯ ಹಿನ್ನೆಲೆಯನ್ನು ವಸಾಹತುಶಾಹಿಯ ಬಗ್ಗೆ ಕೆಲವೊಂದು ವಿಷಯಗಳನ್ನು ನಾವು ಗಮನದಲ್ಲಿಟ್ಟು ಕೊಳ್ಳಬೇಕಾಗುತ್ತದೆ. ವಸಾಹತುಶಾಹಿಯು ಭಾರತದಲ್ಲಿನ ಸಾಂಸ್ಕೃತಿಕ ವೈವಿಧ್ಯತೆಯನ್ನು ಅಳಿಸಿ, ಅವುಗಳ ಪ್ರಾತಿನಿಧ್ಯದ ಸಂಚಾರವನ್ನು ನಿಯಂತ್ರಿಸಲು ಎಂದು ತಿಳಿಯುವುದು ಸರಳೀಕರಣವಾಗುತ್ತದೆ. ಬದಲಾಗಿ ಭಾಷಾಂತರದ ಪ್ರಕ್ರಿಯೆ ಸಾಹಿತ್ಯದ ವ್ಯಾಖ್ಯಾನ ಮತ್ತು ಸ್ವೀಕರಣವಾಗುತ್ತದೆ. ಹಿಂದೆಂದು ಇರದ ರೀತಿಯಲ್ಲಿ ಗೊಂದಲಕ್ಕೀಡು ಮಾಡಿತು. ೨೦ನೇ ಶತಮಾನದ ಮೊದಲ ದಶಕಗಳಲ್ಲಿ ಕರ್ನಾಟಕದ ಲಿಂಗಾಯತರ ರಾಷ್ಟ್ರೀಯ ಭಾವನೆಯ ಬ್ರೌನನ ಕೃತಿಗಳನ್ನು ಹೃತ್ಪೂರ್ವಕವಾಗಿ ಸ್ವೀಕರಿಸಿದಂತೆ, ವುರ್ಥನ ಭಾಷಾಂತರಗಳನ್ನು ಸ್ವೀಕರಿಸಲಿಲ್ಲ. ಅವುಗಳ ಜೊತೆಗೆ ತಮ್ಮ ಐಡೆಂಟಿಟಿಯನ್ನು ಗುರುತಿಸಿಕೊಳ್ಳಲಿಲ್ಲ. ಆದರೆ ಇತ್ತೀಚಿನ ವಸಾಹತೋತ್ತರ ಸಿದ್ಧಾಂತಗಳು ಅಥವಾ ವಿಮರ್ಶಾ ವಿಧಾನವು ಲಿಂಗಾಯತ ಸಾಹಿತ್ಯಗಳ ವಸಾಹತುಶಾಹಿ ಹಾಗೂ ರಾಷ್ಟ್ರೀಯತೆಯ ವಿಚಾರ ಧಾರೆಯನ್ನು ಮತ್ತು ಅದರ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಮಿತಿಗಳನ್ನು ಪ್ರದರ್ಶಿಸಿವೆ. ಪ್ರಸ್ತುತ ಲೇಖನವು ತೇಜಸ್ವಿನಿ ನಿರಂಜನರು ಭಾವಿಸುವ ಹಾಗೆ “ನಾವು ಯಾರು ಮತ್ತು ನಮ್ಮ ‘ಸ್ವ’ದ ಪರಿಕಲ್ಪನೆಯು ಯಾವ ಸಂಕೀರ್ಣತೆಯಿಂದ ಕೂಡಿದೆ” ಎಂಬುದನ್ನು (ನಿರಂಜನ, ೧೯೯೪: ೧೮೬) ಅರ್ಥ ಮಾಡಿಕೊಳ್ಳಲು ಒಂದು ಸಣ್ಣ ಹೆಜ್ಜೆಯನ್ನು ಇಟ್ಟಿದೆ.

ಉಲ್ಲೇಖಿತ ಕೃತಿಗಳು ಮತ್ತು ಲೇಖನಗಳು

೧.        ಅಲಗೋಡಿ, ಎಸ್.ಡಿ.ಎಲ್. ೧೯೯೬. ‘The Impact of the Basel Mission on the Socio-Cultural change in the Life of the Church and Society in South Canara’ in indian Chruch History Review, ಸಂ. ೩೨, ಸಂ. ೧: ೨೧-೪೭.

೨.        ದಿಂಗ್ವೇನಿ, ಅನುರಾಧ ಮತ್ತು ಕ್ಯಾರೊಲ್ ಮೇಯರ್. ೧೯೯೫. ‘Introduction in Between Languages and Culture: Translation and Cross-cultural Text, ಅನುರಾಧ ದಿಂಗ್ವೇನಿ ಮತ್ತು ಕ್ಯಾರೋಲ್ ಮೇಯರ್ (ಸಂಪಾದಕರು), ಪಿಟ್ಸ್ ಬರ್ಗ್ ಮತ್ತು ಲಂಡನ್: ಯೂನಿವರ್ಸಿಟಿ ಆಫ್ ಪಿಟ್ಸ್ ಬರ್ಗ್ ಪ್ರೆಸ್.

೩.        ಬಸವನಾಳ, ಎಸ್.ಎಸ್. ಮತ್ತಿತರರು. ೧೯೩೪. ‘ಮುನ್ನುಡಿ’, ಚೆನ್ನಬಸವ ಪುರಾಣ (ಭಾಗ-೧), ವೀರಭದ್ರಪ್ಪ ಹಾಲಭಾವಿ ಮತ್ತು ಎಸ್.ಎಸ್. ಬಸವನಾಳ್ (ಸಂಪಾದಕರು), ಧಾರವಾಡ: ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ, ೧-೨೪.

೪.        ಬ್ಯಾಸ್ನೆಟ್ ಸೂಸನ್ ಮತ್ತಿತರರು, ೧೯೯೯. Post-colonial Translation: Theory and Practice, ರೂಟ್ಲೆಡ್ಜ್: ಲಂಡನ್.

೫.        ಬ್ಲ್ಯಾಕ್ ಬರ್ನ್‌, ಸ್ಟುವರ್ಟ್ ಮ್ತು ವಸುಧಾ ದಾಲ್ಮಿಯ. ೨೦೦೪. ‘Introduction’ in India’s Literary History: Essays on the Nineteenth Century, ಬ್ಲ್ಯಾಕ್ ಬರ್ನ್‌ಮ ಸ್ಟುವರ್ಟ್ ಮತ್ತು ದಾಲ್ಮಿಯ (ಸಂಪಾದಕರು) ಡೆಲ್ಲಿ: ಪರ್ಮನೆಂಟ್ ಬ್ಲಾಕ್.

೬.        ಬ್ರೌನ್, ಸಿ.ಪಿ. ೧೮೪೦. “ Account of the Basava Puran:- The principal Book used as a religious Code the Jangams”, Madras Journal of Literature and Science, ಅಕ್ಟೋಬರ್.

೭.        —- ೧೮೭೧. `Essay on the Creed and Customs of the Jangams’, The Journal of Royal Asiatic Society of Great Britain and Ireland, ಸಂ. ೫, ಲಂಡನ್.

೮.        —- ೧೯೯೮. (೧೮೪೦). `Essay on the Creed, Customs and Literatre of the Jangams’, Selecated Eassays of C.P. Brown (1798-1884) on Telugu Literature and Culutre. ಜಿ.ಎನ್. ರೆಡ್ಡಿ (ಸಂಪಾದಕ), ಪ್ರೊ. ಜಿ.ಎನ್. ರೆಡ್ಡಿ ೬೦ನೇ ಹುಟ್ಟು ಹಬ್ಬದ ಗೌರವ ಸಮಿತಿ.

೯.        —- ೧೯೭೮. Literary Autobiography of C.P. Brown, ಜಿ.ಎನ್. ರೆಡ್ಡಿ ಮತ್ತು ಬಂಗೋರಿ (ಸಂಪಾದಕರು), ತಿರುಪತಿ: ಶ್ರೀ ವೆಂಕಟೇಶ್ವರ ವಿಶ್ವಿವಿದ್ಯಾಲಯ.

೧೦.      ದುಬೆ, ಸೌರಭ. ೨೦೦೪. “Colonial Registers of a Vernacular Christianity: Conversion to Translation”, Economic and Political Weekly, ಸಂ. ೩೯, ಸಂಖ್ಯೆ. ೨.

೧೧.      ಜೆಂಕಿನ್ಸ್. ಪಿ. ಮತ್ತು ಜೆ.ಎಮ್. ಜೆಂಕಿನ್ಸ್ (ಭಾಷಾಂತರ) ೨೦೦೭ Journeys and Encounters: Religion, Socitey and the Basel Mission in North Karnataka 1837-1852. Documents on the Basel Mission in North Karnataka. ವೆಬ್ ಸೈಟ್: www.library.yale.adu/div/fe/Karnataka.htm. ೨೨ನೇ ಏಪ್ರಿಲ್, ೨೦೧೦ ದಿನದಂದು ಇದ್ದಂತೆ.

೧೨.      ಕಟ್ಟೆಬೆನ್ನೂರ, ಪೌಲ್ ಜೆ. ೧೯೬೫. “ History of Shagoti Church” (ಅಪ್ರಕಟಿತ ಲೇಖನ). ಇದನ್ನು ಮಂಗಳೂರಿನ ಥಿಯಾಲಾಜಿಕಲ್ ಕಾಲೇಜ್ ನಿಂದ ಪಡೆದು ಕೊಳ್ಳಲಾಯಿತು.

೧೩.      ಮಾಂಟೇನ, ರಮಾ ಸುಂದರಿ. ೨೦೦೫.  “Vernacular futures: Colonial philology and the Idea of history in nineteenth-century south India”, The Indian Economical And Social History Review, ೪೨, ೪: ೫೧೩: ೩೪.

೧೪.      ಮುಖರ್ಜಿ, ಸುಜಿತ್. ೧೯೯೪. “Translation as New Writing”, in Translation As Discovery and Other Essays in Indian Literature in English Translation, ಲಂಡನ್: ಸಂಗಮ.

೧೫.      ಮುಲ್ಲೆನ್ಸ್, ಜೋಸಫ್. ೧೮೫೪. “The German Evangelical Mission”, Missions in South India, ಲಂಡನ್: ಡಬ್ಲ್ಯು. ಎಚ್. ಡಾಲ್ಟನ್ ಕಾಕ್ಸ್ ಪರ್ ಸ್ಟ್ರೀಟ್.

೧೬.      ಮುತ್ತಣ್ಣ. ಐ.ಎಮ್. ೧೯೯೬. ೯ನೇಯ ಅಧ್ಯಾಯ, ಪಾಶ್ಚಾತ್ಯ ವಿದ್ವಾಂಸರ ಕನ್ನಡ ಸೇವೆ, ಸಂಪುಟ II, ಮೈಸೂರು.

೧೭.      ನಾರಾಯಣ ರಾವ್, ವೆಲ್ ಚೆರು. ೧೯೯೦. Siva’s Warriors: The Basava Purana of Palkuriki Somanatha, ತೆಲುಗಿನಿಂದ ಭಾಷಾಂತರ, ಸಹಾಯಕ ಭಾಷಾಂತರಕಾರವಾಗಿ ಜೆನೆ ಎಚ್. ರೋಘೈರ್, ನ್ಯೂ ಜೆರ್ಸಿ: ಪ್ರೀನ್ಸ್ ಟನ್ ಯೂನಿವರ್ಸಿಟಿ ಪ್ರೆಸ್.

೧೮.      —- ೨೦೦೪. “Print and Prose: Pundits, Karanams, and the East India Company in the Making of Modern Telugu”, India’s Literary History: Essays on the Nineteenth Century, ಸಂ. ಸ್ಟುವರ್ಟ್ ಬ್ಲ್ಯಾಕ್ ಬರ್ನ್ ಮತ್ತು ವಸುಧಾ ದಾಲ್ಮಿಯ, ಪರ್ಮನೆಂಟ್ ಬ್ಲ್ಯಾಕ್: ದೆಲ್ಲಿ.

೧೯.      ನಾಗರಾಜ, ಡಿ.ಆರ್. ೧೯೯೬. ಸಾಹಿತ್ಯ ಕಥನ, ಅಕ್ಷರ: ಹೆಗ್ಗೋಡು.

೨೦.      ನಿರಂಜನ, ತೇಜಸ್ವಿನಿ. ೧೯೯೪. Siting Translation: History, Post-structuralism and the Colonical Context, ಬರ್ಕ್ಲಿ, ಲಾಸ್ ಎಂಜೆಲ್ಸ್, ಲಂಡನ್: ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯ ಪ್ರೆಸ್.

೨೧.      ಓಡ್ಡಿ, ಜೆಫ್ರಿ ಎ. ೨೦೦೬. (೨೦೦೬) Imagined Hinduism: British Protestant Missionary Constructions of Hinduism, ೧೭೯೩-೧೯೦೦, ನ್ಯೂ ದೆಲ್ಲಿ: ಸೇಜ್.

೨೨.      ರೆಡ್ಡಿ, ಜಿ.ಎನ್. ೧೯೭೭. ಬ್ರೌನ್ ಲೇಖಲು, ತಿರುಪತಿ: ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ.

೨೩.      ಭಾರತದ ಪಶ್ಚಿಮ ಕರಾವಳಿಯ ಬಗ್ಗೆ ಜರ್ಮನ್ ಇವಾಂಜೆಲಿಕಲ್ ಮಿಷಿನಗಾಗಿ ಬರೆಯಲ್ಪಟ್ಟ ೧೧ರಿಂದ ೧೬ರ ಮಾದರಿಗಳು (೧೮೫೧-೫೬), ಕ್ಯಾನರೀಸ್ ಮಿಶಿನ್ ಪ್ರೆಸ್. ಮಂಗಳೂರ್ ನಲ್ಲಿ ಪ್ರಕಟಿತ.

೨೪.      ಶ್ಮಿತರಮೆನ್, ಪೀಟರ್ ಎಲ್. ೨೦೦೧. Telugu Resurgence: C.P. Brown and Cultural Consolidation in Ninteenth-century South India, ನ್ಯೂ ದೆಲ್ಲಿ: ಮನೋಹರ್.

೨೫.      ತವಕೋಲಿ ತರ್ಗಿ, ಮೊಹಮ್ಮದ್. ೨೦೦೩. `Orientalism’s Genesis Amnesia’, Antimonies of Modernity: Essays on Race, Orient, Nation, ವಸಂತ್ ಕೈವರ್ ಮತ್ತು ಶೇತ ಮಜುಂಮ್ದಾರ್ (ಸಂಪಾದಕರು), ಡುರ್ ಹಾಮ್: ಡ್ಯೂಕ್ ಯೂನಿವರ್ಸಿಟಿ ಪ್ರೆಸ್.

೨೬.      ಟ್ರಾಟ್ ಮನ್, ಥಾಮಸ್ ಆರ್. ೨೦೦೯. ‘The Missionary and the Orientalist’, in Ancient to Modern: Religion, Power and Community in India, ಇಶಿತ ಬ್ಯಾನರ್ಜಿ ಮತ್ತಿತರರು (ಸಂಪಾದಕರು), ನ್ಯೂ ದೆಲ್ಲಿ: ಓಯೂಪಿ.

೨೭.      ರವೀಂದ್ರನಾಥ, ಕೆ. ೨೦೦೦. ಹಂಪೆಯ ವೀರಶೈವ ಮತಗಳು ಮತ್ತು ಕನ್ನಡ ಸಾಹಿತ್ಯ, ವಿಜಯನಗರ ಅಧ್ಯಯನ, ಎಮ್.ವಿ ಕೃಷ್ಣಪ್ಪ ಮತ್ತು ಚೆನ್ನಬಸಪ್ಪ ಪಾಟೀಲ್, ಸಂ.೫, ಮೈಸೂರ್: ಪ್ರಾಚ್ಯ ವಸ್ತು ಸಂಗ್ರಹಾಲಯ.

೨೮.      ವಿಲ್ಸ್ ನ್, ಎಚ್.ಎಚ್. ೧೯೭೮. `Two Lectures on the Religious Practices and Opinions of the Hindus’. in Religions of the Hindus: Essays and Lectures by H.H. Wilson ನ್ಯೂ ಡೆಲ್ಲಿ: ಕಾಸ್ಮೊ.

೨೯.      ವುರ್ಥ್, ಜಿ.ಎ. ೧೮೬೩-೬೬. `The Pasava Purana of the Lingaits’, The Journal of the Bombay Pranch of the Royal Asiatic Society, ಸಂ. ೮ (೨೪), ಪು. ೬೫-೯೭.

೩೦.      ವಾಸವಿ, ಎ.ಆರ್. ೧೯೯೯. Harbingers of Rain: Land and Life in South India, ನ್ಯೂ ದೆಲ್ಲಿ: ಓಯುಪಿ.

[1] ಇದರೆ ಬಗ್ಗೆ ನೋಡಿ.P.Brown. ಜಿ.ಎನ್. ರೆಡ್ಡಿ ಮತ್ತು ಬಂಗೋರಿ (ಸಂ), ತಿರುಪತಿ: ಶ್ರೀ ವೆಂಕಟೇಶ್ವರ ವಿ.ವಿ.

[2] ಪೌಲ್ ಜೆಂಕಿನ್ಸ್ ರ ಭಾಷಾಂತರ ನೋಡಿ (೨೦೦೭). ಜೆಫ್ರಿ ಒಡ್ಡಿ ಎಂಬ ವಿದ್ವಾಂಸರು ಪ್ರೊಟೆಸ್ಟಂಟ್ ಮಿಶಿನರಿಗಳು “ಮೂರ್ತಿ ಪೂಜೆಯ ರಾಕ್ಷಸಿ ಗೂಣವನ್ನು” (೨೦೦೬: ೨೪) ಟೀಕೆ ಮಾಡುತ್ತಿದ್ದರು ಎಂದು ಅನೇಕ ಉದಾಹರಣೆಗಳ ಮೂಲಕ ತಿಳಿಸುತ್ತಾರೆ. ೧೯ನೇ ಶತಮಾನದ ಮೊದಲ ದಶಕದಲ್ಲಿ ಭಾರತದ ಅನೇಕ ಪ್ರದೇಶಗಳಲ್ಲಿ ನೆಲೆಸಿದ್ದ ಪ್ರೊಟೆಸ್ಟಂಟ್ ಪಾದ್ರಿಗಳು ಮೂರ್ತಿ ಪೂಜೆಯ ಅಂಧ ನಂಬಿಕೆಯ ವಿರುದ್ಧ ಸಮಾನ ವಿಚಾರಗಳನ್ನು ಮತ್ತು ಸಹಮತವನ್ನು ಹೊಂದಿದ್ದರೆಂದು ತಿಳಿಸುತ್ತಾನೆ.