ಭಾಗ

ಶಾರದೆಯೆಂಬುವವಳ ಬಾಯ ಕಟ್ಟಿ’ :
ವಸಾಹತುಶಾಹಿ
, ಪೌರಾತ್ಯವಾದ ಮತ್ತು ಲಿಂಗಾಯತ ಕಥನಗಳು

ಲಿಂಗಾಯತ ಸಮುದಾಯ, ಧಾರ್ಮಿಕ, ಚರಿತ್ರೆ ಮತ್ತು ಸಾಹಿತ್ಯಗಳ ಆಧುನಿಕ ಅಧ್ಯಯನಗಳನ್ನು ಮೊದಲು ಪ್ರಾರಂಭಿಸಿದವರು ಪಾಶ್ಚಾತ್ಯ ವಿದ್ವಾಂಸರು. ಬ್ರಿಟಿಷ್ ಆಡಳಿತಗಾರರು, ಅವರ ಸಿಬ್ಬಂದಿ ವರ್ಗದವರು ಮತ್ತು ಕ್ರಿಶ್ಚಿಯನ್ ಪಾದ್ರಿಗಳು ಲಿಂಗಾಯತ ಸಮಾಜ, ಧರ್ಮ, ತತ್ವ, ಸಾಮಾಜಿಕ ಆಚಾರ -ವಿಚಾರಗಳು, ವಿಭಿನ್ನ ಮತ ಪಂಥಗಳು, ದೇವರು – ದೇವತೆಗಳ ಬಗ್ಗೆ ಮಾಹಿತಿಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿದರು. ಜನಗಣತಿ, ಗೆಜೆಟ್ ಹಾಗೂ ಸ್ಥಳೀಯ ಸರ್ವೇಗಳ ಮೂಲಕ ಲಿಂಗಾಯತರ ಬಗ್ಗೆ ಆಧುನಿಕ – ವೈಜ್ಞಾನಿಕ ಮಾದರಿಯ ಅಧ್ಯಯನಕ್ಕೆ ನಾಂದಿ ಹಾಡಿದರು. ಈ ರೀತಿಯಾಗಿ ಕ್ರೋಡಿಕರಿಸಲ್ಪಟ್ಟ ಮಾಹಿತಿಗಳನ್ನು ಅವರು ಒಂದೇ ಉದ್ದೇಶಕ್ಕೆ ಬಳಸಲಿಲ್ಲ. ಆಡಳಿತ, ಕಾನೂನು, ಧಾರ್ಮಿಕ, ಇತ್ಯಾದಿ ಉದ್ದೇಶಗಳಿಗಾಗಿ ಅವನ್ನು ಉಪಯೋಗಿಸಿಕೊಂಡರು.[1]

ದಕ್ಷಿಣ ಕರ್ನಾಟಕದಲ್ಲಿ, ವಿಶೇಷವಾಗಿ ಲಿಂಗಾಯತರಿಗೆ ಸಂಬಂಧಿಸಿದಂತೆ, ಪಾಶ್ಚಾತ್ಯ ವಿದ್ವಾಂಸರಾದ ಬುಕನಾನ್, ಮುರ‍್ರೆ ಹ್ಯಾಮಿಕ್ ಮತ್ತು ಮಾರ್ಕ್ ವಿಲ್ಸ್‌ರು ಅನೇಕ ಸರ್ವೆಗಳನ್ನು ಮತ್ತು ಪ್ರವಾಸಿ ವಿವರಗಳನ್ನು ನೀಡಿದ್ದಾರೆ. ಈ ವಿವರಗಳು ಹತ್ತೊಂಬತ್ತನೇ ಶತಮಾನದ ಆದಿಯಲ್ಲಿದ್ದ ಲಿಂಗಾಯತರ[2] ಆಚಾರ – ವಿಚಾರಗಳನ್ನು, ಶಾಸ್ತ್ರ. ಸ್ಮೃತಿಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತವೆ. ಬುಕನಾನ್ ನು ೧೮೦೦ ರಿಂದ ೧೮೦೧ರಲ್ಲಿ ದಕ್ಷಿಣ ಕರ್ನಾಟಕದಲ್ಲಿ ಪ್ರವಾಸ ಕೈಗೊಂಡನು. ಅವರಿಂದ ಸಂಗ್ರಹಿಸಲ್ಪಟ್ಟ ಮಾಹಿತಿಗಳಲ್ಲಿ ಲಿಂಗಾಯತ ಮತ/ಜಾತಿಗಳ ಬಗ್ಗೆ ಸಾಕಷ್ಟು ವಿವರಗಳು ಸಿಗುತ್ತವೆ. ಅವನು ತನ್ನ ದಾಖಲೆಗಳಲ್ಲಿ ಲಿಂಗಾಯತರನ್ನು ಶಿವಭಕ್ತರೆಂದು ಗುರುತಿಸಿದ್ದಾನೆ. ಲಿಂಗಾಯತ ಎಂಬ ಪದವನ್ನು ಬುಕನಾನ್‌ನು ಎಲ್ಲಿಯೂ ಉಪಯೋಗಿಸಿಲ್ಲ. ಅಂದಿನ ಮೈಸೂರಿನಲ್ಲಿ ಲಿಂಗಾಯತರು ಅನೇಕ ಉಪ-ಜಾತಿಗಳಲ್ಲಿ ಚೆದುರಿ ಹೋಗಿದ್ದರು. ಶಿವಭಕ್ತರಲ್ಲಿ ಪ್ರಮುಖವಾಗಿ ಎರಡು ಪಂಗಡಗಳಿದ್ದವೆಂದು, ಅವರನ್ನು “ವೀರಶೈವರು’ ಮತ್ತು ‘ಸಾಮಾನ್ಯ ಶೈವ’ರು ಎಂದು ಬುಕನಾನ್‌ನು ತನ್ನ ಮಾಹಿತಿಗಳಲ್ಲಿ ದಾಖಲಿಸಿದ್ದಾನೆ.[3] ಅವನ ಮಾಹಿತಿಯ ಪ್ರಕಾರ ವೀರಶೈವ ಪಂಗಡದಲ್ಲಿ ಜಂಗಮರು ಮತ್ತು ಬಣಜಿಗರು ಪ್ರಮುಖ ಸ್ಥಾನದಲ್ಲಿದ್ದರೆ. ರೈತರು, ಕಲೆ-ಕಸಬುದಾರರು ಸಾಮಾನ್ಯ ಶೈವ ಪಂಗಡಕ್ಕೆ ಸೇರಿದ್ದರು.

೧೮೨೦ರ ಸುಮಾರಿನಲ್ಲಿ ಮಾರ್ಕ್ ವಿಲ್ಕ್ಸ್ ಮತ್ತು ಮುರ‍್ರೆ ಹ್ಯಾಮಿಕ್‌ರು ಮೈಸೂರು ಪ್ರಾಂತ್ಯದ ಜಂಗಮರ ಬಗ್ಗೆ ಗಮನೀಯ ವಿಷಯಗಳನ್ನು ಸಂಗ್ರಹಿಸಿದರು. ಅವರು “ವಿದ್ಯಾವಂತ ಜಂಗಮ” (ವಿಲ್ಕ್ಸ್ ಮತ್ತು ಹ್ಯಾಮಿಕ್, ೧೯೮೦: ೮೩೦)ರನ್ನು ಸಂಪರ್ಕಿಸಿದಾಗ ಲಿಂಗಾಯತರು ಮತ್ತು ಬ್ರಾಹ್ಮಣರ  ನಡುವಿನ ಪಾರಂಪಾರಿಕ ವೈಷಮ್ಯದ ಬಗ್ಗೆ ತಿಳಿದು ಬಂತು. ಇವರಿಬ್ಬರ ಪ್ರಕಾರ ದಖ್ಖನಿ ಪ್ರದೇಶದ ಕಲಿಯಾಣ್ ಎಂಬ ಸ್ಥಳದಲ್ಲಿದ್ದ “ಚೆಸ್ ಬಸ್ ಈಶ್ವರ” ಎಂಬುವವನು ಲಿಂಗಾಯತ ಮತದ ಸ್ಥಾಪಕ ಮತ್ತು ಉದ್ಧಾರಕ (ಅದೇ). ಇವರು ಅವರಿಗೆ ಲಿಂಗಾಯತ ಮತದ ಬಗ್ಗೆ ನಿರ್ದಿಷ್ಟವಾಗಿ ಅಥವಾ ಅದರ ಪ್ರತ್ಯೇಕತೆಯ ಬಗ್ಗೆ ಖಚಿತವಾಗಿ ಏನನ್ನೂ ಹೇಳಲಾಗಲಿಲ್ಲ.[4] ಚೆನ್ನಬಸವೇಶ್ವರನನ್ನು ಲಿಂಗಾಯತ ಮತದ ಸ್ಥಾಪಕನನ್ನಾಗಿ ಭಾವಿಸಿರುವುದು ಸೋಜಿಗವೆನಿಸುತ್ತದೆ. ಈ ಕಾಲದಲ್ಲಿಯೂ ಕೂಡ ಲಿಂಗಾಯತ ಮತ ಸಂಸ್ಥಾಪಕನ ಬಗ್ಗೆ ಲಿಂಗಾಯತರಲ್ಲಿ ಭಿನ್ನ, ಭಿನ್ನ ಅಭಿಪ್ರಾಯಗಳಿರುವುದು ಇವರಿಂದ ತಿಳಿದು ಬರುತ್ತದೆ.

*ಪ್ರಸಿದ್ಧ ಇತಿಹಾಸಕಾರರಾದ ಆರ್.ಎನ್. ನಂದಿಯವರ ಪ್ರಕಾರ ಲಿಂಗಾಯತ ಮತದ ಬಗ್ಗೆ ಪ್ರಥಮ ಉಲ್ಲೇಖವು ಎಚ್.ಎಚ್. ವಿಲ್ಸನ್‌ನ ಲೇಖನಗಳಲ್ಲಿ ಸಿಗುತ್ತದೆ. ಏಷ್ಯಾಟಿಕ್ ಸಂಶೋಧನೆಗೆ ಮೀಸಲಾದ ಸಂಚಿಕೆಯಲ್ಲಿ ಪ್ರಕಟವಾಗಿರುವ ಅವನ ಲೇಖನಗಳು ಲಿಂಗಾಯತ ಮತವನ್ನು ಹಿಂದು ಧರ್ಮದ ಅಂಗವೆಂದು ವಿವರಿಸಿದ್ದಾನೆ (ನಂದಿ, ೧೯೮೬: ೧೬೭). ಆದರೆ ವಿಲ್ಸನನಿಗೂ ಸಹ ಖಚಿತವಾಗಿ ಏನನ್ನೂ ಹೇಳಲು ಆಗಲಿಲ್ಲ. ಚಾರಿತ್ರಿಕ ಅಥವಾ ಯಾವುದೇ ಪಠ್ಯದ ದಾಖಲೆಗಳು ಸಾಕಷ್ಟು ಸಿಗದೇ ಆತ ತನ್ನ ಅಧ್ಯಯನವನ್ನು ಮಧ್ಯದಲ್ಲೇ ಕೈ ಬಿಟ್ಟನು. ಆದರೆ ಸಂಸ್ಕೃತ ಮೂಲದ ಬಸವ ಪುರಾಣವನ್ನು ಸಂಗ್ರಹಿಸಲು ಅವನು ಯಶಸ್ವಿಯಾದನು. ಈ ಪುರಾಣದ ಮೂಲಕ ಬಸವನ ಜೀವನ ಚರಿತ್ರೆಯನ್ನು ದಾಖಲಿಸಲು ಸಾಧ್ಯವಾಯಿತು. ಇವನ  ಅಪೂರ್ಣ ಕಾರ್ಯವನ್ನು ಸಿ.ಪಿ. ಬ್ರೌನನು ಪೂರ್ಣಗೊಳಿಸಿದನು. ಇದರ ಬಗ್ಗೆ ನಂತರ ಚರ್ಚೆ ಮಾಡಬಹುದು.

ಈಸ್ಟ್ ಇಂಡಿಯಾ ಕಂಪನಿಯ ಪ್ರಥಮ ಜನರಲ್ ಸರ್ವೇಯರ್ ಆಗಿದ್ದ ವಿಲ್ಸನ್ ಮೆಕೆಂಜಿಯು ೧೮೧೦ರ ಸುಮಾರಿನಲ್ಲಿ ಜೈನ ಪಂಡಿತನಾದ ದೇವಚಂದ್ರ ಎಂಬುವನನ್ನು ಕರ್ನಾಟಕದ ಚರಿತ್ರೆ ಬರೆಯಲು ನಿಯಮಿಸಿದನು. ದೇವಚಂದ್ರನಿಗೆ ಇಂಗ್ಲೀಷ್ ಬರುತ್ತಿದ್ದಿಲ್ಲವಾದ್ದರಿಂದ, ಕರ್ನಾಟಕ ಚರಿತ್ರೆಯನ್ನು ರಾಜಾವಳಿ ಕಥಾಸಾರ ಎಂದು ಕನ್ನಡದಲ್ಲಿ ಸಂಗ್ರಹಿಸಿದನು.[5] ಈ ಕೃತಿಯಲ್ಲಿ ಹನ್ನೆರಡನೇ ಶತಮಾನದ ಧಾರ್ಮಿಕ ಮತ್ತು ಸಾಮಾಜಿಕ ಜೀವನದ ಆಗು – ಹೋಗುಗಳ ಬಗ್ಗೆ ಸವಿಸ್ತಾರವಾದ ವಿವರಣೆಗಳನ್ನು ಚಿತ್ರಿಸುತ್ತಾ, ಬಸವನು ಬಿಜ್ಜಳನ ಅಸ್ಥಾನದಲ್ಲಿ ಶ್ರೀಮಂತ ಪ್ರಧಾನ ಮಂತ್ರಿಯಾಗಿದ್ದನೆಂದು; ತನ್ನ ಶ್ರೀಮಂತಿಕೆಯ ನೆರವಿನಿಂದ ಅನೇಕ ಕೆಳ ವರ್ಗದ ಜಾತಿಯವರನ್ನು ತನ್ನ ಲಿಂಗಾಯತ ಧರ್ಮಕ್ಕೆ ಮತಾಂತರಗೊಳಿಸಿದನು ಎಂದು ಬಣ್ಣಿಸಲಾಗಿದೆ. ಬಸವನು ಬಿಜ್ಜಳನನ್ನು ತನ್ನ ಅನುಯಾಯಿಗಳ ಸಹಾಯದಿಂದ ಕೊಲ್ಲಿಸಿ, ಕೂಡಲಸಂಗಮಕ್ಕೆ ಓಡಿ ಹೋದನು ಎಂದು ದೇವಚಂದ್ರನು ಲೇವಡಿ ಮಾಡಿದ್ದಾನೆ. ಪಾಶ್ಚಾತ್ಯ ವಿದ್ವಾಂಸರು ಭಾರತದ ಇತಿಹಾಸ ಬರೆಯಲು ಬ್ರಾಹ್ಮಣರನ್ನು ಮತ್ತು ಸಂಸ್ಕೃತಿ ಪಠ್ಯಗಳನ್ನು ಮಾತ್ರ ಆಧರಿಸಿದನು ಎಂಬ ಸಾಮಾನ್ಯ ನಂಬಿಕೆಯು ದೇವಚಂದ್ರನ ವಿಷಯದಲ್ಲಿ ಕೆಳಗಾಗುತ್ತದೆ. ಈ ಅಂಶಕ್ಕೆ ಸಂಬಂಧಿಸಿದಂತೆ ಸಿ.ಪಿ. ಬ್ರೌನ್[6] ಎಂಬುವವನ ಸಂಶೋಧನೆಯು ಸಹ ಒಂದು ಮೈಲಿಗಲ್ಲು.

ಬ್ರೌನ್‌ನು ಅಂದಿನ (೧೮೪೦ರ ದಶಕ) ಆಂಧ್ರ ಪ್ರದೇಶದ ಅಂಚೆ ಇಲಾಖೆಯಲ್ಲಿ ಪೋಸ್ಟ್ ಮಾಸ್ಟರ್ ಜನರಲ್ ಹುದ್ದೆಯಲ್ಲಿದ್ದವನು. ೧೮೪೦ರಲ್ಲಿ ಅವನು ಜಂಗಮರ ಬಗ್ಗೆ ಒಂದು ಸಣ್ಣ ಲೇಖನವನ್ನು ಪ್ರಕಟಿಸಿದನು. ಲೇಖನದ ಶೀರ್ಷೀಕೆಯು “Essays on the Creed, Customs and literature of the Jangamas” (೧೮೭೧ರಲ್ಲಿ ಮರು ಪ್ರಕಟಿತ) ಆಗಿದ್ದು, ಅದರಲ್ಲಿ ಬ್ರೌನ್‌ನು ಜಂಗಮರ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿದ್ದಾನೆ. ಅವನು ಲಿಂಗಾಯತರಲ್ಲಿ ಪ್ರಮುಖವಾಗಿ ಎರಡು ಮತಗಳನ್ನು ಗುರುತಿಸಿದನು. ಒಂದು ಬಸವ ಮತ. ಎರಡನೇಯದು ರೇಣುಕಾಚಾರ್ಯ ಮತ. ಲಿಂಗಾಯತ ಮತದ ಉದ್ಭವದ ಬಗ್ಗೆ ಈ ಎರಡೂ ಮತಗಳಲ್ಲಿ ಭಿನ್ನಾಭಿಪ್ರಾಯಗಳಿರುವುದನ್ನು ಅವನು ಗಮನಿಸಿದನು. ಬಸವ ಮತದ ಬಗ್ಗೆ ಅವನಿಗೆ ಒಲವಿದ್ದು, ರೇಣುಕಾಚಾರ್ಯ ಮತದ ಆಚಾರ್ಯದ ಬಗ್ಗೆ ಅಸಮಾಧಾನವಿದ್ದಂತೆ ಕಾಣುತ್ತದೆ. ಈ ಅಸಮಾಧಾನಕ್ಕೆ ಆಚಾರ್ಯರ ಬ್ರಾಹ್ಮಣತ್ವವೇ ಕಾರಣವಾಗಿದೆ. ಬ್ರೌನ್ ವಿವರಿಸುವ ಹಾಗೆ ರೇಣುಕಾಚಾರ್ಯನನ್ನು ಆರಾಧಿಸುತ್ತಿದ್ದ ಆರಾಧ್ಯರು ಬ್ರಾಹ್ಮಣರ ಆಚರಣೆಗಳಾದ ಸಂಧ್ಯಾವಂದನೆಯನ್ನು ತಮ್ಮಲ್ಲಿ ಅಳವಡಿಸಿಕೊಂಡಿದ್ದರು ಮತ್ತು ಅವರು ಸಾಮಾನ್ಯ ಜನರಿಂದ ದೂರವಿದ್ದರು. ಆರಾಧ್ಯರ ನಂಬಿಕೆಯ ಪ್ರಕಾರ ರೇವಣಾರಾಧ್ಯ, ಮರುಳಾರಾಧ್ಯ, ಏಕೋರಾಮೋರಾಧ್ಯ ಮತ್ತು ಪಂಡಿತಾರಾಧ್ಯರು ಬಸವನಿಗಿಂತ ಹಿಂದೆಯೆ ಇದ್ದವರು. ಅವರು ವೇದ, ಭಗವದ್ಗೀತ, ನೀಲಕಂಠ ಭಾಷ್ಯ ಮತ್ತು ಆಗಮ ಇತ್ಯಾದಿಗಳನ್ನು ಬಹಳ ಗೌರವದಿಂದ ಕಾಣುತ್ತಿದ್ದರೆಂದು ಬ್ರೌನ್‌ನ ವಿವರಣೆಗಳಿಂದ ತಿಳಿದು ಬರುತ್ತದೆ (ಬ್ರೌನ್, ೧೮೭೧: ೧೪೧-೧೪೬ ಮತ್ತು ೧೯೯೮: ೮೧-೧೫೦). ಬಸವಪುರಾಣವನ್ನು ಆಸಕ್ತಿಯಿಂದ ಅಭ್ಯಸಿಸಿದ ಬ್ರೌನ್‌ನು ಬಸವನ ಬ್ರಾಹ್ಮಣ ವಿರೋಧಿ ನೆಲೆಯನ್ನು ಹೊಗಳಿದ್ದಾನೆ. ಹದಿನಾರನೇ ಶತಮಾನದಲ್ಲಿ ಮಾರ್ಟಿನ್ ಲೂಥರನು ಕ್ರಿಶ್ಚಿಯನ್ ಧರ್ಮದ ಆಡಂಬರ ಮತ್ತು ಪುರಾತನ ಪದ್ಧತಿಗಳ ವಿರುದ್ಧ ಬಂಡಾಯವೆದ್ದಂತೆ, ಬಸವನು ಸಹ ಇಲ್ಲಿನ ಸ್ಥಳೀಯ ಬ್ರಾಹ್ಮಣರ ಜಾತಿ ಪದ್ಧತಿಯ ವಿರುದ್ಧ ಸಮರ ಸಾರಿದನೆಂದು ಬ್ರೌನ್‌ನು ವರ್ಣಿಸಿದ್ದಾನೆ. ಈ ತೌಲನಿಕ ವಿವರಗಳಿಗೆ ಬ್ರೌನ್ ವಚನಗಳನ್ನು ಆಧರಿಸಿದೆ ಹೋದದ್ದು ಆಶ್ಚರ್ಯಕರವಾಗಿದೆ. ಲೇಖನದ ಉದ್ದಕ್ಕೂ ಬ್ರೌನನು ವೀರಶೈವರ (ವಿಶೇಷವಾಗಿ ಬಸವ ಮತ) ಬ್ರಾಹ್ಮಣ ವಿರೋಧಿ ಭಾವನೆಗಳಿಗೆ ಹೆಚ್ಚು ಒತ್ತು ನೀಡಿದ್ದಾನೆ.[7] ಅಲ್ಲಮ ಹೆಸರಿನ ಮೂಲದ ಬಗ್ಗೆ ಬರೆಯುತ್ತಾ ಅಲ್ಲಮ ಎಂಬ ಹೆಸರು ಸಿರಿಯನ್ ಮತ್ತು ಅರೆಬಿಕ್ ದೇವರ ಹೆಸರನ್ನು ಹೋಲುತ್ತದೆ ಎಂದು ವಾದಿಸಿದ್ದಾನೆ (ಬ್ರೌನ್. ೧೯೯೮: ೧೦೬).

ಇದೇ ಶತಮಾನದ  ೬೦ರ ದಶಕದ ಕ್ರಿಶ್ಚಿಯನ್ ಮಿಷನರಿಗಳು ಲಿಂಗಾಯತ ಮತದ ಬಗ್ಗೆ ಸಾಕಷ್ಟು ಕೆಲಸ ಮಾಡಿದರು. ಮಿಷನರಿಗಳನ್ನು ಪ್ರಮುಖವಾಗಿ ಎದ್ದು ಕಾಣುವುದು ರೆ.ಜಿ.ಏ. ವುರ್ಥ್‌ನ ಅಧ್ಯಯನಗಳು. ಆತನು ಪ್ರೊಟೆಸ್ಟಂಟ್ ಪಾದ್ರಿಯಾಗಿದ್ದು, ಬಾಸೆಲ್ ಮಿಷನರಿಯ ಪ್ರಚಾರಕನಾಗಿ ಕಾರ್ಯ ಮಗ್ನನಾಗಿದ್ದನು. ಧಾರವಾಡದ ಆಸು-ಪಾಸಿನಲ್ಲಿ ಪ್ರಚಾರ ಕಾರ್ಯವನ್ನು ನಡೆಸುತ್ತಿದ್ದಾಗ ಆತನು ಅನೇಕ ಲಿಂಗಾಯತರ ಸಂಪರ್ಕ ಬೆಳೆಸಿದನು. ೧೮೫೩ರಲ್ಲಿ ಆತನು ಭೀಮಕವಿಯ ಬಸವ ಪುರಾಣವನ್ನು ಕನ್ನಡದಿಂದ ಇಂಗ್ಲಿಷ್ ಭಾಷೆಗೆ ಭಾಷಾಂತರ ಮಾಡಿದನು. ಇದರ ಸಂಕ್ಷಿಪ್ತ ಪ್ರತಿಯನ್ನು ೧೮೬೫ರ Journal of the Bombay Branch of Royal Asiatic Society ನಲ್ಲಿ ಪ್ರಕಟಿಸಲಾಯಿತು. ಇದೇ ಸಂಚಿಕೆಯಲ್ಲಿ ವುರ್ಥ್ ಮತ್ತೊಂದು ಭಾಷಾಂತರ ಚೆನ್ನಬಸವ ಪುರಾಣವನ್ನೂ ಸಹ ಪ್ರಕಟಿಸಲಾಯಿತು. ಈ ಭಾಷಾಂತರಕ್ಕೆ ಬರೆದ ಹಿನ್ನುಡಿಯಲ್ಲಿ ವುರ್ಥ ಲಿಂಗಾಯತರ ನಂಬಿಕೆಯ ಬಗ್ಗೆ ವ್ಯಂಗ್ಯವಾಡಿದ್ದಾನೆ. ಆಧುನಿಕ ಕಾಲದಲ್ಲಿ ಲಿಂಗಾಯತ ಧರ್ಮವನ್ನು ಪುನಃ ಉದ್ದರಿಸಲು ಬಸವ ಮತ್ತು ಚೆನ್ನಬಸವರು ಮತ್ತೊಮ್ಮೆ ಭೂಮಿಯಲ್ಲಿ ಅವತರಿಸಿ ಬರುತ್ತಾರೆಂದು ನಂಬಿದ್ದ ಲಿಂಗಾಯತರನ್ನು ವುರ್ಥ್ ಹಾಸ್ಯ ಮಾಡುತ್ತಾನೆ. ಅವರಿಬ್ಬರು ಪುನಃ ಅವತರಿಸಲು ವಿಫಲರಾದ್ದರಿಂದ, ಲಿಂಗಾಯತರ ಉದ್ದಾರಕ್ಕಾಗಿ ಮತ್ತು ಸಂಸ್ಕರಣಕ್ಕಾಗಿ ಕ್ರಿಶ್ಚಿಯನ್ ಪಾದ್ರಿಗಳು ಭಾರತಕ್ಕೆ ಬಂದಿರುವದಾಗಿ ವುರ್ಥ್ ಬರೆಯುತ್ತಾನೆ. ಮೇಲೆ ಉಲ್ಲೇಖಿಸಲ್ಪಟ್ಟ ಪುರಾಣಗಳ ಮೂಲ ಪ್ರತಿಗಳು ಪೂರ್ಣವಾಗಿ ಸಂಕಲಿಸಲ್ಪಡದಿದ್ದರೂ, ವುರ್ಥ್‌ನ ಭಾಷಾಂತರಗಳು ಲಿಂಗಾಯತ ಧರ್ಮದ ಬಗ್ಗೆ ಮತ್ತಷ್ಟು ಅಧ್ಯಯನ ಮಾಡಲು ದಾರಿದೀಪವಾದವು. ಇಲ್ಲಿ ಅತ್ಯವಶ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ ವುರ್ಥ್‌ನು ಸಹ ಶಿವಶರಣರ ವಚನಗಳ ಬಗ್ಗೆ ಇನ್ನೂ ಹೇಳುವುದಿಲ್ಲ.

ಇದುವರೆಗಿನ ಚರ್ಚೆಯಲ್ಲಿ ನಾವು ಲಿಂಗಾಯತರ ಬಗ್ಗೆ ವಿವಿಧ ಭಾಷಾ ಪ್ರದೇಶಗಳಲ್ಲಿ (ಆಂಧ್ರ ಮತ್ತು ಧಾರವಾಡ) ಆದ ಅಧ್ಯಯನದ ಪರಿಚಯ ಮಾಡಿಕೊಂಡೆವು. ಇದೇ ರೀತಿಯಲ್ಲಿ ಮೈಸೂರು ಪ್ರಾಂತ್ಯದ ಮಿಶಿನರಿ ಚಟುವಟಿಕೆಗಳನ್ನು ನಿರತರಾಗಿದ್ದ ರೆ.ಎಫ್. ಕಿಟಲ್ ಲಿಂಗಾಯತರ ಅಧ್ಯಯನಕ್ಕೆ ಮಹತ್ವರ ಕಾಣಿಕೆಯನ್ನು ನೀಡಿದ್ದಾನೆ.[8] ಕಿಟೆಲ್ ತನ್ನ ಸಂಶೋಧನ ಸಮಯದಲ್ಲಿ ಏಳು ಲಿಂಗಾಯತರ ಕಥೆಗಳನ್ನು ಪರಿಶೋಧಿಸಿ Indian Antiquery (೧೮೭೫)ಯಲ್ಲಿ ಪ್ರಕಟಿಸಿದನು. ಕ್ಯಾನರೀಸ್ (ಕನ್ನಡ)ನಲ್ಲಿ ಪ್ರಸಿದ್ಧಿಯಾಗಿದ್ದ ಲಿಂಗಾಯತರ ಪುರಾಣದ ಅನುಭವ ಶಿಖಾಮಣಿಯಿಂದ ತಾನು ಈ ಕಥೆಗಳನ್ನು ಆಯ್ದುಕೊಂಡಿದ್ದೇನೆಂದು ಕಿಟೆಲ್ ಬರೆದಿದ್ದಾನೆ (ಕಿಟೆಲ್, ೧೮೭೫: ೨೧೧). ಲಿಂಗಾಯತ ಸಾಹಿತ್ಯದ ಬಗ್ಗೆ ಸಾಕಷ್ಟು ಪರಿಚಯವಿದ್ದ ಕಿಟೆಲ್ ‘ಉಬೆಲ್ ಡನ್ ಅರ್ಸ್ಪ್ಂಗ್ ಡೆಸ್ ಲಿಂಗ್ ಕಲ್ಟಸ್ ಇನ್ ಇಂಡಿಯನ್’ (೧೮೭೬) ಎಂಬ ಜರ್ಮನ್ ಲೇಖನದಲ್ಲಿ ಲಿಂಗಾಯತರ ಧಾರ್ಮಿಕ ವಿಧಿಗಳ ಬಗ್ಗೆ ಕೆಲವು ಮಾಹಿತಿಗಳನ್ನು ಒದಗಿಸಿದ್ದಾನೆ. ಆತನ ಪ್ರಕಾರ ಲಿಂಗ ಪೂಜಾವಿಧಿಯು ದಕ್ಷಿಣದಲ್ಲಿ ಪ್ರಚಲಿತ ಆಗುವ ಮೊದಲು ಆಚರಣೆಯು ಉತ್ತರ ಭಾರತದಲ್ಲಿ ಜನಪ್ರಿಯವಾಗಿತ್ತು. ಆರ್ಯರು ಲಿಂಗ ಪೂಜಾವಿಧಿಯ ಮೂಲಕರ್ತರು, ಕ್ರಮೇಣವಾಗಿ ಉತ್ತರದಿಂದ ದಕ್ಷಿಣ ಭಾರತದಲ್ಲಿಯೂ ಲಿಂಗಪೂಜೆಯು ಜನಪ್ರಿಯವಾಯಿತು ಎಂದು ಕಿಟೆಲ್ ನಂಬಿದನು. ಲಿಂಗಪೂಜೆಯು ವೇದಕಾಲದ ಆಚರಣೆ ಎಂಬ ವಾದವು ಲಿಂಗಾಯತ ವಿದ್ವಾಂಸರಿಗೆ ಮುಂದೆ ಅನುಕೂಲವಾಗಿ ಪರಿಣಮಿಸಿತು. ಲಿಂಗಪೂಜೆಯ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಒದಗಿಸುವ ಲಿಂಗಾಯತ ಕೃತಿಗಳು ಮತ್ತು ಆ ಧರ್ಮವು ವೇದಕಾಲದಷ್ಟು ಪುರಾತನವಾದವು ಎಂದು ಲಿಂಗಾಯತರು ಉತ್ಸಾಹದಿಂದ ಹೆಮ್ಮೆ ಪಡಲು ಸಾಧ್ಯವಾಯಿತು.[9] ಕಿಟೆಲನ ಪ್ರಕಾರ ಅಲ್ಲಮ ಎಂಬ ಹೆಸರು ‘ಅಲ್ಲಾ’ ಎಂಬ ಮೂಲದಿಂದ ಉಂಟಾದುದು (ಮ್ಯಾಥ್ಯು. ೧೯೯೪: ೯೫). ಇಲ್ಲಿ ಗಮನಿಸಬೇಕಾಗುವುದೇನೆಂದರೆ ಕಿಟೆಲ್ ಮತ್ತು ಬ್ರೌನ್ ಅಲ್ಲಮ ಪ್ರಭುವಿನ ಬಗ್ಗೆ ಏಕವಾದವನ್ನು ಮಂಡಿಸಿರುವುವು. ಈ ತರಹದ ವಾದಗಳು ಲಿಂಗಾಯತರಿಗೆ ಆಗಾಗ ಇರುಸು – ಮುರಿಸು ಮಾಡುತ್ತಿತ್ತು. ಈಗಾಗಲೇ ಚರ್ಚಿಸಲ್ಪಟ್ಟಿರುವ ಶುಭೋದಯ ವಿವಾದವು ಇಂತಹ ವಾದಗಳಿಂದುಂಟಾಗುವ ಕಿಡಿಗೆ ಒಂದು ಸಣ್ಣ ಉದಾಹರಣೆ.

ಎ. ಬಾರ್ತ್‌ನ Religions of India (೧೮೮೧)ದಲ್ಲಿ ಲಿಂಗಾಯತರ ಬಗ್ಗೆ ಒಂದು ಸಂಕ್ಷಿಪ್ತ ವರದಿ ಇದೆ. ಬಾರ್ತನಿಗೆ ಸಹ ಲಿಂಗಾಯತರ ಬಗ್ಗೆ ಖಚಿತವಾಗಿ ಏನನ್ನೂ ಹೇಳಲು ಸಾಧ್ಯವಾಗಲಿಲ್ಲ. ಏಕೆಂದರೆ ಅವನ ಪ್ರಕಾರ ಲಿಂಗಾಯತ ಪುರಾಣ ಕಥೆಗಳು ಅಥವಾ ಗ್ರಂಥಗಳು ನಿಖರವಾದ ಚಾರಿತ್ರಿಕ ಆಧಾರಗಳಾಗಿರಲಿಲ್ಲ. ಹಾಗಾಗಿ ಲಿಂಗಾಯತರ ಚರಿತ್ರೆಯನ್ನು ವೈಜ್ಞಾನಿಕವಾಗಿ ಬರೆಯಲು ಸಾಧ್ಯವಿಲ್ಲವೆಂದು ಬಾರ್ತ್‌ನ ಅಭಿಪ್ರಾಯವಾಗಿತ್ತು. ಆದರೂ ಬಾರ್ತ್‌ನು ಲಿಂಗಾಯತರ ಬಗ್ಗೆ ಕೆಲವು ಮಾಹಿತಿಗಳನ್ನು ಒದಗಿಸಿದ್ದಾನೆ. ಅವುಗಳಲ್ಲಿ ಕೆಲವು ಬಸವನ ವ್ಯಕ್ತಿತ್ವಕ್ಕೆ ಸಂಬಂಧಿಸಿದುದಾಗಿದೆ. ಬಿಜ್ಜಳನು ಬಸವನ ಮೈದುನ. ಬಸವನ ಅಕ್ಕ ನಾಗಲಾಂಬಿಕೆಯ ಪತಿ. ಭಾರತೀಯ ವಿದ್ವಾಂಸರಲ್ಲೂ ಸಹ ಕೆಲವರು ಬಾರ್ತ್‌ನಿಗೆ ಸಹಮತವನ್ನು ವ್ಯಕ್ತ ಪಡಿಸಿದರು. ಅವರಲ್ಲಿ ಪ್ರಮುಖರಾದವರು ಪ್ರಸಿದ್ಧ ತತ್ವಜ್ಞಾರಾದ ಆರ್.ಜಿ. ಭಂಡಾರಕರ್‌ನ ಚಿಕ್ಕ, ಚಿಕ್ಕ ಲೇಖನಗಳು. ಅವರು ತಮ್ಮ ವಾದಗಳಿಗೆ ಲಿಂಗಾಯತರ ಸಂಸ್ಕೃತ ಪುರಾಣಗಳಾದ ಸಿದ್ಧಾಂತ ಶಿಖಾಮಣಿ, ಬಸವ ಪುರಾಣ ಮತ್ತು ಪ್ರಭುಲಿಂಗ ಲೀಲೆಗಳನ್ನು ಆಧಾರವಾಗಿಸಿಕೊಂಡರು. ಬಸವ ಮತ್ತು ಆತನ ಕಲ್ಯಾಣ ಕ್ರಾಂತಿಯ ಬಗ್ಗೆ ಲೇಖನಗಳನ್ನು ಬರೆದಿರುವ ಭಂಡಾರಕರ್‌ರಿಗೆ ಜೈನ ಕವಿಯಾದ ಧರಣಿ ಪಂಡಿತನ ವಿಜ್ಜಲರಾಯ ಚರಿತ್ರೆ ಮತ್ತು ಮೆಕೆಂಝಿಯ ಚಾರಿತ್ರಿಕ ದಾಖಲೆಗಳು ಮಹತ್ವದ ಮಾಹಿತಿಗಳನ್ನು ಒದಗಿಸಿದವು. ೧೯೧೩ರಲ್ಲಿ ಲಿಂಗಾಯತ ಧರ್ಮದ ಉಗಮ. ಬೆಳವಣಿಗೆಯ ಬಗ್ಗೆ ತಮ್ಮ Vaishnavism and Minor Religious System ಎಂಬ ಲೇಖನದಲ್ಲಿ ಅನೇಕ ಮಾಹಿತಿಗಳನ್ನು ಪ್ರಸಿದ್ಧಿಸಿದರು. ಅವರ ಪ್ರಕಾರ ಲಿಂಗಾಯತ ಮತವು ಬಸವನಿಗಿಂತ ನೂರು ವರ್ಷಗಳ ಮೊದಲೇ ಅಸ್ಥಿತ್ವದಲ್ಲಿತ್ತು. ಲಿಂಗಾಯತ ಮತದ ಸ್ಥಾಪನೆಯು ಆರಾಧ್ಯ ಬ್ರಾಹ್ಮಣರಿಂದ ಉಂಟಾಯಿತೆಂದು, ಪೂರ್ವದಲ್ಲಿ ಆರಾಧ್ಯ ಬ್ರಾಹ್ಮಣರು ಬೇರೆ ಯಾರು ಆಗಿರದೆ ಸ್ಮಾರ್ತ ಬ್ರಾಹ್ಮಣರಾಗಿದ್ದವರು. ಹೀಗೆ ಬ್ರಾಹ್ಮಣೇತರ ಮತವನ್ನು ಸ್ಥಾಪಿಸಿದರೂ ಸಹ ಆರಾಧ್ಯರು ಬ್ರಾಹ್ಮಣ ಆಚರಣೆಗಳನ್ನು ಮರೆಯಲ್ಲಿಲ್ಲವೆಂದು ಭಂಡರಕರ್‌ರ ವಾದ. [10]

೧೮೯೭ರ ಬಾಂಬೆ ಮತ್ತು ಮೈಸೂರು ಗೆಜೆಟಿಯರುಗಳಲ್ಲೂ ಸಹ ಲಿಂಗಾಯತರ ಬಗ್ಗೆ ಕೆಲವು ಮಾಹಿತಿಗಳನ್ನು ನೋಡಬಹುದು. ಆದರೆ ಅವುಗಳಲ್ಲಿ ಪ್ರಕಟವಾಗಿರುವ ಮಾಹಿತಿಗಳು ತಮ್ಮ ಇತಿಹಾಸಕ್ಕೆ ವಿರುದ್ಧವೆಂದು ಲಿಂಗಾಯತರು ಪ್ರತಿಭಟಿಸಿದರು. ಬಸವನು ಪ್ರಭಾವಶಾಲಿಯಾಗಿದ್ದನು; ಅವನ ಪ್ರಭಾವಕ್ಕೆ ಒಳಗಾದ ಬಿಜ್ಜಳನು ಅವನ ಅಕ್ಕನನ್ನು ಮದುವೆಯಾಗಿದ್ದನು ಎಂಬಂತಹ ವಿವರಗಳು ಇತಿಹಾಸಕ್ಕೆ ವಿರುದ್ಧವೆಂದು ಅವರು ವಾದಿಸಿದರು. ೧೮೯೯ರ ಸಮಯದಲ್ಲಿ ಜೆ.ಎಫ್. ಫ್ಲೀಟ್‌ನ ಸಂಶೋಧನೆಗಳು ಲಿಂಗಾಯತ ಮತ ಸ್ಥಾಪನೆಯ ವಿಷಯಕ್ಕೆ ಹೊಸ ತಿರುವನ್ನು ನೀಡಿದವು. ಮನಗೋಳಿ ಮತ್ತು ಅಬ್ಲೂರ್ ಶಾಸನಗಳ ಆಧಾರದ ಮೇಲೆ ಫ್ಲೀಟ್ ಬಸವ ಮತ್ತು ಏಕಾಂತ ರಾಮಯ್ಯನು ಬಸವನೇ ಅಥವಾ ಇಲ್ಲವೆ ಎಂಬ ಪ್ರಶ್ನೆಯನ್ನು ಬಗೆಹರಿಸಲು ಸಾಧ್ಯವಾಗಲಿಲ್ಲ. ಆದರೂ ಅವನ ಬಗ್ಗೆ ಕೆಲವು ನಿಲುವುಗಳನ್ನು ಆತ ಸ್ಪಷ್ಟಪಡಿಸಿದ್ದಾನೆ. ಫ್ಲೀಟನ ಪ್ರಕಾರ ಲಿಂಗಾಯತ ಮತವನ್ನು ಸ್ಥಾಪಿಸಿದವನು ರಾಮಯ್ಯನೆ ಹೊರತು ಬಸವನಲ್ಲ. ಶಾಸನದಲ್ಲಿದ್ದ ರಾಮಯ್ಯನ ಜೈನ ವಿರೋಧಿ ವಿವರಗಳ ಆಧಾರದ ಮೇಲೆ ಫ್ಲೀಟ್ ಜೈನ-ಲಿಂಗಾಯತರ ನಡುವಿನ ಸಂಬಂಧಗಳ ಅಧ್ಯಯನಕ್ಕೆ ಒಂದು ಹೊಸ ಆಯಾಮ ನೀಡಿದನು. ಇಷ್ಟಾಗಿಯೂ ಫ್ಲೀಟನ ವಿವರಗಳು ಅನೇಕ ನ್ಯೂನತೆಗಳನ್ನು ಹೊಂದಿದ್ದವು. ಏಕೆಂದರೆ ಅಬ್ಲೂರು ಅಥವಾ ಮನಗೋಳಿ ಶಾಸನಗಳಲ್ಲಿ ಎಲ್ಲಿಯೂ ಲಿಂಗಾಯತ ಅಥವಾ ವೀರಶೈವ ಪದಗಳ ಬಳಕೆಯಾಗಿಲ್ಲ. ಹೀಗಾಗಿ ಏಕಾಂತ ರಾಮಯ್ಯನೆ ಲಿಂಗಾಯತ ಮತದ ಸ್ಥಾಪಕರು ಎಂಬುದಕ್ಕೆ ಯಾವುದೇ ಬಲವಾದ ಸಮರ್ಥನೆಯನ್ನು ಕೊಡಲು ಫ್ಲೀಟ್ ವಿಫಲನಾದನು. ಈ ಶಾಸನಗಳು ಖಚಿತತೆ ಮತ್ತು ನಿಖರತೆಯ ಬಗ್ಗೆ ಅನೇಕರು ಸಂಶಯವನ್ನು ವ್ಯಕ್ತಪಡಿಸಿದರು.[11]

ಫ್ಲೀಟನ ಶಾಸನಾಧಾರಿತ ಅಧ್ಯಯನಗಳು ಮುಂದಿನ ಪೀಳಿಗೆಯ ವಿದ್ವಾಂಸರಿಗೆ ಸ್ಫೂರ್ತಿಯಾದವು. ಎಡ್ಗರ್ ಥರ್ಸ್ಟನ್ ಮತ್ತು ಕೆ. ರಂಗಾಚಾರ್ಯರ Caste and Tribes in South India (೧೯೦೯)ದಲ್ಲಿ ಏಕಾಂತ ರಾಮಯ್ಯ ಮತ್ತು ಬಸವನ ಬಗ್ಗೆ ಮತ್ತಷ್ಟು ವಿವರಗಳು ಸಿಗುತ್ತವೆ. ಥರ್ಸ್ಟನ್ ಮತ್ತು ರಂಗಾಚಾರ್ಯರು ಹನ್ನೆರಡನೇ ಶತಮಾನದ  ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯನ್ನು ಅಧ್ಯಯನ ಮಾಡಿದ್ದಾರೆ. ಲಿಂಗಾಯತ ಸಮುದಾಯದಲ್ಲಿ ಹೆಚ್ಚಾಗಿರುವ ವ್ಯಾಪಾರಸ್ಥ ವರ್ಗಗಳ ಬೆಳವಣಿಗೆ ಮತ್ತು ಅವರ ಸಾಮಾಜಿಕ ಜೀವನದ ನಡುವಿನ ಸಂಬಂಧಗಳನ್ನು ಇವರಿಬ್ಬರು ಗುರುತಿಸಿದ್ದಾರೆ. ಜಾತೀಯತೆಯ ವಿರುದ್ಧ ಪ್ರಾರಂಭವಾದ ಲಿಂಗಾಯತ ಮತವು ಕಾಲ ಕ್ರಮೇಣ ವಾಣಿಜ್ಯಕರಣಕ್ಕೊಳಗಾಗಿ ತನ್ನದೇ ಆದ ಜಾತಿ ವ್ಯವಸ್ಥೆಯನ್ನು ಬೆಳೆಸಿಕೊಂಡಿತು ಎಂದು ಇವರು ವಾದಿಸಿದ್ದಾರೆ (ಥರ್ಸ್ಟನ್ ಮತ್ತು ರಂಗಚಾರಿ, ೧೯೮೭: ೨೪೫-೫೦). ಸ್ಥಳೀಯ ಪಂಡಿತರ ಅಭಿಪ್ರಾಯ, ಕ್ಷೇತ್ರ ಕಾರ್ಯ ಮತ್ತು ಮನಗೋಳಿ ಶಾಸನದ ಆಧಾರದ ಮೇಲೆ ಇವರಿಬ್ಬರು ಅಳುಕುತ್ತಾ “ಕೊನೆಯ ಪಕ್ಷ ನಮಗೆ ದೊರೆತಿರುವ ಆಧಾರದ ಮೇಲೆ ಬಸವನೆ ಲಿಂಗಾಯತ ಮತ ಸ್ಥಾಪಕನೆಂದು ಹೇಳಬಹುದು. ಈ ವಿಷಯ ಸಮಾಧಾನಕರವಾಗಿದ್ದರೂ, ಬೇಸರ ತರಿಸುವದೇನೆಂದರೆ ಶಾಸನದ ಪ್ರಕಾರ ಬಸವನು ಕಶ್ಯಪ ಗೋತ್ರಕ್ಕೆ ಸೇರಿದವನು” (ಅದೇ: ೨೪೪) ಎಂದು ಪ್ರತಿಪಾದಿಸಿದರು. ಬಸವನ ಗೋತ್ರದ ಬಗ್ಗೆ ಉಂಟಾದ ಗೊಂದಲವು ಅವನ ಜಾತಿಯ ಬಗ್ಗೆಯೂ ಉಂಟಾಗಿ ಹೊಸ ಸಮಸ್ಯೆಗಳನ್ನು ಹುಟ್ಟು ಹಾಕಿತು. ಬಸವನು ಕಶ್ಯಪ ಗೋತ್ರಕ್ಕೆ ಸೇರಿದವನಾದರೆ, ಆತನು ಬ್ರಾಹ್ಮಣನು ಎಂಬ ವಿಷಯವು ಅವರಿಬ್ಬರನ್ನೂ ಗೊಂದಲಕ್ಕೀಡು ಮಾಡಿತು. ಇದೇ ಸಮಯದಲ್ಲಿ ಸಂಶೋಧಕನಾಗಿದ್ದ ನಿಕೊಲ್ ಮ್ಯಾಕ್ನ್ ನಿಕೊಲ್ ಎಂಬುವವನು ಸಹ ಲಿಂಗಾಯತರ ಬಗ್ಗೆ ಕೆಲವು ವಿಷಯಗಳನ್ನು ಸಂಗ್ರಹಿಸಿದನು. ಆದರೆ ಆತನ ವಿಚಾರಗಳು ಸ್ಪಷ್ಟವಾಗಿಲ್ಲ. ಮೂಲ ವಿಷಯಗಳ ಬಗ್ಗೆ ಆತನಿಗೆ ಅಷ್ಟೊಂದು ಜ್ಞಾನ ಅಥವಾ ಪರಿಚಯವಿದ್ದಿಲ್ಲವೆಂದು ತಿಳಿಯುವುದು. ಇಷ್ಟಾಗಿಯೂ ಅವನು ಲಿಂಗಾಯತ ಚಳುವಳಿಯ ಉದ್ದೇಶವು ಬೌದ್ಧ ಮತ್ತು ಜೈನ ಧರ್ಮಗಳನ್ನು ನಿರ್ಮೂಲನ ಮಾಡುವದಾಗಿತ್ತು ಎಂದು ವಾದಿಸಿದ್ದಾನೆ. ಥರ್ಸ್ಟನ್ ಮತ್ತು ರಂಗಚಾರಿಯವರು ಬಸವನ ಜಾತಿಯ ಬಗ್ಗೆ ವಿವಾದವನ್ನುಂಟು ಮಾಡಿದರೆ, ನಿಕೊಲನು ಲಿಂಗಾಯತ ಚಳುವಳಿಯನ್ನು ‘ಮತೀಯವಾದಿ’ ಎಂದು ಕರೆದು ಲಿಂಗಾಯತ ಧರ್ಮ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಮತ್ತಷ್ಟು ಗೊಂದಲ ಮತ್ತು ಅಸ್ಪಷ್ಟತೆಗಳನ್ನು ಹುಟ್ಟು ಹಾಕಿದನು.

೧೯೧೫ರಲ್ಲಿ ಆರ್.ಇ. ಏಂಥೋವನ್ ಎಂಬುವವನು ಲಿಂಗಾಯತರ ಬಗ್ಗೆ ಒಂದು ವಿಸ್ತಾರವಾದ ಟಿಪ್ಪಣಿಯನ್ನು ಬರೆದನು. ಎಂಟು ಸಂಪುಟಗಳಲ್ಲಿ ತಯಾರಾದ Encyclopeadia of Religions and Ethics ದಲ್ಲಿ ಲಿಂಗಾಯತರ ಸಾಮಾಜಿಕ ವ್ಯವಸ್ಥೆಯನ್ನು ಚರ್ಚಿಸಿದ್ದಾನೆ. ಅವನು ಬರೆಯುವ ಪ್ರಕಾರ ಲಿಂಗಾಯತರಲ್ಲಿ ಪಂಚಮಸಾಲಿಗಳೆಂದು ಕರೆಯಲ್ಪಡುವ ಪುರೋಹಿತರು ಮತ್ತು ಲಿಂಗಾಯತರಲ್ಲಿ ವ್ಯಾಪಾರಸ್ಥರು ಸಾಮಾಜಿಕ ಶ್ರೇಣಿಯಲ್ಲಿ ಉತ್ತಮ ಸ್ಥಾನವನ್ನು ಹೊಂದಿದ್ದರು. ಅವರು ಅಷ್ಟಾವರಣಗಳೆಲ್ಲವನ್ನೂ ಆಚರಿಸುವ ಹಕ್ಕು – ಭಾಧ್ಯತೆಗಳನ್ನು ಪಡೆದವರಾಗಿದ್ದರು. ಲಿಂಗಾಯತರಲ್ಲಿ ಅತಿ ಕನಿಷ್ಟ ಸ್ಥಾನವನ್ನು ಹೊಂದಿದ್ದವರು ಸಹ ಲಿಂಗಾಯತರೆಂಬ ನಾಮಧ್ಯೇಯದಿಂದ ಗುರುತಿಸಿಕೊಳ್ಳುತ್ತಿದ್ದರು. ಈ ಅಂಶವು ಲಿಂಗಾಯತರನ್ನು ಆಯಾ ಪ್ರದೇಶಗಳಲ್ಲಿ ಕೆಳ ವರ್ಗದ ಜನರು ಹೇಗೆ ಗ್ರಹಿಸುತ್ತಿದ್ದರು ಮತ್ತು ಅವರೊಂದಿಗೆ ತಮ್ಮನ್ನು ತಾವು ಗುರುತಿಸಿಕೊಳ್ಳುವದಕ್ಕೆ ಏಕೆ ಆತುರರಾಗಿದ್ದರು ಎಂಬುದರ ಬಗ್ಗೆ ಬೆಳಕು ಚೆಲ್ಲುತ್ತದೆ.

ಇದುವರೆಗಿನ ಚರ್ಚೆಯಲ್ಲಿ ನಮಗೆ ಏಳು ಸಂಗತಿಗಳು ಮುಖ್ಯವೆನಿಸುತ್ತವೆ:

ಅ). ಲಿಂಗಾಯತ ಧರ್ಮ ಸ್ಥಾಪನೆಯ ಬಗ್ಗೆ ಇರುವ ಗೊಂದಲ ಮತ್ತು ಅಸ್ಪಷ್ಟತೆ.

ಆ). ಲಿಂಗಾಯತರಲ್ಲಿ ಪ್ರಮುಖ ಪಂಥಗಳನ್ನು ಗುರುತಿಸುವಾಗ ಬಸವ ಮತ ಮತ್ತು ರೇಣುಕಾಚಾರ್ಯ ಮತಗಳಿಗೆ ಮಾತ್ರ ಹೆಚ್ಚಿನ ಪ್ರಾಶಸ್ತ್ಯ ನೀಡಿರುವುದು,

ಇ. ಏಕದೇವೋಪಾಸನೆ, ಬ್ರಾಹ್ಮಣ ಸಂಪ್ರದಾಯ – ವಿರೋಧಿ ‘ಕ್ರಾಂತಿಕಾರಕ’ ವಿಚಾರಗಳು,

ಈ). ಜಾತಿ, ಸಂಪ್ರದಾಯ ಮತ್ತು ಉದ್ಯೋಗಧಾರಿತ ಶ್ರೇಣಿಕೃತ ವ್ಯವಸ್ಥೆ,

ಉ). ಲಿಂಗಾಯತ ಧಾರ್ಮಿಕ ಗ್ರಂಥ ಅಥವಾ ಸಾಹಿತ್ಯ ಬಗ್ಗೆ ಇರುವ ಭಿನ್ನಾಭಿಪ್ರಾಯಗಳು,

ಊ). ಲಿಂಗಾಯತರ ಅಧ್ಯಯನಕ್ಕೆ ವಿವಿಧ ಹಿನ್ನಲೆಯುಳ್ಳ ವಿದ್ವಾಂಸರ ಕೊಡುಗೆಗಳು. ಲಿಂಗಾಯತರ ಅಧ್ಯಯನವು ಒಂದು ಶಿಸ್ತಾಗಿ ರೂಪುಗೊಳ್ಳದಿದ್ದರೂ, ಅವರ ಬಗ್ಗೆ ನಡೆದ ಚರ್ಚೆ ಸಂಶೋಧನೆ ಹಾಗೂ ವಾದ – ವಿವಾದಗಳು ಮಾನವ ಶಾಸ್ತ್ರ. ಸಮಾಜ ಶಾಸ್ತ್ರ, ತತ್ವ ಜ್ಞಾನ, ಸಾಹಿತ್ಯ, ಚರಿತ್ರೆ, ಇತ್ಯಾದಿ ಅಂಶಗಳನ್ನು ಒಳಗೊಂಡಿದ್ದವು. ಹಾಗಾಗಿ ಲಿಂಗಾಯತರ ಬಗ್ಗೆ ಇರುವ ಮಾಹಿತಿಗಳು ವಿವಿಧತೆಯನ್ನು ಹೊಂದಿ, ಕೆಲವೊಮ್ಮೆ ಒಂದಕ್ಕೊಂದು ಪೂರಕವಾಗಿದ್ದವು. ಇಂತಹ ಅಸ್ಪಷ್ಟತೆ, ಗೊಂದಲ, ವಿರೋಧಾಭಾಸ ಮತ್ತು ವೈರುಧ್ಯಗಳ ನಡುವೆ, ಇಂಗ್ಲಿಷ್ ವಿದ್ಯಾಭ್ಯಾಸ ಪಡೆದ ಲಿಂಗಾಯತ ಮಧ್ಯಮ ವರ್ಗದ ವಿದ್ವಾಂಸರಿಗೆ ಆಧುನಿಕತೆಯ ತಂದೊಡ್ಡಿದ ನವೀನ ವಿಚಾರಗಳು, ಪಠ್ಯಕ್ರಮಗಳು, ವೈಜ್ಞಾನಿಕ ವಿಚಾರವಾದ, ಇತ್ಯಾದಿಗಳು ತಮ್ಮ ಧರ್ಮ ಮತ್ತು ಚರಿತ್ರೆಯನ್ನು ಮರು ರೂಪಿಸುವಂತೆ ಪ್ರೇರೇಪಿಸಿದವು, ಈ ದಿಕ್ಕಿನಲ್ಲಿ ೧೮೮೦ರಲ್ಲಿ ಬ್ರಾಹ್ಮಣತ್ವದ ಹಕ್ಕನ್ನು ಪಡೆಯುವುದಕ್ಕೋಸ್ಕರ ಲಿಂಗಾಯತರು ನಡೆಸಿದ ಪ್ರಯತ್ನಗಳನ್ನು ಅವರ ಸ್ವಾಭಿಮಾನ ಮತ್ತು ಸಮುದಾಯದ ಅಸ್ತಿತ್ವವನ್ನು ಸ್ಥಾಪಿಸಲು ಇಟ್ಟ ಮೊದಲ ಹೆಜ್ಜೆಯೆಂದು ನೋಡಬಹುದು.[12]

[1] ಬರ್ನಾರ್ಡ್ ಕೋನ್ ಎಂಬುವವರು ವಸಾಹತುಶಾಹಿ ಆಡಳಿತ ವರ್ಗವು ಯಾವ, ಯಾವ ಉದ್ದೇಶಗಳಿಗಾಗಿ ಪೌರುತ್ಯ ಮಾಹಿತಿಗಳನ್ನು ಬಳಸಿಕೊಂಡು ಎಂಬುದನ್ನು ವಿದ್ವಾತ್ತಾಗಿ ನಿರೂಪಿಸಿದ್ದಾರೆ (ಕೋನ್, ೧೯೯೬: ೨೮೩).

[2] ಚರ್ಚೆಯ ಅನುಕೂಲತೆಗಾಗಿ ಲಿಂಗಾಯತ ಎಂದು ಇಲ್ಲಿ ಬಳಸಲಾಗಿದೆ. ೧೮ನೇ ಶತಮಾನದಲ್ಲಿ ಲಿಂಗಾಯತರನ್ನು ಆ ಹೆಸರಿನಿಂದ ಕರೆಯಲ್ಪಡುತ್ತಿದ್ದರೋ, ಇಲ್ಲವೋ ಎಂದು ಖಚಿತವಾಗಿ ಹೇಳಲಿಕ್ಕೆ ಆಗುವುದಿಲ್ಲ. ಮುಂದಿನ ಚರ್ಚೆಯಲ್ಲಿ ಅವರಿಗಿರುವ ವಿವಿಧ ಹೆಸರುಗಳನ್ನು ತಿಳಿಯಬಹುದು.

[3] ಈ ಎರಡು ಪಂಗಡಗಳ ಮತ್ತಷ್ಟು ವಿವರಗಳಿಗೆ ಬುಕನಾನನ ಬಗ್ಗೆ ಬರೆದಿರುವ ಗುಂಜಾಳರ ಲೇಖನವನ್ನು (೨೦೦೦) ನೋಡಿ.

[4] ಇವರಿಬ್ಬರು ಲಿಂಗಾಯತರ ಬಗ್ಗೆ ತಿಳಿದುಕೊಳ್ಳಲು ಮೆಕೆಃಝಿಯ ಸರ್ವೇಗಳನ್ನು ಬಳಸಿಕೊಂಡಿದ್ದಾರೆ.

[5] ಈ ಕೃತಿಯಲ್ಲಿ ಬಿ.ಎಸ್. ಸಣ್ಣಯ್ಯ ಎಂಬುವವರು ೧೯೮೮ ರಲ್ಲಿ ಸಂಕಲಿಸಿ, ಪ್ರಕಟಿಸಿದ್ದಾರೆ.

[6] ಬ್ರೌನನನ್ನು ತೆಲಗು ಭಾಷಿಕರು ಬಹಳ ಗೌರವದಿಂದ ಕಾಣುತ್ತಾರೆ. ತೆಲುಗು-ಇಂಗ್ಲೀಷ್ ನಿಘಂಟನ್ನು ರಚಿಸಲು ಮೊದಲ ಪ್ರಯತ್ನ ಮಾಡಿದವನೇ ಅವನು.

[7] ಆಗಿನ ಪ್ರಸಿದ್ಧ ಸಂಸ್ಕೃತ ಪಂಡಿತರಾಗಿದ್ದ ಎಚ್.ಎಚ್. ವಿಲ್ಸನ್ನರ ಜೊತೆಗೆ ವೀರಶೈವರ ಬಗ್ಗೆ ನಡೆಸಿದ ಚರ್ಚೆ ಮತ್ತು ಕಾಲ ಕ್ರಮೇಣ ಅವರಿಬ್ಬರಲ್ಲಿ ಉಂಟಾದ ಭಿನ್ನಾಭಿಪ್ರಾಯಗಳು ಬ್ರೌನನು ವೀರಶೈವರ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುವಂತೆ ಪ್ರೇರೇಪಿಸಿತು. (ಪೀಟರ್ ಶ್ಮಿತರನ್, ೨೦೦೧: ೧೨೪).

[8] ಕಿಟೆಲನು ತನ್ನ ಲೇಖನದಲ್ಲಿ ವೀರಶೈವ ಪದದ ಲಿಂಗಾಯತ ಪದವನ್ನೇ ಉಪಯೋಗಿಸಿದ್ದಾನೆ.

[9] ಕಿಟಲ್ ಮತ್ತು ಎನ್. ಆರ್. ಕರಿಬಸವಶಾಸ್ತ್ರಿಯವರು ಆಪ್ತರಾಗಿದ್ದರು. ಕರಿಬಸವಶಾಸ್ತ್ರಿಯವರಿಗೆ ಇಂಗ್ಲೀಷ್ ಮತ್ತು ಸಂಸ್ಕೃತಗಳೆರಡೂ ಬರುತ್ತಿದ್ದರಿಂದ  ಕಿಟಲ್‌‌ಗೆ ಅನೇಕ ವೇಳೆ ಸಹಾಯ ಮಾಡಿದರು. ಇವರಿಬ್ಬರ ನಡುವಿನ ಸಂಬಂಧಗಳು ಕಿಟಲ್ ಮತ್ತು ಕರಿಬಸವಶಾಸ್ತ್ರಿಯವರು ನಡೆಸಿದ ಅಧ್ಯಯನಗಳ ಮೇಲೆ ಹೇಗೆ ಪ್ರಭಾವ ಬೀರಿದವು ಎಂದು ಪರಿಶೀಲಿಸುವ ಅಗತ್ಯವಿದೆ.

[10] ಬಾರ್ತ್ ಮತ್ತು ಭಂಡಾರಕರರ ಮಾಹಿತಿಗಳಿಗಾಗಿ ನಾನು ಆರ್.ಎನ್. ನಂದಿಯವರ ಲೇಖನವನ್ನು ಆಧಾರವಾಗಿಸಿಕೊಂಡಿದ್ದೇನೆ (೧೯೮೬: ೧೬೯-೧೮೫)

[11] ಹಳಕಟ್ಟಿಯವರು ಮೊದ ಮೊದಲು ಫ್ಲೀಟನ ಸಂಶೋಧನೆಗಳ ಬಗ್ಗೆ ಹೆಮ್ಮೆ ಪಟ್ಟಿಕೊಂಡರು. ಆದರೆ ನಂತರದ ದಿನಗಳಲ್ಲಿ ಹಳಕಟ್ಟಿಯವರು ಈ ಶಾಸನಗಳು ಬಗ್ಗೆ ಅನುಮಾನಗಳನ್ನು ಬೆಳೆಸಿಕೊಂಡರು. ಇದಕ್ಕೆ ಸಂಬಂಧಿಸಿದಂತೆ ಜೀರಿಗೆ ಕೆ. ಬಸವಪ್ಪನವರ ಲೇಖನವನ್ನು (೧೯೩೯) ನೋಡಿರಿ.

[12] ಇದರರ್ಥ ಲಿಂಗಾಯತರು ಈ ಮೊದಲು ಯಾವುದೇ ಪ್ರಯತ್ನಗಳನ್ನು ಮಾಡಲಿಲ್ಲ ಎಂದಲ್ಲ. ಇದರ ಬಗ್ಗೆ ನಮಗೆ ಮತ್ತಷ್ಟು ಅಧ್ಯಯನದ ಅವಶ್ಯಕತೆ ಇದೆ.