ಭಾಗ

ನಾನರಿದ ಅರಿವೆಲ್ಲಾ ನಿನ್ನ ಅರಿವು?’ : ಕಥನಗಳ ಸುತ್ತ ಲಿಂಗಾಯತರು

ಸಮಾಜಶಾಸ್ತ್ರಜ್ಞರಾದ ಕೆ. ಈಶ್ವರನ್ ರು ಲಿಂಗಾಯತ ಸಮುದಾಯದ ಸಾಮಾಜಿಕ, ರಾಜಕೀಯ ಮೇಲ್ಜಲನೆಯನ್ನು ಮೂರು ಘಟ್ಟಗಳನ್ನಾಗಿ ಗುರುತಿಸಿದ್ದಾರೆ. ಅವುಗಳಾವುವೆಂದರೆ ಅ) ಛಿದ್ರಕ್ತ ಘಟ್ಟ, ಆ) ಏಕೀಭಾವತ್ವದ ಘಟ್ಟ ಮತ್ತು ಇ) ವ್ಯಕ್ತಿ ನಿಷ್ಠ ಘಟ್ಟ (ಈಶ್ವರನ್, ೧೯೮೩: ೧೨೩-೨೫). ಇವುಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

ಮೊದಲನೆಯ ಘಟ್ಟದಲ್ಲಿ (೧೮೯೦ ರ ಸುಮಾರು) ಲಿಂಗಾಯತರ ಸಾಮಾಜಿಕ ಸಂಘಟನೆಯು ಕ್ಷೀಣವಾಗಿತ್ತು, ಹೀಗಾಗಿ ಲಿಂಗಾಯತ ಗಣ್ಯರಿಗೆ ಛಿದ್ರ, ಛಿದ್ರವಾಗಿದ್ದ ಲಿಂಗಾಯತರನ್ನು ಒಂದು ಗೂಡಿಸಿ, ರಾಜಕೀಯವಾಗಿ ಬಲಯುತವನ್ನಾಗಿಸಿ, ಸಾಮಾಜಿಕ ಏಕತೆ ಮತ್ತು ಸಮಗ್ರತೆಯನ್ನು ಸಾಧಿಸುವ ಬಲವಾದ ಇಚ್ಛೆಯಿತ್ತು. ಈಶ್ವರನ್ನರ ಪ್ರಕಾರ ಈ ತರಹದ ಇಚ್ಛೆ ಮತ್ತು ಸಾಧನೆಯು ನಿಜವಾದ ‘ಸಾಮುದಾಯಿಕ ಕಳಕಳಿ’ಯನ್ನು ಹೊಂದಿತ್ತು. ಈ ಘಟ್ಟದಲ್ಲಿ ವ್ಯಕ್ತಿ – ಕೇಂದ್ರಿತ ಕಾಳಜಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇರಲಿಲ್ಲವೆಂದು, ಸಮುದಾಯದ ಒಳಿತು ಮುಖ್ಯವಾಗಿತ್ತು ಎಂದು ಅವರ ಅಭಿಪ್ರಾಯವಾಗಿದೆ.

ಎರಡನೆಯ ಘಟ್ಟದಲ್ಲಿ (೧೯೨೦ ರಿಂದ ೧೯೫೦ರವರೆಗೆ) ಸಮುದಾಯದ ರಾಜಕೀಯಕರಣವು ಮಧ್ಯಮ ವರ್ಗದ ಉಗಮಕ್ಕೆ ಕಾರಣವಾಯಿತು. ರಾಜಕೀಯ ಸಂಪನ್ಮೂಲದ ಕ್ರೋಡಿಕರಣವು ಲಿಂಗಾಯತರಿಗೆ ಅನುಕೂಲತೆಗಳನ್ನು ತಂದಿಟ್ಟರೂ, ಈ ಸಮಯದಲ್ಲಿ ಆಂತರಿಕವಾಗಿ ಜಾತಿಗಳ ನಡುವೆ ಪೈಪೋಟಿ ಹೆಚ್ಚಿತು. ಹೀಗಾಗಿ ಪ್ರಜಾಪ್ರಭುತ್ವದ ತಳಹದಿಯ ಮೇಲೆ ಲಿಂಗಾಯತರನ್ನು ರಾಜಕೀಯವಾಗಿ ಸಜ್ಜುಗೊಳಿಸಿ, ಸಕ್ರಿಯವಾಗಿಸುವ ಮರು ಪ್ರಯತ್ನಗಳು ನಡೆದವು. ಒಟ್ಟಾರೆಯಾಗಿ ಸಮುದಾಯದ ರಾಜಕೀಯ ಶಕ್ತಿಗಾಗಿ ಮತ್ತು ಒಗ್ಗಟ್ಟಿಗಾಗಿ ಹೆಚ್ಚಿನ ಪ್ರಾಶಸ್ತ್ಯ ನೀಡಲಾಯಿತು.

ಮೂರನೇ ಘಟ್ಟದಲ್ಲಿ (೧೯೫೦ರ ನಂತರ) ಸಾಮುದಾಯಿಕ ಭಾವನೆಗಳು ಕ್ರಮೇಣ ಕ್ಷೀಣವಾಗಿ ಜಾತಿ ಮತ್ತು ವ್ಯಕ್ತಿ ಹಿತಾಸಕ್ತಿಗಳು ಬಲವಾದವು. ವ್ಯಕ್ತಿ ಹಿತಾಸಕ್ತಿಯ ಅತಿರೇಕವು ಈ ಘಟ್ಟದ ಮುಖ್ಯ ಲಕ್ಷಣವಾಗಿದೆ. ಈಶ್ವರನ್ನರ ಪ್ರಕಾರ ಸಮುದಾಯದ ನಾಯಕರು ತಮ್ಮ, ತಮ್ಮ, ಸ್ವ-ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ಹೆಚ್ಚಿನ ಆಸಕ್ತಿ ತೋರಿಸಿದರು. ಹೀಗಾಗಿ ಸಮುದಾಯದ ಒಟ್ಟು ಪ್ರಗತಿಯ ಬಗ್ಗೆ ಯಾರೂ ಅಷ್ಟೊಂದು ಆಸಕ್ತಿ ಅಥವಾ ಆತುರತೆಯನ್ನು ತೋರಿಸಲಿಲ್ಲ.

*ಮೇಲೆ ವಿವರಿಸಲ್ಪಟ್ಟ ಮೂರು ಘಟ್ಟಗಳು ಲಿಂಗಾಯತರ ರಾಜಕೀಯ-ಸಾಮಾಜಿಕ ವಿಕಾಸವನ್ನು ವಿವರಿಸುತ್ತದೆ. ಪ್ರಸ್ತುತದಲ್ಲಿ ನಮಗೆ ಮುಖ್ಯವಾಗಿರುವುದು ಮೊದಲೆರಡು ಘಟ್ಟಗಳು. ಈಗಾಗಲೇ ಚರ್ಚಿಸಲ್ಪಟ್ಟ ವಿವಾದಗಳ ಹಿನ್ನಲೆಯಲ್ಲಿ ನೋಡುವದಾದರೆ ಮೊದಲೆರಡು ಘಟ್ಟಗಳನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಅವೆರಡೂ ಒಂದನ್ನೊಂದು ಸಂಬಂಧವನ್ನೊಂದಿದ್ದು, ಒಂದನ್ನು ಅರ್ಥಮಾಡಿ ಕೊಳ್ಳಬೇಕಾದರೆ ಮತ್ತೊಂದರ ಅವಶ್ಯಕತೆ ಇದೆ.

ಲಿಂಗಾಯತರಿಗೆ ತಮ್ಮ ಧರ್ಮ, ಸಂಸ್ಕೃತಿ ಮತ್ತು ಸಾಹಿತ್ಯವನ್ನು ಆಧುನಿಕತೆಗಳನ್ನು ಗುಣವಾಗಿ ಮಾರ್ಪಾಡಿಸಿ ಕೊಳ್ಳಬೇಕೆಂಬ ಅರಿವು ಮೂಡಿದ್ದು ಸರಿ ಸುಮಾರು ೧೮೭೦ರ ಸುಮಾರಿನಲ್ಲಿ. ಈಗಾಗಲೇ ವೈರುಧ್ಯ ಮತ್ತು ಗೊಂದಲಮಯವಾಗಿದ್ದ ಲಿಂಗಾಯತ ಕಥನಗಳಿಗೆ ಅವರ ಪ್ರಕ್ರಿಯೆ ಲಿಂಗಾಯತರ ಇತಿಹಾಸದಲ್ಲಿ ಒಂದು ಮುಖ್ಯ ಅಧ್ಯಾಯವನ್ನು ತೆರೆದಿಡುತ್ತದೆ. “ಬ್ರಾಹ್ಮಣರಿಗೆ ಸಾಂಪ್ರಾದಾಯಿಕವಾಗಿ ಒಲಿದು ಬಂದ ಬೌದ್ಧಿಕತೆ ಮತ್ತು ಸಾಮಾಜಿಕ – ರಾಜಕೀಯ ಸವಲತ್ತುಗಳು ಸ್ವಾಭಾವಿಕವಾಗಿ ಆಧುನಿಕತೆಯ ಇತಿಹಾಸವನ್ನು ಬರೆಯಲು ಅನುವು ಮಾಡಿಕೊಟ್ಟ” (ಗೀತಾ, ೧೯೯೪) ರೀತಿಯಲ್ಲಿಯೇ, ಕರ್ನಾಟಕದ ಮತ್ತು ಲಿಂಗಾಯತರ ಇತಿಹಾಸವನ್ನು ಬರೆಯಲು ಸಹಾಯಕವಾದುದು ಆದರೆ ಬ್ರಾಹ್ಮೇಣೇತರರಾದ ಲಿಂಗಾಯತರಿಗೆ ಆಧುನಿಕ – ವೈಜ್ಞಾನಿಕ ಇತಿಹಾಸದ ಅರಿವು ಹೊಸದಾಗಿತ್ತು ಮತ್ತು ತಮ್ಮ ಇತಿಹಾಸವನ್ನು ಹೊಸದಾಗಿ ಬರಿಯಬೇಕಾಗಿತ್ತು. ಹೊಸ ಇತಿಹಾಸವನ್ನು ಬರೆಯುವ ಮತ್ತು ಈಗಾಗಲೇ ಬ್ರಾಹ್ಮಣರಿಂದ ಮತ್ತು ಪಾಶ್ಚಾತ್ಯ ವಿದ್ವಾಂಸರಿಂದ ‘ತಪ್ಪಾಗಿ’ ಬರೆಯಲ್ಪಟ್ಟ ಇತಿಹಾಸವನ್ನು ತಿದ್ದುವುದು ಲಿಂಗಾಯತರಿಗೆ ಅತ್ಯವಶ್ಯಕವಾಗಿತ್ತು. ಈ ಕಾರ್ಯಕ್ಕಾಗಿ ಈಗಾಗಲೇ ಲಭ್ಯವಿದ್ದ ಜ್ಞಾನ ಧಾರೆಯನ್ನು ಸಂಫೂರ್ಣವಾಗಿ ಅನುಕರಿಸದೆ, ತಮಗೆ ಎಷ್ಟು ಬೇಕೊ ಅಷ್ಟನ್ನು ಮಾತ್ರ ಆಯ್ಕೆ ಮಾಡಿದರು. ಅವರು ಎಲ್ಲವನ್ನು ತಿರಸ್ಕರಿಸುವ ಸ್ಥಿತಿಯಲ್ಲಿರಲಿಲ್ಲ. ಹತ್ತೊಂಬತ್ತನೆ ಶತಮಾನದ ಕೊನೆಯಲ್ಲಿ ಈ ಪ್ರಕ್ರಿಯೆಯು ಹೊಸ, ಹೊಸ, ವ್ಯಾಖ್ಯಾನಗಳು, ತಿದ್ದುಪಡಿಗಳು ಅಥವಾ ಪುರಾತನ / ತಿರಸ್ಕೃತಾರ್ಹವಾದ ಅಂಶಗಳನ್ನು ಕೈ ಬಿಡುವ ಮುಖೇನ ಶುರುವಾಯಿತು. ಈ ಉದ್ದೇಶಕ್ಕಾಗಿ ಲಿಂಗಾಯತರಿಗೆ ಪೌರತ್ಯ ಜ್ಞಾಣ ಅಥವಾ ಸ್ಥಳೀಯ ಜ್ಞಾನ ಪರಂಪರೆಗಳೆರಡೂ ಮುಖ್ಯವಾದವು. ಈ ಪ್ರಕ್ರಿಯೆಯನ್ನು ಪಾಸಿಟಿವಿಸ್ಟ್ ಎಂದು ಜರಿದು ತಿರಸ್ಕರಿಸುವ ಹಾಗಿಲ್ಲ. ಇತಿಹಾಸಕಾರರಾದ ಕುಂಕುಮ ಚಟರ್ಜಿಯವರು ಸಾಂಪ್ರದಾಯಿಕ ಜ್ಞಾನದ ಬಳಕೆಯ ಬಗ್ಗೆ ಹೇಳುವ ಪ್ರಕಾರ, ಈ ಸಮಯದಲ್ಲಿ ಆಧುನಿಕ ಸಂವಾದ ಮತ್ತು ಇತಿಹಾಸದ ಪ್ರಜ್ಞೆಯು ಒಂದನ್ನೊಂದು ಬೆಸೆದುಕೊಂಡಿತ್ತು. ಪುನುರುಜ್ಜೀವನಗೊಂಡ ಭಾರತ ದೇಶದ ಇತಿಹಾಸವನ್ನು ನಿರೂಪಿಸಲು ಪಾಸಿಟಿವಿಸ್ಟ್ ಯೇತರ ಮಾರ್ಗಗಳೋ ಸಹಾಯವನ್ನೂ ಸಹ ತೆಗೆದುಕೊಳ್ಳಲಾಗಿದೆ. ವೈಚಾರಿಕ ಇತಿಹಾಸ ಮತ್ತು ಚರಿತ್ರೆಯ ಕಥನಗಳು (ಉಪಕತೆ, ಮಹಾಕಾವ್ಯ ಮತ್ತು ಜಾನಪದ) ನಡುವಿನ ಘರ್ಷಣೆಗಳು ಈ ಸಮಯದಲ್ಲಿ ಸರ್ವೇಸಾಮಾನ್ಯ. ಈ ಸನ್ನಿವೇಶವು ಬೆಂಗಾಲಿ ಮಧ್ಯಮ ವರ್ಗದಲ್ಲಿದಂತೆ, ಇತರ ಸ್ಥಳಗಳಲ್ಲಿಯೂ ಕಾಣಬಹುದಾಗಿತ್ತು. (ಚಟರ್ಜಿ, ೧೯೯೯ : ೧೬೪-೧೯೫)

ಲಿಂಗಾಯತರಿಗೂ ಸಹ ತಮ್ಮ ಐಡೆಂಟಿಟಿಯನ್ನು ರೂಪಿಸಲು ಎಲ್ಲಾ ಜ್ಞಾನ ಶಾಖೆಗಳಿಂದ ಮಾಹಿತಿಗಳನ್ನು ಸ್ವೀಕರಿಸಿದರು. ಕೆಲವನ್ನು ಒತ್ತಾಯ ಪೂರ್ವಕವಾಗಿ ನೆನಪಿಸಿಕೊಳ್ಳುತ್ತಾ, ಕೆಲವನ್ನು ಸಂಕಲ್ಪ ಪೂರ್ವಕವಾಗಿ ಮರೆಯುತ್ತಾ, ವಿಶೇಷಿಕರಿಸುತ್ತಾ, ವಿರೋಧಿಸುತ್ತಾ ತಮ್ಮ ಸಂಸ್ಕೃತಿಯನ್ನು ರೂಪಿಸಿಕೊಳ್ಳಲು ಲಿಂಗಾಯತರು ಪ್ರಯತ್ನಿಸಿದರು. ಸುದ್ದಿ ಮಾಧ್ಯಮವನ್ನು, ವಿಶೇಷವಾಗಿ ವೃತ್ತ ಪತ್ರಿಕೆಗಳು. ಈ ಉದ್ದೇಶಕ್ಕಾಗಿ ಯಥೇಚ್ಛವಾಗಿ ಉಪಯೋಗಿಸಿಕೊಳ್ಳಲಾಯಿತು. ಲಿಂಗಾಯತ ಧರ್ಮ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಲು ಮತ್ತು ಒಗ್ಗಟ್ಟನ್ನು ಸಾಧಿಸಲು ಮುದ್ರಣ ತಾಂತ್ರಿಕತೆಯ ಪಾತ್ರವು ಹಿರಿದಾಗಿದೆ.[1]

ಲಿಂಗಾಯತರ ಸಮುದಾಯಿಕ ಭಾವನೆಗಳು ತಮ್ಮ ಸುತ್ತಲೂ ಸಾಮಾಜಿಕ ಗಡಿಯನ್ನು ಹಾಕಿಕೊಳ್ಳಲು ಮತ್ತು ತಮ್ಮ ಧರ್ಮಕ್ಕೆ ಹೊಸ ಧಾರ್ಮಿಕ ಅರ್ಥಗಳನ್ನು ಕಲ್ಪಿಸಿಕೊಳ್ಳಲು ಅನುವು ಮಾಡಿಕೊಟ್ಟಿತು. ಹೀಗಾಗಿ ಲಿಂಗಾಯತರಿಗೆ ತಮ್ಮ ಸಾಮುದಾಯಿಕ ಐಡೆಂಟಿಟಿಯ ಕೆಳಗಿನ ನಾಲ್ಕು ಅಂಶಗಳಿಂದ ಮುಖ್ಯವಾಗಿತ್ತು: ಅ. ನಿಖರವಾದ ಪಠ್ಯ ಪರಂಪರೆಯ ಮರು-ಸ್ಥಾಪನೆಗೆ ಇದ್ದ ಚಾರಿತ್ರಿಕ ಅವಶ್ಯಕತೆ, ಆ. ಕೆಲವೊಂದು ಚಾರಿತ್ರಿಕ, ಧಾರ್ಮಿಕ ಮತ್ತು ಸಾಹಿತ್ಯ ಕೃತಿಗಳನ್ನು ಮಾತ್ರ ಅಧಿಕೃತಗೊಳಿಸಿ ಮತ್ತು ಅವುಗಳನ್ನು ಎಂದೆಂದೂ ಬದಲಿಸಲಾಗದಂತಹ ಸಮಗ್ರೀಕರಣಕ್ಕೆ ಮಾರ್ಪಡಿಸುವ ಪ್ರಕ್ರಿಯೆ, ಇ. ಸಮುದಾಯದ ಸಮಗ್ರ ಕಲ್ಪನೆಗೆ ತೊಡಕಾಗುವ ಯಾವುದೇ ಸಂಗತಿಯನ್ನು ನಿರ್ಧಯವಾಗಿ ನಿರ್ಲಕ್ಷಿಸುವ ಮನೋಭಾವ ಮತ್ತು ಈ. ಧಾರ್ಮಿಕ ಮತ್ತು ಸಾಮಾಜಿಕ ನಿಯಮಾವಳಿಗಳ ಮೂಲಕ ಸ್ವ/ಅನ್ಯ, ಆಂತರಿಕ/ಬಾಹ್ಯ ಗಡಿಗಳನ್ನು ಕಲ್ಪಿಸಿಕೊಂಡು ತನ್ನನ್ನು ತಾನು ಬಲಯುತವಾಗಿಸಿಕೊಳ್ಳುವ ಅಂಶ.

ಆಂದಿನ (೧೯ನೇ ಶತಮಾನದ ಕೊನೆಯ ಮೂರು ದಶಕಗಳು) ಲಿಂಗಾಯತ ಮುಖಂಡರುಗಳಾದ ಯಜಮಾನ ವೀರಸಂಗಪ್ಪ (ಮೈಸೂರು), ಗಿಲಿಗಿಂಜಿ ಗುರುಸಿದ್ದಪ್ಪ, ಅರಟಾಳ ರುದ್ರಗೌಡ (ಧಾರವಾಡ), ಸಿರಿಸಿಂಗಿ ಲಿಂಗರಾಜ (ಬೆಳಗಾಂ), ಪಿ.ಆರ್. ಕರಿಬಸವಶಾಸ್ತ್ರಿ (ಮೈಸೂರು) ಮತ್ತು ವಾರದ ಮಲ್ಲಪ್ಪ (ಸೋಲಾಪುರ)[2]ರು  ಸಮುದಾಯದ ಪ್ರಗತಿಗಾಗಿ ಮತ್ತು ಲಿಂಗಾಯತರಲ್ಲಿ ಸಾಮುದಾಯಿಕ ಅರಿವನ್ನು ಮೂಡಿಸುವಲ್ಲಿ ಮೊದಲಿಗರು. ಸರ್ಕಾರಿ ಕೆಲಸ, ಇಂಗ್ಲಿಷ್ ಮತ್ತು ಸಂಸ್ಕೃತ ಶಿಕ್ಷಣದ ಪ್ರಾಮುಖ್ಯತೆಯನ್ನು ಅರಿತು ಇತರರಿಗೂ ಅವುಗಳ ಪ್ರಾಮುಖ್ಯತೆಯನ್ನು ಮನನಗೊಳಿಸುವಲ್ಲಿ ಅವರು ಮಾಡಿದ ಪ್ರಯತ್ನಗಳು ತಮ್ಮದೇ ಆದ ಪಾರಿಭಾಷಿಕ ಚೌಕಟ್ಟಿನ ಮೂಲಕ ಆಧುನಿಕತೆಯೊಳಗೆ ಪ್ರವೇಶ ಮಾಡುವ ಹೆಜ್ಜೆಗಳಾಗಿದ್ದವು.

ವಸಾಹತುಶಾಹಿ/ಒರಿಯಂಟಲಿಸ್ಟ್ ಮೂಲದ ಜ್ಞಾನಧಾರೆಗಳು ಮತ್ತು ಜನಗಣತಿಯ ರಿಪೋರ್ಟುಗಳನ್ನು ಸ್ಥಳೀಯ ಲಿಂಗಾಯತ ವಿದ್ವಾಂಸರು ತಮ್ಮ ಸಮುದಾಯದ ಪ್ರಗತಿಯ ಅಥವಾ ಹಿಂದುಳಿದ ಚಿಹ್ನೆಯಾಗಿ ನೋಡಿದರು. ಈ ಗ್ರಹಿಕೆಯು ಇತರ ಸಮುದಾಯಗಳ ಪ್ರಗತಿ/ಹಿಂದುಳುವಿಕೆಯ ಅಂಶಗಳ ಮೇಲೂ ಸಹ ಅವಲಂಬಿತವಾಗಿತ್ತು. ಮೈಸೂರು ಮತ್ತು ಬಾಂಬೆ ಜನಗಣತಿ ರಿಪೋರ್ಟುಗಳು (೧೮೭೧) ಲಿಂಗಾಯತರನ್ನು ಶೂದ್ರರೆಂದು ಪರಿಗಣಿಸಿದಾಗ ಹಾಗೂ ನಂತರದ ದಶವಾರ್ಷಿಕ ಜನಗಣತಿ ರಿಪೋರ್ಟುಗಳು ಸಹ ಈ ಹಣೆಪಟ್ಟಿಯನ್ನೆ ಮುಂದುವರೆಸಿದರಿಂದ, ಲಿಂಗಾಯತರಿಗೆ ಅದರಿಂದ ಬಹಳಷ್ಟು ಅಸಮಾಧಾನವಾಯಿತು. ರಾಜ್ಯ ಸೆನ್ಸಸ್ ರಿಪೋರ್ಟಿನಲ್ಲಿ ಲಿಂಗಾಯತರನ್ನು ಕೆಳಸ್ತರದ ಸಮಾಜವನ್ನಾಗಿ ಪರಿಗಣಿಸಿದ್ದು ಅವರಿಗೆ ಅವಮಾನಕರವಾಗಿ ಕಾಣಿಸಿತು. ಹೀಗಾಗಿ ಶೂದ್ರ ಸ್ಥಾನದ ಬದಲಿಗೆ ತಮನ್ನು ‘ಬ್ರಾಹ್ಮಣ’ರೆಂದು ಪರಿಗಣಿಸಬೇಕೆಂದು ಎರಡೂ ಸರ್ಕಾರಗಳನ್ನು ಅವರು ಒತ್ತಾಯಿಸಿದರು.[3]

ಬ್ರಾಹ್ಮಣ ಸ್ಥಾನಮಾನಗಳ ಸಲುವಾಗಿ ಲಿಂಗಾಯತರಿಗೂ ಮತ್ತು ಬ್ರಾಹ್ಮಣರಿಗೂ ಚಕಮಕಿಗಳಾದವು. ಅದರಲ್ಲಿ ಪ್ರಮುಖವಾಗಿ ಎದ್ದು ಕಾಣುವುದು ಯಜಮಾನ್ ವೀರಸಿಂಗಪ್ಪ, ಪಿ.ಆರ್. ಕರಿಬಸವಶಾಸ್ತ್ರಿ ಮತ್ತು ಕೆಲವು ಬ್ರಾಹ್ಮಣ ಪಂಡಿತರ, ವಿಶೇಷವಾಗಿ ಪಾಲಳ್ಳಿ ರಂಗಣ್ಣ, ನಡುವೆ ಆದ ವಾದ-ವಿವಾದಗಳು. ಲಿಂಗಾಯತರಲ್ಲಿ ಅನೇಕರು ಕೆಳಜಾತಿಯವರಾದ್ದರಿಂದ (ಹಜಾಮ ಮತ್ತು ದೋಬಿಯವರು) ಅವರನ್ನು ಬ್ರಾಹ್ಮಣರೆಂದು ಕರೆಯಲು ಸಾಧ್ಯವೇ ಎಂದು ರಂಗಣ್ಣನವರು ಪ್ರಬಲವಾಗಿ ಪ್ರಶ್ನಿಸಿದರು.[4] ಇದಕ್ಕೆ ಪ್ರತಿಯಾಗಿ ಕರಿಬಸವಶಾಸ್ತ್ರಿಯವರು ಅನೇಕ ಶೈವ ಗ್ರಂಥಗಳ ಸಹಾಯದಿಂದ (ನೀಲಕಂಠ ಭಾಷ್ಯ, ಶ್ರೀಕರ ಭಾಷ್ಯ, ಶಂಕರ ಸಂಹಿತೆ, ಸ್ಕಂದ ಪುರಾಣ ಮತ್ತು ಆಗಮಗಳು) ಲಿಂಗಾಯತರ ಬ್ರಾಹ್ಮಣವನ್ನು ಅರ್ಥೈಸಿ, ಸಮರ್ಥಿಕೊಂಡರು.[5] ಕರಿಬಸವಶಾಸ್ತ್ರಿಯವರಿಗೆ ಲಿಂಗಾಯತರು ಬ್ರಾಹ್ಮಣರಷ್ಟೇ ಶ್ರೇಷ್ಠರು ಎಂದು ಹೇಳುವಲ್ಲಿ ಯಾವುದೇ ಗೊಂದಲವಿಲ್ಲ. ಕೆಳಜಾತಿಯವರಾದ ಹಜಾಮ ಮತ್ತು ದೊಬಿಯವರು  ವರ್ಣವ್ಯವಸ್ಥೆಯಲ್ಲಿ ಇರದ ಕಾರಣವರು ಎಂದೆಂದೂ ಲಿಂಗಾಯತರಾಗಲು ಸಾಧ್ಯವಿಲ್ಲ ಎಂದು ಕರಿಬಸವಶಾಸ್ತ್ರಿಯವರು ವಾದಿಸುತ್ತಾ ರಂಗಣ್ಣನ ವಾದವು ತರ್ಕರಹಿತ ಮತ್ತು ಬಾಲಿಶವಾದದು ಎಂದು ತಿರಸ್ಕರಿಸಿದರು (ಕರಿಬಸವಶಾಸ್ತ್ರಿ, ೧೮೮೨: ೨೬-೨೭).

ಜನಗಣತಿಯ ಮೂಲಕ ಲಿಂಗಾಯತರಿಗೆ ದೊರೆತ ಶೂದ್ರ ಹಣೆಪಟ್ಟಿಯು ಶಾಶ್ವತವಾಗಿರಲಿಲ್ಲ. ಜನಗಣತಿ ಮತ್ತು ಸರ್ಕಾರದ ಆಜ್ಞೆಗಳ ವಿರುದ್ಧ ತಮ್ಮದೇ ಆದ ಸಾಮಾಜಿಕ ವ್ಯವಸ್ಥೆ ರೂಪು-ರೇಷೆಗಳನ್ನು ಅಧಿಕೃತಗೊಳಿಸಿಕೊಳ್ಳಲು ಸತತ ಪ್ರಯತ್ನ ಪಡುತ್ತಿದ್ದರು. ಮೇಲ್ಜಾತಿಯ ಲಿಂಗಾಯತರು, ಕರಿಬಸವಶಾಸ್ತ್ರಿಯವರು ವಾದಿಸಿದಂತೆ, ಹಜಾಮ ಅಥವಾ ದೋಬಿಯಂತಹವರನ್ನು ತಮ್ಮ ಧಾರ್ಮಿಕ/ಸಾಮಾಜಿಕ ಪರಿಧಿಯೊಳಗೆ ಸೇರಿಸಿಕೊಳ್ಳಲು ತಯಾರಿರಲಿಲ್ಲ. ಇಂತಹ ಸಾಮಾಜಿಕ ಸನ್ನಿವೇಶದಲ್ಲಿ ಲಿಂಗಾಯತರಿಗೆ ಜನಗಣತಿ ಮಾತ್ರವೇ ಮುಳ್ಳಾಗಿರಲಿಲ್ಲ; ಜನಗಣತಿಯನ್ನು ಉಪಯೋಗಿಸಿಕೊಂಡು ಲಿಂಗಾಯತರ ಮೇಲೆ ವಾಗ್ದಾಳಿ ನಡೆಸಿದ ರಂಗಣ್ಣನಂತಹ ಬ್ರಾಹ್ಮಣರನ್ನು ಬೌದ್ಧಿಕವಾಗಿ ಎದುರಿಸುವ ಹೊಣೆಗಾರಿಕೆಯು ಇತ್ತು. ಹೀಗಾಗಿ ಸರ್ಕಾರದ ಜನಗಣತಿಯ ನಡುವೆಯೂ ಲಿಂಗಾಯತ ಗಣ್ಯರಿಗೆ ಮುಖ್ಯವೆನಿಸಿದ್ದು, ಅ. ಬ್ರಾಹ್ಮಣರ ವಿರುದ್ಧ ಧರ್ಮಯುದ್ಧ ಮತ್ತು ಆ. ತನ್ನ ಸಮಾಜದಲ್ಲಿನ ಶ್ರೇಣೀಕೃತ ವ್ಯವಸ್ಥೆಯನ್ನು ಯಥಾ ಸ್ಥಿತಿಯಲ್ಲಿ ಮುಂದುವರೆಸಿಕೊಂಡು ಹೋಗುವ ಮನೋಭಾವ. ವರ್ಣಾಶ್ರಮ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದ ಲಿಂಗಾಯತರು ಕೆಳ ವರ್ಗ/ಜಾತಿಯ ಲಿಂಗಾಯತರನ್ನು ದೂರ ಇಟ್ಟರು. ಮತ್ತೊಂದು ಸಂದರ್ಭದಲ್ಲಿ ಕರಿಬಸವಶಾಸ್ತ್ರಿಯವರು ನೊಣಬ ಮತ್ತು ಹಜಾಮರನ್ನು ಲಿಂಗಾಯತರಲ್ಲವೆಂದು ಸಾರಿದರು (ಅದೇ; ೨೭). ಹೀಗೆ ಕೆಳ ಜಾತಿಯವರನ್ನು ವರ್ಣ ವ್ಯವಸ್ಥೆಯಿಂದ ದೂರವಿಡುವ ಪ್ರಕ್ರಿಯೆಯು ೨೦ನೇ ಶತಮಾನದ ಮೊದಲ ದಶಕದಲ್ಲಿಯೂ ಮುಂದೆವರೆಯಿತು. ಉದಾಹರಣೆಗೆ, ೧೯೦೪ರ ಜನಗಣತಿಯು[6] ಈ ಎರಡು ಜಾತಿಗಳನ್ನು ಲಿಂಗಾಯತರೆಂದು ನಮೂದಿಸಿದಾಗ, ಮೇಲ್ಜಾತಿ ಲಿಂಗಾಯತರು ಜನಗಣತಿಯನ್ನು ಬಲವಾಗಿ ವಿರೋಧಿಸಿದರು. ಮೈಸೂರ್ ಸ್ಟಾರ್ ಪತ್ರಿಕೆಯ ಒಂದು ಲೇಖನವು (೨೨ನೇ ಏಪ್ರಿಲ್, ೧೯೧೫) ಈ ಜಾತಿಗಳು ಮಿತಿಮೀರಿ ವರ್ತಿಸುತ್ತಿರುವುದರ ಬಗ್ಗೆ ವಿರೋಧ ವ್ಯಕ್ತಪಡಿಸಿತು.

ಜನಗಣತಿಯಿಂದ ಆದ ಅವಮಾನವನ್ನು ಲಿಂಗಾಯತರು ಬೇಗನೆ ಮರೆಯಲಾಗಲಿಲ್ಲ. ಹೀಗಾಗಿ ೧೯೦೧ರ ಮೈಸೂರು ಜನಗಣತಿಯ ಸಮಯದಲ್ಲಿ ಲಿಂಗಾಯತರು ಹೊಸ ಯೋಜನೆಯನ್ನು ಸರ್ಕಾರದ ಮುಂದಿಟ್ಟರು. ಈ ಯೋಜನೆಯ ಪ್ರಕಾರ ತಮ್ಮನ್ನು ವರ್ಣಾಶ್ರಮದ ರೀತ್ಯ ವೀರಶೈವ ಬ್ರಾಹ್ಮಣ, ವೀರಶೈವ ಕ್ಷತ್ರಿಯ, ವೀರಶೈವ ವೈಶ್ಯ ಮತ್ತು ವೀರಶೈವ ಶೂದ್ರರೆಂದು ನಾಲ್ಕು ಆಶ್ರಮಗಳನ್ನಾಗಿ ಪರಿಗಣಿಸಬೇಕೆಂದು ಲಿಂಗಾಯತರು ಕೋರಿಕೊಂಡರು.[7] ಇದಕ್ಕೆ ಮೊದಲು ಮುಂದೆ ೧೮೯೧ರಲ್ಲಿ, ಇದೇ ತರಹದ ಯೋಜನೆಯನ್ನು ಮೈಸೂರು ಸರ್ಕಾರದ ಮುಂದೆ ಇಡಲಾಗಿತ್ತು.[8] ಆಗ ಲಿಂಗಾಯತರ ಕೋರಿಕೆಯನ್ನು ಮನ್ನಿಸಿ ಮೈಸೂರು ಮಹಾರಾಜರು ಇದಕ್ಕೆ ಪೂರಕವಾದ ಆಜ್ಞೆಯನ್ನು ಹೊರಡಿಸಿದರು (ಥರ್ಸ್ಟನ್ ಮತ್ತು ರಂಗಾಚಾರಿ, ೧೯೮೭; ೨೫೩: ಜೀರಿಗೆ, ೧೯೩೩; ೧೧೪-೧೧೫ ಮತ್ತು ಶಿವಮೂರ್ತಿಶಾಸ್ತ್ರಿ, ೧೯೩೮: ೫೮).

ಮೇಲೆ ವಿವರಿಸಲ್ಪಟ್ಟ ವರ್ಣಾಶ್ರಮ ವ್ಯವಸ್ಥೆಯು ಮತ್ತೊಂದು ಉದ್ದೇಶವನ್ನು ಹೊಂದಿತ್ತು. ಅದೇನೆಂದರೆ ಈಗಾಗಲೇ ಅನೇಕ ಕೆಳಜಾತಿಯನ್ನು ಲಿಂಗಾಯತರೆಂದು ಜನಗಣತಿಯಲ್ಲಿ ನಮೂದಿಸಿದ್ದರಿಂದ, ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ, ಅವರನ್ನು ಒಳಗೊಂಡು ಜನಸಂಖ್ಯೆಯಲ್ಲಿ ಅತಿ ದೊಡ್ಡ ಸಮುದಾಯವೆಂದು ತೋರಿಸಿಕೊಳ್ಳುವ ಸದಾವಕಾಶ ಲಿಂಗಾಯತ ಗಣ್ಯರಿಗೆ ದೊರಕಿತು. ಆದರೆ ಕೆಳ ಜಾತಿಯವರಿಂದ ತಮ್ಮ ಧಾರ್ಮಿಕ ಮತ್ತು ಸಾಮಾಜಿಕ ಸ್ಥಾನ-ಮಾನಗಳು ಕಲುಷಿತವಾಗಬಾರದೆಂಬ ಜಾಗ್ರತೆಯೂ ಇತ್ತು. ಹೀಗಾಗಿ ಅವರನ್ನು ಮೇಲೆ ವಿವರಿಸ್ಪಟ್ಟ ವರ್ಣಾಶ್ರಮ ವ್ಯವಸ್ಥೆಯ ಮಾದರಿಯಲ್ಲಿ ನಾಲ್ಕು ವಿಭಾಗಗಳನ್ನಾಗಿ ಏರ್ಪಡಿಸಿಕೊಂಡು ಕೆಳಸ್ಥಾನದಲ್ಲಿರಿಸಲಾಯಿತು. ಮೇಲೆ ನೋಡಿದ ಹಾಗೆ ಇದಕ್ಕೆ ಮೈಸೂರು ಸರ್ಕಾರದ ಅನುಮೋದನೆಯು ಇತ್ತು. ಇದರಿಂದ ಲಿಂಗಾಯತರಿಗೆ ತಮ್ಮ ಪ್ರಾಬಲ್ಯವನ್ನು ಮುಂದುವರೆಸಲು ಅನುಕೂಲವಾಯಿತು. ಲಿಂಗಾಯತರ ಸಂಸ್ಕೃತಿ, ಸಮಾಜ ಮತ್ತು ಜೀವನ ಶೈಲಿಯನ್ನು ನಿರ್ಧಿಷ್ಟ ರೀತಿಯಲ್ಲಿ ನಿರ್ಧರಿಸುವ ಅಧಿಕಾರವನ್ನು ಕಾಪಾಡಿಕೊಳ್ಳಲು ಅವರಿಗೆ ದಾರಿಯಾಯಿತು. ಇಂತಹ ವ್ಯವಸ್ಥೆಯಿಂದ ಉಂಟಾದ ಸಾಮಾಜಿಕ ಪಲ್ಲಟಗಳಿಗೆ ಯಾವ ರೀತಿಯಲ್ಲಿ ಕೆಳಜಾತಿಯವರು ಪ್ರತಿಕ್ರಿಯೆ ವ್ಯಕ್ತಪಡಿಸಿದರು ಎಂಬುದಕ್ಕೆ ಸಾಕಷ್ಟು ಆಧಾರಗಳಿಲ್ಲದಿರುವದರಿಂದ ಅದರ ಬಗ್ಗೆ ಹೆಚ್ಚಿನ ಚರ್ಚೆ ಇಲ್ಲಿ ಸಾಧ್ಯವಿಲ್ಲ. ಒಂದು ಅಂಶ ಇಲ್ಲಿ ಸ್ಪಷ್ಟ. ಲಿಂಗಾಯತರ ‘ಸಂಖ್ಯೆ ರಾಜಕೀಯ’ದ (politics of number) ಮೊಳಕೆಗಳನ್ನು ಈ ಸಮಯದಲ್ಲಿ ಕಾಣಬಹುದು.

ಇತರರನ್ನು ಹೊರಗಿಡುವ ಮತ್ತು ಒಳಗಾಗಿಸಿಕೊಳ್ಳುವ ಪ್ರಕ್ರಿಯೆಯನ್ನು ಲಿಂಗಾಯತರು ತಮ್ಮ ಗ್ರಾಂಥಿಕ ಪರಂಪರೆಯ ಸಹಾಯದಿಂದಲೂ ಸಮರ್ಥಿಸಿಕೊಂಡ ಸಾಕಷ್ಟು ಉದಾಹರಣೆಗಳಿವೆ. ಇದನ್ನು ಬಸವನ ಸುತ್ತ ಇದ್ದ ಕಥನಗಳು ಮತ್ತು ಲಿಂಗಾಯತ ಗಣ್ಯರ ಬ್ರಾಹ್ಮಣರ ವಾದಗಳ ನಡುವೆ ಅಂದು ಇದ್ದ ಧಾರ್ಮಿಕ ಸಂಬಂಧಗಳನ್ನು ಚರ್ಚಿಸುತ್ತಾ ವಿವರಿಸಬಹುದು. ೧೮೮೦ರ ಸುಮಾರಿನಲ್ಲಿ ಅನೇಕ ಲಿಂಗಾಯತ ವಿದ್ವಾಂಸರು ಬಸವನ ‘ಕ್ರಾಂತಿಕಾರಕ’ ವಿಚಾರಗಳನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಬ್ರೌನ್ ಮತ್ತು ಇತರ ಪೌರುತ್ಯ ವಿದ್ವಾಂಸರ ವಾದಗಳನ್ನು ಅವು ಇದ್ದಂತೆ ಒಪ್ಪಿಕೊಳ್ಳಲು ಅವರು ಸಿದ್ಧರಿರಲಿಲ್ಲ. ಬಸವನು ಬ್ರಾಹ್ಮಣರ ವಿರುದ್ಧ ಸಮರ ಸಾರಿದನು ಮತ್ತು ಆತನು ಜಾತಿ ವ್ಯವಸ್ಥೆಯ ವಿರುದ್ಧವಿದ್ದನು ಎಂಬುದನ್ನು ಸ್ವೀಕರಿಸಲು ಕರಿಬಸವಶಾಸ್ತ್ರಿಯಂತವರು ಎಳ್ಳಷ್ಟೂ ಸಿದ್ಧರಿರಲಿಲ್ಲ. ಇದರ ಜೊತೆಗೆ ಬಸವನು ಸಮಾನತೆಯ ಹರಿಕಾರ, ಸಮಾಜೋದ್ಧಾರಕಮ ಇತ್ಯಾದಿ ಗ್ರಹಿಕೆಗಳು ಲಿಂಗಾಯತ ಜನಸಾಮಾನ್ಯರಲ್ಲಿ ಅಸ್ಪಷ್ಟವಾಗಿತ್ತು. ಇಷ್ಟಾಗಿಯೂ ಬಸವನು ಶಿವನ ಅವತಾರ ಎಂಬುದರಲ್ಲಿ ಅವರಿಗೆ ಸಂಶಯವಿರಲ್ಲಿ. ಅವನನ್ನು ವೀರಶೈವ ಮತದ ಉದ್ಧಾರಕ ಎಂದು ನಂಬಿದ್ದರು. ಬಸವನ ಬಗ್ಗೆ ಯಾರಾದರು ತಪ್ಪು ಮಾತಾಡಿದರೆ ಅವರನ್ನು ಖಂಡಿಸದೇ ಬಿಡುತ್ತಿರಲಿಲ್ಲ. ಆದರೆ ಇದು ಬಸವನ ವಿಚಾರಗಳಿಗಾಗಲಿ ಅಥವಾ ಆತನ ಪೌರೋಹಿತ್ಯ-ವಿರೋಧಿ ನಿಲುವುಗಳ ಸಮರ್ಥನೆಯಾಗಿರಲಿಲ್ಲ. ಉದಾಹರಣೆಗೆ ಮೈಸೂರ್ ಸ್ಟಾರ್ ಕರೆಸ್ಪಾಂಡೆನ್ಸ್ (೧೮೮೨) ನಲ್ಲಿ ಕರಿಬಸವಶಾಸ್ತ್ರಿಯವರು ಬಸವನ ಬಗ್ಗೆ ತಮ್ಮ ವಿಚಾರಗಳನ್ನು ಸ್ಪಷ್ಟವಾಗಿ ಮಂಡಿಸಿದ್ದಾರೆ. ಬ್ರಾಹ್ಮಣ ವಿದ್ವಾಂಸರಾದ ಶ್ರೀನಿವಾಸಯ್ಯ ಮತ್ತು ರಾಮಶಾಸ್ತ್ರಿಯವರು ಮತ್ತೊಂದು ಪತ್ರಿಕೆಯನ್ನು ಬಸವನು ಕುತಂತ್ರಿಯಾಗಿದ್ದನು ಮತ್ತು ಬಿಜ್ಜಳನ ವಿರುದ್ಧ ತಂತ್ರ ರಚಿಸಿ ಲಿಂಗಾಯತ ಮತವನ್ನು ಸ್ಥಾಪಿಸಿದನೆಂದು ನಿಂದಿಸಿದರು. ಇದಕ್ಕೆ ಪ್ರತಿವಾದಿಯಾಗಿ ಕರಿಬಸವಶಾಸ್ತ್ರಿಯವರು ಬಸವನನ್ನು ಲಿಂಗಾಯತ ಮತದ ಸ್ಥಾಪಕನೆಂದು ಒಪ್ಪಿಕೊಳ್ಳದಿದ್ದರೂ, ಅವನು ಬಿಜ್ಜಳನ ವಿರುದ್ಧ ತಂತ್ರ ಹೂಡಿದನೆಂಬ ಆಪಾದನೆಯನ್ನು ಕಡು ಶಬ್ದಗಳಿಂದ ಖಂಡಿಸಿದರು. ಈ ತರಹದ ಅಪಪ್ರಚಾರಕ್ಕೆ ಲಿಂಗಾಯತೇತರ ಕೃತಿಗಳೇ ಕಾರಣವೆಂದು ಅವರ ನಂಬಿಕೆ. ಜೈನ ಪಂಡಿತನಿಂದ ರಚಿಸಲ್ಪಟ್ಟು, ವುರ್ಥನಿಂದ ಸಂಕಲಿಸಲ್ಪಟ್ಟ ಪ್ರಕಾರ ಮಾಲಿಕೆ ಎಂಬ ಕೃತಿಯನ್ನು ಗಮನದಲ್ಲಿಟ್ಟುಕೊಂಡು ಅವುಗಳನ್ನು ಸಾರಾಸಗಟ ತಿರಸ್ಕರಿಸಿದರು. ಅವರ ಹಿತೈಷಿ ಮತ್ತು ವಿದ್ವಾಂಸರಾದ ಯಜಮಾನ್ ವೀರಸಂಗಪ್ಪನವರು ಸಹ ಇಂತಹ ಕೃತಿಗಳನ್ನು ಖಂಡಿಸುವಲ್ಲಿ ಹಿಂದೆ ಬೀಳಲಿಲ್ಲ. ಪ್ರಕ್ಕಾವ್ಯ ಮಾಲಿಕೆಯನ್ನು ಪ್ರಕಟಿಸಿದ ಜೆ.ಗ್ಯಾರೆಟ್ ಎಂಬುವವನಿಗೆ ಈ ಬ್ರಾಹ್ಮಣರು ತಪ್ಪು ಮಾಹಿತಿಗಳನ್ನು ನೀಡಿದರೆಂದು ವೀರಸಂಗಪ್ಪನವರು ಜರಿದರು. ಕರಿಬಸವಶಾಸ್ತ್ರಿ ಮತ್ತು ವೀರಸಂಗಪ್ಪನವರು ಇಷ್ಟೊಂದು ಉದ್ವೇಗ ಮತ್ತು ಆತಂಕಗೊಳ್ಳಲು ಇದ್ದ ಕಾರಣವೇನೆಂದರೆ ಬಸವನು ಬ್ರಾಹ್ಮಣರ ವಿರುದ್ಧವಿದ್ದುದರಿಂದ ಲಿಂಗಾಯತರು ತಮ್ಮನ್ನು ಬ್ರಾಹ್ಮಣರೆಂದು ಕರೆದುಕೊಳ್ಳಲು ಸಾಧ್ಯವಿಲ್ಲವೆಂದು ಬ್ರಾಹ್ಮಣರು ವಾದಿಸಬಹುದಾದ ಸಾಧ್ಯತೆ.

ಕರಿಬಸವಶಾಸ್ತ್ರಿಯವರು ಲಿಂಗಾಯತರ ಶ್ರೇಷ್ಠತೆಯನ್ನು ಸಾಧಿಸುವುದಕ್ಕೋಸ್ಕರ ಸತತವಾಗಿ ಅನೇಕ ಲೇಖನಗಳನ್ನು ಮತ್ತು ಉಪನ್ಯಾಸಗಳನ್ನು ಸಾದರಪಡಿಸಿದರು. ೧೯೦೪ರಲ್ಲಿ ಭಾರತ ಸರ್ಕಾರವು ಸಕಲ ಜನಾಂಗ ವರ್ಣನೆಯೆಂಬ ಎತ್ತಾಗ್ರಫಿಯ ಪುಸ್ತಕವನ್ನು ಹೊರ ತಂದಾಗ ಅದರಲ್ಲಿ ಬಸವನ ‘ಕ್ರಾಂತಿಕಾರಕ’ ವಿಚಾರಗಳ ಅನುಮೋದನೆಯನ್ನು ಮತ್ತು ಲಿಂಗಾಯತ ಜನಾಂಗದ ಬಗ್ಗೆ ಇರುವ ವ್ಯತಿರಿಕ್ತ ದಾಖಲೆಗಳನ್ನು ತೀವ್ರವಾಗಿ ಖಂಡಿಸಿದರು. ಅವರ ಪ್ರಕಾರ ಸರ್ಕಾರ ಪ್ರಕಟಿಸಿರುವ ಎತ್ನಾಗ್ರಫಿಯ ವಿಷಯವು “ವೀರಶೈವ ಶಾಸ್ತ್ರಕ್ಕೆ ವಿರುದ್ಧವಾಗಿಯೂ, ವೀರಶೈವ ಮತಕ್ಕೆ ಅಗೌರವಕರಗಳಾಗಿಯೂ ಇವೆ” (ಶಾಸ್ತ್ರಿ, ೧೯೨೫: ೧೯). ಬಸವನ ವಿಧವಾ ವಿವಾಹ ಮತ್ತು ಜಾತಿ-ಭೇದದ ವಿರೋಧಿ ವಿಚಾರಗಳು ಲಿಂಗಾಯತ ಧರ್ಮದ ತಿರುಳಲ್ಲವೆಂದು ಈ ಪುಸ್ತಕದ ವಿಮರ್ಶೆಯಲ್ಲಿ ಸಾಧಿಸಲು ಪ್ರಯತ್ನಿಸಿದ್ದಾರೆ. ಈ ವಿಮರ್ಶೆಯನ್ನು ಸಿರಿಸಿ ಗುರುಶಾಂತಶಾಸ್ತ್ರಿಯವರು ತಮ್ಮ ಸಂಕಲನವಾದ ಉಪನ್ಯಾಸ ಸಂಗ್ರಹ (೧೯೨೫)ದಲ್ಲಿ ಪ್ರಕಟಿಸಿದರು. ಕರಿಬಸವಶಾಸ್ತ್ರಿಯವರು ಈ ಲೇಖನವನ್ನು ೧೯೦೪ರಲ್ಲಿಯೇ ಬರೆದರೂ, ಇದನ್ನು ೧೯೨೫ರಲ್ಲಿ ಸಂಕಲಿಸಿ, ಪ್ರಕಟಿಸಿದುದರ ಉದ್ದೇಶವು ಇನ್ನೂ ಬಸವ, ವೇದ-ಆಗಮಗಳು, ಇತ್ಯಾದಿಗಳ ಬಗ್ಗೆ ಲಿಂಗಾಯತರಲ್ಲಿದ್ದ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಸಾಧ್ಯವಾಗದ ಸನ್ನಿವೇಶವನ್ನು ಸೂಚಿಸುತ್ತದೆ. ಪುಸ್ತಕದಲ್ಲಿನ ಇತರ ಲೇಖನಗಳು ಸಹ (ಸುತ್ತೂರು ಶಾಂತವೀರಶಾಸ್ತ್ರಿ, ೧೯೦೪) ಮತ್ತು ಇಂಗಳಗುಂಡಿ ಶಾಂತಪ್ಪ ಎಡೆಹಳ್ಳಿ (೧೯೧೪)ರಿಂದ ಬರೆಯಲ್ಪಟ್ಟಿದ್ದು ಕರಿಬಸವಶಾಸ್ತ್ರಿಯವರಂತೆ ವೀರಶೈವರು ವೇದಿಗಳೆಂದು ತಮ್ಮ ವಾದವನ್ನು ಮಂಡಿಸಿದ್ದಾರೆ.

ಬ್ರಾಹ್ಮಣತ್ವವನ್ನು ಸಾಧಿಸಲು ಹೋರಾಟ ಲಿಂಗಾಯತರ ಛಲವನ್ನು ಸಂಸ್ಕೃತೀಕರಣದ ಪ್ರಯತ್ನ ಎಂದು ಕರೆತರಲಾಗದು. ಏಕೆಂದರೆ ಬ್ರಾಹ್ಮಣರು ಮತ್ತು ಸರ್ಕಾರಗಳು ಲಿಂಗಾಯತರನ್ನು ಸಾಮಾಜಿಕವಾಗಿ ಅಥವಾ ಧಾರ್ಮಿಕವಾಗಿ ಬ್ರಾಹ್ಮಣರೆಂದು ಗೌರವಿಸಲು ನಿರಾಕರಿಸಿದಾಗ, ಲಿಂಗಾಯತರು ಬ್ರಾಹ್ಮಣ ವಿರೋಧಿ ನೆಲೆಯಿಂದ ಬ್ರಾಹ್ಮಣರಂತೆ ತಾವು ಕೂಡ ಶ್ರೇಷ್ಠರು ಎಂದು ಸಾಧಿಸಲು ಪ್ರಯತ್ನಿಸಿದರು. ಇದಕ್ಕಾಗಿ ಬ್ರಾಹ್ಮಣ ಪರಿಕಲ್ಪನೆಯನ್ನೇ ಪುನರ್ ವ್ಯಾಖ್ಯಾನಿಸುವ ಪ್ರಯತ್ನಗಳನ್ನು ಮೈಸೂರ್ ಸ್ಟಾರ್ ಕರೆಸ್ಟಾಂಡನ್ಸ್‌ನಲ್ಲಿ ನೋಡಬಹುದು. ನಿಜವಾದ ಬ್ರಾಹ್ಮಣರು ಯಾರು ಮತ್ತು ಯಾರು ಅಲ್ಲ ಎಂದು ಚರ್ಚೆಯನ್ನು ಇದರಲ್ಲಿ ಕಾಣಬಹುದು. ಇದು ಒಮ್ಮೆ ಶಾಸ್ತ್ರಗಳ ಆಧಾರದ ಮೇಲೆ; ಕೆಲವೊಮ್ಮೆ ಜಾತಿಯಾಧಾರದ ಮೇಲೆ; ಮಗದೊಮ್ಮೆ ಸಂಪ್ರದಾಯದ ಆಧಾರದ ಮೇಲೆ ನಿಂತಿತ್ತು. ಆಧುನೀಕರಣಕ್ಕೆ ತಮ್ಮನ್ನು ತಾವು ಒಳಗಾಗಿಸಿಕೊಂಡಿದ್ದ ಲಿಂಗಾಯತರು ಸಂಪ್ರದಾಯವನ್ನು ಬಳಸಿಕೊಂಡಿರುವ ಪ್ರಕ್ರಿಯೆಯನ್ನು ಇದು ಸೂಚಿಸುತ್ತದೆ.

ಇವೆಲ್ಲದರ ಪರಿಣಾಮವಾಗಿ ಪುರಾತನ ಶೈವ ಪುರಾಣ, ಕಾವ್ಯ ಮತ್ತು ಶಾಸ್ತ್ರಗಳನ್ನು ಸಂಗ್ರಹಿಸಿ, ಶುದ್ಧೀಕರಿಸಿ, ಪ್ರಕಟಿಸುವ ಕೆಲಸವು ಹೆಚ್ಚಾಗಿ ನಡೆಯಿತು. ಸಂಸ್ಕೃತ ಮತ್ತು ಕನ್ನಡ ಗ್ರಂಥಗಳಾದ ಶತಕಗಳು, ವೀರಶೈವ ಲಿಂಗ ಪೂಜಾವಿಧಿ, ತ್ರಿಶಷ್ಟಿ ಪುರಾತನ ಚರಿತ್ರೆ, ಬಸವೇಶ ವಿಜಯ, ಪ್ರಭುಲಿಂಗಲೀಲೆ, ಮುಂತಾದವುಗಳನ್ನು ರೂಪಾಂತರಿಸುವ ಅಥವಾ ಭಾಷಾಂತರಿಸುವ ಕಾರ್ಯವು ಈ ಸಮಯದಲ್ಲಿ ಬಿರುಸಿನಿಂದ ಸಾಗಿತು.[9] ವಾರದ ಮಲ್ಲಪ್ಪ, ಅರಟಾಳ ರುದ್ರಗೌಡ, ಪಿ.ಆರ್. ಕರಿಬಸವಶಾಸ್ತ್ರಿ, ಎನ್.ಆರ್. ಕರಿಬಸವಶಾಸ್ತ್ರಿ ಮತ್ತು ಸಿದ್ದರಾಮಪ್ಪ ಪಾವಟೆಯವರು ಸಂಸ್ಕೃತ ಪಂಡಿತರಾಗಿದ್ದರು. ಅವರು ಈ ಭಾಷಾಂತರಗಳ ಕಾರ್ಯದಲ್ಲಿ ನುರಿತವರಾಗಿದ್ದರು. ಜೊತೆಗೆ ಭಾಷಾಂತರ ಅಥವಾ ಶುದ್ಧೀಕರಿಸಲ್ಪಟ್ಟ ಪುರಾತನ ಶೈವ ಗ್ರಂಥಗಳನ್ನು ಪ್ರಕಟಿಸುವ ಮತ್ತು ಜನಪ್ರಿಯಗೊಳಿಸುವ ಉದ್ದೇಶದಿಂದ ತಮ್ಮದೇ ಆದ ಪ್ರಿಂಟಿಂಗ್ ಪ್ರೆಸ್ ಗಳನ್ನು ಶೂರು ಮಾಡಿದರು. ಇವೆಲ್ಲವರ ಮೂಲ ಉದ್ದೇಶವು ಲಿಂಗಾಯತರಲ್ಲಿ ತಮ್ಮ ಸಾಹಿತ್ಯ ಮತ್ತು ಧರ್ಮದ ಬಗ್ಗೆ ಅರಿವು ಮತ್ತು ಗೌರವಗಳನ್ನು ಮೂಡಿಸುವುದು ಮತ್ತು ಲಿಂಗಾಯತರಿಗೆ ತಮ್ಮದೆ ಆದ ಗ್ರಾಂಥಿಕ ಪರಂಪರೆ ಇದೆಯೆಂದು ಸಾಬೀತು ಪಡಿಸುವುದು.[10] ಈ ಪುರಾತನ ಗ್ರಂಥಗಳು ಶಿವಶರಣ ಮತ್ತು ಪಂಚ ಆಚಾರ್ಯರ ಜೀವನ ಚರಿತ್ರೆ, ಭಕ್ತಿ ದೀಕ್ಷೆ, ವಿವಾಹ ವಿಧಿ, ಶಿವಪೂಜಾ ವಿಧಿ, ಗುರುಭಕ್ತಿ, ವ್ಯವಸಾಯ, ಇತ್ಯಾದಿಗಳ ಬಗ್ಗೆ ಇದ್ದವು. ಹೀಗೆ ಹೊಸದಾಗಿ ಕಣ್ತೆರೆದ ಅರಿವಿನ ಶೌಟೆನ್ ಎಂಬ ಪಾಶ್ಚಾತ್ಯ ವಿದ್ವಾಂಸನು ಸಹ ನಮ್ಮ ಗಮನ ಸೆಳೆದಿದ್ದಾನೆ (ಶೌಟೆನ್, ೧೯೯೯: ೭೫). ಅವನ ಪ್ರಕಾರ ಲಿಂಗಾಯತರನ್ನು ಆಧುನಿಕತೆಗೆ ಒಗ್ಗಿಸಿಕೊಳ್ಳುವಲ್ಲಿ ೧೯೦೪ರಲ್ಲಿ ಪ್ರಾರಂಭವಾದ ಅಖಿಲ ಭಾರತ ವೀರಶೈವ ಮಹಾಸಭೆಯ ಪಾತ್ರವು ಬಹಳ ಮಹತ್ವದ್ದು. ಆದರೆ ಈ ಕಾಲದಲ್ಲಿ ಸಂಸ್ಕೃತಕ್ಕೆ ಹೆಚ್ಚು ಪ್ರಾಶಸ್ತ್ಯವಿದ್ದು, ಬಸವನ ವಿಚಾರಗಳಿಗೆ ಅಥವಾ ೧೨ನೇ ಶತಮಾನದ ಕ್ರಾಂತಿಗೆ ಅಷ್ಟೊಂದು ಗೌರವ ಇರಲಿಲ್ಲ ಎಂದು ಗುರುತಿಸಿದ್ದಾನೆ. ಉದಾಹರಣೆಗೆ, ಪ್ರಥಮ ಅಖಿಲ ಭಾರತ ವೀರಶೈವ ಮಹಾಸಭೆಯ ವಾರ್ಷಿಕ ಕಾರ್ಯಕ್ರಮದಲ್ಲಿ (೧೯೦೪) ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದ ಲಿಂಗಪ್ಪ ಜಾಯಪ್ಪ ದೇಸಾಯಿಯವರು ಲಿಂಗಾಯತ ಮತವು ವೀರಶೈವ ಮಹಾಸಭೆಯ (೧೯೦೯) ಸಮಾವೇಶ ಅಧ್ಯಕ್ಷರಾಗಿದ್ದ ರಾವ್ ಬಹದ್ದೂರ್ ಬಸಪ್ಪ ಮಲ್ಲಪ್ಪ ವಾರದರು ಸಹ ಲಿಂಗಾಯತ ಧರ್ಮವು ರೇಣುಕ, ದಾರುಕ, ಗಜಕರ್ಣ, ಘಂಟಕರ್ಣ ಮತ್ತು ವಿಶ್ವಕರ್ಮರ ಪರಂಪರೆಯ ಮೂಲದಿಂದ ಹುಟ್ಟಿಕೊಂಡಿದ್ದು ಎಂದು ಘೋಷಿಸಿದರು.[11]

[1] ಎಸ್.ಎನ್. ಭೂಸರೆಡ್ಡಿ ಮತ್ತು ಮಧು ವೆಂಕಟರೆಡ್ಡಿಯವರ ಪ್ರಕಾರ ಲಿಂಗಾಯತರು ೧೮೬೦ ರಲ್ಲಿಯೇ ಅನೇಕ ಪತ್ರಿಕೆಗಳನ್ನು ಹೊರಡಿಸುತ್ತಿದ್ದರು. ಅವರ ವೀರಶೈವ ನಿಯತಕಾಲಿಕಗಳು (೧೯೯೫) ಲಿಂಗಾಯತರ ಪತ್ರಿಕೆಗಳ ಬಗ್ಗೆ ಅಧ್ಯಯನ ನಡೆಸಲು ಮುಖ್ಯ ಆಕರಗಳಾಗಿವೆ.

[2] ಇವರೆಲ್ಲರೂ ಶ್ರೀಮಂತ ವ್ಯಾಪಾರ ಮತ್ತು ಭೂಮಾಲೀಕರಾಗಿದ್ದವರು.

[3] ಈ ಒತ್ತಾಯವು ಆಂಧ್ರದಲ್ಲಿದ್ದ ವಿಶ್ವಕರ್ಮ ಬ್ರಾಹ್ಮಣರ ಮಾದರಿಯಲ್ಲಿತ್ತು. ಅವರೂ ಸಹ ತಮ್ಮನ್ನು ಬ್ರಾಹ್ಮಣರನ್ನಾಗಿ ಗುರುತಿಸಬೇಕೆಂದು ಅಲ್ಲಿನ ಸರ್ಕಾರವನ್ನು ಒತ್ತಾಯಿಸಿದರು.

[4] ನಂತರದ ಜನಗಣತಿಗಳು ಲಿಂಗಾಯತ ಮತ್ತು ಬ್ರಾಹ್ಮಣರ ನಡುವಿನ ಘರ್ಷಣೆಗಳನ್ನು ಹೆಚ್ಚಿಸಿದವು. ಉದಾರಹಣೆಗೆ, ಮೈಸೂರಿನಲ್ಲಿ ಬ್ರಾಹ್ಮಣರು ಲಿಂಗಾಯತರ ನಂದಿ ಧ್ವಜ ಆಚರಣೆಯ ಬಗ್ಗೆ ಆಕ್ಷೇಪಿಸಿದರು. ಬ್ರಾಹ್ಮಣರ ಪ್ರಕಾರ ನಂದಿಧ್ವಜ ಮೆರವಣಿಗೆಯ ಬಲಗೈ ಕೆಳಜಾತಿಗಳಿಗೆ ಸಂಬಂಧಿಸಿರುವದರಿಂದ, ಅದನ್ನು ಆಚರಿಸುವ ಲಿಂಗಾಯತರು ಬ್ರಾಹ್ಮಣರು ಹೇಗಾದರು? ಎಂದು ಪ್ರಶ್ನಿಸಿದರು. ತಮ್ಮನ್ನು ಬ್ರಾಹ್ಮಣರೆಂದು ಗುರುತಿಸಿ ಕೊಳ್ಳಬೇಕಾದರೆ ಲಿಂಗಾಯತರು ತಮ್ಮ ಪೂರ್ವದ ನಂದಿಧ್ವಜ ಮೆರವಣಿಗೆಯನ್ನು ಬಿಡಬೇಕು ಎಂದು ಬ್ರಾಹ್ಮಣರು ಸವಾಲು ಎಸೆದರು.

[5] ಬ್ರಾಹ್ಮಣತ್ವದ ಬಗ್ಗೆ ಲಿಂಗಾಯತರಿಗೂ ಮತ್ತು ಬ್ರಾಹ್ಮಣರಿಗೂ ನಡೆದ “ಧರ್ಮಯುದ್ಧ” (ಚಿದಾನಂದ ಮೂರ್ತಿ, ೨೦೦೦: ೨೦೨)ದ ಬಗ್ಗೆ ೧೮೮೨ರಲ್ಲಿ ಪ್ರಕಟವಾದ ಮೈಸೂರ್ ಸ್ಟಾರ್ ಕರೆಸ್ಪಾಂಡೆನ್ಸ್ ಪುಸ್ತಕದಲ್ಲಿ (ಎರಡು ಸಂಪುಟಗಳು) ಹೇರಳವಾಗಿ ಮಾಹಿತಿಗಳು ಸಿಗುತ್ತವೆ. ಈ ಪುಸ್ತಕವನ್ನು ಸಂಕಲಿಸಿ, ಪ್ರಕಟಿಸಿದವರು ಯಜಮಾನ್ ವೀರಸಂಗಪ್ಪನವರು. ನನಗೆ ಲಭ್ಯವಿರುವ ಸಂಪುಟದಲ್ಲಿ ಪಿ.ಆರ್. ಕರಿಬಸವಶಾಸ್ತ್ರಿಯವರು ಬ್ರಾಹ್ಮಣ ವಿದ್ವಾಂಸರಿಗೆ ನೀಡಿದ ಪ್ರತ್ಯುತ್ತರಗಳಿವೆ. ಎರಡನೇ ಸಂಪುಟದಲ್ಲಿ ವೀರಸಂಗಪ್ಪನವರು ಬರೆದ ವಾದಗಳಿವೆ ಎಂದು ತಿಳಿದು ಬಂದಿದೆ. ಆದರೆ ಈ ಪುಸ್ತಕವು ನನ್ನ ಬಳಿಯಿಲ್ಲ.

[6] ಜೇಮ್ಸ್ ಮ್ಯಾನರ್ ರ ಅಧ್ಯಯನವು ೧೯೦೧ರ ಜನಗಣತಿಯ ಬಗ್ಗೆ ಕೆಲವು ಮಾಹಿತಿಗಳನ್ನು ಒದಗಿಸುತ್ತದೆ. ಅವರು ಗಮನಿಸುವ ಹಾಗೆ “ಲಿಂಗಾಯತ ಗುಂಪಿಗೆ ಸೇರಿದ ನೊಣಬ ಮತ್ತು ಸಾದರರನ್ನು ೧೮೯೧ರ ಜನಗಣತಿಯವರೆಗೆ ಒಕ್ಕಲಿಗರೆಂದು ಪರಿಗಣಿಸಲಾಗಿತ್ತು. ಆದರೆ ೧೯೦೧ರ ಜನಗಣತಿಯಲ್ಲಿ ಅವರನ್ನು ಒಕ್ಕಲಿಗರ ಪಟ್ಟಿಯಿಂದ ತೆಗೆದು ಲಿಂಗಾಯತರ ಗುಂಪಿಗೆ ಸೇರಿಸಲಾಯಿತು” (೧೯೭೭: ೩೭).

[7] ಪ್ರಥಮ ವೀರಶೈವ ಮಹಿಳಾ ಪರಿಷತ್ತು (೧೯೦೯) ಮತ್ತು ವಾರ್ಷಿಕ ಅಖಿಲ ಭಾರತ ವೀರಶೈವ ಮಹಾಸಭೆ (೧೯೦೯)ಯ ಸಮಾವೇಶವು ಈ ನಾಲ್ಕು ವರ್ಣಗಳಲ್ಲಿ ಯಾರ್ಯಾರು ಸೇರುತ್ತಾರೆಂದು ಪಟ್ಟಿ ಮಾಡಿ, ಅದಕ್ಕೆ ಸಂಬಂಧಿಸಿದಂತೆ ಒಂದು ಗೊತ್ತುವಳಿಯನ್ನು ಹೊರಡಿಸಿತು. ಆ ಗೊತ್ತುವಳಿಯ ಪ್ರಕಾರ ವೀರಶೈವ ಬ್ರಾಹ್ಮಣ ಗುಂಪಿಗೆ ಜಂಗಮರು ಮತ್ತು ಆರಾಧ್ಯರು ಮಾತ್ರ ಸೇರುತ್ತಾರೆ; ದೇಸಾಯಿ, ದೇಶಪಾಂಡೆ ಮತ್ತು ಇತರ ಪಾಳೆಯ ಮನೆತನದವರು ವೀರಶೈವ ಕ್ಷತ್ರಿಯ ಗುಂಪಿಗೆ ಸೇರಿದವರು. ಕೈಗಾರಿಕೋದ್ಯಮಿಗಳು ಮತ್ತು ವ್ಯಾಪಾರ ವರ್ಗದವರು ವೀರಶೈವ ವೈಶ್ಯ ವರ್ಣದಡಿಯಲ್ಲಿ ಸೇರುತ್ತಾರೆ; ಉಳಿದೆಲ್ಲಾ ಜಾತಿಯವರು ವೀರಶೈವ ಶೂದ್ರ ಗುಂಪಿಗೆ ಸೇರಬೇಕಾದವರೆಂದು ನಿಶ್ಚಯಿಸಲಾಯಿತು.

[8] ಬಿ.ಸಿ. ವೀರಪ್ಪನವರು ಇದರ ಬಗ್ಗೆ ಅಮೂಲ್ಯವಾದ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಗಂಜಾಂಮಠದ ನಂಜುಂಡಸ್ವಾಮಿಗಳು ೧೮೯೧ರಲ್ಲಿ ಜನಗಣತಿ ವಿಚಾರವಾಗಿ ಮಹಾರಾಜ ಶ್ರೀ ಚಾಮರಾಜೇಂದ್ರ ಒಡೆಯರ್ ಅವರನ್ನು ಭೇಟಿಯಾಗಿ ತಮ್ಮನ್ನು ಬ್ರಾಹ್ಮಣರಂತೆ ಶ್ರೇಷ್ಠರು ಎಂದು ಪರಿಗಣಿಸಬೇಕೆಂದು ಮನವಿ ಪತ್ರವನ್ನು ನೀಡಿದ್ದರು. ಈ ಪತ್ರದ ನಕಲನ್ನು ವೀರಪ್ಪನವರು ತಮ್ಮ ಸಂಶೋಧನ ಕೃತಿಯಲ್ಲಿ ಅಚ್ಚು ಹಾಕಿಸಿದ್ದಾರೆ. ನಂಜುಂಡಸ್ವಾಮಿಗಳು ಜನಗಣತಿಯ ವಿಚಾರವಾಗಿ ಜಾಗೃತಿ ಉಂಟು ಮಾಡಿದ ಪತ್ರ (೧೮೯೦)ದ ನಕಲನ್ನೂ ಸಹ ಇಲ್ಲಿ ಕೊಡಲಾಗಿದೆ.

[9] ಶಿವಮೂರ್ತಿಶಾಸ್ತ್ರಿ (೧೯೩೮) ಮತ್ತು ಚಿದಾನಂದ ಮೂರ್ತಿಯವರು (೨೦೦೦) ಯಜಮಾನ್ ವೀರಸಂಗಪ್ಪನವರಿಂದ ಪ್ರಕಟಿಸಲ್ಪಟ್ಟ ಗ್ರಂಥಗಳ ಪಟ್ಟಿಯನ್ನು ತಮ್ಮ ಲೇಖನಗಳಲ್ಲಿ ಕೊಟ್ಟಿದ್ದಾರೆ.

[10] ಅರಟಾಳ ರುದ್ರಗೌಡರ ಜೀವನ ಚರಿತ್ರೆಯನ್ನು ರಚಿಸಿರುವ ಎಸ್.ಎಮ್. ಅಂಗಡಿಯವರು ರುದ್ರಗೌಡರು ಹುಬ್ಬಳ್ಳಿಯಲ್ಲಿ ಸ್ಥಾಪಿಸಿದ ವೀರಶೈವ ವಿಲಾಸ ಪ್ರೆಸ್‌ನ ಬಗ್ಗೆ  ಮಾಹಿತಿಗಳನ್ನು ಕೊಟ್ಟಿದ್ದಾರೆ. ಈ ಪ್ರೆಸ್ ನ ಉದ್ದೇಶ ವೀರಶೈವರಲ್ಲಿ ಅರಿವು ಮೂಡಿಸುವುದು ಮತ್ತು ವೀರಶೈವ ಗ್ರಂಥಗಳನ್ನು ಜನಪ್ರಿಯಗೊಳಿಸುವುದಾಗಿತ್ತು ಎಂದು ಅಂಗಡಿಯವರು ಬರೆದಿದ್ದಾರೆ. ಇದರ ಜೊತೆಗೆ ರುದ್ರಗೌಡರು ೧೯೦೯ರಲ್ಲಿ ವೀರಶೈವರ ಸರ್ವೆಯನ್ನು ಪ್ರಕಟಿಸಿದರು ಎಂಬ ಸಂಗತಿಯು ತಿಳಿದು ಬರುತ್ತದೆ.

[11] ಇವರ ಭಾಷಣಗಳ ಪೂರ್ಣ ಪಾಠವನ್ನು ಕೆ,ಎಮ್. ಶಿವಲಿಂಗಯ್ಯನವರು ಸಂಕಲಿಸಿರುವ ಅಖಿಲ ಭಾರತ ವೀರಶೈವ ಮಹಾಸಭೆಯ ಮಾಜಿ ಅಧ್ಯಕ್ಷರುಗಳ ಭಾಷಣ ಸಂಗ್ರಹ (೧೯೮೩) ವನ್ನು ನೋಡಬಹುದು.