ಜೀವನ

“ಸೌಹಾರ್ದತೆಯ ಉಗಮಸ್ಥಾನ ಸಹೃದಯತೆ. ಇದರ ಮೂಲಮಂತ್ರ ಪ್ರೀತಿ. ಯಾರ ಹೃದಯ, ಅಂತಃಕರಣ ಪ್ರೀತಿಯ, ಅನುರಾಗದ ಆಗರವಾಗಿರುತ್ತದೋ ಅಲ್ಲಿ ಆ ವ್ಯಕ್ತಿಗಳಲ್ಲಿ ಸೌಹಾರ್ದತೆ ನೆಲೆ ನಿಲ್ಲುತ್ತದೆ. ಪ್ರೀತಿಯ ಒರತೆಯಿಲ್ಲದಿದ್ದರೆ ಅಲ್ಲಿ ಸೌಹಾರ್ದತೆಯ ಗಂಗಾಜಲ ದೊರಕಲಾರದು. ಯಾರಲ್ಲಿ ದ್ವೇಷ, ಹಗೆತನ ಮನೆ ಮಾಡಿರುತ್ತದೋ ಅವರಲ್ಲಿ ಸೌಹಾರ್ದತೆ ಹೇಗೆ ನೆಲೆ ನಿಲ್ಲಬೇಕು? ಅಂತಲೆ ಇಂದಿನ, ಈ ಸೌಹಾರ್ದತೆಯಿಲ್ಲದ, ಪರಸ್ಪರ ಅನುರಾಗವಿಲ್ಲದ ಪರಿಸ್ಥಿತಿಗೆ ಪ್ರೀತಿಯ ಅಭಾವ, ಪ್ರೀತಿಯ ತಿರಸ್ಕಾರವೇ ಕಾರಣವೆಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ.” (ಈದ್ ಸೌಹಾರ್ದ ಕೂಟ, ಉದ್ಯಾವರ – ಇಲ್ಲಿ (1985 ಸೆಪ್ಟೆಂಬರ್) ಮಾಡಿದ ಭಾಷಣದ ಆಯ್ದಭಾಗ)

– ‘ದಾಂತಿ ಮಾಸ್ಟ್ರು’ ನಮಗೆ ಆಪ್ತವಾಗುವುದು ಇಂಥ ಪ್ರಕಾಶದಿಂದಲೇ. ಸಮಾಜದ ಒಳಿತಿಗಾಗಿ ಯಾರು ಬದುಕುತ್ತಾರೆ ಅಂಥವರಿಂದ ಸಮಾಜ ಬೆಳೆಯುತ್ತದೆ. ವ್ಯಕ್ತಿಗಳು ದೊಡ್ಡವರಾಗದೆ ಸಮಾಜ ದೊಡ್ಡದಾಗದು. ಸಮಾಜಮಖಿ ವ್ಯಕ್ತಿತ್ವದಿಂದಲೇ ವ್ಯಕ್ತಿಗಳು ದೊಡ್ಡವರಾಗುವುದು. ಜೀವನದಲ್ಲಿ ಮೌಲ್ಯಗಳಿಲ್ಲದೆ ವ್ಯಕ್ತಿಗಳು ದೊಡ್ಡವರಾಗ ಲಾರರು. ಪ್ರೀತಿಯೊಂದೇ ಎಲ್ಲ ಮೌಲ್ಯಗಳ ತಂದೆ-ತಾಯಿ. ತನ್ನ ಬಗ್ಗೆ ತನಗೆ ಪ್ರೀತಿ ಇರುವವರು, ತನ್ನ ಬಗ್ಗೆ ತನಗೆ ಗೌರವ ಇರುವವರು ಇತರರನ್ನು ಪ್ರೀತಿಸಬಲ್ಲರು, ಗೌರವ ಕೊಡಬಲ್ಲರು. ಅವರ ಸುಖ-ಸಂತೋಷವನ್ನು ಬಯಸಬಲ್ಲರು, ಆ ಸುಖ – ಸಂತೋಷಕ್ಕಾಗಿ ಮಿಡಿಯಬಲ್ಲರು, ದುಡಿಯಬಲ್ಲರು. ಅಂಥವರ ಸಾಮಾಜಿಕ ಜೀವನ ಅರಳಿಕೊಳ್ಳುವುದೇ ಹಾಗೆ. ಅಲ್ಲಿ ಅವರ ಕೌಟುಂಬಿಕ ಜೀವನವೂ ಸಾಮಾಜಿಕ ಜೀವನಕ್ಕೆ ಸತ್ವವಾಗಿಯೇ  ಮಹತ್ತ್ವ ಪಡೆದುಕೊಳ್ಳುತ್ತದೆ. – ಹೀಗೆಲ್ಲ ಅಂದುಕೊಂಡಾಗ ದಾಂತಿ ಮಾಸ್ಟ್ರು ಪಕ್ಕನೆ ನಮ್ಮ ಕಣ್ಣು ತುಂಬಿಕೊಳ್ಳುತ್ತಾರೆ; ಪಕ್ಕಕ್ಕೆ ಬಂದು ಮುಗುಳು ನಗುತ್ತಾರೆ.

‘ದಾಂತಿ ಮಾಸ್ಟ್ರು’ ಸಾಮಾನ್ಯವಾಗಿ ಉಡುಪಿ ವಲಯದಲ್ಲಿ ಇದೊಂದು ನುಡಿಗಟ್ಟೆ. ಈ ನುಡಿ ಕಿವಿಗೆ ಬಿದ್ದರೆ ಸಾಕು ಜೀವಪರ ನಾನಾ ಅರ್ಥಗಳು ಹೊರಳಿಕೊಳ್ಳುತ್ತದೆ. ಏನು ಅವರು? ಅಧ್ಯಾಪಕ, ಸುಧಾರಕ, ಸಂಘಟಕ, ಪರೋಪಕಾರಿ, ಬ್ಯಾಂಕ್ ಅಧಿಕಾರಿ, ಜನಹಿತ ಚಿಂತಕ, ಸ್ನೇಹಜೀವಿ, ಸಾಹಿತ್ಯ-ಸಂಗೀತ ಕಲಾಸಕ್ತ, ಭಾಷಣಕಾರ, ಸಮದೃಷ್ಟಿಯ ಮಾತುಗಾರ, ಲೇಖಕ-ಕವಿ-ಕತೆಗಾರ, ನಾಟಕಕಾರ – ಹೀಗೆ… ಹೀಗೆ ಆ ನುಡಿ ಧ್ವನಿ ಪಡೆದುಕೊಳ್ಳುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ವಿಶ್ವಮಾನವ ಪ್ರಜ್ಞೆಯುಳ್ಳ ಮಾನವತಾವಾದಿ. ಈ ಆವರಣದೊಳಗೆ ಅರಳಿಕೊಂಡಿರುವ ಅವರ ಬದುಕು ಹೊಸ ತಲೆಮಾರಿಗೆ ಒಂದು ಮಾದರಿಯೆ.

ದಾಂತಿ ಮಾಸ್ಟ್ರ ನಿಜನಾಮ ಫ್ರಾನ್ಸಿಸ್ ದಾಂತಿ, ಕಾವ್ಯನಾಮ ‘ಶ್ರೀದಾಂತಿ’. ಅಧ್ಯಾಪಕ ರಾಗಿ ಅವರು ಜನಪ್ರಿಯರಾದುದು ‘ದಾಂತಿ ಮಾಸ್ಟ್ರು’ ಅಂತ. ದಾಂತಿ ಎಂಬುದು ಅಡ್ಡ ಹೆಸರು. ಈ ಹೆಸರು ಇವರ ಹಿರಿಯರಿಗೆ ಹೇಗೆ ಬಂದಿತು, ಯಾವಾಗ ಬಂದಿತು – ಈ ಬಗ್ಗೆ ಚರಿತ್ರೆಯ ಪುಟವನ್ನು ನೋಡಬೇಕಾಗುತ್ತದೆ.

ಇತಿಹಾಸದ ಕಣ್ಣು

ಪೋರ್ಚುಗೀಸರು ಗೋವಾವನ್ನು ವಶಪಡಿಸಿಕೊಂಡ ಮೇಲೆ ರಾಜ್ಯ ವಿಸ್ತಾರದ ಜೊತೆಗೆ ಅಲ್ಲಿ ಧರ್ಮ ಪ್ರಸಾರವನ್ನೂ ಕೈಗೊಂಡರಲ್ಲವೆ? ಸ್ವಇಚ್ಛೆಯಿಂದಲೊ, ಒತ್ತಡ ದಿಂದಲೊ ಬಹುಸಂಖ್ಯೆಯಲ್ಲಿ ಗೋವಾ ನಿವಾಸಿಗಳು ಮತಾಂತರಗೊಂಡರು. ಮತಾಂತರ ಗೊಂಡವರಿಗೆ ಪೋರ್ಚುಗೀಸ್ ವಿಧಾನದಲ್ಲಿ ಅವರ ಹೆಸರನ್ನು ಬದಲಾಯಿಸುವುದೂ ಕೂಡ ಕ್ರಿಸ್ತೀಕರಣದ ಒಂದು ಭಾಗವಾಗಿತ್ತು. ಫೆರ್ನಾಂಡಿಸ್, ಮಸ್ಕರೇನ್ಹಸ್, ಡಿಸೋಜಾ, ಕುಲಾಸೊ, ಡಿಮೆಲ್ಲೊ, ಮೆಂಡೋನ್ಸಾ, ಮೊಂತೇರೊ – ಇತ್ಯಾದಿ ಅಡ್ಡಹೆಸರು (ಸರ್‌ನೇಮ್) ಗಳ ಹಾಗೆ ದಾಂತೀಸ್ ಅನ್ನುವುದೂ ಕೂಡ ಪೋರ್ಚುಗೀಸ್ ಭಾಷೆಯಿಂದ ಬಂದ ಪದ ವಾಗಿರಬೇಕು. ‘ಡಿವೈನ್ ಕೊಮಿಡಿ’ಯ ಕರ್ತೃ ದಾಂಟೆಗೂ ಈ ದಾಂತಿಗೂ ಏನಾದರೂ ಸಂಬಂಧವುಂಟೆ ಎಂಬುವುದು ಖಚಿತವಾಗುವುದಿಲ್ಲ. ಅಂದರೆ ಫ್ರಾನ್ಸಿಸ್ ದಾಂತಿಯವರ ಹಿರಿಯರು ಮೂಲತಃ ಮತಾಂತರಿತ ಗೋವಾ ಕ್ರೈಸ್ತರು ಎಂಬುದು ಸ್ಪಷ್ಟವಾಗುತ್ತದೆ.

ಎರಡು ಕಾರಣಗಳಿಂದ ಗೋವಾ ಕ್ರೈಸ್ತರು ಕರ್ನಾಟಕದ ಕರಾವಳಿಗೆ ವಲಸೆ ಬಂದ ಬಗ್ಗೆ ಮಾಹಿತಿ ಸಿಗುತ್ತದೆ. ಕರ್ನಾಟಕದ ಕರಾವಳಿ ಪೋರ್ಚುಗೀಸರ ಅದೀನ ಆದ ಮೇಲೆ ವ್ಯಾಪಾರ ವಹಿವಾಟಿಗಾಗಿ ಕೆಲವು ಕ್ರೈಸ್ತ ಕುಟುಂಬ ಈ ಕಡೆಗೆ ಬಂದವು. ಇನ್ನು, ಮತಾಂತರಿತ ಕೆಲವು ಕ್ರೈಸ್ತರು ತಮ್ಮ ಮೂಲ ನಡಾವಳಿಗಳನ್ನು ಬಿಡಲಾಗದೆ ಪೋರ್ಚುಗೀಸರ ಭಯದಿಂದ ರಕ್ಷಣಾರ್ಥವಾಗಿ ದಕ್ಷಿಣ ಕರಾವಳಿಯ ಕಡೆಗೆ ವಲಸೆ ಬಂದರು. ಈ ಎರಡು ಅಂಬೋಣ ಗಳಲ್ಲಿ ಫ್ರಾನ್ಸಿಸ್ ದಾಂತಿಯವರ ಹಿರಿಯರು ಯಾವ ಕಾರಣಕ್ಕಾಗಿ ಗೋವಾದಿಂದ ಈ ಕಡೆಗೆ ವಲಸೆ ಬಂದರು ಎಂಬುದು ಸ್ಪಷ್ಟವಾಗುವುದಿಲ್ಲ. ಉದ್ಯಾವರದಲ್ಲಿ ಇವರ ಪೂರ್ವಜರು ನೆಲೆನಿಂತ ಹಾಗೆ ಕಾಣುತ್ತದೆ. ಈಗಲೂ ಹಲವಾರು ಕುಟುಂಬಸ್ಥರು ಅಲ್ಲಿ ಇದ್ದಾರೆ.

ಇಲ್ಲೇ ಇನ್ನೊಂದು ಸಂಗತಿಯನ್ನು ಹೇಳಬೇಕು: ಕರ್ನಾಟಕದ ಕರಾವಳಿಯ ಮೇಲೂ ಟಿಪ್ಪುವಿನ ಅದಿಪತ್ಯ ಇತ್ತಲ್ಲವೆ? ಕ್ರೈಸ್ತರು ತನಗೆ ವಿರುದ್ಧವಾಗಿದ್ದಾರೆ ಎಂಬ ಅನುಮಾನದಿಂದ ಅವರನ್ನೆಲ್ಲ ಸೆರೆಹಿಡಿದು ಶ್ರೀರಂಗಪಟ್ಟಣಕ್ಕೆ ಸಾಗಿದ್ದನಲ್ಲವೆ? ಈ ಹಿಂಸೆ ಅನುಭವಿಸಿದವರಲ್ಲಿ ದಾಂತಿ ಕುಟುಂಬದ ಏಳು ಮಂದಿ ಸೋದರರೂ ಇದ್ದರಂತೆ. ಕೊನೆಗೆ ಅವರ ಪೈಕಿ ಮರಳಿ ಬಂದವರು ಕೇವಲ ಇಬ್ಬರು ಮಾತ್ರ. ಟಿಪ್ಪುವಿನ ಕ್ರೌರ್ಯಕ್ಕೆ ಬಲಿಯಾದವರು ಐದು ಮಂದಿ. ಸುಮಾರು ನಾಲ್ಕೆ ದು ತಲೆಮಾರಿನ ಹಿನ್ನೆಲೆ ಇಲ್ಲಿ ದಾಂತಿ ಕುಟುಂಬಕ್ಕೆ ಇದ್ದ ಹಾಗೆ ಕಾಣುತ್ತದೆ.

ಬಾಲ್ಯ – ವಿದ್ಯಾಭ್ಯಾಸ

ಫ್ರಾನ್ಸಿಸ್ ದಾಂತಿಯವರು ಜನಿಸಿದ್ದು 30-06-1922ರಲ್ಲಿ ಉಡುಪಿಯ ಮಣಿಪುರ ಗ್ರಾಮದ ದೆಂದೂರಿನ ನೂತ್ರೊಟ್ಟು ಮನೆಯಲ್ಲಿ. ಜೋಸೆಫ್ ದಾಂತಿ ಇವರ ತಂದೆ. ಸೆರ್ಪಿನ್ ಕಸ್ಟಲಿನೊ ತಾಯಿ. ಕೃಷಿಕ ಕುಟುಂಬ. ಬಹುಶಃ ಇವರ ಅಜ್ಜ ಜೀವನಾರ್ಥ ವಾಗಿ ಉದ್ಯಾವರದಿಂದ ಇಲ್ಲಿಗೆ ಬಂದು ನೆಲೆಸಿದಂತೆ ಕಾಣುತ್ತದೆ. ಆವಾಗಿನ ಕ್ರಮದಂತೆ ಗೇಣಿ ಜಮೀನು ಹಿಡಿದು ಕೃಷಿ ಕಾರ್ಯ ಕೈಗೊಂಡಿದ್ದರು. ಗೇಣಿಗಾಗಿ ದುಡಿಯುವವರ ಪಾಡು ತುಂಬ ಕಷ್ಟದ್ದೆ. ದುಡಿಮೆಯ ಬಹುಭಾಗ ಒಡೆಯನ ಪಾಲಿಗೆ ತಾನೆ? ಹಾಗಾಗಿ ತುಂಬು ಕುಟುಂಬಕ್ಕೆ ಬಡತನವೇ ಒಡಲಾಗಿತ್ತು. ಆದರೂ ಜೀವನ ಪ್ರೀತಿ ದೊಡ್ಡದು. ಬಡತನದಲ್ಲೂ ದಾಂತಿ ದಂಪತಿಗಳು ಮಕ್ಕಳನ್ನು ಅಕ್ಕರೆಯಿಂದಲೇ ಸಲಹಿದರು. ಕಷ್ಟ-ಸುಖಗಳ ನಡುವೆ ಸುರಳೀತವಾಗಿ ಸಾಗುತ್ತಿದ್ದ ಈ ಸಂಸಾರ ನೌಕೆ ಬಿರುಗಾಳಿಗೆ ಮೈಯೊಡ್ಡಬೇಕಾಯಿತು. ಮಕ್ಕಳೆಲ್ಲ ಚಿಕ್ಕವರಿರುವಾಗಲೇ ಜೋಸೆಫ್ ದಾಂತಿಯವರನ್ನು ಮೃತ್ಯು ಕಬಳಿಸಿ ಬಿಟ್ಟಿತು. ಈಗ ಈ ತುಂಬು ಕುಟುಂಬದ ಹಿರಿಯ ಭಾರ ಗಂಡು ಮಕ್ಕಳಲ್ಲಿ ಹಿರಿಯರಾದ ಫ್ರಾನ್ಸಿಸ್‌ರ ಮೇಲೆ ಬಿತ್ತು. ಮೂವರು ಅಕ್ಕಂದಿರು, ಇಬ್ಬರು ತಮ್ಮಂದಿರು, ತಾಯಿ ಹಾಗೂ ಅಜ್ಜಿಗೆ ಆಧಾರವಾಗಬೇಕು. ಎಳೆಯ ನೆತ್ತಿಯ ಮೇಲೆ ಬಿಣ್ಪೊರೆಯನ್ನು ಇಟ್ಟ ಹಾಗೆ – ಸತ್ವ ಪರೀಕ್ಷೆಯ ಕಾಲ. ಫ್ರಾನ್ಸಿಸರು, ಹೆದರಲಿಲ್ಲ. ಪಗಡೆ ಸುತ್ತಿ ನಿಂತೇ ಬಿಟ್ಟರು, ಹೆಗಲ ಮೇಲೆ ಭಾರ ಹೊತ್ತರು; ಚೈತನ್ಯಶಾಲಿಗಳಾಗಿ ಹೆಜ್ಜೆ ಇಟ್ಟರು. ಅಕ್ಕಂದಿರ ಮದುವೆಯನ್ನು ನೆರವೇರಿಸಿ ದರು. ತಮ್ಮಂದಿರಿಗೆ ವಿದ್ಯೆ ಕೊಡಿಸಿದರು. ತಾಯಿಯ ಮತ್ತು ಅಜ್ಜಿಯ ಮಾರ್ಗದರ್ಶನ ಅವರಿಗೆ ಶಕ್ತಿಯಾಯಿತು. ಕುಟುಂಬ ನೆಮ್ಮದಿಯ ಉಸಿರು ಬಿಡುವಂತಾಯಿತು.

ಮೊದಲ ಘಟ್ಟದಲ್ಲಿ ಫ್ರಾನ್ಸಿಸರು ಓದಿದ್ದು ಎಂಟನೇ ತರಗತಿಯವರೆಗೆ – ಅದು ಮೂಡುಬೆಳ್ಳೆಯ ಇಗರ್ಜಿ ಶಾಲೆಯಲ್ಲಿ. ಹೆಚ್ಚಿನ ಶಿಕ್ಷಣಕ್ಕೆ ಊರಲ್ಲಿ ಅವಕಾಶವಿರಲಿಲ್ಲ. ಪೇಟೆ ವಲಯಕ್ಕೆ ಬರಬೇಕೆಂದರೆ ಅನುಕೂಲವಿರಲಿಲ್ಲ. ಮೂಲಗೇಣಿ ಕೃಷಿಯನ್ನೇ ನಂಬಿ ಬದುಕುವ ಹಾಗೂ ಇರಲಿಲ್ಲ. ಕುಟುಂಬ ನಿರ್ವಹಣೆಗೆ ಒಂದು ಸರಿಯಾದ ದಾರಿ ಬೇಕಿತ್ತು. ಕಲಿತ ಶಿಕ್ಷಣದಿಂದ ಯಾವ ವೃತ್ತಿ ಮಾಡಬಹುದು? ಈಗ ಮಾರ್ಗದರ್ಶಿಯಾಗಿ, ಬೆನ್ನುತಟ್ಟಿ ಪ್ರೋತ್ಸಾಹಿಸಿದವರು ತಾಯಿಯ ಸೋದರ ಸಂಬಂದಿ ಮೂಡುಬೆಳ್ಳೆ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ದಿ. ಲಾರೆನ್ಸ್ ಡಿಸೋಜರು. ಎರಡು ವರ್ಷ ಶಿಕ್ಷಕ ತರಬೇತಿ ಶಿಕ್ಷಣ ಪಡೆದರೆ ಶಿಕ್ಷಕರಾಗಿ ಸೇರಿಕೊಳ್ಳಬಹುದು. ಫ್ರಾನ್ಸಿಸರಿಗೆ ಇದೇ ಸೂಕ್ತವೆನಿಸಿತು. ಆದರೂ ತಾತ್ಕಾಲಿಕವಾಗಿ ಶಿಕ್ಷಕ ವೃತ್ತಿಗೆ ಕಾಲಿಟ್ಟರು. ಅಲೆವೂರಿನ ಸುಬೋದಿನಿ ಕಿರಿಯ ಪ್ರಾಥಮಿಕ ಶಾಲೆಗೆ ಅಧ್ಯಾಪಕರಾಗಿ ಸೇರಿದರು. ಸುಮಾರು ಎರಡು-ಮೂರು ವರ್ಷ ಅಲ್ಲಿ ಸೇವೆ ಸಲ್ಲಿಸಿದರು. ಶಿಕ್ಷಕ ತರಬೇತಿಯಾಗದೆ ಈ ವೃತ್ತಿಯಲ್ಲಿ ಉತ್ತಮ ಭವಿಷ್ಯವಿಲ್ಲ ಎಂಬುವುದನ್ನು ಮನಗಂಡ ಅವರು ಶಿಕ್ಷಕ ತರಬೇತಿಗಾಗಿ ಮಂಗಳೂರಿನ ಟೀಚರ್ಸ್‌ಟ್ರೇನಿಂಗ್ ಸ್ಕೂಲನ್ನು ಸೇರಿದರು. ಬಡತನ ಸಾಕಷ್ಟು ಕಾಡುತ್ತಿದ್ದರೂ ಧೈರ್ಯಗುಂದದೆ ಅದನ್ನು ನಿಭಾಯಿಸಿದರು. ಎರಡು ವರ್ಷಗಳ ಈ ತರಬೇತಿ ಅವದಿ ಅವರ ಪಾಲಿಗೆ ಬಹಳ ಮಹತ್ತ್ವದ ಕಾಲವೆನ್ನಬೇಕು. ಅವರೊಳಗೊಬ್ಬ ಆದರ್ಶ ಶಿಕ್ಷಕ ಆಕಾರಗೊಳ್ಳುತ್ತಿದ್ದ. ಅಧ್ಯಾಪಕತನದ ತೇಜಸ್ಸು ಅವರಲ್ಲಿ ಒಡಮೂಡಿದ ಸುಸಮಯ ಅದು. ಹಳ್ಳಿಗಾಡಿನಿಂದ ಬಂದ ಈ ಯುವಕ ಎಲ್ಲರೂ ಅಚ್ಚರಿ ಪಡುವಂತೆ ತರಬೇತಿಯಲ್ಲಿ ಕುಶಲಿಗನಾಗಿ ಬೆಳೆದು ನಿಂತ. ಆಗಿನ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿಯೇ  ಪ್ರಥಮ ಸ್ಥಾನ ಪಡೆದು ಸ್ವರ್ಣಪದಕವನ್ನು ತನ್ನದಾಗಿಸಿಕೊಂಡ ಕೀರ್ತಿವಂತರು ಫ್ರಾನ್ಸಿಸ್ ದಾಂತಿಯವರು. ಅವರ ಕಲಿಕೆ ಇಲ್ಲಿಗೆ ನಿಲ್ಲಲಿಲ್ಲ. ವೃತ್ತಿನಿರತರಾದ ಮೇಲೆ ಖಾಸಗಿ ಯಾಗಿ ಓದಿ ಮತ್ತೆ ಶಿಕ್ಷಣವನ್ನು ಮುಂದುವರಿಸಿದರು. ಮ್ಯಾಟ್ರಿಕ್ ಪರೀಕ್ಷೆಯನ್ನು ತೆಗೆದು ಕೊಂಡರು. ಅಲ್ಲಿ ಯಶಸ್ಸನ್ನು ಪಡೆದು ಪಿಯುಸಿ ಮತ್ತು ಇಂಟರ್ ಮೀಡಿಯಟ್ ಪರೀಕ್ಷೆಗೆ ಕಟ್ಟಿದರು. ಅನಂತರ ತಮ್ಮ 50ರ ವಯಸ್ಸಿನಲ್ಲಿ ಪದವಿ ಪರೀಕ್ಷೆಗೂ ಅಧ್ಯಯನ ಮಾಡಿ ಆಸಕ್ತಿ, ಸತತ ಪ್ರಯತ್ನ, ಬುದ್ಧಿ-ಪ್ರತಿಭೆಯಿದ್ದರೆ ಬೇಕಾದ ಪದವಿಯನ್ನು ಪಡೆಯಬಹುದು ಎಂಬುವುದಕ್ಕೆ ಪ್ರತ್ಯಕ್ಷ ಪ್ರಮಾಣವಾದರು. ವಿದ್ಯೆಯೊಂದೇ ಬಾಳಿಗೆ ಊರುಗೋಲು ಎಂಬ ಸತ್ಯವು ಆ ವಯಸ್ಸಿನಲ್ಲೇ ಅವರಿಗೆ ಮನವರಿಕೆಯಾಗಿತ್ತು. ಮುಂದೆಲ್ಲ ಅವರು ವಿದ್ಯೆಗೆ ಕೊಟ್ಟ ಪ್ರಾಮುಖ್ಯ ಈ ಸತ್ಯವನ್ನೇ ಬಿಂಬಿಸುತ್ತದೆ.

ವೃತ್ತಿ

ಶಿಕ್ಷಕ ತರಬೇತಿ ಪೂರೈಸಿದ ಶ್ರೀ ದಾಂತಿಯವರು ಪುನಃ ಸೇರಿದ್ದು ಅದೇ ಅಲೆವೂರಿನ ಸುಬೋದಿನಿ ಶಾಲೆಯನ್ನೆ. ಇಲ್ಲಿ ಸೇವೆ ಸಲ್ಲಿಸುತ್ತಿರುವಾಗಲೇ ಮೂಡುಬೆಳ್ಳೆ ಚರ್ಚ್ ಹಿರಿಯ ಪ್ರಾಥಮಿಕ ಶಾಲೆಗೆ ಬರಲು ಇವರಿಗೆ ಕರೆಬಂದಿತು. ಅಲ್ಲಿ ವೃತ್ತಿ ಮುಂದುವರಿಯುತ್ತಿರುವಂತೆ ಕುತ್ವಾಡಿ ಕಿರಿಯ ಪ್ರಾಥಮಿಕ ಶಾಲೆಯನ್ನು ನಡೆಸುವ ಜವಾಬ್ದಾರಿ ಇವರ ಹೆಗಲಿಗೆ ಬಂದಿತು. ಎರಡು ವರ್ಷ ಈ ಕಾರ್ಯಭಾರವನ್ನು  ಯಶಸ್ವಿಯಾಗಿ ನಿರ್ವಹಿಸಿದರು. ಇಷ್ಟರಲ್ಲೇ ತಮ್ಮ ಕರ್ತೃತ್ವ ಶಕ್ತಿಯಿಂದ ಜನರ, ಗಣ್ಯರ ಗಮನಸೆಳೆದಿದ್ದರು. ಇದೇ ಸಮಯ ಸುಬೋದಿನಿ ಕಿರಿಯ ಪ್ರಾಥಮಿಕ ಶಾಲೆಯು ಹಿರಿಯ ಪ್ರಾಥಮಿಕ ಶಾಲೆಯಾಗಿ ಉನ್ನತಿ ಪಡೆಯಿತು. ಶಾಲೆಯನ್ನು ಮುನ್ನಡೆಸುವುದಕ್ಕೆ ಸಮರ್ಥ ಅಧ್ಯಾಪಕರ ಅಗತ್ಯವಿತ್ತು. ಆಗ ಆಡಳಿತ ಮಂಡಳಿಯ ದೃಷ್ಟಿ ಹೊರಳಿದ್ದು ದಾಂತಿಯವರ ಕಡೆಗೆಯೆ. ದಿ. ಅಚ್ಚಣ್ಣ ಶೆಟ್ಟಿ, ರಾಮಣ್ಣ ಶೆಟ್ಟಿ – ಇವರಿಬ್ಬರೂ ಅದೇ ಶಾಲೆಯ ಶಿಕ್ಷಕರು. ಈಗ ಫ್ರಾನ್ಸಿಸ್ ದಾಂತಿಯವರೂ ಆಡಳಿತ ಮಂಡಳಿಯ ಕರೆಗೆ ಓಗೊಟ್ಟರು. ಪ್ರತಿಭಾವಂತ ಶಿಕ್ಷಕ ತ್ರಿಮೂರ್ತಿಗಳು. ಊರ ಮಕ್ಕಳ ಪುಣ್ಯ. ವಿದ್ಯಾರ್ಥಿಗಳ ಭವಿಷ್ಯ ಬೆಳಕುಗೊಂಡಿತು. ಮಕ್ಕಳ ಏಳಿಗೆ ಕಂಡು ಊರ ಜನ ಹೆಮ್ಮೆಪಟ್ಟರು. ಫ್ರಾನ್ಸಿಸ್ ದಾಂತಿಯವರು ಇಲ್ಲೇ ‘ದಾಂತಿ ಮಾಸ್ಟ್ರು’ ಎಂಬ ಪ್ರೀತಿಗೆ ಪಾತ್ರರಾದರು.

ದಾಂತಿಯವರು ಶಿಕ್ಷಕರಾಗಿ ದುಡಿದುದು ಐವತ್ತರ-ಅರುವತ್ತರ ದಶಕಗಳಲ್ಲಿ. ದೇಶಭಕ್ತಿ, ಸಾಮಾಜಿಕ ಸುಧಾರಣೆ, ಕರ್ನಾಟಕದ ಏಕೀಕರಣ ಮುಪ್ಪುರಿಗೊಂಡ ಕಾಲ. ಸ್ವಾತಂತ್ರ್ಯ ಹೋರಾಟದಲ್ಲಿ ಬಡತನವನ್ನು ಮರೆತರೂ ಸ್ವಾತಂತ್ರ್ಯ ಬಂದ ಮೇಲೆ ಜನತೆ ತಮ್ಮ ಆರ್ಥಿಕ ಭದ್ರತೆಯ ಬಗ್ಗೆ ಚಿಂತಿಸುವ ಅನಿವಾರ್ಯತೆ ಇತ್ತು. ಸಮಾಜ, ದೇಶದ ಅಭಿವೃದ್ಧಿಗಾಗಿ ದುಡಿವ ಮನಸ್ಸು ಸಿದ್ಧವಾಗಬೇಕಿತ್ತು. ಸ್ವರಾಜ್ಯ ಮತ್ತು ಸ್ವಾವಲಂಬನೆ – ಗಾಂದೀ ವಿಚಾರದ ಈ ಪ್ರಣಾಳಿಕೆ ಪ್ರಭಾವಶಾಲಿಯಾಗಿತ್ತು. ಮೌಲ್ಯ ಮತ್ತು ಆದರ್ಶಗಳ ತುಡಿತ ಜನತೆಗಿತ್ತು. ಒಂದು ಸುಂದರ ಬದುಕಿನ ಕನಸು ಜೀವ ತಳೆಯುತ್ತಿತ್ತು. ಆಗಿನ ರಾಜಕೀಯ ನಾಯಕರು, ಸಮಾಜ ಮುಖಂಡರು ಈ ಒತ್ತಾಸೆಯಿಂದಲೇ ದುಡಿಯುತ್ತಿ ದ್ದರು. ಮುಖ್ಯವಾಗಿ ಶಿಕ್ಷಕರು ಈ ಜವಾಬ್ದಾರಿಯಿಂದಲೇ ತಮ್ಮ ವೃತ್ತಿಯಲ್ಲಿ ತೊಡಗಿಕೊಳ್ಳು ತ್ತಿದ್ದರು. ಮಕ್ಕಳನ್ನು ಮುಂದಿನ ಸಮಾಜಕ್ಕೆ ಜವಾಬ್ದಾರಿಯುತ ಪ್ರಜೆಗಳನ್ನಾಗಿ ರೂಪಿಸಬೇಕು ಎಂಬ ಅರಿವು ಉಳ್ಳವರಾಗಿದ್ದರು. ಇದೇ ಸುಮಾರಿಗೆ ಡಾ.ಎಸ್. ರಾಧಾಕೃಷ್ಣನ್‌ರವರು ‘ಶಿಕ್ಷಕರು ರಾಷ್ಟ್ರಶಿಲ್ಪಿಗಳು’ ಎಂಬ ಹೊಸಬೆಳಕನ್ನು ಇತ್ತು ಶಿಕ್ಷಕರ ಘನತೆ ಮತ್ತು ಹೊಣೆಗಾರಿಕೆಯ ಕಡೆಗೆ ಗಮನ ಸೆಳೆದಿದ್ದರು. ಇಂತಹ ಒಂದು ಆವರಣದಲ್ಲಿ ಫ್ರಾನ್ಸಿಸ್ ದಾಂತಿಯವರು ಶಿಕ್ಷಕರಾಗಿ ಮೌಲ್ಯಗಳನ್ನು ಆದರ್ಶಗಳನ್ನು ಪ್ರತಿನಿದೀಕರಿಸಿದ್ದು ಒಂದು ಮಹತ್ತ್ವದ ಸಂಗತಿಯೆನ್ನಬೇಕು. ‘ಬದುಕಿಗಾಗಿ ಶಿಕ್ಷಣ’ – ಇದು ಅಂದಿನ ಶಿಕ್ಷಣದ ಗುರಿ. ಶಿಕ್ಷಕರು ಅಂತಹ ಶಿಕ್ಷಣ ನೀಡಲು ಸಜ್ಜಾಗುತ್ತಿದ್ದರು ಎಂಬುದಕ್ಕೂ ದಾಂತಿಯವರು ಸ್ಪಷ್ಟ ಪುರಾವೆಯೆ. ಬೌದ್ಧಿಕವಾಗಿ, ಭೌತಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಶಿಕ್ಷಣವು ಮಕ್ಕಳನ್ನು ಸಮೃದ್ಧಗೊಳಿಸಬೇಕು; ಅವರ ಸರ್ವತೋಮುಖ ಬೆಳವಣಿಗೆಗೆ ಚಾಲನೆ ನೀಡಬೇಕು. ಪಠ್ಯೇತರ ಚಟುವಟಿಕೆಯೂ ಇದಕ್ಕೆ ಚೈತನ್ಯವೆ ಅಥವಾ ಅದು ಶಿಕ್ಷಣದ ಒಂದು ಪ್ರಧಾನ ಅಂಶವೆ. ಈ ಅರಿವೇ ದಾಂತಿಯವರಲ್ಲಿ ಪಠ್ಯೇತರ ಚಟುವಟಿಕೆ ಕ್ರಿಯಾಶೀಲತೆ ಪಡೆಯಲು ಕಾರಣವಾಯಿತು. “ವಿದ್ಯಾರ್ಥಿಗಳ ಮನಸ್ಸನ್ನು ಸೆಳೆಯುವ ಅವರ ಪಾಠ ಅವಿಸ್ಮರಣೀಯ” ಇದು ಅವರ ಆಪ್ತ ಸ್ನೇಹಿತ ಕೆ. ಹರಿದಾಸ ಉಪಾಧ್ಯಾಯರ ಶಿಫಾರಸ್ಸು.

ವಿದ್ಯಾರ್ಥಿಗಳಿಗೆ ನಾಟಕದ ದೀಕ್ಷೆ

ಮಕ್ಕಳಲ್ಲಿ ಮೌಲ್ಯಪ್ರಜ್ಞೆ ಮೂಡಿಸಲು ಮತ್ತು ಅವರ ಪ್ರತಿಭೆ ಅರಳಿಸಿ ಕ್ರಿಯಾಶೀಲರನ್ನಾಗಿ ಮಾಡಲು ದಾಂತಿಯವರು ಕಂಡುಕೊಂಡ ಮಾರ್ಗ ನಾಟಕ ಹಾಗೂ ಸಾಹಿತ್ಯ. ನಾಟಕವಂತೂ ಅವರಿಗೆ ಅತ್ಯಂತ ಪ್ರಿಯವಾದ ಕಲಾಕ್ಷೇತ್ರ. ಸ್ವತಃ ರಚಿಸಿ, ನಿರ್ದೇಶಿಸಿ ಪ್ರದರ್ಶಿಸುತ್ತಿದ್ದರು. ಅವರ ನಾಟಕ ಚಟುವಟಿಕೆಗಳ ಕುರಿತು ಶಿಕ್ಷಕ ತರಬೇತಿ ವಿದ್ಯಾಲಯದಲ್ಲಿ ಅವರ ಸಹಪಾಠಿಯಾಗಿದ್ದ ಪಾಂಗಳ ವಿಟ್ಠಲ ಶೆಣೈಯವರು ಸ್ಮರಿಸಿಕೊಳ್ಳುವುದು ಹೀಗೆ : “ಶಾಲಾ ವಾರ್ಷಿಕೋತ್ಸವ ಹಾಗೂ ಇತರ ಚಟುವಟಿಕೆಗಳಲ್ಲಿ ರಂಗನಿರ್ದೇಶನ, ಪ್ರಸಾದನ ಕಾರ್ಯ – ಮೊದಲಾದ ಕಾರ್ಯಕಲಾಪಗಳಲ್ಲಿ ಅನುಭವ ವಿನಿಮಯ, ಸಹಕಾರಗಳು ಸಾಗುತ್ತಲೇ ಇದ್ದವು.” ಮುಂದುವರಿಯುತ್ತ “ಶಾಲಾ ಹಸ್ತಪತ್ರಿಕೆಗಳನ್ನು ಸಂಪಾದಿಸುವುದು ವಿವಿಧ ಸ್ಪರ್ಧೆ ಗಳನ್ನು ಏರ್ಪಡಿಸುವುದು ಪ್ರಿಯವಾದ ಕಾರ್ಯವಾಗಿತ್ತು” ಅನ್ನುತ್ತಾರೆ. ಕೆ. ಹರಿದಾಸ ಉಪಾಧ್ಯಾಯರು (ನಿವೃತ್ತ ಪ್ರಾಚಾರ್ಯ, ಸಂಸ್ಕೃತ ಮಹಾವಿದ್ಯಾಲಯ ಉಡುಪಿ) ಸ್ನೇಹಿತನನ್ನು ನೆನಪಿಸಿಕೊಳ್ಳುತ್ತ “ವಿವಿಧ ಕಲೆಗಳಲ್ಲಿ ಅಬಿರುಚಿಯ ಅವರು ತಮ್ಮ ಶಾಲೆಯ ವಿದ್ಯಾರ್ಥಿ ಗಳನ್ನು ನಾಟಕಾಬಿನಯದಲ್ಲಿ ತೊಡಗಿಸಿದರು. ಅಲ್ಲಲ್ಲಿ ಚಿಕ್ಕ ಬಾಲಕರಿಂದ ಚೊಕ್ಕವಾಗಿ ನಾಟಕ ಮಾಡಿಸಿ ಜನಾನುರಾಗ ಪಡೆದರು” ಎಂದಿದ್ದಾರೆ. ಮಕ್ಕಳನ್ನು ಓದಿನಲ್ಲಿ ತೊಡಗಿಸು ವುದರಲ್ಲೂ ಅಷ್ಟೇ ಮುತುವರ್ಜಿ. ನಿರಂತರ ಅಧ್ಯಯನಶೀಲರಾದ ಅವರು ವಿದ್ಯಾರ್ಥಿಗಳು ಬುದ್ಧಿ ಪ್ರಬುದ್ಧರಾಗುವುದಕ್ಕೆ ಓದನ್ನು ಪ್ರೀತಿಸಬೇಕು ಎಂಬ ನಿಲುವಿನ ಶಿಕ್ಷಕರಾಗಿದ್ದರು. ಆ ಪ್ರೀತಿಯನ್ನು ಮೂಡಿಸಲು ಮಕ್ಕಳಿಗೆ ನಿಲುಕುವ, ಅವರ ಭಾಷಾ ಜ್ಞಾನವನ್ನು ಪರಿಪುಷ್ಪ ಗೊಳಿಸುವಂಥ ಪುಸ್ತಕ ರಚನೆ ವಿದ್ಯಾರ್ಥಿಗಳಿಗೆ ವರದಾನವೇ ಆಗಿತ್ತು.

ಬ್ಯಾಂಕಿನೊಳಗೆ ಅರಳಿದ ಸೇವೆ

ಶಾಲಾ ಬದುಕು ಹೇಗೊ ಹಾಗೆಯೇ  ಸಾರ್ವಜನಿಕ ಬದುಕು ಅವರಿಗೆ ಬಹು ಪ್ರಿಯ ವಾಗಿತ್ತು. ಒಂದಲ್ಲ ಒಂದು ಬಗೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಜನರ ಸಮಸ್ಯೆ ಇರಬಹುದು, ಅಭಿವೃದ್ಧಿ ಕಾರ್ಯವಿರಬಹುದು, ಸಣ್ಣಪುಟ್ಟ ವ್ಯಾಜ್ಯ ಇರಬಹುದು – ಇಲ್ಲೆಲ್ಲ ಊರು ತುಂಬ ಓಡಾಡುತ್ತಿದ್ದರು. ಜನರನ್ನು ಸಮಾಧಾನಪಡಿಸುವ, ಉತ್ಸಾಹ ತುಂಬುವ, ಪರಿಹಾರ ಮಾರ್ಗ ತೋರುವ, ವಿಶ್ವಾಸ ಮೂಡಿಸುವ ಕೌಶಲವುಳ್ಳವರಾಗಿದ್ದರು. ಅವರ ವಾಕ್‌ಚಾತುರ್ಯ ಅಸಾಧಾರಣವಾದುದು. ಆದುದರಿಂದ ಊರ ಜನ ತಮ್ಮ ಯಾವ ತೊಡಕಿಗೂ ಇವರೆಡೆಗೆ ಬರುತ್ತಿದ್ದರು. ‘ದಾಂತಿ ಮಾಸ್ಟ್ರು’ ಎಂದರೆ ಊರ ಜನಕ್ಕೆ ದೊಡ್ಡ ಧೈರ್ಯವೆ. ಊರ ಹಿತ ಬಯಸುವವರನ್ನು ಪ್ರೀತಿಸದವರು ಯಾರು? ಅಂಥ ಗೌರವಕ್ಕೆ ಭಾಜನರಾದವರು ಅವರು. ಜನಸಂಪರ್ಕದಲ್ಲಂತೂ ಎತ್ತಿದ ಕೈ. ಸಾರ್ವಜನಿಕರೊಂದಿಗೆ ವ್ಯವಹರಿಸುವ ಇವರ ಕುಶಲತೆಯನ್ನು ಸೂಕ್ಷ್ಮವಾಗಿ ಗಮನಿಸಿದ ಮಣಿಪಾಲದ ಟಿ.ಏ. ಪೈಯವರು ತಮ್ಮ ಬ್ಯಾಂಕಿನ ಅಭಿವೃದ್ಧಿಗೆ ಇಂಥ ವ್ಯಕ್ತಿಯ ಅಗತ್ಯವಿದೆ ಎಂಬುವುದನ್ನು ಅರಿತರು. ಬ್ಯಾಂಕು ಜನಗಳ ಹತ್ತಿರ ಹೋಗಬೇಕು. ಜನ ಬ್ಯಾಂಕಿನ ಹತ್ತಿರ ಬರಬೇಕು. ಗರಿಷ್ಠ ಮಟ್ಟದಲ್ಲಿ ಜನರಿಗೆ ಬ್ಯಾಂಕಿನಿಂದ ಪ್ರಯೋಜನವಾಗಬೇಕು. ಆರ್ಥಿಕವಾಗಿ ಬಲಗೊಳ್ಳಲು ಜನರಿಗೆ ಬ್ಯಾಂಕು ನೆರವಾಗಬೇಕು. ಬ್ಯಾಂಕು ಬೆಳೆಯುವುದಕ್ಕೆ ಜನತೆಯ ಸಹಕಾರ ಬೇಕು. ಇದು ಕಾರ್ಯರೂಪಕ್ಕೆ ಬರಬೇಕಾದರೆ ದಾಂತಿಯವರಂಥವರ ದುಡಿಮೆ ಅಗತ್ಯ – ಈ ರೀತಿಯ ಚಿಂತನೆ ಟಿ.ಏ.ಪೈಗಳಲ್ಲಿತ್ತು. ದಾಂತಿಯವರನ್ನು ತಮ್ಮ ಬ್ಯಾಂಕಿಗೆ ಸೇರಿಸಿಕೊಳ್ಳುವ ಪ್ರಯತ್ನ ಮಾಡಿದರು. ಹೌದು, ದಾಂತಿಯವರ ಸಾಮರ್ಥ್ಯ ಬಹುಮುಖವಾದುದು. ಸಮಾಜವನ್ನು ಸಮಗ್ರವಾಗಿ ಕಾಣುವ ಅವರಿಗೆ ಎಲ್ಲ ಕ್ಷೇತ್ರಗಳೂ ಸಮಾಜದ ಬಾಹುಗಳೆ. ಎಲ್ಲಿ ದುಡಿಮೆ ಮಾಡಿದರೂ ಆ ಸತ್ವ ಸಲ್ಲುವುದು ಸಮಾಜಕ್ಕೆಯೆ. ತಮ್ಮೊಳಗಿನ ಅತಿಶಯ ಸಾಮರ್ಥ್ಯವನ್ನು ಬಳಸಿಕೊಳ್ಳುವ ಕಾರ್ಯಕ್ಷೇತ್ರದ ಅಗತ್ಯವೂ ಅವರಿಗಿತ್ತು. ಈಗಾಗಲೇ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ದುಡಿಮೆಯಾಗಿದೆ. ಪೈಗಳ ಕರೆ ದಾಂತಿಯವರಿಗೆ ಆಪ್ಯಾಯವೇ ಆಯಿತು. 1960ರಲ್ಲಿ ಅವರು ಮಣಿಪಾಲ ಸಮೂಹ ಸಂಸ್ಥೆಗೆ ಸೇರಿದರು. ಅಂಗಳದಿಂದ ಬಯಲಿಗೆ ಬಂದ ಹಾಗಾಯಿತು. ಅವರ ಸಮಾಜ ಸೇವಾ ಚಟುವಟಿಕೆಗಳಿಗೆ ನೂತನ ಆಯಾಮ ಸಿಕ್ಕಿತು.

ಸಾರ್ವಜನಿಕ ಸಂಪರ್ಕ ಹಾಗೂ ಪ್ರಚಾರ ಅಧಿಕಾರಿಯಾಗಿ ಸಿಂಡಿಕೇಟ್ ಬ್ಯಾಂಕಿನ ಪ್ರಧಾನ ಕಚೇರಿಗೆ ಸೇರ್ಪಡೆಯಾದ ದಾಂತಿಯವರು ಬ್ಯಾಂಕಿನ ಅಭಿವೃದ್ಧಿಗಾಗಿ ಅವಿರತ ಶ್ರಮಿಸಿದ್ದಾರೆ. ಬ್ಯಾಂಕನ್ನು ಸಾರ್ವಜನಿಕರ ಹತ್ತಿರ ತರಲು, ಬ್ಯಾಂಕಿನೊಂದಿಗೆ ಸಾರ್ವಜನಿಕರ ಸಂಪರ್ಕವೇರ್ಪಡಿಸಲು ಬೇರೆ ಬೇರೆ ತಂತ್ರ ವಿಧಾನವನ್ನು ರೂಪಿಸಿದ ಶ್ರೇಯಸ್ಸು ಇವರದು. ಅವರು ಬರೆಯುತ್ತಿದ್ದ ಘೋಷಣ ವಾಕ್ಯಗಳು ಸಾಹಿತ್ಯಿಕವಾಗಿರುತ್ತಿದ್ದವು, ಸುಂದರವಾಗಿರು ತ್ತಿದ್ದವು. ಬ್ಯಾಂಕಿನ ಬಗ್ಗೆ, ಬ್ಯಾಂಕಿನ ಯೋಜನೆಗಳ ಬಗ್ಗೆ ಜನರಿಗೆ ಆದರವುಂಟಾಗುವಂತೆ ಆಕರ್ಷಕವಾಗಿರುತ್ತಿದ್ದವು. ಪಿಗ್ಮಿಯನ್ನು “ಸದ್ದು ಮಾಡದ ಬೆಳೆ” ಎನ್ನುತ್ತ ಅದರಡಿಯಲ್ಲಿ ಅವರು ಬರೆದದ್ದು ಹೀಗೆ : “ಬೆಳೆಯುವ ಬೆಳೆ ಸದ್ದು ಮಾಡುವುದಿಲ್ಲ ಎಂಬುದು ಒಂದು ಜರ್ಮನ್ ಗಾದೆ. ಈ ನಾಣ್ಣುಡಿಯಲ್ಲಿ ಅಡಕವಾಗಿರುವ ವೈಜ್ಞಾನಿಕ ಸತ್ಯವು ನಮ್ಮ ಕೃಷಿಕರಿಗೆ ಮಾತ್ರವಲ್ಲದೆ ಚಿಕ್ಕ ಉಳಿತಾಯಗಾರರಿಗೂ ಚಿರಪರಿಚಿತವಾಗಿದೆ. “ಪಿಗ್ಮಿ” ಠೇವಣಾತಿಯು ಸದ್ದಿಲ್ಲದೆ ಬೆಳೆಯುತ್ತಿದೆ ಮತ್ತು ಕಾಲಾವದಿಯಲ್ಲಿ ಒಳ್ಳೆಯ ಫಲ ಕೊಡುತ್ತಿದೆ”.  ಉಳಿತಾಯದ ಮಹತ್ತ್ವವನ್ನು ಗ್ರಾಹಕರಿಗೆ ಮನದಟ್ಟು ಮಾಡಿಕೊಡುವ ವಿಧಾನವಿದು. ಉಳಿತಾಯವೂ ಜೀವನದ ಒಂದು ಭಾಗವಾಗಬೇಕು ಎಂಬ ಒತ್ತು ಇಲ್ಲಿಯದು. ಉಳಿತಾಯವಿಲ್ಲದೆ ಅಭಿವೃದ್ಧಿಯಿಲ್ಲ ಎಂಬ ಅರಿವನ್ನು ಮೂಡಿಸುವುದು ಇದರ ಉದ್ದೇಶ. ಹಾಗೆಯೇ

“ಕಿರಿದಾಗಿ ದಿನದಿನದಿ ಕೂಡಿಟ್ಟ ಒಂದೆರಡು ಆಣೆ
ಹಿರಿದಾಗಿ, ದುರ್ದಿನದಿ  ಕಾಯುವುದು ಇದು ನೀನು ಕಾಣೆ!”

– ಇಂಥ ಪ್ರಾಸಬದ್ಧ ಸಾಲುಗಳು ಗ್ರಾಹಕರ ಮನಮುಟ್ಟುವಂತೆ ಇರುತ್ತಿದ್ದವು. ಟಿ.ಏ.ಪೈಯವರ ವಿಶ್ವಾಸಕ್ಕೆ ಪಾತ್ರರಾದ ದಾಂತಿಯವರು ಮುಂದೆ ಅದೇ ಕಚೇರಿಯಲ್ಲಿ ಸಹಾಯಕ ಮತ್ತು ಉಪಸಿಬ್ಬಂದಿ ಪ್ರಬಂಧಕರಾಗಿ ಪದೋನ್ನತಿ ಹೊಂದಿದರು. ಅಲ್ಲಿಯೂ ಕೂಡ ಅಷ್ಟೆ. ತಮ್ಮ ಕುಶಾಗ್ರ ಮತಿತ್ವದಿಂದ ಇಡೀ ಸಿಬ್ಬಂದಿ ವರ್ಗಕ್ಕೆ ಬೇಕಾದವರಾಗಿ ಎಲ್ಲರಿಗೂ ಆಪ್ತರಾಗಿ ಬಿಟ್ಟರು. ಸಮಸ್ಯೆ ಯಾವುದೇ ಇರಲಿ ಪರಿಹಾರ ಇವರಲ್ಲಿ ತಯಾರಿಯಾಗಿರುತ್ತಿತ್ತು. ಎಂಥ ಬಿಕ್ಕಟ್ಟಿನ ಪ್ರಸಂಗವನ್ನು ತಿಳಿಗೊಳಿಸುವ ಜಾಣ್ಮೆ ಹೊಂದಿದ್ದರು. ದಾಂತಿಯವರಿರುವ ಬ್ಯಾಂಕಿನ ಆವರಣ ಸದಾ ಲವಲವಿಕೆಯಿಂದಿರುತ್ತಿತ್ತು. ಉತ್ಸಾಹದ ಪ್ರತಿರೂಪ. ಯಾರೇ ಬಳಿಗೆ ಬರಲಿ ಬರುವಾಗ ಇದ್ದ ಮುದುಡಿದ ಮುಖ ಮರಳುವಾಗ ಅರಳಿರುತ್ತಿತ್ತು. ಬ್ಯಾಂಕಿನ ಒಬ್ಬ ಸಂಪನ್ಮೂಲ ವ್ಯಕ್ತಿಯಾಗಿ ಪ್ರಾಮುಖ್ಯ ಪಡೆದಿದ್ದರು. ಬ್ಯಾಂಕಿನ ವಿವಿಧ ಯೋಜನೆ ಫಲಕಾರಿ ಆಗುವಲ್ಲಿ ದಾಂತಿಯವರ ಬುದ್ಧಿ-ಕೌಶಲವೂ ಅಡಕ ವಾಗಿತ್ತೆಂಬುದೇನೂ ಸುಳ್ಳಲ್ಲ. ಮುಂದೆ ಉಡುಪಿಯ ಮುಖ್ಯ ಶಾಖೆ ಉಡುಪಿ ಕೆಥೋಲಿಕ್ ಸೆಂಟರ್ ಶಾಖೆಯ ಮುಖ್ಯ ಪ್ರಬಂಧಕರಾಗಿ ಆಡಳಿತ ವರ್ಗ ಇವರನ್ನು ನೇಮಿಸಿತು. ತಮ್ಮ ಕರ್ತೃತ್ವ ಶಕ್ತಿಯಿಂದ. ಜನಪರ ಸೇವೆಯಿಂದ ಅತ್ಯುತ್ತಮ ಶಾಖೆ ಎಂಬ ಹೆಗ್ಗಳಿಕೆಯನ್ನು ತಂದುಕೊಟ್ಟದ್ದು ಅವರ ವೃತ್ತಿ ಜೀವನದಲ್ಲಿ ಒಂದು ಹಸುರಾದ ನೆನಪು. ಬ್ಯಾಂಕಿನ ಅತ್ಯುತ್ತಮ ಶಾಖೆ ಮತ್ತು ಅತ್ಯುತ್ತಮ ಪ್ರಬಂಧಕ ಎಂಬ ಪುರಸ್ಕಾರ ಇವರನ್ನು ಅಲಂಕರಿಸಿದೆ. ಗ್ರಾಹಕರ ಪ್ರಶಂಸೆಗಿಂತ ದೊಡ್ಡ ಪ್ರಶಸ್ತಿ ಬೇರೆ ಇಲ್ಲ ಅಲ್ಲವೆ? ಅಂತಹ ಗೌರವದಿಂದ ಭೂಷಣ ರಾದವರು ದಾಂತಿಯವರು. ಈಗಲೂ ಅವರನ್ನು ಕಣ್ಣು ತುಂಬಿಕೊಳ್ಳುವ ಗ್ರಾಹಕರು ಸಾಕಷ್ಟು ಸಂಖ್ಯೆಯಲ್ಲಿ ಕಾಣಸಿಗುತ್ತಾರೆ. ಈ ಅವದಿಯಲ್ಲಿ ಲೋಕಲ್ ಆಪೀಸಿನ ಮುಖ್ಯ ಪ್ರಬಂಧಕ ರಾಗಿ ಕಾರ್ಯನಿರ್ವಹಿಸಿದರು.

ಡಿವಿಜನಲ್ ಮ್ಯಾನೇಜರಾಗಿ ಮತ್ತೆ ಪದೋನ್ನತಿ ಪಡೆದರು. ಯಾವ ಹುದ್ದೆಯನ್ನೇ ಪಡೆಯಲಿ ಅದು ಅವರ ಸಾಮರ್ಥ್ಯಕ್ಕೆ ಸಂದ ಗೌರವವೇ ಆಗಿತ್ತು. ಸ್ವೀಕರಿಸಿದ ಹುದ್ದೆಗೆ ಒಂದು ತಿಲಕವನ್ನು ಇಟ್ಟು ಅದು ಕಂಗೊಳಿಸುವಂತೆ ಮಾಡಿದರು. ಉಡುಪಿಯ ಪ್ರಾಂತೀಯ ಪರಿಶೋಧಕರಾಗಿ ನೇಮಕಗೊಂಡು 1980ರಲ್ಲಿ ವೃತ್ತಿಯಿಂದ ನಿವೃತ್ತಿ ಪಡೆದರು. ಒಟ್ಟು ಇಪ್ಪತ್ತು ವರ್ಷಗಳ ಅವರ ಬ್ಯಾಂಕ್ ಸೇವೆ ಸಿಂಡಿಕೇಟ್ ಬ್ಯಾಂಕಿನ ಚರಿತ್ರೆಯಲ್ಲಿ ಗಟ್ಟಿ ದಾಖಲೆಯೆನ್ನಬೇಕು.

ಬ್ಯಾಂಕ್ ಉದ್ಯೋಗದಿಂದ ನಿವೃತ್ತರಾದರೂ ಸಮಾಜ ಸೇವೆಯಲ್ಲಿ ಮಾತ್ರ ಪ್ರವೃತ್ತರಾಗಿಯೇ  ಇದ್ದರು. ಬೇರೆ ಬೇರೆ ಸಂಘ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಬರವಣಿಗೆಯ ಕಡೆಗೆ ಆಸಕ್ತರಾದರು. ಬಹುಮುಖ ವ್ಯಕ್ತಿತ್ವವುಳ್ಳ ಅವರು ಜೀವನದ ಎಲ್ಲ ಕ್ಷೇತ್ರಗಳನ್ನು ಪ್ರೀತಿಸುತ್ತಿದ್ದರು. ಜೀವನದ ಸಂಧ್ಯಾ ಕಾಲದಲ್ಲೂ ಕೈ ಬಿಡುವಿಲ್ಲದ ಕೆಲಸ ಅವರಿಗಿತ್ತು. ಬಿಡುವಿಲ್ಲದ ದುಡಿಮೆ, ಹದಗೆಡುತ್ತಿರುವ ಆರೋಗ್ಯ ಜೊತೆಗೆ ವೃದ್ಧಾಪ್ಯ – ತಮ್ಮ ಮಹಾತ್ವಾಕಾಂಕ್ಷೆಯ ಕೃತಿ ‘ಅಳಿಯದ ಮಹಾಚೇತನ – ಯೇಸು’ ಬರೆದು ಪೂರೈಸಿದ ಒಂದು ವಾರದಲ್ಲೇ ಹೃದಯಾಘಾತಕ್ಕೊಳಗಾದರು. ತಾ. 23-11-1991ರಂದು ಅಪಾರ ಅಬಿಮಾನಿಗಳನ್ನು ಅಗಲಿದರು.

ಕುಟುಂಬದೊಳಗೆಲ್ಲಾ ಬೆಳಕು

ಕ್ಯಾಥೋಲಿಕ್ ಕೊಂಕಣಿ ಕ್ರೈಸ್ತ ಸಮುದಾಯಕ್ಕೆ ಸೇರಿದವರಾದರೂ ಫ್ರಾನ್ಸಿಸ್ ದಾಂತಿ ಯವರು ಭಾರತೀಯ ಸಂಸ್ಕೃತಿಯ ಮೇಲೆ ಅಪಾರ ಗೌರವ-ಮಮತೆ ಉಳ್ಳವರಾಗಿದ್ದರು. ಸಮನ್ವಯ ಮತ್ತು ಸಾಮರಸ್ಯ ಅವರ ಕುಟುಂಬದ ಮೂಲದ್ರವ್ಯ.

ಸಂಸಾರ ಜೀವನದಲ್ಲಿ ಅವರ ಬದುಕನ್ನು ತುಂಬಿದವರು ಸಿಸಿಲಿಯಾ ಆಳ್ವರವರು. ಬೆಳ್ಳೆಯ ಆಳ್ವ ಮನೆತನ ಸರಳ-ಸಜ್ಜನಿಕೆಗೆ ಹೆಸರಾದ ಕುಟುಂಬ. ಸಿಸಿಲಿಯಾ ಆಳ್ವರಲ್ಲೂ ಅದೇ ಗುಣ ಸಂಪತ್ತು. ಅವರೂ ಕೂಡ ವೃತ್ತಿಯಲ್ಲಿ ಶಿಕ್ಷಕಿ. ಸುಬೋದಿನಿ ಶಾಲೆಗೆ ಬಂದ ಮೇಲೆ ತಮ್ಮ ಅನುಕೂಲಕ್ಕಾಗಿ ದಾಂತಿಯವರು ಅಲೆವೂರಿನಲ್ಲೇ ಮನೆ ಮಾಡಿದರು. ಕುಟುಂಬ ನಿರ್ವಹಣೆಯಲ್ಲಿ ತಮ್ಮ ಪತಿಗೆ ಹೆಗಲಿಗೆ ಹೆಗಲಾಗಿ ನಿಂತವರು ಸಿಸಿಲಿಯಾ ಆಳ್ವರವರು. ಪತಿಯ ಹಿತಾಸಕ್ತಿಯ ಬಗ್ಗೆ ಕಾಳಜಿ-ಗೌರವ ಉಳ್ಳ ಅವರು ಅವರ ಪ್ರತಿಯೊಂದು ಚಟುವಟಿಕೆಗಳಿಗೂ ಸಹಕಾರಿಯಾಗಿದ್ದರು.

ದಾಂತಿ ದಂಪತಿಗಳಿಗೆ ಎಂಟು ಮಂದಿ ಮಕ್ಕಳು. ಪ್ರೆಸಿಲ್ಲಾ, ರೋಸ್ ವೆರೋನಿಕಾ, ಹಿಲ್ಡಾ – ಮೂವರು ಹೆಣ್ಣುಮಕ್ಕಳು; ಡಾ. ಹೆನ್ರಿ, ಚಾರ್ಲ್ಸ್, ವಲೇರಿಯನ್, ಅಲ್ಫೋನ್ಸ್, ವಿಜಯ್ – ಐವರು ಗಂಡುಮಕ್ಕಳು. ಮಕ್ಕಳೇ ಮನೆಯ ಸಂಪತ್ತು – ಇದು ದಾಂತಿ ದಂಪತಿಗಳ ಅರಿವು. ಮನೆಯಲ್ಲಿ ಮಕ್ಕಳು ನಲಿನಲಿಯುತ್ತಿರಬೇಕಾದರೆ ಹೆತ್ತವರು ಕೈತುಂಬಿ, ಬಾಯ್ತುಂಬಿ ಅಕ್ಕರೆ ನೀಡಬೇಕು. ಪ್ರೀತಿಯ ನೀರು-ಗೊಬ್ಬರದಿಂದಲೇ ಮಕ್ಕಳ ಸುಖ ಬಾಳು. ಸಮಾಜಕ್ಕೆ ಮೌಲ್ಯಯುತ ವ್ಯಕ್ತಿಯಾಗಿ ಸಂದ ದಾಂತಿಯವರು ಕುಟುಂಬದ ಸದಸ್ಯರಿಗೂ ಅದೇ ರೂಪವಾಗಿದ್ದರು. ಸಾರ್ವಜನಿಕರ ಎದುರಿಗೆ ಏನು ಮಾತಾಡುತ್ತಿದ್ದರೊ ಮನೆಯಲ್ಲಿ ಮೊದಲು ಅದರ ಅನುಷ್ಠಾನವಾಗುತ್ತಿತ್ತು.

ಶಿಕ್ಷಣದಿಂದಲೇ ವ್ಯಕ್ತಿಯ ಉದ್ಧಾರ, ಸಮಾಜದ ಉದ್ಧಾರ ಎಂದು ನಂಬಿದ್ದ ಅವರು ಮಕ್ಕಳ ಶಿಕ್ಷಣದ ಬಗ್ಗೆ ಬಹಳ ಮುತುವರ್ಜಿ ವಹಿಸಿದ್ದರು. ಜವಾಬ್ದಾರಿಯುತ ತಂದೆಯಾಗಿ ನಡೆದುಕೊಂಡಿರುವುದು ಒಂದು ಮಾದರಿ. ಗಂಡುಮಕ್ಕಳು, ಹೆಣ್ಣುಮಕ್ಕಳು ಎಂಬ ಭೇದ ಮಾಡದೆ ತಮ್ಮ ಎಲ್ಲ ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸಿದರು. ಸ್ನಾತಕ ಸ್ನಾತಕೋತ್ತರ ಶಿಕ್ಷಣ ದಿಂದ ಬೆಳಗುವಂತೆ ಶಕ್ತಿ ನೀಡಿದರು. ಅವರಲ್ಲಿ ಸ್ವಾವಲಂಬಿ-ಸ್ವಾಬಿಮಾನದ ವ್ಯಕ್ತಿತ್ವವನ್ನು ರೂಪಿಸಿದ ತಂದೆ ಇವರು.

ಮಕ್ಕಳಿಗೆ ಪ್ರೀತಿಯ ತಂದೆಯಾದರೂ ಶಿಸ್ತು ಬದ್ಧತೆಗೂ ಅಷ್ಟೇ ಮಹತ್ತ್ವ ಕೊಟ್ಟಿದ್ದರು. ಶಾಲೆಯಲ್ಲಾಗಲಿ, ಹೊರಗೆ ಎಲ್ಲೇ ಆಗಲಿ ಬೇರೆ ಮಕ್ಕಳೊಂದಿಗೆ ಜಗಳವಾಗಿ ತಮ್ಮ ಮಕ್ಕಳು ಮನೆಗೆ ದೂರು ತಂದರೆ ಮೊದಲು ತಮ್ಮ ಮಕ್ಕಳನ್ನೇ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಬೇರೆಯವರು ತಪ್ಪು ಮಾಡಿದರು ಎಂದು ನಾವು ತಪ್ಪು ಮಾಡಬಾರದು – ಇದು ದಾಂತಿ ಯವರು ತಮ್ಮ ಮಕ್ಕಳಿಗೆ ನೀಡುತ್ತಿದ್ದ ಅರಿವು. ಮಕ್ಕಳು ಆರೋಗ್ಯವಂತರಾಗಬೇಕು, ಸದೃಢ ಶರೀರವುಳ್ಳವರಾಗಬೇಕು – ಈ ಕಾಳಜಿಯಿಂದಲೇ ಪ್ರತಿ ರವಿವಾರ ಮಕ್ಕಳಿಗೆಲ್ಲ ಎಣ್ಣೆ ಹಚ್ಚಿ ಸ್ನಾನ ಮಾಡಿಸುತ್ತಿದ್ದರು. ಮಕ್ಕಳಿಗೆ ಜವಾಬ್ದಾರಿಯೂ ಬರಬೇಕು. ಅನುಭವವೂ ಇರಬೇಕು – ಅದಕ್ಕಾಗಿಯೇ  ಮನೆಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕೆಲಸವನ್ನು ನೇಮಿಸುತ್ತಿದ್ದರು. ಗಿಡ- ಮರಗಳಿಗೆ ನೀರು ಹಾಕಿ ಆರೈಕೆ ಮಾಡುವುದೂ ಒಂದು ಪಾಠವೆ. ಒಬ್ಬೊಬ್ಬರಿಗೆ ಎರಡು – ಮೂರು ತೆಂಗಿನ ಮರಗಳನ್ನು, ಹಣ್ಣಿನ ಅಥವಾ ಹೂವಿನ ಗಿಡಗಳನ್ನು ಹಂಚಿಕೊಡುತ್ತಿದ್ದರು. ತಮಗೆ ಹಂಚಿಕೊಟ್ಟ ಆ ಗಿಡ-ಮರದ ಆರೈಕೆಯನ್ನೂ ಇವರು ಮಾಡಬೇಕು. ಚೆನ್ನಾಗಿ ಆರೈಕೆ ಮಾಡುವವರಿಗೆ ತಂದೆಯ ಪ್ರಶಂಸೆ ಕಾದಿರುತ್ತಿತ್ತು. ಆ ಪ್ರಶಂಸೆಗಾಗಿ ಈ ಮುದ್ದಿನ ಮಕ್ಕಳು ನಾನು ಮುಂದೆ ತಾನು ಮುಂದೆ ಎಂದು ಪ್ರೀತಿಯಿಂದ ನೀರೆರೆಯುತ್ತಿದ್ದರು. ಈಗಲೂ ಈ ಸಂಗತಿಯನ್ನು ನೆನಪಿಸಿಕೊಂಡು ಪುಲಕಿತರಾಗುತ್ತಾರೆ ದಾಂತಿಯವರ ಪುತ್ರ-ಪುತ್ರಿಯರು.

ಮಕ್ಕಳು ಬುದ್ಧಿ ಪ್ರವರ್ಧನರಾಗಬೇಕಾದರೆ ಓದುವ ಹವ್ಯಾಸವನ್ನು ಹಚ್ಚಿಕೊಳ್ಳಬೇಕು ಎಂಬ ಒತ್ತಾಸೆಯುಳ್ಳವರಾಗಿದ್ದರು ಶ್ರೀ ದಾಂತಿಯವರು. ಓದುವ ಹವ್ಯಾಸಕ್ಕೆ ತಮ್ಮ ಮಕ್ಕಳಿಗೆ ತಾವೇ ಮೊದಲ ಮಾದರಿಯಾಗಿದ್ದರು. ಅವರ ಪುಸ್ತಕ ಪ್ರೀತಿ ಅನನ್ಯವಾದುದು. ಸಾಹಿತ್ಯ ಗ್ರಂಥಗಳು, ಧರ್ಮ ಗ್ರಂಥಗಳು, ಶಾಸ್ತ್ರ-ಪುರಾಣ ಗ್ರಂಥಗಳು ಮನೆಯಲ್ಲಿ ಸಂಗ್ರಹ ಗೊಂಡಿದ್ದವು. ದಿನದ ಕೆಲಸಗಳನ್ನೆಲ್ಲ ಮುಗಿಸಿ ಮನೆಗೆ ಬಂದ ಮೇಲೆ ಕುಟುಂಬ ಕುಶಲೋಪರಿ ಮುಗಿದ ಮೇಲೆ ಮಧ್ಯರಾತ್ರಿಯವರೆಗೆ ಓದುವ-ಬರೆವ ಕಾರ್ಯ ನಡೆಯುತ್ತಿತ್ತು. ವ್ಯಕ್ತಿ ಬೆಳವಣಿಗೆಗೆ ಓದುವಿಕೆಂಯೆಂಬುದು ಜೀವಸತ್ವ ಇದ್ದಂತೆ ಎಂದು ನಂಬಿದ್ದರು ಮಾತ್ರವಲ್ಲ ಅದರ ಫಲಾನುಭವವನ್ನು ತಾವು ಬೇಕಷ್ಟು ಪಡೆದುಕೊಂಡಿದ್ದರು. ತಂದೆಯ ಪುಸ್ತಕ ಪ್ರೀತಿ ಮಕ್ಕಳಲ್ಲೂ ಚಿಗುರೊಡೆಯಿತು. ಮಹಾಭಾರತದ ಎಲ್ಲ ಸಂಪುಟಗಳೂ, ಹಿಂದೂ, ಮುಸ್ಲಿಮ್, ಕ್ರೈಸ್ತ ಧರ್ಮಗ್ರಂಥಗಳೂ ತಮ್ಮ ಮನೆಯಲ್ಲಿದ್ದವು ಎಂಬುದಾಗಿ ಪುತ್ರ ಚಾರ್ಲ್ಸ್ ರವರು ಹೇಳುತ್ತಾರೆ. “ತಂದೆಯವರು ಸಾಯಂಕಾಲ ಮನೆಗೆ ಬರುವುದನ್ನೇ ನಾವು ಕಾದು ಕೊಂಡಿರುತ್ತಿದ್ದೆವು. ನಿತ್ಯವು ನಮಗಾಗಿ ಪುಸ್ತಕಗಳನ್ನು ಪತ್ರಿಕೆಗಳನ್ನು ಅವರು ತರುತ್ತಿದ್ದರು. ಮೊದಲು ಯಾವುದು ಯಾರಿಗೆ ಎಂಬುವುದರ ಬಗ್ಗೆ ನಮ್ಮ ನಮ್ಮೊಳಗೆ ತಕರಾರು ನಡೆಯುತ್ತಿತ್ತು. ನಮ್ಮ ಓದುವ ಕುತೂಹಲ ಹಾಗಿತ್ತು. ಅದಕ್ಕೆ ಕಾರಣರು ತಂದೆಯವರೆ” ಹೀಗೆಂದು ತಮ್ಮ ಓದಿನ ಪ್ರೀತಿಯನ್ನು ಸ್ಮರಿಸಿಕೊಳ್ಳುತ್ತಾರೆ ಅವರ ಪುತ್ರಿ ರೋಸ್ ವೆರೋನಿಕಾರವರು.

ಕ್ರೈಸ್ತ ಹಬ್ಬಗಳ ಜೊತೆಗೆ ಹಿಂದೂ ಹಬ್ಬಗಳನ್ನು ಆಚರಿಸುತ್ತಿದ್ದರು. ದೀಪಾವಳಿಯಂದು ತಾವೂ ಮನೆಯಲ್ಲಿ ದೀಪ ಬೆಳಗುತ್ತಿದ್ದರು. ಗೋ ಪೂಜೆಯನ್ನು ಮಾಡುತ್ತಿದ್ದರು. ಹಬ್ಬಗಳು ಆನಂದದ ಕ್ಷಣಗಳು. ಜಾತಿ-ಮತ-ಧರ್ಮಗಳ ಮಿತಿ ಅದಕ್ಕೇಕೆ ಬೇಕು? ಎಲ್ಲ ಹಬ್ಬಗಳಲ್ಲೂ ಮಾನವರಿಗೆ ಒಳಿತು ತರುವ ಒಂದೊಂದು ಸದಾಶಯವಿರುತ್ತದೆಯಲ್ಲವೆ? ಅದರ ಆಚರಣೆ ಯಿಂದ ಆ ಸದಾಶಯ ಮನೆ ತುಂಬಿದರೆ ಒಳ್ಳೆಯದಲ್ಲವೆ? – ಎಂಬ ಚಿಂತನೆ ಅವರಲ್ಲಿ ಕೊನರಿಕೊಂಡಿತ್ತು. ಎಲ್ಲ ಧರ್ಮಗಳನ್ನು ಅರಿಯುವ, ಪ್ರೀತಿಸುವ, ಗೌರವದಿಂದ ಕಾಣುವ ಶಿಷ್ಟಾಚಾರಗಳನ್ನು ಮನೆಯಲ್ಲಿ ಹಿರಿಯರು ಮಕ್ಕಳಿಗೆ ಕಲಿಸಿದರೆ ಮಾತ್ರ ನಾಳೆ ಅವರು ಸಮಾಜದಲ್ಲಿ ಸಾಮರಸ್ಯದಿಂದ ಬಾಳುವುದನ್ನು ಕಲಿಯುತ್ತಾರೆ. ತಮ್ಮ ತಮ್ಮ ಜಾತಿ-ಮತಗಳ ಗವಿಯೊಳಗೆ ಮಕ್ಕಳನ್ನು ಕೂಡಿ ಹಾಕಿದರೆ ನಾಳೆ ಸಮಾಜದಲ್ಲಿ ಎಲ್ಲಿ ಸಾಮರಸ್ಯದಿಂದ ಬಾಳುತ್ತಾರೆ? ಅವರನ್ನು ಮನುಷ್ಯರನ್ನಾಗಿ ಮಾಡುವ ವಾತಾವರಣ ಮೊದಲು ಮತಿಯಿಂದ ಮೂಡಿಬರಬೇಕು – ಇಂಥ ಸುವಿಚಾರವುಳ್ಳವರಾಗಿದ್ದರು ಅವರು. ಅಂತೆಯೇ  ತಮ್ಮ ಮಕ್ಕಳನ್ನು ಬೆಳೆಸಿದ್ದರು.

ಅವರು ಮನೆಯೊಳಗಿದ್ದರೂ ಒಂದು ದೃಷ್ಟಿ ಹೊರಬಾಗಿಲ ಕಡೆಗೆ ಇರುತ್ತಿತ್ತು. ಹಿರಿ ಮಗಳು ಪ್ರೆಸಿಲ್ಲಾ ಹೇಳುತ್ತಾರೆ : ಗೇಟಿನ ಹತ್ತಿರ ಯಾರಾದರೂ ಹಸಿದು ಬಂದರೆ ಏನಾದರೂ ತಿಂಡಿ ತಿನ್ನು ಎಂದು ದುಡ್ಡುಕೊಟ್ಟು ಕಳುಹಿಸುತ್ತಿದ್ದರು. ಊಟದ ಸಮಯವಾದರೆ ಒಳಗೆ ಕರೆದು ಊಟ ಬಡಿಸುತ್ತಿದ್ದರು. ಅವರು ಊಟ ಮಾಡುವದನ್ನೇ ಕುಳಿತು ನೋಡುತ್ತಿದ್ದರು. ಊಟ ಮಾಡಿ ತೃಪ್ತರಾದುದನ್ನು ಕಂಡು ತಾವು ಸಂತೋಷ ಅನುಭವಿಸುತ್ತಿದ್ದರು ಅಂತ. ಎಳವೆಯಲ್ಲಿ ತಾವು ಅನುಭವಿಸಿದ ಬಡತನ ದೊಡ್ಡವರಾದ ಮೇಲೆ ಇನ್ನೊಬ್ಬರ ಹಸಿವಿನ ಬೇಗೆಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಅವರಿಗೆ ಕಲಿಸಿತ್ತು ಅನ್ನುತ್ತಾರೆ.

ಕುಟುಂಬ ವಿಷಯದಲ್ಲಿ ನಿರ್ಲಕ್ಷ ್ಯ ತಾಳಿದವರಲ್ಲ ಮತ್ತು ತಾವೊಬ್ಬರೇ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ. ತಮ್ಮ ಪತ್ನಿಯೊಂದಿಗೆ ಚರ್ಚಿಸಿ ಅವರ ಸಲಹೆ ಸೂಚನೆಗಳನ್ನು ಪಡೆದು ಮಕ್ಕಳ ಸಮ್ಮುಖದಲ್ಲಿ ನಿರ್ಣಯ ತೆಗೆದುಕೊಳ್ಳುತ್ತಿದ್ದರು. ಹಾಸ್ಯಭರಿತ ಅವರ ಮಾತುಕತೆ ಹೆಂಡತಿ-ಮಕ್ಕಳಿಗೆ ಹಿತವಾಗುತ್ತಿತ್ತು. ಸಮಾಜದೊಳಗೆ ಹೇಗೋ ಹಾಗೆ ಮನೆ ಯಲ್ಲಿ ಯಾವ ಕ್ಲಿಷ್ಟ ಸಂಗತಿಗಳಿದ್ದರೂ ಕೂಡಲೇ ತಿಳಿಗೊಳಿಸಿ ಅದಕ್ಕೊಂದು ಪರಿಹಾರ ಕೊಡುತ್ತಿದ್ದರು. ಪತ್ನಿಗೆ ಸಹಕರಿಸುವಲ್ಲೂ ಸಿದ್ಧಹಸ್ತರೆ.

ದಾಂತಿಯವರು ಮನೆಯಲ್ಲಿ ಇದ್ದಾರೆ ಎಂದು ತಿಳಿದರೆ ಮನೆಗೆ ಬಂದು ಹೋಗುವವರ ಸಂಖ್ಯೆಗೆ ಲೆಕ್ಕವೇ ಇಲ್ಲ. ಸಲಹೆ ಕೇಳಲು, ಚರ್ಚೆ ಮಾಡಲು, ಸುಮ್ಮನೆ ಹೀಗೆ ಮಾತಾಡಿಸಿಕೊಂಡು ಹೋಗಲು – ಹೀಗೆ ಬೇರೆ ಬೇರೆ ಕಾರಣಗಳಿಗಾಗಿ ಬರುತ್ತಿದ್ದರು. ಬಂದವರಿಗೆ ಚಹ-ಕಾಪಿ ಆಗಲೇಬೇಕು. ಊಟದ ಸಮಯವಾದರೆ ಊಟ. ಸಾಹಿತಿಗಳ, ಸಾರ್ವಜನಿಕ ಕಾರ್ಯಗಳಲ್ಲಿ ತೊಡಗಿಕೊಂಡವರ ಮಡದಿಯರಿಗೆ ಮನೆಗೆ ಬಂದವರಿಗೆ ಉಪಚಾರ ಮಾಡುವುದೇ ದೊಡ್ಡ ಕೆಲಸವಾಗಿರುತ್ತದೆ. ಅದು ಗೌರವದ ಪ್ರಶ್ನೆಯಾದ ಕಾರಣ ಆ ಬಗ್ಗೆ ಉದಾಸೀನ ಮಾಡುವಂತಿಲ್ಲ. ಶ್ರೀಮತಿ ಸಿಸಿಲಿಯಾ ದಾಂತಿಯವರು ಎಂದೂ ಗೊಣಗಿಕೊಂಡವರಲ್ಲ. ತಮ್ಮ ಮನೆಯಲ್ಲಿ ತಮ್ಮ ಪತಿಯ ಗೌರವಕ್ಕೆ ಕಡಿಮೆಯಾಗಬಾರದು ಎಂಬ ಎಚ್ಚರ ಅವರಿಗೆ. ಪತಿ ಮಾಡುತ್ತಿರುವ ಕಾರ್ಯಗಳ ಬಗ್ಗೆ ಅಷ್ಟೇ ಪ್ರೀತಿ, ಅಷ್ಟೇ ಹೆಮ್ಮೆ. ಈ ತಾಯಿಯ ಕೈಯಿಂದ ಚಹ-ಕಾಪಿ, ಊಟೋಪಚಾರ ಪಡೆದವರು ಅದೆಷ್ಟೋ ಮಂದಿ. ಬಡವ-ಬಲ್ಲಿದ, ಆ ಜಾತಿ-ಈ ಜಾತಿ ಎಂಬ ಭೇದವಿಲ್ಲದೆ ಮಾನವ ಜಾತಿ ಒಂದೇ ಎಂಬ ಅರಿವಿನ ಆಲಯವಾಗಿತ್ತು ಈ ಮನೆ. ದಾಂತಿಯವರ ಈ ಹೃದಯದ ಪ್ರತಿಬಿಂಬವಾಗಿ ಅವರ ಮಡದಿ ಮಕ್ಕಳು ವಿಕಸನಗೊಂಡಿದ್ದರು; ಸುಖ-ಶಾಂತಿ, ನೆಮ್ಮದಿಯನ್ನು ತುಂಬಿದ್ದರು.

ಸಮಾಜಮುಖಿಯಾದ ಹಣತೆ

ಫ್ರಾನ್ಸಿಸ್ ದಾಂತಿಯವರ ಸಾಮಾಜಿಕ ಸ್ಪಂದನ ಅಸಾಧಾರಣವಾದುದು. ಸಮಾಜ ದಲ್ಲಿ ಎಲ್ಲರ ಹಿತ ಸಾಧನೆಯಾಗಬೇಕು. ದುರ್ಬಲರ ಏಳಿಗೆಯಾಗದೆ ಸಮಾಜ ಸುದೃಢ ವಾಗದು. ಪ್ರಬಲ ವರ್ಗದವರು ಉದಾರಿಯಾಗಬೇಕು. ದುರ್ಬಲ ವರ್ಗದವರ ಶೋಷಣೆಯೊಂದೇ ಅವರ ಗುರಿಯಾಗಬಾರದು. ಒಂದಿಷ್ಟು ಶಕ್ತಿ ನೀಡಿ ಅವರನ್ನು ಹಿಡಿದೆತ್ತಬೇಕು. ಸ್ವಾವಲಂಬಿಗಳಾಗಿ ಸ್ವಾಬಿಮಾನದಿಂದ ಬಾಳುವುದಕ್ಕೆ ಸಹಕಾರಿಯಾಗಬೇಕು. ಪ್ರೀತಿಯ ಹೃದಯ ಬೀರುವ ಬೆಳಕಿಗೆ ಏನೆಂಥ ಶಕ್ತಿ! ದಾಂತಿಯವರ ಸಮಾಜಮುಖಿ ವಿಚಾರಗಳು ಸಾರ್ವಜನಿಕರಿಗೆ ಹೊಸ ದೃಷ್ಟಿಯನ್ನು ನೀಡುತ್ತಿದ್ದವು. ಹೊಸ ದೃಷ್ಟಿಯಿಲ್ಲದೆ ಹೊಸ ಸೃಷ್ಟಿಯಾಗದು – ಈ ಅರಿವು ಅವರಿಗೆ ಚೆನ್ನಾಗಿತ್ತು. ಇದು ಜೀವ ಪಡೆಯಬೇಕಾದುದು ಶಿಕ್ಷಣದ ಶಕ್ತಿಯಿಂದಲೇ. ಅತ್ಯಂತ ಕೆಳಸ್ತರದ ಜನಗಳಿಗೆ ಶಿಕ್ಷಣ ದೊರಕಬೇಕು, ಅದು ಅವರಿಗೆ ನಿಲುಕಬೇಕು. ಪೇಟೆಯ ಜನಗಳಿಗೆ ಇರುವ ಅವಕಾಶ, ಶ್ರೀಮಂತ ವರ್ಗಕ್ಕೆ ಇರುವ ಅವಕಾಶ ಈ ಜನಕ್ಕೆ ಎಲ್ಲಿದೆ? ಈ ಚಿಂತೆ ಅವರನ್ನು ಸದಾ ಕಾಡುತ್ತಿತ್ತು. ಈ ಸಾಮಾಜಿಕ ಚಿಂತೆ ಅವರೊಳಗೆ ಚಿಂತನೆಯಾಗಿಯೇ  ಪಾಕಗೊಳ್ಳುತ್ತಿತ್ತು. ಸೂಕ್ಷ್ಮಗ್ರಾಹಿಗಳಾದ ಅವರಿಗೆ ಸಾಮಾಜಿಕ ಸಮಸ್ಯೆಗಳು, ಕುಂದುಕೊರತೆಗಳು ತಟ್ಟನೆ ಗಮ್ಯಕ್ಕೆ ಬರುತ್ತಿತ್ತು. ಅದನ್ನು ಕಂಡು ಸುಮ್ಮನೆ ಕುಳಿತುಕೊಳ್ಳುವವರಲ್ಲ ಅವರು. ಕೂಡಲೇ ಕಾರ್ಯ ಪ್ರವೃತ್ತರಾಗುತ್ತಿದ್ದರು. ಪರಿಹಾರಕ್ಕೆ ಏನು ದಾರಿ? ಯಾರ ಯಾರ ಸಹಕಾರ ಬೇಕು, ಅದನ್ನು ಪಡೆಯಲು ಏನೇನು ಮಾಡಬೇಕು – ಅಲ್ಲೆಲ್ಲ ಬೆಳಕಿನ ಕಿರಣವನ್ನು ಹಾಯಿಸುತ್ತಿದ್ದರು, ಸಾಧ್ಯವಾಗಿಸುತ್ತಿದ್ದರು.

ಅಲೆವೂರು ಹಳ್ಳಿ ಪ್ರದೇಶ. ಪ್ರಾಥಮಿಕ ಶಿಕ್ಷಣದವರೆಗೆ ಅಲ್ಲಿ ಅವಕಾಶ. ಆರ್ಥಿಕ ಅನುಕೂಲವಿರುವ ಕೆಲವೇ ಕೆಲವು ಮಕ್ಕಳು ಹೆಚ್ಚಿನ ಶಿಕ್ಷಣಕ್ಕಾಗಿ ಉಡುಪಿಗೆ ಬರುತ್ತಿದ್ದರು. ಬಡವರ್ಗದ ಮಕ್ಕಳಿಗೆ ಪ್ರೌಢಶಿಕ್ಷಣ ಕೇವಲ ಮರೀಚಿಕೆ. ಬಡವರಿಗೆ ಶಿಕ್ಷಣವಿಲ್ಲ; ಶಿಕ್ಷಣವಿಲ್ಲದೆ ಅವರು ಬಡವರು – ಹೀಗೆ ಶಿಕ್ಷಣ ಕೊರತೆ – ಬಡತನ – ಒಂದನ್ನೊಂದು ಬೆಸೆದುಕೊಂಡು ಸಾಮಾನ್ಯ ಜನವರ್ಗ ಉದ್ಧಾರದಿಂದ ವಂಚಿತರಾಗಿದ್ದರು. ಇದಕ್ಕೊಂದು ಪರಿಹಾರ ಕಂಡು ಕೊಳ್ಳಬೇಕು. ಅಲೆವೂರಲ್ಲಿ ಒಂದು ಪ್ರೌಢಶಾಲೆ ತಲೆಯೆತ್ತಿದರೆ ಅದೆಷ್ಟು ಗ್ರಾಮಾಂತರದ ಮಕ್ಕಳು ಶಿಕ್ಷಣ ಪ್ರಕಾಶದಿಂದ ಹೊಳೆಯಲಾರರು? ಊರು ಬೆಳಗಲಾರರು? – ದಾಂತಿಯವರ ಹೊಂಗನಸು ಇದು.

ಆಗ ಮಣಿಪಾಲದ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷರಾಗಿದ್ದವರು ಮಣಿಪಾಲದ ಪಿತಾಮಹ ಟಿ.ಎಂ.ಎ. ಪೈಯವರು. ಪೈಯವರು ಮನಸ್ಸು ಮಾಡಿದರೆ ಅಲೆವೂರಲ್ಲಿ ಪ್ರೌಢಶಾಲೆ ಖಂಡಿತ ಸಾಧ್ಯ. ಈ ಭರವಸೆ ದಾಂತಿಯವರಿಗೆ. ಟಿ.ಎಂ.ಎ ಪೈಯವರನ್ನು ಕಂಡು ಮಾತಾಡಿದರು. ಸಾಧಾರಣಕ್ಕೆಲ್ಲ ಪೈಯವರು ‘ಹೂಂ’ ಅನ್ನುವವರಲ್ಲ. ಆದರೆ ದಾಂತಿಯವರು ನಿಃಸ್ವಾರ್ಥ ಸಮಾಜ ಸೇವಕರು ಎಂಬುದು ಪೈಗಳಿಗೆ ಮೊದಲೇ ಮನವರಿಕೆಯಾಗಿತ್ತು. ಅವರ ವರ್ಚಸ್ವಿ ವ್ಯಕ್ತಿತ್ವದ ಮೇಲೆ ಗೌರವವಿತ್ತು. ಪ್ರೌಢಶಾಲೆ ತೆರೆವ ಭರವಸೆಯಿತ್ತರು. ಭರವಸೆಯಿತ್ತಂತೆ ಶಾಲೆಯನ್ನು ತೆರೆದರು. ಅಲೆವೂರಿನಲ್ಲಿ 1964ರಲ್ಲಿ ನೆಹರೂ ಸ್ಮಾರಕ ಪ್ರೌಢಶಾಲೆ ಉದಯವಾಯಿತು. ಸ್ಥಾಪಕ ಕಾರ್ಯದರ್ಶಿಯಾಗಿ ಆಡಳಿತ ಮಂಡಳಿಯಲ್ಲಿದ್ದು ಕೊನೆಯುಸಿರಿರುವ ತನಕ ಆ ವಿದ್ಯಾ ಸಂಸ್ಥೆಯ ಅಭಿವೃದ್ಧಿಗಾಗಿ ದುಡಿದರು. ಅದರ ಏಳಿಗೆಯನ್ನು ಕಂಡು ಸಂತಸಪಟ್ಟರು.

ಹಳ್ಳಿಯ ಜನರು ಓದು-ಬರೆಹದಿಂದ ಮುಂದು ಬರಬೇಕು – ಇದು ದಾಂತಿ ಯವರ ಮನೀಷೆ. ಮಕ್ಕಳನ್ನು ಶಾಲೆಗೆ ಕಳುಹಿಸದಿದ್ದರೆ – ಹೆತ್ತವರನ್ನು ಕರೆದು ವಿಚಾರಿಸುತ್ತಿದ್ದರು. ಸಮಸ್ಯೆಗಳನ್ನು ತಿಳಿದುಕೊಳ್ಳುತ್ತಿದ್ದರು. ಆರ್ಥಿಕ ಸಂಕಷ್ಟ ಇದೆ ಅಂತಾದರೆ ಅದನ್ನು ತಾವೇ ನಿಭಾಯಿಸುವ ಭರವಸೆ ನೀಡಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಹೇಳುತ್ತಿದ್ದರು. ಹುಡುಗಾಟಿಕೆ ಬುದ್ಧಿಯಿಂದ ಮಕ್ಕಳು ತಾವೇ ಶಾಲೆ ಬಿಟ್ಟಿದ್ದಿದ್ದರೆ ಅಂಥ ಮಕ್ಕಳನ್ನು ಸ್ವತಃ ಕರೆಯಿಸಿ ಬುದ್ಧಿ ಹೇಳುತ್ತಿದ್ದರು. ಕೇಳದಿದ್ದರೆ ಜೋರು ಮಾಡಿ ಶಾಲೆಗೆ ಹೋಗುವಂತೆ ಪ್ರೇರೇಪಿಸುತ್ತಿದ್ದರು. ಊರಿಗೆ ಬೆಳಕಾಗಿ ಬೆಳಕನ್ನೇ ಅವರು ಎಲ್ಲೆಡೆ ಹಚ್ಚಿದರು.

ವ್ಯಾಜ್ಯ ಬಗೆಹರಿಸುವುದರಲ್ಲಿ ಬಹು ಚತುರರು. ಊರು, ಕೇರಿ, ಕುಟುಂಬ, ಸಂಬಂಧ, ಸಂಸಾರ – ಅನ್ನುವಾಗ ಒಂದಲ್ಲ ಒಂದು ವ್ಯಾಜ್ಯ, ಜಗಳ, ತಕರಾರು ಇದ್ದದ್ದೆ. ಆದರೆ ಇವೆಲ್ಲ ಜೀವನದ ಶಾಂತಿ-ನೆಮ್ಮದಿಯನ್ನು ಕೆಡಿಸಬಲ್ಲಂಥವುಗಳು. ಮನಸ್ಸನ್ನು ಹಾಳು ಮಾಡುವಂಥವುಗಳು. ಇವುಗಳಿಗೆ ಮುಖ್ಯ ಕಾರಣ – ಸ್ವಾರ್ಥ, ದುರಬಿಮಾನ, ದುರಬಿಪ್ರಾಯ ಎಲ್ಲಕ್ಕಿಂತ ಹೆಚ್ಚಾಗಿ ತಿಳುವಳಿಕೆಯ ಕೊರತೆ. ಸಣ್ಣ-ಪುಟ್ಟದ್ದಕ್ಕೆ ಕೋರ್ಟು – ಕಚೇರಿ ಎಂದರೆ ಬದುಕು ದುಸ್ತರವೆ. ಯಾವುದೇ ಸಮಸ್ಯೆ ಇರಲಿ, ಜಗಳ ಇರಲಿ ದಾಂತಿ ಮಾಸ್ಟರಲ್ಲಿಗೆ ಹೋದರೆ ಸಮರ್ಪಕ ಪರಿಹಾರ ಸಿಗುತ್ತದೆ ಎಂಬಷ್ಟರಮಟ್ಟಿಗೆ ಜನಗಳ ವಿಶ್ವಾಸಕ್ಕೆ ಪಾತ್ರರಾಗಿದ್ದರು ದಾಂತಿಯವರು. ಅವರಲ್ಲಿ ಆ ವಿಶೇಷ ಶಕ್ತಿ ಇದ್ದದ್ದೂ ಕೂಡ ಹೌದು. ಅದೇನೂ ಪವಾಡವಾಗಿರಲಿಲ್ಲ. ಸಮಸ್ಯೆಗಳನ್ನು ಸರಿಯಾಗಿ ತಿಳಿದುಕೊಳ್ಳುತ್ತಿದ್ದರು. ಯಾರದ್ದೂ ನೂರಕ್ಕೆ ನೂರು ಸರಿ ಇರುವುದಿಲ್ಲ. ಇದು ಅವರಿಗೆ ಗೊತ್ತು. ಎರಡು ಕೈ ಸೇರದೆ ಚಪ್ಪಾಳೆಯಾಗದು ತಾನೆ? ಆದರೆ ತಮ್ಮದೇ ಸರಿ ಎಂದು ಹಟ ಸಾದಿಸುವಲ್ಲೇ ಹಿತ ಉರುಳಿ ಬೀಳುತ್ತದೆ. ಹೆಡೆಯೆತ್ತಿ ಬುಸುಗುಡುವ ಹಾವು ತಲೆದೂಗಬೇಕಾದರೆ ಪುಂಗಿಯ ನಾದ ಬೇಕಲ್ಲವೆ? ಆ ನಾದದ ಶಕ್ತಿ ದಾಂತಿಯವರಲ್ಲಿತ್ತು. ಎರಡೂ ಕಡೆಗಳಿಂದ ಅಹವಾಲುಗಳನ್ನು ಸರಿಯಾಗಿ ಗ್ರಹಿಸಿ ಇಬ್ಬರೂ ಒಪ್ಪಿಕೊಳ್ಳುವ ಒಂದು ನಿರ್ಣಯಕ್ಕೆ ಬರುತ್ತಿದ್ದರು. ಅದಕ್ಕೆ ಅವರನ್ನು ಒಡಂಬಡಿಸುತ್ತಿದ್ದರು. ಅವರಾಡುವ ಒಳ್ಳೆಯ ಮಾತುಗಳು ತಿಳುವಳಿಕೆಯಾಗಿ ಪರಿಣಾಮ ಬೀರುತ್ತಿತ್ತು. ಆ ಮಾತುಗಳಲ್ಲಿ ಪ್ರೀತಿ ಇರುತ್ತಿತ್ತು. ಹಾಗಾಗಿ ವ್ಯಾಜ್ಯ ತಂದವರಿಗೆ ಆ ಪ್ರೀತಿಯನ್ನು ಮೀರಿ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಒಬ್ಬರಿಂದ ಇನ್ನೊಬ್ಬರಿಗೆ ಅನ್ಯಾಯವಾಗಬಾರದು; ಒಬ್ಬರ ಹಿತಕ್ಕಾಗಿ ಇನ್ನೊಬ್ಬರು ಸ್ವಲ್ಪವನ್ನಾದರೂ ತ್ಯಾಗ ಮಾಡಬೇಕು. ಯಾಕೆಂದರೆ ಎಲ್ಲರೂ ನಮ್ಮವರೆ-ಈ ಅರಿವಿನ ಹಿನ್ನೆಲೆಯಲ್ಲಿ ದಾಂತಿಯವರು ಆಡುವ ನುಡಿಗಳು ಬಂದವರ ಮನಸ್ಸಿನ ಆಳಕ್ಕೆ ಇಳಿಯುತ್ತಿತ್ತು. ಸಮಾಧಾನಚಿತ್ತರಾಗಿ ಮಾನವ ಸಂಬಂಧವನ್ನು ಉಳಿಸಿಕೊಳ್ಳುವ ಅರಿವಿನಿಂದ ಮರಳುತ್ತಿದ್ದರು. ಅನೇಕ ಜನಗಳ ಬದುಕನ್ನು ಸರಿಪಡಿಸಿದ ಶ್ರೀ ದಾಂತಿಯವರ ಈ ಕೆಲಸ ಸಾಮಾನ್ಯವೆಂದು ತೋರಿದರೂ ಅದು ಸಮಾಜಕ್ಕೆ ಅವರು ಸಲ್ಲಿಸಿದ ಕೊಡುಗೆಯೆ ಆಗಿದೆ. ಸಂಬಂಧ ಕುಸಿದು ಬಿದ್ದ ಕಡೆ ಮತ್ತೆ ಸೇತುವೆ ಕಟ್ಟಿ ಜನಜನಗಳ ಸಂಬಂಧವನ್ನು ಬೆಸೆಯುತ್ತಿದ್ದ ಈ ಕಾಯಕ ಶ್ರೀ ದಾಂತಿಯವರ ಮಾನವ ಪ್ರೇಮಕ್ಕೆ ಉಜ್ವಲ ನಿದರ್ಶನವೆಂದೇ ಹೇಳಬೇಕು.

ಅವರ ನ್ಯಾಯ ವಿಧಾನಕ್ರಮಕ್ಕೆ ಒಂದು ಘಟನೆಯನ್ನು ಇಲ್ಲಿ ಉಲ್ಲೇಖಿಸಬೇಕು. ನಾಲ್ಕಾರು ಎಕರೆ ಆಸ್ತಿಯುಳ್ಳ ಒಂದು ಕುಟುಂಬ. ಮುಂಬೈ ಕಡೆಗೆ ಹೋಗಬೇಕಾದ ಸಂದರ್ಭ, ಇಲ್ಲಿ ಆಸ್ತಿ ನೋಡಿಕೊಳ್ಳಲು ಒಂದು ಜನಬೇಕು. ಒಬ್ಬ ಬಡ ಹೆಂಗಸನ್ನು ಇಟ್ಟರು. ಸಣ್ಣ ಬಿಡಾರವನ್ನು ಮಾಡಿಕೊಂಡು ಮನೆ-ಜಮೀನು ನೋಡಿಕೊಳ್ಳುತ್ತಿದ್ದಳು. ಕೆಲವು ವರ್ಷ ಕಳೆದ ಮೇಲೆ ಅವರು ಮರಳಿ ಬಂದರು. ಈಗ ಬಿಡಾರವನ್ನು ತೆಗೆ ಎಂದರು. ಆ ಹೆಂಗಸಿಗೆ ಬೇರೆ ಆಸರೆಯಿಲ್ಲ. ಈಗ ಬೀದಿ ಪಾಲಾಗುವ ಸ್ಥಿತಿ. ಆವಾಗ ಆಸ್ತಿ-ಮನೆ ಕಾಯಲು ಅವಳು ಬೇಕು. ಈಗ ಅವಳ ಹಂಗಿಲ್ಲ. ಇದು ಪ್ರಪಂಚ. ಕೊನೆಗೆ ಈ ವ್ಯಾಜ್ಯ ದಾಂತಿಯವರಲ್ಲಿಗೆ ಬಂದಿತು. ಹೌದು, ಈಗ ಆ ಹೆಂಗಸಿನ ಅಗತ್ಯವಿಲ್ಲ. ವರ್ಷಗಟ್ಟಲೆ ಮನೆ-ಆಸ್ತಿ ಕಾದವಳು ಅವಳೆ. ಇದೊಂದು ಉಪಕಾರವಲ್ಲವೆ? ಅವಳು ಬೀದಿ ಪಾಲಾಗುತ್ತಾಳೆ ಅಂತಾದರೆ ಅವಳು ಮಾಡಿದ ಆ ಉಪಕಾರಕ್ಕೆ ಅಷ್ಟು ಆಸ್ತಿಯಲ್ಲಿ ಒಂದು ತುಂಡು ನೆಲಕೊಟ್ಟರೆ ಈ ಉಪಕಾರಕ್ಕೆ ಒಂದು ಕೃತಜ್ಞತೆಯಲ್ಲವೆ? ಅವಳಿಗೊಂದು ಆಧಾರವಲ್ಲವೆ? ಇದರಿಂದ ಕಳೆದು ಹೋಗುವುದೇನು? ಕಡಿಮೆಯಾಗುವುದೇನು? – ದಾಂತಿಯವರ ಈ ಮಾತು ಅವರಿಗೂ ಹೌದು ಎನಿಸಿತು. ಬೀದಿ ಪಾಲಾಗುವ ಅವಳ ಜೀವನಕ್ಕೆ ಒಂದು ನೆಲೆಯಾಯಿತು. ಹೀಗೆ ಬದುಕು ಉಳಿಸುವ ಕೆಲಸ ಅವರದ್ದು.

ಇದು ಉಡುಪಿಯಲ್ಲೇ ನಡೆದ ಘಟನೆ : ಶಾಲೆಯಲ್ಲಿ ಹೊರಗಿನವರು ಕೆಲವರು ಬಂದು ರಾಖಿ ಕಟ್ಟಿದ್ದಕ್ಕೆ ಟೀಚರು ತರಾಟೆ ತೆಗೆದುಕೊಂಡರಂತೆ. ಅದು ವಿವಾದವಾಗಿ ಮನೆ ತಲುಪಿ ಊರು ಹರಡಿತು. ಕೋಮು ಉದ್ರೇಕವಾಗಿ ಬೀದಿಗೆ ಬಂತು. ಚರ್ಚ್‌ಗೇಟ್ ಬಂದ್ ಮಾಡುವಲ್ಲಿಯವರೆಗೆ ಬಂದು ನಿಂತಿತು. ಬಿಗಿ ವಾತಾವರಣ ನಿರ್ಮಾಣವಾಗಿ ಏನಾಗುತ್ತದೆ ಎಂಬ ಬೀತಿ ಜನರನ್ನು ಆವರಿಸಿತು. ಅಸೌಖ್ಯದ ನಿಮಿತ್ತ ವೈದ್ಯರಲ್ಲಿಗೆ ಹೋಗಿದ್ದ ಫ್ರಾನ್ಸಿಸ್ ದಾಂತಿಯವರಿಗೆ ಸ್ನೇಹಿತರೊಬ್ಬರು ‘ಹೀಗಾಗಿದೆ. ನೀವು ಅಲ್ಲಿಗೆ ಹೋಗದೆ ಇದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆೆ’ ಅಂದರಂತೆ. ಬಂದು ನೋಡಿದರೆ ಹೌದು, ಚರ್ಚ್‌ಗೇಟ್ ಬಂದ್ ಮಾಡಿ ಜಬರ್ದಸ್ತಿನಿಂದ ನಿಂತಿದ್ದಾರೆ. ದಾಂತಿಯವರಿಗೆ ಅವರೇನೂ ಅಪರಿಚಿತರಲ್ಲ. ಹೆಸರು ಕರೆದು ಹತ್ತಿರ ಬಂದು ಆತ್ಮೀಯತೆಯಿಂದ ಹೆಗಲ ಮೇಲೆ ಕೈಹಾಕಿ ‘ಅದೇನಿದ್ದರೂ ಮಾತುಕತೆಯ ಮೂಲಕ ಸುಧಾರಿಸುವ, ಇದೆಲ್ಲ ಯಾಕೆ’ ಎಂದು ಮೃದುವಾಗಿ ಹೇಳಿದರಂತೆ. ಪ್ರೀತಿಗೆ ಕರಗದ ಮನಸ್ಸು ಆದಾವುದು? ರೋಷಾವೇಶದ ಮುಖದಲ್ಲಿ ಸಮಾಧಾನ ಭಾವ ಮೂಡಿತು. ಬಂದ್ ಮಾಡಿದ ಗೇಟ್ ತೆರೆಯಿತು. ಪ್ರಕ್ಷುಬ್ಧ ವಾತಾವರಣ ತಿಳಿಯಾಯಿತು. ಘನತೆ, ಗೌರವ, ಒಣ ಪ್ರತಿಷ್ಠೆಗಿಂತ ಪ್ರೀತಿ, ಹೃದಯವಂತಿಕೆಯೇ  ಹೆಚ್ಚು ಎಂಬುದು ಮತ್ತೊಮ್ಮೆ ರುಜುವಾತಾಯಿತು. ಮುರಿದು ಬೀಳಬಹುದಾದ ಎಷ್ಟೋ ದಾಂಪತ್ಯ ಜೀವನವನ್ನು ಸರಿಪಡಿಸಿದ್ದಾರೆ; ಅಣ್ಣ – ತಮ್ಮಂದಿರನ್ನು ಒಂದುಗೂಡಿಸಿದ್ದಾರೆ. ಕುಟುಂಬ – ಕುಟುಂಬಗಳ ಕಲಹವನ್ನು ನಿವಾರಿಸಿದ್ದಾರೆ. ಜಾತಿ- ಜಾತಿಗಳ ವೈಷಮ್ಯಗಳನ್ನು ದೂರ ಮಾಡಿದ್ದಾರೆ. ಎಂಥ ವ್ಯಾಜ್ಯವೇ ಇರಲಿ ದಾಂತಿಯವರ ಮುಂದೆ ಬಂದಿತು ಅಂತಾದರೆ ಅದು ಅಲ್ಲಿಗೆ ಕೊನೆಗೊಂಡಿತು ಎಂದೇ ಲೆಕ್ಕ.

ಸಾಮಾನ್ಯವಾಗಿ ಬ್ಯಾಂಕ್ ಎಂದರೆ ಅದು ದೊಡ್ಡವರ ಖಜಾನೆ ಎಂಬ ಭಾವನೆ ರೂಡಿಯಾಗಿತ್ತು. ಟಿ.ಎ. ಪೈಗಳಿಗೆ ತಮ್ಮ ಸಿಂಡಿಕೇಟ್ ಬ್ಯಾಂಕ್, ಜನಪರವಾಗಿರಬೇಕು ಎಂಬ ಕನಸು ಇತ್ತು. ಆ ಕನಸಿಗೆ ರೂಪ ಕೊಡುವುದರಲ್ಲಿ ಅನೇಕ ಮಹನೀಯರು ದುಡಿದಿದ್ದಾರೆ. ಅವರ ಪೈಕಿ ಅಗ್ರಗಣ್ಯರು ಶ್ರೀ ದಾಂತಿಯವರು. ತಾವು ಶಾಖಾ ಪ್ರಬಂಧಕರಾದಾಗ ಬಡವರೂ ಬ್ಯಾಂಕಿಗೆ ಬರುವಂತೆ, ಬ್ಯಾಂಕಿನ ಸೌಲಭ್ಯ ಪಡೆವಂತೆ ಅವಕಾಶ ಕಲ್ಪಿಸಿದವರು ಅವರು; ಅದರ ಫಲಾನುಭವ ಕಂಡು ಸಂತಸಪಟ್ಟವರು.

ಒಮ್ಮೆ ಉಡುಪಿಯ ಪೇಟೆಯ ದಾರಿಯಲ್ಲಿ ಹೋಗುತ್ತಿರುವಾಗ ತರಕಾರಿ ಮಾರುತ್ತಿರುವವರೊಬ್ಬರ ಕಡೆಗೆ ಗಮನ ಹೋಯಿತು. ಅವರು ಪರಿಚಿತ ವ್ಯಕ್ತಿಯೆ. ಯಾವಾಗಲೂ ಹಸನ್ಮುಖಿಗಳಾಗಿ ತರಕಾರಿ ಮಾರುವವರು. ಉಲ್ಲಾಸದಿಂದ ಇರುವವರು. ಆದರೆ ಇಂದು ಮುಖ ಬಾಡಿದೆ. ಏನು ಹೀಗೆ? ಬಂದು ವಿಚಾರಿಸಿದರು. ಮಗಳಿಗೆ ಮದುವೆ ನಿಶ್ಚಯವಾಗಿದೆ. ಹೇಗೆ ಹೊಂದಿಸಿದರೂ ಹಣ ಖರ್ಚಿಗೆ ಮುಟ್ಟುವುದಿಲ್ಲ. ಬೇರೆ ದಾರಿಯೂ ಕಾಣುತ್ತಿಲ್ಲ. ಕಾರ್ಯ ಸುಧಾರಿಸುವುದು ಹೇಗೆ – ಇದು ಚಿಂತೆ. ತಕ್ಷಣವೇ “ಏನೂ ಹೆದರಬೇಡಿ, ನಾಳೆ ಬ್ಯಾಂಕಿಗೆ ಬನ್ನಿ; ಹಣದ ವ್ಯವಸ್ಥೆ ನಾನು ಮಾಡುತ್ತೇನೆ. ನಿಯತ್ತಾಗಿ ಕಟ್ಟಿದರಾಯಿತು” ಎಂದು ಧೈರ್ಯ ಹೇಳಿದರು. ಅಂತೆಯೇ  ಬ್ಯಾಂಕಿನ ಮೂಲಕ ಸಹಕರಿಸಿದರು. ಬಡವನ ಮಗಳ ಮದುವೆ ಯಾವ ಕೊರತೆ ಇಲ್ಲದೆ ನೆರವೇರಿತು. ಹೀಗೆ ಉಪಕಾರಿಯಾದವರು ದಾಂತಿ ಯವರು. ಇದು ಅಂತಲ್ಲ ಇಂಥ ಎಷ್ಟೋ ಘಟನೆಗಳು ಜನರ ನೆನಪಿನಲ್ಲಿವೆ. ಅವರಿಂದ ಸಾಲ ಸಹಾಯ ಪಡೆದ ಯಾರೂ ಬ್ಯಾಂಕಿಗೆ ಮೋಸ ಮಾಡಿದ್ದಿಲ್ಲ. ಬಡವರು ಸಾಲ ಕಟ್ಟುವುದೇ ಇಲ್ಲ ಎಂದು ಮೊದಲೇ ತೀರ್ಮಾನ ಮಾಡಿ ಅವರನ್ನು ಬ್ಯಾಂಕ್ ಸೌಲಭ್ಯಗಳಿಂದ ದೂರ ಸರಿಸುವುದು ತಪ್ಪಲ್ಲವೆ? – ಇದು ದಾಂತಿಯವರ ಪ್ರಶ್ನೆಯಾಗಿತ್ತು. ಬಡವರು ಎಂದೂ ಪ್ರೀತಿಗೆ ದ್ರೋಹ ಬಗೆವವರಲ್ಲ ಎಂಬುದು ಅವರ ಮನದಾಳದ ವಿಶ್ವಾಸ. ಎಷ್ಟೋ ಜನರ ಪಾಲಿಗೆ ಅವರು ದೇವರಾಗಿದ್ದರು. ಆದರೆ ಅದನ್ನು ಒಪ್ಪಿಕೊಳ್ಳದ ಅವರು ಅಂಥ ಮಾತು ಉಪಕೃತರ ಬಾಯಿಂದ ಬಂದಾಗಲೆಲ್ಲ ಅವರು ತೋರಿಸುತ್ತಿದ್ದುದು ಟಿ.ಏ. ಪೈಗಳನ್ನು. ನಿಸ್ಪ ೃಹತೆ ಅವರ ಗುಣಧರ್ಮವಾಗಿತ್ತು.

ಕೆಥೋಲಿಕ್ ಸಭಾವನ್ನು ರೂಪಿಸುವುದರಲ್ಲಿ ಇವರ ಪಾತ್ರ ದೊಡ್ಡದು. ಕ್ರೈಸ್ತ ಸಮಾಜ ತಮ್ಮ ಬೇಕು-ಬೇಡಿಕೆ, ಹಕ್ಕು ಬಾಧ್ಯತೆಗಳು, ಹಿತಾಸಕ್ತಿಗಳು, ತಮ್ಮ ಸಮಸ್ಯೆ-ಕಷ್ಟ-ನೋವು, ತಮ್ಮ ಭಾವನೆ-ಅಬಿಪ್ರಾಯ ಇತ್ಯಾದಿಗಳನ್ನು ವ್ಯಕ್ತಪಡಿಸಲು, ಪರಿಹರಿಸಲು ಒಂದು ಸಂಘಟನೆ, ವೇದಿಕೆ ಬೇಕು ಎಂದು ಇದರ ಅಗತ್ಯವನ್ನು ಮನಗಂಡು ದಾಂತಿಯವರು ಕೆಥೋಲಿಕ್ ಸಭೆಯ ರಚನೆಗೆ ಒತ್ತುಕೊಟ್ಟರು. ಅದು ಅಸ್ತಿತ್ವಕ್ಕೆ ಬಂದ ಮೇಲೆ ಅದರ ಅಧ್ಯಕ್ಷರಾಗಿ ಕ್ರೈಸ್ತ ಜನತೆಯನ್ನು ಸಂಘಟಿಸುವ ಪ್ರಯತ್ನ ಮಾಡಿದರು. ಜನತೆಯ ಪರವಾಗಿ ಈ ಸಭೆ ಇರಬೇಕು ಮತ್ತು ಜನಹಿತಕ್ಕಾಗಿ ದುಡಿಯಬೇಕು, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕವಾಗಿ ಜನಗಳಿಗೆ ಬೆನ್ನೆಲುಬಾಗಬೇಕು – ಇಂಥ ಯೋಚನೆಗಳಿಂದ ಅದನ್ನು ಜನೋಪಯೋಗಿಗೊಳಿಸಲು ಸಾಕಷ್ಟು ಪರಿಶ್ರಮಿಸಿದ್ದಾರೆ.

ಅನುದಾನಿತ ಶಾಲಾ ಅಧ್ಯಾಪಕರ ಸಂಘವು 40 – 50ರ ದಶಕದಲ್ಲಿ ಪ್ರಥಮವಾಗಿ ಸಂಘಟಿತವಾದಾಗ ಅದರ ಕಾರ್ಯಕಾರಿ ಸಮಿತಿಯಲ್ಲಿ ಮುಖ್ಯ ಹುದ್ದೆಯಲ್ಲಿದ್ದು ಸಂಘವನ್ನು ಬಲಗೊಳಿಸಲು ಪರಿಶ್ರಮಿಸಿದರು. ‘ಭಾರತ ಸೇವಕ ಸಮಾಜ’ದ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವರು. ಮಂಗಳೂರು ಬಿಷಪರ ಕೌನ್ಸಿಲಿನ ಸದಸ್ಯರಾಗಿ, ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಉಡುಪಿ ರೋಟರಿ ಸಂಸ್ಥೆಯ ಖಜಾಂಜಿಯಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಕುಂತಳ ನಗರದ ಹೊಸ ಇಗರ್ಜಿಯ ನಿರ್ಮಾಣ ಕಾರ್ಯದಲ್ಲೂ, ಉಡುಪಿಯ ಶೋಕಮಾತಾ ಇಗರ್ಜಿಯ ನೂತನ ಕಟ್ಟಡ ಕಾರ್ಯದಲ್ಲೂ ಇವರದ್ದು ಪ್ರಧಾನ ನೇತೃತ್ವವೆ. ಉಡುಪಿ ಚರ್ಚಿನ ಆಡಳಿತಾದಿಕಾರಿ ಯಾಗಿಯೂ, ಅಲೆಮಾರಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾಗಿಯೂ ಪರಿಶ್ರಮಿಸಿದ್ದಾರೆ. ಸಮಾಜದ ಒಂದಲ್ಲ ಒಂದು ಸಂಘಟನೆಯಲ್ಲಿ ತೊಡಗಿಕೊಂಡು ನಿರಂತರ ಸಮಾಜ ಹಿತಾಕಾಂಕ್ಷಿಯಾಗಿ ಚಟುವಟಿಕೆಯಲ್ಲಿರುತ್ತಿದ್ದರು. ತಾನು ಸಮಾಜದಿಂದ ಬೆಳೆದಿದ್ದೇನೆ; ಸಮಾಜದ ಬೆಳವಣಿಗೆಯಲ್ಲಿ ತಾನೂ ಪಾಲುಗೊಳ್ಳಬೇಕು – ಈ ತುಡಿತವೇ ಅವರನ್ನು ಸಮಾಜಮುಖಿಯನ್ನಾಗಿ ರೂಪಿಸಿತ್ತು. ಸಮಾಜದೊಳಗೊಂದು ಬೆಳಕಾಗಿ ಅವರು ಬಾಳಿದರು.

ಸಾಹಿತ್ಯದ ಹೊಂಬೆಳಕು : ಪ್ರಗತಿಶೀಲ ಧೋರಣೆಯ ಕತೆಗಳು

ಕನ್ನಡಕ್ಕೆ ಕೊಂಕಣಿ ಭಾಷಿಗರ ಕೊಡುಗೆ ಅಪಾರ. ಎಂ.ಎನ್. ಕಾಮತ್, ಪಂಜೆ ಮಂಗೇಶರಾವ್, ಎಂ. ಗೋವಿಂದ ಪೈ, ಕುಡ್ಪಿ ವಾಸುದೇವ ಶೆಣೈ, ಉಗ್ರಾಣ ಮಂಗೇಶ್ ರಾವ್, ಗುಲ್ವಾಡಿ ವೆಂಕಟ ರಾವ್ – ಇವರ ಸಾಹಿತ್ಯ ಕೃಷಿ ಕನ್ನಡವನ್ನು ಶ್ರೀಮಂತಗೊಳಿಸಿದೆ. ಆ ಮಟ್ಟದಲ್ಲಿ ಕೊಂಕಣಿ ಕ್ರೈಸ್ತರು ಕನ್ನಡಕ್ಕೆ ಒದಗಿದ್ದು ಕಂಡು ಬರುವುದಿಲ್ಲ. ಬಹುಶಃ ಇಂಗ್ಲಿಷಿನ ಹಿಡಿತ ಇದಕ್ಕೆ ಕಾರಣವಾಗಿರಬಹುದು. ಕೆಲವು ಬರೆಹಗಾರರು ಕಾಣಿಸಿಕೊಂಡರೂ ಅದು ಸೃಜನೇತರ ಕ್ಷೇತ್ರಕ್ಕೆ ಸೀಮಿತವಾಗಿ ಮಾತ್ರ. ಕತೆ, ಕವನ, ನಾಟಕಾದಿ ಸೃಜನಾತ್ಮ ಕ್ಷೇತ್ರಗಳಲ್ಲಿ ನಮಗೆ ಮೊದಲಾಗಿ ಸಿಗುವ ಹೆಸರು – ಫ್ರಾನ್ಸಿಸ್ ದಾಂತಿಯವರದ್ದೆ. ಐವತ್ತು – ಅರುವತ್ತರ ದಶಕದ ಕನ್ನಡ ಸಾಹಿತ್ಯ ಚಳವಳಿಯಲ್ಲಿ ಅಂದಿನ ಸಮಾಜದ ಮನೋಭಾವಕ್ಕೆ ಸ್ಪಂದಿಸಿ ಅವರು ಸಾಹಿತ್ಯ ರಚನೆ ಮಾಡಿದ್ದು ಗಮನಾರ್ಹ ಸಂಗತಿ.

ದಾಂತಿಯವರು ಪ್ರಗತಿಶೀಲ ಚಳವಳಿಯ ಪ್ರಮುಖ ಕತೆಗಾರರಲ್ಲಿ ಒಬ್ಬರು. ಅವರ ಕತೆಗಳು ಮೂಡಿಬಂದದ್ದು 1940-60ರ ಮಧ್ಯೆ. ಅಂದರೆ ಯುವಕರಾಗಿದ್ದಾಗ, ಅಧ್ಯಾಪಕರಾಗಿದ್ದಾಗ. ಸಾಹಿತಿಗಳು ಅವರವರು ಅವರವರ ಜಾತಿಯ ಆವರಣದಲ್ಲಿ ಬರೆದರೆ ಅದು ಗುಣಾತ್ಮಕತೆ ಎಂಬ ಭಾವನೆ ಆಗಿನ್ನೂ ಬಲಿತಿರಲಿಲ್ಲ. ಸಾಮಾಜಿಕ ಸಮಸ್ಯೆ – ಬದುಕು ಅವರ ಮುಂದಿತ್ತು. ಜಾತಿ, ಮತ, ಧರ್ಮಗಳ ಸಿಕ್ಕುಗಳಿಗೆ ಸಿಕ್ಕಿ ಬೀಳದೆ ಮಾನವ ಜಗತ್ತಿನೊಳಗೆ ಬದುಕಿದ ದಾಂತಿಯವರು ಸಾಮಾಜಿಕವಾಗಿ ತಮ್ಮನ್ನು ತೆರೆದುಕೊಂಡದ್ದೆ ಹೆಚ್ಚು. ಆದುದರಿಂದ ಸಮಾಜದ ತಲ್ಲಣಗಳಿಗೆ ಅವರು ಹೆಚ್ಚು ಸ್ಪಂದಿಸಿದ್ದಾರೆ ಮತ್ತು ಅದಕ್ಕೆ ಕಥಾ ಮಾಧ್ಯಮವನ್ನೆ ಆಯ್ಕೆ ಮಾಡಿಕೊಂಡಿದ್ದಾರೆ. 1960 ನಂತರ ಅಂದರೆ ಬ್ಯಾಂಕ್ ಉದ್ಯೋಗಕ್ಕೆ ಬಂದ ಮೇಲೆ ಪತ್ರಿಕೆಗಳಲ್ಲಿ ಸತತವಾಗಿ ಲೇಖನಗಳನ್ನು ಬರೆಯುತ್ತಿದ್ದರೂ, ಕತೆ ರಚನೆ ಮಾಡಿದ್ದು ಹೆಚ್ಚಾಗಿ ಕಂಡುಬರುವುದಿಲ್ಲ. ಬಹುಶಃ ಸಾಮಾಜಿಕ ಚಟುವಟಿಕೆಯಲ್ಲಿ ಹೆಚ್ಚು ಹೆಚ್ಚು ತಮ್ಮನ್ನು ತೊಡಗಿಸಿಕೊಂಡುದರ ಪರಿಣಾಮ ಅಥವಾ ಬ್ಯಾಂಕಿನ ಬಿಡುವಿಲ್ಲದ ಕೆಲಸದ ಪರಿಣಾಮ ಇದಾಗಿರಬಹುದು. ಆದಾಗ್ಯೂ ಬ್ಯಾಂಕಿನ ಹಿರಿಯ ಅಧಿಕಾರಿಗಳ ಜೊತೆಗೆ ಉಡುಪಿಯ ಕಲಾಸಕ್ತರ ಜೊತೆಗೆ ಮತ್ತೊಮ್ಮೆ ತಾವೇ ಬರೆದು ನಿರ್ದೇಶಿಸಿದ ನಾಟಕ ‘ಸಿಪಾಯಿ ದಂಗೆ’ಯನ್ನು ಪ್ರದರ್ಶಿಸಿದ್ದು ಇವರ ಕಲಾಪ್ರೇಮಕ್ಕೆ ಸಾಕ್ಷಿ. ಪ್ರಕಾಶ, ಅಂತರಂಗ, ನವಯುಗ, ಪ್ರಪಂಚ, ಭವ್ಯವಾಣಿ ಮೊದಲಾದ ಅಂದಿನ ಪ್ರಚಲಿತ ಪತ್ರಿಕೆಗಳಲ್ಲಿ ಇವರ ಕತೆಗಳು ಪ್ರಕಟವಾಗುತ್ತಿದ್ದವು. ಸುಮಾರು ನಲ್ವತ್ತರಷ್ಟು ಕತೆಗಳನ್ನು ಬರೆದ ಬಗ್ಗೆ ಮಾಹಿತಿ ಸಿಗುತ್ತದೆ. ಆದರೆ ಅವೆಲ್ಲ ಚದುರಿ ಹೋಗಿವೆ. ಸಂಕಲನ ತರಲು ದಾಂತಿಯವರು ಮನಸ್ಸು ಮಾಡದಿದ್ದುದು ಕನ್ನಡ ಕಥಾ ಸಾಹಿತ್ಯಕ್ಕೆ ನಷ್ಟವೆ. ಸಿಗುವ ಕೆಲವೇ ಕತೆಗಳನ್ನು ಮುಂದಿಟ್ಟು ಕೊಂಡು ಒಟ್ಟು ಅವರ ಕತೆಗಳ ಬಗ್ಗೆ ಮಾತಾಡಬೇಕಾಗುತ್ತದೆ. ಅದು ನ್ಯಾಯವಲ್ಲದಿದ್ದರೂ ಅನಿವಾರ್ಯ.

ಬಲ್ಲಿದರ ಕ್ರೌರ್ಯ, ಬಡವರ ಬವಣೆಯ ನಡುವೆ ಹುಟ್ಟಿಕೊಂಡ ‘ರಾಯರ ಬಾವಿ’ (ಅಂತರಂಗ : 1945) ಕಥಾತಂತ್ರ, ಪಾತ್ರಶಿಲ್ಪ, ಉದ್ದೇಶ ಸಾಫಲ್ಯ ದೃಷ್ಟಿಯಿಂದ ಪರಿಣಾಮಕಾರಿ ಕತೆಯಾಗಿದೆ. ಹೊರನೋಟಕ್ಕೆ ಕತೆ ಸರಳ ಅಂತ ಅನಿಸಿದರೂ ಅದರೊಳಗಿನ ಹೊಯ್ದಟ ಕಥಾಬಂಧಕ್ಕೆ ಬಿಗಿತನ ತಂದಿದೆ. ಸಮಾಜದಲ್ಲಿ ಬಲಿಷ್ಠ ವರ್ಗ ತನ್ನ ಸ್ವಾರ್ಥಕ್ಕಾಗಿ ಬಡವರ ಬದುಕನ್ನು ಬಲಿ ಹಾಕುವ ಕರಾಳ ಚಿತ್ರ ಅಷ್ಟೇ ಸೌಮ್ಯವಾಗಿ ಮೂಡಿ ನಿಂತಿದೆ. ಆ ಕಾಲಘಟ್ಟದಲ್ಲಿ ಇಂಥ ಕತೆ ರಚನೆಗೊಂಡಿರುವುದು, ಕತೆಗಾರ ಅಂದಿನ ಸಾಮಾಜಿಕ ದೌರ್ಜನ್ಯಕ್ಕೆ ಮುಖಾಮುಖಿಯಾದುದು ಅದು ಜೀವಪರ ಕಾಳಜಿಗೆ ಧ್ವನಿಯೂ ಹೌದು.

ರಿಕ್ವಿಜಿಶನ್ ಅಧಿಕಾರಿಯ ತನಿಖೆಯಿಂದ ತಾನು ಪಾರಾಗುವುದಕ್ಕಾಗಿ ತನ್ನ ಮನೆಯ ಅಕ್ರಮ ದಾಸ್ತಾನು ಅಕ್ಕಿಮುಡಿಗಳನ್ನು ತನ್ನ ಮನೆಯಲ್ಲಿ ಕಸ-ಮುಸುರೆ ಮಾಡಿ ಬದುಕುತ್ತಿದ್ದ ವಿಧವೆ ಗಿರಿಜೆಯನ್ನು ಪುಸಲಾಯಿಸಿ ಅವಳ ಗುಡಿಸಲಲ್ಲಿ ಬಚ್ಚಿಟ್ಟ ಧನಿರಾಯ. ತನಿಖಾದಿಕಾರಿಯ ಕಣ್ಣು ಗುಡಿಸಲ ಕಡೆಗೂ ಬಿದ್ದು ಅಕ್ರಮ ದಾಸ್ತಾನಿಗಾಗಿ ಗಿರಿಜೆಗೆ ದಂಡ ಬೀಳುತ್ತದೆ. ಇದ್ದ ರೇಶನ್ ಕಾರ್ಡ್‌ನ್ನು ರದ್ದು ಪಡಿಸುತ್ತಾರೆ. ಪಾರಾದವ ಧನಿರಾಯ; ಸಿಕ್ಕಿ ಬಿದ್ದವಳು ಗಿರಿಜೆ. ದಂಡ ಕಟ್ಟಬೇಕು ಇಲ್ಲಾ ಜೈಲು ಶಿಕ್ಷೆ ಅನುಭವಿಸಬೇಕು. ಈ ಪ್ರಸ್ತಾಪ ಬಂದಾಗ ನೀನೇನೂ ಹೆದರಬೇಡ ಎಂದ ರಾಯ ತನಗೆ ದೇಹಸುಖ ಈಗ ಕೊಟ್ಟರೆ ದಂಡದ ಹಣ ಕಟ್ಟುತ್ತೇನೆ ಎಂಬುದಾಗಿ ಅವಳ ಚಾರಿತ್ರ ್ಯಕ್ಕೆ ಕೈಹಾಕುತ್ತಾನೆ. ಶೀಲವನ್ನು ಕಳೆದುಕೊಂಡು ಬಾಳಲು ಒಪ್ಪದ ಗಿರಿಜೆ ಮತ್ತು ಅವಳ ಮಗನಿಗೆ ಅದೇ ರಾಯರ ಮನೆಯ ಬಾವಿ ಗತಿಯಾಗುತ್ತದೆ. ಧನಿಕ ವರ್ಗದ ಒಣ ಆಡಂಬರ, ಧೂರ್ತತನ, ವಂಚಕತ್ವವನ್ನು ಕತೆ ತೆರೆದಿಟ್ಟಿದೆ. ಆದರೆ ಇದಷ್ಟೇ ಕತೆಯ ಅಂತರಾಳವಲ್ಲ. ಕತೆಯ ತುಂಬ ಗಿರಿಜೆ ತುಂಬಿಕೊಳ್ಳು ತ್ತಾಳೆ. ಅವಳು ಬಡ ವಿಧವೆ ಹೌದು. ಬಡತನವಾಗಲಿ, ನಿಸ್ಸಹಾಯಕತೆ ಯಾಗಲಿ ಅವಳ ಪ್ರಜ್ಞೆಯನ್ನು ಸಾಯಿಸುವುದಿಲ್ಲ. ಅವಳು ಅಂದುಕೊಳ್ಳುತ್ತಾಳೆ “ಅಮ್ಮನವರು ಬಿಸಿಲನ್ನು ಕಾಣಬಾರದು, ತಾನು ನೆರಳನ್ನು ನೋಡಬಾರದು. ಇದು ಯಾವ ನ್ಯಾಯ?” ಈ ಪಾತ್ರದ ಮೂಲಕ ಕತೆಗಾರರು ಧನಿಕ ಪ್ರತಿಷ್ಠೆಯ ವ್ಯವಸ್ಥೆಯನ್ನು ಪ್ರಶ್ನಿಸುತ್ತಾರೆ. “ಛೆ ಇದು ಬರಿಯ ಭ್ರಮೆ. ಹೀಗೆ ಯೋಚಿಸುತ್ತ ಕುಳಿತರೆ ನಾನೇನಾದರೂ ಅವರಂತಾಗ ಬಹುದೇ” ಎಂದು ಅವಳೇ ಅವಳಷ್ಟಕ್ಕೆ ಸಮಜಾಯಿಸಿ ಕೊಳ್ಳುವುದೂ ಇತ್ತು ಎಂಬಲ್ಲೂ ವ್ಯಕ್ತವಾಗುವುದು ಬಡವರನ್ನು ವಂಚಿಸುವ ತಾರತಮ್ಯ ವ್ಯವಸ್ಥೆಯ ಬಗೆಗಿನ ವಿಷಾದವೆ. ಧನಿಕನಿಗೆ ಸುಖ ಮುಖ್ಯವಾದರೆ ಬಡವರಿಗೆ ಶೀಲ ಮುಖ್ಯ. ಸುಖಕ್ಕಾಗಿ ಎಲ್ಲ ಬಿಡಲು ಅವರು ಸಿದ್ಧ; ಏನೂ ಇಲ್ಲದಿದ್ದರೂ ಶೀಲ-ಚಾರಿತ್ರ ್ಯಕ್ಕೆ ಇವರು ಬದ್ಧ. ಧನಿಕನನ್ನು ಎದುರಿಸಿದ ಬಡವರಿಗೆ ಕೊನೆಗೆ ಕಾದಿರುವುದು ಏನು? ಕತೆ ನಯವಾಗಿಯೇ  ಧ್ವನಿಸುತ್ತದೆ.

ಬದುಕು ಮತ್ತು ಶೀಲ ಈ ಕತೆಯಲ್ಲಿ ಮುಖಾಮುಖಿಯಾಗುತ್ತವೆ. ಗಿರಿಜೆ ಧನಿರಾಯನಿಗೆ ಮೈಯೊಡ್ಡಿದ್ದರೆ ತಾಯಿ-ಮಗ ಇಬ್ಬರೂ ನೆಮ್ಮದಿಯಿಂದಿರಬಹುದಿತ್ತು. ಸತ್ತರೂ ಸರಿ ಶೀಲ ಕಳೆದುಕೊಳ್ಳಲಾರೆ – ಎಂಬ ದಿಟ್ಟತನ ಹೆಣ್ಣು ಶೀಲಕ್ಕೆ ಕೊಟ್ಟ ಮಹತ್ತ್ವವೇ ಆಗಿದೆ. ಬದುಕಿಗಿಂತ ಶೀಲವೇ ಶ್ರೇಷ್ಠ ಎಂಬುದು ಕೂಡ ಕತೆಯ ಭಾವವೇ ಆಗಿದೆ. ಅಂದರೆ ಆ ಕಾಲದ ಮೌಲ್ಯವನ್ನು ಕತೆ ಸಮ್ಮತಿಸಿದಂತಿದೆ. ಶೀಲ, ಚಾರಿತ್ರ್ಯ, ಮೌಲ್ಯಗಳಿಗೆ ಸಾಮಾನ್ಯ ಜನಗಳೇ ಹೆಚ್ಚು ಜೀವವಾಗಿರುತ್ತಾರೆ ಎಂಬ ಅಂಶವನ್ನೂ ಕತೆ ಹೊರಹೊಮ್ಮಿಸಿದೆ.

“ಧನಿಕರೆನಿಸಿಕೊಂಡವರು ಮಳೆ ಬಂದತ್ತ ಕೊಡೆ ಹಿಡಿವವರೆಂದು ಅವಳು ತಿಳಿದಿರಲಿಲ್ಲ. ರಾಯರ ಮಾತಿಗೆ ಸಮ್ಮತಿಸಿ ಬಾಳುವ ಆ ಹಾಳು ಬಾಳಿನ ಗೋಳಿಗಿಂತಲೂ ಮರಣದ ಮೌನವೇ ಲೇಸೆಂದೆನಿಸತವಳಿಗೆ…. ಈಗ ಉಳಿದ ಗತಿಂಯೆಂದರೆ ರಾಯರ ಬಾವಿ ಮಾತ್ರ” ಎನ್ನುತ್ತ ಕತೆ ಸಮಾಪ್ತವಾಗುತ್ತದೆ. ಧನಿಕರ ಮಾತನ್ನು ಪೂರ್ಣ ನಂಬಿ ಕುಣಿಕೆೊಳಗೆ ಬೀಳುವ ಅಮಾಯಕರಿಗೆ ಒದ್ದಾಡುವಾಗಲೇ ಸತ್ಯದ ದರ್ಶನವಾಗುವುದು.

ಬಡವಳಿಗೆ ಉದ್ಧಾರವಾಗಬೇಕೆಂಬ ಕನಸು ಎಷ್ಟು ಉತ್ಕಟವಾಗಿರುತ್ತದೆ! ಧನಿರಾಯ ತನ್ನ ಜೋಪಡಿಯೊಳಗೆ ಅಕ್ಕಿ ಮುಡಿಗಳನ್ನು ತುಂಬಿಸಿಟ್ಟು ತೆರಳಿದಾಗ ಅದನ್ನು ಕಂಡ ಗಿರಿಜೆಯು ಆನಂದದಿಂದ ಹಿಗ್ಗಿ ತನ್ನ ಜೀವಮಾನದಲ್ಲಿ ಇಷ್ಟೊಂದು ಮುಡಿಗಳನ್ನು ಕೂಡಿ ಹಾಕಬಹುದೇ, ಎಂದಾಲೋಚಿಸತೊಡಗಿದಳು. ಕರಿಯನನ್ನೆಬ್ಬಿಸಿ “ನೋಡು, ಮಗು ನಮ್ಮ ಮನೆಯಲ್ಲಿ ಇಂದು ಎಷ್ಟು ಮುಡಿಗಳಿವೆ ನೋಡು. ನೀನು ದೊಡ್ಡವನಾದ ಮೇಲೆ ಹೀಗೆಯೇ  ಮುಡಿಗಳನ್ನು ಕೂಡಿ ಹಾಕುವೆಯಾ?” ಎಂದು ಕೇಳುತ್ತಾಳೆ. ಕರಿಯನು ನಿದ್ದೆಗಣ್ಣಲ್ಲಿ ‘ಹೂಂ’ ಗುಟ್ಟಿದನು. “ಗಿರಿಜೆಗೆ ಅಂಗೈಯಲ್ಲಿ ಅಮೃತವಿದ್ದಂತೆ ತೋರಿತು ಕರಿಯನ ಉತ್ತರ ಕೇಳಿ” – ಇದು ನಿರೂಪಣೆ. ಕರಿಯ ಹೂಂಗುಟ್ಟಿದ್ದು ನಿದ್ದೆಗಣ್ಣಲ್ಲಿ. ತಾಯಿ ಏನು ಹೇಳಿದಳು, ಯಾಕೆ ಹೇಳಿದಳು – ಈ ಅರಿವು ಅವನಿಗಿಲ್ಲ. ತಾನು ಹೂಂಗುಟ್ಟಿದ್ದು ಯಾಕೆ ಎಂಬುದೂ ಗೊತ್ತಿಲ್ಲ. ಇಂಥ ಶೋಷಣಾಬದ್ಧ ಸಮಾಜದಲ್ಲಿ ಬಡವ ಬಲ್ಲಿದನಾಗುವುದುಂಟೆ? ತಾನು ಬಲ್ಲಿದನಾಗುವಷ್ಟು ಎತ್ತರಕ್ಕೆ ಬೆಳೆಯಬಲ್ಲನೆ ಬಡವ – ಇದು ಕತೆಯೊಳಗಿನ ಮರ್ಮರ.

ದಾಂತಿಯವರ ಇನ್ನೊಂದು ಗಮನಾರ್ಹ ಕತೆ ‘ಕನಸು’ (ಅಂತರಂಗ : 1945) ಸ್ವಾತಂತ್ರ್ಯ ಚಳವಳಿಯ ಆವರಣ ಈ ಕತೆಗಿದೆ. ಇಲ್ಲೂ ಧನಿಕರ ದೇಶಭಕ್ತಿಯ ಗೋಸುಂಬೆತನ ಬಯಲಾಗುತ್ತದೆ. ಅಮಾಯಕರನ್ನು ಚಳುವಳಿಗೆ, ಹೋರಾಟಕ್ಕೆ ದೂಡಿ, ಕಷ್ಟ – ನಷ್ಟ, ಪ್ರಾಣಾಪಾಯಕ್ಕೆ ಸಿಕ್ಕಿಸಿ, ಅಪರಾದಿಗಳಾಗಿ ಅವರು ಶಿಕ್ಷೆ ಅನುಭವಿಸುವಾಗ ಇವರು ಸುರಕ್ಷಿತವಾಗಿ, ಸುಖವಾಗಿ ಇದ್ದು ಜನಗಳ ಎದುರಿಗೆ ತಾವೇ ದೊಡ್ಡ ಹೋರಾಟಗಾರರು ಎಂದು ‘ಫೋಸು’ ಕೊಡುವ, ಪ್ರಚಾರ ಗಿಟ್ಟಿಸುವ ಧನಿಕರ ಮುಖವಾಡವನ್ನು ಮೆಲ್ಲಗೆ ಸರಿಸುತ್ತದೆ.

ಇಲ್ಲಿ ಫ್ರಾನ್ಸಿಸ್ ಕತೆಯ ಮುಖ್ಯ ಪಾತ್ರ. ಸತ್ಯಾಗ್ರಹ ಚಳವಳಿಯಲ್ಲಿ ದುಡಿದು ಅಪರಾಧಕ್ಕೆ ಜೈಲು ಸೇರಿ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿ ಬಂದವ. ಚಳುವಳಿಗೆ ಅವನನ್ನು ಉತ್ತೇಜಿಸಿದ ವಿ.ಪಿ. ರಾಯನು ಈಗ ಜೈಲಿನಿಂದ ಬಂದ ಮೇಲೆ “ಯಾರು ನೀನು, ಯಾಕೆ ಬಂದೆ” ಎಂದು ಹುಬ್ಬೇರಿಸುವುದು ಸರಕಾರದ ಎದುರಿಗೆ ತಾನು ಸರಕಾರದ ವಿರೋದಿಯಲ್ಲ ಎಂದು ತೋರಿಸಿಕೊಳ್ಳುವ ಹುನ್ನಾರವೇ ಆಗಿದೆ. “ನಿಮ್ಮಂತಹ ಗೋಮುಖ -ವ್ಯಾಘ್ರ ರಿಂದಲೇ ಭಾರತಕ್ಕೆ ಈ ದುರ್ಗತಿಂಯೆಂದು ತಿಳಿಯಿರಿ” ಎಂದು ನೇರ ನುಡಿದರೆ “ರಾಸ್ಕಲ್! ಹೊರಡಿಲ್ಲಿಂದ. ಇಲ್ಲದಿದ್ದರೆ ದೂಡಿಸುತ್ತೇನೆ ಬೀದಿಗೆ” – ಎಂಬ ಉತ್ತರ. ಈ ಮಾತು ಕೇಳಿ ಕೊನೆಗೆ ಫ್ರಾನ್ಸಿಸ್ “ಭಾರತಾಂಬೆ ಇದು ನಿನ್ನ ದೌರ್ಭಾಗ್ಯ” ಎಂದು ನಿಟ್ಟುಸಿರು ಬಿಟ್ಟುದು ದೇಶಪ್ರೇಮಿಗೆ ಆಗುವ ಹತಾಶತೆಯನ್ನು ನಿರೂಪಿಸುತ್ತದೆ. ಡೋಂಗಿ ದೇಶಪ್ರೇಮಿಗಳಿಂದಲೇ ದೇಶಕ್ಕೆ ಗಂಡಾಂತರ ಎಂಬ ಎಚ್ಚರವನ್ನು ಕೊಡುತ್ತದೆ. ನಿಜ ದೇಶ ಪ್ರೇಮಕ್ಕೂ ಕತೆ ಕನ್ನಡಿ ಹಿಡಿಯುತ್ತದೆ. ಇದು ಒಂದು ಆಘಾತವಾದರೆ ಮರುಕ್ಷಣ ಇನ್ನೊಂದು ಆಘಾತವೂ ಎದುರಾಗುತ್ತದೆ. “ಪವಿತ್ರ ಪ್ರೇಮ, ನಿಷ್ಕಾಮ ಪ್ರೇಮ, ನಿನ್ನ ಹೊರತು ಅನ್ಯ ಪುರುಷರು ನನಗೆ ಭ್ರಾತೃ ಸಮಾನರು” ಎಂದೆಲ್ಲ ಹೇಳಿ ಬಾಳಲ್ಲಿ ಆಸೆ ತುಂಬಿದ ಅದೇ ಲಿಲ್ಲಿ ಈಗ ಲಕ್ಷಾದೀಶ ಡಿ.ಜೆ. ಜೋಸೆಫರ ಪತ್ನಿಯಾಗಿ ತಿವಿಯುತ್ತಿದ್ದಾಳೆ. ಈಗಿನ ಅವಳ ಲೆಕ್ಕಾಚಾರ ಬೇರೆ. “ಅಂದಿನ ಫ್ರಾನ್ಸಿಸ್ಸೆ? ಇಂದಿನ ನೀನು ಎಲ್ಲಿ” ಎಂದು ಕುಟುಕುತ್ತಾಳೆ. “ಅಂದಿನ ಆ ಫ್ರಾನ್ಸಿಸ್ ಕ್ಲಾಸಿನಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾಗುತ್ತಿದ್ದ ವಿದ್ಯಾರ್ಥಿ. ಇಂದಿನ ಫ್ರಾನ್ಸಿಸ್ಸನು….. ಈಗ ನಿನ್ನ ಮುಂದೆ ಕುಳಿತಿರುವವಳು ವಿದ್ಯಾರ್ಥಿನಿ, ಅವಿವಾಹಿತೆ ಲಿಲ್ಲಿಯಲ್ಲ ಲಕ್ಷಾದೀಶ ಡಿ.ಜೆ. ಜೋಸೆಫರ ಪತ್ನಿ ಎಂದು ತಿಳಿದು ಮರ್ಯಾದೆಯಿಂದ ಮಾತನಾಡು” ಎಂದು ಹಂಗಿಸುತ್ತಾಳೆ. “ಪುಸಲಾಯಿಸಿ ನನ್ನ ಜೀವನ ಪಥದಲ್ಲಿ ಕಲ್ಲುಮುಳ್ಳುಗಳನ್ನೇಕೆ ಒಡ್ಡಿದೆ?” ಎಂದು ಪ್ರಶ್ನಿಸಿದರೆ “ಅಂದು ನಾನೆಣಿಸಿದ್ದೆ – ಫ್ರಾನ್ಸಿಸ್ಸನೆಂದರೆ ಮುಂದೆ ಶಿಕ್ಷಣವನ್ನು ಸಂಪೂರ್ಣಗೊಳಿಸಿ, ‘ಸರ್ಟಿಪಿಕೇಟ್’ ಪಡೆದು ಉದ್ಯೋಗವನ್ನು ಸಂಪಾದಿಸಿಕೊಂಡು ತಂದೆಯ ಆಸ್ತಿಯನನ್ನುಭವಿಸಿಕೊಂಡು ಶ್ರೀಮಂತಿಕೆಯಿಂದ ಮೆರೆಯಬಹುದಾದ ವ್ಯಕ್ತಿ ಂಯೆಂದು” – ಇದು  ಲಿಲ್ಲಿಯ ಪ್ರೀತಿಯ ಉದ್ದೇಶ. ಫ್ರಾನ್ಸಿಸ್ ಪ್ರೀತಿಯನ್ನು ಆದರ್ಶವಾಗಿ ಕಂಡ. ಆದರೆ ಲಿಲ್ಲಿ ವ್ಯಾವಹಾರಿಕವಾಗಿ ಕಂಡಳು. ಬಣ್ಣದ ಮಾತಿನ ಹಿಂದೆ ಇದ್ದುದು ಕೇವಲ ಸ್ವಾರ್ಥ. ಅದನ್ನು ಪುಷ್ಟಿಗೊಳಿಸುತ್ತ ಮತ್ತೆ ಅವಳು ಹೇಳುತ್ತಾಳೆ – “ನಿನ್ನಂತಹ ಪುರುಷನೊಬ್ಬನ ಕೈಹಿಡಿಯಲು ನನ್ನಂತಹ ನವನಾಗರಿಕ ಸ್ತ್ರೀಯೋರ್ವಳು ಮುಂದೆ ಬರಬಹುದೆಂಬುದನ್ನು ಮರೆತು ಬಿಡು” – ಅಂತ. ಹೌದು, ಅವಳ ದೃಷ್ಟಿಯಲ್ಲಿ ಅವನೀಗ ಹುಚ್ಚನಂತೆ. ಯಾಕೆಂದರೆ ಅರ್ಧದಲ್ಲೇ ಶಿಕ್ಷಣ ನಿಲ್ಲಿಸಿದವ, ಚಳವಳಿ ಅಂತ ಹೇಳಿಕೊಂಡು ಜೈಲು ಶಿಕ್ಷೆ ಅನುಭವಿಸಿ ಹೊರಬಂದವ. ಬೀದಿ ಬಿಕಾರಿಯಂತೆ ಅಲೆಯುವವ. ಲಿಲ್ಲಿಯ ಅಂತರಾಳವನ್ನು ಅರಿತ ಫ್ರಾನ್ಸಿಸ್ “ಹಾಗಾದರೆ ನೀನು ಅಥವಾ ನಿನ್ನಂತಹ ಸ್ತ್ರೀಯರು ಪ್ರೀತಿಸುವುದು ಸಂಪತ್ತನ್ನು; ವ್ಯಕ್ತಿಯನ್ನಲ್ಲ… ನೀನು ನನಗೆ ಬರೆದ ಪತ್ರಗಳಲ್ಲಿ ಇದೊಂದನ್ನು ಜೋಪಾನವಾಗಿಟ್ಟಿದ್ದೆ. ನಿನ್ನದನ್ನು ನೀನು ತೆಗೆದು ಕೊ” ಎಂದು ನಿಟ್ಟುಸಿರು ಬಿಡುತ್ತ ಪತ್ರವನ್ನು ಅವಳ ಕಡೆ ಎಸೆದು ನಡೆದುಬಿಟ್ಟ.

ದಾಂತಿಯವರು ಯಾರೂ ಹೇಳದೆ ಇದ್ದ ಒಂದು ನಿಜಾಂಶವನ್ನು ಈ ಕತೆಯ ಮೂಲಕ ಅನಾವರಣ ಮಾಡಿದ್ದಾರೆ. ಕತೆ ಪ್ರಕಟವಾದದ್ದು 1945ರಲ್ಲಿ. ಅದೇ ಇಸ್ವಿಯಲ್ಲೊ ಅಥವಾ ಅದಕ್ಕಿಂತ ಮೊದಲೊ ಈ ಕತೆ ರಚನೆಗೊಂಡಿರಬೇಕು. ಇದು ಸ್ವಾತಂತ್ರ್ಯ ಹೋರಾಟದ ಕಾಲ. 1942ರಲ್ಲಿ ಚಲೆಜಾವ್ ಚಳವಳಿ ಉಗ್ರರೂಪ ಪಡೆದದ್ದು ನಮಗೆ ಗೊತ್ತು. ವಿದ್ಯಾರ್ಥಿಗಳೂ ಈ ಚಳವಳಿಯಲ್ಲಿ ಧುಮುಕಿದ್ದಾರೆ, ಲಾಠಿಯೇಟು ಜೈಲು ಶಿಕ್ಷೆ ಅನುಭವಿಸಿದ್ದಾರೆ. ದೇಶಪ್ರೇಮ ತೀವ್ರಗೊಂಡ ಸಮಯ ಅದು. ಆದರೆ ಭಾರತೀಯ ಕ್ರೈಸ್ತರು ಈ ಚಳವಳಿಯನ್ನು ಹೇಗೆ ಸ್ವೀಕರಿಸಿದರು ಎಂಬುದು ವಿಚಾರಾರ್ಹ ಸಂಗತಿ. ಆಗ ಭಾರತದಲ್ಲಿ ಆಳ್ವಿಕೆ ಬ್ರಿಟಿಷರದ್ದು. ಹಿಂದು-ಮುಸ್ಲಿಮರಂತೆ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡುವಂತೆಯೂ ಇಲ್ಲ, ಅವರ ದಬ್ಬಾಳಿಕೆಯನ್ನು ಪ್ರತಿಭಟಿಸಿ ದೇಶಾಬಿಮಾನ ವನ್ನು ತೋರಿಸುವಂತೆಯೂ ಇಲ್ಲ. ಆ ಕಡೆ ಅವರಿಗೆ ಅನುಮಾನ; ಈ ಕಡೆ ಇವರಿಗೆ ಅನುಮಾನ. ಧಾರ್ಮಿಕ ಕಾರಣಕ್ಕಾಗಿ ಆಂಗ್ಲರನ್ನು ಓಲೈಸಿಕೊಂಡು ಬದುಕಬೇಕಾದ ಕಷ್ಟ ಸ್ಥಿತಿ. ಕ್ರೈಸ್ತರು ಎಂಬ ಕಾರಣದಿಂದ ಸರಕಾರ ಹೆಚ್ಚಿನ ಸವಲತ್ತುಗಳನ್ನು ಇತ್ತಿದ್ದೂ ಇತ್ತು. ಸರಕಾರ ಮೆಚ್ಚುವ ಕಾರ್ಯ ಮಾಡಿ ಇನಾಮು ಪಡೆದು ದೊಡ್ಡವರಾದದ್ದೂ ಇದೆ. ಇದನ್ನು ಮೀರಿ ದೇಶಪ್ರೇಮವೆಂದು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದವರಿಗೆ ಆ ಸಮೂಹದಲ್ಲಿ ತಿರಸ್ಕಾರವೇ ಕಾದಿತ್ತು. ಅಂಥವರೊಂದಿಗೆ ಸಂಪರ್ಕವಿಟ್ಟುಕೊಳ್ಳುವುದೂ ಸರಕಾರದ ದೃಷ್ಟಿಯಿಂದ ನಿಷೇಧವೆ. ವಿರೋಧ ಕಟ್ಟಿಕೊಳ್ಳಲು ಯಾರೂ ಸಿದ್ಧರಿರಲಿಲ್ಲ. ಚಳವಳಿಯಲ್ಲಿ ಭಾಗವಹಿಸುವುದೂ, ಭಾಗವಹಿಸುವವರನ್ನು ಬೆಂಬಲಿಸುವುದೂ ಅಪರಾಧವಾಗಿ ಕಾಡುತ್ತಿತ್ತು. ಫ್ರಾನ್ಸಿಸ್ ಚಳವಳಿಯಲ್ಲಿ ಭಾಗವಹಿಸಿ ಜೈಲು ಸೇರಿದ್ದು ಲಿಲ್ಲಿಯ ದೃಷ್ಟಿಯಲ್ಲಿ ದೇಶಪ್ರೇಮವಾಗುವುದಿಲ್ಲ. ವಿದ್ಯಾರ್ಥಿ ಜೀವನವನ್ನು ಅರ್ಧಕ್ಕೆ ನಿಲ್ಲಿಸಿದ್ದು ಅದು ಅವಳ ಪಾಲಿಗೆ ಹುಚ್ಚುತನ. ಈ ಕಾರಣಕ್ಕಾಗಿಯೇ  ಫ್ರಾನ್ಸಿಸ್ ತಂದೆ ಆಸ್ತಿಯನ್ನು ಕಳೆದುಕೊಳ್ಳುತ್ತಾನೆ – ಅದೂ ಅವನ ಬುದ್ಧಿಹೀನತೆ. ಸ್ವಾತಂತ್ರ್ಯ ಆಂದೋಲನದ ಸಂದರ್ಭದಲ್ಲಿ ಚಳವಳಿಯ ಬಗ್ಗೆ ಕ್ರೈಸ್ತರ ಮನೋಭಾವ ಏನಿತ್ತು ಎಂಬುವುದನ್ನು ಬಿಂಬಿಸುವ ಪ್ರಯತ್ನ ಮಾಡುತ್ತದೆ ಈ ಕತೆ. ದಾಂತಿಯವರು ಫ್ರಾನ್ಸಿಸ್ ಪಾತ್ರವನ್ನು ಆ ಉದ್ದೇಶಕ್ಕಾಗಿಯೇ  ಸೃಷ್ಟಿಸಿದಂತಿದೆ. ಆದರೆ ಇಂಥ ಮನೋಭಾವವನ್ನು ಕತೆ ಒಪ್ಪಿಕೊಳ್ಳುವುದಿಲ್ಲ. ಫ್ರಾನ್ಸಿಸನು ತನ್ನನ್ನು ‘ರಾಸ್ಕಲ್’ ಎಂದ ವಿ.ಪಿ. ರಾಯನ ಮುಂದೆ ‘ಭಾರತಾಂಬೆ ಇದು ನಿನ್ನ ದೌರ್ಭಾಗ್ಯ’ ಎಂದು ಹಿಂತಿರುಗಿದ್ದು, ಲಿಲ್ಲಿಯ ಮುಂದೆ ಪ್ರೇಮಪತ್ರವನ್ನು ಎಸೆದು ನಡೆದು ಬಿಟ್ಟುದು ಆ ಮನೋಭಾವವನ್ನು ಪ್ರತಿಭಟಿಸುವ ಪ್ರಕ್ರಿಯೇ  ಆಗಿದೆ. ದೇಶಪ್ರೇಮಕ್ಕೆ ಒದಗದ ಮನಸ್ಸು ಬರೀ ಶುಷ್ಕ, ಅಷ್ಟೇ ಅಲ್ಲ ಅದೂ ಕೂಡ ದೇಶದ್ರೋಹವೆ ಎಂಬುದನ್ನು ದಾಂತಿಯವರು ಈ ಕತೆಯಲ್ಲಿ ಹೊಳೆಯಿಸಿದ್ದಾರೆ.

1945ನೇ ಇಸ್ವಿ ನವಂಬರ್ ತಿಂಗಳಲ್ಲಿ ವಾರದ ಕತೆಯಾಗಿ ‘ಅಂತರಂಗ’ ಪತ್ರಿಕೆಯಲ್ಲಿ ಪ್ರಕಟವಾದ ‘ನಮ್ಮ ಹಣೆಬರಹ’ ದಾಂತಿಯವರ ಇನ್ನೊಂದು ವಿಬಿನ್ನ ಕತೆ. ಕತೆಯ ನಿರೂಪಣೆಗೆ ಅವರು ಪ್ರಯೋಗಶೀಲ ತಂತ್ರಗಳನ್ನು ಬಳಸುವ ಕೌಶಲವುಳ್ಳವರು ಎಂಬುವುದರ ಮೇಲೂ ಈ ಕತೆ ಪ್ರತ್ಯೇಕವಾಗಿ ನಿಲ್ಲುತ್ತದೆ.

ದೇಶದಲ್ಲಿಯ ಒಡಕುತನ ಇಲ್ಲಿ ಕತೆಗಾರರನ್ನು ಕಾಡಿದೆ. ಜಾತಿ-ಧರ್ಮಗಳ ಕಾರಣಕ್ಕಾಗಿ ಜನ ಹೋಳು ಹೋಳಾಗುವುದು, ಅದು ದೇಶವನ್ನು ಅಭದ್ರಗೊಳಿಸುತ್ತಿರುವುದು, ದೇಶದ ಪ್ರಗತಿಯನ್ನು ಹಾಳು ಮಾಡುತ್ತಿರುವುದು ಲೇಖಕರಿಗೆ ಆತಂಕದ ವಿಷಯವಾಗಿದೆ. ಸಿಂಧ್ಯ ರಾಜನಿಗೆ ನಾಲ್ವರು ಮಕ್ಕಳು. ಆ ಮಕ್ಕಳ ತಾಯಿ ಮಾತರಾಂಬೆ ಭಾರತಾಂಬೆಯನ್ನು ಪ್ರತಿಧ್ವನಿಸುತ್ತಾಳೆ. ಈ ನಾಲ್ವರು ಮಕ್ಕಳು ಹಿಂದೂ, ಮುಸ್ಲಿಮ್, ಕ್ರೈಸ್ತ ಮತ್ತು ಕಮ್ಯುನಿಷ್ಟರ ಸಂಕೇತ. ಬೇರೆ, ಬೇರೆ ದೇಶಕ್ಕೆ ಹೋಗಿ ಅಲ್ಲಿಯ ಜ್ಞಾನ – ಪ್ರಗತಿಪರ ವಿಚಾರಗಳನ್ನು ಪಡೆದು ಬಂದು ನಾಲ್ವರೂ ಅಂತಹ ಅರಿವಿನಿಂದ ರಾಜ್ಯವನ್ನು ಅಭಿವೃದ್ಧಿಗೊಳಿಸಬೇಕು ಎಂಬ ಉದ್ದೇಶ ಸಿಂಧ್ಯ ರಾಜನಿಗೆ ಇತ್ತು. ಆದರೆ ಮುಂದೆ ಅವರವರ ಜ್ಞಾನ ಅವರವರು ಹೊಡೆದಾಡುವುದಕ್ಕೆ, ಜಗಳಾಡುವುದಕ್ಕೆ ಬಳಕೆಯಾಗುವುದು ದೇಶದ ದುರಂತಕ್ಕೆ ನಾಂದಿಯಾಗುತ್ತದೆ. ಸಿಂಧ್ಯ ರಾಜ ಬಲಿ ನಾಡಿನವರು ಮಾಡಿದ ಆಕ್ರಮಣದಲ್ಲಿ ಸಾಯುತ್ತಾನೆ. ಮಾತರಾಂಬೆ ಸೆರೆಯಾಗುತ್ತಾಳೆ. ಅವಳ ಬಿಡುಗಡೆಗಾಗಿ ಹೋರಾಡಬೇಕಾದ ಮಕ್ಕಳು ತಮ್ಮ ತಮ್ಮ ಪ್ರತಿಷ್ಠೆಯಲ್ಲೇ ಮುಳುಗುತ್ತಾರೆ. ‘‘ಆದರೆ ಬ್ರಹ್ಮನು ಜಂಬೂದ್ವೀಪದವರ ಹಣೆಬರಹ ದಲ್ಲಾಗಲಿ, ಮಾತರಾಂಬೆಯ ಬಾಳ ಲಿಪಿಯಲ್ಲಾಗಲಿ ಸ್ವಾತಂತ್ರ್ಯ ಬಿಡುಗಡೆಗಳ ಒಕ್ಕಣೆ ಯನ್ನು ಸೇರಿಸುವ ಬದಲು ಸ್ವಾರ್ಥ-ಅಧಿಕಾರ ಲಾಲಸೆಯನ್ನು ತುಂಬಿಸಿ ಬಿಟ್ಟಿದ್ದನು. ಯಾವ ಮತಭೇದವು ಸ್ವರಾಜ್ಯ ಸಾಧನೆಗೆ ತೊಡಕಾಗಿ ನಿಲ್ಲಬಾರದಿತ್ತೋ ಅದೇ ಮತಭೇದವು ಸಹೋದರರೊಳಗಿನ ಬಿಕ್ಕಟ್ಟಿಗೆ ಕಾರಣವಾಯಿತು.” ನಿರೂಪಕನ ಈ ಮಾತು ಅದನ್ನೇ ದೃಢಪಡಿಸುತ್ತದೆ. ಹಿಂದೂ-ಮುಸ್ಲಿಮ್ ಕಲಹಕ್ಕೆ ನಾಂದಿಯಾದ ಪ್ರತ್ಯೇಕ ಪಾಕಿಸ್ತಾನ ಬೇಡಿಕೆ ಈ ಕತೆಗೆ ಪ್ರೇರಕವಾದಂತೆ ಕಾಣುತ್ತದೆ. ಇಂಥ ಕೋಮು ವೈಷಮ್ಯ ಭುಗಿಲೆದ್ದಾಗ ಭಾರತೀಯ ಕ್ರೈಸ್ತ ಧರ್ಮೀಯರ ಮನೋಭಾವ ಏನಿತ್ತು – ಕತೆ ಸೂಕ್ಷ್ಮವಾಗಿ ಧ್ವನಿಸುತ್ತದೆ. ಸಾತ್ಪುರ ಕ್ರೈಸ್ತ ಸಮೂಹವನ್ನು ಸಾಂಕೇತಿಸುತ್ತಾನೆ. ಗೌರೀಶಂಕರ, ವಿಂಧ್ಯಾಕೌದ್ರಿ, ದಕ್ಕಣ – ಇವರೆಲ್ಲ ಧರ್ಮ – ಅಧಿಕಾರಕ್ಕಾಗಿ ತಮ್ಮ ತಮ್ಮ ಮೂಗಿನ ನೇರಕ್ಕೆ ಮಾತಾಡುವಾಗ ಸಾತ್ಪುರನು “ಏನೂ ಬೇಕಾದರೂ ಮಾಡಿ. ನಮ್ಮ ಧರ್ಮಕ್ಕೆ ಲೋಪ ಬರುವಂತೆ ಮಾಡಿದರೆ ನಾವು ಬಿಡಲಾರೆವು. ಸ್ವರಾಜ್ಯ ಸಿಕ್ಕಿದರೆ ನಮಗೂ ಬೇಕು” ಎಂದು ಪ್ರಕಟಿಸುತ್ತಾನೆ. ಇಲ್ಲಿ ಅವರಿಗೆ ಧರ್ಮ ಮುಖ್ಯ ಮತ್ತು ಸಿಗುವ ಸೌಲಭ್ಯವೂ ಮುಖ್ಯ. ಉಳಿದವರಂತೆ ಅವರಿಗೂ ದೇಶ ಮುಖ್ಯವಾಗುವುದಿಲ್ಲ ಎಂಬುದನ್ನು ಕತೆ ಮೆಲ್ಲಗೆ ಉಸುರುತ್ತದೆ.

ಇದೊಂದು ನೂತನ ಕಥಾತಂತ್ರ. ‘ಹಣೆಬರಹ’ – ಇದು ಸಿನೇಮಾ. ತಾನು ನೋಡಿದ ಸಿನೇಮಾ ಕತೆಯನ್ನು ಶಾಂತಾ ತನ್ನ ಗಂಡನಿಗೆ ಹೇಳುತ್ತಾಳೆ. ಕತೆ ಸಂಭಾಷಣೆಯ ರೂಪದಲ್ಲೇ ನಿರೂಪಿತವಾಗಿದೆ. ಶ್ರೀ ರಾಮಾಶ್ವಮೇಧದ ಮುದ್ದಣ – ಮನೋರಮೆಯರ ಸಂಭಾಷಣೆಯ ಪ್ರಭಾವ ಈ ತಂತ್ರದಲ್ಲಿದ್ದಂತೆ ಕಾಣುತ್ತದೆ. ಅಲ್ಲಿ ಮುದ್ದಣ ಕತೆ ಹೇಳಿದರೆ ಇಲ್ಲಿ ಶಾಂತಾ ಕತೆ ಹೇಳುತ್ತಾಳೆ. ಅದು ರಾಮಾಯಣವಾದರೆ ಇದು ಸಿನೇಮಾ. ಆದರೆ ಈ ಕತೆಯ ಭಾವವೆಲ್ಲ ಭಾರತದ ಚರಿತ್ರೆಯೆ. ಇಲ್ಲಿಯ ಸರಸ ಸಂಭಾಷಣೆ ಕತೆಯ ಕಲಾತ್ಮಕತೆ ಯನ್ನು ಹೆಚ್ಚಿಸಿದೆ. ಕತೆಯಲ್ಲಿ ಅಲ್ಲಲ್ಲಿ ವಿಮರ್ಶೆಯೂ ನಡೆಯುತ್ತದೆ. ಕತೆಯ ಸೊಗಸಿಗೆ ಈ ಘಟನೆಯನ್ನು ನಿದರ್ಶಿಸಬಹುದು : “ನನ್ನ ಮಕ್ಕಳಿಗೆ ಹೊತ್ತು, ಹೆತ್ತ ನನ್ನ ಮೇಲೆ ಒಲುಮೆ ಯಿದ್ದರೆ ಅವರ ದಮನಿಗಳಲ್ಲಿ ನನ್ನ ರಕ್ತವು ಹರಿಯುತ್ತಿದ್ದರೆ ನನ್ನ ಬಿಡುಗಡೆಯಾದೀತು” ಎಂದವಳೇ ಸ್ಮ ೃತಿ ತಪ್ಪಿ ಬಿದ್ದು ಬಿಟ್ಟಳು – ಮಾತರಾಂಬೆಯ ಬಗ್ಗೆ ಹೀಗೆ ಹೇಳಿದ ಶಾಂತಿಯು ಕುರ್ಚಿಯಿಂದ ದಡಕ್ಕನೆ ಎದ್ದು ನಿಂದು – ಈ ಹಾಳು ತಗಣೆಗಳು ಎಲ್ಲಿಂದ ಬಂದವಪ್ಪಾ ಎಂದಳು.

“ಮರೆತು ಹೋಯಿತೆ ಇಷ್ಟು ಬೇಗ! ಅವುಗಳು ನನಗೆ ವರದಕ್ಷಿಣೆಯಾಗಿ ನಿನ್ನ ತವರು ಮನೆಯಿಂದ ಸಿಕ್ಕಿದ ಸೊತ್ತುಗಳು…” ಎನ್ನುತ್ತಾನೆ ನಿರೂಪಕ. ಇಂಥ ಲಘು ಹಾಸ್ಯ, ವ್ಯಂಗ್ಯಗಳು ಕಥನ ಶೈಲಿಗೆ ಕಲಾತ್ಮಕತೆಯನ್ನು ತಂದಿವೆ. ಕತೆಯ ಅಂತಃಸತ್ವವನ್ನು ಹಿಗ್ಗಿಸಿವೆ.

“ನಾಡಿನ ಬಿಡುಗಡೆಯು ಮುಂದಾಳುಗಳ ಸ್ವಾರ್ಥಕ್ಕೆ ಬಲಿಯಾಯಿತು. ಕೊನೆಗೊಮ್ಮೆ ಬಡಿದಾಟವನ್ನೂ… ಬಂಧನದಲ್ಲಿದ್ದ ಮಾತರಾಂಬೆಯನ್ನು ತೋರಿಸಿದರು…” ಎಂದು ಹೇಳಿ ಶಾಂತಿ ಮಂಚಕ್ಕೆ ಹಾರಿಬಿಟ್ಟಳು. ‘‘ಇಷ್ಟೇನೇ ನಿನ್ನ ಹಣೆಬರೆಹ. ಇದು ಎಂತಹ ಕತೆ?” ಎಂದು ನಿರೂಪಕ ಪ್ರಶ್ನಿಸಿದ್ದಕ್ಕೆ “ನನ್ನ ಹಣೆಬರಹವಲ್ಲ ಡೈರಕ್ಟರನ ಹಣೆಬರಹ. ಅವರೂ ಒಪ್ಪದಿದ್ದರೆ ಜಂಬೂದ್ವೀಪದವರ ಹಣೆಬರಹ!! ಅದೂ ಅಲ್ಲದಿದ್ದರೆ ನಿಮ್ಮ ಹಣೆಬರಹ…” ಇದು ಶಾಂತಿಯ ಉದ್ಗಾರ. ಕೊನೆಗೆ ನಿರೂಪಕ “ಅಂ್ಯುೋ ನಮ್ಮ ಹಣೆಬರಹವೇ” ಎಂಬಲ್ಲಿಗೆ ಕತೆ ಮುಗಿಯುತ್ತದೆ. ಕತೆ ಓದಿದ ಮೇಲೂ ಓದುಗರನ್ನು ಈ ಹಣೆಬರಹ ಕಾಡುತ್ತಲೇ ಇರುತ್ತದೆ. ಎಲ್ಲರ ಹಣೆಬರಹ ಓದುಗರ ಕಣ್ಣಾಲಿಯಲ್ಲಿ ತೇಲಾಡುತ್ತಿರುತ್ತದೆ. ಭಾರತೀಯರ ಸಾಂಪ್ರದಾಯಿಕ ನಂಬಿಕೆ ‘ಹಣೆಬರಹ’ ನುಡಿಗಟ್ಟನ್ನು ಕಥಾಶೀರ್ಷಿಕೆಯಾಗಿ ಬಳಸಿ ದಾಂತಿಯವರು ಕತೆಯ ಅರ್ಥಸಾಧ್ಯತೆಗೆ ವಿಸ್ತಾರ ಆಯಾಮವಿತ್ತಿದ್ದಾರೆ. ಜೊತೆಗೆ ಮತಾಂತರ ಹೊಂದಿದವರಾದರೂ ಸ್ಥಾನೀಯ ಕ್ರೈಸ್ತರು ತಮ್ಮ ಮೂಲ ನಂಬಿಕೆಯನ್ನು ಪೂರ್ತಿ ಕಳೆದುಕೊಂಡಿರಲಿಲ್ಲ ಎಂಬುದಕ್ಕೂ ಅವರು ನಿದರ್ಶನವಾಗುತ್ತಾರೆ.

‘ಕಣ್ಣೀರ ಕಾರಣ’ ವಿಫಲ ಪ್ರೇಮದ ಕತೆ. ಇಲ್ಲಿ ಆ ವಿಫಲ ಪ್ರೇಮಿ ಆನಂದ ಮಾಸ್ಟ್ರು. ಮತ್ತೆ ಆ ಪ್ರೇಯಸಿ ಮದುವೆಯಾದವಳೆ. ಅದೂ ಸಣ್ಣ ವಯಸ್ಸಿನಲ್ಲಿ ಗಂಡ ಹೊರಗೆಲ್ಲೋ ಇದ್ದಾನೆ. ಈಗ ಅವಳಿಗೆ ಯೌವನ. ಯೌವನಕ್ಕೆ ಸಹಜವಾದ ಬಯಕೆ. ಹೋಗಿ ಬರುವ ದಾರಿಯ ಮನೆ. ಅಂತೂ ಆಕರ್ಷಣೆ. ಆನಂದ ಮಾಸ್ಟ್ರಿಗೂ ಅಷ್ಟೆ. ಇಬ್ಬರ ಆಕರ್ಷಣೆ ಮೌನ ಪ್ರೇಮವಾಗಿ, ಆ ಮೇಲೆ ಮೌನ ಮುರಿದು ಮಾತಾಗಿ, ಮಾತು ಅಪ್ಪುಗೆಯಾಗುತ್ತದೆ. ಅಷ್ಟು ಹೊತ್ತಿಗೆ ಗಂಡನ ಆಗಮನ. ತದನಂತರ ಮದುವೆಯಾದ ಗಂಡನೊಡನೆ ಜೀವನ. ಅವಳಿಗೆ ಸರಳವೊ ಕಷ್ಟವೊ – ಆದರೆ ಈ ಪ್ರೇಮಿಯ ಪಾಲಿಗೆ ಉಳಿದುಕೊಂಡುದು ಬರಿ ನೋವು – ನೆನಪು ಮಾತ್ರ. ಆ ನೆನಪು ಕಣ್ಣೀರಾಗುವುದು ಕಾಳಿದಾಸ ನಾಟಕದ ಕಾಳಿದಾಸ ಪಾತ್ರವನ್ನು ಕಂಡಾಗ. ಕಾಳಿದಾಸನ ಪಾತ್ರಧಾರಿ ‘ಸುಂದರ’ ನಿಜಾಂಶದಲ್ಲಿ ಇವನ ಮಗನೆ. ಆದರೆ ಲೋಕದ ದೃಷ್ಟಿಯಲ್ಲಿ ತಂದೆ ಅವನು. ಪ್ರೇಮ-ಕಾಮದ ಕಾವಿನಲ್ಲಿ ಯಾರಿಗೆ ಯಾರೊ ತಂದೆ ಯಾಗುತ್ತಾರೆ; ನಿಜ ತಂದೆ ನಿಸ್ಸಹಾಯಕನಾಗುತ್ತಾನೆ. ಸಂಸಾರ ಎಷ್ಟೇ ಸುಭದ್ರ ಎಂದರೂ ಇಂಥ ಸಡಿಲುತನ ತಲೆಮರೆಸಿಕೊಂಡು ಇರುತ್ತದೆ. ಈ ಕತೆ ಇಂಥ ಸುಳಿವನ್ನು ನೀಡುತ್ತದೆ.

‘ಇಗೋ ಹಾಕಿಕೋ ಚೂರಿ’, ‘ಮೇರಿಬಾಯಿ’ – ಇತ್ಯಾದಿ ಕತೆಗಳು ಅಂದಿನ ಸಮಾಜದ ವೈಪರೀತ್ಯಗಳಿಗೆ ಅವರು ತೋರಿದ ಪ್ರತಿಕ್ರಿಯೆಯೇ  ಆಗಿದೆ.

ಅಳಿಯದ ಮಹಾಚೇತನ ಯೇಸು

ಯೇಸುಕ್ರಿಸ್ತರ ಚರಿತ್ರೆ ಬರುವುದು ಬೈಬಲ್ಲಿನ ಹೊಸ ಒಡಂಬಡಿಕೆಯಲ್ಲಿ. ಮಾರ್ಕ್, ಮತ್ತಾಯ, ಲೂಕ್ ಮತ್ತು ಜೋನ್ – ಈ ನಾಲ್ವರು ಬರೆದ ಸುವಾರ್ತೆಗಳ ಸಂಗ್ರಹಿತ ವಾಗಿದೆ. ಕನ್ನಡಕ್ಕೆ ಯೇಸುಕ್ರಿಸ್ತರ ಚರಿತ್ರೆಯನ್ನು ತಂದವರು ಮೊದಲಾಗಿ ಮತಪ್ರಸಾರಕ ವಿದೇಶೀ ಪಾದ್ರಿಗಳೆ. ಅನಂತರ ಸ್ಥಾನೀಯ ಕ್ರೈಸ್ತ ವಿದ್ವಾಂಸರು ಕೆಲವರು ಯೇಸುಕ್ರಿಸ್ತರ ಜೀವನ ಕತೆಯನ್ನು ಕನ್ನಡದಲ್ಲಿ ಬರೆವ ಪ್ರಯತ್ನ ಮಾಡಿದ್ದು ಇದೆ. ಆ ಮಟ್ಟಿಗೆ ಫ್ರಾನ್ಸಿಸ್ ದಾಂತಿಯವರ ‘ಅಳಿಯದ ಮಹಾಚೇತನ ಯೇಸು’ ಕೃತಿಯ ಶ್ರೇಣಿ ದೊಡ್ಡದು.

ತಮ್ಮ ಜೀವನದ ಕೊನೆಯ ದಿನಗಳಲ್ಲಿ ಈ ಪುಸ್ತಕವನ್ನು ಅವರು ಬರೆದಿದ್ದಾರೆ. 1991 ನವಂಬರ್ 18ರಂದು ಇದನ್ನು ಮುಕ್ತಾಯ ಮಾಡಿದ್ದಾರೆ ಎಂಬುದು ಅವರು ತಮ್ಮ ಮಗನಿಗೆ ಬರೆದ ಪತ್ರದಿಂದ ತಿಳಿದುಬರುತ್ತದೆ. ನಾಲ್ಕೂ ಸುವಾರ್ತೆಗಳನ್ನು ಇಲ್ಲಿ ಕ್ರೋಡೀಕರಿಸಿರುವುದರಿಂದ ಯೇಸುಕ್ರಿಸ್ತರ ಚರಿತ್ರೆಗೆ ಒಂದು ಸಮಗ್ರತೆ ಬಂದಿದೆ.

ಸುವಾರ್ತೆಗಳಲ್ಲಿ ಉಕ್ತವಾದ ಯೇಸುವಿನ ಬಗೆಗಿನ ವಿಚಾರಗಳು ಸ್ಪಷ್ಟವಾಗ ಬೇಕಾದರೆ ಯೆಹೂದ್ಯರ ಬದುಕಿನ ಹಿನ್ನೆಲೆ ತಿಳಿದಿರಬೇಕಾಗುತ್ತದೆ. ಸಾಂದರ್ಬಿಕವಾಗಿ ದಾಂತಿಯವರು ಅಂತಹ ಹಿನ್ನೆಲೆಗಳನ್ನು ಅಲ್ಲಲ್ಲಿ ವಿವರಿಸಿದ್ದಾರೆ. ಇದರಿಂದ ಆ ಕಾಲದ ಬದುಕಿನ ರೀತಿ-ನೀತಿಗಳನ್ನು ತಿಳಿದುಕೊಳ್ಳಲು ಅನುಕೂಲವಾಗಿದೆ. ವಿಚಾರಗಳನ್ನು ಖಚಿತ ಪಡಿಸಿಕೊಳ್ಳಲು ಸಾಧ್ಯವಾಗಿದೆ. ದಾಂತಿಯವರ ಈ ವಿಧಾನಗಳನ್ನು ಮತ್ತು ಅವರ ಅಧ್ಯಯನದ ವ್ಯಾಪ್ತಿಯನ್ನು ಒಂದೆರಡು ನಿದರ್ಶನಗಳ ಮೂಲಕ ಪರಾಂಬರಿಸಬಹುದು:

ಯೇಸು ಮದುವೆ ಮನೆಯಲ್ಲಿ ತಾಯಿಯ ಸೂಚನೆಯಂತೆ ನೀರನ್ನು ದ್ರಾಕ್ಷಾರಸ ವನ್ನಾಗಿ ಮಾಡಿದ ಸಂದರ್ಭವನ್ನು ಎತ್ತಿಕೊಳ್ಳುತ್ತ ದಾಂತಿಯವರು ಯೆಹೂದ್ಯರ ಕೈಕಾಲು ಗಳನ್ನು ತೊಳೆವ ವಿಧಾನವನ್ನು ಹೀಗೆ ನಿರೂಪಿಸುತ್ತಾರೆ : ಯೆಹೂದ್ಯರಲ್ಲಿ ಕೈಗಳನ್ನು ತೊಳೆಯುವ ರೀತಿ ಬಹು ವಿಶಿಷ್ಟವಾದುದು. ಮೊದಲು ಒಂದು ಕೈಯನ್ನು ಮೇಲಕ್ಕೆತ್ತಿ ಮೊಣಗಂಟಿನವರೆಗೆ ನೀರು ಸುರಿಯಬೇಕು. ಮತ್ತೆ ಮತ್ತೊಂದು ಕೈಗೆ. ಆ ಮೇಲೆ ಕೈಯನ್ನು ಕೆಳಗೆ ಬಗ್ಗಿಸಿ ಮೊಣಕೈಗಳಿಗೆ ಹೊಯ್ದ ನೀರು ಬೆರಳ ತುದಿಗಳಿಂದ ಇಳಿಯಬೇಕು. ಮುಷ್ಟಿಯಿಂದ ಹಸ್ತಗಳನ್ನು ತಿಕ್ಕಬೇಕು. (ಪುಟ : 22)

ಯೇಸು ಜನಿಸಿದ ಕೊಟ್ಟಿಗೆ ಹೇಗಿತ್ತು? ದಾಂತಿಯವರು ವಿವರಿಸುತ್ತಾರೆ : ಗುಡ್ಡ-ಬೆಟ್ಟ ಇಳಿಜಾರಿನಲ್ಲಿ ಬೆತ್ಲೆಹೇಮಿನ ಮನೆಗಳು. ಇಂತಹ ಬೆಟ್ಟಗಳಲ್ಲಿ ಕೊರೆದು ಮಾಡಿದ ಗುಹೆಗಳು, ಇವುಗಳನ್ನು ಹಟ್ಟಿ-ಕೊಟ್ಟಿಗೆಗಳನ್ನಾಗಿ ಬಳಸುವುದು ಸಾಮಾನ್ಯ. ಕ್ರಿ.ಶ. 150ರಲ್ಲಿ ಬೆತ್ಲೆಹೇಮಿನ ಸಮೀಪದ ಜಿಲ್ಲೆಯಿಂದ ಬಂದಿದ್ದ ಜುಸ್ಟಿನ್ ಮಹಾಗುರು ಇಂತಹ ಗುಹೆಗಳನ್ನು ಉಲ್ಲೇಖಿಸಿದ್ದಾನೆ. (ಪುಟ :8)

ಕುಷ್ಟ ರೋಗಿಗಳನ್ನು ಹೇಗೆ ನೋಡಿಕೊಳ್ಳುತ್ತಿದ್ದರು? ಯೆಹೂದ್ಯರ ನಂಬಿಕೆಯೇನು? ದಾಂತಿಯವರು ಹೀಗೆ ನಿರೂಪಿಸುತ್ತಾರೆ : ಇಸ್ರಯೇಲಿನಲ್ಲಿ ಕುಷ್ಟ ರೋಗಿಗಳು ಎಲ್ಲರೂ ಕೈಬಿಟ್ಟ ನಿಕೃಷ್ಟ ಜೀವಿಗಳು. ಮೋಶೆಯ ನಿಯಮದ ಪ್ರಕಾರ ಅವರು ಸಮಾಜದಿಂದ ಬಹಿಷ್ಕೃತರು. ಪ್ರತ್ಯೇಕವಾಗಿ ಜೀವಿಸುವ ಅವರು ಯಾವನಾದರೂ ಅವರಿದ್ದೆಡೆಗೆ ಬಂದಾಗ ‘ಕೊಳಕು ಕೊಳಕು ದೂರ ಹೋಗಿ’ ಎಂದು ಕೂಗಬೇಕಿತ್ತು. ಆಗಾಗ ಸ್ವಲ್ಪ ಆಹಾರ ತಿನಿಸನ್ನು ಅವರಿದ್ದೆಡೆಗೆ ಎಸೆಯುವುದು ವಿನಾ ಬೇರಾವುದನ್ನೂ ಸಮಾಜ ಅವರಿಗೆ ಮಾಡುತ್ತಿರಲಿಲ್ಲ. ಯಾರು ರೋಗಿ, ಯಾರು ಅಲ್ಲ, ಯಾರು ಗುಣ ಹೊಂದಿದ್ದಾರೆ, ಯಾರಿಗೆ ರೋಗ ಬಡಿದಿದೆ ಎಂದು ನಿರ್ಣಯಿಸುವುದು ಯಾಜಕರು. ಅವರಿಗೆ ಬೇಡವಾದವನನ್ನು ಸುಮ್ಮ ಸುಮ್ಮನೆ ಈ ಕೂಪಕ್ಕೆ ತಳ್ಳಿ ಅವನನ್ನು ರೋಗಿಯನ್ನಾಗಿ ಮಾಡುವುದೂ ಇತ್ತೆನ್ನುತ್ತಾರೆ. (ಪುಟ :32)

ಪರ್ಣಕುಟೀರದ ಹಬ್ಬದ ಕುರಿತು ನೀಡುವ ವಿವರಣೆ ಇದು : ಪರ್ಣಕುಟೀರದ ಹಬ್ಬ – ಯೆಹೂದ್ಯರು ಪೆಲಸ್ತೀನಕ್ಕೆ ಪಲಾಯನ ಮಾಡುತ್ತಿದ್ದಾಗ ಅವರು ಕೆಲವು ಕಾಲ ಮರುಭೂಮಿ ಪ್ರದೇಶದಲ್ಲಿ ಮನೆಯಿಲ್ಲದೆ ವಾಸಿಸಿದ್ದರು. ಆ ನೆನಪಿಗಾಗಿ ಆಚರಿಸುವ ಹಬ್ಬ. ಒಂದು ವಾರದ ತನಕ ಮನೆ-ಮಠ ಬಿಟ್ಟು ಹೊರಗೆ ಪರ್ಣಕುಟೀರಗಳನ್ನು ಕಟ್ಟಿ ಅವರು ನೆಲೆಸುವ ಸಾಂಪ್ರದಾಯಿಕ ಹಬ್ಬ. (ಪುಟ : 66)

ಇಂಥ ವಿವರಣೆಗಳು ಯೆಹೂದ್ಯ ಸಂಸ್ಕೃತಿಯನ್ನು ಅವರ ಆಚಾರ ವಿಚಾರಗಳನ್ನು, ಅವರ ಮನೋಭಾವ, ಸ್ವಭಾವಗಳನ್ನು ಅರಿಯಲು, ಅಧ್ಯಯನ ಮಾಡಲು ಸಹಾಯಕವಾಗಿವೆ.

ಕೆಲವು ಸಂದರ್ಭಗಳಲ್ಲಿ ಯೇಸು ನಡೆದುಕೊಳ್ಳುವ ರೀತಿ, ಅವರ ಮಾತು ಇತ್ಯಾದಿಗಳಿಗೆ ದಾಂತಿಯವರು ನೀಡುವ ಒಳನೋಟ, ಮಾಡುವ ವಿಶ್ಲೇಷಣೆ ಅವರ ಅರಿವಿನ ಎತ್ತರವನ್ನು ಮಿಂಚಿಸುತ್ತದೆ. ಇದು ಈ ಗ್ರಂಥದ ಇನ್ನೊಂದು ಸತ್ವ. ಅವಲೋಕನಕ್ಕೆ ಇಲ್ಲಿ ಕಣ್ಣು ಹಾಯಿಸಬಹುದು.

ವ್ಯಬಿಚಾರಿಣಿಯ ಸನ್ನಿವೇಶ ಎಲ್ಲರ ಸತ್ವಪರೀಕ್ಷೆಯಾಗಿ ಪರಿಣಮಿಸುವುದು ಯೇಸುವಿನ ಚರಿತ್ರೆಯಲ್ಲಿ ಒಂದು ಮಹತ್ತ್ವದ ಹಾಗೂ ವಿಚಾರಪ್ರದ ಸಂಗತಿ. ದಾಂತಿಯವರು ಅದನ್ನು ಮನೋಜ್ಞವಾಗಿ ವಿಶ್ಲೇಷಿಸಿದ್ದಾರೆ. ಅವರು ಹೇಳುತ್ತಾರೆ : “ವ್ಯಬಿಚಾರಿಯನ್ನು ಕಲ್ಲೆಸೆದು ಕೊಲ್ಲಬೇಕೆಂದು ಮೋಸೆಯ ನಿಯಮ. ತನ್ನ ಅನುಮತಿ ಇಲ್ಲದೆ ಯಾರಿಗೂ ಮರಣದಂಡನೆ ಕೊಡಬಾರದೆಂಬುದು ರೋಮನರ ಕಾನೂನು.

ಯೇಸು ಅಹಿಂಸೆ, ದಯೆ, ಕರುಣೆಗಳ ಪ್ರತಿಪಾದಕ. ಯೇಸುವಿನ ಅಬಿಪ್ರಾಯದಲ್ಲಿ ಯಾರನ್ನೂ ಹಿಂಸಿಸಬಾರದು.

ಬೇರೆ ದಾರಿಯೇನುಂಟು? ಕಲ್ಲೆಸೆದು ಕೊಲ್ಲಿ ಎಂದರೆ ರೋಮನರ ನಿಯಮಕ್ಕೆ, ಯೇಸುವಿನ ಅಹಿಂಸೆಗೆ ವ್ಯತಿರಿಕ್ತ. ಕೊಲ್ಲ ಬೇಡಿ ಎಂದರೆ ಧರ್ಮ ನಿಯಮಕ್ಕೆ ವಿರೋಧ. ಅತ್ತ ರೋಮನರು ತಮ್ಮ ಕಾನೂನು ಉಲ್ಲಂಘನೆಯ ತಕ್ಷೀರು ಹೆದರಿಸಿದರೆ ಇತ್ತ ಯೆಹೂದ್ಯರು ತಮ್ಮ ಧರ್ಮವನ್ನು ಮೀರಿದ ಅಪವಾದ’’. (ಪುಟ : 68)

– ಹೀಗೆ ಅಲ್ಲಿರುವ ಸಂದಿಗ್ಧವನ್ನು ವಿವೇಚಿಸುತ್ತಾರೆ. ಇದನ್ನು ಯೇಸು ಹೇಗೆ ಎದುರಿಸಿದರು? ಅವರು ಚಿತ್ರಿಸುತ್ತಾರೆ : “ಯೇಸು ಬಗ್ಗಿ ತನ್ನ ಬೆರಳಿನಿಂದ ನೆಲದಲ್ಲಿ ಬರೆಯ ತೊಡಗಿದ’’ – ಇದು ಬೈಬಲಿನ ವಾಕ್ಯವೆ.

“ಯಾರು ಬರೆದುದು ಮೋಸೆಯ ಧರ್ಮವನ್ನು. ಇದೇ ಬೆರಳು – ದೇವಪುತ್ರನ ಬೆರಳು. ಅದೇ ಬೆರಳು ಈಗ ಬರೆಯುತ್ತಲಿತ್ತು. ದೇವಳದ ಪ್ರಾಂಗಣದಲ್ಲಿ ಅತಿಶ್ರೇಷ್ಠ ನಿಯಮವನ್ನು ವಿರೋದಿ ಫರಿಸಾಯರು, ಶಾಸ್ತ್ರಿಗಳು ಕೈಯಲ್ಲಿ ಕಲ್ಲುಗಳನ್ನು ಹಿಡಿದು ಸಿದ್ಧರಾಗಿದ್ದರು. ಯಾರ್ಯಾರು ಎಂಥವರೆಂಬುದನ್ನು ಬಲ್ಲವರಾರು. ಅವರ ಅಂತಃಕರಣವೇ ಅವರಿಗೆ ಸಾಕ್ಷಿ. ಅದೇ ತೀರ್ಪನ್ನೀವ ನ್ಯಾಯಾದೀಶ’’ (ಪುಟ : 69).

ಬೈಬಲಿನ ಸುವಾರ್ತೆಯಲ್ಲಿ ಯೇಸು ತಲೆತಗ್ಗಿಸಿ ಬೆರಳಿಂದ ನೆಲದಲ್ಲಿ ಬರೆಯುತ್ತಿದ್ದರು ಎಂಬ ವಕ್ಕಣೆ ಇದೆ. ದಾಂತಿಯವರು ಆ ಬರೆಹಕ್ಕೆ ಇಲ್ಲಿ ವ್ಯಾಖ್ಯಾನ ಮಾಡಿದ್ದಾರೆ. ಮತ್ತೆ ಹೇಳುತ್ತಾರೆ : “ಅವರ ದೌರ್ಬಲ್ಯ, ಪಾಪಗಳನ್ನು, ಅವರ ದೊಡ್ಡಸ್ತಿಕೆ, ಶ್ರೀಮಂತಿಕೆ ಮುಚ್ಚಿಡಲು ಶಕ್ತವಾಗಬಹುದು. ಅವರು ಜನರ ಕಣ್ಣು ಕಟ್ಟಬಹುದು. ಆ ಪ್ರತಿಷ್ಠಿತ ಜನ ಕೈಯಲ್ಲಿ ಕಲ್ಲುಹಿಡಿದು ಕಾಯುತ್ತಿತ್ತು ಯೇಸುವಿನ ನಿರ್ಧಾರಕ್ಕೆ. ಅವರ ದೃಷ್ಟಿ ಯೇಸುವಿನ ಮೇಲೆ ಕೇಂದ್ರೀಕೃತವಾಗಿತ್ತು. ಆ ಅಬಲೆಯು ಕಣ್ಣೀರು ಸುರಿಸುತ್ತ ನೆಲವನ್ನು ನೋಡುತ್ತಿದ್ದಳು, ತನ್ನ ಅವಮಾನದ ಪಾಪದ ಪರಿಸ್ಥಿತಿಯನ್ನು ನೆನೆದು.” ಮುಂದುವರಿದು : “ಯೇಸು ಸುತ್ತ ಕಣ್ಣು ಹಾಯಿಸಿದ. ಆ ದೃಷ್ಟಿಯ ನೋಟ ಅತಿ ತೀಕ್ಷ ್ಣವಾಗಿತ್ತು. ಕೆಂಗಣ್ಣು ರೋಗಪೀಡಿತ ಕಣ್ಣುಗಳಿಗೆ ನೆತ್ತಿಯ ಸೂರ್ಯನ ಕಿರಣವಾಗಿತ್ತು. ಮಕ್ಕಳಿಂದ ಹಿರಿಯರವರೆಗೆ, ಹಿರಿಯರ ಕಣ್ಣು ಹೆಚ್ಚು ಬೇನೆಗೊಳಗಾಗಿರಬಹುದು. ಅವರು ಮಾಡಿದ ಪಾಪ ಹೆಚ್ಚಿನದಿರಬಹುದು.” (ಪುಟ :69)

ಆರೋಪ ತಂದವರನ್ನು ಕೆಂಗಣ್ಣ ರೋಗಪೀಡಿತರು ಮತ್ತು ಯೇಸುವನ್ನು ನೆತ್ತಿಯ ಸೂರ್ಯನ ಕಿರಣ ಎಂದು ವರ್ಣಿಸಿರುವುದು ಅರ್ಥಪೂರ್ಣವಾಗಿದೆ. ಈ ಗ್ರಂಥದುದ್ದಕ್ಕೂ ದಾಂತಿಯವರ ಕವಿಹೃದಯ ತುಂಬಿಕೊಂಡಿರುವುದನ್ನು ಕಾಣಬಹುದು. ಆದುದರಿಂದಲೇ ಇದು ರಸಾರ್ದ್ರ ಕೃತಿಯಾಗಿದೆ. ಸಂದರ್ಭೋಚಿತ ಕೊಡುವ ಹೋಲಿಕೆ ಕೃತಿಯ ಸೌಂದರ್ಯವನ್ನು ಹೆಚ್ಚಿಸಿದೆ. “ಆ ದೃಷ್ಟಿ, ಆ ಬೆರಳುಗಳ ಲೇಖ, ಹೇ ನೀನು ಕಳ್ಳ, ನೀನು ಹಾದರದ ಹಂದರ, ನೀನು ವಂಚನೆಯ ಆಗರ ಎಂಬುದಕ್ಕೆ ಆಗ ಕಣ್ಣಮುಂದೆ ಭೂತಕನ್ನಡಿ ಯಲ್ಲಿ ಕಾಣುತ್ತಿತ್ತು. ಅವರ ಅಂತಃಕರಣದ ಕರಾಳ ಮೋಡಗಳು ಕೂಡಿಕೊಂಡಿದ್ದವು”. ಇಲ್ಲಿಯ ಭೂತಗನ್ನಡಿ, ಕರಾಳ ಮೋಡ – ರೂಪಕಗಳು ಸ್ಫುರಿಸುವ ಧ್ವನಿ ಅತಿಶಯ ವಾದುದು. ಹೊಡೆಯಿರಿ, ‘ಯಾರು ನಿಮ್ಮಲ್ಲಿ ಯಾವ ಪಾಪವನ್ನೂ ಮಾಡಿಲ್ಲವೊ ಅವರು ಹೊಡೆಯಿರಿ ಮೊದಲ ಕಲ್ಲನ್ನು’ ಎಂದ ಯೇಸು.

ಅಧಿಕಾರ ವಾಣಿಯಲ್ಲ. ನಾನು ನಿಮ್ಮೆಲ್ಲರ ಅಂತಃಕರಣವನ್ನು ಈ ಕ್ಷಣದಲ್ಲಿ ಪ್ರಕಟಪಡಿಸಬಲ್ಲೆ ಎಂಬ ತ್ರಿಕಾಲ ಜ್ಞಾನಿ, ಅವರೆಲ್ಲರ ಜ್ಞಾನಿ. ಈ ಪರಮೇಶ್ವರನ ಕುಮಾರನಾಡಿದ ಮಾತಿಗೆ ಎಲ್ಲರೂ ದಂಗಾದರು (ಪುಟ : 70)

ಹೀಗೆ ಒಂದು ಸನ್ನಿವೇಶವನ್ನು ದಾಂತಿಯವರು ನಿರೂಪಿಸುವ ರೀತಿ ತುಂಬ ಹೃದಯಂಗಮ. ಸುಲಲಿತವಾದ ಅವರ ಶೈಲಿ ಅಷ್ಟೇ ಆಪ್ಯಾಯವನ್ನುಂಟು ಮಾಡುತ್ತದೆ. ಯೇಸುವಿನ ಮೇಲಿನ ಪ್ರೀತಿ ಭಾವ ಅವರಿಗಿಲ್ಲಿ ಚೈತನ್ಯವಾಗಿದೆ.

ಇನ್ನೊಂದು ವಿಶೇಷವೆಂದರೆ ಭಾರತೀಯ ಸಂಸ್ಕೃತಿ ಒಬ್ಬ ಮಹಾತ್ಮನನ್ನು ಹೇಗೆ ಕಾಣುತ್ತದೆ – ದಾಂತಿಯವರು ಆ ರೂಪದಲ್ಲೇ ಯೇಸುವನ್ನು ಕಂಡಿದ್ದಾರೆ. ಓದುತ್ತ ಓದುತ್ತ ಇಲ್ಲಿ ಓದುಗರಿಗೆ ಯೇಸು ಒಬ್ಬ ಪರಕೀಯ ಎಂದು ಅನಿಸುವುದೇ ಇಲ್ಲ. ಅವರು ಕೊಡುವ ಕೆಲವು ವಿವರಣೆಗಳೆಲ್ಲ ಭಾರತೀಯ ನಂಬಿಕೆಗಳನ್ನೇ ಬಿಂಬಿಸುತ್ತವೆ. “ಯೇಸು ಸ್ವಾಮಿಯ ಕಾಲದಲ್ಲಿ ಇಸ್ರಯೇಲ್ ಜನಾಂಗದಲ್ಲಿ ‘ಸಾದುಸ್ಯರು’, ‘ಫರಿಸಾಯರು’, ‘ಸ್ಕ್ರೀಬರು’ ಮತ್ತು ‘ಜೆಂತಿಲ’ರೆಂಬ ಪ್ರಮುಖ ವರ್ಗಗಳು” ಇದ್ದವು ಎನ್ನುತ್ತ ಅವರ ಬಗ್ಗೆ ಮಾಹಿತಿ ಕೊಡುತ್ತಾರೆ. ಈ ನಾಲ್ಕು ವರ್ಗಗಳು ಭಾರತದ ಮನುಸ್ಮ ೃತಿ ಪ್ರಣೀತ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ – ಈ ಚತುರ್ವರ್ಣಗಳನ್ನೇ ಹೋಲುತ್ತವೆ. ಜೆಂತಿಲರನ್ನು ದಾಂತಿಯವರು ಪರಿಚಯಿಸುವುದು ಹೀಗೆ: “ಯೆಹೂದ್ಯರಲ್ಲದವರು ಜೆಂತಿಲರು. ಮೂರ್ತಿಪೂಜೆ ಮಾಡುವವರು, ಶೂದ್ರರು. ಇವರು ಅಸಹ್ಯರು. ಮೂರ್ತಿಪೂಜೆ ಮಾಡುವ ಶೂದ್ರರು (ಮಣ್ಣಿನ ಮಕ್ಕಳು) ಟೋರಾ ಗ್ರಂಥ ಪಠನ ಮಾಡಿದರೆ ಅವರಿಗೆ ಮರಣದಂಡನೆಯ ಶಿಕ್ಷೆ. ಸಬ್ಬಾತಿನ ದಿನ ಕೂಡಾ ಇಂಥವರಿಗೆ ಇರಿದರೆ ಅನ್ಯಾಯವೆನಿಸುವುದಿಲ್ಲ….” (ಪುಟ : 25)

ಜೆಂತಿಲರನ್ನು ದಾಂತಿಯವರು ಇಲ್ಲಿ ಶೂದ್ರರು ಎಂದು ಹೆಸರಿಸಿದ್ದು ಭಾರತೀಯರ ಶೂದ್ರ ಕಲ್ಪನೆಯ ಪ್ರಭಾವವೇ ಆಗಿದೆ.   ಅಷ್ಟೇ ಅಲ್ಲ, ಅಲ್ಲಿಯ ಫರಿಸಾಯ ವರ್ಗಕ್ಕೂ, ಇಲ್ಲಿಯ ಚಾತುರ್ವಣ್ಯ ಬ್ರಾಹ್ಮಣ ವರ್ಗಕ್ಕೂ ವ್ಯತ್ಯಾಸ ಕಾಣುವುದಿಲ್ಲ. ವೇದ ಮಂತ್ರ ಪಠನ ಇಲ್ಲಿ ಶೂದ್ರ ವರ್ಗಕ್ಕೆ ಹೇಗೆ ನಿಷೇಧವಾಗಿತ್ತೊ ಅಲ್ಲಿ ಜೆಂತಿಲರಿಗೆ ‘ಟೋರೊ’ ಗ್ರಂಥ ಪಠನ ನಿಷೇಧವಾಗಿತ್ತು. ಅಂಥವರಿಗೆ ಇಲ್ಲಿ ಕಿವಿಯೊಳಗೆ ಕಾದ ಸೀಸ ಹೊಯ್ಯಬೇಕು, ನಾಲಗೆ ಕತ್ತರಿಸಬೇಕು ಎಂದಿದ್ದರೆ ಅಲ್ಲಿ ಮರಣದಂಡನೆ ಕಾದಿತ್ತು. ಇನ್ನೂ ಕ್ರೌರ್ಯವೆಂದರೆ ಸಬ್ಬಾತ್ ದಿನಗಳಲ್ಲಿ ಹಿಂಸೆ ಮಾಡಬಾರದು. ಆದರೆ ಜೆಂತಿಲರನ್ನು ತಿವಿದರೆ ಅದು ಪಾಪ ವಾಗುತ್ತಿರಲಿಲ್ಲ. ಅನ್ಯಾಯವಾಗುತ್ತಿರಲಿಲ್ಲ.

ಇವನ್ನೆಲ್ಲ ಬಹಳ ಸೂಕ್ಷ್ಮವಾಗಿ ಅಧ್ಯಯನ ಮಾಡಿದ ದಾಂತಿಯವರು ಇಲ್ಲಿ ಹೇಳುತ್ತಾರೆ : “ಕ್ರಿಸ್ತ ಸ್ವಾಮಿಯ ಕಾಲದಲ್ಲಿ ಇಸ್ರಯೇಲ್ ಜನಾಂಗದ ಕೆಳವರ್ಗದ ಜನ ಅತ್ಯಂತ ದಮನಕ್ಕೊಳಗಾಗಿದ್ದರು. ಧರ್ಮ, ರಾಜಕೀಯ, ಸಂಪತ್ತು, ಶಾಸ್ತ್ರ ನಿಯಮ ಗಳೆಲ್ಲವೂ ಕಪಿಮುಷ್ಟಿಯಲ್ಲಿತ್ತು. ಜನಸಾಮಾನ್ಯರನ್ನು ಈ ಬಂಧನದಿಂದ ಬಿಡಿಸುವ… ಮಹಾತ್ಮನ ಅಗತ್ಯವಿತ್ತು. ಈತ ಮುಖ್ಯವಾಗಿ ಜನರಲ್ಲಿ ವಿಚಾರ ಪ್ರಚೋದನೆ ಜಾಗೃತಿಯನ್ನು ಹುಟ್ಟಿಸಬೇಕಿತ್ತು. ಇವರ ಮನಃ ಪರಿವರ್ತನೆ ಮಾಡಬೇಕಿತ್ತು….” (ಪುಟ :26)- ಎಂಬುದಾಗಿ. ಜನಸಾಮಾನ್ಯರ ಬಗೆಗಿನ ಕಳಕಳಿ ದಾಂತಿಯವರಲ್ಲೂ ಮಡುಗಟ್ಟಿರುವುದು ಇಲ್ಲಿ ಕಾಣುತ್ತದೆ.

ರಾಮಾಯ ಸ್ವಸ್ತಿ, ರಾವಣಾಯ ಸ್ವಸ್ತಿ, “ನೀನು ಶನೀಶ್ವರನನ್ನು ಪೂಜಿಸಲಾರದ ದಿನಗಳು ಬರಲಿವೆ.” ದಲಿತೋದ್ಧಾರ ಬಾಯಿಮಾತಿನ ಘೋಷಣೆಯಿಂದಾಗುವುದಿಲ್ಲ. ದೇವರೆಂದರೆ ಮಹಾಚೇತನ, ಜೀವನ ಜಾತಕ – ಇಂಥ ನುಡಿ-ನುಡಿಗಟ್ಟುಗಳ ಪ್ರಯೋಗ ದಾಂತಿಯವರಿಗಿರುವ ಈ ನೆಲದ ಅರಿವು ಮಮತೆಗೆ ಪುರಾವೆಯೆನ್ನಬಹುದು.

ದಾಂತಿಯವರ ಚಿಂತನೆಯ ಪ್ರಕಾಶ ಇಲ್ಲಿ ಪ್ರಖರಗೊಂಡಿರುವುದೇನಿದೆ ಅದು ಈ ಕೃತಿಯ ಮೌಲ್ಯಕ್ಕೆ ಕುಂದಣವಿಟ್ಟಂತಾಗಿದೆ. ಸಾಂದರ್ಬಿಕವಾಗಿ ಮೂಡಿಕೊಳ್ಳುವ ಈ ಚಿಂತನೆಗಳು ಕೊಡುವ ಅನುಭವಗಳೂ ಅಪಾರವೆ.

ಯೇಸುವಿನ ವಿಚಾರಣೆಯ ಸಮಯ ಮೌನವಾಗಿದ್ದ ಇಬ್ಬರು ಶಿಷ್ಯರು ಅರಿಮತಾಯ; ಮತ್ತು ನಿಕೊದೆಮಸರು ಮುಂದೆ ಯೇಸುವಿನ ಕಳೇಬರವನ್ನು ತೆಗೆದುಕೊಳ್ಳಲು ಬಂದಾಗ ದಾಂತಿಯವರು ಇದನ್ನು ಪ್ರಸ್ತಾಪಿಸಿ ನುಡಿವ ಮಾತು ಇದು : “ಮಾತು ಅನಾಹುತವನ್ನು ತರುತ್ತದೆಂಬುದು ನಿಜ. ಆದರೆ ಮಾತನಾಡದಿರುವುದೂ ಕೆಲವೊಮ್ಮೆ ಬಹುದೊಡ್ಡ ಅನಾಹುತವನ್ನು ತರುತ್ತದೆ. ಜೀವವಿರುವಾಗ ಹೆದರಿದ ಅರಿಮತಿಯ, ನಿಕೊದೆಮಸರು ಸತ್ತ ಮೇಲೆ ಸಹಾನುಭೂತಿ ಧೈರ್ಯ ತೋರಿದರು. ಇದು ಪ್ರಪಂಚದ ರೀತಿ” (ಪುಟ :152) ಅನ್ನುತ್ತಾರೆ.

ಯೇಸುವನ್ನು ಮುತ್ತಿಟ್ಟು ಹಿಡಿದುಕೊಟ್ಟ ಜುದಾಸನ ಬಗ್ಗೆ ಹೇಳುತ್ತ – “ಮುತ್ತು ಪ್ರೀತಿಯ ಬಾಹ್ಯ ಸಂಕೇತ. ಈ ಸಂಕೇತವನ್ನು ಉಪಯೋಗಿಸಿಕೊಂಡು, ಒಟ್ಟಿಗೆ ಉಂಡು ತಿಂದು, ಸಹವಾಸಿಯಾದ ದ್ರೋಹಿ ಜುದಾಸ. ಮನುಷ್ಯ ಜಾರ ಹತ್ತಿದರೆ ಎಷ್ಟು ಆಳಕ್ಕೆ ಜಾರುತ್ತಾನೆ. ಅನ್ಯಾಯಕ್ಕೆ ಕೈಕೊಟ್ಟವ ಯಾವ ಅನ್ಯಾಯಕ್ಕೂ ಹೇಸುವುದಿಲ್ಲ. ಜಾರ ಜಾರುತ್ತಾ ಅಧಃಪತನಕ್ಕೆ ಇಳಿಯುತ್ತ ಹೋದ ಜುದಾಸ” (ಪುಟ :127-128) ಎನ್ನುತ್ತ ಮಾನವನ ದ್ರೋಹ ಬುದ್ಧಿಯನ್ನು ಅನಾವರಣ ಮಾಡುತ್ತಾರೆ.

ಗೆತ್ಸೆಮನೆ ತೋಟದಲ್ಲಿ ಯೇಸುವನ್ನು ಬಂದಿಸಿದ ಕೂಡಲೇ ಶಿಷ್ಯರೆಲ್ಲ ಅವರನ್ನು ಬಿಟ್ಟು ಓಡಿ ಹೋಗುತ್ತಾರೆ. ಗೆತ್ಸೆಮನೆಗೆ ಸಂಬಂಧಪಟ್ಟ ಯುವಕನೊಬ್ಬ ಖಾಲಿ ಒಂದು ವಸ್ತ್ರವನ್ನು ಹೊದೆದು ಏನು ನಡೆಯುತ್ತದೆ ಎಂದು ಮರೆಯಲ್ಲಿ ನಿಂತು ನೋಡುತ್ತಿರುತ್ತಾನೆ. ಶತ್ರು ಸೈನಿಕರ ಗಮನ ಆ ಕಡೆ ಹೋದಾಗ ಆತನು ಹೊದ್ದ ವಸ್ತ್ರವನ್ನೇ ಬಿಟ್ಟು ನಗ್ನನಾಗಿಯೇ  ಓಡಿ ಹೋಗುತ್ತಾನೆ. ಇಷ್ಟೆಲ್ಲ ಶಿಷ್ಯರಿದ್ದರೂ ಯೇಸುವಿನ ಜೊತೆಗೆ ಯಾರೊಬ್ಬರೂ ಬಂದಿಯಾಗುವುದಿಲ್ಲ. ಈ ಸಂಗತಿಯನ್ನು ಮುಂದಿಟ್ಟುಕೊಂಡು ದಾಂತಿಯವರು ಹರಿಸುವ ವಿಚಾರ ನೋಡಿ : “ಮಾನವನಿಗೆ ಅತ್ಯಂತ ಹೆಚ್ಚಿನ ವೇದನೆಯನ್ನು ತರುವ ಸಂಗತಿಗಳಲ್ಲಿ ತನ್ನವರೆಂದು ನಂಬಿದ ಜನರು ಮಾಡುವ ದ್ರೋಹ. ಆಪತ್ಕಾಲದಲ್ಲಿ ಯಾವ ಸಹಾಯಕ್ಕೆ ಬಾರದೆ ಕೈ ಬಿಡುವುದು. ಹಸಿದಿದ್ದಾಗ ಉಪ್ಪನ್ನು ತಿನ್ನಿಸುವುದು. ಆರದ ಬೆಂಕಿಗೆ ಗಾಳಿ ಹಾಕುವ ಇಂಥ ಜನರು ಎಲ್ಲ ಕಾಲಗಳಲ್ಲಿಯೂ ಇರುತ್ತಾರೆ.” (ಪುಟ :126)

ಈ ಚರಿತ್ರೆಯ ಮುಕ್ತಾಯದ ಕೆಲವು ನುಡಿಗಳು ಇಲ್ಲಿ ಮನನೀಯ. ಸಮಾರೋಪ ಮಾಡುತ್ತ “ಕ್ರಿಸ್ತ ಸ್ವಾಮಿಯು ತತ್ತ ್ವಶಾಸ್ತ್ರ ಪಂಡಿತರೆಂದು ಪದವಿ ಪಡೆದವರಲ್ಲ. ರಾಜಕೀಯ ಧುರೀಣರಲ್ಲ. ಅಧಿಕಾರ ಪೀಠದಲ್ಲಿದ್ದವರಲ್ಲ. ಅವರೊಬ್ಬ ಬಡಗಿ, ಹಳ್ಳಿಯ ಕಾರ್ಮಿಕ…” ದಲಿತರೊಡನೆ, ದಮನಕ್ಕೊಳಗಾದವರೊಡನೆ, ಪಾಪಿಗಳೆಂದು ತಿರಸ್ಕೃತರಾದವರೊಡನೆ, ಕೆಳವರ್ಗದ ಜನರೊಡನೆ ಅವರು ಬಾಳಿದ್ದರು. ಅವರು ಆರಿಸಿಕೊಂಡ ಅವರ ಆಪ್ತಶಿಷ್ಯರು ಇದೇ ವರ್ಗದವರು.

ಅವರ ಜೀವನ ಕತೆ ಒಮ್ಮೆ ಹಿಮಾಲಯಕ್ಕೆ ಹತ್ತುವ, ಒಮ್ಮೆ ಭೂಮಿ ತಳಕ್ಕೆ ಇಳಿಯುವ, ವಿರೋಧಾಭಾಸಗಳ ಗೊಂಚಲು. ಅವರ ಸಂದೇಶಗಳು ಸರಳ, ಸುಂದರ ಮತ್ತು ಅಮೂಲ್ಯ ಮುತ್ತುಗಳ ಮಾಲೆ. ಇಲ್ಲಿ ಸತ್ಯ ವಾದ ಹೊರತು ಆಡಂಬರದ ಪ್ರದರ್ಶನಗಳಿಲ್ಲ. ಇಲ್ಲಿ ತತ್ತ ್ವಗಳ, ವಾದಗಳ, ಸಿದ್ಧಾಂತಗಳ ಜಿಗುಟು ಜಿದ್ದುಗಳಿಲ್ಲ… ಪ್ರೀತಿ, ಶಾಂತಿ, ಸೌಜನ್ಯ ದಾರಿಯಾದ ದೇವರ ರಾಜ್ಯದ ಸಾಧನೆ-ಸಿದ್ಧಿ. (ಪುಟ :164)

– ಇದು ಯೇಸುವಿನ ಮಾನವೀಯ ವ್ಯಕ್ತಿತ್ವಕ್ಕೆ ಫ್ರಾನ್ಸಿಸ್ ದಾಂತಿಯವರು ತೊಡಿಸಿದ ನುಡಿಗಳಸ. ದಾಂತಿಯವರ ಜೀವನದ ಅನುಭವಗಳೆಲ್ಲ ಇಲ್ಲಿ ಕೆನೆಗಟ್ಟಿದೆ. ಅವರ ಪ್ರತಿಭೆ, ವಿದ್ವತ್ತು, ಭಾಷಾ ಪ್ರೌಡಿಮೆ, ಜೀವಪರ ಚಿಂತನೆ, ಮಾನವ ಪ್ರೇಮ, ಆಧ್ಯಾತ್ಮದ ಒಲವು, ತಂತ್ರ ಕೌಶಲ – ಇವೆಲ್ಲ ಸಮರ್ಥವಾಗಿ ದುಡಿದುಕೊಂಡಿವೆ. ಕನ್ನಡಕ್ಕೆ ಸಂದ ಕ್ರೈಸ್ತ ಸಾಹಿತ್ಯದ ಅಪರೂಪದ ಕೃತಿ.

‘ವೆಲ್ಲಂಕಣಿ ಮಾತೆ’ ಕಿರು ಹೊತ್ತಗೆ. ‘ಶ್ರೀ ದಾಂತಿ’ ಎಂಬ ಅಂಕಿತದಿಂದ ಇದನ್ನು ಬರೆದಿದ್ದಾರೆ. ತಮಿಳುನಾಡಿನ ನಾಗಪಟ್ಟಣದ ಹತ್ತಿರವಿರುವ ಈ ಕ್ಷೇತ್ರದಲ್ಲಿ ಆರೋಗ್ಯ ಮಾತೆ ಯಾಗಿ ಮರಿಯಮ್ಮ ಆರಾಧನೆಗೊಳ್ಳುತ್ತಿದ್ದಾಳೆ. ಕ್ಷೇತ್ರ ಪರಿಚಯವನ್ನು ನೀಡುವುದರ ಜೊತೆಗೆ ಹಾಲು ಮಾರುವ ಹುಡುಗ, ಮಜ್ಜಿಗೆ ನೀಡುವ ಹೆಳವ ಮತ್ತು ಮುಳುಗುತ್ತಿರುವ ಪೋರ್ಚುಗೀಸರ ಹಡಗಿನ ರಕ್ಷಣೆ – ಈ ಮೂರು ಮಹಿಮಾ ಕತೆಗಳಿವೆ. ಮುಖ್ಯವಾಗಿ ಆಸ್ತಿಕರಲ್ಲಿ ಭಕ್ತಿಯನ್ನು ಉತ್ತೇಜಿಸುವುದು ಇಲ್ಲಿಯ ಉದ್ದೇಶ. ವಿಷಯವನ್ನು ಅಚ್ಚುಕಟ್ಟಾಗಿ ನಿರೂಪಿಸಲಾಗಿದೆ. ಇಲ್ಲೂ ದಾಂತಿಯವರು ದೇಶಭಕ್ತಿ, ಸರ್ವಧರ್ಮ ಸಮಭಾವವನ್ನು ಎತ್ತಿ ಹಿಡಿದಿದ್ದಾರೆ.

“ಧಾರ್ಮಿಕ ತತ್ವಗಳಲ್ಲಿ ಆಚರಣೆ ಸಂಪ್ರದಾಯ ವಿದಿ-ವಿಧಾನಗಳಲ್ಲಿ ಭಾರತೀಯ ಧರ್ಮಕ್ಕೂ ಕ್ರೈಸ್ತ ಧರ್ಮಕ್ಕೂ ತುಂಬಾ ಸಾಮ್ಯತೆಯುಂಟು, ಅನ್ಯೋನ್ಯ ಸಂಬಂಧವುಂಟು” ಎಂದು ಹೇಳುವ ಅವರು “ವೆಲ್ಲಂಕಣಿ ಕ್ಷೇತ್ರ ಈ ಬಾಂಧವ್ಯಕ್ಕೆ, ಸತ್ಯಪ್ರೇಮ ಸೌಹಾರ್ದತೆಗಳ ಸಾಧನೆಗೆ ಒಂದು ಅಮೂಲ್ಯ ಸಾಧನ” ಎನ್ನುತ್ತಾರೆ. “ಇಲ್ಲಿ ಜರಗುತ್ತಿರುವ ಕೇಶಮುಂಡನ, ಕಿವಿ ಚುಚ್ಚುವುದು, ಶ್ರೀಗಂಧ ಕುಂಕುಮ ಲೇಪನ ಮುಂತಾದ ಭಾರತೀಯ ಧಾರ್ಮಿಕ ಆಚರಣೆಗಳು ಕ್ರಿಸ್ತ ಧಾರ್ಮಿಕ ಆಚರಣೆಗಳಲ್ಲಿನ ಭಾರತೀಕರಣಕ್ಕೆ, ಭಾರತೀಯ ಕ್ರೈಸ್ತ ಸಂಸ್ಕೃತಿಗೆ ಉತ್ತಮ ನಿದರ್ಶನಗಳು” ಎನ್ನುತ್ತಾರೆ. ಇಲ್ಲೂ ಮುಖ್ಯವಾಗಿ ಕಾಣುವುದು ದಾಂತಿಯವರ ಸರ್ವಧರ್ಮ ಸಮಭಾವ ದೃಷ್ಟಿಯೆ. ದೇಶಭಕ್ತಿ-ದೇವಭಕ್ತಿಗೂ ಅವರಿಲ್ಲಿ ಕಣ್ಣಾಗುತ್ತಾರೆ. ಅವರ ಹಾರೈಕೆಯಾದರೂ ಎಂಥದ್ದು? “ಭರತ ನಾಡನ್ನು… ಪ್ರೀತಿ, ಅಹಿಂಸೆ, ಸತ್ಯ – ಸೌಹಾರ್ದತೆಗಳಿಂದ ತುಂಬಿದ ಧರ್ಮಭೂಮಿಯನ್ನಾಗಿ ಮುನ್ನಡೆಸಲು ನೆರವನ್ನೀಯಲಿ” ಎಂಬುದೇ ಆಗಿದೆ.

‘ಕ್ರಿಸ್ತ ಗೀತಾಮೃತ’ 1982ರಲ್ಲಿ ದಾಂತಿಯವರು ಪ್ರಕಟಿಸಿದ ಪದ್ಯರೂಪದ ಇನ್ನೊಂದು ಕಿರು ಹೊತ್ತಗೆ. ಯೇಸುವಿನ ಉಪದೇಶಗಳ ಕೆಲವನ್ನು ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ. ನಾಲ್ಕು ನಾಲ್ಕು ಸಾಲುಗಳ ಮೂವತ್ತಮೂರು ಚರಣಗಳಿವೆ. ಒಂದನೇ ಮತ್ತು ಮೂರನೇ ಚರಣಗಳಲ್ಲಿ ಐದೈದು ಮಾತ್ರೆಗಳ ನಾಲ್ಕು ನಾಲ್ಕು ಗಣಗಳು ಎರಡನೇ ಮತ್ತು ನಾಲ್ಕನೇ ಸಾಲುಗಳಲ್ಲಿ ಮೂರು ಮೂರು ಗಣ ಹಾಗೂ ಮೂರು ಮಾತ್ರೆಗಳ ಒಂದೊಂದು ಗಣ ವಿನ್ಯಾಸವಿದೆ. ಅವರ ಉದ್ದೇಶದಂತೆ ಹಾಡುವುದಕ್ಕೆ ಅನುಕೂಲವಾಗಿದೆ. ಮೃದುವಾದ ಬಂಧದಲ್ಲಿ ಬೋಧನೆಯ ಸಾರ ಸುಲಲಿತವಾಗಿ ಮೂಡಿಬಂದಿದೆ. ನಿದರ್ಶನಕ್ಕೆ ಈ ಚರಣಗಳನ್ನು ಗಮನಿಸಬಹುದು :

ಒಂದು ಕೆನ್ನೆಗೆ ಹೊಡೆಯೆ ಮತ್ತೊಂದನೊಡ್ಡಿ ಕೊಡಿ
ಶಾಲನ್ನು ತೆಗೆವವಗೆ ಮೇಲಂಗಿ ಕೊಟ್ಟು ಬಿಡಿ
ಯಾಚಿಪರಿಗೆಲ್ಲ ಕೊಡಿ, ನಿಮ್ಮ ವಸ್ತುಗಳನ್ನು
ಒಯ್ದತನೊಡನೆ ಹಿಂದಕ್ಕೆ ಕೇಳದಿರಿ. (ಸಹನೆ-ದಾನಕ್ರಮ : ಪುಟ -9)

ಪ್ರೀತಿಸಿರಿ ನಿಮ್ಮ ನೆರೆಯವರನ್ನು; ದ್ವೇಷಿಸಿರಿ
ವೈರಿಗಳನೆಂಬ ನಿಯಮವನು ಕೇಳಿಹಿರಿ
ನಾ ಪೇಳ್ವೆ ನಿಮ್ಮ ವೈರಿಗಳನ್ನು ಪ್ರೀತಿಸಿರಿ (ವೈರಿಗಳ ಪ್ರೀತಿ : ಪುಟ -1)

ಯೇಸು ಮಹಾತ್ಮನ ಬೋಧನೆಯ ತಿರುಳನ್ನು ಅರಿಯುವವರಿಗೆ ತುಂಬಾ ಉಪಯುಕ್ತವಾಗಿದೆ  ಗೀತಾಮೃತ.

ಎಳೆಯರಿಗೆ ಹನಿಸಿದ ಸಾಹಿತ್ಯ ರಸ

ಮಕ್ಕಳ ಸಾಹಿತ್ಯ ರಚನೆಯಲ್ಲಿ ಫ್ರಾನ್ಸಿಸ್ ದಾಂತಿಯವರು ಎತ್ತಿದ ಕೈ. ಅವರ ಮಕ್ಕಳ ಸಾಹಿತ್ಯ ಹುರಿಗೊಂಡದ್ದು ಐವತ್ತು ಮತ್ತು ಅರವತ್ತರ ದಶಕದಲ್ಲಿ. ಆಗಿನ್ನೂ ಮಕ್ಕಳ ಸಾಹಿತ್ಯದ ಕೊರತೆಯಿತ್ತು. ಪಂಜೆ ಮಂಗೇಶರಾಯರು ಕಟ್ಟಿದ ‘ಬಾಲಸಾಹಿತ್ಯ ಮಂಡಳಿ’ ಮಕ್ಕಳ ಸಾಹಿತ್ಯದ ಬಗ್ಗೆ ಜಾಗ್ರತಿಯನ್ನುಂಟು ಮಾಡಿತ್ತು. ಪಠ್ಯಪುಸ್ತಕದ ಅಗತ್ಯಕ್ಕಾಗಿ ಪದ್ಯ, ಕತೆ, ಪರಿಚಯ, ವ್ಯಕ್ತಿ ಚಿತ್ರಣ – ಇತ್ಯಾದಿ ಬರೆಹಗಳು ಆವಾಗ ರಚನೆಗೊಳ್ಳುತ್ತಿದ್ದವು. ನಮ್ಮ ಹಿರಿಯ ಸಾಹಿತಿಗಳೂ ಇದರಲ್ಲಿ ಆಸಕ್ತರಾಗಿದ್ದರು. ಆದುದರಿಂದ ಕರ್ನಾಟಕದ ದಕ್ಷಿಣ ಕರಾವಳಿ ಮಕ್ಕಳ ಸಾಹಿತ್ಯ ರಚನೆಯಲ್ಲಿ ತನ್ನದೇ ಆದ ಒಂದು ಪ್ರತಿಷ್ಠೆಯನ್ನು ಹೊಂದಿತ್ತು. ಇದರಲ್ಲಿ ದಾಂತಿಯವರದ್ದು ಪರಿಶ್ರಮವಿತ್ತು. ಈ ಅವದಿಯಲ್ಲಿ ಅಧ್ಯಾಪಕರಾಗಿದ್ದ ಅವರು ಮಕ್ಕಳ ಸಾಹಿತ್ಯದ ಅಗತ್ಯವನ್ನು ಚೆನ್ನಾಗಿ ಮನಗಂಡಿದ್ದರು. ಮಕ್ಕಳಿಗಾಗಿ ಸಾಹಿತ್ಯ ರಚಿಸಿದರು ಮತ್ತು ಪ್ರಕಟಿಸಿದರು.

1952ರಲ್ಲಿ ‘ಸುಬೋದಿನಿ ಪುಸ್ತಕ’ ಮಾಲೆಯನ್ನು ಆರಂಬಿಸಿದರು. ಮೂರು ತಿಂಗಳಿಗೊಂದು ಪುಸ್ತಕದಂತೆ ವರ್ಷಕ್ಕೆ ನಾಲ್ಕು ಪುಸ್ತಕಗಳು ಈ ಮಾಲಿಕೆಯಲ್ಲಿ ಪ್ರಕಟ ವಾಗುತ್ತಿದ್ದವು. ಐದಾಣೆ ಆಗಿನ ಮಾನದಲ್ಲಿ ಪುಸ್ತಕದ ಬೆಲೆ. ವಾರ್ಷಿಕ ಚಂದಾ ಒಂದೂ ಕಾಲು ರೂಪಾಯಿ. ನಾಟಕ, ಜೀವನ ಚರಿತ್ರೆ, ಮಕ್ಕಳ ಪದ್ಯಗಳನ್ನು ಪ್ರಕಟಿಸಿ ಮಕ್ಕಳ ಮನಸ್ಸನ್ನು ಕಟ್ಟುವ ಕೆಲಸ ಮಾಡಿರುವರು.

ಈ ಪುಸ್ತಕ ಮಾಲೆಯ ಬಗ್ಗೆ ಅವರು ಹೇಳುತ್ತಾರೆ :ಕೇವಲ ಪಠ್ಯಪುಸ್ತಕವೊಂದರಿಂದಲೇ ಮಕ್ಕಳ ಭಾಷಾಬಿವೃದ್ಧಿಯಾಗದು. ಮೌನ ಓದು, ಲೈಬ್ರೇರಿ ವ ಪಾಠೇತರ ಓದುವಿಕೆಗಳೂ ಅಗತ್ಯ. ಸುಬೋದಿನೀ ಪುಸ್ತಕಗಳು ಲೈಬ್ರೇರಿಯಲ್ಲಿ ಸಂಗ್ರಹಿಸಲು ಅನುಕೂಲವಾಗುವಂತೆ ಪುಸ್ತಕ ರೂಪದಲ್ಲಿಯೂ, ಉಪಪಠ್ಯವಾಗಿ ಉಪಯೋಗಿಸಲು ಆಗುವಂತೆ ಕಡಿಮೆ ಕ್ರಯ ದಲ್ಲಿಯೂ, ಮೌನ ಓದಿಗೆ ಉಪಯೋಗಿಸಲು ಬರುವಂತೆ ವೇಗ ನಿರ್ಣಯ ಮಾಡಲು ಪಂಗ್ತಿ ಸಂಖ್ಯೆಗಳಿಂದಲೂ ಕೂಡಿವೆ (ಕಾಳಿದಾಸ, ನವಂಬರ, 1952: ‘ವಿಜ್ಞಾಪನೆ’ಯಲ್ಲಿ). ಪುಸ್ತಕದ ಉಪಯುಕ್ತತೆಯ ಬಗ್ಗೆ ಹೇಳಿದ ಅವರು ‘‘ಪುಸ್ತಕ ಪ್ರಕಟಣೆ ಯಂತಹ ಒಳ್ಳೆಯ ಕಾರ್ಯಕ್ಕೆ ಸಹಾಯಮಾಡುವ ಉದಾರಿಗಳು… ಸಾಧ್ಯವಿದ್ದಷ್ಟು ತೆತ್ತು ಪ್ರೋತ್ಸಾಹಿಸಬಹುದು. ಏನಿಲ್ಲೆಂದರೂ ತಮ್ಮ ಮಕ್ಕಳಿಗಾಗಿ, ಶಾಲೆಗಾಗಿ ರೂ. 1-4-0ನ್ನು ವೆಚ್ಚ ಮಾಡುವುದು ಕಷ್ಟಸಾಧ್ಯವಲ್ಲ. ಮನಸ್ಸಿದ್ದರೆ ಮಾರ್ಗವುಂಟು” ಎಂದು ಅಂದಿದ್ದಾರೆ. ಓದುವಿಕೆಯಿಂದ ಮಕ್ಕಳು ಬೆಳೆಯಬೇಕು, ಅದನ್ನು ಪಾಲಕರು ಪ್ರೋತ್ಸಾಹಿಸಬೇಕು – ಇದು ದಾಂತಿಯವರ ಒತ್ತಾಸೆ. ಈ ಪುಸ್ತಕ ಮಾಲೆಯ ಪ್ರಯೋಜನವನ್ನು ನಮ್ಮ ಮಕ್ಕಳು ಪಡೆಯಬೇಕು – ಅವರ ಕಳಕಳಿ ಇದು.

ಓದುಗರ ಪ್ರೋತ್ಸಾಹವಿಲ್ಲದೆ ಇಂಥ ಪುಸ್ತಕ ಮಾಲೆಯನ್ನು ಬೆಳೆಸುವುದು ಕಷ್ಟ. ಬರೇ ಬಾಯಿಮಾತಿನ ಪ್ರೋತ್ಸಾಹ ಪ್ರಯೋಜನವಿಲ್ಲ. ಪುಸ್ತಕ ಖರೀದಿಸಿ ಬೆಂಬಲಿಸಬೇಕು. ಪುಸ್ತಕ ಪ್ರಕಟಿಸಿ ಸಾಕಷ್ಟು ತೊಂದರೆ ಅನುಭವಿಸಿದ ದಾಂತಿಯವರು ಓದುಗರಲ್ಲಿ, ಸಾಹಿತ್ಯಾಸಕ್ತರಲ್ಲಿ ಮಾಡಿಕೊಳ್ಳುವ ಸವಿನಯ ವಿಜ್ಞಾಪನೆ : ‘‘ಸಹಾಯವು ಚಂದಾ ಇರಲಿ, ಸಹಾಯ ಧನ ವಿರಲಿ ಅದು ಎಷ್ಟೇ ಇರಲಿ – ಮನಿ ಆರ್ಡರ್ ಮೂಲಕ ಕಳುಹಿಸಿದರೆ ಅದೇ ಮಹದುಪಕಾರ. ಹಾಗಿಲ್ಲವಾದರೆ ನಾಲ್ಕು ಪುಸ್ತಕಗಳಾದೊಡನೆ ವಿ.ಪಿ. ಮಾಡಬೇಕಾಗುತ್ತದೆ. ಅದನ್ನು ಸ್ವೀಕರಿಸಿ ಪ್ರೋತ್ಸಾಹಿಸಬೇಕೆಂಬುದೇ ನಮ್ಮ ಪ್ರಾರ್ಥನೆ” ಎನ್ನುತ್ತಾ : ‘‘ವಿ.ಪಿ.ಯನ್ನು ನಿರಾಕರಿಸಿ ಹಿಂದಕ್ಕೆ ಕಳುಹಿಸುವಷ್ಟು ಕನ್ನಡದ ಮಕ್ಕಳ ಶಿಕ್ಷಕರು, ಶಿಕ್ಷಣ ಪ್ರೇಮಿಗಳು ಅಭಿಮಾನ ರಹಿತರಲ್ಲವೆಂಬುದು ನಮ್ಮ ದೃಢವಿಶ್ವಾಸ” ಎಂಬುದಾಗಿ ವಿಶ್ವಾಸದಿಂದ ವಿನಂತಿಸಿ ಕೊಂಡಿದ್ದಾರೆ. ಈ ವಿಶ್ವಾಸಕ್ಕೆ ಎಷ್ಟುಮಂದಿ ಪಾತ್ರರಾದರೊ ಗೊತ್ತಿಲ್ಲ. ಇಷ್ಟೆಲ್ಲ ಮಾಡುವುದು ಯಾರಿಗಾಗಿ? ಅದೇ ವಿಜ್ಞಾಪನೆಯಲ್ಲಿ ಕೊನೆಯದಾಗಿ ಹೇಳುತ್ತಾರೆ : ಕನ್ನಡದ ನುಡಿ ತಾಯ ಶಿಶುಸಾಹಿತ್ಯ ಕಂದನು ಇತರ ಹೆಸರಾಂತ ನುಡಿವೆಣ್ಣುಗಳ ಮಕ್ಕಳ ಓರಗೆಯವನಾಗಿ ಮೆರೆಯುವಷ್ಟು ಹೃಷ್ಟ-ಪುಷ್ಟನಾಗಿ ಬೆಳೆಯಲು, ಕನ್ನಡ ಕಂದರು ಸಾಹಿತ್ಯ ಹಾಲನ್ನುಣ್ಣಲು ಕನ್ನಡಾಬಿಮಾನಿಗಳು ಸಹಕರಿಸುವರೆಂಬುದು ನಮ್ಮ ನೆಡನಂಬುಗೆ.

– ಕನ್ನಡ, ಕನ್ನಡದ ಮಕ್ಕಳು ಬೆಳೆಯಬೇಕು. ಸತ್ವಶಾಲಿಗಳಾಗಬೇಕು, ಶಕ್ತಿಯುತ ರಾಗಬೇಕು, ಸ್ವಾಬಿಮಾನಿಗಳಾಗಬೇಕು, ಓರಗೆಯವರೊಂದಿಗೆ ಯಾವುದಕ್ಕೂ ಕಡಿಮೆಯಿಲ್ಲ ದಂತೆ ತಲೆಯೆತ್ತಿ ನಡೆಯಬೇಕು, ಕನ್ನಡ ತಾಯಿಯ ಕೀರ್ತಿ ಕಲಶವಾಗಬೇಕು – ದಾಂತಿ ಯವರಲ್ಲಿ ಈ ಭಾವ ಸಮ್ಮಿಳಿತಗೊಂಡುದರ ಪರಿಣಾಮವೇ ‘ಸುಬೋದಿನೀ ಪುಸ್ತಕ ಮಾಲೆ’ ಅಸ್ತಿತ್ವಕ್ಕೆ ಬಂದಿತು. ಕನ್ನಡದ ಮಕ್ಕಳಿಗೆ ಬೆಳಕನ್ನು ಇತ್ತಿತು.

ಮಕ್ಕಳಿಗೆ ಉದ್ಬೋಧಕವಾದ ಪುಸ್ತಕಗಳನ್ನು ಬರೆದು ಅವರು ಈ ಮಾಲೆಯಲ್ಲಿ ಪ್ರಕಟಿಸಿದ್ದಾರೆ. ರಾಷ್ಟ್ರೀಯ ನಾಯಕರ, ಪುರಾಣ ಪುರುಷರ, ಜಗದ್ವಿಖ್ಯಾತ ಸಾಹಿತಿಗಳ ಜೀವನ ಚರಿತ್ರೆಗಳು ಇಲ್ಲಿ ಬಂದಿವೆ. ಜವಾಹರಲಾಲ ನೆಹರು, ಮಹಾತ್ಮ ಗಾಂದಿ, ಸುಭಾಸ್ ಚಂದ್ರ ಬೋಸ್, ಗೋಪಾಲಕೃಷ್ಣ ಗೋಖಲೆ, ಷೇಕ್ಸ್‌ಪಿಯರ್, ಕಾಳಿದಾಸ – ಇತ್ಯಾದಿ ಜೀವನ ಚರಿತ್ರೆಗಳೆಲ್ಲ ಈ ಮಾಲೆಯಲ್ಲಿ ಮೂಡಿಬಂದಿವೆ. ಶೈಕ್ಷಣಿಕ ಉದ್ದೇಶಕ್ಕಾಗಿ ಬರೆದ ಈ ಹೊತ್ತಗೆಗಳು ಮಕ್ಕಳಲ್ಲಿ ದೇಶಪ್ರೇಮ, ಮಾನವಪ್ರೇಮ, ಜಾತ್ಯತೀತ ಭಾವ, ಕರ್ತವ್ಯ ನಿಷ್ಠೆ, ಮಾನವ ಸಂಬಂಧ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿ, ಸತತ ಪ್ರಯತ್ನ, ಪ್ರಾಮಾಣಿಕತೆ – ಇಂಥ ಮೌಲ್ಯಗಳು, ಆದರ್ಶಗಳು ಒಡಮೂಡುವಂತೆ ಪ್ರೇರೇಪಿಸುತ್ತವೆ. ಅವರಲ್ಲಿ ವೈಚಾರಿಕತೆ ಭಾವನಾತ್ಮಕ ಬೆಳವಣಿಗೆ ವೃದ್ಧಿಗೊಳ್ಳಲು ಸಹಕಾರಿ. ಮಕ್ಕಳಿಗೆ ಅಳವಡುವ ವಸ್ತುಗಳ ಕಡೆಗೆ ನಿರೂಪಣೆ ಕೇಂದ್ರೀಕೃತವಾಗಿದೆ. ಸಣ್ಣ ಸಣ್ಣ ವಾಕ್ಯಗಳು; ಮಕ್ಕಳು ಗ್ರಹಿಸಬಲ್ಲ ಸರಳ ಪದಗಳು, ಬೆಡಗಿನ ನುಡಿಗಳು, ಮಧ್ಯಮ ಗಾತ್ರದ ಅಕ್ಷರ-ಸಾಲು ವಿನ್ಯಾಸ – ಇವೆಲ್ಲ ಮಕ್ಕಳ ಪುಸ್ತಕಗಳು ಹೇಗಿರಬೇಕು ಎಂಬುವುದನ್ನು ಇಲ್ಲಿ ಒತ್ತಿ ಹೇಳುತ್ತವೆ. ಮಕ್ಕಳ ಸಾಹಿತ್ಯದ ಕುರಿತು ದಾಂತಿಯವರು ಮನೋವೈಜ್ಞಾನಿಕವಾಗಿಯೇ  ಸಾಕಷ್ಟು ಅಧ್ಯಯನ ಮಾಡಿರುವುದು ಇಲ್ಲಿ ಕಂಡುಬರುತ್ತದೆ. ಮಕ್ಕಳು ಕನ್ನಡ ಭಾಷೆಯನ್ನು ಚೆನ್ನಾಗಿ ಅರಿತಿರಬೇಕು ಮತ್ತು ಕನ್ನಡ ಭಾಷೆಯಲ್ಲಿ ವಿಷಯ ಜ್ಞಾನವನ್ನು ಪಡೆಯುವಂತಾಗಬೇಕು, ಕನ್ನಡದ ಬಗ್ಗೆ ಪ್ರೀತಿಯನ್ನು ಹೊಂದಿರಬೇಕು ಎಂಬ ಕಳಕಳಿ ಅವರಿಗಿದ್ದುದು ಇಲ್ಲಿ ವ್ಯಕ್ತವಾಗುತ್ತದೆ.

ಮಕ್ಕಳ ನಾಟಕ ಪ್ರಸಿದ್ಧಿ

ರಂಗಭೂಮಿ ಪರಿಣಾಮಕಾರಿ ಮಾಧ್ಯಮ. ಮಕ್ಕಳು ಶಾಲೆಯಲ್ಲಿ ಆ ಸಂಸ್ಕಾರ ದಿಂದಲು ಪರಿಪುಷ್ಟಿಗೊಳ್ಳಬೇಕು. ಮಕ್ಕಳ ಭಾವನಾತ್ಮಕ ಮತ್ತು ಬೌದ್ಧಿಕ ಬೆಳವಣಿಗೆಗೆ ಸಾಂಘಿಕ ದೃಢತೆಗೆ ನಾಟಕ ಅನುಕೂಲ ಕ್ಷೇತ್ರ. ಅಷ್ಟೇ ಅಲ್ಲ, ಅದು ಕಲಾ ಸಮುಚ್ಚಯ ಕ್ಷೇತ್ರ. ನಟನೆ, ಸಂಗೀತ, ಸಾಹಿತ್ಯ, ಚಿತ್ರ – ಇವೆಲ್ಲ ನಾಟಕದೊಳಗೆ ಅಡಕವಾಗಿದ್ದು ಮಕ್ಕಳಲ್ಲಿ ಸೌಂದರ್ಯ ಪ್ರಜ್ಞೆಯನ್ನು ವಿಕಾಸಗೊಳಿಸುವ ಅದ್ಭುತ ಶಕ್ತಿಯನ್ನು ಅದು ಹೊಂದಿದೆ ಎಂಬ ಅರಿವು ದಾಂತಿಯವರಲ್ಲಿತ್ತು. ಆದುದರಿಂದ ಮಕ್ಕಳ ನಾಟಕದ ಕಡೆಗೆ ಹೆಚ್ಚಿನ ಒಲವನ್ನು ತೋರಿದರು; ಈ ಕ್ಷೇತ್ರದಲ್ಲಿ ಹೆಚ್ಚಿನ ಕೃಷಿ ಮಾಡಿದರು. ಮಕ್ಕಳ ಸಾಹಿತ್ಯದ ಇತರ ಪ್ರಕಾರಗಳಿಗಿಂತ ನಾಟಕ ಪ್ರಕಾರ ಅಧ್ಯಾಪಕರಿಂದ ಹೆಚ್ಚಿನ ಶ್ರಮವನ್ನು ಬಯಸುತ್ತಿತ್ತು. ಮುಖ್ಯವಾಗಿ ಮಕ್ಕಳು ಪ್ರದರ್ಶಿಸ ಬಲ್ಲ ನಾಟಕಗಳ ಕೊರತೆ ಇತ್ತು. ಆ ಕೊರತೆಯನ್ನು ನೀಗುವುದರಲ್ಲಿ ದಾಂತಿಯವರು ಪಟ್ಟ ಶ್ರಮ ಅಮೋಘವೆ. ಸ್ವತಃ ನಾಟಕಗಳನ್ನು ರಚಿಸಿ, ನಿರ್ದೇಶಿಸಿ ಪ್ರದರ್ಶಿಸಿ ಆ ಪ್ರಕಾರಕ್ಕೆ ಶಕ್ತಿ ತುಂಬಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಅಲೆವೂರಿನ ಸುಬೋದಿನೀ ಶಾಲೆಂಯೆಂದರೆ ನಾಟಕಕ್ಕೆ ಪ್ರಸಿದ್ಧಿ ಎಂದೇ ಜನ ಆವಾಗ ಅಂದುಕೊಳ್ಳುತ್ತಿದ್ದರು. ದಾಂತಿಯವರು ತಮ್ಮ ಮಕ್ಕಳಿಂದ ಆಡಿಸುವ ನಾಟಕವೆಂದರೆ ಊರಜನಕ್ಕೆ ರಸದೌತಣ. ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಅವರಿಗೆ ಸರಿದೂಗುವ ಪಾತ್ರಗಳನ್ನು ಕೊಟ್ಟು, ಅಬಿನಯ ಕಲಿಸಿ ಆ ಪಾತ್ರಕ್ಕೆ ಅವರನ್ನು ಸಿದ್ಧಪಡಿಸುವ ಅವರ ಕೌಶಲ ಅವರಿಗೇ ಸಾಟಿಯಾದುದು. ನಾಟಕ ರಚನೆಯಿಂದ ತೊಡಗಿ, ಅದರ ಪಾತ್ರ ಹಂಚಿಕೆ, ಅಬಿನಯ ನಿರ್ದೇಶನ, ರಂಗಸಜ್ಜಿಕೆ ತಯಾರಿ, ಸಂಗೀತ – ರಾಗ ಸಂಯೋಜನೆ, ಪಾತ್ರಗಳ ವೇಷ-ಭೂಷಣ, ಬಣ್ಣಗಾರಿಕೆ, ದೀಪ ವ್ಯವಸ್ಥೆ, ಧ್ವನಿವರ್ಧಕ – ಒಟ್ಟಿನಲ್ಲಿ ನಾಟಕದ ಸರ್ವಾಂಗ ಸಿದ್ಧತೆ – ಎಲ್ಲ ಅವರ ಆಸಕ್ತಿಯಾಗಿತ್ತು. ಅವರು ಬರೆದ ನಾಟಕ ಅವರ ಶಾಲೆಗೆ ಮಾತ್ರವಲ್ಲ ಅದೆಷ್ಟೋ ಶಾಲೆಗಳಲ್ಲಿ ಪ್ರದರ್ಶನ ಕಂಡಿವೆ. ಹಸ್ತ ಪ್ರತಿರೂಪದಲ್ಲಿದ್ದ ಕೆಲವು ನಾಟಕಗಳು ಈಗ ಕೈತಪ್ಪಿ ಹೋಗಿವೆ. ತಮ್ಮ ಸುಬೋದಿನಿ ಪುಸ್ತಕ ಮಾಲೆಯಲ್ಲಿ ಕೆಲವು ನಾಟಕಗಳನ್ನು ಪ್ರಕಟಸಿರುವರು.

ಕವಿವರ ಕಾಳಿದಾಸ, ವೀರಬಾದಳ, ತ್ಯಾಗಮಯಿ ಪನ್ನಾದಾಸಿ, ಲವಕುಶ, ಸತ್ಯ ಹರಿಶ್ಚಂದ್ರ, ಮುತ್ತಿನ ನತ್ತು (ಭಕ್ತ ಪುರಂದರದಾಸರು) ಸತ್ಯವಾನ್ ಸಾವಿತ್ರಿ, ಸಿಪಾಯಿ ದಂಗೆ, ಟಿಪ್ಪುಸುಲ್ತಾನ್, ಸಂತ ಲಾರೆನ್ಸರು, ಮಡ್ಡಮ್ಮ ಮರ್ಜಿ – ಇತ್ಯಾದಿ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ನಾಟಕಗಳು ಅತ್ಯಂತ ಜನಪ್ರಿಯವಾಗಿದ್ದವು. ಪುನರುತ್ಥಾನ, ಕ್ರಿಸ್ತ ಜಯಂತಿ – ಯೇಸುವನ್ನು ಕುರಿತ ಈ ನಾಟಕಗಳು ಅಂದಿನ ಕಾಲದ ಸಾಮಾಜಿಕ ಪರಿಸ್ಥಿತಿಯನ್ನು ಅಳುವ ಕ್ರೌರ್ಯವನ್ನೂ, ಶೋಷಣೆಗೆ ಒಳಗಾಗಿ ಕಷ್ಟ-ನೋವು ಅನುಭವಿಸುವ ಸಾಮಾನ್ಯ ಜನರ ಮೌನ ರೋದನವನ್ನು ತೆರೆದಿಡುತ್ತವೆ. ದಾಂತಿಯವರ ಸಂಭಾಷಣಾ ಕೌಶಲವನ್ನು ತಿಳಿಯಲು ‘ಕ್ರಿಸ್ತ ಜಯಂತಿ’ ನಾಟಕದ ಈ ಭಾಗವನ್ನು ನೋಡಬಹುದು : (ಡಂಗುರದವ ಮತ್ತು ಕುರುಬರ ನಡುವಿನ ಸಂಭಾಷಣೆ)

ಡಂಗುರದವ : ಹೇ, ಕುರುಬ ಕತ್ತೆಗಳೇ.

ಇಮ್ಮೋರ : ಅದು ಗೊತ್ತಿದ್ದದ್ದೇ ಸ್ವಾಮಿ. ನಾವು ಗುಲಾಮರು, ಕುರುಬರು. ಅದಿರಲಿ, ಇದೇನು ಡಂಗುರ ಈಗ?

ಡಂಗುರದವ : ಇದು ಊರಿನ ಕುರಿಗಳ ಲೆಕ್ಕವನ್ನೆಲ್ಲ ನೀವು ಒಪ್ಪಿಸಬೇಕೆಂಬ ಅಪ್ಪಣೆ. ಬನ್ನಿ, ನಿಮ್ಮ ಕುರಿಗಳ ಲೆಕ್ಕ ಕೊಡಿ.

ಅಬ್ನೇರಾ : ಅಲ್ಲಾ, ಈ ಡಂಗುರ ಹೊಡೀವಾಗ ಜನರೆಲ್ಲಾ ಜನರ ಲೆಕ್ಕ ಕೊಡಬೇಕಂತ ಕೇಳಿದ ಹಾಗಾಯಿತು. ನಿಜ ಹೇಳಿ, ಯಾರ ಲೆಕ್ಕ ಒಪ್ಪಿಸಬೇಕು? ಕುರಿಗಳದೆ? ಮಾನವರದೆ?

ಇಮ್ಮೋರ : ಇವರಿಗೆ ಕುರಿಗಳೂ ಒಂದೇ, ಮನುಷ್ಯರೂ ಒಂದೇ.

ಡಂಗುರದವ : ನೋಡಿ, ಜನರ ಲೆಕ್ಕ ಚಕ್ರವರ್ತಿಗಳಿಗೆ; ಕುರಿಗಳ ಲೆಕ್ಕ ನಮಗೆ.

ಅಬ್ನೇರ : ಲೆಕ್ಕ ತೆಗೆದು?

ಇಮ್ಮೋರ : ಜನರ ಲೆಕ್ಕ ತೆಗೆದು ಗಟ್ಟಿಮುಟ್ಟಾದ ಜನ ಒಳ್ಳೆಯ ಜನ – ಇವರೆಲ್ಲ ಚಕ್ರವರ್ತಿಗೆ; ಕುರಿಗಳ ಲೆಕ್ಕ ತೆಗೆದು ಒಳ್ಳೆಯ ಪುಷ್ಟಿ ಆಡು – ಇವೆಲ್ಲ ಇವರಿಗೆ.

– ಇಲ್ಲಿ ಅಬ್ನೇರಾ ಮತ್ತು ಇಮ್ಮೋರಾ – ಇಬ್ಬರೂ ಕುರುಬರು. ಆದರೆ ಇವರು ದಡ್ಡರಲ್ಲ. ನಿಸ್ಸಹಾಯಕರು. ಅಧಿಕಾರಿ ವರ್ಗ ಮಾಡುವ ಶೋಷಣೆ, ಮೋಸ – ಇವೆಲ್ಲ ಗೊತ್ತು. ಅದಕ್ಕಾಗಿಯೇ  ಡಂಗುರದವನನ್ನು ಪ್ರಶ್ನಿಸುತ್ತಾರೆ. ಅಂದರೆ ದಾಂತಿಯವರು ಆ ಪಾತ್ರಗಳಲ್ಲಿ ಆ ಶಕ್ತಿ ತುಂಬಿದ್ದಾರೆ. ಇದೂ ಕೂಡ ಜನರನ್ನು ವಂಚಿಸುವ ಆಡಳಿತಾರೂಢರಿಗೆ ಅವರು ತೋರಿದ ಪ್ರತಿಕ್ರಿಯೆಯೇ  ಆಗಿದೆ. ಅನ್ಯಾಯವನ್ನು ಪ್ರಶ್ನಿಸದಿರುವುದೂ ಅನ್ಯಾಯವೆ – ಇದು ಇಲ್ಲಿಯ ತಿಳಿವು.

ಐತಿಹಾಸಿಕ ಕತೆಯುಳ್ಳ ‘ವೀರ ಬಾದಳ’ ನಾಟಕ ಅನ್ಯಾಯವನ್ನು ವಿರೋದಿಸಬೇಕು; ನ್ಯಾಯವನ್ನು ಪ್ರೀತಿಸಬೇಕು ಎಂಬ ಮೌಲ್ಯವನ್ನೇ ಪ್ರತಿಪಾದಿಸುತ್ತದೆ. ಈ ನಾಟಕದ ಕುರಿತು ಅಂದಿನ ಬಳ್ಳಾರಿಯ ಜಿಲ್ಲಾ ವಿದ್ಯಾದಿಕಾರಿ ಕೆ. ವಿಟ್ಠಲ ಶೆಣೈಯವರು ತಮ್ಮ ಮುನ್ನುಡಿಯಲ್ಲಿ ಹೀಗೆ ಬರೆಯುತ್ತಾರೆ :

“ಭಾರತದ ಇತಿಹಾಸದಲ್ಲಿ ಚಿತ್ತೂರಿನ ಪದ್ಮಿನಿಯ ಕತೆ ಎಲ್ಲರಿಗೂ ಪರಿಚಿತವಾದುದೇ ಎನ್ನಬೇಕು. ಈ ಕತೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ರಂಗಭೂಮಿಗೆ ಹೊಂದಿಕೆಯಾಗುವಂತೆ ರಚಿಸಿದ ಒಂದು ಏಕಾಂಕ ನಾಟಕವಿದು. ಇಲ್ಲಿಯ ಸನ್ನಿವೇಶವಾಗಲಿ, ಸಂಭಾಷಣೆಯಾಗಲಿ ಕಿರಿಯರ ಅಬಿನಯಕ್ಕೆ ಯೋಗ್ಯವಾಗಿದೆಯೆಂಬುದರಲ್ಲಿ ಕೊಂಚವೂ ಸಂದೇಹವಿಲ್ಲ” ಎಂದಿದ್ದಾರೆ. ಶೆಣೈಯವರ ಈ ಮಾತನ್ನು ದಾಂತಿಯವರ ಎಲ್ಲ ನಾಟಕಗಳಿಗೂ ಅನ್ವಯಿಸಬಹುದು.

ಇದರಲ್ಲಿ ಪದ್ಮಿನಿಯ ಪತಿ ಪ್ರೇಮ, ಬಾದಳನ ಶೂರತನ, ರಾಮ್ದಿವಾನನ ರಾಜ್ಯಾಬಿಲಾಷೆ, ಅಲ್ಲಾವುದ್ದೀನನ ಕಾಮುಕತೆ – “ಇವೆಲ್ಲ ಚುಟುಕಿನಲ್ಲಿಯಾದರೂ ಮಾರ್ಮಿಕವಾಗಿ ಚಿತ್ರಿಸಲ್ಪಟ್ಟಿವೆ….. ವೀರ ರಸದೊಂದಿಗೆ ಅಲ್ಲಲ್ಲಿ ಹಾಸ್ಯರಸವೂ ಬೆರೆತು ಬಂದಿರುವುದು ಈ ನಾಟಕದ ಒಂದು ವೈಶಿಷ್ಟ ್ಯ” ಎಂದಿರುವುದು ನಾಟಕದ ಗುಣಮಟ್ಟವನ್ನು ಕುರಿತು ಆಡಿದ ತೂಕದ ಮಾತೇ ಆಗಿದೆ.

ಈ ಕಥಾವಸ್ತುವನ್ನು ಆರಿಸಿಕೊಂಡುದರ ಬಗ್ಗೆ ದಾಂತಿಯವರು ಕೊಡುವ ಅಬಿಪ್ರಾಯ ಇದು : “ನ್ಯಾಯಕ್ಕಾಗಿ ಹೋರಾಡಬೇಕು ಎಂಬ ಸದ್ಬುದ್ಧಿಯಿಂದಲೇ ನಾವು ಸ್ವಾತಂತ್ರ್ಯವನ್ನು ಪಡೆದೆವು. ಸಿಕ್ಕಿದ ಸ್ವಾತಂತ್ರ್ಯವನ್ನು ದಕ್ಕಿಸಿಕೊಳ್ಳಲಿಕ್ಕೂ ಅಂತಹ ಅನ್ಯಾಯ ದೆದುರು ಹೋರಾಡುವ ಬುದ್ಧಿಯೇ  ಬೇಕು. ಮತ್ತಿದು ನಮ್ಮ ಕಿರಿಯರಲ್ಲಿಯೂ ಬೆಳೆಯಬೇಕು. ಈ ಉದ್ದೇಶದಿಂದ ಮತ್ತು ಮಕ್ಕಳು ತಮ್ಮಂತಹ ಮಕ್ಕಳ ಸಾಹಸಕೃತ್ಯಗಳನ್ನು ಮೆಚ್ಚುತ್ತಾರೆಂಬ ಕಾರಣದಿಂದ ಈ ವೀರಬಾದಳ ಕಥಾವಸ್ತುವನ್ನು ಆರಿಸಿಕೊಂಡಿದ್ದೇವೆ.” (ವೀರಬಾದಳ : ನಿವೇದನೆ)

ದಾಂತಿಯವರ ಈ ನುಡಿಗಳು ಅವರ ಇತರ ನಾಟಕಗಳಿಗೂ ಅನ್ವಯಿಸುತ್ತವೆ. ಅವರು ಯಾವ ವಸ್ತುವನ್ನೇ ಆಯ್ದುಕೊಳ್ಳಲಿ ಆ ಮೂಲಕ ಎಳೆಯರಿಗೆ ಒಂದು ಉದಾತ್ತ ಮೌಲ್ಯವನ್ನು ತೋರಿಸುವುದೇ ಅಲ್ಲಿ ಉದ್ದೇಶವಾಗಿರುತ್ತದೆ. ಉತ್ತಮ ಮೌಲ್ಯಗಳನ್ನು ಬಾಲ್ಯದಲ್ಲೇ ಅರಿವು ಮಾಡಿಕೊಡದಿದ್ದರೆ ಮಕ್ಕಳು ಮುಂದೆ ಸತ್ಪ್ರಜೆಯಾಗಲಾರರು ಎಂಬುದು ದಾಂತಿಯವರು ಕಂಡ ಸತ್ಯ.

ವೀರ ರಸದಲ್ಲಿ ಮೂಡಿಬರುವ ಅವರ ಸಂಭಾಷಣೆಯ ಓಜಸ್ವಿಗೆ ಈ ಮಾತುಗಳನ್ನು ನಿದರ್ಶಿಸಬಹುದು:

ಬೀಮಸಿಂಹ : ಬಾಲಕ ಎಂತಹ ಮಾತುಗಳನ್ನಾಡುತ್ತಿರುವೆ? ಎಳೆಯನಾದ ನೀನು ಯುದ್ಧಕ್ಕೆ ತೆರಳುವುದೆಂದರೆ ಚಿತ್ತೂರಿನ ಧವಳ ಕೀರ್ತಿಗೆ ಕಲಂಕವಲ್ಲವೆ?

ಪದ್ಮಿನಿ : ತಮ್ಮ, ಅಬಲೆಯರಿಗೂ ಬಾಲರಿಗೂ?…

ಬಾದಳ : ಏನು ಬಾಲನೆ? ನಾನು ಎಳೆಯನಾದ ಮಾತ್ರಕ್ಕೆ ನನ್ನೀ ಖಡ್ಗಕ್ಕೆ ಎಳೆತನ ವಿಲ್ಲ. ಹೊರಗೆ ರಣಕಣದಲ್ಲಿ ಅಸಂಖ್ಯಾತ ರಜಪೂತರ ಪ್ರಾಣ ಹರಣವಾಗುತ್ತಿರುವಾಗ, ಕಾಲುವೆಯಂತೆ ಹರಿವ ನೆತ್ತರಲ್ಲಿ ರಜಪೂತ ರಮಣಿಯರ ಮಂಗಲಸೂತ್ರವು ಕೊಚ್ಚಿ ಹೋಗುತ್ತಿರುವಾಗ ಚಿತ್ತೂರಿನ ಪದ್ಮಿನಿಯ ತಮ್ಮ ಬಾದಳನು ರಾಜಾಂಗಣದಲ್ಲಿ ಚೆಂಡಾಟ ವಾಡುತ್ತಿರಬೇಕೆ? ಆಗದು. ನನ್ನಿಂದ ನಿಲ್ಲಲಾಗದು (ಓಡುವನು) (ವೀರಬಾದಳ : ಪುಟ : 6-7)

– ಹೀಗೆ ಅಬಿಮನ್ಯು, ಬಭ್ರುವಾಹನಾದಿಗಳನ್ನು ನೆನಪಿಗೆ ತರುವ ಬಾದಳ ಶೌರ್ಯ-ಸಾಹಸ ಸ್ವಾಬಿಮಾನದ ಪ್ರತಿರೂಪವಾಗಿ ಕಂಗೊಳಿಸುತ್ತಾನೆ. ನಮ್ಮ ಮಕ್ಕಳ ಪ್ರೀತಿಯ ಒಡನಾಡಿಯಾಗುತ್ತಾನೆ.

“ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರು ನಾಟಕಗಳನ್ನು ಬರೆದು ಆಡಿಸುತ್ತಿದ್ದರು. ಅವುಗಳಲ್ಲಿ – ‘ಮುತ್ತಿನ ನತ್ತು’ (ಭಕ್ತ ಪುರಂದರದಾಸ) ಎಂಬ ರೂಪಕ ಎಲ್ಲ ದೃಷ್ಟಿಯಿಂದಲೂ ಉತ್ತಮವಾಗಿತ್ತು. ಭಾಷಾಶೈಲಿ, ನಾಟಕೀಯ ಸನ್ನಿವೇಶಗಳು, ರಂಗಾಬಿನಯ – ದೃಷ್ಟಿಯಿಂದ ಉತ್ತಮವಾಗಿದ್ದ ಈ ನಾಟಕ ತುಂಬ ಜನಮನ್ನಣೆ ಗಳಿಸಿತ್ತು. ಜಿಪುಣಾಗ್ರೇಸರ ಶ್ರೀಮಂತನಾಗಿದ್ದ ಶ್ರೀನಿವಾಸ ನಾಯಕನನ್ನು ತಂಬೂರಿ ದಾಸಯ್ಯನಾಗಿ ಪರಿವರ್ತಿಸಿದ ಮುತ್ತಿನ ನತ್ತಿನ ಕತೆಯಾಗಿತ್ತದು.”

– ಇದು ‘ಮುತ್ತಿನ ನತ್ತು’ ನಾಟಕದ ಕುರಿತು ಪಾಂಗಳ ವಿಟ್ಠಲ ಶೆಣೈಯವರು ಹೇಳಿಕೊಂಡ, ತಾವನುಭವಿಸಿದ ಅನುಭವದ ನುಡಿ.

ಒಟ್ಟಿನಲ್ಲಿ ಮಕ್ಕಳ ನಾಟಕ ಕ್ಷೇತ್ರದಲ್ಲಿ ಫ್ರಾನ್ಸಿಸ್ ದಾಂತಿಯವರದ್ದು ವಿಶಿಷ್ಟ ಸಾಧನೆ. ಸಾಮಾನ್ಯವಾಗಿ ಕ್ರೈಸ್ತ ಬಂಧುಗಳಿಗೆ ಭಾರತೀಯ ಪುರಾಣ ಕತೆಗಳು ದೂರ. ಆದರೆ ದಾಂತಿ ಯವರು ಅದಕ್ಕೆ ಹೊರತಾಗಿದ್ದರು. ಅವರಿಗೆ ಬೈಬಲಿನಷ್ಟೇ ಆಳವಾದ ಅಧ್ಯಯನ ಭಾರತೀಯ ಪುರಾಣ ಕತೆಗಳಲ್ಲೂ ಇತ್ತು. ಆ ಕತೆಗಳನ್ನು ತಮ್ಮ ನಾಟಕದ ಕಥಾವಸ್ತುವಾಗಿ ಆಯ್ಕೆ ಮಾಡಿಕೊಂಡು ಬರೆದುದು ಅವರ ವಿಶಾಲ ಮನೋಧರ್ಮಕ್ಕೆ ಹಿಡಿದ ಕನ್ನಡಿಯೆನ್ನ ಬೇಕು. ಸತ್ಯಹರಿಶ್ಚಂದ್ರ, ಸತ್ಯವಾನ್ ಸಾವಿತ್ರಿ, ಲವಕುಶ, ಕವಿವರ ಕಾಳಿದಾಸ, ಮುತ್ತಿನ ನತ್ತು – ಈ ನಾಟಕಗಳೆಲ್ಲ ಪುರಾಣ ವಸ್ತು ಆಧಾರಿತ ಕೃತಿಗಳೇ ಆಗಿವೆ. ಅವರ ಪುರಾಣ ಪ್ರಜ್ಞೆ, ಅಲ್ಲಿ ಮೌಲ್ಯಗಳನ್ನು ಕಾಣುವ ಬುದ್ಧಿ ಸೂಕ್ಷ್ಮತೆ, ನಾಟಕದ ಮೂಲಕ ಅದನ್ನು ಬೆಳಕಿಗೊಡ್ಡುವ ಕಲಾತ್ಮಕತೆ – ಇವೆಲ್ಲ ಅನನ್ಯವಾದುದು. ಅವರ ‘ಮಹಾತ್ಯಾಗಿ ಪನ್ನಾ’ ಅತ್ಯಂತ ಹೃದಯ ಸ್ಪರ್ಶಿ ನಾಟಕವಾಗಿದೆ. ತ್ಯಾಗದ ಬದುಕನ್ನು ಈ ನಾಟಕ ಎತ್ತಿ ಹಿಡಿಯುತ್ತದೆ. ಮಗನನ್ನೇ ಬಲಿ ಕೊಡುವ ಪನ್ನಾ ಮಹಾತ್ಯಾಗಿಯಾಗಿ ಗೌರವಕ್ಕೆ ಪಾತ್ರಳಾಗುತ್ತಾಳೆ. ಸಾಮಾನ್ಯ ದಾಸಿ ಅಸಾಮಾನ್ಯಳಾಗುವ ಸನ್ನಿವೇಶ ನಾಟಕ ಕ್ರಿಯೆಯಲ್ಲಿ ಮನೋಜ್ಞವಾಗಿ ಮೂಡಿಬಂದಿದೆ.

‘ಬಾಲ ಗೀತಾಂಜಲಿ’ ಇದು ಸುಬೋದಿನೀ ಪುಸ್ತಕ ಮಾಲೆಯ ಆರನೇ ಪ್ರಕಟನೆ. ಇದರಲ್ಲಿ ರಾಷ್ಟ್ರಧ್ವಜ ವಂದನಾಕ್ರಮ, ಧ್ವಜಗೀತೆಗಳು, ಸರ್ವಧರ್ಮ ಸಮ್ಮತ ಪ್ರಾರ್ಥನಾ ಗೀತೆಗಳು, ಕೆಲವು ಶಿಶುಗೀತೆಗಳು ಹಾಗೂ ಪ್ರಭಾತ ಫೇರಿ ಗೀತೆ – ಇವು ಸಂಗ್ರಹಗೊಂಡಿವೆ. ಶಿಶುಗೀತೆ ಮತ್ತು ಪ್ರಭಾತ ಫೇರಿ ಗೀತೆ ದಾಂತಿಯವರ ರಚನೆಗಳೇ ಆಗಿವೆ. ಈ ಪುಸ್ತಕದ ಅಗತ್ಯದ ಕುರಿತು ಪ್ರಸ್ತಾವನೆಯಲ್ಲಿ ಹೀಗಂದಿದ್ದಾರೆ : “ನಮ್ಮ ಶಾಲೆಗಳಲ್ಲಿ ಮೂಲಶಿಕ್ಷಣ, ರಾಷ್ಟ್ರೀಯ ಶಿಕ್ಷಣ, ಹೊಸ ಪಾಠಪಟ್ಟಿಗಳು ‘ಹಾಸುಹೊಕ್ಕು’ ಆಗಿವೆ. ಆದರೆ ಅವು ಹೊಕ್ಕಿದ ಮತ್ತು ಹಾಸಿದ ಎರಡೂ ವಿಧಾನಗಳೂ ತೃಪ್ತಿಕರವಾಗಿಲ್ಲ. ಹೆಚ್ಚಿನಲ್ಲೆಲ್ಲಾ ರಾಷ್ಟ್ರಧ್ವಜದ ಕಾರ್ಯಕ್ರಮ, ಸರ್ವಧರ್ಮ ಸಮ್ಮತವಾದ ಗಾಂದಿ ಆಶ್ರಮದ ಪ್ರಾರ್ಥನೆ ಮತ್ತು ಹೊಸ ಪಾಠಪಟ್ಟಿಯ ಅನುಸರಣೆ ಇವುಗಳ ಕುರಿತ ಗೊಂದಲವೇ ಇದೆ. ಹೆಚ್ಚೇಕೆ? ನಮ್ಮ ಕೆಲವು ಹಿರಿಯರಿಂದ ಸಹ ರಾಷ್ಟ್ರಧ್ವಜ-ರಾಷ್ಟ್ರಗೀತೆಗಳಿಗೆ ಗೌರವಾರ್ಪಣೆಯ ಹೆಸರಿನಿಂದ ಅಗೌರವವೇ ಆಗುತ್ತದೆ” – ಈ ಬಗ್ಗೆ ಖೇದ ಪಟ್ಟ ದಾಂತಿಯವರು ಈ ಕೆಲಸಕ್ಕೆ ಕೈ ಹಚ್ಚಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಹೊಸ ಪಾಠಪಟ್ಟಿ ಕಾರ್ಯರೂಪಕ್ಕೆ ಬರಬೇಕಾದರೆ ಶಿಕ್ಷಕ-ಶಿಕ್ಷಕಿಯರು ಆಸಕ್ತಿಯುಳ್ಳವರಾಗಿ ಕಾರ್ಯಪ್ರವೃತ್ತರಾಗಬೇಕು. ಅದು ಅವರ ಹೊಣೆ ಕೂಡ – ಎಂದು ಅಂದಿದ್ದಾರೆ. “ಬರೆದ ಗೀತೆಗಳು ಇಟ್ಟ ವೀಣೆಯಂತೆ. ಎತ್ತಿ ಶ್ರುತಿ ಕೂಡಿಸಿ, ಸ್ವರ ಸೇರಿಸಿ ನಾದ ಹರಿಸುವ ಕಲಾವಿದ ಕೆಲಸ ಶಿಕ್ಷಕ-ಶಿಕ್ಷಕಿಯರದು” ಎಂಬುದಾಗಿ ಹೇಳಿ ಅಧ್ಯಾಪಕರ ಹೊಣೆಯ ಬಗ್ಗೆ ಗಮನ ಸೆಳೆದಿದ್ದಾರೆ.

ಧ್ವಜ ವಂದನೆಯ ಸಾಮಾನ್ಯ ನಿಯಮಗಳನ್ನು ಎಳೆಯೆಳೆಯಾಗಿ ಬಿಡಿಸಿಟ್ಟಿದ್ದಾರೆ. ಪ್ರತಿಯೊಬ್ಬ ಶಿಕ್ಷಕ-ವಿದ್ಯಾರ್ಥಿಗಳೂ ಅವಶ್ಯವಾಗಿ ತಿಳಿದಿರಬೇಕಾದ ಸಂಗತಿಗಳಿವು. ಧ್ವಜ ಗೀತೆಗಳ ಬಗ್ಗೆಯೂ ಸೂಕ್ತ ಮಾಹಿತಿ ಕೊಟ್ಟಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿಗಳು ಸರ್ವಧರ್ಮ ಗಳ ಕುರಿತೂ ತಿಳಿದಿರಬೇಕು, ಗೌರವ ತಾಳಬೇಕು, ಇದು ಸಾಮರಸ್ಯ ಬದುಕಿಗೆ ಹೇತು ವಾಗುತ್ತದೆ. – ಈ ಉದ್ದೇಶಕ್ಕಾಗಿ ಸರ್ವಧರ್ಮ ಪ್ರಾರ್ಥನೆಯನ್ನು ಇಲ್ಲಿ ಸೇರಿಸಿದ್ದಾರೆ. ಶಿಶುಗೀತೆಗಳ ರಚನೆಯಲ್ಲೂ ದಾಂತಿಯವರು ಪಳಗಿದವರು ಎಂಬುವುದಕ್ಕೆ ಅವರು ಬರೆದು ಸೇರಿಸಿದ ಈ ಪುಸ್ತಕದ ಎರಡನೇ ಭಾಗದ ಶಿಶುಗೀತೆಗಳು ಪುಷ್ಟಿ ನೀಡುತ್ತವೆ. ಮಾದರಿಗಾಗಿ ಕೆಲವು ಸಾಲುಗಳನ್ನು ಪರಾಂಬರಿಸಬಹುದು :

ಮೋತಿ ನಾಯಿ ಬಂದಿತು | ಚೆಂಡು ಕಚ್ಚಿ ಓಡಿತು
ಮನೆಗೆ ಹೋಗಿ ಮೂಲೆಯಲ್ಲಿ | ಅಡಗಿ ಮಲಗಿಕೊಂಡಿತು
ನಮಗೆ ಒಬ್ಬ ದೇವರು | ಅನ್ನ ಬಟ್ಟೆ ಕೊಡುವರು
ಅವನು ನಮ್ಮ ತಂದೆಯು | ನಾವು ಅವನ ಮಕ್ಕಳು (ಪುಟ : 14)

ಮಗು ಚಂದ್ರನನ್ನು ಕರೆವ ಅಂದ ನೋಡಿ :

ದೂರದೊಳಿರುವೆಯ ಓ ಅಲ್ಲಿ | ನಾ ಬರಲಾರೆನು ನಿನ್ನಲ್ಲಿ
ಉದ್ದದ ಏಣಿಯು ಇಲ್ಲಿಲ್ಲ | ನೀನೇ ಇಲ್ಲಿಗೆ ಬಾ ಮೆಲ್ಲ
ಹೂ ಬೆಳದಿಂಗಳ ಸಂಜೆಯಲಿ | ಇಬ್ಬರು ಆಡುವ ತೊಟದಲಿ
ದಣಿಯಲು ಬಣ್ಣದ ಬಟ್ಟಲಲಿ | ಜೇನನು ಕುಡಿಯುವ ಒಟ್ಟಿನಲಿ (ಪುಟ : 16)

– ಮಗುವಿನ ಮೃದುಭಾವ ಮೃದು ನುಡಿಗಳಲ್ಲಿ, ಲಯಬದ್ಧವಾಗಿ, ಪ್ರಾಸದ ಚಂದ ದಲ್ಲಿ ಸೊಗಸಾಗಿ ಮೂಡಿಬಂದಿದೆ. ಮಗು ತಾಯಿಯನ್ನು ಕಾಣುವುದು ಹೀಗೆ :

ನನ್ನ ತಾಯಿ ನನ್ನ ತಾಯಿ | ಎತ್ತಿ ಹಾಲು ಕೊಡುವ ತಾಯಿ |
ಎಳೆದು ಅಪ್ಪಿ ಹಿಡಿವ ತಾಯಿ | ತೊಟ್ಟಿಲೊಳಗೆ ಇಡುವ ತಾಯಿ
ಜೋಗುಳವನು ನುಡಿವ ತಾಯಿ | ನನ್ನ ನೋಡಿ ನಗುವ ತಾಯಿ
ಕೈಯ ಕಾಲ ತೊಳೆವ ತಾಯಿ | ಮೈಯ ಕೊಳೆಯ ಕಳೆವ ತಾಯಿ (ಪುಟ : 17)

– ಮೂರು ಮೂರು ಮಾತ್ರೆಗಳ ಗಣ ಇಲ್ಲಿ ಮಗುವಿನ ಭಾವನೆಗಳನ್ನು ಮುಗುಳು ನಗಿಸುತ್ತವೆ; ನಲಿಸುತ್ತವೆ. ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳದೆ ಇಂಥ ಪದ್ಯವನ್ನು ಬರೆಯಲು ಸಾಧ್ಯವಾಗದು. ದಾಂತಿಯವರು ಇಲ್ಲಿ ಸೈ ಅನಿಸಿದ್ದಾರೆ.

ಮಕ್ಕಳಲ್ಲಿ ದುಡಿಮೆಯ ಅರಿವನ್ನು, ಪ್ರೀತಿಯನ್ನು ತುಂಬುವ ಈ ಹಾಡಂತೂ ಬಲು ಸೊಗಸಾಗಿದೆ :

ನಮ್ಮಯ ಶಾಲಾ ತೋಟದಲಿ | ಕಾಯಿ ಪಲ್ಯವ ಬಿತ್ತಿದರು
ಅದಕ್ಕೆ ದನಗಳು ಬರದಂತೆ | ಸುತ್ತಲು ಬೇಲಿಯ ಮಾಡಿದರು
(‘ಕಟ್ಟಿದರು’ ಎಂದಿದ್ದರೆ ಲಯ ಚೆನ್ನಾಗಿ ಸೇರಿಕೊಳ್ಳುತ್ತಿತ್ತು)
ಹೀರೆ ಬದನೆ ಅಲಸಂಡೆ | ಸೋರೆ ಕುಂಬಳ ಹಾ ಬೆಂಡೆ
ಬಗೆಬಗೆ ತರತರ ಬೀಜಗಳು | ಮೊಳೆತವು ಚೆಂದದ ಚಿಗುರುಗಳು  (ಪುಟ : 18)
ತೋಟದ ಕೆಲಸವ ಮಾಡೋಣ | ಬೆವರನು ಸುರಿಸುತ ದುಡಿಯೋಣ

– ಕಾಯಕದ ಬಗ್ಗೆ ಗೌರವ ಮೂಡಿಸುವ ಈ ಪದ್ಯ ಜೀವನ ಶಿಕ್ಷಣ ನೀತಿಯನ್ನು ಪ್ರತಿಪಾದಿಸುತ್ತದೆ.

ಪ್ರಭಾತ ಫೇರಿಗೆ ಬಳಸಬಹುದಾದ ಒಂಬತ್ತು ಚರಣಗಳುಳ್ಳ ‘ಸುಪ್ರಭಾತ’ ಗೀತೆ ಈ ಸಂಕಲನದಲ್ಲಿದೆ. ದಾಂತಿಯವರ ಕಾವ್ಯಶಕ್ತಿಗೆ ಇದು ನಿದರ್ಶನವೂ ಹೌದು. ಏಕತೆಯೇ  ಮೂಲದ್ರವ್ಯವಾಗಿರುವ ಈ ಪದ್ಯ ಉತ್ಸಾಹವನ್ನು ಉಕ್ಕಿಸುವ ಗುಣ ಉಳ್ಳದ್ದು. ಭಾವೈಕ್ಯ ಬೆಸೆಯುವಂಥದ್ದು.

ಕವಿಯು ಮೂಡಲಿ ಬೆಳಕ ಬೀರಲಿ | ಜೀವಕಮಲಗಳರಳಲಿ
ಜಗಕೆ ಚೇತನ ಸತ್ವವೀಯಲಿ | ಕತ್ತಲೆಯ ಕೊಳೆ ತೊಳೆಯಲಿ |
ವಿಶ್ವವೆಲ್ಲವೂ ಬೆಳಗಲಿ

– ಹೀಗೆ ಆರಂಭವಾಗುವ ಚರಣಗಳು ಮುಂದೆಲ್ಲ ಉದಾತ್ತ ಭಾವನೆಗಳನ್ನು ಪ್ರಚೋದಿಸುತ್ತವೆ. ‘ಜೀವಕಮಲ’ ಅಸದೃಶವಾದ ರೂಪಕ. ಸುಲಲಿತ ಭಾವಗಳು ಇಲ್ಲಿ ಎರಕಗೊಂಡಿವೆ.

ನಾನು ನನ್ನದು ನನಗೆ ಎಂಬಾ | ಸ್ವಾರ್ಥ ಭಾವನೆಯಳಿಯಲಿ
ಸಕಲ ಮಾನವರೊಂದೇ ಬಳಗವು | ಮಾನವತೆ ಎದ್ದೇಳಲಿ |
ದೀನ ದೇವತೆಯಾಗಲಿ

– ವಿಶ್ವಮಾನವ ಅರಿವನ್ನು ತುಂಬುವ ಈ ಸಾಲುಗಳು ಚೇತೋಹಾರಿಯಾಗಿವೆ. ದೀನನು ದೇವತೆಯಾಗಬೇಕು ಎಂಬ ಸೊಲ್ಲು ಉದಾತ್ತವಾದುದಾಗಿದೆ.

ಕಾಯಕವೆ ಕೈಲಾಸವಾಗಲಿ | ಬೆವರೆ ಅಮೃತವೆನ್ನಲಿ
ನೋವು ನರಳಾಟವಿಲ್ಲದೆ | ಸುಖದಿ ಎಲ್ಲರು ಬಾಳಲಿ |
ಸರ್ವರಿಗೂ ಹಿತವಾಗಲಿ

– ಇಂಥ ಸಮಷ್ಟಿ ಪ್ರಜ್ಞೆಯ ಗೀತೆಗಳನ್ನು ರಚಿಸಿ ನಮ್ಮ ಮಕ್ಕಳ ಕಂಗಳಲ್ಲಿ ಹೊಂಗನಸನ್ನು ತುಂಬಿದ್ದಾರೆ ದಾಂತಿಯವರು.

ಅರಿವು ಮೂಡಿಸುವ ಬರೆಹ

ಬೇರೆ ಬೇರೆ ವಿಷಯಗಳಿಗೆ ಸಂಬಂದಿsಸಿದಂತೆ ಅವರು ಬರೆದ ಬಿಡಿ ಲೇಖನಗಳ ಸಂಖ್ಯೆ ದೊಡ್ಡ ಪ್ರಮಣದ್ದೆ. ‘ನವಭಾರತ’, ‘ಪ್ರಕಾಶ’, ‘ಪ್ರಪಂಚ’, ‘ಭವ್ಯವಾಣಿ’, ‘ನವಯುಗ’, ‘ರಾಯಭಾರಿ’, ‘ವಿಕಾಸ’, ‘ಮುಂಗಾರು’, ‘ಉದಯವಾಣಿ’ – ಮೊದಲಾದ ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟವಾಗುತ್ತಿದ್ದವು. ಶ್ರೀ ದಾಂತಿ, ವೇದಾಂತಿ, ಚಾಣಕ್ಯ, ಸಿದ್ಧಾಂತಿ – ಇತ್ಯಾದಿ ಕಾವ್ಯನಾಮಗಳಲ್ಲಿ ಸಾಮಜಿಕ, ಧಾರ್ಮಿಕ – ಹೀಗೆ ವಿವಿಧ ವಿಷಯಗಳ ಬಗ್ಗೆ ಬರೆಯುತ್ತಿದ್ದರು. ಇವೆಲ್ಲ ವಿಚಾರಪರ, ಚಿಂತನಪರವಾಗಿರುತ್ತಿದ್ದವು. ಸಾಮಜಿಕ ಜವಾಬ್ದಾರಿ ಅಲ್ಲಿರುತ್ತಿತ್ತು. ಜನರಲ್ಲಿ ಅರಿವು ಮೂಡಿಸುವ ಎಚ್ಚರ ಭರಿಸುವ ಉದ್ದೇಶ ಈ ಲೇಖನ ಗಳಿಗಿರುತ್ತಿದ್ದವು. ಕನ್ನಡ ಮತ್ರವಲ್ಲ ತಮ್ಮ ಮತೃಭಾಷೆ ಕೊಂಕಣಿಯಲ್ಲಿ ಬರೆಯುತ್ತಿದ್ದರು. ವಿಶೇಷವಾಗಿ ‘ರಾಕ್ಣೊ’ ಪತ್ರಿಕೆಯಲ್ಲಿ ಇವರ ಹೆಚ್ಚಿನ ಲೇಖನಗಳು ಪ್ರಕಟವಾಗಿವೆ. ‘ಸೇವಕ್’ ಪತ್ರಿಕೆಯಲ್ಲೂ ಕೆಲವು ಬರೆಹ ಪ್ರಕಟಗೊಂಡಿವೆ. ವಿಶೇಷ ಸಂದರ್ಭಗಳಲ್ಲಿ ಅವರು ಬರೆಯುತ್ತಿದ್ದ ಲೇಖನ ಓದುಗರಿಗೆ ಹೊಸ ವಿಚಾರಗಳನ್ನೇ ಕೊಡುತ್ತಿದ್ದವು. ವೈಚಾರಿಕತೆ ಅವರ ಲೇಖನಗಳ ಆವರಣವಾಗಿರುತ್ತಿತ್ತು. ಅವರ ಲೇಖನಗಳ ವಿಧಾನವನ್ನು ಈ ಆಯ್ದ ಭಾಗಗಳಿಂದ ಪರಾಮರ್ಶಿಸಬಹುದು.

ಭೂಮಸೂದೆ ಕಾನೂನು ಬಂದು ಉಳುವವನೆ ಭೂಮಿಯ ಒಡೆಯನಾದ. ಆದರೆ ಭೂಮಿಯನ್ನು ಮರುವ ಅದಿsಕಾರ ಮತ್ರ ಇಲ್ಲದವನಾದ. ಸರಕಾರದ ಈ ಕಾಂ ಸರಿಂ? ಈ ಬಗ್ಗೆ ಬರೆಯುತ್ತ ದಾಂತಿಯವರು ಸ್ಪಷ್ಟಪಡಿಸುವ ವಿಚಾರ ಇದು :

“… ಯಾರು ಭೂಮಿಯನ್ನು ಹಸನುಗೊಳಿಸುತ್ತಾರೋ, ಅಭಿವೃದ್ಧಿಗೊಳಿಸುತ್ತಾರೋ, ಅದರಲ್ಲಿ ದುಡಿಯಲು ಉತ್ಸುಕರಾಗಿರುತ್ತಾರೋ ಅಂಥವರು ಆ ಭೂಮಿಯ ಒಡೆಯರಾಗ ಬೇಕು. ಅಂತಹ ರೈತ ಕೇವಲ ಜೀತದಾಳು ಅಲ್ಲ. ಆತ ಭೂಮಿಯ ಸಂಪೂರ್ಣ ಪರಿಪೂರ್ಣ ಒಡೆಯ. ತನಗೆ ಬೇಡವೆಂದಾದಲ್ಲಿ, ತನಗೆ ಅಸಾಧ್ಯವೆಂದಾದಲ್ಲಿ ತನಗೆ ಅನಿವಾರ್ಯ ವೆಂದಾದಲ್ಲಿ ಅದನ್ನು ಪರಾದೀನಗೊಳಿಸುವ ಹಕ್ಕು ಆತನದಾಗಿರಬೇಕು. ಆಗ ಮಾತ್ರ ಆತ ಸ್ವತಂತ್ರ ಭಾರತದ ಸ್ವತಂತ್ರ ರೈತನೆನಿಸುತ್ತಾನೆ….” (ಉದಯವಾಣಿ)

– ರೈತನ ಮೇಲೆ ಸರಕಾರದ ಸರ್ವಾದಿಕಾರ ಧೋರಣೆ ತಕ್ಕುದಲ್ಲ ಎಂಬುದನ್ನು ದಾಂತಿಯವರು ತಾರ್ಕಿಕವಾಗಿ ಪ್ರತಿಪಾದಿಸಿದ್ದಾರೆ. ಕೃಷಿಕ ಕುಟುಂಬದಿಂದ ಬಂದ, ಕೃಷಿಯ ಮೇಲೆ ಪ್ರೀತಿಯುಳ್ಳ, ಕೃಷಿಕರ ಮೇಲೆ ಅಭಿಮಾನವುಳ್ಳ ಅವರು ಭಾರತೀಯ ರೈತರ ಬಗ್ಗೆ ಗೌರವ ಉಳ್ಳವರಾಗಿದ್ದರು. “ಕೃಷಿಕನ ಸಮಸ್ಯೆಗಳನ್ನು ಕೃಷಿಕರೇ ಹೇಳಬೇಕು. ಅವರ ಕೇಳಿಕೆಗಳನ್ನು ಅವರೇ ಕೇಳಬೇಕು… ಸಮಗ್ರ ದೇಶದ ಹಿತದೃಷ್ಟಿಯಿಂದ ಈ ಕೆಲಸವಾಗ ಬೇಕು” ಎಂದ ಅವರು “ರೈತರ ಸಮಸ್ಯೆಗಳು ಹಲವಾರು. ನೀರಾವರಿಯ ಸೌಲಭ್ಯ; ಬೆಳೆಸಿದ ಬೆಳೆಗೆ ನ್ಯಾಯವಾದ ಬೆಲೆ; ಕಡಿಮೆ ಬಡ್ಡಿಯಲ್ಲಿ ಆರ್ಥಿಕ ನೆರವು, ಸಾಲ; ಕೃಷಿಗೆ, ಕೃಷಿಕರಿಗೆ ಆದ್ಯತೆಯಲ್ಲಿ ಸೌಕರ್ಯಗಳು; ಕೃಷಿಕರಿಗೆ ಭೂಮಿಯ ಒಡೆತನ – ಈ ಕುರಿತು ಸಾಕಷ್ಟು ಚಿಂತನವಾಗಬೇಕು” ಅನ್ನುತ್ತಾರೆ.  ಕೃಷಿಕ ಬಲಗೊಳ್ಳದೆ ದೇಶ ಬಲಗೊಳ್ಳದು ಎಂಬುದು ದಾಂತಿಯರ ಸ್ಪಷ್ಟ ನಿಲುವು. ಆದುದರಿಂದಲೇ ಕೃಷಿಕರ ಕುರಿತು ಇಷ್ಟು ಕಡಕ್ಕಾಗಿ ಮಾತಾಡುತ್ತಾರೆ.

ಕ್ರಿಸ್ತ ಜಯಂತಿಯ ಮಹತ್ತ್ವವನ್ನು ಅವರು ಕಂಡ ರೀತಿ ಹೀಗೆ : “ದೇವರ ಪ್ರೀತಿಯ ಪ್ರತೀಕವಾದ ಪ್ರಕೃತಿಯನ್ನು ಗುಹೆ, ಕಣಿವೆ, ಕಂದರ, ಗುಡ್ಡೆಗಳನ್ನು ಕೆಡವಿ ವಿರೂಪಗೊಳಿಸು ವುದು, ವನವೃಕ್ಷ ಕಾಡುಗಳನ್ನು ಕಡಿದು ಸೂರೆ ಮಾಡುವುದು, ಪ್ರಾಣಿ, ಪಶು-ಪಕ್ಷಿಗಳನ್ನು ಕೊಲ್ಲುವುದು, ಹಿಂಸಿಸುವುದು ಅರ್ಥಾತ್ ನಮಗಾಗಿ ಎಲ್ಲವನ್ನೂ ತ್ಯಾಗ ಮಾಡುತ್ತಿರುವ ಪ್ರಕೃತಿ ಪ್ರಾಣಿಗಳನ್ನು ವಿನಾಶಗೊಳಿಸುವುದು, ತನ್ಮೂಲಕ ಮಾನವ ಕುಲದ ವಿನಾಶವನ್ನೇ ಮಾಡಲು ಹೊರಟ ಜನ ಕ್ರಿಸ್ತ ಜಯಂತಿಯಿಂದಲಾದರೂ ಕಣ್ತೆರೆಯಬೇಕು.” (ಉದಯವಾಣಿ : 25-12-1987)

ಪ್ರಕೃತಿಯನ್ನು ಸುಸ್ಥಿತಿಯಲ್ಲಿಟ್ಟುಕೊಂಡಾಗಲೇ ಮಾನವನ ಬದುಕು ಸುಭದ್ರವಾಗು ವುದು. ಇದು ದಾಂತಿಯವರ ಕಾಳಜಿಯಾಗಿದೆ. ಹಬ್ಬಗಳೆಲ್ಲ ಇಂಥ ಅರಿವಿಗೆ ಪ್ರೇರಣೆ ಎಂಬ ಸತ್ಯ ಇಲ್ಲಿದೆ. ಶುಭ ಶುಕ್ರವಾರದ ಕುರಿತು ಚಿಂತನ ನಡೆಸಿದ ದಾಂತಿಯವರು ಹೀಗೆ ಬೆಳಕಾಗುತ್ತಾರೆ : ಸ್ವಪ್ರತಿಷ್ಠೆಯು ಅಹಂಕಾರಕ್ಕೆ ಕಾರಣವಾಗುತ್ತದೆ. ಅಹಂಕಾರವು ವ್ಯಕ್ತಿ ಮತ್ತು ಸಮಷ್ಟಿಯ ನಾಶಕ್ಕೆ ಕಾರಣವಾಗುತ್ತದೆ. ಮಾನವನ ಈ ದೌರ್ಬಲ್ಯವೇ – ತಾನೇಕೆ ತಗ್ಗಬೇಕು, ಕೆಳಗಿನ ಮಟ್ಟಕ್ಕೆ ಇಳಿಯಬೇಕು, ಬಿಟ್ಟಿ ಕೊಡಬೇಕು?-ಈ ಮನೋಭಾವವೇ ತುಂಬಿರುವಾಗ ಸಮಸ್ಯೆಗೆ ಪರಿಹಾರವು ಹೇಗೆ ಸಿಗಬೇಕು?-ಎಂಬುದಾಗಿ ಪ್ರಶ್ನಿಸುತ್ತಾರೆ. “ಸಮಷ್ಟಿಯ ಹಿತಕ್ಕಾಗಿ, ಸಮಾಜದ ಒಳಿತಿಗಾಗಿ ತ್ಯಾಗಕ್ಕೆ, ಸೇವೆಗೆ ಕೆಳಗಿಳಿಯಲಿಕ್ಕೆ, ಅವರೋಹಣಕ್ಕೆ ಸಿದ್ಧರಾಗಬೇಕು ಎಂಬುದೇ ಇದರ ಮಥಿತಾರ್ಥ” ಎಂಬುದಾಗಿ ಶುಭ ಶುಕ್ರವಾರದ ಮಹತ್ತ್ವವನ್ನು ಇಲ್ಲಿ ನಮೂದಿಸುತ್ತಾರೆ.  “ಇಂದಿನ ಜಗತ್ತಿನ ಮುಂದೆ ಬೃಹದಾಕಾರವಾಗಿ ನಿಂತಿರುವ ಜಾತಿ, ಮತ, ಧರ್ಮ, ವರ್ಣ, ಕುಲ, ಭಾಷೆ, ಪ್ರದೇಶಗಳ ಘರ್ಷಣೆಗಳಿಂದ ಉದ್ಭವಿಸಿದ ದ್ವೇಷವನ್ನು ನಿವಾರಿಸಿ ಶಾಂತಿ ಸಮಾಧಾನಗಳನ್ನು ನೆಲೆ ನಿಲ್ಲಿಸಲು ಪ್ರೀತಿಯೊಂದೇ ಸಾಧನ. ಪ್ರೇಮಸ್ವರೂಪನಾದ ಪರಮಾತ್ಮನ ಈ ದೊಡ್ಡ ಗುಣ ನಮ್ಮಲ್ಲಿರಬೇಕು. ಜಗತ್ತಿಗೆ ಶಾಂತಿಯನ್ನು ತರುವ ಮಹಾ ಸತ್ಕಾರ್ಯದಲ್ಲಿ ಸಫಲತೆಗಾಗಿ ಶ್ರಮಿಸಬೇಕು.” (ಕ್ರಿಸ್ತ ಸ್ವಾಮಿಯ ಪ್ರಾಮುಖ್ಯ ಸಂದೇಶ – ಪ್ರೇಮ)

ಸಮಷ್ಟಿಯೆಡೆಗೆ ಮಾನವ ತುಡಿಯಬೇಕಾದ ಅಗತ್ಯವನ್ನು ಈ ಮಾತು ನಿರೂಪಿಸುತ್ತದೆ. “ಸೌಹಾರ್ದತೆಯ ಉಗಮಸ್ಥಾನ ಸಹೃದಯತೆ. ಇದರ ಮೂಲಮಂತ್ರ ಪ್ರೇಮ. ಯಾರ ಹೃದಯ ಪ್ರೀತಿಯ, ಅನುರಾಗದ ಆಗರವಾಗಿರುತ್ತದೋ ಅಲ್ಲಿ, ಆ ವ್ಯಕ್ತಿ ಯಲ್ಲಿ ಸೌಹಾರ್ದತೆ ನೆಲೆ ನಿಲ್ಲುತ್ತದೆ. ಪ್ರೀತಿಯ ಒರತೆಯಿಲ್ಲದಿದ್ದರೆ, ಅಲ್ಲಿ ಸೌಹಾರ್ದತೆಯ ಗಂಗಾಜಲ ದೊರಕಲಾರದು. ಯಾರಲ್ಲಿ ದ್ವೇಷ, ಹಗೆ ಮನೆ ಮಾಡಿರುತ್ತದೊ ಅವರಲ್ಲಿ ಸೌಹಾರ್ದತೆ ಹೇಗೆ ನೆಲೆ ನಿಲ್ಲಬೇಕು?” (ಸೌಹಾರ್ದತೆ)

‘ಸೌಹಾರ್ದತೆ’ ಹದಗೆಡುತ್ತಿರುವ ನಮ್ಮ ಸಮಾಜದ ಬಗ್ಗೆ ದಾಂತಿಯವರ ಆತಂಕವಿದು. ರಾಜಕೀಯ ಪಕ್ಷಗಳು ಕೇವಲ ತಮ್ಮ ಪಕ್ಷದ ಹಿತವನ್ನೇ ಬಯಸಿ ಇತರ ಪಕ್ಷಗಳನ್ನು ದ್ವೇಷಿಸುವ, ದೂಷಿಸುವ ಒಂದೇ ಧ್ಯೇಯಕ್ಕಾಗಿ ಹೆಣಗಾಡಬಾರದು. ಪಕ್ಷ ಯಾವುದೇ ಇರಬಹುದು ರಾಷ್ಟ್ರದ ಹಿತದೃಷ್ಟಿಯೇ  ಎಲ್ಲ ಪಕ್ಷದ ಧ್ಯೇಯವಾಗಿರುವಾಗ ಪರಸ್ಪರ ವಿರೋಧ ಭಾವನೆಯಿಂದ ಕಚ್ಚಾಡಿಕೊಳ್ಳುವ, ಬೇರೆ ಪಕ್ಷದವರು ಏನೇ ಹೇಳಿದರೂ ಅದನ್ನು ವಿರೋದಿಸುವ ಧೋರಣೆಗೆ ಅವಕಾಶವೆಲ್ಲಿದೆ? ಪಕ್ಷದ ಹಿತದೃಷ್ಟಿ ರಾಷ್ಟ್ರದ ಹಿತದೃಷ್ಟಿಗೆ ಕಾರಣವಾಗಬೇಕು.” (ಸೌಹಾರ್ದತೆ)

ಪರಸ್ಪರ ತಪ್ಪು ಹೊರಸುವ, ದ್ವೇಷ ಕಾರುವ, ಅಸೂಯೆಯ ಬೆಂಕಿಯಿಂದ ಉರಿವ, ತಮ್ಮ ಸ್ವಾರ್ಥಕ್ಕಾಗಿ ಜನರ-ದೇಶದ ಹಿತವನ್ನು ಬಲಿಹಾಕುವ ನಮ್ಮ ರಾಜಕೀಯ ಮಂದಿಗಳಿಗೆ ದಾಂತಿಯವರು ಇಲ್ಲಿ ಕಿವಿಮಾತು ಆಡಿದ್ದಾರೆ.

“ನಮ್ಮ ಶೈಕ್ಷಣಿಕ ಸಂಸ್ಥೆಗಳು ಈ ಸೌಹಾರ್ದತಾ ಭಾವನೆಯನ್ನು ಜಾತಿ, ಮತ, ಧರ್ಮ ಸಾಮರಸ್ಯವನ್ನು ಬೆಳೆಸುವ ಕೇಂದ್ರಗಳಾಗಬೇಕು. ಈ ಉದಾತ್ತ ಭಾವನೆಯು ಪ್ರಾಥಮಿಕ ಶಿಕ್ಷಣ ಹಂತದಲ್ಲೇ ಬಿತ್ತಬೇಕು.” (ಸೌಹಾರ್ದತೆ)

ಜಾತಿ-ಕೋಮು ಭಾವನೆಗಳನ್ನು ಮಕ್ಕಳಲ್ಲಿ ಉತ್ತೇಜಿಸುವ ಶಿಕ್ಷಣ ಸಂಸ್ಥೆಗಳನ್ನು ದಾಂತಿಯವರು ಎಚ್ಚರಿಸಿದ್ದಾರೆ. ಸೌಹಾರ್ದತೆ ಬೆಳೆಸುವುದರಲ್ಲಿ ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿಯನ್ನು ನೆನಪಿಸಿದ್ದಾರೆ.

“ಶಾಂತಿ – ಇದು ಅತ್ಯಂತ ಪವಿತ್ರವಾದ ಪ್ರಿಯವಾದ ಪದ. ಎಲ್ಲ ಮತ ಧರ್ಮಗಳು ಬಯಸುತ್ತಿರುವುದು, ಸಾರುತ್ತಿರುವುದು ಶಾಂತಿಯನ್ನೇ. ಧರ್ಮ-ಸಂಸ್ಕೃತಿಗಳೆಲ್ಲವೂ ಶಾಂತಿಯ ರೂಪಗಳೇ ಹೌದು. ಅಶಾಂತಿಯನ್ನು ಹೋಗಲಾಡಿಸಿ ಶಾಂತಿಯ ಸ್ಥಾಪನೆ ಮಾಡುವುದೇ ಸಹೃದಯರ ಸದಾಶಯ.” (ಶಾಂತಿ)

– ದಾಂತಿಯವರು ಯಾವ ವಿಷಯದ ಕುರಿತೇ ಬರೆಯಲಿ, ಮಾತಾಡಲಿ ಅಲ್ಲಿ ಆಳವಾದ ಆಲೋಚನೆಯಿರುತ್ತದೆ. ಜೀವಪರ ಕಾಳಜಿ ಇರುತ್ತದೆ. ದೇಶ, ಸಮಾಜ, ಜನರ ಹಿತ ಪ್ರಾಧಾನ್ಯ ಪಡೆಯುತ್ತದೆ. ಸಮಷ್ಟಿ ಪ್ರಜ್ಞೆಯೊಂದು ಅವರ ವಿಚಾರದ ಪಾತಳಿಯನ್ನು ಆವರಿಸಿಕೊಂಡಿರುತ್ತದೆ. ಆದುದರಿಂದಲೇ ಅವರ ಮಾತು-ಬರೆಹಕ್ಕೆ ಪ್ರತಿಯೊಬ್ಬರನ್ನೂ ಮುಟ್ಟುವ ಶಕ್ತಿ. ಓದುಗರು, ಕೇಳುಗರು ಆ ಸ್ಪರ್ಶದಿಂದ ಪುಲಕಿತಗೊಳ್ಳುತ್ತಾರೆ, ಹೊಸ ಅನುಭವಕ್ಕೊಳಗಾಗುತ್ತಾರೆ, ಅರಿವಿನ ಅಂಚಿನಲ್ಲಿ ಮಿಂಚುತ್ತಾರೆ.

ಕ್ರಿಯಾಶೀಲ ವ್ಯಕ್ತಿತ್ವ

ಅಗಲವಾದ ಮುಖಮಂಡಲ; ಹರವಾದ ಹಣೆ; ಕನ್ನಡಕದ ಒಳಗೆ ಹೊಳೆವ ಆಳ ದೃಷ್ಟಿಯ ಕಂಗಳು; ತಲೆತುಂಬ ಬೆಳ್ಳಿಗೂದಲು. ಎಂಥವರಲ್ಲೂ ಗೌರವ ಮೂಡಿಸುವ ತೇಜೋವಿರಾಜಿತ ಮುಖಭಾವ. ಹೃಷ್ಟ-ಪುಷ್ಟವಾದ ಹದಗಟ್ಟಿನ ನೇರ ನಿಲುವಿನ ಆಳ್ತನ. ಶುಭ್ರ ವೇಷಭೂಷಣ; ಸ್ವಾಬಿಮಾನದ ಪ್ರತಿರೂಪ; ಸರಿಗಂಡದ್ದನ್ನು ಎಂದೂ ಬಿಡದ ಗಟ್ಟಿ ನಿರ್ಧಾರದ ಮನಸ್ಸು – ಇದು ಫ್ರಾನ್ಸಿಸ್ ದಾಂತಿಯವರು ನಮಗೆ ಕಾಣುವ ಪರಿ.

ಜಾತಿ ಮತ ಅವರಿಗೆ ಗೌಣ. ಪ್ರೀತಿಯೊಂದೇ ಸರ್ವ ತ್ರಾಣ. ಮಾನವರೆಲ್ಲರೂ ಒಂದೇ. ಮಾನವತೆಯೇ  ಶ್ರೇಷ್ಠ – ಬದುಕಿನುದ್ದಕ್ಕೂ ಇದನ್ನೇ ನಂಬಿದರು, ನಂಬಿದಂತೆ ಬಾಳಿದರು. ಎಲ್ಲ ಧರ್ಮಗಳನ್ನೂ ಅವರು ಪ್ರೀತಿಸಿದರು. ಅಷ್ಟು ಮಾತ್ರವಲ್ಲ ಅವನ್ನು ಅಧ್ಯಯನ ಮಾಡಿದರು. ಅವರ ಮನೆಯಲ್ಲಿ ಬೈಬಲ್ ಜೊತೆ ಭಗವದ್ಗೀತೆ, ವೇದೋಪನಿಷತ್ ಗ್ರಂಥಗಳು, ಕುರಾನ್‌ಗ್ರಂಥ ಇದ್ದವು. ವ್ಯಕ್ತಿ ಯಾರೇ ಇರಲಿ ತನ್ನ ಧರ್ಮ ವನ್ನು ಮೊದಲು ಸರಿಯಾಗಿ ತಿಳಿದುಕೊಳ್ಳಬೇಕು, ಆ ಮೇಲೆ ಇತರ ಧರ್ಮಗಳನ್ನು ಚೆನ್ನಾಗಿ ತಿಳಿದುಕೊಳ್ಳಬೇಕು. ಎಲ್ಲ ಧರ್ಮಗಳ ಒಳತಿರುಳು ಒಂದೇ ಎಂಬ ಸತ್ಯ ಆಗ ಮಾತ್ರ ಗೋಚರವಾಗುತ್ತದೆ – ಇದು ದಾಂತಿಯವರ ಅರಿವು. ತಮ್ಮ ಬದುಕಿನಲ್ಲಿ ಅದನ್ನು ಅನುಸರಿಸಿದರು. ಈ ಸತ್ಯ ನಡಿಗೆಯಿಂದಲೇ ಅವರಿಗೆ ಎಲ್ಲ ಧರ್ಮಗಳ ಬಗ್ಗೆ ಮಾತಾಡುವ, ಬರೆಯುವ ಸಾಮರ್ಥ್ಯ ಒದಗಿತ್ತು. ಸರ್ವಧರ್ಮ ಸಮಭಾವ, ಸಾಮರಸ್ಯ ಮನೋಭಾವ ಅವರ ಆದರ್ಶವಾಗಿತ್ತು. ತಾನು ಕ್ರೈಸ್ತ, ಅವರು ಹಿಂದು, ಇವರು ಮುಸ್ಲಿಮ್ ಎಂಬ ಭೇದ ಅವರಿಗಿರಲಿಲ್ಲ. ಎಲ್ಲರಲ್ಲು ಆತ್ಮೀಯತೆ. ಹಾಗಾಗಿ ಎಲ್ಲರಿಗೂ ದಾಂತಿಯವರೆಂದರೆ ಪ್ರೀತಿ. ಎಲ್ಲ ಧರ್ಮಗಳ ಸಾರವನ್ನು ಹೀರಿ ಬೆಳೆದವರು ದಾಂತಿಯವರು.

ಪ್ರೀತಿಗಿಂತ ದೊಡ್ಡ ವಸ್ತು ಅವರಿಗೆ ಬೇರೆ ಯಾವುದೂ ಇರಲಿಲ್ಲ. ಪ್ರೀತಿಗೆ ಯೇಸುವೇ ಆದರ್ಶ. ಪ್ರೀತಿಸುವವರನ್ನು ಪ್ರೀತಿಸು; ನಿನ್ನನ್ನು ನೀನು ಪ್ರೀತಿಸುವಷ್ಟೆ ನಿನ್ನ ನೆರೆಯವರನ್ನೂ ಪ್ರೀತಿಸು; ನಿನಗೆ ಬೇರೆಯವರು ಯಾವುದನ್ನು ಮಾಡಬಾರದು ಎಂದು ಇಚ್ಛಿಸುವಿಯೊ ಅದನ್ನು ನೀನೂ ಬೇರೆಯವರಿಗೆ ಮಾಡಬೇಡ – ಇತ್ಯಾದಿ ಯೇಸುವಿನ ನುಡಿಗಳನ್ನು ತಮ್ಮ ಹೃದಯಕ್ಕೆ ತಂದುಕೊಂಡವರು ದಾಂತಿಯವರು. ಈ ಸತ್ವದಿಂದಲೇ ತಮ್ಮ ಬದುಕನ್ನು ಪವಿತ್ರಗೊಳಿಸಿ ಕೊಂಡವರು. ಅವರ ಸಂಪರ್ಕವಿರುವ ಸ್ನೇಹಿತರಿಗೆಲ್ಲ ಅದು ಗೊತ್ತೇ ಗೊತ್ತು. ದಾಂತಿಯವರು ಕಲಾಸಂಪನ್ನರಾಗಿದ್ದರು. ಸಾಹಿತ್ಯ, ಸಂಗೀತ, ಯಕ್ಷಗಾನ, ಭೂತ, ಕೋಲ ಇವೆಲ್ಲ ಅವರಿಗೆ ಪ್ರಿಯವೆ. ಸಾಮಾನ್ಯವಾಗಿ ಆವಾಗ ಕ್ರೈಸ್ತರಿಗೆ ಯಕ್ಷಗಾನ ನಿಷಿದ್ಧವೇ ಆಗಿತ್ತು. ಆದರೆ ಈ ನಿಷಿದ್ಧ ಅವರನ್ನು ಬಾದಿಸಲೇ ಇಲ್ಲ. ಯಕ್ಷಗಾನವೆಂದರೆ ಅವರಿಗೆ ಜೀವ. ಅಕ್ಕಪಕ್ಕದಲ್ಲಿ ಎಲ್ಲೇ ಯಕ್ಷಗಾನವಿರಲಿ ಅಲ್ಲಿ ಇವರು ಹಾಜರು. ಆ ಕಲೆಯನ್ನು ಆಸ್ವಾದಿಸಿ ಆನಂದ ಪಡುವ ಅಬಿರುಚಿ-ಸಂಸ್ಕಾರವನ್ನು ಅವರು ಹೊಂದಿದ್ದರು. ಒಮ್ಮೆ ಯಕ್ಷಗಾನ ನೋಡಲು ರಾತ್ರಿ ಹತ್ತು ಕಿಲೋಮೀಟರ್ ನಡೆದುಕೊಂಡು ಹೋಗಿದ್ದರಂತೆ. ಪ್ರಖ್ಯಾತ ಕಲಾವಿದರೆಲ್ಲ ಇವರ ಸ್ನೇಹಿತರೇ ಆಗಿದ್ದರು. ಶಂಕರನಾರಾಯಣ ಸಾಮಗರು, ರಾಮದಾಸ ಸಾಮಗರು – ಇವರೆಲ್ಲ ಆ ಸ್ನೇಹ ವಲಯದಲ್ಲಿದ್ದರು. ಅಲೆವೂರಿನ ಅಕ್ಕ-ಪಕ್ಕ ಎಲ್ಲೇ ತಮ್ಮ ಮೇಳದ ಯಕ್ಷಗಾನವಿರಲಿ ಶಂಕರನಾರಾಯಣ ಸಾಮಗರು ಬಂದವರು ದಾಂತಿಯವರನ್ನು ಭೇಟಿಯಾಗದೆ ಹೋಗುತ್ತಿರಲಿಲ್ಲ. ಮನೆಗೆ ಬಂದು ಮಾತಾಡಿಕೊಂಡು ಹೋಗುತ್ತಿದ್ದರು. ಮಾತುಕತೆಯಲ್ಲೂ ವಿಚಾರ ಯಕ್ಷಗಾನದ್ದೆ. ಯಾವುದು ಬದುಕನ್ನು ಸಮೃದ್ಧಗೊಳಿಸುತ್ತದೆ ಅದೆಲ್ಲ ನಮಗೆ ಬೇಕು ಎಂಬ ಜಾಯಮಾನದವರು ಅವರು. ಜಾನಪದ ಸಾಹಿತ್ಯ ಮತ್ತು ಕಲೆಗಳಲ್ಲೂ ಇವರ ಆಸಕ್ತಿ ವಿಶೇಷವೆ.

ದಾಂತಿಯವರು ಉತ್ತಮ ಭಾಷಣಕಾರರು ಎಂದೇ ಹೆಸರು ಪಡೆದವರು. ಅವರ ಸ್ವರಕ್ಕೆ ಸಬಿಕರನ್ನು ಆಕರ್ಷಿಸುವ ಗಾಂಬೀರ್ಯವಿತ್ತು. ನಿರರ್ಗಳವಾದ ಮಾತುಗಾರಿಕೆ. ಮನಮುಟ್ಟುವಂತಹ ನೇರ ನುಡಿ. ಅನುಭವದ ಆಳದಿಂದ ಬರುವ ವಿಚಾರಧಾರೆ. ನಾವು ಮನುಷ್ಯರಾಗಬೇಕು, ಸಂಸ್ಕೃತಿಯಿಂದ ಬೆಳೆಯಬೇಕು, ಸಂಕುಚಿತ ಆವರಣಗಳಿಂದ ಹೊರಬರಬೇಕು, ಮಾನವತೆಯ ಎತ್ತರಕ್ಕೇರಬೇಕು, ಮೌಲ್ಯವರ್ಧಕರಾಗಬೇಕು – ಈ ಎಲ್ಲ ಹೊಳಪುಗಳನ್ನು ಕೆತ್ತುವ ರೀತಿ ಮನೋಹರ. ಎಳೆಯೆಳೆಯಾಗಿ ಬಿಚ್ಚಿಡುವ, ಮನಕ್ಕೆ ನಾಟಿಸುವ ಮಾತಿನ ಕೌಶಲ ಪರಿಣಾಮಕಾರಿ. ಇಡಿಯಾಗಿ ಅವರ ಒಂದು ಭಾಷಣ ಮಾನವ ಸಂಬಂಧವನ್ನು ಬೆಸೆಯುವುದರ ಕಡೆಗೆ ತುಡಿಯುತ್ತಿತ್ತು. ವಿದ್ವತ್ತು, ಅಧ್ಯಯನ ಮತ್ತು ಅನುಭವ – ಇವುಗಳಿಂದ ಮುಪ್ಪುರಿಗೊಂಡು ಸಬಿಕರನ್ನು ಪ್ರಜ್ಞಾವಂತರನ್ನಾಗಿ ಮಾಡುತ್ತಿತ್ತು. ಪ್ರೀತಿ, ಸಾಮರಸ್ಯ, ಸೌಹಾರ್ದತೆ – ಇಂಥ ವಿಷಯಗಳು ಅವರಿಗೆ ಬಹಳ ಪ್ರಿಯವಾಗಿದ್ದವು. ಧರ್ಮ ಸಭೆಯ ಮುಂದಿಡುತ್ತಿದ್ದರು. ಧರ್ಮಸ್ಥಳದ ಶ್ರೀ ಕ್ಷೇತ್ರದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಪ್ರಧಾನ ಭಾಷಣಕಾರರಾಗಿ ಗೌರವ ಪಡೆದವರು ಇವರು.

ಬಲು ಶಿಸ್ತಿನ ಜೀವನ. ನಿಗದಿಪಡಿಸಿದಂತೆ ದಿನದ ಚಟುವಟಿಕೆಗಳು. ಪರಿಶ್ರಮ ಅವರಿಗೆ ಬಹಳ ಇಷ್ಟ. ವೃತ್ತಿಯಲ್ಲಿರುವಾಗ – ನಿವೃತ್ತರಾದಾಗ ಅವರ ನೈಮಿತ್ತಿಕ ಚಟುವಟಿಕೆ ಗಳಲ್ಲಿ ಯಾವ ಬದಲಾವಣೆ ಇರುತ್ತಿರಲಿಲ್ಲ. ನಿತ್ಯ ಮುಂಜಾನೆ ಐದು ಗಂಟೆಗೆ ಏಳುವುದು, ಕೃಷಿಕಾರ್ಯದಲ್ಲಿ ತೊಡಗುವುದು. ಬೇರೆ ಬೇರೆ ಸಂಘಟನೆಗಳಲ್ಲಿ ಪದಾದಿಕಾರಿಗಳಾಗಿರುತ್ತಿದ್ದುದ ರಿಂದ ತಮ್ಮ ಕರ್ತವ್ಯ ಮುಗಿದ ಮೇಲೆ ಅವುಗಳ ಕಾರ್ಯಗಳಲ್ಲಿ ಪಾಲ್ಗೊಂಡು ಅನಂತರ ಮನೆ ಸೇರುವಾಗ ರಾತ್ರಿಯೇ  ಆಗುತ್ತಿತ್ತು. ಊಟೋಪಚಾರ, ಕುಟುಂಬ ವಿಷಯ ಚರ್ಚೆ ಆ ಮೇಲೆ ಅಧ್ಯಯನ-ಬರೆವಣಿಗೆ ರಾತ್ರಿ ಹನ್ನೆರಡು-ಒಂದು ಗಂಟೆಯ ತನಕ. ಜೊತೆಗೆ ದಿನಚರಿ ಬರೆಯುವುದು – ತನ್ನನ್ನೇ ತಾನು ಅಳೆದುಕೊಳ್ಳುವುದು.

ಬೇರೆಯವರೊಂದಿಗೆ ಮಾತಾಡುವಾಗ, ವ್ಯವಹರಿಸುವಾಗ ಬಹಳ ಎಚ್ಚರ. ಎಲ್ಲಿ ತನ್ನ ಮಾತು -ವರ್ತನೆ ಅವರ ಮನಸ್ಸಿಗೆ ನೋವುಂಟು ಮಾಡುತ್ತದೆಯೇನೊ ಎಂಬ ಸೂಕ್ಷ್ಮ. ಹಾಗೇನಾದರು ಆದರೆ ತಾವೇ ನೊಂದುಕೊಳ್ಳುತ್ತಿದ್ದರು. ಬೇರೆಯವರಿಂದ ನೋವಾದರೆ ಒಳಗೊಳಗೇ ನೊಂದುಕೊಳ್ಳುವವರು. ನೋವಾಗುವ ಮಾತನ್ನು ಸರ್ವಥಾ ಆಡಲಾರರು. ಮನಸ್ಸು ಮೃದು. ಹೃದಯವಂತಿಕೆಯಲ್ಲಿ ಶ್ರೀಮಂತರು.

ಉದಾರತೆಯಲ್ಲಿ ಧಾರಾಳತನ. ತನಗೆ ಉಂಟೊ ಇಲ್ಲವೊ ನೋಡರು. ಕೇಳಿದವರಿಗೆ ಇಲ್ಲ ಎನ್ನರು. ವಿದ್ಯೆ ಎಲ್ಲರಿಗೂ ದೊರಕಬೇಕು – ಯಾರಾದರೂ ಮಕ್ಕಳು ಅನುಕೂಲವಿಲ್ಲದೆ ಕಲಿಕೆಯನ್ನು ನಿಲ್ಲಿಸಿದರೆ ಅಂಥವರನ್ನು ಕರೆದು ಧೈರ್ಯ ಹೇಳಿ ಕಾಸು ಕೊಟ್ಟು ಕಲಿಯಲು ಸ್ಫೂರ್ತಿ ನೀಡುವವರೇ. ಬಿಕ್ಷುಕರಾಗಲಿ, ಬಡವರಾಗಲಿ ಎದುರಿಗೆ ಬಂದರೆ ಅವರಿಗೂ ಉಪಚಾರವೆ. ಇವೆಲ್ಲ ಅವರ ಮಾನವೀಯ ಕಳಕಳಿಯೆ.

ಬಡವರು, ದಲಿತರು ಉದ್ಧಾರವಾಗದೆ ಆರೋಗ್ಯವಂತ ಸಮಾಜ ನಿರ್ಮಾಣ ವಾಗದು. ಪ್ರತಿಯೊಬ್ಬ ವ್ಯಕ್ತಿಯೂ ಅಂತಹ ಸಮಾಜಕ್ಕಾಗಿ ದುಡಿಯಬೇಕು – ಇದು ಅವರ ನಿಲುವು. ಸೇವಾ ಭಾವನೆ ಬೆಳಸಿಕೊಳ್ಳದೆ ವ್ಯಕ್ತಿಯ ಘನತೆ ಹೆಚ್ಚದು ಎಂಬುದು ಅವರ ಅಬಿಪ್ರಾಯ. ಇದು ಕೇವಲ ಅಬಿಪ್ರಾಯ ಮಾತ್ರ ಅಲ್ಲ. ಅವರ ಬದುಕಿನಲ್ಲಿ ಇವೆಲ್ಲ ಜೀವಂತವಾಗಿತ್ತು.

ದಾಂತಿಯವರ ಕನ್ನಡ ಪ್ರೇಮ ಅನನ್ಯವಾದುದು. ಸಾಮಾನ್ಯವಾಗಿ ಕನ್ನಡ ಕೆಥೋಲಿಕ್ ಕ್ರೈಸ್ತರಿಗೆ ಇಂಗ್ಲಿಷ್ ವ್ಯಾಮೋಹ ಜಾಸ್ತಿ. ಅನೇಕರಿಗೆ ಕನ್ನಡವೇ ಬರುತ್ತಿರಲಿಲ್ಲ. ಆದರೆ ದಾಂತಿಯವರಿಗೆ ನಾವು ಕರ್ನಾಟಕದವರು ಎಂಬ ಅಭಿಮಾನ. ಕರ್ನಾಟಕದವರು ಕನ್ನಡವನ್ನು ಪ್ರೀತಿಸಬೇಕು, ಕನ್ನಡದ ಬಗ್ಗೆ ಗೌರವ ತಾಳಬೇಕು, ಕನ್ನಡವನ್ನು ಚೆನ್ನಾಗಿ ಕಲಿಯಬೇಕು ಎಂಬ ಧೋರಣೆಯವರಾಗಿದ್ದರು ಅವರು. ಶಿಕ್ಷಣದ ಭಾಷೆ ಕನ್ನಡವಾದ ಕಾರಣ ನಮ್ಮ ಮಕ್ಕಳು ಕನ್ನಡವನ್ನು ಆಸಕ್ತಿಯಿಂದ ಕಲಿಯಬೇಕು ಎನ್ನುತ್ತಿದ್ದರು. ಮನೆಯಲ್ಲಿ ತಮ್ಮ ಮಕ್ಕಳು ಶುದ್ಧಗನ್ನಡ ಬಳಸುವಂತೆ ಎಚ್ಚರ ವಹಿಸುತ್ತಿದ್ದರು. ಭಾಷಾ ಪ್ರೌಡಿಮೆ ಬಲಿಯಬೇಕಾದರೆ ಮಕ್ಕಳು ಪುಸ್ತಕ ಓದುವ ಹವ್ಯಾಸವನ್ನು ಬೆಳಸಿಕೊಳ್ಳಬೇಕು, ಶಾಲೆ ಮತ್ತು ಮನೆ ಆಟಕ್ಕೆ ಸೂಕ್ತ ಅನುಕೂಲವನ್ನು ಒದಗಿಸಬೇಕು ಎಂದು ಹೇಳುತ್ತಿದ್ದ ದಾಂತಿಯವರು ತಮ್ಮ ಮಕ್ಕಳಿಗೆ ಅದನ್ನು ಒದಗಿಸಿದ್ದರು. ಅವರ ಮಕ್ಕಳೆಲ್ಲರೂ ಇಂದಿಗೂ ಆ ಭಾಷಾ ಶುದ್ಧಿಯನ್ನು ಉಳಿಸಿಕೊಂಡಿರುವುದು ಈ ತಂದೆಯ ಘನತೆಯೆನ್ನಬೇಕು.

“ಕನ್ನಡ ನುಡಿ ವೃದ್ಧಿಯಾಗಬೇಕು. ಕನ್ನಡ ಪ್ರಾಂತ್ಯ ರಚನೆಯಾಗಬೇಕು. ಇದು ಕನ್ನಡಿಗರಾದ ನಮ್ಮ ಈಗಿನ ಘೋಷಣೆ. ನಮ್ಮ ಗುರಿಯು ನಿಶ್ಚಿತ ಮತ್ತು ನಿರ್ಮಲವಿದ್ದರೆ ಸಫಲತೆಯಿದೆ. ಸಂತೃಪ್ತಿಯಿದೆ. ಕನ್ನಡ ಪ್ರಾಂತ್ಯ ಅಧಿಕಾರಕ್ಕಾಗಿಯಲ್ಲ; ಕನ್ನಡಿಗರೆಲ್ಲರ ಅಭಿವೃದ್ಧಿಗಾಗಿ ಎಂಬ ಶುದ್ಧ ಭಾವನೆ ನಮ್ಮಲ್ಲಿದ್ದು, ನಮ್ಮ ಮಕ್ಕಳಲ್ಲಿ ಕನ್ನಡದ ಅಭಿಮಾನವನ್ನೂ ಉಚ್ಛ ಧ್ಯೇಯಗಳನ್ನೂ ಮೂಡಿಸುವುದರಲ್ಲಿ ಸ್ವಲ್ಪವಾದರೂ ತ್ಯಾಗ ಮಾಡಲು ನಾವು ಸಿದ್ಧರಿದ್ದರೆ ಮಾತ್ರ ನಾವು ಧನ್ಯರು.”

– ಇದು 1953ರ ಸುಬೋದಿನೀ ಪುಸ್ತಕ ಮಾಲೆಯ ‘ವೀರ ಬಾದಳ’ ನಾಟಕದ ‘ನಿವೇದನೆ’ಯಲ್ಲಿ ದಾಂತಿಯವರು ಆಡಿದ ಮಾತು. ಆಗಿನ್ನೂ ಕರ್ನಾಟಕದ ಏಕೀಕರಣ ಆಗಿರಲಿಲ್ಲ. ಏಕೀಕರಣಕ್ಕಾಗಿ ಪ್ರಯತ್ನ ನಡೆಯುತ್ತಿತ್ತು. ಇಲ್ಲಿ ಜಾತಿ, ಮತ, ಧರ್ಮ, ಪಕ್ಷ – ಪಂಗಡ ಭೇದವಿಲ್ಲ. ಕರ್ನಾಟಕದಲ್ಲಿರುವವರೆಲ್ಲರೂ ಕನ್ನಡಿಗರು. ಇವರೆಲ್ಲರ ಅಭಿವೃದ್ಧಿ ಯಾದರೆ ಮಾತ್ರ ಕರ್ನಾಟಕದ ಅಭಿವೃದ್ಧಿ – ಎಂಬ ವಿಚಾರ ದಾಂತಿಯವರ ನಾಡು, ನುಡಿ, ಸಂಸ್ಕೃತಿಯ ಬಗೆಗಿನ ಪ್ರೀತಿ, ಅಭಿಮಾನ, ಗೌರವದ ಕಡೆಗೆ ಬೆರಳು ಮಾಡುತ್ತದೆ.

ಸಾರಭೂತ ವ್ಯಕ್ತಿತ್ವದಿಂದ ಅವರು ಜನಮನ್ನಣೆ ಗಳಿಸಿದ್ದರು. ಅವರು ಗೈದ ಜನಹಿತ ಕಾರ್ಯವನ್ನು ಜನತೆ ಮರೆತಿಲ್ಲ. ಅನೇಕ ಸಂಘಸಂಸ್ಥೆಗಳು ಅವರನ್ನು ಕರೆದು ಸನ್ಮಾನಿಸಿವೆ. ಕೃತಜ್ಞತೆ ಸಲ್ಲಿಸಿವೆ. ತಮ್ಮ ಜೀವನದ ಕೊನೆಯವರೆಗೂ ಮತ್ತೂ ಮತ್ತೂ ಜನಹಿತ ಕಾರ್ಯ ಮಾಡಬೇಕೆಂಬ ಲವಲವಿಕೆಯುಳ್ಳವರಾಗಿದ್ದರು. ಬಿಡುವಿಲ್ಲದ ಚಟುವಟಿಕೆಗಳ ಪರಿಣಾಮವಿರಬೇಕು ಕೊನೆ ಕೊನೆಗೆ ಅನಾರೋಗ್ಯ ಅವರನ್ನು ಕಾಡುತ್ತಿತ್ತು. ನಿವೃತ್ತಿಯ ನಂತರ ಸಾಹಿತ್ಯ ಮತ್ತು ಆಧ್ಯಾತ್ಮದ ಕಡೆಗೆ ಹೆಚ್ಚು ಗಮನ ಕೊಟ್ಟಿದ್ದರು. ಯೇಸುಕ್ರಿಸ್ತರ ಕುರಿತು ಗ್ರಂಥವೊಂದನ್ನು ರಚಿಸಬೇಕೆಂಬ ಆಕಾಂಕ್ಷೆಯುಳ್ಳವರಾಗಿದ್ದರು. ಅದಕ್ಕಾಗಿ ಕೆಲವು ವರ್ಷಗಳಿಂದ ಸಿದ್ಧತೆಯನ್ನು ಮಾಡಿಕೊಂಡಿದ್ದರು. ಆಳ ಅಧ್ಯಯನದಲ್ಲಿ ತೊಡಗಿದ್ದರು. 1982ರ ನವಂಬರ್ ಹದಿನೆಂಟ ರಂದು ಈ ಗ್ರಂಥವನ್ನು ಅವರು ಪೂರ್ತಿಗೊಳಿಸಿದಾಗ ತಮ್ಮ ಜೀವನದ ಒಂದು ಮಹತ್ತ್ವದ ಕಾರ್ಯ ಪೂರ್ಣಗೊಂಡ ಸಂತೋಷವನ್ನು ಅನುಭವಿಸಿದ್ದರು. ಒಬ್ಬ ಸಾಹಿತಿಗೆ ಒಂದು ಕೃತಿಯನ್ನು ರಚಿಸಿದಾಗ ಆಗುವ ಆನಂದ ಅವರ್ಣನೀಯ. ಅಂತಹ ಆನಂದಕ್ಕೆ ಅವರು ಭಾಜನರಾಗಿದ್ದರು. ಸಾಹಿತ್ಯ ಸದಾ ಸುಖಕೊಡುವ ಸಾಧನವಾಗಿತ್ತು ಅವರಿಗೆ. ಆ ಸುಖವನ್ನು ಪಡೆದ ಅವರು ಇತರರಿಗೂ ಸಾಹಿತ್ಯ ಸುಖ ಹೊಂದಲು ಪ್ರೇರೇಪಿಸುತ್ತಿದ್ದರು. ಕರ್ನಾಟಕದ ಕ್ರೈಸ್ತರು ಕನ್ನಡವನ್ನು ನಿರ್ಲಕ್ಷಿಸಬಾರದು ಎಂಬುದು ಕೂಡ ಅವರ ಒತ್ತಾಸೆಯಾಗಿತ್ತು.

ಮಂಗಳೂರಿನ ಕೆಥೋಲಿಕ್ ಸಭೆ ದಾಂತಿಯವರ ಕನ್ನಡ ಪ್ರೇಮವನ್ನು ಮರೆತಿಲ್ಲ. ‘ದಾಂತಿ ಸ್ಮಾರಕ ಸಾಹಿತ್ಯ ಟ್ರಸ್ಟ್’ನ್ನು ಸ್ಥಾಪಿಸಿ ಅವರ ಆ ಭಾವನೆಗೆ ಗೌರವ ಸಲ್ಲಿಸಿದೆ. ಪ್ರತಿ ವರುಷ ಶ್ರೇಷ್ಠ ಕನ್ನಡ ಸಾಹಿತ್ಯ ಪುರಸ್ಕಾರವನ್ನು ನೀಡುತ್ತಿದೆ. ಕನ್ನಡದಲ್ಲಿ ಸಾಹಿತ್ಯ ರಚನೆ ಮಾಡುವ ಕ್ರೈಸ್ತ ಬರೆಹಗಾರರಿಗೆ ಈ ಪುರಸ್ಕಾರ ಸಲ್ಲುತ್ತದೆ. ಇದು ದಾಂತಿಯವರ ಹೆಸರಿನಲ್ಲಿ ಕನ್ನಡವನ್ನು ಪ್ರೋತ್ಸಾಹಿಸುವ, ಗೌರವಿಸುವ ಪ್ರಕ್ರಿಂಯೆಂ  ಆಗಿದೆ.

ಆಕಾಶವಾಣಿಯು ಇವರ ಚಿಂತನ, ಭಾಷಣಗಳನ್ನು ಬಳಸಿಕೊಂಡಿದೆ. ಇವರ ವಿಚಾರಗಳನ್ನು ಪ್ರಸಾರ ಮಾಡಿ ಇವರ ವಿದ್ವತ್ತಿಗೆ ಗೌರವ ಇತ್ತಿದೆ. ಕೊಂಕಣಿ ಜಾನಪದ ಸಾಹಿತ್ಯದ ಕುರಿತು ಉಪನ್ಯಾಸ ನೀಡಿದ್ದಾರೆ. ಅದರ ಮಹತ್ತ್ವವನ್ನು ಬಾನುಲಿಯಲ್ಲಿ ಪ್ರಚುರ ಪಡಿಸಿದ್ದಾರೆ.

ಶ್ರೀ ದಾಂತಿಯವರು ರಚಿಸಿದ ಎಲ್ಲ ಸಾಹಿತ್ಯ ಕೃತಿಗಳು ನಮಗೀಗ ಲಭ್ಯವಿಲ್ಲ. ಅವರು ಬರೆದ ನಾಟಕಗಳಲ್ಲಿ ಕೆಲವು ಮಾತ್ರ ನಮಗೀಗ ಲಭ್ಯ. ಹಸ್ತ ಪ್ರತಿಯಲ್ಲಿದ್ದ ಅನೇಕ ನಾಟಕಗಳು ಶಾಲೆಯಿಂದ ಶಾಲೆಗೆ ಹೋಗಿ ಯಾರ ಯಾರದೊ ಕೈ ಸೇರಿ, ಕೈ ತಪ್ಪಿ ಹೋಗಿವೆ. ಪತ್ರಿಕೆಗಳಲ್ಲಿ ಪ್ರಕಟವಾದ ಕತೆಗಳು, ಲೇಖನಗಳು ಹೆಚ್ಚಿನವು ಸಿಗುತ್ತಿಲ್ಲ. ಅದರ ಜಾಡನ್ನು ಹಿಡಿದು ಹೊರಟು ಪ್ರಯತ್ನಿಸಿದರೆ ಕೆಲವಾದರೂ ಬರೆಹಗಳು ಸಿಗಬಹುದು. ಇರುವಷ್ಟು ಕೃತಿಗಳನ್ನಾದರೂ ಉಳಿಸಿಕೊಳ್ಳುವ, ಮುಖ್ಯವಾಗಿ ಮುಂದಿನ ನಮ್ಮ ಮಕ್ಕಳಿಗೆ ಒದಗಿಸುವ ಪ್ರಯತ್ನ ಮಾಡಬೇಕಿದೆ. ಅವನ್ನು ಸೇರಿಸಿ ಸಮಗ್ರ ಸಂಪುಟವನ್ನು ತಂದರೆ ಅವರಿಗೂ ಅವರ ಸಾಹಿತ್ಯಕ್ಕೂ ಸಲ್ಲಿಸುವ ಗೌರವವೇ ಆಗಿದೆ. ಡಾ. ಸಬೀಹ ಭೂಮಿಗೌಡರು ‘ಕರಾವಳಿ ಕತೆಗಳು’  ತಮ್ಮ ಸಂಶೋಧನೆ ಸಂದರ್ಭದಲ್ಲಿ ದಾಂತಿಯವರ ಕತೆಗಳನ್ನು ಬಳಸಿಕೊಂಡಿರುವುದು ಮತ್ತು ಡಾ. ಬಿ. ಜನಾರ್ದನ ಭಟ್ಟರು ತಾವು ಸಂಪಾದಿಸಿದ ‘ಶತಮಾನದ ಕತೆಗಳು’ ಸಂಪುಟದಲ್ಲಿ ಅವರ ಎರಡು ಕತೆಗಳನ್ನು ಸೇರಿಸಿರುವುದು ಇಲ್ಲಿ ಉಲ್ಲೇಖನೀಯ.

ಒಟ್ಟಿನಲ್ಲಿ ನಾಡಿನ ಸಾಹಿತಿಯಾಗಿ, ಸೇವಾಪರ ಸಂಪನ್ನ ವ್ಯಕ್ತಿಯಾಗಿ ಶ್ರೀ ದಾಂತಿಯವರು ನಮ್ಮ ಕಣ್ಮನಗಳನ್ನು ಸದಾ ತುಂಬಿಕೊಳ್ಳುತ್ತಾರೆ.