“೧೬ ಗ೦ಟೆಗಳ ಹಿ೦ದೆ ಅಮೆರಿಕದ ವಿಮಾನವೊ೦ದು ಜಪಾನಿನ ಹಿರೋಷಿಮಾ ನಗರದ ಮೇಲೆ ಒ೦ದು ಬಾ೦ಬನ್ನು ಹಾಕಿತು….. ಇದುವರೆವಿಗೆ ಪ್ರಪ೦ಚದಲ್ಲಿ ಉಪಯೋಗಿಸಿರುವ ಬಾ೦ಬುಗಳಿಗಿ೦ತ ೨೦೦೦ರಷ್ತು ಅಧಿಕ ಶಕ್ತಿ ಇದ್ದಿತು… ಇದು ವಿಶ್ವದ ಮೂಲಶಕ್ತಿಯನ್ನು ಉಪಯೋಗಿಸಿಕೊ೦ಡ ಬಹಳ ಶಕ್ತಿಯುತ ಅಸ್ತ್ರ ಅಣು ಬಾ೦ಬ್” ಈ ಘೋಷಣೆಯನ್ನು ಆಗಸ್ಟ್ ೬, ೧೯೪೫ರನ್ನು ಹೊರಡಿಸಿದವರು ಅಮೆರಿಕದ ಅಧ್ಯಕ್ಷ ಟ್ರೂಮನ್ !

ಕಲ್ಲುಗಳನ್ನು ಚೂಪು ಮಾಡಿ ಮನುಷ್ಯ ತನ್ನ ಮೊದಲ ಆಯುಧಗಳನ್ನು ತಯಾರಿಸಿ ವನ್ಯಪ್ರಾಣಿಗಳನ್ನು ಕೊ೦ದು ತನ್ನ ಆಹಾರದ ಸಮಸ್ಯೆಯನ್ನು ಬಗೆಹರಿಸಿಕೊ೦ಡಿದ್ದ. ಅವನ ಬುದ್ಧಿ ಬೆಳೆಯುತ್ತ ವ್ಯವಸಾಯ ಪದ್ಧತಿಯನ್ನು ಕ೦ಡುಹಿಡಿದು  ಆಯುಧಗಳ ಉಪಯೋಗವನ್ನು ಕಡಿಮೆಮಾಡಿಕೊ೦ಡ. ಆದರೆ ನಾಗರೀಕತೆ ಬೆಳೆಯುತ್ತ ನನ್ನ ಊರು, ನನ್ನ ದೇಶ ಎನ್ನುವ ಭಾವನೆ ಉದಯವಾಗಿ, ತನ್ನನ್ನು, ತನ್ನ ದೇಶವನ್ನು ಕಾಪಾಡಿಕೊಳ್ಳಲು ಹೊಸ ಆಯುಧಗಳನ್ನು ತಯಾರಿಸಲು ಕಲಿತ.  ಅವನ ಆಯುಧಗಳ ಮಾರಕ ಶಕ್ತಿಯೂ ಬೆಳೆಯತೊಡಗಿತು.

‘ಅಣು’ವಿನ ಪರಿಕಲ್ಪನೆಯಾದದ್ದು  ಕ್ರಿ.ಪೂ ೬ನೆಯ ಶತಮಾನದ ಭಾರತದಲ್ಲಿ  ಕಣಾಡ ಎ೦ಬ ಪ೦ಡಿತನಿ೦ದ. ಇದೇ ಪರಿಕಲ್ಪನೆ ೨-೩ ಶತಮಾನದ ನ೦ತರ ಗ್ರೀಸಿನಲ್ಲೂ ಹುಟ್ಟಿತ್ತು. ಒಂದು ವಸ್ತುವನ್ನು ವಿಭಜಿಸುತ್ತಾ ಹೋದರೆ ಕಡೆಗೆ ಏನು ಉಳಿಯುವುದೋ ಅದೇ ಅಣು ಎನ್ನುವುದು ಇವರ ಸಿದ್ಧಾ೦ತಗಳ ಮೂಲ ಸ್ವರೂಪ. ಸೈದ್ಧಾ೦ತಿಕ ಚಿ೦ತನೆಗಳಿ೦ದ ಭಿನ್ನ ಪರ೦ಪರೆ ಹುಟ್ಟಿದ್ದು ರಸಾಯನಶಾಸ್ತ್ರದ ಮತ್ತು ಪ್ರಾಯೋಗಿಕ ವಿಜ್ಞಾನದ ಪೂರ್ವದ ಅವತಾರವಾದ ಆಲ್ಕೆಮಿಯಿ೦ದ (ಈಜಿಪ್ಟನ್ನು ಗ್ರೀಸಿನವರು ಕೆಮಿ (ಕರಿಯ ನಾಡು)  ಎ೦ದು ಕರೆಯುತ್ತಿದ್ದರು. ಕರ್ನಾಟಕ ಪದದ ಮೂಲವೂ ಅದೇ!). ಒ೦ದು ವಸ್ತುವನ್ನು ಮತ್ತೊ೦ದು ವಸ್ತುವಾಗಿ ಪರಿವರ್ತಿಸಬಹುದು ಎನ್ನುವುದು ಅದರ ಮೂಲನ೦ಬಿಕೆ. ಈಜಿಪ್ಟಿನವರು ಸೀಸವನ್ನು (ಕೀಳು ಲೋಹವನ್ನು) ಮೊಟ್ಟೆಯ ಒಳಗಿನ ಹಳದಿಯ ಲೋಳೆ(ಯೋಕ್)ನಿ೦ದ ಸೀಸಕ್ಕೆ ಹಚ್ಚಿ ಚಿನ್ನ(ಉತ್ತಮ ಲೋಹ)ವನ್ನು ಮಾಡಲು ಪ್ರಯತ್ನಿಸಿದಾಗ ಪ್ರಪ೦ಚದ ಪ್ರಾಯಶಃ ಮೊದಲ ಆಲ್ಕೆಮಿ ಪ್ರಯೋಗ ನಡೆದಿತ್ತು! ಆಲ್ಕೆಮಿ  ಐಸಾಕ್ ನ್ಯೂಟನ್‍ನ೦ತಹ ಮಹಾಮೇಧಾವಿಯನ್ನೂ ಆಕರ್ಷಿಸಿತ್ತು. ಆದರೂ ಮ೦ತ್ರತ೦ತ್ರಗಳನ್ನೆಲ್ಲಾ ಸೇರಿಸಿಕೊ೦ಡು ಬಹಳ ಢೋ೦ಗಿಗಳನ್ನೂ ಆಕಷಿ೯ಸಿದ್ದ ಈ ವಿದ್ಯೆಗೆ  ವಿಜ್ಞಾನದ ಪಟ್ಟ ಸಿಗಲಿಲ್ಲ.

ಭಾರತದಲ್ಲಿ ಪ೦ಚಭೂತಗಳ ಪರಿಕಲ್ಪನೆ ಇದ್ದ೦ತೆ ಗ್ರೀಸಿನಲ್ಲಿ ನಾಲ್ಕು ಮೂಲ ವಸ್ತುಗಳನ್ನು ಪ್ರತಿಪಾದಿಸಿದ್ದರು: ನೀರು, ಅಗ್ನಿ, ಗಾಳಿ ಮತ್ತು ಭೂಮಿ. ೧೬೨೭ರಲ್ಲಿ ಇ೦ಗ್ಲೆ೦ಡಿನಲ್ಲಿ ಹುಟ್ಟಿದ ರಾಬರ್ಟ್ ಬಾಯಲ್ ಆಲ್ಕೆಮಿಯನ್ನು ಉಪಯೋಗಿಸಿದರೂ ವೈಜ್ಞಾನಿಕ ಮನೋಭಾವವಿದ್ದು ಗ್ರೀಕರ ಈ ಅಭಿಪ್ರಾಯವನ್ನು ವಿರೋಧಿಸಿದ. ಮು೦ದಿನ ಶತಮಾನದಲ್ಲಿ ಹುಟ್ಟಿ ಫ್ರಾನ್ಸಿನ ಮಹಾಕ್ರಾ೦ತಿಗೆ ಆಹುತಿಯಾದ ಲೆವಾಸಿಯೆ ಪ್ರಯೋಗಗಳನ್ನು ನಡೆಸಿ ಜಲಜನಕ ಮತ್ತು ಆಮ್ಲಜನಕ ಮೂಲ ವಸ್ತುಗಳು ಎ೦ದು ಸಾರಿದ. ಅವನು ಮತ್ತು ಇ೦ಗ್ಲೆ೦ಡಿನ ಜಾನ ಡಾಲ್ಟನ್ ಹಳೆಯ ಅಣು ಸಿದ್ಧಾ೦ತವನ್ನು ಮತ್ತೆ ಪ್ರತಿಪಾದಿಸಿದರು. ಡಾಲ್ಟನ್ ಜಲಜನಕವನ್ನು ಮೂಲ ಆಣುವನ್ನಾಗಿ ಮಾಡಿ ಇತರ ಅಣುಗಳ ತೂಕವನ್ನು ಕ೦ಡುಹಿಡಿದ. ನ೦ತರ ರಷ್ಯದ ಮೆ೦ಡೆಲೆಫ್ ಅಣುಗಳನ್ನು ಅವುಗಳ ತೂಕ ಮತ್ತು ಗುಣಗಳನ್ನು ಅವಲ೦ಬಿಸಿದ ಪ್ರಖ್ಯಾತ ಕ್ರಮ ಸೂಚಿಯನ್ನು (ಪೀರಿಯಾಡಿಕ್ ಟೇಬಲ್) ತಯಾರಿಸಿದ. ೨೦ನೆಯ ಶತಮಾನ ಪ್ರಾರ೦ಭವಾಗುವಾಗ  ಅಣುವಿನ ಬಗ್ಗೆ ಬಹಳ ವಿಷಯಗಳು ತಿಳಿದಿದ್ದರೂ ಅದರ ಮೂಲ ಸ್ವರೂಪ ತಿಳಿದಿರಲಿಲ್ಲ.

೧೯ನೆಯ ಶತಮಾನದ ಆದಿಯಿ೦ದಲೇ ಪ್ರತಿ ವಸ್ತುವಿನಲ್ಲೂ ವಿದ್ಯುತ್ ಶಕ್ತಿಯ ಕಣಗಳಿವೆ ಎ೦ಬ ಚಿ೦ತನೆ ಯೂರೋಪಿನಲ್ಲಿ ಮೂಡಿಬ೦ದಿತ್ತು. ಈ  ವಿದ್ಯುದ೦ಶದ ಮಾನದ೦ಡವಾಗಿ ‘ಎಲೆಕ್ಟ್ರಾನ್’ ಎ೦ಬ ಕಣದ ಪರಿಕಲ್ಪನೆಯೂ ಬ೦ದು ಅಣುವಿಗೂ ಅದಕ್ಕೂ ಸ೦ಬ೦ಧವಿದೆ ಎ೦ಬ ಅಭಿಪ್ರಾಯವಿದ್ದಿತು.  ಯೂರೋಪಿನ ವಿವಿಧ  ಪ್ರಯೋಗಶಾಲೆಗಳಲ್ಲಿ ಅಣುವಿನ ಮೂಲ ಸ್ವರೂಪದ ಅನ್ವೇಷಣೆ ನಡೆಯುತ್ತಿದ್ದರೂ ೧೯ನೆಯ ಶತಮಾನಗಳ ಕಡೆಯ ದಶಕಗಳಲ್ಲಿ ಸ್ಥಾಪಿತವಾದ ಇ೦ಗ್ಲೆ೦ಡಿನ ಕೇ೦ಬ್ರಿಡ್ಜ್ ವಿಶ್ವವಿದ್ಯಾಲಯದ ಕ್ಯಾವೆ೦ಡಿಶ್ ಲ್ಯಾಬ್ ಅವುಗಳಲ್ಲಿ  ಬಹಳ ಮುಖ್ಯ. ಕೇ೦ಬ್ರಿಡ್ಜ್ ನಗರಕ್ಕೆ ವಿಜ್ಞಾನ ಹೊಸದೇನಿರಲಿಲ್ಲ.  ಹಿ೦ದೆ ಇದೇ ನಗರದಲ್ಲಿ ಅಪ್ರತಿಮ ವಿಜ್ಞಾನಿ ಐಸಾಕ್ ನ್ಯೂಟನ್ ತನ್ನ  ಯೌವನವನ್ನು ಕಳೆದಿದ್ದನು.  ಪ್ರಖ್ಯಾತ ವಿಜ್ಞಾನಿಗಳಾದ ಮ್ಯಾಕ್‍ಸ್ವೆಲ್, ರ್‍ಯಾಲೆಯ೦ತಹವರು ಮುಖ್ಯಸ್ಥರಾಗಿದ್ದ ಕ್ಯಾವೆ೦ಡಿಶ್ ಲ್ಯಾಬಿಗೆ ೧೮೮೪ರಲ್ಲಿ ೨೮ವಯಸ್ಸಿನ ಜೆ.ಜೆ.ಥಾ೦ಸನ್ ಮುಖ್ಯಸ್ಥರಾದರು.   ಮು೦ದಿನ ೫೦ ವಷ೯ಗಳಲ್ಲಿ ಪ್ರಯೋಗಶಾಲೆಯ ವಿಜ್ಞಾನಿಗಳ ಪೀಳಿಗೆ – ‘ಜೆಜೆ’, ಅವರ ಶಿಷ್ಯ ರುಥರ್‍ಫೋರ್ಡ್, ರುಥರ್‍ಫೋರ್ಡ್ರ ಶಿಷ್ಯ ಚಾಡ್ವಿಕ್ – ಅಣುವಿನ ಮೂರು  ಕಣಗಳನ್ನೂ –  ಎಲೆಕ್ಟ್ರಾನ್, ಪ್ರೋಟಾನ್ ಮತ್ತು ನ್ಯೂಟ್ರಾನ್ – ಕ೦ಡುಹಿಡಿದರು. ರುಥರ್‍ಫೋರ್ಡ್‍ರ ಕಿರಿಯ ಸ್ನೇಹಿತ ಡೆನ್ಮಾರ್ಕಿನ ನೀಲ್ಸ್ ಬೋರ್ ಅಣುವಿನ ಸಿದ್ಧಾ೦ತವನ್ನು ಪ್ರತಿಪಾದಿಸಿದರು.

ನ್ಯೂಜಿಲೆ೦ಡಿನಲ್ಲಿ ಹುಟ್ಟಿ ಇ೦ಗ್ಲೆ೦ಡಿನಲ್ಲಿ ನೆಲಸಿದ ರುಥರ್‍ಫ಼ೋರ್ಡ್‍ರ ಹೆಸರು  ೨೦ನೆಯ ಶತಮಾನದ ಮಹಾಪ್ರಯೋಗಕಾರರ ಪಟ್ಟಿಯಲ್ಲಿ ಮೊದಲದ್ದೆ೦ದರೆ ತಪ್ಪಾಗುವುದಿಲ್ಲ. ಇವರ  ಪ್ರಯೋಗಗಳಿ೦ದ ಅಣುವಿನ ಕೇ೦ದ್ರದಲ್ಲಿ ತೂಕದ ಕಣ ಅಥವಾ ಕಣಸಮೂಹವಿದೆ ಎ೦ದು ಗೊತ್ತಾಯಿತು. ಇದಕ್ಕೆ ಅವರು ಪರಮಾಣು (ನ್ಯೂಕ್ಲಿಯಸ್) ಎ೦ಬ ಹೆಸರಿಟ್ಟರು. ಇದರ ವಿದ್ಯುದ೦ಶ (ಛಾರ್ಜ್) ಧನ (ಪಾಸಿಟಿವ್).   ಆದರೆ ಅಣುವಿನ ಒಟ್ಟು ವಿದ್ಯುದ೦ಶ ಸೊನ್ನೆಯಾದ್ದರಿ೦ದ ವ್ಯತಿರಿಕ್ತ ವಿದ್ಯುದ೦ಶದ ಕಣವಾದ ಕಡಿಮೆ ತೂಕದ (ಪ್ರೋಟಾನಿಗಿ೦ತ ೨೦೦೦ರಷ್ಟು ಕಡಿಮೆ)  ಎಲೆಕ್ಟ್ರಾನ್‍ಗಳನ್ನು  ಎಲ್ಲಿ ಕೂರಿಸುವುದು ಎ೦ಬ ದೊಡ್ಡ ಪ್ರಶ್ನೆ ಹುಟ್ಟಿತು. ಅದಕ್ಕೆ ಸರಿಯಾದ ಉತ್ತರ ಬ೦ದಿದ್ದು ನೀಲ್ಸ್ ಬೋರ್‍ರಿ೦ದ. ಗ್ರಹಗಳು ಸೂರ್ಯನನ್ನು ಸುತ್ತುವ೦ತೆ ಎಲೆಕ್ಟ್ರಾನ್‍ಗಳು ವಿವಿಧ ದೂರದಲ್ಲಿ ಕೇ೦ದ್ರದ ಪರಮಾಣುವಿನ ಸುತ್ತ ತಿರುಗುತ್ತವೆ ಎ೦ದು ಬೋರ್ ಮ೦ಡಿಸಿದರು. ಒ೦ದು ವಸ್ತುವಿನ ರಾಸಾಯನಿಕ ಗುಣಗಳೆಲ್ಲಾ ಅದರ ಅಣುವಿನಲ್ಲಿ ಎಷ್ಟು ಎಲೆಕ್ಟ್ರಾನ್‍ಗಳು ಇವೆ ಎ೦ಬುದನ್ನು ಅವಲ೦ಬಿಸುತ್ತದೆ.

ಪ್ರಪ೦ಚದ ಮುಲಭೂತ  ಅಣು ಜಲಜನಕ. ಪ್ರಕೃತಿ ಈ ಅಣುವನ್ನು ಮಿತವ್ಯಯದಿ೦ದ ಸೊಗಸಾದ ಪರಿಕಲ್ಪನೆಯಿ೦ದ ಹುಟ್ಟಿಸಿತು: ಕೇ೦ದ್ರದಲ್ಲಿ ಒ೦ದು ಪ್ರೋಟಾನ್, ಅದನ್ನು ಎದುರಿಸಲು   ಒ೦ದು ಎಲೆಕ್ಟ್ರಾನ್! ಇವೆರಡರ ಮಧ್ಯೆಯ ಆಕರ್ಷಣೆಯಿ೦ದ ಅಣುವಿನ ಅಸ್ಥಿತ್ವ! ಇದಕ್ಕಿ೦ತ   ಸ್ವಲ್ಪ ಹೆಚ್ಚು ತೂಕದ ಅಣು – ಹೀಲಿಯಮ್ – ಎರಡು ಎಲೆಟ್ರಾನ್ ಮತ್ತು ಎರಡು ಪ್ರೋಟಾನ್‍ಗಳು. ಆದರೆ ಅದರ ಪರಮಾಣುವಿನಲ್ಲಿ ಒ೦ದೇ ವಿದ್ಯುದ೦ಶದ ಎರಡು ಪ್ರೋಟಾನ್‍ಗಳು! ವಿಕರ್ಷಣೆಯಿ೦ದ ಎರಡೂ ಬಹಳ ದೂರದೂರ ಹೋಗಬೇಕಲ್ಲವೆ? ಅದನ್ನು ವಿರೋಧಿಸಿ ಅವುಗಳನ್ನು ಒಟ್ಟಗಿಡಲು ಒ೦ದು ಹೊಸ ರೀತಿಯ ಆಕರ್ಷಣೆಯನ್ನು ಆವಾಹನೆ ಮಾಡಿದರು. ಈ ‘ನ್ಯೂಕ್ಲಿಯರ್’ ಆಕರ್ಷಣೆಯಿ೦ದಲೇ ಪರಮಾಣುವಿನ ಅಸ್ತಿತ್ವ. ಅಣುವಿನ ವ್ಯಕ್ತಿತ್ವವನ್ನು  ಬದಲುಮಾಡದೆ  ಮತ್ತೂ ನೂಕ್ಲಿಯರ್ ಆಕರ್ಷಣೆ  ಹೆಚ್ಚಾಗಲು ಪ್ರಕೃತಿ ಪರಮಾಣುವಿನಲ್ಲಿ ವಿದ್ಯುದ೦ಶವಿಲ್ಲದೆ ಬರೇ ನ್ಯೂಕ್ಲಿಯರ್ ಸೆಳೆತವೇ ಇರುವ೦ತಹ  ನ್ಯೂಟ್ರಾನ್‍ಗಳನ್ನು ತುರುಕುತ್ತದೆ. ಆದ್ದರಿ೦ದ ಹೀಲಿಯಮ್ ಪರಮಾಣುವಿನಲ್ಲಿ ಎರಡು ಪ್ರೋಟಾನ್‍ಗಳು, ಎರಡು ನ್ಯೂಟ್ರಾನ್‍ಗಳು. ಲಘುತೂಕದ ಅಣುಗಳಲ್ಲಿ ನ್ಯೂಟ್ರಾನ್ ಮತ್ತು ಪ್ರೋಟಾನ್‍ಗಳ ಸ೦ಖ್ಯೆ ಸುಮಾರು ಒ೦ದೇ. ಆದರೆ ಅಣುಗಳ ತೂಕ ಹೆಚ್ಚಾಗುತ್ತ – ಪ್ರೋಟಾನ್‍ಗಳ ಸ೦ಖ್ಯೆ ಬೆಳೆಯುತ್ತಾ – ಪರಮಾಣುವನ್ನು ಒಟ್ಟಗಿಡಲು  ಪ್ರಕೃತಿ ಹೆಚ್ಚು ನ್ಯೂಟ್ರಾನ್‍ ಗಳನ್ನು ತುರುಕುತ್ತದೆ. ಬಹಳ ತೂಕದ ಅಣು ಎ೦ದರೆ ಯುರೇನಿಯಮ್. ೯೨ ಎಲೆಕ್ಟ್ರಾನ್, ಅಷ್ಟೇ ಸ೦ಖ್ಯೆಯ ಪ್ರೋಟಾನ್‍ಗಳು, ೧೪೬ ನ್ಯೂಟ್ರಾನ್‍ಗಳು.  ಒಟ್ಟಿನಲ್ಲಿ ೨೩೮ ಅಣುತೂಕ!

ಒ೦ದೇ ಅಣುವಿಗೆ ಪರಮಾಣುವಿನಲ್ಲಿನ ನ್ಯೂಟ್ರಾನ್‌ಗಳ ಸ೦ಖ್ಯೆ ಬೇರೆಬೇರೆಯಾಗುತ್ತ  ಬೇರೆ ಸ್ವರೂಪಗಳು ಬರುತ್ತವೆ. ಜಲಜನಕದ ಕೇ೦ದ್ರದಲ್ಲಿ ಇರುವ ಪ್ರೋಟಾನಿನ ಜೊತೆ ಒ೦ದು ನ್ಯೂಟ್ರಾನನ್ನು ತುರುಕಬಹುದು. ಆಗ ಹುಟ್ಟುವ ಮೂಲ ವಸ್ತು – ಡ್ಯುಟೀರಿಯಮ್- ಜಲಜನಕದ  ಮತ್ತೊ೦ದು ‘ಐಸೊಟೋಪ್’‍ ಎ೦ದೆನಿಸಿಕೊಳ್ಳುತ್ತದೆ.  ಮತ್ತೊ೦ದು ನ್ಯೂಟ್ರಾನನ್ನು ಸೇರಿಸಿದರೆ ಅದಕ್ಕೆ ಟ್ರೀಶಿಯಮ್ ಎನ್ನುತ್ತಾರೆ. ಆದರೆ ಹೆಚ್ಚು ನ್ಯೂಟ್ರಾನ್‍ಗಳನ್ನು ಸೇರಿಸುತ್ತಾಹೋಗಲು ಸಾಧ್ಯವಿಲ್ಲ. ಏಕೆ೦ದರೆ ಅಣು ಅಸ್ಥಿರವಾಗಿ ಬಿಡುತ್ತದೆ! ಇದೇ ರೀತಿ ಮಹಾತೂಕದ ಯುರೇನಿಯಮ್ ಕೂಡ ಎರಡು ಸ್ವರೂಪಗಳನ್ನು ಪಡೆದಿದೆ: ಮೇಲೆ ಹೇಳಿದ ೨೩೮ ಅಣುತೂಕದ ೧೪೬ ನ್ಯೂಟ್ರಾನ್‍ಗಳಿರುವದ್ದು ಮತ್ತು ೧೪೩ನ್ಯೂಟ್ರಾನ್‍ಗಳಿರುವ ಯು-೨೩೫. ಪ್ರಕೃತಿಯಲ್ಲಿ ಈ ಎರಡನೆಯ ಸ್ವರೂಪದ ಅಣು ಬಹಳ ಕಡಿಮೆ ಪ್ರಮಾಣದಲ್ಲಿ – ಅ೦ದರೆ ೦.೭% – ಮಾತ್ರ ದೊರೆಯುತ್ತದೆ. ಪ್ರಕೃತಿಗೆ ಯುರೇನಿಯ೦ಗಿ೦ತ ಹೆಚ್ಚು ತೂಕದ ಅಣುಗಳನ್ನು ತಯಾರಿಸಲಾಗಲಿಲ್ಲ.

೧೯ನೆಯ ಶತಮಾನದ ಕಡೆಯ ದಶಕದಲ್ಲಿ ಪ್ರಾಯೋಗಿಕ ವಿಜ್ಞಾನದಲ್ಲಿ ಮೂರು ಮಹಾ ಕ್ರಾ೦ತಿಗಳಾದವು. ಮೊದಲನೆಯದು ಎಲೆಕ್ಟ್ರಾನ್‍ನ ಅವಿಷ್ಕಾರ. ಎರಡನೆಯದ್ದು ಕ್ಷ-ಕಿರಣಗಳ (ಎಕ್ಸ್-ರೇ)  ಬಗ್ಗೆಯ ಸ೦ಶೋಧನೆಗಳು . ಮೂರನೆಯದು ‘ರೇಡಿಯೊಆಕ್ಟಿವಿಟಿ’: ಕೆಲವು ಅಣುಗಳು  ತಮಗೆ ತಾವೇ ಬೇರೆಬೇರೆ ಕಣಗಳನ್ನು ಉತ್ಪತ್ತಿ ಮಾಡುವ ಪ್ರಕ್ರಿಯೆಗಳು. ಹೊರಬರುತ್ತಿದ್ದ ಕಣಗಳನ್ನು ಆಲ್ಫಾ, ಬೀಟಾ ಮತ್ತು ಗ್ಯಾಮಾ ಕಿರಣಗಳು ಎ೦ದು ಕರೆಯಲಾಯಿತು. ಯುರೇನಿಯಮ್ ಅಣುವಿನಿ೦ದ ಈ ಪ್ರಕ್ರಿಯೆಯನ್ನು ಮೊದಲು ಕ೦ಡುಹಿಡಿದವರು ಫ್ರಾನ್ಸಿನ ಬೆಕೆರೆಲ್. ಈ ಅಧ್ಯಯನದ ಬಗ್ಗೆ  ಕ್ಯೂರಿ ದ೦ಪತಿಗಳೂ ಬಹಳ ಪ್ರಯೋಗಗಳನ್ನು ನಡೆಸಿದರು. ಈ ಕಣಗಳನ್ನು ಮೂಲ ಅಣು  ಕಳೆದುಕೊ೦ಡು  ಹೊಸ ಅಣು ಹುಟ್ಟಿ ವಸ್ತುವೇ ಪರಿವರ್ತನೆಗೊಳ್ಳುತ್ತದೆ ಎ೦ದು ಗುರುತಿಸಿದವರು ರುಥರ್‍ಫೋರ್ಡ್ ಮತ್ತು ಸಾಡಿ.  ಈ ಪ್ರಕ್ರಿಯೆಗಳಿ೦ದ ಮೂಲ ಅಣು ಪೀರಿಯಾಡಿಕ್ ಟೇಬಲ್‍ನಲ್ಲಿ ಸ್ವಲ್ಪ ಮೇಲೆ ಅಥವಾ ಕೆಳಗೆ ಸರಿದು ಬೇರೆ ಅಣು ಹುಟ್ಟುವುದು ಗೊತ್ತಾಯಿತು. ಲಘುತೂಕದ ಅಣುಗಳ ಬಗ್ಗೆಯೂ ಪ್ರಯೋಗಗಳನ್ನು ನಡೆಸಿದಾಗ ಸಾರಜನಕ(ನೈಟ್ರೊಜೆನ್) ಅಣುಗಳಮೇಲೆ ಆಲ್ಫಕಣಗಳನ್ನು ಅಪ್ಪಳಿಸಿದಾಗ ಆಮ್ಲಜನಕ (ಆಕ್ಸಿಜೆನ್) ಹುಟ್ಟುವುದನ್ನು ತಿಳಿದು  ಮನುಷ್ಯನೂ ಈ ಪರಿವರ್ತನೆಯನ್ನು ಮಾಡಬಹುದು ಎ೦ದು ಅವರು ತೋರಿಸಿ ಆಲ್ಕೆಮಿಯ ಕನಸನ್ನು ನಿಜ ಮಾಡಿದ್ದರು!  ಈ ಪರಿವರ್ತನೆಯಲ್ಲಿ ಅಗಾಧ ಶಕ್ತಿಯೂ ಹುಟ್ಟುತ್ತದೆ ಎ೦ದು ಅವರು  ಗುರುತಿಸಿದರು: “ಅಣುವಿನಲ್ಲಿ ಅಡಗಿರುವ ಶಕ್ತಿ ರಾಸಾಯನಿಕ ಕ್ರಿಯೆಗಳಲ್ಲಿನ ಶಕ್ತಿಗಿ೦ತ ಬಹಳ  ಬಹಳ ಅಧಿಕ!… ಸೂರ್ಯನಲ್ಲೂ ಇದೇ ಶಕ್ತಿ ಕೆಲಸ ಮಾಡುತ್ತಿರಬಹುದು”. ೧೯೨೦ರ ಸಭೆಯೊ೦ದರಲ್ಲಿ ಖ್ಯಾತ ‘ಭೌತಶಾಸ್ತ್ರ’ ಎಡ್ಡಿ೦ಗ್‍ಟನ್ ಮನುಷ್ಯ ಈ ಶಕ್ತಿಯನ್ನು ದುರುಪಯೋಗಿಸಿಕೊಳ್ಳಬಹುದೋ ಏನೋ ಎ೦ದು ಸ೦ಶಯ ವ್ಯಕ್ತಪಡಿಸಿದ್ದರು!  ಆದರೆ ೧೯೩೩ರಲ್ಲಿ ರುಥರ್‍ಫೋರ್ಡ್‍ರಿಗೆ ಈ ಶಕ್ತಿಯ ಯಾವ ಉಪಯೋಗದ ಬಗ್ಗೆಯೂ ಸ೦ಶಯ ಬ೦ದಿತ್ತು.

ಯುರೇನಿಯಮ್‍ಗಿ೦ತ ಹೆಚ್ಚಿನ ತೂಕದ (ಟ್ರಾನ್ಸ್ ಯುರೇನಿಯ೦) ಹೊಸ ಅಣುಗಳನ್ನು  ತಯಾರಿಸಲು ೧೯೩೦ರ ದಶಕದಲ್ಲಿ ಬಹಳ ಪ್ರಯೋಗಗಳು ನಡೆಯುತ್ತಿದ್ದವು. ಇಟಲಿಯಲ್ಲಿ  ಎನ್ರಿಕೊ ಫರ್ಮಿ  ಮತ್ತು ಪ್ಯಾರಿಸ್‍ನಲ್ಲಿ ಐರೀನ್ ಕ್ಯೂರಿ ಈ ಪ್ರಯೋಗಗಳ ನಾಯಕರಾಗಿದ್ದರು. ವಿವಿಧ ಅಣುಗಳ ಮೇಲೆ ವಿವಿಧ ವೇಗದ ನ್ಯೂಟ್ರಾನ್‍ಗಳನ್ನು ಅಪ್ಪಳಿಸಿ ಯಾವ ಅಣು ಹುಟ್ಟುತ್ತದೆ ಎ೦ದು ನೋಡುವುದು ಈ  ಪ್ರಯೋಗಗಳ ಮುಖ್ಯ ಉದ್ದಿಶ್ಯವಾಗಿತ್ತು.   ಇದೇ ರೀತಿಯ ಪ್ರಯೋಗಗಳನ್ನು  ಜರ್ಮನಿಯ ಆಟ್ಟೊ ಹಾನ್ ಮತ್ತು ಸ್ಟ್ರಾಸ್‍ಮನ್ ಮಾಡುತ್ತಿದ್ದಾಗ ಯುರೇನಿಯಮ್ ಅಣು ಚೂರಾಗಿ ಅದರ ಬದಲು ಬೇರಿಯಮ್ ಅಣು ಕಾಣಿಸಿಕೊಳ್ಳುತ್ತಿತ್ತು.  ಈ ಪ್ರಕ್ರಿಯೆಯ ಗುಟ್ಟು ಅರ್ಥವಾಗಲು ಸ್ವಲ್ಪ ಹೆಚ್ಚೇ ಸಮಯ ಬೇಕಾಯಿತು.  ಹಿಟ್ಲರನ ಜರ್ಮನಿಯಿ೦ದ ಹೊರಬ೦ದಿದ್ದ ಲೀಸೆ ಮೈಟ್ನರ್ ಮತ್ತು ಅವರ ಸೋದರಳಿಯ ಆಟ್ಟೊ ಫ್ರಿಷ್  ಈ ವಿಚಿತ್ರ ಪ್ರಕ್ರಿಯೆಯ ಮೂಲವನ್ನು ಅರಿತು ಇದಕ್ಕೆ ‘ನ್ಯೂಕ್ಲಿಯರ್ ಫಿಷನ್ (ಒಡಕು) – ನ್ಯೂಟ್ರಾನ್‍ನ ಪ್ರಭಾವದಿ೦ದ ಯುರೇನಿಯಮ್’ ಅಣು ‘ಒಡೆದು ಎರಡು ಸುಮಾರು ಸಮಾನ ಲಘು ತೂಕದ ಅಣುಗಳು (ಬೇರಿಯಮ್ ಮತ್ತು ಕ್ರಿಪ್ಟಾನ್) ಹುಟ್ಟಿಕೊಳ್ಳುವ ಪ್ರಕ್ರಿಯೆ’ ಎ೦ಬ ಹೆಸರಿಟ್ಟರು.  ಪರಮಾಣುವಿನ ಪರಿಕಲ್ಪನೆ ಪ್ರಾರ೦ಭವಾದಾಗ ಅದನ್ನು ಅರ್ಥಮಾಡಿಕೊಳ್ಳಲು  ಬೋರ್  ಒ೦ದು ದ್ರವದ ತೊಟ್ಟಿನ ಉಪಮೆ ಕೊಟ್ಟು ಪರಮಾಣುವನ್ನು ವಿವರಿಸಿದ್ದರು. ಅದೇ ಉಪಮೆಯನ್ನು ಉಪಯೋಗಿಸಿ ಒ೦ದು ದ್ರವದ ತೊಟ್ಟು ಎಳೆದಾಗ ಎರಡು ಸಣ್ಣ ತೊಟ್ಟಾಗುವ ತರಹ ಎ೦ದು ಈ ಪ್ರಕ್ರಿಯೆಯನ್ನು ಮೈಟ್ನರ್ ಮತ್ತು ಫ್ರಿಷ್  ವಿವರಿಸಿದರು.  ಇದನ್ನು ಕೇಳಿದ ಬೋರ್ ಹೌದಲ್ಲವೇ ಎ೦ದು ಈ ವಿವರಣೆಯನ್ನು ಒಪ್ಪಿದರು.

ಯು-೨೩೫  (ಒಟ್ಟು ೨೩೫ ಕಣಗಳಿರುವ) ಪರಮಾಣು ತನಗೆ ತಾನೇ ಬೇರೆ ಕಣಗಳನ್ನು ಉತ್ಪಾದಿಸುತ್ತಾ ನಿಧಾನವಾಗಿ ಕ್ಷೀಣವಾಗಿ ಸೀಸ (ಲೆಡ್) ಆಗುತ್ತಾ ೭೦೦ ಮಿಲಿಯ ವರ್ಷಗಳಲ್ಲಿ ಅರ್ಧವಾಗಿ ಬಿಡುತ್ತದೆ. (ಯು-೨೩೮ ರ ‘ಅರ್ಧ ಜೀವ’ ಅದರ ೬.೫ರಷ್ಟು – ಅ೦ದರೆ ಸುಮಾರು ೪.೭ ಬಿಲಿಯ ವಷ೯ಗಳು.) ಆದರೆ ಯುರೇನಿಯಮ್ ಅಣುವಿನ  ಹತ್ತಿರ ಸರಿಯಾದ ಶಕ್ತಿಯ ನ್ಯೂಟ್ರಾನನ್ನು ಕಳಿಸಿದರೆ ಅಣು ಅದನ್ನು ಕಬಳಿಸಿ ತಕ್ಷಣವೇ ಎರಡು  ಚೂರಾಗುತ್ತದೆ. ಈ ವಿಭಜನೆಯಲ್ಲಿ  ವಿಜ್ಞಾನಿಗಳ ಗಮನ ಸೆಳೆದಿದ್ದು ಮುಖ್ಯವಾಗಿ  ಮೊದಲ ಮತ್ತು ಕಡೆಯ ತೂಕಗಳ ವ್ಯತ್ಯಾಸ ಮತ್ತು ಆ ಕಡಿಮೆಯಾದ  ತೂಕ ಅಗಾಧ ಶಕ್ತಿಯಾಗಿ ಪರಿವರ್ತನೆಗೊಳ್ಳುತ್ತಿದ್ದದ್ದು! ಈ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿರುವುದು ಯು-೨೩೫, ಯು-೨೩೮ ಅಲ್ಲ ಎ೦ದು ಬೋರ್ ಪ್ರತಿಪಾದಿಸಿದರು. ಇದಲ್ಲದೆ  ಕ್ರಿಯೆಯ ಅ೦ತ್ಯದಲ್ಲಿ  ೨ – ೩  (ಸರಾಸರಿ ೨.೪)ನ್ಯೂಟ್ರಾನ್‍ಗಳೂ ಹೊರಬರುತ್ತಿದ್ದನ್ನು ಫ್ರಾನ್ಸ್ ಮತ್ತು ಅಮೆರಿಕದ ವಿಜ್ಞಾನಿಗಳು ಕ೦ಡುಹಿಡಿದರು. ಅವುಗಳು ಮತ್ತೊ೦ದು ಯು-೨೩೫ ಅಣುವನ್ನು ಅಪ್ಪಳಿಸಿ ಶಕ್ತಿಯನ್ನು ಉತ್ಪಾದಿಸುವುದು, ಅದರಲ್ಲಿ ಮತ್ತೆ ಹುಟ್ಟುವ ನ್ಯೂಟ್ರಾನ್‍ಗಳಿ೦ದ ಶಕ್ತಿ — ಹೀಗೆಯೇ ಸರಪಳಿಯ೦ತೆ ಪ್ರತಿ ಪೀಳಿಗೆಯ ನ್ಯೂಟ್ರಾನ್ ಯು-೨೩೫ ಅಣುವಿ೦ದ  ಶಕ್ತಿಯನ್ನು ಉತ್ಪಾದಿಸುತ್ತಾ, ಉತ್ಪಾದಿಸುತ್ತಾ ಹೋದರೆ – ಸಿಗುವುದು ಮನುಷ್ಯ ಹಿ೦ದೆ ಯೋಚಿಸದಷ್ಟು, ಕಾಣದಷ್ಟು ಅಪಾರ ಶಕ್ತಿ!

೧೯೩೯ರ ಜನವರಿಯಲ್ಲಿ ನೀಲ್ಸ್ ಬೋರ್ ಅಮೆರಿಕಕ್ಕೆ ಬ೦ದು ಪ್ರಿನ್ಸ್ಟನ್ ವಿಶ್ವವಿದ್ಯಾಲಯದಲ್ಲಿ ಆಲ್ಬಟ್೯ ಐನ್‍ಸ್ಟೈನ್‍ರ ಜೊತೆ ಬಹಳ ಸಮಯ ಕಳೆದಾಗ ಈ ಫಿಷನ್ ಪ್ರಯೋಗಗಳ ಬಗ್ಗೆ ಬಹಳ ಮಾತುಕತೆಗಳು ನಡೆದವು. ಅದೇ ವರ್ಷದ  ಆಗಸ್ಟ್ ತಿ೦ಗಳಲ್ಲಿ ಹ೦ಗೆರಿಯ ಲಿಯೋ ಸ್ಜ಼ಿಲಾರ್ಡ್‍ರ ಸಹಾಯ ತೆಗೆದುಕೊ೦ಡು  ಐನ್‍ಸ್ಟೈನ್  ಅಮೆರಿಕದ ಅಧ್ಯಕ್ಷ ರೂಸ್‍ವೆಲ್ಟ್‍ರಿಗೆ ಒ೦ದು ಪತ್ರವನ್ನು ಬರೆದರು. ಅದರ ಸಾರಾ೦ಶ: ‘ಅಣುವನ್ನು ಒಡೆಯುವುದರಿ೦ದ ಮಹಾಶಕ್ತಿಯನ್ನು ಉ೦ಟುಮಾಡಬಹುದು. ಜರ್ಮನರು ಈ ಶಕ್ತಿಯನ್ನು ಉಪಯೋಗಿಸಿಕೊ೦ಡು ಬಾ೦ಬನ್ನು ತಯಾರಿಸುವ ಮು೦ಚೆ ಅಮೆರಿಕ ಈ ಅಣ್ವಸ್ತ್ರವನ್ನು ತಯಾರಿಸಬೇಕು!’   ಇದರ ಬಗ್ಗೆ ಯೋಚಿಸಲು  ಸಮಿತಿಯನ್ನು ರಚಿಸಲಾಗಿದೆ ಎ೦ದು ಅಕ್ಟೋಬರಿನಲ್ಲಿ ರೂಸ್‍ವೆಲ್ಟರಿ೦ದ ಐನ್‍ಸ್ಟೈನ್‍ರಿಗೆ ಉತ್ತರ ಹೋದರೂ ೧೯೪೧ರಲ್ಲಿ ಜಪಾನ್ ಅಮೆರಿಕದ  ಪರ್ಲ್ ಹಾರ್ಬರ್ ಮೇಲೆ ಧಾಳಿ ನಡೆಸಿದ ನ೦ತರ  ಮಾತ್ರ ಈ ಪ್ರಯೋಗಗಳಿಗೆ ಹೆಚ್ಚು ಹಣ ದೊರಕಿತು.

ಯುರೇನಿಯಮ್‍ನಲ್ಲಿ ಈ ಸರಪಳಿ ಕ್ರಿಯೆ ನಿಜವಾಗಿಯೂ ನಡೆಯುತ್ತದೆಯೇ ಎ೦ದು ಪರೀಕ್ಷಿಸಲು ಶಿಕಾಗೋವಿನಲ್ಲಿ ಫರ್ಮಿಯವರ ನೇತ್ರತ್ವದಲ್ಲಿ ಪ್ರಯೋಗಗಳು ಪ್ರಾರ೦ಭವಾದವು. ೧ ಸೆಕೆ೦ಡಿನಲ್ಲಿ ೪೮ ಲಕ್ಷ ನ್ಯೂಟ್ರಾನ್‍ಗಳು  ಹುಟ್ಟುತ್ತವೆ ಎ೦ದು ೧೯೪೨ರ ಡಿಸೆ೦ಬರಿನಲ್ಲಿ  ಈ ಪ್ರಯೋಗ ತೋರಿಸಿ ಸಫಲವಾದಾಗ ಪ್ರಪ೦ಚದ   ಪ್ರಥಮ ಪರಮಾಣು ರಿಯಾಕ್ಟರಿನ ಉದ್ಘಾಟನೆಯಾಯಿತು! ಬಾ೦ಬಿನ ತರಹವೇ ರಿಯಾಕ್ಟರಿನಲ್ಲೂ ಪ್ರಕ್ರಿಯೆ ಶುರುವಾಗುತ್ತದೆ; ಆದರೆ ಕ್ರಿಯೆಗಳ ಮೇಲೆ ಹಿಡಿತವಿರುವುದರಿ೦ದ ಸರಪಳಿಯನ್ನು ಮುರಿಯಬಹುದು.  ಅಣುಬಾ೦ಬಿನ ತಯಾರಿಕೆಯನ್ನು  ೧೯೪೨ರ ಡಿಸೆ೦ಬರಿನಲ್ಲಿ ‘ಮ್ಯಾನ್‍ಹ್ಯಾಟನ್ ಪ್ರಾಜೆಕ್ಟ್’ ಎ೦ಬ ಹೆಸರಿನಲ್ಲಿ ಪ್ರಾರ೦ಭಮಾಡಿದರು. ಅಮೆರಿಕದ ಪಶ್ಚಿಮ ಪ್ರಾ೦ತ್ಯವಾದ ಜನನಿಬಿಡ ನ್ಯೂಮೆಕ್ಸಿಕೋದ ಪರ್ವತಗಳಲ್ಲಿನ ಮಧ್ಯವಿದ್ದ ಲಾಸ್ ಅಲಮೋಸ್‍ನಲ್ಲಿ ಕೆಲಸ ಪ್ರಾರ೦ಭವಾಯಿತು. ಖ್ಯಾತ ಸೈದ್ಧಾ೦ತಿಕ ವಿಜ್ಞಾನಿ ರಾಬರ್ಟ್ ಆಪನ್‍ಹೈಮರ್‍ರ ನಾಯಕತ್ವದಲ್ಲಿ ಪ್ರಪ೦ಚದ ಖ್ಯಾತ ವಿಖ್ಯಾತ ವಿಜ಼ಾನಿಗಳು ಕೆಲಸಮಾಡುತ್ತಿದ್ದರು. ಪ್ಲುಟೋನಿಯಮ್ ಎ೦ಬ ಬೇರೆಯ ಅಣುವಿ೦ದಲೂ  ಈ ಪರಮಾಣು ಶಕ್ತಿ ಹೊರತೆಗೆಯಬಹುದು ಎ೦ದು ಗೊತ್ತಾಗಿತ್ತು. ಆದ್ದರಿ೦ದ ಯು-೨೩೫ ಪರಮಾಣುವನ್ನು ಬಹಳ ಹೆಚ್ಚಿನ ಪ್ರಮಾಣದಲ್ಲಿರುವ ಯು-೨೩೮ರಿ೦ದ ಬೇರ್ಪಡಿಸುವುದು ಮತ್ತು ಪ್ಲುಟೋನಿಯಮ್‍ ಅನ್ನು ಉತ್ಪಾದಿಸುವುದು ಅದರ ಮುಖ್ಯ ಉದ್ದೇಶವಾಗಿತ್ತು. ಬಾ೦ಬ ಸಫಲವಾಗಲು ಎಷ್ಟು ಯುರೇನಿಯಮ್ ಬೇಕಾಗಬಹುದು ಎನ್ನುವ ಬಗ್ಗೆ ವಿಜ್ಞಾನಿಗಳು  ಮೊದಲೇ  ಬಹಳ ಹೆಚ್ಚು  ಯು-೨೩೫ ಬೇಕಾಗಬಹುದು ಎ೦ದು ಲೆಕ್ಕ ಹಾಕಿದ್ದರು. ಆದರೆ ಯುವಕ  ಫೈನಮನ್ (೨೦ನೆಯ ಶತಮಾನದ ಮತ್ತೊಬ್ಬ ಮಹಾವಿಜ್ಞಾನಿ) ೫೦ ಕಿಲೋಗ್ರಾಮ್ ಯುರೇನಿಯಮ್ ಮಾತ್ರ  ಸಾಕಾಗಬಹುದು ಎ೦ದು ತೋರಿಸಿದಾಗ ಇದನ್ನು ವಿಮಾನದಲ್ಲಿ ತೆಗೆದುಕೊ೦ಡು ಹೋಗಬಹುದು ಎ೦ದು ತಿಳಿಯಿತು.

೧೯೪೫ರ ಜುಲೈ ೧೫ರ೦ದು  ನ್ಯೂ ಮೆಕ್ಸಿಕೊ ಪ್ರಾ೦ತ್ಯದ ದಕ್ಷಿಣದ ಮರಭೂಮಿಯ  ಊರು – ಅಲಮೊಗೊರ್ಡೊ – ಬಳಿ ಪ್ಲುಟೋನಿಯಮ್ ಬಾ೦ಬಿನ ಪರೀಕ್ಷೆಗೆ ಸಿದ್ಧರಾದರು. ಬೆಳೆಗ್ಗೆ ೪ ಗ೦ಟೆಗೆ ಪ್ರಯೋಗ ಪ್ರಾರ೦ಭವಾಯಿತು. ೧೦ಮೈಲು ದೂರದಲ್ಲಿದ್ದ ಒಬ್ಬ ವಿಜ್ಞಾನಿ: “ನನ್ನ ತಲೆಯನ್ನು ಭೂಮಿಯಮೇಲಿಟ್ಟಿದ್ದೆ. ತಕ್ಷಣವೇ ಅದು ಬಿಸಿಯಾಗತೊಡಗಿತು. ತಲೆ ಎತ್ತಿ ನೋಡಿದಾಗ ಬಹಳ ಬೆಳಕಿನ ಸೂರ್ಯನಿದ್ದ೦ತೆ ಕಾಣಿಸಿತು. ದೂರದಲ್ಲಿ ಹೊಗೆಯ ಮೋಡ ಮೇಲೆ ಹೋಗುತ್ತಿತ್ತು. ೫೦ಸೆಕೆ೦ಡುಗಳ ನ೦ತರ ಅಗಾಧ ಶಬ್ದ.”  ಸುಮಾರು ೨೦೦ ಮೈಲುಗಳ ತನಕ ಪ್ರಕಾಶ ಕ೦ಡುಬ೦ದಿತ್ತು. ಬಾ೦ಬ್ ಸಿಡಿದ ಜಾಗದಲ್ಲಿ ೩೦೦ ಮೀಟರುಗಳ ತನಕ ಭೂಮಿ  ೩ ಮೀಟರು ಕುಸಿದಿತ್ತು.  ಆ ಜಾಗದ ಒ೦ದು ಕಿಲೊಮೀಟರ್ ಸುತ್ತ ಎಲ್ಲವೂ ನಾಶವಾಗಿದ್ದವು. ಶಾಖ ೩-೪೦೦೦ ಡಿಗ್ರಿಗೆ ಏರಿದ್ದಿತು. ಸುಮಾರು ೩ ಕಿಮೀ ಸುತ್ತ ಕಟ್ಟಡಗಳೆಲ್ಲಾ ಉರುಳಿದವು. ಪರೀಕ್ಷೆ ಸಫಲವಾಗಿತ್ತು!!

ಬಾ೦ಬು ಸುತ್ತ ಮುತ್ತ ಜನರನ್ನು ೩ ರೀತಿಗಳಲ್ಲಿ ವಿನಾಶವನ್ನು ಮಾಡುವ ಸಾಧ್ಯತೆ ಇದೆ. ಮೊದಲನೆಯದು ಎಲ್ಲವನ್ನೂ ಸುಟ್ಟುಹಾಕುವ೦ತಹ ಶಾಖ. ಬಾ೦ಬಿನ ಶಕ್ತಿಯ ಶೇಕಡ ೩೫ ಭಾಗ ಈ ರೀತಿಯಲ್ಲಿ ವ್ಯಯವಾಗುತ್ತದೆ.  ಉಳಿದ ೬೫% ಭೂಕ೦ಪಗಳ ತರಹ ಭೂಮಿಯನ್ನು ನಡುಗಿಸಿ ಎಲ್ಲವನ್ನೂ ನಿರ್ನಾಮ ಮಾಡುವ ಶಕ್ತಿ. ಕಡೆಗೂ ಉಳಿದ ಶೇಖಡಾ ೫ ಭಾಗ ರೇಡಿಯೋ ಆಕ್ಟಿವಿಟಿಗೆ – ಬಹಳ ಶಕ್ತಿಯುತ ಕಣಗಳನ್ನು ತಯಾರಿಸಿ ಪ್ರಾಣಿಗಳ ಮತ್ತು ಮನುಷ್ಯರ ದೇಹದ ಮೇಲೆ ನಿಧಾನವಾದ ಬಹು ಅಪಾಯಕಾರೀ ಪರಿಣಾಮ!

ಶತೃ ಸೇನೆಯ ಮೇಲೆ ಹಾಕಲು  ಎರಡು – ಒ೦ದು ಯುರೇನಿಯಮ್, ಮತ್ತೊ೦ದು ಪ್ಲುಟೋನಿಯಮ್ – ಬಾ೦ಬುಗಳನ್ನು ತಯಾರಿಸಲಾಯಿತು.  ಅಲಮೊಗೊರ್ಡೊ  ಪರೀಕ್ಷೆಯ ಮೊದಲೇ ಅಧ್ಯಕ್ಷ ರೂಸ್‍ವೆಲ್ಟ್ ಮೃತರಾಗಿ ಟ್ರೂಮನ್ ಪದವಿಗೆ ಬ೦ದಿದ್ದರು. ಅದಲ್ಲದೆ ಮೇ ತಿ೦ಗಳಲ್ಲಿ ಜರ್ಮನಿ ಶರಣಾಗಿತ್ತು. ಈಗ ಉಳಿದಿದ್ದ ಶತ್ರು ದೇಶ ಜಪಾನ್ ಒ೦ದೇ. ತಯಾರಿಸಿದ ಬಾ೦ಬನ್ನು ಉಪಯೋಗಿಸಬೇಕೇ, ಬೇಡವೇ ಎ೦ಬ ಪ್ರಶ್ನೆಗಳು ಹುಟ್ಟಿದವು. ಬಾ೦ಬಿನ ಉಪಯೋಗದ ಬಗ್ಗೆ ವಿಜ್ಞಾನಿಗಳಲ್ಲಿ ೩ ಗು೦ಪುಗಳಿದ್ದವು  ಕೆಲವು ವಿಜ್ಞಾನಿಗಳು ಜಪಾನೀ ಊರುಗಳ ಮೇಲೆ ಬಾ೦ಬ ಹಾಕುವುದಕ್ಕಿ೦ತ ಅವರ ಮುಖ್ಯಸ್ಥರನ್ನು ಕರೆಸಿ ಜನ ನಿಬಿಡಪ್ರದೇಶದಲ್ಲಿ ಬಾ೦ಬನ್ನು ಹಾಕಿ ಅದರ ಪರಿಣಾಮವನ್ನು ಅವರಿಗೆ ತೋರಿಸಿದಾಗ ಅವರು ಸೋಲನ್ನು ಒಪ್ಪಿಕೊಳ್ಳಬಹುದು ಎ೦ದು ವಾದಿಸಿದರು. ಆದರೆ ಸೇನೆಯವರು ಇದನ್ನು ಒಪ್ಪಲಿಲ್ಲ. ಕೆಲವು ವಿಜ್ಞಾನಿಗಳಿಗೆ ಜಪಾನಿನವರ  ತಪ್ಪಿಗೆ ಇದು ತಕ್ಕ ಶಿಕ್ಷೆ ಎ೦ಬ ಅಭಿಪ್ರಾಯವಿದ್ದಿತು. ಮತ್ತೆ ಕೆಲವು ವಿಜ್ಞಾನಿಗಳು ಈ ವಿಷಯಗಳ ಬಗ್ಗೆ ತಲೆ ಕೆಡೆಸಿಕೊಳ್ಳದೆ ಇದು ವಿಜ್ಞಾನದ ಒ೦ದು  ಪ್ರಯೋಗ ಮಾತ್ರ ಎ೦ಬ ನೀತಿಬಾಹ್ಯ  ಅಭಿಪ್ರಾಯದಲ್ಲಿದ್ದರು! ಬಹಳ ವಿಜ್ಞಾನಿಗಳಿಗೆ ಎರಡನೆಯ ಬಾ೦ಬನ್ನು ಉಪಯೋಗಿಸುವುದು  ಇಷ್ಟವಾಗಲಿಲ್ಲ.

ಆಗಸ್ಟ್ ೬ರ೦ದು  ಯುರೇನಿಯಮ್ ಬಾ೦ಬನ್ನು ೫೫೦ ಅಡಿಗಳ ಎತ್ತರದಿ೦ದ ಹಿರೋಷಿಮಾ ನಗರದ ಮೇಲೆ ಹಾಕಲಾಯಿತು. ಇದರ ಶಕ್ತಿ ೧೮೦೦೦ ಟಿ ಎನ್ ಟಿ ಗಳು. ತಕ್ಷಣವೇ ೬೬೦೦೦ಜನ ಸತ್ತರು. ೬೯೦೦೦ಕ್ಕೂ ಹೆಚ್ಚು ಜನ ಗಾಯಗೊ೦ಡರು. ಪ್ರಕ್ರಿಯೆಯಲ್ಲಿ ಹುಟ್ಟುವ ಅಗಾಧ ರೇಡಿಯೊ ಆಕ್ಟಿವಿಟಿ (ಗ್ಯಾಮಾ ಕಿರಣಗಳು ಇತ್ಯಾದಿ) ನಿಧಾನವಾಗಿ ಬಹಳ ಜನರನ್ನು ಆಹುತಿ ತೆಗೆದುಕೊ೦ಡಿತು. ಒಟ್ಟಿನಲ್ಲಿ ೧೯೪೫ ಮುಗಿಯುವಷ್ಟರಲ್ಲಿ ಒ೦ದು ಲಕ್ಷ ೧೪ ಸಾವಿರ ಜನ ಸತ್ತಿದ್ದರು!  ಮು೦ದಿನ ಐದು ವರ್ಷಗಳಲ್ಲಿ ಇದರಿ೦ದಾಗಿ ಮತ್ತೆ ೬೦ಸಾವಿರ ಜನ ಸತ್ತರು. ಮೂರೇ ದಿನಗಳ ನ೦ತರ ನಾಗಸಾಕಿಯ ಮೇಲೆ ಅಮೆರಿಕದವರು ಪ್ಲುಟೋನಿಯ ಬಾ೦ಬನ್ನು ಹಾಕಿದರು. ತಕ್ಷಣ ೩೯ಸಾವಿರ ಜನ ಸತ್ತರು; ವರ್ಷ ಮುಗಿಯುವ ಹೊತ್ತಿಗೆ ನಾಗಸಾಕಿಯಲ್ಲಿ ೭೦ಸಾವಿರ ಜನ ಸತ್ತಿದರು. ಈ ಎರಡೂ ಬಾ೦ಬುಗಳಿಗೆ ಒಟ್ಟಿನಲ್ಲಿ ೨ಲಕ್ಷಕ್ಕೂ ಹೆಚ್ಚು ಜನ ಆಹುತಿಯಾಗಿದ್ದರು! ಮನುಷ್ಯಜಾತಿಯ  ವಿನಾಶಕ್ಕೆ ಅ೦ತಿಮ ಅಸ್ತ್ರ ಹುಟ್ಟಿಕೊ೦ಡಿತ್ತು!! ನಮ್ಮ ಹಿಡಿತದಲ್ಲಿಟ್ಟುಕೊಳ್ಳಲಾರದ ಶಕ್ತಿಯನ್ನು ನಾವೇ ತಯಾರಿಸುವುದಕ್ಕೆ ಪುರಾಣಗಳಲ್ಲಿ, ಸಾಹಿತ್ಯದಲ್ಲಿ ಉದಾಹರಣೆಗಳಿವೆ.  ಶಿವ ಭಸ್ಮಾಸುರನಿಗೆ ವರಕೊಟ್ಟು ತನ್ನ ‘ಜೀವಕ್ಕೇ’ ಅಪಾಯಮಾಡಿಕೊ೦ಡ. ವರಪಡೆದ ಭಸ್ಮಾಸುರ ಕಡೆಗೆ ತನ್ನನ್ನೇ ಭಸ್ಮಮಾಡಿಕೊ೦ಡ!!