ನಾನು ನಿನ್ನ ತಬ್ಬಿಕೊಂಡೆ
ಇರುಳು ಎರಗಿ ಭೂಮಿಯ ಮ್ಯಾಲೆ
ಕವುಚಿಕೊಂಡಂಗೆ
ಹುಣ್ಣಿಮೆ ಬೆಳಕು ಕಾಡಿನ ಎದೆಯ
ಸೋಸಿ ಇಳಿದಂಗೆ
ಮಾಗಿಯ ಮಂಜು ಕಣಿವೆಯ ತುಂಬ
ಹಬ್ಬಿಕೊಂಡಂಗೆ.

ನೀನು ನನ್ನ ಅಪ್ಪಿಕೊಂಡೆ
ಕಡಲಿನ ಕುದಿತ ಮೋಡಗಳಾಗಿ
ಏರಿ ಬಂದಂಗೆ
ಲೋಕದ ಸದ್ದು ಮೇಲಕೆ ಎದ್ದು
ಬಯಲೊಳು ಬೆರೆದಂಗೆ
ಹಳ್ಳಿಯ ಜಾತ್ರೆ ಬೆಟ್ಟದ ಗುಡಿಗೆ
ಹತ್ತಿ ಬಂದಂಗೆ.