ಹೀರೆಕಾಯಿ ನಮ್ಮ ದೇಶದ ಜನಪ್ರಿಯ ತರಕಾರಿಗಳಲ್ಲಿ ಒಂದಾಗಿದೆ. ವರ್ಷದ ಎಲ್ಲಾ ಕಾಲದಲ್ಲಿ ಇದು ಲಭ್ಯ. ಕಾಯಿಗಳ ಮೇಲೆ ಉದ್ದಕ್ಕೆ ಉಬ್ಬಿದ ಏಣುಗಳು ಇರುತ್ತದೆ. ಪೂರ್ಣ ಬಲಿತ ಕಾಯಿಗಳಲ್ಲಿನ ಬೀಜವನ್ನು ಹೊರತೆಗೆದು, ಮೇಲಿನ ಸಿಪ್ಪೆ ಬಿಡಿಸಿ, ನೀರಲ್ಲಿ ಚೆನ್ನಾಗಿ ತೊಳೆದರೆ ಸ್ನಾನದ ಬ್ರಷ್ ಆಗುತ್ತದೆ.

ಪೌಷ್ಟಿಕ ಗುಣಗಳು: ಹೀರೆಕಾಯಿ ಪೌಷ್ಟಿಕ ತರಕಾರಿ, ಕಾಯಿಗಳಲ್ಲಿ ಶರೀರಕ್ಕೆ ಅಗತ್ಯವಿರುವ ಶರ್ಕರಪಿಷ್ಟ, ಪ್ರೊಟೀನ್, ಖನಿಜ ವಸ್ತುಗಳು ಹಾಗೂ ಜೀವಸತ್ವಗಳು ಸಾಕಷ್ಟು ಪ್ರಮಾಣದಲ್ಲಿ ಇರುತ್ತವೆ. ಹೀರೆಕಾಯಿಯಲ್ಲಿನ ಪೌಷ್ಟಿಕ ಗುಣಗಳು ಹೀಗಿವೆ.

೧೦೦ ಗ್ರಾಂ ಹೀರೆಕಾಯಿಯಲ್ಲಿರುವ ವಿವಿಧ ಪೋಷಕಾಂಶಗಳು

ತೇವಾಂಶ ೯೫.೨ ಗ್ರಾಂ
ಶರ್ಕರಪಿಷ್ಟ ೩.೪ ಗ್ರಾಂ
ಪ್ರೊಟೀನ್ ೦.೬ ಗ್ರಾಂ
ಕೊಬ್ಬು ೦.೧ ಗ್ರಾಂ
ಒಟ್ಟು ಖನಿಜ ಪದಾರ್ಥ ೦.೩ ಗ್ರಾಂ
ರಂಜಕ ೪೦ ಗ್ರಾಂ
ಕಬ್ಬಿಣ ೦.೬ ಗ್ರಾಂ
ಪೊಟ್ಯಾಷ್ ೫೦ ಗ್ರಾಂ
ರೈಬೋಪ್ಲೇವಿನ್ ೦.೦೧ ಮಿ.ಗ್ರಾಂ
ಥಯಮಿನ್ ೦.೦೭ ಮಿ.ಗ್ರಾಂ
’ಸಿ’ ಜೀವಸತ್ವ ೫ ಮಿ.ಗ್ರಾಂ
ಕ್ಯಾಲ್ಸಿಯಂ ೪೦ ಗ್ರಾಂ

ಔಷಧೀಯ ಗುಣಗಳು : ಸಕ್ಕರೆ ಕಾಯಲೆ ಇರುವವರಿಗೆ, ಮೂಲವ್ಯಾದಿಯಿಂದ ನರಳುತ್ತಿರುವವರಿಗೆ ಉಪಯುಕ್ತ. ಇದರ ಬೀಜ ಹಾಗೂ ಮಜ್ಜಿಗೆಗಳ ಸೇವನೆ ಆಮಶಂಕೆಗೆ ಒಳ್ಳೆಯದು. ಎಲೆಗಳ ರಸ ಹಚ್ಚುವುದರಿಂದ ಗಾಯಗಳು ವಾಸಿಯಾಗುತ್ತವೆ.

ಉಗಮ ಮತ್ತು ಹಂಚಿಕೆ : ಕೆಲವರು ಹೀರೆಯ ತವರೂರು ಭಾರತ ಎಂದೂ ಮತ್ತೆ ಕೆಲವರು ಭಾರತ, ಇಂಡೋನೇಷ್ಯಾದ ಸುಂಡಾ ಮತ್ತು ಜಾವಾದ್ವೀಪಗಳು ಎಂದೂ ಅಭಿಪ್ರಾಯಪಟ್ಟಿದ್ದಾರೆ. ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ಇದರ ಬೇಸಾಯ ಮತ್ತು ಬಳಕೆಗಳು ಕಂಡುಬರುತ್ತವೆ. ನಮ್ಮ ದೇಶದಲ್ಲಿ ಎಲ್ಲಾ ಕಡೆ ಇದನ್ನು ಬೆಳೆದು ಬಳಸುತ್ತಾರೆ.

ಸಸ್ಯ ವರ್ಣನೆ : ಹೀಗೆ ಕುಕುರ್ಬಿಟೇಸಿ ಕುಟುಂಬಕ್ಕೆ ಸೇರಿದ ವಾರ್ಷಿಕ ಬಳ್ಳಿ. ಕಾಂಡ ಬಲಹೀನ; ಹಲವಾರು ಕವಲು ಹಂಬುಗಳನ್ನು ಹೊಂದಿರುತ್ತದೆ. ಹಂಬುಗಳು ನಯವಾಗಿ ದುಂಡಗೆ ಉದ್ದನಾಗಿರುತ್ತವೆ. ಎಲೆಗಳು ಹಸ್ತಾಕಾರವಿದ್ದು ಸೀಳು ಕಚ್ಚುಗಳಿಂದ ಕೂಡಿರುತ್ತವೆ. ಕಾಂಡ ಮತ್ತು ಎಲೆಗಳ ಬಣ್ಣ ದಟ್ಟಹಸುರು. ನರಬಲೆ ಕಟ್ಟು ಸ್ಫುಟವಾಗಿರುತ್ತದೆ. ಹೂವು ಉದ್ದನಾದ ಹೂಗೊಂಚಲುಗಳಲ್ಲಿ ಬಿಡುತ್ತವೆ. ಹೂದಳಗಳ ಬಣ್ಣ ಹಳದಿ. ಹೂವು ಏಕಲಿಂಗಿಗಳು. ಜೇನುನೊಣ ಮುಂತಾದವು ಪರಾಗಸ್ಪರ್ಶದಲ್ಲಿ ನೆರವಾಗುತ್ತವೆ. ಕಾಯಿ ಉದ್ದನಾಗಿದ್ದು ತುದಿಯತ್ತ ಸ್ವಲ್ಪ ಉಬ್ಬಿರುತ್ತದೆ; ತುದಿ ಚೂಪು. ಕಾಯಿಗಳ ಉದ್ದಕ್ಕೆ ಉಬ್ಬಿದ ಏಣುಗಳು ಮತ್ತು ಅಗಲವಿರುವ ಗೀರು ಹಳ್ಳಗಳು ಇರುತ್ತವೆ. ಕಾಯಿಗಳ ಮೇಲ್ಮೈ ಒರಟು, ಹಸುರು ಬಣ್ಣ. ಬಲಿತಾಗ ಬೀಜ ಕಪ್ಪು ಬಣ್ಣಕ್ಕೆ ಮಾರ್ಪಡುತ್ತವೆ ಹಾಗೂ ಅದುಮಿದಂತಿದ್ದು ಒರಟು ಮೇಲ್ಮೈ ಹೊಂದಿರುತ್ತವೆ. ಬೀಜ ಸಿಪ್ಪೆ ಗಡುಸು. ಕಾಯಿಗಳು ಬಲಿತು ಒಣಗಿದಾಗ ತಿರುಳು ಪೊಳ್ಳಾಗಿ ಬೀಜ ಸಡಿಲಗೊಳ್ಳುತ್ತವೆ. ಒಣ ಕಾಯಿಗಳನ್ನು ಅಲುಗಾಡಿಸಿದರೆ ಬೀಜ ಶಬ್ದ ಹೊರಡಿಸುತ್ತವೆ. ಬೀಜ ಮಾಡುವಾಗ ಒಣಕಾಯಿಗಳನ್ನು ಮನೆಗಳ ಸೂರಿಗೆ ನೇತು ಹಾಕಿರುತ್ತಾರೆ.

ಹವಾಗುಣ : ಇದರ ಬೇಸಾಯಕ್ಕೆ ಒಣ ಹವೆ ಉತ್ತಮ. ಸೌಮ್ಯ ಹವೆ ಇರುವಲ್ಲಿ ಚೆನ್ನಾಗಿ ಫಲಿಸುತ್ತದೆ. ಜೂನ್-ಜುಲೈ ಹೆಚ್ಚು ಸೂಕ್ತ.

ಭೂಗುಣ : ಇದಕ್ಕೆ ನೀರು ಬಸಿಯುವ, ಫಲವತ್ತಾದ, ಮರಳುಮಿಶ್ರಿತ ಕಪ್ಪುಗೋಡು ಮಣ್ಣು ಸೂಕ್ತ. ಜೌಗು ಇರಬಾರದು. ತಗ್ಗು ಪ್ರದೇಶಗಳನ್ನು ಆರಿಸಿಕೊಳ್ಳಬಾರದು.

ತಳಿಗಳು :

. ಪೂಸಾನಸ್ದಾರ್ : ಸಾಧಾರಣ ಬೇಗ ಕೊಯ್ಲಿಗೆ ಬರುವ ತಳಿ ಇದಾಗಿದೆ. ಬೇಸಿಗೆಯಲ್ಲಿ ಬಿತ್ತನೆ ಮಾಡಿದ ೬೦ ದಿನಗಳಲ್ಲಿಯೇ ಹೂವು ಕಾಣಿಸಿಕೊಳ್ಳುತ್ತವೆ. ತಿರುಳು ಬಿಗುವಾಗಿರುತ್ತದೆ ಹಾಗೂ ಕಾಯಿಗಳಲ್ಲಿ ಉದ್ದಕ್ಕೆ ಏಣುಗಳಿದ್ದು, ತೆಳು ಹಸುರು ಬಣ್ಣದ ಸಿಪ್ಪೆ ಇರುತ್ತದೆ. ರುಚಿಯಲ್ಲಿ ಉತ್ಕೃಷ್ಟ, ಫಸಲು ಅಧಿಕ. ಪ್ರತಿಬಳ್ಳಿಗೆ ೧೫-೨೦ ಕಾಯಿ ಸಿಗುತ್ತವೆ. ಇದು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಕೊಡುಗೆ.

. ಸಿ..- : ಇದು ತಮಿಳುನಾಡಿನ ಕೃಷಿ ವಿಶ್ವವಿದ್ಯಾನಿಲಯದ ಕೊಡುಗೆ. ಪ್ರತಿ ಬಳ್ಳಿಯಲ್ಲಿ ೧೦-೧೨ ಕಾಯಿ ಸಿಗುತ್ತವೆ. ಕಾಯಿಗಳು ೬೦ ರಿಂದ ೭೫ ಸೆಂ.ಮೀ. ಉದ್ದವಿರುತ್ತವೆ.

ಇವುಗಳೇ ಅಲ್ಲದೆ ಹಲವಾರು ಇತರ ಸ್ಥಳೀಯವಾದ ಹಾಗೂ ಬೀಜ ಸಂಸ್ಥೆಗಳು ವೃದ್ಧಿಪಡಿಸಿದ ತಳಿಗಳೂ ಸಹ ಬೇಸಾಯದಲ್ಲಿ ಕಂಡುಬರುತ್ತವೆ.

ಭೂಮಿ ಸಿದ್ಧತೆ ಮತ್ತು ಬಿತ್ತನೆ : ೧.೫ ರಿಂದ ೨.೫ ಮೀಟರ್ ಅಂತರದ ಸಾಲಿನಲ್ಲಿ ೦.೬ ರಿಂದ ೧.೨ ಮೀಟರ್‌ಗೊಂದರಂತೆ ಸಣ್ಣ ಹಾಗೂ ಎತ್ತರದ ದಿಬ್ಬ ಮಾಡಿ ಗೊಬ್ಬರ ಹರಡಿ ಮಣ್ಣಲ್ಲಿ ಮಿಶ್ರ ಮಾಡಬೇಕು. ಪೂರ್ಣ ಪ್ರಮಾಣದ ತಿಪ್ಪೆಗೊಬ್ಬರ ಹಾಗೂ ಅರ್ಧಭಾಗ ಸಾರಜನಕಗಳನ್ನು ಸಮನಾಗಿ ಕೊಡಬೇಕು. ತೆಳ್ಳಗೆ ನೀರು ಹಾಯಿಸಿ, ತಲಾ ೨-೩ ಬೀಜ ಊರಬೇಕು. ಕೆಲವರು ಸಾಲುಗಳಲ್ಲಿ ಬಿತ್ತುವುದುಂಟು. ಹೆಕ್ಟೇರಿಗೆ ೩, ೫-೫.೦ ಕಿ.ಗ್ರಾಂ ಬಿತ್ತನೆ ಬೀಜ ಬೇಕಾಗುತ್ತದೆ. ಬಿತ್ತನೆಗೆ ಜೂನ್-ಜುಲೈ ಸೂಕ್ತ ಕಾಲ.

ಗೊಬ್ಬರ : ಈ ಬೆಳೆಗೆ ಹೆಚ್ಚಿನ ಗೊಬ್ಬರ ಬೇಕಾಗಿಲ್ಲ, ಹೆಕ್ಟೇರಿಗೆ ೨೫ ಟನ್ ತಿಪ್ಪೆಗೊಬ್ಬರ ಹಾಗೂ ೫೦ ಕಿ.ಗ್ರಾಂ ಸಾರಜನಕಗಳನ್ನು ಶಿಫಾರಸು ಮಾಡಿದೆ.

ನೀರಾವರಿ : ಮಳೆ ಇಲ್ಲದಿದ್ದರೆ ೪-೫ ದಿನಗಳಿಗೊಮ್ಮೆ ನೀರು ಕೊಡಬೇಕಾಗುತ್ತದೆ.

ಅಂತರ ಬೇಸಾಯ ಮತ್ತು ಕಳೆ ಹತೋಟಿ : ಕಳೆಗಳನ್ನು ತೆಗೆಯಬೇಕು. ದಿನಕಳೆದಂತೆ ಬಳ್ಳಿಗಳು ಉದ್ದಕ್ಕೆ ಬೆಳೆಯ ಹರಡುವ ಕಾರಣ ಅಂತರಬೇಸಾಯ ಕಷ್ಟವಾಗುತ್ತದೆ. ಬಿತ್ತನೆ ಮಾಡಿದ ಸುಮಾರು ಒಂದು ತಿಂಗಳನಂತರ ಉಳಿದ ಅರ್ಧಭಾಗ ಸಾರಜನಕವನ್ನು ಮೇಲುಗೊಬ್ಬರವಾಗಿ ಕೊಡಬೇಕು.

ಆಸರೆ ಒದಗಿಸುವುದು : ತಂತಿಯ ಚಪ್ಪರವನ್ನು ನೆಲಮಟ್ಟದಿಂದ ೨ ಮೀಟರ್ ಎತ್ತರದಲ್ಲಿ ನಿರ್ಮಿಸಿ ಅದರ ಮೇಲೆ ಹಂಬುಗಳನ್ನು ಹಬ್ಬಿ ಹರಡಲು ಬಿಡಬೇಕು. ಅಥವಾ ಎತ್ತರದ ಮುಳ್ಳು ಕಂಟೆಗಳನ್ನಾದರೂ ಸಿಕ್ಕಿಸಿ ನಿಲ್ಲಿಸಿದರೆ ಹಂಬುಗಳು ಅವುಗಳ ಮೇಲೆ ಹಬ್ಬುತ್ತವೆ. ಈ ರೀತಿ ಆಸರೆ ಒದಗಿಸಿ ಹಬ್ಬಿಸುವುದರಿಂದ ಫಸಲು ಕೆಡದೆ ಆಕರ್ಷಕವಾಗಿರುತ್ತದೆ.

ಕೊಯ್ಲು ಮತ್ತು ಇಳುವರಿ : ಬಿತ್ತನೆ ಮಾಡಿದ ೫-೬ ವಾರಗಳಲ್ಲಿ ಕಾಯಿ ಕೊಯ್ಲಿಗೆ ಬರುತ್ತವೆ. ಕಾಯಿ ಪೂರ್ಣ ಗಾತ್ರಕ್ಕೆ ಬೆಳೆದು ನಾರುಬರುವ ಮೊದಲೇ ಕಿತ್ತು ಬಳಸಬೇಕು. ಕೊಯ್ಲು ಸುಮಾರು ೩-೪ ವಾರಗಳವರೆಗೆ ಮುಂದುವರೆಯುತ್ತದೆ. ಬೆಳಿಗ್ಗೆ ತಂಪು ಹೊತ್ತಿನಲ್ಲಿ ಕೊಯ್ಲು ಮಾಡಿದರೆ ಸರಕು ಬಿಸಿಯೇರುವುದಿಲ್ಲ. ಹೆಕ್ಟೇರಿಗೆ ೫-೬ ಟನ್ ಕಾಯಿ ಸಿಗುತ್ತವೆ.

ಕೀಟ ಮತ್ತು ರೋಗಗಳು : ಕುಂಬಳ ಮತ್ತು ಸೋರೆಗಳಲ್ಲಿದ್ದಂತೆ ಇದು ಪರಕೀಯ ಪರಾಗಸ್ಪರ್ಶದ ಬೆಳೆ.

ಬೀಜೋತ್ಪಾದನೆ : ಪೂರ್ಣ ಪಕ್ವಗೊಂಡು ಹಣ್ಣಾಗಿ ಒಣಗಿದ ಕಾಯಿಗಳನ್ನು ಬಿಸಿಲಲ್ಲಿ ಒಣಗಿಸಿ, ತುದಿಭಾಗವನ್ನು ಕತ್ತರಿಸಿ ತೆಗೆದು ತಲೆ ಕೆಳಗಾಗಿ ನಿಲ್ಲಿಸಿ ಅಲುಗಾಡಿಸಿದರೆ ಬೀಜವೆಲ್ಲಾ ಉದುರಿ ಬೀಳುತ್ತವೆ. ಗಟ್ಟಿ ಬೀಜವನ್ನೆಲ್ಲಾ ಆರಿಸಿ, ಒಣಗಿಸಿ, ಜೋಪಾನ ಮಾಡಬೇಕು. ಹೆಕ್ಟೇರಿಗೆ ೫೦೦-೬೦೦ ಕಿ.ಗ್ರಾಂ ಬೀಜ ಸಿಗುತ್ತವೆ.

* * *