‘ಆಹಾರ ಒಂದು ಅಭ್ಯಾಸ. ಕಲಿತಂತೆ ಅದು ಇರುತ್ತದೆ’ ಮ್ಯಾಕ್ಡೊನಾಲ್ಡ್ ತಿನಿಸುಗಳು ಹಿಪ್ ಆಗಿರುವ ಈ ಕಾಲದಲ್ಲಿಯೂ ಅಪ್ಪಟ ಸಸ್ಯಾಹಾರ ಊಟವನ್ನು ಮೆಚ್ಚುವ ನನ್ನನ್ನು ಕಂಡು ಅವನು ಹೇಳುವ ಮಾತು ಇದು. ಅರ್ಥ ಇಷ್ಟೆ: ಮಾಂಸಾಹಾರ ನನಗೆ ಒಗ್ಗುವುದಿಲ್ಲ ಎನ್ನುವುದಕ್ಕಿಂತಲೂ ಅದನ್ನು ತಿನ್ನಲು ನಾನು ಕಲಿತಿಲ್ಲ ಅಷ್ಟೆ! ಹೌದೇ? ಆಹಾರಾಭ್ಯಾಸ ಕೇವಲ ಕಲಿಕೆಯೇ? ಹುಟ್ಟುಗುಣವಲ್ಲವೇ? ನನ್ನ ಅಮ್ಮ, ಅಪ್ಪಂದಿರು ನನಗೆ ಮಾಂಸಾಹಾರ ತಿನ್ನಲು ಕಲಿಸಿಲ್ಲದೇ ಇರುವುದರಿಂದ ನಾನು ಅಪ್ಪಟ ಸಸ್ಯಾಹಾರಿಯಾದೆನೇ ಎಂದೆಲ್ಲ ಆಗಾಗ್ಗೆ ಯೋಚಿಸುತ್ತಿರುತ್ತೇನೆ.

ಈ ವಿಷಯದಲ್ಲಿ ನನಗೆ ಇನ್ನಷ್ಟು ಗೊಂದಲ ಉಂಟು ಮಾಡುವ ಸುದ್ದಿ ಕೆಮಿಕಲ್ ಸೆನ್ಸಸ್ ಪತ್ರಿಕೆಯಲ್ಲಿ ಇತ್ತೀಚೆಗೆ ಪ್ರಕಟವಾಗಿದೆ. ನೆದರ್ಲ್ಯಾಂಡ್ಸ್ನ ವೇಗೆನಿಂಜೆನ್ ವಿಶ್ವವಿದ್ಯಾನಿಲಯದ ವಿಜ್ಞಾನಿ ಮರಿಯೆ ಊಸ್ಟಿಂಜರ್ ರವರ ಸಂಶೋಧನೆಯ ಪ್ರಕಾರ ಭ್ರೂಣದಲ್ಲಿ ಮೂಸಿದ ವಾಸನೆಯನ್ನು ಹಂದಿ ಮರಿಗಳು ಹುಟ್ಟಿ, ಬೆಳೆಯುವಾಗಲೂ ನೆನಪಿಡುತ್ತವಂತೆ. ಬರೇ ಹಂದಿಮರಿಗಳಷ್ಟೆ ಅಲ್ಲ, ಬೆಕ್ಕಿನ ಮರಿಗಳಲ್ಲಿಯೂ ಇದೇ ಕಥೆ ಎಂದು ಅದೇ ಪತ್ರಿಕೆಯಲ್ಲಿ ಫ್ರೆಂಚ್ ವಿಜ್ಞಾನಿ ಜೆಸ್ಸಿಕಾ ಸೆರ್ರಾ ಪ್ರಕಟಿಸಿದ್ದಾರೆ. ಅವರ ಸಂಶೋಧನೆಯ ಪ್ರಕಾರ ಹುಟ್ಟುವ ಮೊದಲು ಮತ್ತು ಹುಟ್ಟಿದ ತಕ್ಷಣ ಬೆಕ್ಕಿನ ಮರಿಗಳು ಅನುಭವಿಸುವ ರುಚಿ ಹಾಗೂ ಸ್ವಾದದ ಪ್ರಭಾವ ಬದುಕಿನುದ್ದಕ್ಕೂ ಅವುಗಳ ಆಹಾರಾಭ್ಯಾದ ಮೇಲೆ ಪ್ರಭಾವ ಬೀರುತ್ತದೆಯಂತೆ.

ತಾಯ ಗರ್ಭದೊಳಗಿರುವಾಗಲೇ ಕಲಿಯುವುದೇ? ಹೌದು. ಮಹಾಭಾರತದಲ್ಲಿ ಅರ್ಜುನ ಹೀಗೇ ಕಲಿತಿದ್ದ ಎಂದು ಕಥೆ ಇದೆ. ಆದರೆ ಇದು ಕಥೆ ಅಲ್ಲ. ಇಂತಹ ವಿದ್ಯಮಾನ ಇದ್ದರೂ ಇರಬಹುದು ಎನ್ನುವುದು ವಿಜ್ಞಾನಿಗಳ ತರ್ಕ. ಏಕೆಂದರೆ, ಹುಟ್ಟಿದ ಕೂಡಲೇ ಈ ಅಪರಿಚಿತ ಪ್ರಪಂಚದ ವಿದ್ಯಮಾನಗಳನ್ನು ಕಲಿಯಲು ಅದಕ್ಕೆ ಸಮಯವೇ ಸಿಗುವುದಿಲ್ಲ. ಹೀಗಾಗಿ, ಹುಟ್ಟಿದ ತಕ್ಷಣವೇ ಕೆಲವು ವಿಚಾರಗಳು ಗೊತ್ತಿರುವುದು ಮರಿಯ ದೃಷ್ಟಿಯಿಂದ ಅನುಕೂಲಕರ. ಆದ್ದರಿಂದ ನಿಸರ್ಗ ಹೀಗೊಂದು ವ್ಯವಸ್ಥೆಯನ್ನು ಮಾಡಿರಲೇ ಬೇಕು ಎನ್ನುವುದು ವಿಜ್ಞಾನಿಗಳ ತರ್ಕ.

 

ಕಾಗೆಯ ಗೂಡಿನಲ್ಲಿ ಬೆಳೆಯುವ ಕೋಗಿಲೆ ಕಕಾ, ಕಾಕಿ ಎನ್ನದೆ ಕಕುಹೂ, ಕುಹೂಕಿ ಎನ್ನುತ್ತದಲ್ಲ! ಇನ್ನು ಇದರಲ್ಲೇನು ವಿಶೇಷ ಇದೆ ಎಂದಿರಾ? ನಿಜ! ಮೊಟ್ಟೆಯಿಂದ ಮರಿಯಾಗುವ ಕೋಗಿಲೆ ದುಂಬಿ, ಹಾವು, ಹಲ್ಲಿಗಳ ಮರಿಗಳಿಗೆ ಜೀವನವನ್ನು ಎದುರಿಸಲು ಬೇಕಾದ ಎಲ್ಲ ನಡವಳಿಕೆಗಳೂ ಹುಟ್ಟಿನಿಂದಲೇ ಬರಬೇಕು. ತಾಯಿಯಿಂದ ಪಾಠ ಕಲಿಯುವ ಅವಕಾಶಗಳು ಅವುಗಳಿಗೆ ಇಲ್ಲ. ಇದ್ದರೂ ಅಷ್ಟು ಸಮಯ ಸಿಗಲಿಕ್ಕಿಲ್ಲ. ಆದರೆ ಸ್ತನಿಗಳ ಕಥೆ ವಿಭಿನ್ನ. ಇವುಗಳ ಮರಿಗಳು ತಾಯ ನೆರಳಿನಲ್ಲಿ, ತಾಯಿಯ ಹಾಲು ಕುಡಿಯುತ್ತಾ ರ್ದೀ ಕಾಲ ಬೆಳೆಯುತ್ತವೆ. ಈ ಅವಧಿಯಲ್ಲಿ ಹಾಲಿನ ಜೊತೆಗೇ ಬದುಕನ್ನು ನೀಗಿಸುವ ಪಾಠವೂ ಅವಕ್ಕೆ ದೊರೆಯುತ್ತದೆ ಎನ್ನುವುದು ವಿಜ್ಞಾನಿಗಳ ತರ್ಕ.

ಬದುಕಿನ ಪಾಠಗಳಲ್ಲಿ ತನಗೆ ಬೇಕಾದ ಆಹಾರವನ್ನು ಒದಗಿಸಿಕೊಳ್ಳುವುದೂ ಪ್ರಮುಖವಾದದ್ದು.  ಆಹಾರವನ್ನು ಅದರ ವಾಸನೆ ಹಾಗೂ ಸ್ವಾದದಿಂದಲೇ ಗುರುತಿಸುವ ಸಾಮಥ್ರ್ಯ ಮರಿಗಳಿಗೆ ಹುಟ್ಟಿದ ಕೂಡಲೇ ಇರುವುದು ಅವಶ್ಯಕ. ಏಕೆಂದರೆ ಹುಟ್ಟಿದ ಕೂಡಲೇ ಯಾವ ಮರಿಯೂ ಕಣ್ಣು ತೆರೆದು ಬಣ್ಣಗಳನ್ನು ಗುರುತಿಸಲಾರವು. ಪರಿಮಳ, ಸ್ವಾದಗಳೆ ಆಹಾರವನ್ನು ಗುರುತಿಸುವ ದಿಕ್ಸೂಚಿ. ಅಪಾಯಕಾರಿಯಲ್ಲದ ಆಹಾರವನ್ನೂ ಅವು ವಾಸನೆ, ಸ್ವಾದದ ಮೂಲಕವೇ ಪತ್ತೆ ಮಾಡಬೇಕು. ಹೀಗಾಗಿ ತಾಯಗರ್ಭದಲ್ಲಿರುವಾಗಲೇ ತನಗೆ ಒಗ್ಗುವ ಹಾಗೂ ಒಗ್ಗದ ವಾಸನೆಗಳನ್ನು ಗುರುತಿಸುವ ಸಾಮಥ್ರ್ಯ ಮರಿಗಳಿಗೆ ಒದಗುತ್ತಿರಬೇಕು ಎನ್ನುವುದು ಊಹೆ. ಇದಕ್ಕೆ ಉದಾಹರಣೆಗಳೂ ಇವೆ. ಕ್ಯಾರಟ್ ರಸ ಕುಡಿದ ಗರ್ಭಿಣಿಯರಿಗೆ ಹುಟ್ಟಿದ ಮಕ್ಕಳು ಆರು ತಿಂಗಳ ಅನಂತರ ಕ್ಯಾರಟ್ ಸ್ವಾದವಿರುವ ಆಹಾರವನ್ನು ಸವಿ, ಸವಿದು ತಿನ್ನುತ್ತವಂತೆ. ಅದೇ ಕ್ಯಾರಟ್ ರಸ ಸೇವಿಸದ ಗರ್ಭಿಣಿಯರ ಮಕ್ಕಳು ಅದೇ ಆಹಾರವನ್ನು ನೀಡಿದಾಗ ವಿಷ ತಿಂದಂತೆ ಮುಖ ಕಿವುಚಿದುವಂತೆ. ಬೆಳ್ಳುಳ್ಳಿಯ ಾಟು ಪರಿಮಳ ಹಾಗೂ ಸೋಂಪಿನ ಸ್ವಾದಗಳನ್ನೂ ನವಜಾತ ಶಿಶುಗಳು ಗುರುತಿಸುತ್ತವೆಯಂತೆ. ಈ ಮಸಾಲೆಗಳ ಸ್ವಾದ ರಾಸಾಯನಿಕಗಳು ತಾಯಿಯ ಎದೆಹಾಲಿನಲ್ಲಿಯೂ, ಗರ್ಭಚೀಲದೊಳಗಿರುವ ದ್ರವದಲ್ಲಿಯೂ ಕಂಡು ಬಂದಿದೆ. ತನ್ಮೂಲಕ ಮಕ್ಕಳಿಗೆ ಇವುಗಳ ಪರಿಚಯ ಆಗಿರಬೇಕು ಎನ್ನುವುದು ಒಂದು ಊಹೆ.

ಸ್ವಾದ, ಪರಿಮಳದ ರುಚಿ ಆಗುತ್ತದೇನೋ ನಿಜ. ಆದರೆ ಇದು ಮರಿಗಳ ಚಟುವಟಿಕೆಗಳ ಮೇಲೆ ಪ್ರಭಾವ ಬೀರುವುದೇ? ಪರಿಚಯವಿಲ್ಲದ ಸ್ವಾದವನ್ನು ಕಂಡು ಮುಖ ಕಿವುಚಿಕೊಳ್ಳುವುದು ಸಹಜವೇ. ಹಾಗಿದ್ದರೆ ಅಸಹ್ಯವಾದ ಸ್ವಾದ, ಪರಿಮಳವನ್ನು ಗರ್ಭಿಣಿ ಸೇವಿಸಿದರೆ, ಹುಟ್ಟುವ ಮರಿಗಳಿಗೂ ಆ ಸ್ವಾದ, ವಾಸನೆ ವಾಕರಿಕೆ ತರುತ್ತವೆಯೋ? ಜೆಸ್ಸಿಕಾ ಸೆರ್ರಾ ಮತ್ತು ಮರಿಯೆ ಊಸ್ಟಿಂಜರ್ ಈ ಊಹೆಯ ಹಿಂದೆ ಸಾಗಿ ಪ್ರಯೋಗಗಳನ್ನು ನಡೆಸಿದ್ದಾರೆ. ಊಸ್ಟಿಂಜರ್ ಾಟು ಸೋಂಪು ವಾಸನೆ ಇರುವ ಬೂಸು ತಿಂದ ಹಂದಿಯ ಮರಿಗಳನ್ನು ವಿವಿಧ ಪ್ರಯೋಗಗಳಿಗೆ ಒಡ್ಡಿದ್ದಾರೆ. ತಮಗೆ ಪರಿಚಿತವಲ್ಲದ ಸ್ಥಳದಲ್ಲಿರಿಸಿದಾಗ ಇವು ಹೇಗೆ ಪ್ರತಿಕ್ರಯಿಸುತ್ತವೆ ಎನ್ನುವುದನ್ನು ಪರೀಕ್ಷಿಸಿದ್ದಾರೆ. ಅಪರಿಚಿತ ಸ್ಥಳದಲ್ಲಿರುವಾಗಲೂ ಸೋಂಪಿನ ವಾಸನೆ ಇದ್ದಲ್ಲಿ ಇವು ಬೆದರಿ ಮೂತ್ರ ಮಾಡಿಕೊಳ್ಳುವುದು ಕಡಿಮೆ. ಆ ವಾಸನೆ ಇಲ್ಲದಿದ್ದಲ್ಲಿ ಇವು ಹೆಚ್ಚು ಉಚ್ಚಿಕೊಳ್ಳುತ್ತಿದ್ದುವು. ಹಾಗೆಯೇ ಅಲ್ಲಿಂದ ತಪ್ಪಿಸಿಕೊಳ್ಳಲು ಸೋಂಪಿನ ವಾಸನೆ ಇರುವ ಬಾಗಿಲನ್ನೇ ಹೆಚ್ಚಿನ ಮಟ್ಟಿಗೆ ಹುಡುಕುತ್ತಿದ್ದುವು.

 

ಜೆಸ್ಸಿಕಾ ಸೆರ್ರಾರವರ ತಂಡ ಬೆಕ್ಕಿನ ಮರಿಗಳ ಮೇಲೆ ಪ್ರಯೋಗ ನಡೆಸಿತು. ಗರ್ಭಿಣಿ ಬೆಕ್ಕುಗಳಿಗೆ ವಿಶೇಷ ಸ್ವಾದದ ಚೀಸ್ ನೀಡಲಾಯಿತು. ಈ ಬೆಕ್ಕುಗಳಿಗೆ ಹುಟ್ಟಿದ ಮರಿಗಳನ್ನು ಅವು ಜನಿಸಿದ ಮರುದಿನವೇ ಹೊಸ ಜಾಗದಲ್ಲಿಟ್ಟು ಪರೀಕ್ಷಿಸಲಾಯಿತು. ಚೀಸ್ನ ಪರಿಮಳ ಹಾಗೂ ಬೇರೆ ಪರಿಮಳವನ್ನು ಒಡ್ಡಿದಾಗ ಈ ಎಲ್ಲ ಮರಿಗಳೂ ಚೀಸ್ ಪರಿಮಳವಿದ್ದ ದಿಕ್ಕನ್ನೇ ಆಯ್ದುಕೊಂಡವು. ಚೀಸ್ ತಿನ್ನದಿದ್ದ ಬೆಕ್ಕಿನ ಮರಿಗಳ ಪ್ರತಿಕ್ರಿಯೆ ಎರಡೂ ಪರಿಮಳಗಳಿಗೆ ಒಂದೇ ತೆರನಾಗಿತ್ತು. ಅರ್ಥಾತ್, ಗರ್ಭಾವಸ್ಥೆಯಲ್ಲಿ ಅನುಭವಿಸಿದ ಸ್ವಾದ ಹಾಗೂ ವಾಸನೆ ಹುಟ್ಟಿದ ಅನಂತರವೂ ಬೆಕ್ಕು ಹಾಗೂ ಹಂದಿಮರಿಗಳ ನಡವಳಿಕೆಯನ್ನು ಪ್ರಭಾವಿಸುತ್ತದೆ.

ಎಲ್ಲರೂ ಮೆಚ್ಚುವ ಗೋಬಿಮಂಚೂರಿ ನನಗೆ ಹಿಡಿಸದಿರುವುದಕ್ಕೆ ಬೆಳ್ಳುಳ್ಳಿ ತಿನ್ನದ ನನ್ನ ಅಮ್ಮನೇ ಕಾರಣವೋ? ಅಥವಾ ಆಗಾಗ್ಗೆ ಬೆಳ್ಳುಳ್ಳಿ ರುಚಿಸಿದರೂ, ಬೇರಾವುದೋ ಕಾರಣಕ್ಕೆ ಮಂಚೂರಿಯನ್ನ್ನು ನಾನು ಮೆಚ್ಚುತ್ತಿಲ್ಲವೋ? ನನಗಿನ್ನೂ ಗೊಂದಲವಾಗಿದೆ. ಅದೇನೇ ಇರಲಿ. ಈ ಪ್ರಯೋಗಗಳಿಗಂದ ಹಂದಿ ಸಾಕುವವರಿಗೆ ಅನುಕೂಲವಾಗಲಿದೆಯಂತೆ. ಊಸ್ಟಿಂಜರ್ರವರ ಪ್ರಕಾರ, ಬಸುರಿ ಹಂದಿಗಳಿಗೆ ನಿರ್ದಿಷ್ಟ ಸ್ವಾದದ ಪದಾರ್ಥಗಳನ್ನು ನೀಡುವುದರಿಂದ ಅವುಗಳ ಮರಿಗಳು ಅದೇ ಸ್ವಾದವಿರುವ ಆಹಾರವನ್ನು ಇನ್ನಷ್ಟು ಹೆಚ್ಚು ತಿನ್ನುವಂತೆ ಮಾಡಬಹುದು. ಮರಿಗಳು ಕೊಬ್ಬಿದಷ್ಟೂ ಸಾಕಿದವನಿಗೇ ಲಾಭವಷ್ಟೆ! ಅದಕ್ಕೇ ಈ ಪ್ರಯೋಗ.

1. Marije Oostindjer et al., Prenatal flavour exposure affects flavor recognition and stress-related behaviour of piglets; Chemical Senses; Vol. 34; Pp 775-787; 2009 (Advance online publication October 8, 2009; doi:10.1093/chemse/bjp063)

2. Aurelie Becques et al., Effect of Pre and Postnatal Olfagustatory Experience on Early preferences at Birth and Dietary Selection at Weaning in Kitten; Chemical Senses; Vol. 34, Advance online publication December 4, 2009.  (doi:10.1093/chemse/bjp080)