ಒಬ್ಬರು ಅಜ್ಜಿ ಇನ್ನೊಬ್ಬರ ಕಣ್ಣು ಕಟ್ಟಿಸಿಕೊಳ್ಳುವರು. ಈ ಆಟದಲ್ಲಿ ಅಜ್ಜಿಯಾಗಲು ಮನೆಯ ಹಿರಿಯರೂ ಪಾಲುಗೊಳ್ಳುವುದುಂಟು, ಅಜ್ಜಿಯ ಮುಂದೆ ಒಬ್ಬೊಬ್ಬರಾಗಿ ನಿಂತು ತಮ್ಮ ಒಂದೇ ಕಯ್ಯಿನ ಎರಡು ಬೆರಳನ್ನು ಕೂಡಿಸಿ ಅದರ ನಡುವಿನ ಸಂದಿ (ತೂತು) ಯಲ್ಲಿ ಎಂಜಲು ತೂಕುವರು. ಉಗುಳಿದ ಎಂಜಲು ಸಂದಿಯಿಂದ ನೇರವಾಗಿ ಕೆಳಗೆ ಬೀಳದೆ ಆಚೆ ಈಚೆ ಕೈಬೆರಳಿಗೆ ತಾಗಿದರೆ, ಅವರು ಕಳ್ಳರು, ಇಂತವರು ಒಬ್ಬರಿಗಿಂತ ಹೆಚ್ಚು ಜನ ಇದ್ದರೆ ಒಬ್ಬೊಬ್ಬರು ಒಂದೊಂದು ಹೆಸರು ಹಾಕಿಕೊಂಡು ಬರುವರು. ಅಜ್ಜಿ ಆರಿಸಿದ ಹೆಸರಿನವರೇ ಕಳ್ಳರು.

ಅಜ್ಜಿ ಕಳ್ಳನನ್ನು ತನ್ನ ಮುಂದೆ ಕುಳ್ಳಿರಿಸಿಕೊಂಡು, ತನ್ನ ಮುಂದೆ ಸಾಲಾಗಿ ನಿಂತ ಎಲ್ಲ ಆಟಗಾರರನ್ನು ಸರಿಯಾಗಿ ನೋಡಿಕೊಳ್ಳಲು ಹೇಳುವಳು, ಆನಂತರ ಕಳ್ಳನ ಕಣ್ಣನ್ನು ಕೈಯಿಂದ ಮುಟ್ಟಿ ” ಅದಲು ಬದಲು ಕಂಚೀ ಬದಲು ಇವ್ರ್ ಬಿಟ್ಟು ಇವ್ರಾರು ” ಎಂದು ಹೇಳುತ್ತಾ ಒಂದು ಕೈಯಲ್ಲಿ ಕಳ್ಳನ ಕೈಹಿಡಿದು, ನಿಂತವರಲ್ಲೊಬ್ಬರ ಕಡೆಗೆ ಬೊಟ್ಟು ಮಾಡಿ ತೋರಿಸುವಳು. ಅಜ್ಜಿ ಹಾಗೆ ಹೇಳುತ್ತಿರುವಾಗ ಅಲ್ಲಿ ನಿಂತವರು ಆಚೆ ಈಚೆ ಅದಲುಬದಲಾಗಿ ನಿಲ್ಲುವರು. ಆದರೆ ಇವ್ರಾರು ಎಂದು ಬೊಟ್ಟು ತೋರಿಸಿದಾಗ ಅವರು ನಿಂತಲ್ಲಿಯೇ ನಿಲ್ಲಬೇಕು. ಅಜ್ಜಿ ಬೊಟ್ಟು ಮಾಡಿ ತೋರಿಸಿದವರ ಹೆಸರನ್ನು ಕಳ್ಳ ಸರಿಯಾಗಿಯೇ ಊಹಿಸಿದರೆ, ಕಳ್ಳನಿಗೆ ಬಿಡುಗಡೆ. ಹೆಸರು ಹೇಳಿಸಿಕೊಂಡವರು ಕಳ್ಳರು.

ಕಳ್ಳ ತಪ್ಪು ಹೆಸರು ಹೇಳಿದರೆ ಅವರು ಬೇರೆಡೆ ನಿಲ್ಲಬೇಕು. ಮೂರು ಅವಕಾಶದಲ್ಲಿಯೂ ಕಳ್ಳ ಸರಿಯಾದ ಹೆಸರನ್ನು ಹೇಳದೇ ಹೋದರೆ ಒಂದೆಡೆ ನಿಂತ ಎಲ್ಲರೂ ದೂರ ಹೋಗಿ ಅಡಗುವರು. ಕಳ್ಳ ಅವರನ್ನು ಹುಡಕಲು ಹೋಗುವನು. ಆಗ ಅಡಗಿಕೊಂಡವರು ಅಜ್ಜಿಯನ್ನು ಓಡಿಬಂದು ಮುಟ್ಟಿದರೆ ಕಳ್ಳನೇ ಮತ್ತೆ ಕಳ್ಳನಾಗುವನು. ಅಜ್ಜಿಯನ್ನು ಮುಟ್ಟುವ ಮೊದಲೇ ಒಬ್ಬರನ್ನು ಕಳ್ಳ ಮುಟ್ಟಿದರೆ ಮುಟ್ಟಿಸಿಕೊಂಡವನು ಕಳ್ಳನಾಗುವನು. ಹೆಚ್ಚು ಜನರನ್ನು ಮುಟ್ಟಿದರೆ ಅವರೆಲ್ಲ ಬೇರೆ ಬೇರೆ ಹೆಸರು ಹಾಕಿಕೊಂಡು ಬರುವರು. ಅಜ್ಜಿ ಆರಿಸಿದ ಹೆಸರಿನವ ಹೊಸ ಕಳ್ಳನಾಗುವನು. ಮತ್ತೆ ಹೊಸ ಆಟ ಪ್ರಾರಂಭವಾಗುತ್ತದೆ.

ಈ ಆಟದಲ್ಲಿ ಕೆಲವರು “ಕಾಡೇಗೂಡೇ| ಉದ್ದಿನ ಮೂಡೇ | ಉರುಳೇ ಹೋಯ್ತು | ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೇ | ನಿಮ್ಮಯ್ಯ ಹಕ್ಕಿ ಅಡಗಿಸಿ ಕೊಳ್ಳಿ |” ಎಂದು ಕಳ್ಳನ ಕಟ್ಟಿದ ಕಣ್ಣು ಬಿಡುವಾಗ ಹೇಳುವುದುಂಟು.