ಆಟಗಾರರ ಸಂಖ್ಯೆ ಬೇಕಾದಷ್ಟಿರಬಹುದು. ಅವರಲ್ಲಿ ಕಣ್ಣು ಕಟ್ಟಿಸಿಕೊಳ್ಳಲು ಬಯಸುವ ಒಬ್ಬನ ಕಣ್ಣನ್ನು ಒಂದು ವಸ್ತ್ರದ ಪಟ್ಟಿಯಿಂದ ಬಿಗಿಯುವರು. ಕಣ್ಣು ಕಟ್ಟಿಸಿಕೊಂಡವರನ್ನು ನಾಲ್ಕಾರು ಬಾರಿ ಅವನ ಮೈಸುತ್ತ ತಿರುಗಿಸಿ ದಿಕ್ಕು ತಪ್ಪಿಸುವರು. ಬೇರೆ ಬೇರೆ ದಿಕ್ಕುಗಳಲ್ಲಿ ಇದ್ದ ಮನೆ ಮರಗಳ ಕಡೆಗೆ ಕೈ ಮಾಡಿ ಇದೇನು? ಇದೇನು? ಎಂದು ಕೇಳುವರು, ತಪ್ಪು ಉತ್ತರ ಬಂದರೆ ನಗುತ್ತ ಸಂತೋಷಪಡುವರು. ಕಣ್ಣಿಗೆ ಕಟ್ಟಿದ ಬಟ್ಟೆ ಸರಿಯಾಗಿ ಹೊಂದಿಕೊಂಡಿದೆಯೇ ಎಂಬುದನ್ನು ಅರಿಯುವ ವಿಧಾನವಿದು. ಬಟ್ಟೆ ಸರಿಯಾಗಿ ಹೊಂದಿಕೊಂಡಿದೆಯೆಂದು ಖಾತ್ರಿಯಾದ ಮೇಲೆ ಎಲ್ಲರೂ ಒಂದು ನಿರ್ದಿಷ್ಟ ಸ್ಥಳಾವಕಾಶದಲ್ಲಿ ಅತ್ತ ಇತ್ತ ಕುಳಿತು ಕೊಳ್ಳುವರು. ಕಣ್ಣು ಕಟ್ಟಿಸಿ ಕೂಂಡವನು ಮುಟ್ಟಲು ಸಮೀಪ ಬಂದಾಗ ಕುಳಿತವರು ಮೌನವಾಗಿದ್ದು ಅವರಿಂದ ತಪ್ಪಿಸಿಕೊಳ್ಳಲು ಕುಳಿತಲ್ಲಿಯೇ ಮೈಕುಗ್ಗಿಸಿ ಅಥವಾ ಆಚೆ ಈಚೆ ಕುಳಿತಲ್ಲಿಂದಲೇ ಸರಿದು ಕುಳಿತುಕೊಳ್ಳುವರು. ಮುಟ್ಟುವನು ದೂರ ಸರಿಯುತ್ತಲೇ ದೊಡ್ಡದಾಗಿ ಮಾತಾಡುವರು, ನಗುವರು. ಆಗ ಮುಟ್ಟುವವನು ಧ್ವನಿ ಬಂದ ದಿಕ್ಕಿನತ್ತ ಧಾವಿಸುವನು. ಮುಟ್ಟುವನು ತಾನು ದಣಿಯುವಷ್ಟು ಹೊತ್ತು ಮುಟ್ಟಲು ಶ್ರಮಿಸುವನು. ಮೊದಲು ಮುಟ್ಟಿಸಿಕೊಂಡವನು ಮರು ಆಟಕ್ಕೆ ಕಣ್ಣು ಕಟ್ಟಿಸಿಕೊಳ್ಳುವನು.

ಈ ಆಟವನ್ನು ನಿಂತುಕೊಂಡು ಆಡುವುದೂ ಉಂಟು. ಮೌನವಾಗಿ ಮುಟ್ಟುವವನ ಹಿಂದೆಯೇ ತಿರುಗಾಡುತ್ತ ಉಳಿದವರಿಗೆ ಮನೋರಂಜನೆಯನ್ನೊದಗಿಸುವರು. ಮತ್ತೆ ಕೆಲವರು ಮುಟ್ಟುವವನ ಅತಿ ಸಮೀಪ ಬಂದು ಮಾತಾಡಿ, ತಪ್ಪಿಸಿಕೊಂಡು ಓಡುವರು.