ಕುಪ್ಪನ ಆಟ ಹಳ್ಳಾಕಾಟದ ಇನ್ನೊಂದು ಬಗೆ, ತುಸು ಬೇರೆ ರೀತಿಯದು. ಹರಳು ಹಾಕುವವ, ಕೇಳುವವ ಇಬ್ಬರು ಪಕ್ಷದ ನಾಯಕರು, ಕೇಳುವವ ಹರಳಿದ್ದವರನ್ನು ಗುರುತಿಸದರೆ ಆತನು ಕೇಳುವವನ ಪಕ್ಷಕ್ಕೆ ಸೇರುತ್ತಾನೆ. ಆತ ಆಟ ಬಿಟ್ಟು ಈಚೆ ಬರುತ್ತಾನೆ. ಈಗ ಕೇಳುವವ ಹರಳು ಹಾಕುತ್ತಾನೆ. ಮೊದಲು ಹರಳು ಹಾಕುತಿದ್ದವ ಈಗ ಕೇಳುವವನಾಗುತ್ತಾನೆ. ಹೀಗೆ ಇಬ್ಬರ ಪಕ್ಷಕ್ಕೂ ಆಟಗಾರರು ಹಂಚಿ ಹೋಗುತ್ತಾರೆ. ಹರಳು ಹಾಕುವವನು ತನ್ನ ಪಕ್ಷದ ಜನರೊಂದಿಗೆ ಕೊನೆಯಲ್ಲಿ ಉಳಿದ ಆಟಗಾರರನ್ನು ಕರೆದುಕೊಂಡು, ಕುಪ್ಪಾ ಆಡುತ್ತಾನೆ. ಪ್ರತಿಪಕ್ಷದಲ್ಲಿ ಇಂತಿಷ್ಟೇ ಆಟಗಾರರಿರಬೇಕೆಂಬ ನಿಯಮವಿಲ್ಲ.

ಪಕ್ಷದ ನಾಯಕನೊಂದಿಗೆ ಇತರರು ಸೇರಿ, ಕುಪ್ಪಾ ಮಾಡುವವನನ್ನು ಒಂದು ಬದಿಗೆ ಕರೆದುಕೊಂಡು ಹೋಗಿ, ಎಲೆ ಅಥವಾ ಕಾಗದದಲ್ಲಿ ಆಡುವಾಗ ಉಪಯೋಗಿಸಿದ ಹರಳನ್ನು ಕಟ್ಟಿ ಕುಪ್ಪನ ಕಂಕುಳಲ್ಲಾಗಲೀ ಮುಷ್ಟಿಯಲ್ಲಾಗಲೀ, ಕಾಲುಗಳ ಬೆರಳಿನ ಸಂದಿಯಲ್ಲಾಗಲೀ ಅಡಗಿಸಿಡುವರು, ಹರಳು ಹಾಕದ ಇತರ ಸ್ಥಳದಲ್ಲಿ ಎಲೆ ಕಾಗದದ ಚಿಕ್ಕ ಚಿಕ್ಕ ಗಂಟುಮಾಡಿ ಸಿಕ್ಕಿಸಿಡುವರು, ಎದುರು ಪಕ್ಷದವನಿಗೆ ಹರಳು ಆ ಗಂಟುಗಳಲ್ಲೊಂದರಲ್ಲಿಯೇ ಇದೆಯೆಂಬ ಭ್ರಮೆ ಹುಟ್ಟಿಸಲು ಉಪಾಯವಿದು. ಕುಪ್ಪನಲ್ಲಿ ಹರಳು ಹುದುಗಿಸಿದ ಮೇಲೆ ಕೈ ಇಳಿಬಿಟ್ಟು ಇಲ್ಲವೆ ಕೈ ಮಡಚಿ ಮೇಲೆ ಹಿಡಿದು ಕುಪ್ಪನನ್ನು ಕರೆದುಕೊಂಡು, ಇನ್ನೊಂದು ಪಕ್ಷದವರಲ್ಲಿಗೆ ಬರುವರು. ಕುಪ್ಪ ಬರುವಾಗ ಪಕ್ಷದ ನಾಯಕ ಕುಪ್ಪನ ತಲೆಯ ಮೇಲೆ ಬಡಿಯುತ್ತ

“ನಮ್ಮಾ ಕುಪ್ಪಾ ಬತ್ತಿದೋ
ರಸ್ಭಾಳಿ ಹಣ್ಣಾ ತತ್ತೀದೋ
ಧೀರ ಶೂರ ಮುಂದಾಗಿ
ಕಲ್ಲೂ ಮುಳ್ಳೂ ಬದಿಗಾಗಿ” ಎನ್ನುವನು.

ಕುಪ್ಪಾ” ತನ್ನ ಮೊದಲಿನ ಸ್ಥಿತಿಯನ್ನು ಬದಲಿಸದೆ ಎದುರು ಪಕ್ಷದವರ ಮುಂದೆ ನಿಲ್ಲಬೇಕು. ಕುಪ್ಪಾ ತಂದವರು ಸೊಂಟದ ಮೇಲೆ ಬೇಕೋ, ಸೊಂಟದ ಕೆಳಗೆ ಬೇಕೋ  –  ಎಂದು ಕೇಳುವರು. ಆಗ ಅವರು ಹರಳಿರಬಹುದು ಒಂದು ಭಾಗವನ್ನು ಕೇಳುವರು, ಹರಳು ಸಿಕ್ಕ ಪಕ್ಷದವರು ತಮ್ಮೊಬ್ಬ ಆಟಗಾರನನ್ನು ಮತ್ತೆ ಕುಪ್ಪಾ ಮಾಡಿ ತರುವರು. ಹೀಗೆ ಬಹುಹೊತ್ತು ಆಟ ನಡೆಯುತ್ತದೆ.