ಬಾಲ್ಯದಿಂದ ತಾರುಣ್ಯಕ್ಕೆ ಕಾಲಿಡುತ್ತಿದ್ದಂತೆ ಮೊದಲು ತಂದೆಯನ್ನು, ಬಳಿಕ ಅಣ್ಣನನ್ನು, ಅನಂತರ ತಾಯಿಯನ್ನು ಕಳೆದುಕೊಂಡ ಆನಂದಕಂದರ ಭವಿಷ್ಯತ್ತು ಕರಾಳವಾಗಿ ದಿಕ್ಕುತೋಚದಂತಾಗಿತ್ತು. ಇಂಥ ಸಂದಿಗ್ಧ ಸ್ಥಿತಿಯಲ್ಲಿ ತಮ್ಮ ದಾರಿಯನ್ನು ತಾವೇ ಕಂಡುಕೊಳ್ಳಬೇಕಾಗಿತ್ತು. ತಮ್ಮ ಭವಿಷ್ಯವನ್ನು ತಾವೇ ನಿರ್ಧರಿಸಿಕೊಳ್ಳಬೇಕಾಗಿತ್ತು. ಯಾವ ಮುಂದಾರಿ ಕಾಣದ ಯುವಕ, ಶಿಕ್ಷಣವನ್ನು ಒಂದು ಹಂತಕ್ಕೆ ನಿಲ್ಲಿಸಿ, ಅನೇಕ ಕನಸುಗಳನ್ನು ಕಾಣುತ್ತ ತನ್ನ ೧೮-೧೯ನೆಯ ವಯಸ್ಸಿನಲ್ಲಿಲಯೇ ಪರವ್ರಾಜಕನಂತೆ ಮನೆತ್ಯಜಿಸಿ, ಮುಂದಿನ ಖಚಿತ ಗೊತ್ತುಗುರಿಗಳಿಲ್ಲದೇ ಜಿಲ್ಲಾಕೇಂದ್ರ ಬೆಳಗಾವಿಗೆ ಬರಬೇಕಾಯಿತು.

ಎಂಥ ಎದೆಗಾರರು ಕೂಡ ಕೈಕಾಲು ಕಳೆದುಕೊಳ್ಳುವಂಥ ಆಘಾತಗಳು ಆನಂದಕಂದರನ್ನು ಘಾಸಿ ಮಾಡಿದ್ದರೂ ಅವರು ಸೋಲನ್ನೊಪ್ಪಿಕೊಳ್ಳುವ ಅಳುಕೆದೆಯವರಾಗಿರಲಿಲ್ಲ. ಅವರು ಪರಾಭವದ ಜತೆ ಸಂಧಾನಮಾಡಿಕೊಳ್ಳುವವರಾಗಿರಲಿಲ್ಲ. ಅದಮ್ಯ ಆಶಾವಾದಿತ್ವ ಅವರ ಜೀವನದ ಸ್ಥಾಯಿಯಾಗಿತ್ತು. ಭವಿಷ್ಯತ್ತನ್ನು ಹೇಗೂ ನಿರ್ಮಿಸಿಕೊಳ್ಳಬಲ್ಲೆನೆಂಬ ಆತ್ಮವಿಶ್ವಾಸ ಅವರಿಗೆ ಮಾರ್ಗದರ್ಶಿಯಾಗಿತ್ತು. ತಾಯಿಯಿಂದ ಅವರಿಗೆ ಸಂದ ಹರಕೆಯೆಂದರೆ ಜ್ಞಾನಲಾಲಸೆ. ಅದೇ ಅವರನ್ನು ಹೊಸದೊಂದು ಹಾದಿಗೆ ಹಚ್ಚಿತು.

ಮನೆಬಿಟ್ಟು ಹೊರಟಾಗ ಆನಂದಕಂದರ ಕೈಯಲ್ಲಿ ಬಿಡಿಗಾಸು ಕೂಡ ಇರಲಿಲ್ಲ. ಪಟ್ಟಣದಲ್ಲಿ ಗಟ್ಟಿಯಾಗಿ ನಿಲ್ಲಬೇಕಾದಂಥ ವಿಶೇಷ ಗುಣಗಳು ಇರಲಿಲ್ಲ. ಹಳ್ಳಿಯಲ್ಲಿ ಹುಟ್ಟಿಬೆಳೆದ ಅಲ್ಲಿಯ ಸಂಸ್ಕಾರಗಳನ್ನು ಮೈಗೂಡಿಸಿಕೊಂಡ ಅವರಿಗೆ, ನಗರದ ನಯ-ನಾಜೂಕುಗಳೂ ತಿಳಿದಿರಲಿಲ್ಲ. ಆದರೂ ಏನನ್ನಾದರೂ ಮಾಡಬೇಕೆಂಬ ಒತ್ತಾಸೆ, ಸಾಹಸ ಅವರನ್ನು ಬೆಳಗಾವಿಗೆ ತಂದು ಬಿಟ್ಟಿತ್ತು. ಬೆಳಗಾವಿಯಲ್ಲಿ ಆ ಸಮಯ ಈ ಹಿಂದೆ ಬೆಟಗೇರಿಯಲ್ಲಿ ಸೇವೆ ಸಲ್ಲಿಸಿದ್ದ ಶಿಕ್ಷಕರೊಬ್ಬರು ಭೇಟಿಯಾದರು. ಹಳೆಯ ಸಂಪ್ರದಾಯದ ವಿನಯಶೀಲರು. ತರುಣ ಆನಂದಕಂದರನ್ನು ಮಾತನಾಡಿಸಿ, ಕುಶಲ ಸಮಾಚಾರ ವಿಚಾರಿಸಿದರು. ತಮ್ಮ ಎಲ್ಲ ಪರಿಸ್ಥಿತಿಯನ್ನು ಆನಂದಕಂದರು ಅವರ ಮುಂದೆ ಬಿಚ್ಚಿರಿಸಿದರು. ಯುವಕನ ಕರುಣ ಕಥೆ ಕೇಳಿ ಆ ಶಿಕ್ಷಕರ ಮನಸ್ಸು ಕರಗಿತ್ತು. ಆನಂದಕಂದರಿಗೆ ಏನಾದರೂ ದಾರಿತೋರಬೇಕೆಂದು. ಅವರು ಕಳಕಳಿಯಿಂದ ಜಂಟಿ ಶಿಕ್ಷಣಾಧಿಕಾರಿಗಳವರ (D.E.I) ಕಛೇರಿಗೆ ಕರೆದೊಯ್ದರು.

ಅಲ್ಲಿಯ ಮುಖ್ಯ ಕಾರಕೂನ ಅವರಿಗೆ ಪರಿಚಿತನಾದವ. ಆನಂದಕಂದರ ಕಷ್ಟ ಪರಿಸ್ಥಿತಿಯನ್ನೆಲ್ಲ ಆತನಿಗೆ ಅರುಹಿ, ಆ ಶಿಕ್ಷಕರು ಒಂದು ಶಿಕ್ಷಕರ ಹುದ್ದೆಯನ್ನು ಆನಂದಕಂದರಿಗೆ ಕೊಡಮಾಡಬೇಕೆಂದು ಕೇಳಿಕೊಂಡರು. ಸುಶಿಕ್ಷಿತರ ಅಭಾವದ ಆ ಕಾಲದಲ್ಲಿ, ಶೈಕ್ಷಣಿಕ ಅರ್ಹತೆಯುಳ್ಳವರು ಕೂಡಲೇ ಆ ಶಿಕ್ಷಣಾಧಿಕಾರಿಗಳ ಕಛೇರಿಯಿಂದ ಶಿಕ್ಷಕ ವೃತ್ತಿಯ ಆಜ್ಞೆಯನ್ನು ಸುಲಭವಾಗಿ ಪಡೆದುಕೊಂಡು ಹೋಗಬಹುದಿತ್ತು. ಆ ಮುಖ್ಯ ಕಾರಕೂನ ವ್ಯವಹಾರ ಕುಶಲ. ಆನಂದಕಂದರ ಬಗೆಗೆ ತುಂಬಾ ಮರುಕ ತೋರಿದ. ಅವನೇ ಒಂದು ಹಳ್ಳಿಯ ಹೆಸರನ್ನು ಹೇಳಿ, ಅಲ್ಲಿಗೆ ಶಿಕ್ಷಕನಾಗಿ ಹೋಗಲು ಸಿದ್ಧವಿದ್ದರೆ ಒಂದು ವಾರದಲ್ಲಿ ಆಜ್ಞೆ ಕೊಡಿಸುವುದಾಗಿ ಆನಂದಕಂದರಿಗೆ ಹೇಳಿದ. ಆ ಕಾರಕೂನನ ಮಾತು ಕೇಳಿ ಆನಂದಕಂದರಿಗೆ ರಾಜ್ಯ ಪಡೆದಷ್ಟು ಸಂತೋಷವಾಗಿತ್ತು. ಈ ಹಿಂದೆ ತಾಯಿ ಇದ್ದಾಗಲೇ ತಾನಾಗಿ ದೊರೆತ ಪ್ರಾಥಮಿಕ ಶಿಕ್ಷಕ ಹುದ್ದೆಯನ್ನು, ಅದು ಸೇರದೇ ಆನಂದಕಂದರು ತಾವಾಗಿಯೇ ಅದಕ್ಕೆ ಶರಣು ಹೊಡೆದಿದ್ದರು. ಈಗದು ಉಪಜೀವನಕ್ಕೆ, ಹೊಸ ಬದುಕಿಗೆ ಅನಿವಾರ್ಯವಾಗಿದ್ದು, ಒಪ್ಪಿಕೊಳ್ಳಬೇಕಾಯಿತು.

ಆದರೆ ಆ ಕಛೇರಿ ಬಿಟ್ಟು ಹೊರಬಂದಾಗ, ಆನಂದಕಂದರ ಕನಸು ನನಸಾಗಿರಲಿಲ್ಲ. ಅದು ಕನಸಾಗಿಯೇ ಉಳಿಯುವ ಪರಿಸ್ಥಿತಿ ಒದಗಿತ್ತು. ಇವರ ಶಿಕ್ಷಕ ಹುದ್ದೆಗಾಗಿ ಆ ಕಾರಕೂನ ಇಪ್ಪತ್ತು ರೂಪಾಯಿಗಳನ್ನು ಬೇಡಿದ್ದನಂತೆ. ಬೇರೆಯವರಿಗೆ ೩೦-೪೦ ರೂಪಾಯಿಗಳನ್ನು ಪಡೆದು ಆಜ್ಞೆ ಕಳಿಸಲು ನೆರವಾಗುತ್ತಿದ್ದ ಆತ, ಆನಂದಕಂದರ ಸ್ಥಿತಿಯನ್ನು ಕಂಡು ೨೦ ರೂ. ಕೇಳಿದ್ದನಂತೆ. ಆ ಸಮಯ ಆನಂದಕಂದರ ಜೇಬಂತೂ ಖಾಲಿ. ಜತೆಯಲ್ಲಿ ಬಂದ ಶಿಕ್ಷಕರೇ ೨೦ ರೂ. ಕೊಡಲು ಸಿದ್ಧರಾಗಿದ್ದರು. ಸಂಬಳ ಪ್ರಾರಂಭವಾದ ಬಳಿಕ ತಿಂಗಳಿಗೆ ೫ ರಂತೆ ಸಾಲತೀರಿಸಲು ಹೇಳಿದರು. ಇದೇ ವಿಚಾರಗಳ ತಾಕಲಾಟದಲ್ಲಿದ್ದಾಗಲೇ ಆನಂದಕಂದರ ಬದುಕಿನಲ್ಲಿ ಒಂದು ಹೊಸ ತಿರುವು ಕಾಣಿಸಿಕೊಂಡಿತು.