ತಾಲೂಕಿನ ಪೂರ್ವ ಭಾಗಕ್ಕೆ ಮೈಸೂರು ತಾಲೂಕು, ಪಶ್ಚಿಮಕ್ಕೆ ಪಿರಿಯಾಪಟ್ಟಣ ತಾಲೂಕು, ದಕ್ಷಿಣಕ್ಕೆ ಎಚ್‌ಡಿ ಕೋಟೆ ತಾಲೂಕು ಹಾಗೂ ಉತ್ತರಕ್ಕೆ ಕೆ ಆರ್‌ನಗರ ತಾಲೂಕುಗಳನ್ನು ಗಡಿಯಾಗಿ ಹೊಂದಿದೆ. ಈ ತಾಲೂಕು ಮಲೆನಾಡಿನ ಸೆರಗಿನಲ್ಲಿರುವ ಬಯಲು ಸೀಮೆ. ಇದು ಅರೆಮಲೆನಾಡು ಪ್ರದೇಶ. ಇಲ್ಲಿ ಗಿರಿಜನರು ವಾಸಿಸುವ ಹಾಡಿಗಳಿವೆ. ಪಕ್ಷಿರಾಜಪುರ ಮತ್ತು ಬಿಜಾಪುರ ಕಾಲೊನಿಗಳಲ್ಲಿ ಕರಕುಶಲ ವಸ್ತುಗಳನ್ನು ತಯಾರಿಸುವ ಗುಡಿಕೈಗಾರಿಕೆಗಳಿವೆ. ದಕ್ಷಿಣ ಕೊಡಗಿನಲ್ಲಿ ಹುಟ್ಟಿ ಈ ತಾಲೂಕಿನಲ್ಲಿ ಹರಿದು ಕಾವೇರಿಯನ್ನು ಸೇರುವ ಲಕ್ಷ್ಮಣ ತೀರ್ಥ ಇಲ್ಲಿನ ಜೀವನಾಡಿ. ಹೊಗೆಸೊಪ್ಪು ಇಲ್ಲಿನ ಮುಖ್ಯ ವಾಣಿಜ್ಯ ಬೆಳೆ. ತಾಲೂಕಿನ ಗಡಿ ಭಾಗದಲ್ಲಿ ಇರುಪ್ಪು ಜಲಪಾತವಿದೆ. ಹುಣಸೂರು ತಾಲೂಕಿನ ಅರಣ್ಯ ಪ್ರದೇಶದಲ್ಲಿ ಬೆಳೆಯುವ ತೇಗದ ಮರಗಳು ತಮ್ಮ ಗುಣಮಟ್ಟಕ್ಕಾಗಿ ಪ್ರಸಿದ್ಧಿ ಪಡೆದಿವೆ. ಕರ್ನಾಟಕದ ಪ್ರಸಿದ್ಧ ಮುಖ್ಯಮಂತ್ರಿಗಳಾಗಿದ್ದ ಶ್ರೀ ಡಿ ದೇವರಾಜ ಅರಸ್‌ಈ ತಾಲೂಕಿನವರು.

 

ವೀರನಹೊಸಳ್ಳಿ ಕಾಡು

ದೂರ ಎಷ್ಟು?
ತಾಲ್ಲೂಕಿನಿಂದ: ೧೮ ಕಿ.ಮೀ.
ಜಿಲ್ಲಾ ಕೇಂದ್ರದಿಂದ: ೬೦ ಕಿ.ಮೀ.

ವೀರನಹೊಸಳ್ಳಿ ಕಾಡು

ಈ ಪ್ರದೇಶಕ್ಕೆ ಭೇಟ ನೀಡಿದರೆ ನಾಗರಹೊಳೆಯ ವನಸಿರಿಯ ಸೌಂದರ್ಯ ಸವಿಯಬಹುದು. ಪಕ್ಕದಲ್ಲಿಯೇ ಕಲ್ಲೂರಪ್ಪನ ಬೆಟ್ಟ ಹಾಗೂ ದೊಡ್ಡ ಹೆಜ್ಜೂರು ಹನುಮಂತ ಸ್ವಾಮಿ ದೇವಾಲಯಗಳಿದ್ದು ಇಲ್ಲಿ ಪ್ರತಿವರ್ಷ ಜಾತ್ರೆ ನಡೆಯುತ್ತದೆ. ನಾಡಹಬ್ಬ ದಸರಾ ಮೆರವಣಿಗೆಯಲ್ಲಿ ಭಾಗವಹಿಸುವ ಆನೆಗಳನ್ನು ನಂತರದ ದಿನಗಳಲ್ಲಿ ಈ ಕಾಡಿನಲ್ಲಿ ಬಿಡಲಾಗುತ್ತದೆ.

 

ಗೊಮ್ಮಟಗಿರಿ

ದೂರ ಎಷ್ಟು?
ತಾಲ್ಲೂಕಿನಿಂದ: ೧೦ ಕಿ.ಮೀ.
ಜಿಲ್ಲಾ ಕೇಂದ್ರದಿಂದ: ೬೦ ಕಿ.ಮೀ.

ಮೈಸೂರು ತಾಲೂಕು ಮತ್ತು ಹುಣಸೂರು ಗಡಿ ಭಾಗದಲ್ಲಿದೆ. ಈ ಕ್ಷೇತ್ರಕ್ಕೆ ಸುಮಾರು ೯೦೦ ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಇಲ್ಲಿ ೨೦ ಅಡಿಗಳ ಎತ್ತರವಿರುವ ಏಕ ಶಿಲಾಮೂರ್ತಿ ಬಾಹುಬಲಿ ವಿಗ್ರಹವಿದೆ. ಒಂದೇ ಬಂಡೆಯಿದ್ದು ಇದರಲ್ಲಿ ೮೦ ಮೆಟ್ಟಿಲುಗಳನ್ನು ಹೊಂದಿದ್ದು ೨೦೦ ಅಡಿ ಇಳಿಜಾರು ಉದ್ದ ಮತ್ತು ೧೫೦ ಅಡಿ ಎತ್ತರದ್ದಾಗಿದೆ. ಬಾಹುಬಲಿಯ ಜೈನ ಅನುಯಾಯಿಯಾದ ಚಂದ್ರಗುಪ್ತನು ಇಲ್ಲಿಗೆ ಭೇಟಿ ನೀಡಿರುವನೆಂದು ಐತಿಹ್ಯವಿದೆ. ಶ್ರವಣಬೆಳಗೊಳದಂತೆ ಇಲ್ಲಿ ಕೂಡಾ ಮಸ್ತಕಾಭಿಷೇಕ ನಡೆಯುತ್ತದೆ.

ಬಾಹುಬಲಿಯ ಬಲಭಾಗಕ್ಕೆ ೨೪ ತೀರ್ಥಂಕರರ ಪಾದ ಚರಣಗಳಿವೆ. ಬಾಹುಬಲಿಯ ಎದುರು ಕೆಳಗಡೆ ಮಾನ ಸ್ತಂಭ ಇದೆ. ಇದರ ಮೇಲೆ ಕ್ಷೇತ್ರಪಾಲ ದೇವರ ಮೂರ್ತಿಯಿದೆ.

 

ಯಮಗುಂಭ

ದೂರ ಎಷ್ಟು?
ತಾಲ್ಲೂಕಿನಿಂದ: ೧೦ ಕಿ.ಮೀ.
ಜಿಲ್ಲಾ ಕೇಂದ್ರದಿಂದ: ೬೦ ಕಿ.ಮೀ.

ಈ ಗ್ರಾಮದಲ್ಲಿ ಸುಮಾರು ೧೦೦೦ ವರ್ಷಗಳಷ್ಟು ಹಳೆಯದಾದ ಜೈನಬಸದಿ ಇದೆ. ಇದು ಹಿಂದೆ ಜೈನರ ಪ್ರಾಬಲ್ಯವಿದ್ದ ಸ್ಥಳ. ೧೪ನೇ ಶತಮಾನದಲ್ಲಿ ಕಲ್ಲಹಳ್ಳಿಯ ಚೆಂಗಾಳ್ವರ ವಂಶದ ೩ನೇ ಮಂಗರಸನಿಂದ ಇದು ನಿರ್ಮಿಸಲ್ಪಟ್ಟಿದೆ. ಈ ಬಸದಿಯಲ್ಲಿ ಪಾರ್ಶ್ವನಾಥ ಮತ್ತು ಬ್ರಹ್ಮದೇವ ವಿಗ್ರಹಗಳಿವೆ.

ಇತ್ತೀಚೆಗೆ ದಿವಗಂತ ದೇವರಾಜ ಅರಸುರವರು ಮುಖ್ಯಮಂತ್ರಿಯಾಗಿದ್ದಾಗ ಈ ಬಸದಿಯನ್ನು ಜೀರ್ಣೋದ್ಧಾರ ಮಾಡಲಾಗಿತ್ತು.

 

ಗುರುಪುರ ಟಿಬೆಟಿಯನ್ಕ್ಯಾಂಪ್

ದೊಡ್ಡ ಲಾಮಾ

ಹುಣಸೂರಿನಿಂದ ಈ ಟಿಬೆಟಿಯನ್‌ನಿರಾಶ್ರಿತರ ಕ್ಯಾಂಪ್‌ನಲ್ಲಿ ಬೌದ್ಧ ಧರ್ಮದ ಸಂದೇಶ ಸಾರುವ ಎರಡು ಲಾಮಾ ದೇವಾಲಯಗಳಿವೆ. ಚಿಕ್ಕಲಾಮಾದಿಂದ ಸ್ವಲ್ಪ ದೂರದಲ್ಲಿ ದೊಡ್ಡ ಲಾಮಾ ಇದೆ. ಇವೆರಡು ಟಿಬೆಟಿಯನ್‌ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಇಲ್ಲಿ ಒಂದು ಬೌದ್ಧ ಧರ್ಮ ಅಧ್ಯಯನ ಕೇಂದ್ರವಿದ್ದು ಇದು ಜಗತ್ತಿನ ಬೌದ್ಧ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿರುತ್ತದೆ.

 

ಕೆಂಡಗಣ್ಣಸ್ವಾಮಿ ಗದ್ದಿಗೆ

ದೂರ ಎಷ್ಟು?
ತಾಲ್ಲೂಕಿನಿಂದ: ೨೪ ಕಿ.ಮೀ.
ಜಿಲ್ಲಾ ಕೇಂದ್ರದಿಂದ: ೬೦ ಕಿ.ಮೀ.

ಇಲ್ಲಿ ಕೆಂಡಗಣ್ಣಸ್ವಾಮಿ ಗದ್ದಿಗೆ ಇದೆ. ಈ ಗದ್ದಿಗೆಯಲ್ಲಿ ಪ್ರತೀ ವರ್ಷ ಜಾತ್ರೆ ನಡೆದು ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಳ್ಳುತ್ತಾರೆ. ಇಲ್ಲಿ ಮೂರು ಕಣ್ಣಿನ ಹಾಗೂ ಮೂರು ಕೊಂಬಿನ ಹಸು ಇದೆ. ಈ ಹಸು ಯಾವ ಜಾಗಕ್ಕೆ ಹೋಗುವುದೋ ಆ ಜಾಗವು ಶ್ರೇಯಸ್ಸನ್ನು ಕಾಣುತ್ತದೆಂಬ ಪ್ರತೀತಿ ಇದೆ.