ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕು ಹಲವು ವೈಶಿಷ್ಟ್ಯತೆಯಿಂದ ಕೂಡಿದ ತಾಲೂಕು, ಸಮುದ್ರ ಮಟ್ಟದಿಂದ ೪೫೦-೮೦೦ ಮೀಟರ್ ಎತ್ತರವಿರುವ ಈ ತಾಲೂಕಿನ ಒಟ್ಟು ವಿಸ್ತೀರ್ಣ ೧೩೫೪.೨೨ ಹೆಕ್ಟರ್‌ಗಳು.  ಒಣಬೇಸಾಯ ಕೃಷಿ ಪ್ರಧಾನವಾದ ಈ ತಾಲೂಕು ಆರ್ಥಿಕವಾಗಿ ಅಷ್ಟೇನೂ ಶ್ರೀಮಂತವಾಗಿರದಿದ್ದರೂ ಐತಿಹಾಸಿಕ ಸಾಂಸ್ಕೃತಿಕವಾಗಿ ತುಂಬ ಶ್ರೀಮಂತವಾದ ತಾಲೂಕಾಗಿದೆ.

“ದೇವಾಲಯಗಳ ವಾಸ್ತುಶಿಲ್ಪದ ತೊಟ್ಟಿಲು” ಎಂದು ಕರೆಸಿಕೊಂಡ ಐಹೊಳೆ, ಕ್ರಾಂತಿಯೋಗಿ ಬಸವಣ್ಣನವರ ವಿದ್ಯಾಭೂಮಿ ಮತ್ತು ಐಕ್ಯಸ್ಥಳ ಕೂಡಲಸಂಗಮ, ಇಲಕಲ್ಲಿನ ಮಠ, ದರ್ಗಾ, ಕೋಡಿಹಾಳ ಕೌದಿ, ಅರಸಿಬೀದಿ ಜಿನಾಲಯ, ಹುನಗುಂದದ ಒಡ್ಡು, ಕರಡಿ ಬಸವಣ್ಣ, ಚರ್ಚ್‌, ಕಮತಗಿಯ ರೇಷ್ಮೆ ಪಟಗ ಕೌಜಗನೂರಿನ ಮುಸಿನಾಯಿ, ದಮ್ಮೂರ ಕೆರೆ, ಸಿದ್ದನಕೊಳ್ಳ ಎಲ್ಲವೂ ತಾಲೂಕಿನ ಹಿರಿಮೆಗೆ ಸಾಕ್ಷಿಯಾಗಿವೆ.

 

ಐಹೊಳೆ

ದೂರ:
ತಾಲೂಕಿನಿಂದ: ೨೦ ಕಿ.ಮೀ.
ಜಿಲ್ಲೆಯಿಂದ : ೫೦ ಕಿ.ಮೀ.

ಹುನಗುಂದದಿಂದ ೨೬ ಕಿ.ಮೀ. ದೂರವಿದೆ. ಶಾಸನಗಳಲ್ಲಿ ಇದರ ಹೆಸರು ಐಹೊಳೆ ಹಾಗೂ ಆರ್ಯಪುರ. ೭ನೇ ಶತಮಾನದಲ್ಲಿಯೇ ಪ್ರಸಿದ್ಧ ಕಲಾಕೇಂದ್ರ ಕರ್ನಾಟಕದ ಪ್ರಾಚೀನ ದುರ್ಗಗಳಲ್ಲಿ ಐಹೊಳೆ ಕೋಟೆಯೂ ಒಂದಾಗಿದೆ. ಕ್ರಿ.ಶ. ೬ನೇ ಶತಮಾನದ ಕೋಟೆಯಿದು. ಐಹೊಳೆಯ ಮೇಗುತಿಯ ದೇವಾಲಯದ ಪೂರ್ವದ ಗುಡ್ಡದ ಮೇಲೆ ೩ನೇ ಶತಮಾನದ ಶಿಲಾಗೋರಿಗಳಿವೆ.

 

ದುರ್ಗಾ ದೇವಾಲಯ

ಈ ದೇವಾಲಯವು ರಚನೆಯಲ್ಲಿ ಕಾರ್ಲೆ ಭಾಷಿಜಾ ಮೊದಲಾದ ಸ್ಥಳಗಳಲ್ಲಿರುವ ಬೌದ್ಧ ಚೈತ್ಯಾಲಯವನ್ನು ಹೋಲುತ್ತದೆ. ಗರ್ಭಗೃಹವು ಗಜಪೃಷ್ಠಾಕಾರ ಅಥವಾ ಅರ್ಥವೃತ್ತಾಕಾರವಾಗಿದೆ. ಗರ್ಭಗೃಹದ ಮೇಲೆ ರೇಖಾನಾಗರ ಪ್ರವಾಸದ ಶಿಖರವಿದೆ. ಇದನ್ನು ದುರ್ಗಾದೇವಾಲಯವೆಂದು ಕರೆಯಲಾಗಿದ್ದರೂ ಇದು ದುರ್ಗೆಯ ಗುಡಿಯಾಗಿರದೇ ದುರ್ಗದಲ್ಲಿರುವ ಗುಡಿಯೆಂದು ಕರೆದಿರಬಹುದು. ಈ ದೇವಾಲಯದ ಸ್ತಂಭದ ಮೇಲಿರುವ ಉಬ್ಬು ಶಿಲ್ಪಗಳು ಅಂದಿನ ಕಾಲದ ಸಾಮಾಜಿಕ ಜೀವನವನ್ನು ಅತ್ಯಂತ ಪರಿಣಾಮಕಾರಿಯಾಗಿ ಅಭಿವ್ಯಕ್ತಿಗೊಳಿಸಿವೆ. ಈ ದೇವಾಲಯದಲ್ಲಿಯೇ ಹಲವಾರು ಶಾಸನಗಳು ಹಾಗೂ ಅದರಲ್ಲಿ ಕೆಲವು ಶಿಲ್ಪಿಗಳ (ಶ್ರೀ ಬಸವಯ್ಯನ್, ಕಿಸುವೊಳಲಚಟ್ಟ, ಶ್ರೀ ಸಕೀನ್ದ್ರ) ಹೆಸರುಗಳಿವೆ. ರಾಮಾಯಣಕ್ಕೆ ಸಂಬಂಧಿಸಿದ ಹಲವಾರು ದೃಷ್ಯ ಚಿತ್ರಗಳು ಇಲ್ಲಿವೆ. ಈ ದೃಷ್ಯಗಳ ಹತ್ತಿರ ವಿರುವ ಚಿಕ್ಕ ಶಾಸನದಿಂದ ಈ ಚಿತ್ರಗಳನ್ನು ಮುದ್ದಸಿಲಿ, ಪೆಂಡಿರನಾಗ ಎಂಬುವನು ಕೆತಿರುವನೆಂದು ತಿಳಿಸುವುದು. ನರಸಿಂಹ, ಅರ್ಥನಾರೀಶ್ವರ, ಉಗ್ರನರಸಿಂಹ, ದೃಷಭವಾಹನ, ಶಿವ, ವಿಷ್ಣು, ವರಾಹ, ಮಹಿಷಾಸುರ ಮರ್ಧಿನಿ, ಹರಿಹರ ಮೊದಲಾದ ಶಿಲ್ಪಗಳಿಂದ ಈ ದೇವಾಲಯ ಕಲಾ ನೈಪುಣ್ಯತೆ ಮೆರೆದಿದೆ.

 

ಲಾಡಖಾನ ಗುಡಿ (ಶೈವ ದೇವಾಲಯ)

ಮೂಲತಃ ಇದೊಂದು ಶೈವ ದೇವಾಲಯ. ಆದರೆ ಲಾಡಖಾನ ಎಂಬುವವನು ಇಲ್ಲಿ ಹಿಂದೆ ವಾಸಿಸುತ್ತಿದ್ದುದರಿಂದ ಈ ಹೆಸರು ಬಂದಿದೆ. ಈ ದೇವಾಲಯ ಕ್ರಿ.ಶ. ೫೦೦ ರಲ್ಲಿ ನಿರ್ಮಿತವಾಗಿರಬಹುದು. ಈ ಗುಡಿಯ ನವರಂಗದ ಹೊರಭಾಗದ ಗೋಡೆಯಲ್ಲಿ ಕ್ರಿ.ಶ. ೮ನೇ ಶತಮಾನದಲ್ಲಿ ಕೆತ್ತಿದ ಎರಡು ದಾನ ಶಾಸನಗಳಿವೆ. ವೈದಿಕ ಪರಂಪರೆಯಲ್ಲಿ ಒಂದು ಗರ್ಭಗೃಹದ ಮೇಲೆ ಇನ್ನೊಂದು ಗರ್ಭಗೃಹ ಕಟ್ಟುವದಿಲ್ಲ. ಆದರೆ ಈ ಗುಡಿಯಲ್ಲಿ ಮಂಟಪವಿದ್ದು, ಮೇಲ್ಛಾವಣಿಯಲ್ಲಿ ಮೇಲ್ಭಾಗದಲ್ಲಿ ಇನ್ನೊಂದು ಗರ್ಭ ಗುಡಿಯಿರುವುದು ವಿಶೇಷ. ಮೇಲೆ ಏರಲು ಕಲ್ಲಿನ ನಿಚ್ಚಣಿಕೆ ಇದೆ. ಲಾಡಖಾನ ದೇವಾಲಯದ ಮೇಲ್ಚಾವಣೆಗೆಯು ಮರದ ಕಟ್ಟಡದ ಅನುಕರಣೆಯಾಗಿದೆ ಎಂಬುದು ಹಲವು ವಿದ್ವಾಂಸರ ಅಭಿಪ್ರಾಯ. ಈ ಗುಡಿ ಪೂರ್ವಾಭಿಮುಖವಾಗಿದೆ.

 

ಮೇಗುತಿ ದೇವಾಲಯ

ಬೌದ್ಧ ಚೈತ್ಯಾಲಯದ ಪಕ್ಕದಿಂದ ಮುಂದುವರಿದು ಗುಡ್ಡದ ಮೇಲೆ ಹತ್ತಿದರೆ ಮೇಗುತಿ ದೇವಾಲಯವಿದೆ. ಐಹೊಳೆಯಲ್ಲಿರುವ ಎಲ್ಲಾ ದೇವಾಲಯಗಿಂತಲೂ ಮೇಗುತಿ ಜೈನ ದೇವಾಲಯವು ಕ್ರಿ.ಶ. ೬೩೪-೬೩೫ ರಲ್ಲಿ ನಿರ್ಮಾಣವಾಗಿ ತೇದಿ ಇರುವ ಅತ್ಯಂತ ಪುರಾತನ ದೇವಾಲಯವಾಗಿದೆ. ಈ ಜೀನಾಲಯವನ್ನು ಇಮ್ಮಡಿ ಪುಲಕೇಶಿಯ ಆಶ್ರಯದಲ್ಲಿ ರವಿಕೀರ್ತಿಯು ಕಟ್ಟಿಸಿದನೆಂದು ಇದೇ ದೇವಾಲಯದ ಪೂರ್ವದ ಹೊರಗೋಡೆಯಲ್ಲಿ ಕೊರೆದಿರುವ ಜೈನ ಶಾಸನವು ತಿಳಿಸುತ್ತದೆ. ಈ ಶಾಸನವನ್ನು ಕಪ್ಪು ಹಸಿರಾದ ಕಲ್ಲಿನ ಮೇಲೆ ಕೆತ್ತಲಾಗಿದೆ. ಇದರಲ್ಲಿ ಇಮ್ಮಡಿ ಪುಲಿಕೇಶಿಯ ವಂಶಾವಳಿ ದಿಗ್ವಿಜಯಗಳನ್ನು ವರ್ಣೀಸಲಾಗಿದೆ. ರವಿಕೀರ್ತಿಯು ಕಾಳಿದಾಸ ಮತ್ತು ಭಾರವಿಯರ ಪಾಂಡಿತ್ಯಕ್ಕೆ ಸಮನೆಂದು ಈ ಶಾಸನ ಸಾರುತ್ತಿದೆ. ಈ ದೇವಾಲಯದ ಗರ್ಭಗೃಹದಲ್ಲಿ ಸಿಂಹಾಸನ ಪಾಣಿ ಪೀಠದ ಮೇಲೆ ತೀರ್ಥಂಕರನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.

 

ರಾವಳಫಡಿ ದೇವಾಲಯ

 ಬಂಡೆಗಲ್ಲನ್ನು ಕಡಿದು ನರ್ಮಿಸಿದ ಮೂರು ದೇವಾಲಯಗಳು ಐಹೊಳೆಯಲ್ಲಿದೆ. ಇವು ಬೌದ್ಧ, ಜೈನ ಮತ್ತು ವೈದಿಕ ಸಂಪ್ರದಾಯಗಳಿಗೆಸ ಸೇರಿವೆ. ಪೂರ್ಣ ಬಂಡೆಗಲ್ಲಿನಲ್ಲಿ ಕೊಡೆದು ನಿರ್ಮಿಸಲಾಗಿರುವ ರಾವಳ ಅಥವಾ ರಾವಣ ಫಡಿಯು ವೇದಿಕೆ ಸಂಪ್ರದಾಯಕ್ಕೆ ಸೇರಿದ ಗುಹಾದೇವಾಲಯವಾಗಿದೆ. ಇದು ಹುಚ್ಚಮಲ್ಲಿ ಗುಡಿಯಿಂದ ಆಗ್ನೇಯಕ್ಕಿದ್ದು ಸುಮಾರು ಕ್ರಿ.ಶ. ೬೭೫ ರಿಂದ ೭೦೦ರ ನಡುವೆ ರಚನೆಗೊಂಡಿರಬಹುದಾದ ಇದು ನೈಋತ್ಯಕ್ಕೆ ಮುಖಮಾಡಿದೆ.

ಈ ಗುಹಾದೇವಾಲಯದಲ್ಲಿ ನರ್ತಿಸುತ್ತಿರುವ ನಟರಾಜ, ಭೂವರಾಹನ, ನರಸಿಂಹನ ಎತ್ತರವಾದ ಶಿಲಾಮೂರ್ತಿಗಳಿವೆ. ಗರ್ಭಗೃಹದ ಉತ್ತರದ ಪಾಣಿಪೀಠದ ಮೇಲೆ ಬಾಣಲಿಂಗವಿದೆ. ಮಂಟಪದ ಹೊರಗಡೆ ೧.೬ ಮೀಟರ್ ಎತ್ತರದ ಗಂಗಾಧರನ ಮೂರ್ತಿ ಪಕ್ಕದಲ್ಲಿ ಭೃಂಗಿಯ ಮೂರ್ತಿ ಹಾಗೂ ಪಾರ್ವತಿಯ ಮೂರ್ತಿಗಳಿವೆ. ನವರಂಗದ ಹೊರಗಡೆ ದ್ವಿಬಾಹು ಅರ್ಥನಾರೀಶ್ವರ ಹಾಗೂ ಮಾನವ ದೇಹ ಹಂದಿಯ ಮುಖ ಹೊಂದಿರುವ ಭೂವರಾಹನ ಸುಂದರ ಮೂರ್ತಿಗಳಿವೆ.

ಗೌಡರ ಗುಡಿ (ದುರ್ಗಾ ಭಗವತಿ ಗುಡಿ)

ಲಾಡಖಾನ ಗುಡಿಯ ಆಗ್ನೇಯಕ್ಕೆ ೬ ಮೀಟರ್ ದೂರದಲ್ಲಿದೆ. ಮೂಲತಃ ಇದು ದುರ್ಗಾ ಭಗವತಿ ದೇವಾಲಯವೆಂದು ಇದೇ ಗುಡಿಯಲ್ಲಿರುವ ಶಾಸನದಿಂದ ತಿಳಿದು ಬರುವುದು. ಈ ಲಕ್ಷ್ಮೀ ಅಥವಾ ಭಗವತಿ ದೇವಾಲಯವು ಕರ್ನಾಟಕದ ಅತಿ ಪ್ರಾಚೀನ ಲಕ್ಷ್ಮೀದೇವಿಯ ದೇವಾಲಯವಾಗಿದೆ. ಐಹೊಳೆಯ ದೇವಾಲಯಗಳಲ್ಲಿಯೂ ಇದೇ ಪ್ರಾಚೀನವಾದುದು.

ಚಕ್ರ ದೇವಾಲಯ

ಇದು ಗೌಡರ ಗುಡಿಯ ಹತ್ತಿರ ಇರುವ ಬಾವಿಯ ದಕ್ಷಿಣಕ್ಕಿದೆ. ಇದರ ಶಿಖರವು ಆಮಲಕ ಆಕಾರದ ಸ್ತೂಪಿಯನ್ನು ಹೋಲುವುದರಿಂದ ಈ ದೇವಾಲಯಕ್ಕೆ ಚಕ್ರದೇವಾಲಯವೆಂದು ಹೆಸರು ಬಂದಿರಬೇಕು. ಈ ದೇವಾಲಯವು ಪೂರ್ವ ದಿಕ್ಕಿಗೆ ಮುಖ ಮಾಡಿದೆ. ಇದರ ಕಾಲ ಕ್ರಿ.ಶ. ೯ನೇ ಶತಮಾನ.

ಬಡಿಗೇರ ಗುಡಿ (ಸೂರ್ಯನ ಗುಡಿ)

ಚಕ್ರ ದೇವಾಲಯದ ಪಶ್ಚಿಮಕ್ಕಿದೆ. ಮೂಲತಃ ಸೂರ್ಯನ ಗುಡಿಯಾಗಿದ್ದು, ಸ್ಥಳೀಯವಾಗಿ ಬಡಿಗೇರ ಗುಡಿ ಎನ್ನುವರು ಇದು ಕೂಡ ಪೂರ್ವಕ್ಕೆ ಮುಖ ಮಾಡಿದೆ. ಇದರ ಶಿಖರವು ರೇಖಾನಾಗರ ಪ್ರಸಾದ ಶೈಲಿಯಲ್ಲಿದೆ.

ಮದ್ದಿನ ಗುಡಿ

ಉತ್ತರಾಭಿಮುಖವಾಗಿದ್ದು ಒಂದು ತ್ರೀಕೂಟಚಲವಾಗಿದೆ. ಚಾಲುಕ್ಯರ ಶೈಲಿಯಲ್ಲಿ ನಿರ್ಮಿತವಾಗಿದ್ದು, ನುಣುಪಾದ ಅಲಂಕಾರವಿದೆ. ೧೧ನೇ ಶತಮಾನದಲ್ಲಿ ನಿರ್ಮಾಣವಾಗಿರಬಹುದಾಗಿದೆ.

ತ್ರೈಂಬಕೇಶ್ವರ ಗುಂಪಿನ ಗುಡಿಗಳು

ಎರಡು ತ್ರಿಕೂಟಾಚಲಗಳಿದ್ದು ಎತ್ತರವಾದ ಅಧಿಷ್ಠನದ ಮೇಲೆ ನಿರ್ಮಿತವಾಗಿದೆ. ೧೨ನೇ ಶತಮಾನದಲ್ಲಿ ನಿರ್ಮಿತವಾಗಿವೆ.

ಕೊಂತಿ ಗುಡಿಗಳ ಗುಂಪು

ಈ ಗುಂಪಿನಲ್ಲಿ ನಾಲ್ಕು ಗುಡಿಗಳಿದ್ದು ಇವುಗಳಲ್ಲಿ ಮೊದಲನೆಯವರ ಕಾಲವನ್ನು ಕ್ರಿ.ಶ. ೭೫೦ ಕ್ಕೆ ಮಿತಿಗೊಳಿಸಿದೆ. ಪೂರ್ವಾಭಿಮುಖವಾಗಿ ಬ್ರಹ್ಮ, ವಿಷ್ಣು, ಮಹೇಶ್ವರನ ಸೂಕ್ತ ಕೆತ್ತನೆಗಳುಳ್ಳ ಸುಂದರ ಶಿಲ್ಪಗಳಳು ಇವೆ. ಮಧ್ಯ ಅಂಕಣದಲ್ಲಿ ಉಮಾ ಮಹೇಶ್ವರಿ ಶಿಲ್ಪವಿದೆ. ಇದೇ ಕೊಂತಿ ಗುಡಿಯ ಮುಂದೆ ಕ್ರಿ.ಶ. ೧೨ನೇ ಶತಮಾನದಲ್ಲಿಯ ದಾನ ಶಾಸನವೂ ಇದೆ.

೨ನೇ ಕೊಂತಿ ಗುಡಿ

ಇದು ಪಶ್ಚಿಮಾಭಿಮುಖವಾಗಿದೆ. ಗರ್ಭಗೃಹ, ನವರಂಗ ಹೊಂದಿದೆ. ಎರಡೂ ದೇವಾಲಯಗಳ ಮಧ್ಯದಲ್ಲಿ ಒಂದು ಮುಖಮಂಟಪವಿದೆ. ಚತುರ್ಭುಜ ವಿಷ್ಣು, ಪಾರ್ವತಿ ಸಮೇತ ಮಹೇಶ್ವರನ ಉಬ್ಬು ಶಿಲ್ಪಗಳು ಸುಂದರವಾಗಿದೆ. ನರಸಿಂಹನು ಹಿರಣ್ಯಕಶ್ಯಪುವಿನ ಕರಳು ಬಗೆದು ಕೊಲ್ಲುತ್ತಿರುವ ಶಿಲ್ಪವಿದೆ. ಗಣೇಶ ಮತ್ತು ಮಹಿಷಮರ್ಧಿನಿಯರ ಶಿಲಾಮೂರ್ತಿಗಳಿವೆ. ಮಹಿಷಾಸುರನಿಗೆ ಮನುಷ್ಯನ ಮುಖ ಮತ್ತು ಕೋಣನ ದೇಹವಿರುವುದು ವಿಶೇಷ. ಕ್ರಿ.ಶ. ೭ನೇ ಶತಮಾನದಲ್ಲಿ ನಿರ್ಮಿತವಾಗಿರಬಹುದಾದ ಇದರ ಗರ್ಭಗೃಹದಲ್ಲಿ ಯಾವುದೇ ದೇವತಾ ಮೂರ್ತಿಗಳಲ್ಲಿ. ೩ನೇ ಕೊಂತಿ ಗುಡಿಯು ಪೂರ್ವಾಭಿಮುಖವಾಗಿಯೂ ೪ನೇ ಕೊಂತಿ ಗುಡಿಯು ಉತ್ತರಾಭಿಮುಖವಾಗಿಯೂ ಇವೆ. ಹಲವಾರು ಸುಂದರ ಶಿಲ್ಪಗಳಿಂದ ಕಂಗೊಳಿಸಿವೆ.

ಗೌರಿ ಗುಡಿ ಅಥವಾ ವಿರುಪಾಕ್ಷ ಗುಡಿ

ಇದು ಮೇಲ್ನೋಟಕ್ಕೆ ಶೈವ ದೇವಾಲಯವೆಂದು ತಿಳಿದರೂ ಗರ್ಭಗೃಹದಲ್ಲಿ ಶಿವಲಿಂಗವಿದ್ದರೂ ಗರ್ಭಗೃಹದ ಪ್ರವೇಶ ದ್ವಾರದ ಇಕ್ಕೆಲಗಳಲ್ಲಿ ವೈಷ್ಣವ ದ್ವಾರಪಾಕರಿರುವದರಿಂದ ಮೊದಲು ಇದು ವಿಷ್ಣು ದೇವಾಲಯವಾಗಿರಬಹುದು. ಸಂಪ್ರದಾಯಕ್ಕೆ ವಿರುದ್ಧವಾಗಿರುವ ಈ ದೇವಾಲಯವು ದಕ್ಷಿಣಾಭಿಮುಖವಾಗಿದ್ದು, ಅಪರೂಪವಾಗಿದೆ. ಕಂಭದ ಮೇಲೆ ಸರಸ್ವತಿಯ ಶಿಲ್ಪವಿದೆ. ಇದರಲ್ಲಿ ವರಾಹ ಮೂರ್ತಿಯ ಬಲಗೈಯಲ್ಲಿ ಗದೆಯನ್ನು ಹಿಡಿದಿದ್ದು ಅಪರೂಪವಾಗಿದೆ.

ಸೂರ್ಯನಾರಾಯಣ ಗುಡಿ

ಲಾಡಖಾನ ದೇವಾಲಯದ ಈಶಾನ್ಯಕ್ಕೆ ಪೂರ್ವಾಭಿಮುಖವಾಗಿದೆ. ಈ ಗುಡಿಗೆ ಹೆಚ್ಚು ಎತ್ತರವಿಲ್ಲದ ವೇಸರ ಶಿಖರವಿದೆ. ಇದರ ಸ್ತಂಭದ ಮೇಲೆ ಕ್ರಿ.ಶ. ೯ನೇ ಶತಮಾನದ ಶಾಸನದಲ್ಲಿ ಈ ಬಿಸಿಗೆ ಅರವಲು ಎಂದಿರುವದರಿಂದ ಬಹುಶಃ ಬಿಸಿಲು ಅರವಟ್ಟಿಗೆ ಇರಬಹುದು. ರೇಖಾನಾಗರ ಪ್ರಸಾಧ ಶಿಖರವಿದೆ. ಬಸವಾಸಿಯ ಮುಧಕೇಶ್ವರ ದೇವಾಲಯದಂತೆಯೇ ಈ ದೇವಾಲಯದ ಬಾಗಿಲು ದ್ವಾರದ ಅಕ್ಕ ಪಕ್ಕದಲ್ಲಿ ಸ್ತಂಭಗಳ ಮೇಲೆ ಚೈತ್ಯ ಕಂಬಗಳಿರುವುದು ಈ ಗುಡಿಯ ವೈಶಿಷ್ಯ್ಟ ಒಳಗೆ  ಸುಮಾರು ೧.೮೩ ಮೀಟರ್ ಎತ್ತರವಾದ ಕಪ್ಪು ಹಸಿರು ನುಣುಪಾದ ಕಲ್ಲಿನಿಂದ ಮಾಡಿದ ಸೂರ್ಯನ ಆಕರ್ಷಕ ಮೂರ್ತಿಯಿದೆ.

 

ಹುಚ್ಚಮಲ್ಲಿ ದೇವಾಲಯ

ಈ ದೇವಾಲಯವು ಊರಿನ ಉತ್ತರಕ್ಕೆ ಪ್ರವಾಸಿ ಮಂದಿರ ಹಿಂದೆ ತುಸು ಅಂತರದಲ್ಲಿದೆ. ಪಶ್ಚಿಮಾಭಿಮುಖವಾಗಿದ್ದು, ಕ್ರಿ.ಶ. ೭ನೇ ಶತಮಾನದಲ್ಲಿ ನಿರ್ಮಾಣವಾಗಿದೆ. ಭುವನೇಶ್ವರಿ, ಕಾರ್ತಿಕೇಯ ಮೂರ್ತಿಗಳಿವೆ. ದೇವಾಲಯದ ಕಲ್ಲಿನ ತೊಲೆಯ ಮೇಲೆ ಶ್ರೀ ಕೃವುಜ್ಞಾ ಎಂದು ಕೆತ್ತಲಾಗಿರುವ ೭ನೇ ಶತಮಾನದ ಶಾಸನವಿದೆ. ಪಶ್ಚಿಮ ಗೋಡೆಗೆ ಕ್ರಿ.ಶ. ೭೦೮ ರಲ್ಲಿ ದನಶಾಸನ ಹಾಗೂ ಶ್ರೀ ಕಾಣ್ಚುಣನ್ ಎಂದು ಬರೆದಿರುವ ೭ನೇ ಶತಮಾನದ ಶಾಸನವೂ ಇದೆ. ಗರ್ಭಗೃಹದ ಮೇಲ್ಭಾಗದಲ್ಲಿ ರೇಖಾನಾಗರ ಪ್ರಸಾದ ವಿಮಾನವಿದೆ. ನರ್ತನ ಮಾಡುತ್ತಿರುವ ನಟರಾಜ, ಆನೆ, ಆನೆಮರಿ, ಹಸು, ಕರು, ಕುದುರೆ, ಹಂಸಗಳ ಸಾಲುಗಳ ಕೆತ್ತನೆಯಿದೆ ಈ ದೇವಾಲಯದ ಎದುರಿಗೆ ಸುಸ್ಥಿತಿಯಲ್ಲಿರುವ ಕಲ್ಲಿನ ಪುಷ್ಕರಣಿಯಿದೆ.

ಐಹೊಳೆಯಲ್ಲಿ ಪ್ರಾಚೀನ ಕಾಲದಿಂದಲೂ ತುರುಗೋಳಗಳು ಆಗುತ್ತಿದ್ದವೆಂಬುದಕ್ಕೆ ಅಲ್ಲಿಯ ವೀರಗಲ್ಲುಗಳು ನಿದರ್ಶನಗಳಾಗಿವೆ. ಅವುಗಳ ಪೈಕಿ ಹುಚ್ಚಮಲ್ಲಿ ಗುಡಿ ಬಳಿ ನಾಲ್ಕು ವೀರಗಲ್ಲುಗಳಿವೆ.

 

ಬೌದ್ಧ ಚೈತ್ಯಾಲಯ

ಊರಿನ ಹೊರಗೆ ಮೇಗುತಿ ಗುಡಿಯ ಕಡೆಗೆ ಹೋಗುವ ಮಧ್ಯದಲ್ಲಿ ಏಕ ಅಂತಸ್ತಿನ ಗುಹೆ ಇದೆ. ಇದೊಂದು ಬೌದ್ಧ ಚೈತ್ಯಾಲಯವಾಗಿದ್ದು, ಉತ್ತರಾಭಿಮುಖವಾಗಿದೆ. ಈ ಚೈತ್ಯಾಲಯವನ್ನು ಸ್ವಲ್ಪ ಭಾಗ ಕಟ್ಟಿ ಉಳಿದ ಭಾಗಗಳನ್ನು ಕೊರೆದು ನಿರ್ಮಿಸಲಾಗಿದೆ. ಇದು ಸುಮಾರು ೭.೫ ಮೀಟರ್ ಎತ್ತರವಿದ್ದು ಇಲ್ಲಿಯ ಶಿಲಾಮೂರ್ತಿ ಭಿನ್ನವಾಗಿದೆ. ಇದು ವಸ್ತ್ರವಿರುವ ರುಂಡವಿಲ್ಲದ ಬುದ್ಧನ ವಿಗ್ರಹವಾಗಿದೆ.

ಮೇಲಂತಸ್ತಿಗೆ ಹೋಗಲು ಮೆಟ್ಟಿಲುಗಳಿಲ್ಲ. ಮೇಲಂತಸ್ತಿನಲ್ಲಿ ದ್ವಾರದ ಮೇಲ್ಭಾಗದಲ್ಲಿರುವ ಚೈತ್ಯದ ಮಾಡುಗಳಲ್ಲಿ ಬೋಧಿಸತ್ವ ಬುದ್ಧನ ಅಸ್ಪಷ್ಟ ಚಿತ್ರಗಳಿವೆ. ಮಧ್ಯದ ಅಂಕಣದಲ್ಲಿ ಸುಮಾರು ೬೧ ಸೆ.ಮೀ. ಎತ್ತರದ ಬುದ್ಧನ ಮೂರ್ತಿಯಿದೆ. ಗುಂಗುರು ಕೂದಲಿನ ಪದ್ಮಾಸನದಲ್ಲಿ ಕುಳಿತ ಬುದ್ಧನ ಮೂರ್ತಿ ಆಕರ್ಷಕವಾಗಿದೆ. ಈ ಚೈತ್ಯಾಲಯದ ಕಾಲವನ್ನು ಕ್ರಿ.ಶ. ೫ನೇ ಶತಮಾನ ಇದರ ಮುಂಭಾಗದ ಕಂಭಗಳ ಮೇಲೆ ಶ್ರೀ ಕಾಕಲೆ, ಶ್ರೀ ಬಿಣ ಅಮ್ಮನ್, ಶ್ರೀ ಬಿಸಾಟನ್ ಮಹೇಂದ್ರ ಎಂಬ ಸಾಲಿನ ಶಾಸನಗಳಿವೆ. ೮ನೇ ಶತಮಾನದ ಅಕ್ಷರಗಳನ್ನು ಹೋಲುವ ಶ್ರೀ ಗುಣ ಪ್ರಿಯನ್ ಎಂಬ ಹೆಸರಿನ ಶಾಸನವಿದೆ. ಬಾದಾಮಿಯಲ್ಲಿಯೂ ಇದೇ ಹೆಸರಿನ ಶಾಸನವಿರುವುದರಿಂದ ಇದೇ ವ್ಯಕ್ತಿಯೇ ಎರಡೂ ಕಡೆಗಳಲ್ಲಿ ದೇವಾಲಯ ನಿರ್ಮಾಣದಲ್ಲಿ ತೊಡಗಿರಬಹುದಾಗಿದೆ.

 

ಕೂಡಲ ಸಂಗಮ

ದೂರ:
ತಾಲೂಕಿನಿಂದ: ೨೨ ಕಿ.ಮೀ.
ಜಿಲ್ಲೆಯಿಂದ: ೩೫ ಕಿ.ಮೀ.

ಸಮಾನತೆಯ ಹರಿಕಾರ, ಕ್ರಾಂತಿಯೋಗಿ ಬಸವಣ್ಣನವರು ಗುರು ಜಾತವೇದ ಮುನಿಗಳ ಹತ್ತಿರ ಅಧ್ಯಯನ ಮಾಡಿದ, ಅಂತಿಮವಾಗಿಸ ಸಂಗಮನಾಥನಲ್ಲಿ ಐಕ್ಯರಾದರೆಂದು ಪ್ರತೀಕ ಇರುವ ಕೂಡಲಸಂಗಮ ಪ್ರಮುಖ ಅಗ್ರಹಾರವೂ ಆಗಿತ್ತು. ಕೃಷ್ಣ-ಮಲಪ್ರಭ ನದಿಗಳು ಸಂಗಮವಾಗುವ ಈ ಸ್ಥಳ ತಾಲೂಕಿನ ಪ್ರಮುಖ ಆಧ್ಯಾತ್ಮ, ಧಾರ್ಮಿಕ ಕ್ಷೇತ್ರಗಳಲ್ಲೊಂದು. ರಾಷ್ಟ್ರೀಯ ಹೆದ್ದಾರಿ ೧೩ರಕ್ಕೆ ಹೊಂದಿಕೊಂಡು ತಾಲೂಕಾ ಸ್ಥಳದಿಂದ ೨೨ ಕಿ.ಮೀ. ದೂರದಲ್ಲಿದೆ.

ಐಕ್ಯ ಮಂಟಪ ಮತ್ತು ಸಂಗಮನಾಥ ದೇವಾಲಯ ಸಮುಚ್ಛಯ

೧೯೯೭ ರಲ್ಲಿ ಕೂಡಲಸಂಗಮದ ಅಭಿವೃದ್ಧಿಗಾಗಿ ನಲವತ್ತು ಕೋಟಿ ರೂಪಾಯಿಗಳ ಯೋಜನೆಗೆ ಅನುಮೋದನೆ ದೊರೆತಿದ್ದರೆ ಫಲವಾಗಿ ಇತ್ತೀಚಿನ ೧೦-೧೫ ವರ್ಷಗಳಲ್ಲಿ ಕೂಡಲಸಂಗಮದ ಚಿತ್ರಣವೇ ಬದಲಾಗಿದೆ. ೧೧೦ ಅಡಿ ಅಗಲದ ರಸ್ತೆ, ೩ ಕೋಟಿ ರೂಪಾಯಿ ವೆಚ್ಚದ ಯಾತ್ರಿ ನಿವಾಸ, ೧.೫ ಕೋಟಿ ರೂಪಾಯಿ ವೆಚ್ಚದ ದಾಸೋಹ ಭವನ ೩೮ ಲಕ್ಷ ರೂಪಾಯಿ ವೆಚ್ಚದ ವ್ಯಾಪಾರಿ ಮಳಿಗೆಗಳು, ೭೫ ಲಕ್ಷ ರೂಪಾಯಿ ವೆಚ್ಚದ ಗ್ರಂಥಾಲಯ, ಶರಣ ಸಾಹಿತ್ಯ ಅಧ್ಯಯನ ಕೇಂದ್ರ, ೯ ಕೋಟಿ ರೂಪಾಯಿ ವೆಚ್ಚದ ಏಷ್ಯಾದಲ್ಲಿಯೇ ದೊಡ್ಡದಾದ ಸಭಾಭವನ, ೧೫ ಕೋಟಿ ಅಂದಾಜಿನ ಅಂತರಾಷ್ಟ್ರೀಯ ಬಸವ ಕೇಂದ್ರ ಎಲ್ಲವೂ ಇದೊಂದು ಅಂತರಾಷ್ಟ್ರೀಯ ಪ್ರವಾಸಿಕೇಂದ್ರದ ಸ್ಥಾನಮಾನ ಕಲ್ಪಿಸಿವೆ.

ವೀರಶೈವ ಜನಾಂಗದ ಪುಣ್ಯ ಕ್ಷೇತ್ರವಾದ ಕೂಡಲಸಂಗಮ ಚಾಲುಕ್ಯ ಶೈಲಿಯಲ್ಲಿ ನಿರ್ಮಿತವಾಗಿರುವ ಸಂಗಮೇಶ್ವರ ದೇವಾಲಯ ಪ್ರಸಿದ್ಧವಾಗಿದೆ. ದೇವಾಲಯವು ಗರ್ಭಗೃಹ ಹಾಗೂ ಮುಖ ಮಂಟಪವನ್ನು ಹೊಂದಿದೆ. ಗರ್ಭಗೃಹದ ಮೇಲೆ ಎತ್ತರವಾದ ದ್ರಾವಿಡ ಶೈಲಿಯ ಆಧುನಿಕ ಶಿಖರವಿದ್ದು, ಸ್ತೂಪಿಯ ಮೇಲ್ಭಾಗದಲ್ಲಿ ಕಲಶವಿದೆ. ಈ ದೇವಾಲಯವು ತಳಪಾಯದಿಂದ ಛಾವಣಿಯವರೆಗೆ ಕಲ್ಯಾಣ ಚಾಲುಕ್ಯರ ಶೈಲಿಯನ್ನು ವ್ಯಕ್ತಪಡಿಸುತ್ತದೆ. ವಿಶ್ವದ ಮೊದಲ ಮಾನವತಾವಾದಿ, ಕ್ರಾಂತಿಕಾರಿ, ಸಮತಾಭಾವದ ಹರಿಕಾರ ಬಸವಣ್ಣನವರ ವಿದ್ಯಾಭ್ಯಾಸ ಆಗಿರುವುದು ಇಲ್ಲಿಯೇ ಅವರ ವಚನಗಳ ಕೊನೆಯಲ್ಲಿ ಬರುವ ಕೂಡಲ ಸಂಗಮದೇವ ಎಂಬ ಅಂಕಿತವು ಇದೇ ಸ್ಥಳವನ್ನು ಹಾಗೂ ಸಂಗಮೇಶ್ವರನನ್ನು ಕುರಿತಾಗಿದೆ. ಬಸವಣ್ಣ, ಚೆನ್ನಬಸವಣ್ಣ, ಅಕ್ಕನಾಗಮ್ಮ ಮೊದಲಾದವರ ವೈಚರಿಕತೆಯ ವಿದ್ಯಾಭ್ಯಾಸ ತಾಣವು ಇದು. ಕೊನೆಯಲ್ಲಿ ಬಸವಣ್ಣನವರು ಐಕ್ಯರಾದದ್ದೂ ಇಲ್ಲಿಯೇ ಎಂಬ ಪ್ರತೀತಿ ಇದೆ. ಅವರು ಐಕ್ಯರಾದ ಸ್ಥಳವು ಕೃಷ್ಣಾ ಮತ್ತು ಮಲಪ್ರಭಾ ನದಿಗಳ ಸಂಗಮ ಸ್ಥಳವಾಗಿದ್ದು ಅಲ್ಲಿ ಚಾಲುಕ್ಯ ಶೈಲಿಯ ಮಂಟಪವಿದ್ದು, ಮಧ್ಯದಲ್ಲಿ ಸಂಗಮೇಶ್ವರ ಉದ್ಭವಲಿಂಗವಿದೆ. ಶಿವಲಿಂಗವನ್ನೊಳಗೊಂಡ ಈ ಶಿಲಾ ಮಂಟಪವು ನಾರಾಯಣಪುರ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗುವದರಿಂದ  ಇದರ ಸುತ್ತಲು ಭಾವಿಯಾಕಾರದ ಎತ್ತರದ ಕಾಂಕ್ರಿಟ್ ಗೋಡೆಗಳನ್ನು ನಿರ್ಮಿಸಿ ಸಂದರ್ಶನಕ್ಕೆ ಅನುಕೂಲವಾಗುವಂತೆ ಮಾಡಲಾಗಿದೆ. ಮಳೆಗಾಲದಲ್ಲಿ ಜಲಾಶಯದ ಹಿನ್ನೀರಿನಿಂದ ಮೈದುಂಬಿಕೊಳ್ಳುವ ಎರಡೂ ನದಿಗಳು ಪುಟ್ಟ ಸಾಗರವನ್ನೇ ತಂದಿಟ್ಟಂತೆ ಭಾಸವಾಗುತ್ತದೆ. ಪ್ರವಾಸಿಗರು ಯಾಂತ್ರೀಕೃತ ಬೋಟುಗಳ ಮೂಲಕ ಕೃಷ್ಣ ಮಲಪ್ರಭೆಯಲ್ಲಿ ಸುತ್ತಿ ಸಂತಸ ಪಡುವ ಪ್ರವಾಸಿ ತಾಣವಾಗುತ್ತದೆ.

ಕೂಡಲಸಂಗಮದಲ್ಲಿರುವ ವಿಶೇಷ ವಿನ್ಯಾಸ ಸಭಾಭವನ ಮತ್ತು ಅಂತರಾಷ್ಟ್ರೀಯ ಬಸವ ಕೇಂದ್ರವಂತೂ ವಿಶೇಷ ಆಕರ್ಷಕ ಕಟ್ಟಡಗಳು. ಕೂಡಲಸಂಗಮದ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಪ್ರವೇಶದ್ವಾರದ ಬಲಪಾಶ್ವಕ್ಕೆ ವಿಶಾಲ ಜಾಗೆಯಲ್ಲಿ ನಿರ್ಮಿಸಲಾಗಿರುವ ಬಸವ ಧರ್ಮಪೀಠ ೧೨ನೇ ಶತಮಾನದ ಶರಣರ ಬದುಕನ್ನು ಅನಾವರಣಗೊಳಿಸುವ ಅಲ್ಲಿನ ಶಿಲ್ಪಗಳು, ವಸತಿ ಗೃಹ, ಧ್ಯಾನ ಮಂದಿರ ಎಲ್ಲರೂ ಭಾವುಕತೆಯನ್ನು ಮೂಡಿಸುತ್ತವೆ. ಜಗದ್ಗುರು ಮಾತೆ ಮಹಾದೇವಿ ನೇತೃತ್ವದಲ್ಲಿ ಪ್ರತಿವರ್ಷ ಮಕರ ಸಂಕ್ರಾಂತಿ ಸಂದರ್ಭದಲ್ಲಿ ನಡೆಯುವ ಶರಣಮೇಳದಲ್ಲಿ ರಾಜ್ಯದ ಹೊರ ರಾಜ್ಯದ ಲಕ್ಷಾಂತರ ಭಕ್ತರು ಸೇರುತ್ತಾರೆ. ಕ್ರೈಸ್ತರು, ವ್ಯಾಟಿಕನ್, ಇಸ್ಲಾಮಿಯರ ಮೆಕ್ಕಾ, ಸಿಖ್ಖರ ಸ್ವರ್ಣಮಂದಿರ, ಬಹಾಯಿಗಳ ಕಮಲಮಂದಿರಗಳಂತೆ ಕೂಡಲಸಂಗಮವು ಆಕರ್ಷಣೀಯವಾಗುತ್ತಿದೆ.

 

ಇಲಕಲ್ಲ

ದೂರ:
ತಾಲೂಕಿನಿಂದ: ೧೨ ಕಿ.ಮೀ.
ಜಿಲ್ಲೆಯಿಂದ: ೬೦ ಕಿ.ಮೀ.

ತಾಲೂಕಾ ಕೇಂದ್ರ ಹುನಗುಂದದಿಂದ ೧೩ ಕಿ.ಮೀ. ದೂರದಲ್ಲಿರುವ ಇಲಕಲ್ಲ ಸೀರೆಗೆ ವಿಶ್ವಖ್ಯಾತಿ ಪಡೆದಿದೆ. ಇಲ್ಲಿನ ಸೀರೆಗಳಲ್ಲಿ ರೇಷ್ಮೇ ಸೀರೆ ಹಾಗೂ ಚಮಕಸೀರೆ ಎಂದು ಎರಡು ವಿಧದಲ್ಲಿ ಪ್ರಸಿದ್ಧವಾಗಿದೆ. ಇವು ೧೨ ಮೊಳ ೧೬ ಮೊಳ ಹಾಗೂ ೧೮ ಮೊಳ ಉದ್ದದಲ್ಲಿ ದೊರೆಯುತ್ತವೆ. ರೇಷ್ಮೆಯ ಚಮಕಿಯ ಸೀರೆಗಳಿಗೆ ಅಪಾರ ಬೇಡಿಕೆಯಿದ್ದು, ಇವುಗಳಲ್ಲಿ ಚಮಕಿ ಕಡ್ಡಿ, ರಾಸ್ತಾ, ಚೌಕಾನಿ, ಎಳ್ಳುಹೂವು, ಜರಾ ಎಂಬ ವಿವಿಧ ನಮೂನೆಗಳಿವೆ. ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಇಲ್ಲಿನ ಸೀರೆಗಳು ಸುಂದರವಾಗಿರುವಂತೆ ಉಟ್ಟವರನ್ನು ಸುಂದರಗೊಳಿಸುತ್ತವೆ.

ಇಲ್ಲಿನ ವಿಷಯ ಮಹಾಂತೇಶ ಮಠವು ಧಾರ್ಮಿಕವಾಗಿ ಹೆಸರುವಾಸಿಯಾಗಿದೆ. ಬಸವ ಧರ್ಮವನ್ನು ಅಕ್ಷರಸಹ ಆಚರಣೆಗೆ ತಂದ ಈ ಮಠ ನಾಡಿನ ವಿರಕ್ತ ಮಠಗಳಿಗೆ ಮಾದರಿ ಎನಿಸಿದೆ. ಈ ಪೀಠದ ೧೬ ನೇ ಪೀಠಾಧಿಪತಿಗಳಾದ ಶ್ರೀ ವಿಜಯ ಮಹಾಂತ ಶಿವಯೋಗಿಗಳು ತಪೋಧೀನರು, ಪವಾಡ ಪುರುಷರು, ಹಳ್ಳದ ಆಚೆಗಿರುವ ಇವರ ಗದ್ದುಗೆಯು ಅವರ ತಪೋಸ್ಥಾನವೂ ಆಗಿತ್ತು. ಜಾಗೃತ ಸ್ಥಾನವೆಂದೇ ನಂಬಿರುವ ಭಕ್ತ ಸಮೂಹ ಪ್ರತಿದಿನ ಇಲ್ಲಿಗೆ ಆಗಮಿಸುವರು. ಪ್ರತಿ ವರ್ಷ ಶ್ರಾವಣ ಮಾಸದ ಕೊನೆಯ ಸೋಮವಾರ ರಥೋತ್ಸವ ಜರುಗುವುದು ಮರುದಿನ ಬಸವಣ್ಣನವರ ವಚನ ಕಟ್ಟುಗಳ ಹಾಗೂ ವಿಜಯ ಮಹಾಂತ ಸ್ವಾಮಿಗಳ ಭಾವಚಿತ್ರ ಹೊತ್ತ ಅಡ್ಡ ಪಲ್ಲಕ್ಕಿ ಉತ್ಸವದ ಮೆರವಣಿಗೆ ಅಹೋರಾತ್ರಿ ೧೨ ರಿಂದ ೧೬ ತಾಸಿನವರೆಗೆ ನಡೆಯುವದು.

ನಗರದ ಪೂರ್ವಭಾಗದ ಎತ್ತರ ಪ್ರದೇಶದಲ್ಲಿ ಮುರ್ತುಜಶಹಾ ಖಾದರಿಯವರ ದರ್ಗಾ ಇದೆ. ಇದು ಇಂಡೋ-ಸಾರ್ಸೇನಿಕ್ ಶೈಲಿಯಲ್ಲಿದ್ದು ಆಕರ್ಷಕವಾದ ಗುಮ್ಮಟವುಳ್ಳ ಗೋಪುರ ಹಾಗೂ ನಾಲ್ಕು ಮೂಲೆಗಳಲ್ಲೂ ಕಿರಿ ಮಿನಾರ್‌ಗಳಿಂದ ಕೂಡಿದೆ. ಬಿಜಾಪುರ ಗೋಳಗುಮ್ಮಟದ ನಂತರದಲ್ಲಿ ೨ ದೊಡ್ಡ ಗುಮ್ಮಟ ಇದು ಎಂದು ಪ್ರಸಿದ್ಧಿ ಪಡೆದಿದೆ. ಹಿಂದೂ-ಮುಸಲ್ಮಾನರ ಭಾವೈಕ್ಯತೆಗೆ ಹೆಸರಾದ ಈ ದರ್ಗಾದ ಉರುಸು ಪ್ರತಿ ವರ್ಷ ಜನವರಿ- ಫೆಬ್ರವರಿ ತಿಂಗಳಲ್ಲಿ ನಡೆಯುವದು.

 

ಬಲಕುಂದಿ ಪಿಂಕ್ ಗ್ರಾನೈಟ್

ಹುನಗುಂದ ತಾಲೂಕಿನ ಇಲಕಲ್ಲಿನಿಂದ ೮ ಕಿ.ಮೀ. ದೂರದಲ್ಲಿರುವ ಬಲಕುಂದಿ ಗ್ರಾಮವು ಶಿಲಾ ಭೂ ವಿಜ್ಞಾನಿಗಳನ್ನು ಆಕರ್ಷಿಸಿದೆ. ಇಲ್ಲಿನ ಪಿಂಕ್ ಗ್ರಾನೈಟ್ ವಿಶ್ವದಲ್ಲಿಯೇ ಸುಪ್ರಸಿದ್ಧವಾಗಿದೆ. ಇದು ಕೆಂಪು ನಸುಗೆಂಪು ಬಣ್ಣಗಳಿಂದ ಆಕರ್ಷಿತಗೊಂಡು ಚೀನಾ, ತೈವಾನ್, ಇಟಲಿ, ಜಪಾನ್, ಇಂಡೋನೇಷಾಗಳಿಗೂ ಕಾಲಿಟ್ಟಿದೆ. ಇಲ್ಲಿ ಸಿಗುವ ಕಲ್ಲನ್ನು ವಿಶೇಷ ಯಂತ್ರೋಪಕರಣಗಳ ಸಹಾಯದಿಂದ ಹೊಳಪು ಬರುವಂತೆ ಮಾಡಿ ದೇಶ ವಿದೇಶಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ಪಿಂಕ್ ಗ್ರಾನೈಟ್ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಹಲವಾರು ಕಂಪನಿಗಳಲ್ಲಿ ಜೆಮ್ ಗ್ರಾನೈಟ್, ಮೆ. ಭಾರತ ಟಿಂಬರ್ ಕನ್ಸಸ್ಟ್ರಕ್ಷನ್ ಕಂಪನಿ, ಮೆ. ರಾಜಶ್ರೀ ಗ್ರಾನೈಟ್‌ ಹಾಗೂ ಮೆ. ಮೈಸೂರ ಮಿನರಲ್ಸ್‌ ಲಿಮಿಟೆಡ್‌ ಪ್ರಸಿದ್ಧವಾಗಿವೆ. ಗ್ರಾನೈಟ್‌ ಕೈಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿರುವ ಜೆಮ್ ಗ್ರಾನೈಟ್ ಕಂಪನಿಯು ಪಿಂಕ್‌ ಗ್ರಾನೈಟ್‌ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಮಾರುಕಟ್ಟೆ ಕುದುರಿಸಿ ಹೆಗ್ಗಳಿಕೆ ಪಡೆದಿದೆ. ಕಲ್ಲುಗಳಿಗೆ ಮುದ್ದು ತುಂಬಿ ಸಿಡಿಸುವ, ನೆಲದಾಳದಿಂದ ಹೆಬ್ಬಂಡೆಗಳನ್ನು ಮೇಲೆತ್ತು, ಮೇಲೆತ್ತಿರುವ ಬಂಡೆಗಳನ್ನು ಬ್ರಡ್‌ನಂತೆ ಹಗುರವಾಗಿ ಫ್ಯಾಕ್ಟರಿಗೆ ಸಾಗಿಸುವ, ಸಾಗಿಸಿದ ಕಲ್ಲನ್ನು ಕತ್ತರಿಸುವ, ಕತ್ತರಿಸಿದ ಕಲ್ಲನ್ನು ಪಾಲಿಶ್ ಮಾಡಿ ಹೊಳಪಾಗಿಸುವ ಎಲ್ಲಾ ಕಾರ್ಯಗಳಲ್ಲಿ ಯಂತ್ರೋಪಕರಣಗಳ ಪಾತ್ರ ಹಿರಿದಾಗಿದೆ. ಯಂತ್ರೋಪಕರಣಗಳ ವಿಷಯದಲ್ಲಿ ಜಗತ್ತು ಸಾಧಿಸಿದ ಪ್ರಗತಿಯನ್ನು ಮಕ್ಕಳಿಗೆ ಪ್ರತ್ಯಕ್ಷವಾಗಿ ಪರಿಚಯಿಸಲು ಮಕ್ಕಳನ್ನು ಪ್ರವಾಸದ ಮೂಲಕ ಅಲ್ಲಿಗೆ ಕರೆತರಬಹುದಾಗದೆ.