ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾಮನಗಟ್ಟಿ

ಆಕರ್ಷಣೆ: ಶಾಲೆಯ ಸುಂದರವಾದ ಹೂದೋಟ ಹಾಗೂ ಕಟ್ಟಡವು ಸುಣ್ಣಬಣ್ಣಗಳಿಂದ ಶೃಂಗಾರವಾಗಿ ಮತ್ತು ಶಾಲೆ ಸುತ್ತ-ಮುತ್ತ ಸಾಕಷ್ಟು ಗಿಡಮರಗಳು ಇರುವುದರಿಂದ ಕಲಿಕೆಗೆ ಅನುಕೂಲಕರ ಪ್ರಶಾಂತವಾದ ವಾತಾವರಣ ಇರುತ್ತದೆ. ಒಟ್ಟಾರೆ ಶಾಲೆಯು ಆಕರ್ಷಣೀಯವಾಗಿದೆ.

ಶೈಕ್ಷಣಿಕ: ಶಾಲೆಯಲ್ಲಿ ವಿಶೇಷ ಪರಿಣಿತಿಯನ್ನು ಪಡೆದ ಶಿಕ್ಷಕ/ಶಿಕ್ಷಕಿಯರು ಇದ್ದು ಆಸಕ್ತಿಯಿಂದ ಕಾರ್ಯ ಮಾಡಿ, ಅದರಲ್ಲಿಯೂ ಹಿಂದುಳಿದ ಮಕ್ಕಳನ್ನು ಗುರುತಿಸಿ ಕ್ರಿಯಾಯೋಜನೆ ತಯಾರಿಸಿ ೧೦೦% ಕಲಿಕಾ ಸಾಧನೆ ಮಾಡಿರುತ್ತಾರೆ. ಮತ್ತು ಶಾಲೆಯಲ್ಲಿ ವಿಷಯವಾರು ಕ್ಲಬ್‌ಗಳನ್ನು ರಚಿಸಿ ವಿಶೇಷ ಪರಿಣಿತರನ್ನು ಕರೆಯಿಸಿ ವಿಶೇಷ ಪಾಠದ ವ್ಯವಸ್ಥೆ ಮಾಡಲಾಗುತ್ತದೆ. ಹಾಗೂ ಮಕ್ಕಳ ಹಾಜರಾತಿಯು ೧೦೦% ಇದೆ ಎಂದು ಇಲಾಖೆಯಿಂದ ಪ್ರಮಾಣ ಪಡೆದಿದೆ.

ಘೋಷಣೆ: “೬ ರಿಂದ ೧೪ ವರ್ಷದ ಮಕ್ಕಳು ಶಾಲೆಯಿಂದ ಹೊರಗುಳಿದ ಮಕ್ಕಳಿಲ್ಲದ ಗ್ರಾಮ ಗಾಮನಗಟ್ಟಿ” ಎಂದು ೧ನೇ ನವೆಂಬರ್‌೨೦೦೪ರಲ್ಲಿ ರಾಜ್ಯದಲ್ಲಿಯೇ ಮೊದಲನೆಯದಾಗಿ ಘೋಷಣೆಯಾಯಿತು.

ಪ್ರದರ್ಶನ: ವಿಶೇಷವಾಗಿ ಸರಕಾರದವರು ದೆಹಲಿಯಿಂದ ಈ ಶಾಲೆಗೆ ಆಗಮಿಸಿ ವಿಡಿಯೋ ಚಿತ್ರೀಕರಣ ಮಾಡಿ ದೂರದರ್ಶನದಲ್ಲಿ ಪ್ರದರ್ಶನ ಮಾಡಿರುತ್ತಾರೆ.

ಸಮಾಜದೊಂದಿಗೆ ಸಹಕಾರ: ಗ್ರಾಮದವರು ಶಾಲೆಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳನ್ನು ಸರಕಾರದಿಂದ ಹಾಗೂ ಗ್ರಾಮದಿಂದ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಶಾಲೆಗೆ ಸೌಕರ್ಯಗಳನ್ನು ಒದಗಿಸಿರುತ್ತಾರೆ.

 

ಇಸ್ಕಾನ ಮಂದಿರ

“ಇಸ್ಕಾನ್‌” ಹುಬ್ಬಳ್ಳಿ ಮತ್ತು ಧಾರವಾಡ ಮಧ್ಯದ ಮಾರ್ಗದಲ್ಲಿ ರಾಯಾಪೂರ ಗ್ರಾಮದ ಹತ್ತಿರ ಬರುತ್ತದೆ. ಸುಂದರವಾದ ದೇವಸ್ಥಾನ ಉದ್ಯಾನವನವನ್ನು ಹೊಂದಿದೆ. ಇಸ್ಕಾನ್‌ಸಂಸ್ಥೆಯ ಹೆಮ್ಮೆಯ ಯೋಜನೆಯಾದ ಮಕ್ಕಳಿಗೆ ಹಸಿವನ್ನು ನೀಗಿಸುವ “ಅಕ್ಷರ ದಾಸೋಹ” ಸರ್ಕಾರದ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಈ ಸಂಸ್ಥೆಯು ಏಶಿಯಾದಲ್ಲಿಯೇ ದೊಡ್ಡದಾದ ಅಡುಗೆಮನೆಯನ್ನು ಸ್ಥಾಪಿಸಿದೆ. ಧಾರವಾಡ ಜಿಲ್ಲೆಯ ಎಲ್ಲ ಮಕ್ಕಳಿಗೆ ಊಟವನ್ನು ತಯಾರಿಸುವ ಕೇಂದ್ರವನ್ನು ಇಲ್ಲಿ ನೋಡಬಹುದು. ಮತ್ತು ಸಮೀಪದಲ್ಲಿಯೇ ರಾಯಾಪೂರದಲ್ಲಿ ಸುಂದರವಾದ ದತ್ತ ಮಂದಿರ ನಯನಮನೋಹರವಾಗಿದೆ.

 

ಸಂಜೀವಿನಿ ಉದ್ಯಾನವನ

ಪರಿಸರ ಶಿಕ್ಷಣ ಉದ್ಯಾನವನ

ಹುಬ್ಬಳ್ಳಿ ಧಾರವಾಡ ರಸ್ತೆಯ ಪಕ್ಕದಲ್ಲಿರುವ ೭೦ ಎಕರೆ ಪ್ರದೇಶದಲ್ಲಿ ರಕ್ಷಿತ ಅರಣ್ಯ. ಇದು ಜೀವ ವೈವಿಧ್ಯತೆಯಿಂದ ಶ್ರೀಮಂತವಾಗಿದ್ದು, ಇಲ್ಲಿ ಹೇರಳವಾಗಿ ಶ್ರೀಗಂಧ, ಕಾಚು, ನವಿಲು, ಕಾಡುಬೆಕ್ಕು, ಮೊಲ, ನೈಸರ್ಗಿಕ ಸಂಪತ್ತು ಹೇರಳವಾಗಿವೆ. ಔಷಧಿ ಸಸ್ಯಗಳ ವನ, ಕಳ್ಳಿ ವನ, ಮತ್ತು ಪರಿಸರ ಶಿಕ್ಷಣದ ವಿವಿಧ ಅಂಶಗಳನ್ನು ಇಲ್ಲಿ ಅಭಿವೃದ್ಧಿಪಡಿಸಿ ಇದೊಂದು ನಿಸರ್ಗದ ಜ್ಞಾನ ದೇಗುಲ ಎಂಬ ಹೆಬ್ಬಯಕೆಯಿಂದ ಮಾಡಿದ ಪುಟ್ಟ ಪ್ರಯತ್ನ ಇದು.

ಔಷಧಿ ಸಸ್ಯಗಳ ವನ, ಕಳ್ಳಿತೋಟ ಮಾನವ ಮರ ಕರಡಿ ಪತ ಜಲಪಾತ ವನದೇವತಾ ಮಂದಿರ ವೀಕ್ಷಣಾ ಗೋಪುರ, ನೈಸರ್ಗಿಕ ಪತ, ಮಕ್ಕಳ ಉದ್ಯಾನವನ.

 

ಉಣಕಲ್ಲ

ಶ್ರೀ ಚಂದ್ರಮೌಳೇಶ್ವರ ದೇವಾಲಯ

ಇದು ಹುಬ್ಬಳ್ಳಿ ಧಾರವಾಡ ನಗರದ ಮಧ್ಯದಲ್ಲಿ ಉಣಕಲ್ಲ ಕೆರೆಯ ಹತ್ತಿರ ಇರುವ ಗ್ರೌಂಡ್‌ಮಧ್ಯಭಾಗದಲ್ಲಿ ಇರುವ ಪುರಾತನ ದೇವಾಲಯವಾಗಿದೆ. ಇದು ಹೊಯ್ಸಳರ ಕೊನೆಯ ಮಹಾರಾಜರ ಆಡಳಿತಕ್ಕೆ ಒಳಪಟ್ಟ ಗ್ರಾಮವೆಂದು ಇತಿಹಾಸಕಾರರ ಅಭಿಮತವಾಗಿದೆ. ಇಲ್ಲಿ ಮಹಾ ಶಿಲ್ಪಿ ಜಕಣಾಚಾರಿಗಳು ಹೊಯ್ಸಳ ಶೈಲಿಯಲ್ಲಿ ನಿರ್ಮಿಸಿದ ಪುರಾತನ ಶ್ರೀ ಚಂದ್ರಮೌಳೇಶ್ವರ ದೇವಾಲಯ ಶಿಲ್ಪ ವೈಭವವನ್ನು ಸಾರುತ್ತಿದೆ.

 

ಶ್ರೀ ಸದ್ಗುರು ಸಿದ್ಧೇಶ್ವರ ದೇವಸ್ಥನ ಉಣಕಲ್ಲ

ಧಾರವಾಡ ಜಿಲ್ಲಾ ಹುಬ್ಬಳ್ಳಿ ತಾಲೂಕಿನ ಉಣಕಲ್ಲ ಗ್ರಾಮದಲ್ಲಿ ಶ್ರೀ ಸದ್ಗುರು ಸಿದ್ಧೇಶ್ವರ ಸ್ವಾಮಿಗಳು ಬಂದು ನೆಲಸಿ ಐಕ್ಯರಾದ ಮೂಲ ಕರ್ತೃ ಗದ್ದುಗೆಯನ್ನು ಪ್ರತಿಷ್ಠಾಪಿಸಲಾಗಿದೆ. (೧೯೫೯-೧೯೭೧).

ಉಣಕಲ್ಲ ಶ್ರೀ ಸದ್ಗುರು ಸಿದ್ದೇಶ್ವರರ ಸಮಕಾಲೀನರಾದ ನವಲಗುಂದದ ಶ್ರೀ ನಾಗಲಿಂಗ ಸ್ವಾಮಿಗಳು, ಕೋಡಿಕೊಪ್ಪದ ಶ್ರೀ ವೀರಪ್ಪಜ್ಜನವರು-ಗದುಗಿನ ಶಿವಾನಂದ ಸ್ವಾಮಿಗಳು, ಗರಗದ ಶ್ರೀ ಮಡಿವಾಳೇಶ್ವರರು, ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಸ್ವಾಮಿಗಳು, ಶಿಶುನಾಳ ಶರೀಫರು, ಹೊಸರಿತ್ತಿಯ ಶ್ರೀ ಗುದ್ದಲಿ ಸ್ವಾಮಿಗಳು, ಇವರೆಲ್ಲರೊಡನೆ ಬೆರೆತವರಿವರು.

ಅನೇಕ ಸಾಧು-ಸಂತರು ತಮ್ಮ ಲೀಲೆ ಉಪದೇಶಗಳಿಂದ ಜನತೆಯಲ್ಲಿ ಭಯ-ಭಕ್ತಿ ಜ್ಞಾನಗಳನ್ನು ಬಿತ್ತರಿಸಲು ಅವತಾರಿ ಪುರುಷರಾಗಿ ಜಾಗೃತಗೊಳಿಸಿದವರಲ್ಲಿ ಶ್ರೀ ಸಿದ್ಧೇಶ್ವರರು ಒಬ್ಬರು. ಮನು ಕುಲವಿದು ಕತ್ತಲು ಆವರಿಸಿದ ಸಂದರ್ಭದಲ್ಲಿ ೧೮-೧೯ನೇ ಶತಮಾನದ ಕಾಲಾವಧಿಯಲ್ಲಿ ಜನಿಸಿ ಜನತೆಯನ್ನು ಲೋಕಕಲ್ಯಾಣಕ್ಕಾಗಿ ಎಚ್ಚರಿಸಲು ಪ್ರಯತ್ನಿಸಿದ ಮಹಾತ್ಮರಲ್ಲಿ ಒಬ್ಬರಾಗಿದ್ದಾರೆ.

ಶ್ರೀ ಸದ್ಗುರು ಸಿದ್ದೇಶ್ವರರ ಜನನ ಆಂಧ್ರ ಪ್ರದೇಶದ ಕರ್ನೂಲ ಜಿಲ್ಲೆಯ ಆಲೂರ ತಾಲೂಕಿನ ಹಳಲಗುಂದಿ (ಒಳಗುಂದಿ) ಗ್ರಾಮದ ರಾಜಾ ಪಂಪನಗೌಡರು ಒಪ್ಪಿಸಿದ ಜನನ ಪ್ರಮಾಣ ಪತ್ರದ ಪ್ರಕಾರ ಹೊಳಲಗುಂದದ ನವಲಿ ಶಿವಪ್ಪನವರ ಮಗನಾಗಿ ಈ ಗ್ರಾಮದಲ್ಲಿ ಶ್ರೀ.ಮ.ನೃಪ ಶಾಲಿವಾಹನ ಶಕೆ ೧೭೮೧ರಂದು ಅಂದರೆ ೨೦/೧೨/೧೮೫೯ ನೇ ಇಸ್ವಿ ಸೋಮವಾರ ದಿವಸ ಬೆಳಗ್ಗೆ ೪-೩೦ಕ್ಕೆ ಬ್ರಾಹ್ಮಿ ಕಾಲಕ್ಕೆ ಜನಿಸಿ ಮುಂದೆ ೬೨ ವರ್ಷ ಕಾಲ ಜೀವಿಸಿ ಹುಬ್ಬಳ್ಳಿ ತಾಲೂಕ ಉಣಕಲ್ಲ ಗ್ರಾಮದಲ್ಲಿ ಜನವರಿ ೩೧ ರಂದು ೧೯೨೧ ರಂದು ಲಿಂಗೈಕ್ಯರಾದರೆಂದು ತಿಳಿದು ಬಂದಿದೆ.

 

ಶ್ರೀ ಗಾಯತ್ರಿ ತಪೋಭೂಮಿ ತಡಸ್ಕ್ರಾಸ್

ಕರ್ಮಭೂಮಿ (ಕೈವಲ್ಯ ಧಾಮ)

ಪರಮ ಪೂಜ್ಯ ಶ್ರೀ ಕೃಷ್ಣೇಂದ್ರ ಗುರುಗಳು, ಪೂಜ್ಯ ಶ್ರೀ ವಲ್ಲಭ ಚೈತನ್ಯ ಗುರುಗಳಿಗೆ ಸ್ವಪ್ನದಲ್ಲಿ ಸೂಚಿಸಿದಂತೆಯೇ ತಡಸ್‌ಕ್ರಾಸ್‌ಹತ್ತಿರ ಒಂದು ಹೊಲದ ಮಾಲೀಕನ ಪತ್ನಿಗೆ ದೇವಿಯ ದರ್ಶನ ಆಗಿ, ದೇವಿಯ ಆದೇಶದಂತೆ ಆ ಹೊಲವನ್ನು ಗುರುಗಳಿಗೆ ಮಾರಿದರು. ಗುರುಗಳು ಆ ಸ್ಥಳದಲ್ಲಿಯೇ ಗಾಯತ್ರೀಮಾತೆಯನ್ನು ಕುಂಭರೂಪದಲ್ಲಿ ಆಹ್ವಾನಿಸಿ ಪೂಜೆ ಪುನಸ್ಕಾರಗಳನ್ನು ಪ್ರಾರಂಭಿಸಿದರು. ಮುಂದೆ ದಿನಾಂಕ: ೧೭-೧೮-೧೯ ಫೆಬ್ರುವರಿ ೨೦೦೦ ರಂದು, ಗುರುಗಳ ಸಂಕಲ್ಪದಂತೆ ಗಾಯತ್ರೀ ಮಾತೆ, ಗಣಪತಿ, ಷಣ್ಮುಖ ಮತ್ತು ಮಾತೆ ಅನ್ನಪೂರ್ಣೇಶ್ವರಿಯ ಮೂರ್ತಿಗಳ ಪ್ರತಿಷ್ಠಾಪನೆಯು, ಭಕ್ತರ ಸಹಕಾರದೊಂದಿಗೆ, ಸಹಸ್ರಾರು ಜನರ ಸಮ್ಮುಖದಲ್ಲಿ, ‘ನ ಭೂತೋ ನ ಭವಿಷ್ಯತಿ’ ಎಂಬಂತೆ ನೆರವೇರಿತು. ಈ ಮಹತ್ಕಾರ್ಯವು ಶ್ರೀಗುರು ಕೃಷ್ಣೇಂದ್ರರ ಆಶೀರ್ವಾದ ಹಾಗೂ ಗುರುಗಳ ತಪೋಬಲದಿಂದ ಈ ಭೂಮಿಯಲ್ಲಿ ನಡೆದ ಕಾರಣ ಇದಕ್ಕೆ ‘ತಪೋಭೂಮಿ’ ಎಂಬ ನಾಮಕರಣವಾಯಿತು. ಅಂದಿನಿಂದ ಇಂದಿನವರೆಗೂ ದೇವಿಯ ಎಲ್ಲ ಕಾರ್ಯಕ್ರಮಗಳೂ ವಿಜೃಂಭಣೆಯಿಂದ ನಡೆಯುತ್ತಲಿವೆ.

 

ನವಗ್ರಹ ತೀರ್ಥ ಕ್ಷೇತ್ರ, ವರೂರ

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನಿಂದ ಕೇವಲ ೧೫ ಕಿ.ಮೀ ಅಂತರದಲ್ಲಿ ರಾಷ್ಟ್ರೀಯ ಹೆದ್ದಾರಿ (ಎನ್‌.ಎಚ್‌.೪)ಗೆ ಹೊಂದಿಕೊಮಡು ಸುಮಾರು ೪೦ ಎಕರೆ ಜಮೀನು ಹೊಂದಿರುವ ನವಗ್ರಹ ತೀರ್ಥ ಕ್ಷೇತ್ರವು ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ವಿಶ್ವದಲ್ಲಿ ಏಕೈಕ ಸ್ಥನವಾಗಿರುವ ಇಲ್ಲಿ ಒಟ್ಟು ೯ ಗ್ರಮಗಳ ಮೇಲೆ ೯ ಜನ ಜೈನ ತೀರ್ಥಂಕರರು ವಿರಾಜಮಾನರಾಗಿದ್ದಾರೆ. ಅದರಲ್ಲಿ ಮಧ್ಯದಲ್ಲಿರುವ ಪಾರ್ಶ್ವನಾಥ ತೀರ್ಥಂಕರರ ಮೂರ್ತಿಯ ಎತ್ತರ ೬೧.೨ ಪೂಟ ಇದ್ದು ದಾಖಲೆಯನ್ನು ಹೊಂದಿರುತ್ತದೆ. ಅಲ್ಲದೆ ಪ್ರಸಿದ್ಧ ಪದ್ಮಾವತಿ ಮಂದಿರವು ಇದೆ. ಹೀಗಾಗಿ ಇದೊಂದು ಜೈನ ಧರ್ಮದ ಪ್ರಸಿದ್ಧ ಧಾರ್ಮಿಕ ಸ್ಥಳವಾಗಿ ಹೆಸರುವಾಸಿಯಾಗಿದೆ.

ಇದು ಧಾರ್ಮಿಕ ಸ್ಥಳ ಅಷ್ಟೇ ಅಲ್ಲದೆ ಶೈಕ್ಷಣಿಕ ಸ್ಥಾನವಾಗಿಯೂ ಮಾರ್ಪಟ್ಟಿದೆ ಇಲ್ಲಿ ಪೂರ್ವ ಪ್ರಾಥಮಿಕ (ಎಲ್‌.ಕೆ.ಜಿ) ದಿಂದ ಪಿ.ಯು.ಸಿ ಕಲಾ ವಾಣಿಜ್ಯ ಹಾಗೂ ವಿಜ್ಞನ ಮಹಾವಿದ್ಯಾಲಯವಲ್ಲದೇ ರೂರಲ್‌ಪಾಲಿಟೆಕ್ನಿಕ್‌ಬಿ.ಬಿ.ಎ & ಬಿ.ಸಿ.ಎ ಕಾಲೇಜುಗಳು ಸಹ ಯಶಸ್ವಿಯಾಗಿ ನಡೆಯುತ್ತಿವೆ. ಹೀಗಾಗಿ ಅನಾಥ ಹಾಗೂ ಬಡ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ಅವರಿಗೊಂದು ಸ್ಥಾನವನ್ನು ಕಲ್ಪಿಸಿಕೊಡಲಾಗುತ್ತಿದೆ.

ಈ ಪುಣ್ಯಕ್ಷೇತ್ರದ ನಿರ್ಮಾಣವನ್ನು ಪರಮಪೂಜ್ಯ ರಾಷ್ಟ್ರಸಂತ ಯುವಾಚಾರ್ಯ ಶ್ರೀ ೧೦೮ ಗುಣಧರನಂದಿ ಮಹಾರಾಜರ ನೇತೃತ್ವ ಹಾಗೂ ಪೂಜ್ಯರಾದ ಶ್ರೀ ಧರ್ಮಸೇನ ಭಟ್ಟಾರಕ ಮಹಾರಾಜರ ಸಹಯೋಗದಿಂದ ಸನ್‌೨೦೦೭ ರಲ್ಲಿ ನಿರ್ಮಾಣವಾಗಿದೆ.