ಹುಟ್ಟಿದ್ದು ಧಾರವಾಡ ಜಿಲ್ಲೆಯ ಗದಗಿನಲ್ಲಿ. ೧೮೮೪ ಅಕ್ಟೋಬರ್ ೪ ರಂದು. ಬಿ.ಎ. ಎಲ್.ಎಲ್.ಬಿ. ಪದವೀಧರರಾಗಿ ಅವರು ಅಲ್ಲಿಯೇ ವಕೀಲ ವೃತ್ತಿಯನ್ನು ಕೈಗೊಂಡರು. ‘ಉದಯ ವಾಗಲಿ ನಮ್ಮ ಚಲುವ ಕನ್ನಡ ನಾಡು, ಎಂಬ ಪ್ರಸಿದ್ದ ಕವನದ ಕರ್ತೃಗಳು. ಹಲವು ಹೊಸ ನಾಟಕಗಳನ್ನು ಬರೆದುದಲ್ಲದೆ ರಂಗಭೂಮಿಯಲ್ಲಿ ಹಲವು ಮಾರ್ಪಾಡುಗಳನ್ನು ಮಾಡಿದರು. ಸಾಮಾಜಿಕ ಸಂಸ್ಥೆಗಳ ಸಂಘಟಕರಾಗಿ ನಿಷ್ಟಾವಂತ ರಾಜಕೀಯ ಕಾರ್ಯಕರ್ತರಾಗಿ, ದೇಶಭಕ್ತರಾಗಿ ಒಂದು ಸತ್ವ ಪರಂಪರೆಯನ್ನು ನಿರ್ಮಿಸಿದರು. ನಾಟಕ ಇವರ ಮುಖ್ಯ ಆಕರ್ಷಣೆ.

ಕನ್ನಡ ರಂಗಭೂಮಿಯ ಪುನರುಜ್ಜೀವನಕ್ಕಾಗಿ ಶಾಂತಕವಿಗಳು ಆರಂಬಿಸಿದ್ದ ಕಾರ್ಯವನ್ನು ಮುಂದುವರಿಸಿದರು. ಸುಶಿಕ್ಷಿತ ಕಲಾವಿದರ ನೆರವಿನಿಂದ ಹೊಸ ಹೊಸ ನಾಟಕಗಳನ್ನು ರಂಗಭೂಮಿಯ ಮೇಲೆ ತಂದರು. ಸಂಗೀತ, ವೇಷಭೂಷಣ, ರಂಗ ಸಜ್ಜಿಕೆಗಳಿಗೆ ಸಂಭಂದಿಸಿದಂತೆ ಹಲವು ಬಗೆಯ ಸುಧಾರಣೆಗಳನ್ನು ರಚಿಸಿದ್ದಾರಾದರೂ ಅವುಗಳಲ್ಲಿ ‘ಸ್ತ್ರೀ ಧರ್ಮರಹಸ್ಯ, ‘ಶಿಕ್ಷಣ ಸಂಭ್ರಮ, ‘ಪತಿತೋದ್ದಾರ, ಎಂಬ ಮೂರು ಸಾಮಾಜಿಕ ನಾಟಕಗಳು ಮಾತ್ರ ಪ್ರಕಟವಾಗಿವೆ. ಆಂಗ್ಲಶಿಕ್ಷಣ, ಸ್ತ್ರೀ ಸ್ವಾತಂತ್ರ್ಯ ಮೊದಲಾದ ಸಮಸ್ಯೆಗಳಿಗೆ ಪ್ರತಿಕ್ರಿಯೆ ವ್ಯಕ್ತ ಪಡಿಸಿರುವ ಈ ನಾಟಕಗಳು ಕನ್ನಡ ರಂಗಭೂಮಿಯ ಚರಿತ್ರೆಯಲ್ಲಿ ವಿಶಿಷ್ಟವಾದ ಸ್ಥಾನ ಪಡೆದಿವೆ. ಇವರ ಪತಿತೋದ್ದಾರ ನಾಟಕಕ್ಕೆ ೧೯೫೪ ರಲ್ಲಿ ಮುಂಬೈ ಸರ್ಕಾರದ ಬಹುಮಾನ ಲಬಿಸಿದೆ. ಹುಯಿಲಗೋಳ ನಾರಾಯಣರಾಯರ ಶಿಕ್ಷಣ ಸಂಭ್ರಮ ಹಾಗೂ ಸ್ತ್ರೀಧರ್ಮರಹಸ್ಯ ಗಳು ಸತತ ಪ್ರಯೋಗದಿಂದ ಜನಮನವನ್ನು ಸೂರೆಗೊಂಡರೂ, ಅಖಿಲ ಕರ್ನಾಟಕದಲ್ಲಿ ವ್ಯಾಪ್ತಿಯನ್ನು ಪಡೆಯಲಿಲ್ಲ. ಈ ನಾಟಕಗಳು ಸುಧಾರಣೆಯ ಹುಚ್ಚುತನ, ಹಾಗೂ ಕೆಡುಕುತನಗಳನ್ನು ಚೇಷ್ಟೆಮಾಡುವ ವಿನೋದ ರೂಪಕಗಳಾಗಿವೆ ಪಾತ್ರಗಳ ವೈವಿಧ್ಯ ಹಾಗೂ ವಿನೋದ ಪ್ರಿಯತೆಗಳು ಮಾತ್ರ ಈ ಕೃತಿಗಳ ವೈಶಿಷ್ಟ್ಯಗಳಾಗಿವೆ. ಈ ನಾಟಕಗಳ ವಸ್ತು ಸಾಮಾಜಿಕವಾಗಿದ್ದರೂ ಅದರ ಅರ್ಥಪೂರ್ಣತೆ ಕಣ್ಣಿಗೆ ಕಾಣುವಷ್ಟು ಸ್ಪಷ್ಟವಾಗಿ ಗೋಚರವಾಗಿಲ್ಲ. ಇದಕ್ಕೆ ಅದರ ‘ಪತಿತೋದ್ದಾರ,ವೇ ಸಾಕ್ಷಿಯಾಗಿದೆ. ಜಾತೀಯತೆಯನ್ನೇ ಮೂಲ ಸಮಸ್ಯೆಯನ್ನಾಗಿಟ್ಟುಕೊಂಡು ನಾಟಕವನ್ನು ರಚಿಸಲಾಗಿದೆ. ನಾಟಕ ಪ್ರಗತಿಯ ಮಾತನ್ನೇ ಹೇಳುತ್ತಿದ್ದರೂ ಅದರ ದನಿಯಲ್ಲಿ ಧೈರ್ಯವಿಲ್ಲ. ಸಂಕೋಚ ಮಾತ್ರ ಬೇಕಾದಷ್ಟಿದೆ. ಸರ್ವೋತ್ತಮ, ಅಂಜನಾ ಇವರ ಮದುವೆ ಆಕಸ್ಮಿಕವಾಗಿ ಗೊತ್ತಾದ ಪೂರ್ವ ಸಂಭಂದದ ಫಲವೆಂದು ಗೊತ್ತಾದಾಗ ಮೊದಲಿನ ಆವೇಶವೆಲ್ಲ ಇಳಿದು ಹೋಗುತ್ತದೆ. ಆಧುನಿಕತೆ ಈ ನಾಟಕಗಳ ಹೊರಗಿನ ಸ್ವರೂಪವಾಗಿ ಮಾತ್ರ ಕಾಣುತ್ತದೆ.