ಮಳೆ ನಮ್ಮ ಬೇಸಾಯದ ಹತ್ತಿರದ ನೆಂಟ. ಯಾವ ಕಾಲದಲ್ಲಿ ಯಾವ ಮಳೆ ಬೀಳುತ್ತದೆ, ಯಾವ ಮಳೆ ಬಂದಾಗ ಯಾವ ಕೃಷಿ ಚಟುವಟಿಕೆ ಆರಂಭಿಸಬೇಕು, ಯಾವ ಬೀಜ ಬಿತ್ತಬೇಕು ಎಂಬ ಲೆಕ್ಕಾಚಾರದಲ್ಲಿ ರೈತ ಸಮುದಾಯ ತಪ್ಪುವುದಿಲ್ಲ. ಹಳ್ಳಿಗರ ಪಾಲಿಗೆ ಮಳೆ ಕೇವಲ ನೀರಲ್ಲ. ಬದುಕಿನ ಜೀವ ಧಾರೆ. ಪ್ರಕೃತಿಯ ಒಡಲಿನ ವಿದ್ಯಮಾನಗಳನ್ನು ಎಚ್ಚರಿಕೆಯಿಂದ ಗಮನಿಸಿ, ಮಳೆಯ ಸಂಭವನೀಯತೆಯನ್ನು ನಿರ್ಧರಿಸುವ ಕೃಷಿಕರ ಬದುಕಿನ ಶೈಲಿ ಅನನ್ಯ.

ಮಳೆ ಕುರಿತ ಆಚರಣೆಗಳು

ಕಾಲಕ್ಕೆ ಸರಿಯಾಗಿ ಮಳೆ ಬಾರದಿದ್ದಾಗ ರೈತ ಬಲು ಕಂಗಾಲು. ಆದರೆ ಅಂತಹ ಸಂದರ್ಭದಲ್ಲಿ ಆತ ಕೇವಲ ಮುಗಿಲು  ನೋಡುತ್ತಾ ಕೂರುವುದಿಲ್ಲ. ತನ್ನ ಸುತ್ತ-ಮುತ್ತಲ  ಪಶು-ಪಕ್ಷಿ, ಪ್ರಾಣಿಗಳನ್ನು ಗಮನಿಸತೊಡಗುತ್ತಾನೆ. ಇಡೀ ದಿನ ಹೊಲಗದ್ದೆಗಳಲ್ಲಿ ಸುತ್ತಾಡಿ  ಗಿಡ-ಮರ, ಪ್ರಾಣಿ ಪಕ್ಷಿ ಮತ್ತು ಕೀಟಗಳ ನಡವಳಿಕೆಗಳನ್ನು ಅಭ್ಯಸಿಸಿ, ಆ ಅನುಭವದ ಆಧಾರದ ಮೇಲೆ ಮಳೆಯ ಆಗು-ಹೋಗುಗಳನ್ನು ನಿರ್ಧರಿಸುತ್ತಾನೆ. ಏಕೆಂದರೆ ನೆಲದ ಜೊತೆ ಅವಿನಾಭಾವ ಸಂಬಂಧ ಹೊಂದಿದ ಕ್ರಿಮಿ ಕೀಟಗಳಿಗೆ ಮಳೆ ಬರುವ ಹಾದಿಯ ಖಚಿತತೆ ತಿಳಿದಿರುತ್ತದೆ. ಪಕ್ಷಿಗಳ ವರ್ತನೆ, ಇರುವೆಗಳ ತರಾತುರಿ, ಜಾನುವಾರುಗಳ ದಿನಚರಿಗಳು ಒಂದು ನಿರ್ಧಿಷ್ಟ ರೀತಿಯಲ್ಲಿ ಬದಲಾಗುವುದಕ್ಕೂ ಮಳೆ ಬರುವುದಕ್ಕೂ ಅಂತರ್ ಸಂಬಂಧವಿದೆ. ಈ ಅಂತರ್ ಸಂಬಂಧದ ವರ್ತಮಾನವನ್ನು ನಮ್ಮ ರೈತ ವರ್ಗ ಶತ-ಶತಮಾನಗಳಿಂದ ಗಮನಿಸಿ ಅನುಭವಿಸಿದೆ. ಆ ಅನುಭವದ ನೆಲೆಯಲ್ಲಿ ಈ ಮಳೆ ನಂಬಿಕೆಗಳು ರೂಢಿಗೆ ಬಂದಿವೆ, ಚಾಲ್ತಿಯಲ್ಲಿವೆ.

ಮನುಷ್ಯರಿಗಿಂತ ಪ್ರಾಣಿಗಳು ಹೆಚ್ಚು ಸೂಕ್ಷ್ಮ ಮತ್ತು ಸಂವೇದನೆಯುಳ್ಳವಾಗಿರುತ್ತವೆ. ಹಾಗಾಗಿ ಅವು ಪ್ರಕೃತಿ ಮತ್ತು ವಾತಾವರಣದಲ್ಲಾಗುವ ಬದಲಾವಣೆಯನ್ನು ಬಹು ಬೇಗ ಗುರುತಿಸುತ್ತವೆ ಮತ್ತು ಅದನ್ನು ತಮ್ಮ ಹಾವಭಾವಗಳಿಂದ ವ್ಯಕ್ತಪಡಿಸುತ್ತವೆ. ಈ ವರ್ತನೆಗಳನ್ನು ಅನುಭವದಿಂದ ಬಲ್ಲ ರೈತ ಸಮುದಾಯ ಅವುಗಳನ್ನಾಧರಿಸಿ ಮಳೆ-ಬೆಳೆಯ ಮುನ್ಸೂಚನೆಯನ್ನು ವಿಶ್ಲೇಷಿಸುತ್ತಾರೆ.

ಅಧುನಿಕ ವಿಜ್ಞಾನದ ಅಳತೆಗೋಲಿಗೆ ಸಿಕ್ಕದ, ತಲೆ-ತಲೆಮಾರುಗಳ ಮೂಲಕ ಹಾದು ಬಂದ ಹಳ್ಳಿಗರ  ಮಳೆನಂಬಿಕೆಗಳು ಹೀಗಿವೆ.

 • ಹುಲ್ಲಿನ ಮೇಲೆ ಎಂಜಲು ಉಗಿದಂತೆ ಕಾಣುವ ನುರುಗು ಹುಳು ಹುಲ್ಲಿನಲ್ಲಿ ಜಾಸ್ತಿ ಇದ್ದರೆ ಮಳೆ ಬರುವುದು ವಿಳಂಬವಾಗುತ್ತದೆ, ಅದೇ ಹುಳು ರಾಗಿ ಹೊಲದಲ್ಲಿ ಹೆಚ್ಚಾಗಿದ್ದರೆ ಒಂದು ವಾರದೊಳಗೆ ಮಳೆ ಗ್ಯಾರಂಟಿ.
 • ಉಗನೀ ಬಳ್ಳಿ ತುಂಡಾಗದೆ ಚೆನ್ನಾಗಿ ಹಂಬು ಬೆಳೆದ ವರ್ಷ ಒಳ್ಳೆ ಮಳೆಯನ್ನು ನಿರೀಕ್ಷಿಸಬಹುದು.
 • ಮಳೆ ಇಲ್ಲದ ದಿನ ಬೆಟ್ಟಗಳಲ್ಲಿ ಮಂಜು ಅಥವಾ ಕಾವಳ ಹಿಡಿದರೆ ವಾರದೊಳಗೆ ಮಳೆ ಬರುತ್ತದೆ. ಜಡಿಮಳೆ ಇದ್ದು ಬೆಟ್ಟಗಳಲ್ಲಿ ಮಂಜು ಹಿಡಿದರೆ (ಮುಸುಕಿದರೆ) ಬರುತ್ತಿದ್ದ ಮಳೆ ಬಿಡುತ್ತದೆ ಇಲ್ಲವೇ ಜಾಸ್ತಿಯಾಗುತ್ತದೆ.
 • ಕೊಡತಿ ಹುಳು (ಡ್ರಾಗನ್ ಫ಼್ಲೈ) ಗುಂಪಾಗಿ ನೆಲ ಕಚ್ಚಿದರೆ ಅಥವಾ ನೆಲ ಮೂಸುತ್ತಿದ್ದರೆ ಅಥವಾ ಉತ್ತರದಿಂದ ದಕ್ಷಿಣಕ್ಕೆ ಹಿಂಡುಗಟ್ಟಲೆ ಹಾರಿ ಹೋದರೆ ೩ ದಿನದೊಳಗೆ ಮಳೆ ಬರುತ್ತದೆ.
 • ಹುಣಸೇ ಮರ ಜಬರದಸ್ತಾಗಿ  ಹೂ ಬಿಟ್ಟ ವರ್ಷ ಮಳೆಯ ಪ್ರಮಾಣ ಕೂಡ ಅಧಿಕ.
 • ನಂದಿ ಮೂಲೆ ಅಥವಾ ದೇವ ಮೂಲೆಯಲ್ಲಿ ಮಿಂಚು ಹುಟ್ಟಿದರೆ ತಪ್ಪದೆ ಮಳೆ ಬರುತ್ತದಂತೆ, ನಿಖರವಾದ ಮಳೆ ನಂಬಿಕೆಯಿದು ಮತ್ತು ವ್ಯಾಪಕವಾಗಿ ನಾಡಿನ ಹಲವಾರು ಪ್ರದೇಶಗಳಲ್ಲಿ ಇದು ಬಳಕೆಯಲ್ಲಿರುವುದು ವಿಶೇಷ.
 • ತೆಳುವಾಗಿ ಹರಿಯುತಿರುವ ಹಳ್ಳದ ನೀರು ಇದಕ್ಕಿದ್ದಂತೆ ಭೂಮಿಯೊಳಗೆ ಇಂಗಿ ಹೋದರೆ ಮಳೆ ಬರುತ್ತದೆ ಎಂದು ನಂಬಲಾಗುತ್ತದೆ.
 • ಕಪ್ಪು ಇರುವೆಗಳು ತಮ್ಮ ಗೂಡಿನಿಂದ ಮೊಟ್ಟೆಗಳು ಮತ್ತು ಆಹಾರವನ್ನು ಬೇರೆಡೆಗೆ ಸಾಗಿಸುತ್ತಿದ್ದರೆ ೩ ದಿನದೊಳಗೆ ನಿಶ್ಚಿತವಾಗಿ ಮಳೆ ಬರುತ್ತದೆ. ಇರುವೆಗಳು ತಮ್ಮ ಸ್ಥಳ ಬದಲಾಯಿಸುವಿಕೆಯು ಮಳೆ ಬರುವ ಸೂಚನೆ.
 • ಕೆಂಬೂತ (ಸಂಬಾರ್ ಕಾಗೆ) ಹಾಗೂ ಕೋಗಿಲೆಗಳು ಕೂಗುತ್ತಿದ್ದರೆ ಶೀಘ್ರದಲ್ಲಿ ಮಳೆ ಯೋಗ ಇದೆಯೆಂದು ಅರ್ಥ.
 • ಸೂರ್ಯ ಹುಟ್ಟುವ ಸ್ವಲ್ಪ ಹೊತ್ತಿನ ಮೊದಲು ಪೂರ್ವದಿಂದ ಪಶ್ಚಿಮಕ್ಕೆ ಬಿಳಿ ಮೋಡ ಕಾಲುವೆ ರೀತಿ ಗೋಚರಿಸಿದರೆ ಅಂದು ಮಳೆ ಬರುತ್ತದೆ.
 • ಮನೆಯ ಕೋಳಿಯು ರೆಕ್ಕೆ ಹರಡಿ ಬಿಸಿಲು ಕಾಯಿಸುತ್ತಿದ್ದರೆ ಮಳೆಯ ಮುನ್ಸೂಚನೆ. ಅಲ್ಲದೆ ಮದ್ಯಾಹ್ನದ ಹೊತ್ತಲ್ಲಿ ಹುಂಜ ಕೂಗಿದರೆ ಹಾಗೂ ಕೋಳಿಗಳು ಕಚ್ಚಾಡಿದರೆ ಅಂದು ಮಳೆ ಬರುತ್ತದೆ.
 • ಒಣ ಭೂಮಿಯ ಕಲ್ಲಿನ ಕೆಳಗೆ ಕಪ್ಪೆ ಒಂದೇ ಸಮ ವಟಗುಟ್ಟುತ್ತಿದ್ದರೆ ಮಳೆ ಬರುವ ಸಂಭವ ಹೆಚ್ಚು.
 • ಸೂರ್ಯನ ಸುತ್ತ ವೃತಾಕಾರದ ಉಂಗುರಗಳು ಮೂಡುತ್ತವೆ. ಇವು ಸೂರ್ಯನಿಗೆ ಹತ್ತಿರದಲ್ಲಿದ್ದರೆ ಬೇಗ ಮಳೆ ಬರುತ್ತದೆ, ಉಂಗುರ ದೂರದಲ್ಲಿದ್ದರೆ ತಡವಾಗಿ ಮಳೆ ಬರುತ್ತದೆ. ಇದನ್ನು ಕೆಲವೆಡೆ ಸೂರ್ಯನಿಗೆ ಗುಡಿ ಕಟ್ಟುವುದು ಎನ್ನುತ್ತಾರೆ. ಚಂದ್ರನಿಗೆ ಈ ರೀತಿ ಉಂಗುರ ಅಥವಾ ಗುಡಿ ಮೂಡಿದಾಗಲೂ ಇದೇ ರೀತಿಯ ನಂಬಿಕೆಗಳಿವೆ.
 • ಕಾಡು-ಮೇಡುಗಳಲ್ಲಿ ಶತಾವರಿ ಬಳ್ಳಿ (ಅಜ್ಜಿತಲೆ ಗಿಡ) ಚೆನ್ನಾಗಿ ಹರಿದ ವರ್ಷ ಮಳೆ-ಬೆಳೆ ಉತ್ತಮವಾಗುತ್ತದೆ.
 • ನವಿಲು ಹಾಗೂ ಕಾಡುಕೋಳಿಗಳು ಕೂಗಿಕೊಂಡರೆ ೩ ದಿನದೊಳಗೆ ಮಳೆ ಬರುತ್ತದೆ.
 • ಕಡ್ಡಿ ಜೇನಿನ ತುಪ್ಪ ಗಟ್ಟಿಯಾದರೆ ಮಳೆ ವಿಳಂಬವಾಗುತದೆ. ಅದೇ ಜೇನು ತುಪ್ಪ ತೆಳುವಾಗಿದ್ದರೆ ಮಳೆ ಬರುವ ಸಂಭವ ಜಾಸ್ತಿ.
 • ಗೊಟ್ಟಿಮರ ಕಾಯಿ ಜಾಸ್ತಿ ಬಿಟ್ಟ ವರ್ಷ ಬರಗಾಲ ಬರುತ್ತದೆ.
 • ಅಗ್ನಿ ಮೂಲೆಯಲ್ಲಿ ಮಿಂಚಿದರೆ ಆ ದಿನ ಮಳೆ ಬರುವುದಿಲ್ಲ.
 • ನಿಶ್ಚಿತ ಪ್ರಮಾಣದ ಹಾಲು ಕರೆಯುತ್ತಿರುವ ಹಸು-ಎಮ್ಮೆಗಳು ಇದ್ದಕ್ಕಿದ್ದಂತೆ ಕಡಿಮೆ ಹಾಲು ಕರೆದರೆ ಮುಂದಿನ ಎರಡು ದಿನಗಳಲ್ಲಿ ಮಳೆ ಬರುತ್ತದೆ.
 • ದನ-ಕರುಗಳು ಒಂದು ನಿರ್ದಿಷ್ಟ ದಿಕ್ಕಿಗೆ ತಲೆ ಎತ್ತಿ ನಿಂತುಕೊಂಡು, ಬಾಯಿಯನ್ನು ಸ್ವಲ್ಪ ತೆರೆದು ಮೂಗಿನ ಹೊರಳೆ ಅಗಲಿಸಿ ಗಾಳಿಯನ್ನು ಜೋರಾಗಿ ಎಳೆದುಕೊಳ್ಳುತ್ತಿದ್ದರೆ ಮಳೆಯಾಗುತ್ತದೆ.
 • ರಣಹದ್ದುಗಳು, ಕಾಗೆಗಳು ಮುಗಿಲಲ್ಲಿ ತುಂಬಾ ಹೊತ್ತು ಹಾರಾಡುತ್ತಿದ್ದರೆ, ಹದ್ದುಗಳು ರೆಕ್ಕೆ ಬಡಿಯದೆ ಮುಗಿಲಲ್ಲಿ ತುಂಬಾ ಹೊತ್ತು ತೇಲಾಡುತ್ತಿದ್ದರೆ ಮಳೆ ಬರುವ ಸೂಚನೆ.
 • ಮುತ್ತುಗದ ಮರ ಜಗತ್ತಿನಲ್ಲಿರುವ ಮರ-ಮುಟ್ಟುಗಳಲ್ಲಿ  ಅತ್ಯಂತ ಹಿರಿಯದು ಎನ್ನುವ ನಂಬಿಕೆ ನಮ್ಮ ರೈತರಲ್ಲಿದೆ. ಅದಕ್ಕೆ ಅವರು ನೀಡುವ ಕಾರಣ ಅದರ ಹೆಸರೇ ಮುದುಕದ ಮರ ಎಂಬುದು. ಈ ಮರ ಚೆನ್ನಾಗಿ ಹೂ ಕಾಯ್ದು ಕಾಯಿ ಜೋತಿಡಿದರೆ ಆ ವರ್ಷ ಹಿಂಗಾರು ಮತ್ತು ಮುಂಗಾರು ಎರಡೂ ಸಹ ಸಮೃದ್ಧವಾಗಿರುತ್ತದೆ.  ಅದರಲ್ಲಿಯೂ ಕಾಯಿಯಲ್ಲಿರುವ ರುಪಾಯಗಲದ ಬೀಜ ಕಾಯಿಯ ತೊಟ್ಟಿನ ಭಾಗದಲ್ಲಿದ್ದರೆ ಹಿಂಗಾರು ಉತ್ತಮ, ತುದಿಯ ಭಾಗದಲ್ಲಿದ್ದರೆ ಮುಂಗಾರು ಉತ್ತಮ ಮತ್ತು ಸರಿಯಾಗಿ ಕಾಯಿಯ ಮಧ್ಯ ಭಾಗದಲ್ಲಿದ್ದರೆ ಹಿಂಗಾರು -ಮುಂಗಾರು ಎರಡೂ ಉತ್ತಮ ಎಂಬುದು ರೈತರ ನಂಬಿಕೆ. ಫ಼ೆಬ್ರವರಿ-ಮಾರ್ಚ್ ತಿಂಗಳಲ್ಲಿ ಅಂದರೆ ಇನ್ನೇನು ಮುಂಗಾರು ಆರಂಭವಾಗುತ್ತದೆನ್ನುವಾಗ ಕೆಂಪು ವರ್ಣದ ಹೂ ಬಿಡುವ ಮುತ್ತುಗ ರೈತರಿಗೆ ಆ ವರ್ಷದ ಏರಿ-ಪೇರುಗಳನ್ನು ತಿಳಿಸುವ ಭವಿಷ್ಯಕಾರ.

ಹೀಗೆ ಹತ್ತು-ಹಲವು ನಂಬಿಕೆ, ವಾಡಿಕೆಗಳನ್ನು ನಮ್ಮ ರೈತಾಪಿಗಳ ನಿತ್ಯದ ಬದುಕಿನಲ್ಲಿ ಕಾಣಬಹುದು.

ಮಳೆ ನಕ್ಷತ್ರಗಳು

ಒಟ್ಟು ೨೭ ಮಳೆ ನಕ್ಷತ್ರಗಳು ಚಾಲ್ತಿಯಲ್ಲಿವೆ. ಇವುಗಳಲ್ಲಿ ೧೨ ಮಳೆಗಳು ಮಾತ್ರ ಮಳೆ ತರುತ್ತವೆ, ಎಲ್ಲ ಪ್ರದೇಶಗಳ ಕೃಷಿ ಚಟುವಟಿಕೆಗಳು ಈ ಅವಧಿಯಲ್ಲಿಯೇ ನಡೆಯುತ್ತವೆ. ಈ ಮಳೆಗಳ ಅವಧಿ ಸಾಮಾನ್ಯವಾಗಿ ೧೫ ದಿವಸಗಳಾಗಿರುತ್ತದೆ. ಉಳಿದ ಮಳೆ ಅವಧಿಯಲ್ಲಿ ಅಲ್ಪ-ಸ್ವಲ್ಪ ಮಳೆ ಬಂದರೂ ಸಹ ಅದು ನಿಶ್ಚಿತವಲ್ಲ. ಹಾಗಾಗಿ ಮಳೆ ತರುವ ೧೨ ಮಳೆಗಳನ್ನು ಕಾಲ ಮೇಘಗಳೆಂತಲೊ, ಉಳಿದವುಗಳನ್ನು ಅಕಾಲ ಮೇಘಗಳೆಂತಲೊ ಕರೆಯುತ್ತಾರೆ. ಮಕ್ಕಳಿಗೆ ಬಾಲ್ಯದಲ್ಲಿಯೇ ಮಳೆಗಳ ಹೆಸರುಗಳನ್ನು ಕಲಿಸುವುದನ್ನು  ಹಿಂದೆ ಮಾಡುತ್ತಿದ್ದರು, ಆದರೆ ಈಗ ಆ ಸಂಪ್ರದಾಯ ಮರೆಯಾಗಿದ್ದು ಮಕ್ಕಳಿಗಿರಲಿ ಯುವ ಜನಾಂಗಕ್ಕೇ ಅದರ ಅರಿವಿಲ್ಲದಂತಾಗಿದೆ.

ನಮ್ಮ ಮಳೆಗಳ ಹೆಸರು ಮತ್ತು ಅವುಗಳ ಕಾಲವನ್ನು ಇಲ್ಲಿ ನೀಡಲಾಗಿದೆ.

ಕ್ರಮ ಸಂಖ್ಯೆ ಮಳೆ ಹೆಸರು ಅವಧಿ
ಉತ್ತರಾಷಾಢ ಜನವರಿ ೧೧ ರಿಂದ ೨೩
ಶ್ರಾವಣ ಜನವರಿ ೨೪ ರಿಂದ ಫ಼ೆಬ್ರವರಿ ೫
ಧನಿಷ್ಠ ಫ಼ೆಬ್ರವರಿ ೬ ರಿಂದ ಫ಼ೆಬ್ರವರಿ ೧೮
ಶತಭಿಷ ಫ಼ೆಬ್ರವರಿ ೧೯ ರಿಂದ ಮಾರ್ಚ್ ೩
ಪೂರ್ವಾಭಾದ್ರ ಮಾರ್ಚ್ ೪ ರಿಂದ ಮಾರ್ಚ್ ೧೬
ಉತ್ತರಾಭಾದ್ರ ಮಾರ್ಚ್ ೧೭ ರಿಂದ ಮಾರ್ಚ್ ೨೯
ರೇವತಿ ಮಾರ್ಚ್ ೩೦ ರಿಂದ ಏಪ್ರಿಲ್ ೧೨
ಅಶ್ವಿನಿ ಏಪ್ರಿಲ್ ೧೩ ರಿಂದ ಏಪ್ರಿಲ್ ೨೬
ಭರಣಿ ಏಪ್ರಿಲ್ ೨೭ ರಿಂದ ಮೇ ೧೦
೧೦ ಕೃತ್ತಿಕಾ ಮೇ ೧೧ ರಿಂದ ಮೇ ೨೩
೧೧ ರೋಹಿಣಿ ಮೇ ೨೪ ರಿಂದ ಜೂನ್ ೬
೧೨ ಮೃಗಶಿರ ಜೂನ್ ೭ ರಿಂದ ಜೂನ್ ೨೦
೧೩ ಆರಿದ್ರಾ ಜೂನ್ ೨೧ ರಿಂದ ಜುಲೈ ೪
೧೪ ಪುನರ್ವಸು ಜುಲೈ ೫ ರಿಂದ ಜುಲೈ ೧೯
೧೫ ಪುಷ್ಯ ಜುಲೈ  ೨೦ ರಿಂದ ಆಗಷ್ಟ್ ೨
೧೬ ಆಶ್ಲೇಷ ಆಗಷ್ಟ್ ೩ ರಿಂದ ಆಗಷ್ಟ್ ೧೬
೧೭ ಮಗೆ ಆಗಷ್ಟ್ ೧೭ ರಿಂದ ಆಗಷ್ಟ್ ೨೯
೧೮ ಹುಬ್ಬೆ ಆಗಷ್ಟ್ ೩೦ ರಿಂದ ಸೆಪ್ಟೆಂಬರ್ ೧೨
೧೯ ಉತ್ತರೆ ಸೆಪ್ಟೆಂಬರ್ ೧೩ ರಿಂದ ಸೆಪ್ಟೆಂಬರ್ ೨೬
೨೦ ಹಸ್ತ ಸೆಪ್ಟೆಂಬರ್ ೨೭ ರಿಂದ ಅಕ್ಟೊಬರ್ ೯
೨೧ ಚಿತ್ತೆ ಅಕ್ಟೋಬರ್ ೧೦ ರಿಂದ ಅಕ್ಟೋಬರ್ ೨೪
೨೨ ಸ್ವಾತಿ ಅಕ್ಟೋಬರ್  ೨೫ ರಿಂದ ನವಂಬರ್ ೬
೨೩ ವಿಶಾಖ ನವಂಬರ್ ೭ ರಿಂದ ನವಂಬರ್ ೧೮
೨೪ ಅನುರಾಧ ನವಂಬರ್ ೧೯ ರಿಂದ ಡಿಸೆಂಬರ್ ೧
೨೫ ಜೇಷ್ಠ ಡಿಸೆಂಬರ್ ೨ ರಿಂದ ಡಿಸೆಂಬರ್ ೧೪
೨೬ ಮೂಲಾ ಡಿಸೆಂಬರ್ ೧೫ ರಿಂದ ಡಿಸೆಂಬರ್ ೨೭
೨೭ ಪೂರ್ವಾಷಾಢ ಡಿಸೆಂಬರ್ ೨೮ ರಿಂದ ಜನವರಿ ೧೦

 

ಈ ಮಳೆಗಳಲ್ಲಿ ಒಂದೊಂದಕ್ಕೂ ರೈತರು ತಮ್ಮದೇ ಆದ ವ್ಯಾಖ್ಯಾನ ನೀಡುತ್ತಾರೆ. ಕೆಲವು ಮಳೆ ಬಂದರೆ ಒಳ್ಳೆಯದು ಮತ್ತೆ ಕೆಲವು ಕೇಡು ಎಂಬ ನಂಬಿಕೆಯೂ ಇದೆ. ವಿಶಾಖ ಮಳೆ ಬಂದರೆ ಬೆಳೆಗಳ ಕೀಟ-ರೋಗಾದಿಗಳು ನಾಶವಾಗುತ್ತವೆಂದು ಹೇಳಲಾಗುತ್ತದೆ. ಅನುರಾಧ ಮಳೆ ಬಂದರೆ ಒಳ್ಳೆಯದಲ್ಲ, ಅದು ಕಟಾವಿಗೆ ಸಿದ್ಧವಾದ ಮತ್ತು ಕಟಾವಾದ ಬೆಳೆಗೆ ಮಾರಕ ಎಂಬುದಾಗಿ ರೈತರ ಅನಿಸಿಕೆ. ಅದಕ್ಕಾಗಿಯೇ ಅನೊರಾಗಿ ಬಂದು ಮನೆ ರಾಗಿ ಹೊತ್ಕೊಂಡೋಯ್ತು ಎಂಬ ಗಾದೆ ಮಾತು ಹುಟ್ಟಿಕೊಂಡಿದೆ. ಹಾಗೆಯೇ  ಮೂಲಾ ಮಳೆ ಬಂದರೆ ಕೇಡು ಎಂದೂ ಹೇಳಲಾಗುತ್ತದೆ.

ಮಳೆಗಳ ಹುಟ್ಟು ಇತ್ಯಾದಿಗಳ ಕುರಿತು ಕತೆ, ಕಥನ, ಸುಧೀರ್ಘ ಹಾಡುಗಳನ್ನು ಕಟ್ಟಲಾಗಿದೆ. ಗಾದೆಗಳು, ನುಡಿಕಟ್ಟುಗಳು, ಒಡಪುಗಳು ಹುಟ್ಟಿಕೊಂಡಿವೆ. ಕೆಲವು ಮಳೆಗೆ ಅದರದೇ ಆದ ವಿಶಿಷ್ಟ ಆಚರಣೆಗಳೂ ಇವೆ. ಕೆಲವನ್ನು ನೋಡುವುದಾದರೆ;

ಕೃತ್ತಿಕಾ

ಎಳ್ಳು ಬಿತ್ತಲು ಈ ಮಳೆ ಒಳ್ಳೆಯ ಕಾಲ. ಕೃತ್ತಿಕೇಲಿ ಬಿತ್ತಿದ್ರೆ ಕೋರಿದಷ್ಟು ಎಳ್ಳು ಎಂದು ಗಾದೆಯೇ ಇದೆ. ರೈತರ ಆಡುಮಾತಿನಲ್ಲಿ ಕುರ್ತಿಕೆ ಎಂದು ಕರೆಯಲ್ಪಡುತ್ತದೆ. ಹೊಲಕ್ಕೆ ಗೊಬ್ಬರ ಸಾಗಿಸುವ, ಉಳುಮೆ ಮಾಡುವ ಚಟುವಟಿಕೆಗಳು ಚಾಲ್ತಿಯಲ್ಲಿರುತ್ತವೆ.

ಪುನರ್ವಸು

ಕ್ಯಾಲೆಂಡರು, ಪಂಚಾಂಗಗಳಲ್ಲಷ್ಟೇ ಪುನರ್ವಸು ಎಂದು ಕರೆಸಿಕೊಳ್ಳುವ ಈ ಮಳೆಗೆ ಹಳ್ಳಿಗರಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಹೆಸರು ದೊಡ್ಡಸ್ಲೆ, ದೊಡ್ಡ ಬಸವ, ದೊಡುಸ್ಲು ಇತ್ಯಾದಿ.

ಇದು ಬಿತ್ತನೆ ಮಳೆ. ದಕ್ಷಿಣ ಕರ್ನಾಟಕದ ಬಹು ಭಾಗದಲ್ಲಿ ಬೀಜ ಬಿತ್ತನೆಗೆ ಈ ಮಳೆ ಶ್ರೇಷ್ಠವೆಂದು ಪರಿಗಣಿಸಲಾಗಿದೆ.

ಪುಬ್ಬೆ ಅಥವಾ ಉಬ್ಬೆ:

ಗೌರಿ ಹಬ್ಬಕ್ಕೂ ಮಗೆ-ಉಬ್ಬೆ ಮಳೆಗಳಿಗೂ ಹತ್ತಿರದ ನಂಟು. ತವರು ಮನೆಗೆ ಅರ್ಥಾತ್ ಭೂಮಿಗೆ ಬರುವ ಗೌರಮ್ಮ ಮಗೆ ಹೊತ್ತುಕೊಂಡು ಹುಬ್ಬೆ ತುಳುಕೊಂಡು ಬರುತ್ತಾಳೆ ಎಂದು ರೈತಾಪಿ ಹೆಣ್ಣುಮಕ್ಕಳು ಹೇಳುತ್ತಾರೆ. ಗೌರಿಹಬ್ಬದ ಸಂದರ್ಭದಲ್ಲಿ ಒಂದೆರಡು ಹನಿಯಾದರೂ ಮಳೆ ಬೀಳಬೇಕು, ಇದು ಗೌರಮ್ಮ ತವರಿನಿಂದ ಹೋಗುವಾಗ ಕಣ್ಣೀರಿಡುವುದರ ಸಂಕೇತ. ಮಳೆ ಬರದಿದ್ದರೆ ಗೌರಮ್ಮ ತವರಿನ ಮೇಲೆ ಸಿಟ್ಟು ಮಾಡಿಕೊಂಡು ಹೋಗುತ್ತಿದ್ದಾಳೆ ಎಂದು ನಂಬಿಕೆ ಇದೆ.

ಮಗೆ ಅಥವಾ ಮಖಾ

ಮಗೆ ಮಳೆಯ ಸಂದರ್ಭದಲ್ಲಿ ಮಲೆನಾಡಿನಾದ್ಯಂತ ಒಂದು ವಿಶಿಷ್ಟ ಆಚರಣೆಯಿದೆ. ಅದೇ ಮಗೆ ಮುಂಡುಗನನ್ನು ಹಾಗುವುದು. ಮಗೆ ಮಳೆ  ಬರುವ ಹೊತ್ತಿಗೆ ಭತ್ತ ನೆಟ್ಟಿ ಹಾಕಿ ೨೦-೨೫ ದಿನ ಕಳೆದಿರುತ್ತದೆ. ಬೆಳವಣಿಗೆ ಹಂತದಲ್ಲಿರುವ ಭತ್ತದ ತಾಕುಗಳಿಗೆ ಮುಂಡುಗನ ಗಿಡದ ಕೊಂಬೆಗಳನ್ನು ನೆಡುತ್ತಾರೆ. ಮುಂಡುಗ ಎಂಬುದು ನೀರಿನ ಒರತೆ ಇರುವ ಕಡೆ, ಹಳ್ಳದ ದಂಡೆಗಳಲ್ಲಿ ಬೆಳೆಯುವ ಪೊದೆಯಂತಹ ಗಿಡ. ಮಗೆ ಮಳೆ ಹುಟ್ಟುವ ಹಿಂದಿನ ದಿನ ಕೆಲವರು ಇದನ್ನು ಆಚರಿಸಿದರೆ ಬಹಳಷ್ಟು ಜನ ಮಳೆ ಅವಧಿಯ ಯಾವುದಾದರೊಂದು ದಿನ ನೆಡುತ್ತಾರೆ. ಬೆಳಗಿನ ಜಾವ ಸೂರ್ಯ ಹುಟ್ಟುವ ಮುಂಚೆ ನೆಟ್ಟು ಬರುವುದು ವಾಡಿಕೆ. ಬರಿ ಮೈಯಲ್ಲಿ ಹೋಗಿ ನೆಟ್ಟು ಬರಬೇಕೆಂತಲೂ ಹಿರಿಯರು ಹೇಳುತ್ತಾರೆ. ಹೀಗೆ ಮಾಡುವುದರಿಂದ ಮುಂಡುಗ ಹಾಕುವವನ ಆಯಸ್ಸು ಹೆಚ್ಚಾಗುತ್ತದಂತೆ. ಖಂಡುಗಕ್ಕೆ (ಭತ್ತದ ಗದ್ದೆಯ ನಿರ್ದಿಷ್ಟ ಪ್ರದೇಶ ) ಒಂದು ಮುಂಡುಗ ಹಾಕಿದರೆ ಶ್ರೇಯಸ್ಸು ಎಂಬ ರೂಢಿ ಮಾತು ಮಲೆನಾಡಿನಾದ್ಯಂತ ರೂಢಿಯಲ್ಲಿದೆ.

ಉತ್ತರೆ

ಇದು ಒಕ್ಕಲಿಗನಿಗೆ ಭಾಷೆ ಕೊಟ್ಟ ಮಳೆ. ಇದು ಬರದಿದ್ದರೆ ಮಕ್ಕಳು ಹೆತ್ತ ತಾಯಿಗೆ ಹಿಟ್ಟಿಕ್ಕುವುದಿಲ್ಲ (ಅನ್ನ ಹಾಕುವುದಿಲ್ಲ)  ಹಾಗಾಗಿ ಉತ್ತರೆ ಮಳೆ ಬಂದೇ ಬರುತ್ತದೆ ಎಂಬ ನಂಬಿಕೆ ರೈತರಲ್ಲಿದೆ. ಅತ್ಯಂತ ನಂಬಿಕಸ್ತ ಮಳೆ. ಬಿಸಿಲಿನ ಝಳ ಜಾಸ್ತಿ, ಹಾಗೆಯೇ ಮಳೆಯ ಆರ್ಭಟವೂ ಹೆಚ್ಚು. ಈ ಮಳೆಯ ಬಗೆಗೆ ಪ್ರಚಲಿತವಿರುವ  ಕಥೆ ಕುತೂಹಲಕರ.

ಉತ್ತರಾದೇವಿ ಎಂಬ ಹೆಣ್ಣು ಮಗಳಿಗೆ ಆಕೆಯ ಅತ್ತೆ ವಿಪರೀತ ಕಾತ ಕೊಡುತ್ತಿರುತ್ತಾಳೆ. ಆಕೆ ಕುಂತರೂ ತಪ್ಪು, ನಿಂತರೂ ತಪ್ಪು. ಆಕೆಯ ಗಂಡ ಮುತ್ತಿನ ವ್ಯಾಪಾರಿ. ಸದಾ ವ್ಯಾಪಾರದ ಓಡಾಟದಲ್ಲಿ ನಿರತ. ಹಾಗಾಗಿ ಹೆಂಡತಿಯ ಕಡೆ ಗಮನಹರಿಸಲು ಪುರುಸೊತ್ತಿಲ್ಲ. ಒಂದು ದಿನ ಅತ್ತೆಯು ಸೊಸೆಗೆ ಮೊಂಡು ಮಚ್ಚು, (ಹರಿತವಿಲ್ಲದ  ಮಚ್ಚು) ಗಂಟ್ಲು ಹಗ್ಗ ಕೊಟ್ಟು  ಕಾಡಿಗೆ ಸೌದೆ ತರಲು ಕಳಿಸುತ್ತಾಳೆ. ಮನೆಗೆ ಬಂದ ಮಗನಿಗೆ ಸೊಸೆಯ ಕುರಿತು ಚಾಡಿ ಹೇಳುತ್ತಾಳೆ. ತಾಯಿಯ ಚಾಡಿ ಮಾತಿನಿಂದ ಸಿಟ್ಟಾದ ಗಂಡ ಕಾಡಿಗೆ ಹೋಗಿ ಇನ್ನೇನು ಹೆಂಡತಿಗೆ ಹೊಡೆಯಬೇಕೆನ್ನುವಷ್ಟರಲ್ಲಿ ಆತನೇ ಜೀವ ಕಳೆದುಕೊಳ್ಳುತ್ತಾನೆ. ಇದನ್ನು ಕಂಡು ದಿಗ್ಭ್ರಮೆಗೊಂಡ ಉತ್ತರಾದೇವಿ ಗಂಡನ ಶವವನ್ನು ಇಟ್ಟುಕೊಂಡು ಶೋಕಿಸುವಾಗ ಶಿವ ಪಾರ್ವತಿಯರು ಬಂದು ಜೀವಗಾಳಿಯನ್ನು ನೀಡಿ ಆತನನ್ನು ಬದುಕಿಸುತ್ತಾರೆ. ಉತ್ತರೆಯು ತನ್ನ ಕಷ್ಟವನ್ನೆಲ್ಲಾ

ಶಿವ-ಪಾರ್ವತಿಯರಿಗೆ ಹೇಳಿದಾಗ ಅವರು ಅತ್ತೆಯ ಕಾಟದಿಂದ ರೋಸಿಹೋದ ನೀನು ಮಳೆಯಾಗಿ ರೂಪತಾಳು ಎನ್ನುತ್ತಾರೆ. ಉತ್ತರಾದೇವಿ ಉತ್ತರೆ ಮಳೆಯಾಗುತ್ತಾಳೆ.

ವಿಷಯ ತಿಳಿದ ಅತ್ತೆ ಸುಮ್ಮನಾಗುವುದಿಲ್ಲ. ಆಕೆಯೂ ಇನ್ರ್ನೆಂದು ಮಳೆಯಾಗಿ ರೂಪತಾಳಿ ಅತ್ತೆಯ ಬೆನ್ನು ಹತ್ತುತ್ತಾಳೆ. ಅದೇ ಹಸ್ತ ಅಥವಾ ಅತ್ತೆ ಮಳೆ. ಉತ್ತರೆ ಮಳೆ ನಂತರವೇ ಅತ್ತೆ ಮಳೆ ಬರುತ್ತದೆ. ಈ ಉತ್ತರಾದೇವಿ ಕಥೆ ಹಳ್ಳಿಗಳಲ್ಲಿ ಬಲು ಜನಪ್ರಿಯ. ಇದನ್ನು ವಿವರಿಸುವ ಸುಧೀರ್ಘ ಕಥನ ಕಾವ್ಯಗಳೇ ಇವೆ. ರಾಗಿ ಬೀಸುವಾಗ, ಕಳೆ ತೆಗೆಯುವಾಗ ಗುಂಪಿನಲ್ಲಿ ಇದನ್ನು ಹಳ್ಳಿಹೆಣ್ಣುಮಕ್ಕಳು ಹಾಡುತ್ತಾರೆ. ದಕ್ಷಿಣ ಕರ್ನಾಟಕದ ಅತಿ ಮುಖ್ಯ ಜಾನಪದ ವ್ಯಕ್ತಿಯಾದ ಕರಿಭಂಟನೇ ಉತ್ತರಾದೇವಿಯ ಗಂಡ ಎನ್ನುವ ಮತ್ತೊಂದು ಕಥೆಯೂ ಇದೆ.

ಹಸ್ತ ಅಥವಾ ಅತ್ತೆ

ದಕ್ಷಿಣ ಕರ್ನಾಟಕದಲ್ಲಿ ಅತ್ತೆ ಮಳೆ ವಂಗಲು ಎಂಬ ಆಚರಣೆ ಈ ಮಳೆಯಲ್ಲಿ ನಡೆಯುತ್ತದೆ. ಹೊಲದ ಬಯಲಲ್ಲೇ ನಡೆಯುವ ಕ್ರಿಯೆ ಇದು. ಬೆಳೆದು ನಿಂತ ಬೆಳೆಗಳಿಗೆ ದೃಷ್ಟಿಯಾಗದಿರಲಿ, ಕಣ್ಣೆಸರಾಗದಿರಲಿ ಎಂಬ ಕಾರಣದಿಂದ ಈ ಆಚರಣೆ. ಕೆಲವರು ಈ ಸಂದರ್ಭದಲ್ಲಿ ಬಲಿ ಕೊಡುತ್ತಾರೆ, ಕೆಲವರು ಕೆಂಪನ್ನ, ತಂಗಳು ಅಡಿಗೆಯನ್ನು ಹೊಲಗಳಿಗೆ ಎರಚುತ್ತಾರೆ.

ಆದ್ರಿ ಮಳೆ ಹಬ್ಬ

ಜೂನ್ ತಿಂಗಳಿನಲ್ಲಿ ಬರುವ ಆದ್ರಿ ಬಿರುಸಿನ ಮಳೆ. ಅದರಲ್ಲೂ ಮಲೆನಾಡಿನಲ್ಲಿ ಇದರ ಆರ್ಭಟ ವಿಪರೀತ. ನೆಲ-ಮುಗಿಲು ಒಂದಾಗುವಂತೆ ಸುರಿಯುವ ಈ ಮಳೆಯಲ್ಲಿ ಮಲೆನಾಡಿಗರು ವಿಶಿಷ್ಟ ಹಬ್ಬ ಆಚರಿಸುತ್ತಾರೆ. ದಂಡಾಡಿ ಬಂದವರಿಗೊಂದು ಎಡೆ ಇಡುವ ಈ ಹಬ್ಬದಲ್ಲಿ ಹಲಸಿನ ಹಣ್ಣು ಮತ್ತು ಕೋಳಿಸಾರು ವಿಶೇಷ ಭಕ್ಷ್ಯಗಳು. ಹೆಚ್ಚಾಗಿ ದೀವರ ಜನಾಂಗದವರು ಇದನ್ನು ಆಚರಿಸುತ್ತಾರೆ. ಇದು ಅವರಿಗೆ ಸಂಭ್ರಮದ ಆಚರಣೆ. ನೆಂಟರಿಷ್ಟರು, ಆಪ್ತರು, ಮದುವೆಯಾಗಿ ಹೋಗಿರುವ ಹೆಣ್ಣುಮಕ್ಕಳು ಹಬ್ಬಕ್ಕೆ ಬರುವುದರಿಂದ ಎಲ್ಲರ ಸಂಭ್ರಮ ದುಪ್ಪಟ್ಟಾಗುತ್ತದೆ. ಇದೊಂದು ಸಾಮೂಹಿಕ ಹಾಗೂ ಕೌಟುಂಬಿಕ ಆಚರಣೆ. ಈ ಹಬ್ಬ ಮಾಡುವ ಹೊತ್ತಿಗೆ ಹೊಲದಲ್ಲಿ ಬಿತ್ತನೆಯಾದ ಬೀಜ ಮೊಳಕೆಯೊಡೆದು ಸಸಿಯಾಗಿರುತ್ತದೆ.

ಹಬ್ಬದ ದಿನ ಊರ ಗಂಡುಮಕ್ಕಳು ಸುರಿವ ಮಳೆ, ರಭಸ ಗಾಳಿಯನ್ನೂ ಲೆಕ್ಕಿಸದೆ ಮುಖಕ್ಕೆ ಗ್ರಾಮದೇವತೆಯ ಹಾಗೂ ದೀವರ ದೈವವಾದ ಕುಮಾರರಾಮನ ಮುಖವಾಡ ಧರಿಸಿ ಬೀದಿ-ಬೀದಿಯಲ್ಲಿ ಮೆರವಣಿಗೆ ಹೊರಡುತ್ತಾರೆ. ತಂತಮ್ಮ ಮನೆ ಮುಂದೆ ಮೆರವಣಿಗೆ ಬಂದಾಗ ಹೆಣ್ಣುಮಕ್ಕಳು ಆರತಿ ಬೆಳಗುತ್ತಾರೆ. ಮೆರವಣಿಗೆಯ ಜೊತೆಯಲ್ಲೆ ನಡೆಯುವ ಯುವಕರ ಡೊಳ್ಳು ಕುಣಿತ ಮತ್ತೊಂದು ಪ್ರಮುಖ ಆಕರ್ಷಣೆ ಮತ್ತು ರೋಮಾಂಚನ ಹುಟ್ಟಿಸುವ ದೃಶ್ಯ. ಗುಡುಗಿನ ಸದ್ದನ್ನೂ ಮರೆಮಾಚುವ ಡೊಳ್ಳಿನ ಮೊರೆತ, ಕುಣಿತಗಾರರ ಲಯಬದ್ದ ಹೆಜ್ಜೆ, ಮುಗಿಲು ಮುಟ್ಟುವ ಕೇಕೆಯನ್ನು ನೋಡುವುದು ಒಂದು ಅಪೂರ್ವ ಅನುಭವ. ಕಾಲಡಿ ಹರಿಯುವ ಕೆನ್ನೀರು ಮುಗಿಲಿಂದ ಬೀಳುವ ಮಳೆ ಹನಿಗಳು ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡುತ್ತವೆ. ಸುರಿವ ಮಳೆಯಲ್ಲಿ ಹಬ್ಬ ಮಾಡುವ ಕಲ್ಪನೆಯೇ ವಿಶಿಷ್ಟ.

ಮೆರವಣಿಗೆ ಮುಗಿದು ಪೂಜೆ ಮಾಡಿ ಭಕ್ತರು ತಮ್ಮ ಹರಕೆ ಪೂರೈಸುತ್ತಾರೆ. ಗ್ರಾಮದ ಒಳಿತನ್ನು ಕೋರಿ ಕುರಿ-ಕೋಳಿ ಬಲಿ ನೀಡಲಾಗುತ್ತದೆ.  ಅದೇ ದಿನ ಸಂಜೆ ನಡೆಯುವ ಮತ್ತೊಂದು ವಿಶೇಷ ಕ್ರಿಯೆ ಕೊಂಡ ಹಾಯುವುದು. ಈ ಕ್ರಿಯೆಗೆ ಬಿಂಗಿ ಎನ್ನುತ್ತಾರೆ. ನಿಗಿ-ನಿಗಿ ಹೊಳೆಯುವ ಕೆಂಡದ ರಾಶಿಯ ಮೇಲೆ ಭಕ್ತಾದಿಗಳು, ಡೊಳ್ಳು ಕುಣಿತಗಾರರು ಶ್ರದ್ಧೆಯಿಂದ ನಡೆಯುತ್ತಾರೆ. ಮಲೆನಾಡಿನ ಶ್ರೀಮಂತ ಜನಪದ ಪರಂಪರೆಯ ಪ್ರತೀಕ ಈ ಆದ್ರಿ ಮಳೆ ಹಬ್ಬ.

ಹಿಂದೆ ಈ ಹಬ್ಬ ಕುಮಾರರಾಮನ ವಿಜಯದ ಸಂಕೇತವಾಗಿ ಆಚರಣೆಗೆ ಬಂದಿದೆ ಎಂಬ ಐತಿಹ್ಯವಿದ್ದರೂ ಸಹ ಕ್ರಮೇಣ ತನ್ನ ಸ್ವರೂಪ ಬದಲಿಸಿಕೊಂಡು ಈಗ ಗ್ರಾಮದ ಹಬ್ಬವಾಗಿ ಮಾರ್ಪಟ್ಟಿದೆ. ೧೩ ನೇ ಶತಮಾನದಲ್ಲಿ ಬಳ್ಳಾರಿಯ ಕಂಪ್ಲಿಯನ್ನು ಬೇಡರ ಅರಸ ಕುಮರ್ರ್ರ್ರ್ರ್‌ರರಾಮ ಆಳುತಿದ್ದ. ಮೊಘಲ್ ದೊರೆಗಳ ಜೊತೆ ನಡೆದ ಕದನದಲ್ಲಿ ವೀರಾವೇಶದಿಂದ ಹೋರಾಡಿ ಮಡಿಯುತ್ತಾನೆ. ಮಲೆನಾಡಿನ ಹಳೆಪೈಕದವರು ಆತನ ಸೈನ್ಯದಲ್ಲಿರುತ್ತಾರೆ, ಅವರು ಕುಮಾರರಾಮನ ಮುಖವಾಡ ಮಾಡಿ ಪೂಜಿಸುವ ಕ್ರಿಯೆ ಶುರುಮಾಡುತ್ತಾರೆ. ಆದ್ರಿ ಮಳೆಯ ಸಂದರ್ಭದಲ್ಲಿ ಆಚರಿಸುವ ಈ ಹಬ್ಬದಲ್ಲಿ ಯುದ್ಧಕ್ಕೆ ಹೋಗುವ, ಬೆಂಕಿಗೆ ಹಾರುವ ಸಾಂಕೇತಿಕ ಆಚರಣೆಗಳನ್ನು ನಡೆಸುತ್ತಾರೆ. 

ಶಿವಮೊಗ್ಗ ಜಿಲ್ಲೆ ಸಾಗರ-ಸೊರಬ ತಾಲೂಕುಗಳಲ್ಲಿ ಈ ಹಬ್ಬದ ಖದರು ಜೋರು.

ಈ ರೀತಿ ಪ್ರತಿಯೊಂದು ಮಳೆಯ ಬಗೆಗೂ ಅದರದೇ ಆದ ನಂಬಿಕೆಗಳಿದ್ದು, ಕೆಲವು ಮಳೆಗಳ ಬಗ್ಗೆ ಸಾಮೂಹಿಕವಾದ ಮತ್ತು ವೈಯಕ್ತಿಕ ನೆಲೆಯ ಆಚರಣೆಗಳನ್ನು ಕಾಣಬಹುದು.

ಮಳೆ ಶಾಸ್ತ್ರಗಳು

ಉಳುಮೆ, ಬಿತ್ತನೆ, ನಾಟಿ, ಅಂತರ ಬೇಸಾಯ ಮುಂತಾದ ಪ್ರಮುಖ ಕೃಷಿ ಕೆಲಸಗಳು ಆಗಬೇಕಾದ ಸಮಯದಲ್ಲಿ ಹದವಾಗಿ ಮಳೆಯಾಗದಿದ್ದರೆ ರೈತರ ಪಾಡು ಹೇಳ ತೀರದು. ಸಕಾಲಕ್ಕೆ ಬೀಜ ಭೂಮಿಗೆ ಬೀಳದಿದ್ದರೆ ಮುಂದಿನ ದಿನಗಳಲ್ಲಿ ತಾವು ಮತ್ತು ತಮ್ಮನ್ನು ಆಶ್ರಯಿಸಿದ ಜೀವಾದಿಗಳ ಸ್ಥಿತಿಯನ್ನು ನೆನೆದೇ ಆತನಿಗೆ ದಿಗಿಲಾಗುತ್ತದೆ. ಮಳೆ ಬಾರದಿದ್ದುದಕ್ಕೆ ಕಾರಣವೇನಿರಬಹುದು ಎಂಬ ಜಿಜ್ಞಾಸೆ ಕಾಡತೊಡಗುತ್ತದೆ. ದೇವರು ಕೋಪಗೊಂಡಿರಬಹುದು ಅಥವಾ ತಮ್ಮಿಂದ ಯಾವುದೋ ಅಚಾತುರ್ಯವಾಗಿರಬಹುದು ಎಂದು ಚಿಂತಿಸುವ ಅವರು ಅವುಗಳ ಪರಿಹಾರಕ್ಕೆ ನಾನಾ ವಿಧವಾದ ಆಚರಣೆಗಳ ಮೊರೆ ಹೋಗುತ್ತಾರೆ. ಶಾಸ್ತ್ರ ಕೇಳುವುದು, ಪೊರ ಮಾಡುವುದು, ಭಜನೆ ಮಾಡುವುದು, ಕಥೆ ಓದಿಸುವುದು ಮುಂತಾದ ಅನೇಕ ವಿಧಿ-ವಿಧಾನಗಳಿಗೆ ಜೀವ ಬರುತ್ತದೆ. ಈ ಆಚರಣೆಗಳನ್ನು ಎಲ್ಲ ಪ್ರದೇಶಗಳಲ್ಲಿಯೂ ಕಾಣಬಹುದು. ಕೆಲವುಗಳ ಆಚರಣಾ ವಿಧಾನ ಬೇರೆ-ಬೇರೆಯಾಗಿದ್ದರೂ ಸಹ ಉದ್ದೇಶ ಮಾತ್ರ ಒಂದೇ ಆಗಿರುತ್ತದೆ.

ವೈವಿಧ್ಯಮಯ ಮಳೆ ಶಾಸ಼ಗಳ ವಿವರ ಇಲ್ಲಿದೆ.

ಮಳೆಗಾಗಿ ಭಿಕ್ಷೆ:

ಉತ್ತರ ಕರ್ನಾಟಕದಲ್ಲಿ ನಡೆಯುವ ವಿಶೇಷ ಆಚರಣೆ. ಮಳೆ ಬಾರದಿದ್ದಾಗ ಓಣಿ-ಓಣಿ ತಿರುಗಿ ಜೋಳಿಗಿ ಹಾಕಿಕೊಂಡು ಭಿಕ್ಷೆ ಬೇಡುವ ಆಚರಣೆ ವಿಶೇಷವಾಗಿದೆ. ಭಿಕ್ಷೆ ಬೇಡಿದರೆ ಮಳೆ ಬರುತ್ತದೆ ಎಂಬ ಧೃಢ ನಂಬಿಕೆ ಈ ಆಚರಣೆಗೆ ಮೂಲ ಕಾರಣ. ಮುಖ್ಯವಾಗಿ ಊರಿನ ಯುವಕರು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಎಂಟಾನೆಂಟು ದಿವಸ ಮಳೆ ಬಾರದಿದ್ದಾಗ ಯುವಕರು ಒಂದೆಡೆ ಸೇರಿ ಒಬ್ಬನಿಗೆ ಸೀರೆ ಉಡಿಸಿ ಕುಪ್ಪಸ ತೊಡಿಸಿ, ಬಳೆ ಹಾಕಿ ಕುಂಕುಮ ಇಟ್ಟು ಹೆಣ್ಣಿನ ರೂಪ ಧರಿಸುತ್ತಾರೆ. ಆತ ಒಂದು ಕೈಯಲ್ಲಿ ಕೋಲು, ಮತ್ತೊದು ಕೈಯಲ್ಲಿ ನೀರು ತುಂಬಿದ ಗಡಿಗೆ ಹಿಡಿದು ಕಂಕುಳಲ್ಲಿ ಮಗುವೊಂದನ್ನು ಎತ್ತಿಕೊಂಡು ಭಿಕ್ಷೆ ಬೇಡುವ ಹೆಂಗಸಿನಂತೆ ಬೀದಿಗೆ ಹೊರಡುತ್ತಾನೆ. ಆತನ ಹಿಂದೆ ಉಳಿದವರೆಲ್ಲಾ ಹೊರಡುತ್ತಾರೆ. ಮನೆ-ಮನೆಯ ಮುಂದೆ ನಿಂತು ದೊಡ್ಡ ಗಂಟಲಿನಲ್ಲಿ, 

ಯವ್ವ ನೀಡವ್ವ, ಯಕ್ಕ ನೀಡವ್ವ,

ಮಕ್ಕಳು ಮರಿ ಹಸಗೊಂಡಾವೆ,

ಮೂರು ದಿನದಿಂದ ಅನ್ನ ನೀರು ಕಂಡಿಲ್ಲ,

ಯವ್ವ ನೀಡವ್ವ, ಯಕ್ಕ ನೀಡವ್ವ

ನಿಮ್ಮ ಮನಿ ತಣ್ಣಗಿರತೈತಿ,

ನಿಮ್ಮ ಮಕ್ಕಳು ಮರಿಗೆ ಪುಣ್ಯ ಬರತೈತಿ

ಎಂದು ಹಾಡುತ್ತಾರೆ.

ಹೀಗೆ ಮನೆ ಭೇಟಿ ಮಾಡುವಾಗ ಒಂದು ಕುತೂಹಲಕಾರಿ ಅಂಶವಿದೆ. ಪ್ರತಿಯೊಂದು ಮಳೆಯೂ ಒಂದೊಂದು ಜನಾಂಗದ ಮನೆಯಲ್ಲಿ ವಾಸವಾಗಿರುತ್ತದೆ ಎಂಬ ನಂಬಿಕೆ; ಉದಾಹರಣೆಗೆ ಅಶ್ವಿನಿಯು ಹೂಗಾರರ ಮನೆ, ಕೃತ್ತಿಕೆಯು ತಳವಾರರ ಮನೆ, ಭರಣಿಯು ಅಗಸರ ಮನೆ, ರೋಹಿಣಿಯು ಬಣಜಿಗರ ಮನೆ, ಮೃಗಶಿರವು ಕ್ವಾಮಟರ (ವೈಶ್ಯ) ಮನೆಯಲ್ಲಿ ವಾಸವಾಗಿರುತ್ತದಂತೆ. ಉತ್ತರ ಕರ್ನಾಟಕದಲ್ಲಿ ಅತ್ಯಂತ ನಂಬಿಕಸ್ತ ಮಳೆಯಾದ ಮೃಗಶಿರವು  ಕ್ವಾಮಟರ ಮನೆಯಲ್ಲಿ ಇದ್ದರೆ ಅದು ಅಲ್ಲಿಂದ ಹೊರಬರುವುದು ಅಸಾಧ್ಯದ ಮಾತು, ಹೇಗಾದರೂ ಮಾಡಿ ಅದನ್ನು ಅಲ್ಲಿಂದ ಹೊರ ತರಬೇಕೆಂದು ಪಣತೊಟ್ಟು ಯುವಕರ ಗುಂಪು ಅವರ ಮನೆ ಮುಂದೆ ಹೋಗಿ ಮತ್ತದೇ ಹಾಡನ್ನು ಪುನರಾವರ್ತಿಸುತ್ತಾರೆ.

ಯವ್ವ ಸಣ್ಣ ಮಗು ಹಸಗೊಂಡೈತಿ

ನೀರು, ನೀರು ಅಂತ ಅಳತೈತಿ

ತುತ್ತು ಅನ್ನ, ಹನಿ ನೀರು ಹಾಕವ್ವ

ಎಂದು ಹೇಳಿದಾಗ ಆ ಮನೆಯವರು ಬೈಯುತ್ತಾ ಇವರಿಗೆ ಭಿಕ್ಷೆ ಹಾಕಲು ಹೊರಗೆ ಬಂದು ಮತ್ತೆ ಒಳ ಹೋಗುವಾಗ ನೀರು ತುಂಬಿದ ಗಡಿಗೆಯನ್ನು ದೊಪ್ಪನೆ ಎತ್ತಿ ಹಾಕಿ ಓಡಿ ಹೋಗುತ್ತಾರೆ.

ಗುರ್ಜಿ

ಇದೇ ಭಾಗದಲ್ಲಿರುವ ಮತ್ತೊಂದು ಮಳೆ ಆಚರಣೆ. ಇಲ್ಲೂ ಸಹ ಭಿಕ್ಷೆ ಬೇಡುವ ಕ್ರಿಯೆ ಇದೆ. ತಲೆಯ ಮೇಲೆ ಕಪ್ಪೆಯನ್ನು ಹೊತ್ತು ನೀರು ಸುರಿದುಕೊಳ್ಳುತ್ತಾ ಬೀದಿ-ಬೀದಿ ತಿರುಗಿ ಭಿಕ್ಷೆ ಬೇಡುತ್ತಾ ಮಳೆ ಕರೆಯುತ್ತಾರೆ. ಒಬ್ಬ ಯುವಕನ ತಲೆಯ ಮೇಲೆ ರೊಟ್ಟಿ ಹಾಕುವ ಹೆಂಚು(ಕಾವಲಿ) ಇಟ್ಟು, ಆ ಹೆಂಚಿನ ಮೇಲೆ ಸಗಣಿಯ ಉಂಡೆಯನ್ನಿಟ್ಟು ಅದರೊಳಗೆ ಒಂದು ಕಪ್ಪೆ ಇಡುತ್ತಾರೆ. ಇದೇ ಗುರ್ಜಿ. ಈ ಗುರ್ಜಿಯನ್ನೊತ್ತ ಯುವಕನನ್ನು ಮುಂದೆ ಬಿಟ್ಟು ಯುವಕರ ಗುಂಪು ತಾಟು, ಜೋಳಿಗೆ ಇತ್ಯಾದಿಗಳನ್ನಿಡಿದು ಆತನನ್ನು ಹಿಂಬಾಲಿಸುತ್ತಾರೆ. ಮೆರವಣಿಗೆ ಊರವರ ಮನೆಯ ಮುಂದೆ ನಿಂತಾಗ

ಗುರ್ಜಿ, ಗುರ್ಜಿ ಎಲ್ಲಾಡಿ ಬಂದೆ

ಹಳ್ಳ-ಕೊಳ್ಳ ತಿರುಗ್ಯಾಡಿ ಬಂದೆ

ಹದ್ನಾರ ಎಮ್ಮಿ ಕಾಯಾಲಾರೆ

ಬಿಸಿ-ಬಿಸಿ ಸಗಣಿ ತುಳಿಯಾಲಾರೆ

ಬಣ್ಣ ಕೊಡ್ತಿನಿ ಬಾರೆಲೆ ಮಳೆಯೇ

ಸುಣ್ಣ ಕೊಡ್ತಿನಿ ಸುರಿಯಲೆ ಮಳೆಯೇ

ಹೀಗೆ ಸಾಗುವ ಹಾಡನ್ನೇಳುತ್ತಾ ಎಲ್ಲಾ ಮನೆಗಳನ್ನು ದಾಟಿ ಗರಗರನೆ ತಿರುಗುತ್ತಾ ಎಲ್ಲರಿಂದ ನೀರು ಹಾಕಿಸಿಕೊಂಡು, ಮನೆಯವರಿಂದ ಜೋಳ ಇತ್ಯಾದಿ ಹಾಕಿಸಿಕೊಂಡು ಮುಂದೆ ಸಾಗುತ್ತಾರೆ. ಈ ಕ್ರಿಯೆ ಸತತ ಐದು ದಿನ ಕಾಲ ನಡೆಯುತ್ತದೆ.

ಐದನೇ ದಿನ ಮನೆ-ಮನೆಯಿಂದ ಸಂಗ್ರಹಿಸಿದ ಕಾಳಿನಿಂದ ಅಡುಗೆ ಮಾಡಿ ಎಲ್ಲರಿಗೂ ಊಟ ಹಾಕುತ್ತಾರೆ.

ಎತ್ತಿನ ಶಾಸ್ತ್ರ

ಬೆಂಗಳೂರು ಗ್ರಾಮಾಂತರ, ಕನಕಪುರ ಮತ್ತು ಅದರ ಗಡಿಯಲ್ಲಿರುವ ತಮಿಳುಗನ್ನಡ ಹಳ್ಳಿಗಳಲ್ಲಿ ಪ್ರಚಲಿತವಿರುವ ಆಚರಣೆ. ತುಂಬಾ ದಿನ ಮಳೆ ಬಾರದಿದ್ದರೆ ಗ್ರಾಮಸ್ಥರು ಒಂದೆಡೆ ಸೇರಿ ಎತ್ತಿನ ಶಾಸ್ತ್ರ ಮಾಡುವ ತೀರ್ಮಾನ ತೆಗೆದುಕೊಳ್ಳುತ್ತಾರೆ. ಒಂದು ಎತ್ತನ್ನು ಪೂಜಿಸಿ ಅದನ್ನು ಸ್ವಲ್ಪ ದೂರ ನಡೆದಾಡಿಸುತ್ತಾರೆ. ಆ ಎತ್ತು  ಹಾಗೆ ನಡೆಯುವಾಗ ಬೇಗ ಗಂಜಲ ಹುಯ್ದರೆ ಬೇಗ ಮಳೆ ಬರುತ್ತದೆ ಎಂತಲೂ, (ಹತ್ತಿರದ ಮಳೆ) ಅದಕ್ಕೆ ಬದಲಾಗಿ ತುಂಬಾ ಹೊತ್ತಿನ ನಂತರ ಗಂಜಲ ಹುಯ್ದರೆ ತಡವಾಗಿ ಮಳೆ ಬರುತ್ತದೆ (ದೂರದ ಮಳೆ) ಎಂತಲೂ ತೀರ್ಮಾನಕ್ಕೆ ಬರುತ್ತಾರೆ.

ಮಳೆಯಪ್ಪ: ಇದೂ ಸಹ ಎತ್ತಿನ ಶಾಸ್ತ್ರ ಪ್ರಚಲಿತವಿರುವ ಭಾಗದಲ್ಲೇ ರೂಢಿಯಲ್ಲಿರುವ ಕ್ರಿಯೆ. ಎಕ್ಕದ ಎಲೆಯೊಂದನ್ನು ತಂದು ಅದನ್ನು ನೀರು ತುಂಬಿದ ತಂಬಿಗೆಯಲ್ಲಿ ಹಾಕಿ, ಒಂದು ಮಗುವನ್ನು ಅದರ ಮೇಲೆ ಕೂರಿಸಿ ಯಾವಾಗ ಮಳೆ ಬರುತ್ತದೆಂದು ಅಪ್ಪಣೆ ಕೇಳುತ್ತಾರೆ.

ಮಳೆ ದೇವರನ್ನು ಮಾಡುವುದು

ವಿಶೇಷವಾಗಿ ದಕ್ಷಿಣ ಕರ್ನಾಟಕದಲ್ಲಿ ಮಳೆ ದೇವರನ್ನು ಮಾಡುವುದು ರೂಢಿಯಲ್ಲಿದೆ. ಇದನ್ನು ಪೊರ ಮಾಡುವುದು ಎಂದೂ ಸಹ ಕರೆಯುತ್ತಾರೆ. ಜೇಡಿ ಮಣ್ಣಿನಲ್ಲಿ ಮಳೆ ದೇವರ ಮೂರ್ತಿಯೊಂದನ್ನು ಮಾಡಿ ಗ್ರಾಮಸ್ಥರು ಬೀದಿ-ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಎಲ್ಲರೂ ಒಟ್ಟಿಗೆ ಲಯಬದ್ಧವಾಗಿ ಹೇಳುವ ಅಥವಾ ಮಳೆಯನು ಕರೆಯುವ ಪದಗಳು ಆಕರ್ಷಕ ಮತ್ತು ಅರ್ಥಪೂರ್ಣ.

ಹುಯ್ಯೊ ಹುಯ್ಯೊ ಮಳೆರಾಯ ಹುವ್ವಿನ ತೋಟಕೆ ನೀರಿಲ್ಲ

ಬಾರೊ ಬಾರೊ ಮಳೆರಾಯ ಬಾಳೆ ತೋಟಕೆ ನೀರಿಲ್ಲ

ಕುಟ್ಟೋ ಕುಟ್ಟೊ ಮಳೆರಾಯ ಕಟ್ಟೆ-ಕೆರೆಯಲ್ಲಿ ನೀರಿಲ್ಲ

ಬಾರಪ್ಪೊ ಮಳೆರಾಯ ನೀನ್ ಬಂದರೆ ಬರವಿಲ್ಲ

ಎಂದು ಹಾಡುತ್ತಾ ಮನೆ-ಮನೆ ಸುತ್ತಿ ಬತ್ತೇವು (ಅಕ್ಕಿ, ಅಸೀಟು, ಬೇಳೆ, ಬೆಲ್ಲ ಇತ್ಯಾದಿ) ಸಂಗ್ರಹಿಸಿ ಕೊನೆಯ ದಿನ ಊರ ದೇವಸ್ಥಾನದ ಹತ್ತಿರ ಅಥವಾ ಊರ ಹೊರಗೆ ಅಡುಗೆ ಮಾಡಿ ಬಂದವರಿಗೆ ಅನ್ನ ಹಾಕುತ್ತಾರೆ.

ಮಾರಮ್ಮನ ಗಡಿ ದಾಟಿಸುವಿಕೆ: ಸಕಾಲದಲ್ಲಿ ಮಳೆ ಬಾರದಿದ್ದಾಗ ತುಮಕೂರು, ಚಿತ್ರದುರ್ಗ ಸೀಮೆಗಳಲ್ಲಿ ಪ್ರಚಲಿತವಿರುವ ಕುತೂಹಲಕರ ಆಚರಣೆ. ಈ ಭಾಗದಲ್ಲಿ ಗಡಿ ಮಾರಮ್ಮ ಎಂಬ ಹೆಸರಿನ ಬೊಂಬೆಯೊಂದನ್ನು ತಯಾರಿಸಿ ಊರವರೆಲ್ಲಾ ಸೇರಿ ಅದಕ್ಕೆ ಪೂಜೆ ಮಾಡಿ ತಮ್ಮ ಗ್ರಾಮದ ಗಡಿಯವರೆಗೂ ಕೊಂಡೊಯ್ದು ಗಡಿಯನ್ನು ದಾಟಿಸಿ ಪಕ್ಕದ ಗ್ರಾಮದ ಗಡಿಯೊಳಕ್ಕೆ ಇಟ್ಟು ಬರುತ್ತಾರೆ, ಹೀಗೆ ಮಾಡುವುದರಿಂದ ತಮ್ಮೂರಿಗೆ ಮಳೆ ಬರುತ್ತದೆ ಎಂಬ ಬಲವಾದ ನಂಬಿಕೆ ಇದೆ. ಈ ಸಂದರ್ಭದಲ್ಲಿ ಕೇವಲ ಬೊಂಬೆಯಷ್ಟೇ ಅಲ್ಲದೆ ಚಿಕ್ಕ ಗಾಡಿಯೊಂದರಲ್ಲಿ ಬಳಸಿ ಹಳೆಯದಾದ ವಸ್ತುಗಳಾದ ಹಾಗೂ ಅನಿಷ್ಟದ ವಸ್ತುಗಳೆಂದು ಪರಿಗಣಿಸುವ ಹಳೆಯ ಮೊರ, ಮೊಂಡು ಪೊರಕೆ, ಹಳೆಯ ಬುಟ್ಟಿ ಇತ್ಯಾದಿಗಳನ್ನು ಆ ಬೊಂಬೆಯ ಜೊತೆ ಇಟ್ಟುಕೊಂಡು ಮೆರವಣಿಗೆ ಮಾಡಿ-ಅದೂ ರಾತ್ರಿ ಹೊತ್ತು ಮೆರವಣಿಗೆ ಮಾಡಿ ಊರ ಗಡಿ ದಾಟಿಸುತ್ತಾರೆ.

ಸುತ್ತ-ಮುತ್ತಲ ಹಳ್ಳಿಗಳಲ್ಲಿ ಮಳೆ ಹುಯ್ದು ತಮ್ಮ ಗ್ರಾಮಕ್ಕೆ ಮಾತ್ರ ಮಳೆ ಬಾರದಿದ್ದಾಗ ನಮ್ಮೂರಿಗೆ ಕೇಡಾಗಿದೆ ಎಂದು ಭಾವಿಸಿ ಈ ಆಚರಣೆಯನ್ನು ಮಾಡುವುದು ವಾಡಿಕೆ.

ಮಳೆ ಬಾರದಿದ್ದಾಗ ಇಂತಹ ಹಲವಾರು ವೈವಿಧ್ಯಮಯ ಆಚರಣೆಗಳನ್ನು ನಾಡಿನ ಎಲ್ಲ ಭಾಗಗಳ ಗ್ರಾಮೀಣ ಪ್ರದೇಶಗಳಲ್ಲಿ ಕಾಣಬಹುದು, ಕೆಲವೆಡೆ ಮಳೆ ಹೆಚ್ಚಾದಾಗ ಅದರ ರಭಸ ಕಡಿಮೆಯಾಗಲಿ, ಮಳೆ ಸಂಪೂರ್ಣ ನಿಲ್ಲಲಿ ಎಂಬ ಉದ್ದೇಶದಿಂದ  ಕೆಲವು ಆಚರಣೆಗಳನ್ನು ಮಡುತ್ತಾರೆ. ಹೋಗು ಎಂಬರ್ಥ ಬರುವಂತೆ ಬಾಯಲ್ಲಿ ವಿಚಿತ್ರ ಸದ್ದು ಹೊರಡಿಸುತ್ತಾ ಒಲೆಯ ಕೆಂಡವನ್ನು ಮನೆ ಮುಂದೆ ನಿಂತು ಮೇಲಕ್ಕೆ ಎಸೆಯುತ್ತಾರೆ.

ಜೋಕುಮಾರನ ಹಬ್ಬ

ಭಾದ್ರಪದ ಶುದ್ಧ ಅಷ್ಟಮಿಯ ದಿನ ಜೋಕುಮಾರನು ಬಂದು ಒಕ್ಕಲು ಮಕ್ಕಳಿಗೆ ಉತ್ತರಿ ಮಳೆ ತರುವನೆಂಬ ನಂಬುಗೆಯಿದೆ. ಆತ ಚತುರ್ದಶಿಯ ದಿನ ತಾನು ಬಂದ ಕಾರ್ಯ ಮುಗಿಸಿ ಹೊರಡುವ ಮುನ್ನ ಮನೆ-ಮನೆಗೆ ಭೇಟಿ ನೀಡಿ ಜೋಳದ ನುಚ್ಚು ಕೊಟ್ಟು ಹೋಗುತ್ತಾನೆ, ಅದನ್ನು ಹೊಲದಲ್ಲಿ ಬಿತ್ತಿದರೆ ಜೋಳದ ಫಸಲು ಹುಲುಸಾಗುತ್ತದೆಯಂತೆ. ಈ ಸಂದರ್ಭದಲ್ಲಿ ಬೆಸ್ತ ಹೆಣ್ಣು ಮಕ್ಕಳು ಬುಟ್ಟಿಯಲ್ಲಿ ಬೇವಿನ ಸೊಪ್ಪಿನ ಸಂಗಡ ಮಣ್ಣಿನ ಮೂರ್ತಿಯೊಂದನ್ನು ಇಟ್ಟುಕೊಂಡು ಮನೆ-ಮನೆಗಳಿಗೆ ತಿರುಗಿ ಪದ ಹೇಳುತ್ತಾರೆ. ಜೋಕುಮಾರ ಕುದುರೆ ಏರಿ ಸಂಚರಿಸುತ್ತಾ ಭೂಮಿಗೆ ಮಳೆ ಬರಿಸುತ್ತಾನೆ, ಕೆರೆ-ಕಟ್ಟೆಗಳಿಗೆ ಜೀವ ತುಂಬುತ್ತಾನೆ ಎಂಬುದು ಅವರ ಪದಗಳ ಸಾರಾಂಶ.

ಈ ಹೆಣ್ಣು ಮಕ್ಕಳು ಬುಟ್ಟಿಯಲ್ಲಿ ಹೊತ್ತು ತರುವ ಮೂರ್ತಿ ಅಗಲವಾದ ಮುಖವನ್ನು ಹೊಂದಿದ್ದು ದೊಡ್ಡ ಕಣ್ಣುಗಳಿರುತ್ತವೆ, ಬಾಯಿ ಅಗಲವಾಗಿದ್ದು ತಲೆಗೆ ಕಿರೀಟವಿರುತ್ತದೆ. ಹಣೆಗೆ ಕುಂಕುಮವಿದ್ದು ಹುರಿಮೀಸೆ ನೋಡಲು ಅಕರ್ಷಕ.

ಜೋಕುಮಾರ ಪೌರಾಣಿಕ ವ್ಯಕ್ತಿ, ಅವನ ಹುಟ್ಟು-ಸಾವಿನ ಕುರಿತಾದ ಐತಿಹ್ಯ ಕುತೂಹಲಕಾರಿಯಾದದ್ದು. ಬೆಸ್ತ ಹೆಣ್ಣು ಮಕ್ಕಳ ಪದಗಳಲ್ಲಿ ಜೋಕುಮಾರನ ಜೀವನದ ಸಂಗತಿಗಳೂ ಸಹ  ಪ್ರಸ್ತಾಪವಾಗುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ;

ಜೋಕ ಮತ್ತು ಎಳೆಗೌರಿ ದಂಪತಿಗಳಿಗೆ ಬಹು ಕಾಲ ಮಕ್ಕಳಾಗದ ಕಾರಣ ಅವರು ಶಿವನನ್ನು ಪ್ರಾರ್ಥಿಸುತ್ತಾರೆ. ಆಗ ಶಿವನು ಒಬ್ಬ ಮಗನನ್ನು ಅನುಗ್ರಹಿಸುತ್ತಾನೆ. ಆದರೆ ಆ ಮಗುವಿಗೆ ಏಳೇ ದಿವಸಗಳ ಆಯಸ್ಸು ಇರುತ್ತದೆ. ಅದರೆ ಅವನದು ಶೀಘ್ರ ಬೆಳವಣಿಗೆ. ಹೀಗಿರಬೇಕಾದರೆ ಒಮ್ಮೆ ಮಳೆ ಹೋಗಿ ಇಟ್ಟ ಬೆಳೆಗಳೆಲ್ಲಾ ಒಣಗಲು ಪ್ರಾರಂಭಿಸುತ್ತವೆ. ಜನರ ಸಂಕಟ ಮುಗಿಲು ಮುಟ್ಟುತ್ತದೆ. ಆಗ ಜೋಕುಮಾರ ತನ್ನ ಕುದುರೆಯನ್ನೆರಿ ಹೊರಟು ಹೊಲಗದ್ದೆಗಳಲ್ಲಿ ಸಂಚರಿಸತೊಡಗುತ್ತಾನೆ. ಅವನು ತನ್ನ ಮೇಲು ಹೊದಿಕೆಯನ್ನು ಒಮ್ಮೆ ಜೋರಾಗಿ ಬೀಸಿದಾಗ ಅದರ ಸೆಳಕಿಗೆ ಚದುರಿದ ಮೋಡಗಳು  ಮಳೆ ಸುರಿಸುತ್ತವೆ. ಯತೇಛ್ಛವಾಗಿ ಬಿದ್ದ ಮಳೆಯಿಂದಾಗಿ ಬೆಳೆಗಳು ಸಮೃದ್ಧವಾಗಿ ಬೆಳೆಯುತ್ತವೆ. ಬತ್ತಿ-ಬರಿದಾದ ಕೆರೆಗಳು ತುಂಬಿ ಹರಿಯುತ್ತವೆ.

ಇದರಿಂದ ಸಂತಸಗೊಂಡು ಜೋಕುಮಾರನು ಹಾಗೇ ಹೊಲಗದ್ದೆಗಳಲ್ಲಿ ಅಡ್ಡಾಡುತ್ತಿದ್ದಾಗ ಲಾವಣ್ಯವತಿಯಾದ ಒಬ್ಬ ಯುವತಿಯನ್ನು ನೋಡುತ್ತಾನೆ. ಆಕೆ ಅಗಸರ ಯುವತಿ. ಅವಳನ್ನು ಇಷ್ಟಪಟ್ಟ ಜೋಕುಮಾರನನ್ನು ಸಹಿಸದ ಆ ಯುವತಿಯ ತಂದೆಯು ಜೋಕುಮಾರನ ತಲೆಯನ್ನು ಕತ್ತರಿಸಿ ನದಿಗೆ ಎಸೆದುಬಿಡುತ್ತಾನೆ. ಆ ತಲೆಯು ಒಬ್ಬ ಬೆಸ್ತರವನಿಗೆ ದೊರಕುತ್ತದೆ. ಆತನು ಜೋಕುಮಾರನನ್ನು ಗುರುತಿಸಿ, ತಮ್ಮ ಬೆಳೆಗಳನ್ನು ರಕ್ಷಿಸಿ ತಮ್ಮ ಬದುಕಿಗೆ ಆಧಾರವಾದ ಜೋಕುಮಾರನ ತಲೆಯನ್ನು ಊರಿಗೆ ತರುತ್ತಾನೆ. ಊರವರೆಲ್ಲಾ ಸೇರಿ ಜೋಕುಮಾರನಿಗೆ ಪೂಜೆ ಸಲ್ಲಿಸುತ್ತಾರೆ. ಅಂದಿನಿಂದ ಈ ಜೋಕುಮಾರನ ಪೂಜೆ ಆಚರಣೆಗೆ ಬಂತೆಂದು ಪ್ರತೀತಿ ಇದೆ. ಆಚರಣೆಯ ಸಂದರ್ಭದಲ್ಲಿ ಬೆಸ್ತ ಹೆಣ್ಣು ಮಕ್ಕಳು ಹೇಳುವ ಪದಗಳು ಬಹು ಅರ್ಥಗರ್ಭಿತವಾಗಿರುತ್ತವೆ. ಕೆಲವು ಸಾಲುಗಳನ್ನು ನೋಡುವುದಾದರೆ.

ಅಡ್ಡಡ್ಡ ಮಳೆ ಬಂದು ದೊಡ್ಡದೊಡ್ಡ ಕೆರೆ ತುಂಬಿ

ಗೊಡ್ಡುಗಳೆಲ್ಲಾ ಹೈನಾಗಿ ನಿನ್ನ ಕುಮಾರ್ನ ಗಡ್ಡಕ್ಕೆ ಬೆಣ್ಣೆಲ್ಲೊ ಜವಕುಮಾರ

ಮಡಿವಾಳರ ಕೇರಿ ಹೊಕ್ಕಾನೆ ಜೋಕುಮಾರ

ಮುಡಿ ತುಂಬಾ ಹೂ ಮುಡಿದಂತ ಚಲುವಿ ತನ್ನ ಮಡದಿಯಾಗಬೇಕಂದ ಸುಕುಮಾರ.

ಹಳ್ಳಿಗರ ಪ್ರಕಾರ ಮಳೆ ಬರಿಸುವವನು ದೇವೇಂದ್ರ ರಾಯ. ಅವನು ರಥದಲ್ಲಿ ಕುಳಿತು ಆಕಾಶ ಮಾರ್ಗದಲ್ಲಿ ಹೋಗುವಾಗ ಹೊಮ್ಮುವ ಶಬ್ದವೇ ಗುಡುಗು-ಸಿಡಿಲುಗಳು, ಅವನು ತನ್ನ ಕುದುರೆಗಳಿಗೆ ಹುರಿದುಂಬಿಸಲು ಬೀಸುವ ಛಾಟಿಯೇಟಿನ ಛಳಕೇ ಮಿಂಚು. ಮಳೆಯ ಬಗ್ಗೆ ಅವರು ಕಟ್ಟಿರುವ ಪುರಾಣ, ಹೇಳುವ ಕಥೆಗಳು, ಹಾಡುವ ಪದಗಳು, ಮಾಡುವ ಪೂಜೆಗಳು ಅಸಂಖ್ಯ. ಪ್ರತಿಯೊಂದು ಮಳೆಯ ಬಗ್ಗೆ, ಮಳೆಯ ಬರುವಿಕೆ-ಹೋಗುವಿಕೆಯ ಬಗ್ಗೆ ಅವರ ವಿಶ್ಲೇಷಣೆ ನೂರಾರು ವರ್ಷಗಳ ಅನುಭವದ ಸಾರ.

ಮಳೆಗಾದೆಗಳು

 • ಉಡಿಯ ಕಾಳಿಗಿಂತ ಹಿಡಿಯ ಕಾಳು ಉತ್ತಮ
 • ನಾಟಿ ಹಾಕಿದ ನೆಲ ಚೆಂದ ಮೇಟಿ ನೆಟ್ಟ ಕಣ ಚೆಂದ
 • ಹದ ನೋಡಿ ಹರಗು, ಬೆದೆ ನೋಡಿ ಬಿತ್ತು
 • ರೋಹಿಣಿ ಮಳೆಯಾದರೆ ಓಣಿಯೆಲ್ಲಾ ಜೋಳ
 • ಆರಿದ್ರ ಆದಾಂಗ ಹಿರಿ ಸೊಸಿ ಬಾಳಿವಿ ಮಾಡಿದಾಂಗ
 • ಮಗಿ ಮಳೆ ಬಂದರೆ ರೈತನಿಗೆ ಉಡಿದಾರ ಕಟ್ಟಿದಾಂಗ
 • ಉತ್ತರೆ ಮಳೆ ಉಟ್ಟಿದ್ದೆಲ್ಲ ಒದಿ
 • ಮುಂಗಾರು ಮಳೆಗೆ ಸಿಗಬೇಡ ಮರೆತು ಮಾತಿಗೆ ಸಿಗಬೇಡ