ಪುಟ್ಟಿ ಕಾಡಿಗೆ ಬಂದಿದ್ದಳು. ಇಕ್ಕಟ್ಟಾದ ಒಂದು ಹಾದಿಯಲ್ಲಿ ಅವಳು ನಡೆಯುತ್ತಿದ್ದಳು. ಕಾಡಿಗೆ ಅವಳು ಹೇಗೆ ಬಂದಳು? ಯಾವಾಗ ಬಂದಳು? ಯಾಕೆ ಬಂದಳು? ಅದು ಅವಳಿಗೇ ತಿಳಿಯದು. ಈ ಬಗ್ಗೆ ಅವಳು ಬಹಳ ಯೋಚಿಸಿದಳು. ಆದರೆ ಯಾವುದೂ ನೆನಪಿಗೆ ಬರುತ್ತಿಲ್ಲ. ಅವಳು ತನ್ನ ಮನೆಯಲ್ಲೇ ಇದ್ದಳು, ರಾತ್ರೆಯ ಊಟ ತೀರಿಸಿದ್ದಳು. ಅಜ್ಜಿ ಹೇಳಿದ ಕತೆ ಕೇಳುತ್ತಾ ಮಲಗಿದ್ದಳು. ಅಷ್ಟು ಮಾತ್ರ ಗೊತ್ತು ಅವಲಿಗೆ. ಉಳಿದ ಯಾವ ವಿಚಾರವೂ ಅವಳ ನೆನಪಿನಲ್ಲಿಲ್ಲ.

ಪುಟ್ಟಿ ಕಾಡಿನಲ್ಲಿ ಅಲೆಯುತ್ತಲೇ ಇದ್ದಳು. ಸಮಯ ಆಗಲೇ ಮುಸ್ಸಂಜೆಯಾಗಿತ್ತು. ಕಾಡಿನ ಹಕ್ಕಿಗಳೆಲ್ಲ ಗೂಡು ಸೇರಿದ್ದವು. ಎತ್ತರದ ಕೆಲವು ಮರಗಳಿಂದ ಹಕ್ಕಿಗಳ ಚಿಲಿಪಿಲಿ ಕೇಳಿಸುತ್ತಿತ್ತು. ಆಗೊಮ್ಮೆ ಈಗೊಮ್ಮೆ ಕಾಡು ಪ್ರಾಣಿಗಳ ಕೂಗು ಕೇಳಿಬರುತ್ತಿತ್ತು. ಉಳಿದಂತೆ ಎಲ್ಲವೂ ಮೌನ. ನಿಮಿಷ ನಿಮಿಷಕ್ಕೂ ಬೆಳಕು ಕಡಿಮೆಯಾಗುತ್ತಿತ್ತು. ಆದಷ್ಟು ಬೇಗ ಪುಟ್ಟಿ ಮನೆ ಸೇರಬೇಕು. ಆದರೆ ಮನೆ ಯಾವ ಕಡೆಗಿದೆ? ಮನೆಗೆ ಹೋಗುವ ದಾರಿ ಯಾವುದು? ತಾನೀಗ ಎತ್ತ ಸಾಗುತ್ತಿದ್ದೇನೆ? ಈ ಕಾಡು ಎಷ್ಟು ದೊಡ್ಡದಿದೆ? ಇದರಿಂದ ಹೊರ ಹೋಗುವುದು ತನಗೆ ಸಾಧ್ಯವಾದೀತೇ? ಅದು ಆಗದಿದ್ದರೆ ತನ್ನ ಗತಿ ಏನು? ಅವಳು ಯೋಚಿಸುತ್ತಲೇ ಇದ್ದಳು. ಮುಂದೆ ಮುಂದೆ ನಡೆಯುತ್ತಲೂ ಇದ್ದಳು.

ಅದು ಹುಣ್ಣಿಮೆಯ ರಾತ್ರಿಯಾಗಿತ್ತು. ಬಾನಲ್ಲಿ ಚಂದಮಾಮ ಬೆಳಗುತ್ತಿದ್ದನು. ಹೊರಗೆ ಹಾಲು ಚೆಲ್ಲಿದಂತೆ ತಿಂಗಳ ಬೆಳಕು ಹರಡಿತ್ತು. ಆದರೆ ಕಾಡಿನ ಮರಗಳು ಆ ಬೆಳಕನ್ನು ತಡೆಯುತ್ತಿದ್ದವು. ಹಾಗಾಗಿ ಕಾಡಿನೊಳಗೆ ಹೆಚ್ಚು ಬೆಳಕು ಇರಲಿಲ್ಲ. ದಾರಿ ಅಸ್ಪಟ್ಟವಾಗಿ ಕಾಣಿಸುತ್ತಿತ್ತು. ಪುಟ್ಟಿ ಅಲ್ಲಿ ಒಬ್ಬಂಟಿಯಾಗಿದ್ದಳು. ಅವಳು ಬೊಬ್ಬಿಟ್ಟರೂ ಅದನ್ನು ಕೇಳುವವರು ಯಾರೂ ಅಲ್ಲಿರಲಿಲ್ಲ. ಅವಳ ಸಹಾಯಕ್ಕೆ ಬರುವವರೂ ಇರಲಿಲ್ಲ. ಪುಟ್ಟಿಗೂ ಅದು ಗೊತ್ತು. ಅವಳು ಹೆದರಿದಳು. ಹಾಗೆ ಹೆದರಿ ಕೂತರೆ ಅವಳು ಮನೆ ಸೇರುವುದು ಸಾಧ್ಯವೇ? ಇಲ್ಲವಲ್ಲಾ? ಅವಳು ಮತ್ತೆ ಧೈರ್ಯ ತಂದುಕೊಂಡಳು “ಇಲ್ಲಿಂದ ಪಾರಾಗುವ ಬಗೆ ಹೇಗೆ?” ಅವಳು ಯೋಚಿಸಿದಳು.

“ಇಲ್ಲೇ ಎಲ್ಲಾದರೂ ಕೂತು ಬಿಡಬೇಕು; ಬೆಳಗಾಗುವ ತನಕ ಕಾಯಬೇಕು. ಆಮೇಲೆ ಊರ ಹಾದಿ ಕಂಡು ಹಿಡಿಯಬೇಕು.” ಅವಳು ನಿರ್ಧಾರಕ್ಕೆ ಬಂದಳು. ಮತ್ತೆ ಕಣ್ಣು ದೊಡ್ಡದು ಮಾಡಿ, ಸುತ್ತ ಮುತ್ತ ನೋಡಿದಳು. ಎದುರುಗಡೆ ದೊಡ್ಡದೊಂದು ಮರ ಕಾಣಿಸಿತು. ಅದು ಮಾವಿನ ಮರವೇ ಇರಬೇಕು ಎನಿಸಿತು ಅವಳಿಗೆ. ಆ ಮರದ ತುಂಬ ಹಣ್ಣುಗಳಿದ್ದವು. ಪುಟ್ಟಿ ಇನ್ನಷ್ಟು ಮುಂದಕ್ಕೆ ಬಂದಳು, ಮರದ ಬುಡ ಸೇರಿದಳು, ಎಚ್ಚರಿಕೆಯಿಂದ ಮತ್ತೆ ಸುತ್ತಮುತ್ತ ಕಣ್ಣಾಡಿಸಿದಳು.

ಮರದ ಪಕ್ಕದಲ್ಲೇ ಆನೆಯಂಥ ಬಂಡೆಯೊಂದು ನಿಂದಿತ್ತು. ಬಂಡೆಯ ಸಂದಿನಲ್ಲಿ ವಿಶಾಲವಾದ ಗುಹೆಯೊಂದು ಕಾಣಿಸಿತು. ಅವಳು ಅದರ ತೀರ ಹತ್ತಿರಕ್ಕೆ ಬಂದಳು, ಗುಹೆಯ ಒಳಗೆ ಇಣುಕಿ ನೋಡಿದಳು. “ಅರೆ ಅಲ್ಲಿ ಎರಡು ಮಿಣುಕು ಹುಳಗಳಂಥ ದೀಪಗಳಿವೆಯಲ್ಲ!” ಅವಳು ತನಗೆ ತಾನೇ ಹೇಳಿಕೊಂಡಳು. ಆಗಲೇ ಗುಹೆಯೊಳಗಿಂದ ಮಾತೊಂದು ಕೇಳಿ ಬಂತು- “ಯಾರದು?”

ಪುಟ್ಟಿಯ ಮೈ ರೋಮಗಳು ನಿಮಿರಿ ನಿಂತವು! ಆದರೂ ಕೇಳಿ ಬಂದ ಪ್ರಶ್ನೆಗೆ ಅವಳು ಉತ್ತರಕೊಟ್ಟಳು – “ನಾನು, ಪುಟ್ಟಿ.”

“ನೀನು ಎಲ್ಲಿಂದ ಬಂದೆ? ಯಾಕೆ ಬಂದೆ? ನಿನಗೆ ಇಲ್ಲೇನು ಕೆಲಸ?” ಮತ್ತೆ ದನಿ ಕೇಳಿಸಿತು.

ಪುಟ್ಟಿಗೆ ಸ್ವಲ್ಪ ಧೈರ್ಯ ಬಂತು. “ನೆರೆಯ ಹಳ್ಳಿಯವಳು ನಾನು. ರಾತ್ರೆ ಉಂಡು ಮಲಗುವ ತನಕ ಮನೆಯಲ್ಲೇ ಇದ್ದೆ ಅದು ಸರಿಯಾಗಿ ನೆನಪಿದೆ. ಆದರೆ ಈ ಕಾಡಿಗೆ ಹೇಗೆ ಬಂದೆ? ಯಾಕೆ ಬಂದೆ? ಅದು ನನಗೂ ತಿಳಿಯದು. ಎಷ್ಟು ಯೋಚಿಸಿದರೂ ನೆನಪಿಗೆ ಬರುತ್ತಿಲ್ಲ?” ತಡವರಿಸುತ್ತಲೇ ಹೇಳಿದಳು ಪುಟ್ಟಿ.

“ಅಯ್ಯೋ, ನೀನಿನ್ನೂ ಹೊರಗೆ ನಿಂತೇ ಇರುವೆಲ್ಲಾ? ಒಳಗೆ ಬಾ ಮಗೂ.  ಇಲ್ಲಿ ನಾನು ಸಹ ಒಬ್ಬಳೇ ಇದ್ದೇನೆ. ಒಳಗೆ ಬರಲು ಹೆದರಬೇಕಾಗಿಲ್ಲ. ಬಾ ಒಳಗಡೆಗೆ ಬಂದು ಬಿಡು” ದನಿ ಮತ್ತೆ ಕರೆಯಿತು. ಮಾತಿನ ರೀತಿ ಈಗ ಬದಲಾಗಿತ್ತು. ಮೊದಲಿನಂತೆ ಅದು ಒರಟಾಗಿರಲಿಲ್ಲ. ತುಂಬ ಮೆದುವಾಗಿತ್ತು.

ಪುಟ್ಟಿಯ ಅಂಜಿಕೆ ದೂರಾಯಿತು. ಧೈರ್ಯದಿಂದ ಅವಳು ಗುಹೆಯೊಳಗೆ ಕಾಲಿಟ್ಟಿಳು. ಗುಹೆಯ ಬಾಯಿ ದೊಡ್ಡದಾಗಿತ್ತು. ಮನೆಯ ಚಾವಡಿಯಂತೆ ಅದು ವಿಶಾಲವಾಗಿತ್ತು. ಒಳಗೆಲ್ಲ ಮಬ್ಬುಗತ್ತಲು ತುಂಬಿತ್ತು. ಕತ್ತಲಲ್ಲೇ ಪುಟ್ಟಿ ಕಣ್ಣರಳಿಸಿ ನೋಡಿದಳು. ಬೆಕ್ಕಿನ ಹಾಗಿನ ಪ್ರಾಣಿಯೊಂದು ಅಲ್ಲಿ ಕೂತಿತ್ತು. ಆದರೆ ಗಾತ್ರದಲ್ಲಿ ಅದು ತುಂಬ ದೊಡ್ಡದಿತ್ತು. ಮಬ್ಬುಗತ್ತಲಲ್ಲಿ ಕಣ್ಣುಗಳು ಫಳಫಳ ಹೊಳೆಯುತ್ತಿದ್ದವು.

“ಓಹ್‌, ಇದು ಹುಲಿಯ ಗವಿ. ಇದರ ಒಳಗಡೆಗೇ ನಾನು ಬಂದು ಬಿಟ್ಟಿದ್ದೇನೆ” ಪುಟ್ಟಿ ಮನಸ್ಸಿನಲ್ಲೇ ಅಂದುಕೊಂಡಳು. ಅಷ್ಟರಲ್ಲಿ ಆ ಪ್ರಾಣಿ ನರಳುವುದು ಕೇಳಿಸಿತು. ನಿಧಾನವಾಗಿ ಅದು ತನ್ನ ಮುಂಗಾಲುಗಳನ್ನು ಮುಂದೆ ಚಾಚಿತು; ಅವುಗಳ ಮೇಲೆ ತನ್ನ ತಲೆ ಇರಿಸಿ, ನಾಯಿಗಳು ಮಲಗುವಂತೆ ಮಲಗಿಸಿಕೊಂಡಿತು. “ನೋವುಮಗೂ, ನೋವು; ಕೈಕಾಲುಗಳಲ್ಲಿ ನೋವು; ಭಾರೀ ನಿಶ್ಯಕ್ತಿ, ಅತ್ತಿತ್ತ ಓಡಾಡಲಿಕ್ಕೂ ಆಗುವುದಿಲ್ಲ. ವಯಸ್ಸಾಯಿತು ನೋಡು” ಹುಲಿಯಜ್ಜಿ ಸಂಕಟ ತೋಡಿಕೊಂಡಳು.

ಪುಟ್ಟಿಗೆ ತನ್ನ ಅಜ್ಜಿಯ ನೆನಪಾಯಿತು. ಅವಳು ಸಹ ಆಗಾಗ ಹೀಗೇ ಹೇಳುತ್ತಿದ್ದಳು. ಕೈಕಾಲುಗಳನ್ನು ನೀವಿಕೊಳ್ಳುತ್ತಿದ್ದಳು. “ಉಸ್ಸಪ್ಪಾ” ಎಂದು ಅಲ್ಲಲ್ಲಿ ಕೂಡುತ್ತಿದ್ದಳು. ಕತೆ, ಹಾಡು ಹೇಳಿ ಮಕ್ಕಳನ್ನು ಖುಶಿಪಡಿಸುತ್ತಿದ್ದಳು. ಅವಳ ಹಾಗೆ ಈ ಅಜ್ಜಿ ಸಹ ಎನಿಸಿತು ಪುಟ್ಟಿಗೆ.

ಅಷ್ಟರಲ್ಲಿ “ಅಯ್ಯೋ ಮಗೂ, ನೀನಿನ್ನೂ ನಿಂತೇ ಇರುವೆಯಲ್ಲಾ! ನಿನ್ನ ಹಿಂದುಗಡೆ ನೋಡು. ಅಲ್ಲೊಂದು ಪೆಟ್ಟಿಗೆಯಂಥ ಕಲ್ಲು ಇದೆಯಲ್ಲಾ? ಅದರ ಮೇಲಾದರೂ ಕೂತು ಬಿಡು. ನಿನ್ನ ಮನೆಯಲ್ಲಿ ಇರುವ ಹಾಗೆ ಮೇಜು, ಕುರ್ಚಿ, ಮಂಚ, ಹಾಸಿಗೆ ಇವು ಯಾವುದೂ ಇಲ್ಲಿ ಇಲ್ಲ. ಈ ನೆಲ ಸಹ ಬೆಚ್ಚಗಿಲ್ಲ. ಹಾಗಾಗಿ ಆ ಕಲ್ಲಿನ ಮೇಲೆಯೇ ನೀನು ಕೂಡಬೇಕಷ್ಟೆ!” ಹುಲಿಯಜ್ಜಿ ಮತ್ತೆ ಹೇಳಿದಳು.

ಪುಟ್ಟಿ ಹಿಂದಕ್ಕೆ ನೋಡಿದಳು. ಪೆಟ್ಟಿಗೆಯಂಥ ಕಲ್ಲೊಂದು ಅಲ್ಲಿ ಕಾಣಿಸಿತು. ಪುಟ್ಟಿ ಅದರ ಮೇಲೆ ಕೂತುಕೊಂಡಳು. “ನೀನು ನಮ್ಮ ಮನೆಗೆ ಬಂದಿದ್ದೆಯಾ, ಅಜ್ಜೀ?” ಅವಳು ಅಜ್ಜಿಯನ್ನು ಕೇಳಿದಳು. ತಮ್ಮ ಮನೆಯಲ್ಲಿ ಮೇಜು, ಕುರ್ಚಿ, ಮಂಚ, ಹಾಸಿಗೆ ಇವೆಲ್ಲ ಇರುವುದು ಈ ಅಜ್ಜಿಗೆ ಹೇಗೆ ಗೊತ್ತು? ಎನ್ನುವ ಕುತೂಹಲ ಅವಳಿಗೆ.

“ಇಲ್ಲ ಮಗೂ, ನಾನು ನಿಮ್ಮ ಮನೆಗೆ ಬಂದಿಲ್ಲ. ಆದರೂ ನಿನ್ನ ಹಾಗಿನ ಬಹಳ ಮಂದಿಯನ್ನು ಕಂಡಿದ್ದೇನೆ, ನಿಮ್ಮವರ ಬಗ್ಗೆ ಬಹಳ ಸಂಗತಿಗಳನ್ನು ತಿಳಿದಿದ್ದೇನೆ.” ಅಜ್ಜಿ ಹೇಳಿದಳು, ತುಸು ಹೊತ್ತು ತಡೆದು ಅವಳು ಮತ್ತೆ ಮುಂದುವರಿಸಿದಳು, “ಕೆಲವು ಕಾಲ ನಾನೊಂದು ಸರ್ಕಸ್‌ ಕಂಪೆನಿಯಲ್ಲಿದ್ದೆ. ಆಗ ಕಂಪೆನಿಯೊಂದಿಗೆ ನಾನು ಹಲವಾರು ಊರುಗಳನ್ನು ಸುತ್ತಿದ್ದೆ. ಬಹಳ ಜನಗಳನ್ನು ಕಂಡಿದ್ದೆ. ಅವರ ಮಾತುಕತೆಗಳನ್ನು ಕೇಳಿದ್ದೆ. ಮನುಷ್ಯರ ಬಗ್ಗೆ ತುಂಬ ಸಂಗತಿಗಳನ್ನು ತಿಳಿದುಕೊಂಡಿದ್ದೆ. ನನ್ನ ಅದೃಷ್ಟ ಒಳ್ಳೆಯದಿತ್ತು. ಸರ್ಕಸ್‌ ಕಂಪೆನಿಯಿಂದ ತಪ್ಪಿಸಿಕೊಳ್ಳಲು ನನಗೊಂದು ಅವಕಾಶ ಸಿಕ್ಕಿಬಿಟ್ಟಿತು. ಅದನ್ನು ನಾನು ಬಳಸಿಕೊಂಡೆ; ಅಲ್ಲಿಂದ ತಪ್ಪಿಸಿಕೊಂಡು ಈ ಕಾಡಿಗೆ ಬಂದು ಬಿಟ್ಟೆ. ಅದೊಂದು ದೊಡ್ಡ ಸಾಹಸ. ಈಗಿನ ಪರಿಸ್ಥಿತಿಯಲ್ಲಿ ಅದನ್ನು ಊಹಿಸಲಿಲಕ್ಕೂ ಸಾಧ್ಯವಿಲ್ಲ. ಅದಿರಲಿ, ನೀನೀಗ ನನ್ನ ಮನೆಗೆ ಬಂದಿದ್ದೀಯಾ ನಿನಗೇನಾದರೂ ತಿನ್ನಲು ಕೊಡಬಹುದೆಂದರೆ ಇಲ್ಲೇನೂ ಇಲ್ಲವಲ್ಲಾ.. ಏನು ಮಾಡೋಣ? ಆಹಾಂ, ಈಗ ನೆನಪಿಗೆ ಬಂತು. ಇಲ್ಲೇ ಹೊರಗಡೆ ಮಾವಿನ ಹಣ್ಣುಗಳು ಬಿದ್ದಿರಬೇಕು. ನಾಲ್ಕೋ ಆರೋ ಹಣ್ಣುಗಳನ್ನು ಹೆಕ್ಕಿ ತಿಂದು ಬಿಡು. ಒಂದು ಬಾರಿಗೆ ನಿನ್ನ ಹಸಿವು ಹಿಂಗೀತು” ಅಜ್ಜಿ ಸಲಹೆ ನೀಡಿದಳು. ಪುಟ್ಟಿಗೆ ಅವಳು ತುಂಬ ಒಳ್ಳೆಯವಳಾಗಿ ಕಾಣಿಸಿದ

“ಬೇಡ ಅಜ್ಜೀ. .ನನಗೆ ಹಸಿವಿಲ್ಲ. ನನಗೇನೂ ಬೇಕಾಗಿಲ್ಲ. ಬೆಳಗಿನ ತನಕ ಆಸರೆ ಸಿಕ್ಕಿದರಾಯಿತು. ಮತ್ತೆ ನಾನು ಮನೆಗೆ ಹೋಗಿಬಿಡುತ್ತೇನೆ. ಸದ್ಯ ಬಹಳ ಆಯಾಸವಾಗಿದೆ. ಕಾಡಲ್ಲಿ ಅಲೆದು ಕಾಲುಗಳು ಸೋತು ಹೋಗಿವೆ. ಹಾಗಾಗಿ ಈ ಕಲ್ಲ ಮೇಲೆಯೇ ಕೂತಿರುತ್ತೇನೆ. ಬೆಳಗಾಗುವ ತನಕ ಹೇಗಾದರೂ ಪೇಚಾಡಿ ಸಮಯ ಕಳೆಯುತ್ತೇನೆ.” ಪುಟ್ಟಿ ಹೇಳಿದಳು

“ಆಗಲಿ ಮಗೂ, ಹಾಗೇ ಮಾಡು” ಹುಲಿಯಜ್ಜಿ ಒಪ್ಪಿಗೆ ಸೂಚಿಸಿದಳು. ಪುಟ್ಟಿಗೆ ಸ್ವಲ್ಪ ಸಮಾಧಾನವಾಯಿತು. “ಇಷ್ಟಾದರೂ ಆಸರೆ ಸಿಕ್ಕಿತಲ್ಲಾ. ಕಷ್ಟ ಸಹಿಸಿಯಾದರೂ ಬೆಳಗಿನ ವರೆಗೆ ಸಮಯ ಕಳೆಯಬಹುದಲ್ಲಾ” ಎನಿಸಿತು ಅವಳಿಗೆ.

ಈಗ ಪುಟ್ಟಿಯ ಕಣ್ಣುಗಳು ಒಳಗಿನ ಕತ್ತಲೆಗೆ ಹೊಂದಿಕೊಂಡಿದ್ದವು. ಹೊರಗಡೆ ಮರಗಳೆಡೆಯಿಂದ ತೂರಿ ಬಂದ ಅಲ್ಪ ಸ್ವಲ್ಪ ತಿಂಗಳ ಬೆಳಕು ಇತ್ತಲ್ಲ? ಅದರಿಂದಾಗಿ ಒಳಗಿನ ನೋಟವು ಸ್ಪಷ್ಟವಾಗತೊಡಗಿತ್ತು. ಪುಟ್ಟಿ ಮತ್ತೊಮ್ಮೆ ಗವಿಯೊಳಗೆಲ್ಲ ಕಣ್ಣಾಡಿಸಿದಳು. ಏನು ಆಶ್ಚರ್ಯ! ಹುಲಿಯಜ್ಜಿ ಸೀರೆಯೊಂದನ್ನು ಹೊದ್ದುಕೊಂಡಿದ್ದಾಳೆ! ಅರೆ, ಇವಳಿಗೆ ಸೀರೆ ಎಲ್ಲಿಂದ ಬಂತು? ಪುಟ್ಟಿಗೆ ಆಶ್ಚರ್ಯವಾಯಿತು.

“ಅಜ್ಜೀ, ನಿನಗೆ ಇಂಥ ಸೀರೆ ಎಲ್ಲಿ ಸಿಕ್ಕಿತು?” ಕುತೂಹಲದಿಂದ ಅವಳು ಪ್ರಶ್ನೆ ಹಾಕಿದಳು.

ಅಜ್ಜಿ ಕ್ಷಣಕಾಲ ಮೌನ ವಹಿಸಿದಳು. ಮತ್ತೆ ನಿಧಾನವಾಗಿ ಅವಳೆಂದಳು. “ಕೆಲವು ದಿನಗಳ ಹಿಂದೆ ಒಬ್ಬಳು ಮುದುಕಿ ಈ ಕಾಡಿಗೆ ಬಂದಿದ್ದಳು. ಕಟ್ಟಿಗೆ ಒಯ್ಯಲು ಅವಳು ಇಲ್ಲಿಗೆ ಬಂದಿರಬೇಕು. ಹಾಗೆ ಬಂದ ಅವಳು, ಕಾಡಿನಲ್ಲೇ ಸತ್ತು ಬಿದ್ದಳು. ಅವಳ ಹೆಣವನ್ನು ಕಾಡು ಮೃಗಗಳು ತಿಂದು ಮುಗಿಸಿದ್ದವು. ಅವಳ ಈ ಸೀರೆ ಮಾತ್ರ ಅಲ್ಲೇ ಬಿದ್ದುಕೊಂಡಿತ್ತು. ಅದನ್ನು ನಾನು ನೋಡಿದೆ. ಚಳಿಗೆ ಹೊದ್ದುಕೊಳ್ಳಬಹುದಲ್ಲಾ ಎನಿಸಿತು. ಅದನ್ನು ಇಲ್ಲಿಗೆ ತಂದುಬಿಟ್ಟೆ. ನಾನೀಗ ಹೊದ್ದುಕೊಂಡಿರುವುದು ಆ ಸೀರೆಯನ್ನೇ.”

ಪುಟ್ಟಿಗೆ ಸಮಾಧಾನವಾಯಿತು. ಅವಳು ಸೀರೆಯ ಬಗ್ಗೆ ಮತ್ತೆ ಮಾತೆತ್ತಲಿಲ್ಲ. ಬಹಳ ಹೊತ್ತು ಅವಳು ಅಲ್ಲಿ ಕೂತೇ ಇದ್ದಳು. ಹಾಗೆ ಕೂತು ನಿದ್ದೆ ಮಾಡುವುದು ಸಾಧ್ಯವೇ ಇರಲಿಲ್ಲ. ನಿದ್ದೆ ಬರುವ ಲಕ್ಷಣವೂ ಕಾಣಿಸಲಿಲ್ಲ ಅವಳಿಗೆ. “ಹೀಗೆ ನಾನು ಎಷ್ಟು ಹೊತ್ತು ಕೂತಿರಬಹುದು?” ಅವಳು ಯೋಚಿಸಿದಳು. ಫಕ್ಕನೆ ಅವಳಿಗೆ ತನ್ನ ಅಜ್ಜಿಯ ನೆನಪು ಬಂತು. ಅವಳು ಹೇಳುತ್ತಿದ್ದ ಬಗೆ ಬಗೆಯ ಕತೆಗಳೂ ನೆನಪಿಗೆ ಬಂದವು. “ಕತೆ ಹೇಳುವಂತೆ ಈ ಅಜ್ಜಿಯನ್ನೇ ಕೇಳಿಕೊಂಡರೆ ಹೇಗೆ?” ಅವಳು ತನ್ನನ್ನು ತಾನೇ ಪ್ರಶ್ನಿಸಿಕೊಂಡಳು.

“ಈ ಕಲ್ಲ ಮೇಲೆ ಕೂತು ನಿದ್ದೆ ತೂಗಿದರೆ ಬಿದ್ದು ಬಿಡುವುದು ಖಂಡಿತ. ಹಾಗಾಗಿ ನಿದ್ದೆ ತೊಗಬಾರದು. ಮತ್ತೇನು ಮಾಡಲಿ? ಈ ಅಜ್ಜಿಯ ಜೊತೆ ಮಾತಾಡುತ್ತ ಕೂತುಬಿಟ್ಟರೆ ಹೇಗೆ? ಹಾಂ, ಅದೇ ಸರಿ. ಈ ಅಜ್ಜಿಯನ್ನೇ ಮಾತಿಗೆ ಎಳೆಯಬೇಕು” ಅವಳು ನಿರ್ಧರಿಸಿದಳು. ಮತ್ತೆ “ಅಜ್ಜೀ, ನನಗೊಂದು ಕತೆ ಹೇಳುತ್ತೀಯಾ?” ಅವಳು ಅಜ್ಜಿಯನ್ನು ಕೇಳಿದಳು.

ಅಜ್ಜಿ ಎಚ್ಚರವಾಗೇ ಇದ್ದಳು. “ಅಯ್ಯೋ, ನನಗೇನು ಕತೆ ಗೊತ್ತಿದೆ, ಪುಟ್ಟೀ? ನಿಮ್ಮ ಹಾಗೆ ನಾನು ಶಾಲೆಗೆ ಹೋಗಿದ್ದೇನೆಯೇ? ಓದು ಬರಹ ಕಲಿತ್ತಿದ್ದೇನೆಯೇ? ಪುಸ್ತಕ ಗಿಸ್ತಕ ಓದಿದ್ದೇನೆಯೇ? ಅವಳು ಮರುಪ್ರಶ್ನೆ ಹಾಕಿದಳು.

“ಇಲ್ಲಿ ಮಲಗಲು ಆಗುವುದಿಲ್ಲ ಅಜ್ಜೀ. ನಿದ್ದೆಯೂ ಬರುವ ಹಾಗಿಲ್ಲ. ನಿದ್ದೆ ಮಾಡುವಂತೆಯೂ ಇಲ್ಲ. ಹೇಗಾದರೂ ಸಮಯ ಕಳೆಯಬೇಕಲ್ಲ? ಅದಕ್ಕಾಗಿ ಕೇಳಿದೆ. ನೀನು ಏನು ಹೇಳಿದರೂ ಚಿಂತಿಲ್ಲ. ನಾನದನ್ನು ಕೇಳುತ್ತಾ ಕೂತುಬಿಡುತ್ತೇನೆ. ಹೇಳು, ಏನಾದರೂ ಹೇಳುತ್ತಿರು.” ಪುಟ್ಟಿ ಕೇಳಿಕೊಂಡಳು.

“ಸರಿ ಹಾಗಾದರೆ. ಯಾರದೋ ಕತೆ ಹೇಳುವ ಬದಲು ನಮ್ಮ ಕತೆ, ಅಂದರೆ ಹುಲಿಗಳ ಬದುಕಿನ ಕತೆ ಹೇಳುತ್ತೇನೆ. ಆದೀತೇನು?” ಹುಲಿಯಜ್ಜಿ ವಿಚಾರಿಸಿದಳು. “ಆಗಲೀ ಅಜ್ಜೀ ನೀನೇನು ಹೇಳಿದರೂ ಸರಿ, ಅದನ್ನು ನಾನು ಕೇಳುತ್ತಾ ಇರುತ್ತೇನೆ.” ಪುಟ್ಟಿ ಸಮ್ಮತಿ ಸೂಚಿಸಿದಳು. ಅಜ್ಜಿ ಹೇಳತೊಡಗಿದಳು-

“ನಾನು ತಿಳಿದಿರುವುದನ್ನು ನಿನಗೆ ಹೇಳಿಬಿಡುತ್ತೇನೆ. ನೀನು ಮಾತ್ರ ಕಿವಿಗೊಟ್ಟು ಕೇಳಬೇಕು. ನಿನಗೆ ಸಂದೇಹ ಬಂದಾಗ, ಹೆಚ್ಚಿನ ವಿವರಣೆ ಬೇಕು ಎನಿಸಿದಾಗ ನೀನು ಪ್ರಶ್ನೆ ಹಾಕಬೇಕು. ವಿಷಯವನ್ನು ಮನದಟ್ಟು ಮಾಡಿಕೊಳ್ಳಬೇಕು. ಸರಿ. ಈಗ ಕತೆ ಆರಂಭಿಸುತ್ತೇನೆ.”

“ನಾವು, ಅಂದರೆ ಹುಲಿಗಳು ಬೆಕ್ಕಮ್ಮನ ಸಂತಾನಕ್ಕೆ ಸೇರಿದವರು. ನಮ್ಮ ಸಂತಾನ ಬಹಳ ದೊಡ್ಡದಿದೆ. ಹುಲಿ, ಸಿಂಹ, ಚಿರತೆ, ಕಿರುಬ, ಕಾಡುಬೆಕ್ಕು, ಚುಕ್ಕೆಬೆಕ್ಕಕು, ಮೀನುಬೆಕ್ಕು, ಪುನುಗಿನ ಬೆಕ್ಕು ಮೊದಲಾದುವು ಸಹ ನಮ್ಮ ಕುಟುಂಬಕ್ಕೆ ಸೇರಿದವುಗಳೇ. ಇವುಗಳಲ್ಲಿ ಹುಲಿ, ಸಿಂಹ, ಚಿರತೆ, ಕಿರುಬ ಇತ್ಯಾದಿಗಳು ದೊಡ್ಡಗಾತ್ರದವು. ಕಾಡು ಬೆಕ್ಕು, ಚುಕ್ಕೆಬೆಕ್ಕು, ಮೀನುಬೆಕ್ಕು, ಪುನುಗಿನ ಬೆಕ್ಕು ಮೊದಲಾದವು ಚಿಕ್ಕಗಾತ್ರದವು. ಇವುಗಳ ಗಾತ್ರದಲ್ಲಿ ವ್ಯತ್ಯಾಸವಿದೆಯಲ್ಲ? ಹಾಗೆ ಕೂಗಿನಲ್ಲೂ ವ್ಯತ್ಯಾಸವಿದೆ. ದೊಡ್ಡಗಾತ್ರದವು ಘರ್ಜಿಸುತ್ತವೆ. ಸಣ್ಣಗಾತ್ರದವು ಗುರುಗುಟ್ಟುತ್ತವೆ.”

“ಬೆಕ್ಕಮ್ಮನ ಸಂತಾನಕ್ಕೆ ಸೇರಿದ ನಾವೆಲ್ಲರೂ ಮಾಂಸಾಹಾರಿಗಳು ನಮ್ಮ ದೇಹದ ಬಣ್ಣ ಬೇರೆ ಬೇರೆ ಇರಬಹುದು. ಗಾತ್ರದಲ್ಲಿ ವ್ಯತ್ಯಾಸ ಇರಬಹುದು. ದೇಹದ ತೂಕದಲ್ಲೂ ಹೆಚ್ಚು ಕಡಿಮೆ ಬರಬಹುದು. ಆದರೆ ನಮ್ಮ ದೇಹದ ಲಕ್ಷಣಗಳಲ್ಲಿ ಮಾತ್ರ ವ್ಯತ್ಯಾಸ ಕಡಿಮೆ, ಹೋಲಿಕೆಯೇ ಹೆಚ್ಚು. ಇದು ನೆನಪಿಡಬೇಕಾದ ಮುಖ್ಯ ಸಂಗತಿ.”

“ಇನ್ನೊಂದು ವಿಚಾರವನ್ನೂ ನಾನು ಹೇಳಬೇಕು. ಏನದು ಗೊತ್ತೇ? ಬೆಕ್ಕಮ್ಮನ ಸಂತಾನಕ್ಕೆ ಸೇರಿದ ನಮ್ಮ ಎಲ್ಲರ ಮೈಕಟ್ಟು ಒಂದೇ ರೀತಿಯದು. ನಮ್ಮೆಲ್ಲರ ಬದುಕಿನ ರೀತಿಯೂ ಹಾಗೆಯೇ. ಅಷ್ಟು ಮಾತ್ರವಲ್ಲ. ನಮ್ಮ ಮರಿಗಳ ಲಾಲನೆ ಪಾಲನೆಯೂ ಏಕರೀತಿಯದು. ಮರಿಗಳಿಗೆ ನಾವು ನೀಡುವ ಬೇಟೆಯ ತರಬೇತಿಯಲ್ಲೂ ಹೆಚ್ಚಿನ ವ್ಯತ್ಯಾಸ ಇರುವುದಿಲ್ಲ. ಇವು ಇಷ್ಟು ಬೆಕ್ಕಮ್ಮನ ಸಂತಾನದ ಸರ್ವಸದಸ್ಯರ ಸಾಮಾನ್ಯ ಸಂಗತಿಗಳು. ಮುಂದಿನ ನನ್ನ ವಿವರಣೆಗಳೆಲ್ಲ ನಮ್ಮವರಿಗೆ, ಅಂದರೆ ಹುಲಿಗಳಿಗೇ ಹೆಚ್ಚು ಸಂಬಂಧಿಸಿದ್ದು. ಇದು ನಿನ್ನ ಗಮನದಲ್ಲಿರಬೇಕಲು.”

“ನೀನು ಶಾಲೆಗೆ ಹೋಗುವವಳು ಇದ್ದೀಯಾ. ಶಾಲೆಯಲ್ಲಿ ನೀನು ಭೂಪಟವನ್ನು ನೋಡಿರಬೇಕಲ್ಲ? ಜಗತ್ತಿನ ವಿವಿಧ ಖಂಡಗಳ ಬಗ್ಗೆ, ದೇಶಗಳ ಬಗ್ಗೆ ನೀನು ತಿಳಿದಿರಬೇಕಲ್ಲ? ಹಾಗಾಗಿ ನಾನು ಹೇಳುವ ಭೂಭಾಗಗಳ ವಿಚಾರ ನಿನಗೆ ಅರ್ಥವಾದೀತು ಎಂದು ನಂಬುತ್ತೇನೆ.”

“ಸಾಮಾನ್ಯ ಜನರೆಲ್ಲ ನಮ್ಮನ್ನು “ಹುಲಿ” ಎಂದು ಗುರುತಿಸುತ್ತಾರೆ. ಆದರೆ ವಿಜ್ಞಾನಿಗಳು ಇದ್ದಾರಲ್ಲ? ಅವರು ನಮಗಿಟ್ಟ ಹೆಸರು ಬೇರೆಯೇ ಇದೆ. ಅವರು ಹೇಳುವ ಪ್ರಕಾರ ನಮ್ಮ ಹೆಸರು “ಪ್ಯಾಂತೇರಾ ಟೈಗ್ರಿಸ್‌” ಎಂದು. ಬೇರೆ ಬೇರೆ ಭಾಷೆಯ ಜನ ಬೇರೆ ಬೇರೆ ಹೆಸರಿನಿಂದ ನಮ್ಮನ್ನು ಕರೆಯುತ್ತಾರೆ. ಯಾರು ಯಾವ ಹೆಸರಲ್ಲಿ ಕರೆದರೇನಂತೆ? ಅದರಿಂದ ನಾವೇನೂ ಬದಲಾಗುವುದಿಲ್ಲವಲ್ಲ? ಯಾರು ಹೇಗೆ ಬೇಕೋ ಹಗೆ ಕರೆದುಕೊಳ್ಳಲಿ. ಆ ಬಗ್ಗೆ ನಾವೇನೂ ಚಿಂತಿಸುವುದಿಲ್ಲ.” ಇಷ್ಟು ಹೇಳಿ ಹುಲಿಯಜ್ಜಿ ಕ್ಷಣ ಕಾಲ ಮೌನವಹಿಸಿದಳು. ಮತ್ತೆ ಮುಂದುವರಿಯಿತು. ಅವಳ ಮಾತು-

“ಪುಟ್ಟೀ, ಈಗ ನೀನು ಮನಸ್ಸಿನಲ್ಲೇ ಭೂಪಟವನ್ನು ಕಲ್ಪಿಸಿಕೊ. ನಾನೀಗ ಹೆಸರಿಸುವ ಪ್ರದೇಶಗಳನ್ನು ಅಲ್ಲಿ ಗುರುತಿಸಲು ಯತ್ನಿಸು. ಆಗಬಹುದಲ್ಲ?’ ನಾನೀಗ ನಮ್ಮ ಮೂಲಸ್ಥಾನದ ಬಗ್ಗೆ ಹೇಳುತ್ತೇನೆ.

“ಸಾವಿರಾರು ವರ್ಷಗಳ ಹಿಂದೆ ನಾವು ಉತ್ತರ ಹಾಗೂ ಮಧ್ಯ ಏಷಿಯಾ ಪ್ರದೇಶದಲ್ಲಿ ಇದ್ದವರಂತೆ. ಸೈಬೀರಿಯಾ ನಮ್ಮ ಮೂಲಸ್ಥಾನವಂತೆ. ಹಾಗಾಗಿ ಅಂದು ಅಲ್ಲಿ ದಟ್ಟ ಕಾಡುಗಳಿದ್ದವು. ಅಪಾರ ಸಂಖ್ಯೆಯ ಪ್ರಾಣಿ ಸಂಪತ್ತು ಅಲ್ಲಿತ್ತು. ಹಿತಕರವಾದ ವಾಯುಗುಣವು ಅಲ್ಲಿನದಾಗಿತ್ತು ಎಂದು ನಾವು ಊಹಿಸಿದರೆ ತಪ್ಪಾಗದು.”

“ಕಾಲ ಕ್ರಮೇಣ ಅಲ್ಲಿ ನಮ್ಮವರ ಸಂಖ್ಯೆ ಹೆಚ್ಚಾಗಿರಬೇಕು. ಆ ಪ್ರದೇಶದ ಪರಿಸ್ಥಿತಿಯೂ ಬದಲಾಗಿರಬೇಕು. ಆದುದರಿಂದಲೇ ಬದುಕಿನ ಅಗತ್ಯಗಳನ್ನು ಹುಡುಕುತ್ತ ನಮ್ಮವರು ಅಲ್ಲಿಂದ ವಲಸೆ ಹೋಗಿರಬೇಕು. ಹಾಗಾಗಿಯೇ ಇಂದು ಸೈಬೀರಿಯಾ ಮಾತ್ರವಲ್ಲದೆ ಕ್ಯಾಸ್ಪಿಯನ್‌ ಸಮುದ್ರ ತೀರದ ಪ್ರದೇಶಗಳಲ್ಲಿ, ದಕ್ಷಿಣ ಚೀನಾ, ಇಂಡೋಚೀನ, ಭಾರತ, ಬರ್ಮಾ, ಥಾಯ್‌ಲ್ಯಾಂಡ್‌, ಮಲಯಾ, ಬಾಲಿ, ಸುಮಾತ್ರಾ ಮೊದಲಾದ ವಿವಿಧ ಭೂಭಾಗಗಳಲ್ಲಿ ನಮ್ಮವರು ಕಂಡು ಬರುವಂತಾಯಿತು.”

“ಈ ಹಿಂದೆಯೇ ಹೇಳಿದಂತೆ, ನಾವು ಮಾಂಸಾಹಾರಿಗಳು, ಬಹಳ ಚಂದದ ಪ್ರಾಣಿಗಳು ಸಹ. ನಮ್ಮ ಜೀವನ ಸಾಗುವುದು ಬೇಟೆಯಿಂದಲೇ. ಹಾಗಾಗಿ ನಮ್ಮ ದೇಹರಚನೆ ಯಾ ಬೇಟೆಗೆ ಅನುಕೂಲಿಸುವಂತೆ ಇರಬೇಕಲ್ಲ? ಹೌದು, ಅದು ಹಾಗೆಯೇ ಇದೆ.”

“ಬೆಕ್ಕಮ್ಮನ ಕುಟುಂಬದ ಬಲು ದೊಡ್ಡ ಗಾತ್ರದ ಪ್ರಾಣಿಗಳು ನಾವು ಎಂದು ಆಗಲೇ ಹೇಳಿದ್ದೆನಲ್ಲ? ನಮ್ಮಲ್ಲಿ ಹೆಣ್ಣು ಮತ್ತು ಗಂಡುಗಳ ಗಾತ್ರದಲ್ಲಿ, ತೂಕದಲ್ಲಿ, ಎತ್ತರದಲ್ಲಿ ವ್ಯತ್ಯಾಸಗಳಿವೆ. ಸಾಮಾನ್ಯವಾಗಿ ಗಂಡುಗಳು ೨೬೬ – ೨೯೯ ಸೆ.ಮಿ. ಉದ್ದ ಇರುತ್ತವೆ. ೯೧ – ೧೦೬ ಸೆ.ಮಿ. ಎತ್ತರ ಇರುತ್ತವೆ. ೧೯೦ – ೨೩೦ ಕೆ.ಜಿ. ಭಾರ ಇರುತ್ತವೆ. ಹೆಣ್ಣು ಹುಲಿಗಳು ಗಾತ್ರದಲ್ಲಿ, ಎತ್ತರದಲ್ಲಿ ಮತ್ತು ತೂಕದಲ್ಲಿ ಗಂಡುಗಳಿಗಿಂತ ಕಡಿಮೆ ಇರುತ್ತವೆ. ನಿಮ್ಮಲ್ಲಿ ಗಂಡಸರಿಗೆ ಗಡ್ಡ ಮೀಸೆ ಇರುವುದಿದೆಯಲ್ಲ? ಹಾಗೆ ನಮ್ಮಲ್ಲೂ ಗಂಡುಗಳಿಗೆ ಗಲ್ಲದಲ್ಲಿ ಗಡ್ಡದ ಹಾಗಿನ ಕೂದಲುಗಳೂ ಇರುತ್ತವೆ. ಮೀಸೆಯಂತೂ ನಮಗೆಲ್ಲರಿಗೆ ಸರ್ವಸಾಮಾನ್ಯ.”

“ನಮ್ಮವರಿಗೆ ಮೈಮೇಲೆ ನಸುಕೆಂಪು, ಕೆಂಪು, ಕಿತ್ತಳೆ, ಹಳದಿ ಬಣ್ಣಗಳಿರುತ್ತವೆ. ಹಾಗೆಯೇ ಅವುಗಳ ಮಧ್ಯೆ ಕಪ್ಪು ಪಟ್ಟಿಗಳೂ ಕಂಗೊಳಿಸುತ್ತವೆ. ಈ ಕಪ್ಪು ಪಟ್ಟಿಗಳು ಒಬ್ಬೊಬ್ಬರಲ್ಲಿ ಒಂದೊಂದು ರೀತಿಯಲ್ಲಿ ಕಂಡು ಬರಬಹುದು. ಅಲ್ಲದೆ, ನಮ್ಮ ಗಲ್ಲ, ಗಂಟಲು, ಹೊಟ್ಟೆ, ಕಾಲು, ಕಿವಿಗಳ ಅಕ್ಕಪಕ್ಕಗಳಲ್ಲಿ ಬಿಳಿ ಬಣ್ಣ ಬರುವುದೂ ಇದೆ. ಪರಿಸರವನ್ನು ಹೊಂದಿಕೊಂಡು ನಮ್ಮವರ ಗಾತ್ರ, ತೂಕ ಹಾಗೂ ಮೈಬಣ್ಣಗಳಲ್ಲಿ ಸಹ ಬದಲಾವಣೆಗಳು ಕಂಡುಬರುತ್ತವೆ. ನಯವಾದ ರೋಮಗಳುಳ್ಳ ನಮ್ಮ ಮೈ ಚರ್ಮವು ಸದಾ ಹೊಳಪಿನಿಂದ ಕೂಡಿರುತ್ತದೆ. ಇನ್ನೊಂದು  ಸಂಗತಿ ನಿನಗೆ ಗೊತ್ತೇ? ನಿಮ್ಮಲ್ಲಿ , ಅಂದರೆ ಮನುಷ್ಯರಲ್ಲಿ, ಕರಿಯರೂ, ಬಿಳಿಯರೂ ಕಂಡುಬರುವ ಹಾಗೆ ನಮ್ಮಲ್ಲಿ ಸಹ ಅಪೂರ್ವವಾಗಿ ಬಿಳಿಬಣ್ಣದವರೂ ಕಾಣಸಿಗುವುದುಂಟು. ಆದರೆ ಅಂಥವರ ಸಂಖ್ಯೆ ಮಾತ್ರ ತೀರ ಕಡಿಮೆ . ಸಾಮಾನ್ಯವಾಗಿ ನಮ್ಮವರ ಆಯುಸ್ಸು ೨೦ ವರ್ಷಗಳು ಮಾತ್ರ.”

 “ಅಜ್ಜೀ, ನಿಮ್ಮವರ ದೇಹರಚನೆ ಬೇಟೆಯಾಡಲು ಅನುಕೂಲಿಸುವಂತಿದೆ ಎಂದಿದ್ದೆ ನೀನು. ಆದರೆ ಈಗ ನಿಮ್ಮವರ ದೇಹದ ಗಾತ್ರ, ತೂಕ, ಮೈಬಣ್ಣಗಳ ಬಗ್ಗೆಯೇ ವಿವರಿಸುತ್ತಿರುವೆಯಲ್ಲಾ? ಬೇಟೆಯಾಡಲು ನಿಮಗಿರುವ ಅನುಕೂಲತೆಗಳೇನು? ಈ ಬಗ್ಗೆ ಮೊದಲು ಹೇಳು” ಪುಟ್ಟಿ ಮಧ್ಯೆ ಬಾಯಿ ಹಾಕಿದಳು.

“ಆಗಲಿ ಪುಟ್ಟೀ, ನೀನು ಹೇಳಿದಂತೇ ಆಗಲಿ, ಬೇಟೆಯಾಡಲು ನಮಗಿರುವ ಅನುಕೂಲತೆಗಳ ಕಕುರಿತೇ ಈಗ ಹೇಳುತ್ತೇನೆ.”

“ನಿಮಗೆ, ಮನುಷ್ಯರಿಗೆ ಎರಡು ಕಾಲುಗಳಿದ್ದರೆ ನಮಗೆ ನಾಲ್ಕು ಕಾಲುಗಳಿವೆ. ನಮ್ಮ ಹಿಂಗಾಲುಗಳು ಉದ್ದವಾಗಿವೆ. ಮುಂಗಾಲುಗಳು ಗಿಡ್ಡವಾಗಿವೆ. ನಮ್ಮ ಸ್ನಾಯುಗಳು ಬಹಳ ಬಲಿಯುತವಾಗಿವೆ. ಇದರಿಂದಾಗಿ ಸ್ಪ್ರಿಂಗಿನಂತೆ ಕೊಳ್ಳೆಯ ಮೇಲೆ ನೆಗೆಯುವುದು ನಮಗೆ ಸಾಧ್ಯವಾಗುತ್ತದೆ. ನಮ್ಮ ಮುಂಗಾಲುಗಳಲ್ಲಿ ಐದು ಬೆರಳುಗಳಿವೆ. ಹಿಂಗಾಲಲ್ಲಿ ನಾಲ್ಕು ಬೆರಳುಗಳಿವೆ. ನಮ್ಮ ಬೆರಳುಗಳ ತುದಿಗಳಲ್ಲಿ ಮೊನಚಾದ ಉಗುರುಗಳಿವೆ. ಇವು ಒಳಮುಖಕ್ಕೆ ಬಾಗಿದ್ದು, ಚರ್ಮದ ಕೋಶದಲ್ಲಿ ಹುದುಗಿರುತ್ತವೆ. ಹಾಗಾಗಿ ನಾವು ಅತ್ತಿತ್ತ ಓಡಾಡುವಾಗ ಉಗುರುಗಳು ನೆಲಕ್ಕೆ ತಾಗುವುದಿಲ್ಲ, ಸವೆಯುವುದೂ ಇಲ್ಲ. ಮೊನಚಾಗಿರುವ ನಮ್ಮ ಉಗುರುಗಳು, ನಾವು ಕೊಳ್ಳೆಯ ಮೇಲೆ ಎರಗಿ, ಅದನ್ನು ಹೊಡೆದಾಗ ತಟ್ಟನೆ ಕೋಶದಿಂದ ಹೊರಬರುತ್ತವೆ, ಕೊಳ್ಳೆಯ ದೇಹದೊಳಗೆ ನಾಟುತ್ತವೆ. ಮೇಲಿಂದ ಕೆಳಕ್ಕೆ ಚಲಿಸಬಲ್ಲ ನಮ್ಮ ದವಡೆಗಳು ಸಹ ಅತಿಬಲಿಯುತವಾಗಿವೆ; ಕೊಳ್ಳೆಯನ್ನು ಹಿಡಿಯಲು ಸಹಕಾರಿಯಾಗಿವೆ. ನಮ್ಮ ದವಡೆಗಳ ಮುಂಭಾಗದಲ್ಲಿ ಸುಮಾರು ೭.೫ ಸೆ.ಮೀ. ಉದ್ದದ ಮೊನಚಾದ ಕೋರೆಹಲ್ಲುಗಳಿವೆ. ಈ ಕೋರೆಹಲ್ಲುಗಳ ಹಿಡಿತಕ್ಕೆ ಸಿಕ್ಕಿದ ಯಾವ ಕೊಳ್ಳೆಯೂ ಸುಲಭದಲ್ಲಿ ನಮ್ಮಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ನಮ್ಮ ದವಡೆ ಹಲ್ಲುಗಳು ಅಗಿಯಲಿಕ್ಕೂ ಬಾಚಿ ಹಲ್ಲುಗಳು ಮಾಂಸವನ್ನು ಕಡಿದು, ಹೆರೆದು ತಿನ್ನಲಿಕ್ಕೂ ಸಹಾಯಕವಾಗಿವೆ.”

“ಆದರೆ ಅಜ್ಜೀ, ನಿನ್ನ ಬಾಯಲ್ಲಿ ಹಲ್ಲುಗಳೇ ಕಾಣಿಸುವುದಿಲ್ಲ! ಯಾಕೆ ಹೀಗೆ?” ಪುಟ್ಟಿ ಇನ್ನೊಂದು ಪ್ರಶ್ನೆ ಎಸೆದಳು.

“ನಿನ್ನ ಪ್ರಶ್ನೆಯಲ್ಲೆ ಉತ್ತರ ಇದೆಯಲ್ಲ ಪುಟ್ಟೀ? ನೀನೇ ನನ್ನನ್ನು “ಅಜ್ಜಿ” ಈ ಎಂದು ಕರೆದಿದ್ದೀಯಾ. ನಾನು ಅಜ್ಜಿ ಎನ್ನುವುದು ನಿನಗೂ ತಿಳಿದು ಹೋಗಿದೆ. ಅಜ್ಜಿಯ ಹಲ್ಲುಗಳು ಉದುರಿ ಹೋಗಿರುತ್ತವೆ. ಹಾಗಾಗಿ ನನ್ನ ಬಾಯಲ್ಲಿ ಹಲ್ಲುಗಳೂ ಇಲ್ಲ, ದೇಹದಲ್ಲಿ ಶಕ್ತಿಯೂ ಇಲ್ಲ. ನನ್ನ ಕೊನೆಗಾಲ ಸಮೀಪಿಸುತ್ತಿದೆ ಮಗೂ. ಸದ್ಯ ಗಟ್ಟಿಯಾಗಿ ಮಾತನಾಡಲಿಕ್ಕೂ ಕಷ್ಟವಾಗುತ್ತಿದೆ ನನಗೆ. ಕತೆ ಹೇಳಬೇಕೆಂದು ನೀನು ಕೇಳಿಕೊಂಡೆಯಲ್ಲ? ಅದಕ್ಕಾಗಿ ನಾನೀಗ ಹೇಳುತ್ತಿದ್ದೇನೆ, ನಮ್ಮವರ ಜೀವನ ಪರಿಚಯ ನೀಡುತ್ತಿದ್ದೇನೆ. ಇದು ತಿಳಿವು ತಾನೇ? ತಿಳಿವು ನೀಡುವುದು ಒಳ್ಳೆಯ ಕೆಲಸವಂತೆ. ನನ್ನ ಕೊನೆಗಾಲದಲ್ಲಿ ಇದೊಂದು ಒಳ್ಳೆಯ ಕೆಲಸವನ್ನಾದರೂ ಮಾಡಿಬಿಡುತ್ತೇನೆ” ನಿಟ್ಟುಸಿರು ಬಿಡುತ್ತಲೇ ಹೇಳಿದಳು ಅಜ್ಜಿ.

“ನನ್ನ ಮಾತು ಕೇಳಿ ಬೇಸರವಾಯಿತೆ ಅಜ್ಜಿ? ಹಾಗಿದ್ದರೆ ಕ್ಷಮಿಸಿಬಿಡು” ಪುಟ್ಟಿ ಕೈಜೋಡಿಸಿದಳು.

“ಅಯ್ಯೋ, ನೀನೇಕೆ ಹಾಗೆ ಹೇಳುತ್ತೀ? ನೀನೇನೂ ತಪ್ಪು ಮಾಡಿಲ್ಲ ಪುಟ್ಟೀ. ಮತ್ತೆ ಕ್ಷಮೆಯಾಚನೆ ಯಾಕೆ ಹೇಳು? ಹೆಚ್ಚು ಪ್ರಶ್ನೆ ಕೇಳುವುದು ಬುದ್ಧಿವಂತರ ಲಕ್ಷಣವಂತೆ. ಕಲಿವ ಆಸಕ್ತಿಯ ಸೂಚನೆಯಂತೆ ಅದು ಇರಲಿ. ನನ್ನ ಮಾತು ಮುಂದುವರಿಸುತ್ತೇನೆ. ಹಾಂ, ನಮ್ಮವರ ಹಲ್ಲುಗಳ  ಬಗ್ಗೆ ನಾನು ಹೇಳುತ್ತಿದ್ದೆನಲ್ಲ? ಇನ್ನು ನಾಲಗೆಯ ವಿಚಾರ ತಿಳಿಸುತ್ತೇನೆ . ನಿಮಗೆಲ್ಲ ಇರುವ ಹಾಗೆ ನಮಗೂ ನಾಲಗೆ ಇದೆ. ನಿಮ್ಮ ನಾಲಗೆ ನಿಮಗೆ ರುಚಿಯನ್ನು ತಿಳಿಸುತ್ತದೆ, ಮಾತಾಡಲಿಕ್ಕೂ ನೆರವಾಗುತ್ತದೆ. ಸರಿ ತಾನೇ? ಆದರೆ ನಮ್ಮ ನಾಲಿಗೆ ಹಾಗಲ್ಲ. ಇದು ತೆಳುವಾಗಿ, ಮರಳು ಕಾಗದದ ಹಾಗೆ ದೊರಗಾಗಿದೆ. ಇಂಥ ನಾಲಗೆಯು ಮೂಳೆಗಳಿಂದ ಮಾಂಸವನ್ನು ಹೆರೆದು ತೆಗೆಯಲಿಕ್ಕೂ ನಮ್ಮ ದೇಹವನ್ನು ನೆಕ್ಕಿ, ಸ್ವಚ್ಛಗೊಳಿಸಲಿಕ್ಕೂ ನಮಗೆ ನೆರವಾಗುತ್ತದೆ.”

“ನಿಮ್ಮ ಕಣ್ಣುಗಳಿಗೂ ನಮ್ಮ ಕಣ್ಣುಗಳಿಗೂ ವ್ಯತ್ಯಾಸವಿದೆ. ತಿಳಿ ಹಳದಿ ಬಣ್ಣದ ನಮ್ಮ ಕಣ್ಣುಗಳಿಗೆ ಒಂದು ವಿಶೇಷ ಶಕ್ತಿ ಇದೆ. ಅದೇನು ಗೊತ್ತೇ? ನಮ್ಮ ಕಣ್ಣ ಪಾಪೆಗಳು ಬೆಳಕಿನಲ್ಲಿ ಸಂಕೋಚಗೊಳ್ಳುತ್ತವೆ, ಕತ್ತಲಲ್ಲಿ ಹಿಗ್ಗುತ್ತವೆ. ಆದುದರಿಂದ ಹಗಲಿನಲ್ಲಿ ಹೇಗೋ ಹಾಗೆ ಕತ್ತಲಲ್ಲೂ ನಾವು ಕಾಣಬಲ್ಲೆವು. ಗಿಡ್ಡವಾಗಿರುವ ನಮ್ಮ ಕಿವಿಗಳು ಬಹಳ ಚುರುಕು. ಆದರೆ ವಾಸನೆಯನ್ನು ಗ್ರಹಿಸುವ ನಮ್ಮ ಶಕ್ತಿ ಮಾತ್ರ ಅಷ್ಟು ಹೆಚ್ಚಿನದಲ್ಲ.”

“ಇನ್ನು ನಮ್ಮವರ ಬೇಟೆಯ ವಿಚಾರ ತಿಳಿಸುತ್ತೇನೆ. ಸಾಮಾನ್ಯವಾಗಿ ನಾವು ಬೇಟೆಯನ್ನು ಅಟ್ಟಿಸಿಕೊಂಡು ಹೋಗುವುದಿಲ್ಲ. ಬದಲಾಗಿ, ನಮ್ಮ ಬೇಟೆಯು ನೀರಿಗೆ ಬರುವ ಸ್ಥಳಗಳಲ್ಲಿ ಅಥವಾ ಅದು ಓಡಾಡುವ ಕಡೆಗಳಲ್ಲಿ ನಾವು ಹೊಂಚು ಹಾಕಿ ಕೂತಿರುತ್ತೇವೆ. ಬೇಟೆ ಹತ್ತಿರ ಬಂದಾಗ, ಫಕ್ಕನೆ ಅದರ ಮೇಲೆ ಎರಗಿ ಅದನ್ನು ಹಿಡಿದು ಬಿಡುತ್ತೇವೆ. ಕೆಲವು ಬಾರಿ ಮೆಲ್ಲನೆ ಬೇಟೆಯನ್ನು ಹಿಂಬಾಲಿಸಿ ಹೋಗಿ, ಅದರ ಮೇಲೆ ಎರಗುವುದೂ ಇದೆ. ಹಾಗೆ ಎರಗುವಾಗ, ಕೊಳ್ಳೆಯ ಕೋಡುಗಳ ತಿವಿತದಿಂದ ಅಥವಾ ಕಾಲಿನ ಒದೆತದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು. ಈ ಬಗ್ಗೆ ನಾವು ತುಂಬ ಎಚ್ಚರ ವಹಿಸುತ್ತೇವೆ. ಹೆಚ್ಚಾಗಿ ನಾವು ಕೊಳ್ಳೆಯ ಮೇಲೆ ಎರಗಿದ ತತ್‌ಕ್ಷಣ ಅದರ ಕತ್ತನ್ನು ಹಿಡಿದು, ಹೊರಳಿಸಿ, ಕೆಡವಿ, ಅದನ್ನು ಕೊಂದುಬಿಡುತ್ತೇವೆ. ಆದರೆ ಪ್ರತಿಬಾರಿಯೂ ಕೊಳ್ಳೆಯನ್ನು ನಾವೇ ಕೊಲ್ಲಬೇಕಾಗಿ ಬರುವುದಿಲ್ಲ. ಯಾಕೆ ಗೊತ್ತೇ? ಕೆಲವು ಬಾರಿ ನಮ್ಮ ಬೇಟೆಯ ಪ್ರಾಣಿ ನೆಲಕ್ಕೆ ಬೀಳುವಾಗ, ಅದರ ದೇಹದ ಭಾರಕ್ಕೇ ಗೋಣು ಮುರಿದು ಹೋಗಿ, ಅದು ಸಾಯುವುದೂ ಇದೆ. ನಾನು ಆಗಲೇ ಹೇಳಿದಂತೆ, ನಮ್ಮ ಕೋರೆ ಹಲ್ಲುಗಳು ಹಿಡಿತಕ್ಕೆ ಸಿಕ್ಕಿದ ಬೇಟೆ ಮತ್ತೆ ನಮ್ಮಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಒಂದು ವೇಳೆ ಅದು ತಪ್ಪಿಸಿಕೊಂಡರೆ? ಆಗ ಅದರ ಬೆನ್ನಟ್ಟಿ ಹೋಗುವ ಪ್ರಯತ್ನವನ್ನೂ ನಾವು ಮಾಡುವುದಿಲ್ಲ.”

“ನಾವು ಕೊಂದ ಪ್ರಾಣಿಯು ಗಾತ್ರದಲ್ಲಿ ಸಣ್ಣದಿದ್ದರೆ, ಅದನ್ನು ಬಾಯಲ್ಲಿ ಕಚ್ಚಿಕೊಂಡೇ ಬೇಕಾದಲ್ಲಿಗೆ ಒಯ್ಯುತ್ತೇವೆ. ಕೊಳ್ಳೆಯು ಗಾತ್ರದಲ್ಲಿ ದೊಡ್ಡದಿದ್ದರೆ, ಜಗ್ಗಿ ಎಳೆದುಕೊಂಡೇ ಅದನ್ನು ಬಯಸಿದೆಡೆಗೆ ಒಯ್ದುಬಿಡುತ್ತೇವೆ. ಸಣ್ಣಗಾತ್ರದ ಪ್ರಾಣಿಯನ್ನು ನಾವು ಒಂದೇ ಬಾರಿಗೆ ತಿಂದು ಮುಗಿಸುತ್ತೇವೆ. ದೊಡ್ಡ ಪ್ರಾಣಿಗಳ ಮಾಂಸವನ್ನು ಎರಡು ಮೂರು ದಿನಗಳಲ್ಲಿ ತಿಂದು ಮುಗಿಸುವುದೂ ಇದೆ.”

“ಇನ್ನೊಂದು ಸಂಗತಿಯನ್ನೂ ನಾನು ಸ್ಪಷ್ಟಪಡಿಸಬಯಸುತ್ತೇನೆ. ಅದೇನು ಗೊತ್ತೇ? ಯಾವ ಕಾಲದಲ್ಲೇ ಆಗಲಿ , ನಮ್ಮ ಬೇಟೆಯ ಉದ್ದೇಶ ಆಹಾರ ಸಂಪಾದನೆ ಮಾತ್ರ. ಸಾಮಾನ್ಯವಾಗಿ ನಾವು ಬೇಟೆಯಾಡುವುದು ರಾತ್ರಿ ಕಾಲದಲ್ಲೇ. ಆಹಾರ ಹುಡುಕುತ್ತ ಕೆಲವು ಬಾರಿ ನಾವು ಇಪ್ಪತ್ತು ಮೂವತ್ತು ಕಿ.ಮೀ. ದೂರ ಸಂಚರಿಸುವುದೂ ಇದೆ. ಸಂದರ್ಭಕ್ಕೆ ತಕ್ಕ ಹಾಗೆ, ನಮ್ಮ ಬೇಟೆಯ ಕ್ರಮವೂ ಬದಲಾಗುತ್ತದೆ. ನಮ್ಮಂಥ ಮಾಂಸಾಹಾರಿಗಳಿಂದಾಗಿಯೇ ನಿಸರ್ಗದಲ್ಲಿ ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆ ಒಂದು ಮಿತಿಯಲ್ಲಿದೆ. ಪ್ರಕೃತಿಯಲ್ಲಿ ಸಮತೋಲನ ಉಳಿದಿದೆ ಎನ್ನುತ್ತಾರೆ ತಿಳಿದವರು. ಈ ಮಾತು ನಿಜ.”