ಮಕ್ಕಳಿಗೆ ನಮ್ಮ ರಾಷ್ಟ್ರೀಯ ಮೃಗವಾದ ಹುಲಿಯ ದೇಹ ಲಕ್ಷಣಗಳು, ಜೀವನವಿಧಾನ, ಆಹಾರಾಭ್ಯಾಸ ಮತ್ತು ಗುಣ ಸ್ವಭಾವಗಳ ಪರಿಚಯ ಮಾಡಿಸುವುದು ಕೃತಿ ರಚನೆಯ ಉದ್ದೇಶ. ಹೇಳಬೇಕಾದುದನ್ನು ಕಥಾ ರೂಪದಲ್ಲಿ ತಿಳಿಸುವ ಪ್ರಯತ್ನ ಇಲ್ಲಿ ನಡೆದಿದೆ. ಕಾಡುಪ್ರಾಣಿಯಾದ ಹುಲಿಯಲ್ಲೂ ಮನುಷ್ಯರಲ್ಲಿ ಕಾಣಿಸಿದ ಕೆಲವು ಗುಣ ವಿಶೇಷಗಳಿವೆ. ಹುಲಿ ನಮ್ಮ ರಾಷ್ಟ್ರೀಯ ಸಂಪತ್ತು. ಅದನ್ನು ರಕ್ಷಿಸುವುದು ನಮ್ಮ ಕರ್ತವ್ಯ. ನಾವೇನು ಮಾಡಿದ್ದೇವೆ? ಪ್ರಯತ್ನದಲ್ಲಿ ನಾವೆಷ್ಟು ಸಫಲರಾಗಿದ್ದೇವೆ? ಇವೇ ಮೊದಲಾದ ವಿಚಾರಗಳ ಕಡೆಗೂ ಬೆಳಕು ಚೆಲ್ಲಲು ಇಲ್ಲಿ ಯತ್ನಿಸಲಾಗಿದೆ. ಹುಲಿಗಳ ಸಂತತಿ ನಾಶ ಹೊಂದುತ್ತಿರುವ ಇಂದಿನ ಸನ್ನಿವೇಶದಲ್ಲಿ, ಇಂತಹದೊಂದು ಪ್ರಯತ್ನ ಸ್ವಾಗತಾರ್ಹ ಎನ್ನುವ ಅನಿಸಿಕೆ ನನ್ನದು. ಕೃತಿ ರಚನೆಯಲ್ಲಿ ಶ್ರೀ ಎಸ್‌.ಎಫ್‌. ಉಪ್ಪಿನ ಅವರ ನಮ್ಮ ವನ್ಯ ಪ್ರಾಣಿಗಳುಮತ್ತು ಅಜ್ಜಂಪುರ ಕೃಷ್ಣ ಸ್ವಾಮಿ ಅವರ ವನಸಿರಿ ಪುಸ್ತಕಗಳು ನನಗೆ ನೆರವಾಗಿವೆ. ಸಂಬಂಧಪಟ್ಟ ಲೇಖಕರಿಗೆ ನಾನು ಆಭಾರಿ.

ಈ ಪುಸ್ತಕವನ್ನು ಪ್ರಕಟಿಸಿ, ಉಪಕಾರ ಮಾಡಿದವರು ನನ್ನ ನಿರಂತರ ಪ್ರೋತ್ಸಾಹಕರಾದ ಕಿನ್ನಿಗೋಳಿ ಯುಗಪುರುಷ ಪ್ರಕಟಣಾಲಯದ ಶ್ರೀ ಕೆ. ಭುವನಾಭಿರಾಮ ಉಡುಪರು. ಅವರಿಗೆ ನಾನು ಚಿರಋಣಿ.

ಈ ಪುಸ್ತಕಕ್ಕೆ ಚಿತ್ರಗಳನ್ನು ಬರೆದುಕೊಟ್ಟು ಸಹಕರಿಸಿದ ಮಿತ್ರ ಬಾಲ ಮಧುರಕಾನನ ಮತ್ತು ನನ್ನ ಮೊಮ್ಮಗಳು ಪ್ರೀತಿ ಎಚ್‌. ರಾವ್‌, ಇದನ್ನು ಅಂದವಾಗಿ ಮುದ್ರಿಸಿದ ಕಿನ್ನಿಗೋಳಿ ಯುಗಪುರುಷ ಗ್ರಾಫಿಕ್ಸ್ ನ ಗೆಳೆಯರು ಇವರೆಲ್ಲರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.

ಕಿರುಹೊತ್ತಗೆಯಿದು ಹೊರಬರುತ್ತಿರುವ ಈ ಸಂದರ್ಭದಲ್ಲಿ ಹಿಂದೆ ನನಗೆ ಮಹದುಪಕಾರ ಮಾಡಿದ್ದ ಹಿರಿಯರಾದ ದಿ.ಕೊ.ಅ. ಉಡುಪ ಮತ್ತು ಧರ್ಮದರ್ಶಿ. ಹರಿಕೃಷ್ಣ ಪುನರೂರು ಅವರನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತೇನೆ.

ಪಳಕಳ ಸೀತಾರಾಮ ಭಟ್ಟ
ಶಿಶುಸಾಹಿತ್ಯ ಮಾಲೆ.
ಮಿತ್ತಬೈಲು