“ನಮ್ಮವರ ಬದುಕಿನ ಬಗ್ಗೆ ನಾನು ಹೇಳಬೇಕಾದ ಸಂಗತಿಗಳು ಇನ್ನೂ ಇವೆ. ಅವುಗಳನ್ನೂ ನಿನಗೆ ತಿಳಸಿಬಿಡುತ್ತೇನೆ. ನಮ್ಮಲ್ಲಿ ಗಂಡುಗಳು ನಾಲ್ಕು ಐದು ವರ್ಷಗಳಲ್ಲಿ ಪ್ರಾಯಕ್ಕೆ ಬರುತ್ತವೆ. ಹೆಣ್ಣುಗಳು ಮೂರು – ನಾಲ್ಕು ವರ್ಷಕ್ಕೇ ಬೆಳೆದು ನಿಲ್ಲುತ್ತವೆ. ಬೆದೆಯ ಸಮಯದಲ್ಲಿ ಮಾತ್ರ ನಮ್ಮ ಗಂಡು ಹೆಣ್ಣುಗಳು ಜೊತೆಗೂಡುತ್ತವೆ. ಹೆಣ್ಣು ಗರ್ಭಧರಿಸಿದ ೧೦೫ – ೧೧೩ ದಿನಗಳಲ್ಲಿ ಮರಿಗಳು ಹುಟ್ಟುತ್ತವೆ. ಸಾಮಾನ್ಯವಾಗಿ ನಿಮ್ಮಲ್ಲಿ, ಅಂದರೆ ಮನುಷ್ಯರಲ್ಲಿ ಒಂದು ಬಾರಿಗೆ ಒಂದೇ ಮಗು ಹುಟ್ಟುವುದಷ್ಟೇ?ಆದರೆ ನಮ್ಮಲ್ಲಿ ಹಾಗಲ್ಲ. ಒಂದು ಬಾರಿಗೆ ನಾಲ್ಕು – ಆರು ಮರಿಗಳೂ ಹುಟ್ಟುವುದಿದೆ. ಅವುಗಳಲ್ಲಿ ಗಂಡುಗಳೂ ಇರುತ್ತವೆ. ಹೆಣ್ಣುಗಳೂ ಇರುತ್ತವೆ. ನಿಮ್ಮವರು ಗಂಡು ಮಕ್ಕಳನ್ನು ಹೆಚ್ಚು ಇಷ್ಟಪಡುತ್ತಾರೆ ಎನ್ನುವುದನ್ನು ಕೇಳಿದ್ದೇನೆ. ಆದರೆ ನಾವು ಹಾಗಲ್ಲ. ಹುಟ್ಟಿದ ಮರಿಗಳು ಗಂಡಾಗಲಿ ಅಥವಾ ಹೆಣ್ಣಾಗಲಿ ಆ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಗಂಡು – ಹೆಣ್ಣು ಮರಿಗಳಲ್ಲಿ ನಾವೆಂದೂ ಭೇದ ಎಣಿಸುವುದಿಲ್ಲ. ಎಲ್ಲವನ್ನೂ ಒಂದೇ ರೀತಿ ಪ್ರೀತಿಸುತ್ತೇವೆ; ಒಂದೇ ರೀತಿ ನೋಡಿಕೊಳ್ಳುತ್ತೇವೆ. ಈ ವಿಚಾರದಲ್ಲಿಲ ಮನುಷ್ಯರಿಗಿಂತ ನಾವೇ ಮೇಲು ಎನ್ನುವುದು ನನ್ನ ನಂಬಿಕೆ ಇರಲಿ.”

“ಹುಟ್ಟುವಾಗ ನಮ್ಮ ಮರಿಗಳು ಸಹ ಬೆಕ್ಕಿನ ಮರಿಗಳ ಹಾಗೇ ಇರುತ್ತವೆ. ಆಗ ಅವು ಕಣ್ಣು ಬಿಟ್ಟಿರುವುದಿಲ್ಲ. ಎಲ್ಲದಕ್ಕೂ ಅವು ತಾಯಿಯನ್ನೇ ಅವಲಂಬಿಸಿ ಇರಬೇಕಾಗುತ್ತದೆ. ಮುಂದೆ ಹತ್ತು ಹದಿನೈದು ದಿನಗಳಲ್ಲಿ ಮರಿಗಳು ಕಣ್ಣು ಬಿಡುತ್ತವೆ. ಆಗ ಸಹ ತಾಯಿ ಮೊಲೆಹಾಲೇ ಅವುಗಳಿಗೆ ಆಹಾರ. ಸುಮಾರು ೯೦ ರಿಂದ ೧೦೦ ದಿನಗಳ ವರೆಗೂ ತಾಯಿ ತನ್ನ ಮರಿಗಳಿಗೆ ಮೊಲೆ ಉಣಿಸುತ್ತದೆ. ಕ್ರಮೇಣ ಮರಿಗಳು ಮಾಂಸಾಹಾರ ಸೇವಿಸತೊಡಗುತ್ತವೆ.”

ಆಗ ಬಂತು ಪುಟ್ಟಿಯ ಪ್ರಶ್ನೆ – “ನಮ್ಮಲ್ಲಿ ಅಮ್ಮ – ಅಪ್ಪ ಜತೆಗೂಡಿ ಮಕ್ಕಳ ಆರೈಕೆ ಮಾಡುತ್ತಾರೆ. ಅವುಗಳನ್ನು ಬೆಳೆಸುತ್ತಾರೆ. ನಿಮ್ಮಲ್ಲಿ ಹೇಗೆ?”

“ಒಳ್ಳೆಯ ಪ್ರಶ್ನೆಯನ್ನೇ ಕೇಳಿದೆ ಪುಟ್ಟೀ. ಈ ವಿಚಾರದಲ್ಲಿ ನೀವು, ಅಂದರೆ ಮನುಷ್ಯರು ಭಾಗ್ಯವಂತರು. ಹಾಗೆಯೇ ಹಕ್ಕಿಗಳು ಕೂಡ. ನಾನು ಯಾಕೆ ಹೀಗೆ ಹೇಳುತ್ತೇನೆ ಗೊತ್ತೇ? ಅಲ್ಲಿ, ಮಕ್ಕಳ ಆರೈಕೆಯ ವಿಚಾರದಲ್ಲಿ ಹೆಣ್ಣು ಗಂಡುಗಳು ಕೂಡಿ ದುಡಿಯುತ್ತವೆ. ಪರಸ್ಪರ ಸಹಕಾರ ನೀಡುತ್ತವೆ. ಆದರೆ ನಮ್ಮಲ್ಲಿ ಹಾಗಿಲ್ಲ. ಮರಿಗಳನ್ನು ಸಾಕುವ, ಬೆಳೆಸುವ ಸಂಪೂರ್ಣ ಜವಾಬ್ದಾರಿ ಹೆಣ್ಣುಗಳದೇ ಆಗಿರುತ್ತದೆ. ಇಲ್ಲಿ ಗಂಡಿನ ಯಾವ ರೀತಿಯ ಸಹಕರವೂ ಹೆಣ್ಣಿಗೆ ಸಿಗುವುದಿಲ್ಲ. ಮರಿಗಳು ಮಾಂಸ ತಿನ್ನಲು ತೊಡಗಿದಾಗ ಅವುಗಳಿಗೆ ಬೇಟೆಯಾಡುವ ತರಬೇತಿ ಸಹ ಸಿಗುವುದು ಹೆಣ್ಣುಗಳಿಂದಲೇ. ಇಲ್ಲಿ ಗಂಡುಗಳು ಲೆಕ್ಕಕ್ಕೇ ಇಲ್ಲ. ಅವುಗಳ ಬಗ್ಗೆ ಎಲ್ಲಕ್ಕಿಂತ ಬೇಸರದ ಸಂಗತಿ ಒಂದಿದೆ. ಅದೇನು ಗೊತ್ತೇ? ನಮ್ಮಲ್ಲಿ ಗಂಡುಗಳು ಮರಿಗಳ ಪಾಲಿನ ಮಾರಿಗಳೇ ಆಗಿ ಬಿಡುತ್ತವೆ. ತಮ್ಮ ಕಣ್ಣಿಗೆ ಬಿದ್ದರೆ ಸಾಕು, ಮರಿಗಳನ್ನು ಅವು ಕೊಂದು ಹಾಕುತ್ತವೆ; ತಿಂದೂ ಮುಗಿಸುತ್ತವೆ. ಹಾಗಾಗಿ ನಮ್ಮ ತಾಯಂದಿರು ತಮ್ಮ ಮರಿಗಳನ್ನು ಗಂಡುಗಳಿಂದ ರಕ್ಷಿಸಲು ಭಾರೀ ಸಾಹಸ ಪಡಬೇಕಾಗುತ್ತದೆ. ಗಂಡುಗಳಿಗೆ ಮರಿಗಳಿರುವ ಜಾಗವೇ ಗೊತ್ತಾಗದಂತೆ ಅವು ಎಚ್ಚರವಹಿಸುತ್ತವೆ. ಅದಕ್ಕಾಗಿಯೇ ಅವು ಮರಿಗಳಿರುವ ಜಾಗವನ್ನು ಆಗಾಗ ಬದಲಾಯಿಸುತ್ತಲೂ ಇರುತ್ತವೆದ. ಬಹಳ ಕಷ್ಟದ ಕೆಲಸ ಇದು. ಯಾಕೆ ಗೊತ್ತೇ?”

“ಹಾಗೆ ಸ್ಥಳ ಬದಲಾಯಿಸುವಾಗ, ಅವು ಒಂದೊಂದೇ ಮರಿಯನ್ನು ಅದಕ್ಕೆ ನೋವಾಗದಂತೆ ಬಾಯಲ್ಲಿ ಹಿಡಿದುಕೊಂಡು, ಸುರಕ್ಷಿತ ಸ್ಥಳಕ್ಕೆ ಒಯ್ಯಬೇಕಾಗುತ್ತದೆ. ಆರೇಳು ಮರಿಗಳು ಇದ್ದರಂತೂ ಅವುಗಳ ಕಷ್ಟ ಹೇಳತೀರದು. ಎಲ್ಲವನ್ನೂ ಅವು ತಾವೇ ನಿಭಾಯಿಸಬೇಕಾಗುತ್ತದೆ. ಹಾಗಾಗಿ ನಮ್ಮ ಮರಿಗಳಿಗೆ ತಾಯಂದಿರೇ ಸರ್ವಸ್ವ. ನಮ್ಮ ಗಂಡುಗಳೆಂದರೆ ಮಕ್ಕಳನ್ನೇ ಕೊಲ್ಲುವ ಅಪ್ಪಂದಿರು ಅಷ್ಟೇ. ಇದು ಎಂಥ ದುರದೃಷ್ಟ ನೋಡು.”

“ಹುಟ್ಟಿದ ಸುಮಾರು ಆರು ತಿಂಗಳ ಬಳಿಕ ಮರಿಗಳು ಸಹ ತಾಯ ಜೊತೆಗೆ ಬೇಟೆಗೆ ಹೋಗುತ್ತವೆ. ಮುಂದೆ ಎರಡು ವರ್ಷಗಳ ಕಾಲ ಅವು ತಾಯಿಯ ಆಸರೆಯಲ್ಲೇ ಉಳಿಯುತ್ತವೆ. ಆಗಲೇ ಅವು ಬೇಟೆಯಾಡುವ ಬಗೆ ಹೇಗೆ? ಬೇಟೆ ಬರುವ ಹಾದಿಯಲ್ಲಿ ಹೇಗೆ ಹೊಂಚು ಹಾಕಿ ಕೂಡಬೇಕು? ಅದರ ಮೇಲೆ ಜಿಗಿದು, ಹೇಗೆ ಅದನ್ನು ಹಿಡಿಯಬೇಕು? ಏನು ಎಚ್ಚರ ವಹಿಸಬೇಕು? ಈ ಎಲ್ಲ ಅನುಭವಗಳನ್ನು ಅವು ಪಡೆಯುವುದು ತಾಯಿಯಿಂದಲೇ. ಬೇಟೆಯ ತರಬೇತಿ ಮುಗಿವವರೆಗೂ ಅವುಗಳಿಗೆ ತಾಯಿಯ ಆಸರೆ ಅನಿವಾರ್ಯ. ಮುಂದೆ ಕ್ರಮೇಣ ಅವುಗಳ ಸ್ವತಂತ್ರ ಬದುಕು ಆರಂಭವಾಗುತ್ತದೆ.”

“ಸಾಮಾನ್ಯವಾಗಿ ನಾವು ಸಂಘಜೀವಿಗಳಲ್ಲ; ಒಂಟಿಯಾಗಿಯೇ ಬಾಳುವವರು. ಆದರೂ ಕೆಲವು ಬಾರಿ ಗಂಡು-ಹೆಣ್ಣುಗಳು ಜೊತೆಯಾಗಿ ಕಾಣಿಸಿಕೊಳ್ಳಬಹುದು. ಕೆಲವು ಬಾರಿ ಮರಿಗಳ ಜೊತೆಗಿರುವ ತಾಯಿ ಹುಲಿ ಕಾಣಸಿಗಬಹುದು. ಉಳಿದಂತೆ ಎಂದಿಗೂ ನಾವು ಗುಂಪಾಗಿ ಕಾಣಸಿಗುವುದಿಲ್ಲ. ನಿಮ್ಮ ಹಾಗೆ ನಮಗೆ ಸಹ ನೀರು ಬೇಕೇ ಬೇಕು. ಹೆಚ್ಚಾಗಿ ನೀರು ಮತ್ತು ನೆರಳು ಇರುವ ಜಾಗವನ್ನು ನಾವು ಇಷ್ಟಪಡುತ್ತೇವೆ. ಅಂಥ ಜಾಗವನ್ನೇ ಆರಿಸಿಕೊಳ್ಳುತ್ತೇವೆ. ನೀರಲ್ಲಿ ನಾವು ಈಜಬಲ್ಲೆವು. ಆದರೆ ಮರ ಏರುವುದು ನಮ್ಮಿಂದಾಗದು. ಹಾಗೆಯೇ ಮನುಷ್ಯರಿಂದ ದೂರ ಇರಲು ಬಯಸುವವರು ನಾವು. ಇನ್ನೊಂದು ಸಂಗತಿ ನಿನಗೆ ಗೊತ್ತೇ? ನಾವು ಹಸಿದಾಗ ಮಾತ್ರ ಬೇಟೆಯಾಡುತ್ತೇವೆ. ಇತರ ಪ್ರಾಣಿಗಳನ್ನು ಕೊಲ್ಲುತ್ತೇವ. ಹೊರತು, ಮನುಷ್ಯರಂತೆ ದುಡ್ಡಿನ ಆಸೆಗಾಗಿ ನಾವು ಬೇಟೆಯಾಡುವುದಿಲ್ಲ. ಯಾವ ಪ್ರಾಣಹಾನಿಯನ್ನೂ ಮಾಡುವುದಿಲ್ಲ. ಬೆಕ್ಕು ತನ್ನ ಬೇಟೆಯೊಡನೆ ಚೆಲ್ಲಾಟ ಆಡುವುದುಂಟಲ್ಲ? ಅದನ್ನು ಹಿಂಸಿಸುವುದೂ ಇದೆಯಲ್ಲ? ಹಾಗೆ ನಾವೆಂದೂ ಮಾಡುವುದಿಲ್ಲ. ಕೊಲ್ಲುವುದಿದ್ದರೆ ಒಂದೇ ಬಾರಿಗೆ ಕೊಂದು ಬಿಡುತ್ತೇವೆ. ಅದು ಸಹ ಹೊಟ್ಟೆ ಹಸಿವು ಹಿಂಗಿಸುವುದಕ್ಕಾಗಿ ಮಾತ್ರ. ವಿನಾಕಾರಣ ನಾವು ಕೊಲ್ಲುವುದೂ ಇಲ್ಲ. ಹಿಂಸಿಸುವವರೂ ಅಲ್ಲ. ಈ ವಿಚಾರದಲ್ಲೂ ಮನುಷ್ಯರಿಗಿಂತ ನಾವು ಮೇಲು. ಇದು ನನ್ನ ದೃಢವಾದ ನಂಬಿಕೆ. ಇದಕ್ಕೆ ನೀನೇನು ಹೇಳುತ್ತಿಯಾ?” ಅಜ್ಜಿ ಪುಟ್ಟಿಯನ್ನು ಕೇಳಿದಳು.

“ನಿನ್ನ ಮಾತು ನಿಜ ಅಜ್ಜೀ. ಅದನ್ನು ನಾನು ಸಂಪೂರ್ಣ ಒಪ್ಪುತ್ತೇನೆ.” ಪುಟ್ಟಿ ಹೇಳಿದಳು. ಮತ್ತೆ “ಅಜ್ಜೀ, ನಿನ್ನಲ್ಲಿ ಇನ್ನೊಂದು ಪ್ರಶ್ನೆ ಇದೆ . ನಿಮಗೆಲ್ಲ ಇಷ್ಟವಾದ ಆಹಾರ ಯಾವುದು? ಯಾವ ಯಾವ ಪ್ರಾಣಿಗಳನ್ನು ನೀವು ಬೇಟೆಯಾಡುತ್ತೀರಿ?” ಅವಳು ವಿಚಾರಿಸಿದಳು.

ಕಾಡು ಹಂದಿಯನ್ನು ಹಿಡಿದು ತಿನ್ನುವುದೆಂದರೆ ನಮಗೆ ಬಹಳ ಇಷ್ಟ. ಹಾಗೆಯೇ ಜಿಂಕೆ, ಕಡವೆ, ಮುಳ್ಳು ಹಂದಿ, ಕರಡಿ, ಕಾಡೆಮ್ಮೆ, ಕಾಟಿಗಳನ್ನು ನಾವು ಬೇಟೆಯಾಡುತ್ತೇವೆ . ಕೆಲವು ಬಾರಿ ನಾವು ಆನೆಗಳ ಮೇಲೆ ಎರಗುವುದೂ ಇದೆ. ಆದರೆ ನಾವು ಆ ಧೈರ್ಯ ಮಾಡುವುದು ಯಾವಾಗ ಗೊತ್ತೇ? ಅದುಕ, ಆನೆಯೊಂದು ಒಂಟಿಯಾಗಿ ಕಾಣಿಸಿಕೊಂಡಾಗ ಮಾತ್ರ. ಗುಂಪಿನಲ್ಲಿರುವ ಆನೆ, ಕಾಟಿ, ಕಾಡೆಮ್ಮೆಗಳ ತಂಟೆಗೆ ನಾವು ಹೋಗುವುದಿಲ್ಲ.”

“ಇನ್ನೊಂದು ವಿಚಾರ. ಸಾಮಾನ್ಯವಾಗಿ ನಾವು ಮನುಷ್ಯರನ್ನು ಬೇಟೆಯಾಡುವುದಿಲ್ಲ. ಅವರಿಂದ ದೂರವಿರಲು ಬಯಸುವವರು ನಾವು. ಅವರನ್ನು ಕಂಡರೆ ಓಡಿ ಹೋಗುವರೂ ಹೌದು. ಆದರೆ ಗಾಯಗೊಂಡು ಬಿದ್ದಿರುವಾಗ ಅಥವಾ ಮುಪ್ಪಿನಲ್ಲಿರುವಾಗ ಮಾತ್ರ ನಾವು ಮನುಷ್ಯರನ್ನೂ ಬೇಟೆಯಾಗಿ ಹಸಿವು ಹಿಂಗಿಸಿಕೊಳ್ಳಬಹುದು. ಸಾಕು ಪ್ರಾಣಿಗಳನ್ನೂ ಹಿಡಿದು ತಿನ್ನಬಹುದು. ಹಾವು, ಮೀನು, ಕಾಡು ಪಾರಿವಾಳಗಳಂಥ ಸಣ್ಣ ಜೀವಿಗಳನ್ನೂ ಬೇಟೆಯಾಡಬಹುದು. ಕೊಳೆತ ಮಾಂಸವನ್ನು ತಿನ್ನುವುದೂ ಅಸಂಭವವಲ್ಲ. ಒಂದು ಬಾರಿ ಮನುಷ್ಯನನ್ನು ತಿಂದವರು, ನರಮಾಂಸದ ರುಚಿಕಂಡ ನಮ್ಮವರು, ಮತ್ತೆ ನರಭಕ್ಷಕರಾಗಿ, ಭೀತಿ ಹುಟ್ಟಿಸಿದ ಸಂಧರ್ಭಗಳೂ ಇವೆ.”

“ನಮ್ಮವರ ಬಗ್ಗೆ ನಾನು ಹೇಳಲೇಬೇಕಾದ ವಿಶೇಷ ಸಂಗತಿ ಒಂದಿದೆ. ಅದೇನು ಗೊತ್ತೇ? ಹಿಂದನ ಕಾಲದಲ್ಲಿ ರಾಜರು ಇಲ್ಲಿ ಆಳಲುತ್ತಿದ್ದರು ಎಂದು ನೀನು ಓದರಿಬೇಕಲ್ಲ? ಆಗ ಪ್ರತಿಯೊಬ್ಬ ರಾಜನಿಗೂ ಅವನದೇ ಆದ ರಾಜ್ಯವಿದ್ದುದು ನಿನಗೆ ತಿಳಿದಿರಬೇಕಲ್ಲ? ಅಂದಿನ ಕಾಲದ ರಾಜರ ಹಾಗೆ, ರಾಜ್ಯ ಕಟ್ಟುವ ಬುದ್ಧಿ ನಮ್ಮವರಲ್ಲೂ ಇದೆ ಎಂದರೆ ನೀನು ನಂಬುತ್ತೀಯಾ? ನೀನು ನಂಬಲೂಬಹುದು ನಂಬದಿರಲೂಬಹುದು. ಆದರೆ ಈ ಮಾತಂತೂ ನಿಜ. ಅದು ಹೇಗೆ ಎಂದು ವಿವರಿಸಬೇಕೆ? ಹೇಳುತ್ತೇನೆ ಕೇಳು. ನಮ್ಮವರಲ್ಲಿ ಪ್ರತಿಯೊಬ್ಬರೂ ಹಲವು ಚ.ಕಿ.ಮಿ. ವಿಸ್ತೀರ್ಣದ ಜಾಗವನ್ನು ತಮ್ಮ ಅಧೀನ ಪ್ರದೇಶವೆಂದು ಗುರುತಿಸಿಕೊಳ್ಳುತ್ತಾರೆ. ಕಟ್ಟುನಿಟ್ಟಾಗಿ ಅದನ್ನು ರಕ್ಷಿಸಿಕೊಳ್ಳುತ್ತಾರೆ. ಆದರೆ ಇಲ್ಲಿ ಗಡಿಕಲ್ಲುಗಳು ಇರುವುದಿಲ್ಲ. ಬದಲಾಗಿ ತಮ್ಮ ಮಲಮೂತ್ರಗಳಿಂದಲೇ ಅವರು ತಮ್ಮ ಕ್ಷೇತ್ರದ ಗಡಿಯನ್ನು ಗುರುತಿಸುತ್ತಾರೆ . ಇದರೊಳಗೆ ಅನ್ಯರ ಪ್ರವೇಶವನ್ನು ಅವರೆಂದೂ ಸಹಿಸಿಕೊಳ್ಳುವುದಿಲ್ಲ” ಅಜ್ಜಿ ವಿವರಿಸಿದಳು.

“ನಿಮ್ಮವರಲ್ಲೂ ರಾಜ್ಯ ಕಟ್ಟಿಕೊಳ್ಳುವ ಬುದ್ಧಿ ಇದೆ ಎನ್ನುವುದು ಕುತೂಹಲದ ಸಂಗತಿ; ಆಶ್ಚರ್ಯಕರವಾದುದೂ ಹೌದು. ಇರಲಿ. ಈಗ ಇನ್ನೊಂದು ಪ್ರಶ್ನೆ ಕೇಳುತ್ತೇನೆ. ಹೇಳುತ್ತೀಯಾ?” ಭಾರತದ ಯಾವ ಭಾಗಗಳಲ್ಲಿ ನಿಮ್ಮವರು ಕಂಡು ಬರುತ್ತಾರೆ? “ಪುಟ್ಟಿ ಕುತೂಹಲ ತೋರಿದಳು.

“ಹೇಳುತ್ತೇನೆ ಪುಟ್ಟೀ, ನನಗೆ ಗೊತ್ತಿರುವ ಎಲ್ಲವನ್ನೂ ಹೇಳುತ್ತೇನೆ. ಹಿಂದೆ ನಾವು ಹಿಮಾಲಯದ ತಪ್ಪಲಿನ ಕಾಡುಗಳಲ್ಲಿ ನೆಲೆಸಿದ್ದೆವೆಂದೂ ಮತ್ತೆ ಕ್ರಮೇಣ ದೇಶದ ಇತರ  ಭಾಗಗಳಿಗೆ ಹರಡಿದೆವೆಂದೂ ಹೇಳುವುದನ್ನು ಕೇಳಿದ್ದೆ. ಬಂಗಾಳದ ಸುಂದರ ಬನದ ಜಾಗಗಳಲ್ಲಿ, ಮಧ್ಯಪ್ರದೇಶ ಹಾಗೂ ದಕ್ಷಿಣ ರಾಜ್ಯಗಳ ಕಾಡುಗಳಲ್ಲಿ ನಮ್ಮವರು ಹೆಚ್ಚಾಗಿ ಕಂಡು ಬರುತ್ತಾರೆ. ಹಾಗೆಯೇ ರಾಜಸ್ಥಾನದ ಕುರುಚಲು ಅರಣ್ಯಗಳಲ್ಲಿ, ಅಸ್ಸಾಮದ ಅತಿ ಮಳೆಯ ಕಾಡುಗಳಲ್ಲಿ, ಸಹ ನಮ್ಮವರು ಇದ್ದಾರೆ. ಕರ್ನಾಟಕದ ಶಿವಮೊಗ್ಗ, ಚಿಕ್ಕಮಗಳೂರ, ಕೊಡಗು, ಮೈಸೂರು, ಉತ್ತರಕನ್ನಡ ಮತ್ತು ದಕ್ಷಿಣ ಕನ್ನಡದ ದಟ್ಟ ಕಾಡುಗಳಲ್ಲೂ ನಮ್ಮವರು ನೆಲೆಸಿದ್ದಾರೆ.” ತರಗತಿಯಲ್ಲಿ ಪಾಠ ಮಾಡುವ ಟೀಚರರ ಹಾಗೆ ವಿವರಿಸುತ್ತಾ ಹೋದಳು ಅಜ್ಜಿ. “ಹಾಗಾದರೆ ಈಗ ಇಲ್ಲೆಲ್ಲ ನಿಮ್ಮವರ ಸಂಖ್ಯೆ ಬಹಳ ಹೆಚ್ಚಿರಬೇಕಲ್ಲ?” ಮತ್ತೊಮ್ಮೆ ಪ್ರಶ್ನೆ ಹಾಕಿದಳು ಪುಟ್ಟಿ.

“ನಾನೊಂದು ವಿಚಿತ್ರ ಸತ್ಯವನ್ನು ಹೇಳುತ್ತೇನೆ ಪುಟ್ಟೀ ದಿನದಿಂದ ದಿನಕ್ಕೆ ಜಗತ್ತಿನ ಜನಸಂಖ್ಯೆ ಏರುತ್ತಿದೆ. ಆದರೆ ನಮ್ಮವರ ಸಂಖ್ಯೆ ಮಾತ್ರ ಇಳಿಯುತ್ತಲೇ ಇದೆ.” ಅಜ್ಜಿ ಹೇಳಿದಳು.

ಪುಟ್ಟಿಗೆ ಆಶ್ಚರ್ಯವಾಯಿತು. “ಜನಸಂಖ್ಯೆ ಏರುತ್ತಲೇ ಇದೆ. ಹುಲಿಗಳ ಸಂಖ್ಯೆ ಇಳಿಯುತ್ತಲೇ ಇದೆ. ಇದೇಕೆ ಹೀಗೆ ? ಸಹಜವಾಗಿಯೇ ಹುಲಿಗಳ ಸಂಖ್ಯೆಯೂ ಹೆಚ್ಚಾಗಬೇಕಲ್ಲ? ಅದು ಕಮ್ಮಿಯಾಗುತ್ತ ಸಾಗಲು ಕಾರಣವೇನು? ಅದನ್ನು ತಿಳಿಯಬೇಕು ಎನಿಸಿತು ಅವಳಿಗೆ. ಅವಳು ಕೇಳಿದಳು, “ಜನಸಂಖ್ಯೆ ಏರಿದ ಹಾಗೆ ನಿಮ್ಮವರ ಸಂಖ್ಯೆಯೂ ಏರಬೇಕಲ್ಲ? ಅದೇಕೆ ಇಳಿಯುತ್ತಿದೆ?”

“ಅದಕ್ಕೆ ಹಲವು ಕಾರಣಗಳಿವೆ ಪುಟ್ಟೀ. ಹುಲಿ ಉಳಿದರೆ ಕಾಡು ಉಳಿದೀತು. ಕಾಡು ಉಳಿದರೆ ನಾಡು ಉಳಿದೀತು” ಎಂದು ಜನ ಹೇಳುತ್ತಲೇ ಬಂದಿದ್ದಾರೆ. ಆದರೆ ಅದೇ ಜನ ಮರಗಳನ್ನು ಕಡಿದು, ಕಾಡುಗಳನ್ನು ನಾಶಗೊಳಿಸುತ್ತಾ ಬಂದಿದ್ದಾರೆ, ನಮ್ಮವರ ನಾಶಕ್ಕೂ ವಿವರಿಸಿ ಹೇಳುತ್ತೇನೆ. ಜನಸಂಖ್ಯೆ ಹೆಚ್ಚಾದಂತೆ ಅವರ ಅಗತ್ಯಗಳೂ ಹೆಚ್ಚಿದವು. ಅವರಿಗೆ ಹೆಚ್ಚು ಆಹಾರ ಧಾನ್ಯಗಳಲು ಬೇಕಾದವು. ಹೆಚ್ಚು ಆಶ್ರಯ ಸ್ಥಾನಗಳು ಬೇಕಾದವು. ಹಾಗಾಗಿ ಅವರು ಕಾಡುಗಳನ್ನು ಕಡಿದು ಕೃಷಿ ಭೂಮಿ ಮಾಡಿದರು. ಮನೆಗಳನ್ನು ಕಟ್ಟಿಕೊಂಡರು. ಮರಮಟ್ಟುಗಳಿಗಾಗಿ, ಉರುವಲಿಗಾಗಿ ಸಹ ಮರಗಳನ್ನು ಕಡಿದರು. ಕೈಗಾರಿಕೆಗಾಗಿ, ಗಣಿಗಾರಿಕೆಗಾಗಿ, ಅಣೆಕಟ್ಟುಗಳ ರಚನೆ ಮತ್ತು ವಿದ್ಯುತ್‌ ಉತ್ಪಾದನೆಯ ವಿವಿಧ ಯೋಜನೆಗಳಿಗಾಗಿಯೂ ಕಾಡುಗಳನ್ನು ನಾಶಮಾಡಿದರು. ವಿದ್ಯುತ್‌ ಸರಬರಾಜು, ರಸ್ತೆ ನಿರ್ಮಾಣಗಳ ನೆಪದಲ್ಲೂ ಕಾಡುಗಳ ನಾಶವಾಯಿತು. ದುಡ್ಡಿನ ಆಸೆಗಾಗಿ ಕೆಲವು ಮಂದಿ ಕಾಡುಗಳ್ಳರು, ವನಪಾಲಕರು, ಜನನಾಯಕರು ಕಾಡುಗಳ ನಾಶಕ್ಕೆ ಕಾರಣರಾದರು.”

“ಹೀಗೆ ಕಾಡಿನ ನಾಶದೊಂದಿಗೆ ಕಾಡು ಪ್ರಾಣಿಗಳ ನಾಶವೂ ಆಯಿತು. ಅಳಿದು ಉಳಿದವುಗಳಿಗೂ ಆಸರೆ ತಪ್ಪಿತು; ಆಹಾರ ಸಿಗದಾಯಿತು. ಇಂಥ ಪರಿಸ್ಥಿತಿಯಿಂದ ಅತಿ ಹೆಚ್ಚು ಸಂಕಟ ಅನುಭವಿಸಿದವರು ನಾವು, ಹುಲಿಗಳು. ಇಲ್ಲಿ ಒಂದು ಮಾತನ್ನು ನಾನು ಸ್ಪಷ್ಟಪಡಿಸಿಬಯಸುತ್ತೇನೆ. ಅದೇನು ಗೊತ್ತೇ? ಈ ದೇಶದಲ್ಲಿ ಕಾಡಿಗೆ ಮತ್ತು ಕಾಡುಪ್ರಾಣಿಗಳಾದ ನಮಗೆ ಬಲುದೊಡ್ಡ ಕಂಟಕ ಬಂದುದು ನಿಮ್ಮವರಿಂದ, ಅಂದರೆ ಮನುಷ್ಯರಿಂದಲೇ. ಹಿಂದೆ ರಾಜರ ಆಡಳಿತವಿತ್ತಲ್ಲ? ಆಗ ರಾಜರಿಗೆ ಬೇಟೆ ಒಂದು ಮನೋರಂಜನೆಯ ವಿಷಯವಾಗಿತ್ತು. ತಮ್ಮ ಖುಶಿಗಾಗಿಯೂ ಅವರು ಬೇಟೆಯಾಡುತ್ತಿದ್ದರು. ಕಾಡುಪ್ರಾಣಿಗಳ ಹಾವಳಿ ಹೆಚ್ಚಿದಾಗ, ಪೈರುನಾಶವಾಗುತ್ತಿದೆ ಎಂದು ರೈತರು ದೂರು ನೀಡಿದರೂ ಸಹ ಬೇಟೆಗೆ ಬರುತ್ತಿದ್ದರು; ವನವಾಸಿಗಳಾದ ನಮ್ಮನ್ನು ಕೊಲ್ಲುತ್ತಿದ್ದರು. ಮುಂದೆ ಇಂಗ್ಲಿಷರು ಇಲ್ಲಿ ಆಳಿದರಲ್ಲ? ಆಗ ಅವರೂ ಮನಬಂದಂತೆ ನಮ್ಮನ್ನು ಕೊಂದರು. ನಮ್ಮ ಚರ್ಮ ಹೆಚ್ಚು ಬೆಲೆ ಬಾಳುತ್ತಿತ್ತು. ನಮ್ಮ ಉಗುರು, ಮೀಸೆ ಇವುಗಳಿಗೂ ಬೇಡಿಕೆ ಇತ್ತು. ಆದುದರಿಂದ ಹಣದ ಆಸೆಯಿಂದ ಸಾರ್ವಜನಿಕರೂ ನಮ್ಮನ್ನು ಬೇಟೆಯಾಡಿದರು. ಸಿಕ್ಕ ಸಿಕ್ಕಲ್ಲಿ ನಮ್ಮನ್ನು ಕೊಂದರು. ಕೆಲವರು ನಮ್ಮನ್ನು ಜೀವಂತವಾಗಿ ಸೆರೆಹಿಡಿಯಲಿಕ್ಕೂ ಯತ್ನಿಸಿದರು. ಅದರಲ್ಲಿ ಯಶಸ್ವಿಗಳೂ ಆದರು.

“ಏನಜ್ಜೀ, ನಿಮ್ಮನ್ನು ಜೀವಂತವಾಗಿ ಸೆರೆಹಿಡಿಯುತ್ತಿದ್ದರೇ? ಹೇಗೆ ಹಿಡಿಯುತ್ತಿದ್ದರು? ಯಾಕೆ ಹಿಡಿಯುತ್ತಿದ್ದರು?” ವಿಚಾರಿಸಿದಳು ಪುಟ್ಟಿ.

“ಸರ್ಕಸ್‌ ಕಂಪೆನಿಗಳು ನಮ್ಮನ್ನು ಕೊಳ್ಳುತ್ತಿದ್ದವು. ನಮ್ಮ ಪ್ರದರ್ಶನದಿಂದ ತಾವು ದುಡ್ಡು ಮಾಡುತ್ತಿದ್ದವು. ಶ್ರೀಮಂತ ಜನ ಶೋಕಿಗಾಗಿ ನಮ್ಮನ್ನು ಸಾಕುತ್ತಿದ್ದರಂತೆ. ಹೊರದೇಶಗಳಿಗೆ ನಮ್ಮನ್ನು ಕಳುಹಿಸುವುದೂ ನಡೆಯುತ್ತಿತ್ತು ಎಂದು ಕೇಳಿದ್ದೇನೆ. ಹಾಗಾಗಿ ಬುದ್ಧಿವಂತರಾದ ಸಾಹಸಿಗಳು ಬೇರೆ ಬೇರೆ ಉಪಾಯ ಹೂಡುತ್ತಿದ್ದರು. ನಮ್ಮನ್ನು ಜೀವಂತವಾಗಿ ಸೆರೆಹಿಡಿಯುತ್ತಿದ್ದರು.’

“ಕೆಲವರು ಆಳವಾದ ಹೊಂಡದಲ್ಲಿ ಬೀಳಿಸಿ, ನಮ್ಮನ್ನು ಹಿಡಿಯುತ್ತಿದ್ದರು. ಕೆಲವರು ಬೋನುಗಳನ್ನು ಇರಿಸಿ, ನಮ್ಮನ್ನು ಬಂಧಿಸುತ್ತಿದ್ದರು. ಈಗಿನ ಜನ ಹೊಸತೊಂದು ಉಪಾಯ ಕಂಡುಕೊಂಡಿದ್ದಾರೆ. ಅದೇನು ಗೊತ್ತೇ? ಮತ್ತು ಬರಿಸುವ ಔಷಧಿ ಗುಂಡುಗಳು ಈಗ ಸಿಗುತ್ತಿವೆ. ಅಂಥ ಗುಂಡೇಟು ಹೊಡೆದು, ನಾವು ಮತಿಗೆಟ್ಟು ಬಿದ್ದಾಗ ನಮ್ಮನ್ನು ಅವರು ಬೋನುಗಳಲ್ಲಿ ಹಿಡಿದಿಡುತ್ತಾರೆ. ಮತ್ತೆ ನಮ್ಮ ಮಾರಾಟ ನಡೆಸುತ್ತಾರೆ. ಸಾಮಾನ್ಯವಾಗಿ ನಮ್ಮನ್ನು ಜೀವಂತ ಹಿಡಿಯುವುದು ಸುಲಭದ ಕೆಲಸವಲ್ಲ. ಹಾಗಾಗಿ ಹಣದ ಆಸೆಯ ಜನ, ನಮ್ಮನ್ನು ಸಾಯಿಸುವುದೇ ಹೆಚ್ಚು. ಅದಕ್ಕೂ ಅವರಲ್ಲಿ ವಿವಿಧ ಉಪಾಯಗಳಿವೆ. ಕೆಲವರು ಎತ್ತರದಲ್ಲಿ ಅಟ್ಟಣಿಗೆ ಕಟ್ಟುತ್ತಾರೆ. ಕೆಳಗೆ, ತುಸು ದೂರದಲ್ಲಿ ಎಮ್ಮೆಯ ಕರು, ಆಡು ಇಂಥ ಬಲಿ ಪ್ರಾಣಿಯನ್ನು ಕಟ್ಟಿರುತ್ತಾರೆ. ಅದನ್ನು ನಾವು ತಿನ್ನಲು ಬಂದಾಗ, ನಮ್ಮನ್ನು ಗುಂಡಿಟ್ಟು ಕೊಲ್ಲುತ್ತಾರೆ. ಕೆಲವು ಬಾರಿ ನಾವು ಅರ್ಧ ತಿಂದು ಬಿಟ್ಟ ಕೊಳ್ಳೆಯನ್ನು ಮತ್ತೆ ತಿನ್ನಲು ಬಂದಾಗ, ಅಟ್ಟಣಿಗೆಯಲ್ಲಿ ಕೂತು, ಗುಂಡು ಹೊಡೆದು, ನಮ್ಮನ್ನು ಸಾಯಿಸುತ್ತಾರೆ. ಇನ್ನು ಕೆಲವು ಬಾರಿ ಆಹಾರದಲ್ಲಿ ವಿಷ ಬೆರೆಸಿ ಇಟ್ಟು, ನಮ್ಮನ್ನು ಕೊಂದು ಬಿಡುತ್ತಾರೆ. ಕೃಷಿಕರ, ತೋಟಗಾರರ ವಿದ್ಯುತ್‌ ಬೇಲಿಗಳೂ ನಮ್ಮ ಜೀವಕ್ಕೆ ಅಪಾಯ ತರುತ್ತವೆ. ಹೀಗೆ ನಿರಂತರವಾಗಿ ಸಾಗುತ್ತಿದೆ ನಮ್ಮ ಕೊಲೆ. ಆದುದರಿಂದಲೇ ಜನಸಂಖ್ಯೆ ಏರಿದ ಹಾಗೆ ನಮ್ಮವರ ಸಂಖ್ಯೆ ಇಳಿಮುಖವಾಗುತ್ತಿದೆ”

“ಹಿಂದೆ ನಮ್ಮ ದೇಶದಲ್ಲಿ ನಿಮ್ಮವರ ಸಂಖ್ಯೆ ಎಷ್ಟಿತ್ತು? ಈಗ ಎಷ್ಟು ಇದೆ? ಈ ಬಗ್ಗೆ ನಿನಗೇನು ಗೊತ್ತಿದೆ? ಹೇಳುತ್ತೀಯಾ” ಮತ್ತೆ ಕೇಳಿದಳು ಪುಟ್ಟಿ.

ಸುಮಾರು ನೂರು ವರ್ಷಗಳ ಹಿಂದೆ ಭಾರತದಲ್ಲಿ ನಮ್ಮ ಸಂಖ್ಯೆ ೪೦,೦೦೦ ವನ್ನೂ ಮೀರಿತ್ತು ಎಂದು ಹೇಳುವುದನ್ನು ಕೇಳಿದ್ದೆ. ಇನ್ನು ಕೆಲವರ ಹೇಳಿಕೆ ಪ್ರಕಾರ, ಅಂದು ನಮ್ಮವರ ಸಂಖ್ಯೆ ಸುಮಾರು ಒಂದು ಲಕ್ಷದಷ್ಟು ಇತ್ತು. ಆದರೆ ಬರಬರುತ್ತಾ ಆ ಸಂಖ್ಯೆ ಕಡಿಮೆಯಾಯಿತು. ೧೯೬೦ ಸಮಯಕ್ಕೆ ಆ ಸಂಖ್ಯೆ ನಾಲ್ಕು – ಐದು ಸಾವಿರಕ್ಕೆ ಇಳಿಯಿತು. ಮುಂದಿನ ದಶಕದಲ್ಲಿ ಅದು ಇನ್ನಷ್ಟು ಕಡಿಮೆಯಾಯಿತು. ೧೯೭೨ರಲ್ಲಿ ಇಲ್ಲಿದ್ದ ನಮ್ಮವರ ಸಂಖ್ಯೆ ಕೇವಲ ೨೦೦೦ ಎಂದು ಅಂದಾಜು ಮಾಡಲಾಯಿತು. ಆಗ ನಮ್ಮ ಜನ ಎಚ್ಚೆತ್ತರು. ಸರಕಾರವೂ ಎಚ್ಚರಗೊಂಡಿತು. ನಮ್ಮವರ ಸಂರಕ್ಷಣೆಗೆ, ಅಭಿವೃದ್ಧಿಗೆ ತುರ್ತುಕಾರ್ಯಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿತು. ಇದರ ಪರಿಣಾಮ ಏನಾಯಿತು ಗೊತ್ತೇ? ೧೯೭೩ರಲ್ಲಿ ಕೇಂದ್ರ ಸರಕಾರವು ‘ಪ್ರೊಜೆಕ್ಟ್‌ ಟೈಗರ್’ ಎಂಬ ಹೊಸತೊಂದು ಯೋಜನೆಯನ್ನು ಜಾರಿಗೊಳಿಸಿತು. ಇದರ ಪ್ರಕಾರ ನಮ್ಮವರ ಸಂರಕ್ಷಣೆಗಾಗಿ ಹಾಗೂ ನಮ್ಮ ವಂಶದ ಅಭಿವೃದ್ಧಿಗಾಗಿ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ದೇಶದ ವಿವಿಧ ಭಾಗಗಳಲ್ಲಿ ನಮ್ಮ ರಕ್ಷಣೆಗಾಗಿ ಅಭಯಾರಣ್ಯಗಳನ್ನು ಕಾದಿರಿಸಲಾಯಿತು. ನಮಗೆ ರಾಷ್ಟ್ರ ಪ್ರಾಣಿಯ ಸ್ಥಾನ ಮಾನ ದೊರೆಯಿತು. ನಮ್ಮ ಬೇಟೆಯನ್ನು ನಿಷೇಧಿಸಲಾಯಿತು. ನಮ್ಮನ್ನು ಹಿಡಿಯುವುದು, ಬಂಧಿಸಿ ಇಡುವುದು, ಅಥವಾ ಕೊಲ್ಲುವುದು ಶಿಕ್ಷಾರ್ಹ ಅಪರಾಧ ಎಂದು ಸಾರಲಾಯಿತು. ನಮ್ಮನ್ನು ಅಥವಾ ನಮ್ಮ ಚರ್ಮ, ಉಗುರು ಇತ್ಯಾದಿಗಳ ಮಾರಾಟವನ್ನು ಹಾಗೂ ರಫ್ತನ್ನು ಸಹ ನಿಷೇಧಿಸಲಾಯಿತು. ಹಾಗಾಗಿ ಮೃಗಾಲಯದಲ್ಲೂ ನಮ್ಮನ್ನು ಬಂಧಿಸಿ ಇಡುವುದು ಈಗ ಅಪರಾಧವಾಗುತ್ತದೆ. ಆದುದರಿಂದ ಅಲ್ಲಿಯೂ ಸುತ್ತ ಕಂದಕದ ಏರ್ಪಾಡುಮಾಡಿ, ನಡುವಿನ ಜಾಗದಲ್ಲಿ ನಮಗೆ ಸುತ್ತಾಡಲು ಅವಕಾಶ ಒದಗಿಸಿಕೊಡುತ್ತಿದ್ದಾರೆ. ರಕ್ಷಿತ ಅರಣ್ಯಗಳಲ್ಲೂ ಸುತ್ತ ಕಂದಕದ ಏರ್ಪಾಡು ಇದ್ದು, ನಡುವಿನ ವಿಶಾಲ ಪ್ರದೇಶದಲ್ಲಿ ನಮ್ಮ ವಾಸಕ್ಕೆ, ತಿರುಗಾಟಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಕರ್ನಾಟಕದ ಬಂಡೀಪುರವೂ (ಭದ್ರಾ, ನಾಗರಹೊಳೆ) ಸೇರಿದಂತೆ ಹಿಮಾಚಲದ ತಪ್ಪಲಿನಲ್ಲಿರುವ ಕಾರ್ಬೆಟ್‌ ರಾಷ್ಟ್ರೀಯ ಅಭಯಾರಣ್ಯ ರಾಜಸ್ಥಾನದ ರಣಥಂಬೋರ್ ಅಭಯಾರಣ್ಯ ಇತ್ಯಾದಿ ವಿವಿಧ ಭಾಗಗಳಲ್ಲಿ ಇಂದು ನಮ್ಮ ರಕ್ಷಣಾ ಕೇಂದ್ರಗಳು ತಲೆ ಎತ್ತಿವೆ.” ಅಜ್ಜಿ ವಿವರಣೆ ನೀಡಿದಳು.

“ಇದು ನಿಜಕ್ಕೂ ಸಂತೋಷದ ಸಂಗತಿ. ಅಂತೂ ಈ ಎಲ್ಲ ಕಾರ್ಯಕ್ರಮಗಳಿಂದಾಗಿ ಈಗ ನಿಮ್ಮವರ ಸಂಖ್ಯೆ ತುಂಬ ಏರಿರಬೇಕಲ್ಲ?” ಪುಟ್ಟಿ ಪ್ರಶ್ನಿಸಿದಳು. ನಮ್ಮ ಸಂಖ್ಯೆ ಸ್ವಲ್ಪ ಮಟ್ಟಿಗೆ ಏರಿದೆ ನಿಜ, ಆದರೆ ಇಂದಿಗೂ ನಮ್ಮ ಕಳ್ಳ ಬೇಟೆ ನಡೆಯುತ್ತಲೇ ಇದೆ ಪುಟ್ಟೀ. ನಿಮ್ಮವರು ನಮ್ಮವರನ್ನು ಸಾಯಿಸುತ್ತಲೇ ಇದ್ದಾರೆ. ಕಾನೂನುಗಳು ಕಡತದಲ್ಲೇ ಇರುತ್ತವೆ ಹೊರತು ಪರಿಣಾಮಕಾರಿಯಾಗಿ ಜಾರಿಯಾಗುವುದಿಲ್ಲ. ಕಡಿಮೆ ಸಂಖ್ಯೆಯಲ್ಲಿರುವ ಅರಣ್ಯಪಾಲರಿಂದ ವಿಶಾಲ ಪ್ರದೇಶದ ಕಾವಲು ಅಸಾಧ್ಯವಾಗುತ್ತದೆ. ‘ಬೇಲಿಯೇ ಹೊಲ ಮೇದಂತೆ’ ಎನ್ನುತ್ತಾರಲ್ಲ? ಹಾಗೆ , ಕೆಲವೆಡೆ ಅರಣ್ಯ ಇಲಾಖೆಯ ಮಂದಿಗಳು ಕಾಡುಗಳ್ಳರ ಜೊತೆ ಶಾಮೀಲಾಗುತ್ತಾರೆ; ನಮ್ಮವರ ಕಳ್ಳ ಬೇಟೆಗೆ ಕುಮ್ಮಕ್ಕು ನೀಡುತ್ತಾರೆ. ಇದಕ್ಕೆ ಭ್ರಷ್ಟ ರಾಜಕಾರಣಿಗಳ ಬೆಂಬಲವೂ ಸಿಕ್ಕಿಬಿಡುತ್ತದೆ. ಕೆಲವು ಬಾರಿ ಬೆಂಕಿ ಆಕಸ್ಮಿಕಗಳಿಂದಲೂ ಕಾಡುಗಳು ಸುಟ್ಟು ಬೂದಿಯಾಗುತ್ತವೆ. ನಮ್ಮವರು ಸಂಕಟಕ್ಕೆ ಸಿಲುಕುತ್ತಾರೆ. ಇಂಥ ಹತ್ತು ಹಲವು ಕಾರಣಗಳಿಂದಾಗಿ, ರಕ್ಷಿತಾರಣ್ಯಗಳಲ್ಲೂ ಇಂದು ನಮ್ಮವರ ಜೀವ ಸುರಕ್ಷಿತವಾಗಿಲ್ಲ ಎನ್ನುವುದು ಒಂದು ವಿಚಿತ್ರ ಸತ್ಯ.”

 “ನಾಡಿನಲ್ಲಿ ಆಗಾಗ ಮನುಷ್ಯರ ಗಣತಿ ನಡೆಯುತ್ತದಲ್ಲ? ಹಾಗೆ, ಇಲ್ಲಿ ಕಾಡಲ್ಲಿ ನಮ್ಮವರ ಗಣತಿಯೂ ನಡೆಯುವುದುಂಟು. ನಮ್ಮ ಬಗೆಗಿನ ಅಂಕೆ ಸಂಖ್ಯೆಗಳೂ ಪ್ರಕಟಗೊಳ್ಳುವುದುಂಟು. ಆದರೆ ನಮ್ಮ ದೇಶದಲ್ಲಿ ನಿಜವಾಗಿ ಬದುಕಿರುವ ನಮ್ಮವರು ಎಷ್ಟು ಎನ್ನುವುದನ್ನು ಹೇಳಲು ಯಾರಿಂದಲೂ ಸಾಧ್ಯವಾಗದು.” ಅಜ್ಜಿ ಮಾತು ನಿಲ್ಲಿಸಿದಳು. ಮಾತಾಡಿ ಮಾತಾಡಿ ಅವಳು ಸೋತು ಹೋದಂತೆ ಕಂಡಿತು. ಆಯಾಸದಿಂದ ಅವಳು ಕಣ್ಣು ಮುಚ್ಚಿಕೊಂಡಳು. ನೀಡಿದ ಮುಂಗಾಲುಗಳ ಮೇಲೆ ತನ್ನ ತಲೆಯಿರಿಸಿ, ವಿರಮಿಸಿದಳು.

ಬಹಳ ಹೊತ್ತು ಅಜ್ಜಿ ಹಾಗೇ ಇದ್ದಳು. ಪುಟ್ಟಿ ಸಹ ಕಲ್ಲ ಮೇಲೆ ಕೂತೇ ಇದ್ದಳು. ಹಾಗೆ ಕೂತು ಕೂತು ಆಕೆಗೆ ಸೋತು ಹೋಗಿತ್ತು. ಕೂತಲ್ಲೇ ಅವಳು ನಿದ್ದೆ ತೂಗ ತೊಡಗಿದ್ದಳು. ಆದರೆ ಅವಳು ಕೂತಿದ್ದ ಕಲ್ಲು ದೊಡ್ಡದಿರಲಿಲ್ಲವಲ್ಲ? ಹಾಗಾಗಿ ಅದರ ಮೇಲೆ ನಿದ್ರಿಸುವುದೂ ಸಾಧ್ಯವಿರಲಿಲ್ಲ. ಕೆಳಗಡೆ ಮಲಗಬಹುದೆಂದರೆ ಅದು ಥಂಡಿ ನೆಲ. ಅಲ್ಲೂ ಮಲಗುವಂತಿಲ್ಲ. ಈಗ ಏನು ಮಾಡಲಿ? ಹೇಗೆ ಸಮಯ ಕಳೆಯಲಿ?” ಅವಳು ಯೋಚಿಸಿದಳು. ಅವಳ ನೋಟ ಮತ್ತೆ ಅಜ್ಜಿಯ ಕಡೆಗೆ ಹೊರಳಿತು. ಈಗ ಅಜ್ಜಿಯ ಸೀರೆ ಅವಳ ಗಮನ ಸೆಳೆಯಿತು. ಯಾರೋ ಹೆಂಗಸು ಉಡುತ್ತಿದ್ದ ಸೀರೆ ಅದು. ತನಗೆ ಕಾಡಿನಲ್ಲಿ ಸಿಕ್ಕಿತು ಎಂದಿದ್ದಳು ಅಜ್ಜಿ. ಅವಳ ಮಾತು ನಿಜವಿರಬಹುದೇ? ಅಥವಾ….. ಈ ಅಜ್ಜಿಯೇ ಆ ಹೆಂಗಸನ್ನು ಕೊಂದು, ತಿಂದಿರಬಹುದುದೇ..? ಸಂದೇಹವೊಂದು ಪುಟ್ಟಿಯ ಮನವನ್ನು ಕಾಡತೊಡಗಿತು.

ಈ ಅಜ್ಜಿಯ ಮಾತನ್ನು ಹೇಗೆ ನಂಬಲಿ …..? “ಗಾಯಗೊಂಡಿರುವಾಗ, ಮುಪ್ಪಿನಲ್ಲಿರುವಾಗ ನಮ್ಮವರು ಮನುಷ್ಯರನ್ನೂ ತಿನ್ನುವುದಿದೆ. ಒಂದು ಬಾರಿ ನರಮಾಂಸದ ರುಚಿಕಂಡ ನಮ್ಮವರು, ಮತ್ತೆ ನರಭಕ್ಷಕರಾಗುವುದೂ ಇದೆ” ಎಂದು ಈ ಅಜ್ಜಿಯೇ ಹೇಳಿದ್ದಳಲ್ಲ?  ಹಾಗೆ ಈಕೆ ನಿಜವಾಗಿ ನರಭಕ್ಷಕಿಯೇ ಇರಬಹುದೇ? ಇವಳು ಇನ್ನು ನನ್ನನ್ನೂ ಕೊಲ್ಲಬಹುದೇ? ಸದ್ಯ ನಾನು ನಿದ್ದೆ ಹೋಗುವುದನ್ನೇ ಕಾಯುತ್ತಿರಬಹುದೇ? ಅವಳು ಯೋಚಿಸಿದಳು. ಈ ಯೋಚನೇ ಬಂದುದೇ ತಡ, ಅವಳು ಇನ್ನಷ್ಟು ಹೆದರಿಕೊಂಡಳು. ನೆಟ್ಟ ನೋಟದಿಂದ ಅಜ್ಜಿಯನ್ನೇ ನೋಡತೊಡಗಿದಳು.

ತುಸು ಹೊತ್ತು ಕಳೆಯಿತು. ಅಜ್ಜಿ ಮೆಲ್ಲನೆ ಕಣ್ಣು ತೆರೆದಳು. ಅವಳು ಬಿಟ್ಟ ಕಣ್ಣುಗಳಿಂದ ಪುಟ್ಟಿಯನ್ನೇ ದಿಟ್ಟಿಸತೊಡಗಿದಳು. ಬಹಳ ಹೊತ್ತು ಅವಳು ಹಾಗೆ ದಿಟ್ಟಿಸುತ್ತಲೇ ಇದ್ದಳು. ಈಗ ಅವಳ ಬಾಯಲ್ಲಿ ನೀರೂರ ತೊಡಗಿತು. ಅವಳು ನಿಧಾನವಾಗಿ ತಲೆ ಎತ್ತಿದಳು. ಸರಿಯಾಗಿ ಎದ್ದು ಕೂತಳು. ಇನ್ನೂ ಅವಳು ಪುಟ್ಟಿಯನ್ನು ನೋಡುತ್ತಲೇ ಇದ್ದಳು. ಆದರೆ ಅವಳು ನೋಡುವ ರೀತಿ ಮಾತ್ರ ಮೊದಲಿನಂತಿರಲಿಲ್ಲ. ಕಣ್ಣಲ್ಲೇ ನುಂಗಿಬಿಡುವ ಹಾಗಿತ್ತು ಅವಳ ನೋಟ. ಅದನ್ನು ಕಂಡುದೇ ತಡ, ಪುಟ್ಟಿಯ ಮೈರೋಮಗಳು ನಿಮಿರಿ ನಿಂತವು. ಅವಳ ಎದೆಬಡಿತ ಜೋರಾಯಿತು. ಆದರೂ ಅವಳು ಧೈರ್ಯ ತಂದುಕೊಂಡಳು. ಅಜ್ಜಿಯನ್ನು ತಾನೇ ಮಾತಿಗೆಳೆಯಲು ನಿರ್ಧರಿಸಿದಳು.

“ಅಜ್ಜೀ, ನೀವೆಲ್ಲ ಕ್ರೂರ ಪ್ರಾಣಿಗಳೆಂದು ಹೇಳುವುದನ್ನು ಕೇಳಿದ್ದೆ. ಅದು ನಿಜವೆಂದೇ ನಂಬಿದ್ದೆ. ಆದರೆ ಮನುಷ್ಯರಲ್ಲೂ ಇಲ್ಲದ ಕೆಲವು ಒಳ್ಳೆಯ ಗುಣಗಳು ನಿಮ್ಮಲ್ಲಿರುವುದು ನನಗೀಗ ತಿಳಿದಿದೆ. ನಿಜ ಹೇಳುತ್ತೇನೆ ಅಜ್ಜೀ,  ನಿನ್ನಿಂದ ನನಗೆ ತುಂಬಾ ಉಪಕಾರವಾಯಿತು. ನಿಮ್ಮವರ ಬಹಳ ವಿಷಯಗಳನ್ನು ನನಗೆ ನೀನು ತಿಳಿಸಿದ್ದೀಯಾ. ನನಗಿಲ್ಲಿ ಆಸರೆ ನೀಡಿದ್ದೀಯಾ. ನಿನ್ನ ಜೊತೆ ಮಾತಾಡುತ್ತ ಸಮಯ ಕಳೆದುದೇ ಗೊತ್ತಾಗಲಿಲ್ಲ ನನಗೆ” ಅವಳು ಹೇಳಿದಳು.

“ನನಗೂ ಹಾಗೆಯೇ ಪುಟ್ಟೀ. ನಾನು ಇಲ್ಲಿಗೆ ಬಂದುದರಿಂದ ನನ್ನ ಮನಸ್ಸಿಗೆ ಬಹಳ ಖುಷಿಯಾಗಿದೆ. ನನ್ನ ಬೇಸರ ದೂರಾಗಿದೆ. ನಿಜ ಹೇಳಬೇಕೆಂದರೆ, ನಿನ್ನ ಮೇಲೆ ಅದೇನೋ ಪ್ರೀತಿ ಉಂಟಾಗಿದೆ. ಒಂದು ಬಾರಿ ನಿನ್ನನ್ನು ತಬ್ಬಿಕೊಳ್ಳಬೇಕು ಎನಿಸಿದೆ. ನೀನೇನೂ ಹೆದರಬೇಡ ಪುಟ್ಟೀ. ಒಂದು ಬಾರಿ ನನ್ನನ್ನು ನಾನು ತಬ್ಬಿಕೊಳ್ಳುತ್ತೇನೆ” ಎಂದಳು ಅಜ್ಜಿ. ಹಾಗೆ ಹೇಳಲುತ್ತಾ, ಅವಳು ಇನ್ನಷ್ಟು ನೆಟ್ಟಗೆ ಕೂತಳು.

ಪುಟ್ಟಿಗೆ ತನ್ನ ಅನುಮಾನ ನಿಜ ಎನಿಸಿತು. ಈ ಅಜ್ಜಿ ಈಗ ತನ್ನನ್ನು ಮುಗಿಸಿ ಬಿಡುತ್ತಾಳೆ. ಇಲ್ಲಿ ತನ್ನ ರಕ್ಷಣೆಗೆ ಬರುವವರು ಯಾರೂ ಇಲ್ಲ. ಹಾಗಾಗಿ ತನ್ನನ್ನು ತಾನೇ ರಕ್ಷಿಸಿಕೊಳ್ಳಬೇಕು. ಅವಳು ನಿರ್ಧರಿಸಿದಳು. ತತ್‌ಕ್ಷಣ ಅದಕ್ಕೆ ಅವಳು ಸಿದ್ಧಳೂ ಆದಳು. ಅಲ್ಲಿ ಆಯುಧವೇನಾದರೂ ಸಿಕ್ಕೀತೇ ಎಂದು ಅತ್ತಿತ್ತ ನೋಡಿದಳು. ಆದರೆ ಅಲ್ಲೇನೂ ಕಾಣಿಸಲಿಲ್ಲ. ಅಷ್ಟರಲ್ಲೇ, “ಏನು ಯೋಚಿಸುತ್ತಿದ್ದೀಯಾ? ನಾನು ಹೇಳಿದ್ದು ಕೇಳಿಸಲಿಲ್ಲವೇ, ಪುಟ್ಟೀ? ಒಂದೇ ಒಂದು ಬಾರಿ, ನಿನ್ನನ್ನು ನಾನು ಅಪ್ಪಿಕೊಳ್ಳುತ್ತೇನೆ. ಹೆದರಬೇಡ. ಹಾಂ?” ಎಂದಳು ಅಜ್ಜಿ. ಹಾಗೆ ಹೇಳುತ್ತಲೇ ಅವಳು ಹೆಜ್ಜೆ ಮುಂದಿಟ್ಟಳು.

ಪುಟ್ಟಿಗೆ ಆವೇಶ ಬಂದಂತಾಯಿತು. ಅವಳು ಥಟ್ಟನೆ ಮೇಲೆದ್ದಳು. ‘ನಿಲ್ಲು’ ಎಂದು ಅಬ್ಬರಿಸುತ್ತ, ಛಂಗನೆ ಅಲ್ಲಿಂದ ಹೊರ ಜಿಗಿದಳು. ಆಗಲೇ ‘ಧಡ್‌’ ಎಂಬ ಸದ್ದು ಕೇಳಿಸಿತು. ಪುಟ್ಟಿ ತನ್ನ ಮಂಚದಿಂದ ಕೆಳಗೆ ಬಿದ್ದಿದ್ದಳು. ಆದರೆ ಹುಲಿಯ ಗವಿಯಲ್ಲಿ ಅಲ್ಲ; ತನ್ನ ಮನೆಯಲ್ಲೇ.

“ಏನೇ ಪುಟ್ಟೀ, ಮಂಚದಿಂದ ಕೆಳಗೆ ಬಿದ್ದೆಯಾ ನೋವಾಗಿಲ್ಲ ತಾನೇ? ರಜಾದಿನ ವಾದರೇನು? ಎಂಟು ಗಂಟೆಯವರೆಗೂ ನಿದ್ದೆ ಮಾಡುವುದೇ?” ಅಡುಗೆ ಮನೆಯಿಂದ ಅಮ್ಮನ ಮಾತು ಕೇಳಿಸಿತು.

ಪುಟ್ಟಿ ಮೈಕೊಡವಿಕೊಂಡು ಮೇಲೆದ್ದಳು. ಸುತ್ತಮುತ್ತ ಒಮ್ಮೆ ಕಣ್ಣಾಡಿಸಿದಳು. ತಾನಿರುವುದು ತನ್ನ ಮನೆಯವರೇ ಎನ್ನುವುದು ಅವಳಿಗೆ ಖಾತರಿಯಾಯಿತು. ಆಗಲೇ ಕೆಲವು ದಿನಗಳ ಹಿಂದಿನ ಘಟನೆಯೊಂದು ಅವಳ ನೆನಪಿಗೆ ಬಂತು. ಯಾವುದದು ಘಟನೆ?

ಅಂದು ಅವರ ಶಾಲಾ ಮಕ್ಕಳು ಮೃಗಾಲಯಕ್ಕೆ ನೀಡಿದ್ದರು. ಅಲ್ಲಿ ಅವರು ಹುಲಿಗಳನ್ನೂ ಕಂಡಿದ್ದರು. ಅವರ ಬಗ್ಗೆ ನೂರಾರು ಪ್ರಶ್ನೆಗಳನ್ನೂ ಕೇಳಿದ್ದರು. ಅವರ ಪ್ರಶ್ನೆಗಳಿಗೂ ಟೀಚರ್ ಉತ್ತರ ನೀಡಿದ್ದರು. ಇನ್ನು ಹುಲಿಯಜ್ಜಿಯಿಂದ ಕೇಳಿ ತಿಳಿದ ಸಂಗತಿಗಳೆಲ್ಲ ಹುಲಿಯಜ್ಜೀ ಆಗಿರಲಿಲ್ಲ; ಬದಲಾಗಿ ಟೀಚರ್ ಮಕ್ಕಳಿಗೆ ಹೇಳಿದವರು ಆಗಿದ್ದವು.

ಪುಟ್ಟಿಕನಸಿನಲ್ಲೇ ಹುಲಿಯ  ಗುಹೆಗೆ ಹೋಗಿ ಬಂದಿದ್ದೆ.