ಶಿರಸಿಯ ಖೂರ್ಸೆ ಊರಿಗೆ ಹೋಗಿ ಭಾಷಣ ಮಾಡಬೇಕಿತ್ತು. ನೀರು, ಕಾಡು ಅಂತ ಮಾತಾಡುವದು ಬೇಜಾರಾಗಿ ಹಳೆಯ ದಾಖಲೆ ತೆಗೆದು ಊರಿನ ಕತೆ ಹುಡುಕುತ್ತಿದ್ದೆ. ಕರಾವಳಿ – ಬಯಲು ಸೀಮೆ ನಡುವೆ ಸರಕು ಸಾಗಾಟಕ್ಕೆ  ಪ್ರಮುಖ ಮಾರ್ಗ ಎಂದು  ಇಂದಿಗೆ ೧೫೦ ವರ್ಷ ಹಿಂದೆ  ಬ್ರಿಟೀಷರು ಗುರುತಿಸಿದ ದೇವಿಮನೆ ಘಟ್ಟದ ದಾರಿಯಲ್ಲಿ  ಸಿಗುವ ಹಳ್ಳಿ ಇದು. ಪಶ್ಚಿಮ ಘಟ್ಟದ ನೆತ್ತಿಯಲ್ಲಿ ನಿಂತ ಊರಲ್ಲಿ ವರ್ಷಕ್ಕೆ  ೩೫೦೦ ಮಿಲಿ ಮೀಟರ್ ಅಬ್ಬರದ ಮಳೆ, ಎಕರೆಯಲ್ಲಿ  ೧. ೩೦ ಕೋಟಿ ಲೀಟರ್ ಸುರಿಯುತ್ತದೆ. ಆದರೆ  ಕಾಡಲ್ಲಿ ಮಾತ್ರ  ಕುಬ್ಜಗಿಡಗಳು, ಬಿರುಗಾಳಿ ಪ್ರಹಾರಕ್ಕೆ ಮೇಲೇಳುವ ಶಕ್ತಿ ಕಳಕೊಂಡಿದೆ. ಹೆಚ್ಚೆಂದರೆ ೪೦ ಅಡಿ ಎತ್ತರದ ಮರಗಳು, ಇನ್ನುಳಿದವು  ಕುರುಚಲು  ಸಸ್ಯಗಳೇ ಜಾಸ್ತಿ. ಕುಂಟುನೇರಲು, ಬಿಕ್ಕೆ, ಕಾರೆ, ಹಣಗೇರಿ, ಈಚಲು, ಮುರುಗಲು,ಅಂಡಿ, ನೇರಳೆ, ಅಣಲೆ ಹೀಗೆ ನಿತ್ಯಹರಿದ್ವರ್ಣ, ಎಲೆ ಉದುರಿಸುವ ಮರಜಾತಿಗಳ ಬೀಡು. ಮಳೆ ಶುರುವಾದರೆ  ಎಲ್ಲೆಲ್ಲೂ  ನೀರೇ ನೀರು! ಬೇಸಿಗೆ ಆರಂಭಕ್ಕೆ  ಕೊರತೆ ಆರಂಭ, ಕುಡಿಯುವ ನೀರಿನ ಬಾವಿಗಳಲ್ಲಿ ನೀರಿದೆ, ಕೃಷಿಗೆ ಮಾತ್ರ ತೀವ್ರ ಕೊರತೆ. ಹೀಗಾಗಿ ಸುಮಾರು ೩೫೦ ಎಕರೆ ಸಾಗುವಳಿ ಕ್ಷೇತ್ರದ ಮಲೆನಾಡಿನ ಮಧ್ಯದ ಇಲ್ಲಿ  ಸರಿಯಾಗಿ  ಒಂದು ಎಕರೆ ಅಡಿಕೆ ತೋಟ ಕೂಡಾ ಇಲ್ಲ!

ಮಳೆ ಪ್ರಹಾರಕ್ಕೆ ಮಣ್ಣಿನ ಸತ್ವಗಳೆಲ್ಲ ಸೋಪು ಹಾಕಿ ತೊಳೆದಂತೆ ಕೊಚ್ಚಿಹೋಗಿವೆ, ಜಮೀನಿನ ಮಣ್ಣು ನಮ್ಮ ಅಂಗಳಕ್ಕೆ ರಂಗೋಲಿ ಹಾಕುವ ಬಿಳಿ ಬಿಳಿ ಶೇಡಿಯ ನೆಂಟನಂತಿದೆ! ಇಲ್ಲಿನ ಪ್ರಮುಖ ಗದ್ದೆ ಬಯಲಿಗೆ “ಬಿಳಿಗದ್ದೆಎಂದೇ ಹೆಸರಿದೆ. ಎಕರೆಗೆ  ೮ ಚೀಲ ಭತ್ತ ಬೆಳೆದರೆ ಬಂಪರ್ ಬೆಳೆ ಎನ್ನುವ ಸ್ಥಿತಿ. ಮಳೆ ಆಶ್ರಿತ ಭತ್ತದ ಬೇಸಾಯ ಬಿಟ್ಟರೆ ಬೇರಾವ ಕಸುಬೂ  ಇಲ್ಲ.  ಇಲ್ಲಿನ ಹತ್ತಾರು ಎಕರೆ ಭೂಮಿ ಒಡೆಯನಿಗೂ  ಕೃಷಿ  ಸಿರಿವಂತಿಕೆ ನೀಡಲಿಲ್ಲ. ಕರಾವಳಿ, ಅರೆಮಲೆನಾಡು, ಬಯಲುಸೀಮೆಗಳಲ್ಲಿ  ನೀರಿಂಗಿಸಿ, ಕೆರೆ ನಿರ್ಮಿಸಿ ಎಂದು ಕರೆ ಕೊಡುವ ನಾವು ಇಲ್ಲೇನು ಮಾಡಬಹುದು? ಯೋಚಿಸಿದಷ್ಟೂ  ಸುರಿಯುವ ಮಳೆಯ ಲೆಕ್ಕ ಸಿಗುತ್ತದೆಯೇ  ಹೊರತೂ ಇಂಗಿಸುವ ದಾರಿ ಕಾಣುವದಿಲ್ಲ. ಮೇಲ್ಮಣ್ಣು ಮರಳು ಮಿಶ್ರಿತ, ಹತ್ತಡಿಯ ಆಳದಲ್ಲಿ ಘಟ್ಟಿ ಕೆಂಪುಕಲ್ಲಿನ ಹಾಸು. ಮಳೆ ಸುರಿಯುತ್ತದೆ, ಮೇಲ್ನೋಟಕ್ಕೆ ನೀರು ಇಂಗುತ್ತದೆ, ಬೇಸಿಗೆಗೆ  ಕೈಗೆಟಕುವ ಹಂತದಲ್ಲಿ  ಅಂತರ್ಜಲ ಉಳಿಯದೇ ಬಡ ಕೃಷಿಕರಿಗೆ ಸಮಸ್ಯೆ  ಬೆಳೆಯುತ್ತದೆ.  ಇಲ್ಲಿ  ಗುಡ್ಡ, ಕಣಿವೆಯ ಜಾಗಗಳಲ್ಲಿ ಹೆಚ್ಚು ಹೆಚ್ಚು ಕೆರೆ ನಿರ್ಮಿಸಬೇಕು, ಆ ಕೆರೆಯ ತಳ ಭಾಗಕ್ಕೆ  ಎರಡಡಿ ದಪ್ಪ ಹಾಸು  ಬಯಲುಸೀಮೆಯ ಅಂಟು ಮಣ್ಣು  ಹಾಕಬೇಕು. ಕೆರೆಯಲ್ಲಿ ನಿಧಾನಕ್ಕೆ ನೀರಿಂಗಿಸುವ ಸೂತ್ರವೇನೂ ಸಿದ್ಧವಿದೆ. ಆದರೆ ಇನ್ನೂ ಮಾದರಿ ನಿರ್ಮಾಣವಾಗಿಲ್ಲ.

ನೂರಾರು ವರ್ಷಗಳಿಂದಲೂ ಈ ಹಳ್ಳಿಯಲ್ಲಿ ಕೃಷಿ ನೆಲೆಯಿದೆ ಎಂದರೆ  ಏನಾದರೊಂದು ಪರಂಪರೆಯ ಸಂರಕ್ಷಣೆ ಮಾರ್ಗ ಇರಬಹುದು ಎಂಬ ಊಹೆ. ಕ್ರಿ.ಶ ೧೮೯೧ರಲಿ ೨೪೧ ಜನಸಂಖ್ಯೆ, ಮುಂದೆ ೧೯೦೧ರಲ್ಲಿ ೨೫೧ಕ್ಕೆ ಏರಿ ೧೯೪೧ರಲ್ಲಿ ೧೫೩ಜನ ಈ ಗ್ರಾಮದಲ್ಲಿದ್ದರೆಂದು ಬ್ರಿಟೀಷ್ ಕಾಲದ ಸರ್ವೆ ಸೆಟ್ಲಮೆಂಟ್ ವರದಿಗಳು ಹೇಳುತ್ತವೆ.  ಕಳೆದ ೨೦೦೧ರ ಜನಗಣತಿ ವರದಿ ಪ್ರಕಾರ ೧೦೮ ಮನೆಗಳಿಂದ ೪೮೮ ಜನರಿರುವ ದಾಖಲೆ. ಇನ್ನುಳಿದ ಪ್ರದೇಶಕ್ಕೆ  ಹೋಲಿಸಿದರೆ  ಕಳೆದ ಒಂದು ನೂರು ವರ್ಷಗಳಲ್ಲಿ  ಜನಸಂಖ್ಯೆ  ಅಂತಹ ಪ್ರಮಾಣದಲ್ಲಿ  ಏರಲೂ ಇಲ್ಲ, ಇಳಿಯಲೂ ಇಲ್ಲ ಎನ್ನುವಂತಿದೆ.  ಇದಕ್ಕೆ ಮುಖ್ಯಕಾರಣ ಇಲ್ಲಿನ ಮಣ್ಣುಗುಣ. ತೋಟಗಾರಿಕೆಗೆ ಅನುಕೂಲಕರ ಮಣ್ಣು, ನೀರು ಲಭ್ಯವಿದ್ದರೆ ಮಲೆನಾಡಿನ ಈ ಊರು ಹಿಗ್ಗಿ ಬೆಳೆದಿರುತ್ತಿತ್ತು. ಈಗಲೂ ಇಲ್ಲಿ ಭತ್ತದ ಬಡವರು ತುಂಬಿದ್ದಾರೆ.

ಖುರ್ಸೆ ಹಳ್ಳಿಯ ನೀರಿನ ಕತೆಯನ್ನು ಊರವರೇ ಹೇಳಬಲ್ಲರು. ಮಂಗನಕೆರೆ, ಕುಳಗೆರೆ, ಮಾಸ್ತಿಕೆರೆ, ಸಣ್ಣಕೆರೆ  ಎಂಬ ಸಣ್ಣಪುಟ್ಟ ಸರ್ಕಾರಿ ಕೆರೆಗಳಿವೆ. ೩೫-೪೫ ಅಡಿ ಆಳದ ಬಾವಿಗಳು ಕುಡಿಯುವ ನೀರಿನ ಮೂಲಗಳು. ಬೇಸಿಗೆಯ ಕಟ್ಟಕಡೆಗೆ ಮಾಸ್ತಿಕೆರೆಯಲ್ಲಿ ಮಾತ್ರ ನೀರಿರುತ್ತದೆ ಎಂದು  ಹಳ್ಳಿಗ ಮಹಾಬಲೇಶ್ವರ ನಾಯ್ಕ್  ಸುಳಿವು ನೀಡಿದರು. ಇಲ್ಲಿ ಕಲ್‌ಹೊಳೆ, ಚಳ್ಳೆಹೊಳೆ, ಗೋಳಿಹೊಳೆ, ಮೊಸಳೆಗುಂಡಿ ಹೊಳೆ  ಎಂಬ ಪುಟ್ಟ ಹಳ್ಳಗಳಿವೆ. ಕಲ್‌ಹೊಳೆ ಬೇಸಿಗೆ ಆರಂಭದಲ್ಲಿ ಬತ್ತುತ್ತದೆ, ನಂತರ ಇನ್ನುಳಿದವು ಒಣಗುತ್ತ  ಮೊಸಳೆಗುಂಡಿ ಹೊಳೆಯಲ್ಲಿ ಮಾತ್ರ ಬೇಸಿಗೆಯ ಕೊನೆಯವರೆಗೆ  ಅಲ್ಲಲ್ಲಿ ನೀರಿರುತ್ತದೆ.

ಮೊಸಳೆಗುಂಡಿಯಲ್ಲಿ ನೀರಿರುವದು ನಮ್ಮ ಜಲಶೋಧಕ್ಕೆ  ಬೇರೆಯ ಆಯಾಮ ನೀಡುತ್ತದೆ. ಮಲೆನಾಡಿನಲ್ಲಿ  ಪ್ರತಿ ಊರಿನಲ್ಲಿ ಹುಲಿದೇವರ ಕಟ್ಟೆಗಳಿವೆ. ಇಂತಹ ಕಟ್ಟೆಗಳ ಸನಿಹದಲ್ಲಿ ವರ್ಷವಿಡೀ ನೀರಿರುತ್ತವೆಂಬುದನ್ನು  ಹಲವು ಆಧ್ಯಯನಗಳಲ್ಲಿ ನಾನು ಗಮನಿಸಿದ್ದೆ. ಹುಲಿದೇವರ ಕತೆ ಕೇಳಿದಾಗ ಊರಿನ ರಾಮಲಿಂಗೇಶ್ವರ ದೇವಾಲಯದ ಪಕ್ಕ ಹುಲಿದೇವರ ಕಾಡಿರುವ ಸಂಗತಿ ತಿಳಿಯಿತು. ವಿವರ ಕೆದಕಿದರೆ ಇಂದಿಗೆ ೪೦-೫೦ ವರ್ಷಗಳ  ಹಿಂದೆ ಇಲ್ಲಿನ ಸುಮಾರು ೩೦ ಎಕರೆ ವಿಸ್ತೀರ್ಣದ ಕಾಡು ಊರಿನ ರಕ್ಷಿತಾರಣ್ ! ಚಿಕ್ಕ ಟೊಂಗೆ ಕೂಡಾ ಕಡಿಯಲು ಜನ ಭಯ ಪಡುತ್ತಿದ್ದರು, ಈಗ ನಂಬಿಕೆಗಳು ಕಡಿಮೆಯಾಗಿವೆಯಾದರೂ ಕಾಡು ತೀರ ಹಾಳಾಗಿಲ್ಲ. ಇಲ್ಲಿಂದ ಕಿಲೋ ಮೀಟರ್ ದೂರದಲ್ಲಿ ಮೊಸಳೆಗುಡಿ ಹೊಳೆಯಿದೆ, ಅಲ್ಲಿ ನೀರಿರುತ್ತದೆ. ಈ ಕಾಡಿನ ಸನಿಹದಲ್ಲಿ ಮಾಸ್ತಿಕೆರೆಯಿದೆ, ಅಲ್ಲಿಯೂ ವರ್ಷವಿಡೀ ನೀರು ದೊರೆಯುತ್ತದೆ! ಕಾಡಿನ ಒಂದು ಪಾರ್ಶ್ವದಲ್ಲಿ ಗದ್ದೆ ಬಯಲಿದೆ, ಅಲ್ಲಿ ಶಿವರಾತ್ರಿಯವರೆಗೂ  ಮಣ್ಣಿನಲ್ಲಿ ತೇವಾಂಶವಿರುತ್ತಿತ್ತೆಂದು  ಕೃಷಿಕರು ನೆನಪಿಸಿಕೊಳ್ಳುತ್ತಾರೆ.

ನೀರು ಅಮೂಲ್ಯ ಸಂಪತ್ತು ಎನ್ನುತ್ತೇವೆ, ಹನಿ ನೀರು ಕಳಕೊಂಡು ಬಳಲಿದ ಸಾವಿರಾರು ಹಳ್ಳಿ ನೋಡುತ್ತೇವೆ. ಕಡೆಗೆ ಕೊಳವೆಬಾವಿಗಳಲ್ಲಿ, ಬೃಹತ್ ಯೋಜನೆಗಳಲ್ಲಿ ನೀರಿನ ಕನಸು ಕಾಣಲಾಗುತ್ತದೆ. ಮಲೆನಾಡಿನ  ಖೂರ್ಸೆಯ ಹಳೆಯ ತಲೆಮಾರು ಪುಟ್ಟ ಹುಲಿದೇವರ ಕಾಡಲ್ಲಿ  ನೀರಿನ ಮೂಲ ರಕ್ಷಿಸುವ ಸಿರಿವಂತ ಪರಂಪರೆ ಹೊಂದಿತ್ತು. ನೈಸರ್ಗಿಕ ಸಂಪನ್ಮೂಲ ನಿರ್ವಹಣೆಗೆ ವಿವೇಕದ ಮಾರ್ಗ ಅನುಸರಿಸಿತ್ತು. ಈಗ ಅಬ್ಬರದ ಮಳೆಯ  ಇಲ್ಲಿ ಕಾಡು ಸಂರಕ್ಷಿಸಿ ನೀರು ಗೆಲ್ಲುವ ವಿದ್ಯೆ ಮರೆತಿದೆ. ನೀರಿಲ್ಲದೇ ಕೃಷಿ ಬಡತನಕ್ಕೆ ಬಳಲಿದ ಖುರ್ಸೆಯಂತಹ ಊರುಗಳಿಗೆ ನೈಸರ್ಗಿಕ  ಕಾಡಿನಲ್ಲಿ ಮಾತ್ರ  ನೀರಿನ ಕನಸು ನನಸಾಗಬಹುದು.