ಹಸುವು ಹುಲ್ಲನ್ನು ತಿನ್ನುತ್ತದೆ. ಅದರಿಂದ ಮನುಷ್ಟರಿಗೆ ಉಪಯೋಗವಾಗುವ ಹಾಲನ್ನು ತಯಾರಿಸುತ್ತದೆ. ಮನುಷ್ಯರು ತಿನ್ನಲಾಗದ ಈ ಹುಲ್ಲನ್ನು ಅಥವಾ ಬಹಳ ಬಿರುಸಾದ ಜೋಳದ, ರಾಗಿಯ ಇತ್ಯಾದಿ ಮೇವನ್ನು ಹಸು, ಎಮ್ಮೆಗಳು ಹೇಗೆ ಹಾಲನ್ನಾಗಿ ಪರಿವರ್ತಿಸುತ್ತವೆ?ಮನುಷ್ಯನೇ ಏಕೆ ಹಾಲಿನ ಬದಲು ಮೇವನ್ನು ತಿನ್ನುವುದಿಲ್ಲ. ಏಕೆಂದರೆ, ಹಸು ಎಮ್ಮೆಗಳು ಮೇವನ್ನು ತಿಂದು ಜೀರ್ಣಿಸಿಕೊಂಡು, ರಕ್ತವನ್ನಾಗಿ ಪರಿವರ್ತಿಸಿ, ನಂತರ ಕೆಚ್ಚಲಿನಲ್ಲಿ ಹಾಲನ್ನಾಗಿ ಪರಿವರ್ತಿಸುವ ಕ್ಷಮತೆಯನ್ನು ಹೊಂದಿವೆ. ಈ ಕ್ಷಮತೆ ಯಾವ ರೀತಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ನೋಡೋಣ.

ಹಸು, ಎಮ್ಮೆ, ಆಡು, ಕುರಿ ಮತ್ತು ಜಿಂಕೆ ಇವೆಲ್ಲ ಮೆಲುಕು ಹಾಕುವ ಪ್ರಾಣಿಗಳು (Ruminants). ಇವು ಆಹಾರ ಸೇವಿಸುವಾಗ ವೇಗವಾಗಿ ಸೇವಿಸುತ್ತವೆ. ಇದರಿಂದ ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ. ಇದಕ್ಕಾಗಿ ಅವು ಹೊಸ ದಾರಿಯನ್ನು ವಿಕಸಿಸಿಕೊಂಡಿವೆ.  ಅದೇನೆಂದರೆ, ಅವು ಬೇಗಬೇಗನೆ ಆಹಾರ ಸೇವಿಸಿದ ಮೇಲೆ ಈ ಆಹಾರವನ್ನು ಹೊಟ್ಟೆಯಲ್ಲಿ ಒಂದು ಬಗೆಯ ಚೀಲದಲ್ಲಿ ಶೇಖರಿಸಿಟ್ಟುಕೊಳ್ಳುತ್ತವೆ. ಆಹಾರ ಸೇವನೆ ಮುಗಿದ ನಂತರ, ವಿಶ್ರಾಂತಿಯ ಸಮಯದಲ್ಲಿ, ಈ ಅರೆ ಬರೆ ತಿಂದ ಆಹಾರವನ್ನು ಮೆಲುಕು ಹಾಕುವುದರ ಮೂಲಕ ಪುನಃ ಬಾಯಿಗೆ ತಂದುಕೊಂಡು ಜಗಿಯುತ್ತವೆ. ಆಹಾರವನ್ನು ಸರಿಯಾಗಿ ಜಗಿದ ಮೇಲೆ, ಪುನಃ ನುಂಗುತ್ತವೆ. ನಂತರ ಆಹಾರವು ಹೊಟ್ಟೆಯ ಮುಂದಿನ ಭಾಗಕ್ಕೆ ಹೋಗುತ್ತದೆ.

ಹಸುವಿನ ಹೊಟ್ಟೆಯಲ್ಲಿ (ಚಿತ್ರದಲ್ಲಿ ತೋರಿಸಿರುವಂತೆ) ನಾಲ್ಕು ಭಾಗಗಳಿರುತ್ತವೆ.  ಆವುಗಳನ್ನು ಕ್ರಮವಾಗಿ ರೂಮೆನ್ (Rumen), ರೆಟಿಕ್ಯುಲಮ್ (Reticulum), ಒಮೆಸಮ್ (Omesum)ಮತ್ತು ಎಬೋಮೆಸಂ (Abomasum)ಎಂದು ಕರೆಯುತ್ತಾರೆ.

ಮೆಲುಕು ಹಾಕಿದ ನಂತರ ಸರಿಯಾಗಿ ನುರಿತ ಆಹಾರ, ರೂಮೆನ್‌ನಲ್ಲಿ ಬರುತ್ತದೆ.  ರೂಮೆನ್‌ನಲ್ಲಿ ಹಲವಾರು ಬಗೆಯ ಸೂಕ್ಷ್ಮ ಜೀವಾಣುಗಳಿರುತ್ತವೆ. ಇವುಗಳಲ್ಲಿ ಪ್ರಮುಖವಾದುವು ಪ್ರೋಮತ್ತು ಬ್ಯಾಕ್ಟೀರಿಯಾಗಳು. ಇವುಗಳು ಕೆಲವು ಬಗೆಯ ಕಿಣ್ವಗಳನ್ನು (Enzymes)ಸ್ರವಿಸುತ್ತವೆ. ಈ ಕಿಣ್ವಗಳು ಬಿರುಸಾದ ಹುಲ್ಲು ಮತ್ತು ಮೇವನ್ನು ಜೀರ್ಣಿಸುತ್ತವೆ. ಹಸುವಿನ ಸ್ವಂತ ಕಿಣ್ವಗಳಿಗಾಗಲೀ, ಮನುಷ್ಯರ ಕಿಣ್ವಗಳಿಗಾಗಲೀ ಈ ಶಕ್ತಿ ಇರುವುದಿಲ್ಲ. ಆದರೆ ಈ ಸೂಕ್ಷ್ಮ ಜೀವಾಣುಗಳು ಇಂಥ ಬಿರುಸಾದ ಪದಾರ್ಥ ಗಳನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತವೆ.  ಈ ಪ್ರಕ್ರಿಯೆಯಲ್ಲಿ ಜೀರ್ಣವಾಗದೇ ಉಳಿದ ಪದಾರ್ಥ ಸಗಣಿಯ ರೂಪದಲ್ಲಿ ಹೊರಬರುತ್ತದೆ.

ರಕ್ತವು ದೇಹದ ವಿವಿಧ ಭಾಗಗಳಿಗೆ ಅವಶ್ಯಕವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ.  ಕೆಚ್ಚಲಿನಲ್ಲಿ ಹಾಲು ತಯಾರಾಗುವ ಅಂಗಾಂಶಗಳಿರುತ್ತವೆ. ಇಲ್ಲಿ, ಹಾಲು ತಯಾರಾಗಲು ಬೇಕಾದ ಪೋಷಕಾಂಶಗಳನ್ನು ರಕ್ತವು ಒದಗಿಸುತ್ತದೆ. ಹಾಲಿನ ಶರ್ಕರವಾದ ಲಾಕ್ಟೋಸ್ ತಯಾರಾಗುತ್ತದೆ, ಹಾಲಿನ ಪ್ರೋಕೇಸೀನ್, ತಯಾರಾಗುತ್ತದೆ. ಹೀಗೆ, ರಕ್ತದಲ್ಲಿನ ಪೋಷಕಾಂಶಗಳನ್ನು ಉಪಯೋಗಿಸಿಕೊಂಡು, ಕೆಚ್ಚಲು ಹಾಲನ್ನು ಉತ್ಪತ್ತಿ ಮಾಡುತ್ತದೆ. ಈ ರೀತಿಯಾಗಿ, ಮನುಷ್ಯರು ತಿನ್ನಲಾಗದ, ಜೀರ್ಣಸಿಕೊಳ್ಳಲಾಗದ ಹುಲ್ಲು ಮತ್ತು ಇತರ ಹಲವಾರು ಸಸ್ಯಗಳನ್ನು ತಿಂದು, ಅತಿ ಆರೋಗ್ಯದಾಯಕವಾದ, ಪುಷ್ಟಿಕರವಾದ ಹಾಗೂ ರುಚಿಕರವಾದ ಆಹಾರವನ್ನು ಹಸು, ಎಮ್ಮೆ ಮೊದಲಾದ ಹೈನು ಪ್ರಾಣಿಗಳು ಮನುಷ್ಯರಿಗೆ ಒದಗಿಸುತ್ತವೆ. ಇಂಥ ಉಪಯುಕ್ತ ಜೀವಿಗಳಿಗೆ ಮನುಷ್ಯರು ಕೃತಜ್ಞರಾಗಿರಬೇಕಲ್ಲವೇ?