ಮೈಸೂರು ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ ನಂಜನಗೂಡು ತಾಲ್ಲೂಕು ರಾಮಾಯಣ ಕಾಲದಿಂದಲೂ ಪ್ರಸಿದ್ಧವಾಗಿರುವ ಪ್ರದೇಶ. ಲಕ್ಷಾಂತರ ಜನರ ನೆಚ್ಚಿನ ದೈವ ನಂಜುಂಡೇಶ್ವರ. ಊರು ಪ್ರಸಿದ್ಧವಾಗಿರುವುದು ಶ್ರೀಕಂಠೇಶ್ವರನ ದೇವಾಲಯದಿಂದ. ಇದು ಕರ್ನಾಟಕದಲ್ಲೆ ಅತಿ ದೊಡ್ಡ ದೇವಾಲಯ. ನಂಜನಗೂಡು ಪವಿತ್ರಕ್ಷೇತ್ರ. ಇಲ್ಲಿ ಕಪಿಲಾ ನದಿ ಹರಿದಿದೆ.

ಕಪಿಲೆಯ ಮಡಿಲಲ್ಲಿ ನಂಜನಗೂಡಿನಲ್ಲಿ ಆಡಿ ಬೆಳೆದ ಸಜೀವಿ ಕವಿ, ಗಮಕಿ ಶ್ರೀ ಹುಲ್ಲಹಳ್ಳಿ ಮಲ್ಲಾರಾಧ್ಯ ರಾಮಾರಾಧ್ಯರು, ಹುಲ್ಲಹಳ್ಳಿ ಒಂದು ಹೋಬಳಿ ಕೇಂದ್ರ. ನಂಜನಗೂಡಿಗೆ ಕೇವಲ ಹದಿನಾಲ್ಕು ಕಿ.ಮೀ. ದೂರ. ಕಪಿಲಾ ನದಿದಂಡೆಯ ಮೇಲಿನ ಗ್ರಾಮ. ಅಲ್ಲಿ ವೀರಶೈವ ಕುಟುಂಬಕ್ಕೆ ಸೇರಿದ ಜ್ಯೋತಿಷ್ಯ ಪ್ರವೀಣ ಮಲ್ಲಾರಾಧ್ಯ ಮತ್ತು ಶ್ರೀಮತಿ ಪಾರ್ವತಮ್ಮ ದಂಪತಿಗಳಿಗೆ ಹಿರಿಯ ಮಗನಾಗಿ ರಾಮಾರಾಧ್ಯರು ೧೯೦೭ರ ಏಪ್ರಿಲ್‌ ೬ ರಂದು ಜನಿಸಿದರು. ಮಲ್ಲಾರಾಧ್ಯರದು ದೊಡ್ಡ ಕುಟುಂಬವೇ ಎನ್ನಬೇಕು. ರಾಮಾರಾಧ್ಯರು ಸೇರಿದಂತೆ ಐದು ಗಂಡು ಮಕ್ಕಳು. ಇಬ್ಬರು ಹೆಣ್ಣು ಮಕ್ಕಳು. ಜ್ಯೋತಿಷ್ಯ ಹೇಳುತ್ತಿದ್ದುದರಿಂದ ಮಲ್ಲಾರಾಧ್ಯರು ಸುತ್ತಮುತ್ತಲ ಗ್ರಾಮಗಳಿಗೂ ಸುಪರಿಚಿತರಾಗಿದ್ದ ವ್ಯಕ್ತಿ. ಅವರ ಮಕ್ಕಳ ಪೈಕಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಪಾಂಡಿತ್ಯವನ್ನು ಸಂಪಾದಿಸಿಕೊಂಡವರೆಂದರೆ ರಾಮಾರಾಧ್ಯರೇ. ಇವರು ಅಜ್ಜಿ ಅಕ್ಕಮ್ಮಣಿಯವರ ಆರೈಕೆಯಲ್ಲಿಯೇ ಬಾಲ್ಯ ಕಳೆದರು.

ರಾಮಾರಾಧ್ಯರ ಪ್ರಾಥಮಿಕ ವಿದ್ಯಾಭ್ಯಾಸ ಹುಲ್ಲಹಳ್ಳಿಯಲ್ಲೆ ಆಯಿತು. ಮುಂದೆ ನಂಜನಗೂಡಿನ ಮಾಧ್ಯಮಿಕ ಶಾಲೆಯಲ್ಲಿ ಓದಿ ಅಪ್ಪರ್ ಪ್ರೈಮರಿ ಪರೀಕ್ಷೆ ಮುಗಿಸಿದರು. ಮೈಸೂರಿನಲ್ಲಿ ಪ್ರೌಢಶಾಲೆ ಸೇರಿ ಮೆಟ್ಟಿಕ್ಯುಲೇಷನ್‌ ಮಾಡಿಕೊಂಡರು. ೧೯೨೬ರಲ್ಲಿ ತಾಂಡವಪುರದಲ್ಲಿ ಪ್ರಾಥಮಿಕ ಶಾಲೆಯ ಅಧ್ಯಾಪಕರಾಗಿ ಕೆಲಸಕ್ಕೆ ಸೇರಿದರು.

ಮೊದಲಿನಿಂದಲೂ  ಆರಾಧ್ಯರಿಗೆ ನಾಟಕ ಕಲೆಯ ಗೀಳು. ಅಭಿನಯ ಅವರಿಗೆ ಕರಗತವಾಗಿತ್ತೆನ್ನಬಹುದು. ಹುಲ್ಲಹಳ್ಳಿಯ ‘ದಿ ಅಸೋಸಿಯೇಟೆಡ್‌ ಡ್ರಾಮಾಟಿಕ್‌ ಕಂಪೆನಿಯು ‘ಕಾಳಿದಾಸ’, ‘ಸದಾರಮೆ’, ‘ಗುಲೇಬಕಾವಲಿ’ ಮೊದಲಾದ ನಾಟಕಗಳನ್ನು ಆಡತೊಡಗಿತ್ತು. ರಾಮಾರಾಧ್ಯರು ಈ ಸಂಸ್ಥೆಯಲ್ಲಿ ಕಲಾವಿದರಾಗಿ ಕೆಲಸ ಮಾಡಿದರೂ ಅವರ ಒಲವೆಲ್ಲ ಕಾವ್ಯವಾಚನ, ಕೀರ್ತನ ಈ ಕಡೆ ಹರಿಯಿತು. ಸುಶ್ರಾವ್ಯವಾಗಿ ಹಾಡುತ್ತಿದ್ದರು . ಬೇರೆ. ಅರಾಧ್ಯರ ಕಡೆಯ ಸೋದರ ಸಿದ್ಧಲಿಂಗಾರಾಧ್ಯರು ಕನ್ನಡನಾಡಿನಲ್ಲಿ ಮನೆಮಾತಾಗಿದ್ದು ನೂರು ವರ್ಷಗಳನ್ನು ಕಂಡ ಗುಬ್ಬಿ ಕಂಪೆನಿಯಲ್ಲಿ ನಟರಾಗಿ ಹಲವಾರು ವರ್ಷಗಳು ಕೆಲಸ ಮಾಡಿದರು. ರಾಮಾರಾಧ್ಯರು ಸಾಮಾನ್ಯವಾಗಿ ರಜಾದಿನಗಳಲ್ಲಿ ಹುಲ್ಲಹಳ್ಳಿಗೆ ಬರುತ್ತಿದ್ದರು. ಅವರು ಊರಿಗೆ ಬರುವರೆಂದರೆ ಜನರಿಗೆ ಹಿಗ್ಗೋ ಹಿಗ್ಗು. ನಾಟಕವಾಡಬಹುದು. ಆರಾಧ್ಯರಿಂದ ಶಿವಕಥೆ ಮಾಡಿಸಬಹುದು. ನಾಲ್ಕುದಿನ ನೆಮ್ಮದಿಯಾಗಿ ಕಳೆಯಬಹುದು ಎಂದುಕೊಳ್ಳುತ್ತಿದ್ದರು. ಆರಾಧ್ಯರಿಗೂ ಅವೆಲ್ಲಲ ಪ್ರಿಯವೇ.

 

ತಾಂಡವಪುರ, ರಾವದೂರು ಈ ಕೆಲವೆಡೆ ಪ್ರಾಥಮಿಕ ಶಾಲಾ ಅಧ್ಯಾಪಕರಾಗಿ ಕೆಲಸ ಮಾಡಿದ ಬಳಿಕ ಆರಾಧ್ಯರ ಒಲವು ಕನ್ನಡ ಕಾವ್ಯ, ಸಾಹಿತ್ಯದತ್ತ ಹೊರಳಿತು. ಸ್ವಾಭಾವಿಕವಾಗಿಯೇ ಕನ್ನಡಭಾಷೆಯ ಪ್ರೇಮ ಮೊದಲಿನಿಂದಲೂ ಅವರಲ್ಲಿ ಇದ್ದೇ ಇತ್ತು. ಜೊತೆಗೆ ಚಿಕ್ಕಂದಿನಲ್ಲಿ ಕಾವ್ಯ ವಾಚನ ಕೇಳುವ ಪರಿಪಾಠ, ನಾಟಕಗಳಲ್ಲಿ ಬರುವ ರಸವತ್ತಾದ ಕಾವ್ಯಮಯ ಸಂಭಾಷಣೆಗಳನ್ನು ಕೇಳುವ, ಆಡುವ ಮೊದಲಾದ ಹವ್ಯಾಸ ಅವರನ್ನು ಕವಿಹೃದಯದ ಮನುಷ್ಯನನ್ನಾಗಿಸಿತ್ತು.

ಆರಾಧ್ಯರು ವೈವಾಹಿಕ ಜೀವನದಲ್ಲಿ ಕಂಡ ಹರ್ಷದ ದಿನಗಳು ತೀರಾ ಕಡಿಮೆ. ಹುಟ್ಟಿದ ಮಕ್ಕಳು ಒಂದೊಂದಾಗಿ ತೀರಿಕೊಂಡವು. ಐದು ಮಕ್ಕಳನ್ನು ಕಳೆದುಕೊಂಡ ಅವರು ತಮಗೆ ಇನ್ನು ಮಕ್ಕಳಾಗುವುದಿಲ್ಲವೆಂಬ ಭಾವನೆಯನ್ನು ತಳೆದಿದ್ದರು. ಕಡೆಗೂ ಒಂದು ಗಂಡು ಮಗು ಆಗಿ ಅದು ಉಳಿದುಕೊಂಡು ನೆಮ್ಮದಿ ನೀಡಿತು. ಮಗನಿಗೆ ವಾಗೀಶ ಕುಮಾರ ಎಂದು ಹೆಸರಿಟ್ಟರು.

ಕನ್ನಡ ಪಂಡಿತ ಪರೀಕ್ಷೆ ಮಾಡುವ ಸಲುವಾಗಿ ಮೈಸೂರು ಸೇರಿದ ರಾಮಾರಾಧ್ಯರು ಆಗ ದೇಶದಲ್ಲಿ ನಡೆಯುತ್ತಿದ್ದ ಸ್ವಾತಂತ್ಯ್ರ ಚಳುವಳಿಯ ಸ್ವರೂಪವನ್ನು ಕಣ್ಣಾರೆ ಕಂಡರು . ೧೯೪೦ರ ಸಮಯವದು. ತಾವೂ ಆ ಸಂಗ್ರಾಮದಲ್ಲಿ ಭಾಗವಹಿಸಿದರು. ಅವರ ಸ್ವಾತಂತ್ಯ್ರ ಪ್ರೇಮ ಅಸಾಧಾರಣವಾದುದಾಗಿತ್ತು. ಮುಂದೆ ತಾವು ಬರೆದ “ವೀರಭೂಮಿ” ಎಂಬ ಸಾಹಿತ್ಯ ಕೃತಿಯಲ್ಲಿ ಅದನ್ನು ಚೆನ್ನಾಗಿಯೇ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಪಂಡಿತ ಪರೀಕ್ಷೆಗಾಗಿ ಓದುತ್ತಿದ್ದ ಸಂದರ್ಭ. ಅಲ್ಲಿ ನವರಾತ್ರಿ ಉತ್ಸವ ಕಾಲದಲ್ಲಿ ಜರುಗುತ್ತಿದ್ದ ಸಂಗೀತೋತ್ಸವಗಳು ಅವರನ್ನು ಆಕರ್ಷಿಸಿದವು. ೧೯೪೨ರಲ್ಲಿ ಪಂಡಿತ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪಂಡಿತ ರಾಮಾರಾಧ್ಯರೆನಿಸಿದರು. ಪರೀಕ್ಷೆಗಾಗಿ ಹಲವಾರು ಕನ್ನಡ ಕಾವ್ಯಗಳನ್ನು ಓದಿಕೊಂಡಿದ್ದರು.

 

ಕನ್ನಡ ಪಂಡಿತರಾದ ಬಳಿಕ ಆರಾಧ್ಯರಿಗೆ ಬೆಂಗಳೂರಿನ ಮಲ್ಲೇಶ್ವರಂ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಉಪಾಧ್ಯಾಯರ ಹುದ್ದೆ ಸಿಕ್ಕಿತು. ಈ ಕೆಲಸದಿಂದ ನಿವೃತ್ತರಾಗುವವರೆಗೂ ಅವರು ಎಲ್ಲೋ ಒಂದೆರಡು ವರ್ಷಗಳ ಹೊರತು ಉಳಿದೆಲ್ಲ ವರ್ಷಗಳೂ ಈ ಶಾಲೆಯ ‘ಮೇಷ್ಟ್ರು’ ಆಗಿ ಉಳಿದರು. ನಿವೃತ್ತರಾದ ಬಳಿಕ ಶ್ರೀರಾಮಪುರದ ಸರ್ವೋದಯ ಹೈಸ್ಕೂಲಿನಲ್ಲೂ ಕೆಲಸ ಮಾಡಿದರು.

ರಾಮಾರಾಧ್ಯರು ಮಲ್ಲೇಶ್ವರದಲ್ಲೆ ಮನೆಮಾಡಿದರು. ತಮ್ಮ ಕಡೆ ಉಸಿರಿರುವವರೆಗೂ  ಈ ಬಡಾವಣೇಯಲ್ಲೆ ಬಾಳಿದರು. ಅಲ್ಲಿ ಅವರಿಗೆ ಮಹಾಕವಿ ಕುವೆಂಪು, ಪು.ತಿ. ನರಸಿಂಹಾಚಾರ್, ಚ. ವಾಸುದೇವಯ್ಯ, ಸರ್ ಸಿ.ವಿ. ರಾಂನ್‌, ಜಿ.ಪಿ. ರಾಜರತ್ನಂ, ಸಿದ್ದವನಹಳ್ಳಿ ಕೃಷ್ಣಶರ್ಮ, ಎಂ. ಶಿವರಾಂ, ಆದ್ಯರಂಗಾಚಾರ್ ಮೊದಲಾದ ದಿಗ್ಗಜಗಳ ಸಂಪರ್ಕ ಲಭ್ಯವಾಯಿತು. ಇವರೆಲ್ಲ ಮಲ್ಲೇಶ್ವರದಲ್ಲಿ ವಾಸಿಸಿದವರು. ಈ ಒಬ್ಬೊಬ್ಬರೂ  ಆರಾಧ್ಯರ ಸಾಹಿತ್ಯಿಕ ಜೀವನದ ಮೇಲೆ ಪ್ರಭಾವ ಬೀರಿದರು.

 

ಆರಾದ್ಯರಿಗೆ ಮೇಷ್ಟ ಕೆಲಸ ಪ್ರಿಯವಾಗಿತ್ತು. ಪ್ರತಿವರ್ಷ ಹೊಸ ವಿದ್ಯಾರ್ಥಿಗಳ ಪರಿಚಯ. ಬುದ್ಧಿವಂತ ಹುಡುಗರನ್ನು, ಹಾಡಬಲ್ಲವರನ್ನು, ನಟಿಸಬಲ್ಲವರನ್ನು ಹಲವು ಚಟುವಟಿಕೆಗಳಲ್ಲಿ ತೊಡಗಿಸುತ್ತಿದ್ದರು. ನಾಟಕ, ಕೋಲಾಟ ಮೊದಲಾದ ಮನೋರಂಜನಾ ಕಾರ್ಯಕ್ರಮಗಳ  ವ್ಯವಸ್ಥೆ ಮಾಡುವುದೇ ಮುಂತಾದ ಕೆಲಸಗಳು ಅವರಿಗೆ ಪ್ರಿಯವಾಗಿದ್ದವು. ಬೋಧನೆಗೆ ಹೆಸರಾಗಿದ್ದರು. ವಿದ್ಯಾರ್ಥಿಗಳಿಗೆ ಪದ್ಯಗಳನ್ನು ಕುರಿತು ಬೋಧಿಸುವಾಗ ಪದ್ಯಭಾಗಗಳನ್ನು ರಾಗವಾಗಿ ಹಾಡುತ್ತಿದ್ದರು. ಇದರಿಂದ ವಿದ್ಯಾರ್ಥಿಗಳಿಗೆ ಅನ್ವಯಾನುಸಾರ ಪ್ರತಿಪದಾರ್ಥ ತಿಳಿಯಲು ತುಂಬಾ ಸಹಾಯವಾಗುತ್ತಿತ್ತು. ಮಕ್ಕಳಿಂದ ಐತಿಹಾಸಿಕ, ಜಾನಪದ ಹಾಗೂ ಸಾಮಾಜಿಕ ಪ್ರಹಸನಗಳನ್ನು ಆಡಿಸುತ್ತಿದ್ದರು. ಅದಕ್ಕೆಂದೇ ‘ವೀರಭೂಮಿ’ ಎಂಬ ನಾಟಕವನ್ನು ಮಕ್ಕಳಿಗೆ ಸೂಕ್ತವಾಗುವ ರೀತಿಯಲ್ಲಿ ಬರೆದು ಆಡಿಸಿದರು. ನಾಟಕಗಳ ಜತೆಗೆ ಅವರಿಗಿದ್ದ ಮತ್ತೊಂದು ಒಲವೆಂದರೆ ಜನಪದ ಸಾಹಿತ್ಯ.

ಶಾಲೆಯಲ್ಲಷ್ಟೇ ಆರಾಧ್ಯರು ಮೇಷ್ಟ್ರು ಆಗಿರಲಿಲ್ಲ. ತಮ್ಮ ಮನೆಗೆ ಸಮೀಪವೇ ಇದ್ದ ಸಿದ್ಧವನಹಳ್ಳಿ ಕೃಷ್ಣಶರ್ಮರು  ಸ್ಥಾಪಿಸಿದ ಗಾಂಧೀ ಸಾಹಿತ್ಯ ಸಂಘ (ಸ್ಥಾಪನೆ ೧೯೪೨)ದಲ್ಲಿ ‘ಗಮಕ’ವನ್ನು ನೂರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಹೇಳಿಕೊಟ್ಟರು. ಅವರನ್ನು ದೊಡ್ಡ ಕಲಾವಿದರಾಗಿಸಿದ್ದೆ ಗಮಕ. ಮೈಸೂರಲ್ಲಿದ್ದಾಗಲೇ ಬೆಳಕವಾಡಿ ಶ್ರೀನಿವಾಸಯ್ಯಂಗಾರ್ ಅವರಿಂದ ಸಂಗೀತ ಕಲಿತಿದ್ದರು. ಸಂಗೀತವನ್ನು ಅಭ್ಯಾಸ ಮಾಡಿದ್ದರಿಂದ ರಾಮಾರಾಧ್ಯರು ಗಮಕಕಲೆಯನ್ನು ಬಹುಬೇಗ ರೂಢಿಸಿಕೊಂಡರು.

ಆರಾಧ್ಯರಿಗೆ ಸಂಗೀತ ಶಿಕ್ಷಣ ದೊರೆತದ್ದೂ ಹಲವಾರು ಕಾವ್ಯಗಳನ್ನು ಓದಿ ಅರಗಿಸಿಕೊಂಡದ್ದೂ ಅವರನ್ನು ಒಬ್ಬ ಒಳ್ಳೆ ಕೀರ್ತನಕಾರರನ್ನಾಗಿಸಲೂ ಅವಕಾಶ ಮಾಡಿತು. ಕಾವ್ಯ ವಾಚನದಲ್ಲಿ ನಿಷ್ಣಾತರಾಗಿದ್ದ ಆರಾಧ್ಯರು ಹರಿಕಥೆ ಮತ್ತು ಶಿವಕಥೆಗಳನ್ನು ಮಾಡುವಾಗ ಕಥೆಗೆ ಪೂರಕವಾಗುವಂತೆ ಕೆಲವು ಕಾವ್ಯಗಳಿಂದ ಉದಾಹರಣೆಗಳನ್ನು ಕೊಡುವುದು ಸಾಧ್ಯವಾಗುತ್ತಿತ್ತು. ಇದರಿಂದ ಶ್ರೋತೃಗಳಿಗೆ ದ್ವಿಮುಖ ಲಾಭವಾಗುತ್ತಿತ್ತು. ಸಾಮಾನ್ಯವಾಗಿ ಅವರು ‘ವೀರ ಪುರೂರವ’, ಸುಮುಖೀ ವಿಜಯ’, ‘ಭಕ್ತ ನಂದನಾರ್’, ‘ಕಲ್ಯಾಣದ ಕ್ರಾಂತಿ’ ಮೊದಲಾದ ಕಥೆಗಳನ್ನು, ಜೈಮಿನಿ ಭಾರತದ ಕೆಲವೊಂದು ಪ್ರಸಂಗಗಳನ್ನು ಕೀರ್ತನೆಗೆ ಅಳವಡಿಸಿಕೊಳ್ಳುತ್ತಿದ್ದರು. ಕೀರ್ತನ ಕಲಾವಿದರಾಗಿ ಅವರು ಭಾರಿ ಹೆಸರು ಮಾಡದೆ ಹೋದರೂ ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಶಿವಕಥೆ ಮಾಡಿ ಜನಾನುರಾಗ ಹೊಂದಿದ್ದರು. ಮುಂದೆ ಗಮಕ ಕಲೆಗೇ ಹೆಚ್ಚು ಗಮನ ಹರಿಸಿದುದರಿಂದ ಕೀರ್ತನೆ ಮಾಡುವುದನ್ನು ಹೆಚ್ಚುಕಾಲ ಮುಂದುವರಿಸಲಿಲ್ಲ.

ಸಾಹಿತ್ಯ ಸೃಷ್ಟಿಸುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಆರಾಧ್ಯರು ಸಂಗೀತದಷ್ಟೇ ಸಾಹಿತ್ಯವನ್ನು ಪ್ರೀತಿಸಿದ ಕಾರಣವೋ ಏನೋ ತಾವೂ ಸಾಹಿತ್ಯ ರಚನೆಗಿಳಿದರು. ವಿಪುಲವಾದ ಸಾಹಿತ್ಯವನ್ನೇನು ಸೃಷ್ಟಿಸದೆ ಹೋದರೂ ಅವರ ಕೃತಿಗಳು ಕನ್ನಡ ಮಕ್ಕಳ ಶೀಲ ಸಂವರ್ಧನೆಗೆ ಬಹುಮಟ್ಟಿಗೆ ನೆರವಾದವೆಂಬುದನ್ನು ಸ್ಮರಿಸಬಹುದಾಗಿದೆ. ಆರಾಧ್ಯರು ಬರೆದ ಜನಪ್ರಿಯ ಕೃತಿ ‘ವೀರಭೂಮಿ’ ಮಕ್ಕಳಿಗೆ ಪಠ್ಯಗ್ರಂಥವೂ ಆಗಿತ್ತು. ಗ್ರೀಕ್‌ವೀರ ಅಲೆಗ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಬಂದಾಗ ಭಾರತೀಯರು ಅವನನ್ನು ಹೇಗೆ ಎದುರಿಸಿದರೆಂಬುದನ್ನು ಈ ಕೃತಿ ವಿವರಿಸುತ್ತದೆ. ‘ಆದರ್ಶ ಮಹಿಳಾರತ್ನಗಳು’ ಆರಾಧ್ಯರ ಇನ್ನೊಂದು ಜನ ಪ್ರಿಯಕೃತಿ. ನಾಲ್ಕಾರು ಮುದ್ರಣ ಕಂಡ ಈ ಕೃತಿಯಲ್ಲಿ ಪ್ರಾಚೀನ ಕಾಲದಿಂದ ಹಿಡಿದು ಆಧುನಿಕ ಕಾಲದವರೆಗೆ ವಿಶ್ವದ ಜೀವನದಲ್ಲಿ ಬೆಳಗಿದ ಹಲವು ಮಹಿಳಾ ಚೇತನಗಳ ಪರಿಚಯವನ್ನು ಮಾಡಿಕೊಡಲಾಗಿದೆ. ಆರಾಧ್ಯರು ಒಳ್ಳೆಯ ಕವಿಯೂ ಆಗಿದ್ದರೆಂಬುದಕ್ಕೆ ಪು.ತಿ.ನ. ಅವರ ಮುನ್ನುಡಿ ಇರುವ ಅವರ ಕವನ ಸಂಕಲನ “ಸುಧೆ” ಸಾಕ್ಷಿ. ಧರ್ಮರಾಜನ ಅಶ್ವಮೇಧಕ್ಕೆ ಸಂಬಂಧಿಸಿದ ಕಥೆಗಳ ಸಂಕಲನ ‘ಧರ್ಮಾಶ್ವಮೇಧ’, ‘ಹರಿಹರನ ಗಿರಿಜಾ ಕಲ್ಯಾಣ’ ಆರಾಧ್ಯರು ಬರೆದ ಒಂದು ಪುಟ್ಟ ವಿಮರ್ಶಾಕೃತಿ. ‘ಶ್ರೀರಾಮ ಮಹಾತ್ಮೆ’, ‘ಗಮಕ ಚಂದ್ರಿಕೆ’, ‘ಗದ್ಯಮಣಿ ಮುಕುಟ’ ಇವು ಸಂಪಾದಿತ ಕೃತಿಗಳು.

 

ರಾಮಾರಾದ್ಯರು ಮಾಡಿದ ಬಹುದೊಡ್ಡ ಕೆಲಸವೆಂದರೆ ಗಾದೆಗಳ ಸಂಗ್ರಹ. ಇವರು ಸಂಪಾದಿಸಿದ ‘ಕನ್ನಡ ಗಾದೆಗಳ ಮಹಾಕೋಶ’ವನ್ನು ಎರಡು ಸಂಪುಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ. ಮೊದಲ ಸಂಪುಟ ೬೬೪ ಪುಟಗಳಷ್ಟಿದ್ದು ಆಧ್ಯಾತ್ಮಿಕ, ತಾತ್ವಿಕ, ರಾಜಕೀಯ, ಶೈಕ್ಷಣಿಕ, ಸಾಮಾಜಿಕ, ಕೌಟುಂಬಿಕ ಹಾಗೂ ಔದ್ಯೋಗಿಕ ಗಾದೆಗಳನ್ನೊಳಗೊಂಡಿದ್ದರೆ, ಎರಡನೆಯ ಸಂಪುಟ ೬೯೬ ಪುಟಗಳಿದ್ದು ಗುಣಶೀಲ ಸ್ವಭಾವ ಕುರಿತ ಗಾದೆಗಳು, ಆಧುನಿಕ ಗಾದೆಗಳು ಹಾಗೂ ಗಾದೆಗಳ ಕಾವ್ಯ ಪ್ರಯೋಗಗಳು ಇವುಗಳಿಂದ ಕೂಡಿದೆ. ಎರಡೂ ಸಂಪುಟಗಳು ಸೇರಿದಂತೆ ಒಟ್ಟು ೧೫೫೮೪ ಗಾದೆಗಳಿವೆ. ಕೆಲವು ಕಡೆ ಗಾದೆಗಳ ವಿವಿಧ ಪಾಠಾಂತರ, ಅರ್ಥಕೋಶ ಕೊಟ್ಟಿರುವುದು ಸಂಪುಟಗಳ ಬೆಲೆಯನ್ನು ಹೆಚ್ಚಿಸಿವೆ. ೧೯೩೫ರಿಂದಲೇ ಆರಾಧ್ಯರು ಗಾದೆಗಳ ಸಂಗ್ರಹಕ್ಕೆ ಮೊದಲು ಮಾಡಿದರು. ಗಾದೆಗಳನ್ನೇ ಪೋಣಿಸಿ ‘ಗಾದೆಗಳ ಗೀತೆಗಳು’, ಎಂಬ ವಿನೂತನ ಕೃತಿಯನ್ನು ರಚಿಸಿದರು. ಗಾದೆಗೊಂದು ಕಥೆಯಂತೆ ‘ಗಾದೆಗಳ ಕಥೆಗಳು’ ಎಂಬ ಪುಸ್ತಕವನ್ನು ಹೊರತಂದರು.

ರಾಮಾರಾಧ್ಯರು ತಾವು ಬರೆಯುವುದರ ಜೊತೆಗೆ ಬರೆಯುವವರನ್ನು ಪ್ರೋತ್ಸಾಹಿಸಿದರು. ಕಿರಿಯ ಲೇಖಕರು ಬರೆದುದನ್ನು ಓದಿ ಸಲಹೆ ಸೂಚನೆಗಳನ್ನು ಕೊಡುತ್ತಿದ್ದರು. ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಹಾಜರಿರುತ್ತಿದ್ದ ಆರಾಧ್ಯರು ಸಾಹಿತ್ಯ ಬ್ರಹ್ಮಾನಂದ ನೀಡುವುದೆನ್ನುತ್ತಿದ್ದರು. ಕಚ್ಚೆಪಂಚೆ, ಜುಬ್ಬಾ, ಮೇಲೊಂದು ನೆಹರೂ. ಕೋಟ್‌ ಧರಿಸಿ ತಲೆಗೆ ಟೋಪಿ ಹಾಕಿಕೊಂಡು ಸಭೆಗಳಲ್ಲಿ ಭಾಗವಹಿಸುತ್ತಿದ್ದ ಅವರನ್ನು ಯಾರಾದದೂ ಬಹುಬೇಗ ಗುರುತಿಸುತ್ತಿದ್ದರು.

 

‘ಗಮಕ ನಿಧಿ’: ರಾಮಾರಾಧ್ಯರನ್ನು ಕನ್ನಡನಾಡು ಕಲಾವಿದನನ್ನಾಗಿ ಕಂಡದ್ದು ಅವರ ಗಮಕ ಸೇವೆಯಿಂದ. ಒಂದು ಸಾಹಿತ್ಯಿಕ ಸಭೆಯಲ್ಲಿ ರಾಮಾರಾಧ್ಯರನ್ನು ಡಾ. ಹಂ.ಪ. ನಾಗರಾಜಯ್ಯನವರು ‘ಗಮಕಶ್ರೀ’ ಎಂದೇ ಸಂಬೋಧಿಸಿದ್ದರು.

ಇಂದು ವ್ಯಾಖ್ಯಾನಕಾರರಾಗಿ ಹೆಸರು ಮಾಡಿರುವ ಮತ್ತೂರು ಕೃಷ್ಣಮೂರ್ತಿ ರಾಮಾರಾಧ್ಯರ ಗರಡಿಯಲ್ಲಿ ಪಳಗಿದವರು.

ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಗಮಕಕಲೆಗೆ ಅತಿ ಮಹತ್ವದ ಸ್ಥಾನವಿದೆ. ಕ್ರಿ.ಪೂ. ಒಂದನೇ ಶತಮಾನದ ಗ್ರಂಥ ‘ಲಲಿತವಿಸ್ತಾರ’ದಲ್ಲಿ ಹೆಸರಿಸಿರುವ ೬೪ ಕಲೆಗಳಲ್ಲಿ ಗಮಕ ಕಲೆಯೂ ಒಂದೆಂದು ಗುರುತಿಸಲಾಗಿದೆ. ಪಂಡಿತವರ್ಗವನ್ನು ಕವಿ, ಗಮಕಿ, ವಾದಿ, ವಾಗ್ಮಿ ಎಂದು ನಾಲ್ಕು ಭಾಗವಾಗಿ ವಿಂಗಡಿಸಿದ್ದಾರೆ. ಕವಿ ಕಾವ್ಯ ರಚಿಸಿದರೆ, ಗಮಕಿ ಕಾವ್ಯವನ್ನು ಅರ್ಥ, ರಸ, ಭಾಗವರ್ಭಿತವಾಗಿ ಪಠನ ಮಾಡಿ ಶ್ರೋತೃಗಳ ಹೃದಯವನ್ನು ಗೆಲ್ಲುತ್ತಾನೆ. ಗಮಕ ಕಲೆಗೆ ಸಂಗೀತ ಬೇಕಾದರೂ ಸಂಗೀತವೇ ಮುಖ್ಯವಲ್ಲ. ಕಾವ್ಯದ ಅರ್ಥ ಭಾವಗಳಿಗೆ ಪ್ರಾಧಾನ್ಯ. ಈ ಗುಟ್ಟನ್ನು ಚೆನ್ನಾಗಿ ತಿಳಿದಿದ್ದ ರಾಮಾರಾಧ್ಯರು ಗಮಕ ಕಲೆಗೆ ಒಂದು ವಿನೂತನ ಆಯಾಮ ದೊರಕಿಸಿಕೊಟ್ಟರು. ತಮ್ಮ ವಿಶಿಷ್ಟ ಗಮಕ ರೂಪಕಗಳ ಮೂಲಕ. ಕಾವ್ಯದ ಅರ್ಥ ಸ್ಪಷ್ಟವಾಗುವಂತೆ, ಭಾವವು ಅನುಭವವಾಗುವಂತೆ ಹಾಡಿ ಅವನ್ನು ಸಾವಿರಾರು ಮಂದಿಗೆ ಮುಟ್ಟಿಸಿದರು. ಹಲವಾರು ಶಿಷ್ಯರನ್ನು ತಯಾರು ಮಾಡಿ ಒಳ್ಳೆ ಗಮಕಿಗಳಾಗುವಂತೆ ಮಾಡಿದರು.

 

ರಾಗ, ಸಾಹಿತ್ಯ, ಭಾವ ಈ ಮೂರೂ ಲಕ್ಷಣಗಳನ್ನು ಮೈಗೂಡಿಸಿಕೊಳ್ಳಬಲ್ಲವನೇ ಗಮಕಿ. ಆತ ಕವಿಯಾಗಿದ್ದರೆ ಹಾಲು ಜೇನು ಸೇರಿದಂತೆಯೇ ಸರಿ. ರಾಮಾರಾಧ್ಯರು ಇಂತಹ ಒಬ್ಬ ಗಮಕಿ ಆಗಿದ್ದರು.

ರಾಮಾರಾಧ್ಯರ ಕೀರ್ತಿ ಕನ್ನಡ ನಾಡಿನಾದ್ಯಂತ ಪಸರಿಸಿದ್ದು ಗಮಕ ರೂಪಕಗಳ ಮೂಲಕವೇ. ಒಂದು ದೃಷ್ಟಿಯಲ್ಲಿ ಅವರನ್ನು ‘ಗಮಕ ರೂಪಕದ ಜನಕ’ ಎನ್ನಬಹುದು. ೧೯೫೭ರಲ್ಲಿ ಇಂಥಾದ್ದೊಂದು ಹೊಸಪ್ರಕಾರವನ್ನು ಅವರನ್ನು ಸೃಷ್ಟಿಸಿದರು.

ಸಂಗೀತ, ಸಾಹಿತ್ಯದಲ್ಲಿ ಗಮಕ ರೂಪಕ ಹೊಸ ಪ್ರಕಾರ,; ಗಮಕ ಶ್ರವ್ಯ  ಪ್ರಧಾನ. ರೂಪಕ ದೃಶ್ಯ ಪ್ರಧಾನ. ಗಮಕ ರೂಪಕ ಒಂದು ಬಗೆಯ ಮಿಶ್ರಜಾತಿ. ಒಂದು ಹೊಸಬಗೆಯ ಸಾಮೂಹಿಕ ಕಲೆ. ಅಲ್ಲಿ ಸಂಗೀತವೂ ಇದೆ. ಸಾಹಿತ್ಯವೂ ಇದೆ. ಮೇಲಾಗಿ ಕಾವ್ಯವಾಚನದಷ್ಟೇ ಪಾತ್ರಗಳ ಭಾವಾಭಿವ್ಯಕ್ತಿಗೆ ಅವಕಾಶವಿದೆ. ವೇದಿಕೆಯ ಮೇಲೆ ಎಲ್ಲ ಕುಳಿತೇ ರೂಪಕ ನಡೆಸಬಹುದು. ಒಬ್ಬ ಸೂತ್ರಧಾರ ಕಥೆಯನ್ನು ನಿವೇದಿಸುತ್ತಾ ಹೋಗುತ್ತಾನೆ. ವಿವಿಧ ಪಾತ್ರಗಳು ಕಾವ್ಯವಾಚನದ ಮೂಲಕ ಭಾವಾಭಿವ್ಯಕ್ತಗೊಳಿಸುತ್ತದೆ. ಕೇಳುಗರಿಗೆ ಒಂದು ವಿಶಿಷ್ಟ ಅನುಭವ, ಆರಾಧ್ಯರು ತಾವೂ ರೂಪಕದಲ್ಲಿ ಭಾಗವಹಿಸುತ್ತಿದ್ದರು. ಭೀಷ್ಮ, ದಶರಥ, ಅಲ್ಲಮಪ್ರಭು ಹೀಗೆ ವಿವಿಧ ಪಾತ್ರಗಳಲ್ಲಿ ಸಾಗುತ್ತಿತ್ತು ಅವರ ಕಾವ್ಯವಾಚನ ಸಾಮರ್ಥ್ಯ.

ಗಮಕ ರೂಪಕ ಒಂದು ಬಗೆಯ ಮಿಶ್ರ ಜಾತಿ ಗಮಕವೂ ಹೌದು, ರೂಪಕವೂ ಹೌದು. ವಾಚನ ಮಾಡುವ ಕೆಲವರು ಗಮಕದಲ್ಲಿ ಕಾವ್ಯ ಅಭಿನಯ ಪಟುಗಳಾಗಿ ಎದ್ದು ಕುಣಿದಾಡದೆ, ವೇಷಧಾರಣೆ ಮಾಡದೆ ನಿರ್ವಹಣೆ ಮಾಡುವ ಕುಳಿತಲ್ಲಿಯೇ ಕುಳಿತು ಪಾತ್ರ ನಿರ್ವಹಣೆ ಮಾಡುವ ಕೆಲವರು . ಈ ಎರಡು ಗುಂಪಿನವರೂ ಸೇರಿದಾಗಲೇ ಗಮಕಕ ರೂಪಕವಾಗುತ್ತದೆ.

ರಾಮಾರಾಧ್ಯರು ಗಮಕ ರೂಪಕಗಳನ್ನು ನಡೆಸಲು ಅನುಕೂಲವಾಗುವಂತೆ ತಾವೇ ಅನೇಕ ಪ್ರಸಂಗಗಳನ್ನು ರಚಿಸಿದರು. ಹೆಚ್ಚಾಗಿ ಕುಮಾರವ್ಯಾಸನ ಕಾವ್ಯವನ್ನೇ ಆಧರಿಸಿದರು. ಚಾಮರಸನ ‘ಪ್ರಭುಲಿಂಗ ಲೀಲೆ’ಯ ‘ಅಲ್ಲಮಪ್ರಭು’ ರೂಪಕಕ್ಕೆಕ ಆರಿಸಿಕೊಂಡರು. ಹೀಗೆ ಒಟ್ಟು ೩೨ ಗಮಕ ರೂಪಕಗಳನ್ನು ರಚಿಸಿದರು. ಕೆಲವು ಪ್ರಕಟವಾದವು. ‘ಲಾಕ್ಷಾಭವನ’, ‘ದ್ರೌಪದಿ ಸ್ವಯಂವರ’, ‘ರಾಜಸೂಯ’, ‘ಗದಾಯುದ್ಧ’, ‘ಅಲ್ಲಮಪ್ರಭು ’, ‘ಗಿರಿಜಾಕಲ್ಯಾಣ’, ‘ಕೀಚಕವಧೆ’, ‘ಅಕ್ಷಯ ವಸ್ತ್ರ’, ‘ಹರಿಶ್ಚಂದ್ರ’, ‘ದಕ್ಷಾಧ್ವರ’ ಈ ರೂಪಕಗಳು ಕೆಲವು ದಾನಿಗಳ ಉದಾರ ಕೊಡುಗೆಯಿಂದಾಗಿ ಪ್ರಕಟಗೊಂಡಿವೆ. ಗಮಕ ರೂಪಕಗಳು ಚೆನ್ನಾಗಿ ಆಗಿ ಕಾವ್ಯ ಜನರನ್ನು ತಲುಪಬೇಕೆಂದು ತಾವೇ ಕಲಾವಿದರಿಗೆ ತರಬೇತಿ ಕೊಡುತ್ತಿದ್ದರು. ಶ್ರುತಿಬಿಟ್ಟು ಹಾಡುವುದೆಂದರೆ ಅವರಿಗೆ ಆಗುತ್ತಿರಲಿಲ್ಲ. ಶಿಷ್ಯರಿಗೆ ಸಂಗೀತವನ್ನು ಶಾಸ್ತ್ರಬದ್ಧವಾಗಿ ಕಲಿತಿರಬೇಕೆನ್ನುತ್ತಿದ್ದರು. ವಿವಿಧ ರಸಗಳಿಗೆ ತಕ್ಕ ರಾಗಗಳನ್ನು ಕಲಾವಿದರಿಗೆ ಹೇಳಿಕೊಡುತ್ತಿದ್ದರು.

 

ಗಮಕ ರೂಪಕಗಳು ಅವರ ಕಾಲದಲ್ಲಿ ಬೆಂಗಳೂರೇ ಅಲ್ಲದೆ ಸುತ್ತಮುತ್ತಲ ಊರುಗಳಲ್ಲಿ, ದೂರದ ಗದಗ, ಹುಬ್ಬಳ್ಳಿ ಮೊದಲಾದ ಕಡೆ ನಡೆದವು. ಇಂದಿಗೂ ಅವರ ಶಿಷ್ಯರಲ್ಲಿ ನೀಲತ್ತಹಳ್ಳಿಕಸ್ತೂರಿ, ಕಡಬ ಸುಬ್ರಹ್ಮಣ್ಯ, ವಾಸುದೇವರಾವ್‌ ಮೊದಲಾದವರು ಗಮಕ ರೂಪಕಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಜನರಿಗೆ ಇವು ತುಂಬಾ ಪ್ರಿಯವಾಗಿವೆ. ರಾಮಾರಾಧ್ಯರೇ ರೂಪಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾಗ ಜನಗಳು ಅಪಾರ ಸಂಖ್ಯೆಯಲ್ಲಿ ಸೇರುತ್ತಿದ್ದರು. ಚನ್ನಪಟ್ಟಣದಲ್ಲಿ ಪ್ರತಿವರ್ಷ ಆರಾಧ್ಯರ ಗಮಕ ರೂಪಕ ಒಂದಿಲ್ಲೊಂದು ಉತ್ಸವ ಕಾಲದಲ್ಲಿ ಇರುತ್ತಿತ್ತು. ಆಗ ಸುತ್ತಮುತ್ತಲ ಹಳ್ಳಿಗಳಿಂದ ಜನ ಗಾಡಿ ಕಟ್ಟಿಸಿಕೊಂಡು ಅಧಿಕ ಸಂಖ್ಯೆಯಲ್ಲಿ ಬರುತ್ತಿದ್ದರು. ಆರಾಧ್ಯರು ತಮ್ಮ ಇಳಿ ವಯಸ್ಸಿನಲ್ಲಿ ನಡೆಸಿದ ಕಡೆಯ ಗಮಕ ರೂಪಕ ‘ಲವಕುಶ’ ಚನ್ನಪಟ್ಟಣದ ಈಶ್ವರ ದೇವಸ್ಥಾನದಲ್ಲಿ. ಅಂದು ಅವರಿಗೆ ವಿಪರೀತ ಕಾಲುನೋವು. ಊರು ಮುಟ್ಟಿದಾಗ ಎಡಭಾಗದ ಮೇಲೆ ಹತೋಟಿ ತಪ್ಪಿತು. ಆದರೂ ಕಲಾವಿದ ಆರಾಧ್ಯರಿಗೆ ಗಮಕ ರೂಪಕದ್ದೆ ಚಿಂತೆ. “ವೇದಿಕೆಯ ಮೇಲೆ ಕೂಡಿಸಿಬಿಡಿ. ಎರಡು ಪದ್ಯ ಹೇಳಿಬಿಡುತ್ತೇನೆ” ಎಂದಿದ್ದರು. ಆರಾಧ್ಯರು ಗಮಕ ರೂಪಕ ಚೆನ್ನಾಗಿ ಆಗಬೇಕು ಎಂದು ಆಶಿಸುತ್ತಿದ್ದರು.

ಪ್ರಶಸ್ತಿ-ಪುರಸ್ಕಾರ: ರಾಮಾರಾಧ್ಯರು ಗಮಕ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಮನಗಂಡು ಕನ್ನಡ ಸಾಹಿತ್ಯ ಪರಿಷತ್ತು ತನ್ನ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಸನ್ಮಾನಿಸಿತು. ಮಾಸ್ತಿ ವೆಂಕಟೇಶಯ್ಯಂಗಾರ್ ಆರಾಧ್ಯರನ್ನು ಸನ್ಮಾನಿಸಿದರು./ ೧೯೭೦ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯು ಆರಾಧ್ಯರಿಗೆ ಪ್ರಶಸ್ತಿ ನೀಡಿ ಗೌರವಿಸಿತು.

೧೯೭೨ರ ಫೆಬ್ರವರಿ ೧೯ ಮತ್ತು ೨೦ ಈ ಎರಡೂ ದಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರಥಮ ಬಾರಿಗೆ ಅಖಿಲ ಕರ್ನಾಟಕ ಗಮಕ ಸಮ್ಮೇಳನ ನಡೆಯಿತು. ಸಮ್ಮೇಳನದ ವ್ಯವಸ್ಥಾಪಕ ಕಾರ್ಯದರ್ಶಿಗಳಾಗಿ ಆರಾಧ್ಯರು. ಅತೀವ ಶ್ರದ್ಧೆ, ಆಸಕ್ತಿಗಳಿಂದ ದುಡಿದು ಸಮ್ಮೇಳನವನ್ನು ಯಶಸ್ವಿಗೊಳಿಸಿದರು.

ಅರಮನೆ ಗುರುಮನೆಗಳು, ಅನೇಕ ಸಂಘ ಸಂಸ್ಥೆಗಳು ಆರಾಧ್ಯರಿಗೆ ಪ್ರಶಸ್ತಿಗಳನ್ನಿತ್ತು ಗೌರವಿಸಿದ್ದವು. ನಾಡಿನ ಸಹೃದಯರು ಇವರಿಗೆ ಗಮಕಕಲಾ ಪ್ರಪೂರ್ಣ ಎಂಬ ಪ್ರಶಸ್ತಿ ನೀಡಿ ಸನ್ಮಾನಿಸಿದರು.

೧೯೭೩ರ ವರ್ಷ. ಚನ್ನಪಟ್ಟಣದಲ್ಲಿ ಗಮಕ ರೂಪಕ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಊರಿಗೆ ಹಿಂತಿರುಗಿದ ಬಳಿಕ ಆರಾಧ್ಯರು ಅಸ್ವಸ್ಥರಾದರು. ಅದೇ ವರ್ಷ ಡಿಸೆಂಬರ್ ೨೦ರಂದು ತೀರಿಕೊಂಡರು. ಸಾತ್ವಿಕ ಶರಣರಂತೆ ಬಾಳಿದವರು ರಾಮಾರಾಧ್ಯರು. ಅವರು ತೀರಿಕೊಂಡ ದಿನವನ್ನು ಮಲ್ಲೇಶ್ವರಂ ಗಾಂಧೀ ಸಾಹಿತ್ಯ ಸಂಘದ ಮಿತ್ರರು ಗಮಕ ದಿನವಾಗಿ ಆಚರಿಸುತ್ತಾ ಬಂದಿದ್ದಾರೆ. ಅಂದು ನಾಡಿನ ಶ್ರೇಷ್ಠ ಗಮಕಿಯೊಬ್ಬರನ್ನು ರಾಮಾರಾಧ್ಯರ ಹೆಸರಿನಲ್ಲಿ ಗೌರವಿಸುತ್ತಾರೆ. ಆರಾಧ್ಯರ ಆತ್ಮಕ್ಕೆ ಸಂತೋಷ ತರುವಂತಹ ಕೆಲಸವನ್ನು ಅವರ ಶಿಷ್ಯರು ಮಾಡಿಕೊಂಡು  ಬರುತ್ತಿದ್ದಾರೆ. ಗಮಕ ರೂಪಕಗಳನ್ನು ರಾಮೋತ್ಸವ, ಗಣೇಶೋತ್ಸವ ಮೊದಲಾದ ಕಾಲಗಳಲ್ಲಿ ಪ್ರದರ್ಶಿಸುತ್ತಿರುತ್ತಾರೆ.

ರಾಮಾರಾಧ್ಯರು ಗಮಕ ಕಲೆಯ ಅಭಿವೃದ್ಧಿಗಾಗಿ ಶ್ರಮಿಸಿದ ಅಪರೂಪದ ಕಲಾವಿದರು. ಗಮಕ ಕಲೋಪಾಸಕರು. ನಿವೃತ್ತರಾದ ಮೇಲಂತೂ ಪ್ರತಿ ನಿತ್ಯ ಸಂಜೆ ಗಮಕದ ಕೆಲಸವನ್ನು ಮಾಡುತ್ತಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿದ್ದ ಗಮಕ ಪರೀಕ್ಷೆಗಳಿಗೆ ಶಿಷ್ಯರನ್ನು ತರಬೇತುಗೊಳಿಸಿ ಕೂರಿಸುತ್ತಿದ್ದರು. ಹೀಗೆ ಅವರ ಶಿಷ್ಯರಾಗಿ ಗಮಕ ಕಲಿತ ಅನೇಕರು ಹೆಸರಾಂತ ಗಮಕಿಗಳಾಗಿದ್ದಾರೆ.

ಗ್ರಂಥ ಸಂಗ್ರಹ ಆರಾಧ್ಯರ ಒಂದು ಹವ್ಯಾಸವಾಗಿತ್ತು. ಪ್ರಾಚೀನ ಕಾವ್ಯಗಳಲ್ಲಿ ಅವರಿಗೆ ತುಂಬಾ ಆಸಕ್ತಿ. ಪುಸ್ತಕ ಪ್ರೀತಿ ಅವರಲ್ಲಿ ವಿಶಿಷ್ಟವಾಗಿತ್ತು. ಅವರು ನಿಧನರಾದ ಮೇಲೆ ಅವರ ಗ್ರಂಥ ಸಂಗ್ರಹವನ್ನು ಗಾಂಧೀ ಸಾಹಿತ್ಯ ಸಂಘದಲ್ಲಿ ಇರಿಸಿ ಕಾಪಾಡಿಕೊಂಡು ಬರಲಾಗಿದೆ.

ರಾಮಾರಾಧ್ಯರು ಉತ್ಸಾಹೀ ಯುವ ಜನಾಂಗದಲ್ಲಿ ಗಮಕ ಕಲಾಭಿರುಚಿಯನ್ನು ಮೂಡಿಸಿದರು. ಇವರಿಂದ ಗಮಕ ಪರೀಕ್ಷೆಗಳ ಗುಣಮಟ್ಟವೂ ಹೆಚ್ಚಿತು. ಗಮಕ-ಗಮಕಿ ಎಂಬ ಇವರು ಬರೆದ ಕಿರುಹೊತ್ತಿಗೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿ ವಿದ್ಯಾರ್ಥಿಗಳಿಗೆ ಮಹದುಪಕಾರಮಾಡಿದೆ. ಆರಾಧ್ಯರು ಸಂಪಾದಿಸಿದ ‘ಗಮಕ ಚಂದ್ರಿಕೆ’ ಗಮಕ ಕಲಾ ಶಿಕ್ಷಣದ ವಿದ್ಯಾರ್ಥಿಗಳಿಗೆ ಮತ್ತು ಬೋಧಕರಿಗೆ ಉಪಯುಕ್ತವಾಗಿದೆ.

ಕನ್ನಡದಲ್ಲಿ ಗಾಂಧೀ ಸಾಹಿತ್ಯ ರಚಿಸಿದವರೂ ಗಾಂಧೀವಾದಿಗಳೂ ಆಗಿದ್ದ ಸಿದ್ಧವನಹಳ್ಳಿ ಕೃಷ್ಣಶರ್ಮರು “ಕನ್ನಡ ಸಾಹಿತ್ಯದಲ್ಲಿ ಗಮಕ ರೂಪಕವನ್ನು ಅಣಿಮಾಡಿ ಅದನ್ನು ಸಭಿಕರು ಕಿವಿಯಾರೆ ಕೇಳಿ ಕಣ್ಣಾರೆ ನೋಡಿ ಆನಂದಿಸುವ ಅವಕಾಶವನ್ನು ಕನ್ನಡ ಜನಕ್ಕೆ ಮಾಡಿಕೊಟ್ಟ ಕೀರ್ತಿ ಪಂಡಿತ ರಾಮಾರಾಧ್ಯರದು” ಎಂದಿದ್ದಾರೆ. ಗಮಕ ರೂಪಕ, ಹಾಡು, ಕುಣಿತ, ತಾಳ, ಮೃದಂಗಗಳಿಲ್ಲದ ಯಕ್ಷಗಾನ, ಬರಿಯ ಗಾನವಲ್ಲ. ಶ್ರವ್ಯ, ದೃಶ್ಯ ಎರಡರ ಹಿತಮಿತ ಮಿಶ್ರಣ ಎಂಬುದು ಶರ್ಮರ ವ್ಯಾಖ್ಯೆ.

ರಾಮಾರಾಧ್ಯರು ಶ್ರೇಷ್ಠ ಗಮಕ ಕಲಾವಿದರನ್ನು ಕರೆಯಿಸಿ ಅವರಿಂದ ಕಾವ್ಯವಾಚನ ಆಸ್ವಾದಿಸುವ ಪರಿಪಾಟವನ್ನು ಇಟ್ಟುಕೊಂಡಿದ್ದರು. ಒಮ್ಮೆ ಜೋಳದರಾಶಿ ದೊಡ್ಡನಗೌಡರನ್ನು ಕರೆಯಿಸಿ ಅವರಿಂದ ಹರಿಶ್ಚಂದ್ರ ಕಾವ್ಯವನ್ನು ಗಮಕದಲ್ಲಿ ಆಲಿಸಿ ತಾವೂ ಹರ್ಷಿಸಿದರಲ್ಲದೆ ಕಾವ್ಯ ಪ್ರಿಯರಿಗೂ ಆನಂದ ಉಂಟುಮಾಡಿದರು. ಇಂತಹ ಸಹೃದಯತೆ ಅವರಲ್ಲಿ ಮನೆ ಮಾಡಿತ್ತು. ನಿಜವಾದ ಅರ್ಥದಲ್ಲಿ ಆರಾಧ್ಯರು ಗಮಕಿಕಯಾಗಿದ್ದರು. ಎಂದಿಗೂ ಅವರು ಆರಾಧ್ಯರೇ!

ಗಮಕ ಕಲಾ ಪ್ರಪಂಚದಲ್ಲಿ ಬೆಳಗಿದ ರಾಮಾರಾಧ್ಯರನ್ನು ಕುರಿತು ಗಮಕಿ ಆರ್. ಶಂಕರನಾರಾಯಣ ಅವರು ಹೀಗೆ ಬರೆದಿದ್ದಾರೆ

ಕನ್ನಡ ಪಂಡಿತರುಂ ಗಮ

ಕೋನ್ನತ ಗುರು ಗಮಕರೂಪಕಕ್ಕಾದ್ಯರ್

ನಿಷ್ಪನ್ನ ಸುಲೇಖಕರಾಗಿಯೆ

ಮನ್ನಣೆ ಮಣೆಯೇರ್ದರವರೆ ರಾಮಾರಾಧ್ಯರ್.

ರಾಮಾರಾಧ್ಯರು ಕನ್ನಡ ನಾಡಿನ ಪ್ರಸಿದ್ಧ ಗಮಕ ಚೇತನ.