ಕೆಲ ಧರ್ಮೀಯರಲ್ಲಿ ಸ್ತ್ರೀಯರಿಗೆ ದೇವಾಲಯ ಹಾಗೂ ಗರ್ಭಗುಡಿಯ ಪ್ರವೇಶ ನಿಷಿದ್ಧವಿದೆ. ಆದರೆ ಹೂಗಾರ ಮಹಿಳೆಯು ಶಿವನ – ಹನುಮಂತನ ಗರ್ಭಗುಡಿಯಲ್ಲೇ ಸದಾ ಇದ್ದುಕೊಂಡು ದೇವರ ನಂದಾದೀಪ ಉರಿಸುವ ಕಾಯಕ ಮಾಡುವಳು. ಆಕೆಯ ಪತಿ ದೇವರ ಪೂಜೆ ಮಾಡಿದರೆ ಆತನ ಕೈ ಕೆಳಗೆ ಕೆಲಸ ಮಾಡುವುದುಂಟು. ಸಹಾಯ ಮಾಡುವುದುಂಟು. ಇದರಿಂದ ಹೂಗಾರ ಮಹಿಳೆಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಉನ್ನತವಾದ ಸ್ಥಾನವೇ ಇದೆ. ಹೂಗಾರ ಪುರುಷರು ತಮ್ಮಹೆಂಡಿರನ್ನು ಕೀಳಾಗಿ ಗಣಿಸದೆ ಅವರನ್ನು ಸಮಾನವಾಗಿ ಕಾಣುವರು. ಗಂಡನ ಹೆಜ್ಜೆಯಲ್ಲಿ ಹೆಜ್ಜೆ ಇಟ್ಟು ನಡೆಯುವ ಹೂಗಾರ ಮಹಿಳೆ ಸಾಂಸ್ಕೃತಿಕವಾಗಿ ಬಹಳ ಎತ್ತರದ ಸ್ಥಾನದಲ್ಲಿ ಇರುವುದನ್ನು ಗುರುತಿಸುವೆವು. ಅವರು ಬಡವರಾದರೂ ದೈವಭಕ್ತರಾದುದರಿಂದ, ಪ್ರಾಮಾಣಿಕರಾದುದರಿಂದ, ನೀತಿವಂತರಾದುದರಿಂದ ಅವರಿಗೆ ಬಡತನ ಬಾಧಿಸುವುದಿಲ್ಲ. ಸಾಂಸ್ಕೃತಿಕ ಶ್ರೀಮಂತಿಕೆಯ ಒಡಲಲ್ಲಿ ಅವರ ಬಡತನ ಕರಗಿ ಹೋಗುವುದು. ಇದಕ್ಕೊಂದು ಶ್ರೇಷ್ಠ ನಿದರ್ಶನವೆಂದರೆ ಕಲಾದಗಿಯ ಶಿವಶರಣೆ ಹೂಗಾರ ಸಂಕ್ರಮ್ಮನವರು. ಇವರು ದೈವೀ ಸ್ವರೂಪದಲ್ಲಿ ಒಬ್ಬ ಮಹಾನ್ ಶಿವಶರಣೆಯಾಗಿ ಕೇವಲ ಹೂಗಾರರಿಗಷ್ಟೇ ಅರಾಧ್ಯವಾಗಿರದೆ ಸಕಲರಿಗೂ ಆರಾಧ್ಯ ದೈವವಾದುದನ್ನು ಗುರುತಿಸುವೆವು. ಆ ಮಹಾನ್ ಶರಣೆಯ ವೃತ್ತಾಂತವನ್ನು, ಮಹಿಮೆಯನ್ನು ಇಲ್ಲಿ ನೋಡಬಹುದು. ಜನಪದರ ಜೀವನದಲ್ಲಿ ಆ ಶಿವಶರಣೆ ಇಂದಿಗೂ ಜೀವಂತವಾಗಿ ಉಳಿದಿರುವಳು.

ಬಾಗಲಕೋಟೆ ಜಿಲ್ಲೆಯ ಕಲಾದಗಿಯಲ್ಲಿ ಹೂಗಾರ ಮನೆತನದಲ್ಲಿ ಶಿವಶರಣೆ ಶಂಕ್ರಮ ಎಂಬೊಬ್ಬ ಶಿವಭಕ್ತೆಯಾಗಿ ಹೋದುದು ವಿಶೇಷವಾಗಿದೆ. ಹನ್ನೆರಡನೆಯ ಶತಮಾನದಲ್ಲಿ ಆಗಿ ಹೋದ ಶಿವಶರಣೆಯರ ಹಾಗೆ ಬದುಕು ನಡೆಸಿದ ಶಂಕ್ರಮ್ಮ ಬಾಗಲಕೋಟೆ ಅಷ್ಟೆ ಅಲ್ಲ ಉತ್ತರ ಕರ್ನಾಟಕ ಭಾಗದ ಒಬ್ಬ ಶ್ರೇಷ್ಠ ಶಿವಭಕ್ತೆಯಾಗಿ ಶರಣೆಯಾಗಿ ಹೋಗಿದ್ದಾಳೆ. ಈ ಮನೆತನದ ಹೂಗಾರ ವಂಶಸ್ಥರು ಈಗಲೂ ಕಲಾದಗಿ, ಜಮಖಂಡಿ, ಮುಧೋಳ, ಬೆಳಗಾವಿಗಳಲ್ಲಿದ್ದಾರೆ. ಬಸವಾದಿ ಶಿವಶರಣರಂತೆ ಬಾಳಿ ಬದುಕಿದ್ದ ಶಿವಶರಣೆ ಶಂಕ್ರಮ್ಮ ಆಧ್ಯಾತ್ಮ ಹಾಗೂ ಶಿವೋಪಾಸನೆಯಲ್ಲಿ ಪುರುಷರಷ್ಟೇ ಸಾಧನೆಗೈದು ಅಮರಳಾದವಳು. ಇವರು ೧೯೨೫ರಲ್ಲಿ ಕಲಾಧಗಿಯಲ್ಲಿ ಹೂಗಾರ ಮನೆತನದಲ್ಲಿ ಹುಟ್ಟಿದರು. ಇವರ ತಂದೆ ಪಾಂಡಪ್ಪ ತಾಯಿ ಯಮನವ್ವ. ಈಕೆಗೆ ಲಕ್ಷ್ಮಣ ಹಾಗೂ ಗಂಗಪ್ಪ ಎಂಬಿಬ್ಬರು ಸಹೋದರರಿದ್ದರು. ಬಾಲ್ಯದಲ್ಲಿಯೇ ಶಂಕ್ರಮ್ಮ ತಂದೆಯನ್ನು ಕಳೆದುಕೊಂಡಳು. ಐದು ವರುಷದವಳಿರುವಾಗಲೇ ಈಕೆಯನ್ನು ಲೋಕಾಪುರದ ಪಾಂಡಪ್ಪ ಘಲಾರಿ ಎಂಬುವವರಿಗೆ ಮದುವೆ ಮಾಡಿಕೊಟ್ಟಿತ್ತು. ಮುಂದೆ ಈಕೆಗೆ ಹದಿನೈದು ವರುಷಗಳಾದಾಗ ಈಕೆಯನ್ನು ಗಂಡನ ಮನೆಗೆ ಕಳಿಸಿದರು. ಬಾಲ್ಯದಲ್ಲಿಯೇ ಆಧ್ಯಾತ್ಮದ ಒಲವನ್ನು ಹೊಂದಿದ ಈಕೆ ಪಾಂಡಪ್ಪನಿಗೆ ದೇವತೆಯಂತೆ ಕಾಣಿಸಿದಳೇ ವಿನಾ ಹೆಂಡತಿಯಂತೆ ಕಾಣಿಸಲಿಲ್ಲ. ನಶ್ವರವಾದ ಸಂಸಾರದಿಂದ ಆಕೆ ಬಹುದೂರ ಸಾಗಿದ್ದಳು. ಒಂದು ದಿನ ಆಕೆ ಮಲಗಿಕೊಂಡಿದ್ದಾಗ ಆಕೆಯ ಮೈಮೇಲೆ ಹಾವೊಂದು ಹೆಡೆ ಬಿಚ್ಚಿ ಆಡುತ್ತಿರುವುದನ್ನು ಪಾಂಡಪ್ಪ ಕಂಡು ಭಯಭೀತನಾದ. ಈಕೆ ಸಾಮಾನ್ಯಳಲ್ಲ. ಪ್ರತ್ಯಕ್ಷ ದೇವತೆಯೇ ಎಂದು ಬಗೆದು ಈಕೆಯನ್ನು ತವರುಮನೆಗೆ ಕಲಾದಗಿಗೆ ಕಳಿಸಿದ.  ಕಲಾದಗಿಯಲ್ಲಿ ಶಂಕ್ರಮ್ಮ ಶಿವಪೂಜೆಯಲ್ಲಿ ತೊಡಗಿದಳು. ಅನ್ನ, ನೀರು ಬಿಟ್ಟ ಈಕೆ ಅನಾರೋಗ್ಯದಿಂದ ಹಾಸಿಗೆ ಹಿಡಿದಳು. ಹೀಗೆ  ಮಲಗಿದಾಗ ಅವಳ ಕನಸಿನಲ್ಲಿ ಮನಗೂಳಿಯ ಲಿಂಗೈಕ್ಯ ಮಹಾಂತ ಸ್ವಾಮಿಗಳು ಕಾಣಿಸಿಕೊಂಡು ’ಏಳು ಮಗಳೇ, ನೀರು ಕುಡಿ’ ಎಂದಂತಾಯಿತು. ಮಾರನೆಯ ದಿನ ಆಕೆ ಎದ್ದು ಸ್ನಾನ ಮಾಡಿ, ನೀರು ಕುಡಿದಳು. ಮುಂದೆ ಆಕೆ ಬದುಕಿರುವವರೆಗೂ ಕೈ ಮುಟೆಗೆ ಚುರಮುರಿ, ಶೇಂಗಾ ತಿನ್ನುತ್ತಾ ಬದುಕಿದಳೇ ವಿನಾ ಊಟವನ್ನೆಂದೂ ಮಾಡಲಿಲ್ಲ. ಲಿಂಗ ಪೂಜೆಯಲ್ಲಿ ತಾದಾತ್ಮ್ಯ ಹೊಂದಿದ ಈಕೆಯೊಂದಿಗೆ ಇವಳ ತಾಯಿ ಯಮನವ್ವಳೂ ದೀಕ್ಷೆ ಹೊಂದಿ ಇರತೊಡಗಿದಳು. ಉಪಜೀವನಕ್ಕಾಗಿ ಹೂ ಪತ್ರಿ ಹಾಕುವ ಕಾಯಕವನ್ನು ಮಾಡಿಕೊಂಡಿದ್ದಳು. ಶಂಕ್ರಮ್ಮನವರನ್ನು ಜನರು ದೇವತೆ ಎಂದೇ ಬಗೆದು ಬರತೊಡಗಿದರು. ದೇವಿಯಂತೆ ಈಕೆಯನ್ನೂ ಅಂಗಡಿ ಮನೆತನದ ನಾಗಮ್ಮ ಆರಾಧಿಸಿದಳು. ಅಂಗಡಿ ಬಸಪ್ಪನವರು ಈಕೆಯ ಧಾರ್ಮಿಕ ಕಾರ್ಯಗಳಿಗೆ ಸಹಾಯ ಸಹಕಾರ ನೀಡಿದರು. ಶಂಕ್ರಮ್ಮನವರು ನುಡಿದ ನುಡಿ ಹುಸಿಯಾಗಲಿಲ್ಲ. ನೀಲಕಂಠೇಶ್ವರ ದಿಕ್ಸಂಗಿಯವರಿಗೆ ಶಂಕ್ರಮ್ಮನವರು ’ನೀವು ಮುಂದೆ ಒಂದು ಮಠದ ಸ್ವಾಮಿಗಳಾಗುತ್ತೀರಿ’ ಎಂದು ಭವಿಷ್ಯ ನುಡಿದರು. ಅದು ಮುಂದೆ ಸತ್ಯವಾಯಿತು. ಬರಬರುತ್ತಾ ಶಂಕ್ರಮ್ಮನವರು ದೈವತ್ವಕ್ಕೇರುತ್ತಾ ನಡೆದರು. ಭಕ್ತರು ಸದಾ ಇವರ ಬಳಿಗೆ ಬರತೊಡಗಿದರು. ಅವರಿಗೆಲ್ಲಾ ಶಂಕ್ರಮ್ಮನವರು ಸಾಂತ್ವನ ಹೇಳಿ ಕಳುಹಿಸುತ್ತಿದ್ದರು. ಮುಂದೆ ಶಂಕ್ರಮ್ಮನವರು ತಮ್ಮ ಮೂವತ್ತೈದನೇ ವಯಸ್ಸಿನಲ್ಲಿ ಅಂದರೆ ೧೯೬೦ರಲ್ಲಿ ಲಿಂಗೈಕ್ಯರಾದರು. ಅವರ ಸಮಾಧಿಯನ್ನು ಕಲಾದಗಿಯ ಅಂಗಡಿಯವರ ತೋಟದಲ್ಲಿ ಮಾಡಲಾಯಿತು. ಇಂದು ಆ ಸ್ಥಳದಲ್ಲಿ ಶಂಕ್ರಮ್ಮನವರ ದೇವಾಲಯ ನಿರ್ಮಾಣವಾದುದನ್ನು ಕಾಣುವೆವು. ಅವರ ಸಮಾಧಿ ಇಂದಿಗೂ ಪೂಜೆಗೊಳ್ಳುತ್ತಿದ್ದು, ಅದೊಂದು ಜಾಗೃತ ಸ್ಥಾನವಾಗಿ ಉಳಿದಿದೆ. ಪ್ರತಿ ವರ್ಷ ಗುರುಪೂರ್ಣಿಮೆ ಆದಮೇಲೆ ಬರುವ ಪಂಚಮಿಯಂದು ಅವರ ಪುಣ್ಯತಿಥಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ. ರಾತ್ರಿಯಲ್ಲಿ ಭಜನೆ, ಮರುದಿನ ಅಭಿಷೇಕ ಹಾಗೂ ಪ್ರಸಾದ ವಿತರಣೆ ಮಾಡಲಾಗುತ್ತಿದೆ. ಅಂದು ಸಂಜೆ ಕಲಾದಗಿಯ ಮುಖ್ಯ ಬೀದಿಯಲ್ಲಿ ಶಂಕ್ರಮ್ಮನವರ ಭಾವಚಿತ್ರದ ಮೆರವಣಿಗೆ ಮಾಡಲಾಗುವುದು. ಇಂದಿಗೂ ಶಂಕ್ರಮ್ಮನವರ ದೇವಸ್ಥಾನದಲ್ಲಿ ದಿನನಿತ್ಯ ಪೂಜೆ, ದೀಪಾರಾಧನೆ ನಡೆಯುತ್ತಿದೆ. ಸೋಮವಾರಕ್ಕೊಮ್ಮೆ ತಪ್ಪದೇ ಮಂಗಳಾರತಿ ನಡೆಯುತ್ತಿದೆ.

ಹೂಗಾರ ಮನೆತನದಲ್ಲಿ ಹುಟ್ಟಿ, ಆಧ್ಯಾತ್ಮ ಲೋಕದಲ್ಲಿ ಕಣ್ತೆರೆದು ಧ್ರುವತಾರೆಯಾಗಿ ಬೆಳಗುತ್ತಿರುವ ಶಂಕ್ರಮ್ಮ ಮಹಾ ಶಿವಶರಣೆಯಾಗಿ ಬಾಳಿ ಹೋದುದು ತುಂಬ ಹೆಮ್ಮೆಯ ಸಂಗತಿ.

೫. ಹೂಗಾರರ ವಿವಿಧ ವೃತ್ತಿಗಳು – ಸ್ತ್ರೀಯರ ಸ್ಥಾನಮಾನ :

೫.೧.  ಹೂವು, ಪತ್ರಿ, ಬಾಸಿಂಗ, ದಂಡೆ ಕೊಡುವುದು :

’ಶಿವಪೂಜೆ ಮಾಡುವುದಕ್ಕೆ ಮುಂಗಡ ಹೂ ಬೇಕ| ಬಿಲಪತ್ರಿ ಬೇಕು ನಿತ್ಯದಲಿ’ (ಕನ್ನಡ ಜಾನಪದ ಗೀತೆಗಳು, ಪುಟ ೩೨೮, ಪದ್ಯ -೯) ಈ ರೀತಿ ಪ್ರತಿನಿತ್ಯ ಶಿವಪೂಜೆಗೆ ಬೇಕಾಗುವ ಹೂವು – ಪತ್ರಿಗಳನ್ನು ತಂದು ಮನೆ ಮನೆಗೆ ಅಡ್ಡಾಡಿ ಕೊಡುವುದು ಹೂಗಾರರ ಕಾಯಕವಾಗಿದೆ.  ಬಿಲಪತ್ರಿ ಗಿಡವನ್ನು ಹೂಗಾರರು ಮಾತ್ರ ಏರುವರು. ಉಳಿದವರು ಏರುವುದಿಲ್ಲ. ಹೂಗಾರರು ಮಳೆ, ಛಳಿ ಎನ್ನದೆ ಸೂರ್ಯೋದಯಕ್ಕೆ ಮುನ್ನವೇ ಸ್ನಾನ ಮಾಡಿ ಮಡಿಹುಡಿಯಿಂದ ತೋಟ ಪಟ್ಟಿಯಲ್ಲಿ ಅಡ್ಡಾಡಿ ಹೂ ಪತ್ರಿಗಳನ್ನು ಎತ್ತಿಕೊಂಡು ಬಂದು ಹಂಚುವರು. ಹೂವುಗಳನ್ನು ಕೆಲ ಹೂಗಾರರು ತಮ್ಮ ತೋಟ ಪಟ್ಟಿಗಳಲ್ಲಿ ಬೆಳೆಸುವರು. ಇನ್ನು ಕೆಲವರು ಹೊಲ-ಗದ್ದೆ ಇಲ್ಲದವರು ಬೇರೆಯವರ ತೋಟಗಳಿಂದ ಹರಿದು ತರುವರು. ಹೂಗಾರರು ಪತ್ರಿ ಗಿಡ ಏರುವ ಮುನ್ನ ಅದಕ್ಕೆ ನಮಸ್ಕರಿಸುವುದುಂಟು. ಪತ್ರಿಯನ್ನು ಹರಿದು ಜೋಳಿಗೆಯಲ್ಲಿ ತುಂಬಿಕೊಂಡು ತಂದು ಮನೆ ಮನೆಗೆ ಹೋಗಿ ಸಣ್ಣ ಬುಟ್ಟಿಯಲ್ಲಿ ಪತ್ರಿ ಹಾಕಿ ಕೊಡುವರು. ಭಕ್ತಜನರು ಅದೇ ಬುಟ್ಟಿಯಲ್ಲಿ ಜೋಳ ಹಾಕಿಕೊಡುವರು. ಊರೆಲ್ಲ ತಿರುಗಾಡಿ ಹೂಗಾರರು ಈ ರೀತಿ ಪತ್ರಿ ಕೊಡುವರು. ಇದು ಅವರ ಕರ್ತವ್ಯ ಹಾಗೂ ಉಪಜೀವನದ ವೃತ್ತಿಯಾಗಿದೆ. ಹೂಗಾರರು ಪತ್ರಿ ಹಾಕುವುದರೊಂದಿಗೆ ಹನುಮಂತ, ಬಸವಣ್ಣ, ವೀರಭದ್ರ, ದೇವರನ್ನು ಪೂಜಿಸುವರು. ಊರಲ್ಲಿ ಪತ್ರಿ ಹಾಕುವುದನ್ನು, ಪೂಜೆ ಮಾಡುವುದನ್ನು ಹೂಗಾರ ಅಣ್ಣತಮ್ಮಂದಿರು ಪರಸ್ಪರ ಒಂದೊಂದು ವರ್ಷ ಹಂಚಿಕೊಂಡು ಪಾಳೆಯ ಮೇಲೆ ಈ ಕರ್ತವ್ಯ ಮಾಡುವರು. ಇತ್ತೀಚೆಗೆ ಪಟ್ಟಣಗಳಲ್ಲಿ ಹೂಗಾರರು ಹೂವಿನ ಹಾರಗಳನ್ನು ಅಂಗಡಿಯಲ್ಲಿಯೇ ತಯಾರಿಸಿ ಇಡುವರು. ಭಕ್ತರು ಮಾಲೆಗಳನ್ನು ಅಂಗಡಿಗಳಿಗೆ ಬಂದು ಖರೀದಿಸುವರು. ಕೆಲ ಹೂಗಾರರು ಹೂವಿನ ಸರಗಳನ್ನು ತಮ್ಮ ಮನೆಗಳಲ್ಲಿಯೇ ಸಿದ್ಧಪಡಿಸಿಕೊಂಡು ಮನೆ ಮನೆಗೆ, ಅಂಗಡಿ ಅಂಗಡಿಗಳಿಗೆ ಹೋಗಿ ಕೊಟ್ಟು ಪ್ರತಿಯಾಗಿ ಹಣವನ್ನು ಪಡೆಯುವರು. ಇದೊಂದು ಜೀವನ ನಿರ್ವಹಣೆಯ ಕಾಯಕವೇ ಆಗಿದೆ. ಆದರೆ ಹಳ್ಳಿಗಾಡಿನಲ್ಲಿನ ಹೂಗಾರರಿಗೆ ಹೂವಿನ ವೃತ್ತಿ ಅಂಥ ಲಾಭದಾಯಕವಾದ ಕಾಯಕವೆನ್ನಿಸದಿದ್ದರೂ ಅವರು ತಮ್ಮ ಕುಲಕಸುಬು ಎಂದು ಭಾವಿಸಿ ಈ ಕಾಯಕವನ್ನು ಮಾಡಿಕೊಂಡು ಬಂದಿರುವರು. ಮದುವೆ, ಮರಣ ಇತ್ಯಾದಿ ಸಂದರ್ಭಗಳಲ್ಲಿ ಹೂಗಾರರು ದಂಡೆ ಹೆಣೆದು ಕೊಡುವುದು, ಬಾಸಿಂಗ ಸಿದ್ಧಪಡಿಸಿಕೊಡುವುದು ಮುಂತಾದ ಕಾಯಕಗಳಲ್ಲಿ ತೊಡಗಿದ್ದುದನ್ನು ಕಾಣುವೆವು. ಇಂಥ ಕಾಯಕಗಳಿಂದಾಗಿ ಇವರಿಗೆ ಕೆಲವು ಚಾಜುಗಳಿವೆ, ಹಕ್ಕುಗಳಿವೆ. ಆಯಗಾರರಲ್ಲಿ ಬರುವ ಇವರು ಸುಗ್ಗಿಯ ಕಾಲದಲ್ಲಿ ಹೊಲಗಳಿಗೆ, ಕಣಗಳಿಗೆ ಹೋಗಿ ಧಾನ್ಯವನ್ನು ಬೇಡಿ ತರುವರು. ಜನರೂ ಭಕ್ತಿಯಿಂದ ಧಾನ್ಯವನ್ನು ಕೊಡುವರು. ಮದುವೆ ಸಂದರ್ಭಗಳಲ್ಲಂತೂ ಹೂಗಾರರಿಗೆ ಹೆಚ್ಚಿನ ಗೌರವ ಮರ್ಯಾದೆ ಸಲ್ಲುತ್ತದೆ. ಹೂಗಾರರು ಬಾಸಿಂಗ – ದಂಡೆ ತಯಾರಿಸುವರು. ಮದುವೆ ಮನೆಯಿಂದ ಬಾಜಾ – ಭಜಂತ್ರಿಯ ದಂಡು ಹೂಗಾರರ ಮನೆಗೆ ಬಂದು ಬಾಸಿಂಗ ದಂಡ ಒಯ್ಯುವ ಸಂದರ್ಭವಂತೂ ಅತ್ಯಂತ ಗೌರವಯುತವಾದುದಾಗಿದೆ. ಕೆಲವು ಕಡೆ ಹೂಗಾರರೇ ಮದುವೆ ಮನೆಗೆ ಬಾಸಿಂಗ ದಂಡೆಯನ್ನು ಒಯ್ದು ಕೊಡುವುದುಂಟು. ಆಗ  ಹೂಗಾರನಿಗೆ ಆ ಮದುವೆ ಮನೆಯವರು ಆದರದಿಂದ ಬರಮಾಡಿಕೊಂಡು ಸತ್ಕರಿಸುವ ಬಗೆಯಂತೂ ಅನನ್ಯವಾದುದು. ಇದನ್ನು ಒಬ್ಬ ಜಾನಪದ ಕವಿ ಹೀಗೆ ಹಾಡಿನಲ್ಲಿ ಹಿಡಿದಿಟ್ಟಿದ್ದನ್ನು ಕಾಣುತ್ತೇವೆ ’ – ಬಾಸಿಂಗ ತಂದಣ್ಣ, ತೂಗುಮಂಚ ಕೊಡಿರೆ | ಸೊಗಸಾದ ಗದ್ದೆ ಹೊಲವ ಕೊಡಿರೆ | ಸೋ ಅನ್ನಿರೆ, ಸೋಬಾರ ಅನ್ನೀರೆ | ದಂಡಿ ತಂದಣ್ಣಗ ಹಿಂಡು ಎಮ್ಮಿಕೊಡಿರೆ | ಖಂಡಗದ ಹೊಲಗದ್ದೆ ಕೊಡಿರೆ | ಸೋ ಅನ್ನಿರೆ ಸೋಬಾನ ಅನಿರೆ || ಹೀಗೆ ಬಾಸಿಂಗ ದಂಡೆಗಳನ್ನು ಮದುವೆ ಮನೆಗೆ ತಂದು ಒಪ್ಪಿಸಿದ ಹೂಗಾರರನ್ನು ತಮ್ಮ ಯೋಗ್ಯತಾನುಸಾರ ಬಾಬು – ಹಣಕೊಟ್ಟು ಗೌರವಿಸುವರು.

ಹೂಗಾರರು ಬಾಸಿಂಗವನ್ನು ತಯಾರಿಸುವಲ್ಲಿ  ಪರಿಣಿತರು. ಮದುವೆ ಮುಹೂರ್ತಗಳಲ್ಲಿ ಇವರು ಬಾಸಿಂಗ ತಯಾರಿಸುವಲ್ಲಿ ತುಂಬ ಕ್ರಿಯಾಶೀಲರಾಗಿ ತೊಡಗಿಕೊಳ್ಳುವರು. ಬಾಸಿಂಗವನ್ನು ಸಾಮಾನ್ಯವಾಗಿ ಕೆಂಪು ಜೋಳದ ದಂಟು, ಬಿದಿರು,  ಇಲ್ಲವೆ ಹುಲಿ ಬೆಂಡುಗಳಿಂದ ಮಾಡುವರು. ದಾರದಿಂದ ಮೊದಲು ಬಿದಿರು ಬೆಂಡಿನಿಂದ ಕಟ್ಟಿ ಅದಕ್ಕೆ ಬಣ್ಣದ ಹಾಳೆ, ಬಿಂಗು-ಬ್ಯಾಂಗಡಿಗಳಿಂದ ಅಂಟಿಸುವರು. ಬಾಸಿಂಗಗಳಲ್ಲಿ ಹೆಡೆ ಬಾಸಿಂಗ, ಗುಡಿಬಾಸಿಂಗ ಎಂದು ಎರಡು ಪ್ರಕಾರದವು ಇರುವವು. ಹೆಡೆ ಬಾಸಿಂಗ ಸಾದಾ ಇದ್ದು, ಇದು ಮೂರು, ಐದು, ಏಳು ಎಡೆಗಳಿಂದ ಕೂಡಿರುತ್ತದೆ. ಮೂರು ಹೆಡೆಗಳ ಬಾಸಿಂಗವನ್ನು ಜನ ಹೆಚ್ಚಾಗಿ ಬಳಸುವುದುಂಟು. ಮೂರು ಹೆಡೆಗಳನ್ನು ತ್ರಿಮೂರ್ತಿ (ಬ್ರಹ್ಮ, ವಿಷ್ಣು, ಶಿವ) ಗಳ ಸಂಕೇತವೆಂದು ತಿಳಿಯುವುದುಂಟು. ಈ ಬಾಸಿಂಗವನ್ನು ಗೋಟು, ತೊಂಡಿಲು, ಬೊಟ್ಟು ನಡುವೆ ಈಶ್ವರ ಇಲ್ಲವೆ ಬಸವಣ್ಣ ಇವುಗಳಿಂದ ಅಲಂಕರಿಸುವರು. ಇಂಥ ಬಾಸಿಂಗಗಳನ್ನು ಸಾಮಾನ್ಯವಾಗಿ ಎಲ್ಲರೂ ಉಪಯೋಗಿಸುವುದುಂಟು. ಇನ್ನು ಗುಡಿ ಬಾಸಿಂಗವನ್ನು ಶ್ರೀಮಂತರು ಬಳಸುವರು. ಹೆಡೆ ಬಾಸಿಂಗದ ಮುಂದೆ ಮೂರು ಬಾಗಿಲು (ಕಮಾನು) ನಡುವೆ, ಈಶ್ವರ, ಛತ್ರಿ, ಚಾಮರ ಆಪ್ತೇ ಗಿಳಿಗಳಿಂದ ಅಲಂಕರಿಸಿ ಗುಡಿಬಾಸಿಂಗಗಳನ್ನು ಸಿದ್ಧಪಡಿಸುವರು. ಇಲ್ಲಿ ಕುಸುರಿನ ಕೆಲಸ ಬಹಳ. ಹೂಗಾರರು ಈ ಬಾಸಿಂಗ ತಯಾರಿಸುವಲ್ಲಿ ತಮ್ಮ ಕಲಾಪ್ರೌಢಿಮೆಯನ್ನು, ವೇಳೆಯನ್ನು ಹೆಚ್ಚಾಗಿ ವ್ಯಯಿಸುವರು. ಇಂಥ ಬಾಸಿಂಗವನ್ನು ತಯಾರಿಸಲು ಇವರಿಗೆ ಹದಿನೈದು ದಿನ ಹಿಡಿಯುವುದು. ಇದಕ್ಕೆ ಸಂಭಾವನೆಯೂ ಬಹಳ ಬರುವುದು. ಸಾಮಾನ್ಯವಾಗಿ ಇಂಥ ಬಾಸಿಂಗಕ್ಕೆ ಐದುನೂರು ರೂಪಾಯಿಗಳಿಂದ ಐದು ಸಾವಿರ ರೂಪಾಯಿಗಳವರೆಗೆ ಸಂಭಾವನೆ ಬರುವುದುಂಟು. ಇಲ್ಲವೆ ಕೆಲವರು ಈ ಬಾಸಿಂಗ ತಂದುದಕ್ಕೆ ಬಂಗಾರವನ್ನೂ ಕೊಡುವುದುಂಟು. ಈಗೀಗ ಇಂಥ ಬಾಸಿಂಗಗಳ ಬಳಕೆ ಕಡಿಮೆಯಾಗಿದೆ. ಹೂಗಾರರಲ್ಲೂ ಇಂಥ ಬಾಸಿಂಗವನ್ನು ಮಾಡುತ್ತ ಕುಳಿತುಕೊಳ್ಳುವ ವ್ಯವಧಾನ ಇಲ್ಲವಾಗಿದೆ. ಬಜಾರಿನಲ್ಲಿಯೇ ತಯಾರಿಸಿದ ಬಾಸಿಂಗಗಳನ್ನು ಕೊಂಡು ತಂದು ಬಳಸುವುದೇ ಇಂದು ಹೆಚ್ಚಾಗಿದೆ.  ಇತ್ತಿತ್ತಲಾಗಿ ಮುತ್ತಿನ ಬಾಸಿಂಗಗಳನ್ನು ಕೊಂಡು ತಂದು ಬಳಸುತ್ತಿದ್ದಾರೆ. ಹೂಗಾರರ ಬಾಸಿಂಗ ಮಾಡುವ ವೃತ್ತಿ ಬಹುಕಾಲದಿಂದಲೂ ಬಂದಂಥದು. ಇವರು ಬಾಸಿಂಗಕ್ಕೆ ಪ್ರತಿಯಾಗಿ ಹಣ, ಉಲುಪಿ ಪಡೆಯುವರು. ಕೆಲಸ ಶ್ರೀಮಂತರು ಹೂಗಾರ ಹೆಣ್ಣುಮಕ್ಕಳಿಗೆ ಸೀರೆ ಉಡಿಸುವುದೂ ಉಂಟು. ಇನ್ನು ಕೆಲವರು ಎಮ್ಮೆ ಆಕಳುಗಳನ್ನು ಕೊಡುವುದುಂಟು. ಇಂದು ಈ ವೃತ್ತಿ ಅಷ್ಟಾಗಿ ಹೂಗಾರರಿಗೆ ಲಾಭದಾಯಕವಾಗಿ ಪರಿಣಮಿಸುತ್ತಿಲ್ಲ. ಜನರೂ ಇಂದು ಹೂಗಾರರ ಕೈಯಿಂದ ಇದನ್ನು ಮಾಡಿಸುವುದನ್ನು ಕಡಿಮೆ ಮಾಡಿದ್ದಾರೆ. ಸಿದ್ಧವಾದ ಬಾಸಿಂಗಗಳನ್ನೇ ತಂದು ಬಳಸುತ್ತಿದ್ದುದುಂಟು.

ಕೆಲವೆಡೆ ಬ್ರಾಹ್ಮಣರಿಗೆ, ಪಟ್ಟೇಗಾರರಿಗೆ ಬೇಕಾಗುವ ಎಲೆ ಬಾಸಿಂಗವನ್ನು ಹೂಗಾರರೇ ಮಾಡಿಕೊಡುವುದುಂಟು. ಇದು ತ್ರಿಕೋನ ಆಕಾರದ ಮೂರು ಅಥವಾ ಐದು ಎಲೆಗಳಿಂದ ಮಾಡಲ್ಪಟ್ಟಿರುತ್ತದೆ. ಹೂಗಾರರೂ ತಮ್ಮ ಮದುವೆಗಳಲ್ಲಿ ಇಂಥ ಬಾಸಿಂಗಗಳನ್ನೇ ಕಟ್ಟಿಕೊಳ್ಳುವರು. ಹೆಣ್ಣುಮಕ್ಕಳು ಹೂವಿನ ದಂಡೆ ಕಟ್ಟಿಕೊಳ್ಳುವರು. ಅಲ್ಲದೆ ಮುಸಲ್ಮಾನರ ಲಗ್ನದಲ್ಲಿ ಮದುಮಗನ ನಿಲುವಿನ ಉದ್ದದ ’ಮಖನಾ’ ವನ್ನು ಇವರೇ ಮಾಡಿಕೊಡುವರು.ಕಾರು-ವಾಹನಗಳಿಗೂ ಹೂಹಾರವನ್ನು ಹೂಗಾರರು ಹೆಣೆಯುವರು. ಕಮತಗಿಯ ಶ್ರೀ ಹನುಮಂತಪ್ಪ ಹೂಗಾರ ಇವರು ಮನುಷ್ಯನ ಎತ್ತರದವರೆಗಿನ ಭವ್ಯ ಹಾರಗಳನ್ನು ಕಟ್ಟಿ ಬಾಗಲಕೋಟೆ ಜಿಲ್ಲೆಯಲ್ಲಿಯೇ ಅತ್ಯಂತ ಪ್ರಸಿದ್ಧಿ ಪಡೆದಿದ್ದಾರೆ. ಇವರು ಕಟ್ಟಿದ ಮಾಲೆಗಳು ಮಠ-ಮಾನ್ಯಗಳಲ್ಲಿ ಈಗಲೂ ನೋಡಲು ಸಿಗುತ್ತವೆ. ಇದೂ ಒಂದು ಬಗೆಯ ಕೌಶಲ್ಯವೇ ಆಗಿದೆ. ಆದರೆ ಇಂಥ ಮಾಲೆಗಳನ್ನು ಮಾಡುವುದು ಇತ್ತಿತ್ತಲಾಗಿ ಕಡಿಮೆಯಾಗಿದೆ. ಇದು ಲಾಭದಾಯಕವಾದ ಉದ್ಯೋಗವೆಂದು ತಿಳಿದು ಬೇರೆ ಬೇರೆ ಜಾತಿಯವರು ವಿಶೇಷವಾಗಿ ಮುಸಲ್ಮಾನರು ಇತ್ತೀಚೆಗೆ ಹೂವಿನಹಾರ ತಯಾರಿಸಿ ಮಾರುವ ಉದ್ಯೋಗದಲ್ಲಿ ತೊಡಗಿಕೊಂಡುದನ್ನು ಕಾಣುವೆವು.

ಹಳ್ಳಿಗಳಲ್ಲಿ ಇಂದಿಗೂ ಯಾರಾದರೂ ಸತ್ತರೆ ಅವರ ಹೆಣಕ್ಕೆ ಹೂವಿನಹಾರವನ್ನು ಹೂಗಾರರೇ ಕಟ್ಟಿಕೊಡುವರು. ಸತ್ತವರು ಹೆಣ್ಣುಮಗಳಾಗಿದ್ದರೆ ದಂಡೆ ಹೆಣೆದುಕೊಡುವರು, ಗಂಡಿದ್ದರೆ ಕೈಯಲ್ಲಿ ತುರಾಯಿ ಕೊಡುವರು. ಕೊರಳಲ್ಲಿ ಹೂಮಾಲೆ ಹಾಕುವರು. ಶವಸಂಸ್ಕಾರದ ಸಮಯದಲ್ಲಿ ಹೂಗಾರರು ಶವಸಂಸ್ಕಾರ ಮಾಡಲು ಬಂದು ಎಲ್ಲರಿಗೂ ಪತ್ರಿಕೊಡುವರು. ಕೆಲವೆಡೆ ಈ ಕಾರ್ಯವನ್ನು ಮಠಪತಿಯವರೂ ಮಾಡುವುದುಂಟು. ಪತ್ರಿ ಕೊಟ್ಟಿದಕ್ಕೆ ಹೂಗಾರರಿಗೆ ದಕ್ಷಿಣೆ ರೂಪದಲ್ಲಿ ಹಣ ಬರುವುದು. ಸತ್ತಾಗ ಧಾನ್ಯವನ್ನು ದಾನ ಮಾಡುವುದುಂಟು. ಆ ಧ್ಯಾನವನ್ನು ಹೂಗಾರರಿಗೂ ಪಡೆಯುವ ಹಕ್ಕಿದೆ. ’ಹೆಣದವರು ಹೆಣಕ್ಕೆ ಅಳುತ್ತಿದ್ದರೆ ಹೂಗಾರನು ತನ್ನ ದುಡ್ಡಿಗೆ ಅಳುತ್ತಿದ್ದ’ ಎಂಬ ಗಾದೆಯೂ ಪ್ರಚಲಿತದಲ್ಲಿದೆ.

ಹೂಗಾರರು ಆಯಗಾರರಲ್ಲಿ ಪ್ರಮುಖರು. ಊರ ಜನತೆಯ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಬರುತ್ತಿದ್ದ ಇವರು ಸುಗ್ಗಿಯ ಕಾಲದಲ್ಲಿ ಒಕ್ಕಲಿಗರಿಂದ ಧಾನ್ಯ ಪಡೆಯುವರು. ರಾಶಿ ನಡೆದಾಗ ಕಣಗಳಿಗೆ ಇವರು ಹೂವಿನ ಹಾರ ಪತ್ರಿಗಳನ್ನು ಪೂಜೆಗೆಂದು ಒಯ್ದು ಕೊಡುವರು. ಹೀಗೆ ಒಯ್ದು ಕೊಡುತ್ತಿದ್ದುದಕ್ಕೆ ಹನ್ನೆರಡನೇ ಶತಮಾನದಲ್ಲಿದ್ದ ಬಸವಾದಿ ಶರಣರ ಸಮಕಾಲೀನವಾದ ಶಿವಭಕ್ತ ಹೂಗಾರ ಮಾದಣ್ಣನೇ ಸಾಕ್ಷಿಯಾಗಿದ್ದಾನೆ. ಇದನ್ನು ಜಾನಪದ ಕವಿಯೊಬ್ಬ ’ಹಾರಿ ಬರುವುದು ಹುಲುಸು ಏರಿ ಮಾದನ ಪತ್ರಿ’ ಎಂದಿದ್ದಾನೆ. ರಾಶಿ ಮಾಡುವಾಗ ಹೂಗಾರನ ಪತ್ರಿ ಏರಿಸಿದಲ್ಲಿ ಆತನ ರಾಶಿ ಹುಲುಸಾಗುವುದೆಂದು ಆತನ ಭಾವನೆ. ಅದಕ್ಕೆ ಪ್ರತಿಯಾಗಿ ಒಕ್ಕಲಿಗ ಹೂಗಾರನಿಗೆ ಧಾನ್ಯವನ್ನು ಉದಾರವಾಗಿ ತಯಾರಿಸಿಟ್ಟು ಪೂಜೆ ಸಲ್ಲಿಸುವನು. ಆ ಬೂದುಗನಿಗೂ ಹೂಗಾರರು ಕೊಟ್ಟು ಹೂ ಪತ್ರಿ ಏರಿಸುವರು. ಇದನ್ನು ಜಾನಪದ ಕವಿಯೊಬ್ಬ ’ಬೂದುಗನಿಗೆ ಬಾಸಿಂಗ, ಭೂಮಿ ತಾಯಿಗೆ ದಂಡೆ ಸಾಲ ಶರಣರಿಗೆ ಸರಮಾಲೆ ಕಟ್ಟಿಕೊಂಡು ಮಾದಯ್ಯ ಗೆದ್ದ ಕೈಲಾಸ” ಎಂದು ಹಾಡಿದ್ದಾನೆ. ಇಲ್ಲಿ ಬಾಸಿಂಗ ಎಂದರೆ ಎಲೆ ಪತ್ರಿಗಳ ಮುಕುಟ. ಅದನ್ನು ರಾಶಿಯ ದಿವಸ ಒಕ್ಕಲಿಗ ಬೂದುಗನಿಗೆ ಏರಿಸುವನು. ಹೂದಂಡೆ ಮೇಟಿಗೆ ಕಟ್ಟಿ ಉಳಿದ ಉಪಕರಣಗಳಿಗೆ ಸಾಲು ಶರಣರೆಂದು ಹೂಮಾಲೆ ಹಾಕಿ ಪೂಜೆ ಮಾಡುವನು. ಒಕ್ಕಲಿಗನು ಪುಟ್ಟಿ ತುಂಬ ಜೋಳವನ್ನು ಹೂಗಾರನಿಗೆ ’ಬಾಬು’ ಎಂದು ಕೊಡುವನು. ಈ ಕಾಯಕವನ್ನು ಹನ್ನೆರಡನೇ ಶತಮಾನದಲ್ಲಿಯೇ ಹೂಗಾರ ಮಾದಣ್ಣ ಮಾಡಿಕೊಂಡಿದ್ದನೆಂಬ ಉಲ್ಲೇಖ ಬರುವುದು. ಇಂಥ ಪದ್ಧತಿ ಹಳ್ಳಿಗಾಡಿನ ಪ್ರದೇಶದಲ್ಲಿ ಇಂದಿಗೂ ಅಲ್ಲಲ್ಲಿ ಉಳಿದುಕೊಂಡು ಬಂದಿದೆ. ಆದರೆ ಇಂದು ಒಕ್ಕಲಿಗನು ರಾಶಿಯನ್ನು ಯಂತ್ರಗಳ ಮೂಲಕ ಬೇಗ ಬೇಗನೆ ಮಾಡಿ ಮುಗಿಸುವನು. ಆತನಲ್ಲಿ ಅಂಥ ಉದಾರ ಭಾವನೆ ಉಳಿದಿಲ್ಲ. ಹೂಗಾರರೂ ಇಂದು ಒಕ್ಕಲಿಗರ ಪ್ರತಿ ಕಣಗಳಿಗೆ, ರಾಶಿ ನಡೆದಲ್ಲಿ ಹೋಗುವುದೂ ಕಡಿಮೆಯಾಗಿದೆ. ಆಧುನಿಕತೆಯ ಪ್ರಭಾವ ಪರಿಣಾಮ ಕಾರಣವಾಗಿ ಹೂಗಾರರ ವೃತ್ತಿಯ ಮೇಲೆ ಹೊಡೆತ ಬಿದ್ದಿದೆ. ಹೂವಿನ ಉದ್ಯೋಗವನ್ನೇ ಅವರು ಅವಲಂಬಿಸಿ ಬದುಕುವುದು ಇಂದು ದುಸ್ತರವಾಗಿದೆ. ಮೊದಲಿದ್ದ ಸಹಕಾರ, ಉದಾರ ಭಾವನೆ ಇಂದು ಜನತೆಯಲ್ಲಿ ಕಡಿಮೆಯಾಗಿದೆ. ಇದರಿಂದ ಇಂದು ಹೂವಿನ ವೃತ್ತಿ ಆಯಗಾರಿಕೆಯ ಅಂಗವಾಗಿ ಉಳಿದಿದೆ. ಒಂದು ಬಗೆಯ ವ್ಯಾಪಾರಿ ವೃತ್ತಿಯಾಗಿದೆ. ಈ ಹೂವಿನ ವೃತ್ತಿಯನ್ನು ಇಂದು ಹೂಗಾರರಷ್ಟೇ ಮಾಡುತ್ತಿಲ್ಲ. ಬೇರೆ ಬೇರೆಯವರೂ  ಪಟ್ಟಣಗಳಲ್ಲಿ ಹಳ್ಳಿಗಳಲ್ಲಿ ಅಂಗಡಿಗಳನ್ನು ಇಟ್ಟು ಮಾಡುತ್ತಿರುವುದನ್ನು ಕಾಣುವೆವು.

ವೀರಶೈವರಿಗೆ ಮನೆ ದೇವರಿರುವಂತೆ ಹೂಗಾರರಿಗೂ ಮನೆದೇವರುಗಳಿವೆ. ಬಹುತೇಕ ಹೂಗಾರರ ಮನೆದೇವರು ಗುಡ್ಡಾಪುರ ದಾನಮ್ಮದೇವಿ ಆಗಿದ್ದಾಳೆ. ಇನ್ನು ಕೆಲವೆಡೆ ಹೂಗಾರರ ಮನೆದೇವರು ಬಾವಿಯ ಬೊಮ್ಮ (ಬ್ರಹ್ಮ) ಬರಮಪ್ಪನಾಗಿದ್ದುದನ್ನು ತಿಳಿಯುವೆವು. ಬಾವಿಯ ಬೊಮ್ಮ ಹೂಗಾರರ ಮನೆದೇವರೆಂಬುದನ್ನು ಬಸವಣ್ಣನವರೇ ತಮ್ಮೊಂದು ವಚನದಲ್ಲಿ ಉಲ್ಲೇಖಿಸಿದುದನ್ನು ಕಾಣಬಹುದು. ಆ ವಚನ ಹೀಗಿದೆ ;

ಬಡ ಹಾರುವನೇಸು ಭಕ್ತನಾದಡೆಯೂ ನೇಣಿನ ಹಂಗ ಬಿಡ |
ಮಾಲೆಗಾರನೇಸು ಭಕ್ತನಾದಡೆಯೂ ಬಾವಿಯ ಬೊಮ್ಮನ ಹಂಗ ಬಿಡ ||

ಇಲ್ಲಿ ಮಾಲೆಗಾರನ, ಹೂಗಾರನ ಮನೆದೇವರು ಬಾವಿಯ ಬೊಮ್ಮನೆಂದು ಪ್ರಸ್ತಾಪವಾಗಿದೆ. ತಮ್ಮಡಿಗ, ಹೂಗಾರ, ಗುರವ, ಪೂಜಾರ ಇವರು ಎಷ್ಟು ಗುರುಕಾರುಣ್ಯ ಪಡೆದು ಲಿಂಗಾಂಗ ಸಂಬಂಧವನ್ನುಳ್ಳ ಶಿವಭಕ್ತರಾದರೂ ಬಾವಿಯ ಬುಡದಲ್ಲಿ ಬೊಮ್ಮ ದೇವರ ಮಡಗಿಕೊಂಡು  ಪ್ರಾತಃಕಾಲದಲ್ಲಿ ಎದ್ದು ತೋಟಕ್ಕೆ ಹೋಗಿ ಸ್ನಾನ ಮಾಡಿ, ಮಡಿಯನ್ನು ಹೊದ್ದುಕೊಂಡು ಆ ಬಾವಿಯ ಬೊಮ್ಮನಿಗೆ ಅಭಿಷೇಕ ಮಾಡಿ, ದೇವರೇ ಗಿಡಗಳು ಚಿಗುರುವ ಹಾಗೆ ಮಾಡು೯, ಗಿಡಗಳಿಗೆ ಹುಳುಗಳು ಹತ್ತದ ಹಾಗೆ ಮಾಡು, ಹೆಚ್ಚೆಚ್ಚು ಹಣ್ಣು ಕಾಯಿಗಳು ಆಗುವ ಹಾಗೆ ಮಾಡು, ಹಣ್ಣು  ಕಾಯಿಗಳನ್ನು ನಿನಗೆ ಅರ್ಪಿಸುತ್ತೇನೆ ಎಂದು ಭಕ್ತಿಯಿಂದ ಆತನಿಗೆ ನಮಸ್ಕರಿಸುವನು. ಇದರಿಂದ ಬಾವಿಯ ಬೊಮ್ಮನು ಹೂಗಾರ, ಜೀರ, ಗುರವ ಹಾಗೂ ಪೂಜಾರರ ಆರಾಧ್ಯ ದೈವವೆಂಬುದು ಸ್ಪಷ್ಟವಾಗುವುದು. ಈಗಲೂ ಈ ಸಮಾಜದವರ ಎತ್ತು ಕಟ್ಟುವ ಗೋದಲೆ ಕೊಟ್ಟಿಗೆಗಳ ಮೇಲಿರುವ ಮಾಡುಗಳಲ್ಲಿ ಬೆಣಕಲ್ಲು, ಗುಂಡು ಕಲ್ಲುಗಳನ್ನಿಟ್ಟು ಪೂಜೆ ಮಾಡುವುದನ್ನು ನಾವು ನೋಡುವೆವು. ಈ ಬೆಣಕಲ್ಲು ಗುಂಡುಕಲ್ಲುಗಳಿಗೆ ಭರಮಪ್ಪ ದೇವರು ಎಂದು ಈ ಸಮಾಜದವರು ಕರೆಯುವುದುಂಟು. ವಿಶೇಷವಾಗಿ ಹುಣ್ಣಿಮೆ, ಅಮಾವಾಸ್ಯೆ ಹಾಗೂ ಇತರ ಹಬ್ಬ ಹರಿದಿನಗಳಲ್ಲಿ ಈ ಬೆನಕನನ್ನು, ಭರಮಪ್ಪನನ್ನು ಈ ಸಮಾಜದವರು ತಮ್ಮ ಮನೆಯ ಆರಾಧ್ಯ ದೇವರೆಂದು ಪೂಜಿಸುವುದುಂಟು.

ಹೂಗಾರರು ವೀರಶೈವ ಧರ್ಮದ ಅವಿಭಾಜ್ಯ ಅಂಗವಾಗಿದ್ದರೂ ತಮ್ಮದೇ ಆದ ವೈಶಿಷ್ಟ್ಯಗಳನ್ನು ಹೊಂದಿದ್ದಾರೆ. ಇವರದು ಮುಖ್ಯವಾಗಿ ಸೇವಾ ಮನೋಧರ್ಮ. ವೀರಶೈವರಲ್ಲಿ ಜನನದಿಂದ ಮರಣದವರೆಗಿನ ಪ್ರತಿಯೊಂದು ಕಾರಣಗಳಲ್ಲೂ ಹೂಗಾರರು ವಿಶೇಷ ಪಾತ್ರ ವಹಿಸುವರು. ಮನೆಯಲ್ಲಿ ಕೂಸು ಹುಟ್ಟಿತೆಂದರೆ ಹೂಗಾರರು ಆ ಮನೆಗೆ ಹೋಗಿ ಹೂಹಾರ ಬಿಡಿ ಹೂವುಗಳನ್ನು ಕೊಟ್ಟು ಬರುವರು. ಹೆಣ್ಣುಮಕ್ಕಳು ಋತುಮತಿಯಾದಾಗ ಆಕೆಯನ್ನು ಕೂಡ್ರಿಸಿದಾಗ ನಿತ್ಯವೂ ಅವರ ಮನೆಗೆ ಹೋಗಿ ಹೂಗಾರರು ಹೂವಿನ ದಂಡೆ ಹೆಣೆದುಕೊಂಡು ಅವರಿಗೆ ತಂದುಕೊಡುವರು. ಹೀಗೆ ತಂದು ಕೊಟ್ಟುದಕ್ಕೆ ಊರವರು ಇವರಿಗೆ ಜೋಳ, ಗೋಧಿ, ಕುಪ್ಪಸ, ಖಣ, ಸೀರೆಗಳನ್ನು ಪ್ರತಿಯಾಗಿ ಕೊಡುವರು. ಹೂಗಾರರು ಊರ ಆಯಗಾರರಲ್ಲಿ ಪ್ರಮುಖರು. ಊರ ಜನ ಸಾಂಸ್ಕೃತಿಕ ಬದುಕಿನೊಂದಿಗೆ ಇವರ ಬದುಕು ಹಾಸುಹೊಕ್ಕಾಗಿ ಹೆಣೆದುಕೊಂಡಿದೆ.

೫.೨. ಹನುಮಂತದೇವರ ಪೂಜೆ ಮಾಡುವುದು :

ಹೂಗಾರರು ಹೂಹಾರ, ಪತ್ರಿ, ಬಾಸಿಂಗ, ದಂಡೆ ಮಾಡಿ ಜನತೆಗೆ ಕೊಡುವುದರ ಮೂಲಕ ಆಯುವನ್ನು ಸ್ವೀಕರಿಸಿ ಆಯಗಾರರೆಂದು ಕರೆಸಿಕೊಂಡಂತೆ ಹನುಮಂತ, ಈಶ್ವರಲಿಂಗ, ರಾಮಲಿಂಗ, ಬಸವಣ್ಣ ಮುಂತಾದ ದೇವರುಗಳನ್ನು ಪೂಜೆ ಮಾಡುವುದರ ಮೂಲಕ ಇವರು ಪೂಜಾರಿಗಳೆಂದು ಕರೆಸಿಕೊಳ್ಳುವರು. ಪೂಜಾರರು ಎಂದಾಕ್ಷಣ ಬ್ರಾಹ್ಮಣರು, ಕಬ್ಬಲಿಗರು, ಕುರುಬರು, ಉಪ್ಪಾರರು – ಇವರೆಲ್ಲರೂ ನೆನಪಿಗೆ ಬರುವರು. ಪೂಜೆ ಮಾಡುವವರೆಲ್ಲರಿಗೆ ಪೂಜಾರರೆಂದೇ ಕರೆಯುವರು. ಆದರೆ ಹೂಗಾರಿಕೆ ವೃತ್ತಿ ಮಾಡಿಕೊಂಡು ಬಂದ ಪೂಜಾರರೇ ಹೂ ಪತ್ರಿಯನ್ನು ಊರ ಜನತೆಗೆ ಕೊಡುವುದರೊಂದಿಗೆ ಇವರ ದೇವರ ಪೂಜೆಯನ್ನೂ ಮಾಡುವರು. ಬಿಜಾಪುರ, ಬೆಳಗಾವಿ, ಗುಲಬರ್ಗಾ, ರಾಯಚೂರ, ಧಾರವಾಡ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಇವರು ಹೆಚ್ಚಾಗಿದ್ದು, ಹನುಮಂತದೇವರ ಪೂಜೆ ಪುನಸ್ಕಾರಗಳಲ್ಲಿ ತೊಡಗಿರುವರು. ಹಸಿಕೊಬ್ಬರಿ ಬಿಸಿ ಬಾಣ ಉಣ್ಣುವ ಪೂಜಾರಿಗಳೆಂದೇ ಇವರಿಗೆ ಜನ ಹಾಸ್ಯಮಯವಾಗಿ ಕರಯುವುದುಂಟು. ಬಾಗಲಕೋಟೆ ಜಿಲ್ಲೆಯ ನಾವಲಗಿ, ಬನಹಟ್ಟಿ, ಜಗದಾಳ, ಅಮಲಝರಿ, ತುಳಸಿಗೇರಿ, ಜಮಖಂಡಿ, ತೇರದಾಳ, ಗಿರಿಸಾಗರ, ಬಿಜಾಪುರ ಜಿಲ್ಲೆಯ ಹಳೆಗುಣಕಿ, ಸಿಂದಗಿ, ಇಂಡಿ, ಬೆಳಗಾವಿ ಜಿಲ್ಲೆಯ ಹೊಸೂರ, ಸುನ್ನಾಳ, ಕಲ್ಲೋಳಿ, ಹಾರೂಗೇರಿ, ಕವಟಕೊಪ್ಪ, ಗುಲಬರ್ಗ ಜಿಲ್ಲೆಯ ನೆಲೋಗಿ, ದೇವಣಗಾಂವ, ಮುಂತಾದ ಊರುಗಳಲ್ಲಿ ಹನುಮಂತ ದೇವರ ಗುಡಿಗಳು ತುಂಬ ಪ್ರಸಿದ್ಧಿ ಪಡೆದಿವೆ.

ಪ್ರತಿ ಊರುಗಳಲ್ಲಿ ಪೂಜಾರಿಗಳ ಮನೆತನಗಳು ನಾಲ್ಕೋ ಐದೋ ಇರುವವು. ಇವರು ಸರತಿಯ ಮೇಲೆ ದೇವರ ಪೂಜೆಯನ್ನು ಮಾಡುವರು. ಹನುಮಂತದೇವರ ಪೂಜೆ ಒಂದು ಮನೆತನದವರಿಗೆ ಬಂತೆಂದರೆ ಅವರು ವರ್ಷವಿಡೀ ದೇವಾಲಯದಲ್ಲಿಯೇ ಇದ್ದು ದೇವರ ಸೇವೆಯನ್ನು ಮಾಡಬೇಕಾಗುವುದು. ಹನುಮಂತದೇವರ ಗರ್ಭಗುಡಿಯಲ್ಲಿ ಯಾವತ್ತೂ ನಂದಾದೀಪ ಇರುವುದುಂಟು. ದೀಪ ಆರದಂತೆ ಪಣತಿಗೆ ಎಣ್ಣೆಯನ್ನು ಹಾಕುತ್ತ ಹಗಲೂ ರಾತ್ರಿ ಒಬ್ಬರು ಗುಡಿಯಲ್ಲಿರುವುದು ಕಡ್ಡಾಯವಾಗಿದೆ. ನಂದಾದೀಪಕ್ಕೆ ಊರ ಭಕ್ತರು, ಶ್ರೀಮಂತರು ಒಳ್ಳೆಣ್ಣೆಯನ್ನು ಕೊಡುವರು. ಕೆಲವೆಡೆ ಎಣ್ಣೆಗಾಗಿ ಶ್ರೀಮಂತರು ಪೂಜಾರಿಗಳಿಗೆ ಹೊಲವನ್ನೇ (ಮಾನೇದ ಹೊಲ) ಕೊಟ್ಟಿರುವುದುಂಟು. ಪೂಜಾರಿಗಳು ದೀಪ ಆರದಂತೆ ಕಾವಲಿದ್ದು, ನಂದಾದೀಪ ಉರಿಸುವುದರೊಂದಿಗೆ ಅತ್ಯಂತ ಮಡಿಯಿಂದ ಶುಚಿರ್ಭೂತರಾಗಿ ದಿನನಿತ್ಯ ಹನುಮಂತದೇವರನ್ನು ಪೂಜಿಸುವರು. ಪ್ರತಿನಿತ್ಯ ಪೂಜಾರಿಗಳು ಬೆಳಗಿನ ಜಾವದಲ್ಲಿ ಎದ್ದು ತಮ್ಮ ಪ್ರಾತರ್ವಿಧಿಗಳನ್ನು ಮುಗಿಸಿಕೊಂಡು ಸ್ನಾನಮಾಡಿ ಪಂಚೆ ತೊಟ್ಟು ಬರಿಮೈಯಲ್ಲಿ ಮಡಿ ನೀರಿನ ಕೊಡ ಹೊತ್ತು ದೇವಾಲಯಕ್ಕೆ ಹೋಗುವರು. ಅಲ್ಲಿ ಹನುಮಂತ ದೇವರನ್ನು ಶುಭ್ರಜಲದಿಂದ ಅಭಿಷೇಕಗೊಳಿಸಿ, ಗಂಧ ಹಚ್ಚಿ ಹೂ ಪತ್ರಿಗಳನ್ನು ಏರಿಸಿ ಅಷ್ಟವಿಧಾರ್ಚನೆಯಿಂದ ಪೂಜಿಸುವನು. ಗಂಟೆ ಬಾರಿಸುತ್ತ ಧೂಪಾರತಿಯನ್ನು ಎತ್ತಿ ಬೆಳಗುವುದರ ಮೂಲಕ ಪೂಜೆ ಸಾಂಗಗೊಳ್ಳುವುದು. ಪೂಜಾರಿಗಳು ತಪ್ಪದೆ ನಿತ್ಯವೂ ಮಾಡುವ ಕಾಯಕವಿದಾಗಿದೆ. ಒಂದು ವೇಳೆ ಆತ ಬೇರೆ ಊರಿಗೆ ಹೋಗಬೇಕಾಗಿದ್ದಲ್ಲಿ ಈ ಕಾಯಕಕ್ಕೆ ಬೇರೊಬ್ಬರನ್ನು ನೇಮಿಸಿ ಹೋಗುವರು. ಹೆಣ್ಣುಮಕ್ಕಳು ಹನುಮಂತ ದೇವರನ್ನು ಪೂಜಿಸುವಂತಿಲ್ಲ. ದೇವಾಲಯದ ಪ್ರಾಂಗಣದಲ್ಲಿ ಬಿದ್ದ ಕಸವನ್ನು ಪೂಜಾರ ಹೆಣ್ಣುಮಕ್ಕಳು, ಮುದುಕರು ಇಲ್ಲವೆ ಮಕ್ಕಳು ಗೂಡಿಸುವುದುಂಟು. ಅವರು ಆಳುಗಳನ್ನು ಕಸಗುಡಿಸಲು ಹಚ್ಚುವುದಿಲ್ಲ. ಕೆಲವೆಡೆ ತಳವಾರರು ದೇವಾಲಯದ ಕಸವನ್ನು ಗುಡಿಸುವುದುಂಟು. ಅವರಿಗೆ ಪೂಜಾರರು ಗುಡಿಗೆ ಬಂದ ನೈವೇದ್ಯದದಲ್ಲಿ ಕೆಳಭಾಗವನ್ನು ಕೊಡುವುದುಂಟು.

ಪೂಜಾರಿಗಳು ಹನುಮಂತ ದೇವರ ಪೂಜೆಯನ್ನು ಮಾಡಿ ಮುಗಿಸಿದ ಅನಂತರ ಒಬ್ಬರು ಖಾಯಂ ಆಗಿ ಗುಡಿಯಲ್ಲಿಯೇ ಕೂಡ್ರಬೇಕಾಗುವುದು. ಭಕ್ತರು ಗುಡಿಗೆ ನೈವೇದ್ಯ ತರುವರು, ಕಾಯಿ – ಕರ್ಪೂರ ತರುವರು, ಹಾಲು-ತುಪ್ಪ ತರುವರು, ಇವೆಲ್ಲವನ್ನು ಪೂಜಾರಿಗಳು ಪಡೆದು ದೇವರಿಗೆ ಸಮರ್ಪಿಸಿ ಗರ್ಭಗುಡಿಯಲ್ಲಿ ಇರಿಸಿಕೊಂಡಿರುವ ಬುಟ್ಟಿಗಳಲ್ಲಿ ನೇವೇದ್ಯವನ್ನು ಇಡುತ್ತ ಹೋಗುವರು. ಬುಟ್ಟಿಗಳು ತುಂಬಿದ ಮೇಲೆ ಅವನ್ನು ತಮ್ಮ ಮನೆಗಳಿಗೆ ಒಯ್ಯುವರು. ತೆಂಗಿನಕಾಯಿ ಹೊಡೆದು ಒಂದು ಹೊಳಿಕೆಯನ್ನು ಭಕ್ತರಿಗೆ ಕೊಟ್ಟು ಇನ್ನೊಂದನ್ನು ಪೂಜಾರಿಗಳು ಪಡೆಯುವರು. ನೈವೇದ್ಯವನ್ನು ದೇವಾಲಯಕ್ಕೆ ಕೆಲವರು ತಂದರೆ, ಇನ್ನು ಕೆಲವರು ವಿಶೇಷವಾಗಿ ಶ್ರೀಮಂತರು ಪೂಜಾರಿಗಳನ್ನು ಕರೆದು ನೈವೇದ್ಯ ಒಯ್ಯಿರಿ ಎನ್ನುವರು. ಆಗ ಪೂಜಾರಿಗಳು ಅವರ ಮನೆಗೆ ಹೋಗಿ ನೈವೇದ್ಯವನ್ನು ತಂದು ದೇವರಿಗೆ ಹಿಡಿದು ತಾಟನ್ನು ಅವರಿಗೆ ಕೊಟ್ಟು ಬರುವುದುಂಟು. ಪೂಜಾರಿಗಳು  ಆರ್ಥಿಕವಾಗಿ ಸಬಲವಾಗಿರದೇ ಇದ್ದುದರಿಂದ ಅವರು ಊರ ಪ್ರಮುಖರನ್ನು ಎದುರು ಹಾಕಿಕೊಳ್ಳಲಾರರು. ಊರ ಪ್ರಮುಖರ ಮರ್ಜಿ ಕಾಯ್ದುಕೊಂಡು ಒಂದು ವಿಧದಲ್ಲಿ ಸೇವಕರಂತೆ,  ಸೇವಾ ಮನೋಭಾವದಿಂದ ನಡೆದುಕೊಳ್ಳುವರು. ಕೆಲವೆಡೆ ಪೂಜಾರಿಗಳ ಹೆಂಡಂದಿರು, ಅಕ್ಕತಂಗಿಯರು ದೇವರ ಪೂಜೆಯಾದ ನಂತರ ಕಂಕುಳಲ್ಲಿ ಬುಟ್ಟಿಯನ್ನು ಇರಿಸಿಕೊಂಡು ಮನೆ ಮನೆಗೆ ಹೋಗಿ ನೈವೇದ್ಯವನ್ನು ಬೇಡಿ ಪಡೆದುಕೊಳ್ಳುವುದುಂಟು. ಊರ ಜನರ, ಮನೆಗೆ ಹೋಗಿ ಬಾಣದ ರೊಟ್ಟಿ, ನೈವೇದ್ಯವನ್ನು ಕೊಡಿರಿ’ ಎಂದು ಬೇಡುವುದುಂಟು. ಈ ಪದ್ದತಿ ಇತ್ತೀಚೆಗೆ ಅಷ್ಟಾಗಿ ಚೆನ್ನಾಗಿ ಕಾಣದಿದ್ದರೂ ಬಹುಕಾಲದಿಂದ ಹಳ್ಳಿಗಾಡಿನಲ್ಲಿ ಇದು ಅನೂಚಾನವಾಗಿ ನಡೆದುಕೊಂಡು ಬಂದಿದೆ. ಪೂಜಾರರ ಆರ್ಥಿಕ ಸ್ಥಿತಿಗತಿ ಸುಧಾರಣೆ ಗೊಂಡಾಗ ಇದು ಕ್ರಮೇಣ ಕಡಿಮೆಯಾಗಬಹುದು. ಇಂದಿನ ಹಳ್ಳಿಗಾಡಿನಲ್ಲಿ ವಾಸಿಸುತ್ತಿರುವ ಪೂಜಾರಿಗಳು ತಾವು ಮಾಡುವ ಈ ವೃತ್ತಿ ಗೌರವಪೂರ್ವಕವಾದುದೆಂದೇ ಭಾವಿಸಿದ್ದಾರೆಯೇ ವಿನಾ ಕೀಳೆಂದು ತಿಳಿದಿಲ್ಲ.

ಬಹುತೇಕ ಹಳ್ಳಿಯ ಜನರೂ ಈ ವೃತ್ತಿಯನ್ನು ಕೀಳೆಂದು ತಿಳಿಯದೆ ಭಕ್ತಿಯಿಂದ ನೈವೇದ್ಯವನ್ನು ಬೇಡಲು ಮನೆ ಬಾಗಿಲಿಗೆ ಬಂದ ಹೂಗಾರ ಹೆಣ್ಣುಮಕ್ಕಳಿಗೆ ಕೊಡುವುದುಂಟು. ಇದೇ ರೀತಿ ಈ ಹೆಣ್ಣುಮಕ್ಕಳು ಪತ್ರಿ ಕೊಡಲು ಹೋದಾಗ ಜೋಳ, ಕಾಳು ಕೊಡುವುದುಂಟು. ಸುಗ್ಗಿಯ ಕಾಲದಲ್ಲಿ ಹೂಗಾರರು ಕಣಗಳಿಗೇ ಹೋಗಿ ಗೋಪಾಳ ಬುಟ್ಟಿ ಇಟ್ಟು ಬರುವರು. ಒಕ್ಕಲಿಗರು ಇವರು ಇಟ್ಟ ಬುಟ್ಟಿಗಳಲ್ಲಿ ಭಕ್ತಿಯಿಂದ ಧಾನ್ಯವನ್ನು ಕೊಡುವರು. ಹೂಗಾರರು ಒಕ್ಕಲಿಗರು ಬಿತ್ತನೆ ನಡೆಸಿದಾಗ ಹೊಲಗಳಿಗೆ ಹೋಗಿ ಬಿತ್ತುವ ಸಡ್ಡಿಗೆ ಮಾಲೆಯನ್ನು ಹಾಕುವರು. ಅವರು ಹೂಗಾರರಿಗೆ ಬಿತ್ತುವ ಬೀಜದಲ್ಲಿಯೇ ಸ್ವಲ್ಪ ಭಾಗವನ್ನು ಕೊಟ್ಟು ಕಳಿಸುವರು. ಕಬ್ಬಿನಗಾಣ ನಡೆದಾಗ ಹೂಗಾರರು ಗಾಣದ ಮನೆಗೇ ಹೋಗುವರು.  ಅಲ್ಲಿ ಇವರಿಗಾಗಿ ಸಿದ್ಧಪಡಿಸಿದ ಬೆಲ್ಲದ ಉಂಡೆಗಳನ್ನು ಕೊಟ್ಟು ಕಳಿಸುವರು. ಹನುಮಂತ ದೇವರ ಓಕಳಿ, ಕಾರ್ತೀಕ ಜಾತ್ರೆ, ಪಲ್ಲಕ್ಕಿ ಉತ್ಸವ ನಡೆದಾಗ ಹೂಗಾರರಿಗೆ ವಿಶೇಷವಾಗಿ ಲಾಭವಾಗುವುದುಂಟು. ಅದಕ್ಕೇ ಕೆಲವು ಹನುಮಂತ ದೇವರ ಪೂಜಾರಿಕೆಯನ್ನು ಹಣಕ್ಕೆ ಮಾರಿಕೊಳ್ಳುವುದೂ ಉಂಟು. ಹನುಮಂತ ದೇವರು ಹಳ್ಳಿಗಾಡಿನಲ್ಲಿ ಪ್ರಮುಖ ಗ್ರಾಮದೇವರಾಗಿದ್ದಾನೆ.

ಈ ದೇವರಿಗೆ ಸಾಮಾನ್ಯವಾಗಿ ಎಲ್ಲ ಜಾತಿ ಜನರೂ ಭಕ್ತಿಯಿಂದ ನಮಿಸುವರು. ನಿತ್ಯ ಸ್ನಾನ ಮುಗಿಸಿ  ಈ ದೇವರ  ಗುಡಿಗೆ ಬಂದು ಹೋದಾಗಲೆ ಹಳ್ಳಿಗರಿಗೆ ತೃಪ್ತಿ. ನೆಮ್ಮದಿ. ಈ ದೇವರ ಪ್ರಮುಖ ಉತ್ಸವವೆಂದರೆ ಓಕಳಿ. ಓಕಳಿ ಹನುಮಂತ ದೇವರ ಗುಡಿಯೆದುರು ನಡೆಯುತ್ತದೆ. ಓಕಳಿಗಳಲ್ಲಿ ಎರಡು ಪ್ರಕಾರಗಳಿವೆ. ಒಂದು ಹಾಲೋಕಳಿ, ಇನ್ನೊಂದು ನೀರೋಕಳಿ, ನೀರೋಕಳಿ ಆಡುವ ವಿಧಾನ ಹೀಗಿದೆ: ಹನುಮಂತದೇವರ ಗುಡಿಯ ಮುಂದೆ ಒಂದು ದೊಡ್ಡ ಹೊಂಡವಿರುತ್ತದೆ. ಈ ಹೊಂಡದಲ್ಲಿ ಓಕಳಿಯ ಮುನ್ನಾದಿನ ನೀರು ತುಂಬಿಸುವರು, ನೀರನ್ನು ಒಬ್ಬನೇ ಕೊಡ ಹೊತ್ತು ಶರತ್ತಿನ ಮೇಲೆ ತುಂಬಿಸುವನು. ಆತನಿಗೆ ಬಹುಮಾನ ನೀಡುವರು. ನೀರು ತುಂಬಿದ ನಂತರ ಓಕಳಿಯ ದಿನ ಗುಡಿಯನ್ನು ಬಾಳೆಯ ದಿಂಡುಗಳಿಂದ ಕಬ್ಬುಗಳಿಂದ ಅಲಂಕರಿಸುವರು. ಪೂಜಾರಿ ಅತ್ಯಂತ ವೈಭವ ಹಾಗೂ ವಿಜೃಂಭಣೆಯಿಂದ ಹನುಮಂತ ದೇವರ ಪೂಜೆ ಸಲ್ಲಿಸಿ, ದೇವರಿಗೆ ಭಕ್ತರು ಸಲ್ಲಿಸಿದ ಬಂಗಾರದ ಒಡವೆಗಳನ್ನು ಇಡಿಸುವನು. ಆ ದಿನ ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ಓಕಳಿ ಪಾತ್ರೆ – ಪಡಗಗಳಲ್ಲಿ ತುಂಬಿ ಅದನ್ನು ಡೊಂಬ ಹೆಂಗಸರಿಗೆ ಚಿಮುಕಿಸುವರು. ಡೊಂಬ ಹೆಂಗಸರ ವೃತ್ತಿ ಓಕಳಿ ಆಡುವುದೇ ಆಗಿದೆ. ಊರ ಯುವಕರು ಅತ್ಯಂತ ಉತ್ಸಾಹದಿಂದ ಆ ಹೆಣ್ಣುಮಕ್ಕಳಿಗೆ ನೀರಿನಿಂದ ಹೊಡೆಯುವರು. ಯುವಕರು ಆ ಹೊಡೆತಗಳನ್ನು ತಪ್ಪಿಸಿಕೊಳ್ಳಲೆತ್ನಿಸುವರು. ಹೊಂಡದಲ್ಲಿನ ನೀರು ಮುಗಿಯುವವರೆಗೂ ಓಕಳಿ ನಡೆಯುವುದು. ಊರ ಜನರೆಲ್ಲ ಉತ್ಸಾಹದಿಂದ ಓಕಳಿಯನ್ನು ನೋಡಿ ನಕ್ಕು ನಲಿಯುವರು. ಈ ಓಕಳಿ ಸಂಪ್ರದಾಯ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿದೆ. ಇನ್ನು ಆ ಕಟ್ಟಿಗೆಗೆ ಹುಣಸೆ ಜರಿ, ಹಾಲು ತುಪ್ಪ ಸುರಿಯುವರು. ಆ ಕಟ್ಟಿಗೆಯನ್ನು ಊರ ಯುವಕರು ಏರಲೆತ್ನಿಸುವರು. ಅವರು ಏರಿದಂತೆಲ್ಲ ಹಾಲು ಸುರಿಯುತ್ತ ಹೋಗುವರು. ಕಷ್ಟಪಟ್ಟು ಯುವಕರು ಒಬ್ಬರ ಮೇಲೊಬ್ಬರು ಏರಲಿಕ್ಕೆ ಪೈಪೋಟಿ ನಡೆಸುವರು. ಕೊನೆಗೆ ಕೆಲವರು ಕಷ್ಟಪಟ್ಟು ಏರಿ ವಿಜಯಿಗಳಾಗುವರು. ಊರ ಜನರೆಲ್ಲ ನೋಡಿ ನಕ್ಕು ನಲಿಯುವರು. ಯುವಕರ ಶಕ್ತಿ ಪ್ರದರ್ಶನ ನಡೆಯುವುದು. ಇಲ್ಲಿಗೆ ಓಕಳಿ ಮುಗಿಯುವುದು.

’ಕಾರ್ತೀಕ’ ಸಂದರ್ಭದಲ್ಲಿ ಹನುಮಂತ ದೇವರ ದೇವಾಲಯದಲ್ಲಿ ದೀಪೋತ್ಸವ ನಡೆಯುವುದು. ಹನುಮಂತ ದೇವರ ಮಹಾದ್ವಾರಕ್ಕೆ ಹಾಗೂ ಗುಡಿಯ ಒಳಾಂಗಣದಲ್ಲಿ ಮಣ್ಣಿನ ಪಣತಿಗಳನ್ನಿಡುವ ವ್ಯವಸ್ಥೆಯನ್ನು ಕಬ್ಬಿಣದ ಸರಪಳಿಗಳಿಂದ ಶಾಶ್ವತವಾಗಿ ಮಾಡಿರುತ್ತಾರೆ. ಕುಂಬಾರ ಮನೆಯಿಂದ ತಂದ ಪ್ರಣತಿಗಳಲ್ಲಿ ಎಣ್ಣೆ ಹಾಕಿ ಬತ್ತಿ ಇರಿಸಿ ದೀಪ ಬೆಳಗಿಸುತ್ತಾರೆ. ಇದು ಅಜ್ಞಾನ ರೂಪಿ ಕತ್ತಲೆಯನ್ನು ಓಡಿಸುವ ಸಂಕೇತವಾಗಿದೆ. ಎಲ್ಲರ ಬಾಳಿಗೆ ಬೆಳಕು ನೀಡುವ ಹಬ್ಬ ಕಾರ್ತೀಕವಾಗಿದೆ. ಭಕ್ತಾದಿಗಳು ದೇವರಿಗೆ ಎಣ್ಣೆಯನ್ನು ತರುವರು. ಆ ಎಣ್ಣೆಯಿಂದ ನಿತ್ಯವೂ ದೀಪಗಳನ್ನು ಉರಿಸುತ್ತ ಪೂಜಾರರು ಎಣ್ಣೆಯಲ್ಲಿ ಕೆಲಭಾಗವನ್ನು ಉಳಿಸಿಕೊಂಡು ಅಂಗಡಿಗಳಿಗೆ ಮಾರಿಕೊಳ್ಳುವರು. ಬಾಳೆ ಗಿಡಗಳನ್ನು ತೆಂಗಿನಕಾಯಿಗಳನ್ನು, ಮೆಕ್ಕೆತೆನೆಗಳನ್ನು, ಹಣ್ಣುಗಳನ್ನು ಭಕ್ತರು ದೇವರಿಗೆ ಭಕ್ತಿಯಿಂದ ನೀಡಿದಾಗ ಅವನ್ನೆಲ್ಲ ಪೂಜಾರರು ವ್ಯಾಪಾರಿಗಳಿಗೆ ಮಾರಿಕೊಳ್ಳುವರು. ಇದು ಪೂಜಾರಿಗಳ ಹಕ್ಕು.  ಅವರು ಪಡೆಯುತ್ತಿರುವ ಶ್ರಮಕ್ಕೆ ಪ್ರತಿಫಲವಾಗಿದೆ. ಅವರು ನಿರಂತರವಾಗಿ ದೇವರ ಸೇವೆಯಲ್ಲಿ ಪ್ರಾಮಾಣಿಕತೆಯಿಂದ ತಮ್ಮನ್ನು ತೊಡಗಿಸಿಕೊಳ್ಳುವರು. ಅವರ ಸೇವಾ ಮನೋಭಾವ ಅಸಾದೃಶವಾದುದು. ಸದಾ ಗುಡಿಯಲ್ಲಿಯೇ ಇದ್ದುಕೊಂಡು ದೇವರ ಸೇವೆಯನ್ನು ಮಾಡುವರು. ಇದರಿಂದಾಗಿ ಬಹುತೇಕ ಪೂಜಾರರು ಬೇರೆ ಬೇರೆ ಕೃಷಿ, ಇನ್ನಿತರ ಕಾಯಕಗಳಲ್ಲಿ ತೊಡಗಿಕೊಳ್ಳಲು ಮನಸ್ಸು ಮಾಡುವರು, ವಿದ್ಯಾಭ್ಯಾಸವನ್ನು ಮಾಡಲು ಅವರು ಮುಂದೆ ಬರಲಾರರು. ಏಕೆಂದರೆ ಅವರಿಗೆ ದೇವಾಲಯದಲ್ಲಿ ಕುಂತಲ್ಲಿಯೇ ಬಿಸಿ ಬಾಣ ನೈವೇಧ್ಯ ಸಿಗುವುದು, ತಿನ್ನಲಿಕ್ಕೆ ಹಸಿ ಕೊಬ್ಬರಿ ಸಿಗುವುದು. ಕುಡಿಯಲು ಹಾಲು ಸಿಗುವುದು. ಇನ್ನೇನು ಬೇಕು? ಅವರು ಒಂದು ವರ್ಷ ಪೂಜೆ ಮಾಡಿ ಹೊರಬಂದರೆಂದರೆ ದಪ್ಪಗಾಗಿ ಪೈಲ್ವಾನರಂತೆ ಆಗುವರು ಎಂದು ಕೆಲವರು ಹಾಸ್ಯ ಮಾಡುವುದುಂಟು. ಇದೆಲ್ಲ ಸರಿ, ಆದರೆ ಇದರಿಂದ ಅವರ ಉಪಜೀವನ ಸಾಗಬಹುದೇ ಹೊರತು ಅವರಲ್ಲಿ ಬೌದ್ಧಿಕ ವಿಕಾಸವಾಗದು. ಅಂಥ ಸಂಪತ್ತನ್ನೂ ಅವರು ಗಳಿಸರು.