೧. ಹೂಗಾರರು (ಜೀರರು) ಒಂದು ಅವಲೋಕನ

ಹೂಗಾರ, ಪೂಜಾರ, ಜೀರ, ಗುರವ, ಪುಲಾರಿ, ಪೋಲಮಾಲಿ, ನಟುವ, ತಂಬುಳಿ, ಮದ್ದಳೆಕಾರ, ಸರವಂದಿಗ, ಹೂಬಿನ, ಮಾಲೆಗಾರ, ಮಾಲಿ, ಮದ್ಲಿ, ಪುಷ್ಪದತ್ತ. ವೀಣೆಕಾರ ಮುಂತಾದ ಹೆಸರುಗಳಿಂದ ಕರೆಸಿಕೊಳ್ಳುತ್ತಿರುವ ಜನಾಂಗದವರು ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ವಾಸವಾಗಿದ್ದಾರೆ. ಕ್ವಚಿತ್ತಾಗಿ ಆಂಧ್ರಪ್ರದೇಶ ಹಾಗೂ ಮಹಾರಾಷ್ಟದಲ್ಲೂ ಈ ಜನಾಂಗ ಇರುವುದನ್ನು ಗುರುತಿಸುವೆವು. ಬಿಜಾಪೂರ, ಬೆಳಗಾವಿ, ಗುಲಬರ್ಗಾ, ಬೀದರ, ಬಳ್ಳಾರಿ, ಕೊಪ್ಪಳ, ದಾವಣಗೆರೆ, ರಾಯಚೂರು, ಧಾರವಾಡ, ಗದಗ, ಬಾಗಲಕೋಟ, ಹಾವೇರಿ ಜಿಲ್ಲೆಗಳಲ್ಲಿ ಈ ಜನಾಂಗದವರು ಹೆಚ್ಚಾಗಿದ್ದಾರೆ. ಈ ಜನಾಂಗದವರು ಅಲ್ಪ ಸಂಖ್ಯಾತರಾಗಿದ್ದು ಪ್ರತಿ ಊರಿಗೆ ಇವರ ಮನೆಗಳು ನಾಲ್ಕೋ ಐದು ಇರುವವು. ಇವರು ಹನುಮಂತ, ಈಶ್ವರಲಿಂಗ, ರಾಮಲಿಂಗ ದೇವರುಗಳನ್ನು ಪೂಜೆ ಮಾಡುವರು. ಪೂಜೆ ಮಾಡಿದ ಫಲವಾಗಿ ನೈವೇದ್ಯವನ್ನು ಭಕ್ತರಿಂದ ಪಡೆಯುವರು. ಮದುವೆ, ಮರಣ ಮುಂತಾದ ಪ್ರಸಂಗಗಳಲ್ಲಿ ಈ ಜನಾಂಗದವರು ಬಾಸಿಂಗ, ದಂಡೆ, ಹೂಹಾರ, ತುರಾಯಿಗಳನ್ನು ಕೊಡುವುದುಂಟು. ಈ ಸಮಾಜದ ಜನ ಆರ್ಥಿಕವಾಗಿ ಹಿಂದುಳಿದಿದ್ದು. ಸಾಮಾಜಿಕವಾಗಿಯೂ ಇವರಿಗೆ ಅಂಥ ಸ್ಥಾನಮಾನಗಳೇನೂ ಸಮಾಜದಲ್ಲಿ ಈಗ ಲಭ್ಯವಾಗದೇ ಇರುವುದನ್ನು ಕಾಣುವೆವು. ಮೂಲತಃ  ಈ ಸಮಾಜದವರು ಪ್ರಾಮಾಣಿಕರು. ಸೇವಾ ಮನೋಭಾವದವರು. ಊರ ಜನತೆಯ ಮರ್ಜಿಯನ್ನು ಕಾಯ್ದುಕೊಂಡು ಆಯಗಾರಿಕೆ ವೃತ್ತಿಯನ್ನು ನಿಷ್ಠೆಯಿಂದ ಮಾಡಿಕೊಂಡು ಬದುಕುತ್ತ ಬಂದುದುಂಟು. ಈ ಸಮಾಜದವರು ಪ್ರತಿಭಾನ್ವಿತರು, ಕಲಾಕಾರರು. ಆದರೆ ಇವರ ಪ್ರತಿಭೆಯ ಪ್ರಕಾಶನಕ್ಕೆ ಜನತೆಯ ಪ್ರೋತ್ಸಾಹದ ಅಗತ್ಯವಿದೆ. ಚರ್ಮವಾದ್ಯವಾದ ಸಮಾಳ, ಡೋಲು, ದಮ್ಮಡಿ, ತಬಲಾ ಮುಂತಾದವುಗಳನ್ನು ನುಡಿಸುವುದರಲ್ಲಿ ಇವರು ನಿಸ್ಸೀಮರು. ಕರಡಿ ಮಜಲು ಮೇಳದಲ್ಲಿ ಹೂಗಾರ ಜನಾಂಗದವರೇ ಸಂಬಾಳ ಬಾರಿಸುವುದುಂಟು. ಅಲ್ಪ ಸಂಖ್ಯಾತರು ಆರ್ಥಿಕವಾಗಿ  ಹಿಂದುಳಿದವರೂ ಆದ ಈ ಸಮಾಜದವರು ಇದುವರೆಗೆ ಕರ್ನಾಟಕದಲ್ಲಿ ಯಾರೂ ವಿಧಾನಸಭಾ ಸದಸ್ಯರಾಗಿ ಆಯ್ಕೆಗೊಂಡಿಲ್ಲ. ಅಂಥ ರಾಜಕೀಯ ಸ್ಥಾನಮಾನಗಳ ಯಾವುವೂ ಇವರಿಗೆ ಸ್ವಾತಂತ್ರ‍್ಯಾ ನಂತರ ಸಿಕ್ಕಿಲ್ಲ. ಆದರೆ ಇತ್ತೀಚೆಗೆ ಈ ಸಮಾಜದಲ್ಲೂ ಕೆಲವರು ಉನ್ನತ ವ್ಯಾಸಂಗ ಮಾಡಿ ಉನ್ನತ ಹುದ್ದೆಗಳಲ್ಲಿ ಇರುವರು. ಇನ್ನೂ ಈ ಜನಾಂಗದಲ್ಲಿ ಅಂಥ ಜಾಗೃತಿ ಮೂಡಿಲ್ಲ. ಹೆಚ್ಚಾಗಿ ಇವರು ಹಳ್ಳಿಗಾಡಿನಲ್ಲೇ ವಾಸಿಸುತ್ತಿದ್ದುದರಿಂದ, ಬಡವರಾಗಿದ್ದುದರಿಂದ ಉನ್ನತ ಶಿಕ್ಷಣವನ್ನು ಪಡೆದುಕೊಂಡು ಮುಂದೆ ಬರುವ ಸೌಭಾಗ್ಯ ಈ ಜನಾಂಗದ ಬಹಳ ಜನರಿಗೆ ಸಿಕ್ಕಿಲ್ಲ. ಇತ್ತೀಚೆಗೆ ಕೆಲವರು, ಅನುಕೂಲಸ್ಥರು ಓದಿ ಮುಂದೆ ಬಂದಿದ್ದಾರೆ. ಶೈಕ್ಷಣಿಕ ಪ್ರಗತಿಯನ್ನು ಸಾಧಿಸಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ಕ್ರಿಯಾತ್ಮಕವಾಗಿ ತೊಡಗಿಸಿಕೊಂಡುದನ್ನು ಗುರುತಿಸಬಹುದು.

ಹೂಗಾರರು :

ಹೂಗಾರರು ಉತ್ತರ ಕರ್ನಾಟಕ ಹಳ್ಳಿಗಳಲ್ಲಿ ಜನತೆಗೆ ದೇವರ ಪೂಜೆಗಾಗಿ ಹೂವು ಪತ್ರಿಗಳನ್ನು ಅವರ ಮನೆಗೆ ಒಯ್ದು ಕೊಡುವರು. ಈ ಕಾಯಕದ ಜೊತೆಗೆ ಇವರು ಹನುಮಂತ ದೇವರನ್ನು ಪೂಜಿಸುವರು. ಇವರು ಹೂವಿನಹಾರ, ದಂಡೆ, ಬಾಸಿಂಗಗಳನ್ನು ಕೊಟ್ಟು ಇದಕ್ಕೆ ಪ್ರತಿಯಾಗಿ ’ಬಾಬು’ (ಹಣ) ಪಡೆಯುವರು. ಊರ ಆಯಗಾರರಲ್ಲಿ ಇವರೂ ಒಬ್ಬರು. ಊರಿನಲ್ಲಿ ಯಾರಾದರೂ ಸತ್ತರೆಂದರೆ ಅವರ ಶವಕ್ಕೆ ಹೂವಿನಹಾರ, ತುರಾಯಿಗಳನ್ನು ಕಟ್ಟಿಕೊಡುವುದೂ ಇವರ ಕಾಯಕವೇ ಆಗಿದೆ. ಶವ ಸಂಸ್ಕಾರದ ಸಮಯದಲ್ಲಿ ಸ್ಮಶಾನದಲ್ಲಿ ನೆರೆದ ಜನತೆಗೆ ಶವದ ಮೇಲೆ ಹಾಕಲು ಹೂವು ಪತ್ರಿಗಳನ್ನು ಕೊಡುವವರೂ ಇವರೇ. ಸುಗ್ಗಿಯ ಕಾಲದಲ್ಲಿ ರೈತರು ಇವರಿಗೆ ಆಯದ ರೂಪದಲ್ಲಿ ಕಾಳು-ಕಡ್ಡಿಯನ್ನು ಭಕ್ತಿ-ಶ್ರದ್ಧೆಯಿಂದ ಕೊಡುವುದುಂಟು. ರಾಶಿ ನಡೆದ ಸ್ಥಳಗಳಿಗೆ, ಕಣಗಳಿಗೆ ಹೂಗಾರರು ಹೋಗಿ ಹೂ ಪತ್ರಿಯನ್ನು ಕೊಡುವರು. ರೈತರು ಇವರಿಂದ ಹೂ ಪತ್ರಿ ಪಡೆದು ರಾಶಿಗೆ ಏರಿಸುವರು. ಹೀಗೆ ಏರಿಸುವುದರಿಂದ ಅವರ ರಾಶಿ ಹುಲುಸಾಗುವುದೆಂದು ನಂಬುವರು. ಹಳ್ಳಿಯ ಜನತೆಯ ಜನನದಿಂದ ಮರಣದವರೆಗಿನ ಎಲ್ಲ ಧಾರ್ಮಿಕ ಸಂಸ್ಕಾರಗಳಲ್ಲೂ ಹೂಗಾರರು ಸಹಾಯಕರಾಗಿ, ಸಾಂಸ್ಕೃತಿಕ ಕಾರ್ಯಕರ್ತರಾಗಿ ಸೇವೆ ಮಾಡುವರು. ಸೇವಾ ಮನೋಭಾವನೆ ಹಾಗೂ ಪ್ರಮಾಣಿಕತೆಗೆ ಹೆಸರುವಾಸಿಯಾದ ಇವರು ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಇರುವರು. ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲೂ ಇವರು ಇರುವುದನ್ನು ಕಾಣುವೆವು.

ಪೂಜಾರರು :

ಹೂಗಾರರು ಹೂಹಾರ ಪತ್ರಿಯನ್ನು ಊರ ಜನತೆಗೆ ಒಯ್ದು ಕೊಡುವ ಕಾಯಕ ಮಾಡುವುದರೊಂದಿಗೆ ಹನುಮಂತ ದೇವರ ಪೂಜೆಯನ್ನು ಮಾಡುವರು. ಪೂಜೆಯನ್ನೂ ಮಾಡುವುದರಿಂದ ಇವರಿಗೆ ಪೂಜಾರರೆಂದೂ ಕರೆಯುವರು. ಹನುಮಂತ ದೇವರ ಪೂಜೆಯನ್ನು ಕೆಲವೆಡೆ ಬ್ರಾಹ್ಮಣರು, ಉಪ್ಪಾರರು, ಕುರುಬರು, ಕಬ್ಬಲಿಗರು ಹಾಗೂ ಇನ್ನಿತರರೂ ಮಾಡುವುದರಿಂದ ಇವರೆಲ್ಲರಿಗೂ ಹನುಮಂತ ದೇವರ ಪೂಜಾರರೆನ್ನುವರು. ಆದರೆ ಹೂವು ಪತ್ರಿ ಹಂಚುವ ಕಾಯಕ ಮಾಡುವುದರೊಂದಿಗೆ ಹನುಮಂತ ದೇವರ ಪೂಜೆಯನ್ನು ಮಾಡುವ ಪೂಜಾರರು ಇನ್ನಿತರ ಪೂಜಾರರಿಗಿಂತ ಭಿನ್ನರಾಗಿದ್ದಾರೆ. ಇವರು ಭಕ್ತರು ದೇವರಿಗೆ ಸಲ್ಲಿಸಿದ ಕಾಯಿ – ಕರ್ಪೂರ, ನೈವೇದ್ಯ, ದಕ್ಷಿಣೆ, ಕಾಳು-ಕಡ್ಡಿ ಮುಂತಾದುವನ್ನು ಸ್ವೀಕರಿಸಿ ಉಪಜೀವನ ಸಾಗಿಸುವರು. ಸದಾ ಹನುಮಂತ ದೇವರ ಗುಡಿಯಲ್ಲಿದ್ದುಕೊಂಡು, ನಂದಾದೀಪ ಬೆಳಗಿಸುತ್ತ ದೇವರ ಸೇವೆಯನ್ನು ಭಕ್ತಿ – ನಿಷ್ಠೆಯಿಂದ ಮಾಡುವರು. ಇವರು ಹೆಚ್ಚಾಗಿ ಬೆಳಗಾವಿ, ಬಾಗಲಕೋಟೆ, ಬಿಜಾಪೂರ ಜಿಲ್ಲೆಗಳಲ್ಲಿ ಇರುವುದನ್ನು ಗುರುತಿಸುವೆವು.

ಜೀರರು : ಜೀರರೂ ಹನುಮಂತ ದೇವರ ಪೂಜಾರಿಗಳೇ ಆಗಿದ್ದಾರೆ. ಹನುಮಂತ ದೇವರಿಗೆ ಇವರು ವಿಧವಿಧದ ಚರ್ಮವಾದ್ಯಗಳನ್ನು ನುಡಿಸಿ ನಾದದ ಎಡೆಯನ್ನು ಅರ್ಪಿಸುವುದರ ಮೂಲಕ ಭಕ್ತಿ ಸಲ್ಲಿಸುವರು. ’ಜೀರ’ ಎಂಬ ಶಬ್ದ ’ನಾದ’ವನ್ನು ಇಲ್ಲವೆ ’ಮಂಗಲ’ ಭಾವವನ್ನು ಪ್ರತಿನಿಧಿಸುತ್ತದೆ. ಜೀರರು ಸಂಬಾಳ, ಮದ್ದಳೆ, ದಮ್ಮಡಿ, ಡೋಲು ಹಾಗೂ ತಬಲಾ ಮುಂತಾದ ಚರ್ಮ ವಾದ್ಯಗಳನ್ನು ನುಡಿಸುವುದರಲ್ಲಿ ನಿಸ್ಸೀಮರು. ಕಲಾಕಾರರು ಇವರು ಹೆಚ್ಚಾಗಿ ಕೊಪ್ಪಳ, ರಾಯಚೂರು, ಬಿಜಾಪೂರ, ಬಳ್ಳಾರಿ ಜಿಲ್ಲೆಗಳಲ್ಲಿ ಹಾಗೂ ಆಂಧ್ರಪ್ರದೇಶದಲ್ಲಿ ಇರುವರು.

ನಟುವರು : ’ನಟುವ’ ಎಂದರೆ ನಾಟಕ ಇಲ್ಲವೆ ಬಯಲಾಟವನ್ನು ಕಲಿಸುವವ, ಮದ್ದಳೆಕಾರ ನಟುವರೂ ಜೀರರಂತೆ ಮದ್ದಳೆಯನ್ನು ಬಾರಿಸುವರು. ಚರ್ಮವಾದ್ಯಗಳಲ್ಲಿ ಪ್ರಮುಖ ವಾದ್ಯವಾದ ಈ ಮದ್ದಳೆಯನ್ನು ಮದುವೆ, ಮೆರವಣಿಗೆ ಮುಂತಾದ ಮಂಗಳಮಯ ಸಂದರ್ಭಗಳಲ್ಲಿ ಬಾರಿಸುವುದಿಲ್ಲ. ಈ ವಾದ್ಯವನ್ನು ವಿಶೇಷವಾಗಿ ಬಯಲಾಟ ಸಂದರ್ಭಗಳಲ್ಲಿ, ದೇವಾಲಯಗಳಲ್ಲಿ ನಡೆಯುವ ನರ್ತನ ಸಂದರ್ಭಗಳಲ್ಲಿ ಬಾರಿಸುವುದುಂಟು. ಪ್ರಾಚೀನ ಕಾಲದಲ್ಲಿ ’ನಟುವ’ರು ಇದ್ದ ಉಲ್ಲೇಖ ಕನ್ನಡ ಕಾವ್ಯ ಪುರಾಣಗಳಲ್ಲಿ ಬರುವುದು. ಶಿವಶರಣರಾದ ಅಲ್ಲಮ ಪ್ರಭುದೇವರು ’ನಟುವ’ ಜಾತಿಯಲ್ಲಿ ಜನಿಸಿರುವರು. ನಟುವರೂ ಜೀರರು, ಹೂಗಾರರು ಆಗಿರುವರು.

ಗುರವರು :

’ಗುರವ’ ಪದ ಗೌರವ ಸೂಚಕವಾದುದಾಗಿದೆ. ಇತ್ತೀಚೆಗೆ ಗುರುವರಿಗೆ ಗೊರವರು ಗೊರ‍್ರು ಎಂದೆಲ್ಲ ಕರೆಯುವುದುಂಟು. ಹನುಮಂತ ದೇವರ ಪೂಜಾರಿಗಳಾದ ಇವರು ಹಿಂದೆ ಸಮಾಜದಲ್ಲಿ ಉನ್ನತವಾದ ಸ್ಥಾನಮಾನವನ್ನು ಗೌರವವನ್ನು ಹೊಂದಿದ್ದಾದಾಗಿ ತಿಳಿದು ಬರುವುದು. ಹಿಂದೆ ಇವರನ್ನು ಶೈವ ಬ್ರಾಹ್ಮಣರೆಂದೇ ಕರೆಯುತ್ತಿದ್ದರು. ಬ್ರಾಹ್ಮಣರಿಗೂ ವೀರ ಶೈವರಿಗೂ ಮಧ್ಯೆ ಬರುವ ಇವರು ವಿಶೇಷವಾಗಿ ಬಾಗಲಕೋಟೆ, ಬಿಜಾಪೂರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಇರುವರು. ಕಲಾಕಾರರೂ ಆದ ಇವರು ಮದುವೆ ಹಾಗೂ ಇನ್ನಿತರ ಸಂದರ್ಭಗಳಲ್ಲಿ ’ಸಂಬಾಳ’ ವೆಂಬ ಚರ್ಮವಾದ್ಯವನ್ನು ನುಡಿಸುವರು.

 ತಂಬೂಳಿಯವರು :

’ತಂಬಳೆ’, ’ತಮ್ಮಡಿ’ ಎನ್ನುವ ಪದಗಳು ಚರ್ಮವಾದ್ಯವನ್ನು ಸೂಚಿಸುವಂಥವಾಗಿವೆ. ತಮ್ಮಡಿ ಎನ್ನುವುದು ಒಂದು ಬಗೆಯ ಚರ್ಮವಾದ್ಯ. ಈ ವಾದ್ಯವನ್ನು ಬಾರಿಸುವವರೇ ತಂಬೂಳಿಯವರು. ಹೂಗಾರರಂತೆ ಇವರೂ ಹೂವಿನಹಾರ, ದಂಡೆ ತುರಾಯಿಗಳನ್ನು ಕಟ್ಟಿ ಊರ ಜನರಿಗೆ ಕೊಟ್ಟು ಅವರಿಂದ ಪ್ರತಿಯಾಗಿ ಹಣ ’ಬಾಬು’ ಪಡೆದುಕೊಂಡು ಬದುಕು ಸಾಗಿಸುವರು. ಇವರು ಹೆಚ್ಚಾಗಿ ಬಾಗಲಕೋಟೆ ಜಿಲ್ಲೆಯ ಮುಧೋಳ, ಜಮಖಂಡಿ, ಬಿಜಾಪೂರ ಜಿಲ್ಲೆಯ ಮುದ್ದೇಬಿಹಾಳ, ಬಸವನಬಾಗೇವಾಡಿಗಳಲ್ಲಿ ಹಾಗೂ ಆಂಧ್ರಪ್ರದೇಶದಲ್ಲಿ ಇರುವರು.

ಪುಲಾರಿಯವರು :

’ಪುಲಾರಿ, ’ಪೂಲ್ ಮಾಲಿ’, ’ಮಾಲಿ’ ’ಮಾಲೆಗಾರ’ ಮುಂತಾದ ಹೆಸರಿನಿಂದ ಕರೆಸಿಕೊಳ್ಳುವವರೆಲ್ಲರೂ ಹೂವಿನಹಾರ ಮಾಡಿ ಜನತೆಗೆ ಕೊಡುವ ಕಾಯಕವನ್ನು ಮಾಡುವರು. ’ಪೂಲ್’ ಎಂದರೆ ಹೂವು. ’ಮಾಲಿ ಎಂದರೆ ತೋಟಿಗ. ಹೂವಿನ ತೋಟವನ್ನು ಬೆಳೆಸಿ ಹೂವನ್ನು ತಿರಿದು ತಂದು ಮಾಲೆ ಮಾಡಿ ಕೊಡುವವರೇ ಪೂಲ್ ಮಾಲಿಗಳು. ಪುಲಾರಿಯವರು ಬಿಡಿ ಹೂವುಗಳಿಂದ ಮಾಡಿದ ಸರಗಳನ್ನು ಸಮಾರಂಭ ಹಾಗೂ ಉತ್ಸವಗಳಲ್ಲಿ ದೇವರಿಗೆ ಸಮರ್ಪಿಸುವವರು ಮತ್ತು ಊರಿನ ಜನರಿಗೆ ಅಂಗಡಿಗಳಿಗೆ ಹೂವಿನ ಹಾರಗಳನ್ನು ಕೊಟ್ಟು ಪ್ರತಿಯಾಗಿ ಅವರಿಂದ ಹಣ ಪಡೆದುಕೊಂಡು ಜೀವನ ಸಾಗಿಸುವರು. ಇವರೆಲ್ಲರೂ ಹೂವಿನ ಹಾರಗಳನ್ನು ಕಟ್ಟಿ ಕೊಡುವ ಉದ್ಯೋಗ ಮಾಡುವವರೇ ಆಗಿದ್ದಾರೆ. ಇವರು ವಿಶೇಷವಾಗಿ ಬಳ್ಳಾರಿ, ಕೊಪ್ಪಳ, ದಾವಣಗೆರೆ, ಬೀದರ ಹಾಗೂ ಗುಲಬರ್ಗಾ ಜಿಲ್ಲೆಗಳಲ್ಲಿ ವಾಸವಾಗಿರುವುದನ್ನು ಕಾಣುವೆವು.

ಪುಷ್ಪದತ್ತರು :

ಹೂಗಾರರು ತಮ್ಮ ಮೂಲ ಪುರುಷ ’ಪುಷ್ಪದತ್ತ’ ಎಂದು ನಂಬಿರುವರು. ’ಪುಷ್ಪದತ್ತ’ ಎಂದರೆ ಹೂವುಗಳನ್ನು ಕೊಡುವವ ಎಂದರ್ಥ. ಪುಷ್ಪದತ್ತನ ಉಲ್ಲೇಖ  ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಬರುವುದು. ’ಪುಷ್ಪದತ್ತ’ ರೆಂಬ ಹೆಸರಿನಲ್ಲಿ ಕರೆಸಿಕೊಳ್ಳುತ್ತಿರುವ ಜನಾಂಗದ ಹೆಚ್ಚಾಗಿ ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ, ಮಧ್ಯಪ್ರದೇಶ ಹಾಗೂ ಬಂಗಾಲ ರಾಜ್ಯಗಳಲ್ಲಿ ವಾಸವಾಗಿದ್ದುದನ್ನು ಕಾಣುವೆವು. ಹೀಗೆ ವಿವಿಧ ಹೆಸರುಗಳಿಂದ ಕರೆಸಿಕೊಳ್ಳುತ್ತಿರುವ ಆಯಾ ಪ್ರದೇಶಗಳ ಆಚರಣೆ ಸಂಪ್ರದಾಯಗಳನ್ನು ರೂಢಿಸಿಕೊಂಡು ಬದುಕುತ್ತಿರುವ ಇವರೆಲ್ಲರೂ ಹೂಗಾರರೇ ಆಗಿದ್ದಾರೆ. ಈ ಸಮಾಜದವರ ವಿಶೇಷತೆಗಳು, ಇವರ ಧಾರ್ಮಿಕ ಆಚರಣೆಗಳು ಹಾಗೂ ವಿಧಿ ಕ್ರಿಯೆಗಳನ್ನು ಇಲ್ಲಿ ಪರಿಶೀಲಿಸಬಹುದಾಗಿದೆ.

ಹೂಗಾರ ಸಮಾಜದ ಇವರೆಲ್ಲರೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ವಾಸವಾಗಿದ್ದಾರೆ. ಇವರು ವೀರಶೈವ ಧರ್ಮದ ಒಂದು ಭಾಗವೇ ಆಗಿದ್ದರೂ ಈಗ ವೀರಶೈವರು ಇವರನ್ನು ತಮ್ಮ ಸರಿಸಮಾನರೆಂದು ತಿಳಿಯುತ್ತಿಲ್ಲ. ಬಹುಶಃ ಇದಕ್ಕೆ ಕಾರಣ ಈ ಸಮಾಜದವರು ಆರ್ಥಿಕವಾಗಿ ಹಿಂದೆ ಉಳಿದುದು ಹಾಗೂ ಚರ್ಮವಾದ್ಯಗಳ ನುಡಿಸುತ್ತಿರುವುದು ಆದಂತಿದೆ. ಆದರೆ ಪ್ರಾಚೀನ ಕಾಲದಲ್ಲಿ ಈ ಸಮಾಜದವರಿಗೆ ಸಾಮಾಜಿಕವಾಗಿ, ಧಾರ್ಮಿಕವಾಗಿ ಉನ್ನತವಾದ ಸ್ಥಾನಮಾನಗಳು ಲಭ್ಯವಾಗಿದ್ದುವು. ಇವರನ್ನು ಶೈವ-ಬ್ರಾಹ್ಮಣರೆಂದೂ, ವೀರಶೈವರಿಗಿಂತ ಶ್ರೇಷ್ಠರೆಂದೂ ಅಂದಿನ ಜನತೆ ಭಾವಿಸಿತ್ತು. ಒಟ್ಟಿನಲ್ಲಿ ಅಂದಿನ ಸಮಾಜ ಇವರನ್ನು ಅತ್ಯಂತ ಗೌರವದಿಂದ ಕಂಡದು ವಿದಿತವಾಗುವುದು.

ಈ ಜನಾಂಗದವರ ಮನೆಮಾತು ಕನ್ನಡ. ಇವರಲ್ಲಿ ವಿಧುರ, ವಿಧವೆ ಹಾಗೂ ವಿಚ್ಛೇದಿತರ ವಿವಾಹಕ್ಕೆ ಅವಕಾಶವಿದೆ. ಹೆಚ್ಚಾಗಿ ಇವರು ತಮ್ಮದೇ ಜಾತಿಯ ಕುಲದ ಜನರೊಂದಿಗೆ ವಿವಾಹಗಳನ್ನು ಮಾಡಿಕೊಳ್ಳುತ್ತ ಬಂದುದನ್ನು ಕಾಣುವೆವು. ಈ ಜನಾಂಗದವರು ಸತ್ತಾಗ ಇವರ ಶವವನ್ನು ಸುಡುವರು. ವೈದಿಕರಂತೆ, ಬ್ರಾಹ್ಮಣರಂತೆ ಇವರು ಸತ್ತ ಹತ್ತೊ, ಹನ್ನೊಂದನೆಯ ದಿನಗಳಿಗೆ ಶ್ರಾದ್ಧವನ್ನು ಮಾಡುವರು. ಕೆಲವೆಡೆ ಅದರಲ್ಲೂ ವಿಶೇಷವಾಗಿ ಬೀದರ, ಗುಲಬರ್ಗ ಜಿಲ್ಲೆಗಳಲ್ಲಿ ವೀರಶೈವ ಧರ್ಮದ ಪ್ರಭಾವದಿಂದಾಗಿ ಇವರ ಶವಗಳನ್ನು ಹೂಳುವುದೂ ಉಂಟು. ಅಲ್ಪ ಸಂಖ್ಯಾತರಾದ ಇವರ ಧಾರ್ಮಿಕ ಆಚರಣೆಗಳು, ವಿಧಿ ಕ್ರಿಯೆಗಳು ತುಂಬ ಸರಳವಾದುವು. ನೇರವಾದುವು. ಈ ಜನಾಂಗದವರು ವಾಸಿಸುತ್ತಿರುವ ಪ್ರದೇಶದಲ್ಲಿರುವ ಬಹುಸಂಖ್ಯಾತರ ಧಾರ್ಮಿಕ ವಿಧಿಕ್ರಿಯೆಗಳ ಪ್ರಭಾವ ಇವರ ಮೇಲಾದುದರಿಂದ ಇವರ ಆಚರಣೆಗಳಲ್ಲಿ ಅಂಥ ಕಟ್ಟುನಿಟ್ಟುಗಳೇನಿಲ್ಲ. ಕೆಲವೆಡೆ ಈ ಜನಾಂಗದವರು ಹಣೆಗೆ ವಿಭೂತಿ ಧರಿಸಿ ಕೊರಳಲ್ಲಿ ಲಿಂಗಧಾರಣೆ ಮಾಡಿಕೊಂಡರೆ, ಇನ್ನು ಕೆಲವೆಡೆ ಈ ಜನಾಂಗದವರು ಕೊರಳಲ್ಲಿ ಜನಿವಾರ ಹಾಕಿಕೊಂಡು ಹಣೆಗೆ ನಾಮ ಧರಿಸುವುದುಂಟು. ತಲೆಯಲ್ಲಿ ಜುಟ್ಟು ಬಿಡುವುದನ್ನು ನಾವು ಹೆಚ್ಚಾಗಿ ಮಹಾರಾಷ್ಟ್ರದಲ್ಲಿ ವಾಸವಾಗಿದ್ದ ಹೂಗಾರರಲ್ಲಿ ಕಾಣುವೆವು. ಈ ಜನಾಂಗದವರು ದೇವರ ಪೂಜೆ ಮಾಡುವುದು, ಹೂಹಾರ, ಪತ್ರಿ ಕೊಡುವುದು ಈ ಕಾಯಕಗಳ ಜೊತೆಗೆ ಕೃಷಿ ಕಾಯಕದಲ್ಲೂ ತೊಡಗಿದ್ದುದುಂಟು. ಈ ಜನಾಂಗದ ಬಹುತೇಕರು ಭೂಮಿಯನ್ನು ಹೊಂದಿರುವರು. ಈ ಭೂಮಿಯಲ್ಲಿ ತಮ್ಮ ಕಾಯಕಕ್ಕೆ ಸಂಬಂಧಿಸಿದ ಹೂವಿನ ಗಿಡಗಳನ್ನು ಬೆಳೆಸುವುದುಂಟು. ಪ್ರಾಮಾಣಿಕರೂ, ಸೇವಾನಿಷ್ಠರೂ, ನಿಗರ್ವಿಗಳು ಆದ ಇವರ ವೇಷಭೂಷಣಗಳು ಅತ್ಯಂತ ಸಾದಾ.  ಅಂಗಿ, ರುಮಾಲು, ಶಲ್ಯೆ, ಪಂಚೆಗಳನ್ನು ಧರಿಸುವ ಇವರು ತಲೆಯ ಮೇಲೆ ರಂಗುರಂಗಿನ ರುಮಾಲುಗಳನ್ನು ಸುತ್ತಿಕೊಳ್ಳುವರು. ಕೆಲವೆಡೆ ಈ ಜನಾಂಗದವರು ಪಟ್ಟಿ ಜರತಾರಿಯ ಪಟಗಾಗಳನ್ನೂ ಸುತ್ತಿಕೊಳ್ಳುವುದುಂಟು  ಕೆಲವರು ಇವರು ಟೊಪ್ಪಿಗೆಯನ್ನು ಹಾಕಿಕೊಳ್ಳುವುದುಂಟು. ಶುದ್ಧ ಸಸ್ಯಾಹಾರಿಗಳಾದ ಇವರು ಜನಿವಾರ ಹಾಗೂ ಇಷ್ಟಲಿಂಗ ಎರಡನ್ನೂ ಆಯಾ ಪರಿಸರ ಪ್ರದೇಶಕ್ಕೆನುಸಾರವಾಗಿ ಧರಿಸುವ ಸುಸಂಸ್ಕೃತರು. ಇವರು ಹಣೆಗೆ ಭಸ್ಮ ಧರಿಸುತ್ತಾರೆ ಕೊರಳಲ್ಲಿ ರುದ್ರಾಕ್ಷಿ ಇರುತ್ತದೆ.  ಶಿವಲಿಂಗ ಪೂಜೆಯನ್ನೂ ಇವರು ಮಾಡುವರು. ಮಹಾರಾಷ್ಟ್ರದಲ್ಲೂ ಇರುವ ಈ ಜನಾಂಗದವರು ಹಣೆಗೆ ಗಂಧು ಧರಿಸುತ್ತಾರೆ. ಜನಿವಾರ ಹಾಕುತ್ತಾರೆ. ಶಿವನ ಆರಾಧನೆ ಮಾಡುತ್ತಾರೆ. ಹಾಗೆ ನೋಡಿದರೆ ಈ ಜನಾಂಗದವರು ಆರ್ಥಿಕವಾಗಿ ಹಿಂದುಳಿದರೂ ಕೆಲವೆಡೆ ಸಾಮಾಜಿಕವಾಗಿ, ಧಾರ್ಮಿಕವಾಗಿ ಇವರಿಗೆ ಒಳ್ಳೆಯ ಸ್ಥಾನ-ಮಾನಗಳಿದ್ದುದನ್ನು ತಿಳಿಯುವೆವು. ಪ್ರಾಚೀನ ಕಾಲದಲ್ಲಂತೂ ಈ ಜನಾಂಗದವರು ಬ್ರಾಹ್ಮಣ ಹಾಗೂ ಲಿಂಗಾಯತ ಸಮಾಜಗಳ ನಡುವಿನ ಸ್ಥಾನ ಹೊಂದಿದ್ದರೆಂಬುದು ವಿದಿತವಾಗುವುದು. ಪ್ರತಿಯೊಂದು ಊರುಗಳಲ್ಲೂ ಇವರು ಅರ್ಚಕ ವೃತ್ತಿಯನ್ನು ಮಾಡಿಕೊಂಡು ಬಾಳುತ್ತ ಬಂದಿರುವರು.

೨. ಹೂಗಾರ (ಜೀರ) ಸಮಾಜದ ಬಗೆಗಿದ್ದ ಪೌರಾಣಿಕ ಕಥೆಗಳು :

ಈ ಸಮಾಜದ ಹುಟ್ಟಿನ ಬಗೆಗೆ, ಪ್ರಾಚೀನತೆಯ ಬಗೆಗೆ ಅನೇಕ ಕಥೆ, ಉಪಕಥೆ, ದಂತಕಥೆಗಳು, ಪುರಾಣ ಕಥೆಗಳು ಹುಟ್ಟಿಕೊಂಡು ಜನತೆಯಲ್ಲಿ ಪ್ರಚಾರ ಪಡೆದುದನ್ನು ಕಾಣಬಹುದು. ಅಂತಹವುಗಳಲ್ಲಿ ಇಲ್ಲಿ ಕೆಲವನ್ನು ಉದಾಹರಿಸಬಹುದು.

೧. ಮೇರು ಪರ್ವತವನ್ನು ದೇವತೆಗಳು ಕಡೆಯುವಾಗ ಸಮುದ್ರದಲ್ಲಿ ಭಯಂಕರವಾದ ಬಿರುಗಾಳಿ ಏಳುತ್ತದೆ.ಅದನ್ನು ಶಿವ ತನ್ನ ಅಂಗೆಯಲ್ಲಿ ಹಿಡಿದುಕೊಳ್ಳುತ್ತಾನೆ. ಅದರಲ್ಲಿ ಶಿವನಿಗೆ ಒಂದು ಮನುಷ್ಯಾಕೃತಿ ಕಾಣಿಸುತ್ತದೆ. ಅವನು ಬಿರುಗಾಳಿಯಲ್ಲೂ ಹೂವುಗಳನ್ನು ಹಿಡಿದಿರುತ್ತಾನೆ. ಶಿವನು ಅವನನ್ನು ಪುಷ್ಪದತ್ತ ಎಂದು ಕರೆದು ಅವನನ್ನು ಭೂಮಿಗೆ, ತನ್ನನ್ನು ಪೂಜಿಸುವವರಿಗೆ ಹೂಗಳನ್ನು ಕೊಡಲೆಂದು ಕಳಿಸಿಕೊಡುತ್ತಾನೆ. ಹೀಗಾಗಿ ಹೂಗಾರರೆಲ್ಲರೂ ಪುಷ್ಪದತ್ತನ ವಂಶದವರೆಂದು ಪುರಾಣ ಈ ರೀತಿ ತಿಳಿಸುತ್ತದೆ.

ಹೂಗಾರರು ತಮ್ಮ ವಂಶದ ಮೂಲ ಪುರುಷ ’ಪುಷ್ಪದತ್ತ’ ಎಂದು ತಿಳಿದಿದ್ದಾರೆ. ಹರಿಹರನ ’ನಂಬಿಯಣ್ಣನ ರಗಳೆ’ಯಲ್ಲಿ ಬರುವ ಪುಷ್ಪದತ್ತನೇ ಇವನಾಗಿರಬಹುದು. ಸಮುದ್ರ ಮಂಥನ ಕಾಲದಲ್ಲಿ ಜನಿಸಿದ ಹಾಲಾಹಲವನ್ನು ಶಿವನು ಕುಡಿಯಲೆಂದು ಕೈಗೆತ್ತಿಕೊಂಡು ಅದರಲ್ಲಿನ ತನ್ನ ಪ್ರತಿಬಿಂಬ ನೋಡಿ ಅದಕ್ಕೆ ಪುಷ್ಪದತ್ತನೆಂದು ಹೆಸರಿಟ್ಟು, ಆತನಿಗೆ ನಿತ್ಯವೂ ತನ್ನ ಮುಡಿಗೆ ಹೂ ಏರಿಸು ಎಂದು ಆಜ್ಞೆ ಮಾಡಿದ ಎಂದು ನಂಬಿಯಣ್ಣನ ರಗಳೆಯಲ್ಲಿ ಬರುವುದು.

೨. ಅಲ್ಕಾವತಿಯ ರಾಜನಾದ ಕುಬೇರನಿಗೆ ಪ್ರತಿನಿತ್ಯ ಬೆಳಗಿನ ಜಾವದಲ್ಲಿ ಪೂಜೆಗಾಗಿ ಹೂವು ತಂದು ಕೊಡುವ ಕೆಲಸವನ್ನು ಹೂಗಾರನಾದ ಯಕ್ಷ ಮಾಡುತ್ತಿದ್ದ. ಯಕ್ಷನಿಗೆ ಲಗ್ನವಾಯಿತು. ಆದರೂ ಆತ ಹೂ ಕೊಡುವ ಕೆಲಸವನ್ನು ಮುಂದುವರೆಸಿದ. ಒಂದು ದಿನ ಯಕ್ಷನು ತನ್ನ ಸತಿಯೊಂದಿಗಿನ ಒಡನಾಟದಲ್ಲಿ ತಲ್ಲೀನನಾದ್ದರಿಂದ ತಡಮಾಡಿ ಕುಬೇರನಿಗೆ ಹೂವನ್ನು ಪೂರೈಸಿದನು. ತಡಮಾಡಿದ್ದಕ್ಕೆ ಯಕ್ಷನು ಕುಬೇರನಲ್ಲಿ ಕ್ಷಮೆ ಯಾಚಿಸಿದನು. ಆದರೂ ಆತ ಯಕ್ಷನಿಗೆ ನೀನು ಒಂದು ವರ್ಷ ನಿನ್ನ ಹೆಂಡತಿಯಿಂದ ಅಗಲಿ ರಾಮಗಿರಿಯಲ್ಲಿ ವಾಸವಾಗಿರು ಎಂದು ಶಿಕ್ಷೆ ವಿಧಿಸಿದ. ಆ ಪ್ರಕಾರ ಯಕ್ಷ ಒಂದು ವರ್ಷ ಶಿಕ್ಷೆ ಅನುಭವಿಸಿದ. ಈ ಕಥನವನ್ನೇ ಮಹಾಕವಿ ಕಾಳಿದಾಸ ’ಮೇಘದೂತ’ ವೆಂಬ ತನ್ನ ಕಾವ್ಯದಲ್ಲಿ ರಮ್ಯವಾಗಿ ನಿರೂಪಿಸಿದ್ದಾನೆ. ಇದರಿಂದ ಹೂಗಾರರು ತುಂಬ  ಪ್ರಾಚೀನ ಕಾಲದಿಂದಲೂ ಇದ್ದರೆಂಬುದು ವಿದಿತವಾಗುವುದು.

೩. ಪಾರ್ವತಿ ಪರಮೇಶ್ವರರ ಪೂಜೆಗಾಗಿ ಪ್ರತಿನಿತ್ಯ ಬೆಳಗಿನ ಜಾವದಲ್ಲಿ ಹೂವು ತಂದು ಕೊಡುತ್ತಿದ್ದ ವ್ಯಕ್ತಿಯ ನಿಷ್ಠೆಯನ್ನು ಗುರುತಿಸಿ ಶಿವ ಆತನಿಗೆ ಹೂಗಾರ ಎಂದು ಹೆಸರಿಟ್ಟನು. ಮುಂದೆ ಶಿವ ಹೂಗಾರನ ಕಾಯಕ ನಿಷ್ಠೆ ಮೆಚ್ಚಿಕೊಂಡು ’ನಿನಗೆ ಏನು ಬೇಕಾದರೂ ಕೇಳು ಕೊಡುತ್ತೇನೆಂದ’ ಆಗ ಆ ಹೂಗಾರನು ’ತಮ್ಮ ಪೂಜೆಗಾಗಿ ಹೂವು ಪತ್ರಿಗಳನ್ನು ತಂದು ಕೊಡುವ  ಆನಂದಕ್ಕಿಂತ ಬೇರೊಂದು ಆನಂದವೇ ಇಲ್ಲ.  ಈ ಸೇವೆಯ ಹೊರತು ನನಗಾವುದೂ ಬೇಡ’  ಎಂದು ಹೇಳಿದನು. ಕೊನೆಯ ತನಕ ತಮ್ಮ ಪೂಜೆಗಾಗಿ ಹೂಪತ್ರಿ ಸಲ್ಲಿಸುವ ಕಾಯಕವೊಂದನ್ನು ಕರುಣಿಸಿರಿ’ ಎಂದು ಬೇಡಿಕೊಂಡ. ಈ ಮಾತು ಕೇಳಿ ಪಾರ್ವತಿ ಪರಮೇಶ್ವರರಿಗೆ ಅತ್ಯಂತ ಆನಂದವಾಯಿತು. ಹೂಗಾರ ತನ್ನ ಕಾಯಕದೊಂದಿಗೆ ಸಂತೃಪ್ತಿ ಹೊಂದಿದ ಪರಮೇಶ್ವರನಿಲ್ಲದಾಗ ಪಾರ್ವತಿ ಒಬ್ಬಳೇ ಇದ್ದರೂ ಆಕೆಗೂ ಹೂಗಾರ ನಿತ್ಯ ಹೂಪತ್ರಿ ಸಲ್ಲಿಸತೊಡಗಿದ. ಪಾರ್ವತಿ ಪರಮೇಶ್ವರನಿಲ್ಲದಾಗ ಒಬ್ಬಳೆ ಇದ್ದು ಇದ್ದು ಒಂಟಿತನ ಅನುಭವಿಸತೊಡಗಿದಳು. ಒಂಟಿತನ ಹೋಗಲಾಡಿಸಲು ಆಕೆ ತನ್ನ ಮೈ ಮೇಲಿನ ಮಣ್ಣು ತೆಗೆದು ಒಂದು ಹೆಣ್ಣು ಗೊಂಬೆಮಾಡಿ ಶಿವನಿಗೆ, ಇದಕ್ಕೆ ಜೀವ ತುಂಬಿರಿ. ’ನಾನು ನನ್ನ ಮಗಳಾದ ಈಕೆ ಜೋಡಿಯಾಗಿ ಇರುವೆವು’ ಎಂದಳು. ಹಾಗೆಯೇ ಆಗಲಿ ಎಂದು ಶಿವನ ಆ ಮಣ್ಣಿನ ಗೊಂಬೆಗೆ ಜೀವವನ್ನು ತುಂಬಿದನು. ಆ ಮಗುವಿನೊಂದಿಗೆ ಪಾರ್ವತಿಯು ಕಾಲ ಕಳೆಯತೊಡಗಿದಳು. ಮುಂದೆ ಆ ಮಗಳು ಬೆಳೆದು ದೊಡ್ಡವಳಾದಳು. ಆಕೆಗೆ ಮದುವೆ ಮಾಡಬೇಕೆಂದು ಆಲೋಚಿಸಿ ವರನನ್ನು ಹುಡುಕಲು ನಾರದನಿಗೆ ತಿಳಿಸಿದರು. ಮೂರು ಲೋಕಗಳನ್ನು ಸುತ್ತಿ ಬಂದ ನಾರದನಿಗೆ ಆಕೆಗೆ ತಕ್ಕವರ ಸಿಗಲೇ ಇಲ್ಲ. ಆಗ ಪಾರ್ವತಿ – ಪರಮೇಶ್ವರರು ನಿಷ್ಠಾವಂತನಾದ ಹೂಗಾರನಿಗೆ ತಮ್ಮ ಮಗಳನ್ನು ಕೊಡಬೇಕೆಂದು ನಿರ್ಧರಿಸಿ, ಆತನನ್ನು ಕರೆಸಿ ಕೇಳಿದರು. ಆತ ’ದೇವಾನು-ದೇವತೆಗಳು ಇರುವಾಗ ನಿಮ್ಮ ಮಗಳನ್ನು ನನಗೇಕೆ ಕೊಡುವಿರಿ’ ಎಂದು ವಿನಮ್ರವಾಗಿ ತಿಳಿಸಿದ. ಆಗ ಶಿವ-ಪಾರ್ವತಿಯವರು ಆತನಿಗೆ, ’ನೀನು ದೇವಾನು-ದೇವತೆಗಳಿಗಿಂತಲೂ ಶ್ರೇಷ್ಠನು. ನಿನ್ನ ವರ್ತನೆ, ಕಾಯಕನಿಷ್ಠೆ, ಪ್ರಾಮಾಣಿಕತೆ ಭಕ್ತಿಗೆ ನಾವು ಮೆಚ್ಚಿದ್ದೇವೆ. ನಮ್ಮ ಮಗಳಿಗೆ ನೀನು ತಕ್ಕವರ ಎಂದು ನಾವು ತೀರ್ಮಾನಿಸಿದ್ದೇವೆ. ಆದ್ದರಿಂದ ನೀನು ಇವಳನ್ನು ಮದುವೆಯಾಗು’ ಎನ್ನುವರು. ಆಗ ಆತನು ಹೆಮ್ಮೆಪಟ್ಟುಕೊಂಡು ಸಂತೋಷದಿಂದ ಪಾರ್ವತಿಪರಮೇಶ್ವರರ ಮಗಳನ್ನು ಮದುವೆಮಾಡಿಕೊಂಡನು. ಈಗಲೂ ಆತ ಶಿವ-ಪಾರ್ವತಿಯರ ಪೂಜೆಗೆ ಹೂ-ಪತ್ರಿ ತಂದು ಕೊಡುವುದನ್ನು ನಿಲ್ಲಿಸಲಿಲ್ಲ. ಈತನಿಗೆ ಒಂದು ದಿನ ಶಿವ-ಪಾರ್ವತಿಯರು ನೀನು ನಿನ್ನ ಹೆಂಡತಿಯೊಂದಿಗೆ ಮರ್ತ್ಯಲೋಕಕ್ಕೆ ಹೋಗು. ಅಲ್ಲಿ ನಮ್ಮ ಮೂರ್ತಿಗಳನ್ನು ಮಾಡಿ ಪೂಜಿಸು ಎಂದು ಆಜ್ಞೆ ವಿಧಿಸಿದರು. ಜೊತೆಗೆ ಭೂಲೋಕದ ಜನರಿಗೆ ಪೂಜಾದಿ ವಿಷಯಗಳನ್ನು ತಿಳಿಸಿ, ಅವರಲ್ಲಿ ಭಕ್ತಿ ಉದಿಸುವಂತೆ ಮಾಡು ಎಂದು ತಿಳಿಸಿ ಹೇಳಿದರು. ಅವರ ಆಜ್ಞೆಯನ್ನು ಹೊತ್ತು ಹೂಗಾರನು ತನ್ನ ಪತ್ನಿಯೊಂದಿಗೆ ಭೂಲೋಕಕ್ಕೆ ಬರುವನು. ಇಲ್ಲಿ ಪೂಜೆ ಪುನಸ್ಕಾರಗಳಲ್ಲಿ ತೊಡಗಿದನು. ಒಂದು ದಿನ ಹೂಗಾರನ ಪತ್ನಿ ತಲೆ ಎರೆದುಕೊಂಡು ತಲೆಗೂದಲನ್ನು ಆರಿಸಿಕೊಳ್ಳಲೆಂದು ಮನೆಯ ಹೊರಗೆ ಕೂತಿದ್ದಳು. ದೇವಲೋಕದ ಕನ್ಯೆ ಇಲ್ಲಿಗೆ ಹೇಗೆ ಬಂದಳು? ಎನ್ನುತ್ತ ಇವಳನ್ನು ಸೂರ್ಯ ದೇವ ನೋಡಿದ. ಇವಳ ಮೇಲೆ ಮನಸ್ಸು ಮಾಡಿದ ಸೂರ್ಯ ದೇವನು ಅವಳ ಸಂಗ ಮಾಡಬೇಕೆಂದು ಇಚ್ಛಿಸಿ, ಅವಳ ಗಂಡನಿಲ್ಲದ ವೇಳೆಯಲ್ಲಿ ಅವಳ ಮನೆಗೆ ಬಂದು ಆಕೆಯೊಡನೆ ರಸಿಕತೆಯ ಮಾತುಗಳನ್ನಾಡಲು ಪ್ರಾರಂಭಿಸಿದ. ಹೀಗೆ ಬರಬರುತ್ತ ಅವರೀರ್ವರಲ್ಲಿ ಪ್ರೇಮಾಂಕುರವಾಯಿತು. ಅನುರಾಗ ಬೆಳೆಯತೊಡಗಿತು. ಹೀಗೆ ಸೂರ್ಯದೇವ ಆಗಾಗ ಹೂಗಾರನ ಮನೆಗೆ ಬಂದು ಹೋಗತೊಡಗಿದ. ಇದನ್ನು ಹೂಗಾರನ ಮಗಳು ಅಂಜನಾದೇವಿ ನೋಡುತ್ತಲಿದ್ದಳು. ಮಗಳು ಅಂಜನಾದೇವಿ ತನ್ನ ಗಂಡನಿಗೆ ತನ್ನ ಅನೈತಿಕ ಸಂಬಂಧದ ವಿಷಯವನ್ನು ತಿಳಿಸಬಹುದೆಂದು ಭಾವಿಸಿ ಆ ಹೂಗಾರನ ಪತ್ನಿ ಒಂದು ತಂತ್ರ ಮಾಡಿದಳು. ಗಂಡ ಬಂದೊಡನೆ ’ನಮ್ಮಿಂದ ಹುಟ್ಟಿದ ಈ ಮಗಳಿಂದ ನಮಗೆ ಮುಂದೆ ಕೆಡುಕಾಗುತ್ತದೆಂದು ಸೂರ್ಯದೇವ ಹೇಳಿದ್ದಾನೆ.  ಆದ್ದರಿಂದ ಈ ಮಗುವನ್ನು ಕಾಡಿಗೆ ಒಯ್ದು ಅಲ್ಲಿ ಅವಳ ಎರಡೂ ಕಣ್ಣುಗಳನ್ನು ಕಿತ್ತುಕೊಂಡು ತಂದು ನನಗೆ ತೋರಿಸಬೇಕೆಂದು ’ ಹೇಳಿದಳು. ಆಗ ಆ ಹೂಗಾರ ಹೆಂಡತಿಯ ಮೇಲಿನ ವ್ಯಾಮೋಹದಿಂದ ಆಕೆ ಹೇಳುವುದೆಲ್ಲಾ ಸತ್ಯವೆಂದು ಭಾವಿಸಿ ತನ್ನ ಮಗಳನ್ನು ಕಾಡಿಗೆ ಒಯ್ದು ಅಲ್ಲಿ ನಿರ್ದಯಿಯಾಗಿ ಆಕೆಯ ಎರಡೂ ಕಣ್ಣುಗಳನ್ನು ಕಿತ್ತು ತಂದು ತನ್ನ ಹೆಂಡತಿಗೆ ತೋರಿಸಿದ. ಅತ್ತ ಕಣ್ಣು ಕಳೆದುಕೊಂಡ ಮಗಳು ಅಂಜನಾದೇವಿ ನೋವಿನಿಂದ ನರಳಿದಳು. ಅತ್ತಳು. ಆಗ ಆಕೆ ಮಲಗಿಕೊಂಡಿದ್ದ ಸ್ಥಳದಲ್ಲಿ ಒಂದು ಗಿಡವಿತ್ತು. ಆ ಗಿಡದಲ್ಲಿ ವಾನರ ದಂಪತಿಗಳು ರತಿ ಸುಖದಲ್ಲಿ ತೊಡಗಿದ್ದರು. ಶುಕ್ಲ ಶೋಣಿತಗಳೆರಡರ ಮಿಶ್ರಧಾತು ಕೆಳಗೆ ಮಲಗಿದ ಮಗು ಅಂಜನಾದೇವಿಯ ಗರ್ಭ ಪ್ರವೇಶಿಸಿತು. ಆಗ ಅಂಜನಾದೇವಿಯ ನೋವು ನಿವಾರಣೆಯಾಯಿತು. ಆಕೆ ಗರ್ಭವತಿಯಾದಳು. ಮುಂದೆ ಇವಳ ಹೊಟ್ಟೆಯಿಂದ ಹುಟ್ಟಿದವನೇ ಅಂಜನಾ ಪುತ್ರ. ಈತನೇ ಆಂಜನೇಯ, ಹನುಮಂತ. ಮುಂದೆ ಹನುಮಂತನಿಗೆ ತನ್ನ ತಾಯಿಗೆ ಸೂರ್ಯ ದೇವ ಮಾಡಿದ ಕುಚೇಷ್ಟೆ, ಕೊಟ್ಟ ಕಷ್ಟ ತಿಳಿಯಿತು. ವಾಯುಪುತ್ರ ಸಿಟ್ಟಿಗೆದ್ದು ಆಕಾಶಕ್ಕೆ ನೆಗೆದು ಸೂರ್ಯನನ್ನು ಮುಗಿಸಬೇಕೆಂದು ಆತನನ್ನು ಬಾಯಲ್ಲಿ ಹಾಕಿಕೊಂಡ. ಆಗ ಬಾಯಿ ಸುಡತೊಡಗಲು ಉಗುಳಿದ. ಆ ಕಾರಣದಿಂದ ಸೂರ್ಯನಲ್ಲಿ ಅಲ್ಲಲ್ಲಿ ಕಪ್ಪು ಕಲೆಗಳುಂಟಾದವು. ಹನುಮಂಥನಂಥ ಶೂರ ಮಗನನ್ನು ಹೆತ್ತ ಅಂಜನಾದೇವಿ ತಾಯಿ ಧನ್ಯಳು. ಮುಂದೆ ಹನುಮಂತನಿಗೆ ತನ್ನ ತಾತನಾದ ಹೂಗಾರನು  ತನ್ನ ತಾಯಿ ಅಂಜನಾದೇವಿಗೆ ಮಾಡಿದ ದ್ರೋಹ ಗೊತ್ತಾಯಿತು. ಆಗ ಹೂಗಾರನು ಸೂರ್ಯನನ್ನೇ ನುಂಗಲು ಹೋದ ಹನುಮಂತ ನನ್ನನ್ನು ಬಿಡುವನೇ ಎಂದು ಹೆದರಿ ಹನುಮಂತನಿಗೆ ಶರಣಾದ. ಶರಣು ಬಂದವರನ್ನು ಕಾಯುವುದು ಧರ್ಮವೆಂದು ಹೂಗಾರನಿಗೆ ಅಂಜನಾಪುತ್ರನು (ಹನುಮಂತನು) ಪಾರ್ವತಿ ಪರಮೇಶ್ವರರ ಪೂಜೆ ಸಲ್ಲಿಸುವಂತೆ ನೀನು ನನಗೂ ಪ್ರತಿನಿತ್ಯ ಪೂಜೆ ಸಲ್ಲಿಸಬೇಕೆಂದು ಆದೇಶಿಸಿದನು. ಹೂಗಾರನು ಅದಕ್ಕೊಪ್ಪಿಕೊಂಡನು. ಅಂದಿನಿಂದ ಹೂಗಾರನು ತಪ್ಪದೇ ಹನುಮಂತನನ್ನು ಪೂಜಿಸತೊಡಗಿದನು.

ಈ ಕಥೆಗಳ ವಾಸ್ತವಿಕತೆ ಏನೇ ಇರಲಿ, ಇವು ಅಡಕಗೊಂಡ ಒಳ ಅರ್ಥ, ಧ್ವನ್ಯಾರ್ಥ ಮಾತ್ರ ಹೂಗಾರ ಸಮಾಜ ಅನಾದಿ ಕಾಲದಿಂದಲೂ ಇತ್ತೆಂಬುದಾಗಿದೆ. ಈ ಕಥೆಗಳನ್ನು ನಾವಿಂದು ವಾಚ್ಯಾರ್ಥದಲ್ಲಿ ಅರ್ಥೈಸಬಾರದು. ಈ ಕಥೆಗಳು ಒಳಗೊಂಡ ಸಾಂಕೇತಿಕತೆ ಹಾಗೂ ತತ್ವಗಳನ್ನು ನಾವಿಂದು ಅರಿತುಕೊಳ್ಳುವ ಅಗತ್ಯವಿದೆ. ದೇವರ ಪೂಜೆಗಾಗಿ ಹೂಪತ್ರಿ ಕೊಡುವ ಕಾಯಕ ಮಾಡಿಕೊಂಡಿದ್ದ ಜನಾಂಗ ಮೊದಲಿನಿಂದಲೂ ಇತ್ತೆಂಬುದರಲ್ಲಿ ಎರಡು ಮಾತಿಲ್ಲ. ಅತ್ಯಂತ ನಿಷ್ಠೆ, ಭಕ್ತಿ ಹಾಗೂ ಪ್ರಾಮಾಣಿಕತೆಯಿಂದ ಈ ಸಮಾಜದವರು ಹೂಪತ್ರಿಯನ್ನು ದೇವರ ಪೂಜೆಗೆ ಸಲ್ಲಿಸುವ ಕಾಯಕವನ್ನು ಅನಾದಿ ಕಾಲದಿಂದಲೂ ಮಾಡಿಕೊಂಡು ಬಂದುದು ಸತ್ಯ ಸಂಗತಿಯಾಗಿದೆ. ಇದನ್ನೇ ಶಿವ-ಪಾರ್ವತಿ, ಯಕ್ಷ-ಯಕ್ಷಿ, ಪುಷ್ಪದತ್ತರು ಪಾತ್ರಗಳು ಹಾಗೂ ಉಪಕಥಾನಕಗಳ ಮೂಲಕ ಜನತೆ ಇಂಥ ಕಥೆ ಕಟ್ಟಿ ಪ್ರಚಾರ ಮಾಡುತ್ತ ಬಂದುದನ್ನು ಅರಿಯುವೆವು. ಅಂಜನಾದೇವಿಯ ಪುತ್ರನಾದ ಆಂಜನೇಯ, ಹನುಮಂತ ದೇವರ ಹುಟ್ಟಿನ ಹಿನ್ನೆಲೆಯನ್ನು ಹೊಂದಿದ ಪ್ರಸ್ತುತ ಕಥೆಯೊಂದು ನಿಜಕ್ಕೂ ಅನ್ಯಾದೃಶ್ಯವಾದುದು, ಅಚ್ಚರಿಯನ್ನುಂಟು ಮಾಡುವಂಥಾದರೂ ಆಗಿದೆ. ಜನಪದರು ಇಂಥ ಅನೇಕಾನೇಕ ಕಾಲ್ಪನಿಕ ಕಥೆಗಳನ್ನು ಕಟ್ಟಿಕೊಂಡು ತಂತಮ್ಮ ಸಮಸ್ಯೆಗಳಿಗೆ ಸಮಾಧಾನವನ್ನು ಕಂಡುಕೊಳ್ಳುವುದುಂಟು. ಹೂಗಾರರು ಹನುಮಂತ ದೇವರನ್ನು ಪೂಜಿಸುತ್ತಾ ಬಂದ ಕಾರಣವನ್ನು ಈ ಕಥೆ ಚೆನ್ನಾಗಿ ನಿರೂಪಿಸಿದೆ. ಇದೇನೇ ಇರಲಿ ಈ ಕಥೆಗಳೆಲ್ಲವೂ ಹೂಗಾರ, ಪೂಜಾರ ಸಮಾಜ ಇಂದು ನಿನ್ನೆ ಹುಟ್ಟಿಕೊಂಡಂಥದಲ್ಲ. ಪ್ರಾಚೀನ ಕಾಲದಿಂದಲೂ ಇದ್ದ ಈ ಸಮಾಜ, ತುಂಬ ಗೌರವಯುತವಾದ ಸ್ಥಾನಮಾನ ಹೊಂದಿತ್ತು ಎಂಬುದನ್ನು ಬಿಂಬಿಸುವಲ್ಲಿ ಯಶಸ್ವಿಯಾಗಿದೆ. ಈ ಕಥೆಗಳ ತಾತ್ಪರ್ಯ ಇದೇ ಆಗಿದೆ. ಈ ಮಿತಿಯಲ್ಲಿರುವ ನಾವು ಈ ಕಥೆಗಳನ್ನು ಪರಿಭಾವಿಸುವುದು ಒಳಿತು.

೩. ಹೂಗಾರರ ಜೀವನ ವಿಧಾನ – ಸಂಸ್ಕೃತಿ

ಹೂಗಾರರು ವೀರಶೈವರ ಒಂದು ಭಾಗವೇ ಆಗಿದ್ದು, ಇವರು ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ವಾಸವಾಗಿದ್ದಾರೆ. ’ಹೂಗಾರ’ರು ಎಂಬ ಹೆಸರು ಇವರಿಗೆ ಹೂ ಹಾರ ಮಾಡಿ ಜನತೆಗೆ ಕೊಡುವುದರಿಂದಾಗಿ, ದೇವರ ಪೂಜೆಗೆ ಹೂ ಅರ್ಪಿಸುವುದರಿಂದಾಗಿ ಬಂದಿದೆ. ಪುಷ್ಪವೃತ್ತಿಯನ್ನೇ ಮುಖ್ಯವಾಗಿ ಅವಲಂಬಿಸಿದ ಇವರಿಗೆ ಹೂಗಾರ, ಮಾಲೆಗಾರ, ಹೂವಿನ್, ಮಾಲಿ, ಪೂಲಮಾಲಿ ಎಂದೆಲ್ಲ ಕರೆಯುವುದುಂಟು ಪ್ರಾಚೀನ ಕನ್ನಡ ಕಾವ್ಯಗಳಲ್ಲೂ, ಶಾಸನಗಳಲ್ಲೂ ಹೂಗಾರರ ಉಲ್ಲೇಖ ಬರುವುದನ್ನು ಕಾಣುವೆವು. ಹೂಗಾರರನ್ನು ಉಲ್ಲೇಖಿಸುವ ಕನ್ನಡದ ಮೊಟ್ಟಮೊದಲನೇ ಶಾಸನ (ಕಿ.ಶ. ೫೯೭-೬೦೭) ವೆಂದರೆ ಬಾದಾಮಿಯ ಮಂಗಲೀಶನ ಶಾಸನ.