ಆ ಶಾಸನ ಹೀಗಿದೆ :

“ಸ್ವಸ್ತಿಶ್ರೀಮತ್ ಪ್ರಿ (ಪೃ)ಥಿವೀ ವಲ್ಲಭ ಮಂಗ (ಲೀ) ಸ (ಶ) ನಾ
ಕಲ್ಮನೆಗೆ ಇತ್ತೊದು ಲಂಜಿಗೇಸಂ ದೇವರ್ಕೆ ಪೂನಿರುವ
ಮಾಲ (ಲಾ) ಕಾರರ್ಗೆ ಅರ್ದ್ಧವಿಸದಿ ಇತ್ತೊಂದಾನಳಿವೊನ್
ಪಜ್ಞ ಮಹಾಪಾತಕನ ಕುಂ(ಕ್ಯುಂ) ಏಳನೆಯಾ ನರಕದಾ ಪುಳು
ಅಕು(ಕ್ಕು)ಮ್ ||

ಈ ಶಾಸನವು ಬಾದಾಮಿಯ ಮೂರನೆಯ ಗುಹೆಯ ಮುಂಭಾಗದಲ್ಲಿದೆ. (ಇಂಡಿಯನ್ ಆಂಟಿಕ್ವರಿ ಷ ಪುಟ ೫೯-೬೦)

ಆನಂತರ ಅನೇಕ ಶಾಸನಗಳು ಹೂಗಾರರನ್ನು ಉಲ್ಲೇಖಿಸಿವೆ. ದೇವರ ಪೂಜೆಗೆ ಹೂಗಳನ್ನು ತಿರಿದು ತರುವವರೇ ಹೂಗಾರರು. ಇನ್ನು ಹೂವಿನಿಂದ ಮಾಲೆ ಮಾಡಿ ಮಾಲೆಗಳನ್ನು ಜನತೆಗೆ ತಲುಪಿಸುವವರಿಗೆ ಸರವಂದಿಗ, ಪೂಲಮಾಲಿ, ಮಾಲೆಗಾರ ಎಂದೆಲ್ಲ ಕರೆಯುವುದುಂಟು. ಹೂಗಾರರು ತಮ್ಮ ಮೂಲ ಪುರುಷ ಪುಷ್ಪದತ್ತ ಎಂದು ಹೇಳಿಕೊಳ್ಳುವುದುಂಟು. ಪುಷ್ಪದತ್ತನ ಉಲ್ಲೇಖ ಮಹಾಕವಿ ಹರಿಹರನ ’ನಂಬಿಯಣ್ಣನ ರಗಳೆ’ಯಲ್ಲಿ ಬರುವುದು. ಮಾಲೆಗಾರ ಎಂಬ ಉಲ್ಲೇಖ ಆತನ ’ಬಸವರಾಜ ದೇವರ ರಗಳೆ’ಯಲ್ಲಿ ಬರುವುದನ್ನು ಕಾಣುವೆವು. ’ಜನ್ನ’ನು ತನ್ನ ’ಅನಂತನಾಥ ಪುರಾಣ’ ದಲ್ಲಿ ’ಕಟ್ಟಿಯುಮೇನೊ ಪೊಸಬಾಸಿಗಮಂ ಮುಡಿವ ಭೋಗಿಗಳಲ್ಲದೆ ಬಾಡಿ ಪೋಪುದು’ ಎಂದು ಉಲ್ಲೇಖಿಸಿದುದನ್ನಿಲ್ಲಿ ಸ್ಮರಿಸಬಹುದು. ಹೂಗಾರರು ಮಾಲೆಯನ್ನು ಕಟ್ಟಿ ಹಾಗೆಯೇ ಇಟ್ಟರೆ ಅದು ಬಾಡಿ ಹೋಗುವುದು. ಅದನ್ನು ಮುಡಿದುಕೊಳ್ಳುವ ಭೋಗಿಗಳು ಬೇಕು. ಇದರಂತೆ ಕಾವ್ಯ ಬರೆದಾಕ್ಷಣಕ್ಕೆ ಕವಿಗೆ ಸಾರ್ಥಕತೆ ಉಂಟಾಗದು. ಆ ಕಾವ್ಯವನ್ನು ಓದಿ ಆಸ್ವಾದಿಸುವ ಸಹೃದಯರು ಬೇಕು. ಅಂದಾಗ ಆ ಕಾವ್ಯಕ್ಕೆ ಸಾರ್ಥಕತೆ ಉಂಟಾಗುವುದು. ಕಾವ್ಯದ ಸಾರ್ಥಕತೆಯನ್ನು ವಿವರಿಸುವಾಗ ಹೂಗಾರರು ಕಟ್ಟಿದ ಮಾಲೆಯ ಉದಾಹರಣೆಯನ್ನಿಲ್ಲಿ ತೆಗೆದುಕೊಳ್ಳಲಾಗಿದೆ.

ಹೂಗಾರರ ಉಲ್ಲೇಖ ಕನ್ನಡ ಸಾಹಿತ್ಯದುದ್ದಕ್ಕೂ ಬಂದಿರುವುದನ್ನು ಕಾಣುವೆವು. ಬಸವಾದಿ ಶರಣರ ಕಾಲದಲ್ಲಿ ಹೂವು ಪತ್ರಿ ಕೊಡುವ ಕಾಯಕ ಮಾಡಿಕೊಂಡಿದ್ದ ಶರಣು ಹೂಗಾರ ಮಾದಣ್ಣನ ಪ್ರಸ್ತಾಪವು ’ಬಸವ ಪುರಾಣ’ ಸಂ. ೪೭, ’ಪದ್ಮರಾಜ ಪುರಾಣ’ ಸಂ. ೨೨, ಗುರಗಜ ಚಾರಿತ್ರ ’ ೯ – ೪೯, ’ವೀರಶೈವಾಮತ ಪುರಾಣ ೧೨-೫,

’ಚೆನ್ನ ಬಸವ ಪುರಾಣ’ ಪುಟ ೬೬೬ ಮುಂತಾದ ಕೃತಿಗಳಲ್ಲಿ ಬರುವುದನ್ನು ಕಾಣುವೆವು. ಇಷ್ಟೇ ಅಲ್ಲ ಹೂಗಾರ ಮಾದಣ್ಣನನ್ನು ಕುರಿತು ಜನಪದ ಕವಿಗಳು ತ್ರಿಪದಿಗಳಲ್ಲಿ ಬರುವುದನ್ನು ಕಾಣುವೆವು. ಇಷ್ಟೇ ಅಲ್ಲ ಹೂಗಾರ ಮಾದಣ್ಣನ್ನು ಕುರಿತು ಜನಪದ ಕವಿಗಳು ತ್ರಿಪದಿಗಳಲ್ಲಿ ಆತನ ಚರಿತ್ರೆಯನ್ನು ಅಡಕಗೊಳಿಸಿ ಹಾಡುತ್ತಿದ್ದುದನ್ನು ಬಿ.ಎಸ್. ಗದ್ದಗಿಮಠ ಅವರು ತಮ್ಮ ’ಜಾನಪದ ಗೀತೆಗಳು’ ಕೃತಿಯಲ್ಲಿ ಸಂಗ್ರಹಿಸಿದ್ದಾರೆ. ಹೂಗಾರ ಮಾದಣ್ಣ ಶರಣನಾಗಿದ್ದ ಆತ ಇವನ ಪೂಜೆಗೆ ಹೂ ಪತ್ರಿ ತಂದು ನಿತ್ಯ ಏರಿಸುವ ಕಾಯಕ ಮಾಡಿಕೊಂಡಿದ್ದನೆಂಬುದು ಆತನನ್ನು ಕುರಿತಿರುವ ಹಂತಿಯ ಹಾಡಿನ ತ್ರಿಪದಿಗಳಲ್ಲಿ ಸೊಗಸಾಗಿ ವರ್ಣನೆಗೊಂಡುದನ್ನು ಕಾಣುವೆವು. ಅಂಥ ಕೆಲ ತ್ರಿಪದಿಗಳನ್ನಿಲ್ಲಿ ನೋಡಬಹುದು.

ಹೂಪತ್ರಿ ದವನಗಳು ಆಪು ಶಿವಪೂಜೆಗೆನೆ
ತಾಪ ಸಂಸಾರ  ನೀಗುದಕೆ | ಮಾದಣ್ಣ
ಮಾಪತಿತನದರ ಕಾಯಕವ |

ಬಡ ಭಕ್ತ ಮಾದಯ್ಯ ಕಡು ಶರಣ ಕಾಯಕಕೆ
ದುಡಿದು ಶಿವಮತದ ದಾಸೋಹ ನಡೆಸಿದ್ದ
ಪಡಗೆರೆಯ ಗದ್ದೆ ಬೆಳೆದಂತೆ |

ಹೂಗಾರ ಮಾದಣ್ಣ ಬೇಗುದಯ ಹರಿಯುದಕೆ
ಹೋಗಿ ಹೂ ಪತ್ರಿ ಬನದೊಳಗೆ | ಎತ್ತರಲು
ಜೋಗಿ ಜಂಗಮರ ಶಿವಪೂಜೆ ||

ಊರ ಶರಣರಿಗೆ ಜೀರಮಾದನೆ ಮುದ್ದು
ಸೂರಿ ಹೂಪತ್ರಿ ದಿನನೋಡಿ | ಮಾಡಿದರು
ಜಾರೆಯರು ಮರೆತು ಶಿವಪೂಜೆ ||

ಹಂತಿಯದು ಹಾಡೆಂದು ಪಂತಕಟ್ಟಲು ಬೇಡ
ಕಂತಿ ಕರಗುವದು ನಿಂತಲ್ಲೆ ಮಾದಯ್ಯ
ಕುಂತು ಎದೆಯೊಳಗೆ ಹಾಡಿಸಿದ |

ಇನ್ನೂ ಹಲವಾರು ಪ್ರಾಚೀನ ಕಾವ್ಯ – ಪುರಾಣಗಳಲ್ಲಿ ಹೂವಿನ ವೃತ್ತಿ ಮಾಡಿಕೊಂಡಿದ್ದ ಹೂಗಾರರ ಉಲ್ಲೇಖ ಬರುವುದನ್ನು ಕಾಣುವೆವು. ಪುಷ್ಪದ ಸೋಮಯ್ಯ (ಶಿವದಾಸ ಗೀತಾಂಜಲಿ ಪುಟ ೨೧-೨೨), ಬಾಹೂರ ಬೊಮ್ಮಯ್ಯ (ಬಸವ ಪುರಾಣ, ಸಂಧಿ-೨೧), ಹೂವಿನ ಅಲ್ಲಮ್ಮ (ಶಿ.ಕರ.ಕೋ ಪುಟ ೫೨೮), ಪೂವಿನ ಬಾಚಿದೇವ (ಚೆನ್ನ ಬಸವಪುರಾಣ, ಸಂ. ೫೫, ಪದ್ಯ ೪೫-೪೬) ಮುಂತಾದವರ ಉಲ್ಲೇಖ ಬರುವುದನ್ನು ಕಾಣುವೆವು. ನಿತ್ಯವೂ ಬೆಳಿಗ್ಗೆ ಎದ್ದು ಹೂಗಳನ್ನು ತಿರಿದುಕೊಂಡು ಭಕ್ತರಿಗೆ ಹೂಮಾಲೆ ಮಾಡಿ ಕೊಡುತ್ತಿದ್ದ ಬಾಹೂರ ಬೊಮ್ಮಯ್ಯನ ಉಲ್ಲೇಖ ಬಸವಪುರಾಣದಲ್ಲಿ ಬಂದಿದೆ. ಅದನ್ನಿಲ್ಲಿ ಉದಾಹರಿಸಬಹುದು.

ಚಾರು ಬರಿತಂ ಮತ್ತೆಯುಂ ಬಾ
ಹೂರ ಬೊಮ್ಮಯನೆಂಬ ಭಕ್ತನು
ದಾರ ಕೀರ್ತಿ ನಿರೂಢ ಗಾಢ ಮಹತ್ವ ತತ್ವಾರ್ಥಿ
ವೀರಶೈವಾಚಾರ ಸುವ್ರತ
ಕಾರಿ ಸೂರಿಜಗೋಪಕಾರಿ ವಿ
ಕಾರದೂರನು ಸಾರ ಭಕ್ತಿ ಶರೀರದುರಿತಾರಿ  ೨೩

ಇಲಿದು ಜಂಗಮಲಿಂಗ ಗುರುಪದ
ಜಲಜ ಪರಿಚಯ ಕ್ರಿಯಾ ಸಂ
ಕಲಿತ ಭಕ್ತಿಯೊಳಲಸದಾಗಳು ಮಾಡಬೇಕೆಂದು
ಹಲವು ಹೂದೋಟಗನರ್ಜಿಸಿ
ಬೆಳಗು ಜಾವಿನಲೆದ್ದು ಕುಕ್ಕುಟ
ನುಲಿಯ ಲೊಡನಂತೆಯ್ದೆ ಕುಯಿತಂದು       ೨೫

ಕುಸುಮಮಾಲೆಗಳಂ ರಚಿಸಿ ತಂ
ದೊಸೆದು ಭಕ್ತರಿಗಿತ್ತು ತಾ ನಿ
ತ್ಯಶನ ಕಾಯಕ ಲಬ್ದಿಯಲಿ ಜಂಗಮಕೆ ಮಾಡುತ್ತ
ಪೆಸರು ಪಸರಿಸಿ ಕೀರ್ತಿಸುತ್ತಿದೆ
ವಸುಧೆಯೊಳು ಮತ್ತೊಂದು ವಾದದೊ
ಳಸಮಭರ್ಗನೆ ಕರ್ತನೆಂಬುದದಂ ಪ್ರತಿಷ್ಠಿಸಿದ         ೨೬

ಬಾಹೂರ ಬೊಮ್ಮಯ್ಯ ಹೂವಿನ ವೃತ್ತಿ ಮಾಡಿಕೊಂಡಿದ್ದ ಒಬ್ಬ ಶಿವಭಕ್ತನೆಂಬುದು ಈ ಮೇಲಿನ ಪದ್ಯಗಳಿಂದ ವಿದಿತವಾಗುವುದು. ಇದರಿಂದ ಹೂಗಾರರು ಪ್ರಾಚೀನ ಕಾಲದಿಂದಲೂ ಇದ್ದರೆಂಬುದು ವಿದಿತವಾಗುತ್ತದೆ. ಇವರು ಹೂ -ಕಾಯಿ-ಪತ್ರಿ ಕೊಡುವುದರೊಂದಿಗೆ ಹನುಮಂತ, ಈಶ್ವರಲಿಂಗ, ರಾಮಲಿಂಗ ಮುಂತಾದ ದೇವರನ್ನು ಪೂಜಿಸುವ ಕಾಯಕವನ್ನೂ ಮಾಡಿಕೊಂಡು ಬಂದುದರಿಂದ ಇವರಿಗೆ ಪೂಜಾರರು ಎಂದೂ ಕರೆಯುತ್ತ ಬಂದುದುಂಟು. ಪೂಜಾರರಲ್ಲಿ ಬೇರೆ ಬೇರೆ ಜಾತಿಯವರೂ ಇರುವುದುಂಟು. ಕೆಲವೆಡೆ ಬ್ರಾಹ್ಮಣರಿಗೆ, ಕುರುಬರಿಗೆ, ಕಬ್ಬಲಿಗೆ ಪೂಜಾರರೆಂದೂ ಕರೆಯುವುದುಮಟು. ಆದರೆ ಹೂವಿನ ವೃತ್ತಿ ಮಾಡಿಕೊಂಡು ಬರುವುದರ ಜೊತೆಗೆ ಪೂಜೆ ಪುನಸ್ಕಾರಗಳಲ್ಲೂ ತೊಡಗಿದ್ದುದರಿಂದ ಇವರು ಇನ್ನುಳಿದ ಪೂಜಾರರಿಗಿಂತ ಭಿನ್ನರಾಗಿದ್ದಾರೆ. ಅಂದರೆ ಇವರು ಹೂಗಾರೆಂದರ್ಥ. ಹೂಗಾರರನ್ನು ’ಜೀರ್’ ರು ಮತ್ತು ’ಗುರವ’ರು ಎಂದೂ ಕರೆಯುವುದುಂಟು. ’ಜೀರ್ ’ ಪದ ’ಜೀಯರ್ ’ದಿಂದ ಬಂದಿದೆ. ಜೀಯರ್ ಎಂದರೆ ಒಡೆಯರು. ’ಜೀರ್’ ಎಂದು ಕರೆಸಿಕೊಳ್ಳುವ ಹೂಗಾರರು ಹೆಚ್ಚಾಗಿ ಬಿಜಾಪುರ ಹಾಗೂ ರಾಯಚೂರು ಜಿಲ್ಲೆಗಳಲ್ಲಿದ್ದಾರೆ.  ’ಜೀರ್’ ಪದ ಗೌರವ ಸೂಚಕವಾದುದಾಗಿದೆ. ಪ್ರಾಚೀನ ಶಾಸನಗಳಲ್ಲಿ ಬರುವ ಮಾರಜೀಯ, ದೇವಸಿಂಗಿ, ಜೀಯ, ದುರ್ಗಜೀಯ ಮೊದಲಾದ ಕಾಳಾಮುಖ ಆಚಾರ್ಯರು ಹೂಗಾರರೇ ಆಗಿದ್ದರು. ಹೂಗಾರರು ಕಾಳಾಮುಖ ಶೈವರೇ ಆಗಿದರು. ಇನ್ನು ’ಗುರವ’ ಎಂಬ ಹೆಸರು ಹೆಚ್ಚಾಗಿ ಬೆಳಗಾವಿ ಬಿಜಾಪುರ ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿದೆ. ’ಗುರವ’ರೂ ಹೂಗಾರರೇ. ಇಲ್ಲಿ ಇವರಿಗೆ ಗುರವ ಎಂದೇ ಕರೆಯುವರು. ಮೂಲದಲ್ಲಿ ಇವರು ಕಾಳಾಮುಖ ಶೈವರೇ ಆಗಿದ್ದು, ವೈದಿಕ ಸಂಪ್ರದಾಯಗಳನ್ನೇ ಇವರು ಮುಂದುವರೆಸಿಕೊಂಡು ಬಂದುದುಂಟು. ಗುರವರು ಪಂಚಮಠದ ನಾದ ಶೈವರು, ಶುದ್ಧ ಶೈವರು. ಆದಿ ರುದ್ರ ಪ್ರಕರಣದಲ್ಲಿ ಶ್ರೀ ಶಿವಸ್ತ್ರೋತ್ರ‍್ಯ, ಕಾಪಾಲಿಕ, ಕಾಳಾಮುಖಿ, ಪಾಶುಪತ, ಈ ಪಂಚಶೈವದೊಂದಿಗೆ ಶಾಖಾಶುದ್ಧ ಶೈವ ಗುರವ (ಹೂಗಾರ) ಇರುವನು. ಈತನಿಗೆ ತಪೋಧನ ಶೈವ, ನಾದಶೈವ, ಪಾಖಂಡಶೈವ, ಮಾನಶೈವ ಇವು ಗುರುವವರಿಗೆ ಸಲ್ಲುವವು. ಲಿಂಗಧಾರಣೆ ಹಾಗೂ ಜನಿವಾರ ಎರಡನ್ನೂ ಈತ ಪಡೆದಿದ್ದಾನೆ. ತಪೋವನ ಶೈವ ಅಂದರೆ ಪೂಜೆ ಮಾಡುವುದು, ಶಪಶ್ಚರ್ಯ ಮಾಡುವುದು. ಮಾನಶೈವ ಅಂದರೆ ಪ್ರಸಾದ ಸ್ವೀಕರಿಸುವುದು, ಪಾಖಂಡಿ ಶೈವ ಅಂದರೆ ಡಂಗುರ ಹೊಡೆಯುವುದು. ನಾದಶೈವ ಅಂದರೆ ವಾದ್ಯ ನುಡಿಸುವುದು. ಗುರವರು ಪಂಚಮಠದ ಪೂಜ್ಯರು. ಗುರವರು ಶುದ್ಧ ಶೈವರೇ ಆಗಿದ್ದಾರೆ. ಇವರು ಜನಿವಾರ ಹಾಕುವುದುಂಟು. ಕ್ವಚಿತ್ತಾಗಿ ಲಿಂಗವನ್ನು ಕೆಲವರು ಹಾಕುವುದುಂಟು. ’ಗುರವ’ರಿಗೆ ದೇವಸ್ಥಾನದ ಇನಾಮು – ಉಂಬಳಿ ಜಮೀನುಗಳಿರುತ್ತವೆ.

ಬಿಜಾಪುರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ವಾಸವಾಗಿರುವ ’ಗುರವ’ರ ಜೀವನ ವಿಧಾನ ಹಾಗೂ ಸಂಸ್ಕೃತಿಯನ್ನು ಕುರಿತು ಆ ಜಿಲ್ಲೆಗಳ ಕುರಿತು ’ಗೆಜಿಟಿಯರ್’ನಲ್ಲಿ ನಮೂದಿಸಿದುದನ್ನು ಇಲ್ಲಿ ನೋಡಬಹುದು.

Guravas, also called as Jirs and Hugars, are returned as numbering 1622. One or two families are found in almost all good villages. They are the ministrants of Maruti or Hanuman, the monkey God and village guardian, who wears both the sacred thread and the ling, and is worshipped both by Bramhanic and by Lingayat Hindu’s. They speak kanarese and are very early settlers in the district like Lingayats they neither eat flesh, nor drink liquor. Atleast one family in every village holds hereditary rent free land in return for worshipping the village Maruti and lives on the produce of the land the offerings made to the God. Most Shiva temples have Gurav priests, Some are musicians who beat the sambal or tabor at Brahman, sonar and Lingayat weddings, accompanied by Korvis who blow the sanali or clarion. Though poor, the Gurav’s hold a good social position in religion they come half way between brahmanism and lingayatism, some of them wearing the sacred thread, some the ling, and some both the sacred thread and the ling. Their family divinities are Maruti, Saraswathi, Rameshwar and family ghosts who are defied to prevent them bringing fever and other sickness into a house. They honour both Brahmins and Jangamas, but do no t ask either to conduct their marriage or other ceremonies. All their ceremonies are performed by priests of their own caste. They have a guru or religious teacher who belongs to the gurav caste. Their customers differ little from sonar or Brahman customs. Those who wear the ling bury and the rest burn their dead. The teacher has great authority over his disciples, and Jir Lingayats, who are entered in the census as separate castes are the same caste”

Bombay Gazetteer, XXIII (Bijapur District) pp. 265-267.

Guravas are returned as numbering 1402 and as found chiefly in  Athani, Chikodi, and Gokak. Some serve at the shrines of the village gods and live on the villagers give them a small share of the grain. A few hold rent-free lands in return for performing the service in certain temples – Brahmanas officiate at their marriages. They allow widow marriage. They burn their dead and throw the ashes into a running stream on the third day, they offer a ball of rice to the crows on the tenth, and perform the sradha ceremony on the eleventh or twelth when they feast the caste. They do not become ascetics. They have no Gurus or religious teachers and they never go on pilgrimage”

Bombay Gazetteer, XXI (Belgaum district) pp. 106-107.

ಬಿಜಾಪೂರ-ಬೆಳಗಾವಿ  ಜಿಲ್ಲೆಗಳ ಗುರುವರ ಜೀವನ ವಿಧಾನ ಹಾಗೂ ಸಂಸ್ಕೃತಿ

ಗುರವರಿಗೆ ಜೀರರೆಂದೂ, ಹೂಗಾರರೆಂದೂ ಕರೆಯುವರು. ಪ್ರತಿಯೊಂದು ಹಳ್ಳಿಗಳಲ್ಲಿ ಈ ಸಮಾಜದವರ ಒಂದೋ ಎರಡೋ ಮನೆಗಳಿರುವವು. ಇವರು ಹಳ್ಳಿಯ ಗ್ರಾಮ ದೇವರಾದ ಹನುಮಂತನನ್ನು ಪೂಜಿಸುವರು. ಇವರು ಜನಿವಾರ ಮತ್ತು ಲಿಂಗ ಎರಡನ್ನೂ ಧರಿಸುವರು. ಕನ್ನಡ ಭಾಷೆಯನ್ನು ಮಾತಾಡುವ ಇವರು ಸಸ್ಯಹಾರಿಗಳು. ಇವರು ಮಾಂಸವನ್ನು ಮತ್ತು ಮದ್ಯವನ್ನು ಸೇವಿಸುವರು. ಪ್ರತಿಯೊಂದು ಹಳ್ಳಿಯಲ್ಲಿ ಇರುವ ಈ ಜನಾಂಗದವರು ಬಹುಕಾಲದಿಂದಲೂ ಸರ್ಕಾರದಿಂದ ಇನಾಂ ಭೂಮಿಯನ್ನು ಹೊಂದಿದ್ದು, ಈ ಹೊಲಗಳಲ್ಲಿ ಬಂದ ಉತ್ಪನ್ನ ಹಾಗೂ ಹನುಮಂತ ದೇವರ ಪೂಜೆಯನ್ನು ಮಾಡುವುದರಿಂದ ಉತ್ಪನ್ನವುಂಟು, ಇವುಗಳ ಮೇಲೆ ಉಪಜೀವನ ಸಾಗಿಸುತ್ತಿರುವರು. ಇವರು ಈಶ್ವರನನ್ನು ಪೂಜಿಸುವುದುಂಟು. ಗುರವರಲ್ಲಿ ಕೆಲವರು ಸಂಗೀತ ಕಲಾವಿದರಿದ್ದು, ಅವರು ಬ್ರಾಹ್ಮಣರ, ಲಿಂಗಾಯಿತರ ಹಾಗೂ ಪಂಚಾಳರ ಮದುವೆಗಳಲ್ಲಿ ಸನಾದಿಯನ್ನು ಊದುವ ಕೊರವರೊಂದಿಗೆ ಬೆರೆತು ಸಂಬಾಳ ಬಾರಿಸುವರು. ಗುರವರು ಬಡವರಾಗಿದ್ದರೂ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಹೊಂದಿರುವರು. ಧಾರ್ಮಿಕವಾಗಿ ಇವರ ಸ್ಥಾನ ಬ್ರಾಹ್ಮಣರಿಗೂ ಲಿಂಗಾಯತರಿಗೂ ನಡುವಿನದಾಗಿದೆ. ಇವರಲ್ಲಿ ಕೆಲವರು ಜನಿವಾರ ಧರಿಸಿದರೆ ಇನ್ನು ಕೆಲವರು ಲಿಂಗ ಧರಿಸುವರು. ಮತ್ತೆ ಕೆಲವರು ಇವೆರಡನ್ನೂ ಧರಿಸುವುದುಂಟು. ಇವರ ಕುಟುಂಬದ ದೇವರೆಂದರೆ ಹನುಮಂತ, ರಾಮೇಶ್ವರ, ಸರಸ್ವತಿ ಹಾಗೂ ಗುಡ್ಡಾಪುರದ ದಾನಮ್ಮ. ಗುರವರು ಬ್ರಾಹ್ಮಣರನ್ನು,ಜಂಗಮರನ್ನು ಗೌರವದಿಂದ ಕಾಣುತ್ತಾರಾದರೂ ತಮ್ಮ ಮನೆಯಲ್ಲಿ ನಡೆಯುವ ಮದುವೆ ಮತ್ತು ಇನ್ನಿತರ ಮಂಗಲಮಯ ಪ್ರಸಂಗಗಳಲ್ಲಿ ಧಾರ್ಮಿಕ ಆಚರಣೆಗಳನ್ನು ತಮ್ಮದೇ ಜಾತಿಯವರಾದ ಗುರುಸ್ವಾಮಿಗಳನ್ನು ಕರೆಸಿ ಅವರಿಂದ ಮಾಡಿಸಿಕೊಳ್ಳುವರು. ಇವರಿಗೆ ಇವರದೇ ಧರ್ಮಗುರುಗಳು, ಧಾರ್ಮಿಕ ಗುರುಸ್ವಾಮಿಗಳು ಇರುವರು. ಇವರೂ ಹೂಗಾರರೇ ಆಗಿರುವರು. ಇಂಥ ಗುರುಸ್ವಾಮಿಗಳ ಕುಟುಂಬಗಳು ಲೋಕಾಪುರ, ಮಂದಾಪುರ, ಶೇಗುಣಸಿ ಮುಂತಾದೆಡೆ ಇರುವರು. ಇವರ ಧಾರ್ಮಿಕ ಆಚರಣೆಗಳು ಸಂಪ್ರದಾಯಗಳು ಬ್ರಾಹ್ಮಣರಿಗಿಂತ, ಪಂಚಾಳರಿಗಿಂತ ಭಿನ್ನವಾಗಿವೆ. ಗುರವರಲ್ಲಿ ಯಾರು ಲಿಂಗ ಧರಿಸುವರೋ ಅವರು ಸತ್ತಾಗ ಅವರ ಶವವನ್ನು ಹುಗಿಯುವರು. ಇನ್ನುಳಿದವರು ಸತ್ತಾಗ ಅವರ ಶವವನ್ನು ಸುಡುವರು. ಗುರವರು, ಜೀರರು, ಹೂಗಾರರು ಇವರೆಲ್ಲರೂ ಲಿಂಗಾಯಿತರಾದರೂ ಲಿಂಗಾಯತ ಸಂಸ್ಕಾರಗಳನ್ನು ಇವರು ಅಳವಡಿಸಿಕೊಳ್ಳದೇ ತಮ್ಮದೇ ಆದ ರೀತಿಯಲ್ಲಿ ಭಿನ್ನವಾದ  ಸಂಸ್ಕಾರಗಳನ್ನು ರೂಢಿಸಿಕೊಂಡುದುಂಟು. ವೈದಿಕ ಧಾರ್ಮಿಕ ಆಚರಣೆಗಳನ್ನು ಇವರ ಆಚರಣೆಗಳು ಬಹುವಾಗಿ ಹೋಲುತ್ತವೆ.

ಬೆಳಗಾವಿ ಜಿಲ್ಲೆಯ ಅಥಣಿ, ಚಿಕ್ಕೋಡಿ ಹಾಗೂ ಗೋಕಾಕ ತಾಲ್ಲೂಕಗಳಲ್ಲಿ ಗುರವರು ಹೆಚ್ಚಾಗಿ ವಾಸವಾಗಿರುವರು. ಸಾಮಾನ್ಯವಾಗಿ ಹಳ್ಳಿಗಾಡಿನಲ್ಲಿ ವಾಸಿಸುವ ಇವರು ಹನುಮಂತ ದೇವರನ್ನು  ಪೂಜಿಸಿ ಜನರಿಂದ ದವಸ-ಧಾನ್ಯ ಪಡೆದು ಜೀವನ ಸಾಗಿಸುವರು. ಸುಗ್ಗಿಯ ಕಾಲದಲ್ಲಿ ಹಳ್ಳಿಯ ಜನತೆ ಇವರಿಗೆ ಆಯ ರೂಪದಲ್ಲಿ ಕಾಳು-ಕಡ್ಡಿ ಕೊಡುವರು. ಇವರಿಗೆ ಕೆಲಮಟ್ಟಿಗೆ ಇನಾಂ ಭೂಮಿ ಇರುವುದುಂಟು. ಇವರಲ್ಲಿ ವಿಧವಾ ವಿವಾಹವಿದೆ. ಇವರು ಮೃತದೇಹವನ್ನು ಸುಡುವರು. ಸುಟ್ಟ ಮೂರು ದಿನದ ಬಳಿಕ ಬೂದಿ  ಬಳಿದು, ಆ ಬೂದಿ ಹಾಗೂ ಎಲುಬುಗಳನ್ನು ಹರಿಯುವ ನದಿಯಲ್ಲಿ ಹಾಕುವರು. ಇವರು ಅನಂತರ ಹನ್ನೊಂದು, ಹನ್ನೆರಡು ದಿನಗಳಾದ ಮೇಲೆ ಆ ಶವವನ್ನು ಸುಟ್ಟ ಸ್ಥಳದಲ್ಲಿ ಸಣ್ಣ ಕುಡಿಕೆಯೊಂದರಲ್ಲಿ ಅನ್ನ ಬೇಯಿಸಿ, ಆ ಅನ್ನವನ್ನು ಎಲೆಯೊಂದರಲ್ಲಿ ಹಾಕಿ ಕಾಗೆಗಳಿಗೆ ತಿನ್ನಲು ಇಡುವರು. ಆ ಅನ್ನವನ್ನು ಕಾಗೆಗಳು ಬಂದು ಅನ್ನವನ್ನು ತಿನ್ನದೆ ಹೋದರೆ ಸತ್ತವರ ಆತ್ಮಪ್ರೇತವಾಗಿ ಭೂಮಿಯ ಮೇಲೆ ಸುಳಿದಾಡುವುದೆಂದೂ, ಸತ್ತವರು ಏನೇನೋ ಆಸೆ ಆಮಿಷಗಳನ್ನು ಇಟ್ಟುಕೊಂಡಿದ್ದರೆಂದೂ ಭಾವಿಸುವರು. ಇವರು ಯಾವುದೇ ಕಟ್ಟುನಿಟ್ಟಾದ ವ್ರತಗಳನ್ನು ಪಾಲಿಸುವುದಿಲ್ಲ. ಇವರಿಗೆ ಗುರುಗಳಾಗಲಿ, ಧರ್ಮ ಬೋಧಕರಾಗಲಿ ಇರುವುದಿಲ್ಲ. ಇವರು ತೀರ್ಥಕ್ಷೇತ್ರ ಯಾತ್ರೆಯನ್ನೆಂದು ಮಾಡುವುದಿಲ್ಲ.

ಈ ರೀತಿ ಬಿಜಾಪುರ ಹಾಗೂ ಬೆಳಗಾವಿ ಜಿಲ್ಲೆಗಳ ಗುರವರ ಆಚರಣೆಗಳು, ಧಾರ್ಮಿಕ ವಿಧಿ ಕ್ರಿಯೆಗಳು ವಿಶಿಷ್ಟವಾದುವಾಗಿವೆ. ಇವರ ಆಚರಣೆಗಳ ಮೇಲೆ ವೈದಿಕರ ಹಾಗೂ ವೀರಶೈವರ ಆಚರಣೆಗಳ ಪ್ರಭಾವವಾದುದರಿಂದ ಅಲ್ಪಸ್ವಲ್ಪ ಬದಲಾವಣೆಗಳೂ ಆದುದನ್ನು ಕಾಣುವೆವು. ಮೂಲತಃ ಅಲ್ಪ ಸಂಖ್ಯಾತರೂ, ಆರ್ಥಿಕವಾಗಿ ದುರ್ಬಲರೂ ಆದ ಈ ಸಮಾಜದವರು ತಮ್ಮ ಸುತ್ತಮುತ್ತಲಿರುವ ಪ್ರಬಲ ಸಮಾಜದವರೊಂದಿಗೆ ಹೊಂದಿಕೊಂಡು ಬಂದುದರಿಂದ ಇವರ ಆಚರಣೆಗಳಲ್ಲಿ ಅಂಥ ಕಟ್ಟುನಿಟ್ಟನ್ನು ಕಾಣಲಾಗುವುದಿಲ್ಲ. ಎಲ್ಲರೊಂದಿಗೆ ಬದುಕುವುದು ಮುಖ್ಯ. ಬದುಕುವುದು ಮುಖ್ಯವಾದಾಗ ಪ್ರಬಲರೊಂದಿಗೆ ಹೊಂದಿಕೊಳ್ಳಲೇಬೇಕಾಗುವುದು. ಹೀಗೆ ಹೂಗಾರರು, ಗುರವರು ತಮ್ಮ ಸುತ್ತಮುತ್ತಲಿರುವ ಪ್ರಬಲ ಜನಾಂಗದವರ ಧಾರ್ಮಿಕ ಆಚರಣೆಗಳ ಪ್ರಭಾವಕ್ಕೊಳಗಾಗಿ ತಮ್ಮ ಆಚರಣೆಗಳಲ್ಲಿ ಅಲ್ಪಸ್ವಲ್ಪ ಬದಲಾವಣೆಯನ್ನು ಮಾಡಿಕೊಂಡುದುಂಟು. ಇದು ಸಹಜವೂ ಹೌದು. ಕಾಲಧರ್ಮವೇ ಆಗಿದೆ. ಕಾಲಕ್ಕೆ ತಕ್ಕಂತೆ ಹೊಂದಿಕೊಂಡು ಹೋಗುವುದು ಸಾಮಾನ್ಯವಾಗಿದೆ. ಹೀಗೆ ಈ ಸಮಾಜದವರು ಬರಬರುತ್ತ ತಮ್ಮ ಧರ್ಮದ ವೈಶಿಷ್ಟ್ಯಗಳನ್ನು  ಅಷ್ಟಾಗಿ ಉಳಿಸಿಕೊಂಡಿಲ್ಲವೆಂಬುದನ್ನು ಕಾಣುವೆವು.

ಗುರುವರು ಹಾಗೂ ಲಿಂಗದ ಗೊರವರು ಬೇರೆ ಬೇರೆ, ಕೆಲಜನ ಈರ್ವರೂ ಒಂದೇ ಎಂದು ಭಾವಿಸಿದ್ದುಂಟು. ಗುರವರಿಗೆ ಕೆಲವರು ಗೊರವರು ಗೊರ‍್ರು, ಎಂದು ಕರೆಯುವುದೂ ಉಂಟು. ಮೈಲಾರಲಿಂಗನ ಭಕ್ತರಾದ ಗೊರವರು ಇವರಿಗಿಂತ ಭಿನ್ನರು. ಗೊರವರು ಮೈತುಂಬ ಮತ್ತು ತಲೆ ಮೇಲೆ ಕರಿ ಕಂಬಳಿ ಧರಿಸುವುದನ್ನು ಕಾಣುವೆವು. ಮೈಲಾರಲಿಂಗನ ಭಕ್ತರಾದ ಇವರಿಗೆ ಗೊಗ್ಗರೆಂದೂ ಕರೆಯುವುದುಂಟು. ಇವರಿಗೆ ಗುರವರಿಗೂ ಯಾವುದೇ ಸಂಬಂಧ ಇರುವುದಿಲ್ಲ.

’ಗುರವ’ರಿಗೆ ಕೆಲವರು ’ಕೊರವ’ ಎಂದು ಈಗಲೂ ಕರೆಯುವುದುಮಟು. ’ಗೊರವ’ ಎಂದಾಕ್ಷಣ ಈ ಒಂದು ಬಗೆಯ ಹೀನಾರ್ಥ ಬಂದಂತಾಗಿದೆ. ಆದರೆ ಈ ಪದಕ್ಕೆ ಹಿಂದೆ ತುಂಬ ಗೌರವಪೂರ್ಣವಾದ ಅರ್ಥವಿತ್ತೆಂಬುದು ಶಾಸನಗಳಿಂದ ತಿಳಿದು ಬರುವುದು. ’ಗುರು’ ಎಂಬ ಸಂಸ್ಕೃತ ಪದದ ಬಹುವಚನದ ರೂಪ ಗುರವಃ ಆಗುವುದು. ’ಗುವಃ’ ಎಂಬುದೇ ಗುರವ, ಗೊರವ ಎಂದಾಗಿದೆ. ಗುರವರು ಎಂದರೆ ’ಗುರು ಅಥವಾ ಭಗವಂತನ ಪಾದದ ಸಮೀಪದಲ್ಲಿರುವವರು’ ಎಂಬರ್ಥವಾಗುವುದು.

ಮಹಾರಾಷ್ಟ್ರ ರಾಜ್ಯದಲ್ಲೂ ಗುರವ, ಹೂಗಾರ ಸಮಾಜದವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಲ್ಲಿ ಈ ಸಮಾಜದವರು ಹಿಂದೆ ಉನ್ನತವಾದ ಸಾಮಾಜಿಕ ಸ್ಥಾನಮಾನಗಳನ್ನು ಹೊಂದಿದ್ದರೆಂಬುದಕ್ಕೆ ಅನೇಕ ನಿದರ್ಶನಗಳುಂಟು. ಅಂಥವುಗಳಲ್ಲಿ ಕೆಲವನ್ನು ಇಲ್ಲಿ ಉಲ್ಲೇಖಿಸಬಹುದು. ದಕ್ಷಿಣಕಾಶಿ ಎಂದೇ ಪ್ರಸಿದ್ಧವಾಗಿರುವ  ಪೈಠಣ ಕ್ಷೇತ್ರದ ಸೋಮೇಶ್ವರ ದೇವಾಲಯದಲ್ಲಿ ಶಿವಪೂಜೆಯನ್ನು ಮೊದಲು ಹೂಗಾರರೇ ಮಾಡಬೇಕೆಂದು, ಅವರೇ ನೈವೇದ್ಯವನ್ನು ಸ್ವೀಕರಿಸಬೇಕೆಂದೂ ಅಲ್ಲಿನ ಗೋಡೆಯ ಶಿಲೆಯೊಂದರಲ್ಲಿ ಕ್ರಿ.ಶ. ೧೦೬೨ರಲ್ಲಿ ಬರೆಸಲಾಗಿದೆ. ಕ್ರಿ.ಶ. ೧೮೩೪ರಲ್ಲಿ ಸೋಲಾಪುರದಲ್ಲಿ ಮತ್ತು ೧೮೬೯ರಲ್ಲಿ ಸತಾರಾದಲ್ಲಿರುವ ಗುರುವರನ್ನು, ಹೂಗಾರರನ್ನು ಶೈವ ಬ್ರಾಹ್ಮಣರೆಂದು ಕೋರ್ಟು ನಿರ್ಣಯ ನೀಡಿದೆ. ೧೯೩೧ರ ಜನಗಣತಿಯಲ್ಲಿ ಗುರವರು ಶೈವ ಬ್ರಾಹ್ಮಣರೆಂದೇ ಉಲ್ಲೇಖಿಸಲಾಗಿದೆ.

ಹೀಗೆ ಗುರವರು ಹೂಗಾರರು ಹಿಂದೆ ಸಾಮಾಜಿಕವಾಗಿ, ಧಾರ್ಮಿಕವಾಗಿ ಉನ್ನತ ಸ್ಥಾನಮಾನವನ್ನು ಹೊಂದಿದ್ದರೆಂಬುದು ಈ ನಿದರ್ಶನಗಳಿಂದ ತಿಳಿಯುವುದು. ಈ ಜನಾಂಗದವರು ಹೊಂದಿದ ಸ್ಥಾನಮಾನವನ್ನು ಪೂಜ್ಯ ಕಾಶೀನಾಥ ಭಗವಂತಸ್ವಾಮಿ ಗುರವ ಜೇಹಂಕರ ಅವರು ’ಸ್ಥೂಲ ಶೈವಾಗಮ’ ಗ್ರಂಥದಲ್ಲಿ ಹೀಗೆ ಬರೆದುದುಂಟು.

’ಶುದ್ಧಶೈವ ಇತಿ ಪ್ರೋಕ್ತೊ ಮಧ್ಬವಂ ಶೈವ ಮುಚ್ಚಾಲೆ
ತೇಪಿ ಶಿವ ದ್ವಿಜಾಃ ಪ್ರೋಕ್ತೊ ಮದ್ಭವಂ ಲೋಕೇ ಪೂಜಾ ಬಹಂತಿ ಹಿ
ಶೈವರೂಪ ಇದಂ ಹೂಗಾರ ಬ್ರಾಹ್ಮಣವರ್ಣಾ ಇತಿ ಶುದ್ಧ ಶೈವ ಚ
ನಾಮಾನಿ ಇದಮಂ ಶೈವ ಬ್ರಾಹ್ಮಣಂ’

ಗುರವರು ಹೂಗಾರರು ಶೈವ ಬ್ರಾಹ್ಮಣರೆಂದು ಇಲ್ಲಿ ಹೇಳಿದುದು ಗಮನಾರ್ಹವಾಗಿದೆ. ಆದರೆ ಈಗ ಆ ಸ್ಥಾನಮಾನ ಈ ಜನಾಂಗದವರಿಗೆ ಇಲ್ಲದಂತಾಗಿದೆ.

ಗುರವ, ಪೂಜಾರ, ಜೀರ್ ಮತ್ತು ಹೂಗಾರರನ್ನು ಇಂದು ಲಿಂಗಾಯಿತರಲ್ಲಿ ಒಂದು ಉಪಗುಂಪಿನವರೆಂದು ಪರಿಗಣಿಸುವುದುಂಟು. ಆದರೂ ಇವರು ಆರ್ಥಿಕ ದೃಷ್ಟಿಯಿಂದ ತುಂಬಾ ಹಿಂದೆ ಉಳಿದಿರುವುದರಿಂದ ಇವರಿಗೆ ಮೊದಲು ಇದ್ದ ಸಾಮಾಜಿಕ ಸ್ಥಾನಮಾನ ಇಂದು ಉಳಿದಿಲ್ಲ ಎನಿಸುತ್ತದೆ. ಲಿಂಗಾಯಿತರು ಇವರನ್ನು ತಮಗಿಂತ ಕಡಿಮೆ ಎಂದು ಅಳೆಯಲಾಗುತ್ತಿದೆ. ಹೂಗಾರ, ಜೀರ, ಗುರವ ಪೂಜಾರ ಸಮಾಜದವರು ಗ್ರಾಮೀಣ ಪ್ರದೇಶಗಳಲ್ಲಿಯೇ ಹೆಚ್ಚಾಗಿ ವಾಸಿಸುತ್ತಿದ್ದು, ಇವರು ಅಂಥ ಪ್ರಗತಿಯನ್ನೇನೂ ಸಾಧಿಸಿಲ್ಲ. ಊರ ಜನತೆಯ ಸೇವೆಯನ್ನು ಮಾಡಿಕೊಂಡು, ತಮ್ಮ ಹೆಸರಿನಲ್ಲಿದ್ದ ಅಲ್ಪಸ್ವಲ್ಪ ಹೊಲಗದ್ದೆಗಳನ್ನು ಉಳಿಸಿಕೊಂಡು ಜೀವನ ಸಾಗಿಸುತ್ತಿದ್ದುದನ್ನು ನಾವಿಂದು ಕಾಣುವೆವು.

೪. ಹೂಗಾರ ಮಹಿಳೆಯರಿಗೆ ಸಂಬಂಧಿಸಿದ ಸಾಂಸ್ಕೃತಿಕ ವಿವರಗಳು :

ಹೂಗಾರ ಸಮಾಜ ಕರ್ನಾಟಕದಲ್ಲಿ ತೀರ ಅತ್ಯಲ್ಪ ಸಂಖ್ಯೆಯಲ್ಲಿರುವ ಸಣ್ಣ ಸಮಾಜವಾದರೂ ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ ಒಂದು ಪರಂಪರೆಯನ್ನೇ ಹೊಂದಿರುವುದನ್ನು ನಾವು ಇತಿಹಾಸದಿಂದ ಅರಿಯುವೆವು. ಹನ್ನೆರಡನೇ ಶತಮಾನದ ಬಸವಾದಿ ಶರಣರ ಸಮಕಾಲೀನನಾದ ಹೂಗಾರ ಮಾದಣ್ಣನೆಂಬ ಶರಣನಿರುವುದನ್ನು ಕಾಣುವೆವು. ಬೆಳಗಾವಿ, ಬಿಜಾಪುರ ಹಾಗೂ ಕಲಬುರ್ಗಿ ಜಿಲ್ಲೆಗಳಲ್ಲಿ ಈ ಸಮಾಜದ ಜನ ಹೆಚ್ಚಿನ ಸಂಖ್ಯೆಯುಲ್ಲಿದ್ದು, ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇರುವುದುಂಟು. ಈ ಸಮಾಜದಲ್ಲಿ ಸ್ತ್ರೀಯರ ಪಾತ್ರ ಪುರುಷರಷ್ಟೇ ಪ್ರಮುಖವಾದುದಾಗಿದೆ.  ಶರಣ ಹೂಗಾರ ಮಾದಣ್ಣನ ಪತ್ನಿ ಮಹಾದೇವಿಯೂ ಶರಣೆಯಾಗಿದ್ದುದನ್ನು, ಕಾಯಕಯೋಗಿನಿ ಆಗಿದ್ದುದನ್ನು ನಾವು ಹಂತಿಯ ಹಾಡುಗಳಿಂದ ತಿಳಿಯುವೆವು. ಬಾಗಲಕೋಟೆ ಜಿಲ್ಲೆಯ ಕಲಾದಗಿಯಲ್ಲಿ ಶಂಕರಮ್ಮ ಎನ್ನುವವಳು ಶರಣೆಯಾಗಿ ಹೋದುದನ್ನು, ಪ್ರತಿವರ್ಷ ಆಕೆಯ ಜಾತ್ರೆಯು ನಡೆಯುವುದನ್ನು ನಾವು ಈಗಲೂ ನೋಡಬಹುದು. ಪುರುಷರ ಹೆಗಲಿಗೆ ಹೆಗಲಾಗಿ ಮಹಿಳೆಯರೂ ದೇವರ ಪೂಜೆ ಮಾಡುವುದು, ಹೂಹಾರ ಹೆಣೆಯುವುದು, ಬಾಸಿಂಗ ಹೆಣೆಯುವುದು, ಊಟದ ಪತ್ರಾವಳಿ ಎಲೆ ಹಚ್ಚುವುದು, ಗುಡಿಯಲ್ಲಿ ದೀಪ ಬೆಳಗಿಸುವುದು, ಊರಿನ ಜನಗಳ ಮನೆ ಮನೆಗೆ ಹೋಗಿ ಬಿಲ್ವಪತ್ರಿ ಕೊಡುವುದು, ಬಣದ ರೊಟ್ಟಿ (ನೈವೇದ್ಯ) ಪಡೆದು ತರುವುದು, ಭೂಮಿ-ಸೀಮೆಗಳಲ್ಲಿ ತಿರುಗಿ ಕಾಳು-ಕಡ್ಡಿ ತರುವುದು, ಈ ಎಲ್ಲ ಕೆಲಸಗಳನ್ನು ಹೂಗಾರ ಮಹಿಳೆಯರು ಮಾಡುತ್ತ ಬಂದುದನ್ನು ಕಾಣುವೆವು. ಹೂಗಾರರ ಆರ್ಥಿಕ ಸ್ಥಿತಿ-ಗತಿಗೆ ಮಹಿಳೆಯೇ ಬೆನ್ನೆಲುಬಾಗಿದ್ದಾಳೆ. ಏಕೆಂದರೆ ಊರ ಆಯಗಾರರಾದ ಇವರು ಊರ ಜನರ ಮದುವೆ – ಮುಂಜಿ, ಮೈನೆರೆದ ಕಾರ್ಯಕ್ರಮ, ಸತ್ತ ಸಂದರ್ಭ ಇನ್ನುಳಿದ ವೈವಿಧ್ಯಮಯ ಬದುಕಿನ ಘಟನಾವಳಿಗಳಲ್ಲೆಲ್ಲಾ ಹೂಗಾರ ಮಹಿಳೆಯರು ಹೂ ಪತ್ರಿ ಅವರವರ ಮನೆ ಬಾಗಿಲಿಗೇ ಒಯ್ದು ಕೊಡುವುದನ್ನು ಕಾಣುವೆವು. ಊರ ಜನತೆಯ ಸುಖ -ದುಃಖಗಳಲ್ಲಿ ಸಹಭಾಗಿತ್ವ ವಹಿಸುವ ಅವರ ಸೇವೆಯಲ್ಲಿ ತೊಡಗುವ ಪುಣ್ಯದ ಕಾರ್ಯದಲ್ಲಿ ಸದಾ ನಿರತರಾಗಿರುವುದು ಹೂಗಾರ ಮಹಿಳೆಯರಿಗೆ ಸಂತಸವನ್ನುಂಟು ಮಾಡುವ ಸಂಗತಿಯೇ ಆಗಿದೆ. ಇಂಥ ಅನೇಕಾನೇಕ ಪ್ರಸಂಗಗಳನ್ನು ಅವರು ಧನ್ಯತಾ ಭಾವನೆಯನ್ನು ಅರ್ಪಿಸುವರು.

ಹೂಗಾರ ಮಹಿಳೆಯರು ಸಾಂಸ್ಕೃತಿಕವಾಗಿ ಹಿಂದು ಹಾಗೂ ವೀರಶೈವ ಸಂಸ್ಕೃತಿಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡವರಾಗಿದ್ದಾರೆ. ಇವರು ತಮ್ಮನ್ನು ಶೈವರು ಎಂದು ಹೇಳಿಕೊಳ್ಳುವರು. ಇವರು ಶಿವನ ಆರಾಧಕರು. ’ಜೀರುರ್’ ಎಂದರೆ ಶಿವನಿಗೆ ನಾದ ಸೇವೆಯನ್ನು ಚರ್ಮವಾದ್ಯ ಮೂಲಕ ಸಮರ್ಪಿಸುವವರು. ಹಾಡುಗಾರಿಕೆ ಹಾಗೂ ಊರ ಜನತೆಯ ಸಾಂಸ್ಕೃತಿಕ ಸ್ತರದ ಸೇವೆಯನ್ನೆಲ್ಲ ಪುರುಷರು ಯಾವ ಹಿಂಜರಿಕೆಯೂ ಇಲ್ಲದೆ ಮಾಡುತ್ತಾ ಬಂದುದನ್ನು ಕಾಣುವೆವು. ಇವರು ಆರ್ಥಿಕವಾಗಿ ಬಡವರಾದರೂ, ಸಾಂಸ್ಕೃತಿಕವಾಗಿ ಧಾರ್ಮಿಕವಾಗಿ ಮೇಲ್ಮಟ್ಟದ ಜೀವನವನ್ನು ಸಾಗಿಸುತ್ತಿದ್ದಾರೆ. ಶಿವ ಹಾಗೂ ಹನುಮಂತನ ಆರಾಧಕರಾದ ಇವರು ಸಾಮಾನ್ಯವಾಗಿ ಊರ ಜನತೆಗೆಲ್ಲ ಅಚ್ಚುಮೆಚ್ಚು ಆಗಿರುತ್ತಾರೆ. ಮಹಿಳೆಯರು ಮುಗ್ಧರಾಗಿ ಮನೆ ಮೂಲೆಯಲ್ಲಿ ಕೂಡದೆ ಧೈರ್ಯದಿಂದ ಮುನ್ನುಗ್ಗಿ ವಿಧವಿಧದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದುಂಟು. ಪುರುಷರು ಸಂಬಾಳ ಹಾಗೂ ತಬಲ ವಾದ್ಯ ನುಡಿಸಿದರೆ, ಸ್ತ್ರೀಯರು ಸುಶ್ರಾವ್ಯವಾಗಿ ಮದುವೆಯ ಹಾಡುಗಳನ್ನು ಹಾಡುವುದುಂಟು. ಜನಪದ ಕಥೆಗಳಲ್ಲಂತೂ ಹೂಗಾರ  ಮುದುಕಿಯರ ಪಾತ್ರ ಒಂದೇ ಬರುತ್ತದೆ. ಜಾಣ್ಮೆ ಹಾಗೂ ಕೌಶಲ್ಯಕ್ಕೆ ಈ ಮುದುಕಿಯರು ಹೆಸರುವಾಸಿ ಎಂದು ಜನಪದರು ಅನಾದಿಕಾಲದಿಂದಲೂ ನಂಬಿಕೊಂಡು ಬಂದುದುಂಟು.

ಹೂಗಾರ ಮಹಿಳೆಯರ ಬದುಕು ಸುಖದ ಸುಪ್ಪತ್ತಿಗೆಯಿಂದೇನೂ ಕೂಡಿಲ್ಲ. ಅವರು ನಡೆದ ಬಂದ ದಾರಿ ಕಲ್ಲು ಮುಳ್ಳುಗಳಿಂದಲೇ ಕೂಡಿದಂಥದು. ಕಷ್ಟ ಸಹಿಷ್ಣುಗಳಾದ ಇವರು ಕಾಯಕ ಜೀವಿಗಳು. ಹನುಮಂತ ದೇವರ ಗುಡಿಯಲ್ಲಿಯೇ ಕೂತುಕೊಂಡು ಹೂಗಾರ ಮಹಿಳೆಯರು ದೇವರಿಗೆ ಅರ್ಪಿಸಿದ ಉತ್ತತ್ತಿ, ಅಕ್ಕಿ, ಗೋಧಿ, ಹಣ್ಣು, ಕಾಯಿ ಇತ್ಯಾದಿಗಳನ್ನೆಲ್ಲ ಬೇರ್ಪಡಿಸುತ್ತ ದಿನವೆಲ್ಲ ಈ ಕಾಯಕದಲ್ಲಿ ನಿರತರಾಗುವರು. ಇದರ ಜೊತೆಗೆ ಇವರ ಮುಖ್ಯ ಕೆಲಸವೆಂದರೆ, ದೇವರ ಗರ್ಭಗುಡಿಯಲ್ಲಿ ಹೊತ್ತಿಸಿದ ಒಳ್ಳೆಯ ನಂದಾದೀಪ ಸದಾ ಆರದಂತೆ ನೋಡಿಕೊಳ್ಳುವುದು ಮತ್ತು ಅದಕ್ಕೆ ಕಾಲಕಾಲಕ್ಕೆ ಎಣ್ಣೆಯನ್ನು ಹಾಕುತ್ತಲಿರುವುದನ್ನು ನಿರಂತರ ಮಾಡುವುದು. ಇವರ ಸಾಂಸ್ಕೃತಿಕ ಬದುಕು. ಇನ್ನುಳಿದ ವೀರಶೈವ – ಶೈವ, ಕೆಲಮಟ್ಟಿಗೆ ಬ್ರಾಹ್ಮಣರ ಹಾಗೇ ಇರುವುದನ್ನು ಗುರುತಿಸುವೆವು.

ಹೂಗಾರ ಮಹಿಳೆ ಋತುಮತಿಯಾದಾಗ ಅವಳನ್ನು ಅಸ್ಪೃಶ್ಯಳೆಂದು ಭಾವಿಸುವುದಿಲ್ಲ ಮಹಿಳೆಯ ಜೀವನದಲ್ಲಿ ಸಹಜವಾಗಿ ನಡೆಯುವ ಈ ಪ್ರಕ್ರಿಯೆಯನ್ನು ಸಂಭ್ರಮದಿಂದ ಸ್ವಾಗತಿಸುವರು. ಜೈವಿಕ ಕ್ರಿಯೆಗಳಲ್ಲಿ ಪ್ರಮುಖವಾದ ನಂತರ ಸ್ನಾನ ಮಾಡಿಸಿ ಹೊಸಬಟ್ಟೆ ಉಡಿಸಿ ಹೂಹಾರ ಹಾಕಿ ಕೂಡ್ರಿಸಿ ಸುಮಂಗಳೆಯರು ಆರತಿ ಎತ್ತುವುದರ ಮೂಲಕ ಆಚರಿಸುವರು. ಸಿಹಿ ಅಡುಗೆ ಮಾಡಿ ಬಂಧು -ಬಾಂಧವರಿಗೆ ಉಣಬಡಿಸುವುದುಂಟು. ಮೈನೆರೆದ ಹುಡುಗಿಗೆ ಮದುವೆಯಾಗಿದ್ದಲ್ಲಿ ಆಕೆಯ ಗಂಡನ ಮನೆಯವರನ್ನು ಕರೆಸುವುದುಂಟು. ಅವರ ಬಂದು ಸಂತೋಷದಲ್ಲಿ ಈ ಸಂಭ್ರಮದಲ್ಲಿ ಉಡುಗೊರೆ ಹಾಗೂ ಸಿಹಿ ಹಂಚುವುದರ ಮೂಲಕ ಆಚರಿಸುವರು. ಮುಂದೆಯೂ ಪ್ರತಿ ತಿಂಗಳು ಹುಡುಗಿ ಹೊರಗೆ ಕೂತಾಗ ಅಂದರೆ ಮುಟ್ಟಾದಾಗ ಎಲ್ಲರೊಂದಿಗೆ ಇರುವಳು. ಅಡುಗೆ ಮನೆಯಲ್ಲೂ ಹೋಗುವುದುಂಟು. ಅಡುಗೆ ಮಾಡುವುದುಂಟು. ಮುಡಚಟ್ಟು ಎನ್ನುವುದನ್ನು ಇವರು ಆಚರಿಸವರು.ಒಮ್ಮೊಮ್ಮೆ ಕೆಲ ಹೂಗಾರ ಮಹಿಳೆಯರು ತಮ್ಮ ಹೆಣ್ಣು ಮಕ್ಕಳು ಶಾಲೆಗೆ ಹೋಗುತ್ತಿದ್ದವರು ಮೈನೆರೆದ ಪ್ರಸಂಗವನ್ನು ದೊಡ್ಡ ಹಬ್ಬದೋಪಾದಿಯಲ್ಲಿ ಆಚರಿಸದೆ ಸಂಕ್ಷಿಪ್ತದಲ್ಲಿ ಮಾಡಿ ಮುಗಿಸುವುದುಂಟು. ಅದೊಂದು ಮಹಿಳೆಯರ ಬದುಕಿನಲ್ಲಿ ನಡೆಯುವ ಸಹಜ ಜೈವಿಕ ಕ್ರಿಯೆಯೆಂಬ ವೈಜ್ಞಾನಿಕ ಸತ್ಯವನ್ನು ಅವರು ಅರಿತಿದ್ದಾರೆಂಬುದನ್ನು ತಿಳಿಯಬಹುದು.

ಹೂಗಾರ ಮಹಿಳೆಯರ  ಮದುವೆಯಲ್ಲಿ ಇನ್ನಿತರರು ಕಟ್ಟಿಕೊಳ್ಳುವ ಮುತ್ತಿನ ಬಾಸಿಂಗ ಹಾಗೂ ಬೆಂಡಿನ ಬಾಸಿಂಗಗಳನ್ನು ಸಾಮಾನ್ಯವಾಗಿ ಕಟ್ಟಿಕೊಳ್ಳುವುದಿಲ್ಲ. ಏಕೆಂದರೆ ಅವನ್ನು ಇವರೇ ತಯಾರಿಸಿರುವರು. ಇವರು ತಮ್ಮ ಮದುವೆಯಲ್ಲಿ ಹೂದಂಡಿ ಕಟ್ಟಿಕೊಳ್ಳುವರು. ಪುರುಷರು ಎಲೆ ಬಾಸಿಂಗ ಕಟ್ಟಿಕೊಳ್ಳುವರು. ಇವರ ಮದುವೆ ವಿಧಾನ ತೀರ ಸರಳವಾದುದು. ಮನೆ ಮುಂದೆ ಪಂಚೆ ಕಳಸ ಹೂಡಿ ನೂಲಿನ ಎಳೆಯಿಂದ ಸುತ್ತುವರು. ಈ ಸುತ್ತನ್ನು ಹೂಗಾರ ವಧುವರರು ಐದು ಸುತ್ತು ಕೈ ಹಿಡಿದುಕೊಂಡು ಸುತ್ತಿ ಅನಂತರ ಒಳಗೆ ಕೂಡ್ರುವರು. ಬಂಧು-ಬಾಂಧವರು ಇವರ ಮೇಲೆ ನೀರು ಹೊಯ್ದು ಹೊಸ ಉಡುಗೆ ತೊಡಿಸುವರು. ಅವರು ಕೂತಲ್ಲೇ ಹೂದಂಡಿ ಎಲೆಬಾಸಿಂಗ ಕಟ್ಟುವರು. ಇವರಿಗೆ ಇವರ ಧರ್ಮದವರೇ ಆದ ಗುರುಸ್ವಾಮಿಗಳು ಇರುವರು. ಅವರು ಮಂತ್ರ ಹೇಳಿದ ನಂತರ ಅಕ್ಷತೆ ಬೀಳುವವು. ಮದುವೆ ಆದ ದಿನವೇ ಕನ್ಯೆಯನ್ನು ಗಂಡನ ಮನೆಗೆ ಕಳಿಸುವುದಿಲ್ಲ. ಕೆಲದಿನ ಬಿಟ್ಟು ಹಾಸಿಗೆ ಹೊದಿಕೆ, ಟ್ರಂಗು, ಪಲ್ಲಂಗ, ಗಾದಿ ಇತ್ಯಾದಿ ಸಾಮಾನು ಸಲಕರಣಗಳೊಂದಿಗೆ ಮದುವಣಗಿತ್ತಿಯನ್ನು ಗಂಡನ ಮನೆಗೆ ಕಳಿಸುವರು. ಆದರೆ ಈ ಆಧುನಿಕ ಯುಗದಲ್ಲಿ ಕೆಲವರು ತಂತಮ್ಮ ಅನುಕೂಲಕ್ಕೆ ತಕ್ಕಂತೆ ನಡೆದು ಕೊಳ್ಳುತ್ತಿದ್ದುದೂ ಉಂಟು. ಇವರಲ್ಲಿ ಏಕಪತ್ನಿತ್ವ ಪದ್ಧತಿ ಇದೆ. ಬಹುಪತ್ನಿತ್ವ ಪದ್ಧತಿ ಇಲ್ಲ. ಮಕ್ಕಳಾಗದೇ ಇದ್ದ ಸಂದರ್ಭದಲ್ಲಿ ಮತ್ತೊಬ್ಬಳನ್ನು ಮದುವೆಯಾಗುವುದುಂಟು. ಹೂಗಾರ ಮಹಿಳೆ ಗರ್ಭವರ್ತಿಯಾದಾಗ, ಆಕೆಗೆ ಬಯಕೆ ಹತ್ತಿದಾಗ ಆಕೆಗೆ ಇಷ್ಟವಾದ ಬಾಣ-ಬುತ್ತಿ, ತಿಂಡಿ-ತಿನಿಸುಗಳನ್ನೆಲ್ಲ ತಯಾರಿಸಿ ತಾಯಿಯಾದವಳು ಕೊಡುವಳು. ಮೂರು ತಿಂಗಳ ನಂತರ ಕುಪ್ಪಸ ಕಾರಣ ಮಾಡುವರು. ಈ ಕಾರ್ಯ ಹೆರಿಗೆಯಾಗುವವರೆಗೂ ಗ್ರಾಮೀಣ ಸಮುದಾಯದಲ್ಲಿ ನಡೆಯುವುದು. ಊರ ಜನರೆಲ್ಲ ಗರ್ಭಿಣಿಗೆ ಕುಪ್ಪಸ, ಜಂಪರ ಪೀಸ ಹಾಗೂ ಸೀರೆ ಇವನ್ನೆಲ್ಲ ಉಡುಗೊರೆಯಾಗಿ ಕೊಡುವುದಲ್ಲದೆ ಸಿಹಿ ಸಿಹಿ ತಿಂಡಿ ಮಾಡಿ ಉಣಬಡಿಸುವುದುಂಟು. ಇಂಥ ಸುಖ ಹೂಗಾರ ಮಹಿಳೆಯ ಪಾಡಿಗೆ ಪ್ರಾಪ್ತವಾಗುವುದು ಬಹುಶಃ ಇಂಥವರನ್ನೇ ಕಂಡು ಜನಪದರಲ್ಲಿ ರೈತನೊಬ್ಬ ’ಆಷಾಢ ಮಾಸದಲ್ಲಿ ಬೀಸಿ ಬೀಸಿ ಬರುವ ಗಾಳಿ ಉಂಡು ಬೇಸತ್ತು ಹೇಸಿ ನನ್ನ ಜೀವ ಹೆಣ್ಣಾಗಿ ಹುಟ್ಟಬಾರದಿತ್ತೇ’ ಎಂದು ಉದ್ಗರಿಸುವುದನ್ನಿಲ್ಲಿ ಜ್ಞಾಪಿಸಿಕೊಳ್ಳಬಹುದು.

ಹೂಗಾರ ಮಹಿಳೆಯ ಚೊಚ್ಚಲ ಹೆರಿಗೆ ತಾಯಿಯ ಮನೆಯಲ್ಲಿಯೇ ಆಕೆಯ ಕಣ್ಣರಿಕೆಯಲ್ಲಿಯೇ ನಡೆಯುವುದು. ಐದು ತಿಂಗಳಾದ ನಂತರ ಆಕೆ ಪುಟ್ಟ ಕಂದಮ್ಮನೊಂದಿಗೆ ತೊಟ್ಟಿಲು ಇತ್ಯಾದಿ ಸಾಮಾನು ಸರಂಜಾಮುಗಳೊಂದಿಗೆ ಗಂಡನ ಮನೆ ಸೇರುವುದುಂಟು. ಹೂಗಾರ ಮಹಿಳೆಯರು ಸಾಮಾನ್ಯವಾಗಿ ದೈಹಿಕವಾಗಿ ಸದೃಢರಾಗಿರುತ್ತಾರೆ. ಆದರೆ ಇವರೇನು ಮಾಂಸಾಹಾರಿಗಳಲ್ಲ, ಸಸ್ಯಾಹಾರಿಗಳೇ. ಏಕೆಂದರೆ ಇವರಿಗೆ ಊರ ಜನರೆಲ್ಲರ ಅಡುಗೆ ನೈವೇದ್ಯ ರೂಪದಲ್ಲಿ ಬರುವುದು. ಹಾಲು, ತುಪ್ಪ, ಕೊಬ್ಬರಿ, ಉತ್ಪತ್ತಿ ಮುಂತಾದವು ದೇವರಿಗೆ ಕಾಣಿಕೆ ರೂಪದಲ್ಲಿ ಬರುವುದುಂಟು. ಇದನ್ನೆಲ್ಲ ಯಥೇಚ್ಛವಾಗಿ ಸೇವಿಸಿದ ಇವರು ಸಹಜವಾಗಿಯೇ ಸದೃಢರಾಗಿರುವುದುಂಟು. ಕೆಲವರು ಇವರನ್ನು ಕಂಡು ಹೊಟ್ಟೆ ಕಿಚ್ಚು ಪಟ್ಟುಕೊಂಡು ’ಹಸಿ ಕೊಬ್ಬರಿ ಬಿಸಿ ಬಾನೆ ತಿನ್ನುವ ಹೂಗಾರರು’ ಎಂದು ಮೂದಲಿಸುವುದುಂಟು. ಇಂಥ ಮೂದಲಿಕೆಯ ಮಾತುಗಳಿಗೆ ಸೊಪ್ಪು ಹಾಕದ ಇವರು ಊರನ್ನು ಗೌರವ ರೀತಿಯಲ್ಲಿ ಕಂಡು ದೈವದ ನಡೆದುಕೊಳ್ಳುವವರು. ಪ್ರತಿಯೊಂದು ಮಂಗಳಮಯ ಕಾರ್ಯಕ್ರಮಗಳಿಗೂ ಹೂಗಾರ ಮಹಿಳೆಯರು ಬೇಕೇಬೇಕು. ಇವರ ಮೂಲಕವೇ ಮಂಗಳಮಯ ಕಾರ್ಯಗಳು ಜರುಗುವವು. ಹೀಗಾಗಿ ಗ್ರಾಮೀಣ ಸಮುದಾಯದಲ್ಲಿ ಹೂಗಾರ ಮಹಿಳೆಗಿರುವ ಸ್ಥಾನ ಅತ್ಯಂತ ಮೇಲ್ಮಟ್ಟದ್ದಾಗಿದೆ. ಅವರು ಶ್ರೀಮಂತರಿಲ್ಲದೇ ಇರಬಹುದು. ಆದರೆ ಅವರು ಸಾಂಸ್ಕೃತಿಕ ಶ್ರೀಮಂತಿಕೆಯ ವಾರಸುದಾರರಂತೆ ನಡೆದುಕೊಳ್ಳುವುದುಂಟು.

ಹೂಗಾರ ಮಹಿಳೆಯರ ಗಂಡಂದಿರು ತೀರಿಕೊಂಡರೆ ಅವರು ಪುನಃ ವಿವಾಹವಾಗುವುದುಂಟು. ಇದಕ್ಕೆ ಉಡಕಿ ಹಾಗೂ ಕೂಡಿಕೆ ಅನ್ನುವುದುಂಟು. ಬ್ರಾಹ್ಮಣ ಹಾಗೂ ಜಂಗಮರಲ್ಲಿ ವಿಧವಾ ವಿವಾಹವು ನಿಷಿದ್ಧವಾಗಿದೆ. ಅಂದರೆ ಹೂಗಾರರಲ್ಲಿ ಹೀಗಿಲ್ಲ. ಹೂಗಾರ ವಿಧವೆ ಹೂಗಾರ ವಿಧುರನೊಮದಿಗೆ ಪುನಃ ವಿವಾಹ ಮಾಡಿಕೊಳ್ಳುವುದುಂಟು. ಸಾಮಾನ್ಯವಾಗಿ ಹೂಗಾರ ವಿಧವೆಯರನ್ನು ಮದುವೆಯಾದ ಹೂಗಾರ ಗಂಡು ಪುನಃ ವಿವಾಹವಾಗುವುದಿಲ್ಲ. ಒಂದು ವೇಳೆ ವಿವಾಹವಾದರೆ ಅಂಥವರ ಕುಲ (ಜಾತಿ) ಎಳಗುಲವಾಗುತ್ತದೆ ಎನ್ನುವರು. ಹೂಗಾರ ವಿಧುರರು ಮಾತ್ರ ಹೂಗಾರ ಕನ್ಯೆಯರನ್ನು (ಮದುವೆಯಾಗದೇ ಇರುವವರನ್ನು) ಮದುವೆ ಆಗುವರು. ಇದೊಂದು ಬಗೆಯ ಸ್ತ್ರೀ ಶೋಷಣೆಯೇ ಸರಿ. ಏಕೆಂದರೆ ಬಡ ಹೂಗಾರರು ತಮ್ಮ ಹೆಣ್ಣು ಮಕ್ಕಳಿಗೆ ವರದಕ್ಷಿಣೆ ಕೊಡಲಿಕ್ಕೆ ಆಗದ ಸಂದರ್ಭದಲ್ಲಿ ಹೀಗೆ ಮಾಡುವರು. ಬಹುಶಃ ಇದು ಎಲ್ಲ ಸಮಾಜದವರಿಗೆ ಅನ್ವಯವಾಗುತ್ತದೆ.

ಮಹಿಳಾ ಶೋಷಣೆ ಕೇವಲ ಹೂಗಾರರಿಗಷ್ಟೇ ಸೀಮಿತವಾಗಿಲ್ಲ. ಆದರೂ ಬರಬರುತ್ತ ಹೂಗಾರರಲ್ಲಿ ಇದೀಗ ಮಹಿಳಾ ಶೋಷಣೆ ಕಡಿಮೆ ಆಗಿದೆ. ಹೂಗಾರ ಮಹಿಳೆಯೂ ದಿಟ್ಟಳಾಗಿ ವಿದ್ಯೆ ಕಲಿತು ವಿಧವಿಧ ಸ್ಥಾನಗಳನ್ನು ಅಲಂಕರಿಸಿದ್ದಾಳೆ. ಆರ್ಥಿಕವಾದ ಸ್ವಾತಂತ್ರ‍್ಯ ಅವಳಿಗೆ ಬಂದಿರುವುದರಿಂದ ಅವಳು ಎಂದಿಗಿಂತ ಇಂದು ಸ್ವತಂತ್ರ ಜೀವನ ನಡೆಸುತ್ತಿರುವುದು ಹೂಗಾರ ಮಹಿಳಾ ಮಣಿಗಳಿಗೆಲ್ಲಾ ಶುಭದ ಸಂಕೇತವಾಗಿದೆಯೆಂದೇ ಭಾವಿಸಬೇಕು.

ಹೂಗಾರ ಮಹಿಳೆಯರು ಕುಶಲಕಲೆಯಲ್ಲಿ ಗುಡಿ ಕೈಗಾರಿಕೆಗಳಲ್ಲಿ ಹೂಹಾರ ಹೆಣೆಯುವಲ್ಲಿ, ತೀವ್ರತರವಾಗಿ ತನ್ನನ್ನು ತೊಡಗಿಸಿಕೊಂಡಿದ್ದಾಳೆ. ಊಟದ ಎಲೆ ಹಚ್ಚುವಲ್ಲಿ ಅಂದರೆ ಎಲೆಗಳಿಂದ  ಪ್ಲೇಟು ತಯಾರಿಸುವಲ್ಲಿ ಹೂಗಾರ ಮಹಿಳೆಯರ ಪಾತ್ರ ಪ್ರಮುಖವಾದುದಾಗಿದೆ. ಸಾವಿರಾರು ಮಂದಿ ಊಟ ಮಾಡುವ ಸಂದರ್ಭದಲ್ಲಿ ಇಂಥ ಎಲೆಗಳನ್ನೇ ತಾಟುಗಳಂತೆ ಬಳಸುವುದನ್ನು ಕಾಣುವೆವು.