೫.೩. ಹೊಗಳುವುದು :

ಪೂಜಾರರು ಸೇವಾಮನೋಭಾವದವರು, ಪ್ರಾಮಾಣಿಕರು. ಅವರು ಯಾರನ್ನೂ ಇದಿರು ಹಾಕಿಕೊಳ್ಳರು. ಅವರಿಗೆ ಊರ ಎಲ್ಲ ಜಾತಿಯ ಜನರೂ ಬೇಕು. ಊರ ಎಲ್ಲ ಭಕ್ತಾದಿಗಳಿಂದಲೇ ಅವರ ಜೀವನ ಸಾಗುವುದು. ಪ್ರತಿ ಶನಿವಾರ ಸಂಜೆ ಹನುಮಂತ ದೇವರ ಪಲ್ಲಕ್ಕಿ ಉತ್ಸವ ನಡೆಯುವುದು. ಈ ಉತ್ಸವಕ್ಕೆ ಊರಿನ ಜನರೆಲ್ಲರೂ ಸೇರುವುದುಂಟು. ಪೂಜಾರಿಗಳು ಈ ಸಂದರ್ಭದಲ್ಲಿ ಊರಿನ ಜನರ ಅದರಲ್ಲೂ ಗೌಡರ ಶ್ರೀಮಂತರ ಗುಣಗಾನ ಮಾಡುವುದುಂಟು, ಅವರನ್ನು ಹೊಗಳುವುದುಂಟು. ಹೊಗಳಿಕೆಗೆ ಪ್ರತಿಯಾಗಿ ಅವರಿಂದ ಕಾಣಿಕೆಯ ರೂಪದಲ್ಲಿ ಹಣವನ್ನು ಪಡೆದುಕೊಳ್ಳುವರು. ಪೂಜಾರರು ದೇವಾಲಯದಲ್ಲಿ ನಿಂತುಕೊಂಡು ಭಕ್ತರಿಂದ ದುಡ್ಡು ಪಡೆದು ಅವರನ್ನು ಹೊಗಳುವುದನ್ನು ನಾವು ಇಂದಿಗೂ ಕೆಲ ದೇವಾಲಯಗಳಲ್ಲಿ ಕಾಣುವುದುಂಟು. ಮದುವೆಯಾದಾಗ, ಹಾಗೂ ಒಳ್ಳೆಯದಾದಾಗ ಭಕ್ತಾದಿಗಳು ಗುಡಿಗೆ ಬಂದು ಪೂಜಾರಿಗಳಿಗೆ ದುಡ್ಡು ಕೊಟ್ಟು ಹೊಗಳಿಸಿಕೊಳ್ಳುವುದುಂಟು. ಪೂಜಾರಿಗಳಿಗೆ ವಧುವಿನ ಪಕ್ಷದವರು ಹಣಕೊಟ್ಟಾಗ ವಧುವಿನ ಹೆಗ್ಗಳಿಕೆಯನ್ನು, ವರನ ಕಡೆಯವರು ದುಡ್ಡು ಕೊಟ್ಟಾಗ ವರನ ಹೆಗ್ಗಳಿಕೆಯನ್ನು ಹೊಗಳುವುದುಂಟು. ಅಂಥ ಹೊಗಳಿಕೆಯ ಕೆಲ ನುಡಿಗಳನ್ನಿಲ್ಲಿ ಉದಾಹರಿಸಬಹುದು.

೧.     ಓಹೋಹೊ….
ಒಕ್ಕಳು ಮಗನಿಲ್ಲದ ಊರು ಇಲ್ಲ
ಪಕ್ಷಿ ಇಲ್ಲದ ವನಂತರ ವನಂತರವಿಲ್ಲ
ಹಕ್ಕಿ ಪಕ್ಕನೇ ಹೊಡೆದು
ಮುಂಗಾರು ಮಿಂಚಿನಂತೆ ಶೃಂಗಾರದ ಎರಡು ಎತ್ತುಗಳನೇ ತಂದು
ಆಯಗಾರನ ಕರೆಯಿಸಿ
ಅರಸನ ಪಾದವನೇ ತೆಗೆದು
ಗಂಗಿಗೌರಿ ಎಂಬ ಎರಡು ಅಗೇವುಗಳನೇ ಹಾಕಿ
ಮಾರಿದರೆ ಪಾಕಿ, ಜನರೆಲ್ಲ ಸಾಕಿ
ಹಾಸಿನ್ನಾರೇನಾರು
ಜೋಳದ ಬೇರು ಬೇರು
ಅಂಕುಡೊಂಕು
ಟೊಂಕದಲ್ಲಿ ಕಠಾರಿ
ಅವರ ತಂದೆ
ಈರಮ್ಮನವರಾರ್ತನೋ
ಅವರ ತಾಯಿ
ಈರಮ್ಮನವರಾರ್ತನೋ
ತಂದೆಲ್ಲಿ ಹತ್ತೊ
ತಾಯಲ್ಲಿ ಹನ್ನೊಂದೋ
ಹೊನ್ನು ಒಕ್ಕಳು ಮಗ ದೇವೇಂದ್ರ
ಬಲ ಬಲ ಬಲ ಬಲ ಬಲ

೨.      ಓಹೋಹೊ
ಮೊಣಕಾಲು ಕಂಬನೇ ಮಾಡಿ
ನಡುವೆ ಜಂತ್ರನೇ ಮಾಡಿ
ಹೊಟ್ಟೆ ತಿದಿನೇ ಮಾಡಿ
ಬೆನ್ನು ಬ್ಯಾತಾಳನೇ ಮಾಡಿ
ಕೈ ಪೂಜಾರಿನೇ ಮಾಡಿ
ಬಾಯಿ ಬಾಗಿಲನೇ ಮಾಡಿ
ಕಿವಿ ಕರ್ಣಕುಂಡಲನೇ ಮಾಡಿ
ಮೂಗು ಮೂಗಸ್ಥಲನೇ ಮಾಡಿ
ಕಣ್ಣು ದೀಪಾರಾಧನೇ ಮಾಡಿ
ತಲೆ ಚಕ್ರನೇ ಮಾಡಿ
ಪಾದ ಜಂಗಮನೇ ಮಾಡಿ
ಅವರ ಮುತ್ಯ ಮೂರ್ತರ
ಅವನ ಅಜ ಆರ್ತರ
ಅವರ ತಂದೆ
ಶಿವಪ್ಪನವರಾರ್ತನೋ
ಅವರ ಮಗ ಗಣಪತಿ
ವ್ಯಾಪಾರ ಮದಲಿಂಗ
ಬಲ ಬಲ ಬಲ ಬಲ ಬಲ

೩.      ಓಹೋಹೊ
ಬಲೇ ಬಾದಲ್ರಿ ಬಂಡಿ
ನಮ್ಮನಿಯೊಳಗಿರೋದು ಜವಳೀ ಪೆಂಡಿ
ಪಾವು ಅಕ್ಕೀನೇ ಕೊಂಡೆ
ಮಾಡಿಕೊಂಡು ಉಂಡೆ
ಶ್ರೀ ಹಂಪಿ ವಿರುಪಾಕ್ಷನ ಪಾದನೇ ಕಂಡೆರ
ಮೊದಲಗಿತ್ತಿ ಸರಸ್ವತಿಯ
ಅಜ್ಜ ಆರ್ತರ
ಮುತ್ಯ ಆರ್ತರ
ತಂದೆಲ್ಲಿ ಹತ್ತೊ
ತಾಯಲ್ಲಿ ಹನ್ನೊಂದು
ಅವರ ತಂದೆ
ಬಸಪ್ಪನವರಾರ್ತನೋ
ಅವರ ತಾಯಿ ನೀಲಮ್ಮನವರಾರ್ತನೋ
ಮೊದಲಗಿತ್ತಿಯ ತುಟಿಯಸಳ ಕಾಯಿ
ಹಲ್ಲು ದಾಳಂಬ್ರಿ ಬೀಜ
ಮುಖ ಪೂರ್ಣಚಂದ್ರ
ನಕ್ಕರೆ ಪಿಕದಂತೆ
ನಡೆದರೆ ನವಿಲದಂತೆ
ನುಡಿದರೆ ಗಿಳಿಯಂತೆ
ಕೀರ್ತಿ ಸೂರ್ಯನ ತೇಜಪುಂಜದಂತೆ
ಮೊದಲಗಿತ್ತಿ ಬಲ ಬಲ ಬಲ ಬಲ ಬಲ.

ಈ ರೀತಿ ವರ ಹಾಗೂ ವಧುಗಳ ವರ್ಣನೆಯನ್ನು ಅವರು ಮದುವೆಯಾದ ಹೊಸತರಲ್ಲಿ ಪೂಜಾರಿ ಮಾಡುವುದು, ಹೊಗಳುವುದು ಉತ್ತರ ಕರ್ನಾಟಕದ ಕೆಲವು ಹನುಮಂತ ದೇವರ ಗುಡಿಗಳಲ್ಲಿ ಸಾಮಾನ್ಯವಾಗಿದೆ. ಆದರೆ ಇಂಥ ಹೊಗಳಿಕೆಗಳು ಈಗ ಬರಬರುತ್ತ ಕಡಿಮೆಯಾಗಿವೆ. ಇಂಥ ಹೊಗಳಿಕೆ ಇಂದು ಯಾಂತ್ರಿಕವಾಗುತ್ತಿದೆ. ಆಧುನಿಕತೆಯ ಪ್ರಭಾವ ಪ್ರೇರಣೆಯಿಂದಾಗಿ ಇಂಥ ಹೊಗಳಿಕೆಗಳಿಗೆ ಜನ ಬೆಂಬಲ ನೀಡುತ್ತಿಲ್ಲ. ಪೂಜಾರಿಗಳೂ ಈ ರೀತಿಯ ಹೊಗಳಿಕೆಗಳನ್ನು ಹೇಳಲು ಅಷ್ಟಾಗಿ ಮುಂದೆ ಬರುತ್ತಿಲ್ಲ. ಕಾಲಕ್ರಮೇಣ ಇಂಥ ಪದ್ಧತಿಗಳು ಕಡಿಮೆಯಾಗುತ್ತ ನಡೆದಿವೆ.

೫.೪. ಡಂಗುರವ ಹೊಡೆಯುವುದು :

ಪೂಜಾರಿಗಳು ಇಂದಿಗೂ ಉತ್ತರ ಕರ್ನಾಟಕ ಬಹುತೇಕ ಹಳ್ಳಿಗಳಲ್ಲಿ ಡಂಗುರ ಹೊಡೆಯುವುದುಂಟು. ಡಂಗುರ ಹೊಡೆಯುವ ಕಾಯಕ ಹನುಮಂತ ದೇವರ ಪೂಜಾರಿಗಳದೇ ಆಗಿದೆ. ಏಕೆಂದರೆ ಇವರಿಗೆ ಸರ್ಕಾರ ಇನಾಂ ಭೂಮಿಯನ್ನು ನೀಡಿತ್ತು. ಆ ಇನಾಂ ಭೂಮಿಗಳನ್ನು ಇವರು ಉಪಭೋಗಿಸುತ್ತಿದ್ದರು. ಆದರೆ ಇತ್ತಿತ್ತಲಾಗಿ ಆ ಇನಾಂ ಭೂಮಿ ರದ್ದಾಗಿವೆ. ಇನಾಂ ಭೂಮಿಗಳಿಗೆ ಪಟ್ಟಾ (ಹಣ) ತುಂಬಿ ಪೂಜಾರಿಗಳು ತಮ್ಮ ಹೆಸರುಗಳಲ್ಲಿ ಆ ಭೂಮಿಗಳನ್ನು ನೋಂದಣಿ ಮಾಡಿಸಿಕೊಂಡಿದ್ದಾರೆ. ಉಳಿದ ಒಕ್ಕಲಿಗರಂತೆಯೇ ಪೂಜಾರರು ಇಂದು ಭೂಮಾಲೀಕರಾಗಿ ಕೃಷಿ ಕಾಯಕದಲ್ಲಿ ತೊಡಗಿರುವರು. ಆದರೂ ಇವರು ತಾವು ಸಾಂಪ್ರದಾಯಿಕವಾಗಿ ದೇವರ ಪೂಜೆ ಸೇವೆ ಹಾಗೂ ಇನ್ನಿತರ ಕರ್ತವ್ಯಗಳಿಗೆ ಚ್ಯುತಿ ಬಾರದಂತೆ ಮಾಡಿಕೊಂಡು ಬಂದಿರುವರು. ಅಂಥವುಗಳಲ್ಲಿ ಡಂಗುರ ಸಾರುವುದೂ ಒಂದು. ಸರಕಾರದ ಸುದ್ದಿಯನ್ನು ಹಾಗೂ ಊರಿನ ಸಮಾಜದ ಯಾವುದೋ ಸುದ್ದಿಯನ್ನು ಜನತೆಗೆ ತಲುಪಿಸಲು ಪೂಜಾರಿಗಳು, ಊರೊಳಗೆ ಅಡ್ಡಾಡಿ ಚೌಪಥ ಸ್ಥಳಗಳಲ್ಲಿ ನಿಂತುಕೊಂಡು ಡಂಗುರ ಹೊಡೆಯುವರು. ’ಕೇಳ್ರಪ್ಪೋ, ಕೇಳ್ರಿ ಹೇಳಲಿಲ್ಲಂದ್ರಿ, ಕೇಳಲಿಲ್ಲಂದ್ರಿ – ನಾಳೆ ಊರಿಗೆ ತಲಾಠಿ ಬರತಾರ ಎಲ್ಲರೂ ಹೊಲಪಾಣಿ ಮನಿಪಾಣಿ ಕಟ್ಟಬೇಕಂತ್ರಪ್ಪೋ – ಎನ್ನುತ ಡಣ ! ಡಣ ! ಎಂದು ಡಂಗುರ ಹೊಡೆಯುವನು. ಜನ ಪೂಜಾರಿಯ ಹತ್ತಿರ ಬಂದು ಏನು ಸುದ್ದಿ ಎಂದು ಕೇಳುವುದೂ ಉಂಟು. ಕೆಲ ಸಣ್ಣ ಹುಡುಗರು ಕುತೂಹಲಕ್ಕೆಂದು ಆತನ ಬೆನ್ನು ಹತ್ತುವುದೂ ಉಂಟು. ಊರೆಲ್ಲ ಡಂಗುರ ಸಾರಿದ ಪೂಜಾರಿ ತನ್ನ ಈ ಕೆಲಸಕ್ಕೆ ಊರ ಗೌಡರಿಂದ ಕುಲಕರ್ಣಿಗಳಿಂದ ತುಸು ಸಂಭಾವನೆಯನ್ನು ಪಡೆಯುವನು. ಪೂಜಾರಿಯು ಅವರು ಕೊಟ್ಟಷ್ಟು ಸಂಭಾವನೆಯನ್ನು ಸ್ವೀಕರಿಸಿ ತೃಪ್ತನಾಗುವನು. ಆತನಿಗೆ ಈ ರೀತಿ ಡಂಗುರವ ಹೊಡೆಯುವಲ್ಲಿ ಯಾವ ಕೀಳರಿಮೆಯೂ ಬಾರದು. ಯಾಕೆಂದರೆ ಆತ ಸಾಮಾನ್ಯವಾಗಿ ಅವಿದ್ಯಾವಂತನಿರುವನು. ಆದರೆ ಇಂದು ವಿದ್ಯಾವಂತ ಪೂಜಾರಿಗಳು ಈ ಕಾರ್ಯ ಮಾಡಲು ಹಿಂದೇಟು ಹಾಕುವರು. ಕೆಲವೆಡೆ ಪೂಜಾರರು ಇಂದು ಈ ಕಾರ್ಯವನ್ನು ಕೈ ಬಿಟ್ಟಿದ್ದರಿಂದ ತಳವಾರರಿಗೆ ಓಲೆಕಾರರಿಗೆ ಈ ಕೆಲಸ ಹಚ್ಚಿರುವುದನ್ನು ಕಾಣುವೆವು.

೫.೫. ಚರ್ಮವಾದ್ಯ ಹಾಗೂ ಇನ್ನಿತರ ನುಡಿಸುವುದು :

ಹನುಮಂತ ದೇವರ ಪೂಜಾ ಸಮಯದಲ್ಲಿ, ಮದುವೆಯಂಥ ಮಂಗಳ ಕಾರ್ಯಗಳಲ್ಲಿ ಹಾಗೂ ಯಾರಾದರೂ ಸತ್ತಾಗ ಈ ಸಮಾಜದವರು ಚರ್ಮವಾದ್ಯಗಳನ್ನು ಬಾರಿಸುವುದುಂಟು. ಚರ್ಮವಾದ್ಯ ಬಾರಿಸುವುದರಿಂದ ಇವರಿಗೆ ಜೀರರೆಂದು ಕರೆಯುವರೆಂಬ ನಂಬಿಕೆ ಇದೆ. ಹೂಗಾರ, ಜೀರ, ಗುರವ, ಪೂಜಾರ ಎಂದೆಲ್ಲ ಕರೆಸಿಕೊಳ್ಳುತ್ತಿರುವ ಇವರೆಲ್ಲರೂ ಸಾಮಾನ್ಯವಾಗಿ ಸಂಬಾಳ, ದಮ್ಮಡಿ, ತಬಲಾ ಇತ್ಯಾದಿ ವಾದ್ಯಗಳನ್ನು ಬಾರಿಸುವರು. ಚರ್ಮವಾದ್ಯಗಳನ್ನು ಬಾರಿಸುವಲ್ಲಿ ಇವರು ನಿಸ್ಸೀಮರು, ಕಲಾಕಾರರೂ, ಸಂಗೀತಕಾರರೂ ಆದ ಇವರು ಹುಟ್ಟು ಪ್ರತಿಭಾನ್ವಿತರು. ಸಂಬಾಳ, ಸಂಪ್ರದಾನಿ, ಕರಡಿ ಮೃದಂಗ, ತಬಲಾ ತಪ್ಪಡಿ (ದಮ್ಮಡಿ) ಮೊದಲಾದ ಚರ್ಮ ವಾದ್ಯಗಳನ್ನು ಬಾರಿಸುವಲ್ಲಿ ಈ ಜನಾಂಗದವರು ಜನ್ಮಜಾತ ಸಿದ್ಧಿ ಪಡೆದಿರುವರು. ಅಲ್ಲಮಪ್ರಭುಗಳೂ ಮದ್ದಳೆಯನ್ನು ಬಾರಿಸುವಲ್ಲಿ ನಿಸ್ಸೀಮರಾಗಿದ್ದರು. ಅವರು ದೇವಾಲಯದ ಆಸುಪಾಸಿನಲ್ಲಿ ವಾಸವಾಗಿದ್ದ ನಟುವರ ಜಾತಿಗೆ ಸೇರಿದವರೆಂಬುದು ವಿದಿತವಾಗುವುದು. ನಟುವರ ಎಂದರೆ ಹೂಗಾರರೇ ಆಗಿದ್ದಾರೆ. ಆದ್ದರಿಂದ ಅಲ್ಲಮ ಪ್ರಭುಗಳೂ ಹೂಗಾರರೇ ಆಗಿದ್ದಾರೆಂದು ತಿಳಿಯಬಹುದು. ಹರಿಹರನ ಪ್ರಭುದೇವರ ರಗಳೆಯಲ್ಲಿ ಈ ಮಾತಿಗೆ ಸಾಕ್ಷ್ಯ ದೊರೆಯುವುದು. ಮೂಲತಃ ಕಲಾ ಪ್ರೌಢಿಮೆಯುಳ್ಳ ಅಲ್ಲಮಪ್ರಭು ಈ ಜನಾಂಗದವರೇ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದಾಗಿದೆ. ಸಂಬಾಳವನ್ನು ಮೊದಮೊದಲು ಪೂಜಾರರು, ಜೀರರು ದೇವರ ಪೂಜಾ ಸಮಯದಲ್ಲಿ ಬಾರಿಸುತ್ತಿದ್ದಿರಬೇಕು. ನಾದಸೇವೆಯೂ ಭಕ್ತಿಯ ಪರಿಗಳಲ್ಲೊಂದು. ಪರಮಾತ್ಮನಿಗೆ ನಾದದ ಮೂಲಕ ನೈವೇದ್ಯ ಸಲ್ಲಿಸುವುದೂ ಭಕ್ತಿಯ ಒಂದು ವಿಧದ ಕಾಯಕವನ್ನಾಗಿಸಿಕೊಂಡರು. ವಿಶೇಷವಾಗಿ ಬಾಗಲಕೋಟೆ ಹಾಗೂ ಬಿಜಾಪುರ ಜಿಲ್ಲೆಗಳಲ್ಲಿ ಮದುವೆ ಇನ್ನಿತರ ಮಂಗಲಮಯ ಸಂದರ್ಭಗಳಲ್ಲಿ ದೇವರ ಉತ್ಸವ, ಕಾರ್ತೀಕ ಮುಂತಾದ ಸಂದರ್ಭಗಳಲ್ಲಿ ಕರಡಿ ಮಜಲು ವಾದನವನ್ನು ಮಾಡುವುದುಂಟು. ಈ ವಾದ್ಯಮೇಳದಲ್ಲಿ ವಿಶೇಷವಾಗಿ ಹೂಗಾರರು ಸಂಬಾಳ (ಸಮಾಳ) ಎಂಬ ಚರ್ಮದ ವಾದ್ಯವನ್ನು ಬಾರಿಸುವುದುಂಟು. ಭಜನಾ ಸಂದರ್ಭಗಳಲ್ಲಿ ಈ ಜನಾಂಗದವರು ದಮ್ಮಡಿ, ತಪ್ಪಡಿಗಳನ್ನು ಬಾರಿಸಿದರೆ, ದೊಡ್ಡಾಟದ ಸಂದರ್ಭಗಳಲ್ಲಿ ಈ ಜನಾಂಗದವರು ಮೃದಂಗ, ಮದ್ಲಿ ಹಾಗೂ ಡೋಲುಗಳನ್ನು ಬಾರಿಸುವರು.  ಉತ್ಸವ ಸಮಾರಂಭಗಳಲ್ಲಿ ಕರಡಿ, ಸಂಪ್ರದಾನಿ ಸಮಾಳ, ನಾಟಕದಲ್ಲಿ ತಬಲಾ ಪಿಯಾನೊ ಮೊದಲಾದವನ್ನೂ ಬಾರಿಸುವರು. ಇಂಥ ಕಾರ್ಯಗಳಲ್ಲಿ ಮೊದಲೇ ಕರಾರು ಮಾಡಿಕೊಂಡ ಪ್ರಕಾರ ಸಂಭಾವನೆಯನ್ನು ಪಡೆಯುವರು. ಸದಾಶಿವ ಹೂಗಾರ, ಬನಹಟ್ಟಿ ಇವರು ಸಂಬಾಳ ಬಾರಿಸುವಲ್ಲಿ ನಿಸ್ಸೀಮರು. ಇವರು ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಸಂಬಾಳ ವಾದನಕ್ಕಾಗಿ ಪಡೆದುಕೊಂಡು ಶ್ರೇಷ್ಠ ಕಲಾಕಾರರೆನಿಸಿದ್ದಾರೆ. ಎಪ್ಪತ್ತರ ಇಳಿವಯಸ್ಸಿನಲ್ಲೂ ಈಗಲೂ ಇವರು ಸಂಬಾಳ ಬಾರಿಸುವರು. ಇವರಿಗೆ ಸಿಕ್ಕಷ್ಟು ಪ್ರಶಸ್ತಿಗಳು ಇನ್ನಾವ ಹೂಗಾರರಿಗೂ ಸಿಕ್ಕಿಲ್ಲ. ಇದು ಅತ್ಯಂತ ಹೆಮ್ಮೆಯ ಸಂಗತಿ ಹಾಗೆಯೇ ನಂದವಾಡಿಗಿಯ ಶ್ರೀ ಸಂಗನಬಸಪ್ಪ ಹೂಗಾರ ಎಂಬುವವರು ಎರಡೂ ಕೈಗಳಿಗೆ ಧಡೇ ತೂಕದ ಕಲ್ಲುಕಟ್ಟಿಕೊಂಡು ಜನ ಹುಚ್ಚೆದ್ದು ಕುಣಿಯುವ ಹಾಗೆ ಮದ್ದಳೆ ಬಾರಿಸುತ್ತಿದ್ದರಂತೆ.  ಈ ಜನಾಂಗದ ಇನ್ನೊಂದು ಪ್ರಮುಖ ವೈಶಿಷ್ಟ್ಯವೆಂದರೆ ಊರಲ್ಲಿ ಯಾರಾದರೂ ಸತ್ತಾಗ ಅವರ ಶವವನ್ನು ಸ್ಮಶಾನಕ್ಕೆ ಸಾಗಿಸುತ್ತಿದ್ದಾಗ ಕೊರವರೊಂದಿಗೆ ಜೊತೆಗೂಡಿ ಸಂಬಾಳ ಬಾರಿಸುತ್ತ ಹೋಗುವುದನ್ನು ಕಾಣುವೆವು. ಕೊರವರು ಶಹನಾಯಿ ಊದಿದರೆ, ಇವರು ಸಂಬಾಳ ಬಾರಿಸುವರು. ಇಲ್ಲಿ ಹೂಗಾರರು, ಜೀರರು ತಾವು ಕೀಳೆಂದು ಗಣಿಸುವುದಿಲ್ಲ. ಇದೊಂದು ಬಗೆಯ ವೃತ್ತಿ. ಕಲಾಸೇವೆ, ಸಮಾಜದ ಋಣವೆಂದು ಬಗೆಯುವರು. ಕೆಲವರು ಹೂಗಾರ, ಜೀರರು ಕೊರವರೊಂದಿಗೆ ಜೊತೆಗೂಡಿ ಬಾರಿಸುವುದು ಸಾಮಾಜಿಕ ದೃಷ್ಟಿಯಿಂದ ಕೀಳು, ಸರಿಯಿಲ್ಲವೆಂದು ತಿಳಿಯುವರು. ಆದರೆ ಹೂಗಾರರು, ಜೀರರು, ಸಮಾಜದ ಎಲ್ಲ ಜನತೆಯೊಂದಿಗೆ ಸಮರಸದಿಂದ, ಸೇವಾ ಮನೋಭಾವನೆಯಿಂದ ನಿರ್ಗವಿಗಳಾಗಿ ಬದುಕಿ ಬಂದವರೆಂದು ತಿಳಿಯಬೇಕು. ಅವರಲ್ಲಿ ಕೀಳರಿಮೆ ಎನಿತೂ ಇರದಿರುವುದು ವಿಶೇಷವಾಗಿದೆ. ಮೂಲತಃ ಪ್ರತಿಭಾಶಾಲಿ ಕಲಾವಿದರಲ್ಲಿ ಇಂಥ ತಾರತಮ್ಯ ಇರದು. ಇದಕ್ಕೆ ಈ ಜನಾಂಗವೇ ಸಾಕ್ಷಿಯಾಗಿದೆ.

ಈಗಲೂ ಯಾವುದೇ ದೇವಾಲಯಗಳಲ್ಲಿ ಪೂಜೆ ನಡೆದಾಗ ನಗಾರಿ, ವಾದ್ಯ-ಚಳ್ಳಂ ಇನ್ನಿತರ ವಾದ್ಯಗಳನ್ನು ಬಾರಿಸುವುದುಂಟು. ದೇವರ ಪೂಜೆ ನಡೆದಾಗ ಭಕ್ತರ ಮನಸ್ಸು, ಪೂಜಾರಿಯ ಚಿತ್ತ ಚಂಚಲವಾಗದಿರಲಿ, ದೇವರ ಮೇಲೆ ಅವರ ಚಿತ್ತ ಏಕಾಗ್ರತೆಗೊಳ್ಳಲಿ ಎಂಬ ಉದ್ದೇಶದಿಂದ ನಾದ ಮಾಡುವುದುಂಟು. ಈ ನಾದದಲ್ಲಿ ಅದ್ಭುತವಾದ ಶಕ್ತಿಯಿದೆ, ಮನುಷ್ಯನ ಚಿತ್ತವನ್ನು ಚಂಚಲವಾಗದಂತೆ ಏಕಾಗ್ರಗೊಳಿಸುವ ಶಕ್ತಿ ಇದಕ್ಕಿದೆ.

ಹೂವು (ಹೂಗಾರ), ವಾದ್ಯ (ಜೀರ್), ಪೂಜೆ (ಪೂಜಾರ) ಇವು ಬಹುಕಾಲದಿಂದಲೂ ಇದ್ದಂತಹವೇ. ಆದ್ದರಿಂದ ಹೂಗಾರರು, ಜೀರರು, ಪೂಜಾರರು ಬಹು ಹಿಂದಿನಿಂದಲೂ ಸಮಾಜದ ಒಂದು ಅಂಗವಾಗಿ ಬೆಳೆದು ಬಂದವರಾಗಿದ್ದಾರೆ. ಈ ಸಮಾಜದವರು ಪ್ರಾಚೀನ ಕಾಲದಲ್ಲಿ ಅತ್ಯಂತ ಗೌರವಯುತ ಸ್ಥಾನ ಹೊಂದಿದ್ದರು. ಬರುಬರುತ್ತ ಇವರು ಆರ್ಥಿಕವಾಗಿ ದುರ್ಬಲವಾದರು. ಇವರ ಜೀವನ ಹೊರ ಜನತೆಯ ನೈವೇದ್ಯ, ಕಾಳುಕಡ್ಡಿ ಇತ್ಯಾದಿಗಳ ಮೇಲೆ ಅವಲಂಬನೆವಾಗತೊಡಗಿತು. ಆಗ ಇವರಿಗೆ ಸಮಾಜದಲ್ಲಿ ಅಂಥ ಗೌರವಯುತ ಸ್ಥಾನ ಸಿಗದಾಯಿತು. ಶ್ರೀಮಂತರು ಊರ ಪ್ರಮುಖರು ಹೇಳಿದಂತೆ ಕೇಳಿಕೊಂಡು ಜೀವನ ಸಾಗಿಸುವ ಸ್ಥಿತಿ ಇವರಿಗೆ ಒದಗಿತು. ದೇವರ ಪೂಜೆ ಪುನಸ್ಕಾರಗಳಲ್ಲಿ ಸಿಗುವ ಪ್ರತಿಫಲವೇ ಇವರ ಸಂಪತ್ತಾಯಿತು. ಬಂಡವಾಳವಾಯಿತು. ಇವರ ಈ ಬಂಡವಾಳವನ್ನು, ಸಂಪತ್ತನ್ನು ಕಂಡು ಕೆಲವು ಕುಹಕಿಗಳು ಇವರಿಗೆ ಅಪಹಾಸ್ಯ ಮಾಡತೊಡಗಿದರು. ಹೊಟ್ಟೆಕಿಚ್ಚು ಪಡತೊಡಗಿದರು. ಇನ್ನು ಕೆಲವರು ಬಹಿರಂಗವಾಗಿಯೇ ಇವರಿಗೆ ’ಸತ್ವ ತೊಗಲು ಬಡಿಯುವ ಜೀಯ, ಹೂಗಳಿಗೆ ಉರುಲು ಹಾಕುವ ಹೂಗಾರ, ದೇವರ ಎಣ್ಣೆ ಬಸಿದುಕೊಂಡು ತಿನ್ನುವ ಪೂಜಾರಿ’ ಎಂದು ಹೀಯಾಳಿಸಿ ಕಡೆಗಣಿಸಿ ನುಡಿಯುವರು. ಇಂಥ ಮಾತುಗಳಿಗೆ ಈ ಜನಾಂಗದವರು ಸೊಪ್ಪು ಹಾಕದೆ ತಮ್ಮ ಕಾಯಕದಲ್ಲಿ ತೊಡಗಿದ್ದುದನ್ನು ಕಾಣುವೆವು. ಕೆಲ ಕುಹಕಿಗಳ ಇಂಥ ಕುಹಕದ ಮಾತುಗಳು ತುಂಬ ಅನಾಗರಿಕವಾದುವಾಗಿವೆ. ಇಂಥ ಮಾತುಗಳನ್ನು ಧಿಕ್ಕರಿಸಿ ಈ ಸಮಾಜದವರು ಆತ್ಮಸ್ಥೈರ್ಯ ಹಾಗೂ ಸ್ವಾಭಿಮಾನವನ್ನು ಹೊಂದಿ ಬಾಳಬೇಕಾಗಿದೆ.

ಸಮಾಜದಲ್ಲಿ ಒಳ್ಳೆಯವರೂ ಇರುವರು, ಕೆಟ್ಟವರೂ ಇರುವರು, ಕೆಟ್ಟವರನ್ನು ನಿರ್ಲಕ್ಷಿಸಿ ಒಳ್ಳೆಯವರನ್ನು ಲಕ್ಷಿಸುವುದು ಸುಸಂತ್ಕೃತರ ಜಾಣರ ಲಕ್ಷಣವಾಗಿದೆ. ಹಾಗೆ ಹೂಗಾರರು ಕುಹಕಿಗಳ ಅಂತ ಹೀಯಾಳಿಕೆಯ ಮಾತುಗಳಿಗೆ ಲಕ್ಷ್ಯ ಕೊಡದೆ ಜೀವನ ಸಾಗಿಸುತ್ತ ಬಂದಿರುವರು. ಸಮಾಜದಲ್ಲಿರುವ ಒಳ್ಳೆಯದನ್ನು ನಾವು ಸ್ವೀಕರಿಸಬೇಕು. ಕೆಟ್ಟದ್ದನ್ನು ಬಿಡಬೇಕು. ಅಂದಾಗಲೇ ನಮ್ಮ ಜೀವನ ಸುಗಮವಾಗುವುದು. ಸರಳವಾಗುವುದು, ಆನಂದಮಯವಾಗುವುದು. ಈ ಮಾತಿಗೆ ಸಾಕ್ಷ್ಯವೆಂಬಂತೆ ಹೂಗಾರರು ಜೀರರು ಬದುಕಿಕೊಂಡು ಬಂದಿರುವರು.

೫.೬. ಎಲೆ ಪೂಜೆ ಕಟ್ಟುವುದು :

ಹನುಮಂತ ದೇವರಿಗೆ ಭಕ್ತಾದಿಗಳು ಹರಕೆ ಹೊತ್ತು ಎಲೆ ಪೂಜೆಯನ್ನು ಕಟ್ಟಿಸುವುದುಂಟು. ಎಲೆ ಪೂಜೆಯನ್ನು ಪೂಜಾರಿಗಳು ಕಟ್ಟುವರು. ಭಕ್ತಾದಿಗಳು ಕೊಟ್ಟ ಎಲೆಗಳನ್ನು ಪೂಜಾರಿ ಬಿದಿರಿನ ಚೌಕಾಕಾರದ  ತಟ್ಟೆಯಲ್ಲಿ ಸುತ್ತಲೂ ಹಚ್ಚ ಹಸುರಾದ ಎಲೆಗಳಿಂದ ಕಂಗೊಳಿಸುವುದು. ಅದನ್ನು ಗರ್ಭಗುಡಿಯೊಳಗೆ ಒಯ್ದು ಹನುಮಂತದೇವರ ಮೂರ್ತಿ ನಡುವೆ ಕಾಣುವಂತೆ ಇಡುವರು. ಆಗ ಹನುಮಂತ ದೇವರಿಗೆ ಸುತ್ತಲೂ ಎಲೆ ಏರಿಸಿ ಪೂಜಿಸಿದ್ದು ಸುಂದರವಾಗಿ ಕಾಣತೊಡಗುವುದು. ಇದೊಂದು ಬಗೆಯ ಭಕ್ತಿ ಸೇವೆ, ವಿಶೇಷ ಪೂಜೆ. ಎಲೆ ಪೂಜೆ ಕಟ್ಟಿಸಿದ ಕುಟುಂಬದ ಸದಸ್ಯರೆಲ್ಲರೂ ಇದರಲ್ಲಿ ಪಾಲ್ಗೊಳ್ಳುತ್ತಾರೆ. ಮಂಗಲವಾದ್ಯಗಳಲ್ಲಿ ಮಂಗಳಾರತಿಯೊಂದಿಗೆ ಈ ಪೂಜೆ ಸಾಂಗಮಂಗಲವಾಗಿ ಹನುಮಂತದೇವರ ಅನುಗ್ರಹದೊಂದಿಗೆ ಇಂದಿಗೂ ನಡೆಯುತ್ತ ಬಂದಿದೆ. ಇಂಥ ಎಲೆ ಪೂಜೆ ಕಟ್ಟಿಸಲು ಭಕ್ತಾದಿಗಳು ಪೂಜಾರಿಗಳಿಗೆ ’ಬಾಬು’ ಚಾಜು ಸಲ್ಲಿಸುವರು. ಕಾರ್ತೀಕ ಮಾಸದಲ್ಲಿ ಇಂಥ ಪೂಜೆಗಳು ವಿಶೇಷವಾಗಿ ನಡೆಯುವವು. ಎಲೆ ಪೂಜೆ ಕಟ್ಟಿಸುವಂತೆ ಭಕ್ತರು ಹನುಮಂತ ದೇವರಿಗೆ ಬುತ್ತಿ ಪೂಜೆಯನ್ನೂ ಕಟ್ಟಿಸುವುದುಂಟು. ದೇವರ ಮೂರ್ತಿಗೆ ಅನ್ನವನ್ನು ಮೆತ್ತಿ ಅಲಂಕರಿಸುವರು. ಇದೊಂದು ಬಗೆಯ ಭಕ್ತಿಸೇವೆ. ಕೆಲವೆಡೆ ಇಂಥ ಪೂಜೆ ನಡೆಯುವುದುಂಟು.

೬. ಹೂಗಾರರ ಸದ್ಯದ ಸ್ಥಿತಿ-ಗತಿ :

ಹೂಗಾರ, ಜೀರ, ಗುರವ ಹಾಗೂ ಪೂಜಾರ ಸಮಾಜದ ತುಂಬ ಪ್ರಾಚೀನವಾದುದು. ಕ್ರಿ.ಶ. ೬ನೇ ಶತಮಾನದ ಬಾದಾಮಿಯ ಮಂಗಲೀಶನ ಶಾಸನದಲ್ಲಿಯೇ ಈ ಸಮಾಜದ ಉಲ್ಲೇಖ ಬಂದುದನ್ನು ನೋಡುವೆವು. ಆ ನಂತರ ಅನೇಕ ಶಾಸನಗಳಲ್ಲಿ ಕನ್ನಡ ಕಾವ್ಯಗಳಲ್ಲಿ ಈ ಸಮಾಜದವರು ಹೂವಿನಹಾರ ಮಾಡಿ ದೇವರಿಗೆ – ಜನರಿಗೆ ಅರ್ಪಿಸುತ್ತ ಬಂದುದು ಉಲ್ಲೇಖಗೊಂಡುದನ್ನು ಕಾಣುವೆವು. ಪ್ರಾಚೀನ ಕಾಲದಲ್ಲಿ ವೀರಶೈವರು ಹಾಗೂ ಬ್ರಾಹ್ಮಣರ ಮಧ್ಯೆ ಬರುವ ಈ ಸಮಾಜ ಸಾಮಾಜಿಕವಾಗಿ ಅತ್ಯಂತ ಶ್ರೇಷ್ಠ ಸ್ಥಾನ ಪಡೆದಿತ್ತು. ಪಂಚ ಶೈವರಲ್ಲಿ ಈ ಸಮಾಜವೂ ಒಂದೆಂದು ಗಣಿಸಲ್ಪಟ್ಟಿತ್ತು. ಪ್ರಾಚೀನ ಕಾಲದಲ್ಲಿ ಜನ ಇವರನ್ನು ಪೂಜನೀಯರೆಂದೂ, ದೇವರ ಸಾನ್ನಿಧ್ಯದಲ್ಲಿರುವ ಭಕ್ತರೆಂದೂ ಭಾವಿಸಿ ಗೌರವವನ್ನು ಕೊಟ್ಟುದುಂಟು. ಒಡೆಯರು, ಗಣಾಧೀಶ್ವರರು, ಶಿವನ ಭಕ್ತರು ಪವಿತ್ರರು ಎಂದೆಲ್ಲ ಉನ್ನತ ಸ್ಥಾನಮಾನವನ್ನು ಪಡೆದಿದ್ದ ಈ ಸಮಾಜದವರು, ಬರಬರುತ್ತ ತಮ್ಮ ಉನ್ನತ ಸ್ಥಾನಮಾನವನ್ನು ಕಳೆದುಕೊಳ್ಳುತ್ತ ಬಂದುದುಂಟು. ಇದಕ್ಕೆ ಕಾರಣಗಳು ಹಲವಾರು ಜೀರ್, ಹೂಗಾರ, ಗುರವ ಹಾಗೂ ಪೂಜಾರರು ಊರ ಹನುಮಂತ, ಬಸವಣ್ಣ, ವೀರಭದ್ರ ಮುಂತಾದ ದೇವರನ್ನು ಪೂಜಿಸುತ್ತ, ಊರ ಜನತೆಗೆ ಹೂವು ಪತ್ರೆ ಕೊಡುತ್ತ ಇದಕ್ಕೆ ಪ್ರತಿಯಾಗಿ ಅವರಿಂದ ಧಾನ್ಯ, ನೈವೇದ್ಯ ಪಡೆದುಕೊಂಡು ಜೀವನ ಸಾಗಿಸುತ್ತ ಬಂದವರು. ಹೀಗೆ ಇವರ ಉಪಜೀವನ ಊರ ಜನತೆಯನ್ನೇ ಅವಲಂಬಿಸಿದಾಗ ಸಹಜವಾಗಿಯೇ ಇವರು ಪರಾವಲಂಬಿಗಳಾಗು‌ತ್ತಾ ಬಂದು, ಬರಬರುತ್ತಾ ಇವರೂ ಊರಿನ ವಿವಿಧ ವೃತ್ತಿಸೇವೆಗಳನ್ನು ಮಾಡಿಕೊಂಡಿದ್ದ ಕುಂಬಾರ, ಬಡಿಗ, ನಾವಿದ, ಕಂಬಾರ, ದಾಸರ ಮುಂತಾದ ಆಯಗಾರರಂತೆ ಆಯಗಾರರೆನ್ನಿಸಿಕೊಂಡರು. ಸೇವಾಮನೋಭಾವ ಇವರ ಉಸಿರಾಯಿತು. ಊರ ಪ್ರಮುಖರ ಗೌಡರ, ಶ್ರೀಮಂತರ ಮರ್ಜಿಯನ್ನು ಕಾಯುತ್ತ ಪೂಜಾದಿ ಕಾಯಕ ಹಾಗೂ ಇನ್ನಿತರ ಊರ ಜನತೆಯ ಸೇವೆಯನ್ನು ಮಾಡುತ್ತ ಬರತೊಡಗಿದರು. ಈ ಸಮಾಜದ ಹೆಣ್ಣುಮಕ್ಕಳು ಹೂ ಹಾರಗಳನ್ನು, ದಂಡೆಗಳನ್ನು ಹೆಣೆದು ಊರ ಜನತೆಯ ಮನೆಮನೆಗೆ ಒಯ್ದು ಕೊಡುವುದು, ಪತ್ರಿಯನ್ನು ಬುಟ್ಟಿಯಲ್ಲಿ ತುಂಬಿಕೊಂಡು  ಮನೆ ಮನೆಯಿಂದ ಪಡೆದುಕೊಂಡು ಬರುವುದು ಇಂದಿಗೂ ನಡೆಯುತ್ತ ಬಂದ ಈ ಸಮಾಜದವರ ಕಾಯಕವಾಗಿದೆ. ಇದರಿಂದಾಗಿ ಉಳಿದ ವೀರಶೈವರು ಇವರನ್ನು ಅನ್ಯ ದೃಷ್ಟಿಯಿಂದ ನೋಡತೊಡಗಿದರು. ಇವರನ್ನು ತಮ್ಮ ಸರಿಸಮಾನರೆಂದು ತಿಳಿಯಲಿಲ್ಲ. ಆರ್ಥಿಕವಾಗಿ ಅಷ್ಟಾಗಿ ಸಬಲರಲ್ಲದ ಈ ಸಮಾಜದವರು ಉಪಜೀವನಕ್ಕಾಗಿ ಇಂಥ ಕಾಯಕವನ್ನು ಮಾಡಲೇಬೇಕಾಯಿತು. ಈಗಲೂ ಹಳ್ಳಿಗಾಡಿನಲ್ಲಿ ಈ ಸಮಾಜದ ಹೆಣ್ಣುಮಕ್ಕಳು ಇಂಥ ಕಾಯಕವನ್ನು ಸಂತೋಷದಿಂದಲೇ ಮಾಡುತ್ತಿರುವರು. ಅವರಲ್ಲಿ ಯಾವ ಕೀಳರಿಮೆಯೂ ಇಲ್ಲ. ಬಹುತೇಕ ಊರ ಜನರೂ ಈ ಕಾಯಕ ಕೀಳೆಂದು ತಿಳಿದಿಲ್ಲ. ಆದರೂ ಈ ವೃತ್ತಿ ಹೂಗಾರ, ಪೂಜಾರ, ಗುರವ ಸಮಾಜದವರನ್ನು ಉನ್ನತವಾದ ಗೌರವಯುತವಾದವರೆಂದು ತಿಳಿಯಲು ಅಡ್ಡಿಯೆನಿಸುತ್ತದೆ. ಈ ಸಮಾಜದ ಸ್ತ್ರೀಯರು ಈ ರೀತಿಯ ಹೂಕಾಯಿ, ಪತ್ರಿಕಾಯಕದಲ್ಲಿ ತೊಡಗಿಕೊಂಡರೆ ಪುರುಷರು ಪೂಜೆ ಮಾಡುವುದು, ಸುಗ್ಗಿಯ ಕಾಲದಲ್ಲಿ ರಾಶಿ ನಡೆದಲ್ಲಿ ಕಣಗಳಿಗೆ ಹೋಗಿ ಬುಟ್ಟಿಯಲ್ಲಿ ಧಾನ್ಯ ಪಡೆಯುವರು. ಸರಕಾರ ಹಾಗೂ ಊರ ಜನತೆಗೆ ಸುದ್ದಿ ಸಮಾಚಾರವಾರನ್ನು ತಿಳಿಸಲು ಊರೆಲ್ಲ ತಿರುಗುತ್ತ ಡಂಗುರವನ್ನು ಹೊಡೆಯುವುದು. ಈ ಮುಂತಾದ ಕಾರ್ಯಗಳು ಹೂಗಾರ ಸಮಾಜಕ್ಕೆ ಸಿಗುವ ಉನ್ನತ ಸ್ಥಾನಕ್ಕೆ ಅಡ್ಡಿಯಾದುವೆನ್ನಬೇಕು. ಜೀವನ ನಿರ್ವಹಣೆಗೆ ಇವು ಅನಿವಾರ್ಯವಾದ್ದರಿಂದ ಇವನ್ನೆಲ್ಲ ಇವರು ಮಾಡುತ್ತ ಬಂದರು. ಈ ಸಮಾಜದ ಬಹುತೇಕ ಕಲಾಕಾರರು. ಅದರಲ್ಲೂ ಚರ್ಮ ವಾದ್ಯವನ್ನು ನುಡಿಸುವುದರಲ್ಲಿ ಪ್ರವೀಣರು, ದೇವರ  ಪಲ್ಲಕ್ಕಿ, ಉತ್ಸವ, ಜಾತ್ರೆ, ಕಾರ್ತಿಕ, ಓಕಳಿ ಮತ್ತು ಮದುವೆ ಮುಂತಾದ ಮಂಗಲಮಯ ಸಂದರ್ಭಗಳಲ್ಲಿ ಇವರು ಸಂಬಾಳ, ಸಂಪ್ರದಾನಿ, ಕರಡಿಮಜಲು ವಾಯಗಳನ್ನು ಬಾರಿಸುವರು. ಶಹನಾಯಿ ಊದುವ ಊರ ಜನ ಸತ್ತಾಗಲೂ ಕೊರವರೊಂದಿಗೆ ಜೊತೆಗೂಡಿ ಇವರು ಸಂಬಾಳ ಬಾರಿಸುವರು. ಬಯಲಾಟಗಳಲ್ಲಿ  ಪಿಯಾನೋ ತಬಲಾ ಬಾರಿಸುವರು. ಹೀಗೆ ಚರ್ಮವಾದ್ಯಗಳನ್ನು ನುಡಿಸುವಲ್ಲಿ ಇವರಿಗೆ ಸಾಮಾಜಿಕ ಅಂತಸ್ತು ಅಡ್ಡ ಬಂದಿಲ್ಲ. ಮೇಲ್ಜಾತಿ ಕೀಳು ಜಾತಿ ಎಂದು ಇವರು ಭಾವಿಸದೆ ಎಲ್ಲರೊಂದಿಗೆ ಸೇರಿ ತಮ್ಮ ಕಲಾಪ್ರೌಢಿಮೆಯನ್ನು ಮರೆಯುವರು. ಇದರಿಂದಾಗಿ ಕೆಲವು ಜನ ಈ ಸಮಾಜದವರನ್ನು ಕೆಳದೃಷ್ಟಿಯಿಂದ ಕಾಣುವುದುಂಟು.

ಊರ ಜನತೆಯ ಸಾಮೂಹಿಕ ಹಿತಾಸಕ್ತಿಯ ಕೆಲಸ ಕಾರ್ಯಗಳನ್ನು ತುಂಬ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಈ ಸಮಾಜದವರು ಮಾಡುತ್ತ ಬಂದರು. ಇವರು ಅಲ್ಪ ಸಂಖ್ಯಾತರಾಗಿದ್ದುದರಿಂದಲೂ ಸಹಜವಾಗಿಯೇ ಊರ ಜನತೆಯ ವಿಧವಿಧದ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ದೇವರಪೂಜೆ, ಊರ ದೈವದ ಕೆಲಸ ಕಾರ್ಯಗಳಲ್ಲಿ ಸಂಪೂರ್ಣವಾಗಿ ಇವರು ತೊಡಗಿಕೊಂಡರು. ಇವರಲ್ಲಿ ಬಹು ಜನರಿಗೆ ಪ್ರಿತಾರ್ಜಿತವಾಗಿ ಹೇಳಿಕೊಳ್ಳುವಂಥ ಹೊಲಗದ್ದೆಗಳು ಇರವು. ಮಾನೇದ ಹೊಲ, ಇನಾಂ ಹೊಲ, ಪೂಜಾರಿಕೆ ಭೂಮಿ ಅಲ್ಪಸ್ವಲ್ಪ ಇದ್ದುದನ್ನು ಕಾಣುವೆವು. ಇವರು ಈ ಹೊಲಗಳಲ್ಲಿ ಕಷ್ಟಪಟ್ಟು ದುಡಿಯದೆ, ಸ್ವಂತ ಒಕ್ಕಲುತನ ಮಾಡದೆ ಪೂಜಾರಿ ಕೆಲಸಗಳಲ್ಲಿಯೇ ಹೆಚ್ಚಾಗಿ ತೊಡಗಿಕೊಂಡುದನ್ನು ಕಾಣುವೆವು. ಇದರಿಂದಾಗಿ ತಾತ್ಪೂರ್ತಿಕವಾಗಿ ಇವರು ತಮ್ಮ ಉಪಜೀವನವನ್ನು ಸಾಗಿಸಿಕೊಂಡು ಬಂದರೇ ವಿನಾ ಒಕ್ಕಲಿಗರಾಗಿ, ವ್ಯಾಪಾರಿಗಳಾಗಿ ಅಂಥ ಆಸ್ತಿಯನ್ನೇನು ಗಳಿಸಿಕೊಂಡು ಸಮಾಜದಲ್ಲಿ ಪ್ರಭಾವೀ ‌ಸ್ಥಾನವನ್ನು, ಉನ್ನತಸ್ಥಾನವನ್ನು ಪಡೆಯಲಿಲ್ಲ. ರಾಜಕೀಯವಾಗಿಯೂ ಈ ಸಮಾಜದವರಾರೂ ಇದುವರೆಗೆ ಎಂ.ಎಲ್.ಎ. ಆಗಲಿ ಎಂ.ಎಲ್.ಸಿ. ಆಗಲಿ ಆಗಿಲ್ಲ. ಈ ಸಮಾಜದ ಜನಸಂಖ್ಯೆ ಕಡಿಮೆ ಇದ್ದುದರಿಂದಲೋ, ಪ್ರಮುಖ ಪ್ರಭಾವೀ ಮುಖಂಡರಾರೂ ಈ ಸಮಾಜದಲ್ಲಿ ಇಲ್ಲದುದರಿಂದಲೋ ರಾಜಕೀಯದಲ್ಲಿ ಅಂಥ ಗಣ್ಯಸ್ಥಾನವನ್ನು ಇವರು ಪಡೆದುಕೊಳ್ಳಲಿಲ್ಲ. ರಾಜಕೀಯದಲ್ಲಿ ಯಾರೂ ಈ ಸಮಾಜದ ಮುಖಂಡರು ಇರದಿದ್ದರಿಂದ ಈ ಸಮಾಜದವರಿಗೆ ಸರಕಾರದಿಂದ ವಿಶೇಷ ಸೌಲಭ್ಯಗಳು, ಉನ್ನತ ಸ್ಥಾನಮಾನಗಳು ಲಭ್ಯವಾಗಿಲ್ಲವೆಂದೇ ಹೇಳಬಹುದು. ಕರ್ನಾಟಕದಲ್ಲಿ ಹಿಂದುಳಿದ ಬೇರೆ ಬೇರೆ ಜಾತಿ ಜನಾಂಗದವರು, ಪರಿಶಿಷ್ಟ ಜಾತಿ – ಪರಿಶಿಷ್ಟ ಪಂಗಡದವರು ರಾಜಕೀಯದಲ್ಲಿ ಒಳ್ಳೆಯ ಸ್ಥಾನಮಾನ ಹೊಂದಿದುದನ್ನು ಕಾಣುವೆವು. ಈ ಸಮಾಜದವರೂ ರಾಜಕೀಯದಲ್ಲಿ ಉನ್ನತ ಸ್ಥಾನ ಪಡೆದುಕೊಳ್ಳಲು ಇನ್ನು ಮುಂದೆ ಯತ್ನಿಸುವ ಅಗತ್ಯವಿದೆ.

ಉತ್ತರ ಕರ್ನಾಟಕದ ಬಾಗಲಕೋಟೆ, ಬಿಜಾಪುರ, ಬೆಳಗಾವಿ, ಧಾರವಾಡ ಮತ್ತು ಗುಲಬರ್ಗ ಜಿಲ್ಲೆಗಳಲ್ಲಿ ಕೆಲವು ಊರುಗಳಲ್ಲಿ ಈ ಸಮಾಜದವರು ಒಳ್ಳೆಯ ಭೂಮಿ, ತೋಟಗಳನ್ನು ಹೊಂದಿದ್ದು, ವ್ಯವಸಾಯದಲ್ಲಿ ತೊಡಗಿದ್ದುದನ್ನು ಕಾಣುವೆವು. ಅಂಥ ಕೆಲ ಉರುಗಳನ್ನಿಲ್ಲಿ ಉದಾಹರಿಸಬಹುದು. ಬನಹಟ್ಟಿ, ಬೀಳಗಿ, ಗಿರಿಸಾಗರ, ರಂಜಣಗಿ, ಮಳಲಿ, ಚೆನ್ನಾಳ, ವರ್ಚಗಲ್ಲ, ಮಾಚಕನೂರ, ಮೆಟ್ಟಗುಡ್ಡ, ಕೆರೂರ, ನಾವಲಗಿ, ಹಿಪ್ಪರಲಿ, ತುಳಸಿಗೇರಿ, ಅಮಲಝರಿ, ಮುದ್ದಾಪುರ, ಬಾಡಿಗಿ, ಜಂಬಗಿ, ಕಮತಗಿ, ಕಟಗೇರಿ, ಕುಂದರಗಿ, ಹಳಗುಣಿಕೆ, ಇಂಡಿ, ಸಿಂದಗಿ ಅರ್ಥಗಾ, ಬಸವನ ಬಾಗೇವಾಡಿ, ಮುದ್ದೇಬಿಹಾಳ, ನಂದವಾಡಿಗಿ, ಅರ್ಜುನಗಿ, ಬಬಲೇಶ್ವರ, ಸುನ್ನಾಳ, ನವಲಗುಂದ, ನರಗುಂದ, ಯರಜರ್ವಿ, ಮುರಗೋಡ, ಕಲ್ಲೋಳಿ, ಸಂತೆವೂರು, ಅಳಗೋಡಿ, ಶಂಕರಹಟ್ಟಿ, ನೆಲೋಗಿ, ಹಾಗರಗಿ, ದೇವಣಗಾಂವ, ಆಂದೋಲಾ ಮುಂತಾದವು. ಇನ್ನು ಕೆಲವರು ಕಷ್ಟ ಪಟ್ಟು ವಿದ್ಯಾಭ್ಯಾಸ ಮಾಡಿ ಈ ಸಮಾಜದವರು ಉನ್ನತ ಹುದ್ದೆಗಳನ್ನು ಪಡೆದುಕೊಂಡಿದ್ದಾರೆ. ಆದರೆ ಇವರ ಸಂಖ್ಯೆ ತೀರ ಕಡಿಮೆಯೆಂದೇ ಹೇಳಬೇಕು. ಈ ಸಮಾಜದವರಲ್ಲಿ ಜಾಗೃತಿ ಉಂಟಾಗಬೇಕು. ಇನ್ನೂ ಉನ್ನತ ವಿದ್ಯಾಭ್ಯಾಸ ಪಡೆಯುವವರ ಸಂಖ್ಯೆ ಹೆಚ್ಚಾಗಬೇಕು. ವಿಶೇಷವಾಗಿ ಹಳ್ಳಿಗಾಡಿನಲ್ಲಿ ವಾಸವಾಗಿರುವ ಈ ಸಮಾಜದವರು ತಮ್ಮ ಮನೆವೃತ್ತಿ ಕಲಕಸುಬಾದ ಹೂಕಾಯಿ ಪತ್ರಿ ತಂದು ಜನತೆಗೆ ಕೊಡುವುದು, ಹನುಮಂತ ದೇವರ ಪೂಜೆ ಮಾಡುವುದು, ಸಂಬಾಳ ಬಾರಿಸುವುದು, ಇಂಥ ಕೆಲಸಗಳಲ್ಲಿಯೇ ತಮ್ಮ ಮಕ್ಕಳನ್ನು ಶಾಲೆ ಕಾಲೇಜುಗಳಿಗೆ ಕಳಿಸುವತ್ತ ಮನಸ್ಸು ಮಾಡಬೇಕಾಗಿದೆ. ಆಧುನಿಕತೆ ಹಾಗೂ ಜಾಗತೀಕಿರಣದ ಪ್ರಭಾವದ ಪರಿಣಾಮದಿಂದಾಗಿ ಇಂದು ಸಮಾಜದಲ್ಲಿ ಅನೇಕ ಬದಲಾವಣೆಗಳು ಆಗುತ್ತಲಿವೆ. ಇಂಥದರಲ್ಲಿ ನಾವು ನಮ್ಮ ಮೂಲವೃತ್ತಿಗೇ ಅಂಟಿಕೊಂಡು ಕೂಡ್ರುವುದು ಸರಿಯಲ್ಲ. ಬೇರೆ ಬೇರೆ ವೃತ್ತಿಗಳನ್ನೂ ಮಾಡುವ ಸಾಹಸಕ್ಕೆ ಈ ಜನಾಂಗ ಇಂದು ಕೈ ಹಾಕಬೇಕಾಗಿದೆ. ಅಂದಾಗ ಈ ಸಮಾಜವು ಮುಂದುವರಿಯಲಿಕ್ಕೆ ಸಾಧ್ಯವಾಗುವುದು. ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಕೊಂಡು ಮುನ್ನಡೆಯಲು ಸಮರ್ಥವಾಗುವುದು. ಈ ದಿಸೆಯಲ್ಲಿ ಈ ಸಮಾಜ ಬಾಂಧವರಿಗೆ ಸೂಕ್ತ ಮಾರ್ಗದರ್ಶನ ನೀಡಲು ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಹೂಗಾರ, ಜೀರ, ಗುರವ, ಪೂಜಾರ ಸಮಾಜ ಸೇವಾ ಸಂಘಗಳು ಹುಟ್ಟಿಕೊಂಡಿವೆ. ಈ ಸಂಘಗಳು ಈ ಸಮಾಜ ಬಾಂಧವರ ಹಿತವನ್ನು ಕಾಪಾಡುವಲ್ಲಿ ಮಹತ್ವ ಪಾತ್ರ ವಹಿಸುತ್ತಲಿರುವುದು ಶುಭ ಚಿಹ್ನೆಯಾಗಿದೆ.

ಗ್ರಂಥ ಋಣ :

೧. ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ – ಡಾ.ಎಂ. ಚಿದಾನಂದಮೂರ್ತಿ

೨. ಕನ್ನಡ ಜಾನಪದ ಗೀತೆಗಳು – ಡಾ. ಬಿ.ಎಸ್. ಗದ್ದಗಿಮಠ.

೩. ಜಾನಪದ ಸಾಹಿತ್ಯ ದರ್ಶನ – ಪ್ರಸಮ, ಡಾ. ಎಸ್.ಎಂ. ವೃಷಭೇಂದ್ರಸ್ವಾಮಿ (ಡಾ. ಬಿ.ವಿ. ಶಿರೂರರ ಹೂಗಾರರು ಎಂಬ ಲೇಖನ)

೪. ’ಹೂಗಾರರು”- ಒಂದು ಅಧ್ಯಯನ – ಶ್ರೀ ತಿಪ್ಪಣ್ಣ ಹೂಗಾರ, ರಾಯಚೂರು

೫. ಭೀಮಕವಿಯ ’ಬಸವ ಪುರಾ” – ಸಂ. ಡಾ.ಆರ್.ಸಿ. ಹಿರೇಮಠ

೬. ಬಸವಣ್ಣನವರ ’ಟೀಕಿನ ವಚನಗಳ” – ಸಂಪುಟ ೧

೭. ಶ್ರೀ ದುರದುಂಡೀಶ್ವರ ಸಿದ್ಧ ಸಂಸ್ಥಾನಮಠ, ನಿಡಸೋಸಿ – ಒಂದು ಅಧ್ಯಯನ – ಶ್ರೀಮತಿ ಪ್ರಭಾ ಬೋರಗಾಂವಕರ್.

೮.”ಶ್ರೀ ಗುರವರ್ಯ ಹೂಗಾರ ಚರಿತಾಮೃತ ಅರ್ಥಾತ್ ಶಿವಮಹಿಮೆ’ ಯ ನಂದಾಮತ ಕಥಾಮೃತ – ಪಂಣಡಿತ ಶಂಕರ ಗೂರೂಜಿ, ಪುಣೆ

೯. ಹರಿಹರ ನಂಬಿಯಣ್ಣನ ’ರಗಳ”

೧೦. ಚಾಮರಸನ ’ಪ್ರಭುಲಿಂಗ ಲೀಲ”

೧೧.ಶಾಸನ ಸಂಪದ (ಸಂ.) ಡಾ. ಆರ್.ಸಿ. ಹಿರೇಮಠ ಮತ್ತು ಡಾ. ಎಂ.ಎಂ. ಕಲಬುರ್ಗಿ

೧೨. ಮಲ್ಲಿಗೆ ದಂಡೆ (ಸಂ.) ಕಾಪಸೆ ದೇವಪ್ಪ, ಚಡಚಡ

೧೩. ಹರಿಹರನ ಬಸವರಾಜದೇವರ ರಗಳೆ

೧೪. ಶಾಸನ ಸಂಗ್ರಹ (ಸಂ), ಎ.ಎಂ. ಅಣ್ಣೀಗೇರಿ, ಡಾ. ಆರ್. ಶೇಷಶಾಸ್ತ್ರಿ

೧೫. ಲಕ್ಕಣ್ಣ ದಂಡೇಶನ- ’ಶಿವತತ್ವ ಚಿಂತಾಮಣ”

೧೬. ಜನ್ನನ ಅನಂತನಾಥ ಪುರಾಣ.