ಗುಬ್ಬಿಗಿಂತ ಚಿಕ್ಕದಾದ ಹೂಗುಬ್ಬಿಗೂಡು ಕಟ್ಟುವ ರೀತಿ ವಿಶೇಷವಾದದ್ದು ಇದು ಚೆಂದದ ಹಕ್ಕಿ. ಮಧುರ ಕಂಠದ ಹಕ್ಕಿ. ಶಿಸ್ತು ಮತ್ತು ಬ್ಯೂಟಿ ಕಾನ್ಸಿಯಸ್‌ ಸ್ವಲ್ಪ ಜಾಸ್ತಿಯೇ ಇರುವ ಹಕ್ಕಿ. ಆಫ್ರಿಕಾದಲ್ಲಿ ಕಂಡು ಬರುವ ಬಂಗಾರ ಬಣ್ಣದ ರೆಕ್ಕೆ ಹೊಂದಿರುವ ಹೂಗುಬ್ಬಿ ತಾನು ಮಕರಂದ ಹೀರಲು ಒಂದಿಷ್ಟು ಪ್ರದೇಶವನ್ನು ಆಯ್ಕೆ ಮಾಡಿಕೊಂಡು, ಈ ಹೂವುಗಳು ನನ್ನ ಸ್ವಂತದ್ದು ಎಂದುಕೊಂಡು ಅಲ್ಲಿಗೆ ಬೇರೆ ಹೂಗುಬ್ಬಿಗಳು ಬಾರದಂತೆ ತಡೆಯುತ್ತದಂತೆ.

ಹೂಗುಬ್ಬಿ.

ಇಂಗ್ಲೀಷಿನಲ್ಲಿ ‘ಸನ್‌ಬರ್ಡ್’ ಎಂದು ಕರೆಯಲ್ಪಡುವ ಇಷ್ಟೇ ಪುಟ್ಟ ಈ ಹಕ್ಕಿ ನೋಡಲಿಕ್ಕೆ ಎಷ್ಟು ಸುಂದರವಾಗಿದೆಯೋ, ಅದರ ಹಾಡು ಕೂಡಾ ಅಷ್ಟೇ ಮಧುರವಾಗಿರುತ್ತದೆ. ಈ ಪುಟ್ಟ ಹೂ ಗುಬ್ಬಿಗೆ ಬ್ಯೂಟಿ ಕಾನ್ಸಿಯಸ್ಸೂ ಸ್ವಲ್ಪ ಜಾಸ್ತಿ. ಬ್ಯೂಟಿ ಕಾನ್ಸಿಯಸ್ಸು ಮತ್ತು ಅದರ ಶಿಸ್ತು ನಿಮಗೆ ತಿಳಿಯಬೇಕೆಂದರೆ ಅದು ಗೂಡು ಕಟ್ಟುವ ರೀತಿಯನ್ನು ನೋಡಬೇಕು.

ದೊಡ್ಡದೊಂದು ಅಚ್ಚರಿಯಿರುತ್ತದೆ ಅಲ್ಲಿ.  ಗೀಜಗ ಹಕ್ಕಿಯ ಗೂಡಿಗೆ ಒಂದು ಚೆಂದವಿದ್ದರೆ, ಹೂ ಗುಬ್ಬಿಯ ಗೂಡಿಗೂ ಇನ್ನೊಂದು ಬಗೆಯ ಚೆಂದವಿದೆ. ಹೂ ಗುಬ್ಬಿಗಳು ಗೂಡು ಕಟ್ಟುವ ಮೊದಲು ಗೂಡು ಕಟ್ಟುವ ಮರವನ್ನು ಭಯಂಕರ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳುತ್ತವೆ. ಗಿಡದ ಟೊಂಗೆ ಗಟ್ಟಿಯಾಗಿರಬೇಕು. ತೆಳ್ಳಗಿರಬೇಕು. ಅಂತಹ ಟೊಂಗೆಯನ್ನು ಆಯ್ಕೆ ಮಾಡಿಕೊಂಡು, ಟೊಂಗೆಯ ಒಂದು ತುದಿಯನ್ನು ಗೂಡು ಕಟ್ಟಲು ಬಳಸುತ್ತವೆ. ನಂತರ ಜೇಡರ ಬಲೆಯನ್ನು ಹದಿನೈದರಿಂದ ಇಪ್ಪತ್ತು ಬಾರಿ ಸುತ್ತುತ್ತವೆ. ನೈಲಾನ್‌ ದಾರಕ್ಕಿಂತಲೂ ಬಲಿಷ್ಠವಾದ ಜೇಡರ ಬಲೆಯೇ ಹೂಗುಬ್ಬಿಗಳ ಗೂಡಿಗೆ ಅಡಿಪಾಯವಾಗುತ್ತದೆ.

ಜೇಡರ ಬಲೆ ಸುತ್ತಿದ ನಂತರ ಜೋಳಿಗೆಯಂತಹ ಗೂಡನ್ನು ಆ ಟೊಂಗೆಗೆ ಕಟ್ಟಲಾರಂಭಿಸುತ್ತವೆ. ಈ ಹೂಗುಬ್ಬಿಗಳು ಗೂಡು ಕಟ್ಟಲು ಹುಲ್ಲಿನ ಕಡ್ಡಿಗಳನ್ನು ಬಳಸುತ್ತವೆ. ಹುಲ್ಲಿನ ಕಡ್ಡಿಯಿಂದ ಗೂಡು ಕಟ್ಟಿದ ನಂತರ ಆರಂಭವಾಗುತ್ತದೆ ಗೂಡಿನ ಅಲಂಕಾರ. ಮರದ ಚಿಕ್ಕ ಚಿಕ್ಕ ತೊಗಟೆ ಚೂರುಗಳು, ಕಾಗದದ ಚೂರುಗಳನ್ನು ತಂದು ಗೂಡನ್ನು ಚೆಂದವಾಗಿ ಅಲಂಕರಿಸುತ್ತವೆ.

ಹೂ ಗುಬ್ಬಿ ಅದೆಂತಹ ಬುದ್ಧಿವಂತ ಹಕ್ಕಿಯೆಂದರೆ ಗೂಡನ್ನು ಕಟ್ಟುವ ಆರಂಭದಲ್ಲಿ ಗೂಡಿಗೊಂದು ಛಾವಣಿಯನ್ನು ಸಿದ್ಧ ಮಾಡಿರುತ್ತದೆ. ಈ ಛಾವಣಿಯಿಂದಾಗಿಯೇ ಮಳೆ ನೀರು ಹೊಯ್ದರೂ ಗೂಡಿನೊಳಗೆ ಬರುವುದಿಲ್ಲ. ಗೂಡನ್ನು ಪೂರ್ತಿಯಾಗಿ ಕಟ್ಟಿ ಮುಗಿಸುತ್ತಿದ್ದಂತೆ ಹೆಣ್ಣು ಹೂಗುಬ್ಬಿ ಗೂಡೊಳಗೆ ಹೋಗಿ ಜಾಗ ಎಷ್ಟಿದೆ ಎಂದು ನೋಡುತ್ತದೆ. ಗೂಡಿನೊಳಗೆ ಇಕ್ಕಟ್ಟೆನ್ನಿಸಿತಾ. ತನ್ನ ಹೊಟ್ಟೆಯ ಭಾಗದಿಂದ ಒಳಗಿನ ವಸ್ತುಗಳನ್ನೆಲ್ಲ ಆಚೀಚೆ ತಳ್ಳಿ ಕಂಫರ್ಟಬಲ್ಲಾಗಿರುವಷ್ಟು ಜಾಗ ಮಾಡಿಕೊಳ್ಳುತ್ತದೆ. ಆ ನಂತರ ಎಲ್ಲೆಲ್ಲಿಂದಲೋ ಹತ್ತಿಯ ಜೊತೆಗೆ ಮೃದುವಾದ ವಸ್ತುಗಳನ್ನು ತಂದು ಗೂಡಿನ ಒಳಭಾಗದಲ್ಲಿ ಮೆತ್ತನೆಯ ಹಾಸಿಗೆಯನ್ನು ತಯಾರಿಸಿ ಕೊಳ್ಳುತ್ತವೆ. ಹೀಗೆ ಗೂಡನ್ನು ಪೂರ್ತಿಯಾಗಿ ಕಟ್ಟಿ ಅಲಂಕರಿಸಿದ ನಂತರ, ಈ ಗೂಡಿನಲ್ಲಿ ೨ ರಿಂದ ೩ ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತದೆ.

‘ನೆಕ್ಟಾರಿನಿಯಾ ರಿಕಿನೋವಿ’ ಎಂಬ ವೈಜ್ಞಾನಿಕ ಹೆಸರನ್ನು ಹೊಂದಿರುವ ಸನ್‌ಬರ್ಡ್ ಅಥವಾ ಹೂ ಗುಬ್ಬಿಗಳು ಏಷ್ಯಾ, ಆಫ್ರಿಕಾ ಮತ್ತು ಆಸ್ಟ್ರೇಲಿಯಾದಲ್ಲಿ ಸಾಮಾನ್ಯವಾಗಿ ಕಂಡು ಬರುತ್ತವೆ. ತಮ್ಮ ಕೊಳವೆಯಂತಹ ಕೊಕ್ಕುಗಳಿಂದ ಹೂಗಳ ಮಕರಂದವನ್ನು ಹೀರುವ ಇವು, ಕೆಲವೊಮ್ಮೆ ಈ ಮಕರಂದ ಹೀರಲು ಬರುವ ಪುಟ್ಟ ಹುಳುಗಳನ್ನೂ ತಿನ್ನುತ್ತವೆ. ಈ ಸನ್‌ ಬರ್ಡ್‌ಗಳ ಇನ್ನೊಂದು ವಿಶೇಷವೆಂದರೆ ಇವು ಹಮ್ಮಿಂಗ್‌ ಬರ್ಡ್ ರೀತಿಯಲ್ಲಿಯೇ ಆಕಾಶದಲ್ಲಿ ರೆಕ್ಕೆ ಬಡಿಯುತ್ತ ಕೆಲವು ನಿಮಿಷಗಳ ಕಾಲ ನಿಲ್ಲಬಲ್ಲವು. ಈ ಸನ್‌ಬರ್ಡ್‌ಗಳಲ್ಲಿ ಹೆಣ್ಣು ಸನ್‌ ಬರ್ಡ್ ಗೂಡು ಕಟ್ಟುವ ಕೆಲಸ ಮಾಡಿದರೆ, ಗಂಡು ಸನ್‌ ಬರ್ಡ್‌ಗಳು ಆಹಾರ ತರುವ ಕೆಲಸವನ್ನು ಮಾಡುತ್ತವೆ.