ಯಾರೂ ತುಳಿಯದ ಹಾದಿಯ ಬದಿಯಲಿ
ಮೌನದೊಳಿರುವಳು ಈ ಚೆಲುವೆ.
ಪ್ರಕೃತಿಯ ಸುಂದರ ಹಂದರದಲ್ಲಿ
ವಧುವಾಗಿರುವಳು ಈ ಮುಗುದೆ !

ಹಕ್ಕಿಯ ಇನಿದನಿಯುಂಡವಳಿವಳು
ಸಗ್ಗದ ಕಂಬನಿ ಕುಡಿದವಳು.
ಹೊಂಗಿರಣದ ಮೃದು ಚುಂಬನದಲ್ಲಿ
ತುಟಿಯನು ಅರಳಿಸಲರಿತವಳು.

ಮೃದುಗಾಳಿಯ ಮರ್ಮರ ನಾದದಲಿ
ಬಳುಕುತ ಲಾಸ್ಯವನಾಡುವಳು.
ದೂರದ ದುಂಬಿಯ ಗುಂಜಾ ರವವನು
ಮೆಲ್ಲನೆ ತನ್ನೆಡೆ ಸೆಳೆದವಳು !

ಈಕೆಯ ಮೈ ಹೊಸಮಳೆಯಲಿ ಮಿಂದಾಗ
ಸ್ವರ್ಗವೆ ಎದೆಯೊಳು ಮೂಡುವುದು.
ಈಕೆಯ ಸೊಬಗಿಗೆ ಕಾಮನಬಿಲ್ಲೂ
ಬಾಗುತ ಮುತ್ತನ್ನೊತ್ತಿಹುದು.

ಈಕೆಯ ಹೆಸರನು ಕೇಳುವೆಯೇನು ?
ಇಂತಹ ಚೆಲುವಿಗೆ ಹೆಸರೂ ಊನ !
ಚೆಲುವಿಗೆ ಚೆಲುವೆನ್ನದೆ ಮತ್ತೇನು ?
ಮೌನದೊಳೊಲಿವುದೆ ಸನ್ಮಾನ !