ದೃಶ್ಯವಹ ಮೋಡಗಳ
ಸುಳಿವಿಲ್ಲ ಬಾನಿನಲಿ
ರವಿಬಿಂಬ ರಾಜಿಸಿದೆ
ಬಾನ ನೀಲಿಮೆಯಲ್ಲಿ
ಭಾದ್ರಪದ ಮಾಸದೀ
ಸಿರಿಹಸಿರು ಬಯಲಲ್ಲಿ
ಸೊದೆ ಸುರಿಯುವಂತೆ
ಮೆಲ್ಲನವತರಿಸುತಿದೆ
ಜಲಕಣದ ಸಂತೆ !

ಗಗನಮನದ ಶುಭ್ರ ಚಿಂತೆ
ಸುರಿವ ಜಲದ ಅಲರಿನಂತೆ
ಹನಿ ಹನಿ ಹನಿಯಾಗಿದೆ !
ಹಚ್ಚಹಸಿರ ತಲೆಯ ಮೇಲೆ
ಮಳೆಯ ಬಿಲ್ಲ ಮರಿಯವೋಲೆ
ಮಿರು ಮಿರು ಮಿರು ಮಿರುಗಿದೆ !

ಬೆನಕನಿಳೆಗೆ ಬಂದನೆಂದು
ಬಾನಿನಕ್ಷಿ ಹರ್ಷಬಿಂದು
ಅವತರಿಸಿದವೋಲಿದೆ.
ಸರ್ವಮಂಗಳಾಂಗಿ ಶಿವೆಗೆ
ಪರಮಶಿವನ ಹರಕೆಯೊಸಗೆ
ಇಳಿಯುವಂತೆ ತೋರಿದೆ.

ಭಾದ್ರಪದದ ಚೌತಿಯಂದು
ಇಲ್ಲಿ ಬಯಲಿನಲ್ಲಿ ನಿಂದು
ಶಿವನ ಕೃಪೆಯ ಕಂಡೆನು
ಶಿವನ ಸೊಬಗನುಂಡೆನು !