ಸಂತಾಪವೊ ಸಂತೋಷವೊ
ಏನಾದರೆ ಏನು-
ನಗುನಗುವುದೆ ನವಜೀವನ
ಸಂತೋಷವೆ ಸುಮಜೀವನ
ಎಂತೆಂಬುದೆ ಬಾಳ್ಗವನದ
ಪಲ್ಲವಿ ನಿನಗೆ
ಎಂದೆಂದಿಗು ನೀ ಹಾಡುವ
ಹೊಸ ಹಾಡಿದು ಜಗಕೆ.

ಸಾಕಷ್ಟಿದೆ ಬಡಿದಾಟ
ಸಾಕಷ್ಟಿದೆ ನೋವು
ಎದೆ ಬಿರಿಯುವ ನರಳಾಟ
ಬರಿ ವ್ಯರ್ಥದ ಸಾವು !
ಎಲ್ಲೆಲ್ಲಿಯು ದ್ವೇಷದ ಹೊಗೆ,
ಒಣರೋಷದ ಕಿಚ್ಚು
ದಹಿಸುತ್ತಿದೆ ಜೀವನವನು
ಏನಿದು ಬರಿ ಹುಚ್ಚು ?

ಈ ಹುಚ್ಚಿನ ಈ ಕಿಚ್ಚಿನ
ಈ ನೋವಿನ ನಡುವೆ
ಸಂತೃಪ್ತಿಯ ಸಂತೋಷದ
ನಗೆಮೊಗವೊಂದಿಲ್ಲ
ಎಲ್ಲೆಲ್ಲಿಯು ಸ್ವಾರ್ಥದ ಹೊಗೆ
ಹಬ್ಬಿದೆ ಜಗವೆಲ್ಲ.

ಇಹ ನೋವಿಗೆ, ಎದೆ ನೋವನು
ತುಂಬುವರೇ ಎಲ್ಲ,
ಗರಳವ ಕುಡಿದಮೃತವನು
ಹಂಚುವರೇ ಇಲ್ಲ
ಇಂತಾಗಿಹ ಈ ಜಗದಲಿ ನಿನ್ನಂತಹ ಸುಮವೆ
ಸಾಕೆನಗೀ ಉಳಿದೆಲ್ಲವು ಹಾಳಾದರು ಸೊಗವೆ.