ಪ್ರಸ್ತಾವನೆ

ಈ ಪ್ರಪಂಚದಲ್ಲಿ ಹೂಗಳ ಸೌಂದರ್ಯಕ್ಕೆ, ಪರಿಮಳಕ್ಕೆ ಮಾರು ಹೋಗದವರು ಅತೀ ವಿರಳ. ಹೂಗಳ ಅಂದ ಚಂದ ಸುವಾಸನೆಗೆ ಮನ ಸೋಲದವರೇ ಇಲ್ಲವೆಂದರೆ ತಪ್ಪಿಲ್ಲ. ನೂರಾರು ಬಣ್ಣ ಬಣ್ಣದ ಪ್ರಕಾರಗಳಲ್ಲಿರುವ ಸೌಗಂಧ ಬೀರುವ ಈ ಹೂಗಳ ಬೆಡಗು ಕವಿ ಕಲಾವಿದರಿಗೆ ಹಬ್ಬದ ಸಂಭ್ರಮ ನೀಡಿ ಪುಳಕಪಡಿಸುತ್ತದೆ. ಸ್ಫೂರ್ತಿಯ ಕಾರಂಜಿ ಚಿಮ್ಮಿಸುತ್ತದೆ. ಈ ಹೂವಿನ ರಶ್ಮಿಯಲ್ಲಿರುವ ವರ್ಣ ವೈಭವವನ್ನು ತಮ್ಮ ಕುಂಚದಿಂದ ಪ್ರತಿ ಕೃತಿಯನ್ನು ರಚಿಸಿ ತಮ್ಮಲ್ಲಿಯ ಕಲಾಶಕ್ತಿಯನ್ನು ಕಲಾವಿದರು ಪ್ರದರ್ಶಿಸಿದರೆ, ಕವಿ ಪುಂಗವರು ತಮ್ಮಶಬ್ದಲಾಲಿತ್ಯದಿಂದ ಸುಂದರ ಕವನಗಳನ್ನು ರಚಿಸಿ ಹಾಡಿ ತಮ್ಮ ಪ್ರತಿಭಾ, ಸಾಮರ್ಥ್ಯ ಅಭಿವ್ಯಕ್ತಪಡಿಸಿದ ಅನೇಕ ಉದಾಹರಣೆಗಳು ನಮಗೆ ದೊರೆತಿವೆ. ವಿಶ್ವದಲ್ಲಿಯ ಈ ಪುಷ್ಪ ವೈವಿಧ್ಯದ ಬೆಡಗು ಒಬ್ಬೊಬ್ಬರಿಗೂ ಒಂದೊಂದು ತೆರನಾಗಿ ಕಾಣುತ್ತದೆ. ನೋಡುವ ಕಂಗಳಿಗೆ ತೃಪ್ತಿಯ ರಸದೂಟ ನೀಡುತ್ತದೆ.

ನಾವು ಈ ಸೃಷ್ಟಿಯಲ್ಲಿ ಕಾಣುವ ಹೂ ಗಿಡಗಳಲ್ಲಿ ಕೆಲವು ವರ್ಷಕ್ಕೊಮ್ಮೆ ಅರಳು ಘಮ ಘಮಿಸುವ ಪುಷ್ಪಗಳಾದರೆ ಇನ್ನು ಕೆಲವು ಇಡಿ ವರ್ಷವೆಲ್ಲವೂ ಅರಳಿಕೊಂಡು ಬೆಳೆಯುವಂಥವು. ಹಲವುಂಟು ತರುಲತೆಗಳಲ್ಲಿ ಬಿರಿಯುವ ಪುಷ್ಪಗಳು ಕೆಲವಿದ್ದರೆ, ಮರಗಡಿಗಳಿಗೆ ಹಬ್ಬಿಕೊಂಡು ಬೆಳೆಯುವ ಹೂಬಳ್ಳಿಗಳು ಇನ್ನೂ ಹಲವು ಒಂದೊಂದೂ ಭಿನ್ನವಾದವು..ವೈವಿಧ್ಯದ ಮಕರಂಧವನ್ನು ಸೂಸುವಂಥವು. ಪುಟ್ಟ ಪುಟ್ಟ ಮೊಗ್ಗುಗಳಲ್ಲಿ ಅರಳಿಕೊಂಡು ತನ್ನ ಸುಗಂಧ ಪರಿಮಳವನ್ನು ಪಸರಿಸಿ ಇಡೀ ವಾತಾವರಣವನ್ನು ಚೈತನ್ಯಪಡಿಸುವ ಹೂಗಳು ಒಂದೆಡೆ ಇದ್ದರೆ ಮತ್ತೊಂದೆಡೆಗೆ ತಮ್ಮ ವರ್ಣ ವೈಭವದಿಂಧ ನೋಡುವವರ ಹೃದಯಗಳನ್ನೇ ತನ್ನಡೆಗೆ ಸೆಳೆಯುವ ಪುಷ್ಪಗಳುಂಟು. ಮಯೂರದಂತೆ ತಮ್ಮ ನೃತ್ಯ ವೈಖರಿ ತೋರುವ ಕೆಲವು ಹೂಗಳು, ಹಕ್ಕಿ ಪಕ್ಷಿಗಳಂತೆ ಮಿಂಚುವ ಸುಂದರ ಕಲಾತ್ಮ ಜಡೆಯಲ್ಲಿ ಪೋಣಿಸಿದಂತಿರುವ ಈ ಹೂಗಳ ಸೊಬಗನ್ನೂ ನೋಡುತ್ತಿದ್ದರೆ ಈ ಕಣ್ಣುಗಳು ಇನ್ನೆರಡು ಬೇಕಿತ್ತೇನೊ ಎನಿಸುತ್ತದೆ. ಅದ್ಭುತ ಸೌಂದರ್ಯ ಪ್ರಪಂಚವನ್ನೇ ನಮ್ಮೆದುರಲ್ಲಿ ಸೃಷ್ಟಿಸುವ ಈ ಮಾಧುರ್ಯದ ಪುಷ್ಪಗಳು ಪ್ರಕೃತಿ ದೇವಿಯು ನೀಡಿದ ಅಮೌಲ್ಯ ಕೊಡುಗೆಯೇ ಸರಿ.

ನಿಸರ್ಗದಲ್ಲಿಯ ಈ ಹೂ ಗಿಡಗಳ ವೈವಿಧ್ಯತೆ ನಮ್ಮನ್ನು ಬೆರಗುಪಡಿಸುತ್ತದೆ. ವಾರ್ಷಿಕ ಗಿಡಗಳು ಕೆಲವಿದ್ದರೆ ಇನ್ನು ಕೆಲವು ಹಂಗಾಮಿಗೆ ಸರಿಯಾಗಿ ಬಿರಿದು ಹೂಗಳನ್ನು ನೀಡುವಂಥವು. ವರ್ಷಕ್ಕೊಮ್ಮೆಯೇ ಅರಳಿಕೊಂಡು ತಮ್ಮ ಹಿರಿಮೆ ಸಾರುವ ಬ್ರಹ್ಮ ಕಮಲದಂಥವು. ಕೆಲವೇ ಕೆಲವು.. ನಮ್ಮೆಲ್ಲರ ಅವಶ್ಯಕತೆಗನು ಸಾರವಾಗಿ ಹೂಗಿಡಗಳನ್ನು ಬೆಳೆಸಿ ಅವುಗಳಿಂದ ಪ್ರಯೋಜನವನ್ನು ಪಡೆದುಕೊಳ್ಳುವುದು ನಮ್ಮ ಕರ್ತವ್ಯ. ಈ ವಿವಿಧ ಹೂಗಳನ್ನು ಭಗವಂತನಿಗೆ ಪೂಜೆಗೆ, ಅಲಂಕಾರಕಕ್ಕೆ ಮಾಲೆಕಟ್ಟುವುದಕ್ಕೆ ಇವೆ. ಮನೆ, ಹೋಟೆಲ್‌, ಕಛೇರಿಗಳ ಹೂದಾನಿಗಳಲ್ಲಿಡುವುದಕ್ಕೆ ಹೀಗೆ ಬೇರೆ ಬೇರೆ ಪ್ರಕಾರದ ಹೂಗಳನ್ನು ಬೆಳೆದು ಹೇರಳವಾದ ಸಂಪಾದನೆ ಮಾಡುವುದು ಇತ್ತೀಚಿನ ಹವ್ಯಾಸವಾಗಿದೆ.

ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುವ ಮಲ್ಲಿಗೆ, ಗುಲಾಬಿ, ಸುಗಂಧರಾಜ ಸೇವಂತಿ, ಚಂಡೂ ಹೂ ಮುಂತಾದ ಹೂಗಳ ಉತ್ಪಾದನೆ ಮಾಡುವುದರ ಮೂಲಕವಾಗಿ ರೈತರು ಅಧಿಕ ಆರ್ಥಿಕ ಸಂಪನ್ಮೂಲ ಪಡೆಯಲು ಸಾಧ್ಯವಿದೆ. ಈ ಎಲ್ಲ ಪ್ರಕಾರದ ಹೂಗಳ ಬೇಸಾಯದಲ್ಲಿ ಒಂದೊಂದು ವಿಶಿಷ್ಟವಾದಂತ ತಾಂತ್ರಿಕ ವಿಧಾನಗಳಿದ್ದು ಅವುಗಳನ್ನು ಅಳವಡಿಸಿಕೊಂಡು ಈ ಹೂಗಿಡಗಳನ್ನು ಬೆಳೆಸಿದ್ದಾದರೆ ಅಧಿಕ ಲಾಭವನ್ನು ಪಡೆಯುವುದು ಬಹು ಸುಲಭ.

ಹೂಗಳ ರಾಣಿಯೆಂದೇ ಕರೆಯಲ್ಪಡುವ ಗುಲಾಬಿ ಕೃಷಿಯಿಂದ ಲಕ್ಷ ಲಕ್ಷ ಸಂಪಾದಿಸುತ್ತಿರುವ ನಮ್ಮ ರೈತರು ಅವುಗಳನ್ನು ವಿದೇಶಕ್ಕೂ ಸಹ ರವಾನಿಸಿ ತಮ್ಮ ಯಶೋಗಾಥೆ ಬರೆಸಿದ್ದಾರೆ. ರಾಶಿ ರಾಶಿ ಮಲ್ಲಿಗೆ ಬೆಳದು ಗ್ರಾಹಕರಿಗೆ ಮಲ್ಲಿಗೆ ಮಾಲೆ ಮಾಡಿ ಮಾರುವ ಹೂವಾಡಗಿತ್ತಿಯರ ಪಕ್ಕದಲ್ಲಿ ರಾಶಿ ಹಾಕಿಕೊಂಡು ಸೇವಂತಿಗೆ ಮಾರುವ ಹುಡುಗ ಹಣದ ಲೆಕ್ಕ ಮಾಡಿ ಸಂತಸಪಡುವುದನ್ನೂ ಕಂಡಾಗ ಆಶ್ಚರ್ಯವೆಸದೇ ಇರದು. ಹಬ್ಬ ಹರಿದಿನಗಳಲ್ಲಿಯಂತೂ ಪುಷ್ಪ ಸಂಪತ್ತಿಗೆ ಇರುವ ಬೇಡಿಕೆ ಇಂದು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಿರಿದ ನಕ್ಷತ್ರಗಳ ರಾಶಿಯಂತಿರುವ ಈ ಮೋಹಕ ಮಲ್ಲಿಗೆ ಮಾಲೆಯ ಜತೆಗೆ ಕೆಂಪು ವರ್ಣದ ಅಬೋಲಿ ಹೂಗಳನ್ನು ಜತೆಮಾಡಿದ ಹೂವಿನ ಮಾಲೆಗೆ ವಿಶೇಷವಾದಂಥ ಬೇಡಿಕೆಯಿರುತ್ತದೆ. ಜಡೆಗೆ ಹೆಣೆದ ಮಾಲೆಯಂತೆಯೇ ಅರಳಿಕೊಂಡ ಮಲೆನಾಡಿನ ಆ ಸುಂದರ ‘ಸೀತಾಳೆ ಹೂ’ವಿನ ಸೌಂದರ್ಯವಂತೂ ಕಣ್ಣುಗಳಿಗೆ ಅದೆಂಥ ಸಂತಸ, ಸೃಪ್ತಿ ನೀಡುತ್ತದೆಂಬುದನ್ನೂ ಅನುಭವಿಸಿದವರಿಗೇನೇ ಗೊತ್ತು. ಸೃಷ್ಟಿಯ ಅದ್ಭುತ ಲೋಕದಲ್ಲಿ ಕಂಡುಬರುವ ವಿವಿಧ ಹೂಗಳ ಕೃಷಿಯ ಬಗೆಗೆ ಪರಿಚಯವನ್ನಿಲ್ಲಿ ವಿವರಿಸಲಾಗಿದೆ. ಇಲ್ಲಿರುವ ವಿವರಗಳೊಂದಿಗೆ ಸ್ಪಂಧಿಸಿದ ನೀವೂ ಸಹ ಪುಷ್ಪಕೃಷಿಗೈದು ನಿಮ್ಮ ಆರ್ಥಿಕ ಸಂಪನ್ಮೂಲ ವೃದ್ಧಿಪಡಿಸಿಕೊಳ್ಳಬಹುದು. ಮನೆಯ ಕೈತೋಟದಲ್ಲಿ, ತಾರಸಿಯಲ್ಲೂ, ನಿಮ್ಮ ಜಮೀನಗಳಲ್ಲೂ ವಿವಿಧ ಹೂ ಗಿಡಗಳನ್ನು ಬೆಳೆದು ಸೌಂದರ್ಯರಸ ಸ್ವಾದನೆ ಮಾಡಬಹುದು.

ಹೂಗಳಲ್ಲಿನ ವಿಶೇಷತೆ, ಅವುಗಳನ್ನು ಬೆಳೆಸಲು ಬೇಕಾದ ಪೂರ್ವ ಸಿದ್ಧತೆ, ಕೃಷಿ ತಾಂತ್ರಿಕತೆ, ಹೂಗಳ ಉತ್ಪಾದನೆ, ಉಪಯೋಗ ಹಾಗೂ ಮಾರುಕಟ್ಟೆ ಈ ಬಗೆಗಿನ ಕಿರುಪರಿಚಯವನ್ನು ಮಾತ್ರ ಆ ಮೂಲಕ ನೀಡಲಾಗಿದ್ದು ನಾವು ಹೂಗಳ ಬೇಸಾಯದಲ್ಲಿ ತೊಡಗುವಾಗ ಕೈಕೊಳ್ಳಬೇಕಾದ ಸೂಕ್ಷ್ಮ ತಾಂತ್ರಿಕ ಕ್ರಮಕಗಳು, ಹೂಗಳ ತಳಿ ವಿಶೇಷಗಳ ಕಿರು ಪರಿಚಯವೂ ನಿಮಗಾಗುವುದರಿಂದ ಈ ಪುಷ್ಪ ಕೃಷಿಯನ್ನು ನೀವು ಹವ್ಯಾಸವನ್ನಾಗಿ ಬೆಳೆಸಿಕೊಂಡಲ್ಲಿ ನಿಮ್ಮಲ್ಲೂ ಸೌಂದರ್ಯ ಪ್ರಜ್ಞೆ ಅರಳಿಕೊಂಡು ಜೀವನದಲ್ಲಿ ಸಂತೋಷ, ತೃಪ್ತಿಗಳನ್ನು ಪಡೆಯಲು ಕಾಲಾವಕಾಶವಿದೆ. ನೀವು ಒಮ್ಮೆ ಹೂವಿನ ಕೃಷಿ ಮಾಡಿ ನೋಡಿ! ಇಲ್ಲಿರುವ ಕುಸುವ ಪ್ರಪಂಚದ ವಿವರ ಓದಿಕೊಳ್ಳಿ.

. ಹೂಗಳ ರಾಣಿ ಗುಲಾಬಿ

ಪುಷ್ಪ ಪ್ರಪಂಚದಲ್ಲಿ ‘ಗುಲಾಬಿ’ ಹೂವಿಗೆ ಅತ್ಯಂತ ಮಹತ್ವದ ಸ್ಥಾನ. ‘ಗುಲಾಬಿ’ ಹೂಗಳ ರಾಣಿಯೆಂದೇ ಕರೆಸಿಕೊಂಡಿದೆ. ಇದು ಪ್ರಪಂಚ ಈ ಹೂವಿನ ಕೃಷಿ ಬಹು ಬೇಡಿಕೆಯದಾಗಿದ್ದು ದೇಶ ವಿದೇಶಗಳಲ್ಲೂ ಈ ಹೂವಿನ ಕೃಷಿ ಮಾಡುತ್ತಿರುವುದು ನಮ್ಮ ಗಮನಕ್ಕೆ ಬರುತ್ತದೆ. ಗುಲಾಬಿಯನ್ನು ಕತ್ತರಿಸಿದ ಹೂವಿನಂತೆ, ಅಲಂಕಾರಕ್ಕೆ, ಉದ್ಯಾನವನಗಳಲ್ಲಿ ಸೌಂಧರ್ಯ ಹೆಚ್ಚಿಸಲು ಬೆಳೆಸುತ್ತಿದ್ದು ಕಣ್ಣಿಗೆ ತನ್ನ ವಿವಿಧವಾದ ವರ್ಣ ಮಾಧುರ್ಯದಿಂದ ಹಿತ ಸಂತೋಷವನ್ನುಂಟು ಮಾಡುವ ಗುಲಾಬಿ ಹೂವಿನ ಸುವಾಸನೆಯನ್ನು ಬಣ್ಣಿಸಲಾಗಿಲ್ಲ.

ಗುಲಾಬಿಯ ಸಸ್ಯನಾಮ ‘ರೋಸಾ’ ಈ ಗುಲಾಬಿ ಪುಷ್ಪದಿಂದ ತೈಲ, ಗುಲಾಬಿ ನೀರು ಗುಲಾಬಿ ಕಾಂಕ್ರೀಟ್‌, ಅಬ್ಸುಲ್ಯೂಟ್‌, ರೋಜ್‌ ಅತ್ತರ, ಗುಲ್ಕಂದ, ಗುಲ್‌ರೋಗನ್‌, ಪನ್‌ಕ್ಯೂರಿ ಮುಂತಾದವುಗಳ ಉಪ ಉತ್ಪನ್ನಗಳನ್ನು ಮಾಡಿ ಮೌಲ್ಯವರ್ಧನೆಗೊಳಿಸಿ ಆರ್ಥಿಕ ಸಂಪನ್ಮೂಲ ಕಲ್ಪಿಸಿಕೊಳ್ಳಬಹುದು.

ಮಣ್ಣು: ಗುಲಾಬಿಗಿಡ ಬೆಳೆಸಲು ಚೆನ್ನಾಗಿ ನೀರು ಬಸಿದು ಹೋಗುವ ರಸಸಾರ ೫-೩ ರಿಂದ ೫-೫ರ ಪ್ರಮಾಣದಲ್ಲಿನ ಕೆಂಪು ಗೋಡುಮಣ್ಣು ಹೆಚ್ಚು ಸೂಕ್ತವಾದದ್ದು.

ನಾಟಿಗೆ ಸಮಯ: ಗುಲಾಬಿ ಬೆಳೆ ಮಾಡಲು ಸೂಕ್ತವಾದ ಸಮಯವೆಂದರೆ ತಂಪಾದ ಒಣಹವೆ. ಹಿತಕರವಾಗದ ಹವೆ-ಬೆಳೆಕಿರುವ ಪ್ರದೇಶದಲ್ಲಿ ಗುಲಾಬಿಯನ್ನು ಹುಲುಸಾಗಿ ಬೆಳೆಯಬಹುದು. ಗಾಳಿಯ ರಕ್ಷಣೆಯಿರುವ ಪ್ರದೇಶ ಹೆಚ್ಚು ಸೂಕ್ತ. ನಾಟಿಯನ್ನು ಜೂನ್‌ ಹಾಗೂ ಅಕ್ಟೋಬರ್ ತಿಂಗಳುಗಳಲ್ಲಿ ಮಾಡುವುದು ಅತಿಯೋಗ್ಯವಾದುದು.

ಗುಲಾಬಿ ತಳಗಳು: ಗುಲಾಬಿ ಹೂಗಳಲ್ಲಿ ಅನೇಕ ತಳಿ ಪ್ರಭೇದಗಳಿವೆ. ಅವುಗಳಲ್ಲಿ ಪ್ರಮುಖವಾದುವುಗಳೆಂದರೆ ಕ್ವೀನ್‌ ಎಲಿಜಬೆತ್‌, ಸೂಪರ್ ಸ್ಟಾರ್ ವೈಟ್‌ ಕ್ರಿಸ್‌ಮಸ್‌, ಕ್ರಿಶ್ಚಿಯನ್‌ ಹೋಮ್‌, ಬ್ಲ್ಯಾಕ್‌ ರೂಬಿ, ಪೂಸ ಸೋನಿಯಾ ಮರ್ಸಿಡಿಸ್, ಗ್ಲೇಡಿಯೇಟ‌ರ್, ಸೋನಿಯಾ ಮೀಲ್ಯಾಂಡ್‌, ಅರ್ಜುನ್‌ ಮತ್ತು ಕ್ರಿಶ್ಚಿಯನ್‌ ಡೈಯೋರ್ ಇವಲ್ಲದೆ ಇತ್ತೀಚಿಗೆ ಬಿಡುಗಡೆಗೊಂಡಿರುವ ತಳಿಗಳಲ್ಲಿ ಸ್ವೀಟ ಹಾರ್ಟ, ಬೇಬಿ ರೋರ್ಟರ್ಸ, ಇಲೋನ್‌ ಕರೋನಾ, ಫಸ್ಟ ರೆಡ್‌, ವಿವಾಲ್ಡಿ ಮತ್ತು ಎಟರ್ನಾ ಇವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚನ ಬೇಡಿಕೆ ಪಡೆದುಕೊಂಡಿರುವ ತಳಿಗಳಾಗಿವೆ.

ಬೇಸಾಯ ವಿಧಾನ: ಗುಲಾಬಿ ಬೆಳೆ ಮಾಡಬೇಕೆಂದಿರುವ ಪ್ರದೇಶದಲ್ಲಿ ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ಹದಗೊಳಿಸಿ ೪೫ ಸೆಂ.ಮೀ ಉದ್ದ ೪೫ ಸೆಂ.ಮೀ ಅಗಲ ಹಾಗೂ ೪೫ ಸೆಂ.ಮೀ. ಅಂತರದಲ್ಲಿ ಇತರ ಸಾದಾ ತಳಿಗಳಾಗಿದ್ದರೆ ೬೦ ಸೆಂ.ಮೀ ಅಂತರದಲ್ಲಿ ನಾಟಿ ಮಾಡಿ ಗುಲಾಬಿ ಕೃಷಿ ಮಾಡಬಹುದು. ಗುಣಿಯಲ್ಲಿ ಮೇಲ್ಮಣ್ಣಿನೊಂದಿಗೆ ಎರಡು ಕಿಲೋಗ್ರಾಂ ಪ್ರಮಾಣದ ಕಳೆತ ಕೊಟ್ಟಿಗೆ ಗೊಬ್ಬರವನ್ನು ತುಂಬಿ ಕನ್ಣು ಹಾಕಿದ(ಕಸಿ) ಸಸಿಗಳನ್ನು ಕಸಿಗಟ್ಟಿದ ಭಾಗವು ಭೂಮಿಯ ಮೇಲ್ಭಾಗದಲ್ಲಿರುವಂತೆ ನಾಟಿ ಮಾಡಬೇಕು. ಬಿಸುವ ಗಾಳಿಯಿಂದ ರಕ್ಷಣೆ ಮಾಡಲು ಕೋರಿನ ಸಹಾಯ ಕೊಟ್ಟು ಗುಲಾಬಿ ಗಿಡಗಳನ್ನು ಬೆಳೆಸಿ ಉತ್ತಮ ಹೂಗಳನ್ನು ಪಡೆಯಬಹುದು.

ಉತ್ತಮ ಗುಣಮಟ್ಟದ ಗುಲಾಬಿ ಹೂಗಳನ್ನು ಪಡೆಯಲು ಸುಧಾರಿತ ಬೇಸಾಯ ತಾಂತ್ರಿಕತೆಗಳನ್ನು ಅನುಸರಿಸುವುದು ಸೂಕ್ತ. ನಾಟಿ ಸಮಯದಲ್ಲಿ ಯಾವುದೇ ರಾಸಾಯನಿಕ ಗೊಬ್ಬರಗಳನ್ನು ಕೊಡುವುದು ಅವಶ್ಯವಿಲ್ಲ ಸಸಿ ನಾಟಿ ಮಾಡಿದ ಒಂದು ತಿಂಗಳ ನಂತರದಲ್ಲಿ ಗುಲಾಬಿಗೆ ಸಿಫಾರಿತ ರಾಸಾಯನಿಕ ಗೊಬ್ಬರವನ್ನು ಪ್ರತಿಗಿಡಕ್ಕೆ ನೀಡುವುದು ಅಗತ್ಯ. ಮೊದಲ ಹಂತದಲ್ಲಿ ೫ ಗ್ರಾಂ ಸಾರಜನಕ, ೫ ಗ್ರಾಂ ರಂಜಕ, ೭೫. ಗ್ರಾಂ ಪೋಟಾಷ್‌ ಗೊಬ್ಬರಗಳನ್ನು ಮಣ್ಣಿಗೆ ಬೆರೆಸಬೇಕಲ್ಲದೇ ನಂತರ ಒಂದೂವರೆ ತಿಂಗಳಲ್ಲಿ ಮತ್ತೊಮ್ಮೆ ಇಷ್ಟೇ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಗುಲಾಬಿ ಗಿಡಗಳಿಗೆ ಕೊಟ್ಟು ಸುಂದರವಾದ ಪುಷ್ಪಗಳನ್ನು ಪಡೆಯಬಹುದು. ಈ ರಸಗೊಬ್ಬರಗಳನ್ನು ಗಿಡಗಳ ಸವರಿಕೆ (ಚಾಟ್ನಿ) ಮಾಡಿ ಕೊಡುವುದರಿಂದಾಗಿ ಉತ್ತಮ ಗುಣಮಟ್ಟದ ಹೂವುಗಳನ್ನು ಪಡೆಯಲು ಸಾಧ್ಯ.

ಗುಲಾಬಿ ಗಿಡಗಳನ್ನು ಕೇವಲ ಗೊಬ್ಬರ, ನೀರುಣಿಸಿ ಬೆಳೆಸದೇ ಕೆಲವು ವಿಶೇಷ ತಾಂತ್ರಿಕತೆ ವಿಧಾನ ಬಳಸಿ ಬೆಳೆಸಿದಲ್ಲಿ ಹುಲುಸಾಗಿ ಗುಲಾಬಿ ಹೂಗಳನ್ನು ಉತ್ಪಾದಿಸಲು ಒಂದು ಸಲ ನೀರುಣಿಸುವುದು, ಪ್ರತಿ ವರ್ಷದಲ್ಲಿ ಎರಡು ಸಲ ಚಾಟ್ನಿ(ಸವರಿಕೆ ಮಾಡುವುದು ಅವಶ್ಯಕ ಮೊದನೆಯ ಚಾಟ್ನಿ ಮೇ, ಜುನ್‌ದಲ್ಲಾದರೆ ಎರಡನೆಯ ಚಾಟ್ನಿ ಅಕ್ಟೋಬರ್ ನವೆಂಬರ್ ದಲ್ಲಾಗಬೇಕು. ಗುಲಾಬಿ ಗಿಡಗಳಲ್ಲಿ ಈ ಚಾಟ್ನಿ ತಾಂತ್ರಿಕತೆ ಬಳಸಿ ವರ್ಷವಿಡೀ ಹೂಗಳನ್ನು ಪಡೆಯಬಹುದು. ಚಾಟ್ನಿ ಮಾಡಿದ ೪೫ ದಿನಗಳಲ್ಲಿ ಸುಂದರವಾದ ಸುಪುಷ್ಪ ಗುಲಾಬಿ ಹೂಗಳು ದೊರೆಯುತ್ತವೆ. ಗಿಡಗಳನ್ನು ನೆಲೆದಿಂದ ೪೫ ಸೆಂ.ಮೀ ದಿಂದ ೬೦ ಸೆಂ.ಮೀ ಎತ್ತರದಲ್ಲಿ ಚಾಟ್ನಿ ಮಾಡಬೇಕು.

ಹಸಿರುಮನೆಯಲ್ಲಿ ಗುಲಾಬಿ ಕೃಷಿ ಮಾಡುವವರು ಈ ಚಾಟ್ನಿ ಬದಲಾಗಿ ನಿರುಪಯುಕ್ತವಾದ ಕವಲುಗಳನ್ನು ಎರಡು ಕಣ್ಣುಗಳ ಮೇಲೆ ಬಾಗಿಸಿ ಉತ್ತಮ ಹೂವುಗಳನ್ನು ಪಡೆಯಬಹುದು ಹಾಗೂ ಕಣ್ಣು ಹಾಕಿದ ಭಾಗದ ಕೆಳಗೆ ಆಗಾಗ್ಗೆ ಕಂಡುಬರುವ ಬೇರು ಸಸ್ಯದಿಂದ ಬರುವ ಚಿಗುರುಗಳನ್ನು ತೆಗೆದು ಹಾಕುವುದು. ಆಕರ್ಷಕ ಹಾಗೂ ದೊಡ್ಡ ಗಾತ್ರದ ಹೂವುಗಳನ್ನು ಪಡೆಯಲು ಗಿಡಗಳಲ್ಲಿ ಕೆಲವೇ ಮೊಗ್ಗುಗಳನ್ನು ಬಿಟ್ಟು ಮಿಕ್ಕೆಲ್ಲಾ ಮೊಗ್ಗುಗಳನ್ನು ತೆಗೆಯುತ್ತಿರಬೇಕು.

ಗುಲಾಬಿಗಿಡಗಳನ್ನು ಸವರಿಕೆ ಮಾಡಿದ ೪೫ ರಿಂದ ೬೦ ದಿನಗಳಲ್ಲಿ ಹೂಗಲು ಕೊಯ್ಲಿಗೆ ಸಿದ್ಧವಾಗುತ್ತವೆ. ಹೂವಿನ ಹೊರಪದರವು ತರೆದುಕೊಂಡ ನಂತರದಲ್ಲಿ ಸುಮಾರು ೨೫-೩೦ ಸೆಂ.ಮೀ ದೇಟಿನೊಂದಿಗೆ ಗುಲಾಬಿಹೂವನ್ನು ಕಟಾವು ಮಾಡಬೇಕು. ಕೊಯ್ಲು ಮಾಡಲು ಉತ್ತಮ ಸಮಯವೆಂದರೆ ಬೆಳಗಿನ ಜಾವ ಅಥವಾ ಸಾಯಂಕಾಲ ಸೂಕ್ತ. ಕೊಯ್ಲು ಮಾಡಿದ ಹೂಗಳನ್ನು ಗುಣಮಟ್ಟ ಕಾಫಾಡಲು ಸಾಧ್ಯ. ಒಂದು ಹೆಕ್ಟೇರ್ ಪ್ರದೇಶದಲ್ಲಿ ಗುಲಾಬಿ ಹೂವಿನ ಬೇಸಾಯವನ್ನು ಮಾಡಿ ೨ ರಿಂದ ೨.೫. ಲಕ್ಷ ಸಂಖ್ಯೆ ಗುಲಾಬಿ ಹೂಗಳನ್ನು ಪಡೆಯಬಹುದಾಗಿದೆ.

ಗುಲಾಬಿ ಬೆಳೆಗೆ ಕೀಟ ರೋಗಗಳ ಬಾಧೆ ತಪ್ಪಿದ್ದಲ್ಲ ಇದಕ್ಕೆ ಬಾಧಿಸುವ ಥ್ರಿಪ್ಸ, ಹೇಮ, ಹೂತಿನ್ನುವ ಕೀಡೆ ದುಂಬಿಗಳನ್ನು ನಿಯಂತ್ರಿಸಲು ಹಾಗೂ ಎಲೆಚುಕ್ಕೆರೋಗ, ಬೂದಿರೋಗ, ಟೊಂಗೆ ಒಣಗುವ ರೋಗಗಳನ್ನು ನಿರ್ವಹಣೆ ಮಾಡಲು ಸೂಕ್ತ ಹತೊಟಿ ಕ್ರಮಗಳನ್ನು ಕೂಡಲೇ ನಾವು ಕೈಕೊಂಡಲ್ಲಿ ಆಗುವ ಅಪಾಯವನ್ನು ತಪ್ಪಿಸಲು ಸಾಧ್ಯ. ಗುಲಾಬಿ ಕೃಷಿ ಮಾಡುವಾಗ ಬಹಳಷ್ಟು ಜಾಗೃತೆ ವಹಿಸುವುದು ಅವಶ್ಯ ತಾಂತ್ರಿಕತೆಗಳ ಬಳಕೆಯಲ್ಲಿ ವ್ಯತ್ಯಯ ಉಂಟಾದಲ್ಲಿ ಈ ಬೆಳೆಯಲ್ಲಿ ಲಾಭ ಪಡೆಯುವುದು ಅಸಾಧ್ಯ.

ಗುಲಾಬಿ ಉಪಯೋಗ: ಗುಲಾಬಿಯು ಬಹುಕಾಲದಿಂದಲೂ ಹೆಚ್ಚಿನ ಬೆಲೆಯ ತೈಲದಿಂದಾಗಿ ಬಹುಬೇಡಿಕೆಯಿರುವ ಸುಗಂಧ ಪದಾರ್ಥವಾಗಿದ್ದು ಉತ್ತಮ ದರ್ಜೆಯ ಪರಿಮಳದಲ್ಲಿ ಗುಲಾಬಿ ತೈಲದ ಪಾತ್ರವಿದ್ದು ಇದನ್ನು ತಂಪು ಪಾನೀಯ, ಮಧ್ಯ, ಕಾಂತಿವರ್ಧಕ ತಯಾರಿಯಲ್ಲಿ ತಂಬಾಕು ಸುವಾಸನೆಗೊಳಿಸಲು, ಹಣ್ಣುಗಳನ್ನು ಮಾಧುರ್ಯಪಡಿಸಲು, ಮೆದು ಪಾನಿಯಗಳಲ್ಲಿ ಔಷಧಿ ತಯಾರಿಸಲು ಬಳಸುತ್ತಿದ್ದು ಇದರ ಗುಲಕಂದವನ್ನು ಪಾನ ಬೀಡಾದಲ್ಲಿ ಬಳಸಿಯು ಗುಲಾಬಿಯ ಸವಿರುಚಿಯನ್ನು ಅನುಭವಿಸಲಾಗುತ್ತಿದೆ. ಪ್ರತಿದಿವಸ ಮೂರು ತೊಟ್ಟು ಈ ಗುಲಾಬಿ ತೈಲದ ಸೇವನೆ ಮಾಡಿ ನಾವು ಪಿತ್ತರಸದಿಂದಾಗುವ ನಮ್ಮ ತೊಂದರೆಯನ್ನು ಹೋಗಲಾಡಿಸಬಹುದು.

ಗುಲಾಬಿಗಿಡಗಳನ್ನು ಇತ್ತೀಚಿಗೆ ಸ್ವಲ್ಪೇ ಕ್ಷೇತ್ರದಲ್ಲಿ ಕೃಷಿಗೈದ ರೈತರು ಲಕ್ಷಾಂತರ ರೂಪಾಯಿಗಳಿಸಿ ಜೀವನ ಮಾರ್ಗವನ್ನು ಸಮೃದ್ಧಪಡಿಸಿಕೊಂಡ ಅನೇಕ ಯಶೋಗಾಥೆಗಳಿವೆ. ಸರ್ಕಾರವು ಇತ್ತೀಚಿಗೆ ರಾಷ್ಟ್ರೀಯ ತೋಟಗಾರಿಕೆ ಮಿಶನ್‌ ಯೋಜನೆಯನ್ನು ತೋಟಗಾರಿಕೆ ಇಲಾಖೆಯ ಮೂಲಕ ರೈತರಿಗೆ ಗುಲಾಬಿ ಕೃಷಿ ನೀಡಲು ಆರ್ಥಿಕ ಸೌಲಭ್ಯ ನೀಡುವ ಯೋಜನೆಯನ್ನು ರೂಪಿಸಿದೆ. ಇಂಥ ಯೋಜನೆಯ ಮೂಲಕವೂ ಗುಲಾಬಿ ಕೃಷಿ ಮಾಡಿ ಹೆಚ್ಚಿನ ಲಾಭವನ್ನು ಹೊಂದಲು ಸುಲಭ ಮಾರ್ಗವಿದೆ. ಹೂಗಳ ರಾಣಿ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡ ಗುಲಾಬಿ ಹೂವಿನ ಬೇಸಾಯ ನಮಗೆ ಲಕ್ಷ್ಮೀ ಕೃಪೆಯನ್ನು ಸಹ ಮಾಡುವುದೆಂಬುದನ್ನು ನಾವು ಯಾವತ್ತೂ ಮರೆಯಬಾರದು.

. ಮೋಹಕ ಮಲ್ಲಿಗೆ

ಹೂವಿನ ಲೋಕದಲ್ಲಿ ಮಲ್ಲಿಗೆಯನ್ನು ದೇವಪುಷ್ಪವೆಂದೇ ಕರೆಯುತ್ತಾರೆ. ಈ ಹೂವನ್ನು ಎಲ್ಲ ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಪೂಜೆ ಪುನಸ್ಕಾರಗಳಲ್ಲಿ ಹಬ್ಬ ಹರಿದಿನಗಳಲ್ಲಿ, ಕೇಶಶೃಂಗಾರದಲ್ಲಿ ಮನೆಗಳಲ್ಲಿ ಮಲ್ಲಿಗೆಯ ಬಳಕೆ ಹೆಚ್ಚು. ನಮ್ಮ ಪ್ರಾಚೀನ ವೈದಕೀಯ ವಿಧಾನದಲ್ಲಿ ರೋಗಗಳನ್ನು ಗುಣಪಡಿಸಲು ಮಲ್ಲಿಗೆ ಹೂವನ್ನು ವಾಣಿಜ್ಯ ಬೆಳೆಯಾಗಿ ಹೆಚ್ಚಿನ ಕ್ಷೇತ್ರದಲ್ಲಿ ನಮ್ಮ ರಾಜ್ಯದಲ್ಲಿ ಬೆಳೆಯುತ್ತಿದ್ದು ಕರಾವಳಿ ಪ್ರದೇಶದ ಶಂಕರಪುರ ಮಲ್ಲಿಗೆಯಾದರೆ ಉತ್ತರ ಕರ್ನಾಟಕದ ಗದಗ್‌ ಹಾವೇರಿ, ಹೂವಿನ ಹಡಗಲಿ, ಸವಣೂರು, ದಕ್ಷಿಣ ಕರ್ನಾಟಕದ ಬೆಂಗಳೂರು, ಮೈಸೂರು ಭಾಗದಲ್ಲಿ ಮಲ್ಲಿಗೆಹೂವನ್ನು ಬೆಳೆ ಮಾಡಿರುವ ಕ್ಷೇತ್ರ ಅಧಿಕವಾಗಿದೆ. ಮಲ್ಲಿಗೆ ಹಾರ, ಮಲ್ಲಿಗೆ ದಂಡೆ ಹಾಗೂ ಮಲ್ಲಿಗೆ ಮೊಗ್ಗಿನ ಜಡೆ ಮುಂತಾಗಿ ವೈವಿಧ್ಯ ರೀತಿಯಲ್ಲಿ ಈ ಹೂವನ್ನು ತಲೆತುಂಬ ಮುಡಿದು ಸಂತಸ ಪಡೆವ ಮಹಿಳೆಯರಿಗೇನೂ ಕೊರತೆಯಿಲ್ಲ. ಹೂಗಳನ್ನು ಭಟ್ಟಿ ಇಳಿಸಿ ಇತರ ವಿಧಾನಗಳಿಂದ ಸುಗಂಧ ತೈಲ, ಕಾಂಕ್ರೀಟನ್ನು ಪರಿಮಳ ವಸ್ತು, ಊದಬತ್ತಿ, ಅತ್ತರ ಉತ್ಪಾದನೆಯಲ್ಲಿಯೂ ಬಳಸಿಕೊಂಡು ಮೌಲ್ಯವರ್ಧನೆ ಮಾಡಿದ್ದರಿಂದಾಗಿ ಇತ್ತೀಚಿಗೆ ಮಲ್ಲಿಗೆ ಹೂವಿಗೆ ಅತಿ ಹೆಚ್ಚಿನ ಬೇಡಿಕೆಯುಂಟು.

ಮಲ್ಲಿಗೆಯ ಪ್ರಕಾರಗಳು: ಮೋಹಕ ಮಲ್ಲಿಗೆಯಲ್ಲಿ ಹಲವಾರು ಪ್ರಕಾರಗಳಿದ್ದು ಅವುಗಳಲ್ಲಿ ಪ್ರಮುಖವಾದವುಗಳಲ್ಲಿ ೧. ಕಾಕಡಾ ಮಲ್ಲಿಗೆ ೨. ದುಂಡು ಮಲ್ಲಿಗೆ ೩..ಉಡುಪಿ ಮಲ್ಲಿಗೆ ೪. ವಸಂತ ಮಲ್ಲಿಗೆ ೫. ಜಾಜಿ ಮಲ್ಲಿಗೆ ಮುಖ್ಯವಾದವುಗಳು.

. ಕಾಕಡಾ ಮಲ್ಲಿಗೆ (ಜಾಸ್ಮಿನಮ್‌ ಮಲ್ಟಿ ಫೋರಮ್‌): ಈ ಮಲ್ಲಿಗೆ ಗಿಡಗಳು ಪೊದೆಯಾಕಾರವಾಗಿದ್ದು ಇವು ವರ್ಷವಿಡೀ ಹೂಗಳನ್ನು ಕೊಡುವಂಥವು. ಬೇಸಿಗೆಯಲ್ಲಿ ಕಡಿಮೆ ಹೂಗಳನ್ನು ಕೊಡುತ್ತವೆ. ಸುವಾಸನೆ ಇಲ್ಲದ ಈ ಮಲ್ಲಿಗೆ ಹೂಗಳು ಹೆಚ್ಚಿನ ಕಾಲ ಬಾಡುವುದಿಲ್ಲ.

. ದುಂಡು ಮಲ್ಲಿಗೆ (ಜಾಸ್ಮಿನಮ್‌ ಸಾಂಬ್ಯಾಕ್‌): ಈ ಹೂಗಳನ್ನು ಮೈಸೂರು ಅಥವಾ ಬಳ್ಳಾರಿ ಮಲ್ಲಿಗೆಯಂತಲೂ ಕರೆಯಲಾಗುತ್ತಿದೆ. ಇದರಲ್ಲಿ ಒಂದು ಅಥವಾ ಅನೇಕ ಸುತ್ತಿನ ಹೂದಳಗಲಿರುತ್ತವೆ. ಹೂಗಳು ಸುವಾಸನಾ ಭರಿತವಾಗಿದ್ದು ಮೊಗ್ಗುಗಳು ದೊಡ್ಡ ಗಾತ್ರದ್ದಿರುತ್ತವೆಯಲ್ಲದೇ ದುಂಡಗಾಗಿರುತ್ತವೆ. ಈ ಪ್ರಕಾರದ ಮಲ್ಲಿಗೆ ಹೂ ಗಿಡಗಳು ಬೇಸಿಗೆ ಮತ್ತು ಮಳೆಗಾಲದಲ್ಲಿ ಹೂಗಳನ್ನು ಕೊಡುವ ಗುಣ ಹೊಂದಿರುತ್ತವೆ.

. ಉಡುಪಿ ಮಲ್ಲಿಗೆ (ಸಾಂಬ್ಯಾಕ್‌ ಜಾತಿಯ ದುಂಡುಮಲ್ಲಿಗೆ): ಈ ಹೂವಿನ ತಳಿಯನ್ನು ಹೆಚ್ಚಾಗಿ ರಾಜ್ಯ ಕರಾವಳಿ ಪ್ರದೇಶದ ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದಲ್ಲಿ ಹೆಚ್ಚಿನ ಕ್ಷೇತ್ರದಲ್ಲಿ ಬೆಳೆಯಲಾಗುತ್ತದೆ. ಗಿಡಗಳು ಪೊದೆಯಾಕಾರದಲ್ಲಿದ್ದು ಎಲೆಗಳು ಅಂಡಾಕಾರ ಹೊಂದಿರುತ್ತವೆ. ಹೂಗಳು ಶ್ವೇತಬಣ್ಣದದಲ್ಲಿದ್ದು ಕಡಿಮೆಯ ಸುವಾಸನೆ ಹೊಂದಿರುತ್ತದೆ. ಹೂದೇಟು ಉದ್ದವಾಗಿದ್ದು ಹೂಗಳ ಜೀವಿತಾವಧಿ ಚೆನ್ನಾಗಿದೆ. ಮೊಗ್ಗುಗಳು ಕೊಯ್ಲು ಮಾಡಿದ ೮ ರಿಂದ ೧೦ ತಾಸುಗಳವರೆಗೆ ಹಾಗೇ ಇರುತ್ತವೆ. ಈ ಹೂವಿನ ಮೊಗ್ಗುಗಳು ಮಧ್ಯಮ ಗಾತ್ರವನ್ನು ಹೊಂದಿದ್ದು ಈ ಹೂ ಬಿಡುವ ಕಾಲ ಮಾರ್ಚದಿಂದ ಜುಲೈ ಮತ್ತು ನವೆಂಬರ್ ದಿಂದ ಫೆಬ್ರವರಿ ತಿಂಗಳುಗಳಾಗಿವೆ.

ಕೃಷಿ ತಾಂತ್ರಿಕತೆ: ಮಲ್ಲಿಗೆ ಗಿಡಗಳಿಗೆ ಚೆನ್ನಾಗಿ ಬೆಳವಣಿಗೆ ಹೊಂದಲು ಪೋಷಕಾಂಶಗಳನ್ನು ಹೊಂದಿದ ರಾಸಾಯನಿಕ ಗೊಬ್ಬರ ಕೊಡುವುದು ಅವಶ್ಯ. ಪ್ರತಿ ಗಿಡಕ್ಕೆ ೧ ರಿಂದ ೨ ವರ್ಷದ ಅವಧಿಯಲ್ಲಿ ೩೦ ಗ್ರಾಂ ಸಾರಜನಕ ೬೦ ಗ್ರಾಂ ರಂಜ, ೬೦ ಗ್ರಾಂ ಪೊಟ್ಯಾಷ್‌ ರಾಸಾಯನಿಕ ಗೊಬ್ಬರಗಳನ್ನು ಎರಡು ಸಮಕಂತುಗಳಲ್ಲಿ ಕಳೆಕಸತೆಗೆದು ಕೊಡಬೇಕು. ಜನವರಿ ಮತ್ತು ಜೂನ್‌ ತಿಂಗಳಲ್ಲಿ ಗಿಡಗಳಲ್ಲಿ ಸವರಿಕಕೆ (ಚಾಟ್ನಿ) ತಂತ್ರಜ್ಞಾನ ಅಳವಡಿಸಿಕೊಂಡು ಉತ್ತಮ ಹೂಗಳನ್ನು ಪಡೆಯಬಹುದು. ಹೂವಿನಗಿಡಗಳ ವಯೋಮಾನಕ್ಕೆ ಸರಿಯಾಗಿ ರಾಸಾಯನಿಕ ಗೊಬ್ಬರಗಳ ಪ್ರಮಾಣವನ್ನು ಹೆಚ್ಚಿಸುತ್ತಲೇ ಹೋಗಬಹುದು.

ಮಲ್ಲಿಗೆ ಹೂವಿಗೆ ಬಾಧಿಸುವ ಕೀಟ ರೋಗಗಳನ್ನು ಕಂಡ ತಕ್ಷಣವೇ ಹತೋಟೆ ಮಾಡುವುದರಿಂದ ಉತ್ತಮ ಹೂವಿನ ಇಳುವರಿಯನ್ನು ಪಡೆಯಬಹುದು. ಮಲ್ಲಿಗೆಗೆ ತಿಗಣಿ, ನುಶಿಬಾಧೆ, ಎಲೆಚುಕ್ಕೆರೋಗ ತುಕ್ಕುರೋಗ, ಬೂದಿರೋಗಗಳು ಬರುವ ಸಾಧ್ಯತೆಗಳಿರುವುದರಿಂದ ಬೇಗನೆ ಹತೋಟಿ ಕ್ರಮಗಳನ್ನು ಕೈಕೊಳ್ಳುವುದು ಸೂಕ್ತ.

ಇಳುವರಿ: ಒಮ್ಮೆ ನಾಟ ಮಾಡಿದ ಮಲ್ಲಿಗೆ ಗಿಡಗಳಿಂದ ಆರ್ಥಿಕ ಇಳುವರಿ ಸಾಮಾನ್ಯವಾಗಿ ೧೦ ರಿಂದ ೧೫ ವರ್ಷಗಳವರೆಗೆ ಇರುತ್ತದೆ. ಹಾರದ ತಯಾರಿಕೆಗೆ ಹೂಗಳನ್ನು ಮೊಗ್ಗಿದ್ದಾಗಲೇ ಕೊಯ್ಲು ಮಾಡಬೇಕು. ಮಲ್ಲಿಗೆಯ ಹೂವುಗಳಲ್ಲಿ ತಳಿಗಳಿಗೆ ಅನುಸಾರವಾಗಿ ಇಳುವರಿಯನ್ನು ಈ ಕೆಳಗೆ ನಮೂದಿಸಿದಂತೆ ಪಡೆದುಕೊಳ್ಳಬಹುದು (ಪ್ರತಿ ಹೆಕ್ಟೇರಿಗೆ ಕಿ.ಗ್ರಾಂ.ಗಳಲ್ಲಿ)

  ಮೊದಲ ವರ್ಷ ೨ನೇ ವರ್ಷ ೩ನೇ ವರ್ಷ ೪ನೇ ವರ್ಷ
ಕಾಕಡಾ ಮಲ್ಲಿಗೆ ೧೦೦೦ ಕೆ.ಜಿ. ೫೦೦೦ ಕೆಜಿ. ೭೫೦೦ ಕೆಜಿ. ೮೦೦೦ ಕೆಜಿ.
ದುಂಡು ಮಲ್ಲಿಗೆ ೧೨೫೦ ಕೆಜಿ. ೨೫೦೦ ಕೆಜಿ. ೫೦೦೦ ಕೆಜಿ. ೭೫೦೦ ಕೆಜಿ
ವಸಂತಮಲ್ಲಿಗೆ ೧೨೫೦ ಕೆಜಿ. ೨೫೦೦ ಕೆಜಿ. ೫೦೦೦ ಕೆಜಿ. ೧೦೦೦೦ ಕೆಜಿ.

ಜಾಜಿಮಲ್ಲಿಗೆ

೧೨೫೦ ಕೆಜಿ. ೩೭೫೦ ಕೆಜಿ. ೧೦೦೦ ಕೆಜಿ. ೧೦೦೦೦ ಕೆಜಿ.

ಮಲ್ಲಿಗೆ ಹೂವುಗಳನ್ನು ಸಾಮಾನ್ಯವಾಗಿ ಸೂರ್ಯೋದಯದ ಮುನ್ನ ಇಲ್ಲವೇ ಸೂರ್ಯಸ್ತದ ನಂತರದಲ್ಲಿ ಕೊಯ್ಲು ಮಾಡಬೇಕು. ಮಧ್ಯಾಹ್ನ ಹೊತ್ತು ಹೂಗಳ ಕೊಯ್ಲು ಮಾಡಿದಲ್ಲಿ ಆ ಹೂಗಳು ಬೇಗನೇ ಬಾಡಿ ಹೋಗುತ್ತವೆ. ಗಿಡಗಳನ್ನು ನಾಟಿ ಮಾಡಿದ ಆರು ತಿಂಗಳ ನಂತರ ಹೂ ಬಿಡಲು ಪ್ರಾರಂಭಿಸಿ ದಿನ ಕಳೆದಂತೆ ಅವುಗಳ ಇಳುವರಿ ಪ್ರಮಾಣವು ಹೆಚ್ಚುತ್ತಲೇ ಹೋಗುತ್ತದೆ. ಸುಮಾರು ಮೂರು ವರ್ಷಗಳ ನಂತರದ ಗಿಡಗಳಲ್ಲಿ ಹೂಗಳ ಉತ್ಪಾದನೆ ಹೆಚ್ಚಿರುತ್ತದೆ.

ಮಲ್ಲಿಗೆ ಹೂಗಳ ಕೃಷಿಯಲ್ಲಿ ತಾಂತ್ರಿಕತೆಗಳನ್ನು ರೂಢಿಸಿದಲ್ಲಿ ಕೊಯ್ಲು ನಂತರದ ತಾಂತ್ರಿಕತೆಯನ್ನು ಬಳಸಿಕೊಂಡಲ್ಲಿ ಇದೊಂದು ಹೆಚ್ಚು ಆದಾಯ ತರುವ ಮಾರ್ಗವಾಗಿ ಕಂಡುಬರುವುದು. ಮಲ್ಲಿಗೆ ಬೆಳೆಗಾರರಿಗೆ ರಾಷ್ಟ್ರೀಯ ತೋಟಗಾರಿಕಾ ಮಿಶನ್‌ ಯೋಜನೆಯಲ್ಲಿಯ ಸೌಲಭ್ಯಗಳನ್ನು ರಾಜ್ಯದ ಕೃಷಿ ಇಲಾಖೆ ಕೊಡಮಾಡಿರುವುದರಿಂದ ಅದರ ಪ್ರಯೋಜನದಲ್ಲಿ ರೈತರು ಪಡೆದುಕೊಂಡು ತಮ್ಮ ಅಭಿವೃದ್ಧಿಯ ಹರಿಕಾರರು ತಾವೇ ಆಗಲು ಸಾಧ್ಯತೆಗಳಿರುವುದರಿಂದ ನೀವು ಪ್ರಗತಿ ಪಥದಲ್ಲಿ ಸಾಗಲು ಸಾಧ್ಯವಿಲ್ಲವೆ?

. ವಸಂತ ಮಲ್ಲಿಗೆ (ಜಾಸ್ಮಿನಮ್‌ ಆರಿಕ್ಯುಲೇಟಮ್‌) ಪೊದೆ ಜಾತಿಯ ಈ ಹೂಗಳಿಗೆ ಸೂಜಿಮಲ್ಲಿಗೆಯೆಂತಲೂ ಕರೆಯಲಾಗುತ್ತದೆ. ಇವು ವರ್ಷ ಪೂರ್ತಿಯಾಗಿ ಹೂಗಳನ್ನು ಕೊಡುತ್ತವೆ. ಮುಂಗಾರು ಹಂಗಾಮಿನಲ್ಲಿ ಈ ವಸಂತ ಮಲ್ಲಿಗೆ ಹೂಗಳ ಉತ್ಪಾದನೆ ಹೆಚ್ಚು. ಹೂಗಳು ಸುವಾಸನಾ ಭರಿತವಾಗಿದ್ದು ಹೆಚ್ಚಿನ ಪ್ರಮಾಣದಲ್ಲಿ ಸುಗಂಧದ್ರವ್ಯ ಅಲಂಕಾರಕ್ಕಾಗಿಯೂ ಹೆಚ್ಚಾಗಿ ಸುಗಂಧದ್ರವ್ಯ ತಯಾರಿಸಲು ಬಳಸಲಾಗುವುದು.

. ಜಾಜಿ ಮಲ್ಲಿಗೆ (ಜಾಸ್ಮಿನಮ್‌ ಗ್ರ್ಯಾಂಡೀ ಫೋರಮ್‌): ಬಳ್ಳಿಯಂತೆ ಬೆಳೆದು ಹೂ ಕೊಡುವ ಈ ಮಲ್ಲಿಗೆಯ ಹೂಗಳು ಸುವಾಸನಾ ಭರಿತವಾಗಿದುದ ಅಧಿಕ ಪ್ರಮಾಣದ ಸುಗಂಧದ್ರವ್ಯವನ್ನು ಕೊಡುವ ಸಾಮರ್ಥ್ಯವನ್ನೂ ಹೊಂದಿವೆ. ಈ ಮಲ್ಲಿಗೆಯ ಹೂಗಳನ್ನು ಬಿಡಿ ಬಿಡಿ ಹೂವಾಗಿ ಹಾಗೂ ಸುಗಂಧ ತೈಲ ತೆಗೆಯಲು ಹೆಚ್ಚಾಗಿ ಬಳಸಲಾಗುವುದು.

ಬೇಸಾಯ ವಿಧಾನ: ಕಾಕಡಾ ಮಲ್ಲಿಗೆಯಲ್ಲಿ ಕಾಂಡದ ತುಂಡು ಇಲ್ಲವೇ ಕಂದುಗಳನ್ನು ನಾಟಿ ಮಾಡಿ ಮಲ್ಲಿಗೆ ಬೇಸಾಯ ಮಾಡಬಹುದು. ಇನ್ನುಳಿದ ಮಲ್ಲಿಗೆ ತಳಿಗಳಲ್ಲಿ ಗೂಟಿ ಮತ್ತು ಕಾಂಡದ ತುಂಡುಗಳನ್ನು ಬಳಸಿ ಸಸ್ಯಾಭಿವೃದ್ಧಿ ಮಾಡಬಹುದು. ಸಾಮಾನ್ಯವಾಗಿ ಪ್ರತಿ ಹೆಕ್ಟೇರ್ ಪ್ರದೇಶದಲ್ಲಿ ನಾವು ಕಾಕಡಾ ಮಲ್ಲಿಗೆಗೆ ೬೯೪೪ ಕಾಂಡದ ತುಂಡುಗಳನ್ನು ದುಂಡು ಮಲ್ಲಿಗೆಗೆ ಹಾಗೂ ವಸಂತ ಮಲ್ಲಿಗೆಯಲ್ಲಿ ೪೪೪೪, ಜಾಜಿ ಮಲ್ಲಿಗೆಯಲ್ಲಿ ೩೩೩೩ ಕಂದುಗಳನ್ನು ಇಲ್ಲವೇ ಕಾಂಡದ ತುಂಡುಗಳನ್ನು ಬಳಸಬಹುದು. ಪ್ರತಿ ಗಿಡಕಕ್ಕೆ ಕಿಲೋ ಪ್ರಮಾಣದ ಸಾವಯವ ಗೊಬ್ಬರ ಅಥವಾ ೨-೪ ಕಿಲೋ ಪ್ರಮಾಣದಲ್ಲಿ ಎರೆಹುಳು ಗೊಬ್ಬರವನ್ನು ಕೊಟ್ಟು ಮಲ್ಲಿಗೆ ಗಿಡ ಬೆಳೆಸಬಹುದು.

ಮಣ್ಣಿನ ಪ್ರಕಾರ: ಮಲ್ಲಿಗೆ ಹೂ ಗಿಡಗಳನ್ನು ಬೆಳೆಸಲು ನೀರು ಬಸಿದು ಹೋಗುವಂಥ ಎಲ್ಲ ಪ್ರಕಾರದ ಮಣ್ಣಿನಲ್ಲೂ ಮಲ್ಲಿಗೆ ಕೃಷಿ ಲಾಭದಾಯಕ. ಭೂಮಿಯನ್ನು ಹದಗೊಳಿಸಿ ೩೦ ಸೆಂ.ಮೀ. ಉದ್ದ ೩೦ ಸೆಂ.ಮೀ ಅಗಲ ಹಾಗೂ ೩೦ ಸೆಂ.ಮೀ ಆಳದ ಗುಣಿಗಳನ್ನು ತೋಡಿ ಅದರಲ್ಲಿ ಮೇಲ್ಭಾಗದಲ್ಲಿನ ಮಣ್ಣು ಹಾಗೂ ಕಳೆತ ಕಾಂಪೋಷ್ಟಗೊಬ್ಬರ ಮಾತ್ರ ತುಂಬಿ ಮಧ್ಯದಲ್ಲಿ ಮಲ್ಲಿಗೆಯ ಸಸಿಗಳನ್ನು ನಾಟಿ ಮಾಡಬೇಕು. ಕಂದುಗಳನ್ನು ಸಹ ನಾಟಿ ಮಾಡಿ ಬೆಳೆಸಬಹುದು. ಕಾಕಡಾ ಮಲ್ಲಿಗೆಯನ್ನು ಮಾರ್ಚ ಮೇ ತಿಂಗಳು ಹೊರತು ಪಡಿಸಿ ವರ್ಷಾದಾದ್ಯಂತವು ಬೆಳೆ ಮಾಡಬಹುದು. ದುಂಡುಮಲ್ಲಿಗೆ ಹಾಗೂ ಉಡುಪಿ ಮಲ್ಲಿಗೆಗೆ ಮಾರ್ಚ, ಅಕ್ಟೋಬರ್ ತಿಂಗಳು, ವಸಂತ ಮಲ್ಲಿಗೆಗೆ ಏಪ್ರಿಲ್‌, ಅಕ್ಟೋಬರ್ ತಿಂಗಳು ಸೂಕ್ತವಾದವು. ಜಾಜಿಮಲ್ಲಿಗೆಯನ್ನು ಕೃಷಿ ಮಾಡಲು ಜೂನ್‌ ಅಕ್ಟೋಬರ್ ತಿಂಗಳು ಯೋಗ್ಯವಾದದ್ದಾಗಿದೆ. ಈ ಮಲ್ಲಿಗೆ ಬೆಳೆಸಲು ಕಾಂಡ ಮತ್ತು ಸಸಿಗಳನ್ನು ಬಳಸಿಕೊಂಡು ಮಳೆಗಾಲದಲ್ಲಿಯೂ ಬೆಳೆ ಮಾಡಬಹುದು. ದೊಡ್ಡಮಲ್ಲಿಗೆ ಬೇರುರುವಾಗ ರಾಸಾಯನಿಕ ದ್ರಾವಣದಲ್ಲಿ ಅದ್ದಿ ಉಪಚರಿಸದರೆ ಬೇರು ಮತ್ತು ಟಿಸಿಲುಗಳು ಬೇಗ ಮೂಡುತ್ತವೆ. ಇನ್ನು ಕೆಲವು ಮಲ್ಲಿಗೆ ತಳಿಗಳಲ್ಲಿ ಕಾಂಡವು ಮಣ್ಣಿನ ಸಂಪರ್ಕಕ್ಕೆ ಬಂದರೆ ಸಾಕು ಬೇರು ಮೂಡಿ ಹೊಸ ಚಿಗುರು ಚಿಮ್ಮಕೊಂಡು ಚೆನ್ನಾಗಿ ಬೆಳೆಯುತ್ತದೆ.

. ಸೊಬಗಿನ ಸೇವಂತಿ

ಸೇವಂತಿಗೆ ಇದು ಮತ್ತೊಂದು ಮುಖ್ಯವಾದ ವಾಣಿಜ್ಯ ಹೂ ಬೆಳೆ ಇದನ್ನು “ವಸಂತರಾಣಿ” ಎಂತಲೂ ಕರೆಯಲಾಗುತ್ತಿದ್ದು ಇದನ್ನು ಬಿಡಿ ಹೂವಾಗಿ ಮತ್ತು ಕತ್ತರಿಸಿದ ಹೂವಾಗಿ ಉಪಯೋಗುಸತ್ತಾರಲ್ಲದೇ ಈ ಹೂವಿನಿಂದ ಸುಗಂಧ ತೈಲ ಮತ್ತು ಪೈರೆಥ್ರಮ್‌ ಕೀಟನಾಶಕವನ್ನು ಸಹ ತಯಾರಿಸಲಾಗುತ್ತದೆ. ಇತ್ತೀಚಿಗೆ ಸೇವಂತಿ ಹೂವು ಉತ್ತರ ಕರ್ನಾಟಕದ ಗದಗ್‌ ಧಾರವಾಡ ಭಾಗದಲ್ಲಿ ಹೆಚ್ಚಿನ ಕ್ಷೇತ್ರದಲ್ಲಿ ಬೆಳೆ ಮಾಡಿದ ಕಾರಣ ಹೂಗಳ ಉತ್ಪಾದನೆಯೂ ಹೆಚ್ಚಿದೆ ಆರ್ಥಿಕವಾಗಿಯೂ ರೈತರಿಗೆ ಲಾಭ ದೊರೆಯುತ್ತಿದೆ.

ಮಣ್ಣು: ಸೇವಂತಿಯನ್ನು ೬ ಲರಿಂದ ೭ ರಸಸಾರ (ಪಿ.ಎಚ್‌) ವಿರುವಂಥ ಎಲ್ಲ ತರದ ಗೋಡು ಮಣ್ಣಿನಲ್ಲಿ ಬೆಳೆಯನ್ನು ಮಾಡಬಹುದಲ್ಲದೇ ಚೆನ್ನಾಗಿ ನೀರು ಬಸಿದು ಹೋಗುವಂಥಹ ಮರಳು ಮಿಶ್ರಿತ ಭೂಮಿಯು ಸೇವಂತಿ ಕೃಷಿಗೆ ಅತಿ ಸೂಕ್ತ.

ಈ ಬೆಳೆಯನ್ನು ಮಾಡಲು ಸೂಕ್ತವಾದ ಕಾಲ ಆಗಸ್ಟದಿಂದ ನವೆಂಬರ್ ಮತ್ತು ಸೇವಂತಿಯನ್ನು ಮೇ-ಜೂನ್‌ದಲ್ಲಿಯೂ ಕೃಷಿ ಮಾಡಬಹುದು.

ಸೇವಂತಿ ತಳಿಗಳು: ಹಳದಿ ಸೇವಂತಿ ಹೂ ತಳಿಗಳಾದ ಕರ್ನೂಲ್‌, ಮತ್ತೂರ್, ಸಾರವಾಳ, ಇಂದಿರಾ, ಎಲ್ಲೋಗೋಲ್ಡ ಹಾಗೂ ಬಿಳಿ ಸೇವಂತಿ ತಳಿಗಳಾದ ರಾಜ ಹಾಗೂ ಕೆಂಪು ಹೂಗಳ ರೆಡ್‌ಗೋಲ್ಡ ತಳಿಗಳನ್ನು ಬೆಳೆ ಮಾಡಬಹುದು. ನೀಲಿಮಾ ಮತ್ತು ಪಂಕಜ ತಳಿಯ ಸೇವಂತಿ ಹೂಗಳೂ ಪ್ರಚಲಿತದಲ್ಲಿವೆ.

ಸಸ್ಯಾಭಿವೃದ್ಧಿ: ಮೃದು ಕಾಂಡದ ತುಂಡುಗಳನ್ನು ಹಾಗೂ ಕಂದುಗಳನ್ನು ಸೇವಂತಿ ಹೂಗಳ ಕೃಷಿಯಲ್ಲಿ ಬಳಸಲಾಗುವುದು. ಚೆನ್ನಾಗಿ ನೀರು ಬಸಿದು ಹೋಗುವಂಥ ಭೂಮಿಯನ್ನು ಆಳವಾಗಿ ಉಳುಮೆ ಮಾಡಿ ಹದಗೊಳಿಸಿಕೊಂಡು ಕಂದುಗಳನ್ನು ಸಾಲಿನಿಂದ ಸಾಲಿಗೆ ೩೦ ಸೆಂ.ಮೀ.ದಷ್ಟು ಅಂತರದಲ್ಲಿ ಬೋದುಗಳನ್ನು ನಿರ್ಮಿಸಿಕೊಂಡು ಬದುಗಳ ಒಂದು ಬದಿಗೆ ಸಸಿಯಿಂಧ ಸಸಿಗೆ ೨೨.೫ ಸೆಂ.ಮೀ ಅಂತರದಲ್ಲಿ ನಾಟಿ ಮಾಡಬೇಕು. ಕಂದುಗಳನ್ನು ಕೆಳ ತುದಿಯನ್ನು ಮೀಥಾಕ್ಸಿ ಈಥೈಲ್‌ ಕ್ಲೋರೈಡ್‌ ದ್ರಾವಣದಲ್ಲಿ ಅದ್ದಿ ನಾಟಿ ಮಾಡಿದಲ್ಲಿ ಉತ್ತಮ ಪ್ರಯೋಜನವಿದೆ. ಈ ಹೂವಿನ ಬೇಸಾಯ ಮಾಡುವ ಭೂಮಿಗೆ ಪ್ರತಿ ಹೆಕ್ಟೇರಿಗೆ ೨೦ ಟನ್‌ ಪ್ರಮಾಣದ ಕಳೆತ ಕಾಂಪೋಷ್ಟ ಗೊಬ್ಬರವನ್ನು ಬೆರೆಸಿ ನಂತರ ಬದುಗಳನ್ನು ನಿರ್ಮಿಸಿಕೊಂಡು ಬೇರು ಬಿಟ್ಟಿರುವ ಮೃದು ಕಾಂಡದ ತುಂಡುಗಳನ್ನು ನಾಟಿ ಮಾಡುವಾಗ ಪ್ರತಿ ಹೆಕ್ಟೇರಿಗೆ ೩೩ ಕಿ.ಗ್ರಾಂ ಸಾರಜನಕ ೧೫೦ ಕಿ.ಗ್ರಾಂ. ರಂಜಕ ಹಾಗು ೧೦೦ ಕಿ.ಗ್ರಾಂ. ಪೊಟ್ಯಾಷ್‌ ರಾ.ಗೊಬ್ಬರವನ್ನು ಹಾಕಿ ಮಣ್ಣಿಗೆ ಬೆರೆಸಬೇಕು. ಸಸಿಗಳು ಬೆಳೆದ ನಂತರ ತುದಿ ಚಿವುಟುವ ಸಮಯದಲ್ಲಿ ಪ್ರತಿ ಹೆಕ್ಟೇರಿಗೆ ೩೩ ಕಿ.ಗ್ರಾಂ ಸಾರಜನಕವನ್ನು ಕೊಟ್ಟು ಮತ್ತೆ ಒಂದು ತಿಂಗಳ ನಂತರದಲ್ಲಿ ಸಿಫಾರಿತ ಇನ್ನುಳಿದ ೩೪ ಗ್ರಾಂ. ಸಾರಜನಕ ಗೊಬ್ಬರವನ್ನು ಮೇಲುಗೊಬ್ಬರ ರೂಪದಲ್ಲಿ ಕೊಟ್ಟು ಹೂಗಳ ಬೆಳೆಗೆ ನೀರೊದಗಿಸಬೇಕು.

ತಾಂತ್ರಿಕತೆ: ಸೇವಂತಿ ಹೂಗಳು ೧೫ ರಿಂದ ೨೦ ಸೆಂ.ಮೀ ಎತ್ತರವಾಗಿ ಬೆಳೆದ ಸಮಯದಲ್ಲಿ ಸಸಿಗಳ ತುದಿಯನ್ನು ಚಿವುಟಿ ಹಾಕಬೇಕು. ಇದರಿಂದಾಗಿ ಗಿಡಗಳಲ್ಲಿ ಹೆಚ್ಚಿನ ಸಂಖ್ಯೆಯ ಕವಲುಗಳುಂಟಾಗುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೂವುಗಳನ್ನು ನಾವು ಪಡೆಯಲು ಸಾಧ್ಯವಿದೆ. ಅವಶ್ಯಕತೆ ಬಿದ್ದರೆ ಈ ಕವಲುಗಳ ತುದಿಯನ್ನೂ ಕೂಡಾ ಚಿವುಟುವುದು ಉತ್ತಮ. ಈ ಹೂವಿನ ಬೆಳೆಯಲ್ಲಿ ಒಂದೆರಡು ಸಲ ಕಳೆ ಕಸ ತೆಗೆದು ಸ್ವಚ್ಛವಾಗಿ ಇರುವಂತೆ ನೋಡಿಕೊಳ್ಳುಬೇಕು. ಪ್ರತಿ ೪ ರಿಂದ ೫ ದಿನಗಳಿಗೊಮ್ಮೆ ಮಣ್ಣು ಮತ್ತು ಹವಾಗುಣಕ್ಕನುಸಾರವಾಗಿ ಹೂವಿನ ಬೆಳೆಗೆ ನೀರಾವರಿ ಮಾಡುವುದರಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯವಿದೆ.

ಕೊಯ್ಲು ಮತ್ತು ಇಳುವರಿ: ಸೇವಂತಿಯನ್ನು ನಾಟಿ ಮಾಡಿದ ಮೂರುವರೆ ತಿಂಗಳಲ್ಲಿ ಹೂ ಬರಲು ಆರಂಭವಾಗುವುದರಿಂದ ಅದು ೪೫ ದಿನಗಳವರೆಗೂ ಮುಂದುವರೆಯುತ್ತದೆ. ಈ ಸೇವಂತಿಯನ್ನು ೧ ಹೆಕ್ಟೇರ್ ದಲ್ಲಿ ಸುಧಾರಿತ ಬೇಸಾಯ ಕ್ರಮವನ್ನು ಕೈಕೊಂಡಲ್ಲಿ ಸುಮಾರು ೧೦೦೦ ದಿಂದ ೧೫೦೦೦ ಕಿ.ಗ್ರಾಂ ಸೇವಂತಿ ಹೂಗಳ ಇಳುವರಿಯನ್ನು ನಾವು ನಿರೀಕ್ಷಿಸಬಹುದು.

ಸೇವಂತಿಗೆ ಬೆಳೆಯಲ್ಲಿ ಹಾನಿಕಾರಕ ಕೀಟಗಳಾದ ಹೇನು, ಥ್ರಿಪ್ಸ್‌, ಮೊಗ್ಗೆ ಕೊರೆಯುವ ಹುಳು ಬಾಧೆ, ಹಳದಿ ನಂಜುರೋಗ, ಬೇರು ಕೊಳೆ ರೋಗ, ಎಲೆಚುಕ್ಕೆ ರೋಗ, ತುಕ್ಕುರೋಗಗಳ ಬಾಧೆಯಾಗುವುದರಿಂದ ತೀವ್ರವಾಗಿ ನಿಯಂತ್ರಣ ಕೈಕೊಂಡು ಆಗುವ ಬೆಳೆ ಹಾನಿಯನ್ನು ನಿಯಂತ್ರಿಸಿಕೊಳ್ಳಬಹುದು.

ಸೇವಂತಿಗೆ ಹೂ ರಫ್ತು ಸಾಮರ್ಥ್ಯಕ್ಕೆ ಇನ್ನೂ ಅರ್ಹತೆ ಪಡೆದಿಲ್ಲ. ಇದಕ್ಕೆ ಹಲವಾರು ಕಾರಣಗಳುಂಟು. ಸ್ಥಳೀಯ ಮಾರುಕಟ್ಟೆಯಲ್ಲಿಯೇ ಇದು ಬಹು ಬೇಡಿಕೆ ಹೊಂದಿದ ಪುಷ್ಪ, ಮಾಲೆಯ ತಯಾರಿಕೆಯಲ್ಲಿ ವಿಪುಲವಾಗಿ ಬಳಸಲ್ಪಡುವ ಸೇವಂತಿಗೆಯನ್ನು ತನ್ನ ವರ್ಣ ವೈಖರಿಯಿಂದಾಗಿ ವೈಜ್ಞಾನಿಕವಾದ ರೀತಿಯಲ್ಲಿ ಬೆಳೆದಲ್ಲಿ ಹಾಗೂ ವಿವಿಧ ವಿನ್ಯಾಸ ಬಣ್ಣ ಆಕಾರಗಳಿಗೆ ತಕ್ಕಂತೆ ವರ್ಗೀಕರಣವನ್ನು ಉತ್ತಮ ರೀತಿಯಲ್ಲಿ ಮಾಡಿದಲ್ಲಿ (ಪ್ಯಾಕಿಂಗ್‌ ವ್ಯವಸ್ಥೆಯಾದಲ್ಲಿ) ಈ ಹೂಗಳಿಗೆ ಹೆಚ್ಚಿನ ಬೆಲೆ ಸಿಗಬಹುದು. ನಮ್ಮ ಹೂಗಳಿಗೆ ಹೊರದೇಶಗಳಲ್ಲಿ ಸಹ ಬೇಡಿಕೆ ಹೆಚ್ಚಾಗಬಹುದು.. ರೈತರ ದುಡಿಮೆಗೆ ತಕ್ಕಂತೆ ಈ ಹೂವಿನ ಬೆಳೆಗೆ ಪ್ರತಿಫಲವೂ ದೊರಕುವುದರಲ್ಲಿ ಯಾವುದೇ ಸಂಶಯವಿಲ್ಲ.

. ಚಂದದ ಚೆಂಡು ಹೂ

ಚೆಂಡು ಹೂ ಇದು ಕಂಪೋಸಿಟೆ ಕುಟುಂಬಕ್ಕೆ ಸೇರಿದ ಸಸ್ಯ. ಇದು ವಾಣಿಜ್ಯ ಪುಷ್ಪಗಳಲ್ಲಿಂದು. ತೋಟದ ಅಲಂಕಾರಕ್ಕಾಗಿ, ಔಷಧಿಯ ಉದ್ದೇಶಕ್ಕಾಗಿ, ಬಣ್ಣದ ತಯಾರಿಕೆಗಾಗಿ ಚೆಂಡು ಹೂ ಉಪಯೋಗಿಸಲ್ಪಡುತ್ತದೆ. ಈ ಹೂವಿಗೆ ಕನ್ನಡದಲ್ಲಿ ಇನ್ನೊಂದು ಹೆಸರು ಸೀಮೆ ಹೂವೆಂದು ಇಂಗ್ಲಿಷಿನಲ್ಲಿ ಮ್ಯಾರಿಗೋಲ್ಡ ಹಿಂದಿಯಲ್ಲಿ ಗೆಯಂಡ, ಸಂಸ್ಕೃತದಲ್ಲಿ ಸ್ಥೂಲ ಪುಷ್ಪ, ತೆಲುಗು ಭಾಷೆಯಲ್ಲಿ ಬಂಟಿ ಪೆಟ್ಟು ಹಾಗೂ ತಮಿಳಿನಲ್ಲಿ ತುಲುಕ್ಯ ಸಮಂಡಿ ಎಂದೂ ಈ ಚೆಂಡು ಹೂವನ್ನು ಕರೆಯಲಾಗುವುದು.

ಮಣ್ಣು ಹಾಗೂ ನಾಟಿಕಾಲ: ಇದನ್ನು ಹಲವು ಪ್ರಕಾರದ ಚೆನ್ನಾಗಿ ನೀರು ಬಸಿದು ಹೋಗುವಂಥ ಮಣ್ಣಿನಲ್ಲಿ ಬೆಳೆಯಬಹುದಾದರೂ ೫-೬ ರಿಂಧ ೬-೫ ರಸಸಾರ (ಪಿ.ಎಚ್‌) ಇರುವಂಥ ಮರಳು ಮಿಶ್ರಿತ ಗೋಡು ಮಣ್ಣಿನಲ್ಲಿ ಉತ್ತಮವಾಗಿ ಬೆಳೆಮಾಡಬಹುದು. ಈ ಹೂವನ್ನು ವರ್ಷವಿಡೀ ಬೆಳೆ ಮಾಡಬಹುದಾದರೂ ಮಳೆಗಾಲದಲ್ಲಿ ಈ ಚೆಂಡು ಹೂವಿನ ಬೇಸಾಯ ಮಾಡಿ ಉತ್ತಮ ಇಳುವರಿಯನ್ನು ಪಡೆಯಲು ಸಾಧ್ಯ ಚೆಂಡು ಹೂವು ನಾಟಿ ಮಾಡಲು ಮೇ-ಜೂನ್‌ ತಿಂಗಳುಗಳು ಸೂಕ್ತವಾದವು.

ತಳಿಗಳು: ಚೆಂಡು ಹೂವಿನಲ್ಲಿ ಮುಖ್ಯವಾಗಿ ಆಫ್ರಿಕನ್‌ ಹಳದಿ, ಚೈಂಟ್‌ ಡಬಲ್‌ ಮತ್ತಗು ಆರೇಂಜ್‌ ಇವು ಪ್ರಮುಖ ತಳಿಗಳಾಗಿವೆ. ಈ ಹೂವಿನಕ ಸಸಿ ಪಡೆಯಲು ನಾಲ್ಕು ಏರುಮಡಿಗಳಲ್ಲಿ (೬ಮೀ ಉದ್ದ, ೧.೨ ಮೀ. ಅಗಲ ಹಾಗೂ ೧೦ ಸೆಂ.ಮೀ ಎತ್ತರವಿರುವ) ಬೀಜಗಳನ್ನು ಹಾಕಿ ಸಸ್ಯಾಭಿವೃದ್ಧಿ ಮಾಡಿಕೊಳ್ಳಬೇಕು. ಸಸಿಮಡಿಗೆ ಕೊಟ್ಟಿಗೆ ಗೊಬ್ಬರ ಹಾಗೂ ೧೫:೧೫:೧೫ ಪ್ರಮಾಣದಲ್ಲಿ ರಾ.ಗೊ ಕೊಡಬೇಕು.