ಬೇಸಾಯ ವಿಧಾನ: ಚೆಂಡು ಹೂವು ಬೇಸಾಯ ಮಾಡಲು ಮುಖ್ಯ ಬೆಳೆ ಮಾಡುವ ಪ್ರದೇಶವನ್ನು ಯೋಗ್ಯ ರೀತಿಯಲ್ಲಿ ಉಳುಮೆ ಮಾಡಿ ಸ್ವಚ್ಛಗೊಳಿಸಿ ಪ್ರತೀ ಹೆಕ್ಟೇರಿಗೆ ೨೦ ಟನ್‌ ಕೊಟ್ಟಿಗೆ ಗೊಬ್ಬರವನ್ನು ಮಣ್ಣಿಗೆ ಬೆರೆಸಿ ಹದ ಮಾಡಿದ ನಂತರ ೬೦ ಸೆಂ.ಮೀ. ಅಂತರದಲ್ಲಿ ಬೋದುಗಳನ್ನು ತಯಾರಿಸಿ ಅವುಗಳ ಒಂದು ಬದಿಯಲ್ಲಿ ೪೫ ಸೆಂ.ಮೀ ಅಂತರದಲ್ಲಿ ಸಸಿ ಮಡಿಯಲ್ಲಿ ಬೆಳೆಸಿದ ೪ ವಾರಗಳ ಸಸಿಗಳನ್ನು ನಾಟಿ ಮಾಡಬೇಕು. ನಾಟೀ ಸಮಯದಲ್ಲಿ ಈ ಹೂವಿನ ಬೇಸಾಯದಲ್ಲಿ ಪ್ರತಿ ಹೆಕ್ಟೇರಿಗೆ ೧೧.೫ ಕಿ.ಗ್ರಾಂ ಸಾರಜನಕ, ೬೦ ಕಿ.ಗ್ರಾಂ ರಂಜಕ ಹಾಗೂ ೬೦ ಕಿ.ಗ್ರಾಂ ಪೋಟ್ಯಾಷ್‌ ಯುಕ್ತ ಗೊಬ್ಬರಗಳನ್ನು ಕೊಡಬೇಕು. ನಾಟಿಮಾಡಿದ ೩೦ ರಿಂದ ೪೫ ದಿನಗಳ ನಂತರ ತುದಿ ಚಿವುಟುವ ಸಮಯದಲ್ಲಿ ಮತ್ತೆ ಮೇಲುಗೊಬ್ಬರವಾಗಿ ೧೧೨.೫ ಕಿ.ಗ್ರಾಂ ಸಾರಜನಕ ಪೋಷಕಾಂಶದ ಗೊಬ್ಬರ ಕೊಟ್ಟು ಸಸಿಗಳಿಗೆ ಮಣ್ಣೇರಿಸಬೇಕು.

ಈ ಬೆಳೆಗೆ ಪ್ರತಿ ೪ ರಿಂದ ೬ ದಿನಗಳಿಗೊಮ್ಮೆ ಮಣ್ಣು ಮತ್ತು ಹವಾಗುಣಕ್ಕನುಸಾರವಾಗಿ ನೀರನ್ನೊದಗಿಸಬೇಕು. ಪ್ರತಿ ತಿಂಗಳಲ್ಲಿ ೨-೩ ಕಳೆ ಕಸ ತೆಗೆದು ಹೂ ಬೆಳೆಯಿರುವ ಪ್ರದೇಶವನ್ನು ಸ್ವಚ್ಛವಾಗಿಡಬೇಕು. ಚೆಂಡು ಹೂವಿನ ಸಸಿಗಳನ್ನು ನಾಟಿ ಮಾಡಿದ ೩೦ ರಿಂದ ೪೦ ದಿನಗಳ ಮೇಲೆ ಸಸಿಗಳ ತುದಿಗಳನ್ನು ನಾವು ಚಿವುಟಿ ಹಾಕಬೇಕು. ಇದರಿಂದ ಹೂ ಬಿಡಲು ಸ್ವಲ್ಪು ತಡವಾದರೂ ಗಿಡದಲ್ಲಿ ಹೆಚ್ಚು ಕವಲೊಡೆದು ಅಧಿಕ ಪ್ರಮಾಣದಲ್ಲಿ ನಾವು ಚೆಂಡು ಹೂಗಳನ್ನು ಪಡೆಯಲು ಸಾಧ್ಯವಾಗುವುದು.

ಚೆಂಡು ಹೂವಿನಲ್ಲಿ ಜಿಗಿ ಹುಳುಗಳ ಬಾಧೆ, ಬುಡುಕೊಳೆ ರೋಗ, ಎಲೆ ಮುಟುರು ರೋಗಗಳು ಬರುವ ಸಾಧ್ಯತೆಯಿರುವುದರಿಂದ ಕೀಟ, ರೋಗ ಕಂಡ ತಕ್ಷಣವೇ ಸಸ್ಯ ಸಂರಕ್ಷಣಾಕ್ರಮ ಕೈಕೊಂಡು ಬೆಳೆಯನ್ನು ರಕ್ಷಿಸಿಕೊಳ್ಳಬೇಕು.

ಕೊಯ್ಲು: ಚೆಂಡು ಹೂವಿನ ಬೆಳೆ ಮಾಡಿದ ಸುಮಾರು ಎರಡೂವರೆ ತಿಂಗಳಲ್ಲಿ ಹೂಗಳು ಕೊಯ್ಲಿಗೆ ಸಿದ್ಧಗೊಳ್ಳುತ್ತವೆ. ಆ ನಂತರ ಸುಮಾರು ಎರಡೂವರೆ ತಿಂಗಳವರೆಗೂ ಹೂಗಳು ದೊರೆಯುತ್ತವೆ. ಆಗಸ್ಟದಿಂದ ಅಕ್ಟೋಬರ್ ದವರೆಗೂ ಅತ್ಯಧಿಕ ಚೆಂಡು ಹೂಗಳನ್ನು ನಾವು ಪಡೆಯಬಹುದಾಗಿದೆ. ಈ ಹೂವುಗಳನ್ನು ಯಾವಾಗಲೂ ಸಾಯಂಕಾಲ ಸಮಯದಲ್ಲಿ ಕೊಯ್ಲು ಮಾಡುವುದು ಸೂಕ್ತವಾದದ್ದು. ಹೂಗಳನ್ನು ತೆಗೆಯುವಾಗ ಹೂವಿನ ಜೊತೆ ಸ್ವಲ್ಪು ದೇಟು ಉಳಿಯುವಂತೆ ನೋಡಿಕೊಳ್ಳಬೇಕು. ಪ್ರತಿ ಹೆಕ್ಟೇರ್ ಪ್ರದೇಶದಲ್ಲಿ ಸಾಮಾನ್ಯವಾಗಿ ೮೦೦೦ ಕಿ.ಗ್ರಾಂ ದಿಂದ ೧೦೦೦೦ ಕಿ.ಗ್ರಾಂ ಪ್ರಮಾಣದ ಚೆಂಡು ಹೂಗಳ ಇಳುವರಿಯನ್ನು ನಾವು ಪಡೆಯಬಹುದಾಗಿದೆ.

ಇದೊಂದು ದೃಡಕಾಯವಾದ ಹಾಗೂ ಸದಾ ಹಸಿರು ಸೂಸುವ ಗಿಡವಾಗಿದ್ದು ಎಲೆಗಳು ಆಳವಾದ ಗೆರೆಗಳುಳ್ಳ ರಚನೆ ಹೊಂದಿದು, ಸುವಾಸನೆಯುಕ್ತ ಹೊಂದಿರುತ್ತವೆ. ಹೂವುಗಳು ದೊಡ್ಡದಾಗಿ ಮೃದುವಾಗಿರುತ್ತವೆ. ಸುಮಾರು ಎರಡು ಅಡಿಯಷ್ಟು ಎತ್ತರ ಬೆಳೆದು ಹೂ ಕೊಡುವ ಚೆಂಡು ಹೂವಿನ ಗಿಡಗಳ ಬೇರು ಹಾಗೂ ಹೂವುಗಳನ್ನು ಸಂಧಿವಾತ, ಶ್ವಾಸಕೋಶ, ಕಣ್ಣಿನ ಬೇನೆ ಮತ್ತು ಲೈಂಗಿಕ ವಾದಿಗಳಿಗಾಗಿ ಔಷಧಿಯಂತೆ ಬಳಕೆ ಮಾಡಲಾಗುತ್ತದೆ. ಚೆಂಡು ಹೂಗಳನ್ನು ಹಾರವನ್ನಾಗಿಸಿಕೊಂಡು ನಮ್ಮ ಧಾರ್ಮಿಕ ಆಚರಣೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸುವುದನ್ನು ಕಾಣಬಹುದು.

. ಕಣ್ತಣಿಸುವ ಕನಕಾಂಬರ

ಕನಕಾಂಬರ ಹೂಗಳನ್ನು ಅಬೋತಿ ಹೂವೆಂತಲೂ ಕರೆಯುತ್ತಿದ್ದು ಇದು ಬಿಡಿ ಹೂವಿಗಾಗಿ ಬೆಳೆಯುವ ಹೂವಿನಗಿಡ ಹಾರ ಮತ್ತು ಕೇಶಾಲಂಕಾರಕ್ಕೆ ಈ ಹೂವಿನ ಬಳಕೆ ಹೆಚ್ಚು ಹಳದಿ ಮತ್ತು ಕೇಸರಿ ವರ್ಣದ ಕನಕಾಂಬರ ಹೂಗಳಿಗೆ ಹೆಚ್ಚಿನ ಬೇಡಿಕೆಯಿದ್ದು ಉತ್ತಮವಾದ ಮಾರುಕಟ್ಟೆಯೂ ಇದೆ.

ಮಣ್ಣು ಹಾಗೂ ನಾಟಿ ಸಮಯ: ಕನಕಾಂಬರ ಹೂವಿನ ಬೆಳೆಯನ್ನು ಎಲ್ಲ ಪ್ರಕಾರದ ಮಣ್ಣಿನಲ್ಲಿ ಬೆಳೆಯಬಹುದಾಗಿದ್ದು ನೀರು ಬಸಿದು ಹೋಗುವ ರಸಸಾರ ೬ ರಿಂದ ೭ರ ಪ್ರಮಾಣವಿರುವ ಕೆಂಪುಗೋಡು ಮಣ್ಣಿದ್ದರೆ ಈ ಹೂವಿನ ಬೆಳೆಗೆ ಹೆಚ್ಚು ಸೂಕ್ತ.

ಕನಕಾಂಬರ ಹೂವಿನಗಿಡಗಳು ಬಹುವಾರ್ಷಿಕ ಪೊದೆಯಾಗಿದ್ದು ತಂಪು ಹವಾಮಾನದ ತಿಂಗಳುಗಳಲ್ಲಿ ಚೆನ್ನಾಗಿ ಹೂಗಳನ್ನು ಕೊಡುತ್ತವೆ. ಜುಲೈ ಮತ್ತು ಅಕ್ಟೋಬರ್ ತಿಂಗಳುಗಳು ಈ ಬೆಳೇಯ ನಾಟಿಗೆ ಅತಿಸೂಕ್ತವಾದ ಕಾಲವೆನ್ನಬಹುದು.

ತಳಿಗಳು ಮತ್ತು ಸಸ್ಯಾಭಿವೃದ್ಧಿ: ಕನಕಾಂಬರದಲ್ಲಿ ಹಳದಿ, ಕೇಸರಿ ಮತ್ತು ಕಡುಕೇಸರಿ(ಸೌಂದರ್ಯ) ಮುಂತಾದವು ಜನಪ್ರಿಯ ತಳಿಗಳಾಗಿವೆ. ಸಸಿಗಳನ್ನು ಕಾಂಡದ ತುದಿತುಂಡಗಳನ್ನು ಬಳಸಿಕೊಂಡು ಬೀಜಗಳನ್ನು ಮಡಿಗಳಲ್ಲಿ ತಯಾರಿಸಿಕೊಂಡು ಸಸಿಮಾಡಿಯೂ ಸಸ್ಯಾಭಿವೃದ್ಧಿಯನ್ನು ಮಾಡಿಕೊಂಡು ಬೇಸಾಯ ಮಾಡಬಹುದು.

ಬೇಸಾಯ ಸಾಮಗ್ರಿ ಹಾಗೂ ಕೃಷಿ ವಿಧಾನ: ಕನಕಾಂಬರ ಕೃಷಿಗೆ ಪ್ರತಿ ಹೆಕ್ಟೇರ್ ಪ್ರದೇಶಕ್ಕೆ ೫ ರಿಂದ ೬ ಕಿ.ಗ್ರಾಂ ಬೀಜ ಬೇಕಾಗುವುದು ಈ ಬೆಳೆ ಮಾಡುವ ಭೂಮಿಗೆ ಪ್ರತಿ ಹೆಕ್ಟೇರಿಗೆ ಸುಮಾರು ೨೫ ಟನ್‌ ಕೊಟ್ಟಿಗೆ ಗೊಬ್ಬರವನ್ನು ೬೦ ಸೆಂ.ಮೀ ಅಂತರದಲ್ಲಿ ಬೋದುಗಳನ್ನು ರಚಿಸಿಕೊಂಡು ಸಸಿಗಳನ್ನು ನಾಟಿ ಮಾಡಬೇಕು. ಬೇರು ಬಿಟ್ಟ ಕಾಂಡದ ತುಂಡುಗಳನ್ನು ಸಹ ನಾಟಿಗೆ ಬಳಸಿಕೊಳ್ಳಬಹುದು. ನಾಟಿ ಮಾಡುವಾಗ ಸಸಿಯಿಂದ ಸಸಿಗೆ ೩೦ ಸೆಂ.ಮೀ ಅಂತರ ಕೊಡಬೇಕು. ನಾಟೀ ಸಮಯದಲ್ಲಿ ಈ ಕನಕಾಂಬರ ಬೆಳೆಗೆ ಸಿಫಾರಿತ ಪ್ರಮಾಣದಂತೆ ಪ್ರತಿ ಹೆಕ್ಟೇರಿಗೆ ೩೩.೪ ಕಿ.ಗ್ರಾಂ ಸಾರಜನಕ, ೬೦ ಕಿ.ಗ್ರಾಂ ರಂಜಕ ಹಾಗೂ ೬೦ ಕಿ.ಗ್ರಾಂ ಪೊಟ್ಯಾಷ್‌ ಪ್ರಮಾಣದ ರಾಸಾಯನಿಕ ಗೊಬ್ಬರಗಳನ್ನು ನಾಟಿಗೆ ಮುಂಚೆಯೇ ಮಣ್ಣಿನಲ್ಲಿ ಬೆರೆಸಬೇಕು. ಬೆಳೆ ನಾಟಿಯ ನಂತರದಲ್ಲಿ ೩ ತಿಂಗಳ ಬೆಳೆಗೆ ೩೩.೩. ಕಿ.ಗ್ರಾಂ ಸಾರಜನಕವಿರುವ ಪೋಷಕಾಂಶಗಳನ್ನು ನೀಡಿ ಉತ್ತಮ ಫಸಲು ಪಡೆಯಬಹುದು.

ಕನಕಾಂಬರ ಹೂವಿನ ಬೆಳೆಗೆ ಪ್ರತಿ ೪-೫ ದಿನಗಳಿಗೊಮ್ಮೆ ಮಣ್ಣು ಮತ್ತು ಹವಾಗುಣಕ್ಕೆ ಅನುಸಾರವಾಗಿ ನೀರನ್ನು ಒದಗಿಸಿ ಕಳೆ ಕಸಗಳು ಈ ಬೆಳೆ ಪ್ರದೇಶದಲ್ಲಿ ಇರದಂತೆ ಕಾಳಜಿ ವಹಿಸಬೇಕು.

ಈ ಕೃಷಿಯಲ್ಲಿ ಹೂಗಳ ಸಸಿ ಅಥವಾ ಕಂದುಗಳನ್ನು ನಾಟಿ ಮಾಡಿದ ಮೂರು ತಿಂಗಳಲ್ಲಿ ಹೂಗಳು ಕೊಯ್ಲುಗೊಳ್ಳಲು ಸಿದ್ಧವಾಗುತ್ತವೆ. ಪ್ರತಿ ಹೆಕ್ಟೇರಿಗೆ ಸುಮಾರು ೫ ಟನ್‌ ಪ್ರಮಾಣದ ಕನಕಾಂಬರ ಹೂಗಳ ಇಳುವರಿಯನ್ನು ಪಡೆಯಬಹುದು. ಈ ಬೆಳೆಗೆ ಬಾಧಿಸುವ ಕೀಟ-ರೋಗಗಳನ್ನು ಸೂಕ್ತವಾದ ನಿಯಂತ್ರಣ ವಿಧಾನ ಅನುಸರಿಸಿದಲ್ಲಿ ಉತ್ತಮವಾದ ಲಾಭ ಪಡೆದುಕೊಳ್ಳಲು ಸಾಧ್ಯ.

. ಸುಂದರ ಸುಗಂಧರಾಜ

ಪುಷ್ಪಗಳ ರಾಜನೆಂಬ ಹೆಗ್ಗಳಿಕೆ ಪಡೆದುಕೊಂಡಿರುವ ನಮ್ಮ ರಾಜ್ಯದ ಪ್ರಮುಖ ಹೂವಿನ ಬೆಳೆಗಳಲ್ಲೊಂದಾದ ಸುಗಂಧರಾಜ ಹೂವನ್ನು ಆಂಗ್ಲ ಭಾಷೆಯಲ್ಲಿ ಟ್ಯೂಬ್‌ರೋಜ್‌, ಹಿಂದಿಯಲ್ಲಿ ರಜನಿಗಂಧವೆಂದು ಕರೆಯಲ್ಪಡುತ್ತಿದ್ದು ಇದರ ಸಸ್ಯನಾಮ ಪಾಲಿಯಾಂಥಸ್‌ ಟ್ಯೂಬ್‌ರೋಜ್‌ ಇದರ ಸುವಾಸನಾಭರಿತ ಹೂವಿನಹಾರ, ಹೂಗುಚ್ಚಗಳು ಇಡೀ ವಾತಾವರಣವನ್ನೇ ಪುಲಕಿತಪಡಿಸುತ್ತದೆ. ಹೂದಾನಿಗಳಲ್ಲಿಡಲೂ ಈ ಹೂವು ಉಪಯೋಗಿಸಲ್ಪಡುತ್ತದೆ.

ಮಣ್ಣು ಮತ್ತು ನಾಟಿಕಾಲ: ಸುಗಂಧರಾಜ ಹೂ ಬೆಳೆಯನ್ನು ಚೆನ್ನಾಗಿ ನೀರು ಸೋರಿ ಹೋಗುವಂಥ ಮರಳು ಮಿಶ್ರಿತ ಗೋಡು ಮಣ್ಣು ಇದರ ಕೃಷಿಗೆ ಸೂಕ್ತವಾಗಿದ್ದು ಎಲ್ಲಾ ಪ್ರಕಾರದ ಮಣ್ಣಿನಲ್ಲಿ ಸುಗಂಧರಾಜ ಹೂ ಗಿಡಗಳನ್ನು ಬೆಳೆಸಬಹುದು. ಇದು ತಂಪಾದ ಒಣ ವಾತಾವರಣವಿರುವ ಯೋಗ್ಯ ಕಾಲದಲ್ಲಿ ಅಂದರೆ ಮಾರ್ಚ ಎಪ್ರಿಲ್‌ ತಿಂಗಳಲ್ಲಿ ಸುಗಂಧರಾಜ ಗಡ್ಡೆಗಳನ್ನು ನಾಟಿ ಮಾಡಲು ಸೂಕ್ತ.

ತಳಿ ಪ್ರಭೇಧಗಳು: ಸುಗಂಧರಾಜ ಹೂವಿನಲ್ಲಿ ೧೫ ಪ್ರಭೇದಗಳಿದ್ದು ಇದರಲ್ಲಿ ಬಿಳಿ ಹಾಗೂ ಕೆಂಪು ಹೂಗಳನ್ನು ಬಿಡುವ ವಿವಿಧ ತಳಿಗಳಿದ್ದು ಹೂವಿನ ದಳಗಳ ಆಧಾರದಲ್ಲಿ ಮೂರು ಪ್ರಕಾರದಲ್ಲಿ ವಿಂಗಡಿಸಲಾಗಿದೆ. ಅವುಗಳಲ್ಲಿ ಸಿಂಗಲ್ಸ, ಡಬಲ್‌ ಮತ್ತು ಸೆಮಿಡಬಲ್‌ ಎಂದಿದ್ದು ಸಿಂಗಲ್ಸ್‌ ಒಂದು ಸುತ್ತಿನ ದಳ ಹೊಂದಿದ್ದರೆ ಡಬಲ್‌ ಸುಗಂಧ ಹೂವಿನಲ್ಲಿ ಬಹು ಸುತ್ತಿನ ದಳಗಳಿರುತ್ತವೆ. ಸಿಂಗಲ್‌ ಹೂವನ್ನು ಬಿಡಿ ಹೂವಿಗಾಗಿಯೂ, ಡಬಲ್‌ ತಳಿಗಳನ್ನು ಕತ್ತರಿಸಿದ ಹೂವಿಗಾಗಿಯೂ ಬೆಳೆಸಲಾಗುವುದು. ಸಿಂಗಲ್ಸ್‌ನಲ್ಲಿ ಶೃಂಗಾರ ತಳಿಯನ್ನು ಡಬಲ್ಸ್‌ನಲ್ಲಿ ಸುವಾಸಿನಿ ತಳಿಯನ್ನು ಬೆಳೆಯಬಹುದಾಗಿದೆ. ಈ ಹೂವಿನಲ್ಲಿ ರಜತ್‌ರೇಖ, ಪರ್ಲಡಬಲ್‌, ಆಲ್ಪಿನೋಸ್‌, ಎಕ್ಸೆಲ್ಸಿಯರ್ ತಳಿಗಳನ್ನು ಇತರ ದೇಶಗಳಲ್ಲಿ ಬೆಳೆಯಲಾಗುತ್ತಿದೆ.

ಬೇಸಾಯ ಸಾಮಗ್ರಿ ಹಾಗೂ ವಿಧಾನ: ಸುಗಂಧರಾಜ ಹೂಗಿಡಗಳನ್ನು ನಾವು ಬೆಳೆ ಮಾಡಲು ಗಡ್ಡೆಗಳನ್ನು ನಾಟಿಗೆ ಬಳಸಬೇಕಾಗುತ್ತದೆ. ಪ್ರತಿ ಹೆಕ್ಟೇರಿಗೆ ೧೮೦೦ ರಿಂದ ೧೯೦೦ ಕಿ.ಗ್ರಾಂ ಹೂವಿನ ಗಡ್ಡೆಗಳನ್ನು ಬಳಸಬೇಕಾಗುವುದು. ಈ ಬೆಳೆ ಮಾಡುವ ಭೂಮಿಯನ್ನು ೨-೩ ಸಲ ಉಳುಮೆ ಮಾಡಿ ಹದಗೈದು ಪ್ರತಿ ಹೆಕ್ಟೇರಿಗೆ ೩೦ ಟನ್‌ ಕೊಟ್ಟಿಗೆ ಗೊಬ್ಬರಗಳನ್ನು ಮಣ್ಣಿಗೆ ಬೆರೆಸಿದ ನಂತರ ೩೦ ಸೆಂ.ಮೀ. ಅಂತರದಲ್ಲಿ ಬೋದುಗಳನ್ನು ರಚಿಸಿಕೊಂಡು ಬೋದುಗಳ ಒಂದು ಬದಿಯಲ್ಲಿ ಸುಗಂಧರಾಜ ಹೂವಿನ ಗಡ್ಡೆಗಳನ್ನು ನಾಟಿ ಮಾಡಬೇಕು. ಸಸಿಯಿಂದ ಸಸಿಗೆ ೨೨.೫ ಸೆಂ.ಮೀ ಅಂತರವು ಬರುವಂತೆ ಗಡ್ಡೆಗಳನ್ನೊರಬೇಕು. ಪ್ರತಿ ಹೆಕ್ಟೇರಿಗೆ ಸಿಫಾರಸ್ಸು ಪಡಿಸಿದಂತೆ ಸಿಂಗಲ್‌ ತಳಿಯಾದಲ್ಲಿ ಸಾರಜನಕ ೫೦ ಕಿ.ಗ್ರಾಂ ರಂಜಕ ೫೦ ಕಿ.ಗ್ರಾಂ ಪೊಟ್ಯಾಷ್‌ ಗೊಬ್ಬರಗಳನ್ನು ೫೦ ಕಿ.ಗ್ರಾಂ ಪ್ರಮಾಣದಲ್ಲಿ ಡಬಲ್‌ ತಳಿಯಾದಲ್ಲಿ ೧೦೦ ಕಿ.ಗ್ರಾಂ ಸಾರಜನಕ, ೧೫೦ ಕಿ.ಗ್ರಾಂ ರಂಜಕ ಹಾಗೂ ೧೫೦ ಕಿ.ಗ್ರಾಂ ಪೊಟ್ಯಾಷ್‌ ಗೊಬ್ಬರಗಳನ್ನು ಗಡ್ಡೆ ನಾಟಿ ಸಮಯದಲ್ಲಿ ಕೊಡಬೇಕು. ಇನ್ನುಳಿದ ಅರ್ಧಪ್ರಮಾಣದ ಸಾರಜಸನಕ ಗೊಬ್ಬರವನ್ನು ನಾಟಿ ಮಾಡಿದ ೬ ವಾರಗಳ ನಂತರದಲ್ಲಿ ಸಿಂಗಲ್‌ ತಳಿಗೆ ೫೦ ಕಿ.ಗ್ರಾಂ ಗೊಬ್ಬರವನ್ನೂ ಡಬಲ್‌ ತಳಿ ಸುಗಂಧರಾಜ ಗಿಡಗಳಿಗೆ ೧೦೦ ಕಿ.ಗ್ರಾಂ ಪ್ರಮಾಣದಲ್ಲಿ ಕಳೆ ಕಸಗಳನ್ನು ತೆಗೆದು ಮಣ್ಣಿಗೆ ಬೆರೆಸಿ ನೀರುಣಿಸಬೇಕು. ಸುಗಂಧರಾಜ ಹೂವಿನ ಪ್ರದೇಶದಲ್ಲಿ ಪ್ರತಿ ತಿಂಗಳಲ್ಲೂ ಗಿಡಗಳ ಸುತ್ತಲೂ ಅಮತರ ಬೇಸಾಯ ಮಾಡಿ ಮಣ್ಣು ಏರಿಸಬೇಕು. ಪ್ರತಿ ೫ ರಿಂದ ೭ ದಿನಗಳಿಗೊಮ್ಮೆ ವಾತಾವರಣಕ್ಕೆ ತಕ್ಕಂತೆ ನೀರನ್ನು ಕೊಟ್ಟು ಈ ಹೂ ಬೆಳೆ ಬೇಸಾಯ ಮಾಡಬಹುದು.

ಗಡ್ಡೆಗಳನ್ನು ನಾಟಿ ಮಾಡಿದ ಮೂರರಿಂದ ಮೂರುವರೆ ತಿಂಗಳಲ್ಲಿ ಸುಗಂಧರಾಜ ಹೂವಿನ ಗಿಡಗಳಲ್ಲಿ ಹೂಗಳು ಕೊಯ್ಲಿಗೆ ಬರುತ್ತವೆ. ಆಗಸ್ಟ ಸಪ್ಟೆಂಬರ್ ತಿಂಗಳುಗಳಲ್ಲಿ ಹೂಗಳು ಕೊಯ್ಲಿಗೆ ಬರುತ್ತವೆ. ಆಗಸ್ಟ ಸಪ್ಟೆಂಬರ್ ತಿಂಗಳುಗಳಲ್ಲಿ ಹೂಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಹೂಗಳು ಕೊಯ್ಲು ಮಾಡುವಾಗ ಹೂ ಅರಳಿದ ದಿನವೇ ಬೆಳಿಗ್ಗೆ ಎಂಟುಗಂಟೆಯ ಒಳಗಾಗಿ ಹೂಗಳನ್ನು ಕೀಳಬೇಕು. ಕೊಯ್ಲು ಮಾಡಿದ ಹೂಗಳನ್ನು ಮೂರು ದಿನಗಳವರೆವಿಗೂ ಇಡಬಹುದು. ಈ ಸುಗಂಧರಾಜ ಹೂವಿನ ಬೆಳೆಯಲ್ಲಿ ನಾವು ನಿರಂತರವಾಗಿ ಹೂಗಳನ್ನು ಪಡೆಯಬೇಕಿದ್ದಲ್ಲಿ ಗಡ್ಡೆಗಳನ್ನು ನಾಟಿ ಮಾಡುವಾಗಲೇ ಕೆಲವು ವಾರಗಳ ಅಂತರಕೊಟ್ಟು ಸುಪ್ತಾವಸ್ಥೆಯಲ್ಲಿರುವ ಗಡ್ಡೆಗಳನ್ನು ನಾಟಿ ಮಾಡಬೇಕು. ಗಿಡಗಳಿಂದ ಹೂಗಳನ್ನು ಕೊಯ್ಲು ಮಾಡಿದ ಕೆಲದಿನಗಳ ನಂತರ ಎಲೆಗಳು ಒಣಗಲು ಪ್ರಾರಂಭಿಸುತ್ತವೆ. ಈ ಹಂತದಲ್ಲಿ ಗಡ್ಡೆಗಳನ್ನು ಸಂಗ್ರಹಿಸಿ ಬಿತ್ತನೆಗಾಗಿ ಕಾಯ್ದಿಡಬೇಕು.

ಮುಖ್ಯ ಬೆಳೆಯ ಕೊಯ್ಲಿನ ನಂತರ ಹೂಗಳ ದೇಟುಗಳನ್ನು ಕತ್ತರಿಸಿ ಹಾಕಿ ಬೆಳೆಗೆ ಶಿಫಾರಸ್ಸು ಮಾಡಿದ ರಾಸಾಯನಿಕ ಗೊಬ್ಬರ ಕೊಟ್ಟು ನೀರನ್ನು ಕೊಡಬೇಕು. ಒಂದು ಸಲ ನಾಟಿ ಮಾಡಿದ ಸುಗಂಧರಾಜ ಹೂ ಬೆಳೆಯಿಂದ ೩-೪ ಕೊಳೆ ಬೆಳೆಗಳನ್ನು ಪಡೆಯಬಹುದಾಗಿದೆ.

ಇಳುವರಿ: ಸುಗಂಧರಾಜ ಹೂ ನಾಟಿ ಮಾಡಿದ ೧೧-೧೨೦ ದಿನಗಳಲ್ಲಿ ಹೂಗಳನ್ನು ಬಿಡುತ್ತದೆ. ಇದು ಬಯಲು ಪ್ರದೇಶದಲ್ಲಿ ಬೇಸಿಗೆ ಮತ್ತು ಚಳಿಗಾಲದಲ್ಲಿ ಬೆಟ್ಟ ಪ್ರದೇಶದಲ್ಲಿ ಮೇ-ಜುಲೈ ತಿಂಗಳಿನಲ್ಲಿ ಮತ್ತು ಹಿತಕರ ವಾತಾವರಣದಲ್ಲಿ ವರ್ಷ ಪೂರ್ತಿಯಾಗಿ ಹೂಗಳನ್ನು ಪಡೆದುಕೊಳ್ಳಬಹುದು. ಚೆನ್ನಾಗಿ ಸುಧಾರಿತ ಬೇಸಾಯ ಕ್ರಮ ಅನುಸರಿಸಿದ ಹೂ ತೋಟದಿಂದ ಹೆಕ್ಟೇರಿಗೆ ಸುಮಾರು ೧೭-೧೮ ಟನ್‌ಗಳಷ್ಟು ಹೂವಿನ ಇಳುವರಿಯನ್ನು ಪಡೆಯಬಹುದಾಗಿದೆ.

ಹೂವಿನ ಸಂಸ್ಕರಣೆ ಹಾಗೂ ಉಪಯೋಗ: ಸುಗಂಧರಾಜ ಹೂಗಳಿಂದ ಭಟ್ಟಿ ಇಳಿಸುವ ಕ್ರಮದಿಂದ ತೈಲವನ್ನು ಪಡೆಯಬಹುದಾದರೂ ಅದು ಲಾಭಕರವಾದ ವಿಧಾನವಲ್ಲ. ಎನ್‌ಫ್ಲುರೇಜ್‌ ವಿಧಾನದಲ್ಲಿ ತೈಲೋತ್ಪಾದನೆಯನ್ನು ಮಾಡಿ ಹೆಚ್ಚು ಸಂಪಾದಿಸಬಹುದು. ಈ ಸುಗಂಧರಾಜ ಹೂಗಳಿಂದ ನಾವು ಅಬ್ಸಲ್ಯೂಟ್‌, ಚಾಸಿಸ್‌ ಹಾಗೂ ಕಾಂಕ್ರೀಟ್‌ ಉತ್ಪಾದಿಸಿ ಉಪ ಉತ್ಪನ್ನಗಳನ್ನು ಪಡೆದು ಹೇರಳ ಹಣ ಸಂಪಾದಿಸಬಹುದು.

ಸುಗಂಧರಾಜ ಹೂವಿನ ತೈಲವು ವಾಣಿಜ್ಯ ರೀತಿಯಲ್ಲಿ ಸುಗಂಧಿತ ವಸ್ತುಗಳ ತಯಾರಿಕೆಯಲ್ಲಿ ಬಳಸಲ್ಪಡುವ ಬಹುಬೇಡಿಕೆಯ ಕಚ್ಚಾಪದಾರ್ಥವಾಗಿದೆ. ಈ ತೈಲವನ್ನು ಕ್ಯಾಂಡೀ, ಲಘುಪಾನೀಯ ಮತ್ತು ಬೇಕರಿ ಪದಾರ್ಥಗಳಲ್ಲಿ ಸುವಾಸಿತ ವಸ್ತುವಾಗಿ ಬಳಸಲಾಗುತ್ತಿದೆ. ಉದ್ದದ ಹೂ ಗೊಂಚಲುಗಳು ಹೂದಾನಿಗಳ ಮೂಲಕ ಅಂದ ಹೆಚ್ಚಿಸಿದರೆ ಬಿಡಿಸು ಗಂಧ ಹೂಗಳನ್ನು ಹೂವಿನ ಹಾರ ತುರಾಯಿಗಳನ್ನು ತಯಾರಿಸಲು ಉಪಯೋಗಗೊಂಡು ಹೆಚ್ಚಿನ ಲಾಭಗಳಿಸಲು ಮಾರ್ಗಕಲ್ಪಿಸುತ್ತದೆ. ಒಟ್ಟಾರೆ ಸುಗಂಧರಾಜ್‌ ಹೂವಿನ ಬೆಳೆ ಔಷಧೀಯ ಗುಣಗಳನ್ನು ಹೊಂದಿದ್ದು ಬಹುಬೇಡಿಕೆಯುಳ್ಳ ಹೂ ಬೆಳೆಯಾಗಿ ಎಲ್ಲರನ್ನೂ ಮನಸೆಳೆಯುತ್ತದೆ ಎಂದರೆ ಅತಿಶಯೋಕ್ತಿಯಲ್ಲ.

ಪರಿಮಳದ ಪಾರಿಜಾತ

ಸೌಗಂಧಬೀರುವ ಪುಷ್ಪಗಳಲ್ಲಿ ಪಾರಿಜಾತವೂ ಒಂದು. ಈ ಹೂವನ್ನು ಗುಲಾಬಿ, ಮಲ್ಲಿಗೆ ಗಿಡಗಳಿಂದ ಕಿತ್ತು ಕೊಯ್ಲು ಮಾಡಿದಂತೆ ಮಾಡದೇ ಉದುರಿದ ಪಾರಿಜಾತ ಪುಷ್ಪಗಳನ್ನು ಭಗವಂತನಿಗೆ ಅರ್ಪಿಸಲಾಗುತ್ತದೆ. ಈ ಹೂವುಗಳು ಪ್ರೇಮಿಗಳಿಗೆ ಹತ್ತಿರವಾದಂಥದ್ದು. ಕೃಷ್ಣ ರುಕ್ಮಿಣಿಯರ ಕಥೆಯಲ್ಲಿ ಬರುವ ಪಾರಿಜಾತದ ಪ್ರಸಂಗದಿಂದ ಶ್ರೀ ಕೃಷ್ಣ ಪಾರಿಜಾತವೇ ಹುಟ್ಟಿಕೊಂಡು ಪ್ರತಿಯೊಬ್ಬರಿಗೂ ಜನಜನಿತವಾಗಿದ್ದುದು ಗೊತ್ತೇ ಇದೆ. ಶಿವ, ಗಣೇಶ, ಶ್ರೀ ಸತ್ಯನಾರಾಯಣ ಸ್ವರ್ಣಗೌರಿ ಪೂಜೆಗೆ ಈ ಹೂವು ಉತ್ತಮವಾದುದೆಂದು ಭಾವಿಸಲಾಗುತ್ತದೆ. ಈ ಹೂವಿನ ಮಕರಂದ ಸವಿದವರು ಮತ್ತೆ ಮತ್ತೆ ಪಾರಿಜಾತವನ್ನೇ ನೆನಪಿಸಿಕೊಳ್ಳುತ್ತಾರೆ.

ಮುಟ್ಟಿದರೆ ಮುನಿಸಿಕೊಂಡು ಬಾಡುವ ಪಾರಿಜಾತ ಪುಷ್ಪವು ಓಲಿಯೇಸಿ ಕುಟುಂಬಕ್ಕೆ ಸೇರಿದ್ದು ಇದರ ಸಸ್ಯನಾಮ ನಿಕ್ಟ್ಯಾಂಥಸ್‌ ಅರ್ಬರ್ ಟ್ರಸ್ಟಿಸ್‌. ಅಂದರೆ ರಾತ್ರಿ ಅರಳುವ ದುಃಖದ ಗಿಡ ಎಂದೂ ಅರ್ಥ. ಈ ಪುಷ್ಪಗಳು ರಾತ್ರಿ ಅರಳಿಕೊಂಡು ನಸುಕಿನಲ್ಲಿ ಉದುರಲ್ಪಡುತ್ತವೆ. ಪಾರಿಜಾತ ಗಿಡವು ಚಿಕ್ಕ ಪೊದೆಯಂತಿದ್ದು ಈ ಗಿಡದ ಎಲೆಗಳ ಮೇಲ್ಭಾಗವು ಅತಿ ಒರಟಾಗಿರುತ್ತದೆ. ಬೇಸಿಗೆಯಲ್ಲಿ ಪಾರಿಜಾತ ಹೂವಿನ ಗಿಡಗಳ ಎಲೆಗಳೆಲ್ಲ ಉದುರಿ ಮಳೆಗಾಲದಲ್ಲಿ ಚಿಗುರುತ್ತವೆ.

ಗಿಡ ಬೆಳೆಸುವ ವಿಧಾನ: ಪಾರಿಜಾತವನ್ನು ಬೀಜ ಮತ್ತು ಕಾಂಡದ ತುಂಡುಗಳನ್ನು ಬಳಸಿ ಸಸ್ಯಾಭಿವೃದ್ಧಿ ಮಾಡಬಹುದು. ಈ ಹೂವುಗಳು ಸುವಾಸನೆಯಿಂದ ಕೂಡಿದ್ದು ಇದರ ಗಿಡದಲ್ಲಿ ಪುಷ್ಪಗಳು ಗೊಂಚಲಾಗಿ ಅರಳಿಕೊಳ್ಳುತ್ತವೆ. ಅಚ್ಚ ಬಿಳುಪಾಗಿರುವ ಪಾರಿಜಾತ ಪುಷ್ಪಗಳ ತೊಟ್ಟು ಆಕರ್ಷಕ ಕೇಸರಿ ಬಣ್ಣದ್ದಾಗಿರುತ್ತದೆ. ಗುಲಾಬಿ ಮಿಶ್ರಿತ ಬಂಗಾರದ ಬಣ್ಣದಂತೆಯೇ ಕಾಣುವುದು. ಈ ಹೂವಿನ ಗಿಡಗಳನ್ನು ದೇವಸ್ಥಾನಗಳಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದು ಉದ್ಯಾನವನಗಳಲ್ಲೂ ಈ ಹೂವಿನಗಿಡಗಳು ಹೇರಳವಾಗಿ ಕಾಣುತ್ತವೆ. ಮನೆಯಲ್ಲೊಂದು ಪಾರಿಜಾತ ಹೂವಿನ ಗಿಡವಿದ್ದರೆ ಅದರ ಸೊಬಗೇ ಬೇರೆ!

ಪಾರಿಜಾತ ಪುರಾಣ: ಪಾರಿಜಾತದ ಮಹತ್ವದ ಕುರಿತು ಅನೇಕ ದಂತಕಥೆಗಳೂ ಪುರಾಣಕಥೆಗಳೂ ಉಂಟು. ದ್ವಾಪರಯುಗದಲ್ಲಿ ಶ್ರೀ ಕೃಷ್ಣನು ತನ್ನ ಮಡದಿಯರಿಗೆಂದು ಪಾರಿಜಾತ ಪುಷ್ಪದ ಗಿಡವನ್ನು ಸ್ವರ್ಗದಿಂದ ಭೂಮಿಗೆ ತಂದು ಬೆಳೆಸಿದ್ದು, ಮನೆಯಂಗಳದಲ್ಲಿ ಗಿಡ ನೆಟ್ಟಿದ್ದು ಈ ಹೂವುಗಳನ್ನೇ ತನ್ನ ಮನದನ್ನೆಯರಿಗೆ ಹೂವನ್ನು ಮುಡಿಸುತ್ತಿದ್ದ ಕಥೆಯೊಂದಿದ್ದರೆ ಇನ್ನೊಂದು ದುರಂತ ಕಥೆಯಲ್ಲಿ ಪಾರಿಜಾತಿಕಾ ಎಂಬ ರಾಜಕುಮಾರಿ ಸೂರ್ಯನನ್ನು ತುಂಬಾ ಪ್ರೀತಿಸಿ ಅವನ ಒಲವು ಪಡೆಯಲು ನಿರಾಶಳಾಗಿ ಆತ್ಮಹತ್ಯೆ ಮಾಡಿಕೊಂಡಳಂತೆ. ಅವಳ ಶರೀರ ಸುಟ್ಟ ಬೂದಿಯಲ್ಲೇ ಹುಟ್ಟುಕೊಂಡಿತಂತೆ ಈ ಪಾರಿಜಾತ ಹೂವಿನಗಿಡ. ಹೀಗಾಗಿ ಪಾರಿಜಾತದ ಹೂವುಗಳು ಸೂರ್ಯಸ್ತದ ನಂತರ ಅರಳಿಕೊಂಡು ಸೂರ್ಯೋದಯಕ್ಕೆ ಮುನ್ನ ಉದುರಿಬೀಳುತ್ತವೆ. ಈ ಪಾರಿಜಾತ ಪುಷ್ಪವು ಮಾನವ ಕುಲಕ್ಕೆ ಒಂದು ನೀತಿಯನ್ನೂ ಬೋಧಿಸುತ್ತದೆ. “ಇರುವಷ್ಟು ದಿನ ಪಾರಿಜಾತ ಪುಷ್ಪದಂತೆ ಸುಗುಣಗಳಿಂದ ಬದುಕಿ ಸುತ್ತಲಿನ ಪರಿಸರವನ್ನು ಆಹ್ಲಾದಕರವಾಗಿಟ್ಟು ಬದುಕನ್ನು ಸಾರ್ಥಕ ಸಫಲಗೊಳಿಸುವುದೇ ನಿಜವಾದ ಬಾಳು ಎಂಬುದನ್ನು ತಿಳಿಸಿಕೊಡುತ್ತದೆ.

ಪಾರಿಜಾತ ಪುಷ್ಪದ ಔಷಧೀಯ ಗುಣಗಳು: ಪಾರಿಜಾತ ಹೂವಿನ ಎಲೆಗಳಿಂದ ರಸವನ್ನು ತಯಾರಿಸಿಕೊಂಡು ಕುಡಿದಲ್ಲಿ ಮಲೇರಿಯಾ, ಜ್ವರ, ಕೆಮ್ಮು ಮುಂತಾದವುಗಳು ಶಮನಹೊಂದುತ್ತವೆ. ಈ ಜ್ಯೂಸಿಗೆ ಸಕ್ಕರೆ ಮಿಶ್ರಣವನ್ನು ಮಾಡಿ ಮಕ್ಕಳಿಗೆ ಕುಡಿಸಿದಲ್ಲಿ ಹೊಟ್ಟೆಯ ಸಮಸ್ಯೆ ದೂರವಾಗುವುದು. ಪಾರಿಜಾತ ಪುಷ್ಪಗಳು ನೋಡಲು ಸುಂದರವಾಗಿದ್ದರೂ ಅವುಗಳ ರಸವು ತುಂಬಾ ಕಹಿಗುಣ ಹೊಂದಿದೆ. ಇದನ್ನು ಸೇವಿಸಿದಲ್ಲಿ ಆರೋಗ್ಯಕ್ಕೆ ಉತ್ತಮ ಈ ಬೀಜಗಳನ್ನು ಪುಡಿ ಮಾಡಿಕೊಂಡು ಬಳಸಿ ಚರ್ಮವ್ಯಾದಿಗಳನ್ನು ನಾವು ಶಮನಪಡಿಸಿ ಕೊಳ್ಳಬಹುದು. ಈ ಹೂವಿನ ಮಕರಂಧವನ್ನು ಅಗರಬತ್ತಿ ಸುಗಂಧ ದ್ರವ್ಯಗಳ ಉತ್ಪಾದನೆಯಲ್ಲಿ ಬಳಸಿಕೊಳ್ಳಲಾಗುವುದು. ಈ ಪಾರಿಜಾತ ಹೂವಿನ ಕೇಸರಿ ಬಣ್ಣದ ತೊಟ್ಟುಗಳನ್ನು ಹೂಗಳಿಂದ ಬೇರ್ಪಡಿಸಿಕೊಂಡು ಅದನ್ನು ಪುಡಿಮಾಡಿ ಬಣ್ಣದ ದ್ರವ ತಯಾರಿಸಿಕೊಂಡು ಬಟ್ಟೆಗಳನ್ನು ಕೇಸರಿ ವರ್ಣಕ್ಕೆ ಪರಿವರ್ತಿಸಿಕೊಳ್ಳಬಹುದು.

ಅಸ್ಸಾಂ ಭಾಗದಲ್ಲಿ ಪಾರಿಜಾತದ ಪುಷ್ಪಗಳನ್ನು ತರಕಾರಿ ಮಾರುಕಟ್ಟೆಗಳಲ್ಲಿ ಮಾರಿಕೊಂಡು ಉಪಜೀವನ ಸಾಗಿಸುತ್ತಾರೆ. ಔಷಧೀಯ ಗುಣಕ್ಕಾಗಿ ಉತ್ತಮ ಆರೋಗ್ಯಕ್ಕಾಗಿ ಅಲ್ಲಿನ ಜನ ಈ ಹೂವು ಖರೀದಿಸಿ ಬೆಳಗಿನ ಹೊತ್ತು ಹೂವಿನ ಸೂಪ್‌ ತಯಾರಿಸಿಕೊಂಡು ಕುಡಿಯುವ ಅಭ್ಯಾಸವಿದೆಯಂತೆ!

ಪಾರಿಜಾತವು ಚಿಕ್ಕದಾದ, ಶೀಘ್ರವಾಗಿ ಬೆಳೆಯುವ ಸತ್ವಯುತವಾದ ವೃಕ್ಷವಾಗಿದ್ದು ಏಳು ಪಕಳೆಗಳುಳ್ಳ ಈ ಹೂವು ಗೊಂಚಲಿನಲ್ಲಿ ಐದರಂತೆ ಅರಳಿಕೊಳ್ಳುತ್ತವೆ. ಹೂವಿಗಿಂತ ಸ್ವಲ್ಪು ಉದ್ದ, ದಪ್ಪಗಿರುವ ಪಾರಿಜಾತದ ಹಣ್ಣುಗಳು ಪ್ರಾರಂಭದಲ್ಲಿ ಸ್ವಲ್ಪು ಹಸಿರಾಗಿ ಉದುರುವ ಕಾಲದಲ್ಲಿ ಹೊಂದಿರುತ್ತಿದ್ದು ಈ ಬೀಜಗಳನ್ನೆ ಉಪಯೋಗಿಸಿ ಸಸಿಗಳನ್ನು ತಯಾರಿಸಿಕೊಂಡು ಪಾರಿಜಾತ ಹೂ ಗಿಡಗಳನ್ನು ಬೆಳೆಸಬಹುದು.

ನಮ್ಮ ದೇಶದ ಕರ್ನಾಟಕ, ಹಿಮಾಲಯದ ಬೆಟ್ಟ, ಜಮ್ಮು ಕಾಶ್ಮೀರ ಅಸಾಮ ಬಂಗಾಲ ತ್ರಿಪುರಗಳಲ್ಲಿ ಹಾಗೂ ಥೈಲ್ಯಾಂಢ, ನೇಪಾಳ, ಇಂಡೋನೇಶಿಯಾ, ಪಾಕಿಸ್ತಾನ ದೇಶಗಳಲ್ಲಿ ಈ ಪಾರಿಜಾತ ಹೂಗಿಡಗಳನ್ನು ನೋಡಲು ಸಾಧ್ಯ. ಪ್ರೇಮ-ಪ್ರೀತಿಗಳಿಗೆ ಸಾಂಕೇತಿಕವಾಗಿ ಬಳಸಲ್ಪಡುವ ಪರಿಮಳದ ಪಾರಿಜಾತದ ಹೂ ಗಿಡಗಳನ್ನು ನೀವೂ ಒಂದು ಸಲ ಬೆಳೆದು ಅನುಭವಿಸಿ ನೋಡಿ.

ರಂಗಿನ ದಾಸವಳ ಹೂ

ಮನೆಮುಂದಿನ ಹೂದೋಟದಲ್ಲಿ ರಂಗು ರಂಗಾದ ಹೂಗಿಡಗಳ ಜತೆಯಲ್ಲಿ ಕಡು ಕೆಂಪು ಬಣ್ಣ ಹಾಗೂ ಬಿಳಿ ವರ್ಣದ ದಾಸವಾಳ ಪುಷ್ಪಗಳು ಹಲವು ಬಗೆಯ ವಿನ್ಯಾಸ ಮತ್ತು ಔಷಧೀಯ ಗುಣಗಳ ವಿಶೇಷತೆಗಳಿಂದ ಬಹಳ ಮಹತ್ವಪಡೆದುಕೊಂಡಿದೆ ಈ ದಾಸವಾಳ ಹೂವಿನಗಿಡಗಳನ್ನು ಬೆಳೆಸಬೇಕಾದಲ್ಲಿ ಕಾಂಡದ ತುಂಡು ಇಲ್ಲವೇ ಗೂಟಿವಿಧಾನ ಬಳಸಿಕೊಂಡು ಸಸ್ಯಾಭಿವೃದ್ಧಿ ಮಾಡಿಕೊಳ್ಳಬಹುದು ಕಸಿಕಟ್ಟಿದ ದಾಸವಾಳ ಗಿಡಗಳಲ್ಲಿ ಹಲವಾರು ಬಣ್ಣಗಳನ್ನು ಅತಿದೊಡ್ಡ ಗಾಗತ್ರದ ಪುಷ್ಪಗಳನ್ನೂ ಪಡೆಯಲು ಸಾಧ್ಯವಿದೆ. ಈ ದಾಸವಾಳ ಹೂಗಿಡಗಳು ಮನೆಯಂಗಳ, ಉದ್ಯಾನವನಗಳಲ್ಲಿ ನೋಡುವವರನ್ನು ಆಕರ್ಷಿಸಿದರೂ ಈ ಹೂವುಗಳು ಇನ್ನೂ ಮಾರುಕಟ್ಟೆಯಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿಲ್ಲ. ದೇವರ ಪೂಜೆಗೆ ಹಾಗೂ ಔಷಧೀಯ ಕಾರ್ಯಕ್ಕಾಗಿ ಬಳಸಲ್ಪಡುವ ದಾಸವಾಳ ಅಲಂಕಾರಕ್ಕೆ ಸೀಮಿತವಾದ ಪುಷ್ಪ

ಸಸ್ಯವಿವರಣೆ: ದಾಸವಾಳ ಹೂವು ಮಾಲ್ವೇಸಿ ಕುಟುಂಬ ವರ್ಗಕ್ಕೆ ಸೇರಿದ ಸಸ್ಯವಾಗಿದ್ದು ಆಂಗ್ಲಭಾಷೆಯಲ್ಲಿ ಈ ಹೂವಿಗೆ ಹೈಬಿಸ್ಕಸ್‌ ಎಂದು ಕರೆಯಲಾಗುತ್ತದೆ. ಸಂಸ್ಕೃತದಲ್ಲಿ ಜಪಕುಸುಮವೆಂತಲೂ, ಮರಾಠಿಯಲ್ಲಿ ಜವವಂದ ಬಂಗಾಳಿಯಲ್ಲಿ ಜಾಬಾ, ಗುಜರಾತಿಯಲ್ಲಿ ಜಸುವಾ, ಹಿಂದಿಯಲ್ಲಿ ಜಾಸುದ್‌ ಹಾಗೂ ಜವಕುಸುಮವೆಂದೂ ಕನ್ನಡದಲ್ಲಿ ಈ ದಾಸವಾಳ ಹೂವಿಗೆ ಇನ್ನೊಂದು ಹೆಸರು ರುದ್ರಪುಷ್ಪವೆಂತಲೂ ಕರೆಯಲಾಗುವುದು.

ಸಸಿ ಬೆಳೆಸುವ ವಿಧಾನ: ಈ ಹೂವಿಗೆ ಯಾವುದೇ ಹೆಚ್ಚಿನ ತಾಂತ್ರಿಕತೆಗಳನ್ನು ಬಳಸುವ ಅವಶ್ಯಕತೆಗಳಿಲ್ಲ. ಸಾಲುಗಳಲ್ಲಿ ಕಾಂಡದ ತುಂಡು ನಾಟಿಮಾಡಿ ಬೆಳೆಸಬಹುದು ಈ ದಾಸವಾಳ ಹೂವಿನಲ್ಲಿ ಸುಮಾರು ಇನ್ನೂರರಷ್ಟು ವಿವಿಧ ಗಿಡಗಳಿದ್ದು ಅವುಗಳಲ್ಲಿ ಎಲ್ಪೆಡೆ ಕಾಣುವಂಥದ್ದು ಹೈಬಿಸ್ಕಸ ರೋಸಾಚಿನೆನ್‌ಸಿಸ್‌ ಅಥವಾ ಚೈನಾಗುಲಾಬಿ’ ಇದು ಕುರುಚಲು ಗಿಡದಂತೆ ಚಿಕ್ಕ ಮರದಂತೆ ಎತ್ತರದಲ್ಲಿ ಬೆಳೆಯುತ್ತದೆ, ಇದರ ಕೊಂಬೆಗಳು ಸ್ವಲ್ಪು ಬಿರುಸಾಗಿದ್ದು ಹಸಿರು ಎಲೆಗಳು ಒಂದಾದ ಮೇಲೊಂದರಂತೆ ಬೆಳೆದುಕೊಂಡು ಸದಾ ಹಸಿರು ಸೂಸುತ್ತಿರುತ್ತವೆ, ಎಲೆ ಮತ್ತು ಕಾಂಡಗಳು ನವಿರಾದ ಮುಳ್ಳುಗಳಂತಿದ್ದು ಈ ದಾಸವಾಳದ ಹೂಗಿಡಗಳಲ್ಲಿ ಎಲ್ಲಾ ಬಣ್ಣಗಳನ್ನು ಹೊಂದಿರುವುದನ್ನು ನಾವು ನೋಡಬಹುದು. ಬಿಳಿ, ಕೆನ್ನೀಲಿ, ಕೆಂಪು, ಹಳದಿ, ಎಳೆಗೆಂಪು ಮತ್ತು ನೇರಳೆ ಮಿಶ್ರಿತ ಕೇಸರಿಬಣ್ಣಗಳ ಹೂವಿನ ಗಿಡಗಳೂ ಇತ್ತೀಚೆಗೆ ಕಾಣಸಿಗುತ್ತವೆ.

ದಾಸವಾಳ ಬಿಳಿಹೂಗಳಿಗೆ ಬಹಳ ಬೇಡಿಕೆಯುಂಟು. ಇದು ದೇಹದ ಉಷ್ಟಾಂಶವನ್ನು ಕಡಿಮೆಮಾಡಲು ಔಷಧಿಯಾಗಿ ಬಳಕೆಗೊಳ್ಳುತ್ತಿದ್ದು ಮಹಿಳೆಯರು ಇದರ ಉಪಯೋಗದಿಂದ ಮುಟ್ಟಿನ ತೊಂದರೆ, ಲೈಂಗಿಕ ಸಮಸ್ಯಗಳಿಗೆ ಔಷಧಿಯಂತೆ ಬಳಕೆ ಮಾಡುವುದುಂಟು ಕೆಂಪು ದಾಸವಾಳದ ಹೂವು ಮತ್ತು ಎಲೆಗಳು ಸೌಂದರ್ಯ ಸಾಧನಗಳಿಗೆ ಬಳಕೆಗೊಳ್ಳುವ ಗುಣಹೊಂದಿವೆ. ತಲೆಕೂದಲು ಕಪ್ಪಾಗಲು ಹಾಗೂ ನುಣುಪಾಗಲು ಈ ಕೆಂಪು ದಾಸವಾಳ ಹೂವಿನ ರಸ ಉಪಯೋಗಿಸುವುದನ್ನು ಕಾಣಬಹುದು. ದಾಸವಾಳ ಹೂವಿನ ಗಿಡಗಳಲ್ಲಿ ಒಂದೆರಡು ಸಲ ಚಾಟ್ನಿ ತಾಂತ್ರಿಕತಿಯನ್ನು ಅನುಸರಿಸಿ, ಸ್ವಲ್ಪು ಕಾಂಪೋಷ್ಟ ಗೊಬ್ಬರ ಬಳಸಿದಲ್ಲಿ ಈ ಹೂವಿನಗಿಡಗಳಿಂದ ವರ್ಷ ಪೂರ್ತಿಯಾಗಿ ಹೂವುಗಳನ್ನು ಪಡೆಯಲು ಸಾಧ್ಯವಿದೆ. ಈ ಹೂವಿನ ಎಲ್ಲ ಪ್ರಕಾರಗಳಲ್ಲೂ ಸುವಾಸನೆ, ಸುಗಂಧ ವಿರದಿರುವುದು ಒಂದು ವಿಶೇಷತೆ.

. ವಾಣಿಜ್ಯಪುಷ್ಟ ಕಾರ್ನೇಶನ್

ಇದೊಂದು ಹೆಚ್ಚು ಹಣತರುವ ಹೂಬೆಳೆಯಾಗಿದ್ದು ಇದಕ್ಕೆ ವೈಜ್ಞಾನಿಕವಾದ ಹೆಸರು ‘ಡಯಾಂಥಸ್‌ ಕ್ಯಾರಿಯೋಫಿಲ್ಲಸ್‌’ ಎಂದು ಈ ಕಾರ್ನೇಶನ್‌ ಹೂಗಿಡಗಳು ಕ್ಯಾರಿಯೋಫಿಲ್ಲೇಸಿ ಸಸ್ಯಕುಟುಂಬ ವರ್ಗಕ್ಕೆ ಸೇರಿದ್ದು. ಈ ಹೂವುಗಳನ್ನು ಹೂ ದಾನಿಯಲ್ಲಿ ಜೋಡಿಸಲು ಹೂ ಪುಷ್ಪಗುಚ್ಚ ಮಾಡಲು ಉಪಯೋಗಿಸುವರು. ಉತ್ತಮ ಗುಣಮಟ್ಟದ ಹೂಗಳನ್ನು ಪಡೆಯಲು ಹೈಟೆಕ್‌ ತಾಂತ್ರಿಕತೆ ಬಳಸಿಕೊಂಡು ಹಸಿರು ಮನೆಗಳಲ್ಲಿಯೇ ಕಾರ್ನೇಶನ್‌ ಹೂವಿನ ಕೃಷಿಯನ್ನು ಮಾಡಿ ಅಧಿಕ ಸಂಪಾದನೆ ಮಾಡಬಹುದು.

ಮಣ್ಣು ಮತ್ತು ಹವಾಗುಣ: ಈ ಹೂ ಬೆಳೆ ಮಾಡಲು ಫಲವತ್ತಾದ ನೀರು ಬಸಿದುಹೋಗುವಂತಹ ಹಗುರು ಮಣ್ಣು ಅವಶ್ಯಕ. ಮಣ್ಣಿನಲ್ಲಿ ನೀರು ಚೆನ್ನಾಗಿ ಸೋರಿಹೋಗಲು ತೆಂಗಿನ ನಾರು, ಮರಳು, ಸೆಗಣಿ ಗೊಬ್ಬರಗಳನ್ನು ೧:೧:೧ರ ಪ್ರಮಾಣದಲ್ಲಿ ಪ್ರತಿ ಚದುರ ಮೀಟರಿಗೆ ಸುಮಾರು ೨೦ ಕಿಲೋಗ್ರಾಮ್‌ ಮಿಶ್ರಣವನ್ನು ಉತ್ತಮವಾಗಿ ಮಣ್ಣಿನಲ್ಲಿ ಬೆರೆಸಿ ಅದನ್ನು ಹದಮಾಡಿದ ನಂತರ ಹೂಗಳನ್ನು ಬೆಳೆಯುವುದು ಸೂಕ್ತ ಈ ಹೂಬೇಸಾಯಕ್ಕೆ ಬೆಳೆಪ್ರದೇಶದ ಮಣ್ಣಿನ ರಸಸಾರ ಆರರಿಂದ ೭ ಇರುವುದು ಸೂಕ್ತ. ತಂಪಾದ ಹವಾಗುಣದಲ್ಲಿ ಈ ಹೂವಿನ ಬೆಳೆ ಚೆನ್ನಾಗಿ ಬರುತ್ತದೆ. ಇದಕ್ಕೆ ೩೫% ಸೆಂಟಿಗ್ರೇಡ್‌ ವರೆಗೆ ಉಷ್ಣಾಂಶ ತಡೆದುಕೊಳ್ಳುವ ಶಕ್ತಿಯಿದ್ದು ೧೫% ರಿಂದ ೨೫% ಸೆಂಟಿಗ್ರೇಡ್‌ ಇದ್ದರೆ ಅತಿಯೋಗ್ಯ. ಹುಲುಸಾದ ಹೂಗಳನ್ನು ಪಡೆಯಲು ಹಸಿರುಮನೆಯ ವಾತಾವರಣದಲ್ಲಿ ದಿನದ ೨೪ ಗಂಟೆಗಳಲ್ಲಿ ಹನ್ನೆರಡು ಗಂಟೆಗಳಿಗೂ ಮೇಲ್ಪಟ್ಟಂತೆ ಬೆಳಕಿನ ವ್ಯವಸ್ಥೆಯಿರುವಂತೆ ನಾವು ನೋಡಿಕೊಳ್ಳಬೇಕಾದುದು ಅವಶ್ಯ.

ತಳಿಗಳು ಹಾಗೂ ಸಸ್ಯಾಭಿವೃದ್ಧಿ: ಮೆಡಮ್‌ ಕೆಲಟ್ಟೆ (ಬಿಳಿ) ಶುಗುರ ಬೇಬಿ ಕೆಂಪು ಅಂಚಿನ ಬಿಳಿ ಹೂ ಮತ್ತು ಡೇಸಿಯೋ ಡೋಮಿಂಗೊ(ಕೆಂಪು) ಆಲ್ಮಾ(ಗುಲಾಬಿ) ಐಕಾರ್ಡಿ (ಕೆಂಪು) ಕ್ಯಾಂಡಿ (ಹಳದಿ) ಇವು ಮುಖ್ಯವಾದವು. ಹೂಗಿಡಗಳ ಸಸ್ಯಾಭಿವೃದ್ಧಿಯನ್ನು ಅಂಗಾಂಶ ಕೃಷಿಯಿಂದ ಅಭಿವೃದ್ಧಿಪಡಿಸಿದ ಇಲ್ಲವೇ ಹೂ ಗಿಡದ ಕಾಂಡದ ತುಂಡುಗಳಿಂದ ಪಡೆದ ಸಸಿಗಳನ್ನು ನಾಟಿಗೆ ಬಳಸಿಕೊಳ್ಳಬಹುದು. ಉತ್ತಮವಾದ ಸಸಿಗಳ ಲಭ್ಯತೆಗಾಗಿ ಹೈಟಿಕ್‌ ತಾಂತ್ರಿಕತೆಗಳನ್ನು ಬಳಸಿಕೊಳ್ಳುವುದು ಸೂಕ್ತ.

ಸಸಿಗಳನ್ನು ಉಪಯೋಗಿಸುವ ಪ್ರದೇಶದಲ್ಲಿ ಪ್ರತಿ ಚದುರ ಮೀಟರ್ಗೆ ೧೦ ಕಿಗ್ರಾಂ ಕೊಟ್ಟಿಗೆ ಗೊಬ್ಬರಗಳನ್ನು ಪ್ರತಿವರ್ಷವೂ ಮಣ್ಣಿಗೆ ಬೆರೆಸಬೇಕು. ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ಅಗತೆ ಮಾಡಿ ಹದಪಡಿಸಿಕೊಳ್ಳಬೇಕು. ಅನುಕೂಲಕ್ಕೆ ತಕ್ಕಂತೆ ಉದ್ದವಾದ ೧ಮೀ. ಅಗಲಳತೆ ೨೦-೩೦ ಸೆಂ.ಮೀ. ಎತ್ತರದ ಮಡಿಗಳನ್ನು ಮಾಡಿ ಹೂ ಕಾರ್ನೇಶನ್‌ ಹೂ ಕೃಷಿಯನ್ನು ಕೈಕೊಳ್ಳಬೇಕು. ಮಣ್ಣಿನಲ್ಲಿರುವ ಕೀಟಾಣು, ರೋಗಾಣುಗಳನ್ನು ಕಳೆಬೀಜಗಳನ್ನು ನಾಶಪಡಿಸಲು ನೀರಿನಲ್ಲಿ ಫಾರ್ಮಲಿನ್‌ ಬೆರೆಸಿ ಮಡಿಯನ್ನು ನೆನೆಸಿ ಆ ಮಡಿಯಲ್ಲಿರುವ ಔಷಧಿ ಅಂಶ ಸಂಪೂರ್ಣ ಬಸಿದುಹೋಗುವಂತೆ ಮಡಿಗಳನ್ನು ಮತ್ತೊಮ್ಮೆ ಚೆನ್ನಾಗಿ ತೋಯಿಸಿ ಒಂದು ವಾರದ ನಂತರ ಸಸಿಗಳನ್ನು ೧೫ ಸೆಂ.ಮೀ. ಸಾಲಿನಲ್ಲಿ ಸಸಿಯಿಂದ ಸಸಿಗೆ ೧೫. ಸೆಂ.ಮೀ. ಅಂತರದಲ್ಲಿ ನಾಟಿಮಾಡಿ ಹೂಗಿಡಗಳನ್ನು ಬೆಳೆಸಬೇಕು.

ಕಾರ್ನೇಶನ್‌ ಹೂ ಸಸಿಗಳ ನಾಟಿ ಮಾಡಿದ ಒಂದು ತಿಂಗಳ ನಂತರದಲ್ಲಿ ಕವಲುಗಳು ಬರುವಾಗ ೫ ರಿಂದ ೬ ಗಿಣ್ಣಿಗಳಿಗೆ ಚಿವುಟಿ ಹಾಕಬೇಕು. ಇದರಿಂದಾಗಿ ಗಿಣ್ಣುಗಳು ಚಿಗುರೊಡೆದು ಹೆಚ್ಚಿನ ಕವಲೊಡೆಯುತ್ತವೆ. ಹೆಚ್ಚು ಕವಲುಗಳು ಬೇಕಿದ್ದರೆ ಮತ್ತೊಮ್ಮೆ ಗಿಣ್ಣುಗಳನ್ನು ಚಿವುಟಿ ಹಾಕಬಹುದು. ಈ ತಾಂತ್ರಿಕತೆಯನ್ನು ಗಿಡಗಳಿಗೆ ೬೦ ದಿನಗಳ ನಂತರದಲ್ಲಿ ಮಾಡಬಹುದು. ಕಾರ್ನೇಶನ್‌ ಹೂಗಿಡಗಳು ೧ರಿಂದ ೧.೨ ಮೀ. ಎತ್ತರದ ತನಕವೂ ಬೆಳೆಯುವುದರಿಂದ ಇವುಗಳು ಆಧಾರವಿಲ್ಲದೇ ಬೀಳುವುದಾದ ಕಾರಣ ಗಿಣ್ಣುಗಳ ಚಿವುಟುವ ಸಂದರ್ಭದಲ್ಲಿ ಗಿಡಗಳಿಗೆ ಆಧಾರವಾಗಿ ೧೦ ರಿಂದ ೨೦ ಸೆಂ.ಮೀ ಅಳತೆಯ ಜಾಳಿಗೆಯ ತಂತಿಬಲೆಗಳನ್ನು ಬಳಸಿಕೊಂಡು ಹೂಗಿಡಗಳನ್ನು ಬೆಳೆಸಬೇಕು.

ಪೋಷಕಾಂಶ ಹಾಗೂ ನೀರಾವರಿ: ಕಾರ್ನೇಶನ್‌ ಹೂ ಬೆಳೆಮಾಡುವ ಪ್ರತಿ ಚದುರ ಮೀಟರಿಗೆ ಸುಮಾರು ೪೪ಸಸಿಗಳುನ್ನು ನಾಟಿಮಾಡಿಕೊಳ್ಳಬೇಕು. ಈ ಪ್ರದೇಶಕ್ಕೆ ಸಿಫಾರಸಿನಂತೆ ೨೫೦ಗ್ರಾಂ ಸಾರಜನಕ ೮೦ಗ್ರಾಂ. ರಂಜಕ ಮತ್ತು ೨೦೦ಗ್ರಾಂ ಪೋಟ್ಯಾಷ್‌, ೧೨೫ಗ್ರಾಮ ಕ್ಯಾಲ್ಸಿಯಂ, ೪೦೦ಮಿ.ಗ್ರಾಂ. ಮಾಗ್ನೇಸಿಯಂ ಪ್ರಮಾಣದ ಪೋಷಕಾಂಶಗಳನ್ನು ಪ್ರತಿ ಹದಿನೈದು ದಿನಗಳಿಗೊಮ್ಮೆ ಒಟ್ಟು ೨೦ ರಿಂದ ೨೫ ಸಮಕಂತುಗಳಲ್ಲಿ ಹೂಗಿಡಗಳ ಬುಡದಲ್ಲಿ ಮಣ್ಣಿಗೆ ಸೇರಿಸುವುದು ಅಗತ್ಯ. ಈ ಬೆಳೆಗೆ ಹನಿನೀರಾವರಿ ಪದ್ಧತಿಯಿಂದಲೇ ನೀರಾವರಿ ಸೌಲಭ್ಯಕಲಿಸಿ ನೀರೊದಗಿಸಬೇಕು. ಪ್ರತಿ ಚದುರ ಮೀಟರಿಗೆ ಪ್ರತಿದಿವಸವೂ ೪ರಿಂದ ೫ಲೀಟರ ನೀರು ಲಭಿಸುವಂತೆ ಡಿಪ್ಟರನ್ನು ಅಳವಡಿಸಿ ಹೂವಿನಗಿಡಗಳ ಸಾಲುಗಳಲ್ಲಿ ನೀರಾವರಿ ಮಾಡಬೇಕು.

ಕೊಯ್ಲು ತಾಂತ್ರಿಕತೆ: ಕಾರ್ನೇಶನ್‌ ಹೂಗಿಡಗಳಲ್ಲಿ ಒಂದು ಸಲ ಚಿವುಟಿದ ಸಸಿಗಳಿಂದ ೧೫ ರಿಂದ ೨೦ ವಾರಗಳ ನಂತರದಲ್ಲಿ ಹೂವುಗಳು ದೊರೆಯುವುದರಿಂದ ಪೂರ್ತಿ ಅರಳಿದ ಹೂಗಳನ್ನು ದಂಟು ಸಮೇತ ಕೊಯ್ಲು ಮಾಡಬೇಕು. ದೂರದ ಮಾರುಕಟ್ಟಗೆ ಕಳಿಸುವ ಸಂದರ್ಭದಲ್ಲಿ ಮೊಗ್ಗಿರುವ ಸಮಯದಲ್ಲಿಯೆ ಕೊಯ್ಲು ಮಾಡಿಕೊಳ್ಳಬೇಕು. ಈ ಕಾರ್ನೇಶನ್‌ ಹೂವಿನ ಬೆಳೆಯಲ್ಲಿ ಇಳುವರಿಯು ಆ ಹೂ ಕೃಷಿ ಮಾಡಿದ ವಾತಾವರಣ, ನಾಟಿ ಮಾಡಿದ ಸಮಯ ಬೆಳೆಯ ಬೇಸಾಯ ವಿಧಾನಕ್ಕೆ ತಕ್ಕಂತೆ ದೊರೆಯುತ್ತದೆ. ಪ್ರತಿಗಿಡಕ್ಕೆ ೮ ರಿಂದ ೧೦ ಹೂದಂಟುಗಳನ್ನು ನಾವು ಪಡೆಯಬಹುದು. ಪ್ರತಿ ಚದುರ ಮೀಟರ್ ಪ್ರದೇಶದಿಂದ ಸುಮಾರು ೩೮೯ ಹೂಗಳನ್ನು ಪ್ರತಿ ವರ್ಷದಲ್ಲಿ ನಾವು ಪಡೆದುಕೊಳ್ಳಲು ಸಾಧ್ಯವಿದೆ.

ಉನ್ನತ ತಾಂತ್ರಿಕ ವಿಧಾನ ಕೈಕೊಳ್ಳುವ ಪರಿಣತ ಕೃಷಿಕರು ಮಾತ್ರ ಕೈಕೊಳ್ಳಬಹುದಾದ ಈ ಕಾರ್ನೇಶನ್‌ ಹೂವಿನ ಕೃಷಿಯು ಹೆಚ್ಚಿನ ಖರ್ಚು ವೆಚ್ಚದ್ದಾಗಿದ್ದು ಲಾಭವೂ ಕೂಡಾ ಹೆಚ್ಚಿನ ಪ್ರಮಾಣದ್ದಾಗಿದೆಯೆಂಬುದನ್ನು ನಾವು ಮರೆಯಬಾರದು.