೧೦. ಗ್ಲ್ಯಾಡಿಮೋಲಸ್ಪುಷ್ಟ

ನಮ್ಮ ರಾಜ್ಯದಲ್ಲಿ ಹೆಚ್ಚು ಬಳಕೆಯಲ್ಲಿರುವ ಈ ಹೂವು ಕತ್ತರಿಸಿದ ಹೂವಿಗಾಗಿ ಬೆಳೆಯಲಾಗುತ್ತಿದ್ದು ಕುಂಡಗಳಲ್ಲಿ, ಪಾತಿಮಾಡಿಕೊಂಡು ಹಾಗೂ ತೋಟಗಳಲ್ಲೂ ಯಶಸ್ವಿಯಾಗಿ ಬೆಳೆಮಾಡಬಹುದು. ಈ ಗ್ಲ್ಯಾಡಿಮೋಲಸ್‌ ಹೂವನ್ನು ಹೂದಾನಿಗಳಲ್ಲಿ ಜೋಡಿಸಲು, ಪುಷ್ಪಗುಚ್ಛವನ್ನು ತಯಾರಿಸುವಲ್ಲಿ ಹೆಚ್ಚು ಬಳಸಲಾಗುವುದು.

ಮಣ್ಣು ಮತ್ತು ನಾಟೀ ಸಮಯ: ಈ ಹೂವಿನ ಕೃಷಿಗೆ ನೀರು ಬಸಿದು ಹೋಗುವಂಥ ಸುಮಾರು ರಸಸಾರ ೬-೭ ಪ್ರಮಾಣದ ಫಲವತ್ತಾದ ಗೋಡುಮಣ್ಣು ಅತೀಯೋಗ್ಯವಾದದ್ದು. ಸಾಧಾರಣ ಕಪ್ಪು ಮಣ್ಣಿನಲ್ಲೂ ಈ ಹೂವಿನ ಬೇಸಾಯ ಮಾಡಬಹುದು. ಈ ಹೂವಿನ ಕೃಷಿ ಮಾಡಲು ತಂಪು ಹವಾಮಾನವಿರಬೇಕು. ಗ್ಲ್ಯಾಡಿಯೋಲಸ್‌ ಹೂಗಿಡಗಳನ್ನು ವರ್ಷದ ಎಲ್ಲಾ ಕಾಲದಲ್ಲಿ ಬೆಳೆಯಬಹುದಾದರೂ ಜೂನ್‌ ನಿಂದ ನವೆಂಬರ್ ವರೆಗೆ ಈ ಹೂವಿನ ಕೃಷಿ ಮಾಡುವುದು ಸೂಕ್ತ. ಅದರಲ್ಲೂ ಅಕ್ಟೋಬರ್ ತಿಂಗಳಲ್ಲಿ ಗ್ಲ್ಯಾಡಿಯೋಲಸ್‌ ಹೂಕೃಷಿಮಾಡುವುದು ಅತ್ಯುತ್ತದು.

ತಳಿಗಳು ಹಾಗೂ ಸಸ್ಯಾಭಿವೃದ್ಧಿ ಕ್ರಮ: ಗ್ಲ್ಯಾಡಿಯೋಲಸ್‌ ಪುಷ್ಪಗಳಲ್ಲಿ ಪ್ರಮುಖ ತಳಿಗಳೆಂದರೆ ಫ್ರೆಂಡ್‌ಸಿಪ್‌, ನಜರಾನಾ, ಪೂನಮ್‌, ಆರತಿ, ಮೀರಾ, ಶೋಭ, ಸಪ್ನ, ಅಪ್ಸರ್, ತ್ರಿಲೋಕಿ, ಅರ್ಜುನ, ಮೇಲೋಡಿ, ಅಮೇರಿಕನ್‌ ಬ್ಯುಟಿ, ಹರ್ ಮೆಜಿಸ್ಟಿ ಹಾಗೂ ಮಯೂರ ಮುಂತಾದವು. ಗಡ್ಡೆಗಳಿಂದಲೇ ಈ ಹೂವಿನ ಬೇಸಾಯವನ್ನು ಮಾಡಬಹುದು, ೩ಸೆಂ.ಮೀ. ಗಾತ್ರದ ಗಡ್ಡೆಗಳನ್ನು ನಾಟಿಗೆ ಬಳಸಬೇಕು, ಪ್ರತಿ ಹೆಕ್ಟೇರಿಗೆ ೨,೫೦೦೦೦ ಗಡ್ಡೆಗಳು ಬೇಕಾಗುತ್ತವೆ.

ನಾಟಿಮಾಡುವ ಭೂಮಿಯನ್ನು ೨-೩ ಸಲ ಚೆನ್ನಾಗಿ ಉಳುಮೆಮಾಡಿ ಪ್ರತಿ ಹೆಕ್ಟೇರ್ ಭೂಮಿಗೆ ಸು. ೨೪ ಟನ್‌ ಪ್ರಮಾಣದ ಕೊಟ್ಟಿಗೆಗೊಬ್ಬರವನ್ನು ಮಣ್ಣಿಗೆ ಬೆರೆಸಿ ೨೦-೩೦ ಸೆಂ.ಮೀ. ಅಂತರದಲ್ಲಿ ಸಾಲುಗಳನ್ನು ರಚಿಸಿಕೊಳ್ಳಬೇಕು. ಕೃಷಿಮಾಡುವ ಪ್ರದೇಶಕ್ಕೆ ಪ್ರತಿ ಹೆಕ್ಟೇರಿಗೆ ೫೦ ಕಿ.ಗ್ರಾಂ ಸಾರಜನಕ ೬೦ ಕಿ.ಗ್ರಾಂ ರಂಜಕ, ೬೦ ಕಿ.ಗ್ರಾಂ ಪೋಟ್ಯಾಷ್‌ಯುಕ್ತ ಗೊಬ್ಬರಗಳನ್ನು ಬೆರೆಸಿ ಸಾಲುಗಳಲ್ಲಿ ೨೦ ಸೆಂ.ಮೀ. ಅಂತರದಲ್ಲಿ ೫ ಸೆಂ.ಮೀ. ಆಳದಲ್ಲಿ ಹೂ ಗಡ್ಡೆಗಳನ್ನು ನಾಟಿ ಮಾಡಬೇಕು. ನಾಟಿಮಾಡಿದ ೪೫ ದಿವಸಗಳ ನಂತರ ಪ್ರತಿ ಹೆಕ್ಟೇರಿಗೆ ೫೦ ಕಿ.ಗ್ರಾಂ. ಸಾರಜನಕ ಗೊಬ್ಬರವನ್ನು ಅನುಸರಿಸಿ ೪-೬ ದಿನಗಳಿಗೊಮ್ಮೆ ನೀರು ಹಾಯಿಸಬೇಕು, ಕಳೆ ಕಸವಿಲ್ಲದಂತೆ ನೋಡಿಕೊಳ್ಳಬೇಕು. ಗ್ಲ್ಯಾಡಿಯೋಲಸ್‌ ಹೂವಿನಗಿಡಗಳಿಗೆ ಎಲೆ ತಿನ್ನುವ ಹುಳು ಮತ್ತು ಕೆಂಪುನುಶಿ, ಕಂದುಕೊಳೆ ರೋಗ ಸೊರಗು ರೋಗಗಳು ಬರುವ ಸಾಧ್ಯತೆಗಳು ಇರುವುದರಿಂಧ ಬೇಗನೇ ಹತೋಟಿ ಕ್ರಮಗಳನ್ನು ಕೈಕೊಳ್ಳಬೇಕು.

ಕೊಯ್ಲು: ಗಡ್ಡ ನಾಟಿಮಾಡಿದ ಎರಡೂವರೆಯಿಂದ ಮೂರು ತಿಂಗಳಲ್ಲಿಯೇ ಹೂಬಿಡಲು ಆರಂಭಗೊಳ್ಳುತ್ತವೆ. ಹೂಗೊಂಚಲುಗಳಲ್ಲಿ ಹೂಗಳು ಅರಳಿಕೊಳ್ಳಲು ಪ್ರಾರಂಭಗೊಂಡೊಡನೆಯೇ ಗೊಂಚಲನ್ನೆ ಕತ್ತರಿಸಿ ಹೂ ತೆಗೆಯಬೇಕು. ಪ್ರತಿ ಹೆಕ್ಟೇರಿಗೆ ಸುಮಾರು ಎರಡೂವರೆ ಲಕ್ಷ ಹೂಗೊಂಚಲುಗಳನ್ನು ಪಡೆಯಬಹುದು.

೧೧. ಅಂದದ ಆಯಸ್ಟರ್ ಹೂ

ಬಣ್ಣ ಬಣ್ಣದ ವೈವಿಧ್ಯ ವರ್ಣದಲ್ಲಿ ಬೆಳೆಯುವ ಆಯಸ್ಟರ್ ಹೂವಿನ ಬೆಳೆಯನ್ನು ಹೆಚ್ಚಾಗಿ ವಾಣಿಜ್ಯ ಹೂ ಕೃಷಿಯಲ್ಲೆ ಸೇರಿಸಲಾಗಿದೆ. ದೊಡ್ಡ ನಗರ ಪ್ರದೇಶದಲ್ಲಿ ಈ ಹೂವನ್ನು ಬಿಡಿ ಹೂ ಮತ್ತು ಕತ್ತರಿಸಿದ ಹೂಗಳ ರೂಪದಲ್ಲಿ ವೈವಿಧ್ಯ ರೀತಿಯಲ್ಲಿ ಬೆಳೆಸಲಾಗುವುದು.

ಮಣ್ಣು ಮತ್ತು ನಾಟೀ ಸಮಯ: ಆಯಸ್ಟರ್ ಹೂವನ್ನು ಉತ್ತಮವಾಗಿ ನೀರು ಬಸಿದು ಹೋಗುವಂತಹ ಕೆಂಪು ಗೋಡು ಮಣ್ಣಲ್ಲಿ ಎಲ್ಲಾ ವಿಧವಾದ ಮಣ್ಣಿನಲ್ಲೂ ಸಹ ಬೆಳೆಯಬಹುದು. ಸಸಿಮಡಿಗಳಲ್ಲಿ ಈ ಹೂವಿನ ಬೀಜಗಳನ್ನು ಹಾಕಿ ಸಸಿ ಬೆಳೆಸಿಕೊಂಡು ಮೇ-ಜೂನ್‌ದಲ್ಲಿ ಸಸಿಗಳನ್ನು ನಾಟಿಮಾಡಿ ಈ ಹೂವಿನ ಬೆಳೆಯಿಂದ ಅತ್ಯುತ್ತಮವಾದ ಇಳುವರಿಯನ್ನು ಪಡೆಯಬಹುದು.

ತಳಿ ವಿಶೇಷತ: ಈ ಹೂವಿನ ತಳಿಗಳಲ್ಲಿ ಕಾಮಿನಿ, ಪೌಡರ ಪಫ್‌, ಪೂರ್ಣಿಮಾ, ಪುಲೇ ಗಣೇಶ ವೈಟ್‌, ಪುಲೇ ಗಣೇಶ ಪಿಂಕ್‌, ಪುಲೇ ಗಣೇಶ ಪರ್ಪಲ,. ಪುಲೇಗಣೇಶ ವಾಯಿಲೆಟ್‌, ವಾಯಿಲೆಟ್‌ ಕುಶನ್‌, ಶಶಾಂಕ ಇತ್ಯಾದಿ.

ಬೇಸಾಯ: ಒಂದು ಹೆಕ್ಟೇರ್ ಪ್ರದೇಶದಲ್ಲಿ ಹ್ಯಾಸ್ಟರ್ ಹೂವಿನ ಕೃಷಿಮಾಡಲು ೬೨೫-೭೫೦ ಗ್ರಾಂ. ಬೀಜ ಬೇಕಾಗುತ್ತವೆ. ಈ ಹೂವಿನ ಬೀಜಗಳನ್ನು ೭.೫ ಮೀ. ಉದ್ದ ೧.೨ ಮೀ. ಅಗಲ ಹಾಗೂ ೧೦ ಸೆಂ.ಮೀ. ಎತ್ತರವಿರುವ ನಾಲ್ಕು ಏರು ಮಡಿಗಳನ್ನು ತಯಾರಿಸಿ ಅದರಲ್ಲಿ ಬೀಜಗಳನ್ನು ಬಿತ್ತನೆ ಮಾಡಿದ ಮೇಲೆ ತೆಳುವಾಗಿ ಕೊಟ್ಟಿಗೆ ಗೊಬ್ಬರ ಹರಡಬೇಕು. ನಿಯಮಿತವಾಗಿ ನೀರಾವರಿ ಗೈದ ಸುಮಾರು ನಾಲ್ಕರಿಂದ ಆರುವಾರಗಳಲ್ಲಿ ಸಸಿಗಳು ಮೊಳಕೆ ಹೊಂದಿ ನಾಟಿಗೆ ಸಿದ್ಧಿಗೊಳ್ಳುತ್ತವೆ. ಈ ಸಸಿಗಳನ್ನು ನಾಟಿ ಮಾಡಬೇಕೆಂದಿರುವ ಪ್ರದೇಶದಲ್ಲಿ ಚೆನ್ನಾಗಿ ಉಳುಮೆ ಮಾಡಿ ಹದಗೊಳಿಸಿ ೨೦ ಟನ್‌ ಕೊಟ್ಟಿಗೆ ಗೊಬ್ಬರವನ್ನು ಪ್ರತಿ ಹೆಕ್ಟೇರ್ ಪ್ರದೇಶಕ್ಕೆ ಮಣ್ಣಿಗೆ ಬೆರೆಸಿ ಅದರಲ್ಲಿ ೩೦ ಸೆಂ.ಮೀ. ಅಂತರದ ಬೋಧುಗಳ ಒಂದು ಪಕ್ಕದಲ್ಲಿ ಸಸಿಯಿಂದ ಸಸಿಗೆ ೩೦ ಸೆಂ.ಮಿ ಇರುವಂತೆ ಸಸಿಗಳನ್ನು ನಾಟಿಮಾಡಬೇಕು. ಈ ಸಂದರ್ಭದಲ್ಲಿಯೇ ಸಿಫಾರಿತ ಪಡಿಸಿದ ೯೦ ಕಿ.ಗ್ರಾಂ, ರಂಜಕ, ೧೨೦ ಕಿ.ಗ್ರಾಂ. ರಂಜಕ ಹಾಗೂ ೬೦ ಕಿ.ಗ್ರಾಂ. ಪೋಟ್ಯಾಷ್‌ ಯುಕ್ತ ರಾಸಾಯನಿಕ ಗೊಬ್ಬರವನ್ನು ಮಣ್ಣಿಗೆ ಬೆರೆಸುವುದರಿಂದ ಸಸಿಗಳು ಚೆನ್ನಾಗಿ ಬೆಳೆಯಬಲ್ಲವು. ನಾಟಿಮಾಡಿದ ೪೦ ದಿನಗಳ ನಂತರದಲ್ಲಿ ಮತ್ತು ೯೦ ಕಿ.ಗ್ರಾಂ. ಸಾರಜನಕ ಪೋಷಕಾಂಶದ ಗೊಬ್ಬರವನ್ನು ಮೇಲುಗೊಬ್ಬರವಾಗಿ ಈ ಬೆಳೆಗೆ ನೀಡುವುದು ಅವಶ್ಯ. ಮಣ್ಣು ಮತ್ತು ಹವಾಗುಣಕ್ಕೆ ಅನುಸಾರವಾಗಿ ೪ ರಿಂದ ೫ ದಿನಗಳಿಗೊಮ್ಮೆ ಈ ಹ್ಯಾಸ್ಟರ್ ಹೂವಿನ ಬೆಳೆಗೆ ನೀರನ್ನೊದಗಿಸಬೇಕು. ಕೃಷಿಕ್ಷೇತ್ರವು ಕಳೆಕಸಗಳಿಂದ ಸದಾ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕು. ಪ್ರತಿಸಲ ಅಂತರ ಬೇಸಾಯಮಾಡುವಾಗ ಹೂಗಿಡಗಳ ಸಾಲಿಗೆ ಮಣ್ಣಿರಿಸಿದಲ್ಲಿ ಬೆಳೆಗೆ ತುಂಬಾ ಅನುಕೂಲವಾಗುವುದು.

ಆಸ್ಟರ್ ಹೂವಿನ ಗಿಡಗಳಿಗೆ ಹೇನು, ಥ್ರಿಪ್ಸ್‌, ಎಲೆತಿನ್ನು ಏಕೀಟಗಳು, ಎಲೆಚುಕ್ಕೆ ರೋಗ, ಸೊರಗು ರೋಗ ಹಾಗೂ ಬೂದುರೋಗ ಬರುವ ಸಾಧ್ಯತೆಗಳಿರುವುದರಿಂದ ಕೂಡಲೇ ನಿಯಂತ್ರಣ ಕ್ರಮ ಕೈಕೊಳ್ಳಬೇಕು. ಈ ಹೂವಿನ ಗಿಡಗಳು ೧೨ ವಾರಕ್ಕೆ ಬಂದಾಗೆ ಹೂಗಳು ಕೊಯ್ಲಿಗೆ ಬರುತ್ತವೆ. ದೇಟುಸಹಿತವಾಗಿ, ದೇಟುರಹಿತವಾಗಿ ಕೊಯ್ಲು ಮಾಡಬಹುದು. ಪ್ರತಿ ಹೆಕ್ಟೇರ್ ದಲ್ಲಿ ಹತ್ತರಿಂದ ಹನ್ನೆರಡುವರೆ ಸಾವಿರ ಕಿ.ಗ್ರಾಂ. ಇಳುವರಿಯನ್ನು ನಾವು ಪಡೆದುಕೊಳ್ಳಲು ಸಾಧ್ಯವಿದೆ.

೧೨ ಗೈಲಾರ್ಡಿಯಾ ಹೂ ಹಾರಗಳನ್ನು ತಯಾರಿಸುವಲ್ಲಿ ಬಳಸುವ ಗೈಲಾರ್ಡಿಯಾ ಹೂ ಮಧ್ಯಮಾವಧಿ ಹೂವಿನ ಬೆಳೆಯಾಗಿದೆ. ಇದಕ್ಕೆ ಗಲಾಟೆ ಹೂ ಎಂದೂ ಸಹ ಇನ್ನೊಂದು ಹೆಸರು. ಹಳದಿಬಣ್ಣದ ದೊಡ್ಡ ದೊಡ್ಡ ಗಾತ್ರದಲ್ಲಿನ ಈ ಹೂವಿನ ಅಂದವನ್ನು ನೋಡಿದಷ್ಟೂ ಚಂದ.

ಮಣ್ಣು ಮತ್ತು ನಾಟಿಕಾಲ: ಗೈಲಾರ್ಡಿಯಾ ಹೂಗಿಡಗಳನ್ನು ಬೆಳೆಸಲು ನೀರು ಚೆನ್ನಾಗಿ ಬಸಿದು ಹೋಗುವಂತಹ ಕೆಂಪುಗೋಡು ಮಣ್ಣು ಬಹಳ ಯೋಗ್ಯವಾದದ್ದು. ಇತರ ಮಣ್ಣಿನಲ್ಲೂ ಸಾಧಾರಣ ಬೆಳೆಯುತ್ತದೆ. ಗೈಲಾರ್ಡಿಯಾ ಹೂವಿನಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿ ಪಡಿಸಿದ ಡಿಜಿಎಸ್‌೧ಎ ಎಂಬ ತಳಿಯು ದೊಡ್ಡ ಗಾತ್ರದ ಹೂವಿನ ತಳಿಯಾಗಿದ್ದು ಆಕರ್ಷಕವಾಗಿದೆ. ಈ ತಳಿಯನ್ನು ವರ್ಷದ ಎಲ್ಲಾ ಕಾಲದಲ್ಲೂ ಬೆಳೆಯುವಂಥದ್ದಾಗಿದೆ. ಇತರ ಕೆಲವು ಮಿಶ್ರ ಬಣ್ಣದ ಹೂವಿನ ತಳಿಗಳೂ ಸಹ ಪ್ರಚಲಿತವಾಗಿದೆ.

ಸಸ್ಯಾಭಿವೃದ್ಧಿ ಹಾಗೂ ಬೇಸಾಯಕ್ರಮ: ಗೈಲಾರ್ಡಿಯಾ ಪುಷ್ಪದ ಕೃಷಿಮಾಡಬೇಕಿದ್ದಲ್ಲಿ ಬೀಜಗಳಿಂದ ಸಸಿಗಳನ್ನು ತಯಾರಿಸಿಕೊಂಡು ನಾಟಿಮಾಡಿ ಉತ್ತಮ ಹೂವುಗಳನ್ನು ಪಡೆಯಬಹುದು..ಒಂದು ಹೆಕ್ಟೇರ್ ಪ್ರದೇಶಕ್ಕೆ ೨ ರಿಂದ ೨.೫ ಕಿ.ಗ್ರಾಂ. ಬೀಜಗಳನ್ನು ಬಳಸಿಕೊಂಡು ೭.೫ ಮೀ ಉದ್ದ ೧.೨ಮೀ. ಅಗಲ ೧೦ ಸೆಂ.ಮೀ. ಎತ್ತರದ ನಾಲ್ಕು ಏರು ಮಡಿಗಳನ್ನು ತಯಾರಿಸಿಕೊಡಲಿ ಅದರಲ್ಲಿ ಬೀಜಗಳನ್ನು ತೆಳುವಾಗಿ ಬಿತ್ತನೆ ಮಾಡಿ ಅದರ ಮೇಲೆ ಕೊಟ್ಟಿಗೆಯ ಗೊಬ್ಬರದ ಪುಡಿಯನ್ನು ಹರಡಬೇಕು. ಹಿತಿಮಿತವಾಗಿ ನೀರುಣಿಸಿ, ಸಸಿಗಳನ್ನು ಬೆಳೆಸಬೇಕು. ಬಿತ್ತನೆ ಮಾಡಿದ ನಾಲ್ಕುವಾರಗಳಲ್ಲಿ ಸಸಿಗಳು ಬೆಳೆದುನಾಟಿಗೆ ಸಿದ್ಧಗೊಳ್ಳುತ್ತವೆ. ಈ ಸಸಿಗಳನ್ನು ನಾಟಿಮಾಡಿ ಕೃಷಿಮಾಡಬಹುದು. ಬೆಳೆ ಮಾಡಲಿರುವ ಭೂಮಿಯನ್ನು ೩-೪ ಸಲ ಉಳುಮೆ ಮಾಡಿ ಹದಗೊಳಿಸಿ ಹೆಕ್ಟೇರಿಗೆ ೧೫ ಟನ್‌ ಪ್ರಮಾಣದ ಕೊಟ್ಟಿಗೆ ಗೊಬ್ಬರವನ್ನು ಮಣ್ಣಲ್ಲಿ ಬೆರೆಸಿ, ಸಿಫಾರಸು ಪಡಿಸಿದಂತೆ ಪ್ರತಿ ಹೆಕ್ಟೇರಿಗೆ ೭೫ ಕಿ.ಗ್ರಾಂ. ಸಾರಜನಕ, ೮೦ ಕಿ.ಗ್ರಾಂ. ರಂಜಕ, ೬೦ ಕಿ.ಗ್ರಾಂ. ಪೋಟ್ಯಾಷ್‌ಯುಕ್ತ ಗೊಬ್ಬರಗಳನ್ನು ೪೫ ಸೆಂ.ಮೀ. ಅಂತರದ ಸಾಲುಗಳನ್ನು ರಚಿಸಿ ಮಣ್ಣಿಗೆ ಸೇರಿಸಿ ಸಸಿಯಿಂದ ಸಸಿಗೆ ೩೦ ಸೆಂ.ಮೀ. ಅಂತರದಲ್ಲಿ ಬರುವಂತೆ ಗೈಲಾರ್ಡಿಯಾ ಹೂವಿನ ಸಸಿಗಳನ್ನು ನಾಟಿ ಮಾಡಿ ನೀರಾವರಿ ಮಾಡಬೇಕು. ನಾಟಿ ಮಾಡಿದ ೩೦ ದಿನಗಳ ನಂತರದಲ್ಲಿ ಮತ್ತೊಮ್ಮೆ ಪ್ರತಿ ಹೆಕ್ಟೇರಿಗೆ ೭೫ ಕಿ.ಗ್ರಾಂ. ಪ್ರಮಾಣದಲ್ಲಿ ಸಾರಜನಕ ಪೋಷಕಾಂಶವನ್ನು ಸಸಿಗಳ ಬುಡದಲ್ಲಿ ಮಣ್ಣಿನಲ್ಲಿ ಸೇರಿಸಿ ನೀರನ್ನೋದಗಿಸಬೇಕು. ಮಣ್ಣು ಮತ್ತು ಹವಾಗುಣವನ್ನು ಅನುಸರಿಸಿ ನೀರನ್ನು ೪-೫ ದಿನಗಳಿಗೊಮ್ಮೆ ಬೆಳೆಗೆ ಕೊಡುತ್ತಿರಬೇಕು.

ಬೆಳೆರಕ್ಷಣೆ ಹಾಗೂ ಇಳುವರಿ: ಗೈಲಾರ್ಡಿಯಾ ಹೂವಿಗೆ ಹೇನು, ಎಲೆ ತಿನ್ನುವ ಕೀಟ, ಹತೋಟಿ ಕ್ರಮಗಳನ್ನು ಕೈಕೊಳ್ಳಬೇಕು. ಈ ಹೂ ಕೃಷಿ ಮಾಡಿದ ೧೦-೧೨ ವಾರಗಳಲ್ಲಿ ಗೈಲಾರ್ಡಿಯಾ ಹೂವುಗಳು ಕೊಯ್ಲಿಗೆ ಸಿದ್ಧವಾಗಿರುತ್ತವೆ. ಎರಡು ತಿಂಗಳ ತನದವೂ ಹೂಗಳನ್ನು ಪಡೆಯಬಹುದು. ಪ್ರತಿ ಹೆಕ್ಟೇರ್ ಪ್ರದೇಶದಲ್ಲಿ ೧೦ ರಿಂದ ೧೨ ಟನ್‌ಗಳ ಪ್ರಮಾಣದಲ್ಲಿ ಗೈಲಾರ್ಡಿಯಾ ಹೂಗಳ ಇಳುವರಿಯನ್ನು ಪಡೆಯಬಹುದು.

೧೩. ಜರ್ಬೇರಾ ಪುಷ್ಪ

ಇದೊಂದು ವಿದೇಶದಿಂದ ಬಂದ ಪ್ರಮುಖ ಹೂವಿನ ಬೆಳೆಯಾಗಿದ್ದು, ನಮ್ಮ ದೇಶದಲ್ಲಿ ತುಂಬಾ ಕಡೆಯಲ್ಲಿ ಈ ಹೂವನ್ನು ಹಸಿರು ಮನೆಗಳಲ್ಲಿ ಬೆಳೆದು ಉಪಯೋಗಿಸಲಾಗುತ್ತಿದೆ. ಹೂ ದಾನಿಗಳಲ್ಲಿಡಲು ಮತ್ತು ಹೂ ಗುಚ್ಛಗಳನ್ನು ತಯಾರಿಸಲು ಈ ಜರ್ಬೇರಾ ಹೂವಿನ ವರ್ಣವರ್ಣದ ಚೆಂದವನ್ನು ಸವಿಯಲು ಕಣ್ಣುಗಳೆರಡೂ ಸಾಲುವುದಿಲ್ಲ. ಉನ್ನತ ತಂತ್ರಜ್ಞಾನವನ್ನು ಅನುಸರಿಸಿಕೊಂಡು ಹಸಿರು ಮನೆ ವಾತಾವರಣದಲ್ಲಿ ಈ ಹೂವಿನ ಕೃಷಿಮಾಡಿ ಲಕ್ಷಾಂತರ ರೂಪಾಯಿಗಳಿಸಿದ ರೈತರು ನಮ್ಮಲ್ಲಿದ್ದಾರೆ.

ಮಣ್ಣು ಮತ್ತು ಹವಾಮಾನ: ಜರ್ಬೇರಾ ಹೂವಿನ ಕೃಷಿಗೆ ಫಲವತ್ತಾಗಿರುವ ನೀರು ಬಸಿದು ಹೋಗುವಂಥ ರಸಸಾರ ೫ ರಿಂದ ೭.೫ ಪ್ರಮಾಣದಲ್ಲಿಯ ಮಣ್ಣಿನಲ್ಲಿ ಚೆನ್ನಾಗಿ ಲಾಭದಾಯಕವಾಗಿ ಬೆಳೆಮಾಡಬಹುದು. ತಂಪಾದ ವಾತಾವರಣವಿರುವಲ್ಲಿ ದಿನದ ಉಷ್ಣಾಂಶವು ೨೨% ಸೆಂಟಿಗ್ರೇಡ್‌ದಿಂದ ೨೫% ಸೆಂಟಗ್ರೇಡ್‌ ಇರುವಲ್ಲಿ ರಾತ್ರಿಯಲ್ಲಿ ೧೨ರಿಂದ ೧೬ ಸೆಂಟಗ್ರೇಡ್‌ ಇದ್ದಲ್ಲಿ ಈ ಬೆಳೆಗೆ ಸೂಕ್ತವಾದದ್ದಾಗಿದೆ.

ತಳಿಗಳು ಹಾಗೂ ಸಸ್ಯಾಭಿವೃದ್ಧಿ: ಜರ್ಬೇರಾ ಹೂವಿನಲ್ಲಿಯ ತಳಿಗಳೆಂದರೆ ಕ್ರೀಮ್‌ ಡೆಲ್ಟಿ, ಕ್ಲೆಮೆಂಟನ್‌, ಮರೂನ್‌ ಕ್ಲೆಮೆಂಟೈನ್‌, ಪ್ಲೆಮಿಂಗ್‌, ಡೆಲ್ಟಿ, ವೆಸ್ಟ್, ಯುರೇನಸ್‌ ಇತ್ಯಾದಿಗಳುಂಟು ಹೂಗಿಡಗಳನ್ನು ಬೆಳೆಸಲು ಅಂಗಾಂಶ ಕೃಷಿಯಿಂದ ತಯಾರಿಸಲ್ಪಟ್ಟ ಸಸಿಗಳನ್ನು ಅಥವಾ ತಾಯಿಗಿಡದ ಕಂದುಗಳನ್ನು ಬೇರ್ಪಡಿಸಿಕೊಂಡು ನಾಟಿಗ ಉಪಯೋಗಿಸಬಹುದು.

ಕೃಷಿ ವಿಧಾನ: ಹಸಿರು ಮನೆ ವಾತಾವರಣ ಕಲ್ಪಿಸಿಕೊಂಡು ಭೂಮಿಯನ್ನು ಚೆನ್ನಾಗಿ ಉಳುಮೆಗೈದು ಇಲ್ಲವೇ ಹದಪಡಿಸಿಕೊಂಡು ೧.೫ ಮೀಟರ ಅಗಲ, ಅನುಕೂಲಕ್ಕೆ ತಕ್ಕಂತೆ ಉದ್ದ ಮತ್ತು ೧೦ ರಿಂದ ೩೦ ಸೆಂ.ಮಿ. ಎತ್ತರದ ಮಡಿಗಳನ್ನು ಮಾಡಿಕೊಂಡು ಸಸಿಗಳನ್ನು ನಾಟಿಮಾಡಬೇಕು. ಭೂಮಿಯಲ್ಲಿ ನೀರು ಸರಿಯಗಿ ಬಸಿದು ಹೋಗುವುದಕ್ಕೆ ಸಹಾಯವಾಗಲು ಕೊಟ್ಟಿಗೆ ಗೊಬ್ಬರ, ಮರಳು ಮತ್ತು ತೆಂಗಿನ ನಾರನ್ನು ಸಮ ಪ್ರಮಾಣದಲ್ಲಿ (೧:೧:೧) ಮಿಶ್ರಣ ಮಾಡಿ ಪ್ರತಿ ಚದರ ಮೀಟರಿಗೆ ೧೫ ಕಿ.ಗ್ರಾಂ ದಷ್ಟು ಬೆರೆಸಿ ಮಡಿಗಳನ್ನು ಸಿದ್ಧಪಡಿಸಿಕೊಂಡು ಅದರಲ್ಲಿಯ ಕೀಟಾಣುಗಳನ್ನು ರೋಗಾಣುಗಳನ್ನು, ಕಳೆಯ ಬೀಜಗಳನ್ನು ನಾಶಗೊಳಿಸಲು ನೀರಿನಲ್ಲಿ ಪಾರ್ಮಲಿನ್‌ (ಶೇ-೩-೫) ಬೆರೆಸಿ ಆ ದ್ರಾವಣದಿಂದ ಮಡಿಗಳನ್ನು ನೆನೆಸಿ ಪಾಲಿಥಿನ್‌ ಹಾಳೆಯಿಂದ ಮುಚ್ಚಬೇಕು. ಒಂದುದಿನ ಕಳೆದ ನಂತರ ಈ ಪಾಲಿಥಿನ್‌ ಹಾಳೆ ತೆಗೆದು ಮಡಿಗಳಲ್ಲಿರುವ ಔಷಧಿಯ ಅಂಶ ಚೆನ್ನಾಗಿ ಬಸಿದು ಹೋಗುವಂತೆ ಮಡಿಗಳನ್ನು ಚೆನ್ನಾಗಿ ನೀರುಣಿಸಿ ತೋಯಿಸಿ ಒಂದು ವಾರದ ನಂತರ ಸಸಿಗಳನ್ನು ಸಾಲಿನಿಂದ ಸಾಲಿಗೆ ಮತ್ತು ಸಸಿಯಿಂದ ಸಸಿಗೆ ೩೦ ಸೆಂ.ಮೀ. ಅಂತರವಿರುವಂತೆ ತುಂಬ ಆಳವಾಗಿ ನೆಡದೇ ಸಸಿಯ ಮಧ್ಯದ ಭಾರ ಮಣ್ಣಿನಲ್ಲಿ ಮುಚ್ಚದಂತೆ ನಾಟಿಮಾಡಿ ಜರ್ಬೇರಾ ಪುಷ್ಪ ಕೃಷಿಯನ್ನು ಮಾಡಬಹುದು.

ನಾಟಿ ಮಾಡಿದ ಮೂರು ತಿಂಗಳವರೆಗೆ ಮೂರು ಸಮ ಕಂತುಗಳಲ್ಲಿ ಪ್ರತಿ ತಿಂಗಳು ಪ್ರತಿ ಚದರ ಮೀಟರಿಗೆ ೪೦ಗ್ರಾಂ ಸಾರಜನಕ ೪೦ಗ್ರಾಂ. ರಂಜಕ ಮತ್ತು ೪೦ಗ್ರಾಂ ಪೋಟ್ಯಾಷ್‌ನ್ನು ಒದಗಿಸುವ ಪೋಷಕಾಂಶದ ಗೊಬ್ಬರವನ್ನು ಈ ಹೂವಿಗೆ ಕೊಡಬೇಕು. ನಂತರ ಹೂಗಳು ಬಿಡಲು ಆರಂಭಗೊಂಡ ಮೇಲೆ ೩೦ ಗ್ರಾಂ. ಸಾರಜನಕ, ೧೭ ಗ್ರಾಂ ರಂಜಕ ಮತ್ತು ೭೦ ಗ್ರಾಂ. ಪೋಟ್ಯಾಷನ್ನು ಮೇಲುಗೊಬ್ಬರವನ್ನಾಗಿ ಕೊಡಬೇಕು. ಇದರೊಂದಿಗೆ ಲಘುಪೋಷಕಾಂಶಗಳಾದ ಬೋರಾನ್‌, ಕ್ಯಾಲ್ಸಿಯಂ, ಮಾಗ್ನೇಸಿಯಂ, ಮತ್ತು ತಾಮ್ರ, ಇತ್ಯಾದಿ ಶೇ.೦.೧೫ ರಂತೆ ಪ್ರತಿ ತಿಂಗಳಲ್ಲೂ ಸಿಂಪರಣೆ ರೂಪದಲ್ಲಿ ಕೊಟ್ಟು ಉತ್ತಮ ಗುಣಮಟ್ಟದ ಹೂಗಳನ್ನು ಪಡೆಯಬಹುದು.

ನೀರಾವರಿ ಮತ್ತು ಕಳೆ ನಿರ್ಮೂಲನೆಯನ್ನು ಈ ಜರ್ಬೇರಾ ಹೂವಿನ ಕೃಷಿಯಲ್ಲಿ ಮಾಡಬೇಕದಲ್ಲಿ ಹನಿನೀರಾವರಿ ಪದ್ಧತಿಯಲ್ಲಿಯೇ ನೀರನ್ನು ಗಿಡಗಳಿಗೆ ಕೊಡಬೇಕು. ಡಿಪ್ಟರ್ ಅಳವಡಿಕೆ ಮಾಡಿ ಪ್ರತಿ ಚದುರ ಮೀಟರಿಗೆ ಸುಮಾರು ೪ ರಿಂದ ೫ ಲೀಟರ್ ಪ್ರಮಾಣಧಲ್ಲಿ ಒದಗಿಸಬೇಕು. ಬೆಳೆಯು ಕಳೆಕಸ ರಹಿತವಾಗಿರುವಂತೆ ಕಾಳಜಿವಹಿಸಬೇಕು.

ಬೆಳೆ ಸಂರಕ್ಷಣೆ ಹಾಗೂ ಇಳುವರಿ: ಜರ್ಬೇರಾ ಪುಷ್ಪ ಕೃಷಿಯನ್ನು ಮಾಡುವಾಗ ಕೀಟಗಳಾದ ಬಿಳಿನೊಣ, ಸುಳಿನೊಣ, ಜೇಡನುಶಿಗಳ ಬಾಧೆ ಹಾಗೂ ಬೂದಿರೋಗ, ಎಲೆಚುಕ್ಕೆರೋಗ, ಬೇರುಕೊಳೆರೋಗಗಳು ಬರುವ ಸಂಭವವಿರುವುದರಿಂದ ಅವುಗಳ ಲಕ್ಷಣ ಕಂಡಕೂಡಲೇ ಸಸ್ಯಸಂರಕ್ಷಣಾ ಕ್ರಮಗಳನ್ನು ಕೈಕೊಳ್ಳಬೇಕು.

ಜರ್ಬೇರಾ ಹೂಗಿಡಗಳಲ್ಲಿ ಹೂವಿನ ದಳಗಳು ಪೂರ್ತಿಯಾಗಿ ತೆರೆದುಕೊಂಡ ನಂತರದಲ್ಲಿ ಕೊಯ್ಲು ಮಾಡಬೇಕು. ಹೂ ಮಧ್ಯದ ಎರಡು-ಮೂರು ಸಾಲಿನ ದಳಗಳು ಬಂದ ನಂತರ ಹೂಗಳ ಕಟಾವು ಮಾಡುವುದರಿಂದ ಲಾಭದಾಯಕವಾಗಬಹುದು. ಪ್ರತಿ ಚದುರ ಮೀಟರ್ ಪ್ರದೇಶದಿಂದ ೧೦೦ ರಿಂದ ೧೫೦ ಹೂಗಳನ್ನು ನಾವು ಈ ಜರ್ಬೇರಾ ಹೂಗಿಡಗಳಲ್ಲಿ ನಾವು ಪಡೆಯಬಹುದು. ಹಸಿರು ಮನೆಯಲ್ಲಿ ಉನ್ನತ ತಾಂತ್ರಿಕ ವಿಧಾನಗಳನ್ನು ಬಳಸಿಕೊಂಡು ಅಧಿಕ ಪ್ರಮಾಣದಲ್ಲಿ ಹೂಗಳನ್ನು ಉತ್ಪಾದಿಸಿ ಆರ್ಥಿಕ ಸಂಪನ್ಮೂಲವನ್ನು ಪಡೆಯಬಹುದು.

೧೪. ಗೋಲ್ಡನ್ರಾಡ್ಹೂ

ಇದು ಬಹುವಾರ್ಷಿಕ ಹೂವಿನ ಸಸ್ಯವಾಗಿದ್ದು ವರ್ಷದಲ್ಲಿ ಹಲವು ತಿಂಗಳುಗಳ ತನಕವೂ ಹೂ ಬಿಡುವಂಥ ಹೂವಿನ ಬೆಳೆಯಾಗಿದೆ. ಗೋಲ್ಡನ್‌ರಾಡ್‌ ಹೂವಿನ ಗೊಂಚಲುಗಳನ್ನು ಹೂದಾನಿಗಹಳಲ್ಲಿಡಲು ಮತ್ತು ಹೂಗುಚ್ಛಗಳನ್ನು ತಯಾರಿಸಲು ಉಪಯೋಗಿಸಬಹುದಾಗಿದೆ. ಇದರಲ್ಲಿ ಸ್ಥಳೀಯ ತಳಿಗಳೇ ಪ್ರಚಲಿತವಾದವು.

ಮಣ್ಣು ಮತ್ತು ನಾಟಿಕಾಲ: ಗೋಲ್ಡನ್‌ರಾಡ್‌ ಹೂ ಬೆಳೆಮಾಡಲು ಯಾವುದೇ ಮಣ್ಣಿನ ಪ್ರಕಾರದಲ್ಲೂ ಉತ್ತಮವಾಗಿ ಬೆಳೆಯಬಹುದು. ಈ ಹೂವಿನ ಸಸಿಗಳು ಎಲ್ಲಾ ಹವಾಗುಣಕ್ಕೆ ಹೊಂದಿಕೊಂಡು ಬೆಳೆಯುತ್ತದೆ. ವರ್ಷದಾದ್ಯಂತದ ವರೆಗೂ ಹೂಗಳನ್ನು ಪಡೆಯಲು ಗೋಲ್ಡನ್‌ರಾಡ್‌ ಹೂಗಿಡಗಳನ್ನು ವರ್ಷವೂ ನಾಟಿ ಮಾಡಬಹುದು. (ಎಲ್ಲಾ ತಿಂಗಳಲ್ಲೂ) ಈ ಹೂವಿನ ಬೆಳೆಯನ್ನು ಬುಡದಿಂದ ಬರುವ ಕಂದುಗಳನ್ನು ಬಳಸಿಕೊಂಡು ಮಾಡಬಹುದು. ಪ್ರತಿ ಹೆಕ್ಟೇರ್ ಪ್ರದೇಶಕ್ಕೆ ೭೫೦೦೦ ಕಂದುಗಳನ್ನು ನಾಟಿಗೆ ಬಳಸಿಕೊಳ್ಳಬೇಕು.

ಕೃಷಿ ವಿಧಾನ: ಗೋಲ್ಡನ್‌ರಾಡ್‌ ಹೂ ಬೆಳೆಯುವ ಪ್ರದೇಶವನ್ನು ಚೆನ್ನಾಗಿ ಉಳುಮೆ ಮಾಡಿ ಹೆಕ್ಟೇರಿಗೆ ೨೦ ಟನ್‌ ಪ್ರಮಾಣ ಕೊಟ್ಟಿಗೆ ಗೊಬ್ಬರವನ್ನು ಮಣ್ಣಿಗೆ ಬೆರೆಸಿ ಬೋದುಗಳನ್ನು ೪೫ ಸೆಂ.ಮೀ. ಅಂತರದಲ್ಲಿ ರೂಪಿಸಿಕೊಂಡು ಅದರಲ್ಲಿ ೨೦ ಸೆಂ.ಮೀ. ಅಂತರದಲ್ಲಿ ಹೂವಿನ ಕಂದುಗಳನ್ನು ನಾಟಿಮಾಡಿ ಬೆಳೆ ಮಾಡಬಹುದು. ನಾಟಿ ನಂತರ ನೀರನ್ನು ಉಣಿಸಬೇಕು, ಇದಕ್ಕೆ ಪೂರ್ವದಲ್ಲಿ ಆ ಪ್ರದೇಶದಲ್ಲಿ ಪ್ರತಿ ಹೆಕ್ಟೇರಿಗೆ ೫೦ಕಿ.ಗ್ರಾಂ. ಸಾರಜನಕ ೫೦ ಕಿ.ಗ್ರಾಂ. ರಂಜಕ ಮತ್ತು ೫೦ ಕಿ.ಗ್ರಾಂ. ಪೋಟ್ಯಾಷ್‌ ಅಂಶವುಳ್ಳ ಪೋಷಕಾಂಶಗಳನ್ನು ಪೂರೈಸಬೇಕು. ಕಂದು ನಾಟಿಗೈದ ಒಂದು ತಿಂಗಳ ನಂತರದಲ್ಲಿ ೫೦ ಕಿ.ಗ್ರಾಂ. ಸಾರಜನಕವನ್ನು ಮೇಲುಗೊಬ್ಬರವನ್ನಾಗಿ ನೀಡಬೇಕು.

ಮಣ್ಣು ಮತ್ತು ಹವಾಗುಣಕ್ಕನುಸಾರವಾಗಿ ಪ್ರತಿ ೭-೧೦ ದಿನಗಳಿಗೊಮ್ಮೆ ನೀರಾವರಿ ಮಾಡಬೇಕು. ಕಳೆ ಕಸಗಳಾಗದಂತೆ ಭೂಮಿಯಲ್ಲಿ ಕಾಳಜಿ ವಹಿಸಬೇಕು. ಈ ಹೂವಿನ ಬೆಳೆಯಲ್ಲಿ ಜಿಬ್ರಾಲಿಕ್‌ ಆಮ್ಲ ಅಥವಾ ಸೈಕೋಸಿಲ್‌ ಕ್ರಮವಾಗಿ ೫೦ ಪಿ.ಪಿ.ಎಂ. ಇಲ್ಲವೇ ೧೦೦ ಪಿ.ಪಿ.ಎಂ. ಪ್ರಮಾಣದಲ್ಲಿ ಸಿಂಪಡಿಸುವುದರಿಂದ ಹೆಚ್ಚು ಪ್ರಮಾಣದ ಹೂಗಳ ಇಳುವರಿ ಪಡಯಬಹುದಲ್ಲವೇ. ಉತ್ಕೃಟ ಗುಣಮಟ್ಟದ ಪುಷ್ಪಗಳನ್ನು ಸಹ ಉತ್ಪಾದಿಸಬಹುದು. ಈ ಹೂವಿನ ಗಿಡಗಳಿಗೆ ಕೀಟಗಳ ಬಾಧೆ ಕಡಿಮೆ. ಸೊರಗು ರೋಗದ ಬಾಧೆಯಾಗುವುದರಿಂದ ಸೂಕ್ತ ನಿರ್ವಹಣಾ ಕ್ರಮ ಕೈಕೊಳ್ಳಬೇಕು.

ಇಳುವರಿ: ಗೋಲ್ಡನ್‌ರಾಡ್‌ ಹೂಗಿಡಗಳಲ್ಲಿ ನಾಟಿ ಮಾಡಿದ ೭೦-೯೦ ದಿನಗಳಲ್ಲಿ ಹೂಗಳು ಕೊಯ್ಲಿಗೆ ಸಿದ್ಧಗೊಳ್ಳುತ್ತೇವೆ. ಹೂಗೊನೆಯಲ್ಲಿರುವ ಬಂಗಾರ ವರ್ಣದ ಹೂಗೊಂಚಲುಗಳಲ್ಲಿ ತುದಿಯಿಂದ ಹೂಗಳು ಅರಳುತ್ತವೆ. ಹೂ ಗಿಡಗಳಲ್ಲಿ ಶೇ. ೧೦ ರಿಂದ ೧೫ರಷ್ಟು ಹೂಗಳು ಅರಳಿದಾಗ ಹೂವಿನೊಂದಿಗೆ ೪೦ ರಿಂದ ೪೫ ಸೆಂ.ಮೀ. ಉದ್ದದ ದೇಟಿನೊಂದಿಗೆ ಕೊಯ್ಲಿ ಮಾಡಬೇಕು. ಒಂದೆಕರೆ ಕ್ಷೇತ್ರದಲ್ಲಿ ಸುಮಾರು ೨-೫ ರಿಂದ ೩ ಲಕ್ಷದಷ್ಟು ಹೂಗೊಂಚಲುಗಳನ್ನು ಗೋಲ್ಡನ್‌ರಾಡ್‌ ಹೂ ಕೃಷಿಮಾಡಿ ಪಡೆಯಬಹುದು. ಕೊಯ್ಲಿಮಾಡಿದ ಹೂವುಗಳನ್ನು ನೀರಿರುವ ಬಕೆಟ್ಟಿನಲ್ಲಿಟ್ಟು ೫-೭ ದಿನಗಳವರೆಗೂ ಬಾಡದಂತೆ ಇಡಬಹುದು.

೧೫. ಡೈಜ ಹೂ

ಡೈಜಿಹೂ ಇದು ‘ಆಸ್ಟರ್ ಅಮೆಲಸ್‌’ ವರ್ಗಕ್ಕೆ ಸೇರಿದ ಜನಪ್ರಿಯ ವಾಣಿಜ್ಯವಾಗಿದ್ದು ಈ ಹೂವುಗಳನ್ನು ಹೂದಾನಿಗಳಲ್ಲಿಡಲು, ಅಲಂಕಾರಕ್ಕಾಗಿ ಜೋಡಿಸಿಕೊಳ್ಳಲು ಹೂವಿನಗುಚ್ಛ ತಯಾರಿಕೆಯಲ್ಲಿ ಬಳಸಿಕೊಳ್ಳಲಾಗುವುದು. ಇದು ಬಹುವಾರ್ಷಿಕ ಸಸ್ಯವಾಗಿದ್ದು ವರ್ಷ ಪೂರ್ಣ ನಿರಂತರವಾಗಿ ಹೂಗಳನ್ನು ಬಿಡುತ್ತದೆ೩. ಈ ಕಾರಣದಿಂದಾಗಿ ಹೂ ತೋಟಗಳಲ್ಲಿ, ಹೂವಿನ ಪಾತಿಗಳಲ್ಲಿ ಡೈಜಿಹೂವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ.

ಮಣ್ಣು ಮತ್ತು ನಾಟಿಸಮಯ: ಡೈಜಿಹೂವನ್ನು ನಾವು ಬೆಳೆಮಾಡಬೇಕಿದ್ದಲ್ಲಿ ಚೆನ್ನಾಗಿ ನೀರು ಬಸಿದುಹೋಗುವಂತಹ ಎಲ್ಲ ಪ್ರಕಾರದ ಮಣ್ಣಿನಲ್ಲಿ ಬೆಳೆಮಾಡಬಹುದು. ಕೆಂಪು ಗೋಡು ಮಣ್ಣಿನಲ್ಲಿ ಈ ಹೂವಿನ ಬೆಳೆ ಉತ್ಕೃಷ್ಟ ಮಟ್ಟದ ಹೂಗಳನ್ನು ಕೊಡುತ್ತದೆ. ಈ ಹೂವಿನ ಕೃಷಿಮಾಡಲು ವರ್ಷದ. ಎಲ್ಲ ಕಾಲದಲ್ಲೂ ಸೂಕ್ತವಾಗಿದ್ದರೂ. ಜೂನ್‌ಜುಲೈ ತಿಂಗಳುಗಳು ಉತ್ತಮಗುಣಮಟ್ಟದ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಹೂವುಗಳನ್ನು ಬೆಳೆದುಕೊಳ್ಳಲು ಸೂಕ್ತವಾದದ್ದಾಗಿದೆ.

ತಳಿಗಳು ಹಾಗೂ ಕೃಷಿ ವಿಧಾನ: ಡೈಜಿ ಹೂವಿನಲ್ಲಿ ನೀಲಿ, ತಿಳಿನೀಲಿ, ಸ್ಟಾರ್ನೀಲಿ, ಬಿಳಿ, ಸ್ಟಾರ್ ಬಿಳಿ, ಪಿಂಕ್‌ ಮುಂತಾದ ವಿವಿಧ ಬಣ್ಣಗಳ ತಳಿಗಳು ನಮ್ಮಲ್ಲಿ ಪ್ರಚಲಿತವಾಗಿವೆ. ಡೈಜಿ ಹೂಗಿಡಗಳ ಪಕ್ಕದಲ್ಲಿ ಬರುವ ಕಂದುಗಳನ್ನು ಬಳಸಿಕೊಂಡು ಸಸ್ಯಾಭಿವೃದ್ಧಿ ಮಾಡಬಹುದು. ಒಂದು ಹೆಕ್ಟೇರ್ ಪ್ರದೇಶದ ಭೂಮಿಯಲ್ಲಿ ಡೈಜಿ ಹೂಬೇಸಾಯಮಾಡಲು ೧೦೯ ಸಾವಿರ ಕಂದುಗಳನ್ನು ಬಳಸಿಕೊಳ್ಳಬೇಕಾಗುವುದು. ಬೆಳೆ ಮಾಡಲಿರುವ ಭೂಮಿಯನ್ನು ಚೆನ್ನಾದ ರೀತಿಯಲ್ಲಿ ಉಳುಮೆ ಮಾಡಿ ಪ್ರತಿ ಹೆಕ್ಟೇರಿಗೆ ೨೦ ಟನ್‌ ಕೊಟ್ಟಿಗೆಗೊಬ್ಬರಗಳನ್ನು ಮಣ್ಣಿಗೆ ಬೆರೆಸಿ ಮಿಶ್ರಣ ಮಾಡಿ ೩೦ ಸೆಂ.ಮೀ. ಅಂತರದ ಬದುಗಳನ್ನು ರಚಿಸಿ ೩೦ ಸೆಂ.ಮೀ. ಅಂತರದಲ್ಲಿ ಕಂದು ಇಲ್ಲವೇ ಸಸಿಗಳನ್ನು ನಾಟಿಗೈದು ನೀರು ಹಾಯಿಸಿ ಈ ಹೂ ಕೃಷಿ ಮಾಡಬಹುದು. ಪ್ರತಿಹೆಕ್ಟೇರ್ ಪ್ರದೇಶಕ್ಕೆ ಸಿಫಾರಿತ ಪ್ರಮಾಣದಲ್ಲಿ ೭೫ ಕಿ.ಗ್ರಾಂ. ಸಾರಜನಕ ೧೦೦ ಕಿ.ಗ್ರಾಂ. ರಂಜಕ ಹಾಗೂ ೬೦ ಕಿಲೋ.ಗ್ರಾಂ. ಪೋಟ್ಯಾಷ್‌ ಸತ್ವದ ಪೋಷಕಾಂಶಗಳನ್ನು ಮೂಲಗೊಬ್ಬರವನ್ನಾಗಿ ನಾಟಿ ಸಮಯದಲ್ಲಿ ಕೊಡಬೇಕು.. ಆ ನಂತರದಲ್ಲಿ ೪-೬ ವಾರದಲ್ಲಿ ಇನ್ನುಳಿದ ೭೫ ಕಿ.ಗ್ರಾಂ. ರಾಸಾಯನಿಕ ಗೊಬ್ಬರವನ್ನು ಮೇಲುಗೊಬ್ಬರವನ್ನಾಗಿ ಒದಗಿಸಬೇಕು. ಮಣ್ಣು ಮತ್ತು ಹವಾಗುಣಕ್ಕೆ ಅನುಸಾರವಾಗಿ ನೀರೊದಗಿಸಬೇಕಾಗುತ್ತದೆ. ಕಳೆ ಕಸಗಳನ್ನು ತೆಗೆಯಬೇಕು. ಈ ಡೈಜಿ ಹೂವಿನ ಬೆಳೆಗೆ ಸಸ್ಯವರ್ಧಕಗಳಿಂದ ಸೈಕೋಸಿಲ್‌ ಮತ್ತು ಅಲಾರ್ ಗಳಲ್ಲಿ ಒಂದನ್ನು ಬೆಳೆನಾಟಿಮಾಡಿದ ೩೦ ದಿನಗಳ ನಂತರದಲ್ಲಿ ಬಳಸಿ ಹೆಚ್ಚಿನ ಗುಣಮಟ್ಟದ ಉತ್ಕೃಷ್ಟವಾದ ಪ್ರಮಾಣದ ಡೈಜಿಹೂಗಳನ್ನು ಪಡೆಯಬಹುದು. ಬೂದುರೋಗದ ಬಾಧೆ ಹಾಗೂ ರಸಹೀರುವ ಕೀಟಗಳ ತೊಂದರೆಯಾದಲ್ಲಿ ಬೇಗೆ ಹತೋಟಿ ಕ್ರಮ ಕೈಕೊಳ್ಳಬೇಕು.

ಇಳುವರಿ: ಡೈಜಿ ಹೂಗಳನ್ನು ಸಸಿ ನಾಟಿ ಮಾಡಿದ ೬೦ ದಿನಗಳ ನಂತರದಲ್ಲಿ ಡೈಜಿ ಹೂಗೊಂಚಲು ಕಟಾವಿಗೆ ಸಿದ್ಧವಾಗಿರುತ್ತವೆ. ಶೇ.೭೫ ರಷ್ಟು ಪ್ರಮಾಣದಲ್ಲಿ ಹೂಗಳು ಅರಳಿಕೊಂಡಾಗ ಗೊಂಚಲುಗಳನ್ನು ಉದ್ದ ದೇಟಿನೊಂದಿಗೆ ಕೊಯ್ಲು ಮಾಡಬೇಕು. ಕೊಯ್ಲು ಮಾಡಿ ನೀರಿನಲ್ಲಿ ಇಡುವುದರಿಂದ ಹೂಗಳ ಗುಣಮಟ್ಟ ಕಾಪಾಡಿಕೊಳ್ಳಬಹುದಾಗಿದೆ. ಪ್ರತಿ ಹೆಕ್ಟೇರ್ ಭೂಮಿಯಲ್ಲಿ ಈ ಡೈಜಿ ಹೂಗಳನ್ನು ೫ ರಿಂದ ೭ ಲಕ್ಷದಷ್ಟು ಇಳುವರಿ ಪಡೆಯಬಹುದಾಗಿದೆ. ಇದರಿಂದ ಹೆಚ್ಚಿನ ಲಾಭವನ್ನೂ ಪಡೆಯಬಹುದು.

೧೬. ಕಾಶಿ ಕಣಗಿಲೆ ಹೂ

ಹೇರಳವಾದ ಔಷಧೀಯ ಅಂಶಗಳನ್ನು ಹೊಂದಿರುವ ಕಾಶಿ ಕಣಗಿಲೆ ಪುಷ್ಪವನ್ನು ಸ್ಮಶಾನ ಮಲ್ಲಿಗೆ, ನಿತ್ಯಪುಷ್ಪ ಮುಂತಾಗಿಯೂ ಕರೆಯಲ್ಪಡುವುದು. ಇದು ‘ಕೆಥರಾಂಥಸ್‌ ರೋಪಿಯಸ್‌’ ಸಸ್ಯವರ್ಗದ ಈ ಹೂವುಗಳಲ್ಲಿ ಹೆಚ್ಚಿನ ಪ್ರಮಾಣದ ಸಸ್ಯಕ್ಷಾರವಿದ್ದು, ಈ ಹೂವಿನಗಿಡದ ಪ್ರತಿಯೊಂದು ಭಾಗವೂ ಪ್ರಯೋಜನಕಾರಿಯಾಗಿದೆ. ಗಿಡದ ಎಲೆಯಿಂದ ತೆಗೆದ ಸಸ್ಯಕ್ಷಾರವನ್ನು ಕ್ಯಾನ್ಸರ್ ರೋಗ ಗುಣಪಡಿಸಲು ಬಳಸುತ್ತಾರೆ. ಬೇರಿನಲ್ಲಿರುವ ಸಸ್ಯಕ್ಷಾರವನ್ನು ರಕ್ತದೊತ್ತಡ ತಡೆಯಲು ಉಪಯೋಗಿಸಲಾಗುವುದು.

ಮಣ್ಣು ಮತ್ತು ಹವಾಗುಣ: ಕಾಶಿ ಕಣಗಿಲೆ ಹೂಗಿಡಗಳನ್ನು ವಿವಿಧ ಪ್ರಕಾರದ ಮಣ್ಣಿನಲ್ಲಿ ಬೆಳೆಯಬಹುದಾದರೂ ಆಮ್ಲೀಯ, ಕ್ಷಾರಯುಕ್ತ ಅಥವಾ ಜಿಗುಟು ಮಣ್ಣಿನಲ್ಲಿ ಈ ಹೂ ಗಿಡಗಳು ಚೆನ್ನಾಗಿ ಬೆಳೆಯುವುದಿಲ್ಲ. ಫಲವತ್ತಾದ ಮರಳು ಮಿಶ್ರಿತ ಗೋಡುಮಣ್ಣಿನ ಪ್ರದೇಶದಲ್ಲಿ ಕಾಶಿ ಕಣಗಿಲೆ ಬೆಳೆದು ಕೈತುಂಬಾ ಕಾಸು ಸಂಪಾದಿಸಬಹುದು. ಈ ಬೆಳೆಯು ಉಷ್ಣ ಹಾಗೂ ಸಮಶೀತೋಷ್ಣ ವಲಯದಲ್ಲಿ ಉತ್ತಮವಾಗಿ ಬರುವುದರಿಂದ ಮಳೆಯಾಶ್ರದಲ್ಲಿ ಈ ಬೆಳೆಯನ್ನು ಮಾಡಲು ವರ್ಷವಿಡೀ ಸುಮಾರು ೧೦೦ ಸೆಂ.ಮೀ. ಮಳೆಯಾಗುವಲ್ಲಿ ಕಾಶಿಕಣಗಿಲೆ ಹೂಗಿಡಗಳ ಕೃಷಿ ಮಾಡಬಹುದು.

ತಳಿಗಳು ಹಾಗೂ ಕೃಷಿವಿಧಾನ: ಕಾಶಿ ಕಣಗಿಲೆ ಹೂಗಿಡಗಳಲ್ಲಿ ನಿರ್ಮಲ್‌ (ಬಿಳಿಹೂ) ಧವಳ, ಪ್ರಭಲ್‌. ಮುಖ್ಯವಾದ ತಳಿಗಳಾಗಿದ್ದು ಮೂರು ಪ್ರಕಾರದ ಕಾಶಿಕಣಗಿಲೆ ಹೂಗಿಡಗಳಿವೆ. ಗುಲಾಬಿ(ಕೆಂಪು) ಬಿಳಿ ಹಾಗೂ ಬಿಳಿದವಳೆದ ಮಧ್ಯ ಕೆಂಪು ಬಣ್ಣ ಹೊಂದಿದವು ಇದ್ದು, ವಿಶೇಷವಾಗಿ ಗುಲಾಬಿ ಬಣ್ಣದಲ್ಲಿರದ ಹೂ ಜಾತಿಯಲ್ಲಿ ಅಧಿಕ ಪ್ರಮಾಣದ ಸಸ್ಯಕ್ಷಾರವನ್ನು ಪಡೆಯಲು ಸಾಧ್ಯವಿದೆ.

ಈ ಹೂವಿನ ಕೃಷಿಯನ್ನು ಬೀಜದಿಂದ ಬಿತ್ತಿ ಸಸಿ ತಯಾರಿಸಿಕೊಂಡು ಅವುಗಳ ನಾಟಿಮಾಡಿ ಬೆಳೆಸಬಹುದು. ಬೆಳೆಮಾಡುವ ಕ್ಷೇತ್ರದಲ್ಲಿ ಚೆನ್ನಾಗಿ ಉಳುಮೆ ಮಾಡಿ ಅದರಲ್ಲಿ ಕಳೆತ ಕೊಟ್ಟಿಗೆ ಗೊಬ್ಬರವನ್ನು ಪ್ರತಿ ಹೆಕ್ಟೇರಿಗೆ ಸುಮಾರು ೧೫ ಟನ್‌ ಪ್ರಮಾಣದಲ್ಲಿ ಬೆರೆಸಿ ನೇರವಾಗಿ ಬಿತ್ತನೆಮಾಡಿ ಇಲ್ಲವೇ ಸಸಿನಾಟಿಯೂ ಸಹ ಹೂ ಬೆಳೆ ಮಾಡಬಹುದು. ನೇರಬಿತ್ತನೆಗೆ ಸುಮಾರು ೨.೫ ಕಿ.ಗ್ರಾಂ. ಹೂವಿನ ಬೀಜ ಬಳಸಿಕೊಂಡರೆ ಸಸಿ ಮಾಡಲು ೫೦೦ ಗ್ರಾಂ. ಬೀಜಗಳನ್ನು ಸಸಿಮಡಿಗಳಲ್ಲಿ ಬೀಜಗಳನ್ನು ಬಿತ್ತಿ ಸಸಿತಯಾರಿಸಿಕೊಂಡು ನಾಟಿಮಾಡಿ ಈ ಹೂಗಿಡ ಬೆಳೆಸಬಹುದು. ಕಾಶಿಕಣಗಿಲೆ ಹೂ ಕೃಷಿ ಮಾಡುವ ಭೂಮಿಗೆ ಸಿಫಾರಸಿನಂತೆ ಪ್ರತಿ ಹೆಕ್ಟೇರಿಗೆ ೪೦ ಕಿ.ಗ್ರಾಂ. ಪೋಟ್ಯಾಷ್‌ ಪ್ರಮಾಣಗಳಲ್ಲಿ ಪೋಷ್ಟಕಾಂಶಗಳನ್ನು ನೀಡಿದಲ್ಲಿ ಉತ್ತಮ ಇಳುವರಿ ಪಡೆಯಬಹುದು. ಮಳೆ ಇಲ್ಲದ ಸಂದರ್ಭದಲ್ಲಿ ೪ ರಿಂದ ೫ ಸಲ ನೀರಾವರಿ ಸೌಲಭ್ಯ ಮಾಡಿಯೂ ಉತ್ತಮ ಹೂ ಇಳುವರಿ ಪಡೆಯಬಹುದು. ಕಳೆಕಸ ಇಲ್ಲದಂತೆ ನೋಡಿಕೊಳ್ಳಬೇಕು.

ಇಳುವರಿ: ಕಾಶಿ ಕಣಗಿಲೆ ಬೆಳೆಯು ೧೦-೧೧ ತಿಂಗಳಲ್ಲಿ ಕೊಯ್ಲುಗೆ ಸಿದ್ಧವಾಗುವುದು. ಎಲೆಗಳಿಗೆ ಹೆಚ್ಚಿನ ಬೇಡಿಕೆಯಿದ್ದರೆ ಬೆಳೆ ಮಾಡಿದ ೬ ತಿಂಗಳಲ್ಲೂ ಸಹ ಕೊಯ್ಲಿ ಮಾಡಿಬಹುದು. ನಂತರ ಪೂರ್ತಿ ಗಿಡವನ್ನು ೭.೫ ಸೆಂ.ಮೀ. ಎತ್ತರದಲ್ಲಿ ಕೊಯ್ಲುಮಾಡಿ ಎಲೆ, ಕಾಂಡ ಮತ್ತು ಬೀಜಗಳನ್ನು ಒಣಗಿಸಿಕೊಳ್ಳಬಹುದು. ಈ ಹೂ ಬೇಸಾಯದಲ್ಲಿ ಪ್ರತಿ ಹೆಕ್ಟೇರಿಗೆ ಎಲೆಯನ್ನು ನೀರಾವರಿಯಲ್ಲಿ ೩.೬ ಟನ್‌ ಮಳೆ ಆಶ್ರಿತವಾಗಿ ೨ ಟನ್‌ ಕಾಂಡಭಾಗವನ್ನು ನೀರಾವರಿಯಲ್ಲಿ ೧.೫ ಟನ್‌ ಮಳೆ ಆಶ್ರಿತವಾಗಿ ೧ ಟನ್‌ ಬೇರು ಭಾಗವನ್ನು ನೀರಾವರಿಯಲ್ಲಿ ೧-೫ ಟನ್‌ ಮಳೆ ಆಶ್ರಿತವಾಗಿ ೭೫ ಟನ್‌ ಪಡೆದುಕೊಳ್ಳಬಹುದು.

 

ಆಧಾರ ಗ್ರಂಥಗಳು

೧. ಕೃಷಿ ಉತ್ಪನ್ನ ದರ್ಪಣ: ಲೇ.ಡಾ.ಜಿ. ಶರ್ಚಂದ್ರ ರಾನಡೆ

೨. ಹಸಿರು ಕೊರಳು: ಲೇ.ಟಿ.ಎಸ್‌. ವಿವೇಕಾನಂದ ಹಾಗೂ ಎಂ.ವಿ. ಸೇತುಮಾಧವ

೩. ಸಾವಯವ ತಾರಸಿತೋಟ: ಲೇ. ಅನುಸೂಯ ಎಸ್‌. ಶರ್ಮ

೪. ತೋಟದ ಬೆಳೆಗಳ ಸುಧಾರಿತ ಬೇಸಾಯ ಕ್ರಮಗಳು: ಸಂ.ಡಾ. ಡಿ.ಪಿ. ಬಿರಾದಾರ ಕೃಷಿ ವಿಶ್ವವಿದ್ಯಾಲಯ, ಧಾರವಾಡ