ಮೈತುಂಬ ಹೂವ ತೊಡಲೇಬೇಕು
ಗಿಡವಾಗಿ ಹುಟ್ಟಿದ ಮೇಲೆ ;
ಬೇಡವೆಂದರು ಕೂಡ ಬೀಳದಿದ್ದೀತೆ
ಸಂಜೆ ಮುಂಜಾವುಗಳ ರೆಕ್ಕೆ ನೆರಳು ?

ಮೈಯ ಸುತ್ತಿದೆ ಸೀರೆ, ಕಾಮನ ಬಿಲ್ಲು ನೆರಿಗೆ ನೆರಿಗೆ,
ಬಿರಿದ ತುಟಿಯಿರುಕಿನಲಿ ಸಂಜೆನಗು ಜಿನುಗೆ,
ಕಣ್ಣೊ ದೂರದ ಚಿಕ್ಕೆ, ಜೇನು-ಚಂದ್ರನ ಚಿಂತೆ
ಡೇರೆ ಹೊಡೆಯುತ್ತಲಿದೆ, ಈ ಬಯಲಿನಲಿ
ನೆರೆಯುತಿದೆ ಹಗಲಿರುಳು ಸಂತೆ !
ಒಂದೇ ಸಮನೆ ಏನೇನನೋ ಬರೆವ ಕೊರೆವ ಚಪಲ
ಈ ಕೈಗಳಿಗೆ,
ಬರೆದುದನು ಉಜ್ಜುವ, ಉಜ್ಜಿ ಅಳಿಸುವ ಒಂದೇ ಕೆಲಸ
ಈ ರಬ್ಬರಿಗೆ,
ಮನವೋ ಕುದಿಕುದಿವ ಕನಸುಗಳ ಕೊಪ್ಪರಿಗೆ.

ಕಣ್ಣೆದುರು ಸ್ಕೂಟರಲಿ ಕುಳಿತು ಮರೆಯಾಗುತಿವೆ
ಹತ್ತಾರು ಹೊಸ ಮದುವೆ ಜೋಡಿ
ಚೈತ್ರಮಾಸದ ಹೂವಿನಂಗಡಿಯೊಳಗೆ
ನಾಗಸ್ವರದ ಮೋಡಿ !

ಇದ್ದಕ್ಕಿದ್ದಂತೆಯೇ ಬಂದಾನೇನು, ಆ ದೊರೆಗುವರ
ಕುದುರೆ ಹತ್ತಿ-
ಕತ್ತಿ ಝಳಪಿಸಿ, ಅರಿಗಳನು ಸದೆಬಡಿದು ಒಯ್ದಾನೇನು
ತನ್ನನೆತ್ತಿ ?

ಬಿರು ಬಿಸಿಲ ಹಾದಿಯಲಿ ಹಾದುಹೋಗಿವೆ ಹಲವು
ಮೋಟಾರು ಕಾರು,
ಎದ್ದ ಧೂಳೆಲ್ಲ ದಳದಳದ ತುಂಬ ಮನೆಮಾಡಿದೆ.
ಸಿಳ್ಳು ಹಾಕುವ ಮೋಡ ನಸು ನಕ್ಕು ಹಾಗೆಯೇ
ತೇಲುತಿದೆ ಬಾನಿನೊಳಗೆ.

ಬಿರಿದ ಹೂವಿನ ಸುಯ್ಲು ಹುಯ್ಯಲಿಡುತಿದೆ ಇಗೋ
ಹಸುರು ಬೇಲಿಯ ಒಳಗೆ.
ಇದು ಕೇಳಬಹುದೇ ಹೇಗೆ,
ಹೇಮಕೂಟಾಚಲದಿ ತಪಗೈವ ಶಿವಗೇ?