ಕಮಲದ ಹೂವು ಅರಳುವುದು ಯಾವಾಗ?  ತಾವರೆ ಹೂವು, ಸೌತೆ ಹೂವು, ಹೀರೆ ಹೂವು, ಗುಲಾಬಿ ಹೂವು, ರಾತ್ರಿರಾಣಿ, ಮುತ್ತುಗದ ಹೂವು, ಸಾಗುವಾನಿ ಮರದ ಹೂವು, ಅಂಟುವಾಳ ಕಾಯಿ ಮರದ ಹೂವು, ಅತ್ತಿ, ಆಲ, ಬಸರಿ ಹೀಗೆ ಏನೆಲ್ಲಾ ಗಿಡಗಳ, ಮರಗಳ, ಬಳ್ಳಿಗಳ ಹೂಗಳು ಅರಳುವುದು ಯಾವಾಗ?  ಯಾವ ಕಾಲದಲ್ಲಿ? ಯಾವ ಹೊತ್ತು? ಕೆಲವು ಹೂಗಳು ಅರಳುವುದೇ ಇಲ್ಲ.  ಕೆಲವು ತಿಂಗಳಾದರೂ ಬಾಡುವುದಿಲ್ಲ.

ನಿರ್ದಿಷ್ಟ ಕಾಲಕ್ಕೆ ಅರಳಿ ತನ್ನೆಲ್ಲಾ ಚಟುವಟಿಕೆಗಳನ್ನು ನಡೆಸಲು ಗಿಡಗಳಿಗೆ ಹೇಳಿದವರ್‍ಯಾರು?

ಬೆಂಗಳೂರಿನ ಲಾಲ್‌ಬಾಗ್, ಉದಕಮಂಡಲದ ಸಸ್ಯೋದ್ಯಾನ, ಶ್ರೀನಗರ, ಕುಲುಮನಾಲಿಯ ಕಣಿವೆ, ಸ್ವಿಟ್ಸರ್ಲ್ಯಾಂಡ್‌ಗಳಲ್ಲಿ ಹೂಗಳ ತೋಟಗಳಿವೆ.  ಕೆಲವು ಕೃತಕ, ಕೆಲವು ನೈಸರ್ಗಿಕ.

ಹೂಗಳ ಅರಳುವ ಕ್ರಿಯೆಯನ್ನು ಗಮನಿಸಿ ದಾಖಲಿಸಿದ ವಿಜ್ಞಾನಗಳು ಅವುಗಳ ರಹಸ್ಯ ಬಿಡಿಸಿದರು. ಹೂವು ಅರಳುವ ಹೊತ್ತನ್ನು ಗಮನಿಸಿದ ರಸಿಕರು ತೋಟಗಳನ್ನು ಕಟ್ಟಿದರು.  ಬೆಳಗ್ಗಿನಿಂದ ಸಂಜೆಯವರೆಗೂ ಹೂವು ಅರಳಿಸುತ್ತಿರುವ ಗಿಡಗಳನ್ನು ನೆಟ್ಟರು.  ತಿಂಗಳು ತಿಂಗಳು ಹೂವು ಅರಳುವ ಹೊಸ ಪ್ರಭೇದಗಳನ್ನು ಬೆಳೆಸಿದರು.  ಕೇವಲ ಹಗಲೊಂದೇ ಅಲ್ಲ, ರಾತ್ರಿಯೂ ಹೂವು ಅರಳಿಸುವ ಗಿಡ ಬೆಳೆಸಿ ಜನರನ್ನು ರಾತ್ರಿಯೂ ಬರುವಂತೆ ಮಾಡಿದರು.

ಹೂವು ಅರಳುವ ಪ್ರಕ್ರಿಯೆ ಅತ್ಯಂತ ನಿಧಾನ.  ತಾಸುಗಟ್ಟಳೆ ಎದುರಿಗೆ ಕೂತರೂ ಅರಳಿದ್ದು ತಿಳಿಯುವುದೇ ಇಲ್ಲವೆನ್ನುವಷ್ಟು ನಿಧಾನ.  ಅಪವಾದವೆನ್ನುವಂತೆ ಒಂದು ಜಾತಿಯ ಬಳ್ಳಿಯಲ್ಲಿ ಬಿಡುವ ಬಿಳಿಯ ಹೂ ಪಟಪಟನೆ ಸಿಡಿದಂತೆ ಅರಳುತ್ತದೆ.  ಸಂಜೆ ಅರಳುವ ಈ ಹೂವನ್ನು ನೋಡುವುದೇ ಒಂದು ಸೊಗಸು.

ಕೆಲವು ಸಸ್ಯಗಳು ಬೇಸಿಗೆಯಲ್ಲಿ ಹೂವನ್ನು ಅರಳಿಸಿದರೆ, ಕೆಲವು ಚಳಿಗಾಲಕ್ಕೆ ಮಾತ್ರ ಸೀಮಿತ.  ಕೆಲವು ಎರಡೂ ಗುಂಪಿಗೆ ಸೇರಿದವುಗಳು.

ಪ್ರಯೋಗ : ಸಸ್ಯಗಳ ಹೂ ಬಿಡುವಿಕೆ ಬೆಳಕನ್ನು ಮಾತ್ರ ಅವಲಂಬಿಸಿದ್ದೇ ಅಥವಾ ಬೇರೇನೆಲ್ಲಾ ಇದೆಯೇ ಎಂಬುದು ಮೊದಲ ಪ್ರಯೋಗ.  ಹವಾನಿಯಂತ್ರಿತ ಪ್ರಯೋಗಾಲಯದಲ್ಲಿ ಬೆಳಕು ಹಾಗೂ ಉಷ್ಣತೆಗಳ ಸೂಕ್ತ ಪೂರೈಕೆ ಮಾಡಿದರು.  ಚಳಿಗಾಲದಲ್ಲಿ ಹೂ ಬಿಡುವ ಸಸ್ಯಗಳು ಬೇಸಿಗೆಯಲ್ಲೂ ಪ್ರಯೋಗಾಲಯದಲ್ಲಿ ಹೂ ಬಿಟ್ಟಿತು.  ಹೀಗೆ ನಿಯಂತ್ರಿತ ಪರಿಸರದಲ್ಲಿ ಬೇಕಾದಾಗ ಹೂಗಳನ್ನು ಪಡೆಯಬಹುದೆಂಬುದು ತಿಳಿಯಿತು.  ಹಾಗೇ ಸಸ್ಯಗಳ ಜೈವಿಕ ಬದುಕು ತಿಳಿಯತೊಡಗಿತು.  ಅದರಂತೆ ಬೆಳಕಿಗೆ ಅರಳುವ ಹೂಗಳು, ಬಿಸಿಲಿಗೆ ಅರಳುವ ಹೂಗಳು ಹಾಗೂ ಕತ್ತಲಲ್ಲಿ ಅರಳುವ ಹೂಗಳ ಕುರಿತು ಮಾಹಿತಿ ಸಿಕ್ಕಿತು.

ಕಗ್ಗತ್ತಲಿನಲ್ಲಿ ಅರಳುವ ಹೂಗಳ ಅಧ್ಯಯನ ನಡೆಸಲು ವಿಜ್ಞಾನಿಗಳು ತಯಾರಿ ಮಾಡಿಕೊಂಡರು.  ಅಧ್ಯಯನಕ್ಕಾಗಿ ಬೆಳಕು ಬೇಕಲ್ಲ!  ಛಾಯಾಚಿತ್ರಕಾರರು ಬಳಸುವ ಕೆಂಪುದೀಪವನ್ನು ಕೆಲವೇ ಕ್ಷಣ ಬಳಸುತ್ತಿದ್ದರು.  ವಿಜ್ಞಾನಿಗಳು ವರ್ಷಗಟ್ಟಲೇ ಕಾದಿದ್ದೇ ಬಂತು.  ಗಿಡಗಳು ಹೂ ಬಿಡಲೇ ಇಲ್ಲ.  ಎಷ್ಟು ತಲೆ ಕೆರೆದುಕೊಂಡರೂ ಪ್ರಯೋಜನವಿಲ್ಲವಾಯಿತು.  ಆಮೇಲೆ ಹೊಸ ವಿಷಯ ತಿಳಿಯಿತು.   ಕೆಂಪು ಬೆಳಕು ಹೂವಿನ ಹುಟ್ಟುವಿಕೆಯನ್ನೇ ನಿಲ್ಲಿಸಿಬಿಡುತ್ತದೆ.  ಆದರೆ ಅತೀ ಕೆಂಪು ಬೆಳಕು ಪ್ರಚೋದಿಸುತ್ತದೆ.  ಅತಿಕೆಂಪು ಬೆಳಕು ಬೇರೆಲ್ಲೂ ಪ್ರಭಾವ ಬೀರದೇ ಕೇವಲ ಎಲೆಗಳಿಗೆ ಪ್ರಚೋದನೆ ನೀಡುತ್ತದೆ.  ಎಲೆಗಳಾಗುವಂತೆ ನಿರ್ದೇಶನವಿದ್ದ ಪ್ರೋಟೀನ್ ಸಹ ಬದಲಾಗಿ ಹೂಗಳಾಗುವುದು ತಿಳಿದುಬಂತು.

ಹಾರ್ಮೋನ್‌ಗಳ ಉತ್ಪಾದನೆ, ಪ್ರೋಟೀನ್‌ಗಳ ಚಟುವಟಿಕೆಗಳಲ್ಲಿ ಈ ಬೆಳಕು, ಉಷ್ಣತೆ, ಕತ್ತಲುಗಳು ಪರಿಣಾಮ ಬೀರುತ್ತದೆ.  ಆಂತರಿಕ ಸಮಸ್ಯೆಗಳು, ಕೀಟ, ರೋಗ, ಪರಿಸರ ಅಸಮತೋಲನಗಳಿಂದ ಕೆಲವೊಮ್ಮೆ ಸಸ್ಯ ಜೀವನದಲ್ಲಿ ಏರುಪೇರಾಗುತ್ತದೆ.  ಗಾಯ ಮಾಡುವಿಕೆ, ನೆರಳು, ಅತಿಯಾದ ಹೊಗೆ ಹೀಗೆ ಏನೆಲ್ಲಾ ಅತಿಶಯಗಳು ಹಾರ್ಮೋನುಗಳ ಏರುಪೇರಿಗೆ ಕಾರಣವಾಗುತ್ತದೆ.

ಬೇಸಿಗೆಯಲ್ಲಿ ಅರಳುವ ಹೂಗಳು: ಬೀಟ್‌ರೂಟ್ ಹೂವು, ಮುತ್ತುಗದ ಹೂಗಳು, ಬಿಳಿಬಣ್ಣದ ಹೂಗಳು.

ಎಲ್ಲಾ ಕಾಲದಲ್ಲೂ ಅರಳುವ ಹೂಗಳು: ಕಮಲ, ಮಲ್ಲಿಗೆ, ಗುಲಾಬಿ, ದಾಸವಾಳ, ಸೂರ್ಯಕಾಂತಿ, ಟೊಮ್ಯಾಟೋ, ಬದನೆ, ಕೊತ್ತಂಬರಿ

ಸಂಜೆ/ಕತ್ತಲಿನಲ್ಲಿ ಅರಳುವ ಹೂಗಳು: ಹೀರೆ, ರಾತ್ರಿರಾಣಿ, ಸೆಂಟ್‌ಮಲ್ಲಿಗೆ, ಪಾರಿಜಾತ, ಸೇವಂತಿಗೆ, ಉದ್ದು, ಹೆಸರು, ತಂಬಾಕು, ಕಬ್ಬು, ಸೋಯಾ, ಆಲೂ, ಅವರೆ, ಭತ್ತ…

ಹೂವುಗಳನ್ನು ಅರಳುವಂತೆ ಪ್ರೇರೇಪಿಸುವ ಬೆಳಕಿಗೆ ಫೋಟೋ ಇಂಡಕ್ಷನ್ ಎನ್ನುತ್ತಾರೆ.  ಇದು ಒಂದರಿಂದ ೨೫ ಆವರ್ತನಗಳಲ್ಲಿ ಪ್ರಚೋದಿಸುತ್ತದೆ.  ಇದು ಹೂವಿನಲ್ಲಿರುವ ವರ್ಣದ್ರವ್ಯಗಳು ಸ್ವೀಕರಿಸುವ ರೀತಿಯನ್ನು ಅವಲಂಬಿಸಿ ಅರಳುವಿಕೆ ನಡೆಯುತ್ತದೆ.  ಈ ಸ್ವೀಕರಿಸುವಿಕೆಯ ಸಮಯದಲ್ಲಿ ಉತ್ಪತ್ತಿಯಾಗುವ ರಾಸಾಯನಿಕವನ್ನು ವಿಜ್ಞಾನಿ ಮೈಕೆಲ್ ಬೈಲಾಕ್ಸನ್‌ರು ಫ್ಲೋರಿಜೆನ್ ಎಂದು ಕರೆದರು.

ಹೀಗೆ ಏನೆಲ್ಲಾ ಅಧ್ಯಯನಗಳ ಫಲದಿಂದಾಗಿ ನಮಗೆ ಬೇಕೆಂದಾಗ ಬೇಕಾದ ಹೂವನ್ನು ಪಡೆದುಕೊಳ್ಳುವ ಸಾಧ್ಯತೆ ತಿಳಿಯಿತು.  ಮುಂದೆ ಹಾಲೆಂಡ್, ಸ್ವಿಟ್ಸರ್ಲ್ಯಾಂಡ್ ಮುಂತಾದ ಯುರೋಪ್ ದೇಶಗಳು ಹೂವಿನ ವಾಣಿಜ್ಯ ಮಾರುಕಟ್ಟೆಯಲ್ಲಿ ಈ ತಂತ್ರ ಬಳಸಿಕೊಂಡವು.  ಇಂದು ಕೃತಕ ವಾತಾವರಣದಲ್ಲಿ ಹೂಗಳನ್ನು ಬೆಳೆಯುವಿಕೆ ಪ್ರಪಂಚದಾದ್ಯಂತ ಜನಪ್ರಿಯ.  ಈ ಮೂಲಕ ಅಕಾಲಿಕ ಹಣ್ಣು, ತರಕಾರಿಗಳು ಮಾರುಕಟ್ಟೆಯಲ್ಲಿ ಲಭ್ಯ.

ಹೂಗಳಿಗೆ ಬಣ್ಣ ಹೇಗೆ ಬಂತು

ಕೆಂಪೆಂದರೆ ಗುಲಾಬಿಹೂವು, ಅರಿಸಿನವೆಂದರೆ ಚೆಂಡುಹೂವು, ಸೂರ್ಯಕಾಂತಿ ಹೀಗೆ ಒಂದೊಂದು ಬಣ್ಣಕ್ಕೆ ಒಂದೊಂದು ಹೂಗಳು ಕಣ್ಣಮುಂದೆ ಬರುತ್ತವೆ.  ಒಂದೊಂದು ಹೂವಿಗೂ ಒಂದೊಂದು ಬಣ್ಣವೇಕೆ?  ಯಾವ ಮಹಾರಾಜರನ್ನು ಸೆಳೆಯಲು?  ಯಾವ ಘನ ಉದ್ದೇಶಕ್ಕೆ ಎನ್ನುವ ಪ್ರಶ್ನೆ ಏಳುತ್ತದೆ.

ಈ ಹೂವರಸಿಯರನ್ನು ಸೂರೆಗೊಳ್ಳಲು ಬರುವವರೆಲ್ಲಾ ಕೀಟರಾಜರು.  ಕೆಲವೊಮ್ಮೆ ಪಕ್ಷಿಗಳು, ಇನ್ನಿತರ ಜೀವಿಗಳು.

ಹೂಗಳ ಬಣ್ಣ, ಸುವಾಸನೆ, ಸಿಹಿಯಾದ ಜೇನು ಇವೇ ಇವುಗಳ ಆಕರ್ಷಣೆ.  ಆದರೆ ಒಂದು ಜಾತಿಯ, ಬಣ್ಣದ, ಕಂಪಿನ ಹೂವಿಗೆ ಬರುವ ಕೀಟ ಇನ್ನೊಂದಕ್ಕೆ ಹೋಗದು.  ಕೀಟಗಳ ಜೀವನಶೈಲಿಗೆ ಅನುಗುಣವಾಗಿ ಅರಳುವ ಹೂಗಳೂ ಇವೆ.  ಹೂವುಗಳ ಅರಳುವಿಕೆಗೆ ಸರಿಯಾಗಿ ಜೀವನಚಕ್ರವನ್ನು ಅಳವಡಿಸಿಕೊಂಡ ಕೀಟಗಳೂ ಇವೆ.

ಸುವರ್ಣಗಡ್ಡೆ ಹೂವಿನ ಅಧ್ಯಯನ ಹಾಗೂ ಹೀರೆ ಹೂವಿನ ಅಧ್ಯಯನ ಕೈಗೊಂಡಾಗ ಬಂದ ಕೀಟಗಳ ವೈವಿಧ್ಯ, ಸಮಯ, ನಿಖರತೆ ಇವೆಲ್ಲಾ ಎಂದೆಂದೂ ಮರೆಯದ ವಿಷಯವಾಗಿತ್ತು.

ಸಂಜೆಗೆ ಅರಳುವ ಹೀರೆ ಹೂವಿನ ಅವಧಿ ಬೆಳಗಿನ ಸೂರ್ಯನ ಆಗಮನಕ್ಕೆ ಅಂತ್ಯವಾಗುತ್ತದೆ.  ಅಲ್ಲಿಯವರೆಗೆ ಸುಮಾರು ಎಂಟು ರೀತಿಯ ಕೀಟಗಳು ಬರುತ್ತವೆ.  ಅದರಲ್ಲೂ ಉದ್ದ ಕಾಲಿನ, ಉದ್ದ ರೆಕ್ಕೆಯ ಕೀಟವು ಬೇರೆ ಜಾತಿಯ, ಉದಾಹರಣೆಗೆ ಹೀರೆ ಹೂವಿನ ಬಣ್ಣದ್ದೇ ಆದ ಸವುತೆ ಹೂವಿಗೆ ಹೋಗುವುದಿಲ್ಲ.  ಅದೇ ರೀತಿ ಸುವರ್ಣಗಡ್ಡೆ ಹೂವಿನ ಕೆಟ್ಟವಾಸನೆಯನ್ನು ಅರಸಿ ಬರುವ ನೊಣಗಳು [ಒಟ್ಟು ೨೬ ಜಾತಿಯ ಕೀಟಗಳು ಬರುತ್ತವೆ] ಬೇರೆ ಹೂವಿಗೆ ಬಂದಿದ್ದನ್ನು ನೋಡಿಲ್ಲ.  ಹೂವು ಅರಳಿದ ನಾಲ್ಕು ದಿನಗಳೂ ಅವು ನಿರ್ದಿಷ್ಟ ಅವಧಿಗೆ ಬರುತ್ತಲೇ ಇತ್ತು.  ಹೂವಿನ ಗಂಧವೂ ಸಹ ನಿರ್ದಿಷ್ಟ ಅವಧಿಯಲ್ಲಿ ಹೆಚ್ಚಾಗುತ್ತಿತ್ತು.

ಈ ಗುಟ್ಟು ಜೇನುತುಪ್ಪ ಸಂಗ್ರಾಹಕರಿಗೆ ಖಚಿತವಾಗಿ ತಿಳಿದಿರುತ್ತದೆ.  ಕುಮುಸನ ಬಳ್ಳಿ ಹೂ ಬಿಟ್ಟಾಗ ಜೇನ್ನೊಣ ಸಂಗ್ರಹಿಸಿದ ಜೇನೆಲ್ಲಾ ಕುಮುಸನ ಹೂವಿನ ಸುವಾಸನೆಯನ್ನು ಮಾತ್ರ ಹೊಂದಿರುತ್ತದೆ.ಅಂಟುವಾಳದ ಹೂವಿನಿಂದ ತಯಾರಿಸಿದ ಜೇನುತುಪ್ಪ ಅರಿಸಿನ ಬಣ್ಣದ್ದಾಗಿರುತ್ತದೆ.  ಹೀಗೆ ವಿಭಿನ್ನ ಮಧುವಿನ ಸುವಾಸನೆ, ರುಚಿಯನ್ನು ಆಧರಿಸಿ ಹೂಗಳ ವಿಧ ಹಾಗೂ ಜೇನ್ನೊಣಗಳ ವಿಧಗಳ ಸಂಬಂಧಗಳ ಅಧ್ಯಯನವನ್ನು ಮಾಡಬಹುದು.

ಹೀಗೆ ಹೂಗಳು ಬಣ್ಣ ತುಂಬಿಕೊಳ್ಳುವುದು ತಮಗೆ ಬೇಕಾದ ಕೀಟಗಳನ್ನು ಆಕರ್ಷಿಸಲು ಎಂದಾಯಿತು.  ಇಷ್ಟಾದರೂ ಮನುಷ್ಯನ ಸಂಶೋಧನೆ ಈ ಬಣ್ಣಗಳು ಬರುವುದು ಹೇಗೆ ಎಂಬ ಕುತೂಹಲವನ್ನು ಪೂರ್ತಿ ತಣಿಸಿಲ್ಲ.  ಮೊದಲಿಗೆ ಆತ ಕಸಿ ಮಾಡುವ ಮೂಲಕ ಬಣ್ಣಗಳ ಮಿಶ್ರಣ ಮಾಡತೊಡಗಿದ.  ದಟ್ಟ ಕೇಸರಿಬಣ್ಣದ ಗುಲಾಬಿಗೆ ಬಿಳಿಗುಲಾಬಿ ಕಸಿ ಮಾಡಿದಾಗ ತಿಳಿಕೇಸರಿ ಬಣ್ಣದ ಹೂ ಬಿಟ್ಟಿತು.  ಹೀಗೆ ನೂರಾರು ರೀತಿಯ ಮಿಶ್ರಬಣ್ಣಗಳನ್ನು ಪಡೆದ ಮೇಲೆ ಹೂಗಳಿಗೆ ಬಣ್ಣ ಕೊಡುವ ರಾಸಾಯನಿಕಗಳ ಸಂಶೋಧನೆ ಮಾಡಿದ.

ಇದು ನಮಗೆ ಅಜಂತಾ, ಎಲ್ಲೋರಾ ಗುಹೆಗಳಲ್ಲಿರುವ ಚಿತ್ರಗಳಲ್ಲಿ ಕಾಣಿಸುತ್ತದೆ.  ಅಂದಿನ ಜನರು ಹೂಗಳಿಂದಲೇ ಬಣ್ಣದ ಕಣಗಳನ್ನು ಬೇರ್ಪಡಿಸಿ ತಮ್ಮ ಚಿತ್ರಗಳನ್ನು ಜೀವಂತಗೊಳಿಸುತ್ತಿದ್ದರು.  ರಾಶಿ ರಾಶಿ ಹೂಗಳನ್ನು ವಿವಿಧ ದ್ರವ್ಯಗಳಲ್ಲಿ ಕುದಿಸಿ, ಜಿಗುಟು ಪದಾರ್ಥಗಳೊಂದಿಗೆ ಬೆರೆಸಿ ಬಣ್ಣ ಮಾಡಿಕೊಳ್ಳುತ್ತಿದ್ದರು ಎಂಬುದನ್ನು ಈಗ ತಿಳಿಯಲಾಗಿದೆ.

ರಸಾಯನಶಾಸ್ತ್ರದ ಪ್ರಗತಿಯಿಂದಾಗಿ ಅನೇಕ ರಾಸಾಯನಿಕಗಳನ್ನು ಬಳಸಿ ಬಣ್ಣಗಳ ಕಣಗಳನ್ನು ಬೇರ್ಪಡಿಸಲಾಗುತ್ತದೆ.  ಹೀಗೆ ಬೇರ್ಪಡಿಸಿದ ವರ್ಣಕಣಗಳನ್ನು ಅಧ್ಯಯನ ನಡೆಸಿದಾಗ ಅನೇಕ ಹೊಸ ಬಣ್ಣಗಳ ಆವಿಷ್ಕಾರವಾಯಿತು.

ಪೆಟ್ರೋಲಿಯಂ, ಮೀಥೈಲ್ ಆಲ್ಕೋಹಾಲ್, ಈಥರ್, ಕೊಬ್ಬು ಹೀಗೆ ಬೇರೆ ಬೇರೆ ಮಾಧ್ಯಮಗಳನ್ನು ಬಳಸಿ ಹೂವಿನೊಳಗಿನ ಬಣ್ಣಗಳನ್ನು ಬೇರ್ಪಡಿಸಲಾಯಿತು.  ಇವುಗಳನ್ನು ಸೂಕ್ಷ್ಮದರ್ಶಕದಲ್ಲಿ ನೋಡಿದಾಗ ವೃತ್ತಾಕಾರ ಅಥವಾ ಮೊಟ್ಟೆಯಾಕಾರದಲ್ಲಿ ಕಾಣಿಸುತ್ತದೆ.  ಸಣ್ಣ ಸಣ್ಣ ವೃತ್ತಗಳಿಂದ ಕೂಡಿದ ಸಾಕಷ್ಟು ಪದರುಗಳು.  ಅದರಲ್ಲಿ ಸಾರಜನಕ ಹಾಗೂ ಇಂಗಾಲದ ಅಣುಚಕ್ರ.

ರಕ್ತದ ಬಣ್ಣ ಕೆಂಪು.  ಕಾರಣ ಹಿಮೋಗ್ಲೋಬಿನ್ ಅಥವಾ ಹಿಮೋಎರಿಥ್ರಿನ್ ಎನ್ನುವುದು ತಿಳಿದಿದೆ.  ಅಂದರೆ ಅದರಲ್ಲಿರುವ ಸಾರಜನಕ ಹಾಘೂ ಇಂಗಾಲದ ಅಣುಚಕ್ರಕ್ಕೆ ಕಬ್ಬಿಣದ ಅಣುವೊಂದು ಸೇರಿಕೊಂಡು ಅತಿ ಕೆಂಪುಬಣ್ಣವನ್ನಾಗಿಸಿದೆ.  ಒಂದೊಮ್ಮೆ ಹಿಮೋಸಾನಿನ್ ಇದ್ದರೆ ರಕ್ತವು ನೀಲಿಯಾಗಿರುತ್ತದೆ.  ಇದೇ ರೀತಿ ಹೂಗಳಲ್ಲಿರುವ ಸಾರಜನಕ ಹಾಗೂ ಇಂಗಾಲದ ಅಣುಚಕ್ರಕ್ಕೆ ಮ್ಯಾಂಗನೀಸ್ ಅಣು ಅಂಟಿಕೊಂಡಿದೆ.  ಈ ಅಣುವನ್ನು ಬೇರೆ ಧಾತುವಿನೊಂದಿಗೆ ಸೇರಿಸಬಹುದು ಅಥವಾ ಬೇರೆ ಧಾತುವಿನಿಂದ ಪಡೆಯಬಹುದು.  ಈ ರೀತಿಯ ರಾಸಾಯನಿಕ ಬದಲಾವಣೆಗಳಿಂದ ಹೂವಿನ ಬಣ್ಣ ಬದಲಾಗುತ್ತಾ ಹೋಗುತ್ತದೆ.

ಹೂಗಳು ಮೊಗ್ಗಾಗುವುದರಿಂದ ಪ್ರಾರಂಭಿಸಿ ಅರಳಿ, ಬಾಡಿ ಬೀಳುವವರೆಗೂ ನಾನಾ ಬಣ್ಣವಾಗಿ ಮಾರ್ಪಡುವುದನ್ನು ನೋಡಿದ್ದೇವೆ.  ಇದಕ್ಕೂ ಸಹ ಬೇರೆ ಬೇರೆ ರಾಸಾಯನಿಕಗಳ ಕ್ರಿಯೆಯೇ ಕಾರಣ.  ಬಿಸಿಲು, ಮಳೆ ಹಾಗೂ ಚಳಿಗೆ ಅನೇಕ ರಾಸಾಯನಿಕ ಕ್ರಿಯೆಗಳು ನಡೆದು ಕೆಲವು ಕರಗಿ ಮಾಯವಾಗುತ್ತವೆ.  ಉಳಿದ ರಾಸಾಯನಿಕಗಳ ಬಣ್ಣ ದಟ್ಟವಾಗುತ್ತದೆ.  ಹಸುರು ಬಣ್ಣಗಳು ಅರಿಸಿನ ಅಥವಾ ಕೆಂಪಾಗುವ ಕ್ರಿಯೆ ಸಹ ಹೀಗೆ.  ಅದರಲ್ಲಿರುವ ಕ್ಲೋರೋಫಿಲ್ ಹಾಗೂ ಕೆರೋಟಿನ್‌ಗಳು ಈ ರೀತಿಯ ಬಣ್ಣದಾಟ ನಡೆಸುತ್ತವೆ.  ಕ್ಲೋರೋಫಿಲ್ ಪ್ರಾಬಲ್ಯ ಕಳೆದಂತೆ ಕೆರೋಟಿನ್‌ಗಳು ಮೇಲೆ ಬಂದು ಅರಿಸಿನವಾಗುತ್ತದೆ.  ಒಂದೊಮ್ಮೆ ಅದರಲ್ಲಿ ಲ್ಯಾಕೊಪೆನ್ ಇದ್ದರೆ ಕೆಂಪಾಗುತ್ತದೆ.  ಹಸುರು ಟೊಮ್ಯಾಟೋ ಕಾಯಿ ಕೆಂಪು ಹಣ್ಣಾಗುವುದು ಹೀಗೆ.  ಆದರೆ ಈ ಗುಟ್ಟನ್ನು ತಿಳಿದ ವ್ಯಾಪಾರಿಗಳು ಹಣ್ಣುಗಳು ಪಕ್ವವಾಗುವ ಮೊದಲೇ ಬಣ್ಣ ಬದಲಾವಣೆ ಮಾಡುತ್ತಾರೆ ಅಥವಾ ಸೇಬುಹಣ್ಣು ಪೂರ್ತಿ ಕೆಂಪಾಗಿರುವಂತೆ ಮಾಡಬಲ್ಲರು.  ಆಗ ರುಚಿ ಸಪ್ಪೆಯಾಗುತ್ತದೆ.  ಅದಕ್ಕಾಗಿ ಸುಕ್ರೋಸ್ ಇಂಜೆಕ್ಷನ್ ನೀಡಿ ಅತಿ ಸಿಹಿಯಾಗಿಸುತ್ತಾರೆ.

ವರ್ಣ ನೀಡುವ ರಾಸಾಯನಿಕಗಳನ್ನು ಅವುಗಳ ರಚನೆಯ ಆಧಾರದಲ್ಲಿ ವರ್ಗೀಕರಿಸಲಾಗಿದೆ.  ಕೆರೋಟಿನಾಯ್ಡ್‌ಗಳು ಹಳದಿ, ಕೇಸರಿ ಬಣ್ಣಗಳನ್ನು ನೀಡುತ್ತವೆ.  ಲ್ಯಾಕೋಪೆನ್ ಕೆಂಪುಬಣ್ಣ, ಅಂಥೋಸಿಯಾನಿನ್ ನೇರಳೆ, ಕೆನ್ನೀಲಿ, ಬೂದು ಬಣ್ಣಗಳನ್ನು, ಪ್ಲಾಸ್ಟಿಡ್ಸ್ ಹಳದಿ, ಹಸುರು, ಕಿತ್ತಳೆಬಣ್ಣಗಳನ್ನು ನೀಡುತ್ತದೆ.  ವಿವಿಧ ಬಣ್ಣ, ವಿನ್ಯಾಸ, ಆಕೃತಿಗಳ ರಚನೆಗೆ ಹರಿದಾಡುವ ಪ್ಲಾಸ್ಟಿಡ್ಸ್‌ಗಳೇ ಕಾರಣ.  ಗ್ಲೈಕೋಸೈಡ್, ಎಂಥೋಝೆನದಿನ್ ಮುಂತಾದ ರಾಸಾಯನಿಗಳು ಬಹುಬೇಗ ಬದಲಾವಣೆ ಹೊಂದುವ ಕಾರಣ ಬೇರೆ ಬೇರೆ ಮಾಧ್ಯಮಗಳಲ್ಲಿ ಇವು ಬೇರೆ ಬೇರೆ ಬಣ್ಣದವುಗಳಾಗುತ್ತವೆ.  ಒಟ್ಟಾರೆ ಆಮ್ಲೀಯವಾದಾಗ ಇರುವ ಬಣ್ಣ ಕ್ಷಾರೀಯವಾದಾಗ ಇರುವುದಿಲ್ಲ.

ಕಮಲದ ಹೂವಿನ ಮೇಲೆ  ನೀರು ನಿಲ್ಲುವುದಿಲ್ಲ. ಕಾರಣ ಅದರ ಬಣ್ಣ! ಇದನ್ನು ಕಂಡು ಹಿಡಿದ ಸಂಶೋಧಕರು ಈಗ ಸೀರೆಗಳಿಗೆ ಅದನ್ನು ಅಳವಡಿಸಿದ್ದಾರೆ. ಇದರಿಂದಾಗಿ ಸೀರೆಗಳ ಮೇಲೆ ನೀರೂ ನಿಲ್ಲದು, ಕೊಳೆಯೂ ಆಗದು.

ಹಲಸಿನ ಹೂವು, ಗುರಿಗೆಯ ಹೂವು ಇನ್ನೂ ಕೆಲವು ಹೂಗಳು ಅರಳುವುದೇ ಇಲ್ಲ. ಇರುವೆಗಳು ಅವುಗಳ ದಳಗಳನ್ನು ಸರಿಸಿ ಒಳಹೋಗಿ ಮಧುವನ್ನು ಕುಡಿದು ಬರುತ್ತವೆ. ಆಗಲೇ ಪರಾಗಸ್ಪರ್ಶ ಕೂಡ ನಡೆಯುತ್ತದೆ.

ಏನೇ ಇರಲಿ ವಿಶ್ವದಾದ್ಯಂತ ಅತ್ಯಂತ ಹೆಚ್ಚು ಹೂಗಳು ಹೊಂದುವ ಬಣ್ಣ ಯಾವುದು?  ನೀವೇ ಹೇಳಿ