ಇಲ್ಲಿ ಮರದಡಿಯಲ್ಲಿ
ಜನ ನಡೆವ ದಾರಿಯಲಿ
ಪುಡಿಪುಡಿಯ ಹುಡಿಯಲ್ಲಿ
ಹೊರಳುತಿದೆ ಹೂವು
ಇಳೆಗುರುಳಿ ಬಿದ್ದರೂ
ಮಣ್ಣಿನೊಳಗದ್ದರೂ
ಇನಿತಿಲ್ಲ ನೋವು !

ಏನು ಚೆಲುವಿನ ಹೂವು !
ಏನು ಮುದ್ದಿನ ಹೂವು !
ಕಿರಿ ಬಿಳಿಯ ಹೂವು !

ಇರುಳ ತಾರೆಯ ಕಿಡಿಯು
ಇಳೆಗುರುಳಿ ಬಿದ್ದಂತೆ,
ಶ್ರಾವಣದ ಬೆಳ್ಮುಗಿಲ
ಕಿರಿದಾದ ತುಣುಕಂತೆ,
ಶೈಶವದ ಮುಗ್ಧತೆಯೆ
ಹೂವಾಗಿ ಇಳಿದಂತೆ
ನಗುತಲಿದೆ ಹೂವು
ಇನಿತಿಲ್ಲ ನೋವು !

ಇನ್ನೊಂದು ಚಣದಲ್ಲಿ
ಜನ ನಡೆವ ಬಳಿಯಲ್ಲಿ
ಪಾದಘಾತಕೆ ಸಿಕ್ಕಿ
ಮಣ್ಣು ಹುಡಿಯನು ಮುಕ್ಕಿ
ಹುಡಿಯಾಗಲಿಹುದು
ಆದರೂ ಲೆಕ್ಕಿಸದೆ
ಸಾವಿಂಗೆ ಶೋಕಿಸದೆ
ಎಳನಗೆಯ ಬೀರುತ್ತ
ಮೋನವಿಹುದು.
ಅಳುತ ಸತ್ತರೆ ನರಕ
ನಗುತ ಸತ್ತರೆ ನಾಕ
ಅಳುವು ನಗು ಕೂಡಿದರೆ
ಅದೆ ಮರ್ತ್ಯಲೋಕ,
ಎಂಬ ತತ್ವವನೊರೆವ ಸಿದ್ಧನಂತೆ
ಕಳಕಳಿಸುತಿದೆ ಹೂವು ಮುನ್ನಿನಂತೆ.