ಜಗದ ಬಾಳ್‌ತೋಟದಲಿ
ನಾವೆಲ್ಲ ಹೂವುಗಳು :
ಇಂದರಳಿ ಕಂಪೆರಚಿ
ನಾಳೆಯೇ ಬಾಡುವೆವು.

ಇಂದು ಮೊಗ್ಗಾಗಿಹುದು ನಾಳೆ ಹೂವಾಗುವುದು
ಇಂದು ಹೂವಾಗಿಹುದು ನಾಳೆ ಇಳೆಗೊರಗುವುದು ;
ಮಣ್ಣ ಹುಡಿಯಲಿ ಹೊರಳಿ ಮಣ್ಣಾದ ಹೂವದುವೆ
ಗಿಡಕೆ ಪೋಷಕವಾಗಿ ಗಿಡದೊಳಗೆ ಸೇರಿ
ಮತ್ತೆ ಹೂವಾಗುವುದು ಪರಿಮಳವ ಬೀರಿ,

ಮೂಡುವುದು ಬಾಡುವುದು
ಇದರ ವೈಶಿಷ್ಟ್ಯ ;
ಇರುವೆರಡು ತಾಸಿನಲಿ
ಪರಿಮಳವ ಬೀರಿ
ಕಣ್ಮನವ ತಣಿಸುವುದು
ಸೃಷ್ಟಿವೈಚಿತ್ರ್ಯ.

ದಿನ ದಿನವು ಹೊಸದಾಗಿ
ದಿನ ದಿನವು ಹಳದಾಗಿ
ಹಳದು ಹೊಸದರ ಕೂಟ
ಸಮ ವಿಷಮಗಳ ಆಟ
ಜಗದ ಬಾಳ್‌ತೋಟ.

ಪರಿಮಳವ ಸೂಸುತ್ತ ಮೆರೆಯುವೀ ಸುಮಗಳಲಿ
ಕೆಂಪೆನಿತೊ, ಬಿಳಿದೆನಿತೊ, ಹಸಿರೆನಿತೊ, ಕಪ್ಪೆನಿತೊ
ಕಣ್ಮನವ ಸೆಳೆದೆಳೆವ ಬಣ್ಣಬಣ್ಣಗಳೆನಿತೊ
ಕಂಪು ಬೀರುವುವೆನಿತೊ ಬೀರದಿಹವೆನಿತೋ,
ಕಂಪಿಲ್ಲದೆನಿತು ಹೂ ಚೆಲುವನಾಂತಿಹವೋ,
ಚೆಲುವಿಲ್ಲದೆನಿತು ಹೂ ಕಂಪನಾಂತಿಹವೋ-

ಕೆಂಪಿರಲಿ ಹಸುರಿರಲಿ
ಬಿಳಿದಿರಲಿ ಕಪ್ಪಿರಲಿ
ಕಂಪಿರಲಿ ಇರದಿರಲಿ
ತೋಟದೊಡೆಯನ ಕಣ್ಗೆ ಒಂದೆ ಸಮವೆಲ್ಲ