ಹೃದಯ ಬೃಂದಾವನದಿ ಬಂದು ಮನೆಮಾಡಯ್ಯ ಕಮಲಾಪತೀ,
ಓಹೊ ಭಕ್ತಿಪ್ರಿಯನೆ ನನ್ನ ಭಕ್ತಿಯೆ ನಿನಗೆ ರಾಧಾಸತೀ,

ನನ್ನ ದೇಹವೆ ನಿನ್ನ ನಂದಗೋಕುಲವಯ್ಯ,
ನನ್ನ ನೇಹವೆ ನಿನಗೆ ಶ್ರೀಯಶೋದೆ ;
ನನ್ನ ಮುಕ್ತಿಯ ಬಯಕೆ ಗೋಪನಾರಿಯರಯ್ಯ,
ಬಾ ಇಲ್ಲಿ ನೆಲಸಯ್ಯ, ಇದು ನಿನ್ನದೇ.

ಇದನೆತ್ತಿ ಬಿಸುಡಯ್ಯ, ನೋಡು ಬಿದ್ದಿದೆ ಇಲ್ಲಿ
ನನ್ನ ಪಾಪದ ಭಾರ ಗೋವರ್ಧನ ;
ಕಂಸ ಚರರಾಗಿರುವ ಅರಿ ವರ್ಗಗಳ ಕೊಂದು
ನನ್ನೊಳಗೆ ನೆಲಸಯ್ಯ ಜನಾರ್ದನ !

ನನ್ನ ಮನಸಿನ ಬಯಲ ಹುಲ್ಲುಗಾವಲ ಚರಿಸು,
ನಿನ್ನ ಕರುಣೆಯ ಕೊಳಲ ಸವಿರಾಗದೊಳಗೆನ್ನ
ಮನದ ಧೇನುವ ನಿನ್ನ ವಶದೊಳಿರಿಸು.
ನನ್ನ ಹೃದಯದ ಕರೆಯ ಯಮುನಾ ನದೀ ತಟದಿ
ನನ್ನ ಬಯಕೆಯ ವೃಕ್ಷದಡಿಗೆ ನೆಲಸು.

ಅಲ್ಲಿ ಬೃಂದಾವನದಿ ರಾಖಲನ ಪ್ರೇಮವೇ
ನಿನ್ನನೀ ತೆರದಲ್ಲಿ ಬಂಧಿಸಿರಲು,
ಆ ಅಲ್ಲಿ ನನ್ನನೂ ಗೊಲ್ಲನಾಗಿಸು ದೇವ
ಎಂದು ಈ ದಾಶರಥಿ ಬೇಡುತಿಹನು.