(ಕ್ರಿ. ಶ. ೧೮೭೦-೧೯೪೨) (ದೇಹದಲ್ಲಿ ಆಮ್ಲ-ಪ್ರತ್ಯಾಮ್ಲಗಳ ಕ್ರಿಯೆ)

ಲಾರೆನ್ಸ್ ಜೋಸೆಫ್ ಹೆಂಡರ್ಸನ್ ೧೮೭೮ರಲ್ಲಿ ಅಮೆರಿಕದ ಮೆಸಾಚು ಸೆಟ್ಸಾಗೆ ಸೇರಿದ ಲಿನ್ ಎಂಬಲ್ಲಿ ಜನಿಸಿದರು. ವಿದ್ಯಾರ್ಥಿಯಾಗಿ ಆತ ಗಣಿತಶಾಸ್ತ್ರ, ಭೌತಶಾಸ್ತ್ರ ಮತ್ತು ರಸಾಯನ ಶಾಸ್ತ್ರಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಹಾರ್ವರ್ಡ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಅವರ ಗಮನ ಜೈವಿಕ ದ್ರಾವಕಗಳಲ್ಲಿನ ಎಲೆಕ್ಟ್ರೊಲೈಟ್ ಗಳು ಬೇರ್ಪಡೆಯಾಗುವ ಕ್ರಿಯೆಯ ಕಡೆಗೆ ಹರಿಯಿತು. ಆ ಬಗ್ಗೆ ಆಳವಾದ ಅಧ್ಯಯನ ಮಾಡಿ ಪ್ರಬಂಧವೊಂದನ್ನು ಬರೆದರು. ಆ ಪ್ರಬಂಧಕ್ಕೆ ಪ್ರಶಸ್ತಿಯನ್ನೂ ಪಡೆದರು. ಮುಂದೆ ಹೆಂಡರ್ಸನ್ ಜರ್ಮನಿಯ ಸ್ಟ್ರಾಸ್ ಬರ್ಗ್‌ಗೆ ಹೋಗಿ ಅಲ್ಲಿ ಅನೇಕ ವಿಷಯಗಳನ್ನು ತಿಳಿದುಕೊಂಡರು. ಆಮೇಲೆ ಹಾರ್ವರ್ಡಿಗೆ ವಾಪಸಾಗಿ ಅಲ್ಲಿಯ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದಲ್ಲಿ ಕಾರ್ಯಮಾಡತೊಡಗಿದರು. ೧೯೩೩೪ರಲ್ಲಿ ಆ ವಿಭಾಗದ ಪ್ರಾಧ್ಯಾಪಕರಾದರು.

ಜೀವರಸಾಯನಶಾಸ್ತ್ರ ಮತ್ತು ಶರೀರ ಕ್ರಿಯಾಶಾಸ್ತ್ರಗಳಲ್ಲಿ ಸಂಶೋಧನೆ ಮಾಡಿ ದೇಹದ ಆಮ್ಲ-ಪ್ರತ್ಯಾಮ್ಲಗಳ ಸಮತೋಲನೆಯ ನಿಖರವಾದ ಚಿತ್ರವನ್ನು ನೀಡಿದ್ದು ಹೆಂಡರ್ಸನ್ ರ ಒಂದು ಬಹು ದೊಡ್ಡ ಸಾಧನೆ. ದೇಹದಲ್ಲಿನ ಕ್ರಿಯೆಯಿಂದ ಆಮ್ಲ ಉತ್ಪತ್ತಿಯಾಗುತ್ತದೆ. ಇಂಗಾಲ ಡೈ ಆಕ್ಸೈಡ್ ಅದರಲ್ಲಿನ ಒಂದು ಮುಖ್ಯ ವಸ್ತು. ಅದು ಕಾರ್ಬಾನಿಕ್ ಆಮ್ಲವಾಗಿ ಪ್ರವಹಿಸುತ್ತದೆ. ಈ ಮತ್ತು ಇತರ ಆಮ್ಲ ವಸ್ತುಗಳನ್ನು ದೇಹದಿಂದ ಹೊರಹಾಕುವಲ್ಲಿ ಶ್ವಾಸಕೋಶ ಹಾಗೂ ಮೂತ್ರಪಿಂಡಗಳು ಮುಖ್ಯ ಪಾತ್ರ ವಹಿಸುತ್ತವೆ. ದೇಹದಲ್ಲಿ ಆಮ್ಲ ಅಧಿಕವಾಗಿ ಉದ್ಭವಿಸಿದರೂ ಜೀವದ್ರವಗಳಲ್ಲಿನ ಪ್ರತ್ಯಾಮ್ಲ ಅದನ್ನು ನಿಷ್ಕ್ರಿಯಗೊಳಿಸಿ ಜೀವದ್ರವದ ತಟಸ್ಥ ಸ್ಥಿತಿಯನ್ನು ಕಾಯ್ದಿರಿಸುತ್ತದೆ ಎಂಬುದನ್ನು ಹೆಂಡರ್ಸನ್ ತೋರಿಸಿಕೊಟ್ಟರು. ಗಣಿತಶಾಸ್ತ್ರವನ್ನು ಬಳಸಿ ಹೆಂಡರ್ಸನ್ ಸೂಚಿಸಿದ ಸಮೀಕರಣ ಸೂತ್ರ ಮತ್ತು ಅಂಕಿಗೆರೆ ಚಿತ್ರ ದೇಹದ ಆಮ್ಲ-ಪ್ರತ್ಯಾಮ್ಲಗಳ ನಿಕಟ ಸಂಬಂಧವನ್ನು, ಅವು ಕಾಯ್ದಿರಿಸುವ ಜಲಜನಕ ಅಯೋನುಗಳ ಸಮತೋಲನವನ್ನು ಗುರುತಿಸಲು ಸಹಾಯಕವಾಗಿವೆ.

ಲಾರೆನ್ಸ್ ಜೋಸೆಫ್ ಹೆಂಡರ್ಸನ್ ೧೯೪೨ರಲ್ಲಿ ನಿಧನ ಹೊಂದಿದರು.