ಕರ್ನಾಟಕ ರಾಜ್ಯದ ಕೇರಳ ಗಡಿ ಭಾಗದಲ್ಲಿರುವ ಹೆಗ್ಗಡದೇವನಕೋಟೆ ತಾಲೂಕು ಸಮಾರು ೧೬೨೨ ಚದರ ಕಿ.ಮೀ. ವಿಸ್ತೀರ್ಣ ಹೊಂದಿದ್ದು ಮೈಸೂರಿನ ನೈಋತ್ಯ ಭಾಗದಲ್ಲಿದೆ. ಇದರ ಪಶ್ಚಿಮ ಮತ್ತು ದಕ್ಷಿಣ ಭಾಗಗಳು ದಟ್ಟವಾದ ಅರಣ್ಯದಿಂದ ಆವೃತ್ತವಾಗಿವೆ. ಈ ತಾಲೂಕಿನಲ್ಲಿ ಭೂಮಿಯು ಕೆಂಪು ಮತ್ತು ಎರೆಮಣ್ಣು ಮಿಶ್ರಿತವಾಗಿದ್ದು ವ್ಯವಸಾಯಕ್ಕೆ ಯೋಗ್ಯವಾಗಿದೆ. ಕಪಿಲಾ ನದಿ ಈ ತಾಲೂಕಿನ ಮೂಲಕ ಹರಿದುಹೋಗುತ್ತದೆ. ಕಬಿನಿ, ನುಗು, ಹೆಬ್ಬಾಳ ಹಾಗೂ ತಾರಕಗಳಲ್ಲಿ ಜಲಾಶಯಗಳಿದ್ದರೂ ಇಲ್ಲಿನ ರೈತರ ಮಳೆ ಆಶ್ರಯದಿಂದ ಎರಡು ಬೆಳೆಗಳನ್ನು ಬೆಳೆಯುತ್ತಾರೆ. ದಟ್ಟವಾದ ಕಾಡಿನ ಪ್ರದೇಶಗಳಲ್ಲಿ ಜೇನುಕುರುಬ, ಬೆಟ್ಟಕುರುಬ, ಪಣಿಯ, ಯರವ, ಮತ್ತು ಸೋಲಿಗರು ಹಾಡಿಗಳಲ್ಲಿ ವಾಸವಾಗಿದ್ದಾರೆ.

ಮೈಸೂರು ಅರಸರಾದ ಒಡೆಯರ ಸಾಮಂತನಾದ ಹೆಗ್ಗಡದೇವನು ಇಲ್ಲಿ ಮಣ್ಣಿನಿಂದ ಕೋಟೆ ಕಟ್ಟುವ ತನಕ ಈ ಪಟ್ಟಣಕ್ಕೆ ‘ಪುನ್ನಾಟ’ ಎಂಬ ಹೆಸರಿತ್ತು. ಈ ಪುನ್ನಾಟ ಪ್ರದೇಶವು ಮೈಸೂರು ಒಡೆಯರಿಗಿಂತ ಮುಂಚೆ ಹೊಯ್ಸಳ, ವಿಜಯನಗರ ಅರಸರ ಆಳ್ವಿಕೆಗೆ ಒಳಪಟ್ಟಿತ್ತು. ಅವರ ಕಾಲದ ಅನೇಕ ಶಾಸನಗಳು ಈ ನೆಲದಲ್ಲಿ ದೊರೆತಿವೆ. ಹೆಗ್ಗಡದೇವನು ಮಣ್ಣಿನಿಂದ ಪಟ್ಟಣದ ಸುತ್ತಲೂ ಕೋಟೆ ಕಟ್ಟಿದ್ದು ಅದರ ಸುತ್ತಲೂ ಕಂದಕಗಳನ್ನು ನಿರ್ಮಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ಅನುಷ್ಠಾನಿಸಲಾಗಿರುವ ನಲಿ-ಕಲಿ ಕಲಿಕಾ ಪ್ರಕ್ರಿಯೆಯು ಪ್ರಪ್ರಥಮವಾಗಿ ಈ ತಾಲೂಕಿನಲ್ಲಿ ಪ್ರಾಯೋಗಿಕ ಅನುಷ್ಠಾನಕ್ಕೆ ಒಳಪಟ್ಟಿತ್ತು.

ತಾರಕ ಅಣೆಕಟ್ಟು

ಪೆಂಜನಹಳ್ಳಿ ಗ್ರಾಮದಲ್ಲಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ತಾರಕ ಅಣೆಕಟ್ಟು ೩.೯ ಟಿ ಎಂ ಸಿ ನೀರಿನ ಸಂಗ್ರಹಣೆಯ ಸಾಮರ್ಥ್ಯವಿರುವ ೨೫ ಅಡಿ ಎತ್ತರವನ್ನು ಹೊಂದಿದೆ.

 

ಎಚ್‌ಡಿ ಕೋಟೆ ತಾಲೂಕು ಕೇಂದ್ರ

ದೂರ ಎಷ್ಟು?
ತಾಲೂಕಿನಿಂದ: ೦೨ ಕಿ.ಮೀ.
ಜಿಲ್ಲಾ ಕೇಂದ್ರದಿಂದ: ಕಿ.ಮೀ.

ವರದರಾಜ ಸ್ವಾಮಿ ದೇವಾಲಯ

ಎಚ್‌ಡಿ ಕೋಟೆ ತಾಲೂಕು ಕೇಂದ್ರದಲ್ಲಿ ವೈಷ್ಣವ ಸಂಪ್ರದಾಯದ ವರದರಾಜ ಸ್ವಾಮಿ ದೇವಾಲಯವಿದೆ. ಈ ದೇವಾಯದಲ್ಲಿ ರಾಮಾನುಜ ಆಚಾರ್ಯರ ಪ್ರತಿಮೆಗಳೂ ಇವೆ. ದೇವಾಲಯದ ಸುತ್ತಲೂ ಪ್ರಾಕಾರವಿದೆ. ಈ ತಾಲೂಕಿನಲ್ಲಿ ಎಜುಸ್ಯಾಟ್‌ಆಧಾರಿತ ಶಿಕ್ಷಣವು ನಡೆಯುತ್ತಿದೆ.

 

ಎಚ್‌ ಮಟಕೆರೆ

ತಾಲೂಕು ಕೇಂದ್ರದಿಂದ ೫ ಕಿ.ಮೀ. ದೂರದಲ್ಲಿ ಕಪಿಲಾ ನದಿ ದಂಡೆಯ ಮೇಲೆ ಇರುವ ಈ ಗ್ರಾಮದಲ್ಲಿ ರಾಮಲಿಂಗೇಶ್ವರ ದೇವಾಲಯವಿದೆ. ಈ ದೇವಾಲಯವನ್ನು ರಾಜರಾಜ ಚೋಳನು ನಿರ್ಮಿಸಿದನೆಂದು ತಿಳಿದುಬರುತ್ತದೆ.

ರಾಮಲಿಂಗೇಶ್ವರ ದೇವಾಲಯ

 

ಕಬಿನಿ ಜಲಾಶಯ

ಕಬಿನಿ ಜಲಾಶಯ

ಪಟ್ಟಣದಿಂದ ೧೫ ಕಿ.ಮೀ. ದೂರದಲ್ಲಿದೆ. ಕೇರಳ ವೈನಾಡಿನಲ್ಲಿ ಹುಟ್ಟಿ ಹರಿಯುವ ಕಪಿಲಾ ನದಿಗೆ ಬೀಚನಹಳ್ಳಿ ಬಳಿ ೧೯೭೫ರಲ್ಲಿ ಈ ಅಣೆಕಟ್ಟು ನಿರ್ಮಿಸಲಾಗಿದೆ. ಮಳೆಗಾಲದಲ್ಲಿ ತುಂಬಿರುವ ಜಲಾಶಯವನ್ನು ನೋಡುವುದೇ ಚಂದ. ಈ ಜಲಾಶಯಕ್ಕೆ ಹೊಂದಿಕೊಂಡಂತೆ ಇತ್ತೀಚೆಗೆ ಖಾಸಗಿ ಒಡೆತನದಲ್ಲಿ ಐದು ಮೆಗಾವ್ಯಾಟ್‌ವಿದ್ಯುತ್‌ಉತ್ಪಾದನೆ ಮಾಡುವ ಸುಭಾಷ್‌ಪವರ್‌ಸ್ಟೇಷನ್‌ಮತ್ತು ಎರಡು ಮೆಗಾವ್ಯಾಟ್‌ವಿದ್ಯುತ್‌ಉತ್ಪಾದನೆ ಮಾಡುವ ಮಾರುತಿ ಪವರ್‌ಸ್ಟೇಷನ್‌ಗಳು ಕಾರ್ಯಾಚರಿಸುತ್ತಿವೆ.

 

ಭೀಮನಕೊಲ್ಲಿ

ಕಪಿಲಾ ನದಿಯ ಜಲಾಶಯದ ಹಿನ್ನೀರಿನ ದಂಡೆಯ ಮೇಲೆ ತಾಲೂಕು ಕೇಂದ್ರದಿಂದ ೨೦ ಕಿ.ಮೀ. ದೂರದಲ್ಲಿರುವ ಭೀಮನಕೊಲ್ಲಿಯಲ್ಲಿ ಮಲೆ ಮಾದೇಶ್ವರನ ತೋರುಗದ್ದಿಗೆಯಿದೆ. ಇಲ್ಲಿ ಪ್ರತಿವರ್ಷ ಮಾರ್ಚ್ ತಿಂಗಳಿನಲ್ಲಿ ಜಾತ್ರೆ ನಡೆಯುತ್ತದೆ. ಮಲೆಮಾದಪ್ಪ ೧೬ನೇ ಶತಮಾನದಲ್ಲಿ ಇಲ್ಲಿ ಕೆಲಕಾಲ ತಂಗಿದ್ದನೆಂದು ತಿಳಿದುಬರುತ್ತದೆ.

 

ಜಂಗಲ್‌ಲಾಡ್ಜ್‌ ಮತ್ತು ರಿಸಾರ್ಟ್ಸ್

ದೂರ ಎಷ್ಟು?
ತಾಲ್ಲೂಕಿನಿಂದ: ೨೩ ಕಿ.ಮೀ.
ಜಿಲ್ಲಾ ಕೇಂದ್ರದಿಂದ: ೬೮ ಕಿ.ಮೀ.

ಮೈಸೂರು ಒಡೆಯರ ಭೇಟಿ ಮಾಡಲು ದಟ್ಟವಾದ ಈ ಕಾಡಿಗೆ ಬಂದಾಗ ತಂಗಲು ಸುಂದರವಾದ ಮನೆಗಳನ್ನು ನಿರ್ಮಿಸಲಾಗಿತ್ತು. ಅದು ಈಗ ರೆಸಾರ್ಟ್‌ಆಗಿ ಪರಿವರ್ತನೆಗೊಂಡಿದೆ. ಖಾರಾಪುರದಲ್ಲಿರುವ ಈ ತಂಗುದಾಣ ಪ್ರೇಕ್ಷಣೀಯ ಸ್ಥಳವಾಗಿದೆ. ಕಾಡಿನ ಮಧ್ಯದಲ್ಲಿ ಕೆರೆ ನಿರ್ಮಿಸಿ ಅಲ್ಲಿಗೆ ಕಾಡು ಪ್ರಾಣಿಗಳು ನೀರು ಕುಡಿಯಲು ಬರುವ ದೃಶ್ಯವನ್ನು ನೋಡಲು ಕೆರೆಯ ಅನತಿ ದೂರದಲ್ಲಿ ವೀಕ್ಷಣಾ ಗೋಪುರ ನಿರ್ಮಿಸಿದ್ದಾರೆ. ಈ ಸ್ಥಳವು ಕಬಿನಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿದೆ.

 

ನುಗು ಜಲಾಶಯ

ದೂರ ಎಷ್ಟು?
ತಾಲ್ಲೂಕಿನಿಂದ: ೧೫ ಕಿ.ಮೀ.
ಜಿಲ್ಲಾ ಕೇಂದ್ರದಿಂದ: ೫೮ ಕಿ.ಮೀ.

ನುಗು ಜಲಾಶಯ

ಬೀರ್ವಾಳು ಎಂಬಲ್ಲಿ ೧೯೫೬-೫೭ರಲ್ಲಿ ನುಗು ಹೊಳೆಗೆ ಅಣೆಕಟ್ಟು ಕಟ್ಟಲಾಯಿತು. ಈ ಅಣೆಕಟ್ಟು ಬೆಟ್ಟವನ್ನು ಹೊಂದಿಕೊಂಡಂತೆ ನಿರ್ಮಿಸಿರುವುದು ಇದರ ವಿಶೇಷ. ಮಳೆಗಾಲದಲ್ಲಿ ಎತ್ತರದಿಂದ ಧುಮ್ಮುಕ್ಕುವ ಜಲಧಾರೆ ನೋಡಲು ಚಂದ. ಈ ಜಲಾಶಯದ ಹಿನ್ನೀರಿನ ಪ್ರದೇಶವು ಅರಣ್ಯಕ್ಕೆ ಹೊಂದಿಕೊಂಡಂತೆ ಇದೆ. ಹಾಗೂ ನಿಸರ್ಗ ಪ್ರೇಮಿಗಳು ವನ್ಯ ಮೃಗ ವೀಕ್ಷಣೆ ಮತ್ತು ಪಕ್ಷಿ ವೀಕ್ಷಣೆಗೆ ಇಲ್ಲಿ ಬರುತ್ತಾರೆ. ಸುಮಾರು ೨೦,೮೯೯ ಎಕರೆ ಭೂ ಪ್ರದೇಶಕ್ಕೆ ನೀರಿನ ಪೂರೈಕೆ ಈ ಜಲಾಶಯದಿಂದ ಆಗುತ್ತದೆ.

 

ಸಂರಕ್ಷಿತ ಅರಣ್ಯ ಪ್ರದೇಶ

ದೂರ ಎಷ್ಟು?
ತಾಲ್ಲೂಕಿನಿಂದ: ೨೩ ಕಿ.ಮೀ.
ಜಿಲ್ಲಾ ಕೇಂದ್ರದಿಂದ: ೬೮ ಕಿ.ಮೀ.

ತಾಲೂಕಿನ ಬಹುಭಾಗದಲ್ಲಿರುವ ಅರಣ್ಯ ಪ್ರದೇಶವು ದಕ್ಷಿಣ ಭಾಗದಲ್ಲಿ ಬಂಡಿಪುರ ಅಭಯಾರಣ್ಯ ಪ್ರದೇಶಕ್ಕೂ, ಪಶ್ಚಿಮದ ಭಾಗದಲ್ಲಿ ನಾಗರಹೊಳೆ ಪ್ರದೇಶಕ್ಕೂ ಸೇರಿದೆ. ಈ ಅರಣ್ಯವನ್ನು ಕೇಂದ್ರ ಸರಕಾರ ರಾಜೀವ್‌ಗಾಂಧಿ ರಾಷ್ಟ್ರೀಯ ಉದ್ಯಾನವನ ಎಂದು ಘೋಷಿಸಿದೆ. ಈ ಅರಣ್ಯ ಪ್ರದೇಶ ದಟ್ಟವಾದ ಮರಗಳಿಂದ ಕೂಡಿದೆ. ಈ ಅರಣ್ಯ ಸಾಗುವಾನಿ, ಬೀಟೆ, ಗಂಧ, ಹೊನ್ನೆ, ಬಿಲ್ವಾರ ಮುಂತಾದ ಬೆಲೆಬಾಳುವ ಸಸ್ಯ ಸಂಪತ್ತಿನಿಂದಲೂ ಹುಲಿ, ಚಿರತೆ, ಆನೆ, ಕರಡಿ, ಹಂದಿ, ಕಾಡೆಮ್ಮೆ, ಜಿಂಕೆ, ನವಿಲು ಮುಂತಾದ ವನ್ಯ ಜೀವಿಗಳಿಂದಲೂ ಸಮೃದ್ಧವಾಗಿದೆ. ಅದರಲ್ಲೂ ಈ ಕಾಡಿನಲ್ಲಿ ಆನೆಗಳ ಸಂಖ್ಯೆ ಇಡೀ ಏಷ್ಯಾ ಖಂಡದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿದೆ.

 

ಕಾಕನಕೋಟೆ

ಒಡೆಯರ ಕಾಲದಲ್ಲಿ ಹಾಗೂ ಅನಂತರ ೧೯೭೨ ರವರೆಗೂ ಆನೆಗಳನ್ನು ಖೆಡ್ಡಾ ಮೂಲಕ ಹಿಡಿದು ಪಳಗಿಸುವ ಕೇಂದ್ರವಾಗಿತ್ತು. ಸಮೀಪದ ಬಳ್ಳದಿಂದ ಮೈಸೂರಿನ ದಸರಾ ಹಬ್ಬಕ್ಕೆ ಪಳಗಿದ ಆನೆಗಳನ್ನು ತರಲಾಗುತ್ತದೆ.