ವಾಹನಗಳು ಒಂದಕ್ಕೊಂದು ಡಿಕ್ಕಿಹೊಡೆದು ಅಪಘಾತಕ್ಕೀಡಾಗುವುದು ಬಹಳ ಸಾಮಾನ್ಯವಾಗಿ ನಡೆಯುವ ಘಟನೆ. ಎತ್ತಿನಗಾಡಿಗೆ ಸೈಕಲ್ ಡಿಕ್ಕಿ ಎನ್ನುವುದರಿಂದ ಹಿಡಿದು ಎರಡು ರೈಲುಗಳ ಡಿಕ್ಕಿ ಎನ್ನುವುದರವರೆಗೆ ಅದೆಷ್ಟೋ ಅಪಘಾತಗಳ ಸುದ್ದಿ ಕೇಳಿಬರುತ್ತಲೇ ಇರುತ್ತದೆ.

ಇವೆಲ್ಲವುದಕ್ಕಿಂತ ವಿಭಿನ್ನವಾದ ಸುದ್ದಿ ಕೇಳಿಬಂದದ್ದು ೨೦೦೯ರಲ್ಲಿ. ಬಾಹ್ಯಾಕಾಶದಲ್ಲಿ ರೌಂಡು ಹೊಡೆಯುತ್ತಿದ್ದ ಎರಡು ಮಾನವನಿರ್ಮಿತ ಉಪಗ್ರಹಗಳು ಮುಖಾಮುಖಿ ಡಿಕ್ಕಿಹೊಡೆದಿವೆ ಎಂಬುದೇ ಆ ಸುದ್ದಿ.

ಅಂತರಿಕ್ಷದ ಇಂತಹ ಮೊದಲ ಅಪಘಾತ ಎಂದು ಗುರುತಿಸಲಾದ ಈ ಘಟನೆಯಲ್ಲಿ  ಅಮೆರಿಕಾ ಹಾಗೂ ರಷ್ಯಾದ ಉಪಗ್ರಹಗಳು ಭೂಮಿಯಿಂದ ಸುಮಾರು ೭೮೦ ಕಿಲೋಮೀಟರುಗಳ ಎತ್ತರದಲ್ಲಿ, ಸೈಬೀರಿಯಾ ದೇಶದ ಮೇಲೆ ಒಂದಕ್ಕೊಂದು ಡಿಕ್ಕಿಹೊಡೆದಿದ್ದವು.

ಈಗಾಗಲೇ ನಿಷ್ಕ್ರಿಯವಾಗಿತ್ತು ಎನ್ನಲಾಗಿರುವ ಹೆಚ್ಚೂಕಡಿಮೆ ಸಾವಿರ ಕೆಜಿ ತೂಕದ ರಷ್ಯಾದ ಉಪಗ್ರಹ ೧೯೯೩ರಲ್ಲಿ ಉಡಾವಣೆಯಾಗಿತ್ತಂತೆ. ಅಪಘಾತದಲ್ಲಿ ಭಾಗಿಯಾಗಿರುವ ೫೬೦ಕಿಲೋ ತೂಕದ ಇನ್ನೊಂದು ಉಪಗ್ರಹ ಅಮೆರಿಕಾದ ಇರಿಡಿಯಂ ಸಂಸ್ಥೆಗೆ ಸೇರಿದ್ದು ೧೯೯೭ರಲ್ಲಿ ಉಡಾವಣೆಯಾಗಿತ್ತು. ಇದು ಇರಿಡಿಯಂ ಸಂಸ್ಥೆ ಒದಗಿಸುವ ಉಪಗ್ರಹ ದೂರವಾಣಿ ಸೇವೆಗಾಗಿ ಬಳಕೆಯಾಗುತ್ತಿದ್ದ ಅನೇಕ ಉಪಗ್ರಹಗಳಲ್ಲಿ ಒಂದು.

ಈ ಘಟನೆಗೆ ಇಷ್ಟೊಂದು ಮಹತ್ವ ಕೊಡುತ್ತಿರುವುದು ಯಾಕೆ ಎಂದು ನೀವು ಕೇಳಬಹುದು. ನೂರಾರು ಉಪಗ್ರಹಗಳು ಅಂತರಿಕ್ಷ ಸೇರುತ್ತಿರುತ್ತವೆ. ಹೊಸ ಉಪಗ್ರಹಗಳು ಸೇವೆಗೆ ಸಿದ್ಧವಾಗುತ್ತಿದ್ದಂತೆ ಹಳೆಯ ಉಪಗ್ರಹಗಳ ರಿಟೈರ್‌ಮೆಂಟೂ ಆಗುತ್ತಿರುತ್ತದೆ. ಕೆಲವೊಂದು ಉಪಗ್ರಹಗಳು ಆಕಸ್ಮಿಕವಾಗಿ ಭೂಮಿಯತ್ತ ಬಂದು ಸುಟ್ಟುಹೋಗುವುದೂ ಉಂಟು. ಇನ್ನುಕೆಲವು ಉಪಗ್ರಹಗಳನ್ನು ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಗುತ್ತದೆ.

ಶತ್ರುರಾಷ್ಟ್ರಗಳ ಉಪಗ್ರಹವನ್ನು ಹೊಡೆದುರುಳಿಸುವ ದಿನ ಕೂಡ ದೂರವೇನೂ ಇಲ್ಲ. ಅಂತರಿಕ್ಷದಲ್ಲಿ ಸಂಚರಿಸುವ ಉಪಗ್ರಹಗಳ ಮೇಲೆ ಭೂಮಿಯಿಂದಲೇ ದಾಳಿಮಾಡುವ ಶಕ್ತಿ ಸಂಪಾದಿಸಿಕೊಳ್ಳಲು ಪೈಪೋಟಿ ಈಗಾಗಲೇ ಶುರುವಾಗಿದೆ. ಇದಕ್ಕೆ ಪೂರ್ವಸೂಚನೆ ಎನ್ನುವಂತೆ ೨೦೦೭ರಲ್ಲಿ ಚೀನಾ ತನ್ನದೇ ಉಪಗ್ರಹವೊಂದನ್ನು ಕ್ಷಿಪಣಿ ಹಾರಿಸಿ ನಾಶಪಡಿಸಿತ್ತು. ತಾನೇನು ಕಡಿಮೆ ಎನ್ನುವಂತೆ ಅಮೆರಿಕಾದ ನೌಕಾಸೇನೆ ಕೂಡ ೨೦೦೮ರಲ್ಲಿ ಕ್ಷಿಪಣಿ ಹಾರಿಸಿ ತನ್ನದೊಂದು ಉಪಗ್ರಹವನ್ನು ಸಿಡಿಸಿಹಾಕಿತು.

ಆದರೆ, ಈ ಬಾರಿಯ ಉಪಗ್ರಹಗಳ ಡಿಕ್ಕಿ ಒಂದು ಆಕ್ಸಿಡೆಂಟು, ಆಕಸ್ಮಿಕವಾಗಿ ಘಟಿಸಿದ್ದು.

ಈ ಉಪಗ್ರಹಗಳು ಅಪಾರ ವೇಗದಲ್ಲಿ ಒಂದಕ್ಕೊಂದು ಡಿಕ್ಕಿ ಹೊಡೆದಿರುವುದರಿಂದ ಅವೆರಡೂ ನುಚ್ಚುನೂರಾಗಿ ಧೂಳು ಹಾಗೂ ಚೂರುಗಳ ದೊಡ್ಡದೊಂದು ಮೋಡವೇ ಸೃಷ್ಟಿಯಾಯಿತು. ಈ ಚೂರುಗಳು ಭೂಮಿಯ ವಾತಾವರಣ ಪ್ರವೇಶಿಸಿ ಉರಿದು ಬೂದಿಯಾದರೆ ಪರವಾಗಿಲ್ಲ, ಹಾಗಾಗದೆ ಅವೇನಾದರೂ ಅಂತರಿಕ್ಷದಲ್ಲೇ ಉಳಿದುಕೊಂಡರೆ ಇತರ ಉಪಗ್ರಹಗಳು ಹಾಗೂ ಅಂತರಿಕ್ಷಯಾನಗಳಿಗೆ ತೊಂದರೆಯಾಗುವ ಸಾಧ್ಯತೆಯಾಗುತ್ತದಲ್ಲ ಎಂಬ ಆತಂಕವೂ ಶುರುವಾಯಿತು.

ಇದೇನಪ್ಪ ಹೀಗಾಯಿತಲ್ಲ ಎಂದು ತಲೆಕೆಡಿಸಿಕೊಳ್ಳುವಷ್ಟರಲ್ಲೇ ವಿಜ್ಞಾನಿಗಳು ಈ ಅಪಘಾತದ ಕಾರಣವನ್ನೂ ಹೇಳಿಬಿಟ್ಟರು – ಅಂತರಿಕ್ಷದಲ್ಲಿ ಟ್ರಾಫಿಕ್ ಜಾಮ್ ಶುರುವಾಗಿದೆ!

* * *

೧೯ನೇ ಶತಮಾನದ ಅಂತ್ಯದಲ್ಲಿ  ‘ದಿ ಅಟ್ಲಾಂಟಿಕ್ ಮಂಥ್ಲಿ’ ಎಂಬ ಹೆಸರಿನ ಪತ್ರಿಕೆ ಅಮೆರಿಕಾದಲ್ಲಿ ಪ್ರಕಟವಾಗುತ್ತಿತ್ತು. ‘ದ ಬ್ರಿಕ್ ಮೂನ್’ ಎನ್ನುವುದು ೧೮೬೯ನೇ ಇಸವಿಯಲ್ಲಿ ಅದರಲ್ಲಿ ಪ್ರಕಟವಾದ ಧಾರಾವಾಹಿ. ಇಟ್ಟಿಗೆಯಿಂದ ನಿರ್ಮಿಸಿದ ೨೦೦ ಅಡಿ ಸುತ್ತಳತೆಯ ಗೋಲವೊಂದನ್ನು ಅಂತರಿಕ್ಷಕ್ಕೆ ಹಾರಿಬಿಡುವ ಕತೆ ಅದು.

ಹೀಗೆ ಹುಟ್ಟಿಕೊಂಡದ್ದು ಕೃತಕ ಉಪಗ್ರಹದ ಕಲ್ಪನೆ.

೨೦ನೇ ಶತಮಾನದ ಪ್ರಾರಂಭದ ಹೊತ್ತಿಗೆ ಉಪಗ್ರಹದ ಕಲ್ಪನೆಯನ್ನು ನನಸುಮಾಡುವ ನಿಟ್ಟಿನಲ್ಲಿ ವಿಜ್ಞಾನಿಗಳು ಆಲೋಚಿಸಲು ಪ್ರಾರಂಭಿಸಿದ್ದರು. ವಿಜ್ಞಾನಿಗಳ ಜೊತೆಗೆ ಆರ್ಥರ್ ಕ್ಲಾರ್ಕ್‌ನಂತಹ ವೈಜ್ಞಾನಿಕ ಕತೆಗಾರರು ಕೂಡ ಉಪಗ್ರಹಗಳ ಬಗ್ಗೆ ಹೊಸ ಕನಸುಗಳನ್ನು ಹುಟ್ಟುಹಾಕಿದರು.

೧೯೫೭ರಲ್ಲಿ ಉಡಾವಣೆಯಾದ ರಷ್ಯಾ ನಿರ್ಮಿತ ಸ್ಪುಟ್ನಿಕ್-೧, ಮೊತ್ತಮೊದಲ ಮಾನವನಿರ್ಮಿತ ಉಪಗ್ರಹ. ಅದೇ ವರ್ಷ ಉಡಾವಣೆಯಾದ ಸ್ಪುಟ್ನಿಕ್-೨ ಉಪಗ್ರಹದಲ್ಲಿ ಲೈಕಾ ಎಂಬ ನಾಯಿ ಪ್ರಯಾಣಿಸಿತ್ತು. ಭೂಮಿಯಿಂದ ಅಂತರಿಕ್ಷಕ್ಕೆ ಹಾರಿದ ಮೊತ್ತಮೊದಲ ಜೀವಿ ಇದೇ ಲೈಕಾ.

ಮುಂದಿನ ವರ್ಷ, ಅಂದರೆ ೧೯೫೮ರಲ್ಲಿ ಅಮೆರಿಕಾ ತನ್ನ ಮೊದಲ ಉಪಗ್ರಹ ಎಕ್ಸ್‌ಪ್ಲೋರರ್-೧ ಅನ್ನು ಉಡಾಯಿಸಿತು. ಅದೇ ವರ್ಷ ಉಡಾವಣೆಯಾದ ವ್ಯಾನ್‌ಗಾರ್ಡ್-೧ ಎಂಬ ಉಪಗ್ರಹ ಈಗಲೂ ಭೂಮಿಯ ಸುತ್ತ ಸುತ್ತುತ್ತಿದೆ!

ಮುಂದಿನ ವರ್ಷಗಳಲ್ಲಿ ಜಗತ್ತಿನ ಇತರ ರಾಷ್ಟ್ರಗಳೂ ತಮ್ಮ ಉಪಗ್ರಹಗಳನ್ನು ಉಡಾಯಿಸಿದವು. ೧೯೬೨ರಲ್ಲಿ ಕೆನಡಾ, ೬೪ರಲ್ಲಿ ಇಟಲಿ, ೬೫ರಲ್ಲಿ ಫ್ರಾನ್ಸ್, ೬೭ರಲ್ಲಿ ಆಸ್ಟ್ರೇಲಿಯಾ, ೭೦ರಲ್ಲಿ ಜಪಾನ್ ಹಾಗೂ ಚೀನಾ, ೭೧ರಲ್ಲಿ ಬ್ರಿಟನ್, ೭೪ರಲ್ಲಿ ಪಶ್ಚಿಮ ಜರ್ಮನಿ ತಮ್ಮ ಮೊತ್ತಮೊದಲ ಉಪಗ್ರಹಗಳನ್ನು ಉಡಾಯಿಸಿದವು. ೧೯೭೫ರಲ್ಲಿ ರಷ್ಯಾದಿಂದ ಉಡಾವಣೆಯಾದ ಆರ್ಯಭಟ ಭಾರತದ ಮೊದಲ ಉಪಗ್ರಹ. ಇದಾದ ಐದೇ ವರ್ಷಗಳಲ್ಲಿ (೧೯೮೦) ರೋಹಿಣಿ-೧ ಉಪಗ್ರಹ ಭಾರತದಿಂದಲೇ ಉಡಾವಣೆಯಾಯಿತು.

ವಿಜ್ಞಾನ-ತಂತ್ರಜ್ಞಾನ ಬೆಳೆದಂತೆ ಅಂತರಿಕ್ಷದಲ್ಲಿ ಮಾನವನ ಚಟುವಟಿಕೆಯೂ ಹೆಚ್ಚುತ್ತಲೇ ಹೋಯಿತು. ಭೂಮಿಯ ಸುತ್ತ ಸುತ್ತುವ ಉಪಗ್ರಹಗಳಷ್ಟೆ ಅಲ್ಲದೆ ಚಂದ್ರ, ಸೂರ್ಯ ಹಾಗೂ ಸೌರಮಂಡಲದ ಇನ್ನಿತರ ಗ್ರಹಗಳತ್ತಲೂ ಮಾನವನಿರ್ಮಿತ ಗಗನನೌಕೆಗಳು ಹೊರಟವು. ಅಂತರಿಕ್ಷದಲ್ಲಿ ನಮ್ಮ ಕಣ್ಣಿನಂತೆ ಇರುವ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ಕೂಡ ನಿರ್ಮಾಣವಾಯಿತು.

೧೯೫೭ರ ಮೊದಲ ಉಪಗ್ರಹದಿಂದ ಇಲ್ಲಿಯವರೆಗೆ ಉಡಾವಣೆಯಾಗಿರುವ ಉಪಗ್ರಹಗಳ ಸಂಖ್ಯೆ ಸುಮಾರು ಆರು ಸಾವಿರ ತಲುಪಿರುವುದು ಬಾಹ್ಯಾಕಾಶದ ಟ್ರಾಫಿಕ್ಕನ್ನು ಮಿತಿಮೀರಿ ಹೆಚ್ಚಿಸಿದೆ; ಮುಂದಿನ ದಿನಗಳಲ್ಲಿ ಇಂತಹ ಅಪಘಾತಗಳು ಹೆಚ್ಚಾಗಲಿವೆಯೇ ಎಂಬ ಸಂಶಯವನ್ನೂ ಹುಟ್ಟುಹಾಕಿದೆ. ತಮಾಷೆಯ ವಿಷಯವೆಂದರೆ ಇಷ್ಟು ದೊಡ್ಡ ಸಂಖ್ಯೆಯ ಹತ್ತನೆಯ ಒಂದರಷ್ಟು ಉಪಗ್ರಹಗಳು ಮಾತ್ರ ಕೆಲಸಮಾಡುವ ಸ್ಥಿತಿಯಲ್ಲಿವೆ!

* * *

ಈ ಸಂಶಯ ವಿನಾಕಾರಣವೇನೂ ಹುಟ್ಟಿಕೊಂಡಿಲ್ಲ. ಬಾಹ್ಯಾಕಾಶದಲ್ಲಿ ಹೆಚ್ಚುತ್ತಿರುವ ಮಾನವನ ಚಟುವಟಿಕೆ ಭೂಮಿಯ ಹೊರವಲಯದಲ್ಲಿ ಅಪಾರ ಪ್ರಮಾಣದ ಕಸದ ರಾಶಿಯನ್ನೇ ಸೃಷ್ಟಿಸಿದೆ.

ಕಸ ಎಂದ ತಕ್ಷಣ ನಮ್ಮ ಮನಸ್ಸಿಗೆ ಬರುವುದು ಊರುಗಳ ಆಚೆ ರಾಶಿಬೀಳುವ ಪ್ಲಾಸ್ಟಿಕ್ ಮಿಶ್ರಿತ ತ್ಯಾಜ್ಯ, ನದಿಗಳಿಗೆ ಸೇರಿ ಹರಿಯುವ ಕೆಟ್ಟವಾಸನೆಯ ಗಲೀಜು. ಆದರೆ ಅಂತರಿಕ್ಷದಲ್ಲಿ ಕಸ ಎಂಬ ಪದದ ಅರ್ಥವೇ ಬೇರೆ.

ಕಳೆದ ಐದು ದಶಕಗಳಲ್ಲಿ ಉಡಾಯಿಸಲಾಗಿರುವ ಆರು ಸಾವಿರಕ್ಕೂ ಹೆಚ್ಚು ಉಪಗ್ರಹಗಳಲ್ಲಿ ಶೇಕಡಾ ಎಂಬತ್ತೈದರಷ್ಟು ಉಪಗ್ರಹಗಳು ಈಗ ನಿಷ್ಕ್ರಿಯವಾಗಿದ್ದು ಕಸದ ರೂಪ ತಾಳಿವೆ. ಇದರ ಜೊತೆಗೆ ಉಪಗ್ರಹ ಉಡಾವಣೆಯ ಸಂದರ್ಭದಲ್ಲಿ ಬಳಕೆಯಾಗಿ ನಂತರ ಸಿಡಿದುಹೋಗುವ ರಾಕೆಟ್ ಚೂರುಗಳು, ಉದ್ದೇಶಪೂರ್ವಕವಾಗಿಯೋ ಆಕಸ್ಮಿಕವಾಗಿಯೋ ಸ್ಫೋಟಿಸಲಾದ ಉಪಗ್ರಹಗಳು, ಇನ್ನಿತರ ಚಿಕ್ಕಪುಟ್ಟ ಉಪಕರಣಗಳು – ಎಲ್ಲ ಸೇರಿ ಲಕ್ಷಾಂತರ ಸಂಖ್ಯೆಯ ಕಸದ ತುಣುಕುಗಳು ಇದೀಗ ಭೂಮಿಯ ಸುತ್ತ ಸುತ್ತುತ್ತಿವೆ.

ಈ ಕಸದ ಚೂರುಗಳು ಭೂಮಿಯ ಗುರುತ್ವಾಕರ್ಷಣೆಗೆ ಸಿಲುಕಿ ಅಪಾರ ವೇಗದಲ್ಲಿ ಭೂಮಿಯನ್ನು ಸುತ್ತುತ್ತಿರುತ್ತದೆ. ಇಷ್ಟು ಭಾರೀ ವೇಗದಲ್ಲಿ ಭೂಮಿಯ ಸುತ್ತ ಸುತ್ತುವ ಕಸದ ತುಣುಕುಗಳು ತಮ್ಮತಮ್ಮಲ್ಲೇ ಡಿಕ್ಕಿ ಹೊಡೆದುಕೊಂಡು ಭೂಮಿಯ ಸುತ್ತ ಕಸದ ಪದರವನ್ನೇ ನಿರ್ಮಿಸಿಬಿಡಬಲ್ಲವು. ಇಂತಹ ಸಣ್ಣದೊಂದು ಚೂರು ಯಾವುದಾದರೂ ಉಪಗ್ರಹಕ್ಕೋ ಗಗನನೌಕೆಗೋ ಬಡಿದರೆ ಆಗಬಹುದಾದ ಅಪಾಯ ಬಹಳ ದೊಡ್ಡ ಪ್ರಮಾಣದ್ದು. ಸಣ್ಣಪುಟ್ಟ ಲೋಹದ ಚೂರುಗಳು ಗಂಟೆಗೆ ಸಾವಿರಾರು ಕಿಲೋಮೀಟರ್ ವೇಗದಲ್ಲಿ ಸಾಗುವಾಗ ಗಗನಯಾತ್ರಿಯ ಉಡುಗೆಯನ್ನೇ ತೂರಿಕೊಂಡು ಹೋಗಬಹುದು; ಹಳೆಯ ರಾಕೆಟ್‌ನ ತುಣುಕು ಉಪಗ್ರಹಕ್ಕೆ ಬಡಿದು ಅವುಗಳನ್ನು ಹಾಳುಗೆಡವಬಹುದು.

ಹೀಗಾಗಿಯೇ ಇತ್ತೀಚಿನ ದಿನಗಳಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಮೇಲೂ ಅಪಾಯದ ನೆರಳು ಸುಳಿದಾಡುತ್ತಿದೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ವಿಜ್ಞಾನಿಗಳು ಇತ್ತೀಚೆಗಷ್ಟೆ ನಾಲ್ಕಾರು ಬಾರಿ ಕಸದ ತುಣುಕುಗಳ ಮಾರಣಾಂತಿಕ ಆಘಾತವನ್ನು ಕೂದಲೆಳೆಯಷ್ಟರಲ್ಲಿ ತಪ್ಪಿಸಿಕೊಂಡಿದ್ದಾರೆ.

ಬಾಹ್ಯಾಕಾಶದ ಕಸ ಇದೇ ಪ್ರಮಾಣದಲ್ಲಿ ಹೆಚ್ಚಿದರೆ ಭೂಮಿಯಿಂದಾಚೆ ಹೋಗಿ ನೆಲೆಸುವ ನಮ್ಮ ಕನಸು ಕನಸಾಗಿಯೇ ಉಳಿದುಬಿಡಬಹುದು ಎಂಬ ಅಂಶವನ್ನು ಗಂಭೀರವಾಗಿ ಪರಿಗಣಿಸಿರುವ ವಿಜ್ಞಾನಿಗಳು ಈ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಗಳನ್ನು ಕೈಗೊಂಡಿದ್ದಾರೆ, ಅತ್ಯಾಧುನಿಕ ದೂರದರ್ಶಕಗಳ ಮೂಲಕ ಕಸದ ಪ್ರಮಾಣದ ಮೇಲೆ ತೀವ್ರ ನಿಗಾವಹಿಸಿದ್ದಾರೆ. ಅಲ್ಲಿರುವ ಅಪಾರ ಪ್ರಮಾಣದ ಕಸವನ್ನು ಹಿಡಿದು ಭೂಮಿಗೆ ಮರಳಿ ತರುವತ್ತಲೂ ಅವರ ಪ್ರಯತ್ನಗಳು ಸಾಗಿವೆ.

ದೊಡ್ಡ ಉಪಗ್ರಹಗಳ ಬದಲು ಸಣ್ಣಸಣ್ಣ ಉಪಗ್ರಹಗಳನ್ನು ಉಡಾಯಿಸುವುದು ಇನ್ನೊಂದು ಪ್ಲಾನು. ಅವುಗಳ ಸೇವಾವಧಿ ಮುಗಿದ ಕೂಡಲೇ ಅವು ಮರಳಿ ಭೂಮಿಯ ವಾತಾವರಣ ಪ್ರವೇಶಿಸಿ ಸುಟ್ಟುಹೋಗುವಂತೆ ಮಾಡಬಹುದು ಎಂದು ವಿಜ್ಞಾನಿಗಳು ಯೋಚಿಸುತ್ತಿದ್ದಾರೆ.

ಅವರ ಈ ಎಲ್ಲ ಪ್ರಯತ್ನಗಳು ಬಾಹ್ಯಾಕಾಶದ ಕಸದ ಪ್ರಮಾಣವನ್ನು ಆದಷ್ಟು ಬೇಗ ಕಡಿಮೆಮಾಡಿದರೆ ಮಾತ್ರ ನಮ್ಮ ಮುಂದಿನ ಪೀಳಿಗೆಯಾದರೂ ವಾರಾಂತ್ಯದ ರಜೆಯಲ್ಲಿ ಅಂತರಿಕ್ಷದಲ್ಲಿ ವಿಹರಿಸುವ ಕನಸು ಕಾಣುವುದು ಸಾಧ್ಯವಾಗಬಹುದೇನೋ.

(ವಿಜ್ಞಾನ ಲೋಕ, ನವೆಂಬರ್ ೨೦೦೯)